ಗಂಡಿಗೆ-ಹೆಣ್ಣಿಗೆ ಕೊಡಬೇಕಾದ್ದು ಕೊಟ್ಟು, ಮದುವೆಯಲ್ಲಿ ಹಾಜರಿದ್ದವರಿಗೆ ಸಮಾಧಾನದ ಊಟ ನೀಡಿ, ಆಶೀರ್ವಾದದ ಭಾಷಣ ಮಾಡಿ ಆನಂದದಿಂದ ಕಳಿಸಿಕೊಟ್ಟೆವು. ದೂರದಿಂದಲೇ ಅಸ್ಪೃಶ್ಯತೆಯನ್ನು ಆಚರಿಸುವ ಜನವರ್ಗದ ಹೆಣ್ಣು ಹತ್ತಿರದಿಂದ ಅಸ್ಪೃಶ್ಯನನ್ನು ಪ್ರೀತಿಸುತ್ತಾಳೆ, ಬದುಕು ಕಟ್ಟಿಕೊಳ್ಳಬಯಸುತ್ತಾಳೆ ಎಂಬುದು ಮಾನವತಾವಾದಿಗಳ ಮನಗಳಲ್ಲಿ ಸಂತಸ ಹುಟ್ಟಿಸುತ್ತದೆ. ಆ ಹೆಣ್ಣಿಗೆ ನಾನು ಮನಸ್ಸಿನಲ್ಲೆ ನಮಸ್ಕರಿಸಿದೆ. ಮೇಲು ಜಾತಿಯನ್ನು ಅಪ್ಪಿಕೊಳ್ಳುವ ಅಸ್ಪ್ರಶ್ಯನ ಅದಮ್ಯ ಆಸೆಯನ್ನು ಪೂರೈಸಿಕೊಡದ ಭಾರತದ ಮನಸ್ಸು ಅದೆಂಥ ದರಿದ್ರದ್ದು ಅನಿಸಿತು!
ಆದರೆ, ಆದರೆ...ಬಹಳ ವರ್ಷಗಳು ಕಳೆಯಲಿಲ್ಲ. ಹುಡುಗ, ಅದೇನು ಕೀಳುರಿಮೆ ಕಾಡಿತೋ ಅಥವ ಮೇಲು ವರ್ಗದ ಬಗ್ಗೆಯಾದ ಸಾಂಪ್ರದಾಯಿಕ ದ್ವೇಷವೊ ಹುಡುಗಿಯ ಬಗ್ಗೆ ತಾತ್ಸಾರ ಮಾಡತೊಡಗಿದ. ತನ್ನ ಸಮುದಾಯದ ರುಚಿಗಾಗಿ ದಾರಿತಪ್ಪಿದ. ಅಥವಾ ಇನ್ನೇನು ಕಾರಣವೊ ಸಂಸಾರವನ್ನೇ ಹಿಂಸೆಮಾಡಿದ. ತಾನೂ ಹಿಂಸೆಪಟ್ಟುಕೊಂಡ. ಸಾಧ್ಯಮಾಡಿಕೊಂಡದ್ದನ್ನು ನಿರ್ವಹಿಸಲಾರದೆ ಪ್ರೀತಿಸಿ ಬಂದ ಹೆಣ್ಣಿಗೆ ಜೀವನ ಕೊಡಲಾರದೆ ಹೋದ. ಅವನ ಬಯಕೆಯ ನವಭಾರತ ಹುಟ್ಟಲೇ ಇಲ್ಲ.
ಇಂಥ ನೂರು ಪ್ರಸಂಗಗಳನ್ನು ನೋಡಿ. ಭಾರತದಲ್ಲಿ 'ಯೂಸ್ ಅಂಡ್ ಥ್ರೋ' ಸಂಸ್ಕೃತಿಗೆ ಬಳಕೆಯಾಗುತ್ತಿರುವವಳು ಹೆಣ್ಣು. ಇಟ್ಟುಕೊಳ್ಳುವುದು, ಕಟ್ಟಿಕೊಳ್ಳುವುದನ್ನು ಬಿಟ್ಟರೆ ಎಸೆಯುವುದೊಂದೆ ಅವಳಿಗಿರುವ ಭಾಗ್ಯ! 'ಇಟ್ಟುಕೊಂಡವಳು ಇರೋವರೆಗೆ ಕಟ್ಟಿಕೊಂಡವಳು ಕೊನೆವರೆಗೆ' ಎಂಬ ಗಾದೆ ನಮ್ಮಲ್ಲಿ ಇದೆ. ಇದನ್ನು ಗಂಡು ಸಮಾಜ ಸೃಷ್ಟಿಸಿತೊ, ಹೆಣ್ಣು ಸಮಾಜ ಸೃಷ್ಟಿಸಿತೊ ಗೊತ್ತಿಲ್ಲ. ಗಂಡು ಸಮಾಜ ಕಟ್ಟಿರಲಾರದು. ಇದು ಅಸಹಾಯಕರಾದ ಮಡದಿಯರು ಗಂಡನ ಜೊತೆಯಲ್ಲಿ ಸಾಧ್ಯವಾಗುವವರೆಗೂ ಇರಲು ಮಾಡಿಕೊಂಡ ಉಪದೇಶದ ನುಡಿಯಂತೆ ಕಾಣುತ್ತದೆ. ಇಟ್ಟುಕೊಳ್ಳುವುದು ಮತ್ತು ಕಟ್ಟಿಕೊಳ್ಳುವುದು- ಈ ಎರಡೂ- ಹೆಣ್ಣು ಸ್ವತಂತ್ರ ಅಸ್ತಿತ್ವ ಇಲ್ಲದವಳು ಎಂಬುದನ್ನೇ ಸೂಚಿಸುತ್ತಿವೆ. ಗಂಡಿನ ಸುಪರ್ದಿನಲ್ಲಿ ಹೆಣ್ಣಿನ ಬದುಕಿಗೆ ಸೂಚಿಸಲಾಗಿರುವ ಎರಡು ಮಾರ್ಗಗಳು ಎಂದು ಇವುಗಳನ್ನು ತಿಳಿಯಬಹುದು...ಸಹಜವೆ, ಅಸ್ತಿತ್ವ ಇಲ್ಲದವರಿಗೆ ಸ್ವಂತ ನೆಲ, ನೆಲೆ, ಸಂಸ್ಕೃತಿ ಮತ್ತು ಜೀವನ ವಿಧಾನ ಇರುವುದಿಲ್ಲ. ಇದ್ದೂ ಇಲ್ಲದಂತ ಸ್ಥಿತಿಯನ್ನು ಬದುಕುತ್ತಿರುವ ಹೆಣ್ಣು ಇನ್ನಾದರೂ ತನ್ನ ಜೀವನ ನೆಲೆಯನ್ನು ಕಂಡುಕೊಳ್ಳಬೇಕಾಗಿದೆ. ಅಂಥ ಪ್ರಯತ್ನದ ಮೊದಲ ಹೆಜ್ಜೆ ತಮ್ಮದೇ ಸಂಸ್ಕೃತಿಯನ್ನು ಕಟ್ಟಿಕೊಳ್ಳುವುದು ಮತ್ತು ಅದರಂತೆ ಬದುಕುವುದು.
ಗಂಡು ಒಂಟಿಯಾಗಿ ಯೋಚಿಸಿ, ಒಂಟಿಯಾಗಿ ಬದುಕಲು ಎಂದು ನಿರ್ಧರಿಸಿದನೊ ಅಂದೇ ಅವನು ದುಷ್ಟನಾದ. ನನಗೆ ನಾನು, ನನಗಾಗಿ ಎಲ್ಲವೂ ಇವೆ ಎಂದು ಯೋಚಿಸಿದ್ದೇ ಗಂಡಿನ ಮೊದಲ ಅಪರಾಧ ಮತ್ತು ದುಷ್ಟತನ. ಆದ್ದರಿಂದಲೇ ಅವನು ಕಾಲಿಟ್ಟ ಕಡೆ ಅವನೊಬ್ಬನೇ, ಅವನ ಪರವಾದ ಉದ್ಧಾರವೆ ಹೊರತು ಅನ್ಯರಿಗೆ ಅಭಿವೃದ್ದಿ ಎಂಬುದೇ ಇರುವುದಿಲ್ಲ. ಸಾಂಪ್ರದಾಯಿಕ ಸಮಾಜದ ಗಂಡಿನಿಂದ ಹಿಡಿದು ಈ ಹೊತ್ತಿನ ಕಾರ್ಪೋರೇಟ್ ಉದ್ಯಮಿಯವರೆಗಿನ ಗಂಡಸರ ಪರಿಸರವೂ ಸೇರಿಕೊಂಡಂತೆ ಹೆಣ್ಣನ್ನು ಯಾವ ಯಾವ ಬಗೆಯಲ್ಲಿ ಅನುಭವಿಸಬೇಕು ಎಂದೇ ಯೋಜನೆ ಹಾಕುತ್ತಿದ್ದಾರೆ. ಅಂದರೆ ಹಲವು ಜೀವಿಗಳ ಈ ಜಗತ್ತು ಗಂಡೆಂಬ ಒಂದೇ ಜೀವಿಯ ಚಿಂತನೆ ಮತ್ತು ಬದುಕಿನಿಂದ ನರಳುತ್ತಿದೆ. ಅಷ್ಟರ ಮುಟ್ಟಿಗೆ ಒಟ್ಟು ಜೀವಕುಲದ ಅನುಭವ, ಸೃಜನ ಸಾಧ್ಯತೆ ಮತ್ತು ವೈಭವಗಳು ಹಿಂದೆ ಬಿದ್ದು ಹೋಗಿವೆ. ಸಂಪೂರ್ಣ ಜೀವನ ಎಂಬುದೊಂದು ಈಗ ಇಲ್ಲವೇ ಇಲ್ಲ. ವಸ್ತು ಬಹುತ್ವದ ಅನುಭವದ ಬಗ್ಗೆಯೇ ಯೋಚಿಸುತ್ತಿರುವ ಈ ಜಗತ್ತು ಸಕಲ ಪ್ರಜ್ಞಾವಂತ ಜೀವಿಗಳ ಅನುಭವ ಬಹುತ್ವವನ್ನು ಅನುಭವಿಸುವ ಅವಕಾಶವನ್ನು ಕಳೆದುಕೊಂಡಿದೆ. ಹೊಸ ಜಗತ್ತಿನ ಪಯಣ ಅತ್ತ ಕಡೆಗೇ ಹೊರಳಿದೆ.
(ಮುಂದುವರೆಯುವುದು)