ಅಂಗಳ      ಹಾಡು ಹಕ್ಕಿ
Print this pageAdd to Favorite

ಡಿಸ್ನಿಲ್ಯಾಂಡಲ್ಲಿ ರಾಜೇಗೌಡ್ರ ದೀರ್ಘದಂಡ ನಮಸ್ಕಾರವೂ...
ಲಿಡೋ ಶೋ ನಲ್ಲಿ ಗುರುಬಸವಯ್ಯನವರ ಗೊರಕೆಯೂ...

ಟೋನಿ

ಪ್ಯಾರಿಸ್ಸಿನಲ್ಲಿ ಒಂದಷ್ಟು ಹೊತ್ತು ಸುತ್ತಾಡಿದ ನಂತರ ಡಿಸ್ನಿ ಲ್ಯಾಂಡಿಗೆ ಹೊತ್ತಾಗುತ್ತದೆಂದು ಜ್ಯೂಜ಼ರ್ ನಮ್ಮನ್ನೆಲ್ಲಾ ಹುಡುಕಿ ಹುಡುಕಿ ಬಸ್ಸಿಗೆ ಹತ್ತಿಸುವುದರಲ್ಲಿ ಹೈರಾಣಾಗಿದ್ದ. ಡಿಸ್ನಿ ಲ್ಯಾಂಡಿಗೆ ಬರಲು ಒಪ್ಪಿದ್ದವರಿಂದ ಹಿಂದಿನದಿನವೇ ಆತ ೭೦ ಯೂರೋ ಹಣ ಪಡೆದಿದ್ದ. ಡಿಸ್ನಿ ಲ್ಯಾಂಡಿಗೆ ಹೊರಡುವ ಮುಂಚೆ ಮತ್ತೊಂದು ಸಮಸ್ಯೆ ಎದುರಾಯಿತು. ಅಲ್ಲಿಗೆ ಹೋಗುವುದು ಕಡ್ಡಾಯವಾಗಿರದೆ ಅವರವರ ಇಚ್ಚೆಗೆ ಬಿಟ್ಟದ್ದಾಗಿತ್ತು. ಪ್ಯಾರಿಸ್ ನಗರ ಪ್ರದಕ್ಷಿಣೆಯ ನಂತರ ಡಿಸ್ನಿ ಲ್ಯಾಂಡಿಗೆ ಬಾರದಿರುವವರನ್ನು ಇಲ್ಲಿಯೇ ಇಳಿಸುವುದಾಗಿಯೂ, ಅವರು ರೂಮಿಗೆ ಅಥವಾ ತಮಗೆ ಇಷ್ಟ ಬಂದ ಕಡೆ ಅಡ್ಡಾಡಿ ಸಂಜೆ ತಾನು ಹೇಳಿದ ಜಾಗದಲ್ಲಿ ಇರಬೇಕೆಂದೂ ಜ್ಯೂಜ಼ರ್ ಹೇಳಿದ. ಆದರೆ ಡಿಸ್ನಿಗೆ ಬಾರದಿದ್ದ ಕೆಲವರು ನಮ್ಮನ್ನು ರೂಮಿಗೆ ಬಿಟ್ಟು ಹೋಗಬೇಕೆಂದು ತಗಾದೆ ತೆಗೆದರು. ಪ್ಯಾರಿಸ್ ನಗರದಿಂದ ನಾವು ಉಳಿದುಕೊಂಡಿದ್ದ ಹೋಟೆಲ್ ಸುಮಾರು ೪೦ ಕಿ.ಮೀ. ದೂರದಲ್ಲಿತ್ತು. ಅಲ್ಲಿಗೆ ಹೋಗಿ ಮತ್ತೆ ಹಿಂದಿರುಗಲು ಕಡಿಮೆಯೆಂದರೂ ಒಂದೂವರೆ ಗಂಟೆ ಸಮಯ ಹಿಡಿಯುತ್ತಿತ್ತು. ಅವರನ್ನು ರೂಮಿಗೆ ಕರೆದುಕೊಂಡು ಹೋಗಲು ಜ್ಯೂಜ಼ರ್ ಸುತರಾಂ ಒಪ್ಪದೆ ನಿಮ್ಮಿಂದಾಗಿ ಡಿಸ್ನಿ ಲ್ಯಾಂಡಿಗೆ ಹೋಗುವವರಿಗೆ ತಡವಾಗುವುದರಿಂದ ಅವರ ಹಣ ದಂಡವಾಗುತ್ತದೆಂದ. ೭೦ ಯೂರೋ ಅಂದರೆ ಸುಮಾರು ೪೫೦೦ ರುಪಾಯಿಗಳನ್ನು ನಿನ್ನೆಯೇ ಕೊಟ್ಟಿದ್ದರಿಂದ ನಮ್ಮಲ್ಲಿದ್ದ ಕೆಲವರು ಅವನ ಮಾತು ಕೇಳಿ ಗಾಬರಿಯಾಗಿ ಅವನ ಪರವಾಗಿ ನಿಂತು ಇಲ್ಲಿಯೇ ಇಳಿಯುವಂತೆ ಡಿಸ್ನಿ ಲ್ಯಾಂಡಿಗೆ ಬಾರದಿರುವವರನ್ನು ಒತ್ತಾಯಿಸತೊಡಗಿದರು. ಆಗ ಕೆಲವರು ’ಲಾ’ ಪಾಯಿಂಟನ್ನೂ ಮುಂದಿಟ್ಟು ವಾದಿಸಲು ಮುಂದಾಗಿದ್ದರಿಂದ ಇದ್ಯಾಕೋ ಸದ್ಯಕ್ಕೆ ಬಗೆಹರಿಯುವ ಲಕ್ಷಣಗಳು ಕಾಣದೆ ’ಲಾ’ ಪಾಯಿಂಟುಗಳ ಜಂಗೀ ಕುಸ್ತಿಗೆ ಅಖಾಡ ಸಿದ್ದವಾಗುತ್ತಿದೆಯೆನಿಸಿತು. ಕೂಡಲೇ ಕೆಲವರ ತಲೆಗೊಂದು ಐಡಿಯಾ ಹೊಳೆದು ಡಿಸ್ನಿಲ್ಯಾಂಡಿಗೆ ಬಾರದಿರುವವರನ್ನೂ ಬಸ್ಸಿನಲ್ಲೇ ಕರೆದುಕೊಂಡು ಹೋಗುವಂತೆಯೂ ಅವರು ಅಲ್ಲಿಯೇ ಬೇರೆಡೆ ಸುತ್ತಾಡಿ ನಾವು ಹೊರಡುವ ವೇಳೆಗೆ ಅವರನ್ನೂ ಕರೆದುಕೊಂಡು ಬರುವ ಬಗ್ಗೆ ನೀಡಿದ್ದ ಸಲಹೆ ಎಲ್ಲರಿಗೂ ಒಪ್ಪಿಗೆಯಾಗಿ ನಮ್ಮ ಪ್ರಯಾಣ ಸರಾಗವಾಗಿತ್ತು.

ಡಿಸ್ನಿ ಲ್ಯಾಂಡಿನಲ್ಲಿ ಜನವೋ ಜನ. ಭಾನುವಾರವಾದ್ದರಿಂದ ಇಡೀ ಡಿಸ್ನಿ ಲ್ಯಾಂಡ್ ಜನದಟ್ಟಣಿಯಿಂದ ಕೂಡಿತ್ತು. ಅಲ್ಲಿ ಎರಡು ವಿಭಾಗಗಳಿದ್ದವು ಒಂದು ಡಿಸ್ನಿಪಾರ್ಕ್ ಮತ್ತೊಂದು ಡಿಸ್ನಿ ಸ್ಟುಡಿಯೋ ನಾವು ನೀಡಿದ್ದ ಹಣಕ್ಕೆ ಯಾವುದಾದರೊಂದು ವಿಭಾಗವನ್ನು ಆಯ್ಕೆ ಮಾಡಿಕೊಳ್ಳಬೇಕಿತ್ತು. ಎಲ್ಲಿಗೆ ಹೋಗಬೇಕೆಂದು ನಮ್ಮಲ್ಲೇ ಚರ್ಚೆ ಮಾಡಿ ಒಮ್ಮತಕ್ಕೆ ಬಾರದ್ದರಿಂದ ಕೊನೆಗೆ ಜ್ಯೂಜ಼ರ್ ನನ್ನೇ ಕೇಳಿದಾಗ ಆತ ಡಿಸ್ನಿ ಪಾರ್ಕ್ ಯುವ ಪ್ರೇಮಿಗಳಿಗೆಂದೂ ನೀವುಗಳು ಸ್ಟುಡಿಯೋ ನೋಡುವುದೇ ಸೂಕ್ತವೆಂದೂ ಅಲ್ಲಿ ನಿಮಗೆ ಅದ್ಭುತವಾದ ಅನುಭವ ಆಗುತ್ತದೆಂದೂ ಸೂಚಿಸಿದ. ನಮ್ಮೊಟ್ಟಿಗೆ ಕೆಲವು ಯುವಜೋಡಿಗಳೂ ಬಂದಿದ್ದರಿಂದ ಆ ಅಮರಪ್ರೇಮಿಗಳು ಪಾರ್ಕಿನೆಡೆ ನುಗ್ಗಿದ್ದರು. ನಾವು ಅದ್ಭುತವಾದ ಅನುಭವ ಪಡೆಯಲು ಸ್ಟುಡಿಯೋದತ್ತ ನುಗ್ಗಿದೆವು. ಇಡೀ ಡಿಸ್ನಿ ಸ್ಟುಡಿಯೋ ನಮ್ಮಕಡೆಯ ಫ಼ಿಷ್ ಮಾರ್ಕೆಟ್ಟಿನಂತೆ ಗಿಜಿಗಿಡತೊಡಗಿತ್ತು. ಎತ್ತ ನೋಡಿದರೂ ಥರಾವರಿ ಜನವೋ ಜನ. ಮೊದಲು ಸ್ಟಂಟ್ ಕಾರ್ಯಕ್ರಮ ನೋಡಲು ಫ಼ರ್ಲಾಂಗ್ ಉದ್ದದ ಕ್ಯೂ ನಲ್ಲಿ ನಿಂತೆವು. ಹಾಲಿವುಡ್ ಸಿನಿಮಾದಲ್ಲಿ ಕಂಡು ಬರುವ ಕಾರ್ ಚೇಸಿಂಗ್ ದ್ರಶ್ಯದ ಸಾಹಸವನ್ನು ಮಾಡಿ ತೋರಿಸಿದ್ದಂತೂ ಮೈ ನವಿರೇಳಿಸಿತ್ತು. ವಿಶಾಲ ಸ್ಟೇಡಿಯಂ ನಲ್ಲಿ ನಡೆದ ಅರ್ಧ ಗಂಟೆಯ ಆ ಕಾರ್ಯಕ್ರಮದಲ್ಲಿ ನುರಿತ ಚಾಲಕರ ಸ್ಟಂಟ್ ನಮ್ಮನ್ನು ಗಾಬರಿಗೊಳಿಸಿತ್ತು. ಅದನ್ನು ಕಂಡ ನಮ್ಮೊಡನಿದ್ದ ಬಂಗಾಳಿ ಅರಬಿಂದೋ ರಾಯ್ ಪುಳಕಿತರಾಗಿ ’ಹಮಾರ ಪೈಸಾ ವಸೂಲ್ ಹೋಗಯಾ’ ಎಂದು ಉದ್ಗಾರ ತೆಗೆದಿದ್ದರು. ಇನ್ನೂ ನೋಡಬಹುದಾದ ಅನೇಕ ಕಾರ್ಯಕ್ರಮಗಳಿದ್ದರಿಂದ ನಾವುಗಳೆಲ್ಲಾ ಅವಸರದಿಂದಲೇ ಹೊರಟೆವು. ಅಲ್ಲಿ ಎತ್ತ ನೋಡಿದರೂ ಉದ್ದನೆಯ ಕ್ಯೂ ಇತ್ತು. ಸಾಲಿನಲ್ಲಿ ನಿಂತಿದ್ದ ಬಹುತೇಕರು ಚುಂಬಿಸುವುದರಲ್ಲೇ ನಿರತರಾಗಿದ್ದರು. ಪ್ಯಾರಿಸ್ ನಗರದಲ್ಲಿ ಟ್ರಾಫ಼ಿಕ್ ಸಿಗ್ನಲ್ ಗಳಲ್ಲಿ ಎಲ್ಲೋ ಒಂದೆರಡು ಜೋಡಿಗಳು ಮುತ್ತಿಡುವುದನ್ನು ನೋಡಿದ್ದ ನಮಗೆ ಈ ಡಿಸ್ನಿಲ್ಯಾಂಡ್ ನಲ್ಲಿ ಹೋಲ್ ಸೇಲ್ ಆಗಿ ಚುಂಬಿಸುತ್ತಿರುವವರೇ ಕಂಡು ಬಂದರು. ಆಫ್ರಿಕಾದ ಹುಡುಗನೊಬ್ಬ ಯೂರೋಪಿಯನ್ ಹುಡುಗಿಯನ್ನು ತಬ್ಬಿಕೊಂಡಿದ್ದನ್ನು ಕಂಡ ರಾಜೇಗೌಡ್ರು ’ಇದೇನ್ರೀ ಇಷ್ಟು ಚಂದಕ್ಕಿರೋ ಹುಡ್ಗಿ ಆ ಕರಿಯನನ್ನ ಹಿಡ್ಕಂಡೌಳಲ್ಲಾ’ ಎಂದರು. ರಾಜೇಗೌಡ್ರ ಬಣ್ಣವೂ ಹೆಚ್ಚು ಕಡಿಮೆ ಯೂರೋಪಿಯನ್ನರ ಬಣ್ಣದಂತೆಯೇ ಇದ್ದುದರಿಂದ ’ನೀವೂ ಚಡ್ಡಿ ಬನಿಯನ್ ಹಾಕ್ಕಂಡಿದ್ದರೆ ನಿಮ್ಮನ್ನೂ ಯಾವಳಾದ್ರೂ ತಬ್ಕಂತಿದ್ದಳು’ ಎಂದು ರೇಗಿಸಿದ್ದಕ್ಕೆ ಪುಳಕಿತರಾಗಿ ’ನಿಜ ಕಣ್ರೀ ನಿಜ ಕಣ್ರೀ’ ಅಂದರು.
 
ಅದೇಕೋ ನಮ್ಮೊಟ್ಟಿಗೇ ನಡೆದು ಬರುತ್ತಿದ್ದ ರಾಜೇಗೌಡರು ನಮ್ಮಿಂದ ಹಿಂದೆ ಸರಿದಿದ್ದರು ಒಂದೆರಡು ಹೆಜ್ಜೆ ಮುಂದಿಟ್ಟ ನಾವು ಹಿಂದಿರುಗಿ ನೋಡಿದರೆ ನಮಗೆ ಪರಮಾಶ್ಚರ್ಯವಾಗಿತ್ತು. ಇದ್ದಕ್ಕಿದ್ದಂತೆ ರಾಜೇಗೌಡರು ದೀರ್ಘದಂಡ ನಮಸ್ಕಾರ ಮಾಡುವವರಂತೆ ಉದ್ದುದ್ದಕ್ಕೆ ಮಲಗಿದ್ದರು. ನಮಗೆ ಗಾಬರಿಯಾಗಿ ಅವರನ್ನು ಮೇಲೆತ್ತಿ ಇದ್ಯಾಕೆ ಹಿಂಗೆ ಎಂದದಕ್ಕೆ ಅವರು ನಗುನಗುತ್ತಲೇ ಅದೇನೋ ಗೊತ್ತಿಲ್ಲ ಧಿಡೀರನೇ ಯಡವಿ ಬಿದ್ದುದಾಗಿ ಹೇಳಿದರು. ಅಲ್ಲಿ ಯಾವುದಕ್ಕೆ ಸಿಕ್ಕಿ ಯಡವಿರಬಹುದೆಂದು ನಾವೆಲ್ಲಾ ಸುತ್ತಾ ಮುತ್ತಾ ಹುಡುಕಾಡಿದರೂ ಕಾರಣ ಗೋಚರಿಸಲಿಲ್ಲ. ಅದೂ ಅವರು ಬಿದ್ದಿದ್ದು ಯಾವ ರೀತಿ ಇತ್ತೆಂದರೆ ಪಕ್ಕಾ ಆಸ್ತಿಕರು ಹರಕೆ ಕಟ್ಟಿಕೊಂಡು ಉರುಳು ಸೇವೆ ಮಾಡುತ್ತಾರಲ್ಲ ಹಾಗೆ ಎರಡೂ ಕೈಗಳನ್ನೂ ಉದ್ದಕ್ಕೆ ಚಾಚಿ ಮಕಾಡೆ ಮಲಗಿದ್ದರು. ಅವರೇನಾದರೂ ಎಡಕ್ಕೋ, ಬಲಕ್ಕೋ ಒಂದೆರಡು ಸುತ್ತು ಉರುಳಿದ್ದಲ್ಲಿ ಅದು ಉರುಳುಸೇವೆಯೇ ಎಂಬುದರಲ್ಲಿ ಅನುಮಾನವಿರಲಿಲ್ಲ. ಸದ್ಯ ಹಾಗೆ ಉದ್ದುದ್ದ ಬಿದ್ದರೂ ಅವರಿಗೆ ಯಾವುದೇ ಅಪಾಯವಾಗಿರದ ಕಾರಣ ನಮಗೆ ಸಮಾಧಾನವಾಗಿತ್ತು. ಹಾಗೆ ಧಿಡೀರನೇ ಬೀಳಲು ಅವರಿಗೇ ಕಾರಣ ಗೊತ್ತಿಲ್ಲದಿದ್ದುದರಿಂದ ಇನ್ನು ನಾವುಗಳು ಅದಕ್ಕೆ ಕಾರಣ ಹುಡುಕಿಕೊಂಡು ಕೂರುವುದು ಯಾವ ಪ್ರಯೋಜನಕ್ಕೂ ಬಾರದ್ದರಿಂದ, ಅಲ್ಲದೆ ಅದರಿಂದ ನಮ್ಮ ಅಮೂಲ್ಯ ಸಮಯವೂ ವ್ಯರ್ಥವಾಗುತ್ತಿದ್ದರಿಂದ ಅವರನ್ನೆಬ್ಬಿಸಿಕೊಂಡು ಹೊರಟೆವು. ಮುಂದಿನ ಕಾರ್ಯಕ್ರಮಕ್ಕೆ ಕ್ಯೂ ನಿಂತಾಗ ’ಅಲ್ಲಾ ಸಾರ್ ಯಾಕೆ ಹಾಗೆ ಬಿದ್ದೆನೆಂಬುದೇ ಗೊತ್ತಿಲ್ಲಾ ಅಂತೀರಾ...ಈ ಜನ ಹೋಲ್ ಸೇಲ್ ಆಗಿ ಮುತ್ತಿಡುವುದನ್ನು ಕಂಡು ತಲೆ ಸುತ್ತೇನಾದ್ರು ಬಿದ್ರಾ...’ ಎಂದು ಕಿಚಾಯಿಸಿದೆ.
 
ವೇಗವಾಗಿ ಹೋಗುವ ಪುಟಾಣಿ ರೈಲಿನಲ್ಲಿ ಕೂರಲು ಕ್ಯೂ ನಿಂತಿದ್ದಾಗ ಅದು ಸಿಕ್ಕಾಪಟ್ಟೆ ಸ್ಪೀಡಾಗಿ ಹೋಗುತ್ತದೆಂದು ಅದರಲ್ಲಿಂದ ಇಳಿವವರ ಮುಖಭಾವದಲ್ಲೇ ನಮಗರ್ಥವಾಗಿತ್ತು. ಸಖತ್ ಮಜವಾಗಿರುತ್ತದೆಂದು ಜತೇಲಿದ್ದ ಪ್ರೊಫ಼ೆಸರರಿಗೆ ಹೇಳಿದ್ದಕ್ಕೆ ಅವರು ರೈಲಿನೊಳಕ್ಕೆ ಹತ್ತುವಾಗ ಕೊಂಚ ಜರ್ಕ್ ಹೊಡೆದು ಹತ್ತುವುದೋ ಬೇಡವೋ ಎಂಬಂತೆ ನನ್ನ ಮುಖ ನೋಡಿದರು. ಅವರ ಕೈ ಹಿಡಿದುಕೊಂಡು ಒಳಕ್ಕೆ ನುಗ್ಗಿದೆ. ಅತ್ಯಂತ ವೇಗವಾಗಿ ಗರಗರನೆ ಸುತ್ತುತ್ತಿದ್ದಾಗ ’ಸಖತ್ ಆಗಿದೆಯಲ್ಲವೇ’ ಎಂದು ಗುರುಬಸವಯ್ಯನವರ ಮುಖ ನೋಡಿದರೆ ಅವರು ಅವಡುಗಚ್ಚಿಕೊಂಡು ಮೈನೆಲ್ಲಾ ಬಿಗಿ ಮಾಡಿ ಕಣ್ಣುಮುಚ್ಚಿ ಕೂತು ಬಿಟ್ಟಿದ್ದರು. ನಿಂತ ಕೂಡಲೇ ಉಸ್ಸಪ್ಪಾ ಎಂದುಕೊಳ್ಳುತ್ತಾ ಬೇಗ ಕೆಳಗಿಳಿಯದಿದ್ದರೆ ಎಲ್ಲಿ ಮತ್ತೊಂದು ಸುತ್ತು ಹೊಡೆಸುತ್ತಾರೋ ಎಂಬ ಗಾಬರಿಯಿಂದ ಕೆಳಗಿಳಿದಿದ್ದರು.
 
ಅಲ್ಲಿಂದ ಟವರ್ ಆಫ಼್ ಟೆರರ್ ಎಂದು ಬರೆದಿದ್ದಲ್ಲಿನ ಜಾಗಕ್ಕೆ ಹೋದೆವು. ಅಲ್ಲಿಯೂ ಉದ್ದನೆಯ ಕ್ಯೂ ಇತ್ತು. ಆ ಕಟ್ಟಡದೊಳಗೆ ಹಳೆಯ ಹಾಲಿವುಡ್ ಹಾರರ್ ಚಿತ್ರದ ಸೆಟ್ ಅನ್ನು ಹಾಗೇ ಉಳಿಸಿಕೊಂಡಿದ್ದರು. ಅದೇನು ಕಾರ್ಯಕ್ರಮವೆಂದು ಅದನ್ನು ನೋಡಿ ಬರುತ್ತಿದ್ದ ಕೆಲವರನ್ನು ಕೇಳಿದಾಗ ಅವರುಗಳು ಅವರದೇ ರೀತಿಯ ಹಾವಭಾವಗಳನ್ನು ಪ್ರದರ್ಶಿಸಿ ಅವರ ದೇಶದ ಭಾಷೆಯಲ್ಲಿಯೇ ಹೇಳಿದ್ದರಿಂದ ನಮಗೆ ಅದರ ತಲೆ ಬುಡ ಅರ್ಥವಾಗದೆ ಯಾವುದೋ ಸಿನಿಮಾ ಇರಬಹುದೆಂದು ನಾವು ನಮ್ಮ ಮುಂದೆ ನಿಂತಿದ್ದ ಜನರನ್ನು ಅನುಸರಿಸುತ್ತಲೇ ಹೋದೆವು. ಅದು ೧೯೬೩ ರಲ್ಲಿ ತೆರೆಕಂಡಿದ್ದ ಸಿನಿಮಾವೊಂದರಲ್ಲಿ (ಅದು ಆ ಕಾಲಕ್ಕೆ ಭಯಂಕರ ಹಾರರ್ ಎನಿಸಿದ್ದ ’ದಿ ಹಾಂಟಿಂಗ್’ ಇರಬಹುದು) ಲಿಫ಼್ಟ್ ನೊಳಗೆ ನಡೆಯುವ ಭಯಾನಕ ಅನುಭವದ ಘಟನೆಯನ್ನು ನಮಗೆ ಅಲ್ಲಿದ್ದ ಲಿಫ಼್ಟಿನಲ್ಲಿ ಕೂರಿಸಿ ತೋರಿಸುವುದಾಗಿತ್ತು. ಯಾವುದೋ ಸಿನಿಮಾ ಇರಬಹುದೆಂದು ತಿಳಿದು ನಾವು ಒಳಹೊಕ್ಕರೆ ಇಲ್ಲಿ ನಮ್ಮನ್ನೇ ಲಿಫ಼್ಟಿನೊಳಕ್ಕೆ ಕೂರಿಸುತ್ತಿದ್ದುದನ್ನು ಕಂಡು ಗುರುಬಸಯ್ಯನವರು ಒಳಕ್ಕೆ ಬರಲು ಹಿಂದೇಟು ಹಾಕಿದರು. ನಾನೂ ರಾಜೇಗೌಡರೂ ಅವರ ಕೈ ಹಿಡಿದು ಒಳಕ್ಕೆ ಎಳೆದುಕೊಂಡೆವು. ಆ ಲಿಫ಼್ಟಿನಲ್ಲಿದ್ದುದು ಮೂರು ಸಾಲುಗಳು. ಪ್ರತಿಯೊಂದು ಸಾಲಿನಲ್ಲೂ ಮೂರು ಕುರ್ಚಿಗಳಿದ್ದವು ನಾವು ಮೂವರೂ ಮೊದಲ ಸಾಲಿನ ಕುರ್ಚಿಯಲ್ಲೇ ಕೂತೆವು. ಮಿತ್ರರಿಬ್ಬರ ಮಧ್ಯ ನಾನು ಕೂತೆ. ಕಾಲುಗಳನ್ನು ಬಿಗಿಯಾಗಿ ಬೆಲ್ಟಿನೊಳಕ್ಕೆ ತೂರಿಸಿಕೊಳ್ಳುವಂತೆ ಅಲ್ಲಿದ್ದ ಅಪರೇಟರ್ ಸೂಚಿಸಿದ. ಅವನು ನೀಡುತ್ತಿದ್ದ ಸೂಚನೆಗಳನ್ನು ಕೇಳುತ್ತಲೇ ಗುರುಬಸವಯ್ಯರನ್ನು ನೋಡಿದೆ. ಅವರಂತೂ ಇದ್ಯಾವುದೋ ಭಯಂಕರ ಭಯ ಬೀಳಿಸುವ ಅನುಭವಕ್ಕೆ ನನ್ನನ್ನು ಈಡು ಮಾಡುತ್ತಿದ್ದಾರಲ್ಲಾ ಎಂಬಂತೆ ಅವುಡನ್ನು ಗಟ್ಟಿಯಾಗಿ ಕಚ್ಚಿ ಯಾಕಾದ್ರೂ ಇವರೊಟ್ಟಿಗೆ ಬಂದೆನಪ್ಪಾ ಎಂಬಂತೆ ನನ್ನನ್ನೇ ಗುರಾಯಿಸತೊಡಗಿದ್ದರು.
 
ಲಿಫ಼್ಟಿನ ಬಾಗಿಲು ಮುಚ್ಚಿದ ಕೂಡಲೇ ಗುರುಬಸಯ್ಯನವರು ಎಡಗಡೆ ರಾಜೇಗೌಡ್ರು ಬಲಗಡೆ ನನ್ನ ಕೈಗಳನ್ನು ಬಿಗಿಯಾಗಿ ಹಿಡಿದುಕೊಂಡರು. ಲಿಫ಼್ಟಿನೊಳಗೆ ಪೂರ್ಣ ಕತ್ತಲೆ ಇತ್ತು. ’ಸಖತ್ ಆಗಿದೆ ಕಣ್ರೀ’ ಎಂದು ರಾಜೇಗೌಡ್ರಿಗೆ ಹೇಳಿದೆ. ಅದಕ್ಕೆ ಗುರುಬಸಯ್ಯನವರು ಏನು ಸಖತ್ ಆಗಿದ್ಯೋ ನನ್ನ ಪಾಡಿಗೆ ಬೇರೆ ಏನಾದ್ರೂ ನೋಡಲು ಹೋಗ್ತಿದ್ದೆ ಎಳಕಂಡ್ ಬಂದು ಬಿಟ್ರಲ್ಲಾ ಎನ್ನುವಂತೆ ನೋಡಿದವರೇ ಲಿಫ಼್ಟ್ ಮೇಲಕ್ಕೇರುತ್ತಿದ್ದಂತೆಯೇ ಗಪ್ ಚುಪ್ ಆಗಿಬಿಟ್ಟರು. ಆ ಲಿಫ಼್ಟ್ ಹೋದ ವೇಗಕ್ಕೆ ನಾವೇನಾದರೂ ಕಾಲಿಗೆ ಬೆಲ್ಟ್ ಹಾಕಿಕೊಳ್ಳದಿದ್ದಲ್ಲಿ ನಾಲ್ಕಡಿ ಮೇಲೆ ಹಾರುವುದು ಖಚಿತವಾಗಿತ್ತು. ಅದು ಕೆಲವೇ ಸೆಕೆಂಡುಗಳಲ್ಲಿ ನಮ್ಮನ್ನು ಐದಾರು ಅಂತಸ್ತಿನಷ್ಟು ಮೇಲಕ್ಕೆ ಹೊತ್ತೊಯ್ದು, ಅಲ್ಲಿ ಒಂದೆರಡು ಸೆಕೆಂಡ್ ನಿಲ್ಲಿಸಿ ಮತ್ತೆ ಅಷ್ಟೇ ವೇಗವಾಗಿ ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ನಮ್ಮನ್ನು ಕೆಳಗಿಳಿಸುತ್ತಿತ್ತು. ಅದರ ವೇಗ ಮೇಲಿಂದ ನಮ್ಮನ್ನು ಗಾಳಿಯಲ್ಲಿ ಧುಮುಕಿಸಿದಂತೆಯೇ ಭಾಸವಾಗುತ್ತಿತ್ತು. ಮೇಲೆ ಹೋಗಿ ಒಂದೆರಡು ಸೆಕೆಂಡು ನಿಂತಾಗ ಲಿಫ್ಟಿನೊಳಗಿದ್ದವರೆಲ್ಲಾ ಖುಶಿಯಿಂದ ಹೋ ಎಂದು ಅರಚುತ್ತಿದ್ದರು. ಮೇಲಕ್ಕೆ ಹೋದಾಗ ಸಖತ್ ಮಜವಾಗಿದೆ ಅಲ್ವಾ ಎಂದು ಅಕ್ಕ ಪಕ್ಕ ತಿರುಗಿ ನೋಡಿದರೆ ಇಬ್ಬರೂ ನನ್ನ ಎರಡೂ ಕೈಗಳನ್ನೂ ಹಿಡಿದಿದ್ದವರು ಮಾತಾಡುವುದಿರಲಿ ಕಣ್ಣನ್ನೂ ಬಿಗಿಯಾಗಿ ಮುಚ್ಚಿ ಕೂತುಬಿಟ್ಟಿದ್ದರು.

ಲಿಫ಼್ಟ್ ಅನುಭವ ಪಡೆದು ಹೊರಗಡೆ ಬರುತ್ತಿದ್ದಂತೆ ಅಲ್ಲಿದ್ದ ಚಿಕ್ಕ ಚಿಕ್ಕ ಟಿ ವಿ ಪರದೆಗಳನ್ನು ನೋಡಿದೆ. ಆಶ್ಚರ್ಯವೆಂದರೆ ಒಂದರಲ್ಲಿ ನಾವು ಮೂವರು ಕುಳಿತಿದ್ದ ಫೋಟೋ ಇತ್ತು. ರಾಜೇಗೌಡ್ರನ್ನ, ಗುರುಬಸವಯ್ಯನವರನ್ನ ಕೂಗಿ ಕರೆದು ಫೋಟೊ ತೋರಿಸಿದೆ. ಫೋಟೊ ನೋಡಿ ಪುಳಕಿತರಾದ ಅವರಿಬ್ಬರೂ ಅದರಲ್ಲಿ ತಾವುಗಳು ಕಣ್ಣುಮುಚ್ಚಿರುವಾಗ ಫೋಟೊ ತೆಗೆದಿದ್ದಾನೆಂದು ದೂಷಿಸಿದರು. ಫೋಟೊದಲ್ಲಿ ಅವರು ಅತ್ಯಂತ ಭಯಭೀತರಾಗಿ ಕಣ್ಣುಮುಚ್ಚಿ ಮುಖವೆಲ್ಲಾ ಸಿಂಡರಿಸಿಕೊಂಡ ಹಾಗಿತ್ತು. ಯಾವನೋ ನಮ್ಮ ಇಂಥಾ ಫೋಟೋನೇನ್ರಿ ಹಾಕೋದು ಎಂದು ಪ್ರೊಫ಼ೆಸರ್ ಗುರುಬಸವಯ್ಯ ಬೇಜಾರಾಗಿ ಹೇಳಿದರು. ಇಷ್ಟಕ್ಕೂ ನಮ್ಮ ಫೋಟೊ ಅಲ್ಯಾಕೆ ಹಾಕಿದ್ದಾರೆಂಬ ಕುತೂಹಲ ನನ್ನದಾಗಿತ್ತು. ಫೋಟೊ ಮೇಲಿದ್ದ ಬರಹವನ್ನು ಓದಿದಾಗಲೇ ರಹಸ್ಯ ಗೊತ್ತಾದದ್ದು. ಲಿಫ಼್ಟ್ ನಲ್ಲಿ ಕೂತಿದ್ದಾಗ ಹೆಚ್ಚು ಭಯಭೀತರಾದವರಿವರು ಎಂದು ಫೋಟೋ ಮೇಲಿನ ಬರಹ ಸೂಚಿಸಿತ್ತು. ಲಿಫ಼್ಟ್ ಒಳಗಿದ್ದ ಸಿ ಸಿ ಟಿ ವಿ ಕ್ಯಾಮರಾ ಸೆರೆಹಿಡಿದಿದ್ದ ದೃಶ್ಯಗಳಲ್ಲಿ ಅತ್ಯಂತ ಭಯಭೀತರಾದವರನ್ನು ಆರಿಸಿ ಟಿ ವಿ ಪರದೆಯಲ್ಲಿ ತೋರಿಸಿದ್ದರು. ’ಸದ್ಯ ನಿಮ್ಮಿಂದಾಗಿ ನನ್ನ ಫೋಟೊನೂ ಪ್ಯಾರಿಸ್ಸಿನ ಈ ಡಿಸ್ನಿ ಲ್ಯಾಂಡಿನಲ್ಲಿ ಬಂತಲ್ಲಾ ಸಾಕು ಬಿಡಿ’ ಎಂದೆ.
 
ಮುಂದೆ ನಾವು ಇನ್ಯಾವ ಶೋ ನೋಡುವುದೆಂದು ಸುತ್ತಾಡುತ್ತಾ ಬರುವಾಗ ನಾವು ಈ ಹಿಂದೆ ನೋಡಿದ್ದ ಆಫ್ರಿಕಾದ ಕಪ್ಪು ಹುಡುಗ ಮತ್ತು ಯೂರೋಪಿನ ಕೆಂಪು ಹುಡುಗಿ ಹಿಂದೆ ಕೂತಿದ್ದ ಸ್ಥಳದಲ್ಲಿಯೇ ಹಾಗೇ ಮುದ್ದಾಡುತ್ತಾ ಕೂತಿದ್ದರು. ಅದನ್ನು ಕಂಡ ರಾಜೇಗೌಡ್ರು ’ಇದೇನ್ರೀ ಇವ್ರು ಆಗಿಂದ್ಲೂ ಇಲ್ಲೇ ಕೂತವರೆ?! ಇಲ್ಲಿ ಬಂದು ಏನನ್ನೂ ನೋಡ್ದೆ?! ಇದಕ್ಕೆ ಇಷ್ಟು ದುಡ್ದು ಕೊಟ್ಟು ಇಲ್ಲಿಗೆ ಬರಬೇಕಿತ್ತಾ ಬೇರೆ ಜಾಗವಿರಲಿಲ್ವಾ ಇವ್ರಿಗೆ’ ಅಂತ ಅವರನ್ನೇ ದಿಟ್ಟಿಸತೊಡಗಿದರು. ’ಅಯ್ಯೋ ಬನ್ನಿ ಅವರನ್ನ ನೋಡುತ್ತಾ ನೀವು ಮತ್ತೆ ದೀರ್ಘ ದಂಡ ನಮಸ್ಕಾರ ಮಾಡ್ಬೇಡಿ’ ಎಂದು ಅವರನ್ನು ಮುಂದಕ್ಕೆ ಕರೆದೊಯ್ದೆ. ರೋಲರ್ ಕೋಸ್ಟರ್ ಇದ್ದಲ್ಲಿಗೆ ಹೋಗುವ ಹೊತ್ತಿಗೆ ನಮ್ಮ ಜತೆಯಿದ್ದ ಗುರುಬಸವಯ್ಯನವರು ಗಾಯಬ್!! ಸುತ್ತ ಮುತ್ತ ನೋಡಿದರೂ ಅವರ ಸುಳಿವೇ ಇಲ್ಲ. ಇವರ ಜತೆ ಇದ್ದಲ್ಲಿ ಇನ್ಯಾವುದರಲ್ಲೋ ಕೂರಿಸಿ ನನ್ನ ತಲೆಸುತ್ತಿಸಿ ಬೀಳಿಸುವುದು ಗ್ಯಾರಂಟಿ ಎಂದು ಅವರು ನಮ್ಮಿಂದ ತಪ್ಪಿಸಿಕೊಂಡು ಹೋಗಿ ಬಸ್ಸಲ್ಲಿ ಪೊಗದಸ್ತಾಗಿ ಗೊರಕೆ ಹೊಡೆಯುತ್ತಾ ನಿದ್ರಿಸುತ್ತಿದ್ದರು. ನಾವು ಹದಿನೈದು ನಿಮಿಷ ಸಾಲಲ್ಲಿ ಕಾದು ಕೋಸ್ಟರ್ ಬಳಿ ಹೋದೆವು. ’ಇದು ಇನ್ನೂ ಭಯಂಕರವಾಗಿದೆ ಗೌಡ್ರೇ...ಉಲ್ಟ ಪಲ್ಟಾ ಎಲ್ಲಾ ಸುತ್ತುತ್ತೆ ಅನ್ಸುತ್ತೆ...’ ಅಂದ ಕೂಡಲೇ ಗೌಡ್ರು ಇದ್ದಕ್ಕಿದ್ದಂತೆ ತಮ್ಮ ನಿರ್ಣಯವನ್ನು ಬದಲಿಸಿ ಅದರಲ್ಲಿ ಕೂರದೇ ಬಂದ ದಾರಿಯಲ್ಲೇ ಹಿಂದಿರುಗಲು ಅನುವಾದರು. ಅವರನ್ನು ಬಲವಂತದಿಂದ ಹತ್ತಿಸಿಕೊಂಡೆ. ’ಇದೇನ್ರೀ ನೀವು ಇಷ್ಟೊತ್ತು ಕ್ಯೂನಲ್ಲಿ ನಿಂತು ಬಂದು ಈಗ ವಾಪಸ್ ಹೊರಟಿದ್ರಲ್ಲಾ’ ಅಂದದ್ದಕ್ಕೆ ’ನೀವು ಉಲ್ಟಾ ಪಲ್ಟಾ ಸುತ್ತುತ್ತದೆಂದು ಕೇಳಿಯೇ ನನಗೆ ತಲೆ ಸುತ್ತು ಬಂದಂಗಾಯ್ತು’ ಅಂದ್ರು. ಅಂತೂ ಅವರನ್ನು ಕೂರಿಸಿಕೊಂಡು ೩೬೦ ಡಿಗ್ರಿಯಲ್ಲಿ ಸುತ್ತಿ ಕೆಳಗಿಗಿಳಿದು ಬೇರೆ ನೋಡಲು ಹೊರಟಾಗ ಎದುರಿಗೆ ಸಿಕ್ಕ ಜ್ಯೂಜ಼ರ್ ಕ್ರೂಸ್ನಲ್ಲಿ ಸುತ್ತಾಡಲು ತಡವಾಯಿತೆಂದು ನಮ್ಮನ್ನು ಕರೆದುಕೊಂಡು ಹೊರಟ.
ಬಸ್ಸಿನಲ್ಲಿ ಆಗಲೇ ಎಲ್ಲ ಬಂದು ಕೂತಿದ್ದರು. ಈ ಡಿಸ್ನಿ ಲ್ಯಾಂಡಿನಲ್ಲಿ ನಾವು ನೋಡಿದ್ದಕ್ಕಿಂತ ಹೆಚ್ಚು ಸಮಯ ಕ್ಯೂನಲ್ಲೇ ನಿಂತಿದ್ದರಿಂದ ಆಯಾಸವಾಗಿತ್ತು ಅದಾಗಲೇ ಗೊರಕೆ ಹೊಡೆಯುತ್ತಾ ಗಡದ್ದಾಗಿ ನಿದ್ರಿಸುತ್ತಿದ್ದ ಗುರುಬಸವಯ್ಯನವರಿಗೆ ನಾವೂ ಸಾಥ್ ನೀಡಿದೆವು. ಸಿಯಾನ್ ನದಿಯಲ್ಲಿ ಕ್ರೂಸ್ ನಲ್ಲಿ ನಮ್ಮನ್ನು ಒಂದು ಗಂಟೆ ಕಾಲ ಸುತ್ತಾಡಿಸಲಾಯಿತು. ಆ ಸುಂದರ ಸಂಜೆ ಸಿಯಾನ್ ನದಿಯಲ್ಲಿ ಪಯಣಿಸುವುದು ಅದ್ಭುತವಾಗಿತ್ತು. ಪ್ಯಾರಿಸ್ ನಗರಕ್ಕೆ ಕಳೆಕಟ್ಟುವುದೇ ಸಂಜೆಯ ನಂತರ. ವಿಶ್ವದಾದ್ಯಂತ ಬಂದಿದ್ದ ಪ್ರವಾಸಿಗರು ಕ್ರೂಸ್ ನಲ್ಲಿ ಕೂತು ಆಹ್ಲಾದಕರವಾದ ಪ್ಯಾರಿಸ್ ಸಂಜೆಯನ್ನು ಅನುಭವಿಸುತ್ತಿದ್ದರು. ನಮ್ಮೆದುರಿಗೆ ಉದ್ದುದ್ದಕ್ಕೆ ನಿಂತಿದ್ದ ಐಫ಼ಲ್ ಟವರ್, ಪ್ಯಾರಿಸ್ ನಗರದ ಅತ್ಯಂತ ಹಳೆಯ ವಾಸ್ತು ವಿನ್ಯಾಸದ ಕಟ್ಟಡಗಳನ್ನು ನೋಡುತ್ತಾ ಸುತ್ತಾಡುತ್ತಿದ್ದರೆ ಆ ಪರಿಸರದಲ್ಲಿನ ದ್ರಶ್ಯಗಳನ್ನು ಮತ್ತಷ್ಟು ಕಣ್ತುಂಬಿಸಿಕೊಳ್ಳುವ ಆಸೆಯಾಗುವುದು ಸಹಜ. ಸಿನಿಮಾಗಳಲ್ಲಷ್ಟೇ ಪ್ಯಾರಿಸ್ ನಗರದ ಸೌಂದರ್ಯವನ್ನು ನೋಡಿದ್ದ ನಮಗೆ ’ಈವ್ನಿಂಗ್ ಇನ್ ಪ್ಯಾರಿಸ್’ ನ ಕ್ಷಣಗಳು ಯಾವುದೋ ಲೋಕದಲ್ಲಿ ತೇಲಿದಂತೆ ಭಾಸವಾಗಿತ್ತು. ನಾನಾ ನಮೂನೆಯ, ನಾನಾ ಭಾಷೆಗಳನ್ನಾಡುತ್ತಿದ್ದ ಜನರೆಲ್ಲಾ ಖುಶಿಯಿಂದ ಪ್ಯಾರಿಸ್ಸಿನ ಸುಂದರ ಸಂಜೆಯ ಮಜಾ ಅನುಭವಿಸುತ್ತಿದ್ದರು. ಅಷ್ಟು ಜನರ ಮಧ್ಯೆ ಇಂಗ್ಲಿಷ್ ಭಾಷೆಯ ಸುಳಿವಿರಲಿಲ್ಲ. ಕೊನೆಯಲ್ಲೊಮ್ಮೆ ಇಂಗ್ಲಿಷ್ ಭಾಷೆ ಕಿವಿಗೆ ಬಿದ್ದಿತ್ತು. ಯಾರಿರಬಹುದೆಂದು ನೋಡಿದರೆ ನಮ್ಮ ಭಾರತೀಯರೇ ಪರಸ್ಪರ ಜೋರಾಗಿ ಇಂಗ್ಲೀಷಿನಲ್ಲಿ ಜಗಳ ಮಾಡತೊಡಗಿದ್ದರು.
 
ಹಾಗೆ ಜನರಲ್ಲಿನ ಗದ್ದಲ ಸಂಭ್ರಮದ ನಡುವೆ ಸಿಯಾನ್ ನದಿಯಲ್ಲಿನ ಸುತ್ತಾಟ ಮುಗಿದುದೇ ಗೊತ್ತಾಗಲಿಲ್ಲ. ಸ್ವಲ್ಪ ಹೊತ್ತು ನದಿ ತಟದಲ್ಲಿ ನಡೆದಾಡಿ ಕಪ್ಪು ಅಲೆಮಾರಿಗಳ ಬಳಿ ಚೌಕಾಸಿಯ ವ್ಯಾಪಾರ ಮಾಡಿದೆವು. ಇಂದು ರಾತ್ರಿ ೧೧ ಗಂಟೆಗೆ ಲಿಡೋ ಶೋ ನೋಡಲು ನಾವು ಏಳೆಂಟು ಜನರಷ್ಟೇ ತಲಾ ೯೫ ಯೂರೋ ಕೊಟ್ಟು ಬುಕ್ ಮಾಡಿಸಿದ್ದೆವು. ಭೋಜನ್ ಎಂಬ ಹೋಟೆಲಿನಲ್ಲಿ ಊಟ ಮುಗಿಸಿ ರೂಮಿಗೆ ಬಿಟ್ಟ ನಂತರ ಜ್ಯೂಜ಼ರ್ ಸರಿಯಾಗಿ ೧೧ ಗಂಟೆಗೆ ರೆಡಿಯಾಗಿರಬೇಕೆಂದ. ಲಿಡೋ ಶೋ ನೋಡಲು ಗುರುಬಸವಯ್ಯನವರು ಅತ್ಯಂತ ಉತ್ಸುಕರಾಗಿದ್ದರು. ರೂಮಿನಲ್ಲಿ ಹೋಗಿ ಅರ್ಧ ಗಂಟೆ ರೆಸ್ಟ್ ತಗಂಡು ಹೊರಡೋಣವೆಂದು ಹಾಸಿಗೆಗೆ ತಲೆಕೊಟ್ಟ ಕೂಡಲೇ ಬೆಳಿಗ್ಗೆಯಿಂದ ನಿಂತು ಸುತ್ತಾಡಿ ಕೊಂಚ ಆಯಾಸವಾಗಿದ್ದರಿಂದ ನಿದ್ರೆ ಆವರಿಸಿತ್ತು.

ರೂಮಿನಲ್ಲಿನ ಟೆಲಿಫ಼ೋನು ಒಂದೇ ಸಮನೆ ಬಾರಿಸತೊಡಗಿತ್ತು. ಗಾಬರಿಯಾಗಿ ಫ಼ೋನೆತ್ತಿಕೊಂಡರೆ ಆ ಕಡೆಯಿಂದ ಜ್ಯೂಜ಼ರ್ ತಾನು ಹದಿನೈದು ನಿಮಿಷದಿಂದಲೂ ಫ಼ೋನು ಮಾಡುತ್ತಿರುವುದಾಗಿಯೂ ನೀವ್ಯಾಕೆ ಎತ್ತಲಿಲ್ಲವೆಂದೂ ಗೊಣಗಾಡಿದ. ನಮಗೆ ಎಚ್ಚರವಿದ್ದರೆ ತಾನೇ ಎತ್ತುವುದು. ಲಿಡೋ ಶೋ ಗೆ ಈಗಾಗಲೇ ತಡವಾಗಿದೆಯೆಂದು ಅವನು ರೇಗಿದ್ದಕ್ಕೆ ಅವಸರವಾಗಿ ಹೊರಟೆವು. ನಾವು ಕೆಳಗಿಳಿದು ನಮ್ಮ ಬಸ್ಸಿಗಾಗಿ ಹುಡುಕಾಡತೊಡಗಿದ್ದೆವು. ಎತ್ತ ನೋಡಿದರೂ ನಮ್ಮ ಬಸ್ ಕಾಣಿಸದಿದ್ದರಿಂದ ನಮ್ಮನ್ನು ಬಿಟ್ಟು ಹೋಗಿಬಿಟ್ರಾ ಎಂದು ಗುರುಬಸವಯ್ಯ ಬೇಸರ ವ್ಯಕ್ತಪಡಿಸಿದರು. ಮತ್ತೆ ಹೋಟೆಲ್ಲಿನ ಆಜು ಬಾಜು ನೋಡಿದೆವು. ಅಲ್ಲಿ ಸುಮಾರು ಬಸ್ಸುಗಳು ನಿಂತಿದ್ದರೂ ನಮ್ಮ ಬಸ್ ಕಾಣಿಸಲಿಲ್ಲ. ಸರಿ ಇನ್ನೇನು ಮಾಡುವುದೆಂದು ಹೋಟೆಲಿನ ಕಡೆ ಹೆಜ್ಜೆ ಹಾಕುತ್ತಿದ್ದಾಗ ಎದುರಿಗೆ ಜ್ಯೂಜ಼ರ್ ಬಂದ. ಅವನನ್ನು ಕಂಡ ಕೂಡಲೇ ಲಿಡೋ ಶೋ ವನ್ನೇ ಕಂಡಷ್ಟು ಖುಶಿಯಾಯಿತು. ಆತ ನಮ್ಮನ್ನು ಹುಡುಕಿಕೊಂಡು ನಮ್ಮ ರೂಮಿಗೆ ಹೋಗಿ ಬಂದುದಾಗಿ ಹೇಳಿದ್ದಕ್ಕೆ ನಾವು ಹತ್ತು ನಿಮಿಷದಿಂದಲೂ ನಮ್ಮ ಬಸ್ ಹುಡುಕುತ್ತಿರುವುದಾಗಿಯೂ ಅದು ಕಾಣಿಸಲಿಲ್ಲವೆಂದೂ ಹೇಳಿದೆವು. ಆತ ನಮ್ಮನ್ನು ಕರೆದುಕೊಂಡು ಬೇರೊಂದು ಬಸ್ ಹತ್ತಿಸಿ ಇಂದು ಲಿಡೋ ಶೋ ಗೆ ಬೇರೆ ಬಸ್ ನಲ್ಲಿ ಹೋಗುತ್ತಿರುವುದಾಗಿ ಹೇಳಿದ. ಶೋ ಗೆ ಬರುವವರೆಲ್ಲಾ ಆಗಲೇ ಬಸ್ನಲ್ಲಿ ಪವಡಿಸಿದ್ದರು. ನಾವು ಆ ಬಸ್ ಸುತ್ತಲೇ ಹಲವಾರು ಪ್ರದಕ್ಷಿಣೆ ನಡೆಸಿದ್ದರೂ ಅವರ್ಯಾರೂ ನಮ್ಮನ್ನು ನೋಡಿರಲಿಲ್ಲ. ಬೇರೆ ಬಸ್ ಎಂಬ ವಿಷಯ ನಮಗೆ ಗೊತ್ತಿರದಿದ್ದರಿಂದ ಸುಮ್ಮನೇ ಸುತ್ತಿದ್ದೆವು. ಬಸ್ ಹತ್ತಿದ ಕೂಡಲೇ ಒಳಗೆ ಕೂತಿದ್ದವರೆಲ್ಲಾ ನಿಮ್ಮಿಂದಾಗಿ ನಾವೀಗ ಅರ್ಧ ಆಟವನ್ನು ಮಾತ್ರ ನೋಡುವಂತಾಗುತ್ತದೆಂದು ಗೊಣಗಾಡಿದರು.

ಲಿಡೋ ಶೋ ಬಳಿ ಹೋದಾಗ ಅಲ್ಲಿ ಶೋ ಶುರುವಾಗುವುದಿರಲಿ ಇನ್ನೂ ೯ ಗಂಟೆಯ ಶೋ ನೇ ಮುಗಿದಿರಲಿಲ್ಲ. ಅಲ್ಲಿ ಉದ್ದನೆಯ ಕ್ಯೂ ಇತ್ತು. ಜ್ಯೂಜ಼ರ್ ನಿಗೆ ನಾವು ೯೫ ಯೂರೋಗಳನ್ನು ಬೆಳಿಗ್ಗೆಯೇ ಕೊಟ್ಟಿದ್ದರಿಂದ ಆತ ಅಡ್ವಾನ್ಸ್ ಬುಕ್ ಮಾಡಿಸಿದ್ದ ಟಿಕೆಟ್ ಗಳನ್ನು ತರುವುದಾಗಿ ಹೇಳಿ ಹೋದ. ನಾವು ಮಧ್ಯ ರಾತ್ರಿಯ ಪ್ಯಾರಿಸ್ ನ ಚಳಿಯಲ್ಲಿ ನಡುಗುತ್ತಾ ನಿಂತುಕೊಂಡೆವು. ಬೆಚ್ಚನೆಯ ಉಡುಪು ಧರಿಸಿದ್ದರೂ ಸಣ್ಣ ತುಂತುರು ಮಳೆಯ ಹನಿ ಆ ಮಧ್ಯ ರಾತ್ರಿಯಲ್ಲಿ ಮೈ ನಡುಗಿಸುತ್ತಿತ್ತು. ರಾಜೇಗೌಡ್ರು ’ಏನ್ರೀ ಈ ಚಳೀಲಿ ನಮ್ಮನ್ನು ನಿಲ್ಲಿಸಿ ಇವ್ನು ಎಲ್ಲೊ ಹೋದನಲ್ಲಾ...’ ಎಂದು ಗೊಣಗಾಡಿದರು. ನಾವು ಬಸ್ ಹತ್ತುವಾಗ ಒಳಗಿದ್ದವರೆಲ್ಲಾ ನಿಮ್ಮಿಂದಾಗಿ ಅರ್ಧ ಶೋ ನೋಡಬೇಕಾಗುತ್ತದೆಂದು ಗೊಣಗಾಡಿದ್ದು ನೆನಪಾಗಿ ’ನೋಡಿ ನಾವು ತಡವಾಗಿ ಬರದಿದ್ದಲ್ಲಿ ನೀವು ಇನ್ನೂ ಅರ್ಧಗಂಟೆ ಹೆಚ್ಚು ಈ ಚಳಿಯಲ್ಲಿ ಒದ್ದಾಡಬೇಕಿತ್ತು’ ಎಂದೆ. ಅದಕ್ಕವರು ನೀವು ಮಾಡಿದ್ದು ಸರಿ ಬಿಡಿ ಎಂದು ನಾವು ತಡವಾಗಿ ಬಂದುದಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದರು. ನಾನು ಮುಂಜಾಗರೂಕತೆಯಿಂದ ರೂಮಿನಲ್ಲಿ ಒಂದು ಪೆಗ್ ವಿಸ್ಕಿ ಏರಿಸಿ ಬಂದಿದ್ದರಿಂದ ಚಳಿ ನನ್ನನ್ನು ಹೆಚ್ಚು ಕಾಡಲಿಲ್ಲ.
 
ಥಿಯೇಟರಿನ ಒಳಗೆ ಹೋದಾಗ ಅದೊಂದು ಇಂದ್ರನ ಆಸ್ಥಾನದಂತೆ ಕಂಡು ಬಂತು. ನಾವೆಲ್ಲಾ ನಮಗೆ ನಿಗದಿಯಾಗಿದ್ದ ಸ್ಥಳದಲ್ಲಿ ಹೋಗಿ ಕೂತೆವು. ನಮ್ಮಲ್ಲಿಗೆ ಬಂದ ಸುಂದರ ಪರಿಚಾರಿಕೆ ನಿಮಗೆ ಜ್ಯೂಸ್ ಕೊಡಲೋ ಶಾಂಪೇನ್ ಕೊಡಲೋ ಎಂದು ವಿನಯದಿಂದ ಕೇಳಿದಳು. ನಾನು ಶಾಂಪೇನ್ ಎಂದೆ. ಜತೇಲಿದ್ದವರು ಆರ್ಡರ್ ಮಾಡಲು ಹಿಂದೆ ಮುಂದೆ ನೋಡಿದ್ದರಿಂದ ಪರಿಚಾರಿಕೆಯರು ಹಿಂದಿರುಗಿದ್ದರು. ನನಗೆ ಆಶ್ಚರ್ಯವಾಗಿ ಯಾಕೆ ಎನೂ ತೆಗೆದುಕೊಳ್ಳಲಿಲ್ಲವೆಂದು ಕೇಳಿದ್ದಕ್ಕೆ ಅವರು ಸಿಕ್ಕಾ ಪಟ್ಟೆ ಚಾರ್ಜು ಮಾಡಬಹುದೆಂದು ಏನನ್ನೂ ಹೇಳಲಿಲ್ಲವೆಂದರು. ಅದು ನಾವು ತೆಗೆದುಕೊಂಡಿರುವ ಟಿಕೆಟ್ ಗೆ ಕಾಂಪ್ಲಿಮೆಂಟ್ ಡ್ರಿಂಕ್ ಎಂದೂ ಅದಕ್ಕೆ ಹಣ ನೀಡಬೇಕಾಗಿಲ್ಲವೆಂದೂ ಹೇಳಿದೆ. ಅದಕ್ಕವರು ಅಯ್ಯೋ, ಎಂಥಾ ಕೆಲಸ ಮಾಡಿಬಿಟ್ಟೆವೆಂದು ದೂರದಲ್ಲಿದ್ದ ಪರಿಚಾರಕರನ್ನು ಕೂಗಿ ಕೂಗಿ ಕರೆದು ತಮಗೆ ಬೇಕಾದ ಡ್ರಿಂಕ್ ತರಿಸಿಕೊಂಡರು.
 
ಲಿಡೋ ಶೋನಲ್ಲಿ ನಾನಾ ದೇಶದ ನೃತ್ಯಗಳನ್ನು ಪ್ರದರ್ಶಿಸಿದರು. ತೆರೆದೆದೆಯ ಹುಡುಗಿಯರ ನರ್ತನ ನಯನ ಮನೋಹರವಾಗಿ ಅಪ್ಸರೆಯರ ಲೋಕದಂತೆ ಗೋಚರಿಸತೊಡಗಿತ್ತು. ತೆರೆದೆದೆಯ ನೃತ್ಯ ಮಾಡಿದ್ದರೂ ಅದರಲ್ಲಿ ಸ್ವಲ್ಪವೂ ಅಶ್ಲೀಲತೆಯ ಛಾಯೆ ಇರಲಿಲ್ಲ. ಬಹಳ ಸುಂದರವಾಗಿ ಸಂಯೋಜಿಸಲಾಗಿತ್ತು. ಮೊದಲ ನೃತ್ಯ ಆರಂಭವಾದ ಐದು ನಿಮಿಷದಲ್ಲೇ ನಮ್ಮ ಪಕ್ಕದ ಟೇಬಲಿನಲ್ಲಿ ಕುಳಿತಿದ್ದ ಹುಡುಗಿಯರಿಬ್ಬರು ನಮ್ಮತ್ತ ನೋಡಿ ಮುಸುಮುಸು ನಗಲಾರಂಬಿಸಿದ್ದರು. ಸ್ಟೇಜಿನ ಸುತ್ತಲೂ ಅರೆವೃತ್ತಾಕಾರವಾಗಿ ಟೇಬಲ್ಲುಗಳನ್ನು ಹಾಕಿದ್ದರಿಂದ ನೃತ್ಯ ಪ್ರದರ್ಶನದ ಜತೆಗೇ ನಮಗೆ ಸುತ್ತು ಮುತ್ತಲಿದ್ದವರೆಲ್ಲಾ ಪರಸ್ಪರ ಕಾಣಿಸುತ್ತಿದ್ದೆವು. ’ಇದೇನ್ ಗೌಡ್ರೇ ಆ ಹುಡ್ಗೀರು ನಮ್ಮತ್ತ ನೋಡಿ ಹಂಗ್ ನಗ್ತಾ ಇದ್ದಾರೆ...’ ಎಂದ ಕೂಡಲೇ ರಾಜೇಗೌಡ್ರು ಅತ್ತ ತಿರುಗಿ ’ಹೌದ್ ಅಲ್ವಾ ಏನಾಗಿದೆಯೊ ಅವ್ರಿಗೆ’ ಎಂದರು. ಅವರು ನೃತ್ಯ ನೋಡುವುದನ್ನು ಬಿಟ್ಟು ನಮ್ಮನ್ನು ನೋಡಿಯೇ ನಗುತ್ತಿರುವುದು ನನಗೆ ಖಾತ್ರಿಯಾಗಿತ್ತು. ಕುತೂಹಲ ತಡೆಯಲಾಗದೇ ಅವರನ್ನು ಯಾಕೆಂದು ಕೈ ಹೆಬ್ಬೆರಳನ್ನು ಮೇಲೆತ್ತಿ ಕೇಳಿದೆ. ಅದಕ್ಕವರು ನನ್ನ ಪಕ್ಕ ತೋರು ಬೆರಳು ತೋರಿಸಿದರು. ಅದ್ಯಾರೆಂದು ಪಕ್ಕ ತಿರುಗಿ ನೋಡಿದರೆ...ಅಲ್ಲಿ ನಮ್ಮ ಗುರುಬಸವಯ್ಯ ನವರು ಕೋಲೇ ಬಸವನಂತೆ ತಲೆಯನ್ನು ಮೇಲಕ್ಕೂ ಕೆಳಕ್ಕೂ ಅಲ್ಲಾಡಿಸುತ್ತಾ ತೂಕಡಿಸತೊಡಗಿದ್ದರು. ಅವರು ಟೇಬಲ್ಲಿನ ಮೇಲೆ ಕೈ ಇಟ್ಟುಕೊಂಡು ತಲೆಯನ್ನು ಮೇಲಕ್ಕೆ ಎತ್ತುತ್ತಲೂ...ಎತ್ತಿದಷ್ಟೇ ವೇಗವಾಗಿ ಅದನ್ನು ಕೆಳಗೆ ಬಿಡುವುದನ್ನೂ ನಿರಂತರವಾಗಿ, ತಾಳಬದ್ಧವಾಗಿ ಮಾಡುತ್ತಿದ್ದುದು ಆ ಹುಡುಗಿಯರಿಗೆ ಲಿಡೋ ಶೋ ಗಿಂತಲೂ ಹೆಚ್ಚು ಮನರಂಜನೆ ನೀಡಿದಂತಿತ್ತು. ಅವರೇನಾದರೂ ಇನ್ನು ಒಂದೆರಡು ಇಂಚು ತಲೆ ಕೆಳಗೆ ಇಳಿಸಿದ್ದಲ್ಲಿ ಅದು ಟೇಬಲ್ಲಿಗೆ ಬಡಿಯಲಿತ್ತು. ರಾಜೇಗೌಡ್ರಿಗೆ ಆ ಹುಡ್ಗೀರು ನೋಡಿ ನಗುತ್ತಿರುವುದು ಗುರುಬಸವಯ್ಯನವರ ತೂಕಡಿಕೆಯ ಪರಿಗೆಂದು ಹೇಳಿದೆ. ಅದಕ್ಕವರು ’ಇದೇನ್ರೀ ಇವ್ರು ಮೊದಲ ಡಾನ್ಸಿಗೇ ಮಲಗಿ ಬಿಟ್ರಲ್ಲಾ’ ಎಂದು ಆಶ್ಚರ್ಯ ವ್ಯಕ್ತಪಡಿಸಿದರು. ನಾವಿಬ್ಬರೂ ಅವರನ್ನು ತಟ್ಟಿ ಎಬ್ಬಿಸಿದೆವು. ಗಾಬರಿಯಿಂದೆದ್ದ ಅವರಿಗೆ ಇದೇನು ಆಗಲೇ ನಿದ್ರೆ ಮಾಡ್ತಿದ್ದೀರಲ್ಲಾ ಎಂದರೆ ಅವರು ’ಇಲ್ಲಾ, ಇಲ್ಲಾ, ಡಾನ್ಸ್ ನೋಡ್ತಿದ್ದೆ’ ಅಂದರು.’ ’ನಿಮ್ಮ ತಲೇನೂ ಡಾನ್ಸ್ ಮಾಡ್ತಿತ್ತಲ್ಲರೀ’ ಎಂದದ್ದಕ್ಕೆ ಹೌದಾ ಎಂದವರು ಎದ್ದು ಸ್ಟಡಿಯಾಗಿ ಖುರ್ಚಿಗೆ ಒರಗಿ ಕೂತರು.
 
ಗುರುಬಸವಯ್ಯನವರನ್ನು ಎದ್ದು ಕೂಡಿಸಿದ ನಂತರ ನಾವು ಸೀರಿಯಸ್ಸಾಗಿ ನೃತ್ಯ ನೋಡತೊಡಗಿದೆವು. ಒಂದೆರಡು ನೃತ್ಯಗಳನ್ನು ನಮ್ಮ ಬಲವಂತಕ್ಕೆ ಎದ್ದು ಅರ್ಧರ್ಧ ನೋಡಿದ ಗುರುಬಸವಯ್ಯನವರು ನಂತರ ಪೂರ್ಣ ನಿದ್ದೆಗೆ ಶರಣಾಗಿ ಬಿಟ್ಟರು. ಅವರು ನಿದ್ರೆ ಮಾಡಿದ್ದರಲ್ಲಿ ಯಾರದೇ ತಕರಾರಿರಲಿಲ್ಲ. ಆದರೆ ನೃತ್ಯದ ನಡುವೆ ನಿರೂಪಕಿ ನೃತ್ಯ ಪ್ರಕಾರದ ಬಗ್ಗೆ ವಿವರಿಸುವಾಗ ಆ ಥಿಯೇಟರಿನಲ್ಲಿ ಪೂರ್ಣವಾಗಿ ನಿಶ್ಯಬ್ಧವಿರುತ್ತಿತ್ತು. ಎಲ್ಲರೂ ತನ್ಮಯತೆಯಿಂದ ನಿರೂಪಕಿಯ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದರು. ಆಗಲೇ ಶುರುವಾದದ್ದು ಗುರುಬಸವಯ್ಯನವರ ಭಾರೀ ಗೊರಕೆಯ ಶಬ್ದ. ಅದು ಎಷ್ಟು ಜೋರಾಗಿತ್ತೆಂದರೆ ನಿರೂಪಕಿ ಒಂದೆರಡು ಕ್ಷಣ ಮಾತು ನಿಲ್ಲಿಸಿದಾಗಲೂ ಈ ಗೊರಕೆಯ ಶಬ್ದ ನಮ್ಮ ಸುತ್ತ ಮುತ್ತ ಕೂತಿದ್ದವರನ್ನು ಅಪ್ಪಳಿಸುತ್ತಿತ್ತು. ಎಲ್ಲರೂ ತಿರುಗಿ ತಿರುಗಿ ನಮ್ಮ ಕಡೆಯೇ ನೋಡತೊಡಗಿದ್ದರು. ಕೆಲವರು ಶಬ್ದ ಎಲ್ಲಿ ಬರುತ್ತಿದೆಯೆನ್ನುವುದನ್ನು ಪತ್ತೆ ಹಚ್ಚುವವರಂತೆ ಎದ್ದು ಎದ್ದು ಸುತ್ತಾ ಮುತ್ತಾ ನೋಡತೊಡಗಿದ್ದರು. ನಮಗಂತೂ ಸುತ್ತಮುತ್ತಲಿನ ಕೆಲವರು ನಮ್ಮತ್ತಲೇ ನೋಡುತ್ತಿರುವುದು ಸಾಕಷ್ಟು ಮುಜುಗರಕ್ಕೀಡುಮಾಡಿತ್ತು. ಕೂಡಲೇ ಜಾಗೃತರಾಗಿ ಗುರುಬಸವಯ್ಯನವರನ್ನು ತಟ್ಟಿ ತಟ್ಟಿ ಎಚ್ಚರಿಸಿದೆವು. ಅವರು ಗಾಬರಿಯಿಂದ ಎದ್ದವರೇ ಯಾರು ನನ್ನ ನಿದ್ದೆಯನ್ನು ಕೆಡಿಸಿದ ಪಾಪಿಗಳು ಎಂಬಂತೆ ನಮ್ಮನ್ನು ಸಿಟ್ಟಿನಿಂದ ದಿಟ್ಟಿಸತೊಡಗಿದರು. ಎದ್ದೇಳಿ ಇದೇನ್ ಮತ್ತೆ ನಿದ್ದೆ ಮಾಡ್ತಿದ್ದೀರಾ ಎಂದರೆ ಇಲ್ಲಾ ಇಲ್ಲಾ ಡಾನ್ಸ್ ನೋಡ್ತಿದ್ದೆ ಅಂದರು. ಅವರನ್ನು ಕುರ್ಚಿಗೆ ಒರಗಿಸಿ ಕೂರಿಸಿದ ಕೆಲವು ನಿಮಿಷಗಳ ನಂತರ ಮತ್ತೆ ಗೊರಕೆಯ ಶಬ್ಧ ನಮ್ಮನ್ನೂ ಸೇರಿದಂತೆ ಅಕ್ಕ ಪಕ್ಕದವರನ್ನೂ ಕಾಡತೊಡಗಿತ್ತು. ಗುರುಬಸವಯ್ಯನವರು ನನಗೆ ಮಲಗಲು ಯಾರ ಪರ್ಮಿಟ್ ಬೇಡ ಎಂದು ಯಾರಿಗೂ ಕೇರ್ ಮಾಡದೆ ಧಾರಾಳವಾಗಿ ಗೊರಕೆಯಲ್ಲಿ ನಿರತರಾಗಿಬಿಟ್ಟರು. ಅಕ್ಕ ಪಕ್ಕದವರೆಲ್ಲಾ ನಮ್ಮತ್ತ ನೋಡುತ್ತಾ ಮುಸುಮುಸು ನಗುವುದು ನಡೆದಿತ್ತು. ಕೆಲವರಂತೂ ಪಾಪ ಆ ಅಸಾಧ್ಯ ಶಬ್ಧವನ್ನು ಸಹಿಸಿಕೊಳ್ಳುತ್ತಾ ಕಾರ್ಯಕ್ರಮ ನೋಡುತ್ತಿದ್ದಾರಲ್ಲಾ ಎನ್ನುವಂತೆ ನಮ್ಮತ್ತ ಕರುಣೆಯ ನೋಟವನ್ನು ಬೀರತೊಡಗಿದ್ದರು.
 
ಆಗಲೇ ನನಗೊಂದು ಐಡಿಯಾ ಹೊಳೆಯಿತು. ಅದೇನೆಂದರೆ ಡಾನ್ಸು ಮುಗಿಯುವ ಹಂತಕ್ಕೆ ಬಂದ ಕೂಡಲೇ ನಾನು ಗುರುಬಸವಯ್ಯನವರನ್ನು ಎಚ್ಚರಿಸತೊಡಗಿದೆ. ಅವರು ಕಣ್ಣು ಬಿಟ್ಟು ’ನೋಡ್ತಿದ್ದೀನಿ ನೋಡ್ತಿದ್ದೀನಿ’ ಎಂದು ಸ್ಟಡಿಯಾಗುತ್ತಿದ್ದರು. ಅವರು ಹಾಗೆ ಸ್ಟಡಿಯಾಗಿ ಕೂರುತ್ತಿದ್ದುದು ಎರಡು ಮೂರು ನಿಮಿಷ ಮಾತ್ರ. ನಿರೂಪಕಿಯ ಮಾತು ಮುಗಿದು ಡಾನ್ಸು ಶುರುವಾಗುವಷ್ಟರಲ್ಲಿ ಗುರುಬಸವಯ್ಯನವರ ಗೊರಕೆಯೂ ಶುರುವಾಗುತ್ತಿತ್ತು. ಡಾನ್ಸ್ ಮುಗಿಯುವ ಹಂತ ಬಂದ ಕೂಡಲೇ ಅವರನ್ನು ಎಚ್ಚರಗೊಳಿಸುವ ನನ್ನ ತಂತ್ರ ಕೆಲಸ ಮಾಡಿತ್ತು. ಅಷ್ಟರಲ್ಲಾಗಲೇ ಅವರ ಗೊರಕೆಯ ಶಬ್ಧಕ್ಕೆ ಅಡ್ಜಸ್ಟ್ ಆಗಿದ್ದ ಕೆಲವರು ಈಗ ಗೊರಕೆಯ ಶಬ್ಧ ನಿಂತಿದ್ದಕ್ಕೆ ಆಶ್ಚರ್ಯಗೊಂಡು ತಿರುಗಿ ತಿರುಗಿ ನೋಡತೊಡಗಿದ್ದರು. ಗುರುಬಸವಯ್ಯನವರು ಇದ್ಯಾವ ಪರಿವೆಯೂ ಇಲ್ಲದಂತೆ ನಿರೂಪಕಿಯ ಮಾತುಗಳನ್ನು ಕೇಳುತ್ತಿದ್ದರು. ಅವಳ ನಿರೂಪಣೆ ಅವರಿಗೆ ಜೋಗುಳದಂತೆ ಕೇಳುತ್ತಿತ್ತೇನೋ ಅದು ಮುಗಿಯುವಷ್ಟರಲ್ಲಿ ಗೊರಕೆ ಆರಂಬಿಸುತ್ತಿದ್ದರು. ಅಕ್ಕ ಪಕ್ಕದವರೆಲ್ಲಾ ಡಾನ್ಸ್ ಮುಗಿದ ನಂತರ ಒಂದೆರಡು ಬಾರಿ ನಮ್ಮತ್ತ ನೋಡಿ ನಿರೂಪಕಿಯ ಮಾತನ್ನು ನೋಡುತ್ತಿದ್ದ ಗುರುಬಸವಯ್ಯನವರನ್ನು ಕಂಡು ಪರವಾಗಿಲ್ಲ...ಎದ್ದು ಕಾರ್ಯಕ್ರಮ ನೋಡುತ್ತಿದ್ದಾರೆಂದು ಪದೇ ಪದೇ ನಮ್ಮ ಕಡೆ ನೋಡುವುದನ್ನು ನಿಲ್ಲಿಸಿದ್ದರು.
 
ಕಾರ್ಯಕ್ರಮ ಮುಗಿಸಿಕೊಂಡು ಹೊರಬಂದಾಗ ಜ್ಯೂಜ಼ರ್ ನಮಗಾಗಿ ಕಾಯುತ್ತಿದ್ದ. ಹೇಗಿತ್ತು ಲಿಡೋ ಶೋ ಎಂದು ಅವನು ಗುರುಬಸವಯ್ಯನವರನ್ನೇ ಮೊದಲು ಕೇಳಿದ್ದಕ್ಕೆ ಅವರು ’ಫ಼ಸ್ಟ್ ಕ್ಲಾಸ್, ಫ಼ಸ್ಟ್ ಕ್ಲಾಸ್’ ಅಂದರು. ರೂಮಿಗೆ ಹಿಂದಿರುಗುವಾಗ ಜ್ಯೂಜ಼ರ್ ನಾಳೆ ಬೆಳಿಗ್ಗೆ ಬೇಗನೇ ಏಳಬೇಕೆಂದೂ ಐಫ಼ಲ್ ಟವರ್ ನೋಡಿಕೊಂಡು ಬೆಲ್ಜಿಯಮ್ ದೇಶದ ಬ್ರುಸೆಲ್ಸ್ ಗೆ ನಮ್ಮ ಪ್ರಯಾಣವೆಂದ. ಬ್ರುಸೆಲ್ಸ್ ಅಂದ ಕೂಡಲೇ ಪುಳಕಿತರಾದ ಗುರುಬಸವಯ್ಯನವರು ಅಲ್ಲಿ ಸಾಂಬಾ ಡಾನ್ಸ್ ಸಕತ್ ಆಗಿರುತ್ತದೆ ಅಂದರು. ಬ್ರೆಜಿಲಿನಲ್ಲಿ ಸಂಬಾ ಡಾನ್ಸ್ ಎಂದು ಕೇಳಿದ್ದೆ. ಬ್ರುಸೆಲ್ಸ್ ನಲ್ಲಿ ಕೂಡಾ ಸಾಂಬಾ ಡಾನ್ಸ್ ಆಡ್ತಾರಾ ಎಂಬ ಅನುಮಾನ ನನ್ನಲ್ಲಿ ಇಣುಕಿತಾದರೂ ನಾಳೆ ಅದರ ಬಗ್ಗೆ ಕೇಳೋಣವೆಂದುಕೊಂಡು ಸುಮ್ಮನಾದೆ. ಇಲ್ಲಿ ಎರಡು ಗಂಟೆಯ ಲಿಡೋ ಶೋ ಗೆ ೯೫ ಯೂರೋಗಳನ್ನು ಅಂದರೆ ಸುಮಾರು ಆರು ಸಾವಿರ ರೂಗಳನ್ನು ತೆತ್ತು ಬಂದವರು ಒಂದು ಡಾನ್ಸ್ ಅನ್ನೂ ಸರಿಯಾಗಿ ನೋಡದೇ ಪವಡಿಸಿದ್ದವರು ಈಗ ಸಾಂಬಾ ಡಾನ್ಸ್ ನೆನಪಿಸಿಕೊಂಡಿದ್ದು ನಮ್ಮನ್ನು ಚಕಿತಗೊಳಿಸಿತ್ತು.
 
ಯೂರೋಪಿನ ಹೈ ಫ಼ೈ ಸಂಸ್ಕೃತಿಯ ಪರಿಚಯವಾಗುತ್ತಿದ್ದ ನಮಗೆ ಅಲ್ಲಿನ ಹೈಟೆಕ್ ಕಳ್ಳರ ಪರಿಚಯವೂ ಆಗುವ ಸಮಯ ಎದುರಾಗಿತ್ತು. ಆ ಕಳ್ಳರು ತಮ್ಮ ಹೈಟೆಕ್ ತಂತ್ರವನ್ನು ಪ್ರಯೋಗಿಸಲು ಯಾಕೋ ನನ್ನನ್ನೇ ಆಯ್ಕೆ ಮಾಡಿಕೊಂಡಿದ್ದರು!

 
(ಮುಂದುವರೆಯುವುದು)