ಅಂಗಳ      ಪಂಚವಟಿ
Print this pageAdd to Favorite
 
 
 

 (ಪುಟ ೧೩) ಮೊದಲು ಮಾನವ ಅಲ್ಲಲ್ಲಾ...ಸ್ಕಿಲ್ಡ್ ವರ್ಕರ್ ಆಗು...

ಬೇಲಾ ಮರವ೦ತೆ

 (ಪುಟ ) 
 (ಪುಟ ೧೦)
 (ಪುಟ ೧೧) 
ನಾನು ಜೋ ಮತ್ತು ಮಿಶೆಲ್ ರನ್ನು ಮುಂದಿನವಾರವೇ ಊಟಕ್ಕೆ ಕರೆದೆ. ’ನಾವು ಬರ್ತಾ ಏನು ತರಬೇಕು? ನೀವು ಯಾವ ಪಾನೀಯ ಇಷ್ಟ ಪಡ್ತೀರಾ?’ ಮಿಶೆಲ್ ಫೋನ್ ಮಾಡಿದ್ದಳು. ’ನಾವು ಕುಡಿಯೋದಿಲ್ಲ...ನಿನಗೆ ಕುಡಿಯೋಕೆ ಏನು ಇಷ್ಟಾನೋ ಅದನ್ನು ತೆಗೆದುಕೊಂಡು ಬಾ’ ಅಂದೆ. ಇಲ್ಲಿಗೆ ಬಂದ ಮೇಲೆ ಇದೊಂದು ವಿಷಯವನ್ನು ಗಮನಿಸಿದ್ದೆ.  ನಾವು ಯಾರಾದರೂ ಮಿತ್ರರ ಮನೆಗೆ ಭೇಟಿ ಕೊಟ್ಟರೆ ಅವರಿಗೆ ಎಂದು ವೈನ್ ಅಥವಾ ಶಾಂಪೇನ್ ಬಾಟಲ್ ಕೊಡುಹೋಗುತ್ತಿದ್ದೆವು. ಆ ಮಿತ್ರರ ಜೊತೆ ತುಂಬಾ ಸಲಿಗೆ ಇದ್ದಾಗ ಅವರಿಗೆ ಏನು ಬೇಕೋ ಅದನ್ನು ತೆಗೆದುಕೊಂಡು ಬಂದುಬಿಡಿ ಎನ್ನುತ್ತಿದ್ದೆವು. ಇದನ್ನು ನಾವು ಇಲ್ಲಿನವರಿಂದಲೇ ಕಲಿತದ್ದು. ಆಗ ಅವರಿಗೆ ಏನು ಇಷ್ಟ ಅಂತ ಆಲ್ಕೋಹಾಲ್ ಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದು ತಪ್ಪುತ್ತಿತ್ತು. ಅವರೂ ಮುಜುಗರವಿಲ್ಲದೆ ನಮ್ಮೊಟ್ಟಿಗಿದ್ದಾಗ ಅವರಿಗಿಷ್ಟವಾದ ಪಾನೀಯ ಕುಡಿಯುತ್ತಿದ್ದರು. ಹಾಗಂತ ಎಂದೂ ಯಾರೂ ಅತಿಯಾಗಿ ಗಡಾಂಗಿನಂತೆ ಕುಡಿದು ಮತ್ತೇರಿ ಉರುಳಾಡಿದ್ದನ್ನು ನೋಡಿಲ್ಲ. ಅದ್ಯಾಕೆಂದು ಗೊತ್ತಿಲ್ಲ, ಆದರೆ ಸ್ನೇಹಿತರು ಸೇರಿದಾಗ ಅವರ ಬ್ರೈನ್ ಗಳನ್ನು ಸಡಿಲ ಮಾಡಿಕೊಂಡು ಒಂಚೂರು ಸಲೀಸಾಗಿ ಸೋಶಿಯಲೈಜ಼್ ಮಾಡಲು ಸಹಾಯ ಅಂತಲೋ ಏನೋ? ಅಥವಾ ಅದೊಂದು ಸ್ಟೈಲೋ ಅಂತಲೋ...ಇಲ್ಲಿ ಆಲ್ಕೊಹಾಲ್ ಬಹಳ ಸಾಮಾನ್ಯವಾಗಿರುತ್ತಿತ್ತು.
 
ಆ ಸಂಜೆ ಮಿಶೆಲ್-ಜೋ ಬಂದಾಗ ಅವರನ್ನು ಬರಮಾಡಿಕೊಳ್ಳಲು ನಾವು ನಾಲ್ವರೂ ಇದ್ದೆವು. ಹುಡುಗರು ತುಂಬಾ ಆರಾಮಾಗಿ ಸೌಹಾರ್ದದಿಂದ ಅವರನ್ನು ಮಾತಾಡಿಸಿದರು. ಮಿಶೆಲ್ ಗೆ ಯಾರನ್ನಾದರೂ ಮಾತಾಡಿಸುವ, ಸಂವಾದಕ್ಕಿಳಿಸುವ ಕಲೆ ಗೊತ್ತಿದ್ದಂತಿತ್ತು. ಮೀಡಿಯಾ, ಸಿ ಎನ್ ಎನ್, ಅಮೆರಿಕಾದ ರಾಜಕೀಯ, ಗೇ ಹಕ್ಕುಗಳು, ಕೆನಡಾದ ಬ್ರಿಟಿಷ್ ಕೊಲಂಬಿಯಾದಲ್ಲಿ ಸಲಿಂಗಿಗಳಿಗಿರುವ ಸ್ವಾತಂತ್ರ್ಯ, ಸ್ಯಾನ್ ಫ್ರಾನ್ಸಿಸ್ಕೋ ನ ಮೇಯರ್ ಅವರುಗಳಿಗೆ ಮಾಡಿರುವ ಪ್ರಾಮಿಸ್, ಮಿಶೆಲ್ ಆ ಕುರಿತು ಮಾಡುತ್ತಿರುವ ಡಾಕ್ಯುಮೆಂಟರಿ...ಪುಂಖಾನು ಪುಂಖವಾಗಿ ಹಳೇ ಸ್ನೇಹಿತರಂತೆ ಮಾತಾಡಿಕೊಂಡೆವು. ಮಿಶೆಲ್ ನಮ್ಮೂರ ಸದ್ದುಗಳು, ಅಲ್ಲಿನ ಬಣ್ಣಗಳು, ಅಲ್ಲಿನ ಜನರ ಭಾವ ತುಂಬಿದ ಮುಖಗಳನ್ನು ಸುಂದರವಾಗಿ ಬಣ್ಣಿಸುತ್ತಾ ನೆನಪಿಸಿಕೊಳ್ಳುತ್ತಿದ್ದಳು. ನಾನು ಅಲ್ಲಿದ್ದಾಗ ನನಗೆ ಒಂಟಿ ಅನ್ನುವ ಭಾವನೆಯೇ ಬಂದಿರಲಿಲ್ಲ. ವಾಪಸ್ ಇಲ್ಲಿಗೆ ಬಂದು ಏರ್ಪೋರ್ಟ್ ನಲ್ಲಿ ಟ್ಯಾಕ್ಸಿ ಹಿಡಿದಾಗ ನಾನು ಎಷ್ಟು ಒಂಟಿ ಅಂತ ಅನುಭವವಾಯ್ತು...ಅಂತೆಲ್ಲಾ ತನ್ನ ಇಂಡಿಯಾ ಪ್ರವಾಸದ ಅನುಭವ ಹೇಳಿಕೊಂಡಳು.
 
ನನ್ನ-ಸ್ಮಿತಾರ ದಕ್ಷಿಣ ಭಾರತೀಯ ಅಡುಗೆಯ ಮೆನು ಮಿತಿ ಮೀರಿ ಹೋಗಿತ್ತು. ಹೊಸ ಗೆಳತಿಯರ ಉತ್ಸಾಹದಲ್ಲಿ ಸಿಕ್ಕಾಪಟ್ಟೆ ವೆರೈಟಿ ಮಾಡಿಬಿಟ್ಟಿದ್ದೆವು. ನಮ್ಮ ಗೆಳತಿಯರು, ಗಂಡಂದಿರು ನಮಗೇ ಆಶ್ಚರ್ಯ ಹುಟ್ಟಿಸುವಂತೆ ಅಷ್ಟೇ ಸಲಿಗೆಯಿಂದ ಚನ್ನಾಗಿ ಬಾರಿಸಿ ಎಲ್ಲರೂ ಉಸ್ಸೆಂದು ಕೂತೆವು. ಮಿಶೆಲ್ ನೀವು ಮುಂದಿನ ಸಾರಿ ಇಂಡಿಯಾಗೆ ಹೋಗುವ ಮುನ್ನ ತಿಳಿಸಿದರೆ ನಾವೂ ಪ್ಲಾನ್ ಮಾಡಿ ೨ ವಾರಕ್ಕಾದರೂ ಅಲ್ಲಿಗೆ ಬರುತ್ತೇವೆ ಎಂದಳು. ನಮಗೂ ಅವರಿಬ್ಬರೂ ತುಂಬಾ ಇಷ್ಟವಾಗಿದ್ದರು. ಜೋ ನನ್ನ ಚಿನ್ನದ, ಚಿನ್ನದ್ದಲ್ಲದ ಎಲ್ಲಾ ಓಲೆ, ಜುಮುಕಿ, ಆಭರಣಗಳ ಫೋಟೊ ತೆಗೆದುಕೊಂಡಳು. ಅವಳು ಸಧ್ಯದಲ್ಲೇ ಸ್ಯಾನ್ ಫ್ರಾನ್ಸಿಸ್ಕೋ ಸಿಟಿಯಲ್ಲಿ ಭಾರತೀಯ ಮೂಲದವರ ಮನೆಯೊಂದರ ಇಂಟೀರಿಯರ್ ಡಿಸೈನ್ ಮಾಡುತ್ತಿದ್ದಳಂತೆ. ರಾತ್ರಿ ಹೆಚ್ಚಾಯಿತೆಂದು ಅವರಿಬ್ಬರೂ ನಮಗೆಲ್ಲರಿಗೂ ಹಗ್ ಮಾಡಿ  ಊಟ, ಮಾತುಕತೆ, ನಮ್ಮ ಸಾಂಗತ್ಯ ಎಲ್ಲವನ್ನೂ ಬಾಯಿ ತುಂಬಾ ಹೊಗಳಿಕೊಂಡು, ಇನ್ನೆರಡು ವಾರದಲ್ಲಿ ಜೋ ಳ ಅಮ್ಮ ಬರುವವರಿದ್ದು ಆಗ ಎಲ್ಲರೂ ಅವರ ಮನೆಗೆ ಬರಲೇಬೇಕೆಂಬ ಆಮಂತ್ರಣ ಕೊಟ್ಟು ಹೊರಟರು.
 
’ನಿಜಕ್ಕೂ ಒಳ್ಳೆ ಮನುಷ್ಯರು ಬಿಲ್ಲೀ...ಜಾಸ್ತಿ ನಾಟಕ, ಹ್ಯಾಂಗ್ ಅಪ್ಸ್ ಏನೂ ಇಲ್ಲ...ಒಳ್ಳೆ ಫ್ರೆಂಡ್ಸ್ ಬಿಡು...’ ಪ್ರಶಾಂತ ಕಾಂಪ್ಲಿಮೆಂಟ್ ಕೊಟ್ಟ. ಅವರದ್ದೇ ಆದ ದೈಹಿಕ ಆಯ್ಕೆ ಅಥವಾ ಜೈವಿಕ ಆಯ್ಕೆ ಬಿಟ್ಟರೆ ಆ ಹುಡುಗಿಯರು ನಿಜಕ್ಕೂ ಎಲ್ಲರಂತವರು, ತೂಕದಿಂದ ಇದ್ದವರು. ಇನ್ಫ್ಯಾಕ್ಟ್, ನಾವು ಅಲ್ಲಿವರೆಗೂ ಭೇಟಿ ಮಾಡಿದ್ದ, ಮಾತಾಡಿಸಿದ್ದ ಇತರೆ ಮುಕ್ಕಾಲು ಪಾಲು ಜನರಿಗಿಂತ ಮೇಲು. ಯಾಕೆಂದರೆ ಭಾರತದಿಂದಲೇ ಬಂದು ಇಲ್ಲಿ ನೆಲೆಸಿರುವ ಸುಮಾರು ಮಂದಿಯ ಜೊತೆ ಮಾತಾಡಿದ್ದಾಗ ಒಂದಲ್ಲಾ ಒಂದು ಸಂಭಾಷಣೆಯಲ್ಲಿ ಭಾರತ ಎಷ್ಟು ಗಲೀಜು, ಅಲ್ಲಿನ ಭ್ರಷ್ಟಾಚಾರ, ಅಲ್ಲಿನ ತೂತೆದ್ದು ಹೋದ ರೋಡುಗಳು, ಅಲ್ಲಿನ ಸಹಿಸಲಾರದ ಗಾಳಿ, ಅಲ್ಲಿನ ಕಚಿಪಿಚಿ ಜನ...ಸಹಿಸಲೇ ಅಸಾಧ್ಯವೆಂಬಂತೆ ನಮ್ಮ ಭಾರತೀಯರೇ ಬೇಕಾಬಿಟ್ಟಿ ಮಾತಾಡಿದ್ದರು. ಇವರು ನಿಜವಾಗಲೂ ಇಂಡಿಯಾದಲ್ಲೇ ಹುಟ್ಟಿದ್ರಾ?! ಎಂದು ನನಗೆ ಆಶ್ಚರ್ಯವಾಗುತ್ತಿತ್ತು. ಏನೋ ವಿಧಿಯ ತಪ್ಪಿನಿಂದಾಗಿ ಅಲ್ಲಿ ಹುಟ್ಟಿ, ಅಲ್ಲಿನ ತಂದೆ ತಾಯಿಯ ಪ್ರೀತಿ ಪಡೆದು, ವಿದ್ಯಾಭ್ಯಾಸ ಪಡೆದು, ಇಪ್ಪತ್ಮೂರು-ಇಪ್ಪತ್ತೈದು ವರ್ಷದ ದಾಂಡಿಗರಾಗಿ ಬೆಳೆದು...ಆಮೇಲೆ ವಿಧಿಗೆ ತನ್ನ ತಪ್ಪಿನ ಅರಿವಾಗಿ ಅವರನ್ನು ಅವರು ತಲುಪಬೇಕಾದ ಸ್ವಸ್ಥ ಸ್ಥಾನಕ್ಕೆ ತಂದು ಬಿಟ್ಟಿದೆ ಎಂಬಂತಿತ್ತು ಅವರ ಇಮೇಜು.
 
ಭಾರತವನ್ನು ಯಾರೂ ವಿಮರ್ಶಿಸಲೇ ಬಾರದು, ಅದು ಸ್ವರ್ಣ ದೇಗುಲ, ಅದು ಯಾವುದಕ್ಕೂ ಸರಿಸಾಟಿಯಿಲ್ಲದ್ದು ಅಂತಲೇ ಎಲ್ಲ ಭಾರತೀಯನೂ ಅಭಿಪ್ರಾಯ ಪಡಬೇಕು ಎಂದು ನಾನು ಹೇಳುತ್ತಿಲ್ಲ. ಹಾಗೇ, ಅಮೆರಿಕಾದಲ್ಲಿ ಜೀವಿಸುತ್ತಿರುವುದೇ ಜೀವನದ ಮಹಾನ್ ಅದೃಷ್ಟ, ಅಮೆರಿಕಾದಲ್ಲಿ ಬಡತನವೇ ಇಲ್ಲ, ಭ್ರಷ್ಟಾಚಾರವೇ ಇಲ್ಲ, ಇಲ್ಲಿ ಎಲ್ಲವೂ ಸುಂದರ ಅನ್ನುವ ಮೂರ್ಖತನವೂ ಇಲ್ಲ. ಆದರೂ ಸಮಯ, ಸಂಭಾಷಣೆಗೆ ಅವಕಾಶ ಸಿಕ್ಕಾಗಲೆಲ್ಲಾ ಇಂಡಿಯಾ ಬಗ್ಗೆ ಒಂದು ಚೂರಾದರೂ ಗೋಳಿಕೊಳ್ಳುವುದು ಇಲ್ಲಿ ಬಂದು ನೆಲೆಸಿರುವವರಲ್ಲಿ ಕೆಲವರ ಸ್ಟೈಲ್ ಅಂತ ನನಗೆ ಅನ್ನಿಸಿತ್ತು.
 
ವೈದ್ಯವೃತ್ತಿ-ಕಂಪ್ಯೂಟರ್ ಅನ್ನು ಕಲಿತೋ, ವಿಜ್ನಾನ-ಗಣಿತದ ವಿಷಯಗಳ ಹೈಯರ್ ಸ್ಟಡಿ ಮಾಡಿಯೋ ಅಮೆರಿಕಾಗೆ ಬರುವ ಭಾರತೀಯರಿಗೆ ಒಬ್ಬ ಸಾಧಾರಣ ಅಮೆರಿಕನ್ ಪ್ರಜೆಗೆ ಸಿಗುವುದಕ್ಕಿಂತ ಒಳ್ಳೆಯ ಕೆಲಸ ಸಿಗುತ್ತದೆ. ಸಂಬಳವೂ ಅಷ್ಟೇ. ಜೀವನಕ್ಕೆ ಬೇಕಾಗುವ ಸಾಮಾನ್ಯ ಅಗತ್ಯಗಳಾದ ಮನೆ-ಕಾರು-ಸಾಮನುಗಳು ಎಲ್ಲವೂ ತಕರಾರಿಲ್ಲದೆ ಸಿಗುತ್ತದೆ. ಅದಕ್ಕೆ ಸಂಬಳ ಬರುವ ಕೆಲಸ, ಸಾಲ ಕೊಡಲು ತಯಾರಿರುವ ಕ್ರೆಡಿಟ್ ಕಾರ್ಡುಗಳಿದ್ದರೆ ಸಾಕು. ನಲ್ಲಿ ನೀರು, ಎಲೆಕ್ಟ್ರಿಸಿಟಿ, ಕೇಬಲ್, ಗ್ಯಾಸ್ ಇತ್ಯಾದಿ ಬಿಲ್ಲು ಕಟ್ಟಲು ಆತ ಅಥವಾ ಆಕೆ ಕಾರ್ಪೊರೇಷನ್ನಿನ ಆಫೀಸುಗಳಿಗೋ ಅಲ್ಲಿಗೋ ಇಲ್ಲಿಗೋ ಹೋಗಿ ಕ್ಯೂ ನಿಂತು ಕಟ್ಟುವಂತಿರುವುದಿಲ್ಲ. ಬ್ಯಾಂಕುಗಳಲ್ಲೂ ಕ್ಯೂ ನಿಲ್ಲಬೇಕೆಂದೇನಿಲ್ಲ. ಕಂಪ್ಯೂಟರ್-ಇಂಟರ್ ನೆಟ್ ಇದ್ದರೆ ಕಕ್ಕಸ್ ಕಮೋಡಿನ ಮೇಲೆ ಕುಳಿತೇ ಎಲ್ಲಾ ಬಿಲ್ಲು-ಬ್ಯಾಲೆನ್ಸು ಗಳ ಕತೆ ಮುಗಿಸಿಬಿಡಬಹುದು. ಅವರು ತಮ್ಮ ತಮ್ಮ ಇಮ್ಮಿಗ್ರೇಷನ್ ದಾಖಲೆಗಳನ್ನು ಕಾನೂನು ಬದ್ಧವಾಗಿ, ಜೋಪಾನವಾಗಿ ಇಟ್ಟುಕೊಂಡರೆ ಸಾಕು.
 
ಹೀಗಾಗಿ ಅಮೆರಿಕಾಗೆ ಭಾರತದಿಂದ ಬರುವ ವ್ಯಕ್ತಿಗೆ ಸರ್ಕಾರದ ಅಥವಾ ಇನ್ನುಳಿದ ಸಾರ್ವಜನಿಕ ಸಂಸ್ಥೆಗಳ ಜೊತೆ ಸಂಪರ್ಕಿಸುವ ಅಥವಾ ದಿನನಿತ್ಯದ ಕೆಲಸಗಳಿಗಾಗಿ ಇಂಟರಾಕ್ಟ್ ಮಾಡುವ ಅಗತ್ಯ ಬೀಳುವುದಿಲ್ಲ. ತಾನು, ತನ್ನ ಕೆಲಸ, ತನ್ನ ಮನೆ, ವೀಕೆಂಡುಗಳಲ್ಲಿ ಸ್ನೇಹಿತರ ಮನೆ ಅಥವಾ ಪ್ರವಾಸೀ ತಾಣಗಳು, ಮೂವಿಗಳು, ಸಮಯ ಇದ್ದು ತನ್ನ ದೇಹಕ್ಕೆ ಸ್ವಲ್ಪ ಅಟೆನ್ಷನ್ ಕೊಡಬೇಕು ಎನ್ನಿಸಿದರೆ ಜಿಮ್ ಗಳು, ಟೆನಿಸ್ ಕ್ಲಾಸುಗಳು, ಗಾಲ್ಫ್ ಕ್ಲಾಸುಗಳು..ಹೀಗೆ ತನ್ನದೇ ಒಂದು ಪ್ರಪಂಚವನ್ನು ಕಟ್ಟಿಕೊಂಡು ಬಿಡುತ್ತಾನೆ. ಇದನ್ನು ಹೀಗೇ ಮಾಡು...ಹೀಗೆ ಮಾಡಬೇಡ, ಇದು ನಿನಗೆ ಈಗ ಯಾಕೆ ಬೇಕಿತ್ತು? ಅಂತೆಲ್ಲಾ ಪುಂಖಾನುಪುಂಖವಾಗಿ ಸಲಹೆ ಕೊಡುವ, ಆತನ ಆಯ್ಕೆಗಳೊಳಗೆ ಮೂಗು ಮುಖ ತೂರಿಸಿಬಿಡುವವರ ಪೈಕಿಯವರು ಇಲ್ಲಿ ಯಾರೂ ಇರುವುದಿಲ್ಲವಾದ್ದರಿಂದ ಈ ಹೊಸ ಸ್ವಚ್ಚಂದಕ್ಕೆ, ಸ್ವಾತಂತ್ರಕ್ಕೆ ಪುಳಕಗೊಳ್ಳುತ್ತಲೇ ಬೆಳೆಯುತ್ತಾನೆ.
 
ಹಾಗೆಯೇ, ಬಹಳಷ್ಟು ಮಂದಿಗೆ ತಾವಿರುವ ಜಾಗದ ಮೇಯರ್ ಯಾರು, ತಾವಿರುವ ಜಾಗದ ಸೆನೆಟರ್ ಯಾರು ಎಂಬುದರ ತಿಳಿವೂ ಇರುವುದಿಲ್ಲ. ಅದನ್ನೆಲ್ಲಾ ತಿಳಿದುಕೊಳ್ಳುವುದು ಪ್ರಜೆಗಳ ಕೆಲಸ. ಆದರ ಆತ ಪ್ರಜೆ ಅಲ್ಲವಲ್ಲ! ಆತನದ್ದೊಂದು ವಿಚಿತ್ರ ಐಡೆಂಟಿಟಿ-ಸ್ಕಿಲ್ಡ್ ವರ್ಕರ್ (skilled worker) ಎಂಬುದು. ಈ ಗುರುತು ವೀಸಾ ಮೇಲಿದ್ದರೆ ಸರಿ, ಅದು ವಿದೇಶಿಯನೊಬ್ಬನನ್ನು ಗುರುತಿಸಲು ಆಯಾ ದೇಶಗಳ ಅಧಿಕಾರಿಗಳಿಗೆ ಅನುಕೂಲವಾಗುತ್ತದೆ. ಆದರೆ ಆ ಗುರುತು ಅವನ ಅಸ್ತಿತ್ವದ ಮೇಲೆ ಹೊಡೆದ ಸ್ಟಾಂಪ್ ಆಗಿ ಬಿಡುತ್ತದೆ. ಆ ಭಾರತೀಯನಿಗೆ ’ಸ್ಕಿಲ್ಡ್ ವರ್ಕರ್’ ಆಗೇ ದಿನನಿತ್ಯದ ಸಾಮಾಜಿಕ ಬದುಕನ್ನು ರೂಪಿಸಿಕೊಳ್ಳುವುದೂ ಅವಶ್ಯಕವಾಗಿಬಿಡುತ್ತದೆ. ಆತ ತನ್ನ ಸ್ಕಿಲ್ ಗಳನ್ನು ಕಾಪಾಡಿಕೊಂಡೇ ’ಸ್ಕಿಲ್ಡ್ ಹಾರ್ಡ್ ವರ್ಕರ್’ ಆಗಿ ದುಡಿಯುತ್ತಾನೆ. ದುಡಿಮೆ ಮತ್ತು ಅದರಲ್ಲಿ ಅವನಿಗಿರುವ ಸ್ಕಿಲ್ ಗಳೇ ಅವನ ಸಧ್ಯದ ಬದುಕಿನ ಐಡೆಂಟಿಟಿ ಆಗಿ ಬಿಡುತ್ತವೆ. ಆ ಸ್ಕಿಲ್ ಗಳು ಇದ್ದರೆ ಕೆಲಸ, ಕಾಸು, ವೀಸಾ, ಅಮೆರಿಕಾ ವಾಸ, ಆ ವಾಸದಿಂದ ಸಿಗುವ ಅವಕಾಶಗಳು, ಅನುಕೂಲಗಳು, ಸ್ವಚ್ಚಂದ ಬದುಕು ಇತ್ಯಾದಿ...ಹೀಗಾಗಿ ಸ್ಕಿಲ್ ಮತ್ತು ಕೆಲಸಗಳೇ ಜೀವನದ ಪರಮೋಚ್ಛ ಮೌಲ್ಯಗಳಾಗುತ್ತವೆ. ಬರುತ್ತಾ ಬರುತ್ತಾ ಆತ ಈ ನೆಲೆಯಲ್ಲೇ ಯೋಚಿಸತೊಡಗುತ್ತಾನೆ. ಬೆಳಿಗ್ಗೆ ಎದ್ದು ಕಣ್ಣು ಬಿಟ್ಟರೆ ಬ್ರೇನಿನಲ್ಲಿ ಸ್ಕಿಲ್-ಕೆಲಸ ಬಟನ್ ಗಳು ಪೀಂ ಪೀಂ ಎಂದು ಆನ್ ಆಗುತ್ತವೆ. ಬೆಂಗಳೂರು, ತಂಜಾವೂರು, ಸಿಕಂದರಾಬಾದಿನ ಗಲ್ಲಿ ಗಲ್ಲಿ ಗಳಲ್ಲಿ ಚಿನ್ನಿ ದಾಂಡು, ಕ್ರಿಕೆಟ್ ಆಡಿಕೊಂಡೇ ಇಂಜಿನಿಯರಿಂಗ್-ಡಾಕ್ಟರ್ ಪದವಿ ಮುಗಿಸಿಕೊಂಡ ಚುರುಕು ಹುಡುಗ ಹುಡುಗಿಯರು ಮುಂದೊಂದು ದಿನ ಹೀಗೆ ಹೆಚ್ ೧ ಇತ್ಯಾದಿ ವೀಸಾಗಳ ಅಚ್ಚೊತ್ತಿಸಿಕೊಂಡು ’ಹಾರ ಗುದುರಿ’ ಏರಿ ತಮ್ಮ ಸ್ಕಿಲ್ ಗಳ ಬಲದಿಂದ ಬದುಕ ಜಯಿಸಲು ಹೊರಡುತ್ತಾರೆ.
 
ಇಂಥವರು ಇದನ್ನೇ ಮಾಡಬೇಕು, ಆಡಬೇಕು, ಇಲ್ಲೇ-ಹೀಗೇ ಇರಬೇಕು ಎಂಬ ಅಲಿಖಿತ ಸಾಮಾಜಿಕ ನಿರ್ಬಂಧಗಳೋ-ನಿರೀಕ್ಷೆಗಳೋ ಅಮೆರಿಕಾದಲ್ಲಿ ಇಲ್ಲವಾದ್ದರಿಂದ, ಹಾಗೇ ಅವಕಾಶಗಳಿಗೆ ಇನ್ನೂ (ರಿಸೆಷನ್ ಆದರೂ, ಆರ್ಥಿಕ ಹಿನ್ನಡೆ ಇದ್ದರೂ) ಕೊರತೆಯಿಲ್ಲವಾದ್ದರಿಂದ ಇಲ್ಲಿಗೆ ಬರುವ ಭಾರತೀಯ ಇಡೀ ವಿಶ್ವ ನನ್ನದು ಎಂಬಂತಾಗಿಬಿಡುತ್ತಾನೆ. ತಾನು ಹುಟ್ಟಿ, ಬೆಳೆದು, ಸ್ಪರ್ಧಾತ್ಮಕವಾಗಿ ಸೆಣೆಸಿ ವಿದ್ಯೆ ಪಡೆದ ಭಾರತದ ತುಂಬಾ ಅವನಿಗೆ ಇಂಪರ್ಫೆಕ್ಷನ್ ಕಾಣತೊಡಗುತ್ತದೆ. ಅಮೆರಿಕಾದ ಮಾರ್ಕೆಟ್ ಸಂಸ್ಕೃತಿಯ ರುಚಿ ಹತ್ತಿ, ತಾನು ದುಡಿಯುವ ದುಡ್ಡೇ ತನಗೆ ಸರ್ವಸ್ವವನ್ನೂ ನೀಡಬಲ್ಲದೆಂದು ನಂಬುತ್ತಾನೆ. ಕೆಲವೊಮ್ಮೆ ಅನಗತ್ಯವಾಗಿ ಗರ್ವಿ-ದುರಹಂಕಾರಿಯೂ ಎನಿಸಿಬಿಡುತ್ತಾನೆ.
ಹಾಗಂತ ನಾನು ಅಮೆರಿಕಾದಲ್ಲಿರುವ ಎಲ್ಲ ಭಾರತೀಯರನ್ನು ಜೆನರಲೈಜ಼್ ಮಾಡುತ್ತಿಲ್ಲ. ಹಾಗೆ ಮಾಡುವ ಮುಠ್ಠಾಳತನ ನನಗಿಲ್ಲ. ನಾನು ಕಂಡ ಹತ್ತು ಹಲವು ಬಗೆಯ ಮಂದಿ ಮನಸ್ಸುಗಳನ್ನು ಒಂದೊಂದಾಗಿ ನನ್ನ ಲಹರಿಯಲ್ಲಿ ನಾನು ಅರ್ಥ ಮಾಡಿಕೊಳ್ಳುತ್ತಿದ್ದೇನಷ್ಟೇ...

(ಮುಂದುವರಿಯುವುದು)
 
 
 
 
 
 
Copyright © 2011 Neemgrove Media
All Rights Reserved