ಮೌಲ್ಯಗಳಿಗೆ ತಿಲಾಂಜಲಿ
ವಿಶ್ವನಾಥ ರಾಜಶೇಖರ್ ಮಾಲಂಗಿ, ಅಟ್ಲಾಂಟ
ಮನೆಯ ಕಿಟಕಿಯಿಂದ ಆಗಸದಲ್ಲಿ ಚಲಿಸುತ್ತಿರುವ ಮೋಡಗಳನ್ನು ದಿಟ್ಟಿಸುತ್ತಿದ್ದೆ. ನನ್ನ ಗುಜರಾತಿ ಗೆಳೆಯರೊಬ್ಬರು ಹೇಳಿದ ಘಟನೆ ಮನಸ್ಸಿನಲ್ಲಿ ನೂರಾರು ಯೋಚನೆಯ ಅಲೆಗಳನ್ನು ಎಬ್ಬಿಸಿತ್ತು. ಜನರು ದುಡ್ಡಿನ ಸಂಪಾದನೆಗಾಗಿ, ನಮ್ಮ ಸಂಪಾದನೆಯಿಂದ ನಮ್ಮವರನ್ನೆಲ್ಲಾ ಚೆನ್ನಾಗಿ ನೋಡಿಕೊಳ್ಳುವ ಆಶಯದೊಂದಿಗೆ ಹುಟ್ಟಿದ ಊರು, ದೇಶವನ್ನು ತೊರೆದು ವಿದೇಶಕ್ಕೆ ಬರುತ್ತೇವೆ. ಎಲ್ಲಿದ್ದರೂ ಬದುಕಿನ ಕೆಲವು ಮೌಲ್ಯಗಳನ್ನು ಪಾಲಿಸುತ್ತಾ, ನಮ್ಮ ಇತಿ ಮಿತಿಗಳನ್ನು ಅರಿಯುತ್ತಾ ಆ ಚೌಕಟ್ಟಿನಲ್ಲಿಯೇ ನಡೆಯುತ್ತೇವೆ.
ಅಮೆರಿಕದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರಲ್ಲಿ ತೆಲುಗಿನವರು ಹಾಗು ಗುಜರಾತಿಗಳ ಸಂಖ್ಯೆಯೇ ಹೆಚ್ಚು. ತೆಲುಗಿನವರು/ ಕನ್ನಡದವರು/ತಮಿಳಿನವರು ಐಟಿ ಕಂಪನಿಗಳಲ್ಲಿ ಕೆಲಸ ಮಾಡಲು ಎಚ್೧ ವೀಸಾದಲ್ಲಿ ಬಂದರೆ, ಗುಜರಾತಿಗಳು ಹೆಚ್ಚಾಗಿ ಹೋಟೆಲ್, ಪೆಟ್ರೋಲ್ ಬಂಕ್, ರೆಸ್ಟೊರಾಂಟ್ ಹಾಗೂ ಕನ್ವೀನಿಯಂಟ್ ಸ್ಟೋರ್ ವ್ಯವಹಾರಗಳನ್ನು ನಡೆಸುವವರು. ಇವರೆಲ್ಲಾ ಹೆಚ್ಚಾಗಿ ಕೌಟುಂಬಿಕ ಕೋಟಾ ಗ್ರೀನ್ ಕಾರ್ಡ್ ಗಳನ್ನು ಪಡೆದು ಬಂದವರೇ ಹೆಚ್ಚು. ಅಂದರೆ ಅವರಲ್ಲಿ ಒಬ್ಬರಿಗೆ ಗ್ರೀನ್ ಕಾರ್ಡ್ ಬಂದರೆ ಅವರ ಅಣ್ಣ, ತಂಗಿ, ಅಕ್ಕ, ಚಿಕ್ಕಪ್ಪ, ದೊಡ್ಡಪ್ಪ, ಮಾವ ಎಲ್ಲರಿಗೂ ಗ್ರೀನ್ ಕಾರ್ಡುಗಳನ್ನು ಪ್ರಾಯೋಜಿಸಿರುತ್ತಾರೆ. ಈ ವಿಧಾನ ಸ್ವಲ್ಪ ನಿಧಾನವಾದರೂ ೪ ರಿಂದ ೫ ವರ್ಷದಲ್ಲಿ ಅವರೆಲ್ಲರಿಗೂ ಗ್ರೀನ್ ಕಾರ್ಡ್ ದೊರೆತು ಅವರು ಕೂಡಾ ಅಮೆರಿಕದಲ್ಲಿ ಬಂದು ನೆಲೆಸಿ ವ್ಯವಸ್ಥಿತವಾಗಿ ನಡೆಸುವ ವ್ಯವಹಾರಗಳನ್ನು ನೋಡಿಯೇ ಆಶ್ಚರ್ಯ ಪಡಬೇಕು. ನಾನು ನಮ್ಮ ಕಡೆಯ ಶೆಟ್ಟಿಗಳನ್ನೇ ವ್ಯವಹಾರ ಚತುರರು ಎಂದುಕೊಂಡಿದ್ದೆ. ಆದರೆ ಗುಜರಾತಿಗಳು ಅವರನ್ನೂ ಮೀರಿ ನಿಲ್ಲುತ್ತಾರೆ.
ಗುಜರಾತಿಗಳಲ್ಲಿ ತಾವು ಅಮೆರಿಕಾಗೆ ಹೋಗಿ ಅಲ್ಲಿ ಏನಾದರೂ ವ್ಯವಹಾರ ಮಾಡಿದರೆ ಅವರ ಸಮಾಜದಲ್ಲಿ ಅವರಿಗೆ ಸಿಗುವ ಘನತೆ ಗೌರವ ಹೆಚ್ಚು. ಅದಕ್ಕಾಗಿ ಹೆಚ್ಚು ಹೆಚ್ಚು ಜನರು ಅಮೆರಿಕಕ್ಕೆ ಬರಲು ಮುಗಿಬೀಳುತ್ತಾರೆ. ಅದಕ್ಕೆ ಅನೇಕ ಮೌಲ್ಯಗಳನ್ನು ಮೂಲೆಗೆ ತಳ್ಳಿ ಅನ್ಯ ಮಾರ್ಗಗಳನ್ನು ಆಯ್ದುಕೊಳ್ಳುತ್ತಾರೆ. ಅದನ್ನು ತಿಳಿಸುವುದಕ್ಕಾಗಿ ನಾನು ಇಷ್ಟೆಲ್ಲಾ ಪೀಠಿಕೆ ಬರೆಯಬೇಕಾಯಿತು.
ಎಷ್ಟೇ ದುಡ್ಡು ಖರ್ಚಾದರೂ ಸರಿಯೇ, ಏನು ಮಾಡಿಯಾದರೂ ಅಮೆರಿಕಾಗೆ ಹೋಗಲೇಬೇಕು ಎನ್ನುವ ಗುಜರಾತಿಗಳಲ್ಲಿ (ಬೇರೆ ಭಾರತೀಯರು ಬರುತ್ತಾರೆ. ಆದರೆ ಅವರಲ್ಲಿ ಗುಜರಾತಿಗಳೇ ಹೆಚ್ಚು) ಮೊದಲು ವಿಸಿಟರ್ ವೀಸಾದಲ್ಲಿ ಅಮೆರಿಕಕ್ಕೆ ಬಂದಿಳಿಯುತ್ತಾರೆ. ಬಂದವರು ಮತ್ತೆ ವಾಪಸು ಹೋಗದೆ ಇಲ್ಲೇ ಉಳಿದುಬಿಡುತ್ತಾರೆ. ಇವರು ಏನೇ ಆದರೂ ಕಷ್ಟಪಟ್ಟು ಕೆಲಸ ಮಾಡುತ್ತಾರೆ. ನನಗೆ ಗೊತ್ತಿರುವ ಇಬ್ಬರು ದಂಪತಿಗಳು ೨೨ ವರ್ಷದಿಂದ ಭಾರತಕ್ಕೆ ಹೋಗಿಲ್ಲ. ಅವರ ಮಕ್ಕಳು ಭಾರತದಲ್ಲೇ ಇದ್ದಾರೆ. ಹೋದರೆ ವಾಪಸ್ ಬರಲಾಗುವುದಿಲ್ಲ ಎಂಬ ಭಯ. ಕೆಲವರು ಇಲ್ಲಿಗೆ ಬಂದವರೆ ಇಲ್ಲಿನ ಅಮೆರಿಕನ್ ಪ್ರಜೆಯಾಗಿರುವ ಹುಡುಗ/ಹುಡುಗಿಯನ್ನು ಕಾನೂನು ರೀತ್ಯಾ ಕಾಂಟ್ರಾಕ್ಟ್ ಮದುವೆಯಾಗಿ (ಮುಂದೆ ಏನೂ ಸಮಸ್ಯೆ ಬಾರದಿರಲು) ತ್ವರಿತವಾಗಿ ಗ್ರೀನ್ ಕಾರ್ಡ್ ಗಿಟ್ಟಿಸುತ್ತಾರೆ. ಮದುವೆಯಾಗಿ ಅವರ ಜೊತೆ ಸಂಸಾರ ಮಾಡಬೇಕೆಂದೇನೂ ಇಲ್ಲ, ಅವರಿಗೆ ಇಂತಿಷ್ಟು ದುಡ್ಡು ಕೊಟ್ಟು ಕೈ ತೊಳೆದುಕೊಳ್ಳುತ್ತಾರೆ. ಒಂದು ಸಾರಿ ಗ್ರೀನ್ ಕಾರ್ಡ್ ಬಂದು ನಾಲ್ಕು ವರ್ಷ ಆದ ಮೇಲೆ ಅವರು ಅಮೆರಿಕನ್ ಪ್ರಜೆಯಾಗುವ ಅವಕಾಶವು ಇದೆ. ಇದಲ್ಲದೆ ಇಲ್ಲಿ ಹೆಚ್ಚಿನ ವ್ಯಾಸಂಗಕ್ಕಾಗಿ ಬರುವ ಅನೇಕರು ಇಲ್ಲಿ ಸರ್ಕಾರದಿಂದ ದೊರೆಯುವ ಅನುಕೂಲಗಳನ್ನು ಪಡೆಯಲು ವ್ಯಾಸಂಗ ಮುಗಿಯುತ್ತಿರುವಂತೆಯೇ ಇಲ್ಲಿನವರನ್ನೆ ಮದುವೆಯಾಗಿ ಗ್ರೀನ್ ಕಾರ್ಡ್ ಪಡೆದುಕೊಂಡವರಲ್ಲಿ ನನ್ನ ಸ್ನೇಹಿತರೇ ಕೆಲವರಿದ್ದಾರೆ.
ಆದರೆ ನನ್ನನ್ನು ಮೌಲ್ಯಗಳ ಬಗ್ಗೆ ತುಂಬಾ ಚಿಂತಿಸುವಂತೆ ಮಾಡಿದ್ದು ಮೊನ್ನೆ ನನ್ನ ಗುಜರಾತಿ ಸ್ನೇಹಿತರೊಬ್ಬರು ಹೇಳಿದ ಸಂಗತಿ. ಮೂರು ನಾಲ್ಕು ವರ್ಷಗಳ ದಿಂದೆ ನಾನು ಅವರ ಜೊತೆ ನ್ಯೂಯಾರ್ಕ್ ಹಾಗೂ ನ್ಯೂಜೆರ್ಸಿ ಪ್ರವಾಸಕ್ಕೆ ಹೋದಾಗ ಅವರ ಪರಿಚಯದ ಶಿವಂ ಹಾಗೂ ಅಮೃತ ಪಟೇಲ್ ದಂಪತಿಗಳ ಮನೆಗೆ ಹೋಗಿದ್ದೆವು. ಅವರಿಗೆ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಅಮೃತ ಇಂಡಿಯನ್ ಸ್ಟೋರ್ಸ್ ಗಳಲ್ಲಿ ಕೆಲಸ ಮಾಡಿ ಸಂಸಾರ ನಡೆಸುತ್ತಿದ್ದರೆ ಶಿವಂ ಮಾತ್ರ ಆರಾಮಾಗಿ ಟಿವಿ ನೋಡುತ್ತಾ ಸ್ನೇಹಿತರ ಜೊತೆ ಹರಟೆ ಹೊಡೆಯುತ್ತಾ ಕಾಲಹರಣ ಮಾಡುವ ಸೋಂಬೇರಿ ಆಸಾಮಿ. ಸುಮಾರು ೧೨ ವರ್ಷಗಳಿಂದ ನೆಲೆಸಿರುವ ಈ ದಂಪತಿಗಳಿಬ್ಬರು ಸಹ ಅಮೆರಿಕನ್ ಪ್ರಜೆಗಳು. ಸೋಮಾರಿಯ ಮನಸ್ಸು ದೆವ್ವದ ಕಾರ್ಖಾನೆ (Idle mind is a devils workshop) ಎಂಬ ನಾಣ್ಣುಡಿಯಂತೆ ಶಿವಂ ಪಟೇಲ್ ಗೆ ಕೆಲಸ ಮಾಡದೆ ದುಡ್ಡು ಸಂಪಾದಿಸುವ ಐಡಿಯಾ ಹೊಳೆದಿದೆ. ಅದನ್ನು ಕಾರ್ಯರೂಪಕ್ಕೆ ತರಲು ಆತ ಕಾನೂನು ರೀತ್ಯ ತನ್ನ ಹೆಂಡತಿಗೆ ಡೈವೋರ್ಸ್ ಕೊಟ್ಟು ಹೆಂಡತಿ ಮಕ್ಕಳೊಂದಿಗೆ ಒಂದೇ ಮನೆಯಲ್ಲಿ ವಾಸವಾಗಿದ್ದಾನೆ. ಸ್ವಲ್ಪ ದಿನದ ನಂತರ ಸೂರತ್ ಗೆ ಹೋಗಿ ಅಲ್ಲಿ ಹುಡುಗಿಯೊಬ್ಬಳನ್ನು ರಿಜಿಸ್ಟರ್ ಮದುವೆಯಾಗಿ ಅವಳಿಗೆ ಗ್ರೀನ್ ಕಾರ್ಡ್ (ಮೊದಲೆ ಹೇಳಿದಂತೆ ಅಮೆರಿಕನ್ ಪ್ರಜೆಯನ್ನು ಮದುವೆಯಾದರೆ ತ್ವರಿತವಾಗಿ ಗ್ರೀನ್ ಕಾರ್ಡ್ ಸಿಗುತ್ತದೆ) ಕೊಡಿಸಿದ್ದಾನೆ. ಅದಕ್ಕೆ ಅವನು ಪಡೆದುಕೊಂಡ ಹಣ ಐವತ್ತು ಸಾವಿರ ಡಾಲರ್ ಅಂದರೆ ಸುಮಾರು ೨೩ ಲಕ್ಷ ರುಪಾಯಿ.
ಸ್ವಲ್ಪ ದಿನಗಳ ನಂತರ ಅಮೃತ ಪಟೇಲ್ ಸಹಾ ಸೂರತ್ ಗೆ ಹೋಗಿ ಶಿವಂ ಪಟೇಲ್ ಮದುವೆಯಾದ ಹುಡುಗಿಯ ಪ್ರಿಯಕರನನ್ನು ರಿಜಿಸ್ಟರ್ಡ್ ಮದುವೆಯಾಗಿ ಅವನಿಗೆ ಗ್ರೀನ್ ಕಾರ್ಡ್ ಕೊಡಿಸಿ ಅವನಿಂದ ಐವತ್ತು ಸಾವಿರ ಡಾಲರ್ ಪಡೆದುಕೊಂಡು ನ್ಯೂಯಾರ್ಕ್ ಗೆ ಕರೆದುಕೊಂಡು ಬಂದಿದ್ದಾಳೆ.
ಹೀಗೆ ಗಂಡ ಹೆಂಡತಿ ಕಾನೂನು ರೀತ್ಯಾ ಡೈವೊರ್ಸ್ ಪಡೆದುಕೊಂಡು ಹೆಚ್ಚು ಕಷ್ಟವಿಲ್ಲದೆ ಒಂದು ಲಕ್ಷ ಡಾಲರ್ (೪೯ ಲಕ್ಷ ರುಪಾಯಿ) ಸಂಪಾದಿಸಿ ಹುಡುಗಿ ಹಾಗೂ ಅವಳ ಪ್ರಿಯಕರನನ್ನು ಅಮೆರಿಕಾಗೆ ಕರೆದುಕೊಂಡು ಬಂದಿದ್ದಾರೆ. ಈಗ ಆ ಹುಡುಗಿ ಹಾಗೂ ಪ್ರಿಯಕರ ತಾವು ಹೇಗಾದರೂ ಸರಿ ಅಮೆರಿಕಾಗೆ ಬಂದೆವಲ್ಲಾ ಎಂಬ ಖುಷಿಯಿಂದ ಜೀವನ ನಡೆಸುತ್ತಿದ್ದಾರೆ. ಬದುಕಿನ ಮೌಲ್ಯಗಳಿಗೆ ತಿಲಾಂಜಲಿಯನ್ನಿಟ್ಟು ಹೇಗಾದರೂ ಸರಿ ಅಮೆರಿಕಕ್ಕೆ ಬಂದು ಹಣ ಅಂತಸ್ತು ಸ್ಥಾನಮಾನ ಪಡೆಯಬೇಕೆಂಬ ಹಂಬಲದ ಜನರು ಯಾವಾಗಲೂ ನನಗೆ ಮೌಲ್ಯಗಳ ಬಗ್ಗೆ ಮತ್ತೆ ಮತ್ತೆ ಚಿಂತಿಸುವಂತೆ ಮಾಡುತ್ತಾರೆ. ನೀವೇನಂತೀರಾ?
|