ಅಪರೂಪವಾಗಿರುವ ದಟ್ಟಿ ಕುಣಿತ

ಡಾ ಚಕ್ಕೆರೆ ಶಿವಶಂಕರ್
 
ಬೆಳಗಾವಿ ಜಿಲ್ಲೆಯಲ್ಲಷ್ಟೇ ಕಂಡುಬರುವ ದಟ್ಟಿ ಕುಣಿತ ಅಥವಾ ದಟ್ಟಿಯಾಟವು ಅದ್ವಿತೀಯ ಸಾಧನೆಯ ಕಸರತ್ತುಗಳಿಂದ ಕೂಡಿದ ಕಲಾಪ್ರಕಾರ. ಶುಂಭ-ನಿಶುಂಭ ಮತ್ತು ಮಹಿಷಾಸುರರ ಸಂಹಾರಕ್ಕಾಗಿ ದುರ್ಗೆಯ ಅವತಾರ ತಾಳಿದ ಪಾರ್ವತಿಯು ದಟ್ಟಿ ತೊಟ್ಟು ನರ್ತಿಸುತ್ತಾ ರಾಕ್ಷಸ ಸಂಹಾರ ಮಾಡಿದ್ದರ ಸಂಕೇತವಾಗಿ ದಟ್ಟಿ ಕುಣಿತ ರೂಢಿಗೆ ಬಂದಿತೆಂಬುದು ಕಲಾವಿದರ ಅಭಿಪ್ರಾಯ. ಉತ್ತರ ಕರ್ನಾಟಕದ ಕುರುಬ ಸಮುದಾಯವು ತಮ್ಮ ಕುಲದೈವವಾದ ಬೀರಪ್ಪನ ಆರಾಧನೆಯ ಅಂಗವಾಗಿ ದಟ್ಟಿ ಕುಣಿತವನ್ನು ಪ್ರದರ್ಶಿಸುವುದುಂಟು.
 
 
ಸಾಮಾನ್ಯವಾಗಿ ಹತ್ತರಿಂದ ಹದಿನಾರು ಮಂದಿ ಕಲಾವಿದರು ಪಾಲ್ಗೊಳ್ಳುವ ಈ ಕುಣಿತದಲ್ಲಿ ನಾಲ್ಕರಿಂದ ಆರು ಮಂದಿ ವಾದ್ಯಮೇಳದವರಿರುತ್ತಾರೆ. ಉಳಿದವರೆಲ್ಲಾ ಕುಣಿತದವರು. ಕೆಂಪು ನಿಲುವಂಗಿ ಧರಿಸಿ, ಕೆಂಪು ಇಜಾರ ಇಲ್ಲವೆ ಪೈಜಾಮ ತೊಟ್ಟಿರುತ್ತಾರೆ. ನಡುವಿಗೆ ನಡುಕಟ್ಟು, ತಲೆಗೆ ರುಮಾಲು, ಅಂಗಿಯ ಮೇಲೆ ಕುತ್ತಿಗೆಯಿಂದ ಇಳಿಬಿಟ್ಟ ಕೆಂಪಂಚಿನ ದೊಡ್ಡ ದಡಿ ಧೋತರ, ಕೈಗಳಲ್ಲಿ ಉದ್ದನೆಯ ವಸ್ತ್ರ, ಕಾಲಲ್ಲಿ ಗೆಜ್ಜೆ, ಕೊರಳಲ್ಲಿ ಸರಮಾಲೆ, ಮುಖಕ್ಕೆ ಅರಿಶಿಣ ಭಂಡಾರ ಇವಿಷ್ಟೂ ಕುಣಿತದವರ ವೇಷಭೂಷಣಗಳು. ವಾದ್ಯಗಾರರು ದಿನನಿತ್ಯದ ಉಡುಪಿನಲ್ಲಿರುತ್ತಾರೆ. ಕೈಪಟ, ತಾಳ ಮತ್ತು ಗುಮಿಕಿ, ಶಹನಾಯ್ ಹಿಮ್ಮೇಳದ ವಾದ್ಯಗಳು. ಇವುಗಳ ಜೊತೆಗೆ ಮತ್ತೆರಡು ದೊಡ್ಡ ಕಂಚಿನ ತಾಳಗಳಿರುತ್ತವೆ. ಕೈಪಟ ಎಂದರೆ ಸಣ್ಣ ಪ್ರಮಾಣದ ಡೊಳ್ಳು. ಗುಮಿಕಿ ಎಂದರೆ ಹೂಜಿಯಾಕಾರದ ಮಣ್ಣಿನ ಮಡಿಕೆಯ ಬಾಯಿಗೆ ಚರ್ಮದ ಹೊದಿಕೆ ಹೊದಿಸಿ ಸಿದ್ಧಪಡಿಸಿದ ವಾದ್ಯ. ಕರಾವಳಿ ಭಾಗದಲ್ಲಿ ಕಂಡುಬರುವ ಗುಮಟೆ ವಾದ್ಯವನ್ನು ಹೋಲುವಂಥದ್ದು.
 
 
ದಟ್ಟೀ ಕುಣಿತದಲ್ಲಿ ಹಿಮ್ಮೇಳದ ವಾದ್ಯಗಳೇ ಕುಣಿತದ ಸ್ಫೂರ್ತಿ ಮತ್ತು ಶಕ್ತಿ. ಕೈಪಟ, ತಾಳ, ಸನಾದಿಗಳ ಗತ್ತಿಗೆ ತಕ್ಕಂತೆ ಕಲಾವಿದರು ಒಂದು ಸಾಲು ಇಲ್ಲವೆ ಎರಡು ಸಾಳುಗಳಲ್ಲಿ ನಿಂತು ಎಲ್ಲರೂ ಒಂದೇ ಪ್ರಕಾರವಾಗಿ ಹೆಜ್ಜೆ ಇಡುತ್ತ, ಹಾರುತ್ತ, ಕುಣಿಯುತ್ತ, ಕೂಡುತ್ತ, ಕಾಲು ಜಾಡಿಸುತ್ತ, ಬಾಗುತ್ತ, ಬೀಗುತ್ತ ಕುಣಿಯಲಾರಂಭಿಸುತ್ತಾರೆ. ವಸ್ತ್ರ ಹಿಡಿದ ಕೈಗಳನ್ನು ವಿವಿಧ ಆಕಾರಗಳಲ್ಲಿ, ವಿಭಿನ್ನ ರೀತಿಯಲ್ಲಿ ಬೀಸುತ್ತ ಡೆಡಕ್ಕೆ ಎರಡ್ಹೆಜ್ಜೆ, ಬಲಕ್ಕೆ ಎರಡ್ಹೆಜ್ಜೆ, ಮುಂದಕ್ಕೆ ಮೂರ್ಹೆಜ್ಜೆ ಜಿಗಿದು, ಗಿರ್ರನೆ ತಿರುಗಿ ಕುಳಿತು, ಚಕ್ಕನೆ ಮೇಲೆದ್ದು ಹಿಂದೆ ಸರಿದು, ಒಮ್ಮೆಲೆ ಕಾಲು ಮೇಲೆ ಮಾಡಿ ಹಿಂದಕ್ಕೆ ಮುಂದಕ್ಕೆ ಲಾಗ ಹೊಡೆಯುವುದು ಇತ್ಯಾದಿ ಕಸರತ್ತುಗಳನ್ನು ಪ್ರದಶರ್ಿಸುತ್ತಾರೆ. ಕೈಪಟ ವಾದನ ತೀವ್ರಗತಿಯಲ್ಲಿದ್ದಾಗ ಕಲಾವಿದರ ಕುಣಿತವೂ ತೀವ್ರಗೊಳ್ಳುತ್ತದೆ. ದಟ್ಟಿ ಕಲಾವಿದರು ತೋರುವ ವಿಶೇಷ ಕಸರತ್ತಿನ ಚಮತ್ಕಾರಗಳು ರೋಮಾಂಚನಕಾರಿಯಾದುವುಗಳು. ತಲೆಯ ಮೇಲೆ ದೀಪದ ಆರತಿಗಳನ್ನು ಹೊತ್ತು ಮರದ ಉರುಳು ದಿಮ್ಮಿಯ ಮೇಲೆ ನರ್ತಿಸುತ್ತಾ ಎತ್ತರಕ್ಕೆ ಜೋಡಿಸಿಟ್ಟ ಮರದ ಹಲಗೆಯನ್ನು ಏರುವುದು ಪ್ರೇಕ್ಷಕರನ್ನು ನಿಬ್ಬೆರಗಾಗಿಸುತ್ತದೆ. ರಾತ್ರಿಯ ಹೊತ್ತಿನಲ್ಲಿ ಪಂಜು ಹೊತ್ತಿಸಿಕೊಂಡು ಕುಣಿಯುವ ಕುಣಿತವಂತೂ ವಣರ್ಿಸಲು ಅಸದಳವಾದುದು. ದಟ್ಟಿ ಕುಣಿತದ ಕಲಾವಿದರು ತಮ್ಮ ಸಾಮಥ್ರ್ಯಕ್ಕನುಸಾರವಾಗಿ ವೈವಿಧ್ಯಮಯ ಕಸರತ್ತುಗಳನ್ನು ಪ್ರದರ್ಶಿಸುತ್ತಾರೆ.
 
 

ಕರ್ನಾಟದಲ್ಲಿ ರಾಜಕಿಯ ಗೀತೋಪದೇಶ

ಈಶ್ವರಚಂದ್ರ
 
ಯಾವಾಗ ಶುರುಮಾಡಿದ್ದರೊ ಕೇಂದ್ರ ಬಿಜೆಪಿ ನಾಯಕರು ಯಡಿಯೂರಪ್ಪ ಅವರಿಗೆ ಗೀತೋಪದೇಶ ಮಾಡೋದನ್ನು? ಬಹುಷ ಚಡ್ಡಿ ಟ್ರೈನಿಂಗ್ ಜೊತೆಗೇ ಶುರುಮಾಡಿರಬೇಕು. ಆದರೂ ಯಡ್ಡಿ ಊರಿನಲ್ಲಿ ಕಲಿತುದನ್ನು ಮರೆತಿಲ್ಲ. ಬೈಟಕ್ನಲ್ಲಿ ಕಲಿತುದನ್ನು ಬೈಟಕ್ನಲ್ಲೆ ಮರೆತಿರಬೇಕು! ಕರ್ನಾಟಕ ರಾಜಕೀಯವನ್ನು ಕೈಗೆ ಹಿಡಿದುಕೊಂಡಮೇಲೆ ಅವರು ಬಳಸಿದ್ದು ಸ್ವಂತಕ್ಕೆ ಕಲಿತುದನ್ನೇ ಹೊರತು ಬೈಟಕ್ ನಲ್ಲಿ ಕಲಿತದ್ದನ್ನಲ್ಲ. ಹಾಗಾಗಿಯೆ ಅವರು ಕರ್ನಾಟಕ ರಾಜಕೀಯ, ಬಿಜೆಪಿ, ಎಲ್ಲವನ್ನೂ ಶಿಕಾರಿಪುರ ರಾಜಕೀಯ ಮಾಡಿಕೊಂಡರು. ಗುರೂಜಿ ಕಲಿಸಿದ್ದನ್ನು ಅವರ ಮುಖಕ್ಕೇ ಎಸೆದರು. ಜಾತಿಯನ್ನು ಕಲಿಸಿದರೆ ಏನಾಗುತ್ತದೆ ಎಂಬುದನ್ನು ತೋರಿಸಿಕೊಟ್ಟರು. ನಿಮ್ಮ ವಿದ್ಯೆಯನ್ನೆ ನಿಮಗೇ ಪ್ರಯೋಗಿಸುತ್ತಿದ್ದೇನೆ ಅಂದರು. ಕರ್ನಾಟಕದಲ್ಲಿ ತಗಡುಬಿದ್ದು ಹೋಗಿದ್ದ ಸ್ವಜಾತಿಯನ್ನು ಬಲಗೊಳಿಸಿದರು. ಸ್ವಜಾತಿಯ ಸ್ವಾಮಿಗಳನ್ನು ವಶಕ್ಕೆ ತೆಗೆದುಕೊಂಡರು. ಕರ್ನಾಟಕದ ಇತರ ಜನರೆಲ್ಲ ಬಟ್ಟೆ ಒದ್ದೆ ಮಾಡಿಕೊಳ್ಳುವಂತೆ ಮಾಡಿದರು.
 
 
ಈಗಲೂ ಅವರು ಹೈಕಮ್ಯಾಂಡ್ಗೆ ಜಗ್ಗುತ್ತಿಲ್ಲ. ಬಲ ಯಾವಕಡೆಗೆ ಹೋಗುತ್ತದೆ ತಿಳಿಯುತ್ತಿಲ್ಲ. ಕಾಂಗ್ರೆಸ್ ಬಾಣಂತನದಿಂದ ಹೊರಬರುತ್ತಿಲ್ಲ. ಗೌಡರ ಜಾಣತನಕ್ಕೆ ದಾರಿ ಕಾಣುತ್ತಿಲ್ಲ.
 
 
ಮತ್ತೆ ಕರ್ನಾಟಕಕ್ಕೆ ಯಡ್ಡಿಯವರ ಭಗವದ್ಗೀತೆಯೆ ಮಾರ್ಗದರ್ಶಕವಾಗುವಂತೆ ಕಾಣುತ್ತಿದೆ. ನಾನಳಿದರೆ ನೀವಳಿದಂತೆ ಎಂದು ಯಡ್ಡಿ ಬಿಜೆಪಿ. ಶಾಸಕರಿಗೆ ಸಂದೇಶ ಕಳಿಸಿದ್ದಾರೆ. ಹಲವು ಶಾಸಕರು ಕೂಡ ಯಡ್ಡಿಯನ್ನು ಕಳೆದುಕೊಂಡರೆ ತಾವೂ ,ತಮ್ಮ ಜಾತಿಯೂ ಹೆಡ್ಡವಾದಂತೆ ಎಂದು ಭಾವಿಸಿದಂತಿದೆ. ಕಾಂಗ್ರ‍ೆಸ್ ಆಧಿಕಾರಕ್ಕೆ ಬಂದರೆ ತಮ್ಮ ಸಿಂಹಾಸನ ಕುಸಿದಂತೆಯೆ ಎಂಬಂತಾಗಿದೆ. ಪೂರಾ ಮೈನಾರಿಟಿಗಳನ್ನು ನಂಬಿಕೊಂಡು ಕರ್ನಾಟಕವನ್ನು ವಶಪಡಿಸಿಕೊಳ್ಳಲಾಗುವುದಿಲ್ಲ ಅಂತ ಕಾಂಗ್ರ‍ೆಸ್ಸಿಗೂ ಭಯವಿದೆ.
 
 
ಕಾಂಗ್ರೆಸ್ಸ್ ನಲ್ಲೂ ಭಗವದ್ಗೀತೆ ಶುರುವಾಗಿದೆಯಲ್ಲ! ಮೊನ್ನೆ ದಾವಣಗೆರೆಯಲ್ಲಿ ಕಾಂಗ್ರೆಸ್ಸಿನ ರಾಜಕುಮಾರ ಮಾಡಿದ ಭಾಶಣ, ಆಡಿದ ಮಾತು ಹತಾಶರ ಆರ್ತನಾದದಂತೆ ಕೇಳಿಸುತ್ತಿದೆ. ಅಧಿಕಾರ ಬೇಕಾ? ಹಾಗಾದ್ರೆ ಒಳಜಗಳ ಮರೆತುಬಿಡಿ, ಒಂದಾಗಿರಿ, ಎದ್ದು ನಿಲ್ಲಿರಿ, ನಿಮ್ಮ ಅಸ್ತಿತ್ವ ಉಳಿಸಿಕೊಳ್ಳಿ....ನಿಮ್ಮ ಸೋಲಿಗೆ ಬಿಜೆಪಿ. ಕಾರಣವಲ್ಲ, ಅದು ನೀವೇ...ಎನ್ನುತ್ತಿದ್ದಾರೆ ಯುವರಾಜ. ಕಾಂಗ್ರೆಸಿಗರು ಶ್ರದ್ಧಾವಂತ ವಿದ್ಯಾರ್ಥಿಗಳ ಹಾಗೆ ಪಾಠ ಕೇಳಿದ್ದಾರೆ. ನಾಯಕನ ಪ್ರಶ್ನೆಗೆ ಎದ್ದುನಿಂತು ಉತ್ತರಕೊಟ್ಟು ಶಹಬ್ಬಾಶ್ ಗಿರಿ ಪಡೆದ್ದಿದ್ದಾರೆ. ವೇದಿಕೆಯ ಮೇಲೆ ನೂರು ಜನ. ನೂರು ಜನರೂ ಬೇರೆ ಬೇರೆ. ಅಧಿಕಾರಕ್ಕೆ ಬರಬೇಕೆನ್ನುವ ಪುರಾತನ ಆಸೆ ಇಟ್ಟುಕೊಂಡು ಎಲ್ಲರೂ ಕಾದುಕೂತಿದ್ದಾರೆ; ಯಜಮಾನ ಹೇಳಿದಂತೆ ಕಾಯುವುದಷ್ಟೇ ಅವರ ಕೆಲಸ.
 
 
ಕರ್ನಾಟಕ ಬಿಜೆಪಿಯಲ್ಲಿ ಒಬ್ಬನೇ ನಾಯಕ. ಅದು ಶ್ರೀಯುತ ಯಡಿಯೂರಪ್ಪ. ಮತ್ತೆ ಯಾರೂ ಆ ಛಾತಿ ತೋರಿಸಿಲ್ಲ. ಉಳಿದವರೆಲ್ಲ ರಾಮನ ಆಶೀರ್ವಾದದಂತೆ ರಾಜ್ಯವಾಳುವ ಭರತರು. ಅವರ ಸ್ಥಾನದಲ್ಲಿ ಪಾದುಕೆಗಳಿವೆ. ಅದೇ ಧನ್ಯತೆ.
ಆದರೆ ಕಾಂಗ್ರೆಸ್ ಹಾಗಲ್ಲ. ಬೇಟೆ ಯಾವಾಗ ಬೀಳುತ್ತದೆ, ಯಾರು ಯಾರನ್ನು ಗುರಾಯಿಸಿ ಸಿಂಹಪಾಲನ್ನು ತಮ್ಮದಾಗಿಸಿಕೊಳ್ಳಬೇಕೆಂಬ ಆತುರದಲ್ಲಿದ್ದಾರೆ. ದುರಾದೃಷ್ಟವೆಂದರೆ ಬೇಟೆಯಾಡುವವರೇ ಅಲ್ಲಿ ಯಾರೂ ಕಾಣುತ್ತಿಲ್ಲ.
 
 
 
ಸಿದ್ದರಾಮಯ್ಯ ದಾರಿ ಕಾಣದಾಗಿದೆ ರಾಘವೇಂದ್ರನೆ...ಎಂದು ಪ್ರಲಾಪಿಸುತ್ತಿದ್ದಾರೆ. ಅದಕ್ಕೆ ಫಲ ಸಿಗುವ ಚಾನ್ಸ್ ಕಾಣುತ್ತಿಲ್ಲ. ಈಗಾಗಲೇ ವಿಧಾನಪರಿಷತ್ತಿನಲ್ಲಿ ತಮ್ಮ ಬೆಂಬಲಿಗ ಸಿ.ಎಂ.ಇಬ್ರಾಹಿಂಗೆ ಟಿಕೆಟ್ ಸಿಗಲಿಲ್ಲ ಎಂದು ತಮ್ಮ ವಿರೋಧಪಕ್ಷದ ನಾಯಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಆದರೆ ಅವರು ತಣ್ಣಗಾಗುವ ದಿನಗಳು ದೂರ ಇಲ್ಲ ಅನಿಸುತ್ತಿದೆ. ದಾವಣಗೆರೆಯಲ್ಲಿ ದೆಹಲಿ ಪ್ರಭು ಅವರನ್ನು ಪಕ್ಕದಲ್ಲೆ ಕೂರಿಸಿಕೊಡು ಹೇಳಿದ್ದಾರಲ್ಲ. ಇನ್ನು ಮುಂದೆ ಪಕ್ಷದಲ್ಲಿ ದುಡಿದ ಮೂಲ ಕಾರ್ಯಕರ್ತರಿಗೆ ಮೊದಲ ಆದ್ಯತೆ ಅಂತ. ಪಾಪ, ಆನೆ ಹಿಡಿಯಲು ಬಂದ ಸಿದ್ದರಾಮಯ್ಯರಿಗೆ ಯಾಕೋ ಇಲಿ ಬೇಟೆಯೂ ಸಾಧವಾಗುತ್ತಿಲ್ಲವಲ್ಲ?
 
 
 
 

ಮಾತೃಭಾಷೆಯಲ್ಲಿಯೇ ಶಿಕ್ಷಣ-ಮಕ್ಕಳ ಹಕ್ಕನ್ನು ರಕ್ಷಿಸಿ

ಪಂಡಿತಾರಾಧ್ಯ
 
ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ನೀಡಬೇಕೆಂಬ ಜಗತ್ತಿನ ಎಲ್ಲ ಶ್ರೇಷ್ಠ ಶಿಕ್ಷಣ ತಜ್ಞರ ವಿಚಾರಗಳು ಮತ್ತು ನ್ಯಾಯಾಲಯಗಳ ತೀರ್ಪುಗಳನ್ನು ಪರಿಶೀಲಿಸಿ ಕರ್ನಾಟಕ ಸರಕಾರವು ತನ್ನ ಭಾಷಾನೀತಿಯನ್ನು ಅಂತಿಮವಾಗಿ ರೂಪಿಸಿತು(೧೯೯೪). ಅದರ ಪ್ರಕಾರ ಒಂದರಿಂದ ಐದನೇ ತರಗತಿಯವರೆಗೆ ಮಾತೃಭಾಷೆ/ರಾಜ್ಯಭಾಷೆ ಮಾತ್ರ ಕಡ್ಡಾಯ. ಕನ್ನಡ ಮಾತೃಭಾಷೆಯಲ್ಲದವರಿಗೆ ಒಂದನೆಯ ತರಗತಿಯಲ್ಲಿ ಪರಿಸರಭಾಷೆ/ರಾಜ್ಯಭಾಷೆಯಾದ ಕನ್ನಡವೂ ಕಡ್ಡಾಯ ಕಲಿಕೆಯ ವಿಷಯವಲ್ಲ. ಎರಡನೆಯ ಭಾಷೆಯನ್ನು ಕಲಿಯುವ ಹಂತದಿಂದ ಅಂದರೆ ಮೂರನೆಯ ತರಗತಿಯಿಂದ ಅವರಿಗೆ ರಾಜ್ಯಭಾಷೆ ಕನ್ನಡ ಐಚ್ಛಿಕ ಕಲಿಕೆಯ ವಿಷಯ ಮಾತ್ರ; ಪರೀಕ್ಷೆ ಕಡ್ಡಾಯವಲ್ಲ. ಐದನೆಯ ತರಗತಿಯಿಂದ ಕನ್ನಡ ಕಲಿಕೆ ಮತ್ತು ಪರೀಕ್ಷೆ ಕಡ್ಡಾಯ. ಎರಡನೆಯ ಭಾಷೆಯನ್ನು ಕಲಿಯುವ ಹಂತದಿಂದ ಅಂದರೆ ಮೂರನೆಯ ತರಗತಿಯಿಂದ ಮಾತ್ರ ಇಂಗ್ಲಿಷ್ ಮಾತೃಭಾಷೆಯಲ್ಲದ ಮಕ್ಕಳಿಗೆ ಇಂಗ್ಲಿಷ್ ಐಚ್ಛಿಕ ಕಲಿಕೆಯ ವಿಷಯ, ಪರೀಕ್ಷೆ ಕಡ್ಡಾಯವಲ್ಲ. ಐದನೆಯ ತರಗತಿಯಿಂದ ಇಂಗ್ಲಿಷ್ ಕಲಿಕೆ ಮತ್ತು ಪರೀಕ್ಷೆ ಕಡ್ಡಾಯ. ಕರ್ನಾಟಕ ಸರಕಾರದ ಈ ಭಾಷಾನೀತಿಯನ್ನು ಸರ್ವೋನ್ನತ ನ್ಯಾಯಾಲಯವೂ ಪ್ರಶಂಸಿಸಿ ಅನುಮೋದಿಸಿತ್ತು(೧೯೯೩).
 
ಈ ಭಾಷಾನೀತಿಗೆ ಇದ್ದ ತಡೆಯಾಜ್ಞೆಯನ್ನು ತೆರವುಗೊಳಿಸುವ ಸಂದರ್ಭದಲ್ಲಿ ಅದನ್ನು ಕರ್ನಾಟಕ ಉಚ್ಚ ನ್ಯಾಯಾಲಯವು ಸರಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಸೀಮಿತಗೊಳಿಸಿತು. ಪೂರ್ವ ಪ್ರಾಥಮಿಕವೂ ಸೇರಿದಂತೆ ಒಂದನೆಯ ತರಗತಿಯಿಂದಲೇ ಇಂಗ್ಲಿಷ್ ಮಾತೃಭಾಷೆಯಲ್ಲದವರಿಗೂ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ನಡೆಸಲು ಅನುದಾನರಹಿತ ಖಾಸಗಿ ಶಾಲೆಗಳಿಗೆ ಮುಕ್ತ ಅವಕಾಶ ನೀಡಿತು(೨೦೦೮). ಇದು ಮಾತೃಭಾಷೆಯಲ್ಲಿ ಶಿಕ್ಷಣ ನೀಡಬೇಕೆಂಬ ಮಕ್ಕಳ ಶೈಕ್ಷಣಿಕ ಹಕ್ಕಿನ ನೀತಿಗೆ ವಿರುದ್ಧವಾಗಿದೆ. ಇದರಿಂದ ಮಕ್ಕಳು ಆರಂಭದ ಹಂತದಲ್ಲಿಯೇ ‘ಸಮಾನ ಅವಕಾಶ-ಸಮಾನ ಸ್ಪರ್ಧೆ’ ಎಂಬ ಸಮಾನತೆಯ ನ್ಯಾಯದಿಂದ ವಂಚಿತರಾಗಿದ್ದಾರೆ.

 
ಉಚ್ಚ ನ್ಯಾಯಾಲಯದ ಈ ತೀರ್ಪಿನ ವಿರುದ್ಧ ಕರ್ನಾಟಕ ಸರಕಾರವು ಸರ್ವೋನ್ನತ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲ್ಲಿಸಿದೆ. ಸರ್ವೋನ್ನತ ನ್ಯಾಯಾಲಯದ ತೀರ್ಮಾನದ ಅನಂತರ ಸರಕಾರಿ ಮತ್ತು ಖಾಸಗಿ ಶಾಲೆಗಳ ಎಲ್ಲ ಮಕ್ಕಳಿಗೆ ಏಕರೂಪದ ಮಾತೃಭಾಷಾ ಶಿಕ್ಷಣ ಜಾರಿಗೆ ಬರುತ್ತದೆ. ಸರಕಾರವು ಸರ್ವೋನ್ನತ ನ್ಯಾಯಾಲಯದ ಮುಂದಿರುವ ಪ್ರಕರಣವು ಬೇಗ ಇತ್ಯರ್ಥವಾಗಲು ಅಗತ್ಯ ಕ್ರಮಗಳನ್ನು ಕೈಗೊಳ್ಳದೆ ಆರನೆಯ ತರಗತಿಯಿಂದ ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ತೆರೆಯುತ್ತಿರುವುದು ಆತಂಕದ ಸಂಗತಿ.
 
ಸರ್ವೋನ್ನತ ನ್ಯಾಯಾಲಯವು ಪುರಸ್ಕರಿಸಿದ ಸರಕಾರದ ಭಾಷಾ ನೀತಿಯಿಂದ ರಾಜ್ಯದ ಸರಕಾರಿ-ಖಾಸಗಿ, ಅನುದಾನಿತ-ಅನುದಾನರಹಿತ ಎಂಬ ಭೇದವಿಲ್ಲದೆ ಪೂರ್ವ ಪ್ರಾಥಮಿಕ ಹಂತದಿಂದ ಐದನೆಯ ತರಗತಿಯವರೆಗೆ ಎಲ್ಲ ಮಕ್ಕಳಿಗೆ ಏಕರೂಪದ, ಸಮಾನ ಅವಕಾಶದ ಶಿಕ್ಷಣ ನೀಡಲು ಸಾಧ್ಯವಾಗುತ್ತದೆ. ಎರಡನೆಯ ಭಾಷೆಯನ್ನು ಕಲಿಯುವ ಹಂತದಿಂದ ಮಾತ್ರವೇ ಅಂದರೆ ಮೂರನೆಯ ತರಗತಿಯಿಂದ ಇಂಗ್ಲಿಷನ್ನು ಐಚ್ಛಿಕವಾಗಿ ಮತ್ತು ಐದನೆಯ ತರಗತಿಯಿಂದ ಕಡ್ಡಾಯವಾಗಿ ಕಲಿಯಲು ಸಾಧ್ಯವಾಗುತ್ತದೆ. ಇದು ಹಿಂದುಳಿದ ವರ್ಗಗಳ ಮಕ್ಕಳ ಶೈಕ್ಷಣಿಕ ಸಮಾನತೆಯ ದೃಷ್ಟಿಯಿಂದ ಅತ್ಯಂತ ಮಹತ್ವದ ಕ್ರಮವಾಗಿದೆ. ಇದರಿಂದ ಹಿಂದುಳಿದ ವರ್ಗಗಳ ಮಕ್ಕಳಂತೆ ಮುಂದುವರೆದ ವರ್ಗಗಳ ಮಕ್ಕಳೂ ಮಾತೃಭಾಷೆಯಲ್ಲಿಯೇ ಕಲಿಯುವುದರಿಂದ ಎಲ್ಲ ವರ್ಗಗಳ ಮಕ್ಕಳಿಗೆ ಸಮಾನ ಸ್ಪರ್ಧೆಯ ಸಮಾನ ಅವಕಾಶ ದೊರೆಯುತ್ತದೆ. ಮನೆಯಲ್ಲಿ ಶೈಕ್ಷಣಿಕ ವಾತಾವರಣ, ಕಲಿಕೆಯ ಸೌಲಭ್ಯಗಳ ಬೆಂಬಲವಿರುವ ಮುಂದುವರೆದ ವರ್ಗಗಳ ಮಕ್ಕಳ ಜೊತೆ, ಮನೆಯಲ್ಲಿ ಶೈಕ್ಷಣಿಕ ವಾತಾವರಣ, ಕಲಿಕೆಯ ಸೌಲಭ್ಯಗಳ ಬೆಂಬಲಗಳಿಲ್ಲದ ಹಿಂದುಳಿದ ವರ್ಗಗಳ ಮಕ್ಕಳು ಇಂಗ್ಲಿಷನ್ನೂ ಕಲಿಯುತ್ತಾ ಇಂಗಿಷಿನಲ್ಲಿ ಸ್ಪರ್ಧಿಸಬೇಕಾಗುವುದರಿಂದ ಅವರ ನಡುವೆ ಅಸಮಾನತೆಯ ಅಂತರ ಹೆಚ್ಚುತ್ತದೆ. ಅದರ ಬದಲು ಎಲ್ಲ ಮಕ್ಕಳೂ ತಮ್ಮ ತಮ್ಮ ಮಾತೃಭಾಷೆಯಲ್ಲಿಯೇ ವಿಷಯಗಳನ್ನು ಚೆನ್ನಾಗಿ ಅರ್ಥಮಾಡಿಕೊಂಡು ಕಲಿಯುವುದರಿಂದ ಅವರು ಶೈಕ್ಷಣಿಕವಾಗಿ ಸಮಾನವಾಗಿ ಮುಂದುವರೆಯಲು ಸಾಧ್ಯವಾಗುವುದು ಮಹತ್ವದ ಸಂಗತಿ.
 
 
ಮಕ್ಕಳು ಐದನೆಯ ತರಗತಿಯಿಂದ ಮಾತ್ರ ಇಂಗ್ಲಿಷನ್ನು ಕಡ್ಡಾಯವಾಗಿ ಕಲಿಯಲು ಆರಂಭಿಸಿರುವುದರಿಂದ ಅವರಿಗೆ ಆರನೆಯ ತರಗತಿಯ ಹಂತದಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಎಲ್ಲ ವಿಷಯಗಳನ್ನು ಕಲಿಯುವಷ್ಟು ಸಾಮರ್ಥ್ಯವಾಗಲಿ, ಅಗತ್ಯವಾಗಲಿ ಇರುವುದಿಲ್ಲ. ಅವರು ಮಾಧ್ಯಮವಾಗಿ ಬಳಸಬಹುದಾದಷ್ಟು ಸಾಮರ್ಥ್ಯವನ್ನು ಇಂಗ್ಲಿಷಿನಲ್ಲಿ ಪಡೆಯವವರೆಗೆ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ಆರಂಭಿಸಲು ದುಡುಕಬಾರದು. ಕರ್ನಾಟಕ ಸರಕಾರವು ಈಗಿರುವ ಶಿಕ್ಷಣಕ್ರಮದಲ್ಲಿಯೇ ಆರನೆಯ ತರಗತಿಯಿಂದ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ಆರಂಭಿಸುವುದು ಅಶೈಕ್ಷಣಿಕವಷ್ಟೇ ಅಲ್ಲ, ಸಾಧ್ಯವಾದಷ್ಟೂ ಮಾತೃಭಾಷೆಯಲ್ಲಿಯೇ ಶಿಕ್ಷಣ ಪಡೆಯಬೇಕೆಂಬ ಮಕ್ಕಳ ಶಿಕ್ಷಣ ಹಕ್ಕಿನ ವಿರುದ್ಧವೂ ಆಗುತ್ತದೆ. ಸರ್ವೋನ್ನತ ನ್ಯಾಯಾಲಯ ಅನುಮೋದಿಸಿರುವ ಭಾಷಾನೀತಿಯನ್ನು ಮೊದಲು ಪೂರ್ಣವಾಗಿ ಜಾರಿಗೊಳಿಸಿ, ಅದರ ಕ್ರಮದಂತೆ ಐದನೆಯ ತರಗತಿಯನ್ನು ಪೂರೈಸಿದ ವಿದ್ಯಾರ್ಥಿಗಳ ಇಂಗ್ಲಿಷ್ ಭಾಷೆಯನ್ನು ಮಾಧ್ಯಮವಾಗಿ ಬಳಸುವ ಸಾಮರ್ಥ್ಯ ಮತ್ತು ಅಗತ್ಯಗಳನ್ನು ಗಮನಿಸಿದ ಅನಂತರವೇ ಇಂಗ್ಲಿಷ್ ಮಾಧ್ಯಮ ತರಗತಿಯನ್ನು ಆರಂಭಿಸಬಹುದಾದ ಹಂತದ ಬಗ್ಗೆ ನಿರ್ಧರಿಸಬೇಕು.
 
ಸರ್ವೋನ್ನತ ನ್ಯಾಯಾಲಯ ಅನುಮೋದಿಸಿದ್ದ ಕರ್ನಾಟಕ ಸರಕಾರದ ಭಾಷಾನೀತಿಯನ್ನು ಜಾರಿಗೊಳಿಸದಂತೆ ತಡೆಯಾಜ್ಞೆ ನೀಡಿ, ಅದರ ಇತ್ಯರ್ಥವನ್ನು ಹದಿನಾಲ್ಕು ವರ್ಷಗಳವರೆಗೆ ವಿಳಂಬಿಸಿ, ಅದನ್ನು ಸರಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಮಿತಗೊಳಿಸಿರುವುದು ಮಕ್ಕಳ ಶಿಕ್ಷಣದ ಹಕ್ಕಿನ ಉಲ್ಲಂಘನೆಯೇ ಆಗಿದೆ. ಸರ್ವೋನ್ನತ ನ್ಯಾಯಾಲಯದ ತೀರ್ಪು ಬರುವ ಮುನ್ನವೇ ಯಾರ ಮಾತೃಭಾಷೆಯೂ ಅಲ್ಲದ, ರಾಜ್ಯಭಾಷೆಯೂ ಅಲ್ಲದ ಇಂಗ್ಲಿಷನ್ನು ಒಂದನೆಯ ತರಗತಿಯಿಂದ ಆರಂಭಿಸಿರುವ, ಮತ್ತು ಆರನೆಯ ತರಗತಿಯಿಂದ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನೇ ತೆರೆಯುವುದರ ಹಿಂದೆ ಮಾತೃಭಾಷೆಯಲ್ಲಿ ಕಲಿಯುವ ಮಕ್ಕಳ ಅವಕಾಶದ ಹಕ್ಕನ್ನು ಶಾಶ್ವತವಾಗಿ ವಂಚಿಸುವ ವ್ಯವಸ್ಥಿತವಾದ ಸಂಚಿರುವಂತೆ ಭಾಸವಾಗುತ್ತದೆ. ಕನ್ನಡ ಮಾಧ್ಯಮದಲ್ಲಿ ಬೋಧಿಸುವ ಮುಚ್ಚಳಿಕೆಯನ್ನು ಬರೆದುಕೊಟ್ಟು ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ನಡಸುತ್ತಿರುವ ಶಾಲೆಗಳನ್ನು ಮುಚ್ಚಿಸದೆ, ಕೇಂದ್ರೀಯ ಶಾಲೆಗಳಲ್ಲಿ ಅಂತರ ರಾಜ್ಯ ವರ್ಗಾವಣೆಯಾಗುವ ಪೋಷಕರ ಮಕ್ಕಳಿಗೆ ಮಾತ್ರ ಎಂದು ಪ್ರವೇಶವನ್ನು ನಿರ್ಬಂಧಿಸದೆ ಸರಕಾರ ಕನ್ನಡ ಶಾಲೆಗಳನ್ನೇ ಮುಚ್ಚುತ್ತಿರುವುದು ಇದಕ್ಕೆ ಪುಷ್ಟಿಯನ್ನು ನೀಡುವಂತಿದೆ.
 
‘ಒಂದನೆಯ ತರಗತಿಯಿಂದ ಇಂಗ್ಲಿಷ್ ಕಲಿಸುವುದು ಎಲ್ಲ ವರ್ಗ ಹಾಗೂ ಸಮುದಾಯಗಳ ಕನ್ನಡಿಗರೆಲ್ಲರ ಬೇಡಿಕೆ ಎಂದೂ ಅದಕ್ಕೆ ಕೆಲವರು ಮಾತ್ರ ಬೇಡವೆನ್ನುವುದು ಜನಪರವಲ್ಲ’ವೆಂದೂ ವಾದಿಸುವವರಿದ್ದಾರೆ. ಶೈಕ್ಷಣಿಕ ವಿಷಯಗಳನ್ನು ತಂದೆತಾಯಿಗಳ ಅಶೈಕ್ಷಣಿಕ ಮಹತ್ವಾಕಾಂಕ್ಷೆಯ ಬೇಡಿಕೆಯ ಆಧಾರದ ಮೇಲೆ ನಿರ್ಧರಿಸುವುದಿಲ್ಲ. ಶಿಕ್ಷಣ ತಜ್ಞರ ಅಭಿಪ್ರಾಯದಂತೆ ಮಾತ್ರ ನಿರ್ಧರಿಸುತ್ತಾರೆ. ಮಾತೃಭಾಷೆಯಲ್ಲದ ಭಾಷೆಯನ್ನು ಒಂದನೆಯ ತರಗತಿಯಿಂದ ಕಡ್ಡಾಯವಾಗಿ ಕಲಿಸುವುದು ಗುಣಮಟ್ಟದ ಶಿಕ್ಷಣಕ್ಕೆ ಕಾರಣ ಎಂದು ಯಾವ ಶಿಕ್ಷಣ ತಜ್ಞರೂ ಹೇಳಿಲ್ಲ. ಅದಕ್ಕೆ ಬದಲಾಗಿ ಮಕ್ಕಳ ಮಾತೃಭಾಷೆಯಲ್ಲಿಯೇ ಶಿಕ್ಷಣ ನೀಡಬೇಕು ಎಂದೇ ಹೇಳಿದ್ದಾರೆ. ಮಕ್ಕಳಿಗೆ ಸುಲಭವಾಗಿ ಅರ್ಥವಾಗುವಂತೆ ಅವರ ಭಾಷೆಯಲ್ಲಿ ಕಲಿಸುವುದು ಮಾತ್ರ ಶೈಕ್ಷಣಿಕವಾಗಿ ಮುಖ್ಯ. ಇಂಗ್ಲಿಷನ್ನು ಒಂದು ಭಾಷೆಯಾಗಿ ಚೆನ್ನಾಗಿಯೇ ಕಲಿಸುವುದನ್ನು ಯಾರೂ ಬೇಡವೆನ್ನುತ್ತಿಲ್ಲ.
 
 
ಇಂಗ್ಲಿಷ್ ಮಾತೃಭಾಷೆಯ ಮಕ್ಕಳಿಗೆ ಇಂಗ್ಲಿಷನ್ನು ಕಲಿಸುವ ರೀತಿಯಲ್ಲಿಯೇ ಇಂಗ್ಲಿಷ್ ಮಾತೃಭಾಷೆಯಲ್ಲದ ಮಕ್ಕಳಿಗೆ ಇಂಗ್ಲಿಷನ್ನು ಕಲಿಸುತ್ತಿರುವ ಶಿಕ್ಷಣ ಕ್ರಮದಲ್ಲಿಯೇ ದೋಷವಿದೆ. ಇಂಗ್ಲಿಷನ್ನು ಎರಡನೆಯ ಭಾಷೆಯನ್ನು ಕಲಿಸುವ ವಿಧಾನದಲ್ಲಿ ಸುಲಭವಾಗಿ ಮತ್ತು ಯಶಸ್ವಿಯಾಗಿ ಕಲಿಸಬಹುದು. ಅದಕ್ಕೆ ಅಗತ್ಯವಾದ ವಿಶೇಷ ತರಬೇತಿ ಪಡೆದ ಶಿಕ್ಷಕರನ್ನು ಮೊದಲು ಸಿದ್ಧಪಡಿಸಬೇಕು. ಹಾಗೆ ತರಬೇತಿಪಡೆದ ಶಿಕ್ಷಕರು ಮಕ್ಕಳೊಂದಿಗೆ ಸರಳವಾಗಿ ಇಂಗ್ಲಿಷಿನಲ್ಲಿ ಯೋಚಿಸುವುದನ್ನು, ಮಾತನಾಡುವುದನ್ನು ಮೊದಲು ಕಲಿಸಬೇಕು. ಅನಂತರವೇ ಇಂಗ್ಲಿಷಿನಲ್ಲಿ ಓದುವುದು, ಬರೆಯುವುದನ್ನು ಕಲಿಸಬೇಕು. ಈಗ ಹಾಗೆ ಮಾಡದೆ ಒಂದನೆಯ ತರಗತಿಯಿಂದಲೇ ಇಂಗ್ಲಿಷ್ ಅಕ್ಷರ, ಪುಸ್ತಕಗಳನ್ನು ಓದಿಸುತ್ತಿರುವುದರಿಂದ ಉದ್ದೇಶಿತ ಪ್ರಯೋಜನವಾಗುತ್ತಿಲ್ಲ. ಶೈಕ್ಷಣಿಕವಾದ ಸರಿಯಾದ ಕ್ರಮದಲ್ಲಿ ಸುಲಭವಾಗಿ ಕಲಿಯಬಹುದಾದ ಇಂಗ್ಲಿಷ್ ಭಾಷೆಯನ್ನು ಶೈಕ್ಷಣಿಕವಲ್ಲದ ಕ್ರಮದಲ್ಲಿ ಪ್ರಾಥಮಿಕ ಒಂದನೆಯ ತರಗತಿಯಿಂದಲೇ ಕಡ್ಡಾಯಗೊಳಿಸಿ ಆರನೆಯ ತರಗತಿಯಿಂದ ಹಾಗೆ ಅಸಮರ್ಪಕವಾಗಿ ಕಲಿಸಿದ ಇಂಗ್ಲಿಷನ್ನು ಮಾಧ್ಯಮವಾಗಿ ಮುಂದುವರೆಸುವುದರಲ್ಲಿ ಅರ್ಥವಿಲ್ಲ.
 
ತಮಗೆ ಅರ್ಥವಾಗುವ ಭಾಷೆಯಲ್ಲಿ ಶಿಕ್ಷಣ ಪಡೆಯುವುದು ಮಕ್ಕಳ ಹಕ್ಕು. ಸರಕಾರ ಯಾವ ಕಾರಣಕ್ಕೂ ಮಕ್ಕಳ ಈ ಹಕ್ಕನ್ನು ಕಸಿಯಬಾರದು. ಸರಕಾರ ತಂದೆತಾಯಿಗಳ ಅಶೈಕ್ಷಣಿಕ ಮಹತ್ವಾಕಾಂಕ್ಷೆ ಮತ್ತು ಶಿಕ್ಷಣ ವ್ಯಾಪಾರಿಗಳ ದುರಾಸೆಗೆ ಇಂಬುಕೊಡುವಂತೆ ಇಂಗ್ಲಿಷ್ ಭಾಷೆಯನ್ನು ಕಲಿಸುವ ಮತ್ತು ಮಾಧ್ಯಮವಾಗಿ ಅದನ್ನು ಬಳಸುವ ವಿಷಯದಲ್ಲಿ ದುಡುಕಬಾರದು. ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯುವ ಮಕ್ಕಳ ಹಕ್ಕಿನ ರಕ್ಷಕನಾಗಿ ವರ್ತಿಸಬೇಕು.
 
೧೯೮೯ರಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ಸನ್ಮಾನ್ಯ ನ್ಯಾಯಮೂರ್ತಿಗಳಾದ ಶ್ರೀ ರಾಮಾಜೋಯಿಸ್ ಮತ್ತು ಶ್ರೀ ರಾಜೇಂದ್ರಬಾಬು ಅವರು ನೀಡಿದ ತೀರ್ಪು ಇಡೀ ದೇಶಕ್ಕೆ ಮಾದರಿಯಾದುದು ಎಂದು ದಿ ಟೈಮ್ಸ್ ಆಫ್ ಇಂಡಿಯಾ ಸಂಪಾದಕೀಯದಲ್ಲಿ ಪ್ರಶಂಸಿಸಿತ್ತು. ಅದನ್ನು ೧೯೯೩ರಲ್ಲಿ ಸರ್ವೋನ್ನತ ನ್ಯಾಯಾಲಯದ ಸನ್ಮಾನ್ಯ ನ್ಯಾಯಮೂರ್ತಿಗಳಾದ ಶ್ರೀ ಎಂ ಎನ್ ವೆಂಕಟಾಚಲಯ್ಯ ಮತ್ತು ಶ್ರೀ ಎಸ್ ಮೋಹನ್ ಅವರು ಅನುಮೋದಿಸಿದ್ದರು. ಅದನ್ನು ಆಧರಿಸಿ ಶ್ರೀ ಎಂ ವೀರಪ್ಪ ಮೊಯಿಲಿ ಅವರ ಸರಕಾರ ೧೯೯೪ರಲ್ಲಿ ರೂಪಿಸಿದ ಭಾಷಾನೀತಿಯನ್ನು ಪೂರ್ಣವಾಗಿ ಅನುಷ್ಠಾನಗೊಳಿಸುವ ಸದವಕಾಶ ಇಂದಿನ ಮುಖ್ಯಮಂತ್ರಿಗಳಾಗಿರುವ ಶ್ರೀ ಸದಾನಂದಗೌಡರ ಸರಕಾರಕ್ಕೆ ದೊರೆತಿದೆ. ಅದನ್ನು ಅನುಷ್ಠಾನಗೊಳಿಸಿದ ಕೀರ್ತಿ ಅವರದಾಗಲಿ ಎಂದೇ ನನ್ನ ಆಶಯ.
 
 
 
 
 
 
 
 
 
 
 
Copyright © 2011 Neemgrove Media
All Rights Reserved