ಅಂಗಳ      ++
Print this pageAdd to Favorite
 
 

ತಮಿಳು ಸಿನಿಮಾಗಳಿಗೆ ಕರ್ನಾಟಕದಲ್ಲಿ ಬಹಿಷ್ಕಾರ

 
ಜಾಣಗೆರೆ ವೆಂಕಟರಾಮಯ್ಯ, ಬಿ ಎಸ್ ಶಿವಪ್ರಕಾಶ್

(ಜನ ಕಾನೂನಿನ ವಿರುದ್ಧ ತಿರುಗಿ ಆಕ್ರೋಶಗೊಂಡು ಜನ-ಜೀವನ ಹಾನಿ ಮಾಡುವುದನ್ನು ಸರಿ ಎಂದು ನಾವು ಕಾವೇರಿ ಚಳುವಳಿಯ ವಿವರಗಳನ್ನು ಇಲ್ಲಿ ಬರೆಯುತ್ತಿಲ್ಲ. ಕರ್ನಾಟಕದ ಜನ ತಮ್ಮ ನಾಡಿಗಾಗಿ, ರೈತರಿಗಾಗಿ, ನೀರಿಗಾಗಿ, ತಮ್ಮ ಹಿತಾಸಕ್ತಿಗೆಂದು ಒಗ್ಗಟ್ಟಾಗಿ ಒಕ್ಕೊರಲಿನಲ್ಲಿ ಪ್ರತಿಭಟಿಸಿದ ಚಳುವಳಿ ಇದೊಂದೇ. ಕಾವೇರಿಗಾಗಿ ನಡೆದ ಚಳುವಳಿಯ ನಂತರ ಬೇರೆಲ್ಲೂ ಕರ್ನಾಟಕದ ಜನ ಈ ಪರಿ ಒಗ್ಗಟ್ಟಿನಿಂದ ವರ್ತಿಸಿರಲಿಲ್ಲ. ಈಗ ಬಿಡಿ. ಬಂದ್ ಗಳು, ಚಳುವಳಿಗಳು ಕೇವಲ ಒಂದೋ ಎರಡೋ ರಾಜಕೀಯ ಪಕ್ಷಗಳ, ನಾಯಕರ ಅನುಕೂಲಗಳಿಗೆ ಮಾತ್ರ ನಡೆಯುತ್ತವೆ. ಚಳುವಳಿ ಎಂಬ ಸಂಚಲನವೇ ಅರ್ಥ ಕಳೆದುಕೊಂಡಿದೆ. ಅದೂ ಒಂದು ರೋಲ್ ಕಾಲ್ ಆಗಿದೆ. ಎಷ್ಟು ಲಕ್ಷ ಅಥವಾ ಕೋಟಿ ಸುರಿದು ಎಷ್ಟು ಜನರನ್ನು ಒಟ್ಟು ಮಾಡಿ ದೊಂಬಿ ಮಾಡಬಹುದು ಎನ್ನುವುದು ಇವತ್ತಿನ ಹೋರಾಟಗಳ ಹೊಟ್ಟೆಪಾಡು. ಹಣ ಮುಖ್ಯವಾಗುತ್ತಾ ಹೋದಂತೆ, ಹೊರಗಿನ ಹಣ ದಾಹೀ ಅಥವಾ ಹಣ ಹೂಡುವ ಶಕ್ತಿಗಳು ನಾಡೊಂದಕ್ಕೆ ನುಗ್ಗಿ ಅಲ್ಲಿನ ಜನರನ್ನು ತಮ್ಮ ನಾಡಿನ ಕುರಿತಾದ ಭಾವನೆಗಳ ನಂಟಿಂದ ದೂರ ಮಾಡಿ ಜನ-ಜೀವನ ಎರಡರ ಮಧ್ಯೆ ಅರ್ಥಮಾಡಿಕೊಳ್ಳಲಾಗದ ಕಂದಕವೊಂದನ್ನು ಸೃಷ್ಟಿಸಿಬಿಡುತ್ತವೆ. ಈಗ ಹೋರಾಟ ಮಾಡುವವರು ಎಂದರೆ ಗೂಂಡಾಗಳು ಎಂದೇ ವ್ಯಾಖ್ಯಾನ. ಅದಕ್ಕೆ ಅದರದ್ದೇ ಕಾರಣಗಳೂ ಇವೆ ಬಿಡಿ.)
 
ಕಾವೇರಿ ನೀರಿಗಾಗಿ ಕರ್ನಾಟಕದಲ್ಲಿ ತೀರ್ವಗೊಂಡ ಚಳವಳಿಯ ಪರಿಣಾಮವಾಗಿ ತಮಿಳುನಾಡಿನ ರಾಜಕಾರಣಿಗಳು ಕೆರಳಿದ್ದರು. ಅವರು ಸಂಸತ್ತಿನಲ್ಲಿ ಗುಡುಗಾಡಿ ಕರ್ನಾಟಕದಲ್ಲಿ ತಮಿಳರ ಮೇಲೆ ಹಲ್ಲೆ, ದೌರ್ಜನ್ಯಗಳು ನಡೆಯುತ್ತಿವೆ, ಪೋಲೀಸರು ಗೋಲೀಬಾರ್ ಮಾಡಿ ಕೊಲ್ಲುತ್ತಿದ್ದಾರೆ, ಲಕ್ಷಾಂತರ ತಮಿಳರು ಜೀವ ಭಯದಿಂದ ಕರ್ನಾಟಕವನ್ನು ಬಿಟ್ಟು ಓಡಿ ಬರುತ್ತಿದ್ದಾರೆ. ಕೇಂದ್ರ ಸರ್ಕಾರ ಸೈನ್ಯವನ್ನು ಕಳಿಸಿ ತಮಿಳರಿಗೆ ರಕ್ಷಣೆಯನ್ನು ಕೊಡಬೇಕು ಎಂದು ಒತ್ತಾಯಿಸತೊಡಗಿದರು. ಇಂತಹ ತಮಿಳುನಾಡು ಸಂಸದರ ಆರೋಪವನ್ನು, ಒತ್ತಡವನ್ನು ಕರ್ನಾಟಕದ ಸಂಸದರು ವಿರೋಧಿಸುವ ಕೆಲಸವನ್ನು ಸರಿಯಾಗಿ ಮಾಡದಿದ್ದುದು ವಿಷಾದದ ಸಂಗತಿಯಾಗಿತ್ತು.

ಕೆಲವಾರು ತಮಿಳು ಸಂಸಾರಗಳು ಓಡಿ ಹೋದದ್ದು ನಿಜವಾದರೂ ತಮಿಳುನಾಡು ಸಂಸದರು ಆರೋಪಿಸಿದಂತೆ ಲಕ್ಷಾಂತರ ಮಂದಿ ಕರ್ನಾಟಕದಿಂದ ಪಲಾಯನ ಮಾಡಿರಲಿಲ್ಲ. ಎಷ್ಟೋ ಮಂದಿ ತಮಿಳರನ್ನು ಕನ್ನಡಿಗರೇ ಆಶ್ರಯ ನೀಡಿ ರಕ್ಷಿಸಿದ್ದರು. ಆಗ ಯಾಕೋ ಏನೋ, ಮಾಧ್ಯಮಗಳು ಕೂಡಾ ಒಟ್ಟಾರೆ ದನಿಯಲ್ಲಿ ಕನ್ನಡಿಗರ ವಿರುದ್ದವೇ ಇದ್ದಂತೆ ಭಾಸವಾಗುತ್ತಿತ್ತು. ಗಲಭೆ ಹೆಚ್ಚಾದಂತೆ ಕರ್ನಾಟಕ ಸರ್ಕಾರ ಮತ್ತು ಪೋಲೀಸರು ಕಠಿಣ ಕ್ರಮಕ್ಕೆ ಮುಂದಾಗಿದ್ದರು. ದುರಂತವೆಂದರೆ ಗೋಲೀಬಾರಿನಲ್ಲಿ ಮೃತಪಟ್ಟ ಕನ್ನಡದ ಕುಟುಂಬಗಳಿಗೆ ಪರಿಹಾರವಿರಲಿ, ಸೌಜನ್ಯದ ಅನುಕಂಪವನ್ನೂ ತೋರುವ ಔದಾರ್ಯತೆ ಕಂಡು ಬರಲಿಲ್ಲ.

ನಂತರ ಕೆಲವು ವಿಚಿತ್ರ ಬೆಳವಣಿಗೆಗಳು ಸಂಭವಿಸಿದ್ದು ಅಘಾತಕಾರಿಯೆನಿಸಿತ್ತು. ಬೆಂಗಳೂರು, ಮಂಡ್ಯ ಮೈಸೂರು ಭಾಗದಿಂದ ಅಷ್ಟಿಷ್ಟು ತಮಿಳರು ಜೀವಭಯದಿಂದ ತಮಿಳುನಾಡಿಗೆ ಓಡಿಹೋಗಿದ್ದರೆ, ತಮಿಳುನಾಡಿನ ಗೂಡಲೂರು, ಊಟಿ, ಗಾಜನೂರು, ತಾಳವಾಡಿ ಮುಂತಾದ ಕಡೆಯಿದ್ದ ಕನ್ನಡಿಗರ ಮೇಲೆ ತಮಿಳರ ದೌರ್ಜನ್ಯ ಮೇರೆ ಮೀರಿತ್ತು. ಅದನ್ನು ಕಂಡೂ ಅಲ್ಲಿಯ ಪೋಲೀಸರು ತೆಪ್ಪಗಿದ್ದುದರ ಪರಿಣಾಮವಾಗಿ ಅಲ್ಲಿಯ ಕನ್ನಡಿಗರು ಕರ್ನಾಟಕದತ್ತ ಓಡಿ ಬರಲಾರಂಭಿಸಿದ್ದರು. ಅವರನ್ನು ಚಾಮರಾಜನಗರದ ಗಡಿ ಗ್ರಾಮಗಳಲ್ಲಿ, ಗುಂಡ್ಲುಪೇಟೆ, ನಂಜನಗೂಡಿನಲ್ಲಿ ನಿರಾಶ್ರಿತರ ಕೇಂದ್ರಗಳನ್ನು ನಿರ್ಮಿಸಿ ಅಲ್ಲಿ ಉಪಚರಿಸಲಾಗಿತ್ತು. ತಮಿಳುನಾಡಿನಲ್ಲಿ ಕನ್ನಡಿಗರ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ಹಿಂಸೆ ನೀಡಿದ್ದ ಅಮಾನವೀಯ ಪ್ರಕರಣಗಳೂ ನಡೆದಿದ್ದವು. ನಿರಾಶ್ರಿತರಾಗಿ ಬಂದಿದ್ದ ತಮಿಳುನಾಡಿನ ಕನ್ನಡಿಗರನ್ನು ಉಪಚರಿಸುವ ಸಲುವಾಗಿ ಬೆಂಗಳೂರಿನ ಕನ್ನಡಾಭಿಮಾನಿಗಳು ತಂಡ ತಂಡವಾಗಿ ತೆರಳಿದ್ದರು. ಇಂತಹ ತಂಡಗಳಿಗೆ ಸಾರ್ವಜನಿಕರು ಉದಾರವಾಗಿ ಎಲ್ಲಾ ರೀತಿಯ ಸಹಾಯ ಮಾಡಿ ಸಹಕರಿಸಿದ್ದರು.

ಹೀಗೆ ಒಂದಿಲ್ಲೊಂದು ರೀತಿಯ ಘಟನೆಗಳು ಕಾವೇರಿ ಕಿಚ್ಚಿನಲ್ಲಿ ನಡೆಯುತ್ತಲೇ ಇದ್ದವು. ಒಂದು ವಾರದ ನಂತರ ಬೆಂಗಳೂರು ಹತೋಟಿಗೆ ಬರತೊಡಗಿತ್ತು. ಮಂಡ್ಯ ಜಿಲ್ಲೆ ಬೇಗನೇ ನಿಯಂತ್ರಣಕ್ಕೆ ಬಂದಿತ್ತು. ಅಲ್ಲಿನ ಕೂಲಿಕಾರರಾಗಿದ್ದ ತಮಿಳರು ಓಡಿಹೋಗಿದ್ದರಿಂದ ತಮ್ಮ ಜಮೀನಿನಲ್ಲಿ ಕೆಲಸ ಮಾಡುವವರು ಸಿಗದಿದ್ದರಿಂದ ಮಂಡ್ಯದ ರೈತರು "ನಮ್ಮ ಕೃಷಿಗೆ ನೆರವಾಗುತ್ತಿದ್ದ ತಮಿಳರು ಓಡಿ ಹೋಗಿರುವುದರಿಂದ ನಮ್ಮ ವ್ಯವಸಾಯಕ್ಕೆ ತೊಂದರೆಯಾಗಿದೆ" ಎಂದು ಗೊಣಗಾಡತೊಡಗಿದ್ದರು. ಅವರ ಈ ಗೊಣಗಾಟ ಅಚ್ಚರಿಯುಂಟು ಮಾಡಿತ್ತು. ಕಾವೇರಿ ನೀರನ್ನು ಬಹುಪಾಲು ಬಳಸಿಕೊಳ್ಳುತ್ತಿದ್ದ ಮಂಡ್ಯ ಜಿಲ್ಲೆಯ ರೈತರು ನೀರಿನ ವಿವಾದ ಭುಗಿಲೆದ್ದಾಗಲೆಲ್ಲಾ ತಮಿಳರ ವಿರುದ್ದ ಕೂಗಾಡುತ್ತಿದ್ದುದು. ಆಗ ರಾಜ್ಯದಾದ್ಯಂತ ಜನರು ಚಳವಳಿ ಮಾಡುತ್ತಿದ್ದರು. ಇದೀಗ ಅಲ್ಲಿನ ರೈತ ನಾಯಕರೆನಿಸಿಕೊಂಡವರು ತಮಿಳರ ಪರವಾಗಿ ಗೊಣಗಾಡಿದ್ದು ಕೊಂಚ ಉದ್ವೇಗ ಮತ್ತು ಗೊಂದಲಗಳನ್ನು ಹುಟ್ಟಿಹಾಕಿತ್ತು! ತಮಿಳುನಾಡಿನ ಸರ್ಕಾರ ಮತ್ತು ಅಲ್ಲಿನ ಸಂಸದರು, ಕರ್ನಾಟಕದಿಂದ ಓಡಿ ಹೋಗಿರುವ ತಮಿಳರಿಗೆ ಮತ್ತೆ ಹಿಂದಿರುಗಲು, ಸಹಜ ಜೀವನ ನಡೆಸಲು ಅನುಕೂಲ ಮಾಡಿಕೊಟ್ಟು ಅವರಿಗಾಗಿರುವ ಹಾನಿಗಳಿಗೆ ಪರಿಹಾರ ನೀಡಬೇಕಲ್ಲದೆ ಅದಕ್ಕೊಂದು ಆಯೋಗವನ್ನು ರಚಿಸಿ ವಿಚಾರಣೆ ನಡೆಸಬೇಕು ಎಂದು ಒತ್ತಾಯಿಸಿದ್ದರಿಂದ ನ್ಯಾಯಮೂರ್ತಿ ಎನ್.ಡಿ. ವೆಂಕಟೇಶ್ ರವರ ನೇತ್ರತ್ವದ ಏಕ ಸದಸ್ಯದ ಆಯೋಗದ ರಚನೆಯಾಯಿತು.

ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿದ್ದ ಎಸ್. ಬಂಗಾರಪ್ಪನವರನ್ನು ಕೆಳಗಿಳಿಸಿ ಕಾಂಗ್ರೆಸ್ ಹೈಕಮಾಂಡ್ ಎಮ್. ವೀರಪ್ಪ ಮೊಯ್ಲಿ ಯವರನ್ನು ಗದ್ದುಗೆಯಲ್ಲಿ ಕೂರಿಸಿತ್ತು. ೧೯೯೩ ರ ಜುಲೈ ೧೮ ರಂದು ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಕರ್ನಾಟಕದಿಂದ ತಮಿಳುನಾಡಿಗೆ ನೀರನ್ನು ಬಿಡಿಸಬೇಕೆಂದು ಒತ್ತಾಯಿಸಿ ಮದ್ರಾಸಿನ ಮರಿನಾ ಬೀಚಿನಲ್ಲಿ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿಬಿಟ್ಟರು. ಅವರ ಉಪವಾಸ ಸತ್ಯಾಗ್ರಹದಿಂದ ಅಕ್ರೋಶಗೊಂಡ ಎ ಐ ಎ ಡಿ ಎಮ್ ಕೆ ಕಾರ್ಯಕರ್ತರು ಅವರ ರಾಜ್ಯದಲ್ಲಿ ಕೇಂದ್ರ ಸರ್ಕಾರದ ಅಪಾರ ಆಸ್ತಿ ಪಾಸ್ತಿಗಳಿಗೆ ಹಾನಿಯುಂಟುಮಾಡಿದ್ದರು. ಇದರಿಂದ ಪೀಕಲಾಟಕ್ಕೆ ಸಿಲುಕಿದ ಕೇಂದ್ರ ಸರ್ಕಾರ ಜಯಲಲಿತಾರನ್ನು ಸಮಾಧಾನ ಪಡಿಸುವ ಸಲುವಾಗಿ ಜುಲೈ ೨೧ ರಂದು ಕೇಂದ್ರ ಸರ್ಕಾರದ ಜಲ ಸಂಪನ್ಮೂಲ ಸಚಿವರಾಗಿದ್ದ ವಿ.ಸಿ. ಶುಕ್ಲರನ್ನು ಕಳಿಸಿಕೊಟ್ಟಿತ್ತು. ಹಾಗೆ ಬಂದ ಸಚಿವರು ಕಾವೇರಿ ಉಸ್ತುವಾರಿ ಸಮಿತಿ ರಚಿಸುವುದಾಗಿಯೂ, ಅದು ಮಧ್ಯಂತರ ಅದೇಶದಂತೆ ಕರ್ನಾಟಕವು ನೀರು ಬಿಡುವಂತೆ ನೋಡಿಕೊಳ್ಳುವುದಾಗಿಯೂ ಭರವಸೆಯಿತ್ತರು. ಆ ಭರವಸೆ ಸಿಕ್ಕ ಬಳಿಕವೇ ಜಯಲಲಿತಾ ತಮ್ಮ ಉಪವಾಸ ನಿಲ್ಲಿಸಿದ್ದು.

ಇದರಿಂದ ಕನ್ನಡಿಗರು ಮತ್ತೆ ಕೆರಳಿದ್ದರು. ಆದರೆ ಬಂಗಾರಪ್ಪನವರು ಕರ್ನಾಟಕದ ಪರ ದನಿಯೆತ್ತಿ ಘರ್ಜಿಸಿದಂತೆ ವೀರಪ್ಪ ಮೊಯ್ಲಿಯವರದ್ದು ಘರ್ಜಿಸುವ ವ್ಯಕ್ತಿತ್ವವಾಗಿರಲಿಲ್ಲ. ಕನಿಷ್ಟ ಪ್ರತಿಭಟನೆಯ ಹೇಳಿಕೆಯನ್ನೂ ಅವರು ನೀಡುವ ಗೋಜಿಗೇ ಹೋಗಲಿಲ್ಲ. ಹೈಕಮಾಂಡ್ ಮುನಿಸಿಕೊಂಡರೆ ತಮ್ಮ ಮುಖ್ಯಮಂತ್ರಿ ಗಾದಿಗೇ ಸಂಚಾರ ಬಂದೀತೆಂಬ ಕಾರಣಕ್ಕೆ ಅವರು ತೆಪ್ಪಗಿದ್ದರು. ಇತ್ತ ಬೆಂಗಳೂರಿನ ಕನ್ನಡಿಗರ ಕೋಪ ತಮಿಳುನಾಡಿನ ರಾಜಕಾರಣಿಗಳಿಗಿಂತ ಹೆಚ್ಚಿಗೆ ಅಲ್ಲಿನ ನಟರುಗಳ ಮೇಲೆ ತಿರುಗಿತ್ತು. ಅದಕ್ಕೆ ಕಾರಣವೂ ಇತ್ತು. ಜಯಲಲಿತಾರ ಉಪವಾಸದ ಸಂದರ್ಭದಲ್ಲಿ ತಮಿಳು ಚಿತ್ರರಂಗವೂ ಭಾಗಿಯಾಗಿ ಬೆಂಬಲ ನೀಡಿ ಕರ್ನಾಟಕವು ತಮಿಳುನಾಡಿಗೆ ನೀರು ಬಿಡದೆ ಅನ್ಯಾಯ ಮಾಡುತ್ತಿದೆಯೆಂದು ಆರೋಪಿಸಿದ್ದರು. ಪ್ರಮುಖವಾಗಿ ರಜನೀಕಾಂತ್, ಕಮಲಾಹಾಸನ್, ಶ್ರೀದೇವಿ ಮುಂತಾದವರು ಅಲ್ಲಿನ ಸತ್ಯಾಗ್ರಹದಲ್ಲಿ ಭಾಗವಹಿಸಿ ಮಾತನಾಡಿದ್ದರು. ಸಿಟ್ಟಿಗೆದ್ದಿದ್ದ ಕನ್ನಡ ಚಳವಳಿ ನಾಯಕರುಗಳಾದ ವಾಟಾಳ್ ನಾಗರಾಜ್, ಜಿ. ನಾರಾಯಣಕುಮಾರ್, ಕೆ. ಪ್ರಭಾಕರರೆಡ್ಡಿ, ಜಾಣಗೆರೆ ವೆಂಕಟರಾಮಯ್ಯ, ಸಾ.ರಾ.ಗೋವಿಂದು ಮುಂತಾದವರೆಲ್ಲಾ ಒಟ್ಟಿಗೆ ಸಭೆ ಸೇರಿದ್ದರು.

ಅಂದಿನ ಸಭೆಯಲ್ಲಿ ತಮಿಳುನಾಡಿನ ಪರವಾಗಿ ನಿಂತ ನಟರುಗಳ ವಿರುದ್ದ ತೀರ್ವ ಅಕ್ರೋಶ ವ್ಯಕ್ತವಾಯಿತು. ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾರಿಗೆ ಬೆಂಬಲ ವ್ಯಕ್ತಪಡಿಸಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದ ಸಿನಿಮಾ ನಟರಾದ ರಜನೀಕಾಂತ್, ಕಮಲಾಹಾಸನ್, ಶ್ರೀದೇವಿ ಮುಂತಾದವರ ಸಿನಿಮಾಗಳು ಕರ್ನಾಟಕದಲ್ಲಿ ಪ್ರದರ್ಶಿತವಾಗಬಾರದು, ಕರ್ನಾಟಕದ ವಿರುದ್ದ ಸೊಲ್ಲೆತ್ತಿದ್ದ ಕಲಾವಿದರಿಗೆ ಕರ್ನಾಟಕದಲ್ಲಿ ಲಾಭವನ್ನು ಕೊಡುವ ಅಗತ್ಯವಿಲ್ಲ ಎಂದು ತೀರ್ಮಾನವಾಯಿತು. ರಾಜ್ಯದಾದ್ಯಂತ ಈ ಕಲಾವಿದರ ಯಾವ ಭಾಷೆಯ ಚಿತ್ರವೂ ಪ್ರದರ್ಶನ ಕಾಣಬಾರದು. ಎಲ್ಲಿಯಾದರೂ ಪ್ರದರ್ಶನ ಕಂಡಿದ್ದೇ ಆದರೆ ನಾಡಾಭಿಮಾನಿ ಕನ್ನಡಿಗರು ಅದನ್ನು ತಡೆಯುವ ಕೆಲಸ ಮಾಡಬೇಕೆಂದು ಕರೆಯಿಡಲಾಯಿತು. ರಜನಿ, ಕಮಲ್, ಶ್ರೀದೇವಿ ಮುಂತಾದವರ ಚಿತ್ರಗಳಿಗೆ ರಾಜ್ಯದಲ್ಲಿ ಬಹಿಷ್ಕಾರ ಕಾರ್ಯ ಕಟ್ಟುನಿಟ್ಟಾಗಿ ಜಾರಿಗೊಂಡಿತು. ಆದರೆ ಈ ಕಲಾವಿದರುಗಳೆಲ್ಲಾ ಭಾರೀ ಪ್ರಭಾವಿಗಳಾಗಿದ್ದರಿಂದ ಅವರೆಲ್ಲಾ ಕರ್ನಾಟಕದ ದೊಡ್ಡ ಕಲಾವಿದರು, ನಿರ್ದೇಶಕರು, ಕರ್ನಾಟಕದ ಚಲನಚಿತ್ರ ವಾಣಿಜ್ಯ ಮಂಡಳಿಯ ಮೇಲೆಲ್ಲಾ ತೀರ್ವ ಒತ್ತಡ ಹೇರತೊಡಗಿದ್ದರು. ಅದರಲ್ಲೂ ಪ್ರಖ್ಯಾತ ನಟ ರಜನೀಕಾಂತ್ ಮೂರ್ನಾಲ್ಕು ಬಾರಿ ಬೆಂಗಳೂರಿಗೆ ಬಂದು ಡಾ.ರಾಜಕುಮಾರ್ ಸೇರಿದಂತೆ ಚಿತ್ರರಂಗದ ಪ್ರಮುಖರನ್ನೆಲ್ಲಾ ಭೇಟಿ ಮಾಡಿ, ಈ ಬಹಿಷ್ಕಾರ ಹಿಂತೆಗೆದುಕೊಳ್ಳುವಂತೆ ಮಾಡಬೇಕೆಂದು ವಿನಂತಿಸಿದ್ದರು. ಆದರೆ ಬಹಿಷ್ಕಾರ ಹೇರಿದವರ ಮೇಲೆ ಒತ್ತಡ ತರಲು ಯಾರಿಗೂ ಸಾಧ್ಯವಾಗಿರಲಿಲ್ಲ.

ಆದರೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ತಮಿಳುನಾಡಿನ ಪರ ವಹಿಸಿದ ನಟರ ಸಹಾಯಕ್ಕೆ ನೇರ ಕೈ ಹಾಕಿತು. ಆಗ ರಾಜಕಾರಣಿ ಮತ್ತು ನಿರ್ಮಾಪಕ ಎಸ್.ರಮೇಶ್ ಮಂಡಳಿಯ ಅಧ್ಯಕ್ಷರಾಗಿದ್ದರು. (ಅವರು ಸ್ಲಂ ರಮೇಶ ಅಂತೆಯೇ ಕುಖ್ಯಾತಿ ಗಳಿಸಿದ್ದವರು. ರಾಜಕಾರಣದಲ್ಲಿ ಜನರಿಂದ ತಿರಸ್ಕರಿಸಲ್ಪಟ್ಟಿದ್ದರಿಂದ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷನಾಗಬೇಕೆಂಬ ಕಾರಣಕ್ಕಾಗೇ ಯಾರದೋ ದುಡ್ಡಿನಲ್ಲಿ ತಾವು ನಿರ್ಮಾಪಕರೆನಿಸಿಕೊಂಡಿದ್ದರು) ಅವರೊಡನೆ ಸಿ.ವಿ.ಎಲ್.ಶಾಸ್ತ್ರಿ, ಎಸ್.ಎ. ಚಿನ್ನೇಗೌಡ, ಕೆ.ಎಸ್.ಎಲ್. ಸ್ವಾಮಿ ಮುಂತಾದವರು ಬಹಿಷ್ಕಾರಕ್ಕೆ ಕರೆ ಕೊಟ್ಟಿದ್ದ ಚಳವಳಿ ನಾಯಕರುಗಳಾದ ಜಾಣಗೆರೆ, ಗೋವಿಂದು ಮುಂತಾದವರನ್ನು ಕರೆಸಿ, ಬಹಿಷ್ಕಾರ ಹಿಂತೆಗೆದುಕೊಳ್ಳುವಂತೆ ಕೋರುವ ವಕಾಲತ್ತು ವಹಿಸಿದ್ದರು. ಆಗ ವಾಣಿಜ್ಯ ಮಂಡಳಿಯ ಘಟಾನುಘಟಿಗಳನ್ನು ಹೋರಾಟಗಾರರು ತಮ್ಮ ಕಾರ್ಯಕರ್ತರುಗಳೊಂದಿಗೆ ತೀರ್ವ ತರಾಟೆಗೆ ತೆಗೆದುಕೊಂಡಿದ್ದರು. "ಇಂತಹ ಅವಕಾಶವನ್ನು ಬಳಸಿಕೊಂಡು ಕನ್ನಡ ಚಿತ್ರಗಳ ಮಾರುಕಟ್ಟೆಯನ್ನು ಭದ್ರ ಪಡಿಸಿಕೊಳ್ಳುವ ಬದಲಿಗೆ ತಮಿಳು ಚಿತ್ರಗಳ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಲು ಮುಂದಾಗಿರುವುದಕ್ಕೆ ನೀವೆಲ್ಲಾ ನಾಚಿಕೆ ಪಡಬೇಕು. ಈಗ ಕನ್ನಡ ಚಿತ್ರಗಳನ್ನೇ ಆ ಕಲಾವಿದರ ಅಭಿಮಾನಿಗಳೂ ನೋಡುತ್ತಿದ್ದಾರೆ, ಚಿತ್ರಮಂದಿರಗಳೂ ಕನ್ನಡ ಚಿತ್ರಗಳನ್ನು ಹೆಚ್ಚಾಗಿ ಪ್ರದರ್ಶಿಸುತ್ತಿದ್ದಾರೆ. ಇಂತಹ ಸಂಧರ್ಭವನ್ನು ಸದುಪಯೋಗಪಡಿಸಿಕೊಂಡು ನೆರೆ ರಾಜ್ಯಗಳಲ್ಲೂ ಕನ್ನಡ ಚಿತ್ರಗಳ ಪ್ರದರ್ಶನಕ್ಕೆ ಪಟ್ಟು ಹಾಕುವ ಬದಲು ಹೀಗೆ ವಕಾಲತ್ತು ವಹಿಸುವುದು ದ್ರೋಹದ ಮಾತಾಗುತ್ತದೆ!" ಎಂದು ತೀರ್ವವಾಗಿ ಖಂಡಿಸಿದ್ದರು.

ಅವರಿಂದ "ಅದೆಲ್ಲಾ ಆಗದ ಹೋಗದ ಮಾತು, ಅಲ್ಲಿ ಕನ್ನಡ ಚಿತ್ರ ಹಾಕಿದ್ರೆ ನೋಡೋರು ಬೇಕಲ್ಲ!" ಎಂಬ ತೀರಾ ವಿಚಿತ್ರವಾದ ಉತ್ತರ ಕೇಳಿ ಅಚ್ಚರಿಯಾಗುವ ಸರದಿ ಕನ್ನಡಪರ ಹೋರಾಟಗಾರರದ್ದಾಗಿತ್ತು. ಮಂಡಳಿಯ ಕೆಲವು ಸದಸ್ಯರು ತಮಿಳು ನಟರ ಮೇಲಿನ ಬಹಿಷ್ಕಾರವನ್ನು ಸಿಕ್ಕಾಪಟ್ಟೆ ವಿರೋಧಿಸಿದ್ದರು. ಆ ನಟರು ಜಯಲಲಿತಾಗೆ ಸಮರ್ಥನೆ ತೋರಿಸಿದ್ದನ್ನೂ ತಪ್ಪಲ್ಲವೆಂದರು.
 

’ಆ ಕಲಾವಿದರಿಗೆ ಅವರ ತಪ್ಪು ಅರಿವಾಗಬೇಕು, ಕಲಾವಿದರು ಎಲ್ಲಾ ಭಾಷೆಗಳಿಗೂ ಸೇರಿದವರಾದರೆ ಕಲಾವಿದರಿಗ್ಯಾಕೆ ಬೇಕು ನೀರಿನ ರಾಜಕೀಯ, ಮೊದಲು ಅವರು ಕನ್ನಡಿಗರ ಕ್ಷಮೆ ಕೇಳಬೇಕು ಅಲ್ಲಿಯವರೆಗೆ ನಮ್ಮ ಬಹಿಷ್ಕಾರ ಮುಂದುವರೆಯುತ್ತದೆ. ನೀವು ಅವರ ಪರವಾಗಿ ಪುಂಗಿ ಊದುವುದನ್ನು ನಿಲ್ಲಿಸಿ... ನೀವು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಂತಾ ಹೆಸರಿಟ್ಟುಕೊಂಡು ಬೇರೆ ಭಾಷೆ ಚಿತ್ರಗಳ ಉದ್ದಾರದ ಬಗ್ಗೆ ಮಾತನಾಡುತ್ತಿರಲ್ಲಾ ನಿಮಗೆ ನಾಚಿಕೆಯಾಗುವುದಿಲ್ಲವೇ?’ ಮಂಡಳಿಯವರನ್ನು ಕನ್ನಡಪರ ಹೋರಾಟಗಾರರ ತರಾಟೆಗೆ ತೆಗೆದುಕೊಂಡಿದ್ದರು. ಸ್ಲಂ ರಮೇಶ್ ನಟರ ಪರವಾಗಿ ಹಿಡಿದ ಹಠ ಬಿಟ್ಟಿರಲಿಲ್ಲ. ಕ್ಷಮೆಯಿಲ್ಲದೆ ಬಹಿಷ್ಕಾರ ಹಿಂದೆಗೆದುಕೊಳ್ಳುವುದಿಲ್ಲ ಎಂದು ಪಟ್ಟು ಹಿಡಿದ ಚಳವಳಿಗಾರರು ಸಭೆಯನ್ನು ಅರ್ಧಕ್ಕೇ ನಿಲ್ಲುವಂತೆ ಮಾಡಿ ವಾಣಿಜ್ಯ ಮಂಡಳಿಗೆ ಧಿಕ್ಕಾರ ಕೂಗುತ್ತಾ ಹೊರ ಬಂದಿದ್ದರು. 

ಆದರೆ ಕನ್ನಡ ಚಿತ್ರರಂಗದ ಘಟಾನುಘಟಿಗಳು ಅಷ್ಟಕ್ಕೆ ಸುಮ್ಮನಿರಲಿಲ್ಲ. ರಜನಿ ಮತ್ತೊಮ್ಮೆ ಬೆಂಗಳೂರಿಗೆ ಬಂದು ಡಾ. ರಾಜ್ ರನ್ನು ಭೇಟಿ ಮಾಡಿದ್ದರು. ಕಮಲ್ ಹಾಸನ್ ಕೂಡಾ ಒಮ್ಮೆ ಬೆಂಗಳೂರಿಗೆ ಬಂದು ಸುದ್ದಿ ಮಾಡದೇ ಹೋಗಿದ್ದರು. ಅವರಿಂದ ಕ್ಷಮಾಪಣೆಯನ್ನು ಕೇಳಿಸುವ ಪ್ರಯತ್ನವನ್ನು ಮಾತ್ರ ಯಾರೂ ಮಾಡಲಿಲ್ಲ, ಕ್ಷಮೆ ಕೇಳಲೂ ಅವರೂ ಸಿದ್ದರಿರಲಿಲ್ಲ. ಹಾಗೆ ಮಾಡಿದ್ದಲ್ಲಿ ಅವರು ತಮಿಳರ ಕೋಪಕ್ಕೆ ಗುರಿಯಾಗುತ್ತಿದ್ದರು. ಆಗ ಅವರಿಗೆ ತಮಿಳುನಾಡಿನಲ್ಲಿಯೂ ಬಹಿಷ್ಕಾರಕ್ಕೊಳಗಾಗುವುದು ಶತಸಿದ್ದವಾಗಿತ್ತು. ಅತ್ತ ದರಿ, ಇತ್ತ ಪುಲಿ ಎಂಬಂತೆ ಸುಮ್ಮನಿರಲಾರದೇ ಇರುವೆ ಬಿಟ್ಟುಕೊಂಡತಾಗಿತ್ತು ಅವರ ಸ್ಥಿತಿ. ಅದಕ್ಕೇ ಅವರು ಖಾಸಗಿಯಾಗಿ ಕ್ಷಮಾಪಣೆ ಕೇಳಲು ಸಿದ್ದರಿದ್ದರೂ ಮಾಧ್ಯಮಗಳ ಮುಂದೆ ಬಂದು ಕೇಳಲು ಹಿಂಜರಿಯತೊಡಗಿದ್ದರು. ತಾರೆ ಶ್ರೀದೇವಿ ಮಾತ್ರ ಇದ್ಯಾವುದಕ್ಕೂ ತಲೆ ಕೆಡಿಸಿಕೊಂಡಿರಲಿಲ್ಲ.

ಒಂದು ದಿನ ಚಲನಚಿತ್ರ ವಾಣಿಜ್ಯ ಮಂಡಳಿಯವರು ರಜನೀಕಾಂತ್, ಕಮಲಾಹಾಸನ್ ಕಳಿಸಿದ್ದ ಫ಼ಾಕ್ಸ್ ಮೆಸೇಜನ್ನು ತಂದು ಚಳವಳಿಗಾರರ ಮುಂದಿಟ್ಟರು. ಅದರಲ್ಲಿ "ನಾವು ಕರ್ನಾಟಕದ ವಿರುದ್ದ ಏನನ್ನೂ ಮಾತಾಡಿಲ್ಲ, ನಮಗೆ ಕರ್ನಾಟಕದ ಬಗ್ಗೆ, ಕನ್ನಡಿಗರ ಬಗ್ಗೆ ಗೌರವವಿದೆ..." ಎಂಬ ಒಕ್ಕಣೆಯ ನಾಲ್ಕು ವಾಕ್ಯಗಳಿದ್ದವು. ಕ್ಷಮಾಪಣೆಯ ಬಗ್ಗೆ ಚಕಾರವೇ ಇರಲಿಲ್ಲ. ಅದನ್ನೇ ಎಲ್ಲಾ ಮಾಧ್ಯಮಗಳಿಗೆ ಕಳಿಸಿದರು. ಪರಭಾಷಾ ಚಿತ್ರಗಳ ಜಾಹಿರಾತಿಲ್ಲದೇ ಪರದಾಡುತ್ತಿದ್ದ ಪತ್ರಿಕೆಗಳವರು ಅದನ್ನೇ ದೊಡ್ಡದಾಗಿ ಪ್ರಕಟಿಸಿ ಆ ಕಲಾವಿದರನ್ನು ಹೊಗಳಿ ತಮ್ಮ ಜಾಹಿರಾತಿಗೆ ದಾರಿ ಕಂಡುಕೊಂಡಿದ್ದರು. ಸುಮಾರು ಆರು ತಿಂಗಳುಗಳಿಗೂ ಹೆಚ್ಚು ಕಾಲ ಆ ಕಲಾವಿದರ ಚಿತ್ರಗಳಿಗೆ ಹಾಕಿದ್ದ ಬಹಿಷ್ಕಾರ ಯಶಸ್ವಿಯಾಗಿತ್ತು. ಕನ್ನಡ ಚಿತ್ರಗಳ ಹಿತಾಸಕ್ತಿಯನ್ನು ರಕ್ಷಿಸುವ ಮನೋಧರ್ಮ ಕನ್ನಡ ಚಿತ್ರರಂಗದವರಿಗೇ ಇಲ್ಲವಾಗಿದ್ದರಿಂದ ತೀರ್ವ ನಿರಾಶರಾದ ಚಳುವಳಿಗಾರರು, ಕನ್ನಡಿಗರು ಅಸಮಾಧಾನದಿಂದಲೇ ಸುಮ್ಮನಿರಬೇಕಾಗಿತ್ತು.

ಅಷ್ಟರಲ್ಲೇ ಮತ್ತೊಂದು ಅಘಾತಕಾರಿಯಾದ ಸಂಗತಿಯೊಂದು ಕನ್ನಡಿಗರಿಗೆ ಅಪ್ಪಳಿಸಿತ್ತು. ತಮಿಳುನಾಡಿನ ಆಗ್ರಹಕ್ಕೆ, ಕೇಂದ್ರ ಸರ್ಕಾರದ ಒತ್ತಡಕ್ಕೆ ಮಣಿದು ಮುಖ್ಯಮಂತ್ರಿ ವೀರಪ್ಪಮೊಯ್ಲಿಯವರು ಸದ್ದಿಲ್ಲದೇ ತಮಿಳುನಾಡಿಗೆ ನೀರು ಬಿಟ್ಟಿದ್ದರು.


 

                                                                                      ಮರಳಿ

 
 
 
 
 
 
Copyright © 2011 Neemgrove Media
All Rights Reserved