|
|
|
ಮೂರು ಲೋಕದ ಮೋಹ ಕರೆವಂತೆ
ಶ್ರೀಮತಿ ಪದ್ಮಾ ಶ್ರೀರಾಮ್
ಒಂದು ಸಲ ಅತ್ಮೀಯರೊಬ್ಬರನ್ನು ಕಾಣಲು ಅವರ ಮನೆಗೆ ಹೋದೆ. ಒಳಾಂಗಣದಲ್ಲಿ ಕಾಯತ್ತಾ ಕುಳಿತಿದ್ದಾಗ ಒಂದು ನವಿರಾದ ಸುಗಂಧದ ಅಲೆ ತೇಲಿ ಬಂದಿತು. ಒಮ್ಮೆ ಮೈಮರೆಸುವ, ಮತ್ತೊಮ್ಮೆ ನವಿರಾಗಿ ನೇವರಿಸುವ ತಂಗಾಳಿಯಂತೆ ಮೈಮನಗಳನ್ನು ಅವರಿಸಿದ ಆ ಪರಿಮಳಭರಿತ ಆವರಣದಲ್ಲಿ, ಸ್ಮ್ರತಿ ವಿಸ್ಮ್ರತಿಗಳ ಲೋಕದಲ್ಲಿ ಮುಳುಗುತ್ತ ಏಳುತ್ತ, ಕೋಶ ರಚಿಸಿಕೊಂಡು ತನ್ನ ನೂಲಿನ ಬಲೆಯಲ್ಲಿ ತಾನೇ ಬಂಧಿಯಾದ ಕೋಶಜೀವಿಯಂತೆ ಪರಿಮಳದ ಬಂಧಿಯಾಗಿದ್ದೆ. ಇದ್ದಕ್ಕಿದ್ದ ಹಾಗೆ ಯಾರೋ ಮುಟ್ಟಿದಂತಾಗಿ ಕಣ್ಣುಬಿಟ್ಟರೆ, ಸ್ನೇಹಿತರು ಏನಿದು? ಎನ್ನುವಂತೆ ನಗುತ್ತಿದ್ದರು! ಮನೆಯಲ್ಲಾ ತುಂಬಿಕೋಂಡಿರುವ ಈ ಸುವಾಸನೆ ಯಾವುದು?ಎಂದೆ. ಆಗ ಅವರು ಬೆಟ್ಟು ಮಾಡಿ ತೋರಿಸಿದಾಗ ಕಂಡದ್ದು ವೇಸ್ನಲ್ಲಿ ಅಚ್ಚ ಹಸಿರು ಎಲೆಗಳ ಮಧ್ಯೆ ಶೋಭಿಸುತ್ತಿದ್ದ ಅಧ್ಬುತ ಹೂ ಮ್ಯಾಗ್ನೊಲಿಯಾ ಗ್ರ್ರಾಂಡಿಪ್ಲೋರಾ.
ಶುಭ್ರ ಸೌಂದರ್ಯ, ಸುವಾಸನೆಗಳ ಮ್ಯಾಗ್ನೋಲಿಯಾ ಗ್ರಾಂಡಿಪ್ಲೋರಾ ಮ್ಯಾಗ್ನೋಲಿಯೇಸಿ ಸಸ್ಯ ಕುಟುಂಬಕ್ಕೆ ಸೇರಿದ ಹೂ; ಸಂಪಿಗೆಯ ಬಂಧು. ಇದು ಗ್ರಾಂಡಿಪ್ಲೋರಾ ಅನಿಸಿಕೊಳ್ಳಲು ಕಾರಣ ಸಾಮಾನ್ಯ ಸಂಪಿಗೆಗಿಂತ ಮಿಗಿಲಾದ ಗಾತ್ರ. ಅಗಲವಾದ ದಳಗಳ ಕನೆವರ್ಣ ಹಾಗು ಅನಿರ್ವಚನೀಯ ಸುಗಂಧ. ಇದರ ತವರೂರು ಉತ್ತರ ಅಮೆರಿಕಾ. ಚಿಕ್ಕಂದಿನಲ್ಲಿ ನಾವೆಲ್ಲ ನೋಡಿದ್ದು ಬಿಳಿ ಸಂಪಿಗೆ ಹಾಗು ತೀಕ್ಷ್ಣ ಸೊಗಡಿನ ಕೆಂಡ ಸಂಪಿಗೆಗಳು. ಅನಂತರ ಸಣ್ಣದಳಗಳ ವಿಪರೀತ ಪರಿಮಳದ ಚೋಟಾರಿ ಚೈನಾ ಸಂಪಿಗೆ ಬಳಕೆ ಬಂದರೂ ಅಷ್ಟು ಜನಪ್ರಿಯವಾಗಿಲ್ಲ. ಇವೆಲ್ಲ ಸಂಪಿಗೆಗಳ ಮಧ್ಯೆ ಅನನ್ಯವಾಗುವ ಸಂಪಿಗೆ ಮ್ಯಾಗ್ನೋಲಿಯಾ ಗ್ರಾಂಡಿಪ್ಲೋರಾ.
ಹೂ ಬಿಡುವ ಸಸ್ಯಗಳ ವಿಕಾಸ ಪಥದಲ್ಲಿ ಸಂಪಿಗೆಗಳು ಪುರಾತನವಾದವು. ಸಂಪಿಗೆಯ ಅನೇಕ ದಳಗಳು, ಅಸಂಖ್ಯಾತ ಕೇಸರ-ಅಂಡಾಶಯಗಳು ಸಂಪಿಗೆಯ ಪರಾತತ್ವವವನ್ನು ಪುಷ್ಟೀಕರಿಸುತ್ತವೆ. ವಿಕಸನಕ್ರಿಯೆ ಮುಂದುವರಿದಂತೆ ಹೂವುಗಳು ಹೆಣ್ಣು-ಗಂಡು ಭಾಗಗಳ ಸಂಖ್ಯೆ ಸೀಮಿತಗೊಂಡವು.
ಬಹಳಕಾಲದಿಂದ ನಮಗೆ ಪರಿಚಿತವಾಗಿರುವ ಸಂಪಿಗೆಯ ಬಗ್ಗೆ ಆದಿಕವಿ ಪಂಪ, ಹರಿಹರರು ಕಾವ್ಯಗಳಲ್ಲಿ ಉಲ್ಲೇಖಿಸಿದ್ದಾರೆ. ಪಂಪನ ಪ್ರಕಾರ ಸಂಪಿಗೆಯ ಕಂಪನ್ನು 'ಗಳ್ಕನೆ' ನುಂಗಿದ ದುಂಬಿಗಳಿಗೆ ಅಜೀರ್ಣವಾಯಿತಂತೆ! ಪಂಪನಿಂದ ಹೊಗಳಿಸಿಕೊಂಡ ಸಂಪಿಗೆ ಆಧುನಿಕ ಕಾವ್ಯ ಕಾಲದಲ್ಲಿ ಕುವೆಂಪುರವರ ಮನ ಸರೆಹಿಡಿದಿದೆ. ಮ್ಯಾಗ್ನೋಲಿಯಾ ಗ್ರಾಂಡಿಪ್ಲೋರಾದ ಸೌಂದರ್ಯವನ್ನು ಅನುಭವಿಸಿದ ಕವಿ ಕುವೆಂಪುರವರ ಕವಿತೆಯ ಕೆಲವು ಸಾಲುಗಳನ್ನು ನೋಡಿ :
ಓ ನೋಡು ಬಾರಾ
ಗಿಡದ ಕೈ ಮುಗಿಹ ಮೊಗ್ಗಾಗಿ ಮೈದೂರುತಿದೆ
ಮ್ಯಾಗ್ನೋಲಿಯಾ ಗ್ರಾಂಡಿಪ್ಲೋರಾ
ಋತು ವಸಂತ ಸಖನ ಚೈತ್ರನಾಗಮನಕ್ಕೆ
ಸ್ವಾಗತದ ಬಯಸುವಂತೆ !
ಬೆಳ್ಳಿ ಬಿಳಿ ಕಲಶ ಶಿಶು ಬಾಯ್ದುಟಿಯ ತರೆವಂತೆ
ಅಲರುತಿದೆ ಮೂರು ಲೋಕದ ಮೋಹ ಕರೆವಂತೆ
ಈ ಮೈ ಹಸಿರು ದಾರಿಯಲ್ಲಿ
ನಡೆದೆ ಬಂದಿಹಳಿಂದು ತಾಯಿ ಮ್ಯಾಗ್ನೋಲಿಯಸುಮ ವಿಭೂತಿ ಶ್ರೀ ದಿವ್ಯರಾಜ್ಞೆ.
ಎತ್ತಣಿಂದೆತ್ತ
ಶ್ರೀಮತಿ ಬಿ. ಎಸ್. ನಾಗರತ್ನ |
ವಿಮಾನ ರೆಕ್ಕೆ ಬಿಚ್ಚಿ ಹಾರಿದ್ದು
ಆಗಸಕ್ಕೆ
ಮನದ ಹಕ್ಕಿಗೆ ರೆಕ್ಕೆ ಕಟ್ಟಿ ಇಳಿದದ್ದು
ನೆನಪಿನಾಳಕ್ಕೆ
ಮೇಲು ಮೇಲುಕೆ ಹಾರಿದಷ್ಟೂ
ತುಂತುಂಬಿ ಬರುವ ಬಾಲ್ಯದ ನೆನಪು
ಶಾಲೆಯ ರಜೆಗಾಗಿಯೇ ಚಾತಕದಂತೆ
ಕಾದು ಕುಳಿತು ಚಕ್ಕಡಿಯ
ಸೊಗಸ ಅನುಭವಿಸುವ ಆ
ಸಂತಸದ ಕ್ಷಣಗಳು
ತೆವರಿಯ ಮೇಲೆ ನಡೆವಾಗ
ಗದ್ದೆಯ ಕೆಸರಿನಲ್ಲಿ ಕಾಲು ಹೂತು
ಕೂಗಿಕೊಂಡದ್ದು-
ತೂಬಿನ ನೀರು ಹಾಯಿಸುತ್ತಿದ್ದ
ಚಿಕ್ಕಪ್ಪ ಬಂದು ಎತ್ತಿಕೊಂಡಿದ್ದು-
ಬಯಲು ಬಾರೆಯ ಹೊಲದಲ್ಲಿ
ಕಾಚಕ್ಕಿ ತಿಂದದ್ದು-
ಕಡು ಹಣ್ಣಾದ ಕಸಿಮಾವು ಮರದಮೇಲಿಂದ
ಧೊಪ್ಪನೆ ಮಡಿಲು ಸೇರಿದ್ದು-
ಮೌನದಲಿ ಕೂತು ಕಾವು ಕೊಡುತ್ತವೆ.
ನನ್ನ ಹೆತ್ತವರು ನಾ ಹೆತ್ತವರು-
ಹಳೆಯ ನೆನಪಿನ ಸವೆದ ಹಾದಿ
ಜತೆಗೆ ವರ್ತಮಾನದ ಸುಖ
ನೋಡು ನೋಡುತ್ತಿದ್ದಂತೆಯೇ ಹುಡುಕುತ್ತ ಹುಡುಕುತ್ತ-
ಹೊಸದಕ್ಕೆ ಕೈಚಾಚುತ್ತ
ನೋಯುವ-ನಲಿಯುವ ಈ ಪರಿ
ಪಯಣ ಎತ್ತಣಿಂದೆತ್ತ ?
ನೆನಪಿನ ಸುಳಿಯಲ್ಲಿ ಅದೆಷ್ಟು ಪದರಗಳು,
ಬಿಚ್ಚುತ್ತಾ ಹೋದಂತೆ ನಿತ್ಯ ನಿರಂತರ
ಪರಿವರ್ತನೆ-ಉತ್ಸಾಹ-ಸಂಭ್ರಮ
ಸೋಜಿಗ..! |
(ಕರ್ನಾಟಕದ ಮಹಿಳಾ ಪರ ಹೋರಾಟಗಾರರಿಗೆ ಅದರಲ್ಲೂ ಮೈಸೂರಿನವರಿಗೆ ಮೀರಕ್ಕ ಚಿರಪರಿಚಿತರು. ಈಕೆ ಸತತ ಸಂಘಟನಾಗಾರ್ತಿ. ಸಮಾನ ಮನಸ್ಕರ ಪುಟ್ಟದೊಂದು ಸಂಘ ಮಾಡಿಕೊಂಡು ಮಹಿಳೆಯರಿಗೆ ಅನ್ಯಾಯವಾದರೆ ಎಲ್ಲಿಗೂ ಹೋಗಿ ಹೋರಾಟ ಮಾಡಲೂ ಸೈ ಎಂದವರು. ತಾವು ಕಲಿಸುತ್ತಿದ್ದ ಪ್ರೌಢ ಶಾಲೆಯ ಮಕ್ಕಳಿಗೆ, ಅದರಲ್ಲೂ ಹೆಣ್ಣು ಮಕ್ಕಳಿಗೆ ವೈಟ್ ಟೈಗ್ರೆಸ್ ಆಗೇ ಸ್ಪೂರ್ತಿಯಾದವರು. ಕಲಿಸಿದ ಗುರು, ಪ್ರೀತಿಸಿ ಹರಸಿದ ಮನಸ್ಸು, ಸಹಾಯಕ್ಕೆ ನಿಂತ ಸೆಲೆ. ಮೀರಕ್ಕ ತಮ್ಮ ಉಪಾಧ್ಯಾಯಿನಿಯ, ಹೋರಾಟಗಾರ್ತಿಯ ಅತ್ಯಂತ ಚಟುವಟಿಕೆಯ ದಿನಗಳಲ್ಲಿ ದಾಖಲಿಸಿಟ್ಟ ಕೆಲವು ಅನಿಸಿಕೆಗಳನ್ನು, ಅನುಭವಗಳನ್ನು, ಅಂಕಿ ಅಂಶಗಳನ್ನು ಆಯಾಮದೊಟ್ಟಿಗೆ ನಿಯಮಿತವಾಗಿ ಹಂಚಿಕೊಳ್ಳುತ್ತಿದ್ದಾರೆ.)
ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಹಿಳೆ
ಶ್ರೀಮತಿ ಮೀರಾ ನಾಯಕ್ |
ಇಂದಿನ ಜಗತ್ತು ತುಂಬ ವೇಗದಲ್ಲಿ ಬದಲಾಗುತ್ತಿದೆ. ಬದಲಾವಣೆಯ ಹಂಬಲ ನಿರಂತರವಾಗಿ ಎಲ್ಲೆಲ್ಲೂ ಕಾಣುತ್ತಿದೆ. ಬದಲಾವಣೆಯ ಹಂಬಲಕ್ಕೆ ಕಾರಣ ಹೊಸ ಬದುಕಿನ ಅಪೇಕ್ಷೆ; ಗುರಿ. ಆ ಅಪೇಕ್ಷೆ ಅಥವಾ ಗುರಿಯ ಕಡೆ ಸಾಗಬೇಕಾದರೆ ಆಸೆ ಸಾರ್ವತ್ರಿಕವಾಗುತ್ತಿದ್ದಂತೆ ಸ್ಪರ್ಧೆ ಆರಂಭವಾಗುತ್ತದೆ. ಇಂದಿನ ಜಗತ್ತಿನಲ್ಲಿ ಸಾಮಾಜಿಕ ಸ್ಥಾನಮಾನ, ಆರ್ಥಿಕ ಅನುಕೂಲ ಇವುಗಳಿಗೆ ಸಂಬಂಧಿಸಿದ ಸ್ಪರ್ಧೆ ಪ್ರಮುಖವಾಗಿ ಕಾಣಿಸುತ್ತಿದೆ. ಇವು ಪರಸ್ಪರ ತೀರಾ ಭಿನ್ನವೇನಲ್ಲ, ಹೆಚ್ಚು ಕಡಿಮೆ ಒಂದಕ್ಕೊಂದು ಹೊಂದಿಕೊಂಡು ಇರುವಂಥವೇ ಆಗಿವೆ.
ಸ್ಥಿರ ಸಮಾಜದಲ್ಲಿ ಚಲನೆ, ಬದಲಾವಣೆ ಇರುವುದಿಲ್ಲ. ಸಾಮಾಜಿಕ ಸ್ಥಾನಮಾನ, ಆರ್ಥಿಕ ಅನುಕೂಲ ಇವು ಬಹುಮಟ್ಟಿಗೆ ಪೂರ್ವ ನಿರ್ಧರಿತವಾಗಿ ಇರುತ್ತಿದ್ದವು. ಧಾರ್ಮಿಕತೆ ಪ್ರಧಾನವಾಗಿ ಇದ್ದ ಸಮಾಜದಲ್ಲಿ ಧಾರ್ಮಿಕ ಸಾಧನೆ ಸಿದ್ಧಿಗಳ ಮಾನದಂಡದಿಂದ ಸಾಮಾಜಿಕವಾಗಿ ಗೌರವ ದೊರೆಯುತ್ತಿತ್ತೆಂಬುದು ನಿಜವಾದರೂ ಧಾರ್ಮಿಕ ಅಧಿಕಾರ, ಸಾಮಾಜಿಕ ಸ್ಥಾನಮಾನಗಳು, ಹುಟ್ಟಿದ ಜಾತಿ, ಜಾತಿಯೊಳಗೂ ನಿರ್ದಿಷ್ಟ ಪಂಗಡ ಇವುಗಳಿಗೆ ಸೀಮಿತವಾಗಿರುತ್ತಿತ್ತು. ದೊರೆತನದ ಜೊತೆಗೆ ಆರ್ಥಿಕ ಅನುಕೂಲವೂ ಇರುತ್ತಿತ್ತಾದ್ದರೂ ದೊರೆತನ ವಂಶಪಾರಂಪರ್ಯದಿಂದ ಬಹುಪಾಲು ನಿಗದಿಯಾಗುತ್ತಿತ್ತಾದ್ದರಿಂದ ಹುಟ್ಟಿದ ವರ್ಣ, ಜಾತಿ, ಮನೆತನಗಳೂ ಅದಕ್ಕೆ ಕಾರಣವಾಗುತ್ತಿದ್ದವು.
ಇಂದಿನ ಜಗತ್ತಿನಲ್ಲಿಯೂ ಧಾರ್ಮಿಕ ಅಧಿಕಾರ ಸಂಬಂಧವಾದ ಸ್ಥಾನಮಾನ ದೊರೆತನಕ್ಕೆ ಆ ಮೂಲಕ ಆರ್ಥಿಕ ಅನುಕೂಲತೆಗೆ ಸಂಬಂಧಿಸಿದ ಸ್ಥಾನಮಾನಗಳು ನಿಗದಿಯಾಗುವಂಥ ಸಮಾಜ. ರಾಷ್ಟ್ರಗಳು ಕೆಲವು ಇವೆಯಾದರೂ ಮುಖ್ಯವಾಗಿ ಇಂದಿನ ಜಗತ್ತು ಧರ್ಮಾಧಿಕಾರ, ರಾಜ ಪ್ರಭುತ್ವ ಇವುಗಳಿಂದ ದಿನೇ ದಿನೇ ದೂರ ಸರಿಯುತ್ತಲಿದೆ. ಆದ್ದರಿಂದ ಇಂದು ಪ್ರಜಾಸತ್ತಾತ್ಮಕ ಭಾರತದಂಥ ರಾಷ್ಟ್ರಗಳಲ್ಲಿಯಾಗಲಿ ಸಮತಾವಾದೀ ರಾಷ್ಟ್ರಗಳಲ್ಲಿಯಾಗಲಿ ಧರ್ಮಾಧಿಕಾರ, ರಾಜಪ್ರಭುತ್ವಗಳು ಇಲ್ಲ; ಇದ್ದರೂ ಸಾಮಾಜಿಕ ಸ್ಥಾನಮಾನ ಮತ್ತು ಆರ್ಥಿಕ ಅನುಕೂಲಗಳನ್ನು ಅವು ಪ್ರತಿನಿಧಿಸುವ ಸ್ಥಿತಿಯಲ್ಲಿ ಇಲ್ಲ.
ಭಾರತ ಪ್ರಜಾಸತ್ತಾತ್ಮಕ ರಾಷ್ಟ್ರ. ಇಲ್ಲಿ ಸಾಮಾಜಿಕ ಸ್ಥಾನಮಾನ, ಆರ್ಥಿಕ ಅನುಕೂಲಗಳನ್ನು ನಿರ್ಧರಿಸುವ ಮಾನದಂಡಗಳು ಬದಲಾಗುತ್ತಿವೆ. ಬದಲಾಗುವುದು ಅನಿವಾರ್ಯ. ದೊರೆತನಗಳ ಕಾಲ ಮುಗಿದಿದೆ, ಧರ್ಮಾಧಿಕಾರದ ಕಾಲವೂ ಮುಗಿಯುತ್ತಲಿದೆ, ಮುಗಿಯ ಬೇಕಾದದ್ದೂ ಅಗತ್ಯ, ಅನಿವಾರ್ಯ. ಆದ್ದರಿಂದ ಸಾಮಾಜಿಕ ಸ್ಥಾನಮಾನ, ಆರ್ಥಿಕ ಅನುಕೂಲಗಳನ್ನು ನಿರ್ಧರಿಸುವ ಸಂಗತಿಗಳು, ವಿಷಯಗಳು ಬದಲಾಗುತ್ತಿವೆ. ಸಾಂಪ್ರದಾಯಿಕವಾಗಿ ಧಾರ್ಮಿಕ ದೃಷ್ಟಿಯಿಂದ ಕೀಳೆಂದು ಪರಿಗಣಿತವಾದ ಲಿಂಗ, ಜಾತಿ, ಮತ, ಜನಾಂಗಗಳಿಂದಲೂ ಇಂದು ವ್ಯಕ್ತಿ ಸಾಮಾಜಿಕವಾಗಿ ಉನ್ನತವಾದ ಸ್ಥಾನಮಾನವನ್ನೂ, ಆರ್ಥಿಕ ಅನುಕೂಲವನ್ನೂ ಪಡೆಯಬಹುದಾದ ಸ್ಥಿತಿ ನಿರ್ಮಾಣವಾಗಿದೆ, ಆಗುತ್ತಲಿದೆ. ದೊರೆತನದ ಕಾಲ ಮುಗಿದೇ ಹೋಗಿರುವುದರಿಂದ ರಾಜಕೀಯ ಕ್ಷೇತ್ರದಲ್ಲಿ ವ್ಯಕ್ತಿಯ ಲಿಂಗ, ಜಾತಿ, ಮತ, ಜನಾಂಗ ಬೇಧವಿಲ್ಲದೆ ಅಧಿಕಾರ ಸ್ಥಾನ, ಆರ್ಥಿಕ ಅನುಕೂಲತೆ ಪಡೆಯಬಹುದಾದ ಸ್ಥಿತಿ ನಿರ್ಮಾಣವಾಗಿದೆ, ಆಗುತ್ತಲಿದೆ. ಜೊತೆಗೆ ಯಂತ್ರ ನಾಗರಿಕತೆ ನಿರ್ಮಾಣವಾಗಿರುವುದರಿಂದ ಮತ್ತು ಅದು ಮುಂದುವರಿಯುತ್ತಲೇ ಇರುವುದರಿಂದ ಸ್ಪರ್ಧಾತ್ಮಕ ಸಾಹಸಗಳಿಗೂ ಮುಕ್ತ ಅವಕಾಶ ಇರುವಂತಾಗಿದೆ. ಇಂಥ ಲಿಂಗ, ಜಾತಿ, ಮತ, ಜನಾಂಗಕ್ಕೆ ಸೇರಿದ ವ್ಯಕ್ತಿಗೆ ಇಂಥದೇ ಉದ್ಯೋಗ ಕಡ್ಡಾಯ, ಕುಲ ಧರ್ಮ ಎಂಬಂಥ ಸ್ಥಿತಿಯೂ ಈಗ ಇಲ್ಲವಾಗಿದೆ, ಇಲ್ಲವಾಗುತ್ತಿದೆ.
ಭಾಗ-೨
ಈ ಎಲ್ಲ ಕಾರಣಗಳಿಂದಾಗಿ ಸರ್ವರಿಗೆ ಸಮಬಾಳು, ಸರ್ವರಿಗೆ ಸಮಪಾಲು, ಸರ್ವರಿಗೆ ಸಮಾನವಾದ ಅವಕಾಶ-ಹಕ್ಕು ಎಂಬಂಥ ತತ್ವ, ಧೋರಣೆ ಸಾರ್ವತ್ರಿಕವಾಗಿ ವ್ಯಕ್ತವಾಗುತ್ತಿದೆ. ಇಂಥ ಮುಕ್ತ ವಾತಾವರಣ, ಮುಕ್ತ ಮನೋಧರ್ಮವನ್ನು ತಾತ್ವಿಕವಾಗಿ ಒಪ್ಪಿಕೊಂಡಿರುವಂಥ ಸಂವಿಧಾನವೂ ನಮ್ಮದಾಗಿದೆ. ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿಗೂ ತನ್ನೆಲ್ಲ ಶಕ್ತಿ, ಸಾಮರ್ಥ್ಯ, ಚೈತನ್ಯಗಳು ಲಿಂಗ, ಜಾತಿ, ಮತ, ಜನಾಂಗ ಕಾರಣವಾದ ಅಡೆತಡೆಗಳಿಲ್ಲದೆ ವಿಕಾಸವಾಗಬೇಕೆಂಬ ತತ್ವ ಸಾರ್ವತ್ರಿಕವಾಗಿದೆ, ಆಗುತ್ತಲಿದೆ.
ಆದರೆ ಸಾರ್ವತ್ರಿಕವಾಗುತ್ತಿದ್ದಷ್ಟು ವಾಸ್ತವದಲ್ಲಿ, ದೈನಂದಿನ ರಾಷ್ಟ್ರ ಜೀವನದಲ್ಲಿ ಅದು ನಿಜವಾಗುತ್ತಿಲ್ಲ. ಸಂಪ್ರದಾಯದ ಹ್ಯಾಂಗೋವರಿಂದ ನಮ್ಮ ಜನ ಸಮುದಾಯ ರಾಷ್ಟ್ರಕ್ಕೆ ಸ್ವಾತಂತ್ರ ದೊರೆತು ಅರವತ್ತು ವರ್ಷಗಳಿಗೂ ಹೆಚ್ಚಾಗಿದ್ದರೂ ಬಿಡುಗಡೆ ಪಡೆದು ಪೂರ್ಣ ಜಾಗೃತ ಸ್ಥಿತಿಗೆ ಬಂದು ತಲುಪಿಲ್ಲ. ಅದರಿಂದಾಗಿ ಲಿಂಗ, ಜಾತಿ, ಮತ, ಜನಾಂಗ, ಬೇಧ ಮತ್ತು ಮೇಲು ಕೀಳೆಂಬ ನಂಬಿಕೆ ಇವುಗಳ ನೆರಳ ನಸುಗತ್ತಲಲ್ಲಿ ತಡವರಿಸುತ್ತ ಸಾಗುತ್ತಲಿದೆ. ಮಹಿಳೆ ಈ ಲಿಂಗಬೇಧ ಸಂಬಂಧವಾದ ಅಡೆತಡೆಯಿಂದಾಗಿ ಸಾಮಾಜಿಕ ಸ್ಥಾನಮಾನ, ಆರ್ಥಿಕ ಅನುಕೂಲ ಇವುಗಳನ್ನು ಪುರುಷನಷ್ಟು ಪ್ರಮಾಣದ ಮುಕ್ತವಾತಾವರಣ ಮತ್ತು ಮುಕ್ತ ಅವಕಾಶಗಳ ಸಂದರ್ಭದಲ್ಲಿ ಪಡೆಯಲಾಗುತ್ತಿಲ್ಲ. ಮಹಿಳೆ ಪುರುಷನಿಗಿರುವಂಥ ಮುಕ್ತ ವಾತಾವರಣ ಮತ್ತು ಅವಕಾಶಗಳನ್ನು ಸಂವಿಧಾನದ ಬರವಣಿಗೆಯಲ್ಲಷ್ಟೇ ಉಳಿದು ಬಿಡದಂತೆ ದಿನನಿತ್ಯದ ವ್ಯಾವಹಾರಿಕ ಬದುಕಿನಲ್ಲಿಯೂ ಪಡೆದುಕೊಳ್ಳುವುದಕ್ಕಾಗಿ ಹೋರಾಟ ನಡೆಸುತ್ತಲೇ ಸಾಗಬೇಕಾಗಿದೆ. ಆದ್ದರಿಂದ ಮಹಿಳೆ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪುರುಷನೊಂದಿಗೆ ಸ್ಪರ್ಧಿಸಬೇಕಾಗಿದೆ, ಜೊತೆಗೇ ಈ ಸ್ಪರ್ಧೆ ಪುರುಷನೊಂದಿಗೆ ಸಮ ಸ್ಪರ್ಧೆಯಾಗುವಂತೆ ಮಾಡಲು ನಿರಂತರ ಸ್ತ್ರೀ ಪರವಾದ ಸಮಾನತಾ ಆಂದೋಲನವನ್ನು ನಡೆಸಬೇಕಾಗಿದೆ.
ಸಾಮಾಜಿಕ ಸ್ಥಾನಮಾನ ಮತ್ತು ಆರ್ಥಿಕ ಅನುಕೂಲಗಳ ಗಳಿಕೆಗೆ ಈ ಕಾಲದಲ್ಲಿ ಕಾರಣವಾಗುವ ಅಂಶಗಳು ಮುಖ್ಯವಾಗಿ ಇವು: ಶಿಕ್ಷಣ, ಅಧಿಕಾರ-ಸ್ಥಾನಗಳು, ಔದ್ಯೋಗಿಕ ಅವಕಾಶಗಳು, ಎಲ್ಲ ವಿಷಯಗಳಲ್ಲಿಯೂ ಪುರುಷನೊಂದಿಗೆ ಸಮಾನ ಹಕ್ಕುಗಳು.
ಶಿಕ್ಷಣ ಜ್ನಾನಾರ್ಜನೆಗೆ ಅಗತ್ಯ. ಅಧಿಕಾರ-ಸ್ಥಾನ ಸಾಮಾಜಿಕ ಸ್ಥಾನಮಾನದ ದೃಷ್ಟಿಯಿಂದ ಅಗತ್ಯ, ಔದ್ಯೋಗಿಕ ಅವಕಾಶಗಳು ಆರ್ಥಿಕ ಅನುಕೂಲ ಪ್ರಪ್ತಿಗೆ ಅಗತ್ಯ, ಪುರುಷನೊಂದಿಗೆ ಸಮಾನ ಹಕ್ಕುಗಳು ಸಮ ಸ್ಪರ್ಧೆಯ ದೃಷ್ಟಿಯಿಂದ ಅಗತ್ಯ. ಪುರುಷನೊಂದಿಗೆ ಸಮಾನ ಬಾಧ್ಯತೆಗಳೂ ಇರುವುದು ರಾಷ್ಟ್ರದ ಒಟ್ಟಿನ ಪ್ರಗತಿಯನ್ನು ಸಧಿಸುವುದಕ್ಕೆ ಅಗತ್ಯ.
ತಂತ್ರಯುಗದ ಭದ್ರ ಬುನಾದಿಯಲ್ಲಿ ಜನ ಸುಖ ಮತ್ತು ಆರ್ಥಿಕ ಭದ್ರತೆ ಬಯಸುವುದರಿಂದ ಶಿಕ್ಷಣ ಪಡೆದು ಸಂಬಳ ತರುವ ಕೆಲಸದಲ್ಲಿರುವ ಹೆಣ್ಣನ್ನೇ ಮದುವೆಯಾಗ ಬಯಸುವುದರಿಂದ ಸ್ತ್ರೀ ಶಿಕ್ಷಣ ಆದ್ಯತೆ ಪಡೆದಿದೆ. ಕಳೆದ ಶತಮಾನದಲ್ಲಿ ಈಶ್ವರ ಚಂದ್ರ ವಿದ್ಯಾಸಾಗರ ಗುಜರಾತಿನಲ್ಲಿ ಮೊಟ್ಟಮೊದಲ ಕನ್ಯಾಶಾಲೆ ತೆರೆದರೆ, ಇಂದು ಲಿಂಗ ಬೇಧವಿಲ್ಲದೆ ಶಿಕ್ಷಣ ಪಡೆಯುವ ಪರಿಸ್ಥಿತಿ ನಮ್ಮ ಸಮಾಜ ವ್ಯವಸ್ಥೆಯಲ್ಲಿದೆ.
(ಮುಂದುವರೆಯುವುದು) |
ಟ್ವಿಸ್ಟರ್
ಸಹನಾ ಶ್ರೀಧರ್ ೧೦ ವರ್ಷ, ೫ನೇ ಗ್ರೇಡ್,ಅಟ್ಲಾಂಟಾ |
ಅದು ನಾಶಮಾಡಿತ್ತು ದಾರಿಲಿದ್ದ ಎಲ್ಲವನು
ಮಾಡಿದ ಅನುಭವ ನಮಗೆ ಮಣ್ಣಿನ ಸ್ನಾನವನು
ಎಲ್ಲೆಲ್ಲೂ ಆಲಿಕಲ್ಲುಗಳ ಜೋರು
ಹತ್ತಿರಕ್ಕೇ ಬಂದೀತು ಹುಷಾರು
ಗಾಳಿಯಲ್ಲಿ ತೂರಿತ್ತೊಂದು ಟ್ರೇನು
ಯಾರದೋ ಪ್ರಾರ್ಥನೆಯ ಕೇಳಿಸಿಕೊಂಡೆ ನಾನು
ಚಿಮ್ಮಿತ್ತು ಆಕಾಶಕ್ಕೆ ಹಸುವೊಂದು
ಅನಿಸುತಿದೆ ಈ ರಾಕ್ಷನಿಗೆ ಕ್ರೂರ ಕಣ್ಣಿದೆಯೆಂದು
ಓಡು ನಿನಗೆಷ್ಟು ಜೋರಾಗಿ ಆಗುತ್ತೋ ಓಡು
ಯೋಚನೆ ಮಾಡಲು ಸಮಯವಿಲ್ಲ ಬಿಡು
ಏ ಹೆದರಬೇಡ! ಇದು ಬರೀ ಟ್ವಿಸ್ಟರ್
ಡಿಸ್ನಿ ಲ್ಯಾಂಡಿನಲ್ಲಿರುವ ಹುಚ್ಚ ರೈಡು ಮಿಸ್ಟರ್
(ಅನುವಾದ:ಆಯಾಮ
ಟ್ವಿಸ್ಟರ್ ಕವನಕ್ಕೆ ಚಿತ್ರ ಒದಗಿಸಿಕೊಟ್ಟಿದ್ದಾರೆ ಬೆಂಗಳೂರಿನ ಏಳು ವರ್ಷದ ಪುಟಾಣಿ ಆಶ್ರಯ) |
|
|
|
|
Copyright © 2011 Neemgrove Media
All Rights Reserved
|
|
|
|