(ಸಂಗ್ರಹ)
(ಚಿತ್ರ-ಮಹಿಮಾ ಪಟೇಲ್)
ಒಂದೂರಿನಲ್ಲಿ ಒಬ್ಬ ಮುದುಕಿ ಇದ್ಳು. ಅವಳಿಗೆ ಪ್ರಾಯಕ್ಕೆ ಬಂದ ಒಬ್ಬ ಮಗ ಇದ್ದ. ಒಳ್ಳೆ ಹುಡುಗ. ಮುದುಕಿ ಮಗನಿಗೆ ಸರಿಯಾದ ಕಡೆ ಹೆಣ್ಣು ನೋಡಿ ಲಗ್ನ ಮಾಡಿಸಿದಳು. ಒಂದಿನ ರಾತ್ರಿ ಆ ಮುದುಕಿಯ ಮಗ, ಅವನ ಹೊಸ ಹೆಂಡತಿ ಮಾತಾಡುತ್ತಾ, ನೆಗಾಡುತ್ತಾ ಕೂತುಕೊಂಡಿದ್ರು. ಮುದುಕಿ ಒಂಟಿಯಾಗಿ ವೀಳ್ಯ ಜಜ್ಜಿಕೋತಾ ಕೂತಿತ್ತು. ಮಗ ಸೊಸೆ ಮಾತಾಡುವುದನ್ನು ಕೇಳಿಸಿಕೊಂಡು ಆ ಮುದುಕಿ "ಅಯ್ಯೋ...ಗಂಡ ಹೆಂಡ್ತಿ ತಮ್ಮ ತಮ್ಮಷ್ಟ್ಕೇ ಮಾತಾಡಿಕೋತಾರೆ. ನಾನು ಯಾರ ಕೂಡ ಮಾತಾಡ್ಲಿ? ನನಗೂ ಯಾರಾದ್ರೂ ಇದ್ದಿದ್ದ್ರೆ..." ಅಂತ ಕೂಗಿಕೋತಾ ಬೇಸ್ರ ಮಾಡಿಕೊಂಡಳು. ಅವಳು ಹಾಗೆ ಹೇಳಿದ್ದನ್ನ ಸೊಸೆ ಕೇಳಿಸಿಕೊಂಡು ತನ್ನ ಗಂಡನಿಗೆ ಹೇಳಿದಳು.
ಆಗ ಆ ಮುದುಕಿಯ ಮಗ "ಅವ್ವ ನಿನಗೆ ಲಗ್ನ ಮಾಡಿಸಿ ಒಬ್ಬ ಗಂಡನ್ನ ತರಲೇನವ್ವಾ? ಅಂತ ಕೇಳಿದ. "ಹೌದು ಮಗಾ...ನನಗೆ ಮಾತಾಡಕೆ ಯಾರೂ ಇಲ್ಲ. ನನಗೆ ಬೇಜಾರು’ ಅಂದಳು.
"ಸರಿ ಬಿಡು, ನಿನಗೆ ಒಬ್ಬ ಗಂಡನ್ನ ಹುಡುಕಿಕೊಂಡು ಬರ್ತೀನಿ" ಅಂದ ಮಗ. ಅವನು ಹೆಂಡತಿ ಕಯ್ಯಲ್ಲಿ ದಾರಿ ಖರ್ಚಿಗೆ ಒಂದು ಬುತ್ತಿ ಕಟ್ಟಿಸಿಕೊಂಡು ಒಂದು ಗಂಡನ್ನ ತರಲಿಕ್ಕೆ ಹೊರಟ.
ಅವನು ನಡೆದೂ ನಡೆದೂ ಸಾಕಾಗಿ ಊಟ ಮಾಡಲಿಕ್ಕೆ ಬುತ್ತಿ ಬಿಚ್ಚಿ ಒಂದು ಕಟ್ಟೆ ಮೇಲೆ ಕೂತ. ಅದೇ ಕಟ್ಟೆ ಮೇಲೆ ಪಕ್ಕದೂರಿನ ರಾಜನೂ ಬಂದು ಕೂತಿದ್ದ. ಆ ರಾಜ ತನ್ನ ಮಗನಿಗೆ ಒಬ್ಬಳು ಹುಡುಗಿಯನ್ನ ಹುಡುಕಲು ಹೊರಟಿದ್ದ. ಇಬ್ಬರೂ ಮಾತುಕತೆ ಆಡಿದರು. "ನಮ್ಮ ಹತ್ರ ಒಂದು ಹೆಣ್ಣಿದೆ..ನಾವೇ ಯಾಕೆ ಸಂಬಂಧ ಮಾಡಿಕೊಳ್ಳಬಾರದು" ಅಂತ ಮುದುಕಿಯ ಮಗ ರಾಜನನ್ನು ಕೇಳಿದ. ರಾಜನಿಗೂ ಹೆಣ್ಣು ಹುಡುಕಿ ಸಾಕಾಗಿತ್ತು. "ಸರಿ ಹಾಗೇ ಮಾಡುವಾ...ಇಂಥ ದಿನ ಲಗ್ನ ಮಾಡಿ ಬಿಡುವಾ" ಅಂತ ತೀರ್ಮಾನ ಮಾಡಿಕೊಂಡರು.
ಮಗ ಮನೆಗೆ ಬಂದು ಹೆಂಡತಿಗೆ, ಅವನ ಮುದುಕಿ ಅವ್ವಗೆ ಸುದ್ದಿ ತಿಳಿಸಿದ. ಮುದುಕಿಯ ಕೂದಲೆಲ್ಲಾ ಪೂರಾ ಹಣ್ಣಾಗಿತ್ತು, ಬಾಯಿಯ ಹಲ್ಲೆಲ್ಲಾ ಉದುರಿಹೋಗಿತ್ತು. ಮುದುಕಿಯನ್ನು ಲಗ್ನದ ದಿನದ ಹೊತ್ತಿಗೆ ಚಂದ ಮಾಡಿ ಬಿಡುವ ಅಂತ ಗಂಡ ಹೆಂಡತಿ ಇಬ್ಬರೂ ಸೇರಿ ಮಸಿ ಅರೆದು ಅವಳ ಕೂದಲಿಗೆ ಹಚ್ಚಿದರು. ಅವಳಿಗೆ ತಿನ್ನಲು ವೀಳ್ಯ ಬೇಕಾದರೆ ಅಂತ ಒಂದಷ್ಟು ವೀಳ್ಯ ಜಜ್ಜಿ ಅವಳ ಸೆರಗಿಗೆ ಕಟ್ಟಿ ಅವಳನ್ನು ದಿಬ್ಬಣಕ್ಕೆ ತಯಾರು ಮಾಡಿದರು.
ರಾತ್ರಿ ರಾಜನ ಮನೆಯ ಕಡೆಯಿಂದ ದಿಬ್ಬಣ ಬರುತ್ತಿದ್ದಾಗ ಈ ಅಜ್ಜಿಯ ವೀಳ್ಯ ಸೆರಗಿಂದ ಜಾರಿ ಬಿದ್ದು ಹೋಯಿತು. "ವೀಳ್ಯ ಬೇಕೇ ಬೇಕು" ಅಂತ ಅಜ್ಜಿ ಕೂಗಿತು. ಈಗ ಎಲ್ಲಿಂದ ವೀಳ್ಯ ತರೋದು?! ಇವಳು ಹೀಗೆ ಕೂಗಿದರೆ ನಮ್ಮ ಮರ್ಯಾದೆ ಹೋಗಿಬಿಡುತ್ತೆ ಅಂತ ಸೊಸೆ ದುಃಖ ಮಾಡಿದಳು. ಏನು ಮಾಡಲಿ ಅಂತ ಪಕ್ಕದ ಕಾಡಿಗೆ ಹೋಗಿ ತಾನೂ ಅಳುವುದಕ್ಕೆ ಹತ್ತಿದಳು. ಆ ಹೊತ್ತಲ್ಲಿ ಅಲ್ಲಿ ಪಾರ್ವತಿ-ಪರಮೇಶ್ವರ ದೇವರು ಓಡಾಡುತ್ತಿದ್ದರು. ಇವಳು ಅಳುವುದನ್ನು ಕೇಳಿ ’ಏನಮ್ಮಾ ಸಮಾಚಾರ" ಅಂತ ಕೇಳಿದರು.
ಸೊಸೆ ಸಂಗತಿ ಹೇಳಿದಳು. "ನನ್ನ ಅತ್ತೆ ಮುದುಕಿ. ಅವಳಿಗೆ ಕೂದಲೆಲ್ಲ ಹಣ್ಣು, ಬಾಯೆಲ್ಲಾ ಖಾಲಿ. ನಾವು ಅವಳಿಗೆ ಜೊತೆಗೊಬ್ಬರು ಮಾತಾಡುವುದಕ್ಕೆ ಇರಲಿ ಅಂತ ಲಗ್ನಕ್ಕೆ ತಯಾರಿ ಮಾಡಿದೆವು. ಅವಳ ಕೂದಲಿಗೆ ಕಪ್ಪು ಬಳಿದೆವು, ಅವಳಿಗೆ ಜಪ್ಪುವುದಕ್ಕೆ ವೀಳ್ಯ ಜಜ್ಜಿ ಕೊಟ್ಟಿದ್ದೆವು. ಈಗ ಅವಳ ಸೆರಗಿನಲ್ಲಿ ಕಟ್ಟಿದ್ದ ವೀಳ್ಯ ಬಿದ್ದು ಹೋಗಿದೆ. ಅವಳಿಗೆ ಮತ್ತೆ ವೀಳ್ಯ ಜಜ್ಜ ಬೇಕಂತೆ...ಇದು ಗಂಡಿನ ಮನೆಯವರಿಗೆ ಗೊತ್ತಾದರೆ ನಮ್ಮ ಮರ್ಯಾದೆ ಹೋಗಿಬಿಡುತ್ತೆ...ನಾವು ಏನು ಮಾಡುವಾ ಈಗ" ಅಂತ ದೇವರಿಗೆ ಕಷ್ಟ ಹೇಳಿದಳು.
"ಅಷ್ಟೇ ಅಲ್ಲವಾ ಮತ್ತೆ...ಅಳಬೇಡ ಹೋಗು. ನಾವು ನಿನಗೆ ವರ ಕೊಡುತ್ತೇವೆ" ಅಂತ ಪಾರ್ವತಿ-ಪರಮೇಶ್ವರ ಅವಳಿಗೆ ಸಮಾಧಾನ ಹೇಳಿ ಅವಳ ಕೈಗೆ ಮೂರು ಹರಳುಗಳನ್ನ ಕೊಟ್ಟರು. "ನನ್ನತ್ತೆಗೆ ಹಲ್ಲು ಬರಲಿ ಅಂತ ಒಂದು ಹರಳನ್ನು ಹಿಂದಕೆ ಒಗೆ...ನನ್ನತ್ತೆ ಕೂದಲು ಕಪ್ಪಾಗಿ ಸೊಪಾಗಲಿ ಅಂತ ಎರಡನೇ ಹರಳನ್ನು ಒಗೆ, ನನ್ನತ್ತೆ ಹನ್ನೆರಡು ವರ್ಷದ ಹುಡುಗಿಯಾಗಲಿ ಅಂತ ಕೊನೆಯ ಹರಳನ್ನು ಒಗೆ" ಅಂತ ಹೇಳಿ ಕೊಟ್ಟರು. ಸೊಸೆ ಅಳು ನಿಲ್ಲಿಸಿ ಹಾಗೇ ಮಾಡಿದಳು.
ಮನೆಗೆ ಬಂದು ನೋಡಿದಾಗ ಜಗಲಿಯ ಮೇಲೆ ಹನ್ನೆರಡು ವರ್ಷದ ಹುಡುಗಿ ಆಡಿಕೋತಾ ಕೂತಿತ್ತು. ಕಡೆಗೆ ಬೆಳಗಾದಾಗ ಗಂಡ ಹೆಂಡತಿ ಆ ಹುಡುಗಿಯನ್ನು ರಾಜನ ಮಗನಿಗೆ ಲಗ್ನ ಮಾಡಿಕೊಟ್ಟು ದಿಬ್ಬಣ ಕಳಿಸಿಕೊಟ್ಟರು. ಮರ್ಯಾದೆ ಉಳಿಸಿಕೊಂಡು ಸುಖದಲ್ಲಿ ಉಳಿದರು.
ಆಯಾಮದ ಪುಟ್ಟ ಗೆಳತಿ ಮಹಿಮಾ ಪಟೇಲ್ ನಮ್ಮ ಒಂದೂರಂತೆ ಅಂಕಣಗಳಿಗೆ ಚಿತ್ರ ಬರೆದುಕೊಡುತ್ತೇನೆಂದಿದ್ದಾಳೆ.