ಶ್ರೀಮತಿ ರೂಪ ಹಾಸನ
ಮಂಗಳ ಮುಖಿಯರು! ನಿಜ. ಇಷ್ಟು ಸುಂದರವಾದ ಹೆಸರನ್ನು ಇತ್ತೀಚೆಗೆ ಅವರಿಗೆ ಅದ್ಯಾರು ಇಟ್ಟಿದ್ದೋ? ಆದರೆ ಅವರ ಬದುಕು ಇಷ್ಟು ಸುಂದರವೂ ಅಲ್ಲ. ಮಂಗಳಕರವೂ ಅಲ್ಲದಿರುವುದು ವಾಸ್ತವದ ದುರಂತ. ಸಾಮಾನ್ಯವಾಗಿ ಹಿಜಡಾಗಳೆಂದು ನಾವು ಗುರುತಿಸುವ ಇವರ ಕೆಲವು ದುರ್ವರ್ತನೆಯ ಬಗ್ಗೆ ಆಗೀಗ ಚರ್ಚೆಗಳು ನಡೆಯುತ್ತಲೇ ಇರುತ್ತದೆ. ಆದರೆ ಅವರ ಇಂತಹ ಅಸಭ್ಯ ನಡವಳಿಕೆಗೆ ಕಾರಣವೇನು? ಎಂದು ಹುಡುಕುತ್ತ ಹೊರಟರೆ ಮನ ಕರಗಿಸುವಂತಾ ಸತ್ಯಗಳು ಹೊರಬೀಳುತ್ತವೆ.
ಪ್ರಕೃತಿ ಒಂದೊಂದು ಜೀವವನ್ನೂ ಒಂದೊಂದು ಭಿನ್ನ ಗುಣ, ಸ್ವಭಾವ, ರೂಪ, ಮನಸ್ಸುಗಳಿಂದ ಸೃಷ್ಟಿಸಿರುವುದು, ಅದರ ವೈವಿಧ್ಯತೆಗೆ ಸಾಕ್ಷಿಯಾಗಿರುವಂತೆ, ಪಕ್ಷಪಾತದ ಅಸಮತೆಯ ವೈರುಧ್ಯತೆಗೂ ಉದಾಹರಣೆಯಾಗಿದೆ. ಗಂಡು-ಹೆಣ್ಣು ಎಂಬ ಎರಡು ಲಿಂಗಗಳನ್ನು ಮಾತ್ರಾ ಒಪ್ಪಿಕೊಂಡು, ಅದರ ಆಧಾರದಿಂದ ಎಲ್ಲ ಬಗೆಯ 'ವ್ಯವಸ್ಥೆ'ಯನ್ನೂ ರೂಪಿಸಿಕೊಂಡಿರುವ ನಮಗೆ ಈ ಗಂಡೂ ಅಲ್ಲದ, ಹೆಣ್ಣೂ ಅಲ್ಲದ 'ಅಂತರ್ಲಿಂಗೀ'ಯರು, ಅಥವಾ 'ಮೂರನೆ ಲಿಂಗ'ದವರ ಬದುಕಿನ ಕುರಿತು ತಿಳಿಯಲಾರಂಭಿಸಿದ್ದು ತೀರಾ ಇತ್ತೀಚೆಗಷ್ಟೇ. ಈ ಮೊದಲು ಅವರು ಇರಲಿಲ್ಲವೆಂದಲ್ಲ. ೪೦೦೦ ವರ್ಷಗಳ ಹಿಂದಿನ ಇತಿಹಾಸದಲ್ಲಿಯೇ ಅವರ ಕುರಿತು ದಾಖಲೆಗಳಿವೆ. ಆದರೆ ಅವರನ್ನು ಮನುಷ್ಯರೆಂದು ನಾವು ಪರಿಗಣಿಸಿಯೇ ಇಲ್ಲವಾದ್ದರಿಂದ, ಸಾಮಾನ್ಯ ಮನುಷ್ಯನಿಗಿರುವ ಹಕ್ಕುಗಳಿಂದ ಅವರು ವಂಚಿತರಾಗಿದ್ದಾರೆ. ಇದರ ಜೊತೆಗೆ ಅವರನ್ನು ಅಶ್ಲೀಲ, ಅಸಭ್ಯ ಪದಗಳಿಂದ ಗುರುತಿಸಿ ನೋಯಿಸುವ, ಹಿಂಸಿಸುವ ಪದ್ಧತಿ ಅನೂಚಾನವಾಗಿ ನಡೆದು ಬಂದಿದೆ. ಹೆಚ್ಚಾಗಿ ಗಂಡು ದೇಹದಲ್ಲಿರುವ ಹೆಣ್ಣುಮನಸ್ಸಿನ, ಹೆಣ್ಣಿನ ಸಂವೇದನೆಯುಳ್ಳ ಈ ಹಿಜಡಾಗಳು ಬುದ್ಧಿ ತಿಳಿದಾಗಿನಿಂದಲೂ ಕುಟುಂಬದಿಂದ, ಸಮಾಜದಿಂದ ಅನುಭವಿಸುವ ನೋವು, ತಾತ್ಸಾರ ಅವರ್ಣನೀಯವಾದುದು.
ಪ್ರಾಣಿ ಮೂಲದವರಾದ ನಮಗೆ ಎಲ್ಲ ಸ್ವರೂಪದ ದೈಹಿಕ ಹಸಿವು ಸಹಜವಾಗಿ ಅರ್ಥವಾಗುತ್ತದೆ. ಈ ಕುರಿತು ಅನೇಕ ಸಾಹಿತ್ಯ ಕೃತಿಗಳು, ಚಲನಚಿತ್ರಗಳೂ ಬಂದಿವೆ. ಕೆಲವು ವೈಭವೀಕರಣಗಳೂ ಈ ಪಟ್ಟಿಗೆ ಸೇರುತ್ತವೆ. ಬೇರೆ ಬೇರೆ ಅಭಿವ್ಯಕ್ತಿ ಮಾಧ್ಯಮಗಳಲ್ಲೂ ಅದು ಹಲವೊಮ್ಮೆ ನೈಜವಾಗಿಯೂ ಮತ್ತೆ ಕೆಲವೊಮ್ಮೆ ಕೃತಕವಾಗಿಯೂ ಮೂಡಿ ಬಂದಿವೆ. ಆದರೆ ಮನಸ್ಸಿನ ಅಥವಾ ಭಾವನಾತ್ಮಕ ಹಸಿವನ್ನು ಅಥರ್ಸಿಕೊಳ್ಳಲು ಸರಿಯಾದ ಪೂರ್ವಸಿದ್ಧತೆ ನಮಗಿನ್ನೂ ಆಗಿಯೇ ಇಲ್ಲ. ಮನುಷ್ಯರಾಗಿರುವುದರಿಂದಲೇ ಅದನ್ನು ಇನ್ನಾದರೂ ಪ್ರಯತ್ನಪೂರ್ವಕವಾಗಿಯಾದರೂ ಕಲಿಯಬೇಕಿದೆ. ದೇಹದ ಹಸಿವಿನ ಇಂಗುವಿಕೆಗೆ ನೀಡುವ ಪ್ರಾಮುಖ್ಯತೆಯನ್ನು ಭಾವನಾತ್ಮಕ ಹಸಿವಿನ ಪೂರೈಸುವಿಕೆಗೂ ನೀಡಿದ್ದರೆ, ಮನಸ್ಸಿನ ಆಧಾರಿತವಾಗಿ ವ್ಯಕ್ತಿಗಳನ್ನು ಅರ್ಥಮಾಡಿಕೊಳ್ಳುವ ಪ್ರಯತ್ನಗಳಾಗಿದ್ದರೆ ನಾವು ಕಟ್ಟಿಕೊಂಡಿರುವ ಈ ಸಮಾಜ ಇಷ್ಟು ಕ್ಷುದ್ರವೂ, ನಿರ್ಭಾವುಕವೂ ಆಗುತ್ತಿರಲಿಲ್ಲ. ಆಗ ಅದು ಹೆಚ್ಚು ಆರ್ದ್ರವೂ, ಆಪ್ತವೂ ಆಗಿರುತ್ತಿತ್ತು. ಪ್ರೀತಿ, ಅಕ್ಕರೆ, ಕಾಳಜಿ, ಗಮನಿಸುವಿಕೆಗಳಿಗಾಗಿ ಹಂಬಲಿಸುವ ಮನಸುಗಳಿಗೆ ಮತ್ತೆ ಮತ್ತೆ ನಿರ್ಲಕ್ಷ್ಯ, ಅವಮಾನ, ಅಸಮಾನತೆಯ ಘಾಸಿ ಮಾಡಿದರೆ ಅವು ಮತ್ತೆಂದೂ ಅರಳದಂತೆ ದಹಿಸಿಹೋಗುತ್ತವೆ. ಸಿಟ್ಟಿನಿಂದ ವ್ಯವಸ್ಥೆಯ ವಿರುದ್ಧ ತಿರುಗಿ ನಿಲ್ಲುತ್ತವೆ, ದಂಗೆ ಏಳುತ್ತವೆ, ಕೆಲವೊಮ್ಮೆ ಅಸಹಾಯಕತೆಯಿಂದ ಒರಟಾಗಿ, ಅಮಾನವೀಯವಾಗಿಯೂ ವರ್ತಿಸಬಹುದು. ಇದು ಯಾವುದೇ ಮನುಷ್ಯ ಜೀವಿಗೆ ಅನ್ವಯಿಸುವ ಮನೋವಿಜ್ಞಾನದ ಮೂಲ ಪಾಠ.
ಹಾಸನದಲ್ಲಿ ಹೋದವರ್ಷ ಈ ಮೂರನೆ ಲಿಂಗದವರ ಕುರಿತು ಕರ್ನಾಟಕದಲ್ಲಿಯೇ ಇದೇ ಮೊದಲ ಬಾರಿಗೆ ನಡೆದ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಅವರ ಕುರಿತು, ಅವರ ಬದುಕು, ನೋವು-ನಲಿವು, ತಲ್ಲಣ-ಅವಮಾನಗಳ ಬಗ್ಗೆ, ಆ ಕ್ಷೇತ್ರದಲ್ಲಿ ಹೆಚ್ಚಿನ ಅಧ್ಯಯನ ಹಾಗೂ ಕೆಲಸ ಮಾಡುತ್ತಿರುವವರಿಂದ ವಿವರವಾಗಿ ಅರಿಯುವ ಅವಕಾಶ ಲಭ್ಯವಾಗಿತ್ತು. ಇದರ ಜೊತೆಗೆ ಸ್ವತಹ ನಿರ್ದಿಷ್ಟ ಲಿಂಗ ಪರಿವರ್ತನೆ ಹೊಂದಿದ ಕೆಲವು ಅಂತರ್ಲಿಂಗೀಯರೇ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಬಗ್ಗೆ ಹೇಳಿಕೊಳ್ಳುವಾಗ, ಸಂವಾದದಲ್ಲಿ ನಮ್ಮ ಪ್ರಶ್ನೆಗಳಿಗೆ ಉತ್ತರಿಸುವಾಗ ಎಂಥಹ ಕಲ್ಲೆದೆಯೂ ಕರಗಿ ನೀರಾಗಿ ಹೋಗುವಂತಾ ಸನ್ನಿವೇಶ.
ಮುಖ್ಯವಾಗಿ ಹಿಜಡಾಗಳ ನಿರ್ದಿಷ್ಟ ಲಿಂಗ ನಿರ್ಧಾರವಾಗದ ಕಾರಣ ಅವರು ಬಾಲ್ಯದಿಂದಲೂ ಶಿಕ್ಷಣ, ಉದ್ಯೋಗ, ಆರೋಗ್ಯ, ಕಾನೂನು, ಸಾಮಾಜಿಕ ಸ್ಥಾನ-ಮಾನ ಎಲ್ಲದರಲ್ಲಿಯೂ ತಾರತಮ್ಯವನ್ನು ಅನುಭವಿಸುತ್ತಾರೆ. ಭಾರತೀಯ ಕಾನೂನು ಹಿಜಡಾಗಳಿಗಿರುವ ಹಕ್ಕುಗಳ ಬಗ್ಗೆ ಪ್ರಸ್ತಾಪಿಸಿಯೇ ಇಲ್ಲ! ಅವರಿಗೆ ಓಟಿನ ಹಕ್ಕಿಲ್ಲ, ಆಸ್ತಿಯ ಹಕ್ಕಿಲ್ಲ, ವಿವಾಹವಾಗುವ ಹಕ್ಕಿಲ್ಲ, ನಮ್ಮಂತೆ ಯಾವ ಬಗೆಯ ಗುರುತಿನ ಚೀಟಿಗಳನ್ನೂ ಹೊಂದುವ ಹಕ್ಕು ಇಲ್ಲ. ಎಲ್ಲಕ್ಕಿಂಥಾ ಪ್ರಮುಖವಾಗಿ ಕುಟುಂಬ ಹಾಗೂ ಸಮಾಜದ ಸಹಜ ಪ್ರೀತಿ ಇವರಿಗೆ ಸಿಗುವುದಿಲ್ಲ. ಇಷ್ಟೆಲ್ಲಾ 'ಇಲ್ಲ' ಗಳಿರುವಾಗ ಬದುಕಲು ಭಿಕ್ಷಾಟನೆ ಮಾಡುವುದು, ಲೈಂಗಿಕ ಕಾರ್ಯಕರ್ತರಾಗುವುದು, ಅಥವಾ ಗುಂಪಾಗಿ, ಬಲವಂತದಿಂದ ಹಣ ವಸೂಲಿ ಕೆಲಸದಲ್ಲಿ ತೊಡಗಿಕೊಳ್ಳಲೇಬೇಕಾದ ಅನಿವಾರ್ಯತೆ ಇವರಿಗಿರುತ್ತದೆ.
ಲಿಂಗಪರಿವರ್ತನೆಯ ಶಸ್ತ್ರಚಿಕಿತ್ಸೆಗೆ ನಮ್ಮ ಕಾನೂನಿನಲ್ಲಿ ಅನುಮತಿ ಇಲ್ಲದಿರುವುದರಿಂದ ಅತ್ಯಂತ ಗೋಪ್ಯವಾಗಿ ಅವರ ಲಿಂಗಪರಿವರ್ತನೆಯ ಶಸ್ತ್ರಚಿಕಿತ್ಸೆಗಳು, ಕೆಲವೊಮ್ಮೆ ಅವೈಜ್ಞಾನಿಕ ರೀತಿಯಲ್ಲಿ ನಡೆಯುತ್ತವೆ. ತಮ್ಮದೊಂದು ಗುರುತಿಸುವಿಕೆ ಹಾಗೂ ಅಸ್ತಿತ್ವಕ್ಕಾಗಿ ಅವರು ನಿರ್ದಿಷ್ಟ ಲಿಂಗವನ್ನು ಹೊಂದುವುದು, ಅದಕ್ಕಾಗಿ ಈ ಶಸ್ತ್ರಚಿಕಿತ್ಸೆಗೆ ಒಳಗಾಗುವುದು ಬಹಳ ಮುಖ್ಯವಾದರೂ ಇದಕ್ಕೆ ಬೇಕಾದ ಹಣ ಹೊಂದಿಸಲು ವಿವಿಧ ಮಾರ್ಗಗಳನ್ನೂ ಇವರು ಹಿಡಿಯಬೇಕಾಗುತ್ತದೆ. ಬೇರೆ ರೀತಿಯ ಅಂಗವೈಕಲ್ಯ ಅಥವಾ ಮನೋವೈಕಲ್ಯತೆ ಇರುವ ಮಕ್ಕಳಿಗಾದರೂ ಕುಟುಂಬ, ಸಮಾಜ ಒಂದಿಷ್ಟು ಕಾಳಜಿ, ಅನುಕಂಪ ತೋರುತ್ತದೆ. ಸಾಕು ಪ್ರಾಣಿಗಳನ್ನೂ ಪ್ರೀತಿಯಿಂದ ನೋಡಿಕೊಳ್ಳಲಾಗುತ್ತದೆ. ಆದರೆ ಇವರನ್ನು ಮಾತ್ರ ಎಲ್ಲ ರೀತಿಯಿಂದಲೂ ಬಾಲ್ಯದಿಂದಲೇ ಅಸಡ್ಡೆಯಿಂದ ಕಾಣಲಾಗುತ್ತದೆ. ಹೀಗಾಗಿ ಇವರು ಮನೆ ಬಿಟ್ಟು, ನಗರ ಪ್ರದೇಶಗಳಲ್ಲಿ ತಮ್ಮಂತಹುದೇ ಸಮಸ್ಯೆ ಇರುವವರೊಂದಿಗೆ ಸೇರಿಕೊಳ್ಳುವುದು ಅನಿವಾರ್ಯವಾಗುತ್ತದೆ.
ಮುಖ್ಯವಾಹಿನಿಯಿಂದ ತೀವ್ರ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಇವರು ಈಗ ಕೆಲಮಟ್ಟಿಗೆ ಸಂಘಟಿತರಾಗಿದ್ದಾರೆ. ತಮ್ಮ ಬೇಡಿಕೆಗಳನ್ನು ಸರ್ಕಾರದ ಮುಂದಿರಿಸಿ ಗೌರವಯುತ, ಮನುಷ್ಯ ಸಹಜ ಬಾಳಿಗಾಗಿ ಹೋರಾಟವನ್ನೂ ನಡೆಸುತ್ತಿದ್ದಾರೆ. ಹೀಗೆ ಸಂಘಟಿತರಾಗದಿದ್ದರೆ ಅಲ್ಪಸಂಖ್ಯಾತರಾದ ಇವರು ಲೈಂಗಿಕ ಕಿರುಕುಳಕ್ಕೂ, ದೌರ್ಜನ್ಯಗಳಿಗೂ ಗುರಿಯಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ಈಗಲೂ ಹಿಜಡಾ ಲೈಂಗಿಕ ಕಾರ್ಯಕರ್ತರು ಸಾರ್ವಜನಿಕವಾಗಿ, ಪೊಲೀಸ್ ಠಾಣೆ, ಸೆರೆಮನೆ ಮತ್ತು ತಮ್ಮ ಮನೆಗಳಲ್ಲಿಯೂ ಅತ್ಯಂತ ಅಮಾನುಷವಾಗಿ ಶೋಷಣೆಗೆ ಒಳಗಾಗುತ್ತಾರೆ. ಹಿಜಡಾ ಆಗಿದ್ದು ಈಗ ಹೆಣ್ಣಾಗಿ ಪರಿವರ್ತನೆ ಹೊಂದಿರುವ ತಮಿಳುನಾಡಿನ ಲಿವಿಂಗ್ ಸ್ಮೈಲ್ ವಿದ್ಯಾ ತನ್ನ ಆತ್ಮಕಥೆ 'ನಾನು ಅವನಲ್ಲ ಅವಳು' ನಲ್ಲಿ 'ಸ್ವರ್ಗ ಬೇಕೆಂದೇನೂ ನಾನು ಕೇಳುತ್ತಿಲ್ಲ, ನರಕ ಬೇಡ ಎಂದಷ್ಟೇ ನಾನು ಒದ್ದಾಡುತ್ತಿರುವುದು. ನನ್ನಂತೆಯೇ ಇರುವ ಇತರ ಹಿಜಡಾಗಳಿಗಾಗಿಯೂ' ಎನ್ನುವ ಮಾತು ಅವರು ಮತ್ತು ಅವರಂತವರು ಅನುಭವಿಸುತ್ತಿರುವ ಹೃದಯವಿದ್ರಾವಕ ನೋವಿಗೆ ಹಿಡಿದ ಕನ್ನಡಿಯಾಗಿದೆ.
ಇಂದು ಹಲವು ಹಿಜಡಾಗಳ ಆತ್ಮಕಥೆಗಳು ಬೇರೆ ಬೇರೆ ಭಾಷೆಯಲ್ಲಿ ಹೊರಬರುತ್ತಿವೆ. ಈ ಕಥನಗಳು ಅವರ ಬದುಕಿನ ಅವಶ್ಯಕತೆ, ಸಾಮಾಜಿಕ ಹಕ್ಕಿಗಾಗಿ ಅವರ ಹೋರಾಟ, ಕೌಟುಂಬಿಕ ಸಂಘರ್ಷ, ಅವರ ಸಮುದಾಯದ ಧಾರ್ಮಿಕ ನಂಬಿಕೆಗಳು, ಜೀವನಕ್ರಮ, ಗಂಡು ದೇಹದಲ್ಲಿ ಹೆಣ್ಣು ಸಂವೇದನೆಯೊಂದಿಗೆ ಬದುಕಬೇಕಾದ ಮಾನಸಿಕ ತುಮುಲ, ಅದನ್ನು ಸಮುದಾಯಕ್ಕೆ ಅರ್ಥಮಾಡಿಸಲಾಗದ ಅಸಹಾಯಕತೆಯನ್ನು ಕಣ್ಣಿಗೆ ಕಟ್ಟುವಂತೆ ಹಿಡಿದಿಟ್ಟಿವೆ. ಜೊತೆಗೆ ಅವರ ಆತ್ಮಕಥೆಗಳ ತುಣುಕಿನಂತಿರುವ 'ಹಿಜಡಾ ಕಾವ್ಯ' ಅವರ ಪ್ರೀತಿಗಾಗಿನ ಅದಮ್ಯ ಹಂಬಲ, ಭಾವನಾತ್ಮಕ ಸಾಂಗತ್ಯಕ್ಕಾಗಿನ ತಹತಹಿಸುವಿಕೆ, ಸಾಮಾಜಿಕ ಅವಮಾನ-ನೋವನ್ನು ಸಮರ್ಥವಾಗಿ ಕಟ್ಟಿಕೊಡುತ್ತಾ ನಮ್ಮನ್ನು ಆರ್ದ್ರಗೊಳಿಸುತ್ತವೆ.
ಮುಂಬಯಿಯ ಸಮುದಾಯ ಆರೋಗ್ಯ ಸಂಸ್ಥೆಯಾದ 'ದ ಹಮ್ಸಫರ್ ಟ್ರಸ್ಟ್' ಭಾರತದಲ್ಲಿ ಸಧ್ಯ ಸುಮಾರು ೫ ರಿಂದ ೬ ಮಿಲಿಯ ಹಿಜಡಾಗಳಿದ್ದಾರೆಂದು ಅಂದಾಜಿಸಿದೆ. ಆದರೆ ಇವರಲ್ಲಿ ಕೇವಲ ೮% ಹಿಜಡಾಗಳು ಮಾತ್ರ ನಿರ್ದಿಷ್ಟ ಲಿಂಗದ ಶಸ್ತ್ರಚಿಕಿತ್ಸೆಗೆ ಒಳಗಾಗಿ ತಮ್ಮ ನಿರ್ದಿಷ್ಟ (ಗಂಡು-ಹೆಣ್ಣು) ಗುರುತಿಸುವಿಕೆಯ ಅಸ್ತಿತ್ವವನ್ನು ಪಡೆದಿದ್ದಾರೆ. ಈ ಶಸ್ತ್ರಚಿಕಿತ್ಸೆಯನ್ನವರು 'ನಿರ್ವಾಣ್' ಎಂದು ಕರೆಯುತ್ತಾರೆ. ೨೦೦೫ ರಿಂದ ಭಾರತೀಯ ಪಾಸ್ಪೋರ್ಟ್ಗಳಲ್ಲಿ ಮೂರನೇ ಲಿಂಗೀಯರನ್ನು ಗುರುತಿಸುವ ವ್ಯವಸ್ಥೆಯಾಗಿದೆ. ಜೊತೆಗೆ ೨೦೦೯ ರಲ್ಲಿ ಭಾರತ ಸರ್ಕಾರ ಇವರನ್ನು ಮೂರನೇ ಲಿಂಗದವರೆಂದು ಗುರುತಿಸಿ ಮತದಾನದಲ್ಲಿ, ಮತದಾನದ ಗುರುತಿನ ಚೀಟಿಯಲ್ಲಿ ನಮೂದಿಸಲು ತೀಮಾನಿಸಿದೆ. ಜೊತೆಗೆ ೨೦೧೧ ರ ಈ ವರ್ಷ ನಡೆಯುತ್ತಿರುವ ಜನಗಣತಿಯಲ್ಲಿ ಇವರನ್ನು ಪ್ರತ್ಯೇಕವಾಗಿ ಗುರುತಿಸುವ ಕ್ರಮವನ್ನೂ ಭಾರತ ಸರ್ಕಾರ ಕೈಗೊಂಡಿರುವುದು ಆಶಾದಾಯಕವಾದ ವಿಚಾರವಾಗಿದೆ. ತಮಿಳುನಾಡು ಸರ್ಕಾರ ಮೊದಲ ಬಾರಿಗೆ ಅವರನ್ನು 'ಟಿ' ಎಂಬ ಲಿಂಗ ಚಿಹ್ನೆಯ ಮುಖಾಂತರ ಗುರುತಿಸಲು ಕ್ರಮ ಕೈಗೊಂಡಿತ್ತು. ಆದರೆ ಹಿಜಡಾಗಳು ಇತರ ಗಂಡು-ಹೆಣ್ಣುಗಳಂತೆಯೇ ಸಮಾನವಾಗಿ ಬದುಕಲು, ನಮ್ಮ ಸರ್ಕಾರ ಹಾಗೂ ಸಮಾಜದಿಂದ ಇನ್ನೂ ಅನೇಕ ಸೂಕ್ತ ಬದಲಾವಣೆಗಳು ಆಗಬೇಕಿದೆ ಎನ್ನುತ್ತಾರೆ. ಅವರ ಮುಖ್ಯವಾದ ಬೇಡಿಕೆ ಎಂದರೆ ಲಿಂಗಪರಿವರ್ತನೆಯ ಶಸ್ತ್ರಚಿಕಿತ್ಸೆ ಕಾನೂನುಬದ್ಧವಾಗಬೇಕು ಎಂಬುದು. ಇದರೊಂದಿಗೆ, ಶಸ್ತ್ರಚಿಕಿತ್ಸೆಯ ನಂತರ ಹೆಣ್ಣಾಗಿ ಬದಲಾಗಿದ್ದಕ್ಕೆ ಪ್ರಮಾಣಪತ್ರ ಸಿಗಬೇಕು. ರೇಷನ್ ಕಾರ್ಡ್, ಪಾಸ್ಪೋರ್ಟ್, ವೀಸಾ, ಗುರುತಿನಚೀಟಿ ಯಾವುದೇ ತೊಡಕಿಲ್ಲದೇ ಸಿಗುವಂತಾಗಬೇಕು. ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಬೇಕು.
ಸಾಮಾಜಿಕವಾಗಿ, ಅವರ ಪ್ರಕೃತಿದತ್ತ ಸಮಸ್ಯೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಬಹಳ ಮುಖ್ಯವಾದ ಕೆಲಸ. ಶಾಲಾಪಠ್ಯಗಳಲ್ಲೂ ಈ ಮಾಹಿತಿಯನ್ನು ಅಳವಡಿಸಿದರೆ ಮುಂದಿನ ಪೀಳಿಗೆ ಇವರ ಕುರಿತು ಋಣಾತ್ಮಕ ಭಾವನೆಗಳನ್ನಿರಿಸಿಕೊಳ್ಳುವುದು ತಪ್ಪಬಹುದು. ಬರಹ, ಚಲನಚಿತ್ರ, ಸಾಕ್ಷ್ಯಚಿತ್ರ, ಧಾರಾವಾಹಿಗಳ ಮೂಲಕ ಹಿಜಡಾಗಳ ಬದುಕಿನ ನೋವು-ಸಂಘರ್ಷಗಳನ್ನು ಪರಿಚಯಿಸುವ ಕೆಲಸಗಳಾಗಬೇಕಿದೆ. ಮಾಧ್ಯಮಗಳಲ್ಲಿ ಅವರ ಕುರಿತು ಅಮಾನವೀಯವಾಗಿ ಚಿತ್ರಿಸುವ, ಸಾರ್ವಜನಿಕವಾಗಿ ಅವರನ್ನು ವಿನಾಕಾರಣ ಅಶ್ಲೀಲ, ಅವಾಚ್ಯ ಶಬ್ಧಗಳಿಂದ ಕೆಣಕುವ ಸಂದರ್ಭಗಳಲ್ಲಿ ಕಾನೂನಿನ ರೀತ್ಯ ಶಿಕ್ಷೆಯಾಗುವಂತಾ ಶಾಸನಗಳು ಜಾರಿಯಾಗಬೇಕು. ಮುಖ್ಯವಾಗಿ ಹಿಜಡಾಗಳ ಬದುಕು, ಸಮಸ್ಯೆಯ ಕುರಿತು ಮಾನವಶಾಸ್ತ್ರಜ್ಞರು, ಮನೋವಿಜ್ಞಾನಿಗಳು ಹಾಗೂ ಸಮಾಜವಿಜ್ಞಾನಿಗಳು ವೈಜ್ಞಾನಿಕ ನೆಲೆಗಳಲ್ಲಿ ಹೆಚ್ಚಿನ ಸಂಶೋಧನೆ, ಸಮೀಕ್ಷೆ ನಡೆಸಿ ಜನರಲ್ಲಿ ಅವರ ಕುರಿತು ಸಹಜ ಪ್ರೀತಿ, ಅಂತಃಕರಣಗಳನ್ನು ಮೂಡಿಸಲು ನೆರವಾಗಬೇಕಿದೆ.
ಒಟ್ಟಾರೆ ಹಿಜಡಾಗಳ ಕುರಿತು ಸಮಾಜದ ಧೋರಣೆ ಬದಲಾಗಬೇಕಿದೆ. ಅವರ ಪ್ರಕೃತಿದತ್ತವಾದ ಹುಟ್ಟನ್ನು ಸಹಾನುಭೂತಿಯಿಂದ ಕಂಡು ಅವರಲ್ಲಿ ಆತ್ಮವಿಶ್ವಾಸವನ್ನು ಮೂಡಿಸುವ ಕೆಲಸಗಳ ಜೊತೆಗೆ, ನಮ್ಮಂತೆಯೇ ಸಾಮಾಜಿಕ-ನಾಗರಿಕ ಹಕ್ಕುಗಳನ್ನು ತುರ್ತಾಗಿ ನೀಡಬೇಕಿದೆ. ಮುಖ್ಯವಾಗಿ ಅವರು ಪ್ರಾಣಿಗಳಲ್ಲ ನಮ್ಮಂತೆಯೇ ಮನುಷ್ಯರು ಎಂದು ಒಪ್ಪಿಕೊಂಡರೆ, ಅವರ ನೋವು-ಸಂಕಟಗಳು ನಮಗೆ ಅರ್ಥವಾದರೆ, ನಾವೆಂದಿಗೂ ಅವರೊಂದಿಗೆ ಅಮಾನವೀಯವಾಗಿ ವರ್ತಿಸುವುದಿಲ್ಲ. ಅವರಿಗೂ ನಮ್ಮಿಂದ ಮನುಷ್ಯ ಸಹಜ ಪ್ರೀತಿ ಸಿಕ್ಕರೆ ಅವರ ವರ್ತನೆಯೂ ಖಂಡಿತಾ ಕೆಟ್ಟದಾಗಿರಲು ಸಾಧ್ಯವಿಲ್ಲ.
|
|