ಬಡವರ ಮಕ್ಕಳು, ಕನ್ನಡ ಶಾಲೆಗಳು ಯಾಕೆ ಬೇಕ್ರೀ?!!

 
ಐದು ಜನಕ್ಕಿಂತ ಕಡಿಮೆ ಮಕ್ಕಳಿರುವ ೬೧೭ ಕಿರಿಯ/ಹಿರಿಯ ಪ್ರಾಥಮಿಕ ಶಾಲೆಗಳು, ಹತ್ತು ಜನ ಮಕ್ಕಳಿಗಿಂತ ಕಡಿಮೆ ಮಕ್ಕಳಿರುವ ೨೫೫೭ ಸರ್ಕಾರೀ ಶಾಲೆಗಳನ್ನು ಹತ್ತಿರದ ಖಾಸಗೀ ಅಥವಾ ಸರ್ಕಾರೀ ಶಾಲೆಗಳೊಂದಿಗೆ ವಿಲೀನಗೊಳಿಸಲು ಅಥವಾ ವರ್ಗಾಯಿಸಲು ಸರ್ಕಾರ ತೆಗೆದುಕೊಂಡಿದ್ದ ತೀರ್ಮಾನವನ್ನು ಪ್ರಶ್ನಿಸಿ ಕರ್ನಾಟಕದ ಜನಪರ ಚಿಂತನೆಯ ಪ್ರಜ್ನಾವಂತರು ನ್ಯಾಯಲಯದ ಮೊರೆ ಹೊಕ್ಕಿದ್ದರು. ಇದೀಗ ತೀರ್ಮಾನ ಬಂದಿದೆ. ಸರ್ಕಾರ ಇಂತಹ ಶಾಲೆಗಳನ್ನು ಮುಚ್ಚಬಹುದೆಂದು ಕರ್ನಾಟಕದ ಮಹಾಮಹಿಮ ನ್ಯಾಯಾಧೀಶರುಗಳು ಆದೇಶ ಕೊಟ್ಟಿದ್ದಾರೆ.

 

 
ಸುಮ್ಮನೆ ಯಾಕೆ ಇಷ್ಟೆಲ್ಲಾ ಶಾಲೆಗಳು? ಕಟ್ಟಡಗಳು, ಟೀಚರ್ಗಳು, ಭೂಪಟ, ಪಠ್ಯಪುಸ್ತಕಗಳು, ಮಧ್ಯಾನ್ಹದ ಊಟ, ಚಾಕ್ ಪೀಸ್, ಗಂಟೆ, ಬಡ ಮಕ್ಕಳು???!! ಎಲ್ಲಾ ವೇಸ್ಟ್! ಭಯಂಕರ ವೇಸ್ಟ್!!! ಈ ವೇಸ್ಟ್ ಅನ್ನು ಗುಡಿಸಿ ಸಾರಿಸಿ, ಆ ದುಡ್ಡನ್ನು ನಿತ್ಯಾನಂದ ಸ್ವಾಮಿಯಂತಹ ಇಂಟರ್ ನ್ಯಾಷನಲ್ ಸ್ವಾಮಿಗಳ ಆಶ್ರಮಕ್ಕೋ, ಸಚಿವರುಗಳು ಚನ್ನಾಗಿ ಬ್ಲೂಫಿಲ್ಮ್ ನೋಡಲು ಸಾಧ್ಯವಾಗುವಂತೆ ಐ ಪ್ಯಾಡ್ ಗಳನ್ನು ಕೊಡಿಸಲೋ, ವಿವಿಧ ಮಠಮಾನ್ಯರನ್ನು ಕೂರಿಸಿ ಹಾಲು ಮೊಸರಿನ ಅಭಿಷೇಕ ಮಾಡಿಸುವ ಸಮಾರಂಭಕ್ಕೋ ಕೊಟ್ಟರೆ ಸರ್ಕಾರದವರಾದರೂ ನಳನಳಿಸಿಯಾರು ಎಂಬ ದೂರಾಲೋಚನೆಯಿಂದ ನಮ್ಮ ಸರ್ಕಾರ ಇಂತಹ ಘನ ಕೆಲಸಕ್ಕೆ ನಿರ್ಲಜ್ಜೆಯಿಂದ ಕೈ ಹಾಕಿದೆ. 
 
 
ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು ೬೪ ವರ್ಷಗಳು ಮಾತ್ರ ಆಗಿವೆ. ಆದರೆ ನಮ್ಮ ಜನಸಾಮಾನ್ಯರು ಬಿಳಿ ಬಣ್ಣ ಉಚ್ಚವಾದದ್ದು ಎಂಬ ಭ್ರಮೆಯಿಂದ ಇನ್ನೂ ಹೊರಬಂದೇ ಇಲ್ಲ...ಬೇಕಾದಷ್ಟು ದಲಿತ ಕೇರಿಗಳು ಇನ್ನೂ ೨೧ನೇ ಶತಮಾನಕ್ಕೆ ಕದ ತೆರೆದೇ ಇಲ್ಲ...ಕೋಟ್ಯಾಂತರ ಮಂದಿಯ ಎಲುಬಿಗಂಟಿಕೊಂಡಿರುವ ಬಡತನಕ್ಕೆ ಇನ್ನೂ ಚಿಕಿತ್ಸೆಯಾಗಿಲ್ಲ...ಶತಮಾನಗಳಿಂದ ಯಾರಯಾರದ್ದೋ ಯಜಮಾನಿಕೆಗಳ ಆರ್ಭಟದಲ್ಲಿ ಮಂಜುಗಟ್ಟಿ ಹೋಗಿದ್ದ ಮಿದುಳುಗಳು ಇನ್ನೂ ಹೊಸ ರಕ್ತಸಂಚಾರವನ್ನು, ವಿದ್ಯೆಯನ್ನು ಹೀರಲೂ ತಯಾರಾಗಿಲ್ಲ...ಅಷ್ಟರಲ್ಲಿ ಹೊಟ್ಟೆತುಂಬಿದ, ತಲೆಕೆಟ್ಟ ರಾಜಕಾರಣಿಗಳಿಗೆ ಈ ಅರ್ಜೆಂಟು!!! ಬಡವರೆಂಬ, ದರಿದ್ರ್ಯರೆಂಬ ಬಹುತೇಕರನ್ನು ವ್ಯವಸ್ಥಿತವಾಗಿ, ಇಂಚಿಂಚೇ ಹಿಸುಕಿ, ಹೊಸಕಿ ನಿರ್ನಾಮ ಮಾಡಿಬಿಡುವ ಹುನ್ನಾರ!!!! ಪ್ರಜಾಪ್ರಭುತ್ವದ ತುಂಡು ಪಂಚೆಯುಟ್ಟು ಬಂಡವಾಳಶಾಹೀ
ರಾಕ್ಷಸ ಬರುತ್ತಿದ್ದಾನಲ್ಲಾ...ಅವನ ಹುನ್ನಾರ...
 
 
ಅತ್ಯಂತ ಲಾಭದಾಯಕವಾದ ಈ ಕೆಲಸವನ್ನು ಯಾಕೆ ಮಾಡಬಾರದು? ಯೋಚಿಸಿ ನೋಡೋಣ...
 
 • ಸರ್ಕಾರದ ಖರ್ಚು ಉಳಿತಾಯ, ಆಗಲೋ ಈಗಲೋ ಬೀಳಲಿರುವ ಶಾಲೆಗಳನ್ನು ರಿಪೇರಿ ಮಾಡಿಸುವ ಜವಾಬ್ದಾರಿ ಇರುವುದಿಲ್ಲ, ಹೆಚ್ಚಿನ ಟೀಚರ್ ಗಳು ಬೇಡ, ಬಿಟ್ಟಿ ಊಟ ಹಾಕುವುದೂ ತಪ್ಪಿತು, ಶಾಲೆ ಮುಚ್ಚಿಸಿಕೊಳ್ಳುವಂತಹ ಸ್ಥಿತಿಗೆ ಬಂದಿರುವ ನತದೃಷ್ಟ ಹಳ್ಳಿಗಳ ಅಕ್ಕಪಕ್ಕದಲ್ಲಿರುವ ಖಾಸಗೀ ಶಾಲೆಗಳವರಿಂದ ಅಲ್ಲಿ ಇಲ್ಲಿ ಸ್ವಲ್ಪ ನೈವೇದ್ಯ ಸಿಗಬಹುದು.
 • ಏನ್ರೀ ಅದು ಕನ್ನಡ ಕನ್ನಡ ಅಂತ ಬಡಿದುಕೊಳ್ಳುವುದು? ಕಾಲ್ ಸೆಂಟರಿನಲ್ಲಿ ಕನ್ನಡ ಮಾತಾಡಬೇಕಾ?! ನಮ್ಮ ಭಾಷೆ, ನಮ್ಮ ಸಂಸ್ಕೃತಿ ಅಂತ ಸೆಪರೇಟಾಗಿ ಹೊಡೆದಾಡಿಕೊಳ್ಳುವುದಕ್ಕಿಂತ ಸುಮ್ಮನೆ ಎಸ್ಸಾರ್ ನೋಸಾರ್ ಅಂತ ಕಲಿತು ಪಶ್ಚಿಮ ದೇಶಗಳು ಕೊಡುವ ಕೆಲಸ ಹಿಡಿಯುವುದು ಬೆಸ್ಟ್ ತಾನೇ? ಇನ್ನು ಕನ್ನಡವನ್ನೇ ಕಲಿಸುವುದಿಲ್ಲ ಎಂದಾದರೆ ರಕ್ಷಣಾ ವೇದಿಕೆಯ ಗಲಾಟೆ ಮಂದಿ, ಕನ್ನಡ ಸಾಹಿತಿಗಳು, ಹೋರಾಟಗಾರರ ತಲೆಮಾರೇ ಇರುವುದಿಲ್ಲ!!! ಎಂಥಾ ರಿಲೀಫ್!!!
 • ಅದಲ್ಲದೆ, ಈ ಸರ್ಕಾರೀ ಶಾಲೆಗಳಿದ್ದ ಜಾಗ, ಅಕ್ಕಪಕ್ಕದ ಇನ್ನೂ ಹತ್ತಿಪ್ಪತ್ತು ಎಕರೆಗಳನ್ನು ಡಿನೋಟಿಫೈ ಮಾಡಿ ಹಂಚಿಕೊಳ್ಳಬಹುದು.
 •  ಶಾಲೆ ಮುಚ್ಚಿದಾಗ ಅಲ್ಲಿದ್ದ ಐದೋ ಆರೋ ಮಕ್ಕಳು ದರ್ದಿದ್ದರೆ ಪಕ್ಕದ ಹಳ್ಳಿಗೆ ಹೋಗುತ್ತಾರೆ ಇಲ್ಲದಿದ್ದರೆ ಬಾಲ ಕಾರ್ಮಿಕರಾಗುತ್ತಾರೆ! ಶಾಲೆ ಮುಚ್ಚಿದ ಹಳ್ಳೀಗಳ ಅಕ್ಕಪಕ್ಕದಲ್ಲೇ ಸದ್ದಿಲ್ಲದೆ ಒಂದಷ್ಟು ಬೀಡಿ, ಪಟಾಕಿ, ಗಂಧದ ಕಡ್ಡಿ ಫಾಕ್ಟರಿಗೆ ಅನುಮತಿ ಕೊಟ್ಟರೆ ಅನುಮತಿ ಕೊಡುವವರಿಗೂ ಪ್ರಸಾದ, ಫ್ಯಾಕ್ಟರಿಯವರಿಗೂ ಕಡಿಮೆ ಬೆಲೆಯ ಕೂಲಿಗಳು!
 • ಬಡವರ, ದಲಿತರ ಮನೆ ಹೆಣ್ಣು ಮಕ್ಕಳು ಪಕ್ಕದೂರಿನ ಶಾಲೆಗೆ ಹೋಗದಿದ್ದರೆ ಯಾವನಾದರೂ ಬಡವನನ್ನೋ, ಕುಡುಕನನ್ನೋ ಮದುವೆಯಾಗಿ ಒಂದೆರಡು ವರ್ಷ ಏಗಿ ಬಾವಿ ಪಾಲಾಗುತ್ತಾರೆ. ಆಗ ತಾನಗೇ ಜನಸಂಖ್ಯೆ ಕಂಟ್ರ‍ೋಲ್! ಇಲ್ಲವೇ ಬೀದಿ ಪಾಲಾಗುತ್ತಾರೆ. ಆಗ ಬಾಂಬೆ ಬೆಂಗಳೂರಿನ ಕೆಂಪಿನ ಸುಳಿಗೆ ಬೀಳುತ್ತಾರೆ. ನಿತ್ಯಾನಂದನಂಥವರಿಗೆ, ರಾಜಕಾರಣದಲ್ಲಿರುವ ಬ್ಯಾಕ್ಟೀರಿಯಾಗಳಿಗೆ ಅದೂ ಒಂಥರಾ ಅನುಕೂಲವಲ್ಲವೇ!!
 • ಏನೂ ಮಾಡದೇ ಹಳ್ಳಿಗಳಲ್ಲೇ ಉಳಿದು ಗತಿಯಿಲ್ಲವೆಂದು ಕೊಸರಾಡಿಕೊಳ್ಳುವವರು ಆಗಾಗ ಓಟಿಗಾಗುತ್ತಾರೆ!ಬದುಕುವಿಕೆ ಅನಿವಾರ್ಯವೆನಿಸಿದವರು ಅಂಗಾಂಗ ಮಾರಿಕೊಳ್ಳುತ್ತಾರೆ!!!! ಓಹ್ ವಾಟ್ ಅ ಚಾನ್ಸ್!!!!
 •  
   
  ಬಡವರು ಚನ್ನಾಗಿ ಬದುಕುವುದಕ್ಕಿಂತ ನರಳಾಡಿ ಸಾಯುವ ಹಂತಕ್ಕೆ ಬಂದರೇ ಲಾಭದಾಯಕವಲ್ಲವೇ!!!!
ನೀವೇ ನೋಡುವಿರಂತೆ...ಇದು ಮೊದಲ ಹಂತ ಅಷ್ಟೆ!!! ಕರ್ನಾಟಕದ ಮೆದು ಮೊದ್ದು ಜನ ಇದಕ್ಕೆ ಸುಮ್ಮನಿದ್ದರೆ ಕೆಲವು ವರ್ಷಗಳಲ್ಲೇ ವಿದ್ಯಾಭ್ಯಾಸದ ಕ್ವಾಲಿಟಿ ಚನ್ನಾಗಿಲ್ಲ ಎಂಬ ನೆಪ ಹೊತ್ತು ಅಳಿದುಳಿದ ಸರ್ಕಾರೀ ಶಾಲೆಗಳು, ಅಂಗನವಾಡಿಗಳು ಮುಚ್ಚಿಕೊಳ್ಳುತ್ತವೆ. ಆಮೇಲೆ ರೇಷನ್ ಹಂಚುವ ಸೊಸೈಟಿಗಳು, ದುಡ್ಡಿಲ್ಲದವರಿಗೆ ಬ್ಯಾಂಕ್ ಇಟ್ಟುಕೊಂಡು ನೊಣ ಹೊಡೆಯುವುದು ಯಾಕೆಂದು ಗ್ರಾಮೀಣ ಬ್ಯಾಂಕುಗಳು ಎಲ್ಲವೂ ಒಂದೊಂದಾಗಿ ಸಮಾಧಿ ಸೇರುತ್ತವೆ. ಗಾಂಧಿತಾತನ ಗ್ರಾಮ ಸ್ವರಾಜ್ಯದ ಕನಸು ಸಂಪುಟಗಳಲ್ಲೇ ಉಳಿದುಬಿಡುತ್ತದೆ...
 
 
 

ಈ ಮಕ್ಕಳು ಏನಾಗುತ್ತಾರೆ??

 

ಭೌಗೋಳಿಕ ಪ್ರದೇಶವೊಂದರಲ್ಲಿ ಕ್ರಾಂತಿ, ಯುದ್ಧ, ಹೋರಾಟ, ಚಳುವಳಿ, ಮಿಲಿಟರಿ ಕಾರ್ಯಾಚರಣೆಗಳು ಸಾರ್ವತ್ರಿಕವಾದಾಗ ಅದರಲ್ಲಿ ತೊಡಗಿರುವವರ ಆಕ್ರೋಶ ಎಲ್ಲೆ ಮೀರದಾಗುತ್ತದೆ. ಹೋರಾಟ, ಹೊಡೆದಾಟ, ಕಾದಾಟಗಳು ಅವರಲ್ಲಿನ ಆಕ್ರೋಶವನ್ನು ಹೊರಹಾಕುವ ಮಾಧ್ಯಮಗಳಾಗುತ್ತವೆ. ದೊಡ್ಡವರು, ಗಂಡಸರು, ಹೆಂಗಸರು ಅವರ ಮೇಲಾಗುವ ದೌರ್ಜನ್ಯವನ್ನು ಹೇಗಾದರೂ ವ್ಯಕ್ತಪಡಿಸಿ ಹೋರಾಟ ಮಾಡಿಕೊಳ್ಳುತ್ತಾರೆ (ಅವರಿಗೆ ಆ ಅವಕಾಶ, ಮನಸ್ಥಿತಿ ಬಂದರೆ ಸಾಕು). ಆದರೆ ಇವೆಲ್ಲ ಚಳುವಳಿ, ಕದನ, ಕಾರ್ಯಾಚರಣೆಗಳು ಆಳುವವರು ಮತ್ತು ಆಳಿಸಿಕೊಳ್ಳುವವರ ಮಧ್ಯೆ ನಡೆಯುವಾಗ, ಆಗಷ್ಟೇ ಕಣ್ಣುಬಿಡುತ್ತಿರುವ ಹೂಮರಿಗಳಾದ ಮಕ್ಕಳು ಏನು ಮಾಡುತ್ತಾರೆ? ಎಲ್ಲಿ ಹೋಗುತ್ತಾರೆ?

 

ಮಧ್ಯಪ್ರಾಚ್ಯ ದೇಶಗಳಲ್ಲಿ ಕ್ರಾಂತಿಯಾಗಿದೆ, ಹೊಸ ಸಮಾಜ, ಹೊಸ ಆಡಳಿತ ಸ್ಥಾಪಿಸುವ ಮಹೋದ್ದೇಶದಿಂದ. ಟ್ಯುನೀಷಿಯಾ, ಲಿಬಿಯಾ, ಈಜಿಪ್ಟ್, ಯೆಮೆನ್ ಗಳಲ್ಲಿ ಬಿಸಿ ಆರಿಲ್ಲ...ಈ ಇಡೀ ಕ್ರಾಂತಿ ನಡೆಯುವಾಗ, ’ರಿಪೇರಿ’ಗಳು ನಡೆಯುವಾಗ ಮಕ್ಕಳು ಏನು ಮಾಡುತ್ತಾರೆ? ಎಲ್ಲಿರುತ್ತಾರೆ? ವಿವಿಧ ಟಿವಿ ಚಾನೆಲ್ ಗಳು, ಇಂಟರ್ ನೆಟ್ಟಿನ ಸೈಟ್ ಗಳು ಕ್ರಾಂತಿಯನ್ನು ಉತ್ಸಾಹದಿಂದ ವರದಿ ಮಾಡಿದ್ದವು. ಕುಪಿತ ಜನರ ಜಾತ್ರೆಗಳನ್ನು ತೋರಿಸುತ್ತಿದ್ದರು. ಊರಿನ ದೊಡ್ಡ ಬೀದಿಯಲ್ಲಿ ದೊಡ್ಡವರು ಚಳುವಳಿ ನಡೆಸಿ, ಕೈ ಬಾಂಬು ಬಿಸಾಡುತ್ತಿದ್ದಾಗ, ಅಶ್ರುವಾಯು ಸಿಡಿಸಿಕೊಳ್ಳುತ್ತಿದ್ದಾಗ, ಗುಂಡುಗಳ ಹುಚ್ಚುಮಳೆಗೆ ದೇಹ ಕೊಡುತ್ತಿದ್ದಾಗ ಅವರ ಪುಟಾಣಿಗಳು ಎಲ್ಲಿರುತ್ತಾರೆ? ಹೇಗಿರುತ್ತಾರೆ?
 
 
ಏಷಿಯಾ, ಮಧ್ಯಪ್ರಾಚ್ಯದ ಪುರುಷ ಪ್ರಧಾನ ಸಮಾಜದಲ್ಲಿ, ಗಂಡಸೆಂಬುವನು ದುಡಿದು ತರಬೇಕು. ಅವನು ಕೆಲಸವಿಲ್ಲದೆ ಅಥವಾ ಕೆಲಸ ಬಿಟ್ಟು ಚಳುವಳಿಗಿಳಿದಾಗ ಹಸಿದ ಮಕ್ಕಳ ಗತಿ? ಅಪ್ಪನ ಚಳುವಳಿ, ಹೋರಾಟ, ಬದಲಾವಣೆಯ  ಮಹೋದ್ದೇಶದ ಮುಂದೆ ಹಸಿದ ಹೊಟ್ಟೆಗಳ ಸದ್ದು ಬಂದಾಗಬೇಕೇ? ಅಥವಾ ಕೇಳದೇ?
 

ಈಜಿಪ್ಟ್, ಲಿಬಿಯಾ, ಯೆಮೆನ್, ಟ್ಯುನೀಷಿಯಾದ ಕ್ರಾಂತಿಯ ಮಧ್ಯೆ ಸಹಸ್ರಾರು ಮಕ್ಕಳು ನಲುಗಿ ಹೋಗಿರುವುದು ಇತ್ತೀಚಿಗೆ ಬೆಳಕಿಗೆ ಬರುತ್ತಿದೆ. ’ತಾಹಿರ್ ಚೌಕದ ಕ್ರಾಂತಿ’ ನಡೆಯುವಾಗ ಅಸಂಖ್ಯಾತ ಮಕ್ಕಳು ಏಟುತಿಂದು ಗಾಯಗೊಂಡಿದ್ದಾರೆ. ಹಲವರು ಜೀವ ಬಿಟ್ಟಿದ್ದಾರೆ. ಮಕ್ಕಳಿಗೆ ಶಾಲೆಗಳು ಇನ್ನೂ ಆರಂಭವಾಗಿಲ್ಲ. ಮನೆಗಳಲ್ಲಿ ಆರ್ಥಿಕ ಸಂಕಷ್ಟ ಇರುವುದರಿಂದ ಸಣ್ಣ ಪುಟ್ಟ ಕೂಲಿ ಕೆಲಸ ಹುಡುಕಿಕೊಂಡು ಮಕ್ಕಳು ಬೀದಿಗೆ ಬೀಳುತ್ತಿದ್ದಾರೆ. ಕಳ್ಳತನಕ್ಕೆ ಕೈ ಹಾಕುತ್ತಿದ್ದಾರೆ. ಈಗ ಬೀದಿ ಮಕ್ಕಳ ಸಮಸ್ಯೆಯನ್ನು ಪರಿಹರಿಸುವುದು ಈಜಿಪ್ಟಿಗೆ ಹೊಸ ಸಮಸ್ಯೆ...

 

ಪಾಕಿಸ್ತಾನದ ಖೈಬರ್ ನಲ್ಲಿ ನಡೆಯುತ್ತಿರುವ ಮಿಲಿಟರಿ ಕಾರ್ಯಾಚರಣೆಗೆ ತತ್ತರಿಸಿ ಅಲ್ಲಿನ ಲಕ್ಷಾಂತರ ಜನ ಮನೆಗಳನ್ನು ಬಿಟ್ಟು ಸರ್ಕಾರದ, ಅಂತರರಾಷ್ಟ್ರ‍ೀಯ ಸಂಘಸಂಸ್ಥೆಗಳ ಕ್ಯಾಂಪಿಗೆ ಆಶ್ರಯ ಕೇಳಿ ಬರುತ್ತಿದ್ದಾರೆ. ಕಳೆದ ಎರಡು ತಿಂಗಳಲ್ಲಿ ಇನ್ನೂರೈವತ್ತು ಸಾವಿರ ಜನ, ನೂರು ಸಾವಿರಕ್ಕೂ ಹೆಚ್ಚು ಮಕ್ಕಳು ನಿರಾಶ್ರಿತರಾಗಿದ್ದಾರೆ. ಕಳೆದ ಒಂದೇ ವಾರದಲ್ಲಿ ಅರವತ್ತು ಸಾವಿರ ಜನ ಜಲೋಜ಼ಿಯಲ್ಲಿನ ಕ್ಯಾಂಪುಗಳಿಗೆ ಧಾವಿಸಿದ್ದಾರೆ. ಆದರೆ ಇಷ್ಟು ಜನರಿಗೆ ಆಶ್ರಯ ಕೊಡಲು, ಆಹಾರ, ಔಷಧಿ ಒದಗಿಸಲು ಅಲ್ಲಿನ ಕ್ಯಾಂಪ್ ಗಳು ಸಮರ್ಥವಾಗಿಲ್ಲ. ಹಸಿವೆ, ನಿತ್ರಾಣಗಳಿಂದ ಮಕ್ಕಳು ಆರೋಗ್ಯ ಕಳೆದುಕೊಳ್ಳುತ್ತಿದ್ದರೆ, ಹಸಿವೆ ಆಕ್ರೋಶದಿಂದ ಜನ ಬಂಡೇಳುತ್ತಿದ್ದಾರೆ...

 

ಟ್ಯುನೀಶಿಯಾ-ಲಿಬಿಯಾದಿಂದ, ಅಪ್ಪ ಅಮ್ಮಂದಿರನ್ನು ಕಳೆದುಕೊಂಡಿರುವ ಮಕ್ಕಳು ನಾರ್ವೆಯಲ್ಲಿರುವ ಶೌಷಾ ನಿರಾಶ್ರಿತರ ಕ್ಯಾಂಪುಗಳಿಗೆ ಬಂದಿಳಿಯುತ್ತಿದ್ದಾರೆ. ಈ ಕ್ಯಾಂಪ್ ಗೆ ಇಥಿಯೋಪಿಯಾ, ಸೋಮಾಲಿಯಾದಿಂದಲೂ ಅನಾಥ ಮಕ್ಕಳನ್ನು ಕರೆತರಲಾಗುತ್ತಿದೆ. ಈಗಾಗಲೇ ಸಹಸ್ರಾರು ಸಂಖ್ಯೆಯಲ್ಲಿ ಬಂದು ಇಲ್ಲಿ ನೆಲೆಯಾಗಿರುವ ಮಕ್ಕಳಿಗೆ ಕ್ಯಾಂಪು ಆಶ್ರಯವಾಗಿದ್ದರೂ ವಾತಾವರಣದ ಬದಲಾವಣೆ, ಅಸಮತೋಲನಕ್ಕೆ, ನಾರ್ವೆಯ ಅಸಾಧಾರನ ಕುಳಿರ್ಗಾಳಿಗೆ ಆರೋಗ್ಯ ಕಳೆದುಕೊಳ್ಳುತ್ತಿದ್ದಾರೆ. ಕೆನಡಾ, ಅಮೆರಿಕಾ, ಆಸ್ಟ್ರ‍ೇಲಿಯಾ, ಬೆಲ್ಜಿಯಂ, ಡೆನ್ಮಾರ್ಕ್, ನೆದರ್ಲ್ಯಾಂಡ್ಸ್, ಪೋರ್ಚುಗಲ್, ನಾರ್ವೇ, ಸ್ವೀಡನ್, ಜರ್ಮನಿ, ನ್ಯೂಜ಼ಿಲ್ಯಾಂಡ್, ಸ್ಪೇನ್ ಇನ್ನಿತರೆ ದೇಶಗಳು ಇವರಿಗೆ ಆಶ್ರಯ ಕೊಡುತ್ತೇನೆ ಎಂದಿವೆಯಾದರೂ ಇನ್ನೂ ಆ ಪ್ರಕ್ರಿಯೆ ಆರಂಭವಾಗಿಲ್ಲ. ಸಧ್ಯದಲ್ಲೇ ಮತ್ತಷ್ಟು ಸಹಸ್ರ ಮಕ್ಕಳು ಯೆಮನ್ ಇನ್ನಿತರೆ ದೇಶಗಳಿಂದ ಇಲ್ಲಿಗೆ ಬಂದು ಸೇರುವ ನಿರೀಕ್ಷೆ ಇದೆ...

 

ಯುದ್ಧ, ಹೋರಾಟ, ಕ್ರಾಂತಿಗಳು ನಡೆವ ನಾಡಿನ ಪುಟಾಣಿಗಳ ಕಥೆ ಇದಾದರೆ ಬಡತನವನ್ನು ಗರ್ಭದಲ್ಲಿಟ್ಟುಕೊಂಡೇ ಥಳಥಳಿಸುವ ದಿರಿಸು ತೊಟ್ಟು ’ಹೊಳೆಯುತ್ತಿದ್ದೇನೆ’ ಎಂದು ಭ್ರಮಿಸುವ ಭಾರತ, ಪಕ್ಕದ ಬಾಂಗ್ಲಾದೇಶ, ನೇಪಾಳಗಳ ಕಥೆ ಮತ್ತೊಂದು ಥರ. ಜಾಗತೀಕರಣ ಬಂದೇ ಬಂದು ಮಧ್ಯಮ ವರ್ಗದವರಿಗೆ, ಸಿರಿವಂತರಿಗೆ, ವಿದ್ಯಾರ್ಹತೆ ಉಳ್ಳವರಿಗೆ ಸಾಕಷ್ಟು ಹಣದ, ಉತ್ತಮ ಬದುಕಿನ ಅವಕಾಶವನ್ನೇನೋ ಕಲ್ಪಿಸಿದೆ. ಆದರೆ ಬಡವರು, ಅನಕ್ಷರಸ್ಥರು, ರೈತರು ಮತ್ತಷ್ಟು ಬಡಕಲೆದ್ದು ಹೋಗುವಂತಾಗಿದೆ. ಇರುವ ತುಂಡು ಜಮೀನುಗಳನ್ನು ಮಾರಿ ಹಳ್ಳಿಗರು ಪಟ್ಟಣ ಸೇರಿ ನಗರೀಕರಣದ ದೌಲತ್ತು ದೌರ್ಜನ್ಯಕ್ಕೆ ದಿಕ್ಕುಗೆಡುತ್ತಿದ್ದಾರೆ. ನಮ್ಮೂರುಗಳಲ್ಲಿರುವ ಬಡವರು, ಕೂಲಿಕಾರ್ಮಿಕರು, ದೌರ್ಜನ್ಯಕ್ಕೊಳಗಾದವರ ಮನೆಗಳ ಮಕ್ಕಳ ಪಾಡೂ ಇದು. ವಿದ್ಯೆ ಸಿಗದ ಮಕ್ಕಳು ಹೋಟೇಲುಗಳಲ್ಲಿ, ಸಿರಿವಂತರ ಮನೆಗಳಲ್ಲಿ ಅಡಿಗೆ ಮನೆಕೆಲಸ ಮಾಡಿ ಮಕ್ಕಳಾಡಿಸಿಕೊಂಡು, ಕೆಂಪುದೀಪ ಪ್ರದೇಶಗಳಲ್ಲಿ, ಕಡಿಮೆ ಕೂಲಿಯ ಗ್ಯಾರೇಜುಗಳಲ್ಲಿ, ಚಿಗುರುವ ವಯಸ್ಸಲ್ಲಿ...ಏಟು ತಿಂದುಕೊಂಡು ಬದುಕು ಸವೆಸುತ್ತಿದ್ದಾರೆ...

 

ಇವರೆಲ್ಲರೂ ಈ ಪಾಟಿ ಕಷ್ಟಪಡುತ್ತಿರುವುದು ಹೊತ್ತಿನ ಹೊಟ್ಟೆಪಾಡಿಗಾಗಿಯಲ್ಲವೇ. ಹೊಟ್ಟೆಗೆ ಊಟ, ಒಂದು ಸುರಕ್ಷಿತ ವಸತಿ, ಮೈಮೇಲೆ ಬಟ್ಟೆ, ಸ್ವಲ್ಪ ವಿದ್ಯೆ, ಒಂದಷ್ಟು ಪ್ರೀತಿ ಮತ್ತು ಭರವಸೆ...ಸ್ವಲ್ಪ ಪ್ರಮಾಣದಲ್ಲಿ ಇವನ್ನು ಒದಗಿಸಿದರೂ ಚಿಗುರುವ ಕಾಡು ಬೀಜಗಳು ಈ ಮಕ್ಕಳು. ಅವರಿಗೆ ಬದುಕು ಕೊಡಲು ಒಂದು ಸಣ್ಣ ಪ್ರಯತ್ನ ಮಾಡಬಹುದಲ್ಲವೇ...


ನಾವಿರುವ ಊರಿನಲ್ಲಿಯೇ ಕೆಲಸ ಮಾಡುತ್ತಿರುವ ಸರಕಾರೀ ಅಲ್ಲದ, ನಾನ್ ಪ್ರಾಫಿಟ್, ಜನಪರ ಸಂಘಸಂಸ್ಥೆಗಳದ್ದೊಂದು ಸಣ್ಣ ಪಟ್ಟಿ ಮಾಡಿಕೊಳ್ಳೋಣ. ಅನಾಥಾಲಯಗಳೋ, ಗಂಡದಿರಿಂದ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಸಹಾಯ ಮಾಡುವಂಥದೋ, ಬಡಮಕ್ಕಳಿಗೆ ವಿದ್ಯಾಭ್ಯಾಸ ಒದಗಿಸುವಂಥದ್ದೋ, ಶತಮಾನಗಳ ಹಿಂದಿನ ಸಾಮಾಜಿಕ ಕ್ರೌರ್ಯಕ್ಕೆ ಸಿಲುಕಿ ಇನ್ನೂ ಕಷ್ಟಪಡುತ್ತಿರುವ ದಲಿತರ, ನೊಂದವರ, ದೌರ್ಜನ್ಯಕ್ಕೊಳಗಾಗಿರುವವರಿಗೆ ವಿದ್ಯೆ, ಸವಲತ್ತು ಕೊಡುವಂತದ್ದೋ, ಅಂಧರು-ಅನಾರೋಗ್ಯ ಪಿಡಿತರನ್ನು ಸಲಹುವದ್ದೋ, ಬಡವರಿಗೆ ಆರೋಗ್ಯದ ಶಿಕ್ಷಣ ಕೊಡುವಂಥದ್ದೋ, ಪ್ರಾಣಿ-ಪಕ್ಷಿ-ಪರಿಸರವನ್ನು ರಕ್ಷಿಸುವ ಸಲುವಾಗಿಯೋ...ನಮ್ಮ ಸುತ್ತಲೇ ನೂರಾರು ಸಂಘಸಂಸ್ಥೆಗಳಿರುತ್ತವೆ. ಅವುಗಳಲ್ಲಿ ನಮಗಿಷ್ಟವಾದ ಒಂದನ್ನು ಆಯ್ಕೆಮಾಡಿಕೊಳ್ಳೋಣ. ಅಲ್ಲಿಗೆ ಹೋಗಿ ನಮ್ಮ ಸಹಕಾರ, ಬೆಂಬಲವನ್ನು ತಿಳಿಸೋಣ. ಇಂಥ ಸಂಸ್ಥೆಗಳಿಗೆ ತಕ್ಷಣ ಹಣಕೊಡುವುದಕ್ಕಿಂತ ಅವುಗಳ ಕಾರ್ಯ ವೈಖರಿಯನ್ನು ಗಮನಿಸಿ ನಮ್ಮ ಕೈಲಾದ ಸಹಾಯ ಮಾಡೋಣವೆನಿಸಿದರೆ ಆ ಸಂಸ್ಥೆಗೆ ಸ್ವಯಂಸೇವಕರಾಗೋಣ. ನಮ್ಮ ಶ್ರಮ, ಸಮಯಕ್ಕಿಂತ ದೊಡ್ಡ ಕೊಡುಗೆ ಯಾವುದಿದೆ ಹೇಳಿ?

 

ನಮ್ಮ ಜಾತಿ, ಮತ, ಅರ್ಹತೆ, ಅಧಿಕಾರ, ಸೌಂದರ್ಯ, ಭಾರೀ ಈಗೋ, ಹಣದ ಆಡಂಬರಗಳನ್ನು ನಂನಮ್ಮ ಮನೆಯಲ್ಲಿಯೇ ಕಳಚಿಟ್ಟು ಒಮ್ಮೆ ಪ್ರೀತಿಸುವ ಹೃದಯವಾಗಿ ಒಂದಷ್ಟು ಒಳ್ಳೆಯದನ್ನು ಮಾಡಿಬಂದರೆ...ನಮ್ಮ ನಿರೀಕ್ಷೆರಹಿತ ಪ್ರೀತಿ ಒಂದಷ್ಟು ಜೀವಗಳಿಗೆ ಜೇನಾಗಬಹುದಲ್ಲವೇ? ನಮ್ಮಲ್ಲೇ ಸ್ಥಾಪಿತಳಾಗಿರುವ ಕರುಣೆಯೆಂಬ ಮಾತಾಯಿಗೆ ಒಂದು ಪುಟ್ಟ ಪೂಜೆ...

 
 
 
 
 

 

 
 
 
 
 
 
 
 
Copyright © 2011 Neemgrove Media
All Rights Reserved