ಗಾಳಿ ಅಂಗಿ ಚುಂಗು ಹಿಡಿದು
ಕಾಲಿಗಷ್ಟು ಚಕ್ರ ಕಟ್ಟಿ
ಮೆಲ್ಲ ಮೆಲ್ಲ ಸಿಲ್ಲಿ ಗಲ್ಲಿ
ಕೋಟೆ ಕೊತ್ತಲ ಊರು ಸುತ್ತಿ
ಕಣ್ಣು ಕಂಡ ಪಟಗಳನ್ನು
ಮನದ ಪದಕೆ ತಳಿಕೆ ಹಾಕಿ
ಹಿಗ್ಗು ಸುಗ್ಗಿ ಎಲ್ಲ ಸುರಿದು
ಪುಟದ ಮೇಲೆ ತಟಪಟಾ...

 
 

ಯೂರೋಪಿನ ಹೈಟೆಕ್ ಕಳ್ಳರು!!

ಟೋನಿ

ಪ್ರತಿಬಾರಿ ಶಾಪಿಂಗ್ ಗಾಗಿ ನೀಡಿದ ಸಮಯದ ನಂತರ ಎಲ್ಲರನ್ನೂ ಕೂಗಿ ಕೂಗಿ ಕರೆದು ಬಸ್ಸಿಗೆ ಹತ್ತಿಸುವಷ್ಟರಲ್ಲಿ ನಮ್ಮ ಗೈಡ್ ಹೈರಾಣಾಗುತ್ತಿದ್ದ. ಬಸ್ ಬಳಿ ಬಂದವರೆಲ್ಲಾ ಬಸ್ಸು ಹೊರಡುವ ಹೊತ್ತಿಗೆ ಏನನ್ನೋ ಮರೆತವರಂತೆ ಮತ್ತೆ ಶಾಪಿಂಗ್ ಹೋಗುತ್ತಿದ್ದರು. ಹೆಂಗಸರೇ ಈ ಥರ ಹೆಚ್ಚು ಜ್ಯೂಜ಼ರ್ ನಿಗೆ ಸತಾಯಿಸುತ್ತಿದ್ದುದು. ಶಾಪಿಂಗ್ ನಿಂದ ಬಂದವರೆಲ್ಲಾ ತಾವು ತಂದಿರುವ ವಸ್ತುಗಳನ್ನೆಲ್ಲಾ ಮತ್ತೊಬ್ಬರಿಗೆ ತೋರಿಸಿ ಅದರ ಬಗ್ಗೆ ವರ್ಣಿಸತೊಡಗುತ್ತಿದ್ದರು. ಅವರ ವರ್ಣನೆಗೆ ಮರುಳಾಗುತ್ತಿದ್ದ ಇತರರೂ ತಾವೇನು ಕಡಿಮೆಯೆನ್ನುವಂತೆ ತಾವು ತಂದಿದ್ದ ವಸ್ತುಗಳ ವರ್ಣನೆಗೆ ಮುಂದಾಗುತ್ತಿದ್ದರು. ಹೀಗೆ ಪರಸ್ಪರರು ತಮ್ಮ ವಸ್ತುಗಳ ವರ್ಣನೆ ಮುಗಿಸಿದ ನಂತರ ಇತರರು ಕೊಂಡುತಂದಿದ್ದ ವಸ್ತುಗಳನ್ನು ತಾವೂ ಕೊಳ್ಳದಿದ್ದಲ್ಲಿ ಪ್ರವಾಸಕ್ಕೆ ಬಂದು ಪ್ರಯೋಜನವೇನು ಎಂಬಂತೆ ಅವರು ಇವರಿಂದ-ಇವರು ಅವರಿಂದ ಅಂಗಡಿಗಳ ಅಡ್ರೆಸ್ ತಿಳಿದುಕೊಳ್ಳುತ್ತಾ ಮತ್ತೆ ಬಸ್ಸಿನಿಂದ ಕೆಳಗಿಳಿದು ವಸ್ತುಗಳ ಖರೀದಿಗಾಗಿ ಓಡುತ್ತಿದ್ದರು. ಜ್ಯೂಜ಼ರ್ ಕೆಲವರನ್ನು ಹುಡುಕಿ ಕರತರುವಷ್ಟರಲ್ಲಿ ಬಸ್ಸಿನಲ್ಲಿ ಕುಳಿತಿದ್ದವರು ಗಾಯಬ್ ಆಗಿರುತ್ತಿದ್ದರು. ಅವರನ್ನು ಹುಡುಕಿ ಎಳೆತರಲು ಜ್ಯೂಜ಼ರ್ ಮತ್ತೆ ಹೋಗುತ್ತಿದ್ದ. ಹೀಗೆ ಜ್ಯೂಜ಼ರ್ ನಿಗೆ ಜೂಟಾಟವಾಡಿಸುವುದನ್ನು ನಮ್ಮ ಪ್ರವಾಸದುದ್ದಕ್ಕೂ ಶಾಪಿಂಗ್ ಪ್ರಿಯ ಮಹಿಳಾಮಣಿಗಳು ಮುಂದುವರೆಸಿದ್ದರು. ಜ್ಯೂಜ಼ರ್ ಇವರ ಶಾಪಿಂಗ್ ಹುಚ್ಚನ್ನು ಬಿಡಿಸಲು ಕಂಡ ಕಂಡವರ ಬಳಿಯೆಲ್ಲಾ ವ್ಯಾಪಾರ ಮಾಡಬಾರದೆಂದೂ, ಆ ವ್ಯಾಪಾರಿಗಳಲ್ಲಿ ಕಳ್ಳರೂ ಇರುತ್ತಾರೆಂದು ಆಗಾಗ್ಗೆ ಎಚ್ಚರಿಸುತ್ತಲೇ ಇದ್ದನಾದರೂ ಅವನ ಎಚ್ಚರಿಕೆಯ ಮಾತುಗಳಿಗೆ ಕವಡೆ ಕಾಸಿನ ಕಿಮ್ಮತ್ತೂ ಇಲ್ಲವಾಗಿತ್ತು. ಈ ಮಹಿಳಾಮಣಿಗಳಿಂದಾಗಿ ಬಸ್ಸಿನಲ್ಲಿ ಸುಮ್ಮನೇ ಕೂತು ಕಾಲ ಕಳೆಯುವಂತಾಯಿತಲ್ಲಾ ಬಾರಿನಲ್ಲಾದರೂ ಇದ್ದಿದ್ದರೆ ಇನ್ನೊಂದಷ್ಟು ವಿಸ್ಕಿ ಗುಟುಕೇರಿಸಬಹುದಿತ್ತಲ್ಲಾ ಎಂದು ಗುಂಡುಪ್ರಿಯ ಕಪ್ಪದ್ ಬಾಯಿ ಚಪ್ಪರಿಸಿಕೊಂಡರು.

ಅಂತೂ ಎಲ್ಲರನ್ನೂ ಬಸ್ಸಿಗೆ ಹತ್ತಿಸಿದ ನಂತರ ಬಸ್ಸಿನೊಳಗೆ ಎಲ್ಲರ ತಲೆ ಎಣಿಸಿದ ಜ್ಯೂಜ಼ರ್ ಸಮಾಧಾನದ ನಿಟ್ಟುಸಿರು ಬಿಟ್ಟಿದ್ದ. ಮತ್ತೆ ನಾವು ಸಿಯಾನ್ ನದಿಯ ಅಡ್ಡಡ್ಡ ಸುತ್ತಾಡುವಾಗ ಜ್ಯೂಜ಼ರ್ ಮೈಕಿನಲ್ಲಿ ಪ್ಯಾರಿಸ್ಸಿನ ಕೆಲವು ಕಟ್ಟಡಗಳು, ಸ್ಮಾರಕಗಳ ಬಗ್ಗೆ ವಿವರಿಸತೊಡಗಿದ. ಪ್ಯಾರಿಸ್ಸಿಗೆ ನಾವೀಗ ವಿದಾಯ ಹೇಳುತ್ತಿದ್ದರಿಂದ ಕೊನೆಯ ಬಾರಿಗೆ ಪ್ಯಾರಿಸ್ ನಗರದಲ್ಲಿನ ಸುಂದರ ವಾಸ್ತುಶಿಲ್ಪದ ಕಟ್ಟಡಗಳನ್ನೂ, ಸ್ಮಾರಕಗಳನ್ನೂ ಎಲ್ಲಕ್ಕಿಂತ ಮುಖ್ಯವಾಗಿ ಸಿಯಾನ್ ನದಿಯನ್ನೂ, ನದಿ ದಂಡೆಯಲ್ಲಿದ್ದ ಐಫ಼ಲ್ ಗೋಪುರವನ್ನೂ ಕಣ್ತುಂಬಿಸಿಕೊಂಡೆವು.

ಈ ಫ಼್ರಾನ್ಸಿನ ಇತಿಹಾಸವನ್ನು ಮೆಲುಕು ಹಾಕಿದರೆ ಇಲ್ಲಿನ ಜನರ ಯುದ್ಧೋತ್ಸಾಹದ ಬಗ್ಗೆ ಅಚ್ಚರಿಯುಂಟಾಗುವುದು ಸಹಜ. ಈ ದೇಶದ್ದು ಬಹುತೇಕ ರಕ್ತ ಚರಿತ್ರೆಯೇ. ಇತ್ತೀಚಿನ ಹದಿನೆಂಟನೆಯ ಶತಮಾನದಲ್ಲಿಯೂ ಈ ದೇಶ ತನ್ನ ಸುತ್ತಮುತ್ತಲಿನ ಹದಿನೈದು ದೇಶಗಳ ವಿರುದ್ದ ಸತತವಾಗಿ ಯುದ್ದ ಮಾಡುತ್ತಲೇ ಇತ್ತು. ಇನ್ನು ಇಂಗ್ಲೆಂಡಿನೊಂದಿಗೆ  ಶತಮಾನದುದ್ದಕ್ಕೂ ಫ಼್ರಾನ್ಸ್ ನಡೆಸಿದ್ದ ಯುದ್ದಗಳಂತೂ ಐತಿಹಾಸಿಕವಾದವು. ಬ್ರಿಟಿಷ್ ರಾಜಮನೆತನದ ವಿರುದ್ದ ಶತಮಾನಗಳ ಕಾಲದ ವೈರತ್ವ ಇವರದು. ಯೂರೋಪಿನಲ್ಲಿ ಕ್ರಾಂತಿಕಾರಕ ಹೋರಾಟಗಳಿಗೆ ಮುನ್ನುಡಿ ಬರೆದವರೂ ಈ ಫ಼್ರೆಂಚರೇ. ಇದೀಗ ಅತ್ಯಂತ ಸುಂದರವಾಗಿ ಶಾಂತಚಿತ್ತವಾಗಿ ಹರಿಯುತ್ತಿರುವ ಇಲ್ಲಿನ ಸಿಯಾನ್ ನದಿ ಶತಮಾನಗಳ ಕಾಲ ನಡೆದ ಯುದ್ದಗಳು, ಹೋರಾಟಗಳಿಂದ ತನ್ನ ಒಡಲಲ್ಲಿ ಅದಿನ್ನೆಷ್ಟು ರಕ್ತವನ್ನು ಹೀರಿತ್ತೋ ಲೆಕ್ಕ ಇಟ್ಟವರಾರು?


ಗಾತ್ರದಲ್ಲಿ ನಮ್ಮ ಕರ್ನಾಟಕದ ಸುಮಾರು ಮೂರರಷ್ಟು ದೊಡ್ಡದಿರಬಹುದಾದ ಈ ದೇಶದ ಜನಸಂಖ್ಯೆ ಮಾತ್ರ ಸುಮಾರು ನಮ್ಮ ಕರ್ನಾಟಕದಷ್ಟೇ. ಆದರೆ ಪಶ್ಚಿಮ ಯೂರೋಪಿನಲ್ಲಿಯೇ ದೊಡ್ಡ ರಾಷ್ಟ್ರವೆನಿಸಿರುವ ಫ಼್ರಾನ್ಸ್ ಅಷ್ಟೆಲ್ಲಾ ಯುದ್ದ, ಹೋರಾಟಗಳನ್ನು ಕಂಡರೂ ಅದು ಸಾಧಿಸಿರುವ ಅಭಿವೃದ್ದಿ ಅಚ್ಚರಿಗೊಳಿಸುತ್ತದೆ. ಕೃಷಿಯಲ್ಲಿ ಸಾಕಷ್ಟು ಪ್ರಗತಿ ಸಾಧಿಸಿರುವ ಈ ದೇಶ ಕೃಷಿ ಉತ್ಪನ್ನಗಳನ್ನು ಇಡೀ ಯೂರೋಪಿಗೆ ರಫ್ತು ಮಾಡುತ್ತಿದೆ. ಅಂತೆಯೇ ಕೈಗಾರಿಕೆಯಲ್ಲೂ ಈ ದೇಶದ್ದು ದೈತ್ಯ ಸಾಧನೆ. ವಿಶ್ವದಲ್ಲಿಯೇ ಕೈಗಾರಿಕೆಯಲ್ಲಿ ನಾಲ್ಕನೆಯ ಸ್ಥಾನವನ್ನು ಪಡೆದಿರುವ ಹೆಗ್ಗಳಿಕೆ ಫ್ರಾನ್ಸ್ ನದ್ದು. ಬಿಂದಾಸ್ ನಡವಳಿಕೆಯ ಇಲ್ಲಿನ ಜನ ತಮ್ಮ ದೇಶವನ್ನು ಆರ್ಥಿಕವಾಗಿ ಸಧೃಡಗೊಳಿಸುವಲ್ಲಿ ವಹಿಸಿರುವ ಪಾತ್ರ ಮಹತ್ತರವಾದುದು. ಮಹಾನ್ ಮಹತ್ವಾಕಾಂಕ್ಷಿಯಾಗಿದ್ದ ನೆಪೋಲಿಯನ್ ನಿಂದಲೇ ಮಹತ್ವಾಕಾಂಕ್ಷೆಯ ಮನೋಭಾವವನ್ನು ರೂಢಿಸಿಕೊಂಡಂತಿರುವ ಫ಼್ರೆಂಚರು ಆಧುನಿಕ ಯುಗದಲ್ಲೂ ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಿಕೊಳ್ಳುವಲ್ಲಿ ಹಿಂದೆ ಬಿದ್ದವರಲ್ಲ.


ಬಹಳ ವರ್ಷಗಳ ಹಿಂದೆ ತಮಿಳುನಾಡಿನ ಪಕ್ಕದಲ್ಲಿರುವ ಪಾಂಡಿಚೆರಿ ರಾಜ್ಯಕ್ಕೆ ಹೋಗಿದ್ದಾಗ ನಡೆದ ಘಟನೆಯೊಂದು ನನಗೆ ನೆನಪಾಗತೊಡಗಿತು. ಅಲ್ಲಿನ ಪ್ರದೇಶವೊಂದರಲ್ಲಿ ಸುತ್ತಾಡುತ್ತಿದ್ದಾಗ ಪರಿಚಿತನಾದ ಆಟೋ ಡ್ರೈವರ್ ಒಬ್ಬ ತಾನು ಫ಼್ರೆಂಚ್ ಪ್ರಜೆಯೆಂದು ಹೇಳಿಕೊಂಡಿದ್ದ. ಪಂಚೆ ಉಟ್ಟು ಬೀಡಿ ಸೇದುತ್ತಾ ಆಟೋ ಓಡಿಸುತ್ತಿದ್ದ ಅವನನ್ನು ಫ಼್ರೆಂಚ್ ಪ್ರಜೆಯೆಂದು ನಂಬಲು ನಾವು ಸಿದ್ದರಿರಲಿಲ್ಲ. ಆತ ನಮ್ಮ ಬಳಿ ಸುಳ್ಳು ಹೇಳುತ್ತಿದ್ದಾನೆಂದೇ ನಾವು ಅವನನ್ನು ರೇಗಿಸಿ "ಎನ್ನಯ್ಯಾ ನೀ ಫ್ರಾನ್ಸ್ ಲಿಂದೆ ಯಪ್ಪೋ ವಂದೇ?" ಎಂದಾಗ ಆತ ತಾನು ಫ಼ಾನ್ಸ್ ಅನ್ನು ನೋಡೇ ಇಲ್ಲವೆಂದ. ಮತ್ತೆ ನಿಮ್ಮ ತಂದೆ ತಾಯಿಯೇನಾದರೂ ಫ್ರಾನ್ಸಿನಲ್ಲಿದ್ದರಾ ಎಂದದಕ್ಕೆ ಆತ ಇಲ್ಲವೆಂದ. ಹೋಗಲಿ ನಿಮ್ಮ ವಂಶದವರ್ಯಾರಾದರೂ ಅಲ್ಲಿದ್ದಾರಾ ಎಂದದ್ದಕ್ಕೆ ಆತ ನಮಗ್ಯಾರಿಗೂ ಫ್ರಾನ್ಸ್ ಎಲ್ಲಿದೆ ಎಂಬುದೇ ಗೊತ್ತಿಲ್ಲವೆಂದ! ಆತನ ಮಾತನ್ನು ಕೇಳುತ್ತಿದ್ದ ನಮಗೆ ಸಿಟ್ಟು ಬಂದು ಇವನ್ಯಾರೋ ಮೆಂಟಲ್ ಗಿರಾಕಿ ಇರಬಹುದೆಂದು ತೀರ್ಮಾನಿಸಿ ಅವನನ್ನು ಹೀಗೇ ಮಾತಾಡಿಸುತ್ತಿದ್ದಲ್ಲಿ ಆಟೋವನ್ನು ಪಲ್ಟಿ ಹೊಡಿಸಿದರೇನು ಎಂಬ ಗಾಬರಿಯಾಗಿ "ಅಲ್ಲಯ್ಯಾ, ನೀನು ಫ಼್ರಾನ್ಸ್ ಎಲ್ಲಿದೆಯೆಂದೇ ಗೊತ್ತಿಲ್ಲಾ ಅಂತೀಯಾ, ನಿಮ್ಮ ಕಡೆಯವರ್ಯಾರೂ ಅಲ್ಲಿಲ್ಲ ಅಂತೀಯಾ ಮತ್ತಿನ್ಹೆಂಗೆ ನೀನು ಫ಼್ರೆಂಚ್ ಪ್ರಜೆಯೆನ್ನುತ್ತೀಯಾ? ಎಂದು ತಮಿಳಿನಲ್ಲೇ ಕೇಳಿದ್ದಕ್ಕೆ ಆತ ಇಲ್ಲಾ ನಾನು ಫ಼್ರೆಂಚ್ ಪ್ರಜೆಯೆಂದೇ ವಾದಿಸಿದ್ದ.


ಈತ ನಿಜಕ್ಕೂ ಮೆಂಟಲ್ ಕೇಸೆಂದೇ ನಿರ್ಧರಿಸಿಬಿಟ್ಟ ನಾವು ಆತ ನಮ್ಮನ್ನು ಎಲ್ಲಾದರೂ ದಬಾಕುವ ಮುಂಚೆ ಆತನ ಆಟೋದಿಂದ ಇಳಿಯುವುದೇ ಕ್ಷೇಮವೆಂದು ತಿಳಿದು ಗಾಡಿ ನಿಲ್ಲಿಸೆಂದೆವು. ಆತ ಆಟೋವನ್ನು ನಿಲ್ಲಿಸಿ ಏನೋ ಹುಡುಕಾಡತೊಡಗಿದ. ನಾವು ಹಣಕೊಟ್ಟರೂ ಪಡೆಯದೇ ಕೊಂಚ ಇರುಂಗೋ, ಕೊಂಚ ಇರುಂಗೋ, ಎನ್ನತೊಡಗಿದ. ಒಳ್ಳೇ ಕೇಸು ಆಸಾಮಿಯಾದನಲ್ಲಾ, ತಾನು ಫ಼್ರೆಂಚ್ ಪ್ರಜೆಯೆಂದು ಹೇಳಿದ್ದನ್ನು ನಾವು ನಂಬದಿರುವುದಕ್ಕೆ ಆತನಿಗೆ ಸಿಟ್ಟು ಬಂದಿರಬೇಕು, ಅದಕ್ಕೇ ನಮ್ಮನ್ನೀಗ ಹೋಗಲು ಬಿಡದೇ ಸತಾಯಿಸುತ್ತಿದ್ದಾನೆಂದು ತಿಳಿದು ಆತನಿಗೆ "ನೀನು ಫ಼್ರೆಂಚ್ ಪ್ರಜೆಯಾದರೂ ಆಗಿರು, ಬ್ರಿಟಿಷ್ ಪ್ರಜೆಯಾದರೂ ಆಗಿರು ನಮ್ಮ ತಕರಾರೇನಿಲ್ಲ ನಮ್ಮನ್ನೀಗ ಕರೆದುಕೊಂಡು ಹೋಗಿ ನಾವು ಹೇಳಿದ ಜಾಗಕ್ಕೆ ಬಿಟ್ಬಿಡು" ಅಂತ ಹೇಳಿ ಮತ್ತೆ ಆತನ ಆಟೊವನ್ನೇ ಹತ್ತಿದ್ದ ನಮ್ಮ ಸ್ನೇಹಿತನಿಗೆ ಎಲ್ಲರೂ ಸೇರಿ ಬೈದಿದ್ದೆವು. ಅಷ್ಟರಲ್ಲಿ ಆ ಡ್ರೈವರ್ ಆಟೊದಲ್ಲಿದ್ದ ಬಾಕ್ಸಿನೊಳಗಿಂದ ಎಂಥದೋ ದಾಖಲೆಯೊಂದನ್ನು ತೆಗೆದು ನಮಗೆ ತೋರಿಸಿ "ಪಾರುಂಗೋ, ಪಾರುಂಗೋ" ಅಂದ. ಅದನ್ನು ನೋಡಿದರೆ ಈ ಡ್ರೈವರನ ಫೋಟೋ ಮೇಲೆ ರಿಪಬ್ಲಿಕ್ ಆಫ಼್ ಫ಼್ರಾನ್ಸ್ ನ ಮುದ್ರೆಯಿತ್ತು. ಆ ದಾಖಲೆ ನೋಡಿದ ನಂತರವೇ ನಮಗಾತ ನಿಜ ಹೇಳುತ್ತಿದ್ದ ಎನಿಸಿದ್ದು. ಆದರೂ ಆ ದಾಖಲೆ ಒರಿಜಿನಲ್ಲೋ, ಅಲ್ಲವೋ ಎಂಬ ಗುಮಾನಿ ನಮ್ಮದಾಗಿತ್ತು.


ತಮಿಳರು ವಲಸೆ ಹೋಗುವಲ್ಲಿ ನಿಸ್ಸೀಮರು. ಹೋದೆಡೆಯೆಲ್ಲಾ ತಮ್ಮ ಜನರನ್ನು ಕಳ್ಳಸಾಗಾಣಿಕೆ ಮುಖಾಂತರ ತಾವಿದ್ದಲ್ಲಿಗೇ ಕರೆಸಿಕೊಂಡು ಬೇರೆ ಬೇರೆ ದೇಶಗಳಲ್ಲಿ ನೆಲೆಸಿಬಿಟ್ಟಿದ್ದರು. ಆದರೆ ಈ ಆಟೋ ಡ್ರೈವೆರ್ ತಾನು ಯಾವ ದೇಶವನ್ನೂ ನೋಡೇ ಇಲ್ಲವೆಂದು ಹೇಳುತ್ತಿದ್ದನಲ್ಲದೆ ತಮ್ಮ ಕುಲ ಬಾಂಧವರೆಲ್ಲಾ ಪಾಂಡಿಚೆರಿಯಲ್ಲೇ ಇದ್ದರೆಂದೂ ಆದರೂ ತಾನು ಫ಼್ರೆಂಚ್ ಪ್ರಜೆಯೆಂದು ಹೇಳಿ ಅದಕ್ಕೆ ಪೂರಕವಾಗಿ ದಾಖಲೆಯನ್ನೂ ತೋರಿಸಿದ್ದ. ಆತನ ಮಾತನ್ನು ತಿರಸ್ಕರಿಸಲು ನಮಗೆ ಯಾವುದೇ ಕಾರಣಗಳೂ ಸಿಕ್ಕಿರಲಿಲ್ಲ.  ನಿನ್ನಂತಾ ಫ಼್ರೆಂಚ್ ಪ್ರಜೆಯ ಆಟೋದಲ್ಲಿ ಬಂದುದು ನಮಗೆ ತುಂಬಾ ಖುಷಿಯಾಯಿತೆಂದು ಹೇಳಿ ಆತನ ಆಟೋದಲ್ಲಿಯೇ ಪ್ರಯಾಣವನ್ನು ಮುಂದುವರೆಸಿದ್ದೆವು. ಆಟೋ ಇಳಿದ ನಂತರ ಆತನಿಗೆ ಹಣ ಕೊಟ್ಟು ಯೂರೋಪ್ ಅಮೇರಿಕಾಗಳಲ್ಲಿ ಟಿಪ್ಸ್ ನೀಡುವುದು ಕಡ್ಡಾಯವೆಂದು ಕೇಳಿದ್ದ ನಾವು ಆತ ಫ಼್ರೆಂಚ್ ಪ್ರಜೆಯಾದ್ದರಿಂದ ಅವನಿಗೂ ಹತ್ತು ರೂ ಕೊಟ್ಟಾಗ ಆತ ನಯವಾಗೇ ನಿರಾಕರಿಸಿದ್ದ.


ಆಮೇಲೂ ನಮಗೆ ಆತ ಫ಼್ರೆಂಚ್ ಪ್ರಜೆಯಾಗಲು ಹೇಗೆ ಸಾಧ್ಯ ಎಂಬು ಅನುಮಾನ ಕೊರೆಯತೊಡಗಿತ್ತು. ನಾವು ತಂಗಿದ್ದ ಹೋಟೆಲಿನಲ್ಲಿ ಈ ಬಗ್ಗೆ ವಿಚಾರಿಸಿದಾಗಲೇ ನಮಗೆ ಆತ ಹೇಳಿದ್ದು ನಿಜವೆಂದು ಗೊತ್ತಾದದ್ದು. ಫ಼್ರೆಂಚರು ಭಾರತಕ್ಕೆ ಬಂದು ಪಾಂಡಿಚೆರಿಯಲ್ಲಿ ತಮ್ಮ ನೆಲೆ ಸ್ಥಾಪಿಸಿಕೊಂಡಿದ್ದರಲ್ಲಾ ಆಗಿನಿಂದಲೇ ಪಾಂಡಿಚೆರಿಯ ಕೆಲವು ಪ್ರದೇಶದ ಜನರಿಗೆ ಫ಼್ರೆಂಚ್ ನಾಗರಿಕತ್ವವನ್ನು ನೀಡಿದ್ದರು. ಹಾಗೆ ಅವರು ನೀಡಿದ್ದ ಪೌರತ್ವ ಪಡೆದ ಸುಮಾರು ನಲವತ್ತು ಸಾವಿರ ಮಂದಿ ಪಾಂಡಿಚೆರಿಯಲ್ಲಿ ವಾಸವಿದ್ದರು. ವಾಸ್ತವ ಸಂಗತಿ ಗೊತ್ತಿಲ್ಲದ ನಾವು ಪಾಪ ಆ ಆಟೋ ಡ್ರೈವರನನ್ನು ಮೆಂಟಲ್ ಗಿರಾಕಿಯಿರಬಹುದೆಂದು ಅನುಮಾನಿಸಿದ್ದೆವು. ಇದೀಗ ಫ಼್ರಾನ್ಸ್ ನಲ್ಲಿ ಸುತ್ತಾಡುವಾಗ ಇದೇ ದೇಶದ ಪ್ರಜೆಯಾಗಿರುವ ನಮ್ಮ ಪಾಂಡಿಚೆರಿಯ ಲುಂಗಿ ಉಟ್ಟ ಆಟೋ ಡ್ರೈವರ್ ಏನು ಮಾಡುತ್ತಿರಬಹುದೆಂಬ ನೆನಪಾಯಿತು. ಬಿಂದಾಸ್ ಸಂಸ್ಕೃತಿಯ ಪ್ಯಾರಿಸ್ಸಿಗರಿಗೂ ಪಾಂಡಿಚೆರಿಯಲ್ಲಿ ಪಂಚೆಯುಟ್ಟು ಬೀಡಿ ಸೇದುತ್ತಾ ಅಟೋ ಓಡಿಸುವ ಡ್ರೈವರನಿಗೂ ಎತ್ತಣಿಂದೆತ್ತ ಸಂಬಂಧವೆನಿಸಿತು.


"ಎಲ್ಲರೂ ಪ್ಯಾರಿಸ್ಸಿಗೆ ಗುಡ್ ಬಾಯ್ ಹೇಳಿ" ಎಂದು ಜ್ಯೂಜ಼ರ್ ಮೈಕಿನಲ್ಲಿ ಹೇಳಿದಾಗ ಬಸ್ಸಿನಲ್ಲಿದ್ದವರೆಲ್ಲಾ ’ಗುಡ್ ಬಾಯ್ ಪ್ಯಾರಿಸ್" ಎಂದು ಒಕ್ಕೊರಲಿನಿಂದ ಕೂಗಿದಾಗಲೇ ನಾನು ಪಾಂಡಿಚೆರಿ ನೆನಪಿನಿಂದ ವಾಪಸಾದದ್ದು. ಮತ್ತವೇ ದೊಡ್ಡ ದೊಡ್ಡ ಸುರಂಗ ಮಾರ್ಗಗಳಲ್ಲಿ ನುಗ್ಗುತ್ತಾ ನಮ್ಮ ಬಸ್ ಪ್ಯಾರಿಸ್ ನಗರದಿಂದ ದೂರವಾಗತೊಡಗಿತ್ತು. ಬಹುದೂರದವೆರೆಗೆ ಕಾಣುತ್ತಿದ್ದ ಐಫ಼ಲ್ ಟವರ್ ಕ್ರಮೇಣ ಮರೆಯಾಗತೊಡಗಿ ಗ್ರಾಮೀಣ ಪ್ರದೇಶಗಳು ಕಾಣತೊಡಗಿದ್ದವು. ಹೆದ್ದಾರಿಯಲ್ಲಿ ನಮ್ಮ ಬಸ್ ಗಂಟೆಗೆ ೧೨೦ ಕಿಲೋ ಮೀಟರುಗಳ ವೇಗದಲ್ಲಿ ಹೋಗುತ್ತಿತ್ತು. ಫ಼್ರಾನ್ಸ್ ದೇಶದಲ್ಲಿನ ಹೆದ್ದಾರಿಯುದ್ದಕ್ಕೂ ಇದ್ದ ಜಮೀನಿನಲ್ಲಿ ಎಣ್ಣೆ ಕಾಳುಗಳ ಹಾಗೂ ಜೋಳದ ಬೆಳೆಗಳು ಹಸಿರಿನಿಂದ ಕಂಗೊಳಿಸುತ್ತಿದ್ದವು. ಯಂತ್ರಗಳದ್ದೇ ವ್ಯವಸಾಯದಲ್ಲಿ ಮಹತ್ತರವಾದ ಪಾತ್ರವಾಗಿದ್ದರಿಂದ ನಮ್ಮಲ್ಲಿಯಂತೆ ಜಮೀನಿನಲ್ಲಿ ರೈತರನ್ನು ಕಾಣುವುದೇ ಅಪರೂಪವಾಗಿತ್ತು. ಅಪರೂಪಕ್ಕೆ ಕೆಲವರು ಕಂಡರಾದರೂ ಅವರೂ ಯಾವುದೋ ಯಂತ್ರ ಚಾಲನೆಯಲ್ಲಿ ನಿರತರಾಗಿದ್ದರು.


ಇಂದು ಬೆಲ್ಜಿಯಮ್ ದೇಶದ ರಾಜಧಾನಿ ಬ್ರಸೇಲ್ಸ್ ಗೆ ನಮ್ಮ ಪ್ರಯಾಣವೆಂದು ಜ್ಯೂಜ಼ರ್ ಹೇಳಿದ. ಅವನು ಹಾಗೆ ಹೇಳಿದ ಕೂಡಲೇ ಪಕ್ಕದಲ್ಲಿ ಕೂತಿದ್ದ ಗುರುಬಸವಯ್ಯನವರು ಪುಳಕಿತರಾಗಿ ಕಿವಿ ಬಳಿ ಬಾಗಿ "ಅಲ್ಲಿ ಸಾಂಬಾ ಡಾನ್ಸ್ ಸಕತ್ತಾಗಿರುತ್ತದೆ ನೋಡಿಯೇ ಬಿಡೋಣ" ಎಂದರು. ಬ್ರೆಜಿಲ್ ನಲ್ಲಿ ಹೆಸರುವಾಸಿಯಾಗಿರುವ ಸಾಂಬಾ ಡಾನ್ಸ್ ಬೆಲ್ಜಿಯಮ್ ರಾಜಧಾನಿ ಬ್ರಸೇಲ್ಸ್ ನಲ್ಲೂ ಜನಜನಿತವಾಗಿದೆಯಲ್ಲಾ ಪರವಾಗಿಲ್ಲ ಎಂದುಕೊಂಡೆ. ನಮಗೆ ಕೊಟ್ಟಿದ್ದ ನಮ್ಮ ಪ್ರವಾಸದ ಬ್ರೋಷರ್ ನಲ್ಲಿಯೂ ಸಾಂಬಾ ಡಾನ್ಸ್ ಬಗ್ಗೆ ಮಾಹಿತಿಯಿರಲಿಲ್ಲ. ಅದನ್ನು ಹೇಗೆ ಇವರು ಪತ್ತೆ ಮಾಡಿದರೋ ಬಸ್ಸಿನಿಂದ ಕೆಳಗಿಳಿದ ನಂತರ ವಿಚಾರಿಸಿದರಾಯಿತೆಂದುಕೊಂಡೆ. ಪ್ಯಾರಿಸ್ ನಲ್ಲಿಯೇ ಅದ್ಭುತವಾಗಿದ್ದ ಲಿಡೋ ಶೋನ ಒಂದೇ ಒಂದು ನೃತ್ಯವನ್ನೂ ಸರಿಯಾಗಿ ನೋಡದೇ ಗಡದ್ದಾಗಿ ತೂಕಡಿಸಿದ್ದ ಪಾರ್ಟಿ ಇದೀಗ ಸಾಂಬಾ ಡಾನ್ಸ್ ಬಗ್ಗೆ ಅತ್ಯುತ್ಸಾಹದಿಂದ ಮಾತನಾಡುತ್ತಿದ್ದರು. ಈ ಬಗ್ಗೆ ರಾಜೇಗೌಡರಿಗೂ ಕಿವಿಯಲ್ಲಿ ಹೇಳಿದ್ದರೇನೋ...ಅವರೂ ನನ್ನ ಬಳಿ ಬಂದು ’ಅಲ್ಲಿ ಸಾಂಬಾ ಡಾನ್ಸ್ ಇದೆಯಾ’ ಎಂದು ಮೆಲ್ಲಗೆ ಕೇಳಿ’ ಇದ್ದರೆ ನೋಡೇ ಬಿಡೋಣವೆಂದರು.


ಹೆದ್ದಾರಿ ಬಳಿಯ ಹೋಟೆಲೊಂದರಲ್ಲಿ ಊಟಕ್ಕಾಗಿ ಬಸ್ ನಿಲ್ಲಿಸಲಾಯಿತು. ಬಸ್ ನಿಲ್ಲಿಸಿದ ಕೆಲವೆಡೆ ಟಾಯ್ಲೆಟ್ ಉಚಿತವಾಗಿ ಉಪಯೋಗಿಸಬಹುದಿತ್ತು. ಮತ್ತೆ ಕೆಲವೆಡೆ ಪೇ ಅಂಡ್ ಯೂಸ್ ಟಾಯ್ಲೆಟ್ಟುಗಳಲ್ಲಿ ಐವತ್ತು ಸೆಂಟ್ ನಿಂದ ಒಂದು ಯೂರೋವರೆಗೆ ಹಣ ನೀಡಬೇಕಿತ್ತು. ಕೆಲವು ಉತ್ತರ ಭಾರತೀಯರು ಪೇ ಅಂಡ್ ಯೂಸ್ ಟಾಯ್ಲೆಟ್ಟುಗಳಿರುವೆಡೆ ಬಸ್ಸು ನಿಲ್ಲಿಸಿದಾಗಲೆಲ್ಲಾ ಜ್ಯೂಜ಼ರ್ ನನ್ನು ತಮ್ಮ ತಮ್ಮಲ್ಲೇ ಬೈದುಕೊಳ್ಳುತ್ತಿದ್ದುದು ಸಾಮಾನ್ಯವಾಗಿತ್ತು. ಇನ್ನು ಕೆಲವು ಗಂಡಸರು ಹೆದ್ದಾರಿಯಲ್ಲೇನಾದರೂ ಉಚಿತವಾಗಿ ಕೆಲಸ ಮುಗಿಸಬಹುದೇನೋ ಎಂದು ಅವಸರದಿಂದಲೇ ಬಸ್ ನಿಲ್ಲಿಸಿದ ಜಾಗದ ಸುತ್ತಮುತ್ತೆಲ್ಲಾ ಓಡಾಡಿ ನೋಡಿ ಅಲ್ಲೆಲ್ಲಾ ಹೆದ್ದಾರಿ ಬಿಟ್ಟು ಹೊರಗೆ ದಾಟದ ಹಾಗೆ ಬಿಗಿಯಾದ ತಂತಿ ಬೇಲಿ ಹಾಕಿದ್ದರಿಂದ ಗೊಣಗಾಡಿಕೊಂಡೇ ಹೋದಷ್ಟೇ ವೇಗವಾಗಿ ಹಿಂದಿರುಗಿ ಟಾಯ್ಲೆಟ್ಟುಗಳಿಗೆ ನುಗ್ಗುತ್ತಿದ್ದರು. ಹೆದ್ದಾರಿಯ ಹೋಟೆಲ್ಲುಗಳಲ್ಲಿ ಹಂದಿ ಮಾಂಸ ಹಾಗೂ ದನದ ಮಾಂಸವನ್ನು ಅರೆಬರೆ ಬೇಯಿಸಿಡುತ್ತಿದ್ದರು. ಮಸಾಲೆ ಪ್ರಿಯರಾದ ನಮಗೆ ಆ ಮಾಂಸ ರುಚಿಸುತ್ತಿರಲಿಲ್ಲ. ಯಾವುದಾದರೂ ತಿಂಡಿಯನ್ನು ತಿಂದು ಬೆಳಿಗ್ಗೆ ಹೋಟೆಲಿನಿಂದ ತಂದಿದ್ದ ಹಣ್ಣುಗಳನ್ನು ತಿನ್ನುವುದು ನಮಗೆ ರೂಢಿಯಾಗಿತ್ತು.


ಯೂರೋಪಿನಲ್ಲಿ ವ್ಯಾಪಾರ ಮಾಡುವಾಗ ಹುಶಾರಾಗಿರಬೇಕೆಂದೂ, ಕಳ್ಳರು ನಿಮ್ಮನ್ನು ದೋಚಬಹುದೆಂದೂ, ನಿಮ್ಮ ಪಾಸ್ ಪೋರ್ಟ್ ಹಾಗೂ ಹಣವನ್ನು ಜೋಪಾನವಾಗಿಟ್ಟುಕೊಳ್ಳಬೇಕೆಂದು ನಮ್ಮನ್ನು ಶಾಪಿಂಗ್ ಜಾಗಗಳಿಗೆ ಕರೆದುಕೊಂಡು ಹೋದಾಗಲೆಲ್ಲಾ ಜ್ಯೂಜ಼ರ್ ಎಚ್ಚರಿಸುತ್ತಿದ್ದ. ಅಲ್ಲದೆ ಭಾರತದಲ್ಲಿಯೂ ಈ ಬಗ್ಗೆ ನಮಗೆ ಹಲವರು ಹೇಳಿದ್ದರು. ಅದರಲ್ಲಿಯೂ ಇಟಲಿಯಲ್ಲಿ ಕಳ್ಳರ ಕಾಟ ಜಾಸ್ತಿಯೆಂದೂ, ಅಲ್ಲಿ ಹುಡುಗಿಯರೂ ಕಳ್ಳತನದಲ್ಲಿ ನಿಷ್ಣಾತರೆಂದೂ, ಅಲ್ಲಿಯ ಕಳ್ಳರ ಉಪಟಳ ತಡೆಯಲಾಗದೇ ಅಲ್ಲಿನ ಸರ್ಕಾರ ಕಳ್ಳರನ್ನೇ ಪೋಲೀಸರ ಕೆಲಸಕ್ಕೆ ನೇಮಕ ಮಾಡಿಕೊಂಡಿದೆಯೆಂದಿದ್ದರು. ನಮಗೆ ಪ್ಯಾರಿಸ್ಸಿನಲ್ಲಿ ಕಳ್ಳರ ಕಾಟವಿರದಿದ್ದರಿಂದ, ಅಲ್ಲದೆ ನಾವು ಇಟಲಿಗೆ ಹೋಗುತ್ತಿದ್ದುದು ಪ್ರವಾಸದ ಕೊನೆಯಲ್ಲಾದ್ದರಿಂದ ಕಳ್ಳರ ಬಗ್ಗೆ ನಾವ್ಯಾರೂ ತಲೆಕೆಡಿಸಿಕೊಂಡಿರಲಿಲ್ಲ.


ಬೆಲ್ಜಿಯಂ ಯೂರೋ ರಾಷ್ಟ್ರಗಳಿಗೆ ರಾಜಧಾನಿಯಾಗಿತ್ತು. ನಾವು ಬೆಲ್ಜಿಯಂ ರಾಜಧಾನಿ ತಲುಪಿದಾಗ ಸಣ್ಣ ತುಂತುರು ಮಳೆ ಬಂದು ನಿಂತಿದ್ದರಿಂದ ವಾತಾವರಣ ತಂಪಾಗಿತ್ತು. ಬ್ರಸೇಲ್ಸ್ ಸುಂದರ ನಗರ. ಇದು ಬೆಲ್ಜಿಯಂ ನ ರಾಜಧಾನಿ. ಜತೆಗೇ ಯೂರೋ ರಾಷ್ಟ್ರಗಳಿಗೂ ಪ್ರಮುಖ ಆಡಳಿತ ಕೇಂದ್ರವಾಗಿತ್ತು. ಬ್ರಸೇಲ್ಸ್ ನ ಪ್ರಮುಖ ಮಾರುಕಟ್ಟೆ ಪ್ರದೇಶದಲ್ಲಿ ನಾವಿಳಿದಾಗ ಸಂಜೆ ನಾಲ್ಕು ಗಂಟೆ. ನಮ್ಮೆಲ್ಲರನ್ನೂ ಒಂದು ಕಡೆ ಸೇರಿಸಿಕೊಂಡ ಜ್ಯೂಜ಼ರ್ ಅಲ್ಲೊಂದೆರಡು ಅಂಗಡಿಗಳ ಹೆಸರು ಹೇಳಿ ಅಲ್ಲಿಯೇ ವ್ಯಾಪಾರ ಮಾಡಿರೆಂದೂ ನೀವೆಲ್ಲಾ ವ್ಯಾಪಾರ ಮುಗಿಸಿದ ನಂತರ ಅಲ್ಲಿದ್ದ ಅಂಗಡಿಯೊಂದರ ಬಳಿಯೇ ಬರಲು ಹೇಳಿ, ನಿಮಗಿರುವುದು ಒಂದು ಗಂಟೆ ಸಮಯ ಮಾತ್ರವೆಂದೂ ಅಷ್ಟರಲ್ಲಿ ಎಲ್ಲರೂ ಹಿಂದಿರುಗಬೇಕೆಂದು ಎರಡೆರಡು ಬಾರಿ ಎಚ್ಚರಿಸಿದ.


ನಾವೊಂದಿಬ್ಬರು ಅಲ್ಲಿಯ ಚಾಕೊಲೇಟ್ ಅಂಗಡಿಗಳಲ್ಲಿ ಬಿಸಿಬಿಸಿಯಾಗಿ ತಯಾರಾಗುತ್ತಿದ್ದ ತಿಂಡಿಗಳನ್ನು ಸವಿದು ಒಂದಷ್ಟು ಚಾಕೊಲೇಟ್ ಗಳನ್ನು ಕೊಂಡುಕೊಂಡೆವು. ಕಪ್ಪದ್ ನಾನು ಕಾಣದಿದ್ದುದರಿಂದ ನನ್ನನ್ನು ಹುಡುಕಿಕೊಂಡು ಮಾರುಕಟ್ಟೆ ಪ್ರದೇಶದಲ್ಲೆಲ್ಲಾ ಅಡ್ಡಾಡಿ ಕೊನೆಗೆ ನಾವು ನಿಂತಿದ್ದ ಜಾಗಕ್ಕೇ ಬಂದಿದ್ದರು. ನಿಮ್ಮನ್ನು ಎಲ್ಲೆಲ್ಲಿ ಹುಡುಕುವುದು ಎಂದವರೇ ಬನ್ನಿ ಅಲ್ಲೊಂದು ಜಾಗವನ್ನು ನೋಡಿರುವುದಾಗಿ ಹೇಳಿದವರೇ ನನ್ನ ಪ್ರತಿಕ್ರಿಯೆಗೂ ಕಾಯದೇ ಎಳೆದುಕೊಂಡು ಹೋದರು. ಅದರ ಒಳಗೆ ಹೋದಾಗಲೇ ಅದು ಬಾರ್ ಎಂದು ಗೊತ್ತಾಗಿದ್ದು. ಅಲ್ಲಿ ನಾವು ಕೂರಲು ಸಮಯವಿರದ ಕಾರಣ ಇಬ್ಬರೂ ಪಾರ್ಸಲ್ ಹಿಡಿದು ಹಿಂದಿರುಗಿದೆವು. ಅಷ್ಟರಲ್ಲಾಗಲೇ ಶಾಪಿಂಗ್ ಮುಗಿಸಿ ಎಲ್ಲರೂ ಹಿಂದಿರುಗಿದ್ದರು. ಬ್ರಸೇಲ್ಸ್ ನಲ್ಲಿ ನಮ್ಮನ್ನು ಶಾಪಿಂಗ್ ಗಾಗಿ ನಿಲ್ಲಿಸಿದ ಜಾಗದಲ್ಲಿ ಕಪ್ಪು ಅಲೆಮಾರಿ ವ್ಯಾಪಾರಿಗಳು ಕಾಣಿಸಲಿಲ್ಲ. ಎಲ್ಲವೂ ಅಂಗಡಿಗಳೇ ಆದ್ದರಿಂದ ಅಲ್ಲಿಯ ವಸ್ತುಗಳ ಬೆಲೆ ದುಬಾರಿಯೆಂದು ಅಂಗಡಿಗಳನ್ನು ಸುತ್ತಾಡಿ ಬಂದವರೆಲ್ಲಾ ಗೊಣಗಾಡುತ್ತಿದ್ದರು. ಜ್ಯೂಜ಼ರ್ ಹೇಳಿದ್ದ ಅಂಗಡಿಗಳಲ್ಲಂತೂ ವಿಪರೀತವಾದ ಬೆಲೆಯೆಂದು ಯಾರೂ ಏನನ್ನೂ ಕೊಳ್ಳುವ ಗೋಜಿಗೆ ಹೋಗಿರಲಿಲ್ಲ. ದುಬಾರಿ ಬೆಲೆಯಿದ್ದ ಕಾರಣದಿಂದಲೇ ಎಲ್ಲರೂ ಬೇಗನೇ ಹಿಂದಿರುಗಿದ್ದರು.


ಜ್ಯೂಜ಼ರನ ನೇತ್ರತ್ವದಲ್ಲಿ ನಾವೆಲ್ಲಾ ಚರ್ಚ್ ನೋಡಲು ಹೊರಟೆವು. ನಾನು ರಾಜೇಗೌಡ್ರು, ಗುರುಬಸವಯ್ಯನವರು ಒಟ್ಟಿಗೇ ಮಾತಾಡಿಕೊಳ್ಳುತ್ತಾ ಜ್ಯೂಜ಼ರ್ ನನ್ನು ಹಿಂಬಾಲಿಸತೊಡಗಿದೆವು. ಆಗಲೇ ನೋಡಲು ಟಪೋರಿಗಳ ತರವಿದ್ದ ನಾಲ್ಕು ಜನ ಯುವಕರು ನಮ್ಮತ್ತ ನೋಡಿ ಮುಸಿ ಮುಸಿ ನಗುತ್ತಾ ಹತ್ತಿರ ಬರತೊಡಗಿದರು.


(ಮುಂದುವರೆಯುವುದು)
 
 
 

 

 
 
 
 
 
 
 
 
 
Copyright © 2011 Neemgrove Media
All Rights Reserved