ನಿದ್ದೆ ಕೆಡಿಸಿರುವ ಅಮೇರಿಕನ್ ಜಾಂಬಿಗಳು!

ವಾರಗಳ ಹಿಂದೆ ಫ್ಲೋರಿಡಾ ರಾಜ್ಯದ ಮಯಾಮಿಯಲ್ಲಿ ರೂಡಿ ಯೂಜೀನ್ ಎಂಬ ೩೧ ವರ್ಷದ ಮಾದಕ ವ್ಯಸನಿಯೊಬ್ಬ ಮಾಡಿದ್ದ ಅಪರಾಧ ಕೇಳಿದವರ ಎದೆ ನಡುಗಿಸುವಂತಿತ್ತು. ಆತ ಬರೀ ಕಾರುಗಳು ರೊಯ್ಯನೆ ಓಡಾಡುವ ನಿರ್ಜನ ಪ್ರದೇಶವೊಂದರಲ್ಲಿ ನಡೆದು ಬರುತ್ತಾ ಅಲ್ಲಿ ಸಿಕ್ಕಿದ್ದ ಅಮೆರಿಕನ್ ನಿರ್ಗತಿಕನೊಬ್ಬನನ್ನು (ಹೋಮ್ ಲೆಸ್) ಮಾತಿಗೆಳೆದಿದ್ದ. ಅದೇನು ಗುಟ್ಟು ಹೇಳುವ ಆಸೆ ತೋರಿಸಿದ್ದನೋ...ಆ ನಿರ್ಗತಿಕನನ್ನು ಹಿಡಿದು ಅವನ ಮುಖವನ್ನು ಕರಕರನೆ ತಿನ್ನಲು ಶುರು ಮಾಡಿದ್ದ. ’ತಿನ್ನುವುದು’ ಎನ್ನುವುದನ್ನು ಉತ್ಪ್ರೇಕ್ಷೆ ಅಥವಾ ಉಪಮೆಯನ್ನಾಗಿ ಬಳಸುತ್ತಿಲ್ಲ. ಆ ಮದ ತುಂಬಿದ ಮನುಷ್ಯನೆಂಬ ಪ್ರಾಣಿ ನಿಜಕ್ಕೂ ಸೇಬನ್ನು ಕಚ್ಚಿ ತಿನ್ನುವಂತೆ ಆ ನಿರ್ಗತಿಕನ ಮುಖವನ್ನು ತಿನ್ನಲಾರಂಭಿಸಿದ್ದ. ಹತ್ತಿರದಲ್ಲಿದ್ದ ವ್ಯಕ್ತಿಯೊಬ್ಬ ನಿಲ್ಲಿಸೆಂಬಂತೆ ಕಿರುಚಾಡಿದರೂ ಭಕ್ಷಣೆ ಮುಂದುವರಿದಿತ್ತು. ಆ ವ್ಯಕ್ತಿ ಹತ್ತಿರದಲ್ಲಿ ಸಾಗಿದ್ದ ಪೋಲೀಸ್ ಕಾರನ್ನು ತಡೆದು ನಿಲ್ಲಿಸಿದ್ದ. ಸ್ಥಳಕ್ಕೆ ಬಂದಿದ್ದ ಪೋಲೀಸ್ ಆಫೀಸರ್ ತಾನು ನೋಡುತ್ತಿರುವುದು ನಿಜವೋ ಭ್ರಮೆಯೋ ಗೊತ್ತಾಗದೆ ಅಷ್ಟು ಹೊತ್ತಿಗಾಗಲೇ ಅರ್ಧ ಮುಖವನ್ನು ತಿಂದು ನುಂಗಿದ್ದವನಿಗೆ ಗುಂಡು ಹಾರಿಸಿ ಕೊಂದು ಹಾಕಿದ್ದ.
 
ಇದೆಲ್ಲವನ್ನೂ ದೂರದಲ್ಲಿದ್ದ ಸರ್ವೇಲೆನ್ಸ್ ಕ್ಯಾಮೆರಾ ಸೆರೆಹಿಡಿದಿತ್ತು. ಮಾಧ್ಯಮ ಏನು ಟೈಟಲ್ ಕೊಡುವುದು ಎಂದೂ ಗೊತ್ತಾಗದೇ, ಈ ಘಟನೆ ನಿಜಕ್ಕೂ ನಡೆದಿದೆಯಾ ಎಂದು ನಂಬಲಾಗದೇ ಇದೊಂದು ’ಜ಼ಾಂಬಿ ಘಟನೆ" ಎಂದು ವರದಿ ಮಾಡಿತು. ಮನುಷ್ಯನ ದೇಹ, ಅತಿಮಾನುಷ/ಪೈಶಾಚಿಕ ಶಕ್ತಿಯ ಜ಼ಾಂಬಿಗಳೆಂಬ ಕಾಮಿಕ್ ಕ್ಯಾರೆಕ್ಟರ್ ಬೀದಿಗಿಳಿದಿರುವುದನ್ನು ಕೇಳಿ ಜನ ದಿಗ್ಭ್ರಮೆಗೊಳಗಾದರು. ಇದಾರ ಕೆಲವು ದಿನಗಳಲ್ಲೇ ದೇಶದ ಇನ್ನೊಂದೆರಡು ಭಾಗಗಳಲ್ಲಿ ಇದೇ ರೀತಿ ನಡೆದ ಘಟನೆಗಳು ವರದಿಯಾದವು.
 
ಟೆಕ್ಸಸ್ ರಾಜ್ಯದಲ್ಲಿ ತಾಯಿಯೊಬ್ಬಳು ತನ್ನ ಹಸುಗೂಸನ್ನು ಸಾಯಿಸಿ ಅದರ ಮೆದುಳನ್ನು ತಿಂದು, ಬೆರಳುಗಳನ್ನು ಕಚ್ಚಿಬಿಸಾಡಿದ್ದಳು. ಹಾಗೇ ಮೇರಿಲ್ಯಾಂಡಿನ ಯೂನಿವರ್ಸಿಟಿ ವಿದ್ಯಾರ್ಥಿಯೊಬ್ಬ ತಾನು ತನ್ನ ರೂಮ್ ಮೇಟನ್ನು ಕೊಂಡು ಅವನ ಹೃದಯ ಮತ್ತು ಮೆದುಳನ್ನು ತಿಂದು ಉಳಿದ ಭಾಗಗಳನ್ನು ಕಸಕ್ಕೆ ಹಾಕಿರುವುದಾಗ ಪೋಲೀಸರಿಗೆ ತಪ್ಪೊಪ್ಪಿಕೊಂಡಿದ್ದ. ಕೆನಡಾದ ನಟನೊಬ್ಬ ತನ್ನ ಸಂಗಾತಿಯನ್ನು ಕೊಂದು, ಒಂದಷ್ಟು ತಿಂದು ಉಳಿದ ಭಾಗಗಳನ್ನು ಕೆನೆಡಿಯನ್ ರಾಜಕೀಯ ಪಕ್ಷಗಳ ಕಚೇರಿಗಳಿಗೆ ಪೋಸ್ಟ್ ಮಾಡಿದ್ದ! ಇದು ನಮ್ಮೆದುರಿನ ಸತ್ಯದ ಘಟನೆಗಳು.

ಎರಡು ವಾರಗಳಲ್ಲಿ ಒಂದರಹಿಂದೊಂದರಂತೆ ಹೊರಬಂದ ಈ ಘೋರ ಸತ್ಯ ಸುದ್ದಿಗಳಿಗೆ ಜನತೆ ಭಯಗ್ರಸ್ತವಾಗಿತ್ತು. ರೂಡಿ ಯೂಜೀನ್ ಮಾದಕ ವಸ್ತುಗಳ ವ್ಯಸನಿಯಾಗಿದ್ದ, ಟೆಕ್ಸಸ್ ನ ಮಹಾತಾಯಿ ಖಿನ್ನತೆಯಿಂದ ಬಳಲುತತ್ತಿದ್ದಳು, ಮೇರಿಲ್ಯಾಂಡಿನ ವಿದ್ಯಾರ್ಥಿಯೂ ಮಾನಸಿಕವಾಗಿ ಅಸ್ವಸ್ಥ ಎಂದು ನಂತರ ವರದಿ ಆಯಿತು. ನಿಜ. ದೈಹಿಕವಾಗಿ ಸದೃಢರಾಗಿದ್ದರೂ ಇವರ್ಯಾರೂ ಮಾನಸಿಕವಾಗಿ ಸ್ವಸ್ಥವಾಗಿರುವ ಸಾಧ್ಯತೆಗಳೇ ಇಲ್ಲ. ಇವರ ದೇಹಗಳಲ್ಲಿ ಪ್ರಾಣಿ ಅಥವಾ ಪೈಶಾಚಿಕವಾದ ಶಕ್ತಿಯನ್ನು ಬಿಟ್ಟರೆ ಬೇರೆ ಇರುವುದಕ್ಕೆ ಸಾಧ್ಯವಿಲ್ಲ. ಆದರೆ ಮನುಷ್ಯನದ್ದೆನ್ನುವ ಮನಸ್ಸು ಈ ಪಾಟಿ ದಾರಿತಪ್ಪುವುದು ಯಾವಾಗ?
 
ಚಿಕ್ಕ ವಯಸ್ಸಿನಿಂದಲೇ ಮಕ್ಕಳಿಗೆ ಕೊಲ್ಲುವ, ಕಿತ್ತು ಬಿಸಾಡುವ, ಮೈಕೈ ಮುರಿದು ಹಾಕಿ ವಿಜೃಂಭಿಸುವ ವೀಡಿಯೋ ಗೇಮ್ಗಳನ್ನು ಆಡಿಸುವುದನ್ನು ಅಭ್ಯಾಸ ಮಾಡಿ, ಅವರೊಳಗಿನ ಕಾಡು ಪ್ರಾಣಿಯನ್ನು ಒಳಗೇ ಎಲ್ಲೋ ಪೋಷಿಸಿದಾಗಲೇ?
 
ಹದಿಹರೆಯದ, ಯುವ ಮಕ್ಕಳನ್ನು ಪ್ರೀತಿ-ವಿಶ್ವಾಸ-ಸ್ನೇಹಪೂರ್ವಕವಾಗಿ ಮಾತನಾಡಿಸಿ ಅವರ ಮಿತ್ರರಾಗದೆ, ಬರೀ ಕಂಟ್ರ‍ೋಲ್ ಮಾಡಿ ಅಧಿಕಾರ ತೋರಿಸುವ ಅಪ್ಪ-ಅಮ್ಮಂದಿರುಗಳಾಗಿ ಉಳಿದು, ಹಲವಾರು ಒತ್ತಡಗಳಿಗೆ ಸಿಕ್ಕು ಪರಿಹಾರ ಪಡೆದುಕೊಳ್ಳಲಾಗದೆ ಮಕ್ಕಳು ನಿಧಾನಕ್ಕೆ ವ್ಯಸನಗಳಿಗೆ ಶರಣಾಗುವಾಗಲೇ?
 
ಸಿಗಬೇಕಾದ ಮನುಷ್ಯ ಸಂಬಂಧಗಳು ಸಿಗದೆ, ಆರ್ದ್ರತೆ, ಪ್ರೀತಿ, ಕರುಣೆಗಳಂತಹ ಕಾಣೆಯಾಗುತ್ತಿರುವ ಭಾವನೆಗಳ ಹುಡುಕಾಟದಲ್ಲಿ ಕಳೆದುಹೋದಾಗಲೇ?
 
ತಂದೆ-ತಾಯಿ, ಸಮಾಜ, ಮಾರುಕಟ್ಟೆ, ಒತ್ತಡ...ಯಾರಾದರೂ ಜವಾಬ್ದಾರಿ ತೆಗೆದುಕೊಳ್ಳಬೇಕಲ್ಲವೇ...
 
 
ಮನಸ್ಸು ಮನಸ್ಸಾಗಿ ಹದವಾಗಿ, ಹಸನಾಗಿ ಬೆಳೆಯದೇ ಉಳಿಯದೇ ಇದ್ದಾಗ ಜಗತ್ತಿನ ಎಲ್ಲ ಭಾಗಗಳಲ್ಲಿಯೂ ಈ ಥರದ ಮನುಷ್ಯ ದೇಹದ ಪೈಶಾಚಿಕ ಚಟುವಟಿಕೆಯ ’ಜ಼ಾಂಬಿ’ಗಳು ತಯಾರಾಗಬಹುದಲ್ಲವೇ? ಇದು ನಿಜಕ್ಕೂ ಬದಲಾವಣೆಯ ಪರ್ವ. ಸೂಪರ್ ಮಾರ್ಕೆಟ್ ಗಳಲ್ಲಿ ಸಿಗುವುದನ್ನು ಅಲ್ಲೇ ಬಿಟ್ಟು, ಮನೆಯೊಳಗೆ ಸೇರಿ, ಮನದೊಳಗೆ ಕಳೆದುಹೋಗಿರುವ ಸಂಪತ್ತುಗಳನ್ನು ಹುಡುಕಿಕೊಳ್ಳುವ ಕಾಲ. ನಮ್ಮ ಮಕ್ಕಳೊಳಗೆ ಹೊರಗಿನ ಮಾದಕತೆಗೆ ಮತ್ತವಾಗದೆ ಸ್ವತಂತ್ರವಾಗಿರುವ ಸ್ವಸ್ಥವಾದ ಮನಸ್ಸೊಂದು ಇದೆ, ಎಂದು ಸದಾ ಖಾತ್ರಿ ಮಾಡಿಕೊಂಡು ಪೋಷಿಸಬೇಕಾದ ಪರ್ವ.    
 


ಐಪಿಎಲ್ ಎಂಬ ಭಾರತದ ಸೂಪರ್ ಮಾಲ್!
ಎಸ್. ರಂಗಧರ

ನಟಿಯೊಬ್ಬಳು ಮೈಚೆಲ್ಲುಕೊಳ್ಳುವ ಮೂಲಕ ಐಪಿಲ್ ಕ್ರಿಕೆಟ್ ಪಂದ್ಯ ತಿಂಗಳ ಹಿಂದೆಯಷ್ಟೇ ಮುಗಿಯಿತು. ಹೀಗೆ ತಮ್ಮನ್ನು ತಾವು ಮಾರಾಟಕ್ಕೆ ಇಟ್ಟುಕೊಳುವ ಮಾರಾಟಪರ್ವ ಭಾರತಕ್ಕೆ ಹೊಸದು. ರಾಷ್ಟ್ರದ ಐಡೆಂಟಿಟಿಯ ಮೂಲಕ ಎಲ್ಲವನ್ನೂ ನೋಡುತ್ತಿದ್ದ ದೇಶ ಪ್ರೇಮಿಗಳು, ತಮ್ಮ ಲೋಕದೃಷ್ಟಿಯಿಂದ ಹೊರಗೆಲ್ಲೋ ಓಡಿಹೋಗಲು ಆಗದ ಸಾಮಾನ್ಯ ಜನರು ಈಗ ನಿಜಕ್ಕೂ ದಿಕ್ಕುಗೆಟ್ಟಿದ್ದಾರೆ. ಹಾಗಾದರೆ ರಾಷ್ಟ್ರ, ರಾಜ್ಯ, ಎಂಬುವು ಕೇವಲ ತಮ್ಮ ಮುಖ ನೋಡಿಕೊಳುವ ಕನ್ನಡಿಗಳಾಗಿವೆಯೇ? ಸಾಂಸ್ಕೃತಿಕ ಐಡೆಂಟಿಟಿ ಎಂಬುದು ಇಲ್ಲವೆ? ದೇಶ ಮತ್ತು  ಜನರ ಸ್ಥಾನದಲ್ಲಿ ಯಾರಿದ್ದಾರೆ?
 
 
ನಮ್ಮ ಐಪಿಲ್ ಕ್ರಿಕೆಟ್ ಆಟವನ್ನು ನೋಡಿದರೆ ನಮ್ಮ ಮುಂದಿರುವ ಬಳಕೆದಾರ ಜನರನ್ನು ಬಿಟ್ಟರೆ ನಿರ್ದಿಷ್ಟವಾಗಿ ಗುರುತಿಸಲಾಗುವ ಜನರೇ ಕಾಣುವುದಿಲ್ಲ. ದಶಕಗಳ ಹಿಂದೆ ನಾವೆಲ್ಲ ಕ್ರಿಕೆಟ್ ನೋಡುತ್ತಿದ್ದುದು ನಮ್ಮ ದೇಶದ ತಂಡದ ಒಂದು ಭಾಗವಾಗಿ. ಬೇರೆ ದೇಶಗಳ ಒಳ್ಳೆಯ ಆಟಗಾರರನ್ನು/ತಂಡವನ್ನು ಮೆಚ್ಚುತ್ತಲೇ, ನಮ್ಮನ್ನು ಒಟ್ಟಾಗಿ ಪ್ರತಿನಿಧಿಸಿ ಕುಟ್ಟಿಕೊಂಡೋ-ಬಾರಿಸಿಕೊಂಡೋ ಆಡುತ್ತಿದ್ದ ನಮ್ಮ ದೇಶದ ತಂಡದ ಬಗ್ಗೆ ಏನೋ ಒಂದು ಮೋಹ ಕಾಡುತ್ತಿತ್ತು. ಈ ಹಿಂದೆ ವರ್ಲ್ಡ್ ಕಪ್ ನಡೆದಾಗ ಭಾರತ ಪಾಕಿಸ್ತಾನದ ಎದುರು ಗೆಲುವು ಸಾಧಿಸಿತು. ನಮ್ಮ ಜನ ಅದನ್ನು ಉತ್ಸಾಹದಿಂದ ಸ್ವಾಗತಿಸುತ್ತಲೇ...’ಮುಂದಿದೆ ಮಾರಿಹಬ್ಬ’ ಎಂಬ ಒಂದು ಮಾತು ಸೇರಿಸಿದರು. ಕಾರಣ ಮುಂದಿನ ಆಟವನ್ನು ಭಾರತ ಆಸ್ಟ್ರೇಲಿಯಾ ವಿರುದ್ಧ ಆಡಬೇಕಿತ್ತು. ನಮ್ಮ ಜನರಿಗೆ ಆಸ್ಟ್ರ‍ೇಲಿಯಾದ ಬಲವಾದ ತಂಡ, ನಮ್ಮ ಮಿತಿಗಳು ಗೊತ್ತಿತ್ತು. ಇದೆಲ್ಲ ನಮ್ಮನ್ನೂ ನಮ್ಮ ದೇಶವನ್ನೂ ಕಂಡುಕೊಳ್ಳುವ ಪರಿ.
 
 
ಈಗಿರುವ ಐಪಿಎಲ್. ತಂಡಗಳನ್ನು ನೋಡಿ. ಅವುಗಳಲ್ಲಿ ನಮ್ಮದು ಎಂದು ಗುರುತಿಸಿಕೊಳ್ಳಬಹುದಾದುದು ಮುಂಬೈ ಇಂಡಿಯನ್ ಒಂದೆ. ಅದು ಮುಂಬೈಯನ್ನು ಭಾವನಾತ್ಮಕವಾಗಿ ಪ್ರತಿನಿಧಿಸುತ್ತದೆ. ಅಲ್ಲಿ ಮುಂಬೈ ಮತ್ತು ಇಂಡಿಯಾ ಎರಡೂ ಉಳಿದುಕೊಂಡಿವೆ. ಉಳಿದ ತಂಡಗಳ ಹೆಸರುಗಳನ್ನು ನೋಡಿ. ಅಲ್ಲಿ ನಾಮಕಾವಸ್ಥೆಗೆ ಸ್ಥಳೀಯತೆ ಇದೆ. ಆದರೆ ಮುಂದಿನ ಭಾಗ ದೇಶದ್ದೂ ಅಲ್ಲ, ಜನಗಳದ್ದೂ ಅಲ್ಲ. ಎಲ್ಲ ಒಂದೊಂದು ರೀತಿಯ ಮೆರವಣಿಗೆ. ಸುಮ್ಮನೆ ಆ ತಂಡಗಳ ಹೆಸರುಗಳ ಗುಣಾತ್ಮಕ ಎಂಬ ಭಾಗಗಳನ್ನು ಓದಿನೋಡಿ; ಡೆಲ್ಲಿ-ಡೇರ್ ಡೆವಿಲ್ಸ್, ಕಲ್ಕತ್ತಾ-ನೈಟ್ ರೈಡರ್ಸ್, ಚೆನ್ನೈ-ಸೂಪರ್ ಕಿಂಗ್ಸ್, ರಾಜಸ್ಥಾನ-ರಾಯಲ್ಸ್, ಡೆಕನ್-ಚಾರ್ಜರ್ಸ್, ಪುಣೆ-ವಾರಿಯರ್ಸ್, ಪಂಜಾಬ್ ಮತ್ತು ಬೆಂಗಳೂರಿನ ತಂಡಗಳಲ್ಲಿ ಕಿಂಗ್ಸ್ ಮತ್ತು ರಾಯಲ್ಸ್ ಗಳೇ ಮುಖ್ಯ. ಇವರೆಲ್ಲ ಯಾರು? ಸಾಮಾನ್ಯ ಜನರೆಲ್ಲಾದರೂ ಕಾಣುತ್ತಾರಾ?
 
 
ಪ್ರಜಾಪ್ರಭುತ್ವವನ್ನು ಓಡಿಸಿದ ಕ್ಯಾಪಿಟಲ್ ಖಳನಾಯಕರು ಈಗ ಮರಳಿ ಬಂದಿದ್ದಾರೆ. ಜನಗಳನ್ನು ನುಂಗುವ, ನಿಯಂತ್ರಿಸುವ, ವಶಕ್ಕೆ ತೆಗೆದುಕೊಳ್ಳುವ ಯಜಮಾನರು ನಮ್ಮ ಮುಂದಿದ್ದಾರೆ. ಇವರ ಪ್ರವೇಶದಿಂದ ಭಾವನೆಯಾಗಿ ದೇಶವನ್ನು ಪ್ರಚೋದಿಸುತ್ತಿದ್ದ ನಮ್ಮ ಕ್ರಿಕೆಟ್, ಈಗ ಮಾರಾಟದ ಸರಕಾಗಿದೆ. ಕ್ರಿಕೆಟ್ ಆಟಗಾರರು ಕೊಂಡುಕೊಳ್ಳುವ ಮಾಲುಗಳಾಗಿದ್ದಾರೆ. ಅವರಿಗೆ ರೇಟ್ ಅಷ್ಟೇ ಬೇಕು. ಉಳಿದುದೆಲ್ಲ ಅಮುಖ್ಯ. ಅವರ ನೈಪುಣ್ಯ ಮಾರಾಟದ ವಸ್ತು ಮಾತ್ರ, ಸೃಜನ ಶೀಲತೆ ಅಲ್ಲ.
 
 
ಈಗ ನಾವು ನೋಡುತ್ತಿರುವ ಕ್ರಿಕೆಟ್ ಬರೀ ಮಾರಾಟವೇ ಆಗುತ್ತಿದೆ. ಅದರಲ್ಲಿ ಹೆಚ್ಚು ಮಜಾ ಇಲ್ಲ, ದೇಶದೊಟ್ಟಿಗಿನ ಭಾವುಕತೆಯೂ ಇಲ್ಲ. ಅದು ಕೇವಲ, ಉದ್ವೇಗ, ಆವೇಶ, ಗದ್ದಲ ಮತ್ತು ಕೇವಲ ಆಲಂಕಾರಿಕವಾಗುತ್ತಿದೆ. ಆಟ ನಡೆಯುವ ಸಂದರ್ಭದಲ್ಲಿ ಕ್ರೀಡಾಂಗಣದ ಒಳಗೆ ಮತ್ತು ಹೊರಗೆ ನೋಡುಗರು ತೋರುವ ಪ್ರತಿಕ್ರಿಯೆಯನ್ನು ನೋಡಿದರೆ ಐಪಿಎಲ್ ಒಂದು ಸಮೂಹ ಸನ್ನಿ ಎನಿಸುತ್ತದೆ. ಆಟಗಾರರಿಗೆ ಕೊಡಲಿರುವ ಆಕರ್ಷಕ ಕೊಡುಗೆಗಳನ್ನು ಆಟದ ಮಧ್ಯೆ ಆಗಾಗ ಪ್ರದರ್ಶಿಸಿ ಅದೇ ಆಟಗಾರರ ಕೊನೆಯ ಆಸೆ ಎಂಬಂತೆ ಬಿಂಬಿಸಲಾಗುತ್ತದೆ. ಆಟವೊಂದನ್ನಲ್ಲದೆ ಅಂತರರಾಷ್ಟ್ರ‍ೀಯ ಸುಂದರಿಗಳ ಸಣ್ಣ ಸ್ಕರ್ಟ್ ಗಳ, ಉಚಿತ ಕುಣಿತದ ಚಪಲವನ್ನೂ ನೋಡುಗರಿಗೆ ಫ್ರೀ ಆಗಿ ಹಂಚುವುದು ನಡೆದಿದೆ. ಶ್ರೀಮಂತರ ಅಸೆಟ್ಟುಗಳಾಗಿರುವ ಈ ತಂಡಗಳು ಆಡುವ ಕ್ರಿಕೆಟ್ನಲ್ಲಿ ಎಲ್ಲವೂ ಮಾರಾಟವಾಗುತ್ತಿವೆ. ಅಲ್ಲಿ ವ್ಯಕ್ತಿತ್ವದ, ದೇಶದ ಹಾಗೂ ನೈತಿಕತೆಯ ಪ್ರಜ್ನೆ ಇಲ್ಲ. ಅಲ್ಲಿ ದುಡಿಮೆಯ ಪ್ರಜ್ನೆಯೂ ಇಲ್ಲ.


 

 
 
 
 
 
Copyright © 2011 Neemgrove Media
All Rights Reserved