ಸಾವಯವ ಗೊಬ್ಬರದ ವಾಸನೆಯಿಂದಾಗಿ ಕತ್ತೆಗಳು ಇರುವೆಯ ಬೆನ್ನು ತುಳಿಯುವಂತಾದ ಪ್ರಸಂಗ

ನವಮಿ
 
 
ವಸಂತದ ವೀಕೆಂಡ್. ಚಳಿಗಾಲದಲ್ಲಿ ಸತ್ತಂತಿರುವ ಹೊರಗಿನ್ ಲಾನ್ ಚಿಗುರುವ ಸಮಯ ಅಥವಾ ಅದನ್ನು ನಾವೇ ಬಡಿದೆಬ್ಬಿಸಬೇಕಾದ ಪ್ರಮೇಯ. ಸಣ್ಣಗೆ ಕುಕ್ಕಬೇಕು, ಖಾಲಿಯಾದ ಪ್ಯಾಚ್ ಗಳಿಗೆಲ್ಲಾ ಮತ್ತಷ್ಟು ಬೀಜ ಹಾಕಿ, ಮೇಲೊಂದು ಪದರ ಮಣ್ಣುಹಾಕಿ ಗೊಬ್ಬರ ಹಾಕಬೇಕು. ಒಟ್ಟಿನಲ್ಲಿ ಶತಾಯ ಗತಾಯ ಮಾಡಿ ಅದನ್ನು ಚಿಗುರಿಸಿ ಹಸಿರನ್ನಾಗಿಸಬೇಕು. ನಮಗೆ ಇದೊಂದು ದೊಡ್ಡ ಸವಾಲು. ರಸಗೊಬ್ಬರ ಹಾಕದೆ ಸಾವಯವವಾಗಿ ಲಾನ್ ಸಾಕಬೇಕು ಎಂದು ಹೋದವರ್ಷ ಶುರು ಮಾಡಿದ್ದ ನಮ್ಮ ಸಾವಯವ ಪ್ರಯತ್ನಕ್ಕೆ ಅಮೆರಿಕನ್ ಹೈಬ್ರೀಡ್ ಹುಲ್ಲಿನ ಬೀಜ ’ಕ್ಯಾರೇ’ ಅನ್ನಲಿಲ್ಲ. ಈ ಬಾರಿ ಹಸು, ಕೋಳಿ, ಕುದುರೆ ಎಲ್ಲದರ ಸಂಡಾಸಿನ ಮಿಶ್ರಣದ ಗೊಬ್ಬರವೊಂದು ಅಂಗಡಿಯಲ್ಲಿ ಕಂಡಿತ್ತು. ಅದನ್ನು ಉತ್ಸಾಹದಿಂದ ತಂದು ಎಲ್ಲಕಡೆ ಹಾಕಿದ್ದೆವು. ಅದೋ...ನಮ್ಮ ಲಾನು ಬೆಳೆಸುವುದಿರಲಿ, ಇಡೀ ಬೀದಿಯವರ ಘ್ರಾಣೇಂದ್ರಿಯವನ್ನು ತತ್ತರಿಸುವಂತಹ ಹುಳಿಬೆರೆತ ಸಂಡಾಸಿನ ವಾಸನೆಯನ್ನು ಪಸರಿಸಿಬಿಟ್ಟಿತ್ತು. ಅಪರೂಪಕ್ಕೆ ಎಲ್ಲೋ ಒಂದರಂತೆ ಕಾಣುತ್ತಿದ್ದ ನೊಣಗಳು, ಮರುದಿನದಿಂದಲೇ, ದಶದಿಕ್ಕುಗಳಿಂದಲೂ ಸಂಸಾರ ಸಮೇತ ನಮ್ಮ ಮನೆಯ ಲಾನಿಗೇ ಬಂದು ಸಂತೆ ಸೇರಿದ್ದವು. ಹೊರಗೆ ಆಟ ಆಡಿಕೊಳ್ಳಪ್ಪಾ ಎಂದು ಕಳಿಸಿದರೆ...’ಬೇಡಾ ಅಮ್ಮ ಅಲ್ಲಿ ವಾಂತಿ ವಾಸನೆ’ ಅಂತ ಮಗನೂ ಹೊರಗೆ ಹೋಗುವುದನ್ನು ನಿಲ್ಲಿಸಿದ್ದ. ಗೊಬ್ಬರ ಹಾಕಿ ಮೂರು ದಿನ ಕಳೆದಿದ್ದರೂ ವಾಸನೆ ನಿಂತಿಲ್ಲ. 
 
 
ನಾವು ಭಾರತದಿಂದ ಬಂದವರು. ದೋಸೆ, ಸಂಪಿಗೆ, ಒಬ್ಬಟ್ಟು, ಕಾಫಿ, ಸುಗಂಧರಾಜದ ವಾಸನೆಯ ಜೊತೆಗೇ ಸಗಣಿ, ತಿಪ್ಪೆ, ಗೊಬ್ಬರ, ಗಂಜಲ, ಸಂಡಾಸಿನ ವಾಸನೆಯನ್ನೂ ಬೇಡಬೇಡವೆಂದರೂ ಹೀರಿ ಸಹಿಸಿಕೊಂಡಿರುವವರು. ಹಾಗೆ ಪಳಗಿರುವ ನಮ್ಮ ಇಂದ್ರಿಯಗಳಿಗೆ ಈ ಸಾವಯವ ಗೊಬ್ಬರವೇನೂ ದೊಡ್ಡ ವಿಷಯವಲ್ಲ. ಆದರೆ ನಮ್ಮ ನೆರೆಹೊರೆಯವರು?! ನಮಗೆ ಗೊತ್ತಾದದ್ದೇ ಈಗ. ಮುಸ್ಸಂಜೆಯಲ್ಲಿ ಗೊಬ್ಬರ ಹಾಕಿ ಮುಗಿಸಿದ್ದೆವು. ಮರುದಿನವೇ ನೆರೆಮನೆಯ ಬಾಬ್ ಲಗುಬಗೆಯಿಂದ ಅಂಗಳದ ಹತ್ತಿರ ಬಂದ. ನಿರ್ಲಿಪ್ತತೆಯಿಂದ ಗಿಡಗಳಿಗೆ ನೀರು ಹಾಕುತ್ತಿದ್ದ ನಮ್ಮನ್ನು ಕಂಡು ’ಬಡ್ಡೀ (ಇದು ಕನ್ನಡದ ’ಬಡ್ಡಿ__’ ಅಲ್ಲ ಬಿಡಿ. ಅಮೆರಿಕನ್ನರಿಗೆ ಸಧ್ಯ ಅದು ಗೊತ್ತಿಲ್ಲ) ವಾಟ್ ಹ್ಯಾವ್ ಯೂ ಡನ್ ಹಿಯರ್?!’ ಒಂಥರಾ ಇದೇನು ಇಂಥಾ ಪಾಪ ಮಾಡಿದ್ದೀಯಾ ಎನ್ನುವಂತೆ ಕೇಳಿದ. ಅವನ ಮುಖ ವಾಸನೆಗೆ ಮುರುಟಿಕೊಂಡಿತ್ತು. ಲಾನ್ ಗೆ ಮರುಜೀವ ಕೊಡಲು ಬೀಜ ಹಾಕಿರುವುದಾಗಿ ನನ್ನ ಸಂಗಾತಿ ಬಹಳ ಹೆಮ್ಮೆಯಿಂದ ಮಾಡಿರುವ ಎಲ್ಲ ಕೆಲಸವನ್ನೂ ವಿವರಿಸಿದರು. ’ಯಾ...ಐ ಸೀ...ದಟ್ಸ್ ಗುಡ್...ಬಟ್ ವಾಟ್ ಆನ್ ಅರ್ತ್ ಹ್ಯಾವ್ ಯು ಪುಟ್ ಹಿಯರ್!’ ಅಂತ ನೆಲ ತೋರಿಸಿದ. ಆತ ಹಾಗೆ ಬಂದ ಕಾರಣ ನಮಗಾಗಲೇ ಗೊತ್ತಾಗಿದ್ದರೂ ನಾವೂ ಸುಮ್ಮನೆ ಸುತ್ತಿ ಬಳಸಿ ಮಾತಾಡಿದ್ದೆವು. ’ಓ ಅದಾ...ಅದು ಆರ್ಗ್ಯಾನಿಕ್ ಗೊಬ್ಬರ’ ಅಂತ ಪರಿಚಯಿಸಿದೆವು. 
 
’ಆರ್ಗ್ಯಾನಿಕ್!! ಶ್ಯೂ!! ಮ್ಯಾನ್! ಒಳ್ಳೆ ಬಯೋ ಬಾಂಬ್ ಥರ ವಾಸನೆ ಇದೆ!!!’ ಎಂದಿದ್ದ.’
 
ಹೌದು. ಇನ್ ಅ ವೇ...ಬಯೋ ಬಾಂಬೇ...ಕುದುರೆ, ಕೋಳಿ, ಹಸು ಎಲ್ಲದರದ್ದೂ ಇದೆ’ ಅಂತ ನಮ್ಮನೆಯ ಮಾಲಿ ವಿವರಿಸಿದ್ದರು.  
 
ಗುಡ್. ಆರ್ಗ್ಯಾನಿಕ್ ಒಳ್ಳೆದು ಅಲ್ವಾ...ಎಕ್ಸ್ಪೆನ್ಸಿವ್ ಸ್ಟಫ್. ಆದರೆ ವಾಸನೆ ಇಲ್ಲದ ಗೊಬ್ಬರ ಯಾವುದೂ ಇರಲಿಲ್ವಾ’ ಮಾಡೋದು ಮಾಡಿ ಅದನ್ನೇ ಸಮರ್ಥಿಸಿಕೊಳ್ಳುತ್ತಿದ್ದೀರಾ ಎನ್ನುವಂತೆ ಕೇಳಿದ್ದ.
 
ಅಮೆರಿಕಾದಲ್ಲಿ ಎಲ್ಲೂ ಇದುವರೆಗೂ ನನಗೆ ಸಗಣಿ, ಸಂಡಾಸು (ಪಾಯಿಖಾನೆ ಬಿಟ್ಟರೆ), ತಿಪ್ಪೆಯ ವಾಸನೆ ಅನುಭವವಾಗಿರಲಿಲ್ಲ. ನ್ಯೂಜೆರ್ಸಿಯಲ್ಲಿರುವ ’ಎಡಿಸನ್’ ಎಂಬ ಊರಿನಲ್ಲಿ ಬಹಳಷ್ಟು ಇಂಡಿಯನ್ ಅಂಗಡಿಗಳೂ, ಒಂದು ದೊಡ್ಡ ಇಂಡಿಯನ್ ಮಾರುಕಟ್ಟೆ ಇದೆ. ಅಲ್ಲಿಗೆ ಹೋದಾಗ ಮಾತ್ರ ಬೆಂಗಳೂರಿನ ಮಾರ್ಕೆಟ್ಟಿಗೆ ಹೋದ ವಾಸನೆ ಬಂದಿತ್ತು. ಆದರೆ ಈ ಸಾವಯವ ಗೊಬ್ಬರದ ವಾಸನೆಯೇ ಬೇರೆ ಬಿಡಿ! ಹೆಚ್ಚಿನ ಅಮೆರಿಕನ್ನರಿಗೆ ಸುಗಂಧದ ಪರಿಮಳ ಇಷ್ಟ. ಇಲ್ಲವೇ ಸದಾ ಆಸ್ಪತ್ರೆಯಲ್ಲಿದ್ದಂತೆನಿಸುವ ಸ್ಟೆರಿಲೈಜ಼್ಡ್ ವಾಸನೆ ಇಷ್ಟ ಅಥವಾ ವಾಸನಾರಹಿತರಾಗಿ (ಮೂಗಿನಿಂದ ಹೀರುವ ವಾಸನೆ ಮಾತ್ರ!) ಇರುವುದಕ್ಕೆ ಇಷ್ಟ.. ಕೆಲವೊಮ್ಮೆ ಅವರಿಗೆ ನಮ್ಮ ಸಾರಿನ ವಾಸನೆಯೂ ಅತಿಯಾಗಿ ಬಿಡುತ್ತದೆ. ಇಡೀ ಅಮೆರಿಕಾನೇ ಒಂದರ್ಥದಲ್ಲಿ ಸ್ಟೆರಿಲೈಜ಼್ಡ್! ಯಾವ ಸೊಗಡೂ ಇಲ್ಲದ್ದು ಎನ್ನಿಸಿಬಿಡುತ್ತದೆ! ಅಂಥದ್ದರಲ್ಲಿ ಬಾಬ್ ಕೇಳಿದ್ದರಲ್ಲಿ ಯಾವ ಅತಿಶಯವೂ ಇರಲಿಲ್ಲ. 
 
 
ಅಯ್ಯೋ ಮಾರಾಯಾ ನಮಗೂ ಗೊತ್ತಿರಲಿಲ್ಲಪ್ಪಾ ಎಂದು ಹೇಳಿಕೊಳ್ಳುವ ಬದಲು ’ಇಲ್ಲ. ಇದು ಎಲ್ಲಾ ಥರದಲ್ಲೂ ನ್ಯಾಚುರಲ್ ಅಲ್ವಾ..ವಾಸನೆಯೂ ಅಷ್ಟೇ’ ಉತ್ತರ ಕೊಟ್ಟಿದ್ದೆವು. 
 
ಎರಡು ನಿಮಿಷ ನಮ್ಮ ಕೈತೋಟದಲ್ಲಿ ಕಣ್ಣುಹಾಯಿಸಿ ಇನ್ನು ನಿಲ್ಲಲಾಗದೆಂಬಂತೆ ’ಓಕೆ. ಗುಡ್ ಲಕ್ ಗೈಸ್..’ ಅಂತ ಬೇರೇನನ್ನೂ ಹೇಳದೆಯೇ ಹೊರಟಿದ್ದ.
 
ಅವನು ಬಂದ ಕಾರಣ ನಮಗೆ ಗೊತ್ತಿದ್ದರಿಂದ ಅವನು ಮನೆಹೊಕ್ಕ ಮೇಲೆ ಎಷ್ಟು ಚನ್ನಾಗಿ ಓಡಿಸಿಬಿಟ್ಟೆವು ಅಂತ ನಾವಿಬ್ಬರೂ ನಗಾಡಿಕೊಂಡಿದ್ದೆವು. ಹಗಲಿನ ಸಮಯ ಹೆಚ್ಚುತ್ತಿದ್ದರಿಂದ ರಾತ್ರಿ ಏಳೂವರೆಯವರೆಗೂ ಕೈತೋಟದಲ್ಲೇ ಏನಾದರೂ ಕೆಲಸ ಮಾಡಿಕೊಂಡಿರುತ್ತಿದ್ದೆವಾದ್ದರಿಂದ ಅವತ್ತೂ ಅಲ್ಲೇ ಅದೂ ಇದು ಮಾಡುತ್ತಿದ್ದೆವು. ಮತ್ತೆ ಬಾಬ್ ಪ್ರತ್ಯಕ್ಷನಾದ.
 
’ಗೈಸ್ ಐ ಹ್ಯಾವ್ ಅ ಗುಡ್ ನ್ಯೂಸ್!’ ಎಂದ.
 
'ಏನಾಯಿತು?’ ಎಂದಿದ್ದಕ್ಕೆ ’ಸ್ವಲ್ಪ ಸಾಲ್ಟ್ ಬೆರೆಸಿ ಇಡೀ ಲಾನ್ ಗೆ ನೀರು ಹಾಕಿಬಿಟ್ಟರೆ ವಾಸನೆ ಕಡಿಮೆಯಾಗುತ್ತಂತೆ. ನಾನು ಇಂಟರ್ ನೆಟ್ ನಲ್ಲಿ ರಿಸರ್ಚ್ ಮಾಡಿದೆ’ ಎಂದಿದ್ದ. 
 
ಯಾವುದಕ್ಕೆ ಸಾಲ್ಟ್ ಹಾಕಲು ಹೇಳುತ್ತಿದ್ದಾನೆಂದು ವಿಚಾರಿಸಿದಾಗ ಬಾಬ್ ನಮ್ಮ ಲಾನಿನಿಂದ ಬರುತ್ತಿದ್ದ ಗೊಬ್ಬರದ ವಾಸನೆ ಹೋಗಿಸಲು ಈ ಉಪಾಯ ಕಂಡು ಹಿಡಿದುಕೊಂಡು ಬಂದಿರುವುದು ಗೊತ್ತಾಗಿತ್ತು. ಪರವಾಗಿಲ್ಲ ಬಿಡು, ಒಂದು ಮಳೆ ಬಂದರೆ ಸರಿಹೋಗುತ್ತೆ ಎಂದಾಗ...ತಾನೇನೋ ಅರ್ಥ ಮಾಡಿಕೊಳ್ಳುವೆ ಆದರೆ ಬೇರೆ ಮನೆಗಳವರು ಈ ವಾಸನೆಗೆ ಅಲರ್ಜಿ ಪಟ್ಟುಕೊಂಡು ವಾಂತಿಗೀಂತಿ ಮಾಡಿಕೊಂಡರೆ? ಅಥವಾ ಪಕ್ಕದ ಮನೆಯವರ ಲಾನಿನ ನೊಣಗಳು ನಮ್ಮನೆಗೆ ಬರುತ್ತಿವೆ ಅಂತ ’ಹೋಮ್ ಓನರ್ಸ್ ಅಸೋಸೊಯೇಷನ್’ ಗೆ ದೂರು ಕೊಟ್ಟರೆ ಏನು ಮಾಡುತ್ತೀರಿ ಅಂತ ಇಲ್ಲಸಲ್ಲದ ಸಾಧ್ಯತೆಗಳನ್ನೆಲ್ಲಾ ಹೇಳಿ ಸ್ವಲ್ಪ ಯೋಚನೆ ಹುಟ್ಟಿಸಿದ್ದ.
 
ಅವನು ಹೇಳಿದ್ದರಲ್ಲಿ ಸುಳ್ಳಿರಲಿಲ್ಲ. ಅಮೆರಿಕದಲ್ಲಿ ಜನರಿಗೆ ಯಾವುದಕ್ಕೆ ಬೇಕಾದರೂ ಅಲರ್ಜಿ ಬರುತ್ತದೆ! ಮೇಲಾಗಿ ಅವರಿಗೆ ಸರಿಎನಿಸಿದರೆ ಯಾವ ಕಾರಣಕ್ಕಾಗಿಯಾದರೂ ಅವರು ಯಾರನ್ನು ಬೇಕಾದರೂ ’ಸೂ’ ಮಾಡಬಹುದು (ಕೇಸು ಹಾಕಬಹುದು). ಹಾಗೇನಾದರೂ ಯಾರಾದರೂ ನಿಮ್ಮನ್ನು ಸೂ ಮಾಡಿದ್ರೆ ಎಂದೂ ಹೆದರಿಸಿದ್ದ. ಗೊಬ್ಬರ ಹಾಕಿ ಲಾನು ಬೆಳೆಸೋಣ ಅಂದರೆ ಸೂ ಮಾಡಿಸಿಕೊಳ್ಳುವವರೆಗೂ ಬಂತಲ್ಲ ಎನಿಸಿತ್ತು. ಆದರೂ ನಾವೇನು ಕಡಿಮೆಯಾ? ಹಾಗೇನಾದ್ರೂ ಆದರೆ ವಾಸನೆಗೆ ನಾವು ಆರ್ಗ್ಯಾನಿಕ್ ಗೊಬ್ಬರದವರನ್ನು ಸೂ ಮಾಡ್ತೀವಿ ಬಿಡು ಎಂದು ನಗಾಡಿದ್ದೆವು. 
 
 
ಆದರೆ ನಮಗೂ ಆ ವಾಸನೆ ಇನ್ನೂ ಮೂರ್ನಾಲ್ಕು ದಿನ ಅಲ್ಲೆ ಆಡಿಕೊಂಡಿರುವುದು ಬೇಡವೆನಿಸಿತ್ತು. ’ಅಮ್ಮಾ ಹೊರಗಡೆ ಯಾವತ್ತು ಆಡಬಹುದು?’ ಅಂತ ಚೋಟು ಕಾಡತೊಡಗಿದ್ದ. ನಾಳೆ ನಾಡಿದ್ದು ಮಳೆ ಬರದಿದ್ದರೆ ಆ ವೀಕೆಂಡು ಇಡೀ ಲಾನಿಗೆ ನೀರು ಹಾಕಿ ವಾಸನೆಯನ್ನು ಭೂಗತ ಮಾಡಿಬಿಡಬೇಕೆಂಬ ಪ್ಲಾನ್ ಹಾಕಿಕೊಂಡೆವು. ಮಳೆ ಬರಲೇ ಇಲ್ಲ. ಅಷ್ಟರಲ್ಲಿ ಮತ್ತೊಂದು ಪಕ್ಕದ ಮನೆಯವರೂ ಏನು ಮಾಡುತ್ತಿದ್ದೀರಿ ಎಂದು ಅನುಮಾನದಿಂದ ವಿಚಾರಿಸಿದ್ದರು. ಅವರಿಗೂ ವಿವರಿಸಿದ್ದೆವು. ನಾವೇನಾದ್ರೂ ’ಡರ್ಟಿ ಬಾಂಬ್’ ಮಾಡುತ್ತಿದ್ದೇವೆ ಎನ್ನಿಸಿರಬೇಕು ಮಾರಾಯ ನಾನೂ ಹೆದರಿಸಿದ್ದೆ. ಇನ್ನೇನ್ ಮಾಡುವುದೆಂದು...ಶನಿವಾರ ಬೆಳಿಗ್ಗೆ ನಾವು ಬಕೆಟ್, ಪೈಪ್ ಗಳನ್ನು ಹಿಡಿದು ಹೊರಗೆ ನೀರು ಹಾಕಲು ನಿಂತಿದ್ದಾಗ ನಮ್ಮ ಸನ್ಮಿತ್ರ ಬಾಬ್ ಪ್ರತ್ಯಕ್ಷನಾದ. ನಾವು ಅವನ ಸಲಹೆಯನ್ನು ಕಡೆಗೂ ಕಾರ್ಯರೂಪಕ್ಕೆ ತರುತ್ತಿರುವುದರಿಂದ ಉತ್ಸಾಹದಿಂದ ತಾನೂ ಸಹಾಯ ಮಾಡುತ್ತೇನೆಂದು ಅವನ ಹತ್ತಿರವಿದ್ದ ಇನ್ನೂ ದೊಡ್ಡ ಪೈಪ್ ತಂದ. ಪರವಾಗಿಲ್ಲವೆಂದರೂ ಬಾಬ್ ನ ಹೆಂಡತಿ ರೇಚಲ್, ಅವರ ಒಂದುವರೆ ವರ್ಷದ ಮಗನ ಜೊತೆ ನಮ್ಮ ಚೋಟುವನ್ನೂ ಆಡಿಸಿಕೊಳ್ಳುವುದಾಗಿ ಚೋಟುವನ್ನು ಮನೆಗೆ ಕರೆದುಕೊಂಡು ಹೋದಳು. ನಮ್ಮ ಆಪರೇಶನ್ ಆರ್ಗ್ಯನಿಕ್ ವಾಸನೆ ಆಗ ಶುರುವಾಯಿತು. 
 

ಬಾಬ್ ನಮ್ಮ ಪಕ್ಕದ ಮನೆಯ ಹುಡುಗ. ತುಂಬಾ ಸೊಗಸಾದ ಕೈತೋಟ ಮಾಡಿದ್ದ. ಅವನ ಲಾನ್ ಹಸಿರು ಕಾರ್ಪೆಟ್ಟಿನ ಥರ ಸದಾ ನಳನಳಿಸುತ್ತಿತ್ತು. ತನ್ನ ಲಾನ್ ಗೆ ವಾರಕ್ಕೊಂದು ಏನಾದರೊಂದು ಹುಡಿ (ನಮಗೆ ಅವನ ಸೀಕ್ರೆಟ್ಟೇ ಗೊತ್ತಾಗಿಲ್ಲ) ಹಾಕುತ್ತಲೇ ಇದ್ದ. ಅವನ ಪಚ್ಚೆ ಕಾರ್ಪೆಟ್ಟಿನ ಪಕ್ಕದ ನಮ್ಮ ಲಾನ್ ಕೋಪದಲ್ಲಿ ಅರ್ಧಂಬರ್ಧ ತಲೆಬೋಳಿಸಿಕೊಂಡು ಬಂದವರ ತಲೆಯಂತೆ ಇತ್ತು. ಬಾಬ್ ಇಡೀ ಸಂಜೆ ಅವನ ಮೂರು ನಾಯಿಗಳ ಜೊತೆ ಕೈತೋಟದಲ್ಲೇ ಏನಾದರೂ ಮಾಡಿಕೊಂಡು ಕಾಲಕಳೆಯುತ್ತಿದ್ದ. ಕೆಲಸ ಮುಗಿಸಿ, ಮಗುವನ್ನು ಡೇಕೇರ್ ನಿಂದ ಕರೆತರುತ್ತಿದ್ದ ರೇಚಲ್ ಮಗುವನ್ನು ಆಡಿಸಿಕೊಂಡು ಒಳಗಿನ ಕೆಲಸ ಮಾಡಿಕೊಂಡು ಮನೆ ಒಳಗೇ ಇರುತ್ತಿದ್ದಳು. ಗಂಡ ಹೆಂಡತಿ ನಮಗಿಂತ ಏಳೆಂಟು ವರ್ಷ ಕಿರಿಯರು. ಓದಿದ ಕೂಡಲೇ ಮದುವೆಯಾಗಿ, ಸಂಸಾರ ಹೂಡಿ ಈಗ ಮಕ್ಕಳು ಸಾಕುವ ಕೆಲಸಕ್ಕೆ ಕೈ ಹಾಕಿದ್ದಾರೆ. ನಮ್ಮನೆಯ ಹಿಂದೆ ನಾವು ಮಾಡಿಕೊಳ್ಳುತ್ತಿದ್ದ ಬಾರ್ಬೆಕ್ಯೂ ಪರಿಮಳಕ್ಕೆ ಬಾಬ್ ನಮಗೆ ಸ್ನೇಹಿತನಾಗಿದ್ದ. ಅವನಿಗೆ ನಾನು ಮನೆಯಲ್ಲೇ ತಯಾರು ಮಾಡಿಕೊಳ್ಳುತ್ತಿದ್ದ ಮಸಾಲೆಪುಡಿಗಳು ಇಷ್ಟವಾಗುತ್ತಿದ್ದವು. ಅವನು ಪೋರ್ಕಿನ ಬಟ್ ಅನ್ನು ಬಾರ್ಬೆಕ್ಯೂ ಮಾಡಿಕೊಳ್ಳುವಾಗಲೆಲ್ಲಾ ನಮ್ಮಲ್ಲಿಗೆ ಬಂದು ಫ್ರೆಶ್ಶಾಗಿ ಕಾರದ ಪುಡಿಗಳನ್ನು ಮಾಡಿಸಿಕೊಳ್ಳುತ್ತಿದ್ದ.
 
ಇಂಡಿಯನ್ ಟೀ, ಕಾಫಿ ಎಂದರೆ ಇಷ್ಟಪಟ್ಟು ಗಂಡಹೆಂಡತಿಯರಿಬ್ಬರೂ ಮನೆಗೆ ಬಂದು ಇರುತ್ತಿದ್ದ ಊಟವನ್ನೂ ಖುಷಿಯಿಂದ ಮುಗಿಸಿ ಮಧ್ಯರಾತ್ರಿವರೆಗು ಹರಟೆ ಹೊಡೆದುಕೊಂಡು ಹೊರಡುತ್ತಿದ್ದರು. ಪ್ರತಿ ವಿಸಿಟ್ಟಿಗೂ ಅವರು ನಮ್ಮ ಮಸಾಲೆಯನ್ನು ಸಹಿಸುವ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತಿದ್ದರು. ಬಾಬ್ ನ ತಮ್ಮ ಜರ್ಮನಿಯ ಹುಡುಗಿಯನ್ನು ಮದುವೆಯಾಗಿ ಜರ್ಮನಿಗೇ ಹೋಗಿಬಿಟ್ಟಿದ್ದನಾದ್ದರಿಂದ, ಈಗ ಕುಳಿತು ಮಾತಾಡುವಂತ ಭಾರತೀಯ ಸ್ನೇಹಿತರೂ ಆಗಿದ್ದರಿಂದ ತನ್ನ ಇಡೀ ಆಫೀಸಿನಲ್ಲಿ ತಾನೇ ’ವೆರಿ ಇಂಟರ್ ನ್ಯಾಷನಲ್’ ಎಂದು ಬಾಬ್ ಹೆಮ್ಮೆ ಪಟ್ಟುಕೊಳ್ಳುತ್ತಿದ್ದ. ಇವನು ಇಷ್ಟಕ್ಕೇ ಇಷ್ಟು ಸಂತೋಷ ಪಡುತ್ತಾನಾದರೆ ನಾವು ದೇಶ ಬಿಟ್ಟು ಊರೂರು ಸುತ್ತಿ ಇಂಥವರನ್ನೆಲ್ಲರನ್ನೂ ನೋಡಲು ಸಾಧ್ಯವಾಗಿರುವುದಕ್ಕೆ ಇನ್ನೆಷ್ಟು ಸಂತೋಷಪಡಬಾರದು ಎನಿಸುತ್ತಿತ್ತು... 
 

ಹೋದವಾರ ಲಾನ್ ಅನ್ನು ಕತ್ತರಿಸುತ್ತಿದ್ದ ಬಾಬ್, ಸಡನ್ನಾಗಿ ಬಂದು ಪ್ಲೀಸ್ ನನಗೆ ಅರ್ಜೆಂಟ್ ಸಹಾಯ ಮಾಡಿರೆಂದು ತುಂಬಾ ಗಾಬರಿಯಲ್ಲಿ ಕೇಳಿದ್ದ. ಏನಾಗಿರಬಹುದೆಂದು ನಾವು ಕೇಳಿದಾಗ ಅವನು ಲಾನ್ ಮೋವ್ ಮಾಡುವಾಗ ಅವನ ವೆಡ್ಡಿಂಗ್ ಉಂಗುರ ಬಿದ್ದುಹೋಗಿರುವುದಾಗಿಯೂ, ಅದನ್ನು ರೇಚಲ್ ಕೆಲಸದಿಂದ ಬರುವ ಮೊದಲು ಹುಡುಕಬೇಕೆಂದೂ, ಇಲ್ಲದಿದ್ದರೆ ಅವಳು ಮನೆಗೆ ಸೇರಿಸುವುದಿಲ್ಲವೆಂದೂ ಟೆನ್ಷನ್ನಿನಲ್ಲಿದ್ದ. ಅವನ ಫಜೀತಿ ನೋಡಲಾಗದೇ ಮೂರು ಜನವೂ ಆ ದಟ್ಟ ಲಾನನ್ನು ಮೂರು ಭಾಗವಾಗಿ ವಿಂಗಡಿಸಿಕೊಂಡು ಜಾಲಾಡಿದ್ದೆವು. ರೇಚಲ್ ಬಂದಾಗಲೂ ಉಂಗುರ ಸಿಕ್ಕಿರಲಿಲ್ಲ. ಅವಳ ಕೆನ್ನೆಗಳು ಆಗಲೇ ಕೆಂಪಾಗಿಬಿಟ್ಟಿದ್ದವು. ಏನೂ ಮಾತಾಡದೆ ಮಗುವನ್ನು ಮನೆಯಲ್ಲಿರಿಸಿ ಬಂದು ಅವಳೂ ಹುಡುಕುತ್ತಿದ್ದಳು. ಸೂರ್ಯ ಇನ್ನೇನು ಮುಳುಗಬೇಕೆನ್ನುವಾಗ ಕಡೆಗೂ ಆ ವಜ್ರದ ಉಂಗುರ ಸಿಕ್ಕಿತ್ತು. ಇಬ್ಬರೂ ಸಂತೋಶದಿಂದ ನಾವು ಈ ವಾರ ಪಾರ್ಟಿ ಮಾಡೋಣ ಟೈಮ್ ಮಾಡ್ಕೊಳಿ ಎಂದಿದ್ದರು. ’ಗೈಸ್...ಐ ಓ ಯು ಬಿಗ್!’ ಅಂತ ಬಾಬ್ ಭಾವುಕನಾಗಿದ್ದ.
 
 
ಆ ಉಂಗುರದ ಹುಡುಕಾಟದ ಋಣ ತಿರಿಸುವವನಂತೆ ಅವತ್ತು ಬಾಬ್ ನಮ್ಮ ಜೊತೆ ನೀರು ಹಾಕಲು ಬಂದಿದ್ದ ಎನ್ನಿಸುತ್ತೆ. ನಾವು ಇಲ್ಲಿ ನೀರು ಹಾಕುವುದು ಎಂದರೆ ನಮ್ಮ ಹಳ್ಳಿಯ ಹೆಣ್ಣು ಮಕ್ಕಳು ಬಾವಿಯಲ್ಲಿ ನೀರು ಸೇದಿ ಕೊಡಪಾನ ಹೊತ್ತುತಂದು ನೀರು ತುಂಬುವಂಥ ಘನಂದಾರಿ ಕೆಲಸವೇನೂ ಅಲ್ಲ. ಆದರೆ ಈ ವಾಸನೆ ಹೋಗಿಸುವುದು ಒಂಥರಾ ಕಮ್ಯುನಿಟಿ ಸರ್ವಿಸ್ ನ ವ್ಯಾಪ್ತಿಯನ್ನು ಪಡೆದುಬಿಟ್ಟಿತ್ತು! ಸರಿ...ಇಡೀ ಲಾನಿಗೆ ಸ್ವಲ್ಪ ಉಪ್ಪು ಸೇರಿಸಿಕೊಂಡು ನೀರು ಹಾಕಿದೆವು. ಮಧ್ಯಮಧ್ಯ ದೀರ್ಘವಾಗಿ ಉಸಿರೆಳೆದುಕೊಂಡು ವಾಸನೆ ಇದೆಯೋ ಕಮ್ಮಿಯಾಯಿತೋ ಎಂದು ಟೆಸ್ಟ್ ಬೇರೆ. ಆದರೆ ಅಷ್ಟು ಹೊತ್ತು ಅಲ್ಲೇ ಇದ್ದುದರಿಂದ ನಮ್ಮ ಮೂವರ ಮೂಗೂ ಆ ವಾಸನೆಯ ಜೊತೆ ಗೆಳೆತನ ಮಾಡಿಕೊಂಡುಬಿಟ್ಟಿತ್ತು. ಕಡೆಗೆ ರೇಚಲ್ ಮತ್ತು ಚೋಟುವನ್ನು ಕರೆದು ವಾಸನೆ ನೋಡಿರಪ್ಪಾ ಎಂದಿದ್ದೆವು. ಅವರೂ ಸಾಕಷ್ಟು ಮೂಸಿ...’ನಾಟ್ ಸೋ ಮಚ್’ ಎಂದಿದ್ದರು. ನಾವು ಘನಕಾರ್ಯ ಸಾಧಿಸಿದ ಖುಷಿಯಿಂದ ಕದಕ್ ಶುಂಟಿ ಟೀ ಕುಡಿದು ಅವತ್ತಿನ ದಿನಕ್ಕೆ ಬಾಗಿಲು ಹಾಕಿದ್ದೆವು.
 
 
ಮನೆಯಲ್ಲಿ ಸ್ನಾನಗೀನ ಮುಗಿಸಿ ಲಿವಿಂಗ್ ರೂಮಿನಲ್ಲಿ ಹಾಗೇ ಚಲ್ಲಾಡಿಕೊಂಡಿದ್ದಾಗ ’ಐ ಆಮ್ ವೆರಿ ಪ್ರೌಡ್ ಆಫ್ ಯೂ ಅಪ್ಪಾ...ಎಷ್ಟು ಕೆಲಸ ಮಾಡಿದೆ ನೀನು...ತುಂಬಾ ಸುಸ್ತಾಗಿದೆಯಾ?’ ಚೋಟು ನೆಲದ ಮೇಲೆ ಉರುಳಿಕೊಂಡು ರಿಲ್ಯಾಕ್ಸ್ ಮಾಡುತ್ತಿದ್ದ ಅಪ್ಪನಿಗೆ ಮುದ್ದು ಮಾಡುತ್ತಿದ್ದ. ’ಹೌದು ಮಗನೇ...ತುಂಬಾ ಸುಸ್ತಾಗಿದೆ...ಎಷ್ಟೋಂದು ವಾಸನೆ ಇತ್ತು ಅಲ್ವಾ...ಸ್ವಲ್ಪ ಬ್ಯಾಕ್ ಮಸಾಜ್ ಮಾಡ್ತೀಯಾ? ನನ್ನ ಬೆನ್ನು ತುಳೀತೀಯಾ?’ ಅವರಪ್ಪ ಚೋಟುವನ್ನು ಪುಸಲಾಯಿಸುತ್ತಿದ್ದರು. ’ಆಯ್ತಪ್ಪಾ.. ಐ ಕ್ಯಾನ್ ಡೂ ಇಟ್..ಐ ಆಮ್ ವೆರಿ ಸ್ಟ್ರಾಂಗ್..’ ಎಂದುಕೊಂಡು ತಾನು ಡಾಕ್ಟರ್ ಎಂಬಂತೆ ಆಟಿಕೆಯ ಸ್ಟೆತಾಸ್ಕೋಪ್ ಹಾಕಿಕೊಂಡು ಮಗ ಧೀರನಾಗಿ ಅಪ್ಪನ ಬೆನ್ನು ತುಳಿಯಲು ಶುರು ಮಾಡಿದ. ಅವರಪ್ಪ ಆನಂದದಿಂದ ತುಳಿಸಿಕೊಳ್ಳುತ್ತಿದ್ದರು. ಐದಾರಿಂಚಿನ ಪುಟ್ಟ ಕಾಲುಗಳು ತಟಪಟ ಅಂತ ಬೆನ್ನ ಮೇಲೆ ಹೆಜ್ಜೆ ಇಡುವಾಗ ಆಗುವ ಸಂತೋಷಕ್ಕೆ ಎಣೆಯೇ ಇರುವುದಿಲ್ಲವೆಂದು ಗೊತ್ತಾದದ್ದೇ ಚೋಟು ನಮ್ಮ ಬದುಕಿಗೆ ಬಂದ ಮೇಲೆ. ಆಗ ನನ್ನ ಅಪ್ಪ-ಅಮ್ಮ ನಮ್ಮ ಕೈಲಿ ಏನಾದರೊಂದು ನೆಪ ಮಾಡಿ ಬೆನ್ನು ತುಳಿಸಿಕೊಳ್ಳುತ್ತಿದ್ದುದು ನೆನಪಿಗೆ ಬಂದಿತ್ತು. ಅಪ್ಪ ಮಗನ ಚೆಲ್ಲಾಟದ ಫೋಟೊ ತೆಗೆಯುತ್ತಾ ನಾನು ಅಡಿಗೆ ಮುಗಿಸುವಷ್ಟರಲ್ಲಿ ಚೋಟುವಿನ ಪ್ರೌಡ್ ಅಪ್ಪ ಒಂದು ಬೆಕ್ಕಿನ ನಿದ್ದೆ ಮುಗಿಸಿದ್ದರು. ಇನ್ನು ನನ್ನ ಸರದಿ.
 
 
ನಾನ್ಯಾಕೆ ಆ ಸುಖವನ್ನು, ಆ ಅವಕಾಶವನ್ನು ತಪ್ಪಿಸಿಕೊಳ್ಳಬೇಕು? ನಾನೂ ಅವನ ಮುಂದೆ ಹೋಗಿ ಇಲ್ಲದ ನಾಟಕವಾಡಿ ನನ್ನ ಬೆನ್ನು ಮುರಿದೇ ಹೋಗಿದೆ ಡಾಕ್ಟರೆ... ಅಂತ ಗೋಳಾಡಿದ್ದೆ. ನೀವು ರಿಪೇರಿ ಮಾಡಿಕೊಡದಿದ್ರೆ ನಮಗೆ ಏಳಕೂ ಆಗಲ್ಲ ಎಂದಿದ್ದೆ. ಅಷ್ಟು ಹೊತ್ತು ಚನ್ನಾಗೇ ಇದ್ದ ಅಮ್ಮ ಈಗ್ಯಾಕೆ ಹೀಗೆನ್ನುತ್ತಿದ್ದಾಳೆ ಎಂದು ಯೋಚನೆಯೂ ಮಾಡದ ನಮ್ಮನೆಯ ಮುಗ್ಧ ಡಾಕ್ಟರ್ ೧ ಡಾಲರ್ ಆಗುತ್ತೆ ರೀ ಅಂತ ಹೇಳಿ ನನ್ನ ಬೆನ್ನು ತುಳಿಯಲು ಶುರು ಮಾಡಿದ್ದರು. ನಮ್ಮ ಬೆನ್ನು ತುಳಿಯುವುದೆಂದರೆ ಅವನಿಗೆ ಬ್ಯಾಲೆನ್ಸ್ ಮಾಡುವ ಆಟವಾದ್ದರಿಂದ ಅವನೂ ಖುಷಿಯಾಗೇ ಆಡಿ ಮುಗಿಸಿದ. ನಾವೂ ಸಂತೋಷದಿಂದ ಎದ್ದು ನಮ್ಮ ಡಾಕ್ಟರಿಗೆ ಸುಳ್ಳು ಜೇಬಿನಿಂದ ದುಡ್ಡು ಕೊಟ್ಟು ಸಮಾಧಾನಿಗಳಾಗಿದ್ದೆವು. 
 
 
ಅಷ್ಟರಲ್ಲಿ ಚೋಟು ಅವನ ರೂಮಿನಿಂದ ಒಂದು ಮೆತ್ತನೆಯ ಹೊದಿಕೆಯನ್ನು ಎಳೆದುಕೊಂಡು ಬಂದ. ಹಾಗೇ ಅದನ್ನು ಲಿವಿಂಗ್ ರೂಮಿನಲ್ಲಿ ಹರವಿಕೊಳ್ಳತೊಡಗಿದ. ಏನೋ ಅವನ ಇಮ್ಯಾಜಿನರಿ ಆಟಕ್ಕೆ ತಯಾರು ಮಾಡಿಕೊಳ್ಳುತ್ತಿದ್ದಾನೆಂದು ನಾವು ಸುಮ್ಮನೇ ನಮ್ಮ ಕೆಲಸ ಮಾಡಿಕೊಂಡು ಗಮನಿಸುತ್ತಿದ್ದೆವು. ಹೊದಿಕೆಯನ್ನು ಚೊಕ್ಕವಾಗಿ ಹಾಸಿ, ಅದರ ಮೇಲೆ ಟಕ್ಕನೆ ಬೋರಲು ಮಲಗಿದ ಚೋಟು..’ರೀ ಮ್ಯಾಮ್, ರೀ ಸರ್...ಬನ್ನಿ. ೧ ಡಾಲರ್ ಕೊಡ್ತೀನಿ...ಈಗ ನಿಮ್ಮ ಟರ್ನ್. ಈಗ ನೀವಿಬ್ಬರೂ ನನ್ನ ಬೆನ್ನು ತುಳೀರಿ’ ಎಂದ! ಮೂರಡಿ ಇಪ್ಪತ್ತು ಕೆಜಿಯ ಮರಿ, ಮೂರು ದಶಕಕ್ಕೆ ಬಾಯ್ ಹೇಳಿರುವ ಹೆವಿವೇಟ್ ಚಾಂಪಿಯನ್ ಗಳಿಗೆ ಬೆನ್ನು ತುಳಿಯುವ ಪರಮ ಸಂದಿಗ್ಧ ಕೆಲಸ ಕೊಟ್ಟಿತ್ತು. ನಗಲಾಗದೇ, ತಡೆದುಕೊಳ್ಳಲಾಗದೇ, ತಪ್ಪಿಸಿಕೊಳ್ಳುವ ಉಪಾಯ ಯೋಚಿಸತೊಡಗಿದೆವು. 
 
 


 
 
 
 
 
Copyright © 2011 Neemgrove Media
All Rights Reserved