ಅಂಗಳ      ಪಂಚವಟಿ
Print this pageAdd to Favorite
 
 
 

 (ಪುಟ ೧೩) ಬಾರ್ಡರ್ಸ್ ಗೆ ಬಾಗಿಲು, ಕಿಂಡಲ್ ಗೆ ಮಡಿಲು...

ಬೇಲಾ ಮರವ೦ತೆ
 
ಬರೆಯಬೇಕು, ಒಂದು ಅಂಕಣಕ್ಕೆ ದಾಖಲಿಸಬೇಕು ಎಂದು ಕೂತು ನಾನೂ ಒಂದೊಂದಾಗಿ ನನ್ನ ಅಮೆರಿಕಾ ವಾಸದ ಹೊಸತಿನ ನೆನಪುಗಳನ್ನು ಹೆಕ್ಕಿ ತೆಗೆಯುತ್ತಿದ್ದೇನೆ. ಕೆಲವೊಮ್ಮೆ ವರ್ತಮಾನವನ್ನು ಬರೆಯಬೇಕೆನಿಸುತ್ತದೆ. ಇವತ್ತು ತುಂಬಾ ಬೇಜಾರಾಗ್ತಿದೆ. ಆತ್ಮೀಯ ಗೆಳೆಯನೊಬ್ಬ ಒಂದೇ ಒಂದು ಸೂಚನೆ ಕೊಡದೆ ಸಡನ್ ಆಗಿ ಗುಡ್ ಬೈ ಹೇಳಿ ಹೋಗಿಬಿಟ್ಟಾಗ ಆಗುವ ಬೇಜಾರು...ಏನೋ ಕಳೆದುಕೊಂಡ ಹಾಗೆ ಆಗುತ್ತಿದೆ.

ನಾನು ಇಲ್ಲಿಗೆ ಬಂದಾಗ ಆದ ಹಲವಾರು ಸ್ನೇಹಿತರಲ್ಲಿ ’ಬಾರ್ಡರ್ಸ್’ ಕೂಡಾ ಒಂದು. ಬಾರ್ಡರ್ಸ್ ಇಲ್ಲಿನ ಒಂದು ಹೆಸರಾಂತ ಪುಸ್ತಕದಂಗಡಿ. ಇಡೀ ದೇಶದಲ್ಲೆಲ್ಲಾ ಅದರ ಬ್ರಾಂಚ್ ಇತ್ತು. ನಾವು ಮೊದಲು ಬಂದು ನೆಲೆಸಿದ್ದ ಮನೆಗೆ ಅದು ಎಷ್ಟು ಹತ್ತಿರ ಇತ್ತು ಎಂದರೆ...ವಾತಾವರಣ ಚನ್ನಾಗಿದ್ದಾಗ ನಾನು ಯಾರ ಕಾರ್ ರೈಡ್ ಗಳಿಗೂ ಕಾಯದೆ ಅಲ್ಲಿಗೆ ನಡೆದೇ ಹೋಗುತ್ತಿದ್ದೆ. ಅಲ್ಲಿನ ಬಿಸಿಬಿಸಿ ಕಾಫಿ ಕುಡಿಯುತ್ತಾ ಅಲ್ಲಿ ಮಾರಾಟಕ್ಕಿಟ್ಟಿದ್ದ ಮ್ಯಾಗಜ಼ೀನು, ಪುಸ್ತಕಗಳಲ್ಲಿ ನನಗೆ ಬೇಕಾದವನ್ನು ಹಿಡಿದುಕೊಂಡು ಓದುತ್ತಾ ಕೂರುತ್ತಿದ್ದೆ. ಕೆಲವೊಮ್ಮೆ ಅಲ್ಲಿ ನಡೆಯುತ್ತಿದ್ದ ಪುಟಾಣಿ ಮಕ್ಕಳ ಸ್ಟೋರಿ ಸೆಷನ್ ನಲ್ಲೂ ಕೂತು ನನಗೂ ಒಂದು ಕೂಸಾದಾಗ ಅದನ್ನೂ ಇಲ್ಲಿಗೆ ಕರೆದುಕೊಂಡು ಬಂದು ಅದರ ಜೊತೆ ಕಥೆ ಕೇಳಬೇಕು ಅಂತ ಕನಸು ಕಟ್ಟುತ್ತಿದ್ದೆ, ಅಂಗಡಿ ಏರ್ಪಡಿಸುತ್ತಿದ್ದ ಸ್ಥಳೀಯ ಕಲಾವಿದರ ಸಂಗೀತ ಕೇಳುತ್ತಾ, ಥರಾವರಿ ಶೋಗಳನ್ನು ನೋಡುತ್ತಾ ಕಾಲಕಳೆಯುತ್ತಿದ್ದೆ. 

ಪುಸ್ತಕದಂಗಡಿ ಜೊತೆಯಲ್ಲಿ ಅದೇನು ಸ್ನೇಹ ಅಂತ ಅನ್ನಿಸಬಹುದು. ಆದರೆ ಈ ದೇಶಕ್ಕೆ ಬಂದಾಗ ಯಾರು ಅಪ್ಯಾಯಮಾನವಾಗಿ ನಿಮಗೆ ಸಮಯ ಕೊಡುತ್ತಾರೋ, ನಿಮ್ಮನ್ನು ಸರಿಯಾದ ರೀತಿಯಲ್ಲಿ ಎಂಗೇಜ್ ಮಾಡುತ್ತಾರೋ, ತಾವು ಕೊಡುವ ಸಮಯಕ್ಕೆ ನಿಮ್ಮ ಹತ್ತಿರ ಚಾರ್ಜು ಮಾಡುವುದಿಲ್ಲವೋ ಅವರೆಲ್ಲರೋ ಗೆಳೆಯರೇ!

ಬಾರ್ಡರ್ಸ್ ಅಮೆರಿಕದ ದೊಡ್ಡ ಪುಸ್ತಕದ ಅಂಗಡಿಗಳ ಸರಪಳಿ (ಫ್ರಾಂಚೈಸ್). ಆದರೂ ಅಲ್ಲಿಗೆ ಬಂದವರೆಲ್ಲಾ ದುಡ್ಡುಕೊಟ್ಟು ಪುಸ್ತಕಗಳನ್ನು ಕೊಳ್ಳಲೇಬೇಕು ಅಂತೇನಿಲ್ಲ. ವಿಶಾಲವಾದ ಅಂಗಡಿಯಲ್ಲಿ ಎಲ್ಲೆಂದರಲ್ಲಿ ಹಾಕಿರುವ ಸೋಫಾ-ಕುರ್ಚಿಗಳ ಮೇಲೆ ಕೂತು ಯಾವುದಾದರೂ ಪುಸ್ತಕವನ್ನು ತೆಗೆದುಕೊಂಡು ದಿನವಿಡೀ ಓದಬಹುದು. ಲೈಬ್ರರಿಯ ಥರವೇ ಆ ಪುಸ್ತಕ ಇದ್ದ ಜಾಗ ನೆನಪಿಟ್ಟುಕೊಂಡು ಮತ್ತೆ ಮರುದಿನ ಅಥವಾ ನಮಗಾದ ದಿನ ಬಂದು ಓದನ್ನು ಮುಂದುವರೆಸಬಹುದು. ಓದಿ ಬೇಜಾರಾದರೆ ಅಂಗಡಿಯೊಳಗೇ ಇರುವ ಕಾಫಿ ಶಾಪ್ ನಲ್ಲಿ ಕಾಫಿ ಹೀರಿ ಕೇಕ್ ತಿನ್ನುತ್ತಾ ಕೂರಬಹುದು. ಒಟ್ಟಿನಲ್ಲಿ ಪುಸ್ತಕಗಳನ್ನು ಕಿವಿ ಗಿವಿ ಮಡಿಚದೆ ನೀಟ್ ಆಗಿ ನೊಡಿಕೊಂಡರೆ ಸಾಕು.

ಗಂಡನನ್ನು ಬಿಟ್ಟರೆ ಬೇರೆ ಹಿಂದಿಲ್ಲ ಮುಂದಿಲ್ಲದೆ ಅಮೆರಿಕಾದಲ್ಲಿ ಅಬ್ಬೆಪಾರಿಯಂತಿದ್ದ ನನಗೆ ಬಾರ್ಡರ್ಸ್ ತುಂಬಾ ಆತ್ಮೀಯ ಗೆಳೆಯನಾಗಿಬಿಟ್ಟಿದ್ದ.
ಗೆಳತಿ ಎನ್ನುವ ಅಂತಿದ್ದೆ...ಆದರೆ ಗೆಳತಿಯ ಜೊತೆ ಬಾರ್ಡರ್ಸ್ ನ ಜೊತೆಯಲ್ಲಿದ್ದಷ್ಟು ಗಂಭೀರಕ್ಕೆ ಇರಲು ಸಾಧ್ಯವಾ? ಗೆಳತಿಯ ಹತ್ತಿರ ಅದು ಇದು ಕಣಿ ಹೊಡೆದು, ಕಚಪಚ ಮಾತಾಡದೇ, ಕಥೆ ಕಟ್ಟಿಕೊಳ್ಳದೇ ಇರಲು ಸಾಧ್ಯವೇ ಇಲ್ಲ. ಆದರೆ ಬಾರ್ಡರ್ಸ್ ನಲ್ಲಿದ್ದಾಗ ಅದರ ಬಗ್ಗೆ ಎಷ್ಟೇ ಆತ್ಮೀಯತೆ ಇದ್ದರೂ ಗಂಭೀರವಾಗಿರಬೇಕಾಗುತ್ತಿತ್ತಲ್ಲ. ಹಾಗಾಗಿ ಬಾರ್ಡರ್ಸ್ ನನ್ನ ಒಬ್ಬ ಗೆಳೆಯನಾಗಿದ್ದ. ಪ್ರಶಾಂತನ ಜೊತೆ ಚಿಕ್ಕ ಪುಟ್ಟ ಜಗಳ ಮಾಡಿಕೊಂಡಾಗ, ಬರೀ ಸೋಷಿಯಲೈಜ಼್ ಮಾಡುವುದು ಬೋರೆನಿಸಿದಾಗ ಈ ಗೆಳೆಯನ ಸಮೀಪ ಬಂದು ಬಿಡುತ್ತಿದ್ದೆ. ಅಮೆರಿಕಾದ ಎಕಾನಮಿ, ಇಟಾಲಿಯನ್ ಅಡುಗೆ, ಪ್ರತೀ ತಿಂಗಳೂ ಬಜೆಟ್ ಮಾಡಿ ಮನೆ ನಿಭಾಯಿಸಿವುದು ಹೇಗೆ, ಪೋಕರ್ ಆಡುವುದು ಹೇಗೆ ಎಂಬೆಲ್ಲಾ ಪುಸ್ತಕಗಳಿಗೂ ಕೈ ಹಾಕಿ ಕಣ್ಣಾಡಿಸುತ್ತಾ ಪ್ರಶಾಂತ ಒಬ್ಬನೇ ಅಲ್ಲ ಜೀವನದಲ್ಲಿ ಅಂತ ಸಮಾಧಾನ ಪಟ್ಟುಕೊಳ್ಳುತ್ತಿದ್ದೆ.

ನನ್ನ ಬಾರ್ಡರ್ಸ್ ಪ್ರೀತಿ ಕೆಲವೊಮ್ಮೆ ಎಷ್ಟು ಹೆಚ್ಚಾಗಿಬಿಡುತ್ತಿತ್ತೆಂದರೆ ವೀಕೆಂಡ್ ಗಳಲ್ಲೂ ಬಂದುಬಿಡುತ್ತಿದ್ದೆ. ಇದೇನಪ್ಪಾ ಇವಳು ಸುತ್ತಾಡಲೂ ಬರದೆ ಪುಸ್ತಕ ಓದಲು ಹೋಗುತ್ತಿದ್ದಾಳಲ್ಲಾ ಅಂತ ಪ್ರಶಾಂತ ಗಾಬರಿಯಾಗಿ ನನ್ನ ಜೊತೆಯಲ್ಲೇ ಬಂದು ತಾನೂ ಪುಸ್ತಕ ಹಿಡಿದು ಕೂರುತ್ತಿದ್ದ. ಇಬ್ಬರೂ ಕಾಫಿ ಹೀರುತ್ತ ನಾವು ಓದುತ್ತಿದ್ದ ಪುಸ್ತಕಗಳ ವಿಷಯಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದೆವು. ನಾನು ಪ್ರಶಾಂತನನ್ನು ನೋಡಿ, ಒಪ್ಪಿ ಮದುವೆಯಾಗಿಬಿಟ್ಟಿದ್ದೆ. ಗೆಳೆಯನಾಗಿ ಅವನು ನನಗೆ ಗೊತ್ತೇ ಇರಲಿಲ್ಲ; ಪರಿಚಯವಾಗಿದ್ದೇ ಗಂಡನಾಗಿ. ಆದರೆ ಗಂಡ ಹೆಂಡತಿಯಾಗಿಯೂ-ಗಂಡ ಹೆಂಡತಿಯಲ್ಲದೆ ಕಾಲೇಜು ಹುಡುಗರಂತೆ ಯಾವುದೋ ಪುಸ್ತಕದ ಕಥೆ ಕೇಳಿಕೊಳ್ಳುತ್ತಾ, ಕನಸು ಕಾಣುತ್ತಾ, ವಾದ ಮಾಡುತ್ತಾ, ಕಾಫಿಗಳನ್ನು ಎಕ್ಸ್ ಚೇಂಜ್ ಮಾಡಿಕೊಳ್ಳುತ್ತಾ ನಾವು ಹೊಸ ಸ್ನೇಹ ಕಟ್ಟಿಕೊಂಡಿದ್ದೂ ಈ ಬಾರ್ಡರ್ಸ್ ನಲ್ಲೇ ಆಗಿತ್ತು.

ಅಲ್ಲಿದ್ದ ಪ್ರವಾಸದ ಪುಸ್ತಕಗಳನ್ನೆಲ್ಲಾ ಹರವಿಕೊಂಡು ಒಂದು ಸ್ವಲ್ಪ ದುಡ್ಡು ಕೂಡಿಟ್ಟುಕೊಂಡು ಮುಂದೆ ಯಾವ ಯಾವ ಜಾಗಗಳಿಗೆ, ದೇಶಕ್ಕೆ ಹೋಗಬೇಕೆನ್ನುವ ಪ್ಲಾನುಗಳನ್ನೂ ಅಲ್ಲೇ ಮಾಡುತ್ತಿದ್ದೆವು. ಇಷ್ಟೆಲ್ಲಾ ಸಮಯವನ್ನು ಬಾರ್ಡರ್ಸ್ ನಲ್ಲಿ ಕಳೆಯುತ್ತಿದ್ದುದರಿಂದಲೋ ಏನೋ ನಮಗೆ ಸಮಾಧಾನವಾಗುವಂತೆ ಪ್ರತೀ ತಿಂಗಳೂ ನೂರು ಡಾಲರಿಗೆ ಪುಸ್ತಕಗಳನ್ನು ಕೊಂಡುಕೊಳ್ಳುತ್ತಿದ್ದೆವು. ಮುಂದೊಮ್ಮೆ ನಾವು ನಮ್ಮೂರಿಗೆ ವಾಪಸ್ ಹೋದಾಗ ನೆನಪಿಸಿಕೊಳ್ಳಲು ಈ ಪುಸ್ತಕವನ್ನು ಯಾವ ತಾರೀಕು ಓದಿದ್ವಿ? ಏನೆಲ್ಲಾ ಚರ್ಚೆ ಮಾಡಿದ್ವಿ ಅನ್ನುವುದನ್ನೆಲ್ಲಾ ಬರೆದು ಆಯಾ ಪುಸ್ತಕಗಳಲ್ಲಿ ಚೀಟಿ ಅಂಟಿಸಿಕೊಳ್ಳುತ್ತಿದ್ದೆವು.
 
ಗೆಳೆಯನಾಗಿದ್ದ, ನನ್ನ ಗಂಡನಲ್ಲೊಬ್ಬ ಗೆಳೆಯನನ್ನು ಹುಡುಕಿಕೊಳ್ಳಲು ಸಹಾಯ ಮಾಡಿದ್ದ, ನಾವಿದ್ದ ಮನೆಯ ಹತ್ತಿರದ ಬಾರ್ಡರ್ಸ್ ಇನ್ನೇನು ಮುಚ್ಚುವುದರಲ್ಲಿತ್ತು. ಅಮೆರಿಕಾದ ರಿಸೆಷನ್ ನ ಬಿಸಿ ಮತ್ತು ಎಲೆಕ್ಟ್ರಾನಿಕ್ ಪುಸ್ತಕಗಳ ಅಬ್ಬರದ ಬಳಕೆ ಅದಕ್ಕೂ ತಟ್ಟಿದಂತಿತ್ತು. ರಿಸೆಷನ್ ನಿಂದಾಗಿ ಗ್ರಾಹಕರು ಖರೀದಿ ಮಾಡುವುದು ಕಡಿಮೆಯಾಗಿದ್ದರಿಂದ ಮತ್ತು ಬಾರ್ಡರ್ಸ್ ಸುಮಾರು ವರ್ಷಗಳಿಂದ ನಷ್ಟದಲ್ಲೇ ನಡೆಯುತ್ತಿದ್ದುದರಿಂದ ಇಡೀ ಸಂಸ್ಥೆ ಪಾಪರ್ ಚೀಟಿ ಗೆ ಅರ್ಜಿ ಹಾಕಿತ್ತು. ನಾನು ತಿಂಗಳಿಗೆ ಖರ್ಚು ಮಾಡುತ್ತಿದ್ದ ನೂರು ಡಾಲರ್ ಸಾಲದಾಯಿತೇನೋ ಅಂತ ಗಿಲ್ಟ್ ಬರಿಸಿಬಿಟ್ಟಿತ್ತು.

ನಮ್ಮ ದೇಶದಲ್ಲಿ ಮೊದಲು ಕೇಬಲ್ ಟಿವಿ ಬಂದಾಗ ಪತ್ರಿಕೆಗಳಿಗೆ, ಮ್ಯಾಗಜ಼ೀನುಗಳಿಗೆ ಚೇತರಿಸಿಕೊಳ್ಳದಂತಹ ಹೊಡೆತ ಆಗಿತ್ತು. ಜನ ಪುಸ್ತಕ-ಪೇಪರ್ ಓದುವುದನ್ನು ಬಿಟ್ಟು ಚಾನೆಲ್ ಗಳ ಬಟನ್ ಒತ್ತುತ್ತಾ ಬಣ್ಣ ಬಣ್ಣದ ತೆರೆಗಳ ಮೂಲಕ ಬೇರೆಯೇ ಲೋಕದ ವೀಕ್ಷಕರಾದರು. ನ್ಯೂಸ್ ಅನ್ನು ಓದುವುದಕ್ಕಿಂತ ಅದನ್ನು ನೋಡಿಕೊಳ್ಳುತ್ತಾ ಕೇಳುವುದೇ ಮಜ ಅನ್ನಿಸತೊಡಗಿತ್ತು. ಹೊಸ ತಂತ್ರಜ್ನಾನದ ಅಲೆಯೊಂದು ಸ್ಥಾಪಿತವಾಗಿದ್ದ ವ್ಯವಸ್ತೆಯೊಂದರ ಬುಡ ಸಡಿಲ ಮಾಡಿ ಹೋಗಿತ್ತು. ಪತ್ರಿಕೆಗಳು ಅಳಿದಿರಲಿಲ್ಲ, ನ್ಯೂಸ್ ಕೇಳುವುದು-ಓದುವುದು ತಪ್ಪಿರಲಿಲ್ಲ. ಆದರೆ ಸ್ಪರ್ಧೆ ಅತಿಯಾಗಿ ಹೆಚ್ಚಿತ್ತು. ಯಾರು ಉತ್ತಮವಾದದ್ದನ್ನು ಕಡಿಮೆ ಬೆಲೆಗೆ ಕೊಡುತ್ತಾರೋ ಅವರಿಗೆ ಮುನ್ನಡೇ ಎಂಬಂತಾಗಿತ್ತು. ಅವತ್ತು ಪತ್ರಿಕೆಗಳಿಗೆ ಬಂದ ಹಾಗೆಯೇ ಇವತ್ತು ಪುಸ್ತಕಗಳಿಗೂ ಗಂಡಾಂತರ ಬಂದಿದೆ. ತಂತ್ರಜ್ನಾನದ ಮತ್ತೊಂದು ವಿನೂತನ ಅಲೆ ಪುಸ್ತಕಗಳನ್ನು ಒದುವ ರೀತಿಯನ್ನೇ ಬದಲಾಯಿಸಲು ಸುನಾಮಿಯಂತೆ ಬರುತ್ತಿದೆ. ಈ ಅಲೆಯ ಹೊಡೆತ ತಾಳದೆ ನನ್ನ ಹಳೇ ಗೆಳೆಯ ಬಾರ್ಡರ್ಸ್ ಮುಗ್ಗರಿಸಿದ್ದಾನೆ.

ಈಗ ಓದುಗ ಪೂರಾ ಬೆಲೆ ಕೊಟ್ಟು ಪೇಪರನ್ನೋ, ಹಾರ್ಡ್ ಬೈಂಡ್ ನ ಪುಸ್ತಕವೊಂದನ್ನೋ ಖರೀದಿಸುವ ಗೋಜಿಗೆ ಹೋಗದೇ ಅದರ ಅರ್ಧಕ್ಕಿಂತ
ಕಡಿಮೆ ಬೆಲೆಯಲ್ಲಿ ಸಿಗುವ ಎಲೆಕ್ಟ್ರಾನಿಕ್ ವರ್ಷನ್ ಗಳಿಗೆ ಮಾರುಹೋಗುತ್ತಿದ್ದಾನೆ. ಪತ್ರಿಕೆಗಳೂ, ಮ್ಯಾಗಜ಼ೀನುಗಳೂ ಎಲ್ಲವೂ ಎಲೆಕ್ಟ್ರಾನಿಕ್ ವರ್ಷನ್ ನಲ್ಲಿ ಲಭ್ಯ. ಪೇಪರಿಗೆ ಖರ್ಚು ಮಾಡುವ ಅಗತ್ಯವಿಲ್ಲ. ಬ್ಯಾಟರಿ-ಇಂಟರ್ ನೆಟ್ ಸಂಪರ್ಕ ಇದ್ದರೆ ಸಾಕು! ಇತ್ತೀಚೆಗೆ ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ ಎಬ್ಬಿಸಿರುವ ಕಿಂಡಲ್, ನೂಕ್, ಸೋನಿಯ ಇ ರೀಡರ್, ಐ ಪ್ಯಾಡ್ ನಂತಹ ಉಪಕರಣಗಳು ಓದುವುದನ್ನು ಇನ್ನೂ ಹೊಸ ಗೀಳನ್ನಾಗಿ ಮಾಡುತ್ತಿವೆ. ಹತ್ತು ಪುಸ್ತಕಗಳನ್ನು ಹೊತ್ತು ತಿರುಗುವ ಅಗತ್ಯವಿಲ್ಲದೆ ಒಂದು ಸಣ್ಣ ಸ್ಟೈಲಿಶ್ ಉಪಕರಣವನ್ನು ಜೊತೆಯಲ್ಲಿಟ್ಟುಕೊಂಡರೆ ಸಾಕು. ಇಡೀ ದಿನ ಅದರಲ್ಲೇ ಹುಡುಕಾಡಿ ಐದಾರು ಪುಸ್ತಕಗಳನ್ನು ಓದಿಬಿಡಬಹುದು! ಬಾರ್ಡರ್ಸ್ ನಲ್ಲಿ ಸಿಗುತ್ತಿದ್ದ ೩೦ ಡಾಲರಿನ ಪುಸ್ತಕ ಅಮೆಜ಼ಾನ್ ನಲ್ಲಿ ೨೦ ಡಾಲರಿಗೆ ಸಿಕ್ಕರೆ ಅಥವಾ ಅದೇ ಪುಸ್ತಕ ಎಲೆಕ್ಟ್ರಾನಿಕ್ ವರ್ಷನ್ ನಲ್ಲಿ, ’ಕಿಂಡಲ್’ ನಲ್ಲಿ ೫ ಡಾಲರಿಗೆ ಓದಲು ಸಿಕ್ಕರೆ ಯಾರು ಬಾರ್ಡರ್ಸ್ ನಂತಹ ಪುಸ್ತಕದ ಅಂಗಡಿಗಳಲ್ಲಿ ಖರೀದಿಸಲು ಹೋಗುತ್ತಾರೆ? ಎಲ್ಲರೂ ಅಲ್ಲಿ ಬರೀ ಕಾಫಿ ಹೀರುತ್ತಾ ಕುಳಿತು ಓದುವ ಖುಷಿಗೆ ಮಾತ್ರ ಹೋಗುತ್ತಾರೆ!
 
ಪುಸ್ತಕಗಳನ್ನು ಖರೀದಿಸಿ ಸ್ವತ್ತಿನಂತೆ ಕೂಡಿಟ್ಟುಕೊಳ್ಳುತ್ತಿದ್ದ ನನ್ನಂತವರಿಗೆ ಇದು ಮಹಾನ್ ಗೊಂದಲದ ಸಮಯ, ತಲೆಬೇನೆ. ಮರಗಳನ್ನು ಕಡಿದು ಮಾಡಿರುವ ಪುಸ್ತಕಗಳನ್ನು ಕೊಳ್ಳುವವರು ಪರಿಸರ ಪ್ರೇಮಿಗಳಲ್ಲ...ಅವರು ಇನ್ನೂ ಮರಗಳ ಕುರಿತು ಗಾಢವಾಗಿ ಯೋಚನೆ ಮಾಡಿಲ್ಲ...ಎಂದು ಮಾರ್ಕೆಟಿಂಗ್ ಮಾಡುತ್ತಾ ಈ ಎಲೆಕ್ಟ್ರಾನಿಕ್ ಪುಸ್ತಕಗಳು ಮನಸ್ಸಿಗೆ ಸಿಕ್ಕಾಪಟ್ಟೆ ಗಿಲ್ಟ್ ತುಂಬುತ್ತಿವೆ. ಕೈಯ್ಯಲ್ಲಿ ಹಿಡಿಯದೆ, ತಡವದೆ, ಚಿತ್ರ-ಅಕ್ಷರಗಳನ್ನು ನೇವರಿಸದೇ ಓದುವುದೂ ಒಂದು ಓದಾ??? ನಿನ್ನ ಲಾಯಲ್ಟಿ ಕಳೆದುಕೊಳ್ಳಬೇಡ...ಅಂತ ಶೆಲ್ಫಿನಲ್ಲಿರುವ ಪುಸ್ತಕಗಳು ಕೂಗಿಕೊಳ್ಳುತ್ತಿವೆ...ಒಂದು ಕಡೆ ಸ್ನೇಹಿತನೊಬ್ಬನನ್ನು ಕಳೆದುಕೊಂಡ ಬೇಸರ, ಇನ್ನೊಂದೆಡೆ ಮಿರಮಿರನೆ ಮಿಂಚುತ್ತಾ ಮಡಿಲಲ್ಲಿ ಕೂತಿರುವ ಕಿಂಡಲ್...ಜೀವನದಲ್ಲಿ ಏನೆಲ್ಲಾ ವಿಷಯಗಳು ಮನಸ್ಸನ್ನು ಅಸ್ಥವ್ಯಸ್ಥ ಮಾಡಿಬಿಡಬಲ್ಲವು!

(ಮುಂದುವರಿಯುವುದು)
 
 
 
 
 
 
Copyright © 2011 Neemgrove Media
All Rights Reserved