|
|
|
|
|
|
|
|
|
|
ಇದು ಸಂಡೇ ಬಜಾರು ಕೊಳ್ಳುವಾಗ ಹುಶಾರು !
ಇದು ಮಾಯಾನಗರಿ ಬೆಂಗಳೂರಿನಲ್ಲಿರುವ ಇನ್ನೊಂದು ಮಾಯಾ ಬಜಾರು. ಇಲ್ಲಿ ಏನುಂಟು ಏನಿಲ್ಲ?! ಹೊಸದಾಗಿ ಮದುವೆಯಾದಂತ ನವದಂಪತಿಗಳು ಒಂದು ಮನೆ ಮಾಡಿದಾಗ ಈ ಸಂಡೇ ಬಜಾರಿಗೆ ಬಂದು ಒಂದೆರಡು ಗಂಟೆ ಸುತ್ತಾಡಿದರೆ ಸಾಕು. ಆ ಮನೆಗೆ ಬೇಕಾಗುವಂತಹ ಸಕಲ ಸಾಮಾನುಗಳೂ ಇಲ್ಲಿ ಸಿಕ್ಕಿಬಿಡುತ್ತವೆ. ಅದೂ ಮಾರುಕಟ್ಟೆ ಬೆಲೆಗಿಂತಲೂ ಅರ್ಧಕ್ಕಿಂತ ಕಡಿಮೆ ಬೆಲೆಗೆ! ಆದರೆ ಕೊಳ್ಳುವಾಗ ಮಾತ್ರ ಅತ್ಯಂತ ಜಾಗರೂಕತೆಯಿಂದಿರಬೇಕು. ಸ್ವಲ್ಪ ಯಾಮಾರಿದರೂ ಕೊಳ್ಳುವವರಿಗೆ ಮೇಲುಕೋಟೆ ನಾಮವೇ ಗಟ್ಟಿ. ಎಷ್ಟೇ ಹುಷಾರಿನಿಂದಿದ್ದರೂ ಸ್ವಲ್ಪ ಎಚ್ಚರ ತಪ್ಪಿದರೂ ತಲೆಗೆ ಮಕ್ಮಲ್ ಟೋಪಿ ಖಾತರಿ. ಆದರೆ ಈ ಬಜಾರು ಖಾಯಂ ಅಂಗಡಿಗಳಂತಲ್ಲ. ಇದು ತೆರೆದುಕೊಳ್ಳುವುದು ಭಾನುವಾರಗಳಂದು ಮಾತ್ರವೇ. ಬೆಳಿಗ್ಗೆ ೮ ಗಂಟೆಗೆ ಶುರುವಾಗುವ ಈ ಬಜಾರು ಸಂಜೆ ೫ ಗಂಟೆಗೆಲ್ಲಾ ಖಾಲಿಯಾಗಿಬಿಡುತ್ತೆ. ಈ ಸಂಡೇ ಬಜಾರು ತೆರೆದುಕೊಳ್ಳುವುದು ಬೆಂಗಳೂರಿನ ಹೃದಯ ಭಾಗದಲ್ಲಿರುವ ಬಿ ವಿ ಕೆ ಅಯ್ಯಂಗಾರ್ ರಸ್ತೆಯಲ್ಲಿ.
ಬಿ ವಿ ಕೆ ಅಯ್ಯಂಗಾರ್ ರಸ್ತೆ ಬದಿಯಲ್ಲಿ ಸುಮಾರು ಒಂದು ಕಿಲೋಮೀಟರ್ ಉದ್ದಕ್ಕೂ ಫುಟ್ ಪಾತಿನ ಮೇಲೆ ಶುರುವಿಟ್ಟುಕೊಳ್ಳುವ ಈ ಧಿಡೀರ್ ಅಂಗಡಿಗಳಲ್ಲಿ ಎಲ್ಲಾ ವಿಧದ ಎಲೆಕ್ಟ್ರಿಕ್ ಸಾಮಾನುಗಳೂ ಸಿಕ್ಕಿಬಿಡುತ್ತವೆ. ಫ್ರಿಡ್ಜ್, ವಾಷಿಂಗ್ ಮೆಶೀನು, ಫ್ಯಾನು, ಟೀವಿ, ಡಿವಿಡಿ, ಪಾತ್ರೆಗಳು, ಸೀಮೆ ಎಣ್ಣೆ ಸ್ಟವ್, ಗ್ಯಾಸ್ ಸ್ಟವ್, ಗ್ಯಾಸ್ ಸಿಲಿಂಡರುಗಳು, ಕುರ್ಚಿ, ಟೇಬಲ್ಲು, ಸೋಫಾ ಸೆಟ್ಟು, ನೆಲಕ್ಕೆ ಹಾಸುವ ಕಾರ್ಪೆಟ್ ನಿಂದ ಹಿಡಿದು ಗೋಡೆಗೆ ತಗಲಿಹಾಕುವ ಗಡಿಯಾರದವರೆಗೆ ಇಲ್ಲಿ ಮಾರಾಟವಾಗುವಂತಹ ವಸ್ತುಗಳ ಬಗ್ಗೆ ಹೇಳಲು ಹೊರಟರೆ ಅದು ಹನುಮನ ಬಾಲದಂತೆ ಬೆಳೆಯುತ್ತೆ. ಪುರಾತನ ’ಆಂಟಿಕ್’ ವಸ್ತುಗಳಿಂದ ಹಿಡಿದು ಆಧುನಿಕ ಯುಗದಲ್ಲಿ ಬಳಸಲ್ಪಡುವ ಐಟಮ್ ಗಳೆಲ್ಲವೂ ಇಲ್ಲಿ ಲಭ್ಯ. ಆದರೆ ಇಲ್ಲಿ ವ್ಯಾಪಾರ ಮಾಡುವುದೂ ಒಂದು ಕಲೆ. ಚೌಕಾಸಿ ಮಾಡಲು ಅಂಜುವವರು ಇಲ್ಲಿ ಕಾಲಿಡಬಾರದು. ಏಕೆಂದರೆ ಕೇವಲ ೫೦ ರೂಪಾಯಿಯ ವಸ್ತುವನ್ನು ಅದರಲ್ಲಿರದ ಗುಣವಿಶೇಷ ವನ್ನೆಲ್ಲಾ ಬಣ್ಣಿಸಿ ೫೦೦ ರೂಗಳಿಗೆ ತಗಲಾಕಿಬಿಡುವಷ್ಟು ನಿಸ್ಸೀಮರು ಇಲ್ಲಿಯ ವ್ಯಾಪಾರಿಗಳು.
ಹಿಂದೆಂದೋ ನಿಮ್ಮ ಮನೆಯಲ್ಲೇ ಕಳುವಾಗಿದ್ದ ವಸ್ತುಗಳೂ ನಿಮಗಿಲ್ಲಿ ಸಿಗಲೂಬಹುದು. ಆದರೆ ಅದಕ್ಕೆ ಮತ್ತೆ ಹಣತೆತ್ತು ಕೊಳ್ಳಬೇಕಷ್ಟೆ. ಕೆಲವು ಆಂಟಿಕ್ ವಸ್ತುಗಳನ್ನು ಮಾರುವವರು ಈ ಬಜಾರಿಗೆ ಬಂದು ಇಲ್ಲಿಯ ಫುಟ್ ಪಾತ್ ಮೇಲಿನ ಹಳೆಯ ವಸ್ತುಗಳನ್ನು ತೆಗೆದುಕೊಂಡುಹೋಗಿ ಅವಕ್ಕೆ ಆಂಟಿಕ್ ರೂಪ ಕೊಡುವ ಪಾಲಿಶ್ ಹಾಕಿ ಯಾವುದೋ ಪುರಾತನ ಅರಸನ ಕಾಲದ್ದೆಂದು ಹೇಳಿ ಮಾರಾಟ ಮಾಡುವುದೂ ಉಂಟು. ಭಾನುವಾರದ ರಜಾ ದಿನವನ್ನು ಕಳೆಯಲು ಇಲ್ಲಿ ಜನಜಾತ್ರೆಯೇ ಸೇರಿರುತ್ತದೆ. ಬೆಂಗಳೂರಿನ ಬಹುತೇಕ ಪಿಕ್ ಪಾಕೆಟ್ ಕಳ್ಳರಂತೂ ಭಾನುವಾರದಂದು ಬಸ್ಸುಗಳಲ್ಲಿ ಜನರಿರದ ಕಾರಣ ಈ ಸಂಡೇ ಬಜಾರಿನಲ್ಲಿ ಜಮಾಯಿಸಿರುತ್ತಾರೆ. ಅವರಲ್ಲೂ ಹಲವು ತಂಡಗಳಿರುವುದರಿಂದ ಒಂದು ಫರ್ಲಾಂಗಿಗೆ ಒಂದು ತಂಡವೆಂದು ಮುಂಚೆಯೇ ಟೆರಿಟರಿ ಹಂಚಿಕೊಂಡಿರುತ್ತಾರೆ. ಅವರ ಗಡಿ ಬಿಟ್ಟು ಬೇರೆಯವರ ಗಡಿಗೆ ಬಂದು ಕದಿಯುವಂತಿಲ್ಲ. ಇವರು ಕದಿಯುವ ಹಣದಲ್ಲಿ ಪೋಲೀಸಿನವರಿಗೂ ಪಾಲಿರುವುದರಿಂದ ಪೋಲೀಸರೇ ಇವರಿಗೆ ಇಂಥಾ ಜಾಗವೆಂದು ನಿಗದಿ ಪಡಿಸುತ್ತಾರಂತೆ. ಏಕೆಂದರೆ ಹಣ ಕಳೆದುಕೊಂಡವರು ಇಂಥಾ ಜಾಗದಲ್ಲೇ ಕಳುವಾಯಿತೆಂದು ದೂರು ನೀಡಿದಾಗ ಪೋಲೀಸರಿಗೆ ಯಾವ ತಂಡ ಎಷ್ಟು ಹಣ ಕದ್ದಿದೆಯೆಂಬುದರ ಕರಾರು ಲೆಕ್ಕ ಸಿಕ್ಕಿಬಿಡುವುದರಿಂದ ಕಳ್ಳರು ಸುಳ್ಳು ಲೆಕ್ಕ ಕೊಡುವಂತಿಲ್ಲ. ಇದರಿಂದ ಪೋಲೀಸರಿಗೂ ಅವರ ಪಾಲು ಸರಿಯಾಗಿ ಪಡೆಯಲು ಸಾದ್ಯವಂತೆ. ಒಟ್ಟಾರೆ ಮೈ ಮೇಲೆ ಎಚ್ಚರ ತಪ್ಪದ, ಚೌಕಾಸಿ ಮಾಡುವಲ್ಲಿ ಪರಿಣಿತರಾದ ಜನ ಮಾತ್ರವೇ ಕಾಲಿಡಬಹುದಾದ ಜಾಗ ಈ ಸಂಡೇಬಜಾರು. | |
|
|
|
| |
| |
|
|
|
|
|
|
ಈ ದಿನನಿತ್ಯದ ವಿಷಾಭಿಶೇಕವನ್ನು ನಿಲ್ಲಿಸುವುದು ಹೇಗೆ?
ಜಿಸೆಲ್, ಕರೀನಾ ಕಪೂರ್, ಐಶ್ವರ್ಯಾ ರೈ ಟಿವಿ ಜಾಹೀರಾತುಗಳಲ್ಲಿ ಬಂದು ಬಂದು ಇದು ಚಂದ...ಅದು ಚಂದ ಎಂದು ತಮಗೆ ಹಣ ಕೋಟಿಗಟ್ಟಲೆ ಕೊಡುವ ಶಾಂಪೂ-ಸೋಪುಗಳಿಗೆ ಸುಂದರ ಪ್ರಚಾರ ಕೊಟ್ಟು ಹೋಗುತ್ತಾರೆ. ನಾವು ನೋಡುತ್ತೇವೆ. ಅವುಗಳನ್ನು ಕೊಂಡು ತರುತ್ತೇನೆ. ಅವರಷ್ಟೇ ನಾಜೂಕಿನಿಂದ ನಾವೂ ತಲೆ ಮೈಗೆ ಸವರಿ ಉಜ್ಜಿಕೊಳ್ಳುತ್ತೇವೆ...
ಆದರೆ ಈ ಅಸಂಖ್ಯಾತ ಶಾಂಪೂ, ದೇಹ ತೊಳೆಯಲು ಬಳಸುವ ಸುಗಂಧಿತ ಸೋಪ್ ಮಿಶ್ರಣ, ಮುಖಕ್ಕೆ ಬಳಸುವ ಕ್ಲೆನ್ಸರ್ ಗಳಲ್ಲಿ ಕಂಡು ಬರುವ ಕೋಕಮೈಡ್ ಡಿಎಥನೋಲಮೈನ್ (Cocamide diethanolamine/cocamide DEA) ಚರ್ಮದ ಕ್ಯಾನ್ಸರ್ ನ ಸಾಧ್ಯತೆಯನ್ನು ಹೆಚ್ಚಿಸುವ ರಾಸಾಯನಿಕವೆಂದು ಸಾಬೀತು ಪಡಿಸಲಾಗಿದೆ! ಕೋಕಮೈಡ್ ಡಿಎಥನೋಲಮೈನ್ ಅನ್ನು ಶ್ಯಾಂಪೂ, ಕ್ಲೆನ್ಸರ್ ಇನ್ನಿತರ ಲಿಕ್ವಿಡ್ ಸೋಪ್ಗಳ ಸಾಂದ್ರತೆ ಅಥವಾ consistency ಯನ್ನು ಗಟ್ಟಿಯಾಗಿರಿಸಲು ಬಳಸುತ್ತಾರೆ. ನಿಮ್ಮ ಹಸ್ತಕ್ಕೆ ಸುರಿದುಕೊಳ್ಳುವ ಶಾಂಪು, ಕ್ಲೆನ್ಸರ್ ಅಥವಾ ಬಾಡಿ ವಾಶ್ ತಕ್ಷಣ ಕೆಳಗೆ ಜಾರಿಹೋಗದೆ ಮಂದವಾಗಿ ನಿಮ್ಮ ಕೈಗೆ ಕ್ರೀಂ ನಂತೆ ಅಂಟಿಕೊಳ್ಳುವಂತೆ ಮಾಡುವುದಷ್ಟೇ ಈ ರಾಸಾಯನಿಕದ ಕೆಲಸ.
ಸಾಬೂನಿನ ಉತ್ಪನ್ನಗಳು ತೆಳುವಾಗಿ, ನೀರಿನಂತಿರದೇ ಮಂದವಾಗಿದ್ದರೆ ಗ್ರಾಹಕರಿಗೆ ಹೆಚ್ಚು ಇಷ್ಟವಾಗುತ್ತದೆ ಎಂದು ನಂಬಿರುವ ಉತ್ಪಾದಕರು ಇದರ ಯಥೇಚ್ಚ ಉಪಯೋಗ ಮಾಡುತ್ತಾರೆ. ಡಿಎಥನೋಲಮೈನ್ ರಾಸಾಯನಿಕವನ್ನು ತೆಂಗಿನಎಣ್ಣೆಯ ಜೊತೆಗೆ ಬೆರೆಸಿ ತಯಾರಿಸಲಾಗುವ ಕೋಕಮೈಡ್ ಡಿಎಥನೋಲಮೈನ್, ತಯಾರಾಗುವ ಪ್ರಕ್ರಿಯೆಯಲ್ಲಿ ತೆಂಗಿನೆಣ್ಣೆಯ ಉಪಯುಕ್ತ ಗುಣಗಳನ್ನೂ ನಾಶ ಮಾಡಿಬಿಟ್ಟಿರುತ್ತದೆ. ಚರ್ಮಕ್ಕೆ ಅಥವಾ ಕೂದಲಿಗೆ ಇದರ ಉಪಯೋಗ ಸಂಪೂರ್ಣ ಸೊನ್ನೆ. ಇದು ಶಾಂಪೂ ಅಥವಾ ಬಾಡಿವಾಶ್ ನ ಇತರ ರಾಸಾಯನಿಕಗಳನ್ನು ಒಟ್ಟಿಗೆ ಹಿಡಿದಿಡುವ ಗೋಂದಿನಂತೆ ಮಾತ್ರ ಕೆಲಸ ಮಾಡುತ್ತದೆ.
ಕೊಳ್ಳುವ ಮುನ್ನ ಒಮ್ಮೆ ಪರೀಕ್ಷಿಸಿ ನೋಡಿ...ಲೌರಮೈಡ್ ಡಿಎಥನೋಲಮೈನ್, ಕೋಕೋ ಡಿಎಥನೋಲಮೈನ್, ಕೋಕನಟ್ ಆಯಿಲ್ ಅಮೈಡ್ ಆಫ್ ಡಿಎಥನೋಲಮೈನ್, ಲೌರಮೈಡ್ ಡಿ ಇ ಎ, ಲೌರಿಸ್ ಡಿಎಥನೋಲಮೈಡ್, ಲೌರೊಯ್ಲ್ ಡಿಎಥನೋಲಮೈಡ್ ಮತ್ತು ಲೌರಿಲ್ ಡಿಎಥನೋಲಮೈಡ್ ಎಂಬೆಲ್ಲಾ ಭಿನ್ನ ಹೆಸರಿನಲ್ಲಿ ಕೊಕಮೈಡ್ ಡಿಎಥನೋಲಮೈನ್ ಅನ್ನು ಉತ್ಪನ್ನಗಳ ಪ್ಯಾಕಿಂಗ್ ಮೇಲೆ ನಮೂದಿಸಿರುತ್ತಾರೆ.
ಈ ಡಿಎಥನೋಲಮೈನ್ ಸೌಂದರ್ಯ ಪ್ರಸಾದನ ಅಥವಾ ಲಿಕ್ವಿಡ್ ಸಾಬೂನು ಗಳಲ್ಲಿ ಸಾಧಾರಣವಾಗಿ ಬಳಕೆಯಾಗುವ ಇತರೆ ಅಮೈನ್ ಗಳ ಜೊತೆ ಸೇರಿ ನೈಟ್ರೋಸೋಡಿಎಥನೋಲಮೈನ್ ಅನ್ನು ಹುಟ್ಟಿಸುತ್ತವಂತೆ. ನೈಟ್ರೋಸೋಡಿಎಥನೋಲಮೈನ್ ಗಳು ಕ್ಯಾನ್ಸರ್ ಬೆಳವಣಿಗೆಗೆ ಅತ್ಯಂತ ಪೂರಕ ರಾಸಾಯನಿಕ ಎನ್ನಲಾಗಿದೆ. ಗರ್ಭಿಣಿ ಮಹಿಳೆಯರು ಈ ರೀತಿಯ ಉತ್ಪನ್ನಗಳನ್ನು ಹೆಚ್ಚು ಉಪಯೋಗಿಸಿವುದರಿಂದ ಗರ್ಭದಲ್ಲಿನ ಶಿಶುವಿನ ಮಿದುಳಿನ ಆರೋಗ್ಯ ಪೂರ್ಣ ಬೆಳವಣಿಗೆಗೆ ಅನಾನುಕೂಲ ಮಾಡುತ್ತವೆ ಎಂದು ಪ್ರಯೋಗಗಳು, ಅಧ್ಯಯನಗಳು ದೃಢಪಡಿಸಿವೆ. ಅದಷ್ಟೇ ಅಲ್ಲದೆ ಇವುಗಳ ಅತಿಯಾದ ಬಳಕೆ ಗರ್ಭಪಾತಕ್ಕೂ ಎಡೆಮಾಡಿಕೊಡುತ್ತದೆ ಎನ್ನಲಾಗಿದೆ!
ಶಾಂಪೂ ಗೀಂಪೂ ಕೈ ಬಿಟ್ಟೂ ಕಡಲೆ ಹಿಟ್ಟು, ಅಂಟುವಾಳ, ಸೀಗೆಕಾಯಿ ಪುಡಿ, ಚಿಗರೆ ಪುಡಿಗಳ ಮೊರೆ ಹೋಗುವುದೇ ವಾಸಿ ಎನ್ನಿಸುತ್ತಿದೆ!
| |
|
|
|
| |
| | |
|
|
|
|
|
|
|