ದಿ ಗುಡ್, ದಿ ಬ್ಯಾಡ್ ಅಂಡ್ ದಿ ಅಗ್ಲಿ
ಡಾ. ಎಚ್ ಎಸ್ ವೆಂಕಟೇಶ ಮೂರ್ತಿ
’ವಿನಾ ದೈನ್ಯೇನ ಜೀವನಂ ಅನಾಯಾಸೇನ ಮರಣಮ್’ ಎಲ್ಲರ ಆಶಯ. ಆದರೆ ಹಾಗೆ ಯಾವಾಗಲೂ ಆಗಲಾರದು. ನಾವೆಲ್ಲರೂ ಯಾವುದಾದರೂ ಒಂದು ಪರಿಸ್ಥಿತಿಯಲ್ಲಿ ಅವಲಂಬಿಗಳಾಗುತ್ತೇವೆ. ಅನಾರೋಗ್ಯ ಇಂತಹ ಪರಿಸ್ಥಿತಿಯನ್ನು ಉಂಟುಮಾಡುವುದಕ್ಕೆ ಮುಖ್ಯ ಕಾರಣ.
ವೈದ್ಯನಾದ ನಾನು ರೋಗಾವಸ್ಥೆಯಲ್ಲಿರುವ ರೋಗಿಗಳನ್ನು ಅವರ ಹಿತಚಿಂತಕರಾದ ಬಂಧುಗಳನ್ನು ಹಲವು ಪ್ರಕಾರಗಳಲ್ಲಿ ನೋಡಿದ್ದೇನೆ. ಜನರ ಸ್ವಭಾವಗಳು, ಸ್ವಭಾವಕ್ಕೆ ಕಾರಣಗಳು ನನನ್ನು ಯೋಚನೆಗೆ ತೊಡಗಿಸುತ್ತವೆ.
ಅಬ್ದುಲ್ ಖಾದಿರ್ ನನ್ನಲ್ಲಿಗೆ ಬಂದಾಗ ಅವರಿಗೆ ಕರುಳಿನ ಕ್ಯಾನ್ಸರ್. ಜೀವನವೆಲ್ಲಾ ಕಷ್ಟಪಟ್ಟು ದುಡಿದ ಮನುಷ್ಯ. ದೇವರಲ್ಲಿ ಭಕ್ತಿ ಉಳ್ಳವನು. ಬಂದಿದ್ದು ಮಗ ಮತ್ತು ಅಳಿಯನ ಜೊತೆಗೆ. ದೊಡ್ಡ ಖಾಯಿಲೆಗಳು ಬಂದಾಗ ಅದಕ್ಕೆ treatment ಬೇರೆ ಬೇರೆಯ ಸಾಧ್ಯತೆಗಳಿರುತ್ತವೆ. ಒಂದೊಂದು ಸಾಧ್ಯತೆಯ ವೆಚ್ಚ ಬೇರೆ ಬೇರೆಯದಾಗಿರುತ್ತದೆ. ನಾನು ಖಾದರ್ ಸಾಹೇಬರ ಮಗ-ಅಳಿಯ ಇವರಿಗೆ ಇದನ್ನೆಲ್ಲಾ ಹೇಳಿದಾಗ ಅಳಿಯ ಹೇಳಿದ ಮಾತು ನೆನಪಿನಲ್ಲಿ ಉಳಿಯುವಂತಹುದು. ’ಅವರು ನಮ್ಮನ್ನೆಲ್ಲಾ ನೋಡಿಕೊಂಡಿದ್ದಾರೆ. ಈಗ ಅವರಿಗೆ best treatment ಅವಶ್ಯಕತೆ ಇದೆ.’ ಹೀಗೆ ಹೇಳಿ ಬೆಂಗಳೂರಿನ ದೊಡ್ಡ ಆಸ್ಪತ್ರೆಯಲ್ಲಿ ದಾಖಲು ಮಾಡಿಸಿ, ಲಕ್ಷಾಂತರ ಖರ್ಚು ಮಾಡಿ ಚಿಕಿತ್ಸೆ ನೀಡಿದರು. ಮನೆಗೆ ಹೋಗುವಾಗಲೂ ಅದೇ ಸ್ವಭಾವವನ್ನು ಉಳಿಸಿಕೊಂಡವರು ಅವರು. ಇಂತಹವರು ಮಾನವೀಯತೆಯ ಮೇಲಿನ ನಂಬಿಕೆಯನ್ನು ಬಲಪಡಿಸುವವರು.
ಅನುರಾಗ್ ಮಿತ್ತಲ್ ಸಾಫ್ಟ್ ವೇರ್ ಇಂಜಿನೀಯರ್. ಅವರು ನನಗೆ ಹಲವು ವರ್ಷದ ಪರಿಚಯ. ಅವರಿಗೆ health is wealth ಎಂಬ ಧೃಡ ನಂಬಿಕೆ. ಅವರ ಮನೆಯವರಿಗೆ, ಅವರಿಗೆ ಎಷ್ಟೋ ಚಿಕಿತ್ಸೆ ನೀಡಿದ್ದೇನೆ. ಯಾವಾಗಲೂ ಅವರಿಗೆ ಅತ್ಯುತ್ತಮ ವಾರ್ಡ್, ಹಾಸ್ಪಿಟಲ್ ಬೇಕು. ಈ ಸಾರಿ ಅವರ ಮನೆಗೆ ಬಂದ ದೂರದ ಅಷ್ಟು ಅನುಕೂಲಸ್ಥರಲ್ಲದವರಿಗೆ ತುರ್ತು ಚಿಕಿತ್ಸೆ ನೀಡಬೇಕಾಯಿತು. ಅವರನ್ನು ಯಾವ ಹಾಸ್ಪಿಟಲ್, ಯಾವ ವಾರ್ಡ್ ಗೆ ಅಡ್ಮಿಟ್ ಮಾಡಲಿ ಎಂದು ಕೇಳಿದಾಗ ಒಂದು ಕ್ಷಣದ ಹಿಂಜರಿಕೆ ಇಲ್ಲದೆ best hospital and best ward ಎಂದರು. ಇಷ್ಟೇ ಅಲ್ಲದೆ ಸ್ವಂತ ಅವರುಗಳೇ ಹಗಲೂ ರಾತ್ರಿ ರೋಗಿಯ ಜೊತೆಗೆ ಇದ್ದು ಅವರನ್ನು ಊರಿಗೆ ಕಳುಹಿಸಿದರು. ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ ಇವರ ವಿಚಾರದಲ್ಲಿ ಅನ್ವಯಿಸದು. | |
ಇತ್ತೀಚೆಗೆ ಒಬ್ಬ ನಲವತ್ತರ ಮಹಿಳೆ ಉದರಶೂಲೆಯಿಂದ ಬಂದು ಭರ್ತಿಯಾದರು. ಹಾಗಾಗಿ ಕೆಲವೇ ಗಂಟೆಗಳಲ್ಲಿ ನಂಜು ಏರಿ ಅವರ ಸ್ಥಿತಿ critical ಆಗಿ ಹೋಯಿತು. ತುರ್ತು ಶಸ್ತ್ರಚಿಕಿತ್ಸೆ ICU care ಇವೆಲ್ಲದರ ಮಧ್ಯೆ ಅವರದ್ದು ಜೀವನ್ಮರಣದ ಮಧ್ಯೆ ತೂಗುಯ್ಯಾಲೆ. ಸುಮಾರು ೭೨ ಗಂಟೆಗಳ ಕಾಲದ ನಂತರ ಅವರ ಆರೋಗ್ಯ ಸುಧಾರಿಸಿತು. ಅವರು ಸೀರಿಯಸ್ ಇದ್ದ ಅಷ್ಟು ಸಮಯವೂ ಅವರ ಗಂಡ ಮತ್ತು ಅಣ್ಣ ಇಬ್ಬರೂ ಯಾವಾಗ ನೋಡಿದರೂ ಆಸ್ಪತ್ರೆಯಲ್ಲೇ. ಔಷಧವಿರಲಿ, ರಕ್ತವಿರಲಿ ಏನೇ ಇರಲಿ ಸದಾ ತರಲು ಹಾಜರು. ಮನೆಗೆ ಹೋಗುವ, ರೆಸ್ಟ್ ತೆಗೆದುಕೊಳ್ಳುವ, ಖರ್ಚಿನ ವಿಚಾರಗಳು ಅವರ ತಲೆಯಲ್ಲೇ ಸುಳಿಯಲಿಲ್ಲ ಎಂದು ನನ್ನ ನಂಬುಗೆ. ಈ ರೀತಿಯ ಸಂಪೂರ್ಣವಾಗಿ ಆಪತ್ತಿನಲ್ಲಿ ಜೊತೆಗೆ ನಿಂತವರನ್ನು ನೆಂಟರಾಗಿ ಪಡೆದ ಆ ಮಹಿಳೆ ತುಂಬಾ ಅದೃಷ್ಟವಂತೆ ಅಂತ ನನಗೆ ಅನ್ನಿಸಿತು. ಆ ರೀತಿಯ commitment ಬಗ್ಗೆ ಮಾತಾಡದೆ, ಮಾಡಿ ತೋರಿಸಿದ ಜನ ಇವರು. ನೋಡಲು ಹಾದಿ ಬೀದಿಯಲ್ಲಿ ಓಡಾಡುವ ಜನಸಾಮಾನ್ಯರಂತೆ ಕಾಣುವ ಇವರ ಮನೋಭಾವನೆ ಅಸಾಮಾನ್ಯವೇ ಸರಿ.
ಈತ ತುಂಬಾ ವಿದ್ಯಾವಂತ ಹಾಗೂ ನೋಡಲು ಚೆನ್ನಾಗಿರುವವನು. ದುರಾದೃಷ್ಟದಿಂದ ಇಪ್ಪತ್ತಾರನೇ ವಯಸ್ಸಿನಲ್ಲೇ ಆಕಸ್ಮಿಕದಲ್ಲಿ wheel chairಗೆ ಸೀಮಿತವಾದವನು. ಇವನ ದಿನನಿತ್ಯದಸ್ ಎಲ್ಲ ಕಾರ್ಯಗಳಲ್ಲಿಯೂ ಇವನಿಗೆ ನೂರಕ್ಕೆ ನೂರರಷ್ಟು ನೆರವು ಬೇಕು. ಇವನು ನನಗೆ ಒಬ್ಬ ಡ್ರೈವರ್ ಬೇಕು. ನಿನಗೆ ಯಾರಾದರೂ ಗೊತ್ತಾ? ಎಂದು ಕೇಳಿದಾಗ ನಾನು ಹಲವು ದಿನಗಳಿಂದ ಪರಿಚಯ ಇದ್ದ ಒಬ್ಬನನ್ನು ಕಳುಹಿಸಿದೆ. ಆ ಡ್ರೈವರ್ ಎರಡೆ ದಿನಗಳಲ್ಲಿ ವಾಪಸ್ಸು ಬಂದ. ಯಾಕಪ್ಪಾ ಎಂದರೆ ’ಸಾರ್ ಅವರಿಗೆ ಯಾರ ಮೇಲೂ ನಂಬಿಕೆಯೇ ಇಲ್ಲ’ ಎಂದ. ಹೋದೊಡನೆ original license, ration card ಕೊಡಬೇಕಂತೆ. ಪ್ರತೀ ವಿಚಾರದಲ್ಲೂ ಅನುಮಾನ. ಅವನ ಕೈಗಳು, ಕಾಲ್ಗಳಾಗಿರುವವರ ಜೊತೆಗೂ ಹೀಗೆ. ಯಾವುದರಲ್ಲೂ ಕಿಂಚಿತ್ತೂ ತಪ್ಪಾಗಬಾರದು. ಸದಾಕಾಲವೂ ಮುಂದೇ ಕೂತಿರಬೇಕು. ಆದರೆ ವರ್ಷಗಳು ಕಳೆದರೂ ಸಂಬಳದ ಏರಿಕೆ ಇಲ್ಲ. ರಜೆ ಇಲ್ಲ. ಅವನ ಅಂಗವಿಕಲತೆ ಸೇವಕರ ತಪ್ಪು ಎನ್ನುವ ಭಾವನೆ. ಇಡೀ ಸಮಾಜ ನನಗೆ ಋಣಿ. ಯಾರು ಏನು ಸಹಾಯ ಮಾಡಿದರೂ ಇದು ನನಗೆ ಸಲ್ಲತಕ್ಕದ್ದೇ ಎನ್ನುವ ಧೋರಣೆ. ಇದೇ ವ್ಯಕ್ತಿ ಒಂದೆ ದಿನದಲ್ಲಿ ಹದಿನೈದು ಲಕ್ಷ ರೂಗಳನ್ನಿ ಷೇರು ಬಜಾರಿನಲ್ಲಿ ಕಳೆದದ್ದು ಉಂಟು. ಇಂತಹವರ ಮನಸ್ಸು ಯಾವ ಭಾವ, ಯಾವ ರಾಗಗಳಿಗೆ ಹೆಜ್ಜೆ ಹಾಕುತ್ತದೆ ಎಂದು ಯೋಚನೆ ಬರುತ್ತದೆ.
ಸುರೇಶ ಅವರ ತಂದೆ ಎಪ್ಪತ್ತು ವಯಸ್ಸಿನವರು. ಅವರಿಗೆ ಪಿತ್ತಕೋಶದಲ್ಲಿ ಕಲ್ಲುಗಳು. ಇದಕ್ಕಾಗಿ ಶಸ್ತ್ರ ಚಿಕಿತ್ಸೆ ಅಗತ್ಯ ಇದೆ. ಸುರೇಶ ಯಾವುದೋ ಕಂಪನಿಯ executive. ಬಂದು ಎಲ್ಲಾ ವಿಚಾರಿಸಿದರು. ಯಾವ ಆಸ್ಪತ್ರೆ, ಎಷ್ಟು ಖರ್ಚು, ಎಲ್ಲಿ ಕಡಿಮೆ ಹಣ ಎಲ್ಲಾ ವಿಚಾರಿಸಿದರು. ಇಂತಹ ದಿನ ಆಪರೇಷನ್ ಎಂದು ನಿರ್ಧರಿಸಿಯೂ ಆಯಿತು.
ಆಪರೇಷನ್ ಆದ ಎರಡು ದಿನ ಸುರೇಶ ಕಾಣಸಿಗಲಿಲ್ಲ. ನಂತರ ಸಿಕ್ಕರು. ಅವರ ತಂದೆ ಮನೆಗೆ ಹೋಗುವ ಸಮಯ ಬಂದಿತ್ತು. ನಾನು ಎರಡು ದಿನ ಕಾನಲಿಲ್ಲವೆಂದು ಪ್ರತಿಕ್ರಿಯಿಸಿದೆ. ಇಲ್ಲ ನನ್ನ ಮನೆಯವರಿಗೆ ಆಪರೇಷನ್ ಇತ್ತು ಎಂದರು. ಎಲ್ಲಿ ಎಂದು ಕೇಳಿದಾಗ ಮಲ್ಯ ಆಸ್ಪತ್ರೆಯಲ್ಲಿ ಎಂದು ಹೇಳಿದರು. ’ನಿಮ್ಮ ತಂದೆಯವರಿಗೆ ಸರಿಯಾದ ಆಸ್ಪತ್ರೆ ನಿಮ್ಮ ಮಡದಿಗೆ ಸರಹೋಗಲಿಲ್ಲವೇ?’ ಎಂದು ನಾನು ಕೇಳಿದ ಪ್ರಶ್ನೆ ಅವರಿಗೆ ಹಿಡಿಸಲಿಲ್ಲ. ಮುಂದೆಂದೂ ಅವರು ನನ್ನಲ್ಲಿ ಕನ್ಸಲ್ಟೇಷನ್ಗೇ ಬರಲಿಲ್ಲ! ವಿದ್ಯಾವಂತ ಹಣವಂತರಲ್ಲೇ ಹೆಚ್ಚಾಗಿ ಕಾಣಬರುವ ನಡವಳಿಕೆ ಇದು. ಹಳ್ಳೀಗರು ಈ ರೀತಿಯ ನಡವಳಿಕೆಯನ್ನು ತೋರಿಸಿರುವುದು ನಾನು ಅಷ್ಟು ಕಂಡಿಲ್ಲ. ಪಟ್ಟಣೀಕರಣದ ಪ್ರಭಾವವೋ ಹೆಚ್ಚಿನ ಓದು ಮನೋಭಾವ ವಿಕಲ್ಪ ಉಂಟು ಮಾಡುತ್ತದೋ ಎಂದು ಯೋಚನೆ ಬರುತ್ತದೆ.
ಜಯರಾಜ್ ಎಲ್ಲರಿಗೂ ಬೇಕಾದ ವ್ಯಕ್ತಿ. ಸಣ್ಣ ಕೆಲಸದಿಂದ ಆರಂಭಿಸಿ ಕಾರ್ಖಾನೆಯ ಮಾಲೀಕನಾದವರು. ತನ್ನ ಎಲ್ಲ ಬಂಧು ಬಳಗದವರಿಗೆ ಹಲವು ರೀತಿಯಲ್ಲಿ ಸಹಾಯಕ್ಕೆ ಬಂದವರು. ಇಂತಹವರಿಗೆ ಸಕ್ಕರೆ ಖಾಯಿಲೆಯ ತೊಂದರೆಯಿಮ್ದ ಒಂದು ಕಾಲು ಕಳೆದುಕೊಳ್ಳುವ ಸ್ಥಿತಿಯಾಯಿತು. ಅವರ ಬಂಧು-ಬಳಗದವರು ಸಾಧ್ಯವಾದಷ್ಟು ಸಹಾಯ ಮಾಡಿದರು. ದಿನಾ ರಾತ್ರಿ ಆಸ್ಪತ್ರೆಯಲ್ಲಿ ಉಳಿದು ನೋಡಿಕೊಂಡರು. ಆದರೆ ಜಯರಾಜ್ ಗೆ ತುಂಬಾ ಅಸಮಾಧಾನ. ಮನೆಯಿಂದ ಕಾಫಿ ತರುವುದು ಐದು ನಿಮಿಷ ನಿಧಾನವಾದರೆ ’ನೋಡಿ ಸಾರ್ ಇವರಿಗೆ ಎಪ್ಪತ್ತಾರನೇ ಇಸವಿಯಲ್ಲಿ ಸ್ಕೂಲ್ ಫೀಸ್ ಕಟ್ಟಿದವನು ನಾನು. ಈಗ ನೋಡಿ’ ಎನ್ನುವವರು. ಎಲ್ಲಾ ಮಾತಿನಲ್ಲೂ ನಡೆಯಲ್ಲೂ ವಿಷಾದ, ಕಹಿ. ಇಂತಹ ಕೊಟ್ಟೂ ಕೊಡದ ಮನೋಭಾವನೆಗೆ ಏನು ಕಾರಣವಿರಬಹುದು?
ದೊಡ್ಡ ಆಸ್ಪತ್ರೆಯ ಪ್ರೈವೇಟ್ ವಾರ್ಡ್. ರೋಗಿಗೆ ೬೫ ವರ್ಷ. ಹಲವಾರು ತೊಂದರೆಗಳು ರೋಗಿಗೆ. ಎರಡು ದಿನಗಳ ಕೆಳಗೆ ಶಸ್ತ್ರಚಿಕಿತ್ಸೆಯಾಗಿದೆ. ಆದರೂ ಪರಿಸ್ಥಿತಿ ಗಂಭೀರ. ರೋಗಿ ಮತ್ತು ಅವರ ಕಡೆಯವರು ಉಳ್ಳವರೇ. ಯಾವಗಲೂ ಸಂದರ್ಶಕರು ಜಾಸ್ತಿ. ಪ್ರತಿ ಬಾರಿ ನೋಡಲು ಹೋದಾಗಲೂ ಎಲ್ಲರಿಂದ ಅನೇಕ ಪ್ರಶ್ನೆಗಳು, ಕಾತರ, ಆತಂಕ ಇತ್ಯಾದಿ.
ಎರಡು ದಿನಗಳ ನಂತರ ರೋಗಿ ಹಠಾತ್ ಆಗಿ ತೀರಿಕೊಂಡರು. ಮರುದಿನ ಬೆಳಗಾದಾಗ ಆಸ್ಪತ್ರೆಯ ವ್ಯವಹಾರಿಕ ಅಧಿಕಾರಿ ಪೇಚಾಗಿ ಓಡಾಡುತ್ತಿದ್ದುದ್ದನ್ನು ನೋಡಿದೆ. ಏನು ಸಮಾಚಾರವೆಂದು ವಿಚಾರಿಸಿದಾಗ ಪೇಷಂಟ್ ಮೃತರಾದ ನಂತರ ಅವರ ಬಂಧು, ಬಳಗ ಯಾರೂ ಆಸ್ಪತ್ರೆಯ ಕಡೆಗೆ ಬಂದೇ ಇಲ್ಲ ಅಂದರು. ಅವರಿಗೆ ಅಂತ್ಯ ಸಂಸ್ಕಾರ ಮಾಡಲು ಯಾರೂ ಇಲ್ಲ. ಆಗಿರುವ ಸಂಗತಿ ಇಷ್ಟು. ರೋಗಿಯ ಸ್ಥಿತಿ ಸೀರಿಯಸ್ ಆದಾಗ ಅವರ ನೆಂಟರಿಷ್ಟರೆಲ್ಲಾ ರೋಗಿಯ ಮನೆಗೆ ಹೋಗಿದ್ದಾರೆ. ಅಲ್ಲಿರುವ ಬೀರು, ಪೆಟ್ಟಿಗೆ, ಖಜಾನೆಗಳ ಮುಂದೆ ತಳ ಊರಿದ್ದಾರೆ. ಯಾರು ಎಲ್ಲಿಗಾದರೂ ಹೋದರೆ ಸಂಪತ್ತಿನ ತಮ್ಮ ಭಾಗ ಹೋಗುವುದೋ ಎಂದು ಎಲ್ಲರ ಕಾತರ. ಹೀಗಿರುವಾಗ ಶವ ಸಂಸ್ಕಾರಕ್ಕೆ ಏನು ಅವಸರ! ಈ ಪರಿಸ್ಥಿತಿಗೆ ಅಳಿದ ರೋಗಿಯ ನಡವಳಿಕೆ ಕಾರಣವೋ ಉಳಿದ ಬಂಧುಗಳ ಲೋಭ ಕಾರಣವೋ ಯಾರಿಗೆ ಗೊತ್ತು?
ಸುಶೀಲಳ ಕಾಲಿನ ರಕ್ತ ಸಂಚಾರ ಕಡಿಮೆಯಾಗಿದೆ. ಹಾಗಾಗಿ ನಡೆದರೆ ನೋವು. ಇತ್ತೀಚಿನ ದಿನಗಳಲ್ಲಿ ಸಣ್ಣ ಗಾಯಗಳು ಬೆರಳಿನಲ್ಲಿ. ಅದರಿಂದ ನೋವು. ಇದಕ್ಕೆ ಪರಿಹಾರ angiograhy (ರಕ್ತನಾಳಗಳ ಎಕ್ಸರೇ). ರಕ್ತನಾಳಗಳ ಪರಿಸ್ಥಿತಿ ಅರಿಯಲು ಒಂದು ರೀತಿಯ X-ray. ನಂತರ ರಕ್ತನಾಳಗಳ ಮೇಲಿನ ಶಸ್ತ್ರಚಿಕಿತ್ಸೆ. ಇದರಿಂದ ನೋವು ಸರಿಹೋಗಿ, ಗಾಯಗಳೂ ವಾಸಿಯಾಗುವ ಸಂಭವವಿದೆ. ಆಪರೇಷನ್ ನಂತರ ಒಂದು ಹತ್ತು ದಿನಗಳಲ್ಲಿ ಆರಾಮಾಗಿ ಓಡಾಡುವ ಸಾಧ್ಯತೆ ಇದೆ. ಇವೆಲ್ಲವನ್ನೂ ನಾನು ಸುಶೀಲಳ ತಂದೆ, ಅಣ್ಣ ಇವರನ್ನು ಕರೆದು ವಿವರಿಸಿದೆ. ಚಿಕಿತ್ಸೆಯ ಅನುಕೂಲಗಳು, ಪ್ರತಿಕೂಲಗಳು ವಿವರಿಸಿದೆ. ಒಂದು ದಿನದ ಸಮಯ ಬೇಕೆಂದು ಕೇಳಿ ಮನೆಗೆ ಹೋದರು. ಮರುದಿನ ಬಂದು ಕೂತರು. ’ನೋಡಿ ಸಾರ್, ನೀವೇನೋ ಆಪರೇಷನ್ ಮಾಡುತ್ತೀರಾ. ಅಕಸ್ಮಾತ್ ಗುಣ ಆಗದಿದ್ದರೆ ಮತ್ತೆ ಕಾಲು ತೆಗೆಯಬೇಕು. ಒಂದಕ್ಕೆ ಎರಡು ಖರ್ಚು. ಒಂದೇ ಸಾರಿ ಕಾಲನ್ನೇ ತೆಗೆದುಬಿಡಿ’ ಎಂದರು. ನಾನು ’ಆಕೆಯನ್ನು ಒಂದು ಮಾತು ಕೇಳೋಣವೇ’ ಎಂದೆ. ’ಅದು ಬೇಡ, ಅವಳನ್ನು ಕೇಳಿದರೆ ತನ್ನ ಆಭರಣವನ್ನೇ ಮಾರಿ ಆಪರೇಷನ್ ಮಾಡಿಸಿಕೊಂಡು ಬಿಡುತ್ತಾಳೆ. ನಮಗೆ ಅದು ಸಮ್ಮತಿ ಇಲ್ಲ’ ಎಂದರು. ರೋಗಗ್ರಸ್ತೆಯಾದ ಸುಶೀಲಳ ಬಗ್ಗೆ ಯೋಚನೆ ಬಂತು. ಇವರನ್ನು ನಂಬಿದ ಅವಳ ನರಕದ ಬಗ್ಗೆ ಕಳವಳವಾಯಿತು.
ರಂಗೇಗೌಡರು ನಾನು ಇದ್ದ ಆಸ್ಪತ್ರೆಗೆ ಬಂದದ್ದು ಹಾರೋಹಳ್ಳಿಯಿಂದ. ಹೊಟ್ಟೆಯ ವ್ರಣ ಒಡೆದು ಅಸ್ವಸ್ಥರಾದ ರಂಗೇಗೌಡರು, ಅವರ ಜತೆಗೆ ಗಾಡಿ ಭರ್ತಿ ಜನ. ಇವರು ನಮ್ಮ ಮನೆಯ ಯಜಮಾನರು. ಇವರನ್ನು ಉಳಿಸಿಕೊಡಿ ಎಂದು ಸನಮ್ರ ವಿನಂತಿ. ಖಾಯಿಲೆ ಉಲ್ಬಣಿಸಿರುವುದರಿಂದ ಯಾವ ಗ್ಯಾರಂಟಿ ಇಲ್ಲ ಎಂದು ಹೇಳಿ ಭರ್ತಿ ಮಾಡಿ ಚಿಕಿತ್ಸೆ ಮಾಡಿದ್ದಾಯಿತು. ನಂತರ ರಂಗೇಗೌಡರು ಸ್ವಲ್ಪ ಚೇತರಿಸಿಕೊಂಡರು. ಎಲ್ಲಾ ಬಂಧು ಬಳಗ
ಸಂತೋಷವಾಗಿ ಇದ್ದರು. ಆರನೆಯ ದಿನ ರಾತ್ರಿ ವಯಸ್ಸಾಗಿದ್ದ ಗೌಡರು ಹಠಾತ್ ಆಗಿ ನಿಧನ ಹೊಂದಿದರು. ಬೆಳಗಿನ ಜಾವ ಮೂರು ಗಂಟೆಗೆ ಆಸ್ಪತ್ರೆಯಿಂದ ನನಗೆ ದೂರವಾಣಿ. ರಂಗೇಗೌಡರ ಮನೆಯವರು ತುಂಬಾ ಗಲಾಟೆ ಮಾಡುತ್ತಿದ್ದಾರೆ, ಆಸ್ಪತ್ರೆಯವರೇ ಗೌಡರನ್ನು ಕೊಂದಿದ್ದಾರೆ ಎಂದು ಹೇಳುತ್ತಾ ಇದ್ದಾರೆ ಎಂದು. ಅದಲ್ಲದೇ ಇಲ್ಲಿಯವರೆಗಿನ ಯಾವ ವೆಚ್ಚವನ್ನೂ ನಾವು ತುಂಬುವುದಿಲ್ಲ ಎಂದು ಗಲಾಟೆ ಮಾಡುತ್ತಿದ್ದಾರೆ ಎಂದು. ಇದು ಒಂದು ರೀತಿಯ ಉಪಾಯ. ಗಲಾಟೆ ಜಾಸ್ತಿಯಾದಷ್ಟೂ ಹಣ ಕೊಡದೆ ಹೊರಟು ಹೋಗಬಹುದೆಂಬ ಒಂದು ನಂಬಿಕೆ. ಕೊನೆಗೆ ಬಿಲ್ ನಲ್ಲಿ ಐದು ಸಾವಿರ ಕಡಿಮೆ ಮಾಡಿದ ನಂತರ ಮನೆಗೆ ಹೋದರು. ಗಲಾಟೆ ತನ್ನಷ್ಟಕ್ಕೆ ಕಡಿಮೆಯಾಯಿತು. ಆಸ್ಪತ್ರೆಗಳ ಲಾಭಕೋರತನ ನಿರ್ದಯ ನಡತೆ ಬಗ್ಗೆ ಆಗಾಗೆ ಬರೆಯುವ ಪತ್ರಿಕೆಯವರು ಇದನ್ನೂ ಒಂದು ದಿನ ಬರೆಯಬಹುದೇನೋ?
ನಮ್ಮ ಮಧ್ಯೆಯೇ ಇರುವ ಈ ಗುಡ್ ಬ್ಯಾಡ್ ಅಂಡ್ ಅಗ್ಲಿ ಗಳಿಗೆ ಸಮಾಜ್ ಕಾರಣವೋ, ವ್ಯವಸ್ಥೆ ಕಾರಣವೋ, ಸಂಸ್ಕಾರ ಕಾರಣವೋ, ಉತ್ತರ ಅಸ್ಪಷ್ಟ ಅಥವಾ ಮರ್ಮವಂತ ಜಗತ್ತಿನ ರೀತಿಯೇ ಇದಿರಬಹುದು ಎಂದುಕೊಂಡು ಕಾರ್ಯ ಮುಂದುವರಿಸುವುದೇ ಸರಿಯೇನೋ?
ಅಸಾವರೀ
ಶ್ರೀಮತಿ ಬಿ. ಎಸ್. ನಾಗರತ್ನ
"ಕ್ಯಾಂಪಸ್ ಮೇ ಉಪಸ್ಥಿತ್ ಸಭೀ ಪ್ರತಿಭಾಗಿಯೋಂಸೇ ಮೇರಾ ನಮ್ರ್ ನಿವೇದನ್ ಹೆ, ದೋಪಹರ್ ಕಾ ಭೋಜನ್ ಕೇಲಿಯೇ ಭೋಜನ್ ಕಕ್ಷ್ ಪರ್ ಆನೇ ಕಾ ಕಷ್ಟ್ ಲೇ..."
ಫೀಲ್ಡ್ ಡೈರೆಕ್ಟರ್ ವಿಜಯ್ ಮೆಹ್ತಾ ಅವರ ಕರೆ ಧ್ವನಿವರ್ಧಕದಲ್ಲಿ ಮೊಳಗಿತ್ತು. ಈ ಕರೆ ಪ್ರತಿ ದಿನ ನಾಲ್ಕು ಸಲ, ಬೆಳಗಿನ ತಿಂಡಿ, ಸಂಜೆಯ ಚಹಾ ಮತ್ತು ಊಟದ ಎರಡು ವೇಳೆಯೂ ಕೇಳಿಬರುವುದು ತಪ್ಪುತ್ತಿರಲಿಲ್ಲ. ಶಿಬಿರಾರ್ಥಿಗಳಿಗೆಲ್ಲರಿಗೂ ಈ ಧ್ವನಿ ಅತ್ಯಂತ ಅಪ್ಯಾಯಮಾನವಾಗಿತ್ತು. ಅಕಸ್ಮಾತ್ ಒಂದು ಹೊತ್ತು ಈ ಕರೆ ಕೇಳಿ ಬರದಿದ್ದರೂ ಎಲ್ಲರಿಗೂ ಪಿಚ್ಚೆನಿಸುತ್ತಿತ್ತು. ಅಷ್ಟರ ಮಟ್ಟಿಗೆ ಮೆಹ್ತಾಜಿ ತಮ್ಮ ಧ್ವನಿಯಿಂದ ಎಲ್ಲರನ್ನೂ ಸೆಳೆದಿದ್ದರು. ಬರೀ ಧ್ವನಿಯಷ್ಟೇ ಅಲ್ಲ, ಚಾರಣಕ್ಕೆಂದು ಪ್ರಕೃತಿ ಅಧ್ಯಯನ ಶಿಬಿರಕ್ಕೆ ಬರುವ ಮಕ್ಕಳ ಪ್ರತಿಯೊಂದು ಗುಂಪಿಗೂ ’ಓರಿಯಂಟೇಷನ್ ಕ್ಲಾಸ್’ ತೆಗೆದುಕೊಳ್ಳುವ ಕಲೆಯಲ್ಲೂ ಅವರ ನಿಪುಣತೆ ಕಂಡುಬರುತ್ತಿತ್ತು.
ತಮ್ಮದೆ ಆದ ಧಾಟಿಯಲ್ಲಿ ಮಕ್ಕಳನ್ನು ಪರಿಚಯಿಸಿಕೊಂಡು, ಚಾರಣ ಹೋಗುವಾಗ ಹೇಗಿರಬೇಕು? ಬೆಟ್ಟ-ಗುಡ್ಡ-ನದಿ-ಪರ್ವತಗಳ ದಾರಿಯಲ್ಲಿ ಸಾಗಬೇಕಾದಾಗ ನಿಧಾನವಾಗಿ ಅಲ್ಲಲ್ಲಿ ನಿಂತು ಕೂತು ಪ್ರಕೃತಿ ಸೌಂದರ್ಯವನ್ನು ಸವಿಯಬೇಕಾದ ಬಗೆ, ಅಲ್ಲಲ್ಲಿ ಸಿಗುವ ಹಳ್ಳಿಗಳು-ಹಳ್ಳಿಗರ ಬಗ್ಗೆ ಇರಬೇಕಾದ ಪ್ರೀತಿ, ಹಿಮದಲ್ಲಿ ನಡೆಯಬೇಕಾದಾಗ ವಹಿಸಬೇಕಾದ ಎಚ್ಚರ-ಇವೆಲ್ಲ ಸಂಗತಿಗಳನ್ನೂ ನಿಧಾನವಾಗಿ ಉದಾಹರಣೆಗಳ ಸಮೇತ ಮೆಹ್ತಾಜಿ ಹೇಳುವ ರೀತಿ ಮಕ್ಕಳಿಗೆ ಅತ್ಯಂತ ಖುಶಿಯಾಗುತ್ತಿತ್ತು. ಒಂದು ಗಂಟೆಯ ಓರಿಯಂಟೇಷನ್ ಕ್ಲಾಸ್ ಹೇಗೆ ಮುಗಿಯಿತು ಎಂಬುದೇ ಗೊತ್ತಾಗುತ್ತಿರಲಿಲ್ಲ.
ಮಕ್ಕಳೆಲ್ಲರಿಗೂ ಪ್ರೀತಿಯ ’ಮೆಹ್ತಾ ಸಾಬ್’ ಆಗಿದ್ದರು ಮೆಹ್ತಾ. ತಮ್ಮ ಸಣ್ಣ ಪುಟ್ಟ ಬೇಕು-ಬೇಡಗಳಿಗೂ ಮಕ್ಕಳು ಅವರ ಬಳಿ ಓಡೋಡಿ ಬರುತ್ತಿದ್ದರು. ಉಳಿದ ಕ್ಯಾಂಪ್ ಲೀಡರ್ ಗಳು ಇದರಿಂದ ಇರುಸುಮುರುಸಾಗುತ್ತಿದ್ದರು. ವಿಜಯ್ ಮೆಹ್ತಾ ಇಡೀ ಪ್ರಕೃತಿ ಅಧ್ಯಯನ ಶಿಬಿರಕ್ಕೇ ಕ್ಷೇತ್ರ ನಿರ್ದೇಶಕರು. ಬೇಸ್ ಕ್ಯಾಂಪೇ ಅಲ್ಲದೆ, ಹೈಯರ್ ಕ್ಯಾಂಪಿನ ಎಲ್ಲ ಶಿಬಿರಗಳನ್ನೂ ನೋಡಿಕೊಳ್ಳುವ, ನಿರ್ದೇಶಿಸುವ ಜವಾಬ್ದಾರಿ ಅವರದ್ದು. ಶಿಬಿರಾರ್ಥಿಗಳ ಯೋಗಕ್ಷೇಮವನ್ನು ಕ್ಯಾಂಪ್ ಲೀಡರುಗಳು ನೋಡಿಕೊಳ್ಳುತ್ತಿದ್ದರು. ಪ್ರಕೃತಿ ಅಧ್ಯಯನ ಶಿಬಿರಕ್ಕೆ ಬರುವ ಮಕ್ಕಳು ಕ್ಯಾಂಪ್ ಲೇಡರುಗಳನ್ನು ಅಲಕ್ಷಿಸಿ ಫೀಲ್ಡ್ ಡೈರೆಕ್ಟರ್ ಬಳಿಗೆ ಓಡೋಡಿ ಬರುವುದು ಕ್ಯಾಂಪ್ ಲೀಡರ್ ಗಳ ಅಸಮಾಧಾನಕ್ಕೆ ಕಾರಣವಾಗಿತ್ತು. ಇಂಥ ಒಂದು ಸಂದರ್ಭದಲ್ಲೇ ಬಂಗಾಳದ ಅರುಣ್ ಘೋಷ್ ನನ್ನ ಬಳಿ ಬಂದು, ’ಮೇಡಂ ನಮ್ಮ ಫೀಲ್ಡ್ ಡೈರೆಕ್ಟರ್ ಅವರಿಗೆ ಅವಾರ್ಡ್ ಮೇಲೆ ಕಣ್ಣು ಬಿದ್ದಿದ್ದೆ ಅನಿಸುತ್ತೆ. ತುಂಬ ಅತಿಯಾಗಿ ಆಡ್ತಾರೆ’ ಅಂದ. ಅವನ ಮಾತನ್ನು ಕೇಳಿಯೂ ಕೇಳದವಳಂತೆ ಸುಮ್ಮನಿದ್ದೆ. ’ಏನಾದ್ರೂ ಹೇಳಿ ಮೇಡಂ’ ಎಂದ ಮತ್ತೆ. ’ಏನ್ ಹೇಳ್ಬೇಕು?’ ’ನಮ್ಮ FD ತುಂಬಾ ಪ್ರಚಾರ ಬಯಸಿದ್ದಾರೆ. ಮಕ್ಕಳನ್ನೆಲ್ಲಾ ತಂ ಕಡೆ ತಿರುಗಿಸಿಕೊಂಡು ಬೆಸ್ಟ್ FD ಅಂತ ಸರ್ಟಿಫಿಕೇಟ್ ತೊಗೊಬೇಕೂಂತಿದ್ದಾರೆ. ನಿಮ್ಗೆ ಇದು ತಿಲೀತಿಲ್ವಾ?’ ಎಂದು ಮತ್ತೆ ಅದನ್ನೇ ಹೇಳಿದ. ’ಇಲ್ಲಪ್ಪ, ನಂಗೆ ಖಂಡಿತ ಹಾಗನಿಸ್ತಿಲ್ಲ. ಮಕ್ಕಳು ಅವ್ರನ್ನ ತುಂಬ ಇಷ್ಟ ಪಡ್ತಾರೆ. ಇಷ್ಟಕ್ಕೂ ಅವರಿಗೆ ಬೆಸ್ಟ್ ಅವಾರ್ಡ್ ಸಿಕ್ಕರೂ ನ್ಯಾಯವೇ, ಅದ್ರಲ್ಲೇನೂ ಮೋಸವಿಲ್ಲ ಬಿಡಿ’ ಎಂದೆ ನಾನು. ಅವನ ಮಾತಿಗೆ ಸೊಪ್ಪು ಹಾಕಲಿಲ್ಲ ಎಂದೋ ಏನೋ, ಘೋಷ್ ಮತ್ತೇನೂ ಹೇಳದೆ ಅಲ್ಲಿಂದ ಜಾಗ ಖಾಲಿ ಮಾಡಿದ. ಮೆಹ್ತಾಜಿ ಕೂಡ ತಾವು ಮಕ್ಕಳನ್ನು ಅತ್ಯಂತ ಪ್ರೀತಿಯಿಂದ ಕಾಣುತ್ತಿದ್ದರು. ಅವರಿಗೆ ಪ್ರಶಸ್ತಿ ಬಂದರೆ ಇವರಿಗೇನು? ತಮ್ಮ ಕೆಲಸ ತಾವು ನೋಡಿಕೊಂಡು ಹೋಗಬಾರದೇ, ಇಲ್ಲದ ಉಸಾಬರಿ ಯಾಕೆ ಇವರಿಗೆ?-ನಾನು ಯೋಚಿಸತೊಡಗಿದೆ. ಅಷ್ಟರಲ್ಲಿ ಮೆಹ್ತಾಜಿಯಿಂದ ನನಗೆ ಬುಲಾವ್ ಬಂತು.
ಮಕ್ಕಳು ಬರೆದಿದ್ದ ಪ್ರಬಂಧಗಳನ್ನು ಓದಿ ಮೌಲ್ಯಮಾಪನ ಮಾಡುತ್ತಿದ್ದ ನಾನು, ಅದನ್ನು ಅಲ್ಲಿಗೇ ನಿಲ್ಲಿಸಿ ಮೆಹ್ತಾಜಿ ಇದ್ದಲ್ಲಿಗೆ ಬಂದೆ. ’ಮೇಡಮ್, ನೋಡಿ, ಈ ಮಗುವಿಗೆ ತುಂಬ ಜ್ವರ. ಅಕ್ಲಮಟೈಸೇಷನ್ ನಿಂದ ವಾಪಸ್ ಬಂದಿದ್ದಾಳೆ. ಇವಳನ್ನು ಅವಳ ಜೊತೆಗಾರರ ಟೆಂಟಿನಲ್ಲಿ ಉಳಿಸುವುದು ಬೇಡ. ನಿಮ್ಮೊಂದಿಗೆ ಇಟ್ಟುಕೊಳ್ಳುವಿರಾ?’ ಕೇಳಿದರು. ಹನ್ನೊಂದು ವರ್ಷದ ಆ ಮಗು ವಿಪರೀತ ಸುಸ್ತಾದಂತೆ ಕಂಡಳು. ಜ್ವರದಿಂದ ನಡುಗುತ್ತಿದ್ದ ಅವಳ ಮುಖವನ್ನೊಮ್ಮೆ ದಿಟ್ಟಿಸಿದೆ. ಹಾಲು ಬಿಳುಪಿನ ಆಕರ್ಷಕ ಮುಖ ಅಲ್ಲಲ್ಲಿ ಕೆಂಪು ಕೆಂಪಾಗಿತ್ತು. ಮನಸ್ಸಿನಲ್ಲಿ ಏನೋ ಸಂದೇಹವಾದರೂ ತೋರಗೊಡದೆ ’ಖಂಡಿತ. ನನ್ನ ಟೆಂಟಿನಲ್ಲೇ ಉಳಿಯಲಿ’ ಅಂದವಳೇ ಅವಳ ಕೈ ಹಿಡಿದು ಕರೆದುಕೊಂಡು ಹೋಗಿ ಬೆಚ್ಚಗೆ ಹೊದಿಸಿ ಮಲಗಿಸಿದೆ. ಹುಡುಗಿ ವಿಪರೀತ ನಡುಗುತ್ತಿದ್ದಳು. ’ನಿನ್ನ ಹೆಸರೇನು ಮಗೂ?’- ಮೆಲ್ಲನೆ ಕೇಳಿದೆ. ’ಅಸಾವರೀ’. ಊಟ ಮಾಡಿದೆಯಾ?’ ಹೂಂ, ಸ್ವಲ್ಪ ಗಂಜಿ ಕುಡಿದೆ’ ಎಂದಳು. ’ಮಾತ್ರೆ ಏನಾದರೂ ಕೊಡಲೇ?’ ಇಂಥ ಸಂದರ್ಭಗಳಿಗೆಂದೇ ತಂದ ಔಷಧಿಗಳನ್ನು ತೆಗೆಯಲು ಹೋದೆ. ’ಬೇಡ ಆಂಟಿ, ಮಾತ್ರೆ ತೊಗೊಂಡೆ, ಮೆಹ್ತಾ ಸಾಬ್ ಕೊಟ್ಟರು’. ಎಂದಳು. ’ಸರಿ ಹಾಗಾದ್ರೆ ಮಲಗು, ನಾನೂ ಇಲ್ಲಿಗೇ ಬರ್ತೀನಿ, ಒಂದೇ ನಿಮಿಷದಲ್ಲಿ’ ಎನ್ನುತ್ತಾ ರಿಸೆಪ್ಷನ್ ಕೌಂಟರಿನಲ್ಲಿ ಇಟ್ಟು ಹೋಗಿದ್ದ ಪ್ರಬಂಧಗಳನ್ನೂ ಪೆನ್ನನ್ನೂ ತಂದೆ, ಟೆಂಟಿನಲ್ಲಿ ಓದಲು ತೊಡಗಿದೆ.
ಆ ದಿನ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ್ದವರು ಮೂವತ್ತು ಮಂದಿಯಿದ್ದರು. ಉಳಿದ ದಿನಗಳಿಗೆ ಹೋಲಿಸಿದರೆ ಅದು ಜಾಸ್ತಿ ಸಂಖ್ಯೆ. ಇವುಗಳ
ಮೌಲ್ಯ ಮಾಪನವಾದ ಮೇಲೆ ಡ್ರಾಯಿಂಗ್ ನಲ್ಲಿ ಭಾಗವಹಿಸಿದ್ದವರ ಚಿತ್ರಗಳನ್ನು ನೋಡಬೇಕಿತ್ತು. ಅದೂ ಹೆಚ್ಚು ಕಡಿಮೆ ಇಷ್ಟೇ ಇತ್ತು. ಇವೆರಡನ್ನೂ ಸಂಜೆ ಏಳು ಗಂಟೆಯೊಳಗೆ ಮೌಲ್ಯಮಾಪನ ಮಾಡಲೇಬೇಕಿತ್ತು. ಯಾಕೆಂದರೆ ಬಹುಮಾನ ವಿಜೇತರ ಪಟ್ಟಿಯನ್ನು ಅಂದಂದಿನ ’ಶಿಬಿರಜ್ಯೋತಿ’ ಕಾರ್ಯಕ್ರಮದಲ್ಲಿ ಪ್ರಕಟಿಸಿ, ಬಹುಮಾನ ನೀಡಬೇಕಿತ್ತು. ಹೈಯರ್ ಕ್ಯಾಂಪಿನಿಂದ ವಾಪಸಾದ ಮಕ್ಕಳು ಮಾತ್ರ ಇಷ್ಟವಿದ್ದವರು ಪ್ರಬಂಧ-ರಸಪ್ರಶ್ನೆ-ಡ್ರಾಯಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದರು. ಎಲ್ಲವೂ ಕೂಡ ನಿಸರ್ಗಕ್ಕೆ ಸಂಬಂಧಪಟ್ಟಂತೆ, ಚಾರಣದಲ್ಲಿ ಅವರು ಕಂಡ, ಅನುಭವಿಸಿದ, ಕಲಿತ ಸಂಗತಿಗಳ ಬಗ್ಗೆಯೇ ಬರೆಯಬೇಕಿತ್ತು. ಪ್ರತಿದಿನದ ಈ ಸ್ಪರ್ಧೆಗಳು, ಇವುಗಳ ಮೌಲ್ಯಮಾಪನ, ಬಹುಮಾನ ಹಂಚಿಕೆ-ಇವೆಲ್ಲದರ ಸಂಪೂರ್ಣ ಜವಾಬ್ದಾರಿ ನನ್ನದಾಗಿತ್ತು. ಈ ಕೆಲಸ ನನಗೆ ಅತ್ಯಂತ ಸಂತೋಷದಾಯಕವಾಗಿದ್ದರಿಂದ ಪುರಸೊತ್ತಿಲ್ಲದೆ ನಿರ್ವಹಿಸುತ್ತಿದ್ದೆ. ಮಕ್ಕಳು ಇದರಲ್ಲಿ ಭಾಗವಹಿಸಿದಾಗ ಕುತೂಹಲದಿಂದ ಗಮನಿಸುತ್ತಿದ್ದೆ. ಕೆಲವು ಮಕ್ಕಳು ನಿಜಕ್ಕೂ ಅತ್ಯಂತ ಪ್ರತಿಭಾವಂತರಿರುತ್ತಿದ್ದರು. ಅನೇಕ ಸಲ ಬಹುಮಾನಗಳನ್ನು ಎಷ್ಟು ಜನಕ್ಕೆ ಕೊಡಬೇಕೆಂಬ ಗೊಂದಲ ಮೂಡಿ ನಾಲ್ಕೈದು ಬಹುಮಾನಗಳನ್ನು ಹೆಚ್ಚಿಸುತ್ತಿದ್ದುದುಂಟು. ಬಹುಮಾನಕ್ಕೆಂದು ಉತ್ತಮ ಪುಸ್ತಕಗಳು ಇದ್ದವು. ಅವು ಕೂಡ ಪ್ರಕೃತಿ-ಪ್ರಾಣಿ-ಪಕ್ಷಿಗಳಿಗೆ ಸಂಬಂಧಿಸಿದ ಪುಸ್ತಕಗಳು.
ಪ್ರಬಂಧವನ್ನು ಓದುತ್ತಿದ್ದಂತೆಯೇ ಮತ್ತೆ ಮೆಹ್ತಾಜಿಯವರ ಕರೆ ಧ್ವನಿವರ್ಧಕದಲ್ಲಿ-’ಕ್ಯಾಂಪಸ್ ಮೇ ಉಪಸ್ಥಿತ್ ಸಭೀ ಪ್ರತಿಭಾಗಿಯೋಂಸೇ ಮೇರಾ ನಮ್ರ್ ನಿವೇದನ್ ಹೆ, ಸಾಯಂ ಚಾಯ್ ಕೇಲಿಯೇ ಭೋಜನ್ ಕಕ್ಷ್ ಪರ್ ಆಯಿಯೇ.’ ಅರೆ! ಆಗಲೇ ನಾಲ್ಕೂವರೆ ಗಂಟೆ. ಅಸಾವರಿಯತ್ತ ಕಣ್ಣೂ ಹಾಯಿಸಿದೆ. ಮೈ ಮುದುರಿ ಮಲಗಿತ್ತು ಮಗು. ಬಳಿ ಸರಿದು ಹಣೆ ಮುಟ್ಟೀದೆ. ವಿಪರೀತ ಸುಡುತ್ತಿದೆ, ಮಧ್ಯಾನ್ಹ ನಾನು ಸಂದೇಹಿಸಿದ್ದು ನಿಜವೂ ಆಗಿತ್ತು! ಹಾಗೇ ಅವಳಿಗೆ ಹೊದ್ದಿಸಿ ಹೊರಗೆ ಬಂದೆ. ಅಲ್ಲೇ ಮಾಮೂಲಿನಂತೆ ಹುಡುಗರ ಜೊತೆ ಚಹಾ ಕುಡಿಯುತ್ತಾ ಮಾತನಾಡುತ್ತಾ ನಿಂತಿದ್ದ ಮೆಹ್ತಾಜಿ ಕಾಣಿಸಿದರು. ಅವರ ಬಳಿ ಬಂದು ’ಮೆಹ್ತಾಜಿ ಅಸಾವರಿಗೆ ಚಿಕನ್ ಪಾಕ್ಸ್ ಆಗಿರುವಂತಿದೆ. ಮೈ ಮುಖವೆಲ್ಲ ಕಾಣಿಸಿಕೊಂಡಿದೆ, ಅವಳನ್ನು ನಾಳೆ ಹೈಯರ್ ಕ್ಯಾಂಪಿಗೆ ಕಳಿಸುವುದು ಬೇಡ, ಇಲ್ಲೇ ಇರಲಿ’ ಎಂದು ಹೇಳಿದೆ. ’ಹೌದು ಮೇಡಂ, ನಾನೂ ಅದನ್ನೇ ಯೋಚಿಸುತ್ತಿದ್ದೆ. ಅವಳ ಎಸ್ಕಾರ್ಟ್ ಜೊತೆ ಮಾತನಾಡುತ್ತೇನೆ, ಅವಳನ್ನು ನೀವು ನೋಡಿಕೊಳ್ಳಿ’ ಎಂದರು.
ಟೆಂಟಿಗೆ ಹಿಂದಿರುಗಿ ಮತ್ತೆ ನನ್ನ ಕೆಲಸ ಆರಂಭಿಸಿದೆ. ’ಮಮ್ಮೀ...’ ಮುಲುಗುಟ್ಟುತ್ತಿದ್ದಳು ಅಸಾವರೀ. ಪಾಪ! ಸಂತೋಷದಿಂದ ಕಾಲ ಕಳೆಯ ಬಂದು ಹೀಗಾಯಿತಲ್ಲಾ ಎಂದು ಹಲುಬಿದೆ. ಹೊರಗೆ ಅವಳ ಗುಂಪಿನ ಮಕ್ಕಳು ಷಟಲ್ ಆಡುವುದರಲ್ಲಿ, ರಾತ್ರಿ ಶಿಬಿರಜ್ಯೋತಿಯಲ್ಲಿ ಏನೇನು ಕಾರ್ಯಕ್ರಮ ನೀಡಬೇಕೆಂಬುದರಲ್ಲಿ ಪರಸ್ಪರ ಚರ್ಚೆಯಲ್ಲಿ ತೊಡಗಿದ್ದರು. ಅವಳ ಒಂದಿಬ್ಬರು ಗೆಳತಿಯರು ಬಂದು ಮಲಗಿದ್ದ ಅವಳನ್ನು ನೋಡಿಕೊಂಡು ಹೋದರು. ಅಹಮದಾಬಾದ್ ನಿಂದ ಅವಳ ಗುಂಪನ್ನು ಕರೆತಂದಿದ್ದ ಎಸ್ಕಾರ್ಟ್ ಇಬ್ಬರು ಬಂದು, ಮೇಡಂ ನಾವು ಟ್ರೇನಿನಲ್ಲಿ ಇಲ್ಲಿಗೆ ಬರುವಾಗ ಇವಳ ಪಕ್ಕದಲ್ಲಿ ಕೂತಿದ್ದ ಚಿಕ್ಕ ಮಗುವಿಗೆ ಚಿಕನ್ ಪಾಕ್ಸ್ ಆಗಿತ್ತು. ಇವಳಿಗೂ ಸೋಂಕು ತಗುಲಿದೆ. ಹೈಯರ್ ಕ್ಯಾಂಪಿಗೆ ಬೇಡ. ಇವಳು ಇಲ್ಲೇ ರೆಸ್ಟ್ ತೆಗೆದುಕೊಳ್ಳಲಿ. ಅವರ ಮನೆಗೆ ಫೋನ್ ಮಾಡುತ್ತೇವೆ’ ಎಂದು ಅವಳಿಗೆ ಕೊಡಬೇಕಾದ ಔಷಧಿಗಳನ್ನು ನನ್ನ ಕೈಯ್ಯಲ್ಲಿಟ್ಟು ಹೋದರು. ಆಗಾಗ ಅವಳ ಬಾಯಿಂದ ಹೊರಡುತ್ತಿದ್ದ ’ಮಮ್ಮೀ’ ಎಂಬ ಕರೆ ನನ್ನ ಮನಸ್ಸನ್ನು ಕಲಕುತ್ತಿತ್ತು. ಮುಟ್ಟಿ ನೋಡಿದೆ, ಮಗು ಜ್ವರದಿಂದ ಬೇಯುತ್ತಿದ್ದಳು. ತಡೆಯಲಾರದೆ ಕರ್ಚೀಪನ್ನು ಒದ್ದೆ ಮಾಡಿ ತಂದು ಹಣೆಯ ಮೇಲಿಟ್ಟೆ. ತಣ್ನಗಾಗಿದ್ದಕ್ಕೋ ಏನೋ ಒಮ್ಮೆ ಬೆಚ್ಚಿದಳು. ಅಷ್ಟು ಹೊತ್ತಿಗೆ ಮತ್ತೊಮ್ಮೆ ಧ್ವನಿವರ್ಧಕದಲ್ಲಿ ಊಟಕ್ಕೆ ಕರೆ. ನನ್ನ ಕೆಲಸವೂ ಮುಗಿಯುತ್ತಾ ಬಂದು ಬಹುಮಾನ ವಿಜೇತರ ಪಟ್ಟೀ ಮಾಡುವುದಷ್ಟೇ ಉಳಿದಿತ್ತು. ಸರಸರನೆ ಅದನ್ನೂ ಮುಗಿಸಿ ಅಡುಗೆಮನೆಯ ಕಡೆ ಓಡಿದೆ. ಅಸಾವರಿಗೆ ಕುಡಿಯಲು ಬಿಸಿನೀರು, ಊಟಕ್ಕೆ ಗಂಜಿ ಬೇಕಿತ್ತು. ಮಕ್ಕಳೆಲ್ಲ ಊಟ ಮುಗಿಸಿ ರಾತ್ರಿಯ ಕ್ಯಾಂಪ್ ಫೈರ್ ಗೆ ಅಣಿಯಾಗುತ್ತಿದ್ದರು. ’ಮೇಡಂ, ಫಿಲ್ಮ್ ಸಾಂಗ್ ಗೆ ಡಾನ್ಸ್ ಮಾಡಬಹುದಾ? ಒಬ್ಬ ಹುಡುಗ ಕೇಳಿದ. ’ಖಂಡಿತ ಇಲ್ಲ. ಓರಿಯಂಟೇಷನ್ ನಲ್ಲಿ ನೀವು ಕೇಳಿಲ್ಲವಾ? ಕೇವಲ ದೇಶಭಕ್ತಿ ಜನಪದ ಭಾವಗೀತೆಗಳನ್ನಷ್ಟೇ ಹಾಡಬಹುದು’. ಎಂದೆ. ಆತ ಸಪ್ಪಗೆ ಮುಖ ಮಾಡಿಕೊಂಡು ಹೋದ. ಪಕ್ಕದಲ್ಲೇ ಇದ್ದ ಪ್ರದೀಪ್ ವರ್ಮಾ ’ಮೇಡಂ ಅವ್ರಿಗೆ ಯಾವ್ದು ಖುಷಿ ಅನ್ನಿಸುತ್ತೋ ಅದನ್ನು ಮಾಡ್ಲಿ ಬಿಡಿ. ನೀವ್ಯಾಕೆ ಬೇಡ ಅಂತಿರಿ’ ಅಂದ. ’ನೋ ನೊ, ಫಿಲ್ಮ್ ಸಾಂಗ್ ಬೇಡ. ಇಲ್ಲಿ ಅಲೋ ಮಾಡೊಲ್ಲ ಅಂತ ನಿಮಗೂ ಗೊತ್ತು’-ಹಿಂದಿನಿಂದ ಮೆಹ್ತಾಜಿ ದನಿಗೂಡಿಸಿದ್ರು. ಅವರ ಮಾತಿಗೆ ಸಿಲುಕದೆ ನಾನು ಗಂಜಿ ಬಿಸಿನೀರು ತೆಗೆದುಕೊಂಡು ಟೆಂಟಿಗೆ ಬಂದೆ. ’ಊಟ ಮಾಡಿ ಹೋಗಿ ಮೇಡಂ’ ಎಂದರು ಗೋಪಾಲ್. ’ಹಸಿವಿಲ್ಲ’ ಎಂದೆ. ನಿಜಕ್ಕೂ ಆ ದಿನ ನನಗೆ ಊಟ ಮಾಡುವ ಮನಸ್ಸಿರಲಿಲ್ಲ.
ಅಸಾವರಿಯನ್ನು ಮೆಲ್ಲಗೆ ಏಳಿಸಿದೆ. ಸ್ವಲ್ಪ ಸ್ವಲ್ಪವೇ ಗಂಜಿ ಕುಡಿಸಿ, ಮಾತ್ರೆ ಕೊಟ್ಟು ಮಲಗಿಸಿದೆ. ’ಟಾಯ್ಲೆಟ್ಟಿಗೆ ಹೋಗಬೇಕಾದರೆ ಹೇಳು’ ಎಂದೆ.
ಅಂದಿನ ಕ್ಯಾಂಪ್ ಫೈರ್ ನಲ್ಲಿ ಭಾಗವಹಿಸಲು ಮನಸ್ಸಾಗಲಿಲ್ಲ. ಜೊತೆಗೆ ಆ ಮಗುವನ್ನು ಒಂಟಿಯಾಗಿ ಬಿಟ್ಟು ಹೋಗಲಾರದೆ ಟೆಂಟಿನಲ್ಲಿಯೇ ಉಳಿದೆ. ಕ್ಯಾಂಪ್ ಫೈರ್ ನ ಎಲ್ಲ ಕಾರ್ಯಕ್ರಮಗಳೂ ಜೋರಾಗಿ ಕೇಳಿಸುತ್ತಿದ್ದವು. ಆ ದಿನ ಸ್ಥಳೀಯ ವ್ಯಕ್ತಿಯೊಬ್ಬರನ್ನು ಮುಖ್ಯ ಅತಿಥಿಗಳಾಗಿ ಆಹ್ವಾನಿಸಲಾಗಿತ್ತು. ಸ್ವಾಗತ, ಬಹುಮಾನ ವಿತರಣೆ ಮುಗಿದು ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭವಾದವು. ಕಾರ್ಯಕ್ರಮಗಳನ್ನು ನಿರೂಪಿಸುತ್ತಿದ್ದವನು ಆ ದಿನದ ಮಾಸ್ಟರ್ ಆಫ್ ಸೆರಮನಿ ಆಗಿದ್ದ ನಿಪುಣ್ ಕಾಕಡೆ. ಮಕ್ಕಳ ಹಾಡು, ನಗೆ ಚಟಾಕಿಗಳು ಧ್ವನಿವರ್ಧಕದಿಂದ ಜೋರಾಗಿ ಕೇಳಿಬರುತ್ತಿದ್ದವು. ಅಸಾವರೀ ತಡೆಯಲಾರದೆ ’ಮೇಡಂ ಅಲ್ಲೇ ಹೋಗಿ ಕುಳಿತುಕೊಳ್ಳೊಣ, ನಾನೂ ನೋಡ್ತೀನಿ’ ಎಂದಳು. ’ಬೇಡವೇ ಬೇಡ, ಗಾಳಿಯಲ್ಲಿ ನಿನಗೆ ಮತ್ತೂ ಜಾಸ್ತಿ ಥಂಡಿಯಾಗುತ್ತದೆ. ಸುಮ್ಮನೆ ಮಲಗು’ ಎಂದೆ. ನಾನೇನೋ ಹಾಗೆಂದೆ. ಆದರೆ ಅವಳಿಗೆ ಈನನಿಸಿರಬಹುದು? ತನ್ನ ಓರಗೆಯವರು ಹೀಗೆ ಹಾಡುತ್ತಾ ಕುಣಿಯುತ್ತಾ ಇದ್ದಾಗ...? ಯಾರೋ ಹಾರಿಸಿದ ನಗೆ ಚಟಾಕಿಗೆ ಎಲ್ಲರೂ ಬಿದ್ದು ಬಿದ್ದು ನಗುವ ಸದ್ದು ಕೇಳಿಬಂತು. ’ಯಾರೋ ಜೋಕ್ಸ್ ಹೇಳ್ತಿದ್ದಾರೆ ಅಲ್ವಾ...’ ಆ ಸ್ಥಿತಿಯಲ್ಲೂ ಅಸಾವರೀ ನಕ್ಕಳು. ’ಅಪ್ನಾ ಅಪ್ನಾ ಬೊರ್ನ್ ವಿಟಾ ಮಗ್ ಲೇಲೇ’ ಎಂದಾಗಲೇ ಕಾರ್ಯಕ್ರಮಗಳು ಮುಕ್ತಾಯವಾದವು ಎಂದುಕೊಂಡೆ.
ಮಕ್ಕಳೆಲ್ಲರೂ ತಮ್ಮ ತಮ್ಮ ಟೆಂಟಿನೊಳಗಡೆ ಹೊಕ್ಕು, ಸ್ವಲ್ಪ ಹೊತ್ತಿಗೇ ಲೈಟ್ಸ್ ಆಫ್ ಆಯಿತು. ಗಂಟೆ ಹತ್ತಾಯಿತು ಎನ್ನುವ ಸೂಚನೆ ಅದು. ದೀಪ ಆರಿದರೂ ಟೆಂಟಿನೊಳಗೆ ಮಕ್ಕಳ ಹರಟೆ-ನಗು ಇನ್ನೂ ಆರಿರಲಿಲ್ಲ. ನಮ್ಮ ಟೆಂಟಿನಲ್ಲಿ ಮಾತ್ರವೇ ಮೌನ. ಸ್ವಲ್ಪ ಹೊತ್ತಾದ ಮೇಲೆ ’ಆಂಟೀ’ ಎಂದು ಯಾರೋ ಕರೆದಂತಾಯಿತು. ’ಯಾರು’ ಎಂದೆ. ’ನಾನು ಆಂಟೀ...ನಿಮಗೆ ನಿದ್ದೆ ಬಂತಾ?’ ಅದು ಅಸಾವರೀ ಧ್ವನಿ. ’ಇಲ್ಲ, ನಿನಗೆ?’ ’ಇಲ್ಲ’. ’ನೀರೇನಾದ್ರೂ ಕುಡಿಯಲು ಬೇಕಾ?’ ಕೇಳಿದೆ. ’ಬೇಡ’ ಅಂದಳು. ಅವಳು ಏನನ್ನೋ ಕೇಳಲು ಯತ್ನಿಸುತ್ತಿದ್ದಾಳೆ ಅನಿಸಿತು. ’ಏನು ಬೇಕು ಮಗೂ?’ ’ನಾಳೆ ಹೈಯರ್ ಕ್ಯಾಂಪಿಗೆ ಹೋಗಬಾರದೇ?’ ನಿಧಾನವಾಗಿ ಕೇಳಲೋ ಬೇಡವೋ ಎಂಬಂತೆ ಕೇಳಿದಳು. ’ಬೇಡ ಮರಿ, ನಿನಗೆ ಚಿಕನ್ ಪಾಕ್ಸ್ ಆಗಿದೆ. ಅಲ್ಲೆಲ್ಲಾ ಓಡಾಡಿದರೆ ಸುಧಾರಿಸುವುದು ಕಷ್ಟ, ಜೊತೆಗೆ ಎಲ್ಲರಿಗೂ ತೊಂದರೆ. ನಿನಗೆ ಹೋಗಲೇಬೇಕಿದ್ದರೆ ಮುಂದಿನ ವರ್ಷ ಬರುವಿಯಂತೆ’ ಎಂದು ಸಮಾಧಾನ ಮಾಡಿದೆ. ಅವಳಿಂದ ನಿಟ್ಟುಸಿರು ಹೊರಬಿದ್ದದ್ದು ಕತ್ತಲೆಯಲ್ಲೂ ನನ್ನ ಅರಿವಿಗೆ ಬಂತು. ’ಆಂಟೀ, ನಿಮ್ಮನೇಲಿ ಎಷ್ಟು ಜನ ಇದ್ದೀರಿ?’ ಇದ್ದಕ್ಕಿದ್ದಂತೆ ಅವಳಿಂದ ಬಂದ ಪ್ರಶ್ನೆ ನನಗೆ ಆಶ್ಚರ್ಯ ಹುಟ್ಟಿಸಿತು. ’ಯಾಕೆ ಮಗೂ?’ ’ನಿಮ್ಗೆ ಮಕ್ಕಳಿದ್ದಾರ? ಅಂತ ತಿಳ್ಕೊಳೋಕೆ’. ’ಇದ್ದಾರೆ’. ’ಇಬ್ಬರು ಮಗನಾ ಮಗಳಾ? ’ಇಬ್ಬರೂ ಒಬ್ಬೊಬ್ಬರು’ ಅವಳು ನನ್ನ ವೈಯುಕ್ತಿಕ ಬದುಕಿನ ಬಗ್ಗೆ ಪ್ರಶ್ನೆ ಮಾಡತೊಡಗಿ ಸುಮ್ಮನಾದಳು. ರಾತ್ರಿ ಬಹಳ ಹೊತ್ತು ನನಗೆ ನಿದ್ದೆಯೇ ಬರಲಿಲ್ಲ.
ಬೆಳಿಗ್ಗೆ ಟೆಂಟಿನ ಮುಂದೆ ನಿಂತು ಗೋಪಾಲ್ ’ಮೇಡಂ ಬೆಡ್ ಟೀ’ ಎಂದಾಗಲೇ ಎಚ್ಚರ. ಮಾರ್ನಿಂಗ್ ಎಕ್ಸರ್ಸೈಜ್ ಗೆ ಹೋಗಲು ಅಣಿಯಾಗಿ ಮಕ್ಕಳು ಶಿಸ್ತಿನಿಂದ ಓಡುತ್ತಿದ್ದರು. ಬಿಯಾಸ್ (ವ್ಯಾಸ) ನದಿಯ ದಂಡೆಯ ಒಂದು ಪ್ರಾಥಮಿಕ ಶಾಲಾ ಆವರಣ ನಮ್ಮ ವ್ಯಾಯಾಮ ಸ್ಥಳ. ಚಾರಣ ಹೋಗುವ ಮಕ್ಕಳು ದೈಹಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಇದು ಅಗತ್ಯವೂ ಹೌದು. ಕೈ-ಕಾಲು-ಕತ್ತು-ಸೊಂಟ-ಮಂಡಿ-ಬೆರಳು ಹೀಗೆ ದೇಹದ ಎಲ್ಲ ಅಂಗಗಳಿಗೂ ಇನ್ಸ್ಟ್ರಕ್ಟರ್ ಸುಭಾಷ್ ವ್ಯಾಯಾಮ ಹೇಳಿ ಕೊಡುತ್ತಿದ್ದ. ಸುಭಾಷ್ ಇದರಲ್ಲಿ ಪಳಗಿದ್ದ. ದಾರಿಯಲ್ಲಿದ್ದ ಪ್ರತಿಯೊಂದು ಮರ-ಗಿಡವನ್ನೂ ಪರಿಚಯ ಮಾಡುತ್ತಿದ್ದ. ಇದು ಮಕ್ಕಳಿಗೆ ಪ್ರಕೃತಿ ಅಧ್ಯಯನದ ಮೊದಲ ಪಾಠವಾಗಿತ್ತು. ಅವನು ಹೇಳುವುದನ್ನು ಮಕ್ಕಳು ತನ್ಮಯತೆಯಿಂದ ಕೇಳುತ್ತಿದ್ದರು. ವ್ಯಾಯಾಮದ ನಂತರ ಶಿಬಿರಾರ್ಥಿಗಳಿಂದ ಕ್ಯಾಂಪಸ್ ಕ್ಲೀನಿಂಗ್ ಕಾರ್ಯಕ್ರಮ. ಟೆಂಟಿನ ಸುತ್ತಮುತ್ತಲ ಆವರಣದಲ್ಲಿದ್ದ ಪೇಪರ್, ಪ್ಲಾಸ್ಟಿಕ್ ಕವರು ಇತ್ಯಾದಿಗಳನ್ನು ಹೆಕ್ಕಿ ತೆಗೆದು ಕಸದ ತೊಟ್ಟಿಯಲ್ಲಿ ಹಾಕಬೇಕಾಗಿತ್ತು. ಇದೆಲ್ಲ ಆದ ನಂತರ ಏಳೂವರೆಗೆ ಬೆಳಗಿನ ತಿಂಡಿ. ಸಾಲಾಗಿ ಪ್ಲೇಟು ಹಿಡಿದು ನಿಂತ ಮಕ್ಕಳಿಗೆ ಬಡಿಸುವುದು ಇನ್ನಿಲ್ಲದ ಆನಂದ ಉಂಟು ಮಾಡುತ್ತಿತ್ತು. ಆ ದಿನ ಹೈಯರ್ ಕ್ಯಾಂಪಿಗೆ ಹೋಗುವ ಮಕ್ಕಳಿಗೆ ಸಿಹಿ ಹಂಚಿ, ಧ್ವಜ ಹಾರಿಸಿ, ’ಸೀ ಆಫ್’ ಮಾಡಿ ಟೆಂಟಿಗೆ ಬಂದಾಗ ಅಸಾವರೀ ಇನ್ನೂ ಎದ್ದಿರಲೇ ಇಲ್ಲ. ಬ್ಲ್ಯಾಂಕೆಟ್ ಪೂರ್ತಿ ಕವುಚಿಕೊಂಡಿದ್ದಳು. ಮುಟ್ಟಿದೆ. ಹೊರಳಾಡಿದಲೇ ಹೊರತು ಏಳುವ ಸೂಚನೆ ಕಾಣಿಸಲಿಲ್ಲ. ’ಅಸಾವರೀ...’ ಮೆಲ್ಲನೆ ಕರೆದೆ. ’ಏಳು ಮರಿ ಹೊತ್ತಾಗಿದೆ, ಮುಖ ತೊಳೆದು ಏನನ್ನಾದರೂ ಹೊಟ್ಟೆಗೆ ತೆಗೆದುಕೋ’ ಎಂದೆ. ಮೆಲ್ಲನೆ ಕಣ್ಣು ತೆರೆದಳು. ’ಆಂಟೀಜಿ, ಈಗ ಸಮಯವೆಷ್ಟು?’ ಕೇಳಿದಳು. ’ಎಂಟೂವರೆಯಾಗಿದೆ’ ಎಂದೆ. ’ಬ್ರಶ್ ಮಾಡಿ ಮುಖ ತೊಳೆದು ಬಾ’ ಎಂದಿದ್ದಕ್ಕೆ ’ಆಂಟೀಜಿ ನೀವೂ ನನ್ನೊಡನೆ ಬರುವಿರಾ...’ ದೈನ್ಯದಿಂದ ಕೇಳಿದಳು. ’ನಡಿ’ ಎನ್ನುತ್ತಾ ಅವಳ ಜೊತೆ ಹೊರಟೆ.
ಅಹಮದಾಬಾದಿನಲ್ಲಿ ಅಸಾವರಿಯ ಅಪ್ಪ, ಅಮ್ಮ ಇಬ್ಬರೂ ವೈದ್ಯರಾಗಿದ್ದರು. ಒಬ್ಬನೇ ಅಣ್ಣ ಪ್ಲಸ್ ಟೂ ಓದುತ್ತಿದ್ದ. ’ಅವನೂ ಇಲ್ಲಿಗೆ ಬರುವವನಿದ್ದ. ಅದೇ ವೇಳೆಗೆ ಚಿಕ್ಕಪ್ಪ ಸ್ವಿಟ್ಜರ್ಲೆಂಡಿನಿಂದ ಬಂದದ್ದರಿಂದ ಅವರ ಜೊತೆ ಹೋದ. ನಾನು ಇಲ್ಲಿಗೆ ಫ್ರೆಂಡ್ಸ್ ಜೊತೆ ಬಂದೆ’ ಎಂದಳು. ತಾನು ಆರನೇ ತರಗತಿಯಲ್ಲಿ ಕಲಿಯುತ್ತಿರುವುದಾಗಿ ಹೇಳಿದಳು. ಅವಳ ಮಾತೂ ಕೂಡ ಕೇಳಲು ಅಷ್ಟೇ ಆಕರ್ಷಕವಾಗಿತ್ತು. ’ನಿನಗೆ ಅಸಾವರೀ ಅಂತ ಯಾರು ಹೆಸರಿಟ್ಟಿದ್ದು? ಹಾಗಂದರೇನು ಅಂತ ಗೊತ್ತಾ?’ ಕೇಳಿದೆ. ’ಗೊತ್ತು ಅದೊಂದು ರಾಗದ ಹೆಸರು. ಮಮ್ಮಿಗೆ ಸಂಗೀತ ತುಂಬ ಇಷ್ಟ. ಅದಕ್ಕೇ ಈ ಹೆಸರಿಟ್ಟರು’. ’ಸಂಗೀತ ನಿನಗೂ ಇಷ್ಟವೇ?’ ’ಹೌದು ಆಂಟೀಜಿ ನಾನು ಕಲಿತಿದೀನಿ, ಹಾಡ್ತೀನಿ’, ಎಂದಳು. ಜ್ವರದಿಂದ ಬಳಲಿದ್ದ ಅವಳ ಮುಖವನ್ನೇ ನೋಡುತ್ತಿದ್ದ ನನಗೆ ಹಾಡು ಎನ್ನಲು ಮನಸ್ಸಾಗಲಿಲ್ಲ.

’ಮೇಡಂ’ ಎಂದು ಯಾರೋ ಕರೆದಂತಾಯಿತು. ಟೆಂಟಿನ ಹೊರಗೆ ಬಂದು ನೋಡಿದೆ. ಮೆಹ್ತಾಜೀ ನಿಂತಿದ್ದರು. ’ಆ ಮಗುವಿನ ಮನೆಗೆ ವಿಷಯ ತಿಳಿಸಿ ಫೋನ್ ಮಾಡಿದ್ದೇನೆ, ಅವರ ತಂದೆ ಬಂದು ಕರೆದೊಯ್ಯುತ್ತಾರೆ. ಅಲ್ಲಿಯ ತನಕ ನಿಮ್ಮ ಸುಪರ್ದಿನಲ್ಲೇ ಇರಲಿ’ ಎಂದರು. ಒಳಗೆ ಬಂದು ಅಸಾವರಿಗೆ ಅವಳ ತಂದೆ ಬರುವ ಸುದ್ದಿ ತಿಳಿಸಿ, ’ನಾಳೆ ನೀನು ಹೊರಡಬೇಕಾಗುತ್ತದೆ’ ಎಂದೆ. ಮುಖ ಸಪ್ಪಗೆ ಮಾಡಿಕೊಂಡಳು.
ಮಾರನೆಯ ದಿನ ಅವಳ ತಂದೆ ಬಂದರು. ಅವರು ಮಗಳನ್ನು ನೋಡಿಕೊಂಡಿದ್ದಕ್ಕೆ ಥ್ಯಾಂಕ್ಸ್ ಹೇಳಿ, ಕೈ ಹಿಡಿದು ಕರೆದೊಯ್ಯುತ್ತಿದ್ದಾಗ ದಿಢೀರನೆ ಬಂದವಳೇ, ’ಆಂಟೀ, ನನಗೆ ನಿಮ್ಮ ವಿಳಾಸ, ಫೋನ್ ನಂಬರ್ ಕೊಡಿ’ ಎಂದು ಕೇಳಿದಳು. ’ಪತ್ರ ಬರಿತೀಯಾ’ ಎಂದೆ, ಅವಳು ಮಾತನಾಡಲಿಲ್ಲ. ಎಷ್ಟೋ ಮಕ್ಕಳು ಊರಿಗೆ ಹೋಗುವಾಗ ಶ್ರಧ್ಧೆಯಿಂದ ಹೀಗೆ ವಿಳಾಸ ಫೋನ್ ನಂಬರ್ ತೆಗೆದುಕೊಳ್ಳುತ್ತಿದ್ದರು. ಆದರೆ ಯಾವತ್ತೋ ಒಂದು ಗ್ರೀಟಿಂಗ್ಸ್ ಕಳಿಸಿದ್ದನ್ನು ಬಿಟ್ಟರೆ ಉಳಿದಂತೆ ನೆನಪೇ ಬರುತ್ತಿರಲಿಲ್ಲ. ಇದೂ ಹಾಗೆಯೇ ಅಂದುಕೊಳ್ಳುತ್ತಲೇ ಅವಳಿಗೆ ನನ್ನ ಫೋನ್ ನಂಬರ್ ಬರೆದುಕೊಟ್ಟೆ. ಅದನ್ನು ಪಡೆದು ತಂದೆಯೊಡನೆ ಅವಳು ಕಾರು ಹತ್ತಿ ಹೋಗುವಾಗ ನನ್ನ ಕಣ್ಣುಗಳು ಅವಳನ್ನೇ ಹಿಂಬಾಲಿಸಿದವು.
ಇದಾದ ಮೂರು ವರ್ಷಗಳ ನಂತರ ಒಮ್ಮೆ ಇದ್ದಕ್ಕಿದ್ದಂತೆ ನನಗೆ ಅಚ್ಚರಿಯಾಗುವಂತೆ ಅಸಾವರೀ ಫೋನ್ ಮಾಡಿದ್ದಳು. ’ಹೇಗಿದ್ದೀರಿ ಆಂಟೀಜೀ, ನನ್ನ ನೆನಪು ಇದೆಯಾ? ನಾನು ನಿಮ್ಮನ್ನು ಮರೆತಿಲ್ಲ. ನಾನೀಗ ಸ್ವಿಟ್ಜರ್ಲ್ಯಾಂಡಿನಲ್ಲಿ ಚಿಕ್ಕಪ್ಪನ ಮನೆಯಲ್ಲಿ ಓದುತ್ತಿದ್ದೇನೆ. ಮುಂದಿನ ವರ್ಷ ಇಂಡಿಯಾಗೆ ಬಂದಾಗ ಟ್ರೆಕ್ಕಿಂಗ್ ಗೆ ಬರ್ತೀನಿ. ನೀವೂ ಬರುತ್ತೀರಿ ತಾನೆ? ಅಲ್ಲಿ ಭೇಟಿಯಾಗೋಣ. ಬಾಯ್...’ ಎನ್ನುತ್ತಾ ನಾನು ಉತ್ತರಿಸುವುದಕ್ಕೂ ಮುನ್ನ ಫೋನ್ ಇಟ್ಟುಬಿಟ್ಟಿದ್ದಳು. ನಾನು ಒಂದು ಕ್ಷಣ ಸ್ತಂಭಿತಳಾದೆ. ಆದರೆ ನಿಧಾನವಾಗಿ ಟೆಂಟಿನಲ್ಲಿ ಚಿಕನ್ ಪಾಕ್ಸ್ ಆಗಿ ಚಳಿಜ್ವರದಿಂದ ಮುದುರಿ ಮಲಗಿದ್ದ ಅಸಾವರಿಯ ಆಕರ್ಷಕ ಮುಖ ಕಣ್ಣ ಮುಂದೆ ಸುಳಿದಾಡಿತು.