ಟ್ರೈ ವ್ಯಾಲಿಯಲ್ಲಿ ಆಂಧ್ರಪ್ರದೇಶದವರೇ ಯಾಕೆ ಅಷ್ಟು ಮಂದಿ ಇದ್ದರು?!

(ಫೆಬ್ರವರಿ ೮, ೯, ೧೦ ರ ಪ್ರಜಾವಾಣಿ ದಿನಪತ್ರಿಕೆಯಲ್ಲಿ ಪ್ರಕಟವಾದ ಬರಹ, ಮತ್ತಷ್ಟು ವಿವರಗಳೊಂದಿಗೆ
ಫೆಬ್ರವರಿ ೧೦ , ಸೌಜನ್ಯ ಪ್ರಜಾವಾಣಿ)
 
ಕ್ಯಾಲಿಫೋರ್ನಿಯಾದ ಪ್ಲೆಸೆಂಟಾನ್ ನಲ್ಲಿ ಇರುವುದಾಗಿ ಘೋಷಿಸಿಕೊಂಡಿದ್ದ ಟ್ರೈ ವ್ಯಾಲಿ ಯೂನಿವರ್ಸಿಟಿಯ ಮೇಲೆ ಅಮೆರಿಕಾದ ಹೋಮ್ ಲ್ಯಾಂಡ್ ಸೆಕ್ಯುರಿಟಿ ಡಿಪಾರ್ಟ್ಮೆಂಟಿಗೆ ಒಳಪಡುವ ಐಸಿಇ (ಇಮಿಗ್ರೇಷನ್ ಅಂಡ್ ಕಸ್ಟಮ್ಸ್ ಎನ್ಫೋರ್ಸ್ಮೆಂಟ್) ಜನವರಿ ೧೯ ರಂದು ರೇಡ್ ನಡೆಸಿತ್ತು. ಈ ಯೂನಿವರ್ಸಿಟಿ ವಿದ್ಯಾರ್ಥಿ-ವೀಸಾಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ...ಜನರಿಗೆ ಅಮೆರಿಕಾಗೆ ಬರಲು, ವಲಸಿಗರಾಗಿ ಇದ್ದುಕೊಂಡು ಕೆಲಸ ಮಾಡಲಾಗುವಂತೆ ಕಾನೂನು ಬಾಹಿರವಾಗಿ ವೀಸಾಗಳನ್ನು ವಿತರಿಸುತ್ತಿದೆ ಎಂದು ದೂರು ದಾಖಲಿಸಿ ಯೂನಿವರ್ಸಿಟಿ ಎಂದು ಕರೆದುಕೊಳ್ಳುತ್ತಿದ್ದ ಈ ಡಿಪ್ಲೊಮಾ ಕಾರ್ಖಾನೆಯನ್ನು ತುರ್ತಾಗಿ ಬಂದ್ ಮಾಡಿಸಿತ್ತು. ಆ ಸಮಯಕ್ಕೆ ಅಲ್ಲಿ ವಿದ್ಯಾರ್ಥಿಗಳೆಂದು ದಾಖಲಾಗಿದ್ದ ೧೫೫೫ ಜನ ಭಾರತೀಯರಲ್ಲಿ ಆಂಧ್ರದವರದ್ದೇ ಹೆಚ್ಚಿನ ಸಂಖ್ಯೆಯಲ್ಲಿದ್ದರು, ಅನಂತರ ಉತ್ತರ ಭಾರತದವರು.
ಯೂನಿವರ್ಸಿಟಿಯೇ ಬಂದಾದ ಮೇಲೆ ವಿದ್ಯಾರ್ಥಿಗಳು ಏನು ಮಾಡುತ್ತಾರೆ? ದೊಡ್ದ ಹುಯಿಲೆದ್ದಿತು. ನಮ್ಮ ವಿದ್ಯಾರ್ಥಿಗಳ ಭವಿಷ್ಯವನ್ನು ಅಮೆರಿಕಾ ತ್ರಿಶಂಕು ಸ್ಥಿತಿಗೆ ತಳ್ಳಿದೆ ಎಂದು ಭಾರತದ ಮೀಡಿಯಾ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿತು. ಪೋಷಕರು ದಿಗ್ಭ್ರಾಂತರಾದರು, ವಿದ್ಯಾರ್ಥಿಗಳು ದಿಕ್ಕುಗೆಟ್ಟಂತಾದರು. ಆದರೀಗ ವಿಷಯದ ಎಲ್ಲ ಮಜಲುಗಳೂ ಹೊರಬರುತ್ತಿವೆ. ಈ ಪರಿಸ್ಥಿತಿ ಎದುರಾಗಲು ಅಮೆರಿಕಾ ಸರ್ಕಾರ ಕಾರಣವೋ? ಟ್ರೈ ವ್ಯಾಲಿಯಂತಹಾ ನಕಲಿ ವಿಶ್ವವಿದ್ಯಾನಿಲಯಗಳು ಕಾರಣವೋ? ಕಡಿಮೆ ಖರ್ಚಿಗೆ-ಕಷ್ಟ ಪಟ್ಟು ಓದುವ ಅಗತ್ಯವಿಲ್ಲದೇ, ಅಮೆರಿಕಾ ಎಂಬ ಮಾಯಲೋಕದಲ್ಲಿ ಒಂದು ಡಿಗ್ರಿಗಳಿಸಬೇಕೆಂದು ಆಸೆಪಡುವ ವಿದ್ಯಾರ್ಥಿಗಳು ಕಾರಣರೋ? ಅಥವಾ ಏನಾದರೂ ಮಾಡು...ಒಟ್ಟು ವಿದೇಶದಲ್ಲಿ ಓದು ಎಂದು ಕೂಡಿಟ್ಟ ಗಂಟನ್ನು ಕೊಟ್ಟು, ಹಿಂದೆ ಮುಂದೆ ವಿಚಾರಿಸದೆ ಮಕ್ಕಳನ್ನು ವಿಮಾನ ಹತ್ತಿಸುವ ಪೋಷಕರ ಆತುರ-ಅಮಾಯಕತೆ ಕಾರಣವೋ?
 
ಹಿನ್ನೆಲೆ

ಟ್ರೈ ವ್ಯಾಲಿ ಯೂನಿವರ್ಸಿಟಿಯ ಮಾಸ್ಟರ್ ಪ್ಲಾನ್, ಸಂಸ್ಥಾಪನೆ, ಒಡೆತನ ಎಲ್ಲವೂ ಡಾಕ್ಟರ್ ಸೂಸನ್ ಸೂ ರದ್ದು. ಚೈನಾ ಮೂಲದ ಈಕೆ ಕ್ಯಾಲಿಫೋರ್ನಿಯಾದ ಬರ್ಕ್ಲಿ ಯೂನಿವರ್ಸಿಟಿಯಲ್ಲಿ ಡಾಕ್ಟರೇಟ್ ಪದವೀಧರೆ! ಬಹಳ ಜಾಣೆ. (ಅದನ್ನು ಹೇಳುವ ಅಗತ್ಯವೂ ಇಲ್ಲ ಬಿಡಿ). ಕೆಲವು ವರ್ಷಗಳ ಹಿಂದೆ ಅಮೆರಿಕಾ ಸರ್ಕಾರ ನಿಪುಣ-ಕೆಲಸಗಾರರಿಗೆ (ಸ್ಕಿಲ್ಡ್ ವರ್ಕರ್) ಕೊಡುತ್ತಿದ್ದ ಎಚ್೧ ವೀಸಾಗಳ ಸಂಖ್ಯೆಯನ್ನು ಕಡಿಮೆ ಮಾಡಿತ್ತು. ಅಮೆರಿಕನ್ ಪ್ರಜೆಗಳಿಗಿಂತ ಕಮ್ಮಿ ವೇತನಕ್ಕೆ ಸಂತೋಷವಾಗಿಯೇ ದುಡಿಯುತ್ತಿದ್ದ ಎಚ್೧ ನೌಕರರ ಸಂಖ್ಯೆ ಅನಾಮತ್ ಕಡಿಮೆಯಾಗಿದ್ದು ಹಲವಾರು ಸಣ್ಣ ಕಂಪನಿಗಳಿಗೆ ಭಾರೀ ತಲೆಬಿಸಿಯಾಗಿತ್ತು. ನಿಮಗೆ ಗೊತ್ತಿರಲಿ, ವಲಸಿಗರಾಗಿ ಅಮೆರಿಕಾಗೆ ಬರುವವರಿಗೆ ಈ ವೀಸಾಗಳೇ ಸಕಲ ಅಸ್ತಿತ್ವ. ಎಚ್೧ ನೌಕರರ ಸಂಗಾತಿಗಳಿಗೆ ಕೊಡುವ ಎಚ್೪ ವೀಸಾದಲ್ಲಿಯೂ ಕೆಲಸ ಮಾಡುವಂತಿಲ್ಲ. ಆದರೆ ವಿದ್ಯಾರ್ಥಿ ವೀಸಾದಲ್ಲಿ (ಓದುತ್ತಲೇ, ಪಾರ್ಟ್ ಟೈಮ್) ಕೆಲಸ ಮಾಡಲು ಅವಕಾಶವಿದೆ.
 
ಕೆಲಸಗಾರರ ಕೊರತೆ ಮತ್ತು ಬೇಡಿಕೆಯನ್ನು ಚನ್ನಾಗಿ ಅರ್ಥ ಮಾಡಿಕೊಂಡಿದ್ದ, ಸ್ವತಃ ವಲಸಿಗರಾಗಿದ್ದ ಡಾಕ್ಟರ್ ಸೂ, ೨೦೦೮ ರಲ್ಲಿ ಮಳಿಗೆಯೊಂದನ್ನು-ಇಂಟರ್ನೆಟ್ಟಿನ ಡೊಮೈನ್ ಒಂದನ್ನು ಖರೀದಿಮಾಡಿ ಅದಕ್ಕೆ ಟ್ರೈ ವ್ಯಾಲಿ ಎಂದು ಹೆಸರಿಟ್ಟು ಬಿಸಿನೆಸ್ ಶುರು ಮಾಡಿದರು; ಹೇಗಾದರೂ ಅಮೆರಿಕಾಗೆ ಬರಬೇಕೆನ್ನುವವರ ಕಾತುರ ಮತ್ತು ದುಡಿದು ಹಣ ಮಾಡಬೇಕೆನ್ನುವವರ ತುರ್ತನ್ನು ತನ್ನ ಬಿಸಿನೆಸ್ ಯಶಸ್ಸಿಗೆ ಬಂಡವಾಳವನ್ನಾಗಿಟ್ಟುಕೊಂಡರು. ತನ್ನ ಯೂನಿವರ್ಸಿಟಿಗೆ ಇಂಟರ್ನ್ಯಾಷನಲ್ ಅಸೋಸಿಯೇಷನ್ ಆಫ್ ಬೈಬಲ್ ಕಾಲೇಜಸ್ ಅಂಡ್ ಸೆಮಿನರೀಸ್ (IABCS) ಎಂಬ ಜಾರ್ಜಿಯಾ ರಾಜ್ಯದಲ್ಲಿನ ಚಿಕ್ಕ ಧಾರ್ಮಿಕ ಸಂಸ್ಥೆಯೊಂದರಿಂದ ಅಕ್ರೆಡಿಟ್ ಮಾಡಿಕೊಂಡು ಅದನ್ನೇ ದೊಡ್ಡದಾಗಿ ಪ್ರಚುರಪಡಿಸಿದರು. "ಟ್ರೈ ವ್ಯಾಲಿ ಒಂದು ಕ್ರೈಸ್ತ ಧಾರ್ಮಿಕ-ಶಿಕ್ಷಣ ಸಂಸ್ಥೆ. ಉತ್ತಮ ಕ್ರೈಸ್ತ ವೈದ್ಯರು, ತಂತ್ರಜ್ನರು, ಇಂಜಿನೀಯರುಗಳು, ವಿಜ್ನಾನಿಗಳನ್ನು ತಯಾರುಮಾಡುವುದು ನಮ್ಮ ಉದ್ದೇಶ..." ಎಂದೆಲ್ಲಾ ತನ್ನ ವೆಬ್ ಸೈಟಿನಲ್ಲಿ ಬರೆದುಕೊಂಡರು. ಧರ್ಮದ ಹೆಸರು ಕೊಟ್ಟರೆ ಸಂಸ್ಥೆಯ ತಂಟೆಗೆ ಯಾರೂ ಸುಲಭವಾಗಿ ಬರುವುದಿಲ್ಲ ಎಂದು ಆಕೆ ಭಾವಿಸಿರಲೂಬಹುದು.
ಹಾಗೇ, ಸುಳ್ಳು ದಾಖಲೆಗಳನ್ನು ಒದಗಿಸಿ ಟ್ರೈ ವ್ಯಾಲಿಗೆ ’ಸ್ಟೂಡೆಂಟ್ ಅಂಡ್ ಎಕ್ಸ್ಚೇಂಜ್ ವಿಸಿಟರ್ ಇನ್ಫೋರ್ಮೇಶನ್ ಸಿಸ್ಟೆಮ್’ (SEVIS) ಎನ್ನುವ ಕೇಂದ್ರದ ಕಾನೂನಿನಡಿ ಗುರುತು ಪಡೆದುಕೊಂಡರು. ಸೆಪ್ಟೆಂಬರ್ ೧೧ ರಂದು ಅಮೆರಿಕಾ ಮೇಲೆ ಧಾಳಿ ಮಾಡಿದ ಮಂದಿ ವಿದ್ಯಾರ್ಥಿ-ವೀಸಾದಲ್ಲಿದ್ದರೂ ಯಾವ ಸಂಸ್ಥೆಯಲ್ಲಿಯೂ ಓದುತ್ತಿರಲಿಲ್ಲ. ಇಂತಹವರನ್ನು ಟ್ರ್ಯಾಕ್ ಮಾಡಲು ಸೆಪ್ಟೆಂಬರ್ ೧೧ ನಂತರ ಅಮೆರಿಕಾ ಮಾಡಿದ್ದ ಸಣ್ಣದೊಂದು ಮಾರ್ಪಾಡು ಈ SEVIS. ಜನರ ನಂಬಿಕೆಗಳಿಸಲು ಇದು ಸಾಕಿತ್ತೆನ್ನಿ. ಟ್ರೈ ವ್ಯಾಲಿಯ ವೆಬ್ ಸೈಟ್ ಮೇಲುನೋಟಕ್ಕೆ ವಿಶ್ವವಿದ್ಯಾನಿಯದ ವೆಬ್ ಸೈಟ್ಗಳನ್ನು ಹೋಲುತ್ತಿತ್ತಾದರೂ, ವಿಶ್ವವಿದ್ಯಾಲಯವೊಂದಕ್ಕೆ ಬೇಕೇಬೇಕಾಗಿದ್ದ, ಅಮೆರಿಕಾದ ಡಿಪಾರ್ಟ್ಮೆಂಟ್ ಆಫ್ ಎಜುಕೇಷನ್ ನಿಂದ ಅಕ್ರೆಡಿಟೇಷನ್ ಅಥವಾ ಗುರುತು ಟ್ರೈ ವ್ಯಾಲಿಗೆ ಸಿಕ್ಕಿರಲಿಲ್ಲ.
 
ಸಾಧಾರಣ ವಿಶ್ವವಿದ್ಯಾಲಯವೊಂದರಲ್ಲಿ ಕೋರ್ಸ್ ಒಂದಕ್ಕೆ ಕನಿಷ್ಟ ೨೦,೦೦೦ ಡಾಲರ್ ಖರ್ಚಾಗುತ್ತದೆ, ಆದರೆ ಟ್ರೈ ವ್ಯಾಲಿ, ಮಾಸ್ಟರ್ಸ್ ಆಗಿರಲಿ-ಡಾಕ್ಟರೇಟ್ ಆಗಿರಲಿ ಒಂದು ಕೋರ್ಸ್ ಅನ್ನು ಅದರ ಅರ್ಧದಷ್ಟು ಬೆಲೆಗೆ ಮುಗಿಸುತ್ತಿತ್ತು. ಇಲ್ಲಿ ವಿದ್ಯಾರ್ಥಿಗಳು ಯಾವುದೇ ತರಗತಿಗಳನ್ನೂ ಅಟೆಂಡ್ ಮಾಡುವ ಅಗತ್ಯವಿರಲಿಲ್ಲ. ಎಲ್ಲ ಕೋರ್ಸ್ ಗಳನ್ನು ಆನ್ ಲೈನ್ ಮಾಡಿ ಮುಗಿಸಬಹುದಿತ್ತು! ಎಫ್೧ (ವಿದ್ಯಾರ್ಥಿ-ವೀಸಾ) ನಿಯಮದ ಪ್ರಕಾರ ಅಂತರರಾಷ್ಟ್ರ‍ೀಯ ಫುಲ್ ಟೈಮ್ ವಿದ್ಯಾರ್ಥಿಯೊಬ್ಬ ತನ್ನ ಇಡೀ ಕೋರ್ಸ್ ನಲ್ಲಿ ಒಂದು ಅಥವಾ ಎರಡು ಆನ್ ಲೈನ್ ತರಗತಿಗಳನ್ನಷ್ಟೇ ತೆಗೆದುಕೊಳ್ಳಬಹುದು. ಆದರೆ ಟ್ರೈ ವ್ಯಾಲಿಯಲ್ಲಿ ಎಲ್ಲವೂ ಆನ್ ಲೈನ್. ಅಂದರೆ ವಿದ್ಯಾರ್ಥಿಗಳು ಕ್ಲಾಸಿಗೆ ಬರುವುದು ಬೇಡ-ಮೇಷ್ಟ್ರರೂ ಕ್ಲಾಸಿಗೆ ಬರುವುದೂ ಬೇಡ. ಎಲ್ಲರೂ ಅವರವರ ಮನೆಯಲ್ಲೋ, ಕಾಫಿ ಶಾಪ್ ನಲ್ಲೋ ಕುಳಿತು ಇಂಟರ್ನೆಟ್ಟಿನ ಸಹಾಯದಿಂದ ಕ್ಲಾಸ್ ನಡೆಸಬಹುದಿತ್ತು!
 
ಟ್ರೈ ವ್ಯಾಲಿಗೆ ಸೇರಲ್ಪಟ್ಟ ವಿದ್ಯಾರ್ಥಿಗೆ ವಿದ್ಯಾರ್ಥಿ-ವೀಸಾ ಮತ್ತು ಫುಲ್ ಟೈಮ್ ಕೆಲಸ ಮಾಡಲು ಅಗತ್ಯವಿರುವ ಓಪಿಟಿ (Optional Practical Training) ಮತ್ತು ಸಿಪಿಟಿ (Curricular Practical Training) ದಾಖಲೆಗಳನ್ನು ತಕ್ಷಣವೇ ವಿತರಿಸಲಾಗುತ್ತಿತ್ತು. ಅವರು ತಮ್ಮ ವೀಸಾ, ಸಿಪಿಟಿ, ಒಪಿಟಿ ಗಳನ್ನಿಟ್ಟುಕೊಂಡು ಅಮೆರಿಕಾದ ಯಾವುದೇ ಭಾಗದಲ್ಲಿರುವ ಯಾವುದೇ ಕಂಪನಿಗಾದರೂ ಕೆಲಸ ಮಾಡಬಹುದಿತ್ತು. ಒಟ್ಟಿನಲ್ಲಿ ಸಮಯಕ್ಕೆ ಸರಿಯಾಗಿ ಡಾಕ್ಟರ್ ಸೂ ಗೆ ಫೀಜ್ ಕಟ್ಟಿದರೆ ಸಾಕಿತ್ತು! ವಾಸ್ತವವಾಗಿ, ವಿದ್ಯಾರ್ಥಿಯೊಬ್ಬ (ಉದಾಹರಣೆಗೆ) ಕಂಪ್ಯೂಟರ್ ಚಿಪ್ ಗಳ ಕುರಿತಾಗಿ ತರಗತಿ ತೆಗೆದುಕೊಂಡಾಗ ಅದನ್ನು ಪ್ರಾಕ್ಟಿಕಲ್ ಆಗಿ ಅರ್ಥ ಮಾಡಿಕೊಳ್ಳಲು ಅನುಕೂಲವಾಗುವಂತೆ ಆ ಸೆಮಿಸ್ಟರಿನ ಕಾಲಾವಧಿಗೆ ಸಿಪಿಟಿ ಎಂಬ ದಾಖಲೆಯನ್ನೂ, ವಿದ್ಯಾರ್ಥಿಯೊಬ್ಬ ತನ್ನ ಕೋರ್ಸನ್ನು ಮುಗಿಸಿ-ಡಿಗ್ರಿ ಪಡೆದು ಅಮೆರಿಕಾದ ಯಾವುದಾದರೂ ಕಂಪನಿಯಲ್ಲಿ ಕೆಲಸ ಮಾಡಲು ಇಚ್ಚಿಸಿದರೆ ಒಂದು ವರ್ಷಗಳ ಕಾಲ ಆತ ಕೆಲಸ ಮಾಡಿ ಅನುಭವ ಪಡೆಯಲು ಅನುಕೂಲವಾಗುವಂತೆ ಒಪಿಟಿ ಎಂಬ ದಾಖಲೆಯನ್ನೂ ವಿದ್ಯಾರ್ಥಿ-ವೀಸಾದವರಿಗೆ ಕೊಡಲಾಗುತ್ತದೆ. ಆದರೆ ಟ್ರೈ ವ್ಯಾಲಿಯಲ್ಲಿ ವಿದ್ಯಾರ್ಥಿಗಳು ದಾಖಲಾಗಿ ಫೀಜು ಕಟ್ಟಿದ ತಕ್ಷಣವೇ ಇವುಗಳ ವ್ಯವಸ್ಥೆ ಮಾಡುತ್ತಿದ್ದರು! ಇಲ್ಲಿಗೆ ದಾಖಲಾಗಲು ಒಳ್ಳೆಯ ಜಿ.ಆರ್.ಇ ಅಥವಾ ಜಿ.ಮ್ಯಾಟ್ ಅಂಕಗಳೂ ಬೇಕಿರಲಿಲ್ಲ. ಬೇರೆ ಯಾವ ವಿಶ್ವವಿದ್ಯಾಲಯದಲ್ಲಿ ಸೀಟು ಸಿಗದಿದ್ದರೂ ಟ್ರೈ ವ್ಯಾಲಿಯಲ್ಲಿ ತ್ರಾಸವಿಲ್ಲದೆ ಸಿಗುತ್ತಿತ್ತು.
 
ಸುಳ್ಳು ದಾಖಲೆಗಳನ್ನು ಒದಗಿಸಿ ೨೦೦೯ ರ ಫೆಬ್ರವರಿಯಲ್ಲಿ ತನ್ನ ನಕಲಿ ಸಂಸ್ಥೆಯ ಮೂಲಕ ವೀಸಾ ವಿತರಿಸುವ ಹಕ್ಕನ್ನೂ ಸೂ ಪಡೆದುಕೊಂಡರು. ಆಗ ೩೦ ಜನಕ್ಕೆ ಎಫ್೧ ವೀಸಾ ಕೊಡಲಾಗಿತ್ತು. ಮೇ ೨೦೧೦ ರಷ್ಟರಲ್ಲಿ ಇಲ್ಲಿ ೯೩೯ ಜನ ವಿದ್ಯಾರ್ಥಿಗಳಿದ್ದರು! ಒಂದೇ ವರ್ಷಕ್ಕೆ ಟ್ರೈ ವ್ಯಾಲಿಯ ವಿದ್ಯಾರ್ಥಿಗಳ ಸಂಖ್ಯೆ ಆಕಾಶಕ್ಕೇರಿತ್ತು. ಟ್ರೈ ವ್ಯಾಲಿ ಚಿನ್ನದ ಮೊಟ್ಟೆಯಿಡುವ ಕೋಳಿಯಾಗಿತ್ತು. ಇಲ್ಲಿಗೆ ದಾಖಲಾಗಿದ್ದವರಲ್ಲಿ ಹೆಚ್ಚಿನವರು ಭಾರತದವರು. ಅಮೆರಿಕದಲ್ಲೇ ಇದ್ದುಕೊಂಡು ಉದ್ಯೋಗಮಾಡಲು ಸರ್ಕಾರದಿಂದ ಅನುಮೋದನೆಗೆ ಕಾಯುತ್ತಿದ್ದ ಎಚ್೪ ಇನ್ನಿತರೆ ವೀಸಾದವರೂ ಈ ಯೂನಿವರ್ಸಿಟಿಗೆ ದುಡ್ಡುಕೊಟ್ಟು ತಮ್ಮ ವೀಸಾಗಳನ್ನು ವಿದ್ಯಾರ್ಥಿ-ವೀಸಾಗೆ ಬದಲಾಯಿಸಿಕೊಳ್ಳತೊಡಗಿದರು.
 
ಕೆಲವರು ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ, ಎರಡೆರಡು ಮಾಸ್ಟರ್ಸ್ ಕೋರ್ಸು, ಡಾಕ್ಟರೇಟ್ ಕೋರ್ಸುಗಳಿಗೆ ದಾಖಲಾತಿ ಮಾಡಿಕೊಂಡು ಅತ್ಯಂತ ತ್ವರಿತ ಗತಿಯಲ್ಲಿ ಗ್ರೀನ್ ಕಾರ್ಡ್ ಸಿಗುವ ಇಬಿ೧ ಕ್ಯಾಟಗರಿಗೆ ಸೇರಿಕೊಳ್ಳತೊಡಗಿದ್ದರು. (ಈ ಇಬಿ೧ ಕ್ಯಾಟಗರಿಯಲ್ಲಿ ’ವಿಶೇಷ ಕ್ಷೇತ್ರಗಳಲ್ಲಿ ಸಂಶೋಧನೆ ಮಾಡಿರುವ’, ಅತ್ಯಂತ ಪ್ರಕಾಂಡ ಪಂಡಿತರೆನಿಸುವಷ್ಟು ಓದಿದವರಿಗೆ, ’ಅಸಾಮಾನ್ಯ ಸಾಮರ್ಥ್ಯ’ ಇರುವವರಿಗೆ ತುರ್ತಾಗಿ ಗ್ರೀನ್ ಕಾರ್ಡ್ ಸಿಗುತ್ತದೆ). ಟ್ರೈ ವ್ಯಾಲಿಗೆ ದಾಖಲಾತಿ ಪಡೆದು ೩೦,೦೦೦ ಡಾಲರ್ ಖರ್ಚು ಮಾಡಿ ಎರಡು ಎಮ್ ಎ-ಎಮ್ ಎಸ್ ಗಳನ್ನೋ, ಒಂದು ಡಾಕ್ಟರೇಟನ್ನೋ ಖರೀದಿ ಮಾಡಿದರೆ ಎರಡು ವರ್ಷದಲ್ಲಿ ಗ್ರೀನ್ ಕಾರ್ಡ್ ಮತ್ತು ಕೆಲವೇ ತಿಂಗಳಲ್ಲಿ ಹಾಕಿದ ಹಣ ವಾಪಸ್!
 
ಆಪರೇಷನ್ ಟ್ರೈ ವ್ಯಾಲಿ

ಅಮೆರಿಕಾದಲ್ಲಿ ಈಗ ಹಿಂದೆಂದೂ ಇರದಷ್ಟು ಹೆಚ್ಚಿನ ನಿರುದ್ಯೋಗವಿದೆ. ಅಮೆರಿಕನ್ನರಿಗೆ ಕೆಲಸ ಸೃಷ್ಟಿಸಲು, ಇರುವ ಕೆಲಸಗಳನ್ನು ಒದಗಿಸಲು ಒಬಾಮಾ ಸರ್ಕಾರ ಶತ ಪ್ರಯತ್ನ ಮಾಡುತ್ತಿದೆ. ಭಾರತ, ಚೈನಾ ಇತ್ಯಾದಿ ಏಷಿಯಾದ ರಾಷ್ಟ್ರಗಳಿಂದ ನಿಪುಣ ತಂತ್ರಜ್ನರನ್ನು ಇಲ್ಲಿಗೆ ಕರೆತಂದು ಅವರಿಗೆ ಒಬ್ಬ ಅಮೆರಿಕನ್ ತಂತ್ರಜ್ನನಿಗೆ ಕೊಡುವುದಕ್ಕಿಂತ ಕಡಿಮೆ ಸಂಬಳ ಕೊಟ್ಟು ಕೆಲಸ ಮಾಡಿಸಿಕೊಳ್ಳಲು ನೂರಾರು ಕಂಪನಿಗಳು ತಯಾರಿವೆ. ಅವುಗಳಿಗೆ ತಂತ್ರಜ್ನರನ್ನು ಸರಬರಾಜು ಮಾಡಲು ’ಬಾಡಿ ಶಾಪಿಂಗ್’ ಕನ್ಸಲ್ಟೆನ್ಸಿ ಬಿಸಿನೆಸ್ ಗಳಿವೆ. ಒಬಾಮಾ ಸರ್ಕಾರ ಅಮೆರಿಕನ್ ಪ್ರಜೆಗಳಿಗೆ ಕೆಲಸ ಗಟ್ಟಿ ಮಾಡಿಸಲು ಮೊದಲು ಪ್ರಶ್ನಿಸತೊಡಗಿದ್ದು ಈ ಬಾಡಿ ಶಾಪ್ ಗಳನ್ನೇ. ಹೀಗೆ ತಂತ್ರಜ್ನರನ್ನು ಕರೆಸಿಕೊಂಡು ಅವರನ್ನು ಬೇರೊಂದು ಕಂಪನಿಗೆ ದುಡಿಯಲು ಬಿಟ್ಟು, ಅವರ ಪ್ರತೀ ತಿಂಗಳ ಸಂಬಳದಲ್ಲಿ ಪಾಲು ತೆಗೆದುಕೊಂಡು, ಅವರ ವೀಸಾಗಳನ್ನು ಅಡವಿಟ್ಟುಕೊಂಡು ಗೋಳಾಡಿಸುತ್ತಿದ್ದ ಈ ಬಗೆಯ ಹಲವಾರು ಕನ್ಸಲ್ಟೆನ್ಸಿ ಗಳನ್ನು ಸರ್ಕಾರ ತರಾಟೆಗೆ ತೆಗೆದುಕೊಂಡಿತ್ತು. ಇದೇ ಬಾಡಿ ಶಾಪಿಂಗ್ ನ ಮತ್ತೊಂದು ಅವತಾರ ಈ ಟ್ರೈ ವ್ಯಾಲಿ ಯೂನಿವರ್ಸಿಟಿಯದ್ದು.
 
ಐಸಿಇ ಟ್ರೈ ವ್ಯಾಲಿ ಯೂನಿವರ್ಸಿಟಿಯನ್ನು ಮೇ ೨೦೧೦ ರಿಂದ ನಿಗರಾನಿಯಲ್ಲಿಟ್ಟಿತ್ತು. ಭಾರತದಿಂದ ಇಲ್ಲಿಗೆ ಬರುತ್ತಿದ್ದ ವಿದ್ಯಾರ್ಥಿಗಳು ಕೋರ್ಸುಗಳಿಗೆ ದಾಖಲಾಗಿ ಅಮೆರಿಕದಾದ್ಯಂತದ ಗ್ಯಾಸ್ ಸ್ಟೇಷನ್ ಗಳಲ್ಲೋ, ಭಾರತೀಯರ ಒಡೆತನದ ಹೋಟೆಲ್-ಮೋಟೆಲ್ ಗಳಲ್ಲೋ, ದಿನಸಿ ಅಂಗಡಿಗಳಲ್ಲೋ ಗಂಟೆಗೆ ಆರು ಡಾಲರ್ ದುಡಿಯುವ ’ಅಗ್ಗದ’ ನೌಕರರಾಗಿ ಕೆಲಸ ಮಾಡಿಕೊಂಡಿರುತ್ತಿದ್ದರು. ಟ್ರೈ ವ್ಯಾಲಿಯಿಂದ ಸಿಪಿಟಿ, ಒಪಿಟಿ ಪಡೆದಿದ್ದವರು ಬೇರೆ ಬೇರೆ ಕಂಪನಿಗಳಲ್ಲಿ ಕೆಲಸ ಮಾಡುತ್ತಾ ಆ ಕಂಪನಿಗಳ ಮೂಲಕವೇ ಎಚ್೧ ವೀಸಾ ಪಡೆಯುತ್ತಿದ್ದರು ಅಥವಾ ವಿದ್ಯಾರ್ಥಿ-ವೀಸಾದಲ್ಲಿದ್ದುಕೊಂಡೇ ವರ್ಷಗಟ್ಟಲೆ ಕೆಲಸ ಮಾಡುತ್ತಿದ್ದರು. ಇದನ್ನು ಸುಮಾರು ದಿನದಿಂದ ಗಮನಿಸುತ್ತಿದ್ದ ಐಸಿಇ, ಎರಡು ವಾರಗಳ ಹಿಂದೆ ವಿದ್ಯಾರ್ಥಿಗಳ ಮಾರುವೇಷದಲ್ಲಿ ಡಾಕ್ಟರ್ ಸೂ ಬಳಿಗೆ ಹೋಗಿ ತಮಗೆ ವಿದ್ಯಾರ್ಥಿ-ವೀಸಾ ಬೇಕು, ಕೆಲಸ ಮಾಡುವ ಅವಕಾಶವಿರಬೇಕು ಮತ್ತು ಕ್ಲಾಸುಗಳನ್ನು ಅಟೆಂಡ್ ಮಾಡಲು ತಮಗೆ ಯಾವ ಆಸಕ್ತಿಯೂ ಇಲ್ಲವೆಂದು ಹೇಳಿದ್ದಾರೆ. ಯಾವುದೇ ತಕರಾರಿಲ್ಲದೆ ಅದಕ್ಕೆ ಒಪ್ಪಿಕೊಂಡ ಸೂ ಅವರಿಂದ ಹಣ ಪಡೆದು ಐ-೨೦ ಎಂಬ ವಿದ್ಯಾರ್ಥಿ-ವೀಸಾದ ದಾಖಲೆಯೊಂದನ್ನು ಕೊಟ್ಟಿದ್ದಾರೆ. ತಕ್ಷಣ ಅವರನ್ನು ಕಾನೂನಿನ ಸುಪರ್ದಿಗೆ ತೆಗೆದುಕೊಂಡು ಟ್ರೈ ವ್ಯಾಲಿ ಮತ್ತವರ ಎಲ್ಲ ಆಸ್ತಿಯನ್ನು ಮುಟ್ಟುಗೋಲು ಮಾಡಿಕೊಳ್ಳಲು ಕ್ರಮ ತೆಗೆದುಕೊಳ್ಳಲಾಗಿದೆ.
 
ವಿದ್ಯಾರ್ಥಿಗಳ ತಪ್ಪಾ??
 
ಮೊದಲನೆಯದಾಗಿ, ಟ್ರೈ ವ್ಯಾಲಿಯ ವೆಬ್ ಸೈಟ್ ನ, ಪ್ರತಿಯೊಂದು ವಾಕ್ಯದಲ್ಲಿಯೂ ಕಣ್ಣಿಗೆ ರಾಚುವಂತಿರುವ ವ್ಯಾಕರಣದ ಮತ್ತು ಸ್ಪೆಲ್ಲಿಂಗ್ ತಪ್ಪುಗಳನ್ನು ನೋಡಿಯೇ ಯಾರಿಗಾದರೂ ಅನುಮಾನ ಬರಬೇಕಿತ್ತು.
 
ಟ್ರೈ ವ್ಯಾಲಿಯ ವಿದ್ಯಾರ್ಥಿಗಳ ಪಟ್ಟಿಯಲ್ಲಿರುವ ೧೫೫೫ ಭಾರತೀಯರಲ್ಲಿ ೧೭೦ ಜನ ಮಾತ್ರ ಭಾರತದಿಂದಲೇ ಎಫ್೧ ವೀಸಾ ಪಡೆದು ಬಂದಿರುವವರು. ಇವರಿಗೆ ಈ ಸಂಸ್ಥೆ ನಕಲಿ ಎಂದು ಗೊತ್ತಿಲ್ಲದೆ ಇದ್ದಿರಬಹುದು; ಕಡಿಮೆ ದುಡ್ಡಿಗೆ ಡಿಗ್ರಿ ಪಡೆಯುವ ಆಸೆಯಿಂದ ಇಲ್ಲಿಗೆ ಅಪ್ಲೈ ಮಾಡಿದ ಅಮಾಯಕರಿರಬಹುದು. ಆದರೆ ಉಳಿದ ವಿದ್ಯಾರ್ಥಿಗಳಲ್ಲಿ ಬಹುಪಾಲು ಜನ ಟ್ರೈ ವ್ಯಾಲಿಯ ಆನ್ ಲೈನ್ ಕ್ಲಾಸಿನ ಆಮಿಷಕ್ಕೆ ಬಿದ್ದು ಅಮೆರಿಕಾದ ಬೇರೆ ಬೇರೆ ಅಕ್ರೆಡಿಟೆಡ್ ವಿಶ್ವವಿದ್ಯಾಲಯಗಳಿಂದ ಟ್ರೈ ವ್ಯಾಲಿಗೆ ವರ್ಗಾವಣೆ ಪಡೆದುಕೊಂಡಿದ್ದರು. ಮತ್ತಷ್ಟು ಜನ ವಿದ್ಯಾರ್ಥಿ-ವೀಸಾ, ಸಿಪಿಟಿ, ಓಪಿಟಿಗಳ ಸಲುವಾಗಿಯೇ ಇಲ್ಲಿಗೆ ಸೇರಿದ್ದವರಿದ್ದರು. ದಿನನಿತ್ಯದ ತರಗತಿಗಳನ್ನು ಅಟೆಂಡ್ ಮಾಡುವ ಅಗತ್ಯ ಇಲ್ಲ ಎಂದು ಇವರೆಲ್ಲರಿಗೂ ಸಂಪೂರ್ಣವಾಗಿ ತಿಳಿದಿತ್ತು. ಇವರಲ್ಲಿ ಶೇಕಡಾ ೯೯ ಮಂದಿ ಯೂನಿವರ್ಸಿಟಿಯೆಂದು ಕರೆದುಕೊಳ್ಳುತ್ತಿದ್ದ ಜಾಗವನ್ನೂ ನೋಡಿರಲಿಲ್ಲ. ಇಡೀ ಟ್ರೈ ವ್ಯಾಲಿ ಎಂಬ ಯೂನಿವರ್ಸಿಟಿ ಒಂದು ಸಣ್ಣ ರೂಮಿನಲ್ಲಿ ಹದಿಮೂರು ಕಂಪ್ಯೂಟರ್ ಮತ್ತು ಕೆಲವು ಕುರ್ಚಿ-ಮೇಜುಗಳ ಸಹಾಯದಿಂದ ನಡೆಯುತ್ತಿತ್ತು. ಈ ಬಗ್ಗೆ ಯಾವ ವಿದ್ಯಾರ್ಥಿಯೂ ಎಲ್ಲಿಯೂ ದೂರು ದಾಖಲಿಸಿರಲಿಲ್ಲ, ತಕರಾರು ಮಾಡಿರಲಿಲ್ಲ!
 
ಒಬ್ಬ ವಿದ್ಯಾರ್ಥಿ ಮತ್ತೊಬ್ಬ ವಿದ್ಯಾರ್ಥಿಯನ್ನು ರೆಫರ್ ಮಾಡಿ ಅವನನ್ನು/ಅವಳನ್ನು ಟ್ರೈ ವ್ಯಾಲಿಗೆ ಸೇರಿಕೊಳ್ಳುವಂತೆ ಮಾಡಿದರೆ ಆ ವಿದ್ಯಾರ್ಥಿಗೆ ತನ್ನ ಫೀಜ್ ನಲ್ಲಿ ಕಡಿತ ಅಥವಾ ಇನ್ಸೆಂಟಿವ್ ಸಿಗುತ್ತಿತ್ತು ಎಂಬ ಕಾರಣಕ್ಕೆ ವಿದ್ಯಾರ್ಥಿಗಳು ತಾವು ಕಲಿಯುತ್ತಿದ್ದ ಇತರೆ ಯೂನಿವರ್ಸಿಟಿಗಳನ್ನು ಬಿಟ್ಟು ತಂಡೋಪತಂಡವಾಗಿ ಟ್ರೈ ವ್ಯಾಲಿ ಸೇರಿದ್ದರು ಎನ್ನಲಾಗಿದೆ. ಇದಲ್ಲದೆ, ಎಫ್೧ ವೀಸಾ ಇದ್ದಾಗ ಯೂನಿವರ್ಸಿಟಿಯ ಕ್ಯಾಂಪಸ್ ಗಳಲ್ಲಿ ಅಥವಾ ಯೂನಿವರ್ಸಿಟಿಯ ಸುತ್ತಮುತ್ತಲಿನ ಪರಿಸರದಲ್ಲಿ ಕೆಲಸ ಮಾಡಲು ಅನುಮೋದನೆ ಇದೆಯೇ ಹೊರತು ಬೇರೆ ಬೇರೆ ಊರುಗಳಲ್ಲಲ್ಲ. ಇದು ವಿದ್ಯಾರ್ಥಿಗಳಿಗೆ ಗೊತ್ತಿರುವಂಥ ನಿಯಮವೇ. ಇದೆಲ್ಲಾ ಗೊತ್ತಿದ್ದೂ ಟ್ರೈ ವ್ಯಾಲಿ ಸೇರಿದವರನ್ನು ಏನೆಂದು ಕರೆಯಬೇಕು?
 
ಟ್ರೈ ವ್ಯಾಲಿ ಒಂದೇ ಅಲ್ಲ!
 
ಈಗ ಆಗಿರುವ ಧಾಳಿ ನೂರಾರು ವಿದ್ಯಾರ್ಥಿಗಳಿಗೆ, ಅವರ ಪೋಷಕರಿಗೆ ಆಗಿರುವ ಸಣ್ಣ ಶಾಕ್ ಅಷ್ಟೇ. ಚೈನಾ ಮೂಲದ ವಲಸಿಗರೇ ನಡೆಸುತ್ತಿರುವ, ಕ್ಯಾಲಿಫೋರ್ನಿಯಾದಲ್ಲೇ ಇರುವ ಹೆರ್ಗ್ಯುಆನ್ ಮತ್ತು ಇಂಟರ್ ನ್ಯಾಷನಲ್ ಟೆಕ್ನಲಾಜಿಕಲ್ ಯೂನಿವರ್ಸಿಟಿ (ITU) ಇತರೆ ಸಂಸ್ಥೆಗಳೂ ಟ್ರೈ ವ್ಯಾಲಿಯ ಕೆಲಸವನ್ನೇ ಮಾಡುತ್ತಿರುವುದರಿಂದ ಇವುಗಳ ಮೇಲೂ ಹೋಮ್ ಲ್ಯಾಂಡ್ ಸೆಕ್ಯುರಿಟಿಯ ಕಣ್ಣುಬಿದ್ದಾಗಿದೆ ಎನ್ನಲಾಗಿದೆ. ಆದರೆ ಈ ಎರಡೂ ಯೂನಿವರ್ಸಿಟಿಗಳಲ್ಲಿರುವ ಅಂತರರಾಷ್ಟ್ರೀಯ (ಇಲ್ಲೂ ಹೆಚ್ಚಿನವರು ಭಾರತೀಯರು!) ವಿದ್ಯಾರ್ಥಿಗಳ ಮೇಲೆ ಯಾವ ಕ್ರಮ ಕೈಗೊಳ್ಳಬೇಕು? ಇಷ್ಟೋಂದು ಹೆಚ್ಚಿನ ಸಂಖ್ಯೆಯ ವಿದೇಶಿ-ಅಪರಾಧಿ-ವಿದ್ಯಾರ್ಥಿಗಳನ್ನು ಹೇಗೆ ನಿಭಾಯಿಸಬೇಕು ಎಂಬುದು ಹೋಮ್ ಲ್ಯಾಂಡ್ ಸೆಕ್ಯುರಿಟಿಯವರಿಗೂ ತಲೆನೋವಾಗಿದೆ. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ನಿಭಾಯಿಸುವ ಕ್ರಮ ಖಚಿತವಾದ ನಂತರ ಅವುಗಳನ್ನೂ ಬಂದ್ ಮಾಡಿಸಲಾಗುತ್ತದೆ ಎನ್ನಲಾಗಿದೆ.
 
ಅಮೆರಿಕನ್ ಸರ್ಕಾರದ ಸಧ್ಯದ ಉದ್ದೇಶ
 
ಈ ಕಾನೂನು ಬಾಹಿರ ಜಾಲದಲ್ಲಿ ಸೇರಿದ್ದವರ ಪ್ರತಿಯೊಬ್ಬರ ಕೇಸ್ ಅನ್ನು ಪ್ರತ್ಯೇಕವಾಗಿ ಪರಿಗಣಿಸುವುದಾಗಿ ಅಮೆರಿಕಾದ ಹೋಮ್ ಲ್ಯಾಂಡ್ ಸೆಕ್ಯುರಿಟಿ ತಿಳಿಸಿದೆ. ಒಳ್ಳೆಯ ಅಂಕಗಳನ್ನಿಟ್ಟುಕೊಂಡು ಕಡಿಮೆ ಫೀಜ್ ಎಂಬ ಕಾರಣಕ್ಕಾಗಿಯೇ ಟ್ರೈ ವ್ಯಾಲಿಗೆ ಬಂದ ವಿದ್ಯಾರ್ಥಿಗಳನ್ನು ಡಿಪೋರ್ಟ್ ಮಾಡುವ ಉದ್ದೇಶ ಸರ್ಕಾರಕ್ಕಿದ್ದಂತಿಲ್ಲ. ಆಸಕ್ತಿಯಿರುವ ವಿದ್ಯಾರ್ಥಿಗಳಿಗೆ ತಮ್ಮ ಅರ್ಹತೆಯ ಆಧಾರದ ಮೇಲೆ ಬೇರೆ ಯೂನಿವರ್ಸಿಟಿಗಳಲ್ಲಿ ದಾಖಲಾತಿ ಪಡೆದುಕೊಳ್ಳುವಂತೆ ಸೂಚಿಸಲಾಗಿದೆ.
ಹೊಸದಾಗಿ ಎಫ್೧ ವೀಸಾ ಪಡೆದು ಭಾರತದಿಂದ ಅಮೆರಿಕಾಗೆ ಬಂದಿರುವ ವಿದ್ಯಾರ್ಥಿಗಳಿಗೆ ಅಮೆರಿಕಾ ಏನನ್ನೂ ಮಾಡುವುದಿಲ್ಲ. ಏಕೆಂದರೆ ಅವರು ಭಾರತದಲ್ಲಿರುವ ಅಮೆರಿಕಾ ಕಾನ್ಸಲೇಟ್ ನಿಂದಲೇ ವೀಸಾ ಪಡೆದು ಬಂದಿದ್ದಾರೆ. ಅವರು ಬಂದಿರುವುದನ್ನು ಪ್ರಶ್ನಿಸಿದರೆ ತನ್ನ ಕಾನ್ಸಲೇಟ್ ಅನ್ನೇ ಪ್ರಶ್ನಿಸಿದಂತೆ ಹಾಗೂ ತಪ್ಪು ತನ್ನದೂ ಎಂದಂತೆ. ಅಮೆರಿಕಾ ಹಾಗೆ ಮಾಡುವುದಿಲ್ಲ. ಈಗ ಸಿಕ್ಕಿರುವ ವಿದ್ಯಾರ್ಥಿಗಳನ್ನು ಪ್ರಶ್ನಿಸಿ, ವಿಚಾರಣೆ ನಡೆಸಿ, ಡಾಕ್ಟರ್ ಸೂ ಬಗ್ಗೆ ಮತ್ತು ಅವರಿಗೆ ಟ್ರೈ ವ್ಯಾಲಿ ಯೂನಿವರ್ಸಿಟಿಗೇ ಅರ್ಜಿ ಹಾಕು ಎಂದು ತಾಕೀತು ಮಾಡಿದ ಏಜೆನ್ಸಿಗಳೇನಾದರೂ ಇದ್ದರೆ ಅವುಗಳ ವಿರುದ್ಧ ಸಾಕ್ಷಿ ಸಂಗ್ರಹಿಸಿ ನಂತರ ಈ ವೀಸಾ ವಂಚನೆಯಲ್ಲಿ ಪಾಲುದಾರರಾದ ಎಲ್ಲರ ವಿರುದ್ಧವೂ ಕ್ರಮ ಕೈಗೊಳ್ಳುತ್ತದೆ. ಅಮೆರಿಕಾಗೂ, ಭಾರತದಲ್ಲಿರುವ ಅಮೆರಿಕಾ ಕಾನ್ಸಲೇಟ್ ಗೂ ವಂಚನೆ ಮಾಡಲಾಗಿದೆ ಎಂದು ಪ್ರಕರಣ ದಾಖಲಿಸಲಾಗುತ್ತದೆ ಎನ್ನಲಾಗಿದೆ. 
 
ವಿದ್ಯಾರ್ಥಿಗಳ ಅಂಕಗಳು, ಹಿಂದಿನ ಅಕಾಡೆಮಿಕ್ ರೆಕಾರ್ಡ್ ಚನ್ನಾಗಿದ್ದರೆ ಅವರಿಗೆ ಓದು ಮುಂದುವರಿಸಲು ಅನುವು ಮಾಡಿಕೊಡಲಾಗುತ್ತದೆ ಎನ್ನಲಾಗಿದೆ. ಆದರೆ ಈಗ ಇಲ್ಲಿನ ’ಸ್ಪ್ರಿಂಗ್’ ಸೆಮಿಸ್ಟೆರ್ ಆರಂಭವಾಗಿರುವುದರಿಂದ ಯೂನಿವರ್ಸಿಟಿಗಳ ಸೆಮಿಸ್ಟರ್ ಕೋಟಾ ಮುಗಿದಿರುವುದರಿಂದ ಅಲ್ಲಿ ಹೊಸ ವಿದ್ಯಾರ್ಥಿಗಳ ಸೇರ್ಪಡೆಯಾಗುವಂತಿಲ್ಲ. ತರಗತಿಗಳೂ ಇಲ್ಲದೆ, ವೀಸಾ ಸ್ಟೇಟಸ್ ಕೂಡಾ ಇಲ್ಲದೆ ಜನ ಅಮೆರಿಕಾದಲ್ಲಿ ಉಳಿಯುವಂತಿಲ್ಲ. ಉಳಿದರೂ ಕಾನೂನಿನ ಅಧೀನದಲ್ಲಿ ಅಂದರೆ ಜೈಲಿನಲ್ಲಿ ಇರಬೇಕಾಗುತ್ತದೆ. ಅದನ್ನು ತಡೆಯಲು ಈಗ ಹಲವಾರು ಟ್ರೈ ವ್ಯಾಲಿ ವಿದ್ಯಾರ್ಥಿಗಳ ಕಾಲುಗಳಿಗೆ ರೇಡಿಯೋ ಮಾನಿಟರ್ ಗಳನ್ನು ಅಳವಡಿಸಲಾಗಿದೆ. ಈ ವಿದ್ಯಾರ್ಥಿಗಳು ಸರ್ಕಾರದ ಕಣ್ಣಿಗೆ ಮಣ್ಣೆರಚಿ ಅಮೆರಿಕಾದೊಳಗೆ ಅನಧಿಕೃತ, ಅನ್ ಡಾಕ್ಯುಮೆಂಟೆಡ್ ವಲಸೆಗಾರರಾಗಿ ಮರೆಯಾಗದಿರಲಿ ಎಂದು ಈ ಕ್ರಮ ಎಂದು ಸರ್ಕಾರ ಹೇಳಿಕೆ ನೀಡಿದೆ.
 
ಈಗಾಗಲೇ ಹಲವಾರು ವಿದ್ಯಾರ್ಥಿಗಳನ್ನು ಪ್ರಶ್ನಿಸಿ ಅವರಿಂದ ಟ್ರೈ ವ್ಯಾಲಿ ಕುರಿತ ಮಾಹಿತಿಯನ್ನು ತೆಗೆದುಕೊಂಡು ಅವರನ್ನು ಟ್ರೈ ವ್ಯಾಲಿ ಮತ್ತು ಡಾಕ್ಟರ್ ಸೂ ವಿರುದ್ಧ ಸಾಕ್ಷಿಯನ್ನಾಗಿಸಿಕೊಳ್ಳುವ ಉದ್ದೇಶದಿಂದ ಅವರಿಗೆ ಬೇಲ್ ಕೊಟ್ಟು, ಮಾನಿಟರ್ ಅಳವಡಿಸಿ ಬಿಡಲಾಗಿದೆ ಎನ್ನಲಾಗಿದೆ. ಹಾಗೇ, ಬೇರೆ ವೀಸಾಗಳಿಂದ ವಿದ್ಯಾರ್ಥಿ-ವೀಸಾಕ್ಕೆ ವರ್ಗಾಯಿಸಿಕೊಂಡವರಿಗೆ ಮತ್ತೆ ತಮ್ಮ ಹಿಂದಿನ ವೀಸಾಗೇ ಮರಳಬಹುದು ಎಂದೂ ಹೇಳಲಾಗಿದೆ.
 
ಟ್ರೈ ವ್ಯಾಲಿ ಯೂನಿವರ್ಸಿಟಿಯ ಎಲ್ಲ ಕಾನೂನು ಬಾಹಿರ ಚಟುವಟಿಕೆಗಳೂ ಗೊತ್ತಿದ್ದೂ ಅದಕ್ಕೆ ದಾಖಲಾದ ನೂರಾರು ವಿದ್ಯಾರ್ಥಿಗಳನ್ನು ಅಮೆರಿಕಾದಿಂದ ಶಾಶ್ವತವಾಗಿ ಡಿಪೋರ್ಟ್ ಮಾಡಬೇಕೋ ಅಥವಾ ಕ್ರಿಮಿನಲ್ ಕೇಸುಗಳನ್ನು ಹಾಕಿ ಜೈಲು ಶಿಕ್ಷೆ ವಿಧಿಸಬೇಕೋ ಎಂಬ ತೀರ್ಮಾನ ಸರ್ಕಾರದ ಕೈಯ್ಯಲ್ಲಿದೆ. ಈ ವಂಚನೆಯಲ್ಲಿ ಗೊತ್ತಿದ್ದೂ ಪಾಲ್ಗೊಂಡವರ ಮೇಲೆ ಫ಼ೆಡೆರಲ್ ಮೇಲ್ (ಅಂಚೆ) ಫ್ರಾಡ್, ವೈರ್ ಫ್ರಾಡ್, ವೀಸಾ ಉಲ್ಲಂಘನೆ ಇತ್ಯಾದಿ ಕೇಸ್ ಗಳನ್ನು ಹಾಕಲಾಗುತ್ತದೆ ಎನ್ನಲಾಗಿದೆ. ಡಿಪೋರ್ಟ್ ಅಥವಾ ಗಡಿಪಾರು ಮಾಡುವುದೇ ಅತ್ಯಂತ ಸೌಮ್ಯ ಶಿಕ್ಷೆಯಾಗಿರುವುದರಿಂದ ಅದರ ಸಾಧ್ಯತೆಗಳು ಎದ್ದುಕಾಣುತ್ತಿವೆ.
 
ಭಾರತೀಯ ವಿದ್ಯಾರ್ಥಿಗಳ ಪ್ರಸ್ತುತ ಪರಿಸ್ತಿತಿ
 
    * ಟ್ರೈ ವ್ಯಾಲಿ ವಿತರಿಸಿದ್ದ ಎಲ್ಲ ವಿದ್ಯಾರ್ಥಿ-ವೀಸಾ, ಸಿಪಿಟಿ, ಒಪಿಟಿಗಳು ಈಗ ನಿರರ್ಥಕ. ಇವುಗಳನ್ನಿಟ್ಟುಕೊಂಡು ಕೆಲಸ ಮಾಡುತ್ತಿರುವ ಎಲ್ಲರೂ ತಕ್ಷಣದಿಂದಲೇ ಕೆಲಸ ನಿಲ್ಲಿಸಬೇಕಾಗುತ್ತದೆ ಮತ್ತು ತಮ್ಮ ಸ್ಟೇಟಸ್ ಅನ್ನು ಬೇರೆ ವೀಸಾಗಳಿಗೆ ವರ್ಗಾವಣೆ ಮಾಡಿಕೊಳ್ಳಬೇಕಾಗುತ್ತದೆ.
    * ಬರಲಿರುವ ಏಪ್ರಿಲ್ ೨೭ಕ್ಕೆ ಸ್ಯಾನ್ ಫ್ರಾನ್ಸಿಸ್ಕೋದ ಜಿಲ್ಲಾ ನ್ಯಾಯಾಲಯದಲ್ಲಿ ಮುಂದಿನ ವಿಚಾರಣೆಯನ್ನು ನಿರ್ಧರಿಸಲಾಗಿದೆ.  ಅಷ್ಟರಲ್ಲಿ ಟ್ರೈ ವ್ಯಾಲಿ ಕೇಸಿನಲ್ಲಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಸೇರಿರುವ ಎಲ್ಲರೂ ಸಮರ್ಥ ಇಮಿಗ್ರೇಷನ್ ವಕೀಲರೊಂದಿಗೆ ಮಾತಾಡಿ ಮುಂದೇನು ಮಾಡಬೇಕೆಂದು ತೀರ್ಮಾನಿಸಬೇಕಾಗುತ್ತದೆ.
    * ಜಿ.ಆರ್.ಇ, ಜಿಮ್ಯಾಟ್ ಗಳಲ್ಲಿ ಒಳ್ಳೆಯ ಅಂಕವಿರುವ ವಿದ್ಯಾರ್ಥಿಗಳು ಬೇರೆ ಯೂನಿವರ್ಸಿಟಿಗಳಿಗೆ ತಮ್ಮ ಕ್ರೆಡಿಟ್ ಗಳನ್ನು ವರ್ಗಾವಣೆ ಮಾಡಿಕೊಳ್ಳಬೇಕಾಗುತ್ತದೆ. ಹೊಸದಾಗಿ ಫೀಜು ಕಟ್ಟಿ, ಹೊಸ ವಿದ್ಯಾರ್ಥಿ-ವೀಸಾ ಪಡೆಯಬೇಕಾಗುತ್ತದೆ.
    * ವಿಚಾರಣೆ ಮುಗಿದು ಆಯಾ ವಿದ್ಯಾರ್ಥಿಗಳ ಕೇಸಿನ ತೀರ್ಮಾನ ಆಗುವವರೆಗೂ ಅವರು ಕಾನೂನಿನ ಸುಪರ್ದಿನಲ್ಲಿ ಇರಬೇಕಾಗುತ್ತದೆ. ಅಥವಾ ಈಗಾಗಲೇ ಕೆಲವು ವಿದ್ಯಾರ್ಥಿಗಳು ತೀರ್ಮಾನಿಸಿರುವಂತೆ, ತಮಗಾದ ಮೋಸದಲ್ಲಿ ತಮ್ಮ ಪಾಲನ್ನು ಒಪ್ಪಿಕೊಂಡು, ಅಮೆರಿಕಾದ ಕಾನೂನಿನೊಂದಿಗೆ ಸೆಣೆಸದೆ ಭಾರತಕ್ಕೆ ಹಿಂದಿರುಗುವುದು.
 
ರೇಡಿಯೋ ಮಾನಿಟರ್
 
ಅಮೆರಿಕನ್ ಸರ್ಕಾರ ವಿದ್ಯಾರ್ಥಿಗಳ ಕಾಲಿಗೆ ರೇಡಿಯೋ ಮಾನಿಟರ್ ಹಾಕಿ ಅವರೊಂದಿಗೆ ಅಮಾನವೀಯವಾಗಿ ವರ್ತಿಸುತ್ತಿದೆ ಎಂಬ ಪ್ರತಿಕ್ರಿಯೆ ಕೇಳಿ ಬರುತ್ತಿದೆ. ರೇಡಿಯೋ ಕಾಲರ್ ಅಥವಾ ಮಾನಿಟರ್ ಗಳನ್ನು ಕಾಡು ಪ್ರಾಣಿಗಳ ನಡೆಯನ್ನು ಗಮನದಲ್ಲಿಟ್ಟುಕೊಳ್ಳಲು ಹಾಕುತ್ತಾರೆಂದು ನಮಗೆ ಗೊತ್ತು. ಆದರೆ ಅಮೆರಿಕಾದಲ್ಲಿ ಇದು ಮನುಷ್ಯರಿಗೆ ಅಪರೂಪವಾದ್ದೇನಲ್ಲ.
 
ವಿಚಾರಣೆಗೆ ಬೇಕಾಗಿರುವ ವ್ಯಕ್ತಿ ತಪ್ಪಿಸಿಕೊಂಡು ಹೋಗದಂತೆ ನೋಡಿಕೊಳ್ಳಲು, ಅಪರಾಧವೊಂದರಲ್ಲಿ ಭಾಗಿಯಾಗಿರುವ ವ್ಯಕ್ತಿ ಮತ್ತೊಬ್ಬನೊಂದಿಗೆ ಸೇಡು ತೀರಿಸಿಕೊಳ್ಳಲು ಹೋಗದಂತೆ ತಡೆಯಲು, ಅತಿ ಮುಖ್ಯ ಅಪರಾಧಗಳಲ್ಲಿ ಸಾಕ್ಷಿಯಾದವರಿಗೆ, ಅಪರಾಧಿಯೊಬ್ಬ ಚಟಕ್ಕೆ ಬಿದ್ದವನಂತೆ ತನ್ನ ಅಪರಾಧ ಮಾಡುವ ಚಾಳಿಯನ್ನು ಮುಂದುವರೆಸಿಕೊಂಡು ಹೋಗುತ್ತಾನೋ ಎಂದು ಗಮನಿಸಿ ಕೇಸ್ ಬಿಲ್ಡ್ ಮಾಡಲು ಅಥವಾ ಜನರು-ಮಕ್ಕಳನ್ನು ಲೈಂಗಿಕವಾಗಿ ಪೀಡಿಸುವ ವ್ಯಕ್ತಿಗಳಿಗೆ (ಅವರು ಶಾಲೆ-ವಸತಿಯಿರುವ ಜಾಗಗಳತ್ತ ಹೋಗದಂತೆ ತಡೆಯಲು) ಇಲ್ಲಿ ರೇಡಿಯೋ ಮಾನಿಟರ್ ಗಳನ್ನು ಅಳವಡಿಸುತ್ತಾರೆ. ವಿಚಾರಣೆಯಾಗುವವರೆಗೂ ಜೈಲಿನಲ್ಲಿಡುವ ಬದಲು ಅವರನ್ನು ಸಮಾಜದಲ್ಲಿ ಬಿಟ್ಟು ಅವರನ್ನು ಆಗಾಗ ಮಾನಿಟರ್ ಮಾಡುವ ಇಲ್ಲಿನ ವಿಧಾನ ಇದು. ಕೆಲವೊಮ್ಮೆ ಅಪರಾಧಿಗಳ ಪ್ರಾಣಕ್ಕೆ ಅಪಾಯವಿರುವಂತಹ ಸಂದರ್ಭಗಳಲ್ಲಿಯೂ ರೇಡಿಯೋ ಮಾನಿಟರ್ ಗಳನ್ನು ಅಳವಡಿಸುತ್ತಾರೆ. ಭಾರತದ ವಿದ್ಯಾರ್ಥಿಗಳು ಅಪರಾಧಿಗಳ ಪೈಕಿಗೆ ಸೇರುವುದಿಲ್ಲ. ಆದರೆ ಅವರು ಅಪರಾಧಿಗಳೋ-ಸಂಪೂರ್ಣ ನಿರಪರಾಧಿಗಳೋ ಎಂದು ಸಾಬೀತಾಗುವ ತನಕವೂ ಅವರನ್ನು ಹಾಗೇ ಬಿಟ್ಟಿದ್ದರೆ ಅವರು ಮತ್ತೆ ಕೈಗೆ ಸಿಕ್ಕದಂತೆ ಅಮೆರಿಕಾದಲ್ಲಿ ವಿಲೀನವಾಗಿಬಿಡಬಹುದು ಎಂಬುದು ಅಮೆರಿಕಾದ ವಾದ.
 
ಟ್ರೈ ವ್ಯಾಲಿಯಲ್ಲಿ ಆಂಧ್ರಪ್ರದೇಶದವರೇ ಯಾಕೆ ಅಷ್ಟು ಮಂದಿ ಇದ್ದರು?!
 
ಟ್ರೈ ವ್ಯಾಲಿಯ ಫ್ಯಾಕಲ್ಟಿ ಲಿಸ್ಟಿನಲ್ಲಿ ಅಷ್ಟೇ ಅಲ್ಲದೆ, ಅದರ ವೆಬ್ ಸೈಟಿನಲ್ಲಿರುವ ಕೆಲವು ಮುಖ್ಯ ವಿದ್ಯಾರ್ಥಿಗಳ ಪ್ರೊಫೈಲ್ ಗಳಲ್ಲಿಯೂ ಆಂಧ್ರ ಮೂಲದವರ ಸುಮಾರು ಹೆಸರುಗಳಿವೆ. ಇಲ್ಲಿರುವ ಬೊಯಿನ್ಪಲ್ಲಿ, ಸುರಿನೇನಿ, ಕಾಂಚರಕುಂಟ್ಲ ಎಂಬ ಕೊನೆಯ ಹೆಸರಿರುವ ಮೂವರು ವಿದ್ಯಾರ್ಥಿಗಳು ದಕ್ಷಿಣ ಭಾರತದ ವಿದ್ಯಾರ್ಥಿಗಳನ್ನು ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಾಗೆ ಬರುವಂತೆ ಪ್ರೋತ್ಸಾಹಿಸುವ ಎ.ಬಿ.ಎಸ್. ಕನ್ಸಲ್ಟೆನ್ಸಿಯೊಂದನ್ನು ಭಾರತದಲ್ಲಿ ಕಟ್ಟಿಕೊಂಡಿದ್ದೇವೆ ಎಂದು ತಮ್ಮನ್ನು ಗುರುತಿಸಿಕೊಳ್ಳುತ್ತಾರೆ. ಇವರ ಕನ್ಸಲ್ಟೆನ್ಸಿ ಬಹುಃಶ ಆಂಧ್ರಪ್ರದೇಶದಲ್ಲೇ ಎಲ್ಲೋ ಇದ್ದು ಪಾಪದ ಮಿಕಗಳನ್ನು ಬಲೆಗೆ ಹಾಕಿಕೊಳ್ಳಲು ಕೆಲಸ ಮಾಡುತ್ತಿರುವ ಸಾಧ್ಯತೆಗಳಿವೆ. (http://trivalleyuniversity.org/student-profile.html).
 
ಹಾಗೇ ಭಾಸ್ಕರ್ ಮಂತ ಎನ್ನುವವರು ಟ್ರೈ ವ್ಯಾಲಿ ನಕಲಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕ ಮತ್ತು ಅಲ್ಲಿನ ಡೈರೆಕ್ಟರ್ ಆಫ್ ಸ್ಟೂಡೆಂಟ್ ಅಫೇರ್ ಆಗಿದ್ದಾರೆ (http://trivalleyuniversity.org/Intro-TVU-Mantha.pdf). ಟ್ರೈ ವ್ಯಾಲಿ ಎಂಬ ವಂಚನೆಯ ಯೂನಿವರ್ಸಿಟಿಗೆ ಸೇರಿ, ಎಲ್ಲಾ ಕಳೆದುಕೊಂಡು, ಕಾಲಿಗೆ ರೇಡಿಯೋ ಮಾನಿಟರ್ ಹಾಕಿಸಿಕೊಂಡು ದುಃಖಿಸುತ್ತಾ ಕುಳಿತಿರುವ ವಿದ್ಯಾರ್ಥಿಗಳ ಈಗಿನ ಅಫೇರ್ ವಿಚಾರಿಸಲು ಈ ಮಂತ ಎಂಬ ಮಹಾನುಭಾವ ಮುಖ ಕೂಡಾ ತೋರಿಸಿಲ್ಲ!!
 
ಇಲ್ಲಿರುವ ಸೋ ಕಾಲ್ಡ್ ಪ್ರಾಧ್ಯಾಪಕರ ವಿದ್ಯಾರ್ಹತೆ ನೋಡುವುದಕ್ಕೇ ಮಜ. ಒಂದಷ್ಟು ಜನ ಟ್ರೈ ವ್ಯಾಲಿ ’ವಿಶ್ವವಿದ್ಯಾಲಯ’ದಲ್ಲೇ ತಮ್ಮ ಮಾಸ್ಟರ್ಸ್ ಡಿಗ್ರಿ ಮುಗಿಸಿ, ಪಿ.ಎಚ್.ಡಿ ಯನ್ನು ಮಾಡಿಕೊಳ್ಳುತ್ತಿದ್ದಾರೆ. ಅಥವಾ ಅಲ್ಲಿಯೇ ಪಕ್ಕದ ಸಿಟಿಯಲ್ಲಿ ಇರುವ ಹರ್ಗ್ಯುಆನ್ ಎಂಬ ಇನ್ನೊಂದು ನಕಲಿ ವಿಶ್ವವಿದ್ಯಾಲಯದಿಂದ ಮಾಸ್ಟರ್ಸ್ ಪದವಿ ಪಡೆದಿದ್ದಾರೆ! ನಿಮಗೆ ಸಮಯವಿದ್ದರೆ ಒಮ್ಮೆ ನೋಡಿ (http://trivalleyuniversity.org/faculty.htm). ಅವರೇ ಕಟ್ಟಿಕೊಂಡಿರುವ ಎಜುಕೇಷನ್ ಮಾಫಿಯಾ ಒಂದರಲ್ಲಿ ಎಲ್ಲರೂ ಹೇಗೆ ಪಟ್ಟ ಕಟ್ಟಿಕೊಂಡು ಕುಳಿತಿದ್ದಾರೆ ಅಂತ!
 
ಒಟ್ಟಿನಲ್ಲಿ, ಅಮೆರಿಕಾದಲ್ಲಿ  ಲೀಗಲ್ ಆಗೋ, ಇಲ್ಲೀಗಲ್ ಆಗೋ ಸೆಟಲ್ ಆಗಿ ಬಿಡಬೇಕೆನ್ನುವವರಿಗೆ ಟ್ರೈ ವ್ಯಾಲಿ ಯೂನಿವರ್ಸಿಟಿ ವರವಾಗಿತ್ತು. ಇಲ್ಲಿನ ಫಾಕಲ್ಟಿ, ಪ್ರೊಫೆಸರ್ ಗಳ ಪಟ್ಟಿಯಲ್ಲಿ ಸಮುದ್ರದಷ್ಟು ಚೀನೀ ಹೆಸರುಗಳೂ, ಬಹಳಷ್ಟು ಮಂದಿ ಭಾರತೀಯ, ಆಂಧ್ರ ಮೂಲದ ಪ್ರೊಫೆಸರ್ಗಳ ಹೆಸರೂ ಇರುವುದನ್ನು ನೋಡಿದರೆ ವಿದ್ಯಾರ್ಥಿಗಳಿಗೆ ಈ ಯೂನಿವರ್ಸಿಟಿಯ ಬಂಡವಾಳ ಮುಂಚೆಯೇ ಗೊತ್ತಿರಬಹುದು ಎನ್ನಿಸುತ್ತದೆ. ಈ ಪಟ್ಟಿಯಲ್ಲಿ ಕರ್ನಾಟಕದ ಧಾರವಾಡ ಯೂನಿವರ್ಸಿಟಿಯಲ್ಲಿ ಪದವೀಧರರಾದ ಒಬ್ಬ ಪ್ರೊಫೆಸರ್ ಕೂಡಾ ಇದ್ದಾರೆ. ಇವರೆಲ್ಲರ ಹೆಸರುಗಳನ್ನು ಅವರಿಗೆ ತಿಳಿಯದೆ ಅಥವಾ ತಿಳಿದೇ ಬಳಸಿಕೊಳ್ಳಲಾಗಿತ್ತೋ ಅಥವಾ ಇವರೆಲ್ಲರೂ ಈ ಮಾನವ ಸಾಗಾಣಿಕೆಯ ಅಪರಾಧದಲ್ಲಿ ಸಮಾನ ಪಾಲುಗಾರರೋ ಎಂಬುದು ಸಧ್ಯದಲ್ಲಿಯೇ ತಿಳಿದುಬರಲಿದೆ.
 
ಯಶಸ್ಸು-ಸುಖ ಎಲ್ಲವೂ ಸುಲಭವಾಗಿ ದೊರಕಿಬಿಡಬೇಕೆಂದು ಪೋಷಕರನ್ನು ಸುಧಾರಿಸಿಕೊಳ್ಳಲಾಗದಂತೆ ಘಾಸಿ ಮಾಡಿ, ಅಡ್ಡ ದಾರಿ ಹಿಡಿದು ನಂತರ ನಮಗೇನೂ ಗೊತ್ತಿರಲಿಲ್ಲ ಎಂದು ಸಂಪೂರ್ಣ ಅಮಾಯಕರಾಗಹೊರಟಿರುವ ಈ ವಿದ್ಯಾರ್ಥಿಗಳ ಕುರಿತು ಅಮೆರಿಕಾದಲ್ಲಿರುವ ಭಾರತೀಯರಿಗೆ ಅನುಕಂಪವೆಷ್ಟಿದೆಯೋ ಅಷ್ಟೇ ಬೇಸರವೂ ಇದೆ. ಈ ವಿದ್ಯಾರ್ಥಿಗಳ ಸಹಾಯಕ್ಕೆಂದು ಭಾರತೀಯ ಮೂಲದ ಇಮಿಗ್ರೇಷನ್ ವಕೀಲರು ಹೆಲ್ಪ್ ಲೈನ್ ಗಳನ್ನು ಮಾಡಿದ್ದಾರೆ. ಹಲವಾರು ಭಾರತೀಯ ಸಂಸ್ಥೆಗಳು ವಿಚಾರಣೆ ಮುಗಿಯುವವರೆಗೂ ನೆರವು ಮಾಡಲು ಮುಂದೆ ಬಂದಿವೆ. ಅಮೆರಿಕಾದ ತೆಲುಗು ಸಂಘವೂ ಧಾರಾಳವಾಗಿ ಸಹಾಯ ಮಾಡಲು ಮುಂದೆ ಬಂದಿದೆ.
 
ಎಸ್. ಎಂ.ಕೃಷ್ಣ, ಹಿಲರಿ ಕ್ಲಿಂಟನ್ ರೊಡನೆ ಮಾತಾಡಿದ್ದಾರೆ. ಐದು ಜನ ವಿದ್ಯಾರ್ಥಿಗಳ ಕಾಲಿಂದ ಮಾನಿಟರ್ ತೆಗೆಯಲಾಗಿದೆ. ೧೫-೨೦ ಮಂದಿ ಹೊಸ ವಿದ್ಯಾರ್ಥಿಗಳು ಮತ್ತೆಂದೂ ತಾವು ಅಮೆರಿಕಾಗೆ ಬರುವುದಿಲ್ಲ, ದೇಶಕ್ಕೆ ಹಿಂತಿರುಗುತ್ತಿದ್ದೇವೆ ಎಂದು ತಿಳಿಸಿ ಹೊರಡುತ್ತಿದ್ದಾರೆ. ಆದರೆ ಈ ವೀಸಾ ಪಾತಕದಲ್ಲಿ ಭಾಗಿಯಾಗಿರುವ ಸಾವಿರಾರು ಜನರನ್ನು ಅಮೆರಿಕಾ ಹೇಗೆ ನಡೆಸಿಕೊಳ್ಳುತ್ತದೆ ಎನ್ನುವುದು ಆಸಕ್ತಿಯ ವಿಷಯ.
 
ಆದರೂ...ಆಟಗಳಲ್ಲಿ ಪಾಲ್ಗೊಳ್ಳದೆ, ಕಷ್ಟಪಟ್ಟು ಓದಿ, ಜಿ.ಆರ್.ಇ, ಜಿಮ್ಯಾಟ್ ನಂತ ಪರೀಕ್ಷೆ ಬರೆದು, ಒಳ್ಳೆಯ ಅಂಕಗಳನ್ನು ಪಡೆದು, ಅಮೆರಿಕಾದ ಉತ್ತಮೋತ್ತಮ ಯೂನಿವರ್ಸಿಟಿಗಳಲ್ಲಿ ದಾಖಲಾಗಿ, ಅಪ್ಪ ಅಮ್ಮಂದಿರ ಹತ್ತಿರ ಹಣ ಪೀಡಿಸದೆ, ಇಲ್ಲಿನ ರೆಸ್ಟೊರಾಂಟ್ಗಳಲ್ಲೋ-ಮಾಲ್ ಗಳಲ್ಲೋ ಸಣ್ಣ ಪುಟ್ಟ ಕೆಲಸ ಮಾಡಿ, ಮೈ ಮುರಿದು ಓದಿ ಡಿಗ್ರಿ ಪಡೆದು, ಬುದ್ಧಿವಂತರು-ಕಷ್ಟಪಡುವವರು ಎಂದು ಹೆಸರು ಗಳಿಸಿ, ವಿಶ್ವದೆಲ್ಲೆಡೆ ಒಳ್ಳೆಯ-ಹೆಮ್ಮೆಯ ಬದುಕು ಬದುಕುತ್ತಿರುವ ಲಕ್ಷಾಂತರ ಭಾರತೀಯ ವಿದ್ಯಾರ್ಥಿಗಳಿಗೆ ಈ ಘಟನೆ ನಿಜಕ್ಕೂ ತಲೆತಗ್ಗಿಸುವಂತೆ ಮಾಡಿದೆ.  
 


 




ಬಹು ಭಾಷಿಗಳಿಗೆ ಹೆದರುವ ಆಲ್ಜ಼ೈಮರ್!

ಆಲ್ಜ಼ೈಮರ್ ಖಾಯಿಲೆ ಗೊತ್ತಲ್ಲ...
ಮುಪ್ಪು ಬರುತ್ತಿದ್ದಂತೇ ನೆನಪಿನ ಶಕ್ತಿಯೆಲ್ಲ ಮಾಸಿ ಕಡೆಗೊಂದು ದಿನ ಮಕ್ಕಳು-ಮೊಮ್ಮಕ್ಕಳನ್ನೂ ಗುರುತಿಸಲಾಗದಂತೆ ಆಗುವ ಮೆದುಳಿನ ವಿಚಿತ್ರ ಪರಿಸ್ಥಿತಿ. ಮಧ್ಯಾನ್ಹದ ಊಟ ಮಾಡಿ ಹತ್ತು ನಿಮಿಷವಾಗಿರುವುದಿಲ್ಲ, ಊಟ ಮಾಡಿರುವುದೂ ಮರೆತು ಹೋಗಿರುತ್ತದೆ! ಮಕ್ಕಳು, ಮನೆಯವರು, ಮಿತ್ರರ ಮುಖಗಳೂ ಸ್ಮೃತಿಯಿಂದ ಅಳಿಸಿ ಹೋಗಿರುತ್ತದೆ. ಈ ಆಲ್ಜ಼ೈಮರ್ ಅನುಭವಿಸುವವರನ್ನು ಎಷ್ಟು ದಿಕ್ಕುಗೆಡಿಸುವ ಖಾಯಿಲೆಯೋ ಅದಕ್ಕಿಂತ ಹತ್ತು ಪಟ್ಟು ಹೆಚ್ಚಾಗಿ ಆ ಖಾಯಿಲೆಯಿಂದ ಕಷ್ಟ ಪಡುವವರ ಹತ್ತಿರದ ಸಂಬಧಿಗಳನ್ನು ಕಾಡಿಸುತ್ತದೆ.
 
ಇತ್ತೀಚಿನ ವರದಿಯೊಂದರ ಪ್ರಕಾರ ಪಾಶ್ಚಾತ್ಯ ದೇಶಗಳಲ್ಲಿ ವಯಸ್ಸಾಗುತ್ತಿರುವವರು ಭಯಂಕರ ಹೆದರುವುದು ಎರಡು ಖಾಯಿಲೆಗಳಿಗೆ ಮಾತ್ರ. ಒಂದು ಕ್ಯಾನ್ಸರ್ ಮತ್ತೊಂದು ಆಲ್ಜ಼ೈಮರ್.
 
ಆದರೆ ಆಲ್ಜ಼ೈಮರ್ ಗೆ ಹೆದರುವವರಿಗೆ ಈಗ ಆಸಕ್ತಿಕರ ಚಿಕಿತ್ಸೆಯೊಂದು ಹೊರಬಂದಿದೆ. ಒಂದಕ್ಕಿಂತ ಹೆಚ್ಚು ಭಾಷೆಗಳನ್ನು ಕಲಿತಿರುವವರಲ್ಲಿ ಆಲ್ಜ಼ೈಮರ್ ಬರುವ ಸಾಧ್ಯತೆ ಕಡಿಮೆ, ಬಂದರೂ ಅತ್ಯಂತ ತಡವಾಗಿ ಬರುತ್ತದೆ ಎಂದು ಅಧ್ಯಯನವೊಂದು ತಿಳಿಸುತ್ತದೆ. ಎರಡು ಭಾಷೆ ಬರುವವನಿಗಿಂತಲೂ ನಾಲ್ಕು ಭಾಷೆ ಬರುವವನಿಗೆ ಆಲ್ಜ಼ೈಮರ್ ನ ಕಾಟ ಕಡಿಮೆ ಎಂದು ಅಭಿಪ್ರಾಯ ಪಡಲಾಗಿದೆ. ಭಾಷೆಗಳನ್ನು ಕಲಿಯುವುದು ಮೆದುಳಿಗೆ ಅತ್ಯಂತ ಒಳ್ಳೆಯ ಎಕ್ಸರ್ಸೈಜ಼್ ಅಂತೆ. ವಯಸ್ಕರೆಲ್ಲರೂ ಖುಶಿ-ಹವ್ಯಾಸಕ್ಕಾಗಿಯಾದರೂ ಯಾವುದಾದರೂ ಭಾಷೆಯೊಂದನ್ನು ಕಲಿಯುವುದು ಮೆದುಳಿನ ಆರೋಗ್ಯದ ದೃಷ್ಟಿಯಿಂದ, ಆಲ್ಜ಼ೈಮರ್ ದೃಷ್ಟಿಯಿಂದ ಬಹಳ ಒಳ್ಳೆಯದು ಎಂದು ವಿಜ್ನಾನಿಗಳು ಸಲಹೆ ಕೊಟ್ಟಿದ್ದಾರೆ.  








ಪಿರಮಿಡ್ ಗಳ ನಾಡಲ್ಲಿ ಕಿಚ್ಚು

ಟ್ಯುನಿಶಿಯಾದಲ್ಲಿ ಪುಟ್ಟದಾಗಿ ಶುರುವಾದ ಅರಬ್ ಪ್ರಾಂತ್ಯದ ಹೊಸ ಕ್ರಾಂತಿ ಕಿಡಿ ಈಗ ಈಜಿಪ್ಟ್ ಅನ್ನು ಹತ್ತಿ ಉರಿಸುತ್ತಿದೆ. ಸಾಕಪ್ಪಾ ನಿನ್ನ ದಬ್ಬಾಳಿಕೆ ಎಂದು ಟ್ಯುನಿಶಿಯಾದ ಜನರು ಅಲ್ಲಿನ ಅಧ್ಯಕ್ಷ ಜ಼ಿನೆ ಬೆನ್ ಅಲಿ ಯನ್ನು ಡಿಸೆಂಬರ್ ೧೭ರಂದು ಪಟ್ಟದಿಂದ ಇಳಿಸಿದ್ದರು. ಅದೇ ಕಿಡಿ ನಿಧಾನಕ್ಕೆ ಈಜಿಪ್ಟ್ ಗೆ ನುಸುಳಿದೆ. ಈಗ ಈಜಿಪ್ಟ್ ನ ಜನ ೨೯ ವರ್ಷದಿಂದ ಈಜಿಪ್ಟ್ ಅನ್ನು ಆಳುತ್ತಿರುವ ಹೊಸ್ನಿ ಮುಬಾರಕ್ ರನ್ನು ಇಳಿಸಬೇಕೆಂದು ಪಟ್ಟು ಹೆಚ್ಚಿಸುತ್ತಿದ್ದಾರೆ. ಇಸ್ರೇಲ್ ಗೆ ಯಾವ ತೊಂದರೆಯೂ ಕೊಡದಂತೆ, ಅಮೆರಿಕಾದ ತೈಲಾಸಕ್ತಿಗೆ ಯಾವ ಅಡ್ಡಿಯೂ ಬರದಂತೆ ನೋಡಿಕೊಳ್ಳುತ್ತಿದ್ದ ಈಜಿಪ್ಟ್ ನ ಅಧ್ಯಕ್ಷ, ಅಮೆರಿಕನ್ ಮಿತ್ರ ಹೊಸ್ನಿ ಮುಬಾರಕ್ ಆಡಳಿತದಿಂದ ರೋಸಿಹೋಗಿದ್ದ ಜನ ನಮಗೆ ಹೊಸ್ನಿಯ ಸರ್ವಾಧಿಕಾರ ಸಾಕು, ಪ್ರಜಾಪ್ರಭುತ್ವ ಬೇಕು ಎಂದು ಹೋರಾಟ ಆರಂಭಿಸಿದ್ದಾರೆ. ಅಮೆರಿಕಾ ಹುಶಾರಾಗಿ ಇದೆಲ್ಲ ಬೆಳವಣಿಗೆಗಳನ್ನೂ ಗಮನಿಸುತ್ತಿದೆ.
 
ಹೊಸ್ನಿ ಮುಬಾರಕ್ ಕೆಳಗಿಳಿದು ನಿಜಕ್ಕೂ ಈಜಿಪ್ಟ್ ನ ಜನ ಪ್ರಜಾಪ್ರಭುತ್ವದ ಮಾದರಿಯಲ್ಲಿ ಇಸ್ಲಾಮ್ ಸರ್ಕಾರವನ್ನೇನಾದರೂ ಸ್ಥಾಪಿಸಿಬಿಟ್ಟರೆ ಅರಬ್ ಪ್ರಪಂಚದಲ್ಲಿ ಹೊಸ ಸಂಚಲನ ಆಗುವುದರಲ್ಲಿ ಅನುಮಾನವಿಲ್ಲ. ಈಗಾಗಲೇ ಉತ್ತರ ಸೂಡಾನ್, ಸಿರಿಯಾದಲ್ಲಿ ಇದೇ ಬಗೆಯ ಹೋರಾಟ ಆರಂಭವಾಗುವ ಎಲ್ಲ ಸೂಚನೆಗಳೂ ಕಾಣುತ್ತಿವೆ.





 
 
 
 
 
Copyright © 2011 Neemgrove Media
All Rights Reserved