ಕನ್ನಡಿಗರಿಗೆ ಮತ್ತೊಂದು ಸಿಹಿ ಸುದ್ದಿ! ಈಗಿರುವ ನ್ಯೂಸ್ ಚಾನಲ್ಲುಗಳ ಜತೆ ಜತೆಗೇ ಭರಪೂರ ಮನರಂಜನೆಯನ್ನು ನೀಡುವ ಸಲುವಾಗಿ ಮತ್ತೆರಡು ಸುದ್ದಿಗಾಗಿಯೇ ಮೀಸಲಾದ ಹೊಸ ಚಾನಲ್ಲುಗಳು ಭಿತ್ತರವಾಗತೊಡಗಿವೆ. ಒಂದು ಗಣಿಶ್ರೀ ಮತ್ತೊಂದು ಕಸ್ತೂರೀ ವಾಸನೆಯ ಸುದ್ದಿ. ಇದು ಸಿಹಿ ಸುದ್ದಿ ಎಂದೇ ನಾವು ತಿಳಿದಿದ್ದೇವೆ, ನಿಮಗೆ ಅದು ಸಿಹಿಯೆನಿಸದಿದ್ದರೆ ನಾವು ಹೊಣೆಗಾರರಾಗುವುದಿಲ್ಲ. ಒಟ್ಟಾರೆ ಮನರಂಜನೆಯ ಚಾನಲ್ಲುಗಳಿಗಿಂತ ಮುಂದಿನ ದಿನಗಳಲ್ಲಿ ಕನ್ನಡ ಸುದ್ದಿ ಚಾನಲ್ಲುಗಳೇ ಹೆಚ್ಚಾಗುವಂತ ಎಲ್ಲಾ ಲಕ್ಷಣಗಳೂ ಗೋಚರಿಸತೊಡಗಿವೆ. ಕನ್ನಡಿಗರು ಈ ಎಲ್ಲಾ ಸುದ್ದಿವಾಹಿನಿಗಳ ಪ್ರಕಾಂಡ ಪಂಡಿತರುಗಳ ವಿಶ್ಲೇಷಣಾತ್ಮಕ ವಿಷಯಗಳ ಮೂಲಕ ತಮ್ಮ ಬುದ್ದಿಮತ್ತೆಯನ್ನು ಅಪಾರವಾಗಿ ವೃದ್ದಿಗೊಳಿಸಿಕೊಳ್ಳಲೆಂದು ಹಾರೈಸುತ್ತಾ.....
ಇತ್ತೀಚೆಗೆ ಕರ್ಣ ಕಠೋರ ಸುದ್ದಿ ವಾಹಿನಿಯಲ್ಲಿ ಪ್ರಸಾರವಾದ ವಿಷಯವೊಂದನ್ನು ನಿಮ್ಮ ಮುಂದಿಡುತ್ತಿದ್ದೀವಿ.
ತನ್ನ ಎಂದಿನ ಶೈಲಿಯಲ್ಲಿ ಸುದ್ದಿ ನಿರೂಪಕಿ " ಪ್ರಿಯ ವೀಕ್ಷಕರೇ, ನಿಮಗೀಹೊತ್ತು ಒಂದು ಇಂಟರಸ್ಟಿಂಗ್ ವಿಷಯವನ್ನು ನಾನೀಗ ಹೇಳಲಿದ್ದೇನೆ. ಇಂದು ಬಿರು ಬೇಸಿಗೆಯಲ್ಲಿಯೇ ಬೆಂಗಳೂರಿನಲ್ಲಿ ಭಾರೀ ಮಳೆ ಬೀಳತೊಡಗಿರುವುದು ಆಶ್ಚರ್ಯವನ್ನುಂಟು ಮಾಡಿದೆ. ಹಾಡುಹಗಲೇ ಬಿದ್ದ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಬೆಂಗಳೂರಿನ ಸ್ಲಂಗಳಿಗೆಲ್ಲಾ ನೀರು ನುಗ್ಗಿರುವ ಪರಿಣಾಮವಾಗಿ ಅಲ್ಲಿ ವಾಸಿಸುವ ಜನತೆಯ ಪಾಡು ಹೇಳತೀರದ್ದಾಗಿದೆ. ಈ ಕುರಿತು ನಮ್ಮ ಪ್ರತಿನಿಧಿ ಇದೀಗ ನಮ್ಮ ಜತೆ ನೇರ ಸಂಪರ್ಕದಲ್ಲಿದ್ದಾರೆ. ಬನ್ನಿ ಅವರನ್ನೇ ಕೇಳೋಣ, ನೊಡೀ ಇವ್ರೇ, ಯಾಕೆ ಧಿಡೀರೆಂದು ಮಳೆ ಬಂತು ಅದಕ್ಕೆ ಏನು ಕಾರಣ ಅಂತ ನಿಮಗೆ ಗೊತ್ತಾ?"
ವರದಿಗಾರ "ಮೇಡಂ, ದಿಡೀರೆಂದು ಮಳೆ ಬಂದುದಕ್ಕೆ ನನಗೇನೂ ಕಾರಣ ಗೊತ್ತಾಗುತ್ತಿಲ್ಲ, ನಾನು ಬೇರೆ ಸುದ್ದಿಯೊಂದರ ಅನ್ವೇಷಣೆಗಾಗಿ ಹೋಗುತ್ತಿರುವ ಪ್ರದೇಶದಲ್ಲಿ ಮಳೆ ಬೀಳುತ್ತಿಲ್ಲ ಆದ್ದರಿಂದ ಬೇರೆ ಪ್ರದೇಶದಲ್ಲಿ ಬೀಳುತ್ತಿರುವ ಮಳೆಯ ಬಗ್ಗೆ ನನಗೇನೂ ಗೊತ್ತಿಲ್ಲ ಮೇಡಂ..."
ನಿರೂಪಕಿ: "ಅಲ್ಲ ಇವ್ರೇ, ಬೆಂಗಳೂರಿನಲ್ಲೇ ಹಲವೆಡೆ ಮಳೆ ಬಿದ್ದರೂ ನೀವು ಇರುವ ಜಾಗದಲ್ಲಿ ಮಳೆಯಿಲ್ಲವೆನ್ನುತ್ತಿದ್ದೀರಿ, ಆ ಜಾಗದಲ್ಲಿ ಯಾಕೆ ಮಳೆ ಬೀಳುತ್ತಿಲ್ಲ, ಅದಕ್ಕೇನು ಕಾರಣ ಎಂಬುದಾದರೂ ಗೊತ್ತಾ ನಿಮಗೆ?"
ವರದಿಗಾರ: "ಮೇಡಂ, ನಾನಿರುವ ಜಾಗದಲ್ಲಿ ಮಳೆ ಬೀಳುತ್ತಿಲ್ಲವೆಂಬುದಂತೂ ಸತ್ಯ. ನಿಮಗೆ ನನ್ನ ಮಾತಿನ ಮೇಲೆ ವಿಶ್ವಾಸವಿರದಿದ್ದಲ್ಲಿ ನಾನೀಗ ಗಾಡಿಯನ್ನು ನಿಲ್ಲಿಸಿ ನಮ್ಮ ಕ್ಯಾಮರಾಮನ್ ಬಳಿ ನನ್ನ ಲೊಕೇಶನ್ ಶೂಟ್ ಮಾಡಿ ಕಳಿಸುತ್ತೀನಿ, ನಾನಿರುವ ಜಾಗದಲ್ಲಿ ಮಳೆ ಬೀಳದಿರುವುದಕ್ಕೆ ಏನು ಕಾರಣ ಅಂತಾ ನನಗೆ ಗೊತ್ತಾಗುತ್ತಿಲ್ಲ ಮೇಡಂ, ಅದನ್ನು ನೀವು ನಮ್ಮ ಸ್ಟುಡಿಯೋದಲ್ಲಿರುವ ವಿಶೇಷ ವರದಿಗಾರರನ್ನು ಕೇಳಿದಲ್ಲಿ ಅವರು ತಿಳಿಸಬಹುದು ಮೇಡಂ".
ನಿರೂಪಕಿ: "ಬನ್ನಿ ನಾವೀಗ ನಮ್ಮ ವಿಶೇಷ ವರದಿಗಾರರನ್ನು ಈ ಬಗ್ಗೆ ಕೇಳೋಣ. ನೋಡೀ, ಬೆಂಗಳೂರಿನಲ್ಲಿ ಒಂದೆಡೆ ಮಳೆ ಬೀಳುತ್ತಿದ್ದರೆ ಮತ್ತೊಂದೆಡೆ ಮಳೆ ಬೀಳುತ್ತಿಲ್ಲ, ಇದಕ್ಕೆ ಏನು ಕಾರಣವಿರಬಹುದು ಈ ಬಗ್ಗೆ ನಿಮ್ಮ ಅಭಿಪ್ರಾಯವೇನು?"
ವಿಶೇಷ ವರದಿಗಾರ: "ಮೇಡಂ, ಮಳೆ ಎಲ್ಲಿ ಯಾವಾಗ ಬೀಳುತ್ತದೆ ಎಂದು ಯಾರೂ ಕರಾರುವಾಕ್ಕಾಗಿ ಹೇಳಲಾಗುವುದಿಲ್ಲ, ಆದರೆ ಬೆಂಗಳೂರಿನಲ್ಲಿ ಕೆಲವು ಪ್ರದೇಶಗಳಲ್ಲಿ ಬಿದ್ದು ಇನ್ನು ಕೆಲವು ಪ್ರದೇಶಗಳಲ್ಲಿ ಬೀಳದಿರುವುದಕ್ಕೆ ನನಗೆ ಹಲವಾರು ಗುಮಾನಿಗಳಿವೆ ಮೇಡಂ, ಇತ್ತೀಚೆಗೆ ಬೆಂಗಳೂರಿನ ಜನ ಕಂಡ ಕಂಡಲ್ಲೆಲ್ಲಾ ಮಾಟ ಮಂತ್ರ ಮಾಡಿರುವ ವಸ್ತುಗಳೇ ಕಂಡು ಬರುತ್ತಿವೆ ಮೇಡಂ, ಬೆಂಗಳೂರಿನಲ್ಲಿಯೂ ಒಂದೆಡೆ ಮಳೆಬಿದ್ದು ಮತ್ತೊಂದೆಡೆ ಬೀಳದಿರುವುದಕ್ಕೆ ಈ ಮಾಟ ಮಂತ್ರವೇ ಕಾರಣವಿರಬಹುದೆನ್ನುವ ಗುಮಾನಿ ನನ್ನದಾಗಿದೆ ಮೇಡಂ".
ನಿರೂಪಕಿ: "ಸರಿಯಾಗಿ ಹೇಳಿದಿರಿ ಇವ್ರೇ, ನನಗೂ ಅದರ ಬಗ್ಗೆ ಗುಮಾನಿಯಿತ್ತು, ಈ ಮಾಟ ಮಂತ್ರದ ಪರಿಣಾಮದಿಂದಾಗಿಯೇ ಬೆಂಗಳೂರಿನಲ್ಲಿ ಈ ರೀತಿ ವಿಚಿತ್ರವಾಗಿ ಮಳೆ ಬೀಳುತ್ತಿರುವುದೆಂಬುವ ನಿಮ್ಮ ಗುಮಾನಿ ಸರಿಯಾದುದಾಗಿದೆ. ಪ್ರಿಯ ವೀಕ್ಷಕರೇ, ಇದೀಗ ಬೆಂಗಳೂರಿನ ಸ್ಲಂಗಳಿಗೆ ನೀರುನುಗ್ಗಿ ಅಲ್ಲಿ ಜನತೆ ಯಾವ ರೀತಿ ಒದ್ದಾಡುತ್ತಿದ್ದಾರೆಂಬುದರ ಬಗ್ಗೆ ನಾವೀಗ ಆ ಸ್ಥಳದಲ್ಲಿರುವ ನಮ್ಮ ಪ್ರತಿನಿಧಿಯನ್ನು ಸಂಪರ್ಕಿಸೋಣ" ಎನ್ನುವಷ್ಟರಲ್ಲಿ ಟೀ. ವಿ ಪರದೆಯ ಮೇಲೆ ಬ್ರೇಕಿಂಗ್ ನ್ಯೂಸ್ ಪ್ರತ್ಯಕ್ಷವಾಗಿ ಕಾಗೆ ಹಾವಳಿಯಿಂದ ಎದ್ದು ಬಿದ್ದು ಓಡಿದ ಜನತೆ ಎಂಬ ಅಕ್ಷರಗಳು ಕಾಣಿಸಿಕೊಳ್ಳುತ್ತವೆ. ಒಂದೆರಡು ನಿಮಿಷ ಭಾರೀ ಹಿನ್ನೆಲೆ ವಾದ್ಯದೊಂದಿಗೆ ಹಾಗೆಯೇ ಕಾಣಿಸಿಕೊಂಡು ಮರೆಯಾದಕೂಡಲೇ,
ನಿರೂಪಕಿ: "ಪ್ರಿಯ ವೀಕ್ಷಕರೇ, ಇದೀಗ ಮತ್ತೊಂದು ಪ್ರಮುಖವಾದ ಸುದ್ದಿಯನ್ನು ನಿಮ್ಮ ಮುಂದಿಡುತ್ತಿದ್ದೇವೆ, ಮಾಗಡಿಯಲ್ಲಿ ಕಾಗೆಯೊಂದು ಜನರನ್ನು ಯದ್ವಾ ತದ್ವಾ ಅಟ್ಯಾಕ್ ಮಾಡುತ್ತಿರುವ ಸುದ್ದಿಯೊಂದು ಬಂದಿದೆ ಬನ್ನಿ ಈ ಕುರಿತಾದ ಹೆಚ್ಚಿನ ಮಾಹಿತಿಗಾಗಿ ನಮ್ಮ ಮಾಗಡಿಯ ಪ್ರತಿನಿಧಿಯನ್ನು ಸಂಪರ್ಕಿಸೋಣ, ಏನ್ ಇವ್ರೇ ಏನ್ ನಡಿತಾ ಇದೆ ಮಾಗಡೀಲಿ?! ಯಾಕೆ ಜನ ಅಷ್ಟೊಂದು ಭಯಬೀತರಾಗಿ ಓಡ್ತಾ ಇದಾರೆ?"
ವರದಿಗಾರ: "ಮೇಡಂ, ಇಲ್ಲಿ ಕಾಗೆಯೊಂದು ಇದ್ದಕ್ಕಿದ್ದಂತೆ ಜನರನ್ನು ಕುಕ್ಕತೊಡಗಿದೆ, ಜನರು ಈ ಕಾಗೆಯ ಧಾಳಿಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ದಿಕ್ಕಾಪಾಲಾಗಿ ಓಡುತ್ತಿದ್ದಾರೆ ಮೇಡಂ,"
ನಿರೂಪಕಿ: "ಕಾಗೆ ಯಾಕೆ ಮನುಷ್ಯರನ್ನು ಕಚ್ಚುತ್ತೆ? ಎಷ್ಟು ಜನರನ್ನು ಕಚ್ಚಿದೆ? ಕಚ್ಚಿಸಿಕೊಂಡವರ ಸ್ಥಿತಿ ಈಗ ಹೇಗಿದೆ? ಅವರನ್ನೇನಾದರೂ ಆಸ್ಪತ್ರೆಗೆ ದಾಖಲು ಮಾಡಲಾಗಿದೆಯಾ ಹೇಗೆ?"
ವರದಿಗಾರ: "ಮೇಡಂ ಕಾಗೆ ಕಚ್ಚುವುದಿಲ್ಲ, ಕುಕ್ಕುತ್ತೆ, ಕುಕ್ಕುವುದರಿಂದ ಜನರಿಗೆ ತೀರ್ವತರವಾದ ಗಾಯವೇನೂ ಆಗುವುದಿಲ್ಲ. ನಾವಿಲ್ಲಿ ಕಾಗೆಯಿಂದ ಕುಕ್ಕಿಸಿಕೊಂಡವರನ್ನು ಕೇಳಿದ್ದಕ್ಕೆ ಅವರೆಲ್ಲಾ ಆಸ್ಪತ್ರೆಗೆ ಹೋಗುವ ಮಾತಾಡದೇ ಮೊದಲು ಮನೆಗೆ ಹೋಗಿ ಸ್ನಾನ ಮಾಡಬೇಕಾಗಿದೆಯೆಂದು ಓಡಿದರು ಮೇಡಂ"
ನಿರೂಪಕಿ: "ಇವರೇ, ನೀವು ಎಷ್ಟು ಜನರನ್ನು ಸಂಪರ್ಕಿಸಿದಿರಿ?, ಕಾಗೆ ಅವರಿಗೆ ಕುಕ್ಕಿದಾಗ ಅವರಿಗೆ ಯಾವ ರೀತಿಯ ಅನುಭವವಾಯಿತೆಂಬುದನ್ನು ನೀವು ಕೇಳಿದಿರಾ? ಅದಕ್ಕೆ ಅವರು ಯಾವ ರೀತಿ ಪ್ರತಿಕ್ರಿಯಿಸಿದರು?"
ವರದಿಗಾರ: ಕೊಂಚ ಕ್ಷೀಣ ದನಿಯಲ್ಲಿ "ನೀವು ಈ ಪ್ರಶ್ನೆ ಕೇಳ್ತೀರಾ ಅಂತಾ ಗೊತ್ತಿತ್ತು ಮೇಡಂ, ಅದಕ್ಕೇ ನಾವು ಕುಕ್ಕಿಸಿಕೊಂಡವರನ್ನು ಆ ಬಗ್ಗೆ ಕೇಳಲು ಪ್ರಯತ್ನಿಸಿದೆವು ಮೇಡಂ, ಆದರೆ ಅವರೆಲ್ಲರೂ ಅವಸರವಾಗಿ ಮನೆ ಕಡೆ ಹೋಗಿಬಿಟ್ಟರು. ಅಂತೂ ನಾವು ಅತ್ಯಂತ ಪ್ರಯಾಸದಿಂದ ವಯಸ್ಸಾದವರೊಬ್ಬರನ್ನು ಹಿಡಿದು ನಿಲ್ಲಿಸಿ ಕಾಗೆಯಿಂದ ಕುಕ್ಕಿಸಿಕೊಂಡ ಅನುಭವವನ್ನು ನೀವು ನಮಗೆ ಹೇಳಲೇಬೇಕೆಂದು ದುಂಬಾಲು ಬಿದ್ದೆವು ಮೇಡಂ" ಎಂದವನೇ ಒಂದೆರಡು ಸೆಕೆಂಡು ಸುಮ್ಮನಾದ.
ಕೂಡಲೇ ಸುದ್ದಿ ನಿರೂಪಕಿ: "ಹೇಳಿ ಇವ್ರೇ, ಯಾಕೆ ಅರ್ಧದಲ್ಲಿಯೇ ನಿಲ್ಲಿಸಿಬಿಟ್ಟಿರಿ? ನಮ್ಮ ಲಕ್ಷಾಂತರ ವೀಕ್ಷಕರು ಕಾಗೆಯಿಂದ ಕುಕ್ಕಿಸಿಕೊಂಡ ಅನುಭವವನ್ನು ಕೇಳಲು ಸತತವಾಗಿ ನಮ್ಮ ಸ್ಟುಡಿಯೋಗೆ ಫೋನಿನ ಸುರಿಮಳೆಗೈಯ್ಯುತ್ತಿದ್ದಾರೆ. ಬೇಗ ಹೇಳಿ..."
ವರದಿಗಾರ: ತಡವರಿಸುತ್ತಾ, "ಮೇಡಂ, ಆ ಮುದುಕ ಬಹಳ ಘಾಟೀ ಇದ್ದ ಮೇಡಂ, ನಾವು ಕಾಗೆಯಿಂದ ಕುಕ್ಕಿಸಿಕೊಂಡುದರ ಬಗ್ಗೆ ಕೇಳಿದ ಕೂಡಲೇ ಆತ ನಾವು ಟಿ.ವಿ. ವರದಿಗಾರರೆಂಬ ಗೌರವವನ್ನು ಕೊಡದೇ, ಅಯ್ಯೋ, ಮುಂ- ಮಕ್ಳಾ, ಕಾಗೆಯಿಂದ ಕುಕ್ಕಿಸಿಕಂಡಿದ್ ಹೇಗಿತ್ತು ಅಂತಾ ಕಿಚಾಯಿಸ್ತೀರಾ, ಹೋಗಿ ಆ ಮರದ ಕೆಳಗೆ ನಿಂತ್ಕಳಿ, ಅದು ಬಂದ್ ಕುಕ್ದಾಗ ನಿಮಗೆ ಗೊತ್ತಾಗ್ತದೆ ಬೋ.... ಸೂ... ಎಂದೆಲ್ಲಾ ಬೈದು ನಮ್ಮ ಮರ್ಯಾದೆನೆಲ್ಲಾ ಹರಾಜಾಕಿಬಿಟ್ರು ಮೇಡಂ. ಆಗ ಅಕ್ಕಪಕ್ಕದ ಜನರೆಲ್ಲಾ ಬೇರೆ ಯಾವ್ದೂ ಸುದ್ದಿ ಸಿಗ್ಲಿಲ್ಲವೇನ್ರಯ್ಯಾ ಅಂತ ನಮಗೇ ದಬಾಯಿಸಿಬಿಟ್ರು ಮೇಡಂ"
ನಿರೂಪಕಿ: "ಹೋಗಲೀ ಇವ್ರೇ, ಆ ಮುದುಕನ್ನ ಬಿಡಿ, ಈಗ ಹೇಳಿ, ಆ ಕಾಗೆ ಹೆಣ್ಣೋ, ಅಥವಾ ಗಂಡೋ ಎಂಬುದೇನಾದರೂ ನಿಮಗೆ ಗೊತ್ತಾಯ್ತಾ?"
ವರದಿಗಾರ: ಗಾಬರಿಯಾಗಿ "ಮೇಡಂ ಆ ಕಾಗೆ ಕಂಡವರನ್ನೆಲ್ಲಾ ಕುಕ್ಕತೊಡಗಿದ್ದರಿಂದ ಅದನ್ನು ಕಲ್ಲು ಹೊಡೆದು ಬೇರೆ ಕಡೆಗೆ ಓಡಿಸಿಬಿಟ್ಟಿದ್ದಾರೆ, ಅದೀಗ ದೊಡ್ಡ ಮರವೊಂದರ ಮೇಲೆ ಕೂತಂತೆ ಕಾಣುತ್ತಿದೆ, ನಮಗೂ ಅದು ಎಲ್ಲಿ ಕುಕ್ಕುವುದೋ ಎಂಬ ಆತಂಕದಿಂದ ನಾವದರ ಹತ್ತಿರ ಹೋಗುತ್ತಿಲ್ಲ ಮೇಡಂ, ಒಂದಂತೂ ನಿಜಾ ಮೇಡಂ ಆ ಕಾಗೆ ಹೆಣ್ಣೇ ಆಗಿರಬಹುದೆಂದು ನನ್ನ ಅನಿಸಿಕೆ ಮೇಡಂ, ಯಾಕೆಂದರೆ ಕುಕ್ಕಿಸಿಕೊಂಡವರಲ್ಲಿ ಬಹುಪಾಲು ಗಂಡಸರೇ ಮೇಡಂ. ಆ ಕಾಗೆಗೆ ಯಾವುದೋ ಗಂಡಸಿನ ಮೇಲೆ ದ್ವೇಷ ಇದೆ ಅಂತ ಕಾಣಿಸುತ್ತೆ ಮೇಡಂ"
ನಿರೂಪಕಿ: "ನೊಡೀ ಇವ್ರೇ...ಹಾಗೆಲ್ಲಾ ನಾವು ಹೆಣ್ಣುಗಳ ಬಗ್ಗೆ ಅನುಮಾನಾಸ್ಪದವಾಗಿ, ಸಾಕ್ಷಾಧಾರಗಳಿಲ್ಲದೇ ಮಾತಾಡಲಿಕ್ಕಾಗುವುದಿಲ್ಲ, ನಾವು ಸುದ್ದಿಯನ್ನು ಅಥೆಂಟಿಕ್ ಆಗಿ ನೀಡಬೇಕು. ಆ ಕಾಗೆ ಕುಕ್ಕಿದ್ದು ದ್ವೇಷಕ್ಕೋ ಅಥವಾ ಅದಕ್ಕೂ ಮಾಟ-ಮಂತ್ರಕ್ಕೂ ಏನಾದ್ರೂ ಲಿಂಕ್ ಇದೆಯೋ ಎಲ್ಲವನ್ನೂ ಪರಿಶೀಲಿಸಬೇಕು. ಜನತೆಗೆ ಆ ಕಾಗೆ ಗಂಡೋ, ಹೆಣ್ಣೋ ಎಂಬುದರ ಬಗ್ಗೆ ತೀರ್ವವಾದ ಕುತೂಹಲವಿರುತ್ತದೆ ಆದ್ದರಿಂದ ನೀವು ಮುಂದಿನ ಸುದ್ದಿ ಸಮಯದ ಹೊತ್ತಿಗೆ ಆ ಕಾಗೆ ಗಂಡೋ, ಹೆಣ್ಣೋ ಎಂಬುದನ್ನು ಕನ್ಫ಼ರ್ಮ್ ಮಾಡಿಕೊಂಡು ನಮಗೆ ತಿಳಿಸಬೇಕು" ಎಂದು ವರದಿಗಾರನನ್ನು ಕಟ್ ಮಾಡಿ ವೀಕ್ಷಕರತ್ತ ತಿರುಗಿ,
"ಪ್ರಿಯ ವೀಕ್ಷಕರೇ ಮುಂದಿನ ಸುದ್ದಿಯಲ್ಲಿ ಮಾಗಡಿಯಲ್ಲಿ ಜನರಿಗೆ ಕಾಟ ಕೊಟ್ಟ ಕಾಗೆ ಹೆಣ್ಣೋ, ಗಂಡೋ ಎಂಬುದರ ವಿವರವನ್ನು ನಮ್ಮ ಪ್ರತಿನಿಧಿ ನಿಮ್ಮ ಮುಂದಿಡಲಿದ್ದಾರೆ. ಅಷ್ಟೇ ಅಲ್ಲ ಈ ಕಾಗೆ, ಹುಚ್ಚು ನಾಯಿಗಳ ಕಾಟ, ಬೇಕಾಬಿಟ್ಟಿ ಬೀಳುತ್ತಿರುವ ಮಳೆ ಇದೆಲ್ಲಕ್ಕೂ ನಮ್ಮ ರಾಜ್ಯದಲ್ಲಿ ಪ್ರತಿ ದಿನ ನಡೆಯುತ್ತಿರುವ ಹೈ ಪ್ರೊಪೈಲ್ ಮಾಟ ಮಂತ್ರಗಳಿಗೂ ಏನಾದರೂ ಸಂಬಧವಿದೆಯೇ ಎಂಬುದರ ಬಗ್ಗೆ ನಮ್ಮೊಂದಿಗೆ ಚರ್ಚಿಸಲು ಮೂರ್ನಾಲ್ಕು ಮಂದಿ ಗಣ್ಯರು ನಮ್ಮ ಸ್ಟುಡಿಯೋನಲ್ಲಿ ಹಾಜರಿರಲಿದ್ದಾರೆ...ನಿರಂತರ ಸುದ್ದಿಗಾಗಿ ನೋಡುತ್ತಿರಿ ಕರ್ಣಕಠೋರ ೨೪/೭" ಮುಗಿಸಿದಳು.
ಅತ್ತ ಮಾಗಡಿಯಲ್ಲಿ ಕಾಗೆಯೊಂದನ್ನು ಹೆಣ್ಣೋ, ಗಂಡೋ ಎಂಬುದನ್ನು ಕಂಡು ಹಿಡಿಯುವ ಅಸೈನ್ ಮೆಂಟ್ ಹೊತ್ತ ವರದಿಗಾರ ಸುತ್ತ ಮುತ್ತಲಿನ ಮರದ ಮೇಲೇ ಕಣ್ಣಾಡಿಸುತ್ತಾ ಅಲೆಯುತ್ತಾ ಸುಸ್ತಾಗಿ ಅಲ್ಲೇ ಕುಳಿತಿದ್ದ ಗಿಳಿ ಶಾಸ್ತ್ರದವನಲ್ಲಿ ಇದರ ಬಗ್ಗೆ ಒಂದು ಶಾಸ್ತ್ರ ಕೇಳೇ ಬಿಡೋಣ ಎಂದು ಹೊರಟ...ಎಂಬುವುದರೊಂದಿಗೆ ನಮ್ಮ ಈ ಸಂಚಿಕೆಯ ಅಧ್ಯಾಯವನ್ನು ಮುಗಿಸುತ್ತಾ...ಮುಂದಿನ ಸಂಚಿಕೆಯೊಂದಿಗೆ ಮತ್ತಷ್ಟು ರೋಚಕ ಸತ್ಯ ಸಂಗತಿಗಳನ್ನು ನಿಮ್ಮ ಮುಂದಿಡಲಿದ್ದೇವೆ ಅಲ್ಲಿವರೆಗೂ ಆರಾಮಾಗಿರೆಂದು ಹೇಳುತ್ತಾ....
|