|
|
|
ಎಲ್ಲಿಗಣ್ಣಯ್ಯ, ನಿನ್ನ ಪಯಣ?
ಡಾ. ಹಿ. ಶಿ. ರಾ.
(ಭಾಗ-೧)
ಈ ಹೊತ್ತಿನ ಸಮಾಜದ ನಿರ್ವಹಣೆಯನ್ನು ನಾಲ್ಕು ಕಾರ್ಯಾಂಗಗಳ ಮೂಲಕ
ಗುರುತಿಸುವುದು ಸಾಮಾನ್ಯ. ಅವುಗಳೆಂದರೆ; ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಮತ್ತು
ರಾಜಕೀಯ. ಒಂದು ಸಮಾಜದ ಸಾಂಸ್ಥಿಕ ರೂಪವನ್ನು ಸಾಮಾಜಿಕ ಎಂತಲೂ, ನಂಬಿಕೆ ಮತ್ತು
ನಡವಳಿಕೆಯ ಭಾಗವನ್ನು ಸಂಸ್ಕೃತಿಯೆಂತಲೂ, ಜೀವನ ನಿರ್ವಹಣೆಗೆ ಬೇಕಾದ ಉತ್ಪಾದನಾ
ಚಟುವಟಿಕೆಯನ್ನು ಆರ್ಥಿಕ ಎಂದೂ, ಸಮಾಜದ ಅಭಿವೃದ್ಧಿ ನಿರ್ವಹಣೆಯನ್ನು ರಾಜಕೀಯ ಎಂದೂ
ಗುರುತಿಸಲಾಗುತ್ತದೆ.
ಇದು ಸಮಾಜವನ್ನು ಅಧ್ಯಯನ ಮಾಡಲು ನಾವು ಬಳಸಿಕೊಂಡ ವಿಭಾಗ ಕ್ರಮವಾಗಿದೆ. ಒಟ್ಟು
ಜೀವನದಲ್ಲಿ ಇವುಗಳನ್ನು ಬೇರೆ ಬೇರೆ ಮಾಡಿ ನೋಡಲು ಕಷ್ಟ. ಯಾಕೆಂದರೆ ಈ ನಾಲ್ಕೂ ಅಂಗಗಳು
ಅನ್ಯೋನ್ಯವಾಗಿವೆ. ಮನುಷ್ಯನ ದೇಹದ ಬೇರೆ ಬೇರೆ ಭಾಗಗಳನ್ನು ಗುರುತಿಸಿ ಹೆಸರು
ಹೇಳುತ್ತೇವೆ. ಆದರೆ ಆ ಯಾವುದೊಂದೇ ಭಾಗವೂ ತಾನೇ ಮನುಷ್ಯ ಎಂದು
ಹೇಳಿಕೊಳ್ಳಲಾಗುವುದಿಲ್ಲ. ಎಲ್ಲ ಅಂಗಾಂಗಗಳೂ ಸೇರಿದಾಗ ಮಾತ್ರ ಮನುಷ್ಯ
ಎನಿಸಿಕೊಳ್ಳುತ್ತಾನೆ. ಸಮಾಜ ಕೂಡ ಹಾಗೆಯೇ.
ಎಲ್ಲಕ್ಕೂ ಜೀವಧಾತು ಸಂಸ್ಕೃತಿಯೇ. ಕೂಡಿ ಕೊಂಡಾಗ ಸಂಸ್ಕೃತಿ ಹುಟ್ಟುತ್ತದೆ;
ದೂರವಾದಾಗ ಅದು ಇರುವುದಿಲ್ಲ. ಗಂಡು-ಹೆಣ್ಣು ಕೂಡಿದಾಗ ಸಂಸಾರ ಹುಟ್ಟುವ ಹಾಗೆ. ನಾವು
ಯಾತಕ್ಕಾಗಿ, ಯಾವ ಉದ್ದೇಶಕ್ಕಾಗಿ ಕೂಡುತ್ತೇವೆಯೋ ಅದು ಸಂಸ್ಕೃತಿ. ಅಂದರೆ
ಸಂಸ್ಕೃತಿಯಂತೆ ಸಮಾಜವಿರುತ್ತದೆ. ಉದಾಹರಣೆಗೆ "ಕದಿಯುವುದೇ ಸಂಸ್ಕೃತಿ" ಯಾದರೆ, ಅದು
ಕದಿಯುವುದಕ್ಕೆ ಬೇಕಾದ ನಡವಳಿಕೆಗಳನ್ನು ರೂಪಿಸುತ್ತದೆ. ಕದಿಯುವ ವ್ಯಾವಹಾರಿಕತೆ ಅದರ
ಅರ್ಥಶಾಸ್ತ್ರವಾಗುತ್ತದೆ. ಕದಿಯುವ ಹೊಸ ಹೊಸ ಅವಕಾಶಗಳನ್ನು ಹುಡುಕುವುದೇ ಅದರ
ರಾಜಕೀಯವಾಗುತ್ತದೆ.
ಈ ಹೊತ್ತಿನ ಅಮೆರಿಕ ಕೇಂದ್ರಿತ ಸಂಸ್ಕೃತಿಯನ್ನೆ ತೆಗೆದುಕೊಳ್ಳಿ. ಅದು ಜಗತ್ತನ್ನು
ಬಳಕೆದಾರರ ಒಂದು ಒಕ್ಕೂಟ ಎಂದು ಭಾವಿಸುತ್ತದೆ. ಅಲ್ಲಿ ಅಮೆರಿಕ ಮತ್ತು ಅದರ
ಮಿತ್ರರಾಷ್ಟ್ರಗಳು ಉತ್ಪಾದಕ ಪ್ರಭುವಿನ ಜಾಗದಲ್ಲಿ ನಿಲ್ಲುತ್ತವೆ. ಇತರ ದೇಶಗಳು ಅವುಗಳ
ಉತ್ಪನ್ನಗಳನ್ನು ಬಿಕರಿ ಮಾಡುವ ಮಾರುಕಟ್ಟೆಗಳು ಎನಿಸಿಕೊಳ್ಳುತ್ತವೆ. ಇಂಥ ಸಾಂಸ್ಕೃತಿಕ
ವಾತಾವರಣದಲ್ಲಿ ಹೆಣ್ಣನ್ನು ಗುರುತಿಸುವುದು ಹೇಗೆ?
ಇತ್ತೀಚಿನ ದಿನಮಾನಗಳಲ್ಲಿ ಮಹಿಳೆಯನ್ನು ಪ್ರತ್ಯೇಕವಾಗಿಟ್ಟುಕೊಂಡು ಮಹಿಳಾ
ಸಮಾಜವೊಂದರ ಅಸ್ತಿತ್ವವನ್ನು ಹೇಳಲಾಗುತ್ತದೆ. ಹಾಗಿದ್ದಲ್ಲಿ ಮಹಿಳಾ ಸಮಾಜದ ಸಂಸ್ಕೃತಿ
ಏನು? ಅದರ ಉದ್ದೇಶ ಮತ್ತು ಕಾರ್ಯಯೋಜನೆಗಳು ಯಾವುವು ಎಂಬ ಪ್ರಶ್ನೆ ಎದುರಾಗುತ್ತದೆ.
ನಮಗೆ ತಿಳಿದಂತೆ ಹಿಂದೆ ಮಹಿಳಾ ಪ್ರತ್ಯೇಕತೆ ಮತ್ತು ಮಹಿಳಾ ಸಮಾಜ ಎಂಬ ಪರಿಕಲ್ಪನೆ
ಇರಲಿಲ್ಲ. ಆಧುನಿಕ ಸಮಾಜ ಮಹಿಳೆಯನ್ನು ಲಿಂಗತಾರತಮ್ಯದಿಂದ ನೋಡುತ್ತಿದೆ. ಅವಳನ್ನು
ದುರ್ಬಲ ಲಿಂಗ ಎಂದು ನೋಡಲಾಗುತ್ತದೆ. ಆ ಕಾರಣಕ್ಕೆ ಅವಳನ್ನು ಶೋಷಣೆ ಮಾಡಲಾಗುತ್ತಿದೆ.
ಪ್ರಜಾಪ್ರಭುತ್ವ ಸಮಾಜವೊಂದರಲ್ಲಿ ಅವಳಿಗೆ ಸಿಗಬೇಕಾದ ಸಮಾನತೆ, ಘನತೆ, ಗೌರವ ಮತ್ತು
ಸ್ಥಾನಗಳು ಸಿಗುತ್ತಿಲ್ಲ. ಇದಕ್ಕೆಲ್ಲ ಕಾರಣ ಅಸಹಜ ಮತ್ತು ದಮನ ಸಂಸ್ಕೃತಿಗಳು ಅವಳನ್ನು
ಹತ್ತಿಕ್ಕುತ್ತಿರುವುದು ಎಂದು ಹೇಳಲಾಗಿದೆ.
ಪ್ರಕೃತಿ ಹೆಣ್ಣನ್ನು ನಿಸರ್ಗದ ಒಂದು ವಿಶಿಷ್ಟತೆಯಾಗಿ ಸೃಷ್ಟಿಸಿದೆಯೇ ಹೊರತು,
ಎರಡನೆಯ ಸ್ಥಾನ ಎಂಬ ತಾರತಮ್ಯವಾಗಿ ಅಲ್ಲ. ಪ್ರಕೃತಿ ಅವಳನ್ನು ಒಂದು ವಿಶಿಷ್ಟತೆ
(distinction) ಯಾಗಿ ಸೃಷ್ಟಿಸಿದ್ದರೆ ಗಂಡು ಪ್ರಧಾನ ಸಮಾಜ ಅವಳನ್ನು ತಾರತಮ
(discrimination) ಭಾವದಿಂದ ನೋಡಿ ತನ್ನ ಅಧೀನಕ್ಕೆ ಬಳಸಿಕೊಂಡಿದೆ. ಆದ್ದರಿಂದಲೇ ಗಂಡು
ಪತಿ (ಯಜಮಾನ) ಹೆಂಡತಿ ಎಂಬುವವಳು ಪತ್ನಿ (ಗಂಡನನ್ನು ಅನುಸರಿಸುವವಳು). ಹೆಂಡತಿಯೇ
ಗಂಡನನ್ನು ಯಾಕೆ ಅನುಸರಿಸಬೇಕು, ಗಂಡನೆ ಹೆಂಡತಿಯನ್ನು ಯಾಕೆ ಅನುಸರಿಸಬಾರದು? ಈ ಎರಡೂ
ತಪ್ಪು ಎನ್ನುವುದಾದರೆ ಪರಸ್ಪರರು ಅನುಸೃಷ್ಟಿ ಮತ್ತು ಅನುಸರಣೆ ಮಾಡಿಕೊಂಡು ಹೋಗಬಾರದು
ಎಂಬ ಚಿಂತನೆ ಈ ಹೊತ್ತಿನ ಜಾಯಮಾನವಾಗಿದೆ. ಇದೇ ಸಹಜ ಸಂಸ್ಕೃತಿಯಲ್ಲವೆ?
ಈ ಬಗೆಯ ಚಿಂತನೆ ಸಹಜ ಸಂಸ್ಕೃತಿ ಮತ್ತು ಅದಕ್ಕೆ ಪ್ರತಿಯಾಗಿ ಬೆಳೆದ 'ಪ್ರತಿಕೃತಿ'
ಸಂಸ್ಕೃತಿಗಳ ನಿರಂತರ ತಿಕ್ಕಾಟವನ್ನು ತಿಳಿಸುತ್ತಿದೆ. ಹಾಗೆ ನೋಡಿದರೆ ಸ್ತ್ರೀ-ಪುರುಷ
ಪರಸ್ಪರವೆಂದು ಕೂಡಿದ ಸಂಸ್ಕೃತಿ ಸಹಜ ಸಂಸ್ಕೃತಿ. ಗಂಡಿನ ಅಧೀನದಲ್ಲಿ ಉಳಿದೆಲ್ಲವುಗಳು
ಎಂದರೆ ಅದು ದಮನ ಸಂಸ್ಕೃತಿ. ಸಹಜ ಸಂಸ್ಕೃತಿಗೆ ಪ್ರತಿಯಾಗಿ ಸೃಷ್ಟಿಸಿಕೊಂಡ
ಸಂಸ್ಕೃತಿಗಳೆಲ್ಲವೂ ಪ್ರತಿಕೃತಿ ಸಂಸ್ಕೃತಿಗಳೆ. ಅವುಗಳೆಂದರೆ: ಗಂಡು ಪ್ರಧಾನ
ಸಂಸ್ಕೃತಿ, ಊಳಿಗಮಾನ್ಯ ಸಂಸ್ಕೃತಿ, ಪುರೋಹಿತ ಸಂಸ್ಕೃತಿ, ಬಂಡವಾಳ ಸಂಸ್ಕೃತಿ, ಜಾತಿ
ಸಂಸ್ಕೃತಿ, ಪ್ರಭು ಸಂಸ್ಕೃತಿ ಮತ್ತು ಈ ಹೊತ್ತಿನ ಜಾಗತಿಕ ಪ್ರಭುತ್ವ ಸಂಸ್ಕೃತಿ.
ಸಹಜ ಸಂಸ್ಕೃತಿ ಪ್ರಕೃತಿಯೊಂದಿಗೆ ಸಹ್ಯ ಹೊಂದಾಣಿಕೆ ಮತ್ತು ಅನುಕರಣೆಯೊಂದಿಗೆ
ಸೃಷ್ಟಿಯದು. ಹೆಣ್ಣು ಕೂಡ ಒಂದು 'ಮಾನವ ಪ್ರಕೃತಿ' : ಪ್ರಕೃತಿಯೆಂತೆಯೆ ಮನುಷ್ಯ
ಸಮಾಜದಲ್ಲಿ ಅವಳು ಗರ್ಭಧಾರಣೆ, ಜನನ ಮತ್ತು ಪೋಷಣೆಯ ಹೊಣೆಗಾರಿಕೆಯನ್ನು ಹೊತ್ತವಳು.
ಮಾನವ ಸಂಸೃತಿಯ ನಿರ್ಮಾತೃ ಕೂಡ ಅವಳೆ. ಸಂಸ್ಕೃತಿ ಎಂಬುದು ಮಾನವ ಸಮಾಜ ನೆಲಸುವುದು,
ಸೃಷ್ಟಿಸುವುದು, ಅನುಭವಿಸುವುದು ಮತ್ತು ಇತರರೊಡನೆ ಸ್ಪರ್ಧಿಸಿ ಅಸ್ತಿತ್ವ
ಉಳಿಸಿಕೊಳ್ಳುವುದು ತಾನೆ? ಅಂಥ ಹೊಣೆಗಾರಿಕೆಯನ್ನು ಹೊತ್ತ ಸಮಾಜದ ಮೊದಲ ಪ್ರಜೆ ಹೆಣ್ಣು.
ಓಡಾಡಿಕೊಂಡಿದ್ದ ಮನುಷ್ಯ ಹೆರಿಗೆಗಾಗಿ, ಮಕ್ಕಳ ಪೋಷಣೆಗಾಗಿ, ರಕ್ಷಣೆಗಾಗಿ ಒಂದು ಕಡೆ
ನೆಲೆ ನಿಲ್ಲಬೇಕಾಯಿತು. ಅದು ಹೆಣ್ಣಿನ ಕಾರಣದಿಂದಲೇ ಆಯಿತು. ಕುಟುಂಬ, ಊರು, ಸಮುದಾಯ
ಅಲ್ಲಿಂದ ಹುಟ್ಟಿ ಬೆಳೆದವು. ಅಂದರೆ 'ಸಂಸ್ಕೃತಿ ತಾಣದ ನಿರ್ಮಾಪಕಿ’ಯೇ ಹೆಣ್ಣು.
’ರೋಲಿಂಗ್ ಸ್ಟೋನ್ ಗ್ಯಾದರ್ಸ್ ನೋ ಮಾಸ್' ಎಂಬಂತೆ ಗಂಡು ನೆಲೆ ಕಾಣದೆ ಇದ್ದಾಗ ಅವನನ್ನು
ತನ್ನ ಸೆರಗಿಗೆ ಇಟ್ಟುಕೊಂಡು ಪೋಷಿಸಿದಳು. ಅವಳು ಮಕ್ಕಳಿಗಾಗಿ ಆಹಾರ ತಯಾರು ಮಾಡುತ್ತಿದ್ದಳು. ಅದನ್ನು ಗಂಡಸು ತನಗಾಗಿಯೂ ವಿಸ್ತರಿಸಿ ಕೊಂಡು ಆರಾಮವಾದನು. ಇದು ಮಕ್ಕಳ ನೆಪದಲ್ಲಿ ಗಂಡು ಪಡೆದ ಲಾಭ!
ಮಕ್ಕಳನ್ನು
ಸಾಕುವಾಗ ಅವಳು ಮನೆ ಹೊರಗೆ ಬೀಜ ಮತ್ತು ಸಸಿಗಳನ್ನು ನೆಟ್ಟು ಸಾಕಿದಳು. ಪ್ರಬಲನಾದ
ಮೇಲೆ ಗಂಡು ಅದನ್ನೂ ಹೆಣ್ಣಿನಿಂದ ವಶಪಡಿಸಿಕೊಂಡನು. ಮಕ್ಕಳು ಮತ್ತು ಸಸಿಗಳನ್ನು
ಪೋಷಿಸುವ ಅವಳ ಪೋಷಕ ಗುಣವನ್ನು ಕಂಡು ಅದರಿಂದ ತಾನು ಆರೋಗ್ಯವಂತನಾಗಿರಬಹುದೆಂದು
ಗ್ರಹಿಸಿ ಅವಳನ್ನು ಪೋಷಕಿಯಾಗಿ ಇಟ್ಟುಕೊಂಡನು. ಅವಳಿಂದ ಪಡೆವ ಸುಖ ಸುರಲೋಕದ ಸುಖಕಿಂತ
ಹೆಚ್ಚಿನದು ಎಂದು ಮನವರಿಕೆ ಆದ ಮೇಲೆ ಅವಳನ್ನು ತನಗಾಗಿ ಭದ್ರ ಮಾಡಿಕೊಂಡನು. ನೈಸರ್ಗಿಕ
ಎಲ್ಲ ಪೋಷಕ ಗುಣಗಳ ಗಣಿಯಾದ ಹೆಣ್ಣನ್ನು ತನ್ನ ಎಲ್ಲ ಸೌಕರ್ಯಗಳ ಸಂಪನ್ಮೂಲ ಎಂದು ತಿಳಿದು
ಅವಳನ್ನು ಗಣಿಯಾಗಿಯೆ ಉಳಿಸಿಕೊಂಡು, ಅವನು ಗಣಿಧಣಿಯಾದನು. ಎಲ್ಲದರಲ್ಲೂ ಲಾಭಕೋರನಾಗಿ
ಗಂಡಸು ಸಾರ್ವತ್ರಿಕ ಫಲಾನುಭವಿಯಾಗಿ ಮಾರ್ಪಟ್ಟನು.
ಸಂಪತ್ತು ಇದ್ದ ಕಡೆಯೆ ದರೋಡೆ ನಡೆಯುವುದು, ಸಾಮ್ರಾಜ್ಯ ಸೃಷ್ಟಿಯಾಗುವುದು ತಾನೆ?!
ನೈಸರ್ಗಿಕ ಸಂಪನ್ಮೂಲ ಮತ್ತು ಮಾನವ ಸಂಪನ್ಮೂಲದ ಸುಖವನ್ನು ಕಂಡ ಗಂಡಸು ಅವುಗಳ
ಒಡೆಯನಾಗಲು ನಿರಂತರ ನಡೆಸಿದ ಹಿಕಮತ್ತೇ ಗಂಡು ಪ್ರಧಾನ ಸಮುದಾಯ ನಿರ್ಮಾಣವಾಗಲು
ಕಾರಣವಾಯಿತು. ಇದೇ ಗಂಡಿನಿಂದ ಮುಂದೆ ರಾಜ್ಯ, ಸಾಮ್ರಾಜ್ಯಗಳು ಹುಟ್ಟಿಕೊಂಡವು. ಜನಹಿತದ
ಹೆಸರಿನಲ್ಲಿ ಕರ-ತೆರಿಗೆ ಮುಂತಾದ ಶೋಷಕ ಮಾರ್ಗಗಳ ಮೂಲಕ ತಮ್ಮನ್ನು ಗಟ್ಟಿಗೊಳಿಸಿಕೊಂಡವು. ಇಲ್ಲಿಯವರೆಗಿನ ನೋಟದಂತೆ ಈ ಕದೀಮರು ಹೆರಿಗೆಗೆ ತೆರಿಗೆ
ಹಾಕಿದಂತೆ ಇಲ್ಲ, ಇನ್ನು ಉಳಿದ ಎಲ್ಲ ಉತ್ಪಾದನೆ ಮತ್ತು ಉತ್ಪತ್ತಿದಾರರ ಮೇಲೆ ತೆರಿಗೆ
ಹಾಕಿದ್ದಾರೆ. ಇದನ್ನೇ ಇವರು ರಾಜಕಾರಣ ಎಂದು ಕರೆದಿದ್ದಾರೆ. ಇದೇ ಕ್ರಿಯೆಯ ಈ ಹೊತ್ತಿನ
ಪರಿಸ್ತಿತಿ ಎಂದರೆ 'ಅಭಿವೃದ್ದಿ ರಾಜಕಾರಣ'. ಇದರ ಹಿಂದೆ ಇರುವುದೇ ಗಂಡಸೆಂಬ ಅಹಂಕಾರಿಯ
ಆಟಾಟೋಪ ಮತ್ತು ಸುಖ ಲೋಲುಪತೆ. ಈ ದುರಾಸೆ(greed) ಏನೆಲ್ಲಾ ಅವಶ್ಯ ಮೂಲ (basic
sources) ಗಳನ್ನು ನಾಶ ಮಾಡುತ್ತದೋ ತಿಳಿಯುತ್ತಿಲ್ಲ!
ಈ ದುರಹಂಕಾರಕ್ಕೆ ಎದುರಾದ ಸಣ್ಣ ಪ್ರತಿಭಟನೆಯೆ ಮಹಿಳೆಗೆ ಸಾಂಸ್ಕೃತಿಕ ನಾಯಕತ್ವ
ಬೇಕು ಮತ್ತು ಅದನ್ನು ಆಕೆ ಪಡೆಯಲು ಹೋರಾಟ ಮಾಡಬೇಕು ಎಂಬ ಸಾಮಾಜಿಕ ಚಲನೆ. ಹೆಣ್ಣಿನ
ಸಬಲೀಕರಣ (empowerment), ಲಿಂಗ ಸಮಾನತೆ, ರಾಜಕೀಯದಲ್ಲಿ ಪ್ರಾತಿನಿಧ್ಯ..ಇತ್ಯಾದಿ
ಇತ್ಯಾದಿಗಳೆಲ್ಲ ಗಂಡು ಪ್ರಧಾನ ರಾಜಕಾರಣ ಹೇಳುತ್ತಿರುವ, ಹೆಣ್ಣಿನ ಪರವಾಗಿ ತಾವು
ಮಾಡುತ್ತಿರುವ ರಾಜಕಾರಣ. ಇದೇ ಥರದ ಮಾತುಗಳನ್ನು ಸಂಪ್ರದಾಯಸ್ತರು ಸ್ತ್ರೀ ದುರ್ಬಲೆ,
ಅಬಲೆ ಎಂದು ಹೇಳುತ್ತಿದ್ದರು. ನಾಗರೀಕ ಸಂಸ್ಕೃತಿ ಸಂದರ್ಭದಲ್ಲಿ ದುರ್ಬಲೆ, ಅಬಲೆ ಎಂಬ
ಮಾತೇ ಬರಕೂಡದು. ಸಬಲೀಕರಣ ಎಂಬುದೇ ಹಿಂದೆ ಮಾಡಿದ ಅಬಲೀಕರಣದ ಮತ್ತೊಂದು ಡ್ರಾಮ.
ನೈಸರ್ಗಿಕವಾಗಿ ಹೆಣ್ಣು ಅವಳಾಗಿರಲು ಬಿಡುವುದೇ ಕ್ಷೇಮ. ನಾಗರಿಕ ಸಂಸ್ಕೃತಿಯಲ್ಲಿ
ಹೆಣ್ಣು ದುರ್ಬಲೆಯಲ್ಲ. ಗಂಡಿನ ತೋಳ್ಬಲ, ಹಣಬಲ ಮತ್ತು ಅಧಿಕಾರ ಬಲದ ಎದುರು ಅವಳು
ದುರ್ಬಲೆ. ಆದರೆ ನಾಗರೀಕ ಸಂಸ್ಕೃತಿಯ ಸಂದರ್ಭದಲ್ಲಿ ಬದುಕುತ್ತಿರುವ ಯಾರೇ ಆಗಲಿ ಇನ್ನೊಬ್ಬರ ಮೇಲೆ ತೋಳ್ಬಲ
ಬಳಸುವಂತಿಲ್ಲ. ಅವನ್ನು ಬಳಸಿ ಬದುಕುವವನು ಮೃಗ. ಇಂಥ ಮೃಗದ ಮುಂದೆ ಹೆಣ್ಣು ದುರ್ಬಲಳೆ
ಹೊರತು ನಾಗರೀಕ ಮನುಷ್ಯನ ಎದುರು ಅವಳು ಸಮಾನಳು.
ಪ್ರಸಂಗ ೧:
ಎಂ.ಎ
ಮುಗಿಸುತ್ತಿದ್ದ ಒಬ್ಬ ಧಡೂತಿ ಹುಡುಗ. ಹಳ್ಳಿಯಿಂದ ಬಂದವನು, ಮಧ್ಯಮ ಜಾತಿಯವನು.
ಅವನನ್ನು ಕೇಳಿದೆ; ನೀನು ಮದುವೆಯಾಗುವ ಹುಡುಗಿ ನಿನ್ನ ಜೊತೆಗೆ ಹೇಗಿರಬೇಕು? ಅವನು
ಹೇಳಿದ್ದು; ಅವಳು ನಾನು ಹೇಳಿದಂತೆ ಕೇಳಿಕೊಂಡಿರಬೇಕು. ಇನ್ನೊಬ್ಬನ ಜೊತೆ ಹೆಚ್ಚು ಮಾತು,
ಸರಸ ಆಡಬಾರದು. ಹಾಗೇನಾದರೂ ಕಂಡರೆ ಅವಳನ್ನು ತುಂಡು ತುಂಡು ಮಾಡಿ ಬಿಡುತ್ತೇನೆ.
ಹಾಗೆ ತುಂಡು ಮಾಡಿದ ಮೇಲೆ ಏನು ಮಾಡುತ್ತೀ? ತಕ್ಷಣಕ್ಕೆ ಉತ್ತರ ಇಲ್ಲ. ನಿಧಾನವಾಗಿ ಹೇಳಿದ; ಇನ್ನೊಬ್ಬಳನ್ನು ಮದುವೆಯಾಗುವುದು.
ಈ
ಹುಡುಗನಿಗೆ ತನ್ನ ಮಧ್ಯೆ ಒಂದು ನಾಗರಿಕ ಸಮಾಜ ಅಸ್ತಿತ್ವದಲ್ಲಿದೆ ಎಂಬುದೇ ಗೊತ್ತಿಲ್ಲ.
ಅಷ್ಟು ಮುಗ್ದ ಮತ್ತು ಮೂಢ, ಅಸಾಂದರ್ಭಿಕವಾದ ಆಲೋಚನೆ. ನಾನು ಹೇಳಿದೆ; ನಿನ್ನ ಸುತ್ತ
ಒಂದು ನಾಗರಿಕ ಸಮಾಜ ಇದೆ. ಕಾನೂನು ಇದೆ, ಪೋಲೀಸ್ ವ್ಯವಸ್ತೆ ಇದೆ, ನಾಗರೀಕ ಸಂಘಗಳಿವೆ.
ನಿನ್ನ ಹೆಂಡತಿ ಕಡೆಯ ಸಮಾಜ ಇದೆ. ಇವೆಲ್ಲ ನಿನಗೆ ಏನೂ ಅಲ್ಲವೆ?
ಹುಡುಗನಿಂದ ಉತ್ತರ ಇಲ್ಲ. ಅವನು ಆ ಬಗ್ಗೆ ಯೋಚಿಸಿಯೆ ಇಲ್ಲ. ಊಳಿಗ ಮಾನ್ಯ
ವ್ಯವಸ್ತೆಯಲ್ಲಿ ಕೆರೆ ಏರಿ ಒಡೆದಾಗ ಆ ಜಾಗಕ್ಕೆ ಹೆಣ್ಣೊಂದನ್ನು, ಅದೂ ಹಿರಿಯ
ಸೊಸೆಯನ್ನು ಬಲಿಕೊಟ್ಟು ಏರಿಯನ್ನು ಭದ್ರ ಮಾಡಿಕೊಂಡ ಹಾಗೆ. ಆ ಹೆಣ್ಣಿನ ಪಾಲಿಗೆ ಇಡೀ
ಸಮಾಜ ಸತ್ತುಹೋದ ಹಾಗೆ. ಪುರೋಹಿತಶಾಹಿ ಸೃಷ್ಟಿಸಿದ ನಂಬಿಕೆಯನ್ನು ಊಳಿಗ ಮಾನ್ಯ ಯಜಮಾನ
ಸೈನಿಕನಂತೆ ಕಾರ್ಯರೂಪಕ್ಕೆ ತಂದ ಹಾಗೆ; ಹೇಳುವವರು ಕೇಳುವವರು ಇಲ್ಲದೆ ನಡೆದು ಹೋಗುವ
ಘಟನೆ.
ನಾನು ಹುಡುಗನಿಗೆ ಹೇಳಿದೆ. ಅಲ್ಲಯ್ಯಾ, ಅವಳು ನಿನ್ನ ಜೊತೆಗೆ ಇರಲು ಆಗದೆ
ಬೇರೊಬ್ಬನೊಡನೆ ಸರಸವಾಡಿದರೆ ನೀನು ಅವಳನ್ನು ಕರೆದು ಕೂರಿಸಿ ಮಾತನಾಡು. ನನ್ನ ಬಗ್ಗೆ
ಇಷ್ಟ ಇಲ್ಲ ಎಂದರೆ ನೀನು ಹೊರಗೆ ಹೋಗಿ ನಿನ್ನ ದಾರಿ ಕಂಡುಕೊ ಎಂದು ಹೇಳು. ಹೆಣ್ಣು ತನಗೆ
ಗಂಡ ಬೇಡವೆಂದಾಗ ಅದನ್ನೆ ತಾನೆ ಮಾಡುತ್ತಿರುವುದು. ಅವಳು ಗಂಡನನ್ನು
ಕೊಲ್ಲುತ್ತಿಲ್ಲವಲ್ಲ! ಮೇಲಾಗಿ ನೀನು ಒಂದು ಜೀವವನ್ನಷ್ಟೇ ಕೊಲ್ಲುತ್ತಿಲ್ಲ, ಅವಳ
ಬದುಕನ್ನೂ ಕೊಂದ ಹಾಗೆ ಆಗುತ್ತದೆ. ಅವಳಿಗೂ ನಿನ್ನ ಹಾಗೆಯೆ ಆಸೆ-ಆಕಾಂಕ್ಷೆಗಳಿವೆ.
ಅವುಗಳ ಮುಂದುವರಿಕೆಯನ್ನು ತಡೆಯಲು ನೀನು ಯಾರು. ಇದೆಲ್ಲಕ್ಕಿಂತ ಹೆಚ್ಚಾಗಿ ಇದೇ
ಕೃತ್ಯಕ್ಕೆ ನಿನ್ನ ಜೀವನವನ್ನೂ ನಾಶ ಮಾಡಿಕೊಳ್ಳುತ್ತೀಯ. ನೀನು ಜೈಲಿನಲ್ಲಿ ಕೊಳೆಯಬಹುದು
ಇಲ್ಲವೆ ಮರಣ ದಂಡನೆಗೂ ಗುರಿಯಾಗಬಹುದು. ಆಗ ಹುಡುಗ ಅಪಾಯದಲ್ಲಿ ಸಿಕ್ಕವನಂತೆ ಕಾಣಿಸಿದ.
ಮಾತು ಬರಲಿಲ್ಲ.
ನಾನು ಹೇಳಿದೆ; ಇನ್ನೊಂದು ಅಂಶ ಇದೆ, ತಿಳಕೊ. ಆಕೆಯನ್ನು ಕೊಲ್ಲದೆ ಅವಳ ಇಷ್ಟದಂತೆ
ಹೊರಗೆ ಬಿಟ್ಟರೆ ನಿನಗೆ ಮತ್ತೊಂದು ಮದುವೆ ಆಗುವ ಅವಕಾಶವಿದೆ. ಗಂಡಿಗೆ ಅದು ಛಾನ್ಸ್
ಅಲ್ಲವೇ ನಿನ್ನ ಹಾಲಿ ಹೆಂಡತಿಯಿಂದಲೇ ನಿನಗೊಂದು ಹೊಸ ಅವಕಾಶ ಸಿಕ್ಕಂತಾಯಿತಲ್ಲ ಎಂದೆ.
ಆಗ ಅವನು ಚಿಗುರಿದಂತೆ ಭಾಸವಾಯಿತು !
ಇದು ಸಮಸ್ಯೆಯಿಂದ ಪಲಾಯನವಾ, ಜೀವ ದಯೆಯಾ ಅಥವ ನೈಸರ್ಗಿಕ ಅಸ್ತಿತ್ವಗಳ ಜೀವಿತದ ಹಕ್ಕಾ ? ಚಿಂತಿಸಿ.
(ಮುಂದುವರೆಯುವುದು)
|
|
|
|
|
Copyright © 2011 Neemgrove Media
All Rights Reserved
|
|
|
|