ಈಕೆಯ ಐಡೆಂಟಿಟಿಯೇ ಅಮ್ಮ ಎಂದು. ತಾಯ್ತನದ ನೆರಳಿನಲ್ಲೇ ಚಿಗುರಿದ ದಿಟ್ಟ ಹೋರಾಟಗಾರ್ತಿ ಈಕೆ. ಎಲ್ಲ ತಾಯಂದಿರಿಗಿರುವ ವಾತ್ಸಲ್ಯ, ಅದೇ ಮಮತೆ, ಅದೇ ಮಿಡಿತವಿದ್ದರೂ ಈಕೆಯದ್ದು ಅಸಾಧಾರಣ ಮನಸ್ಥೈರ್ಯ.
ಬಾರ್ಬರಾಗೆ ಕೆವಿನ್ ಎಂಬ ಪುಟ್ಟ ಮಗನಿದ್ದ. ೨೦೦೧ ರ ಜುಲೈ ನಲ್ಲಿ ಬಾರ್ಬರಾ ಕೊವಾಲ್ಚಿಕ್ ತನ್ನ ಗಂಡ ಮತ್ತು ೨ ವರ್ಷದ ಮಗ ಕೆವಿನ್ ಜೊತೆ ರಜಾ ದಿನಗಳನ್ನು ಕಳೆಯಲು ಊರೊಂದಕ್ಕೆ ಪ್ರವಾಸ ಹೋದರು. ಆರೋಗ್ಯಕರವಾಗಿ ಖುಷಿಯಾಗಿ ಆಟ ಆಡಿಕೊಂಡಿದ್ದ ಪುಟಾಣಿ ಕೆವಿನ್ ಒಂದು ದಿನ ಹ್ಯಾಮ್ ಬರ್ಗರ್ (ಹಂದಿಯ ಮಾಂಸದಿಂದ ತಯಾರಿಸುವ ಪ್ಯಾಟಿ ಮತ್ತು ಬನ್) ತಿಂದು ಅಸ್ವಸ್ಥನಾದ. ವಾಂತಿ-ಬೇಧಿ ಶುರುವಾಯಿತು. ಅವನ ಬೇಧಿಯಲ್ಲಿದ್ದ ರಕ್ತದ ಕಲೆಗಳನ್ನು ಕಂಡು ಗಾಬರಿಯಾದ ಬಾರ್ಬರಾ ಮಗನನ್ನು ತುರ್ತುಚಿಕಿತ್ಸಾ ಘಟಕಕ್ಕೆ ಕರೆದೊಯ್ದರು. ಅಲ್ಲಿ ಕೆವಿನ್ ನ ರಕ್ತ ಪರೀಕ್ಷೆ ಮಾಡಿ ಅವನಿಗೆ ಇ ಕೊಲೈ ಒ೧೫೭:ಎಚ್೭ ಎಂಬ ಬ್ಯಾಕ್ಟೀರಿಯಾದ ಅಟ್ಯಾಕ್ ಆಗಿದೆಯೆಂದು ತಿಳಿಸಲಾಯಿತು. ಎರಡೇ ದಿನಗಳಲ್ಲಿ ಕೆವಿನ್ ನ ಎರಡೂ ಕಿಡ್ನಿಗಳು ಕೆಲಸ ಮಾಡುವುದನ್ನು ನಿಲ್ಲಿಸಿದವು. ಡಯಾಲಿಸಿಸ್ ಮಾಡಿದರೂ ಫಲಕಾರಿಯಾಗದೆ ಹನ್ನೆರಡು ದಿನಗಳಲ್ಲಿ ಕೆವಿನ್ ತೀರಿ ಹೋದ.
ತಿನ್ನು ಕಂದಾ ಎಂದು ಸ್ವತಃ ಅಮ್ಮ ಉಣಿಸುವ ಆಹಾರವೊಂದು ಅವಳ ಮಗುವಿನ ಪ್ರಾಣವನ್ನೇ ತೆಗೆದುಕೊಂಡುಬಿಟ್ಟರೆ ಅಮ್ಮನ ಸ್ಥಿತಿ ಏನಾಗಬೇಡ! ಆರೋಗ್ಯಕರವಾಗಿ ಗಟ್ಟಿಮುಟ್ಟಾಗಿದ್ದ ಮಗು ಅಮೆರಿಕಾದ ಜನ ದಿನವಿಡೀ ತಿನ್ನುವ ಹ್ಯಾಮ್ ಬರ್ಗರ್ ತಿಂದು ಹಠಾತ್ತನೆ ತೀರಿಯೇ ಹೋದದ್ದನ್ನು ಅರಗಿಸಿಕೊಳ್ಳಲಾಗದ ಅಮ್ಮ ಬಾರ್ಬರಾ ಮಗನ ಸಾವಿಗೆ ನಿಜವಾದ ಕಾರಣ ಹುಡುಕಲು ನಿಂತರು.
ಕೆವಿನ್ ತಿಂದ ಹ್ಯಾಮ್ ಬರ್ಗರ್ ಗೆ ಬಳಕೆಯಾಗಿದ್ದ ಮಾಂಸ ಇ ಕೊಲೈ ಒ೧೫೭:ಎಚ್೭ ಎಂಬ ಬ್ಯಾಕ್ಟೀರಿಯಾದ ಸೋಂಕಿಗೆ ಒಳಗಾಗಿತ್ತು. ಇ ಕೊಲೈ ಬ್ಯಾಕ್ಟೀರಿಯಾ ಬಿಸಿರಕ್ತ ಜೀವಿಗಳ ಸಣ್ಣ ಕರುಳುಗಳಲ್ಲಿರುವ ಹಲವಾರು ಸಾಧಾರಣ ಬ್ಯಾಕ್ಟೀರಿಯಾಗಳಲ್ಲಿ ಒಂದು. ಇದು ತಾನು ವಾಸಿಸುವ ಜೀವಿಗಳ ಜೀರ್ಣಕ್ರಿಯೆಗೆ ಸಹಾಯ ಮಾಡುವ ಪ್ರೋ ಬ್ಯಾಕ್ಟೀರಿಯಾ ಕೂಡಾ ಹೌದು. ಇ ಕೊಲೈ ಬ್ಯಾಕ್ಟೀರಿಯಾದ ಇರುವನ್ನು ೧೮೮೫ ರಲ್ಲಿ ಜರ್ಮನಿಯ ಮಕ್ಕಳ ತಜ್ನ ಥಿಯೊದೋರ್ ಎಶೆರಿಚ್ ಎಂಬುವವರು ಬೆಳಕಿಗೆ ತಂದಿದ್ದರಾದ್ದರಿಂದ ಈ ಬ್ಯಾಕ್ಟೀರಿಯಾವನ್ನು ಇ ಕೊಲೈ ಎಂದೇ ಕರೆಯಲಾಯಿತು. ಇ ಕೊಲೈಗಳೆಲ್ಲವೂ ಹಾನಿಕಾರಕವಲ್ಲ. ಆದರೆ ಇವು ತಮ್ಮ ಪರಿಸರದ ಶಾಖ-ಶೀತಗಳನ್ನನುಸರಿಸಿ ಸುಲಭವಾಗಿ ಪರಿವರ್ತಿತವಾಗಬಲ್ಲವು. ಹಾಗೆ ಪರಿವರ್ತಿತವಾದಾಗ ಪಡೆಯುವ ಹಲವಾರು ರೂಪಗಳು ಮನುಷ್ಯನ ದೇಹಕ್ಕೆ ಸೇರಿದಾಗ ಅನಾಹುತ ಮಾಡಿಬಿಡಬಲ್ಲವು. ಹಾಗೆ ಪ್ರಾಣಕ್ಕೇ ಕುತ್ತು ತರಬಲ್ಲ ಹಲವಾರು ಪರಿವರ್ತಿತ ರೂಪಗಳಲ್ಲಿ ಇ ಕೊಲೈ ೦೧೫೭:ಎಚ್೭, ೦೧೨೧, ೦೧೦೪:ಎಚ್೨೧ ಇತ್ಯಾದಿಗಳು ಸೇರುತ್ತವೆ. ಈ ರೂಪಗಳು ಮನುಷ್ಯನ ದೇಹ ಸೇರಿದಾಗ ಮಾರಣಾಂತಿಕ ವಿಷಗಳನ್ನು ಉತ್ಪಾದಿಸುತ್ತವೆ. ಮನುಷ್ಯರಿಗೆ ಮೂತ್ರ ನಾಳದ ಸೋಂಕು, ಜೀರ್ಣಾಂಗದ ಅಸ್ವಸ್ಥತೆಯಂತಹ ತೊಂದರೆಗಳಷ್ಟೇ ಅಲ್ಲದೇ ತಾವು ಸೇರಿದ ಆಹಾರ ತಮ್ಮ ಪರಿವರ್ತನೆಗೆ ಸಹಕಾರಿಯಾಗುವಂತಿದ್ದರೆ ಇಡೀ ಆಹಾರವನ್ನೇ ವಿಷವನ್ನಾಗಿಸಿಬಿಡುತ್ತವೆ. ಮಕ್ಕಳಿಗೆ, ವೃದ್ಧರಿಗೆ, ರೋಗ ನಿರೋಧಕ ಶಕ್ತಿ ಕಡಿಮೆ ಇರುವಂಥವರಿಗೆ ಇ ಕೊಲೈಯಿಂದ ಹೆಚ್ಚಿನ ಅಪಾಯ.
ಇ ಕೊಲೈ ಬಿಸಿರಕ್ತ ಜೀವಿಗಳಲ್ಲಿ ಮಾತ್ರವಲ್ಲದೇ ಎಲ್ಲಿ ಬೇಕಾದರೂ ಸ್ವಚ್ಚಂದವಾಗಿ ಜೀವಿಸಲು ಸಾಮರ್ಥ್ಯವಿರುವ ಬ್ಯಾಕ್ಟೀರಿಯಾ. ಹೊಸ ಪರಿಸರಗಳಿಗೆ ಹೊಸ ಹೊಸ ಪೀಡಕ ರೂಪಕ್ಕೆ ಮ್ಯುಟೇಟ್ ಆಗಿಬಿಡುವ ಬ್ಯಾಕ್ಟೀರಿಯ. ಸರಿಯಾಗಿ ತೊಳೆಯದೆ ತಿನ್ನುವ ಹಣ್ಣು ತರಕಾರಿಗಳಲ್ಲಿ, ಶುಚಿಯಾಗಿಡದೆ-ಹಳತಾದ ಆಹಾರ/ಮಾಂಸಾಹಾರ ಪದಾರ್ಥಗಳಲ್ಲಿ, ಆರೋಗ್ಯಕರವಾಗಿಲ್ಲದ ಕೋಳಿ-ಕುರಿ ಇತ್ಯಾದಿಗಳನ್ನು ಆಹಾರಕ್ಕೆ ಬಳಸುವುದರಿಂದ, ಆಹಾರವನ್ನು ಸರಿಯಾಗಿ ಬೇಯಿಸದೇ ತಿನ್ನುವುದರಿಂದ ಇ ಕೊಲೈ ಬ್ಯಾಕ್ಟೀರಿಯಾ ತನ್ನ ಮಾರಣಾಂತಿಕ ರೂಪಗಳಿಗೆ ಪರಿವರ್ತನೆ ಆಗಲು ಅವಕಾಶ ಮಾಡಿಕೊಟ್ಟಂತಾಗುತ್ತದೆ.
ಅಮೆರಿಕಾದಲ್ಲಿ ಆಹಾರ ಜನ್ಯ ರೋಗಗಳಿಂದ (ಸಂಸ್ಕರಿಸಿದ ಆಹಾರಗಳೂ ಈ ಸಾವುಗಳಿಗೆ ಕಾರಣ) ಪ್ರತಿವರ್ಷವೂ ಸಾವಿರಾರು ಜನರು ಸಾಯುತ್ತಾರೆ. ಫುಡ್ ಪಾಯ್ಸನ್, ಜೀರ್ಣಾಂಗದ ಖಾಯಿಲೆಗಳಿಂದಾಗಿ ನರಳಾಡುತ್ತಾರೆ. ಇದಲ್ಲದೇ ಸ್ಥೂಲಕಾಯತ್ವ, ಡಯಾಬಿಟೀಸ್ ನಂತಹ ರೋಗಗಳಿಂದ ಕಷ್ಟಕ್ಕೊಳಗಾಗುತ್ತಾರೆ. ಇಂತಹವರಲ್ಲಿ ಹೆಚ್ಚಿನವರು ಆಸ್ಪತ್ರೆಗಳಲ್ಲಿ ಔಷಧಕ್ಕೆ ಸಾಲು ನಿಲ್ಲುತ್ತಾರೇ ಹೊರತು ತಮಗಾದ ಕಾಯಿಲೆಗೆ ಮೂಲ ಏನು ಎಂಬುದನ್ನು ಪ್ರಶ್ನಿಸಲೂ ಹೋಗುವುದಿಲ್ಲ. ಅಮ್ಮ ಬಾರ್ಬರಾ ವಿಶೇಷವೆನಿಸುವುದು ಇಲ್ಲೇ.
ಕೆವಿನ್ ತಿಂದ ಹ್ಯಾಮ್ ಬರ್ಗರ್ ಮಾರಿದ ರೆಸ್ಟೋರಾಂಟ್, ಆ ರೆಸ್ಟೋರಾಂಟ್ ಗೆ ಮಾಂಸ ಸರಬರಾಜು ಮಾಡಿದ ಕಂಪನಿ ಇವುಗಳ ಮೂಲ ಹುಡುಕಲು ಹೊರಟ ಬಾರ್ಬರಾ ಕಂಡ ಸತ್ಯಗಳು ಅನೇಕ. ಅಮೆರಿಕಾದ ಆಹಾರ ಕೈಗಾರಿಕೆ ಯಾವ ಮಟ್ಟದ ದುಸ್ಥಿತಿಯಲ್ಲಿದೆ? ಅಮೆರಿಕಾದ ಮನೆಗಳಲ್ಲಿ ಬಳಕೆಯಾಗುವ ಮಾಂಸ-ಹಾಲಿನ ಪದಾರ್ಥಗಳು ನಿಜಕ್ಕೂ ಯಾವ ಕ್ವಾಲಿಟಿಯದ್ದು ಎಂಬುದನ್ನು ತಿಳಿದ ಆಕೆ ಅಮೆರಿಕಾದ ಜನರಿಗೆ ಆಹಾರ ಉತ್ಪಾದನೆ, ಸರಬರಾಜು ಮಾಡುತ್ತಿರುವ ಕಾರ್ಪೋರೇಷನ್ ಗಳ ವಿರುದ್ಧವೇ ಯುದ್ಧಕ್ಕೆ ನಿಂತರು.
ಚಂದ ಚಂದದ ಪ್ಯಾಕ್ ಗಳಲ್ಲಿರುವ, ಇದಕ್ಕಿಂತ ಉತ್ಕೃಷ್ಟ ಇಲ್ಲ ಎಂಬ ಲೇಬಲ್ಲಿನಡಿ ಬರುವ ಆಹಾರ ಪದಾರ್ಥಗಳನ್ನು ಯಾವ ಅನುಮಾನವೂ ಇಲ್ಲದೆ ತಿಂದು ಅರ್ಥವಾಗದ ರೋಗಗಳನ್ನು ಅನುಭವಿಸುವ, ಸತ್ತೇ ಹೋಗುವ ಜನರಿಗೆ ತಾವು ಉಣ್ಣುವ ಊಟದಲ್ಲಿ ಏನಿದೆ? ಯಾರು ಅದನ್ನು ತಯಾರಿಸುತ್ತಾರೆ? ಹೇಗೆ ತಯಾರಿಸುತ್ತಾರೆ? ಆಹಾರವನ್ನು ಎಷ್ಟು ಶುಚಿಯಾಗಿ ತಯಾರು ಮಾಡುತ್ತಾರೆ ಎಂಬ ಸತ್ಯ ಗೊತ್ತಗಬೇಕು. ನನ್ನಂತಹ ತಾಯಂದಿರು ಗೊತ್ತೇ ಇರದೆ ತಮ್ಮ ಮಕ್ಕಳಿಗೆ ತಾವೇ ವಿಷಪ್ರಾಶನ ಮಾಡಿಸುವಂತಾಗಬಾರದು. ನಮ್ಮ ಆಹಾರದ ಜವಾಬ್ದಾರಿಯುತ ಆಯ್ಕೆ ನಮ್ಮದಾಗಬೇಕು ಮತ್ತು ಹೀಗಾಗಲು ಸರ್ಕಾರದ ನೆರವೂ ಬೇಕು ಎಂದು ಆಶಿಸಿದ ಬಾರ್ಬರಾ ಆಹಾರದ ಲೇಬಲ್ಲುಗಳ ಮೇಲೆ ಅವು ಎಲ್ಲಿ ತಯಾರಾಗುತ್ತವೆ? ಯಾವ ತಯಾರಿಕಾ ಘಟಕದಲ್ಲಿ? ಆ ಘಟಕ ಯಾವ ಕಂಪನಿಯ ಸ್ವಾಧೀನದಲ್ಲಿದೆ ಎಂಬುದನ್ನು ಲೇಬಲ್ಲುಗಳ ಮೇಲೆ ನಮೂದಿಸುವಂತೆ ಕಾನೂನು ಮಾಡಲು ಸರ್ಕಾರದ ಮೊರೆ ಹೊಕ್ಕರು.
ಆಹಾರ ಪದಾರ್ಥಗಳ ಗುಣಮಟ್ಟವನ್ನು ನಿರ್ಧರಿಸುವಲ್ಲಿ, ಕಳಪೆ ಆಹಾರ ಮಾರುಕಟ್ಟೆಗೆ ಬರುವುದನ್ನು ನಿಯಂತ್ರಿಸುವಲ್ಲಿ, ಸರ್ಕಾರ ನಿರ್ಧರಿಸಿದ ಗುಣಮಟ್ಟಕ್ಕೆ ತಕ್ಕನಾಗಿ ತಯಾರಾಗದ ಆಹಾರ ಪದಾರ್ಥಗಳನ್ನು-ಅವು ತಯಾರಾಗುವ ಘಟಕಗಳನ್ನು ಮುಚ್ಚಿಸುವಲ್ಲಿ ಅಮೆರಿಕನ್ ಸರ್ಕಾರದ ಪಾತ್ರ ದೃಢವಾಗಬೇಕು, ಬಲವಾಗಬೇಕು ಎಂದು ಕಾನೂನೊಂದನ್ನು ರಚಿಸಲು ಕೇಳಿಕೊಂಡರು. ಅವರಿಗೆ ಒಂದಿಬ್ಬರು ಕಾಳಜಿಯ ರಾಜಕಾರಣಿಗಳ ಬೆಂಬಲ ಸಿಕ್ಕಿತ್ತು. ಅವರ ಹುಯಿಲನ್ನು ’ಕೆವಿನ್ ನ ಕಾನೂನು’ (Kevin's Law) ಎಂದೇ ಹೆಸರಿಟ್ಟು ೨೦೦೫ ರಲ್ಲಿ ಸರ್ಕಾರದ ಮುಂದಿಡಲಾಯಿತು. ಆದರೆ ಅಮ್ಮ ಬಾರ್ಬಾರಾರ ಕಾನೂನಿಗೆ ಮೊದಲು ತಡೆ ಒಡ್ಡಿದ್ದು ಯಾರು ಗೊತ್ತಾ? ಅಮೆರಿಕಾದ ಆಹಾರ ಸರಬರಾಜು-ಉತ್ಪನ್ನಗಳ ವ್ಯವಸ್ಥೆಯನ್ನು ಸಂಪೂರ್ಣ ತೆಕ್ಕೆಯಲ್ಲಿಟ್ಟಿಕೊಂಡಿರುವ ಟೈಸನ್, ಕ್ರಾಫ್ಟ್, ಜೆನೆರಲ್ ಮಿಲ್, ನೆಸ್ಲೇ, ಸ್ಮಿತ್ ಫ಼ೀಲ್ಡ್ ಫುಡ್ಸ್ ನಂತಹ ಕಾರ್ಪೋರೇಷನ್ ಗಳು!
ಕಾರ್ಪೋರೇಷನ್ v/s ಅಮ್ಮ ಬಾರ್ಬರಾ?!
ಇಡೀ ಉತ್ತರ ಅಮೆರಿಕಾ ದೇಶಕ್ಕೆ ಆಹಾರ ಉತ್ಪಾದನೆ ಮಾಡುವ, ಸರಬರಾಜು ಮಾಡುವ ಬಿಲಿಯನ್ ಗಟ್ಟಲೆ ಡಾಲರ್ಗಳ ವಹಿವಾಟು ನಡೆಸುತ್ತಿರುವ ಕಾರ್ಪೋರೇಟ್ ಪೆಡಂಭೂತಗಳಿಗೆ ಬಾರ್ಬರಾ ಎಂಬ ಯಕಶ್ಚಿತ್ ಅಮ್ಮನ ವಿರುದ್ಧ ಲಾಬಿ ಮಾಡುವ ಅಗತ್ಯವಾದರೂ ಏಕೆ? ಉತ್ತರ ಸರಳವಾದದ್ದು. ಬಾರ್ಬರಾ ನಿಜವನ್ನು ತಿಳಿಯುವ ಧೈರ್ಯ ಮಾಡಿದ್ದರು. ಅದನ್ನು ಜನರಿಗೆ ತಿಳಿಸುವ ಕೆಲಸ ಶುರು ಮಾಡಿದ್ದರು. ಬಾರ್ಬರಾರಂತೆ ಮಗುವನ್ನೋ, ತಂದೆ-ತಾಯನ್ನೋ, ಸಂಬಂಧಿಯನ್ನೋ ಹೀಗೆ ಅರ್ಥವಾಗದ ಆಹಾರ ಜನ್ಯ ರೋಗಗಳಿಗೆ ತಮ್ಮವರನ್ನು ಕಳೆದುಕೊಂಡಿದ್ದ ಜನ ಅಮ್ಮ ಬಾರ್ಬರಾರ ಮಾತನ್ನು ಕೇಳತೊಡಗಿದ್ದರು. ತಮ್ಮ ಪ್ರೀತಿಪಾತ್ರರ ಸಾವಿಗೆ, ನರಳುವಿಕೆಗೆ ತಾವು ದಿನಾ ತಟ್ಟೆಯಲ್ಲಿಟ್ಟುಕೊಂಡು ತಿನ್ನುವ ಆಹಾರ ಎಷ್ಟರಮಟ್ಟಿಗೆ ಕಾರಣ ಎಂದು ಅರ್ಥಮಾಡಿಕೊಳ್ಳತೊಡಗಿದ್ದರು. ಮಗುವನ್ನು ಕಳೆದುಕೊಂಡ ಬಾರ್ಬರಾರ ಸತ್ಯ ಕಥೆ ಕಡೆಗೂ ಸ್ವಲ್ಪ ಜನರನ್ನು ಸತ್ಯದೆಡೆಗೆ ಸೆಳೆಯತೊಡಗಿತ್ತು.
ಅಮೆರಿಕಾದ ಆಹಾರ ಉದ್ಯಮ
ಆಹಾರ ಉದ್ಯಮ ಅಮೆರಿಕದಲ್ಲಿ ಭಾರೀ ಜೋರು ವಹಿವಾಟಿನದ್ದು. ಮಾಂಸ, ಮೊಟ್ಟೆ, ಹೈನು, ತರಕಾರಿಗಳು, ಕುಯ್ದು ಉಪ್ಪು-ಮಸಾಲೆ ಹಾಕಿ ಸಂಸ್ಕರಿಸಿಟ್ಟ ಮಾಂಸ, ಹೆಚ್ಚಿಟ್ಟ ತರಕಾರಿಗಳು, ಬಿಡಿಸಿಟ್ಟ ಕಾಳುಗಳು, ತಯಾರಿಸಿ-ಶೀತಲೀಕರಿಸಿದ ಅಡುಗೆ ಇವೆಲ್ಲವೂ ಪ್ರತಿ ಅಮೆರಿಕನ್ ಅಡಿಗೆ ಮನೆಯಲ್ಲಿಯೂ ಶತಸಿದ್ಧವಾಗಿ ಇದ್ದೇ ಇರುವ ಆಹಾರಗಳು.
ಅಮೆರಿಕಾ ಕೆಲಸಗಾರರ ದೇಶ. ’ಕೆಲಸ ಮಾಡುವುದೇ’ ಅಮೆರಿಕಾದ ಜನಸಾಮಾನ್ಯರ ಸಂಸ್ಕೃತಿ ಅಂತ ನನ್ನ ಅಭಿಪ್ರಾಯ. ಅಮೆರಿಕಾ ಎಷ್ಟರ ಮಟ್ಟಿಗೆ ’ಇಂಡಿವಿಜುಅಲ್’ ಗಳ ದೇಶವೆಂದರೆ ನಾನು ದುಡಿದರೆ ಮಾತ್ರ ನನಗೆ ತಿನ್ನಲಾಗುತ್ತೆ ಎನ್ನುವುದನ್ನು ಮಕ್ಕಳು ೧೩ ವರ್ಷಕ್ಕೇ ಕಲಿತು ಅರಗಿಸಿಕೊಂಡುಬಿಟ್ಟಿರುತ್ತಾರೆ. ಕೆಲಸವಿಲ್ಲದೆ ಹಣವಿಲ್ಲ, ಹಣವಿಲ್ಲದೆ ಖರೀದಿಯಿಲ್ಲ, ಖರೀದಿಯಿಲ್ಲದೆ ಸೌಲಭ್ಯವಿಲ್ಲ, ಸೌಲಭ್ಯವಿಲ್ಲದೆ ಬದುಕಿಲ್ಲ...ಇದು ಅಮೆರಿಕಾದ ಜನಸಾಮಾನ್ಯರ ಜೀವನ ವ್ಯಾಖ್ಯಾನ. ಮನೆ ಮಂದಿಯೆಲ್ಲಾ ಒಂದಲ್ಲಾ ಒಂದು ’ವರ್ಕ್’ ಮಾಡುವುದು ಎಷ್ಟರ ಮಟ್ಟಿಗೆ ಎಂದರೆ ಅಮೆರಿಕಾದ ಜನಸಾಮಾನ್ಯರು ಮನೆಯಲ್ಲಿ ಅಡಿಗೆಯನ್ನು ಮಾಡಿಕೊಳ್ಳುವುದು ಅಪರೂಪ.
ತರಕಾರಿ ಅಥವಾ ಮಾಂಸ ತಂದು, ಅದನ್ನು ಕೊಯ್ದು, ತೊಳೆದು, ಮಸಾಲೆ ತಯಾರಿಸಿ, ಬೇಯಿಸಿ ತಿನ್ನುವುದು ಇಲ್ಲಿನವರಿಗೆ ಇನ್ನಿಲ್ಲದ ಟೈಮ್ ವೇಸ್ಟ್ ಮಾಡಿದಂತೆ. (ಹಾಗೆ ಮಾಡುವವರು ಇಲ್ಲ ಎಂದಲ್ಲ. ಕೆಲಸಕ್ಕೆ ಹೋಗಿ ದುಡಿಯುವ ಅಗತ್ಯ ಇಲ್ಲದವರು, ಅಡುಗೆ ಮಾಡುವುದನ್ನೇ ಒಂದು ಹವ್ಯಾಸವನ್ನಾಗಿ ಇಟ್ಟುಕೊಂಡಿರುವವರು, ಬೇರೆಯವರಿಗಾಗಿ ಅಡುಗೆ ಮಾಡಿ ಕೇಟರಿಂಗ್ ಮಾಡುವ ವೃತ್ತಿಯವರು, ತಮ್ಮ ಅಡುಗೆ ತಾವು ಮಾಡಿಕೊಂಡು ತಿನ್ನುವ ಸಂಪ್ರದಾಯದಿಂದ ಬಂದ ವಲಸಿಗ ಕುಟುಂಬಗಳು- ಇಂಥವರು ಮಾತ್ರವೇ ದಿನನಿತ್ಯ ಮಾಡುವ ಕೆಲಸ ಅದು. ಬಿಸಿ ಬಿಸಿ ಮಾಡಿಕೊಂಡು ಅವತ್ತಿನ ಆಹಾರವನ್ನು ಅವತ್ತು ತಿನ್ನುವುದು ಇಲ್ಲಿನ ಐಷಾರಾಮಗಳಲ್ಲಿ ಒಂದು.) ಹಾಗಾಗಿ ಅಮೆರಿಕಾದ ಜನಸಾಮಾನ್ಯರು ಮನೆಯಲ್ಲಿ ಅಡಿಗೆ ಮಾಡುವುದೇ ಕಡಿಮೆ. ಇಲ್ಲಿ ಅದು ಬಹಳ ದುಬಾರಿ ಕೂಡಾ ಹೌದು. ಎರಡು ಡಾಲರಿಗೆ ಒಂದು ಪೌಂಡ್ ಬ್ರೆಡ್, ನಾಲ್ಕು ಡಾಲರಿಗೆ ಒಂದು ಪೌಂಡ್ ಮಾಂಸ, ಇನ್ನಷ್ಟು ಬೆಲೆಗೆ ಸಾಸ್-ಕೆಚಪ್ ಗಳನ್ನು ತಂದು ಮನೆಯಲ್ಲಿ ಸ್ಯಾಂಡ್ ವಿಚ್ ಮಾಡಿ ತಿನ್ನುವ ಬದಲು ಮ್ಯಾಕ್ ಡೊನಾಲ್ಡ್ಸ್, ಟ್ಯಾಕೋ ಬೆಲ್ ಅಥವಾ ಕೆ.ಎಫ್.ಸಿ ಕಡೆ ನುಗ್ಗಿದರೆ ತೊಂಬತ್ತೊಂಬತ್ತು ಸೆಂಟ್ (ಪೈಸೆ)ಗಳಿಗೆ ಒಂದು ಜಂಬೋ ಬರ್ಗರ್ ಸಿಗುತ್ತದೆ! ಇನ್ನು ಹತ್ತು ಸೆಂಟ್ ಸೇರಿಸಿದರೆ ಒಂದು ಜಂಬೋ ಲೋಟ ಕೋಲಾವೂ ಸಿಗುತ್ತದೆ! ಅಥವಾ ಅಷ್ಟೇ ಬೆಲೆಗೆ ಕ್ಯಾನ್ ಗಳಲ್ಲಿ ಸಂಸ್ಕರಿಸಿ ತುಂಬಿಟ್ಟಿರುವ ಬಗೆಬಗೆಯ ಸೂಪ್, ತಿನಿಸುಗಳು ಸಿಗುತ್ತದೆ! ಅದನ್ನು ತೆಗೆದು ತಿಂದರೆ ಆಯ್ತಲ್ಲಾ ಊಟದ ಕಥೆ. ಇದು ಸಾಮಾನ್ಯ ಅಮೆರಿಕನ್ನರ ಊಟದ ಸಂಸ್ಕೃತಿ. ಅವರ ದೇಹಕ್ಕೆ ಸೇರಿ ಅವರ ಆ ಹೊತ್ತಿನ ಆರೋಗ್ಯವನ್ನು ನೋಡಿಕೊಳ್ಳುವ ಸಂಪೂರ್ಣ ಜವಾಬ್ದಾರಿ ೯೯ ಸೆಂಟ್ ಗಳ ಬರ್ಗರ್ ಮೇಲೆ ಮತ್ತು ಅವನ್ನು ತಯಾರಿಸುವ ಕಾರ್ಖಾನೆಗಳ ಮೇಲೆ ಹಾಕಿಬಿಟ್ಟಿರುತ್ತಾರೆ.
ಅಮೆರಿಕಾದಲ್ಲಿ ಮಾಂಸಾಹಾರವೇ ಮುಖ್ಯ ಆಹಾರವಾಗಿರುವುದರಿಂದ, ಮಾಂಸ ಪ್ರತಿ ದಿನದ ಪ್ರತಿ ಹೊತ್ತಿಗೂ ಬಳಕೆಯಾಗುವುದರಿಂದ ಮಾಂಸಾಹಾರದ ಉತ್ಪಾದನೆ ಕಾರ್ಖಾನೆಯಲ್ಲಿ ಆದಂತೆಯೇ ಆಗುತ್ತದೆ. ಮಾಂಸ ಸಂಸ್ಕರಣೆ, ಸಿದ್ಧ ಆಹಾರ ತಯಾರಿಕೆ ಇಲ್ಲಿ ಸಣ್ಣ ಉದ್ಯಮಗಳೋ ಅಥವಾ ಗೃಹ ಕೈಗಾರಿಕೆಗಳೋ ಅಲ್ಲ. ಅವೂ ಒಂದು ಥರದಲ್ಲಿ ರಾಷ್ಟ್ರೀಕೃತ ಅಥವಾ ಅಂತರಾಷ್ಟ್ರೀಯ ಕೈಗಾರಿಕೆಗಳು.
ನಾವು ಹಿಂದಿನ ಕುಲಾಂತರಿ ಸರಣಿಗಳಲ್ಲಿ ತಿಳಿಸಿರುವಂತೆ, ಮಾಂಸಕ್ಕೆ ಬೇಕಾಗುವ ಹಸು-ಕೋಳಿ-ಹಂದಿಗಳನ್ನು ಕುಲಾಂತರಿ ತಳಿಗಳಿಂದ ಪಡೆಯುತ್ತಾರೆ. ಅವು ಎರಡು ತಿಂಗಳಿಗೇ ಬೃಹತ್ತಾಗಿ ಬೆಳೆದು ೩೦-೪೦ ಕೆಜಿ ಮಾಂಸ ಕೊಡುವಂತೆ ಆಗಿರುತ್ತವೆ. ಆ ಪ್ರಾಣಿಗಳನ್ನು ಹಗಲೂ ರಾತ್ರಿ ಬಿಡುವಿಲ್ಲದೆ ತಿಂದು ಮೈ ಬೆಳೆಸಿಕೊಂಡು ದಪ್ಪವಾಗಲಿಕ್ಕೇ ಬೆಳೆಸುತ್ತಾರೆ. ಹಾಗೆ ಸಾಕುವ ಪ್ರಾಣಿಗಳಲ್ಲಿ ಯಾವಕ್ಕಾದರೂ ಒಂದೆರಡಕ್ಕೆ ಯಾವುದಾದರೂ ಸೋಂಕು ತಗುಲಿದರೆ ಅದು ಸುಲಭವಾಗಿ ಗೊತ್ತಾಗುವುದೂ ಇಲ್ಲ. ಯಾಕೆಂದರೆ ನೂರಾರು ಹಸು, ಸಾವಿರಾರು ಕೋಳಿಗಳ ಗುಂಪಲ್ಲಿ ಹುಷಾರಿಲ್ಲದೆ ತೂಕಡಿಸುತ್ತಾ ಕೂತಿರುವ ಮೂರನ್ನು ಯಾರು ತಾನೇ ನೋಡುತ್ತಾರೆ? ಹಾಗೆ ಪ್ರತಿಯೊಂದು ಪ್ರಾಣಿಗೂ ಅಟೆನ್ಷನ್ ಕೊಡಲು ಅದೇನು ಹೈ ಟೆಕ್ ಆಸ್ಪತ್ರೆಯಾ?! ಅಲ್ಲದೇ ಪ್ರತಿಯೊಂದು ಹಸುವನ್ನೂ ಪದೇ ಪದೇ ತಪಾಸಣೆ ಮಾಡಲು ಆಗುವ ಕಾರ್ಮಿಕರ ಖರ್ಚು ಸಾಧಾರಣವೇ? ಹೀಗಾಗಿ, ಆಹಾರವಾಗಲು ರೆಡಿಯಾಗುವ ನೂರು ಹಸುಗಳ ಮಧ್ಯೆ ಸೋಂಕಿರುವ ಮೂರೂ ಹಸುಗಳೂ ಸುಮ್ಮನೆ ಸೇರಿಬಿಡುತ್ತವೆ! ಆಮೇಲೆ ಅವು ಸಾರಾ ಸಗಟಾಗಿ ಬರ್ಗರ್ ಗಳ ಪ್ಯಾಟಿಗಳಾಗೋ, ಸ್ಯಾಂಡ್ ವಿಚ್ ಗಳಿಗೆ ಬೇಕಾದ ಹಾಗೋ, ಮಾಂಸದ ಮುದ್ದೆಗಳಾಗೋ ಆಕಾರ ಪಡೆದುಕೊಂಡು ಅಂಗಡಿ, ರೆಸ್ಟೋರಾಂಟ್, ಮನೆಗಳನ್ನು ತಲುಪುತ್ತವೆ. ಹಾಗೆಯೇ ಅವುಗಳಲ್ಲಿದ್ದ ಸೋಂಕು ಕೂಡಾ!
ಬಾರ್ಬರಾ ಬಯಸಿದ್ದು ಇಂತಹ ಕಳಪೆ ಮಟ್ಟದ ಕೆಲಸ ನಿರ್ವಹಿಸಿ ಆಹಾರ ತಯಾರಿಸುವ ಘಟಕಗಳನ್ನು ಸರ್ಕಾರ ಮಧ್ಯಸ್ಥಿಕೆ ವಹಿಸಿ ಮುಚ್ಚಿಸಬೇಕೆಂದು. ಆದರೆ ಅಮೆರಿಕನ್ ಸರ್ಕಾರ ಅಷ್ಟು ಸುಲಭವಾಗಿ ಹಾಗೆ ಮಾಡಲು ಸಾಧ್ಯವಾಗಬೇಕಲ್ಲ! ಏಕೆಂದರೆ ಅಮೆರಿಕಾದ ಶಸ್ತ್ರಾಸ್ತ್ರ ಉದ್ಯಮ ಹೇಗೆ ಹ್ಯಾಲಿ ಬರ್ಟನ್, ಲಾಕ್ ಹೀಡ್ ಮಾರ್ಟಿನ್ ಗಳಂತಹ ಬೃಹತ್ ಕಾರ್ಪೊರೇಷನ್ ಗಳ ಹಿಡಿತದಲ್ಲಿದೆಯೋ, ಕೃಷಿ ಹೇಗೆ ಮೊನ್ಸಾಂಟೋ ನಂತಹ ಬೀಜ ರಾಕ್ಷಸನ ಕಪಿ ಮುಷ್ಟಿಯಲ್ಲಿದೆಯೋ ಹಾಗೆಯೇ ಅಮೆರಿಕಾದ ಆಹಾರ ಉದ್ಯಮವೂ ಟೈಸನ್, ಕ್ರಾಫ್ಟ್, ಸ್ಮಿತ್ ಫೀಲ್ಡ್, ನೆಸ್ಲೆ ಇತ್ಯಾದಿ ಬೃಹತ್ ಕುಳಗಳ ಸ್ವಾಧೀನದಲ್ಲಿದೆ. ಹೈನುಗಾರಿಕೆ, ಕೋಳಿ ಸಾಕಣೆ, ತರಕಾರಿ ಬೆಳೆಯುವ ಸಣ್ಣ ಪುಟ್ಟ ರೈತರೆಲ್ಲಾ ಟೈಸನ್ ಗಳಂತಹ ಕಾರ್ಪೊರೇಷನ್ ಗಳ ಆಶ್ರಯ ಪಡೆದೇ ತಮ್ಮ ಕಾಯಕ ಮಾಡಬೇಕು. ಹೀಗೆ ದೊಡ್ಡ ಕಂಪನಿಗಳಿಂದ ಗುತ್ತಿಗೆ ಪಡೆದು, ಸಾರಾಸಗಟಾಗಿ ತಿಂದು ಬೆಳೆಯಲೆಂದೇ ಸೄಷ್ಟಿಸಿದ ದೊಡ್ಡಿಗಳಲ್ಲಿ ಮಾಂಸಕ್ಕಾಗಿ ಸಾವಿರಾರು ಹಸು-ಕೋಳಿಗಳನ್ನು ಸಾಕಿದಾಗ ಅವುಗಳಿಗೆ ಸೋಂಕು-ರೋಗ ಬರುವುದು, ಅವು ಸಾಯುವುದು ಸಹಜವೇ. ಸತ್ತವನ್ನೇನೋ ನಾಶಮಾಡಬಹುದು. ಆದರೆ ರೋಗಗ್ರಸ್ತ ಪ್ರಾಣಿಗಳನ್ನೆಲ್ಲಾ ಆರಿಸುತ್ತಾ ಹೊರಟರೆ ಬರೀ ಲಾಸಲ್ಲವೇ. ಎಲ್ಲವನ್ನೂ ಒಟ್ಟಿಗೆ ಕಟಾವು ಮಾಡಿ, ಸಂಸ್ಕರಿಸಿ ಒಟ್ಟು ಟೈಸನ್ ಅಥವಾ ಕ್ರಾಫ್ಟ್ ಲೇಬಲ್ ಹಾಕಿ ಮಾರುಕಟ್ಟೆಗೆ ಬಿಟ್ಟರೆ ಎಲ್ಲ ಜವಾಬ್ದಾರಿ ಮುಗಿದುಹೋಗುತ್ತದೆ!
ಬಾರ್ಬರಾರ ಮಗ ಕೆವಿನ್ ತಿಂದಿದ್ದ ಹ್ಯಾಮ್ ಬರ್ಗರ್ ನ ಮಾಂಸ ಕೂಡ ಇಂಥದ್ದೇ ಒಂದು ದೊಡ್ಡ ಕಂಪನಿಯ ಗುತ್ತಿಗೆದಾರರೊಬ್ಬರಿಂದ ಬಂದಿತ್ತು.
ಅಕಸ್ಮಾತ್ ಸರ್ಕಾರ ಬಾರ್ಬರಾ ಪ್ರತಿಪಾದಿಸುತ್ತಿರುವ ಕಾನೂನನ್ನು ಮಾಡಿದರೆ ಈಗಿರುವ ಆಹಾರ ತಯಾರಿಕಾ ಘಟಕಗಳನ್ನು ಹೆಚ್ಚಿನ ಹಣ ಹಾಕಿ ಅಭಿವೃದ್ಧಿ ಮಾಡಬೇಕಾಗುತ್ತದೆ, ತಯಾರಿಸಲಾಗುವ ಪ್ರತಿಯೊಂದು ಆಹಾರದ ತುಂಡೂ ಅತ್ಯಂತ ಯೋಗ್ಯವಾದುದೆಂದು ಪರೀಕ್ಷಿಸಲು, ಪ್ರೂವ್ ಮಾಡಲು ವೈಜ್ನಾನಿಕ ಉಪಕರಣಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ, ಕೆಲಸಗಾರರ ಅದರಲ್ಲೂ ನುರಿತ ಕೆಲಸಗಾರರ ಸಂಖ್ಯೆ ಹೆಚ್ಚುತ್ತದೆ, ತಾನು ತಯಾರಿಸಿದ ಆಹಾರಕ್ಕೆ ತಾನೇ ಸಂಪೂರ್ಣ ಹೊಣೆಯಾಗಬೇಕಾಗುತ್ತದೆ...ಸರ್ಕಾರ ಕಾನೂನು ಮಾಡಿ, ತಪಾಸಣೆ ನಡೆಸಿ, ಪ್ರಾಣಿಗಳನ್ನು ಸಾಕುತ್ತಿರುವ ರೀತಿ ಸರಿಯಿಲ್ಲ, ಶುಚಿಯಾಗಿಲ್ಲ ಎಂದೆಲ್ಲಾ ತನ್ನ ಪ್ರತೀ ಗುತ್ತಿಗೆದಾರನ ಘಟಕವನ್ನೂ ಮುಚ್ಚಿಸತೊಡಗಿದರೆ ನಷ್ಟ ಆಗುವುದು ಯಾರಿಗೆ? ಮಾರುಕಟ್ಟೆಯಲ್ಲಿ ಮುಖ ಕಳೆದುಕೊಳ್ಳುವವರು ಯಾರು? ಫುಡ್ ಪಾಯ್ಸನ್ ಆದ ಜನರೆಲ್ಲರ ಸಂಬಂಧಿಗಳೂ ನ್ಯಾಯಾಲಯದ ವಿರುದ್ಧ, ಮಾಂಸ ತಯಾರಾದ ಘಟಕದ ವಿರುದ್ಧ ಕೇಸು ಹಾಕಲು ಶುರು ಮಾಡಿದರೆ ತೊಂದರೆಯಾಗುವುದು ಯಾರಿಗೆ?? ಟೈಸನ್ ನಂತಹ ತಿಮಿಂಗಲ ಕಾರ್ಪೊರೇಷನ್ ಗಳಿಗೆ!! ಹಾಗಾಗಿ ಬಾರ್ಬಾರಾರ ಅಹವಾಲಿನ ವಿರುದ್ಧ ಈ ಕಂಪನಿಗಳು ಸಿಕ್ಕಾಪಟ್ಟೆ ಲಾಬಿ ಮಾಡುತ್ತಿವೆ.
ಬಾರ್ಬಾರಾ ಕೇಳುತ್ತಿರುವ ನಿರ್ಧರಿತ ಆಹಾರ-ಆಹಾರ ತಯಾರಿಕಾ ಘಟಕಗಳ ಗುಣಮಟ್ಟಗಳ ಕಾಯಿದೆಯನ್ನು ಅಮೆರಿಕಾದ ಸರ್ಕಾರ ಇನ್ನೂ ಅಂಗೀಕರಿಸುತ್ತಿಲ್ಲ. ಆದರೆ ಮೊನ್ನೆ ೨೦೧೧ ರ ಜನವರಿ ೪ ರಂದು ಅಧ್ಯಕ್ಷ ಬರಾಕ್ ಒಬಾಮ ’ಫುಡ್ ಸೇಫ್ಟಿ ಮಾಡರ್ನೈಜ಼ೇಷನ್’ ಕಾಯಿದೆಯೊಂದಕ್ಕೆ ಸಹಿ ಮಾಡಿದ್ದಾರೆ. ಅಮೆರಿಕಾದ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (ಎಫ್.ಡಿ.ಎ) ಆಹಾರ ತಯಾರಿಕಾ ಘಟಕಗಳನ್ನು ಪದೇ ಪದೇ ತಪಾಸಣೆ ನಡೆಸುವಂತಾಗಬೇಕು. ಅಮೆರಿಕಾದಲ್ಲಿ ತಯಾರಾಗುವ, ವಿದೇಶದಿಂದ ಆಮದು ಮಾಡಿಕೊಳ್ಳಲಾಗುವ ಆಹಾರಪದಾರ್ಥ್ಗಳ ಗುಣಮಟ್ಟ ಈಗಿರುವ ಮಟ್ಟಕ್ಕಿಂತ ಉತ್ಕೃಷ್ಟವಾಗಿರಬೇಕು, ರೋಗಗಳು ಸೃಷ್ಟಿಯಾಗಲು-ಬೆಳೆಯಲು ಅವಕಾಶವಿರುವ ಆಹಾರ ಪದಾರ್ಥಗಳನ್ನು ಗುರುತಿಸಿ ಅವುಗಳ ಉತ್ಪಾದನೆ ಹೆಚ್ಚಿನ ಜಾಗರೂಕತೆಯಿಂದ ಆಗುವಂತೆ ಮೇಲ್ವಿಚಾರಣೆ ನಡೆಸಬೇಕು ಎನ್ನುತ್ತದೆ ಈ ಕಾಯಿದೆ.
ತಾನು ಬದುಕಿರುವವರೆಗೂ ಕೆವಿನ್ ನ ಕಾನೂನು ಅಂಗೀಕಾರವಾಗಲೆಂದು ಹೋರಾಡುತ್ತೇನೆ, ಆಹಾರ ಜನ್ಯ ರೋಗಗಳ ಬಗ್ಗೆ ಜನರಿಗೆ ಮಾಹಿತಿ ಒದಗಿಸುತ್ತೇನೆ, ಆ ಕುರಿತು ಸಂಶೋಧನೆಗೆ ಅನುವು ಮಾಡಿಕೊಡುತ್ತೇನೆ ಎಂದು ಬಾರ್ಬರಾ ಸೆಂಟರ್ ಫಾರ್ ಫುಡ್ ಬೋರ್ನ್ ಇಲ್ನೆಸ್ ಎಂಬ ಸಂಸ್ಥೆಯೊಂದನ್ನು ಹುಟ್ಟುಹಾಕಿದ್ದಾರೆ. ಅಮ್ಮ ಬಾರ್ಬರಾಗೆ ಮಗ ವಾಪಸ್ಸು ಸಿಗುವುದಿಲ್ಲ. ಆದರೆ ಬೇರೆ ತಾಯಂದಿರಿಗೆ ತನ್ನ ಸ್ಥಿತಿ ಬರಬಾರದೆಂದು ಆಕೆ ಪಟ್ಟ ಶ್ರಮ ಫಲ ಕೊಟ್ಟಿದೆ. ಪಟ್ಟು ಬಿಡದೆ ಕಾರ್ಪೋರೇಷನ್ ಮಹಾಭೂತಗಳ ಜೊತೆ ಸೆಣೆಸಾಡುತ್ತಾ ಪುಟ್ಟ ಪುಟ್ಟ ಜಯ ಸಾಧಿಸಿತ್ತಿರುವ ಬಾರ್ಬಾರಿಗೆ, ಅವರಲ್ಲಿರುವ ಆ ಅದಮ್ಯ ’ಅಮ್ಮ’ನಿಗೆ ನಮ್ಮ ಗೌರವದ ಸಲ್ಯೂಟ್.