ಅಂಗಳ      ಇನಿತೆನೆ
Print this pageAdd to Favorite
 
 

ಮಾಸದ ನಗೆಯ ಮಾಂತ್ರಿಕರು-ಗಾರುಡಿಗೊಂಬೆ ಕುಣಿತ

 
ಎಸ್. ರಂಗಧರ

ನಮ್ ಬೆಂಗಳೂರಿನಲ್ಲಿ ನಡೆಯುತ್ತಿರುವ ಇತ್ತೀಚಿನ ಕಾರ್ಯಕ್ರಮಗಳಿಗೆ ಹೋಗುವುದೆಂದರೆ ತಲೆನೋವು. ಸಭಾಂಗಣಗಳು ತುಂಬಿರದಿದ್ದರೂ ವೇದಿಕೆಗಳು ಹೌಸ್ ಫುಲ್. ಅಲ್ಲಿ ಕೂರುವ ಕಳ್ಳ ನಾಯಕರನ್ನು ನೋಡಲು ಅಸಹ್ಯ. ಒಂದು ಸರಿ ಬಾಯಿ ಬಿಟ್ಟರೆ ಮುಚ್ಚಲು ಕೇಳದ ಬುದ್ಧಿವಂತರುಗಳೆಂದರೆ ದಿಗಿಲು. ಆದರೆ ಅವರತ್ತ ನೋಡದೇ ದೃಷ್ಟಿಯನ್ನು ಸುಂದರವಾಗಿರಿಸಿಕೊಳ್ಳುವ ಐಡಿಯಾ ಇದು: ಕಲಾಪ್ರದರ್ಶನಗಳಲ್ಲಿ, ಈಗೀಗ ಎಲ್ಲ ರೀತಿಯ ಸಭೆ ಸಮರಂಭಗಳಲ್ಲೂ ರಾರಾಜಿಸುತ್ತಿರುವ, ವೇದಿಕೆಗಳ ಇಕ್ಕೆಲಗಳಲ್ಲಿ ಅಥವಾ ಮಧ್ಯದಲ್ಲಿ ಬಣ್ಣ ಬಣ್ಣದ ಉಡುಪು ತೊಟ್ಟು ಕೂತ ಹಸನ್ಮುಖಿ ಗಾರುಡಿಗೊಂಬೆಗಳನ್ನು ನೋಡುತ್ತಾ ಕೂತರೆ ಆಯಿತು.
 
ಜನಪದ ಜೀವಂತವಾಗಿರುವ ಕಡೆಗಳಲ್ಲಿ, ಹಳ್ಳಿಗಳಲ್ಲಿ, ಹಬ್ಬ ಜಾತ್ರೆ, ಉತ್ಸವಗಳ ಸಂದರ್ಭದಲ್ಲಿ ಜನರಿಗೆ ಮನರಂಜನೆ ಕೊಡಲು ಗಾರುಡಿಗೊಂಬೆಗಳ ಪ್ರದರ್ಶನ, ಕುಣಿತ ನಡೆಯುತ್ತದೆ. ಇವುಗಳ ಹೆಸರೇ ಹೇಳುವಂತೆ ಕಣ್ಣು ಮನಸ್ಸನ್ನು ಸೂರೆಗೊಳ್ಳುವ ಈ ಗಾರುಡಿಗೊಂಬೆಗಳನ್ನು ಹತ್ತು ಹದಿನೈದು ಅಡಿ ಎತ್ತರಕ್ಕೆ ಬಿದಿರಿನ ತಡಿಕೆಗಳನ್ನು ಮಾಡಿ ಅದಕ್ಕೆ ಮೇಣ, ಜೇಡಿಮಣ್ಣು ಅಥವಾ ಭಾರವಲ್ಲದ ಮರದಿಂದ ಗೊಂಬೆಗಳ ಆಕಾರ ತಯಾರು ಮಾಡುತ್ತಾರೆ. ಗಂಡು ಬೊಂಬೆ ಹೆಣ್ಣು ಬೊಂಬೆಗಿಂತ ಸ್ವಲ್ಪ ಎತ್ತರವಿರುತ್ತದೆ. ಗಂಡು ಬೊಂಬೆಯನ್ನು ಕೈಯ್ಯಲ್ಲಿ ಪುಂಗಿ ಹಿಡಿದಂತೆಯೋ, ಹೆಣ್ಣು ಬೊಂಬೆ ಆರತಿ ತಟ್ಟೆ ಹಿಡಿದಂತೆಯೋ, ಸೊಂಟದ ಮೇಲೆ ಕೈಯ್ಯಿರಿಸಿಕೊಂಡಂತೆಯೋ ಮಾಡಿರುತ್ತಾರೆ.
 
 
 
ಮಿರಮಿರ ಮಿರುಗುವಂತೆ ಬೊಂಬೆಗಳ ಮುಖಕ್ಕೆ ಬಣ್ಣಹಚ್ಚಿ ಮಾಟವಾದ ಹುಬ್ಬು, ತುಟಿಗಳು, ಮೀಸೆಗಳನ್ನು ಚಿತ್ರಿಸಿರುತ್ತಾರೆ. ಗಂಡುಬೊಂಬೆಗೆ ಪಂಚೆ ಉಡಿಸಿ ಪೇಟ ತೊಡಿಸಿದರೆ, ಹೆಣ್ಣು ಬೊಂಬೆಗೆ ಸೀರೆ ರವಿಕೆ ಅಥವಾ ಲಂಗವನ್ನು ತೊಡಿಸಿರುತ್ತಾರೆ. ಈ ಬೊಂಬೆಗಳು ಒಳಗಡೆ ಒಬ್ಬ ಮನುಷ್ಯ ಶ್ರಮವಿಲ್ಲದೆ ನಿಲ್ಲಬಹುದಾಗಿರುತ್ತದೆ. ಹಾಗೇ ಆತ ಹೆಚ್ಚು ತ್ರಾಸವಿಲ್ಲದೆ ಬೊಂಬೆಗಳನ್ನು ಹೊತ್ತುಕೊಂಡು ಕುಣಿಯಬಹುದಾಗಿರುತ್ತದೆ.
 
ಮೆರವಣಿಗೆಗಳಲ್ಲಿ, ಉತ್ಸವಗಳಲ್ಲಿ ಮುಂದೆ ಹೊರಡುವ ಗಾರುಡಿ ಗೊಂಬೆಗಳ ಕೆಲಸವೇ ಜನರ ಗಮನವನ್ನು ಸೂರೆ ಮಾಡುವುದು. ಇವುಗಳಲ್ಲಿ ಹೆಣ್ಣು ಮತ್ತು ಗಂಡುಗಳು ಮಾತ್ರವಿರದೇ ಆಯಾ ಪ್ರದೇಶದ ಜನರಿಗೆ ಮುದಕೊಡುವ ಅನೇಕ ಆಕಾರಗಳೂ ಇರುತ್ತವೆ. ಪೂಜಾರಿ, ಡೊಳ್ಳು ಹೊಟ್ಟೆಯವ, ಪುಟ್ಟ ಹುಡುಗ, ಹುಡುಗಿ ಇತರೆ ಬೊಂಬೆಗಳೂ ಇರುತ್ತವೆ. ಗಾರುಡಿಗೊಂಬೆಗಳನ್ನು ಹೊತ್ತು ಕುಣಿಯುವ ಕಲಾವಿದರು ಕಾಲಿಗೆ ಗೆಜ್ಜೆ ಕಟ್ಟಿಕೊಂಡು ತಮಟೆ, ಡೋಲು, ಕೋಲು ಇತರ ಪಕ್ಕವಾದ್ಯಗಳ ಲಯಗಳಿಗೆ ಅನುಗುಣವಾಗಿ ಸಣ್ಣ ಹೆಜ್ಜೆಗಳನ್ನಿಟ್ಟು ಲಾಸ್ಯದಿಂದ ಕುಣಿಯುತ್ತವೆ. ಇವುಗಳ ಕುಣಿತದಲ್ಲಿ ಅತಿಯಾದ ಜಿಗಿತ ಅಥವಾ ಶೌರ್ಯದ ಹೆಜ್ಜೆಗಳಿರುವುದಿಲ್ಲ. ಗಾರುಡಿಗೊಂಬೆಗಳ ಕುಣಿತ ದಕ್ಷಿಣ ಕರ್ನಾಟಕದಲ್ಲಿ ಸಾಮಾನ್ಯ. ಮೈಸೂರು, ಬೆಂಗಳೂರು, ಮಂಡ್ಯ, ಹಾಸನ, ಕೋಲಾರ, ಚಿಕ್ಕಮಗಳೂರು ಇತರೆ ಜಿಲ್ಲೆಗಳಲ್ಲಿ ಪ್ರದರ್ಶನಗೊಳ್ಳುತ್ತವೆ. ಸಾಮಾನ್ಯವಾಗಿ, ಪದ್ಧತಿಯಂತೆ ಒಕ್ಕಲಿಗರು, ನಾಯಕರು, ಹರಿಜನ ಕಲಾವಿದರು ಗೊಂಬೆ ಹೊತ್ತು ಕುಣಿಯುತ್ತಾರೆ.
 
  

ಕಾವೇರಿ ಚಳುವಳಿ-ಭಾಗ ೪
ನೀರು ಬಿಟ್ಟು ಪಾದಯಾತ್ರೆ ಮಾಡಿದ ಮಂಡ್ಯದವರೇ ಆದ ಎಸ್.ಎಂ. ಕೃಷ್ಣ!

ಜಾಣಗೆರೆ ವೆಂಕಟರಾಮಯ್ಯ, ಬಿ ಎಸ್ ಶಿವಪ್ರಕಾಶ್
 
(ಜನ ಕಾನೂನಿನ ವಿರುದ್ಧ ತಿರುಗಿ ಆಕ್ರೋಶಗೊಂಡು ಜನ-ಜೀವನ ಹಾನಿ ಮಾಡುವುದನ್ನು ಸರಿ ಎಂದು ನಾವು ಕಾವೇರಿ ಚಳುವಳಿಯ ವಿವರಗಳನ್ನು ಇಲ್ಲಿ ಬರೆಯುತ್ತಿಲ್ಲ. ಕರ್ನಾಟಕದ ಜನ ತಮ್ಮ ನಾಡಿಗಾಗಿ, ರೈತರಿಗಾಗಿ, ನೀರಿಗಾಗಿ, ತಮ್ಮ ಹಿತಾಸಕ್ತಿಗೆಂದು ಒಗ್ಗಟ್ಟಾಗಿ ಒಕ್ಕೊರಲಿನಲ್ಲಿ ಪ್ರತಿಭಟಿಸಿದ ಚಳುವಳಿ ಇದೊಂದೇ. ಕಾವೇರಿಗಾಗಿ ನಡೆದ ಚಳುವಳಿಯ ನಂತರ ಬೇರೆಲ್ಲೂ ಕರ್ನಾಟಕದ ಜನ ಈ ಪರಿ ಒಗ್ಗಟ್ಟಿನಿಂದ ವರ್ತಿಸಿರಲಿಲ್ಲ. ಈಗ ಬಿಡಿ. ಬಂದ್ ಗಳು, ಚಳುವಳಿಗಳು ಕೇವಲ ಒಂದೋ ಎರಡೋ ರಾಜಕೀಯ ಪಕ್ಷಗಳ, ನಾಯಕರ ಅನುಕೂಲಗಳಿಗೆ ಮಾತ್ರ ನಡೆಯುತ್ತವೆ. ಚಳುವಳಿ ಎಂಬ ಸಂಚಲನವೇ ಅರ್ಥ ಕಳೆದುಕೊಂಡಿದೆ. ಅದೂ ಒಂದು ರೋಲ್ ಕಾಲ್ ಆಗಿದೆ. ಎಷ್ಟು ಲಕ್ಷ ಅಥವಾ ಕೋಟಿ ಸುರಿದು ಎಷ್ಟು ಜನರನ್ನು ಒಟ್ಟು ಮಾಡಿ ದೊಂಬಿ ಮಾಡಬಹುದು ಎನ್ನುವುದು ಇವತ್ತಿನ ಹೋರಾಟಗಳ ಹೊಟ್ಟೆಪಾಡು. ಹಣ ಮುಖ್ಯವಾಗುತ್ತಾ ಹೋದಂತೆ, ಹೊರಗಿನ ಹಣ ದಾಹೀ ಅಥವಾ ಹಣ ಹೂಡುವ ಶಕ್ತಿಗಳು ನಾಡೊಂದಕ್ಕೆ ನುಗ್ಗಿ ಅಲ್ಲಿನ ಜನರನ್ನು ತಮ್ಮ ನಾಡಿನ ಕುರಿತಾದ ಭಾವನೆಗಳ ನಂಟಿಂದ ದೂರ ಮಾಡಿ ಜನ-ಜೀವನ ಎರಡರ ಮಧ್ಯೆ ಅರ್ಥಮಾಡಿಕೊಳ್ಳಲಾಗದ ಕಂದಕವೊಂದನ್ನು ಸೃಷ್ಟಿಸಿಬಿಡುತ್ತವೆ. ಈಗ ಹೋರಾಟ ಮಾಡುವವರು ಎಂದರೆ ಗೂಂಡಾಗಳು ಎಂದೇ ವ್ಯಾಖ್ಯಾನ. ಅದಕ್ಕೆ ಅದರದ್ದೇ ಕಾರಣಗಳೂ ಇವೆ ಬಿಡಿ.)
 

ನಮ್ಮ ರಾಜಕಾರಣಿಗಳಿಗೆ ಅಧಿಕಾರ ಮುಖ್ಯವೋ, ನಾಡಿನ ಹಿತ ಮುಖ್ಯವೋ ಎಂಬುವುದರ ಬಗ್ಗೆ ಜನರಿಗೆ ಅರಿವಾಗುವುದು ನಾಡಿನ ಹಿತದ ಪ್ರಶ್ನೆ ಎದುರಾದಾಗಲೇ. ನಮ್ಮ ರಾಜಕಾರಣಿಗಳು ಅಧಿಕಾರದಲ್ಲಿ ಇಲ್ಲದಿರುವಾಗ ಪುಂಖಾನುಪುಂಖವಾಗಿ ರಾಜ್ಯದ ಹಿತಕ್ಕಾಗಿ ಯಾವುದೇ ತ್ಯಾಗಕ್ಕೂ (ಕೆಲವೊಮ್ಮೆ ಪ್ರಾಣತ್ಯಾಗಕ್ಕೂ ಸಿದ್ದರೆಂದು ಹೇಳಿಕೊಳ್ಳುತ್ತಾರಾದರೂ ಕರ್ನಾಟಕದ ಇತಿಹಾಸದಲ್ಲಿ ನಾಡಿನ ರಕ್ಷಣೆಗಾಗಿ ಪ್ರಾಣ ಬಿಟ್ಟ ರಾಜಕಾರಣಿಗಳು ಕಾಣಿಸುವುದಿಲ್ಲ) ಸಿದ್ದರಿರುವುದಾಗಿ ಭಾಷಣ ಬಿಗಿಯುವುದರಲ್ಲಿ ಮಹಾನ್ ಪರಿಣಿತರು. ಕಾವೇರಿ ನದಿಯ ವಿಷಯದಲ್ಲಿಯೂ ನಮ್ಮ ರಾಜಕಾರಣಿಗಳು ಅಧಿಕಾರಕ್ಕೆ ಬರಬೇಕೆಂಬ ಸ್ವಾರ್ಥದಿಂದಲೇ ವರ್ತಿಸುತ್ತಾ ಬಂದರೇ ಹೊರತು ತಾವು ಅಧಿಕ್ಕಾರಕ್ಕೇರಿದ ಮರುಗಳಿಗೆಯಲ್ಲೇ ಎಲ್ಲರೂ ತಮ್ಮ ಮಾತುಗಳಿಗೇ ತದ್ವಿರುದ್ದವಾಗಿ ನಡೆದುಕೊಂಡವರೇ.
ದೇವೇಗೌಡರು ಪ್ರಧಾನಮಂತ್ರಿಗಳಾದರೂ ಕಾವೇರಿ ನದಿ ನೀರಿನ ವಿಷಯದಲ್ಲಿ ರಾಜ್ಯಕ್ಕೆ ಆದ ಅನ್ಯಾಯವನ್ನು ಸರಿಪಡಿಸಲಾಗಲಿಲ್ಲ. ೧೯೯೮ರಲ್ಲಿ ಕಾವೇರಿ ವಿವಾದ ಮತ್ತಷ್ಟು ಕಗ್ಗಂಟಾಗತೊಡಗಿತ್ತು. ಅಂದು ದೇವೇಗೌಡರ ಸ್ಥಾನಕ್ಕೆ ಬದಲಿಯಾಗಿ ಪ್ರಧಾನಿಯಾಗಿ ಕೂತಿದ್ದವರು ಐ.ಕೆ. ಗುಜ್ರಾಲರು. ಆದರೆ ಅವರ ಸರ್ಕಾರವೂ ಅಲ್ಪ ಸಮಯದಲ್ಲೇ ಉರುಳಿದ್ದರಿಂದ ನಂತರ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಿ.ಜೆ.ಪಿ. ನೇತ್ರತ್ವದ ಎನ್ ಡಿ ಎ ಅಧಿಕಾರಕ್ಕೆ ಬಂದು ಅಟಲ್ ಬಿಹಾರಿ ವಾಜಪೇಯಿಯವರು ಪ್ರಧಾನಮಂತ್ರಿಯಾಗಿದ್ದರು. ಆಗ ಅಧಿಕಾರಕ್ಕೆ ಬಂದ ಪಕ್ಷಕ್ಕೆ ಬೆಂಬಲವಾಗಿ ಅಂದರೆ ಬೆನ್ನೆಲುಬಾಗಿ ನಿಂತವರೇ ತಮಿಳುನಾಡಿನ ಅಣ್ಣಾ ಡಿ.ಎಂ.ಕೆ. ಪಕ್ಷದ ಅಧಿನಾಯಕಿ ಜೆ.ಜಯಲಲಿತಾ.
 
ತಮಿಳುನಾಡಿನ ರಾಜಕಾರಣಿಗಳ ಖದರ್ರೇ ಅಂಥದ್ದು. ಅವರು ಯಾವುದೇ ಪಕ್ಷದವರಾಗಿರಲಿ ತಮ್ಮ ರಾಜ್ಯಕ್ಕೆ ನ್ಯಾಯವಾಗಿಯೋ, ಅನ್ಯಾಯವಾಗಿಯೋ ಬೇಕಾದುದನ್ನು ಪಡೆಯುತ್ತಾರೆ. ಕೇಂದ್ರದಲ್ಲಿ ಸಮ್ಮಿಶ್ರ ಸರ್ಕಾರಗಳ ಯುಗ ಆರಂಭವಾದ ನಂತರವಂತೂ ಇಡೀ ದೇಶದಲ್ಲಿ ತಮಿಳುನಾಡಿನ ರಾಜಕಾರಣಿಗಳು ಪಡೆದಷ್ಟು ಪ್ರಯೋಜನವನ್ನು ಮತ್ಯಾವ ರಾಜ್ಯವೂ ಪಡೆಯಲಿಕ್ಕಾಗಿಲ್ಲ. ಅದಕ್ಕೆ ತಮಿಳುನಾಡಿನ ರಾಜಕಾರಣಿಗಳು ಅನುಸರಿಸುವ ಬ್ಲಾಕ್ ಮೇಲ್ ತಂತ್ರವೇ ಕಾರಣ. ಕರ್ನಾಟಕದ ದುರಂತವೆಂದರೆ ಇಲ್ಲಿ ಪ್ರಾದೇಶಿಕ ಪಕ್ಷಗಳು ಬಲಿಷ್ಟವಾಗದಿರುವುದು. ಇಲ್ಲಿರುವ ಕಾಂಗ್ರೆಸ್, ಬಿಜೆಪಿ ಪಕ್ಷಗಳ ಮುಖಂಡರೆನಿಸಿಕೊಂಡವರು ತಮ್ಮ ಪಕ್ಷಗಳ ದೆಹಲಿಯ ನಾಯಕರುಗಳ ಬಾಲಬುಡುಕರಾಗಿರುವುದರಿಂದ ರಾಜ್ಯದ ಹಿತಕ್ಕಿಂತ ಅವರಿಗೆ ಕೇಂದ್ರದಲ್ಲಿರುವ ತಮ್ಮ ಪಕ್ಷದ ಹಿತವೇ ಮುಖ್ಯ. ಜಯಲಲಿತಾ ಪ್ರಧಾನಿ ವಾಜಪೇಯಿಯವರ ಮೇಲೆ ಹೇರಿದ ಒತ್ತಡದ ಪರಿಣಾಮವಾಗಿ ವಾಜಪೇಯಿಯವರು ಕಾವೇರಿ ವ್ಯಾಪ್ತಿಯ ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯನ್ನು ನಡೆಸಿ ಕಾವೇರಿ ನದಿ ಪ್ರಾಧಿಕಾರ ಮತ್ತು ಉಸ್ತುವಾರಿ ಸಮಿತಿ ರಚಿಸಲು ಮುಂದಾದರು.
 
೨೦೦೨ ಅಕ್ಟೋಬರ್ ೪ರಂದು ಮತ್ತೆ ಸುಪ್ರೀಂ ಕೋರ್ಟ್ ಕರ್ನಾಟಕ ಪ್ರತಿದಿನವೂ ತಮಿಳುನಾಡಿಗೆ ೦.೮ ಟಿ.ಎಮ್.ಸಿ ನೀರನ್ನು ಬಿಡಬೇಕೆಂದು ಅದೇಶಿಸಿತು. ಅಂದು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದವರು ಮಂಡ್ಯ ಜಿಲ್ಲೆಯವರೇ ಆದ ಸೋಮನಹಳ್ಳಿ ಮಲ್ಲಯ್ಯ ಕೃಷ್ಣ. ಯಾವಾಗ ಸುಪ್ರೀಂ ಕೋರ್ಟು ಆದೇಶ ನೀಡಿತೋ ಎಸ್.ಎಂ. ಕೃಷ್ಣ ಕಂಗಾಲಾದರು. ಕಾವೇರಿ ಮಂಡ್ಯ ಜಿಲ್ಲೆ ರೈತರ ಜೀವನದಿ, ಬಹುತೇಕ ರೈತರ ಬದುಕು ಅವಲಂಬಿಸಿರುವುದೇ ಕಾವೇರಿ ನದಿ ನೀರಿನ ಮೇಲೆಯೇ. ಎಸ್.ಎಂ. ಕೃಷ್ಣರಿಗೆ ನೀರು ಬಿಡುವುದು ಪ್ರಾಣ ಸಂಕಟಕ್ಕೀಡುಮಾಡಿತ್ತು. ಆರಂಭದಲ್ಲಿ ಅವರು ತಮಿಳುನಾಡಿಗೆ ನೀರು ಬಿಡಲು ನಿರಾಕರಿಸಿದರು. ಇದನ್ನೇ ನೆವವಾಗಿರಿಸಿಕೊಂಡ ತಮಿಳುನಾಡು ಎಸ್.ಎಂ. ಕೃಷ್ಣರ ವಿರುದ್ದ ನ್ಯಾಯಾಂಗ ನಿಂದನೆಯ ಮೊಕದ್ದಮೆಯನ್ನು ದಾಖಲಿಸಿಬಿಟ್ಟಿತು. ಈ ಮೊಕದ್ದಮೆಯಿಂದಾಗಿ ಸುಪ್ರೀಂ ಕೋರ್ಟ್ ಎಸ್.ಎಂ. ಕೃಷ್ಣರಿಗೆ ಛೀಮಾರಿ ಹಾಕಿತು. ಇದರಿಂದ ಅಧಿಕಾರ ಹೋಗುತ್ತದೆಂದು ಕನಲಿಹೋದ ಕೃಷ್ಣ ಸುಪ್ರೀಂ ಕೋರ್ಟಿನಲ್ಲಿ ಕ್ಷಮೆ ಯಾಚಿಸಿಬಿಟ್ಟರು. ಹಾಗೆ ಕ್ಷಮೆಯಾಚಿಸಿದ ಮರುಗಳಿಗೆಯಲ್ಲೇ ಕರ್ನಾಟಕದ ಜಲಾಶಯಗಳಲ್ಲಿ ನಮ್ಮ ರೈತರಿಗೇ ನೀರಿನ ಅಭಾವವಿದ್ದರೂ ಲೆಕ್ಕಿಸದೆ ರಾತ್ರೋರಾತ್ರಿ ತಮಿಳುನಾಡಿಗೆ ನೀರು ಬಿಟ್ಟಿದ್ದರು. ನೀರು ಬಿಟ್ಟ ಕೂಡಲೇ ತಮ್ಮ ಜಿಲ್ಲೆಯಲ್ಲಿ ಉಂಟಾಗಬಹುದಾಗಿದ್ದ ಆಕ್ರೋಶವನ್ನು ತಣಿಸಬೇಕೆಂಬ ಉದ್ದೇಶದಿಂದ ಅದ್ಯಾವ ಮಹಾನುಭಾವರ ಸಲಹೆ ಪಡೆದರೋ ಧಿಡೀರೆಂದು ಅದೇ ತಿಂಗಳು ೭ ರಂದು ಬೆಂಗಳೂರಿನಿಂದ ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ ಅಣೆಕಟ್ಟೆ ಬಳಿಗೆ ಪಾದಯಾತ್ರೆ ಹಮ್ಮಿಕೊಂಡು ಅದನ್ನು ಪಶ್ಚಾತ್ತಾಪ ಯಾತ್ರೆ ಎಂದು ಕರೆದುಕೊಂಡರು. ಅದರ ಮೂಲಕ ತಮ್ಮ ಸರ್ಕಾರದ ಪ್ರಯತ್ನಗಳನ್ನು ರಾಜ್ಯದ ರೈತರಿಗೆ ಅದರಲ್ಲೂ ಅವರದ್ದೇ ಆದ ಮಂಡ್ಯ ಜಿಲ್ಲೆ ರೈತರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಅವರದ್ದಾಗಿತ್ತು.
 
ನಮ್ಮ ರಾಜಕಾರಣಿಗಳದ್ದು ಎಂಥಾ ವಿಪರ್ಯಾಸ ನೋಡಿ! ದೇವೇಗೌಡರು ಒಂದು ತೊಟ್ಟು ನೀರನ್ನೂ ತಮಿಳುನಾಡಿಗೆ ಹರಿಸಬಾರದೆಂದು ಇದೇ ಕಾವೇರಿ ನೀರಿಗಾಗಿ ಪಾದಯಾತ್ರೆ ಮಾಡಿ ಅಧಿಕಾರ ಹಿಡಿದಿದ್ದರು. ಅಧಿಕಾರಕ್ಕೇರಿದ ನಂತರ ರಾಜ್ಯದ ಜನತೆಯ ಪ್ರತಿಭಟನೆಯನ್ನೂ ಲೆಕ್ಕಿಸದೇ ತಮಿಳುನಾಡಿಗೆ ಧಾರಾಕಾರವಾಗಿ ನೀರು ಹರಿಯಬಿಟ್ಟಿದ್ದರು. ಎಸ್.ಎಂ. ಕೃಷ್ಣರದ್ದು ಉಲ್ಟಾ ಕೇಸು. ಇವರು ನೀರು ಬಿಟ್ಟು ಪಾದಯಾತ್ರೆ ಮಾಡಿ ಅಧಿಕಾರ ಉಳಿಸಿಕೊಂಡಿದ್ದರು!
ಆದರೆ ಎಸ್.ಎಂ. ಕೃಷ್ಣರವರ ವರ್ತನೆ ಮಂಡ್ಯ ಜಿಲ್ಲೆಯ ರೈತಾಪಿ ವರ್ಗವನ್ನೂ, ರೈತ ಸಂಘಟನೆಯವರನ್ನೂ, ಕನ್ನಡಪರ ಸಂಘ ಸಂಸ್ಥೆ ನಾಯಕರುಗಳನ್ನೂ, ಇಂಥಾ ಸಮಯಕ್ಕೇ ಕಾಯುತ್ತಿದ್ದ ವಿರೋಧ ಪಕ್ಷಗಳನ್ನೂ ರೊಚ್ಚಿಗೇಳುವಂತೆ ಮಾಡಿತ್ತು. ಈ ಸಂಘಟನೆಗಳೆಲ್ಲಾ ರಾಜ್ಯಕ್ಕಾಗಿರುವ ಅನ್ಯಾಯದ ವಿರುದ್ದ ಸೆಟೆದು ನಿಂತವು. ಸುಪ್ರೀಂ ಕೋರ್ಟಿನ ಹಸ್ತಕ್ಷೇಪ ಮತ್ತು ತಮಿಳುನಾಡಿನ ಬ್ಲಾಕ್ ಮೇಲ್ ತಂತ್ರದ ಒತ್ತಡ ಇತ್ಯಾದಿ ಕ್ರಮಗಳನ್ನು ವಿರೋಧಿಸಿ ಪ್ರತಿಭಟಿಸಲು ಮುಂದಾದವು. ಬೆಂಗಳೂರು ಸೇರಿದಂತೆ ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಮುಂತಾದೆಡೆ ಭಾರೀ ಪ್ರತಿಭಟನೆಗಳಾದವು. ಮಂಡ್ಯ ನಗರವಂತೂ ಪ್ರಕ್ಷುಬ್ಧಗೊಂಡಿತು. ತಮ್ಮ ಜಿಲ್ಲೆಯ ಮುಖ್ಯಮಂತ್ರಿಯಿಂದಲೇ ಜಿಲ್ಲೆಯ ರೈತರಿಗೆ ಪರಮ ಅನ್ಯಾಯವಾಯಿತೆಂಬುದೇ ಅವರ ಆಕ್ರೋಶಕ್ಕೆ ಮುಖ್ಯ ಕಾರಣವಾಗಿತ್ತು. ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಶರಾದ ಜಿ. ಮಾದೇಗೌಡ, ರೈತಸಂಘದ ನಾಯಕ ಕೆ.ಎಸ್. ಪುಟ್ಟಣ್ಣಯ್ಯ, ವಿರೋಧ ಪಕ್ಷದ ಮುಖಂಡ ಕೆ.ಎನ್. ನಾಗೇಗೌಡ ಮುಂತಾದವರೆಲ್ಲಾ ಪ್ರತಿಭಟನೆಯ ನಾಯಕತ್ವ ವಹಿಸಿದ್ದರು. ಅವರ ಹೋರಾಟಕ್ಕೆ ಅಪಾರ ಜನಬೆಂಬಲ ಸಿಕ್ಕಿದ್ದರಿಂದ ಅದು ಉಗ್ರ ಸ್ವರೂಪವನ್ನು ಪಡೆದುಕೊಂಡಿತ್ತು. ಮಂಡ್ಯ ಜಿಲ್ಲೆಗೆ ಕೃಷ್ಣ ಪಾದಯಾತ್ರೆಯಲ್ಲಿ ಬಂದಾಗ ರೈತರ ಸಹನೆಯ ಕಟ್ಟೆ ಒಡೆದು ಅವರ ವಿರುದ್ದ ಪ್ರತಿಭಟನೆಗಿಳಿದಾಗ ಅದು ತೀರ್ವ ಸಂಘರ್ಷಕ್ಕೆ ದಾರಿಯಾಯಿತು.
 
ತೀರ್ವಗೊಂಡ ಪ್ರತಿಭಟನೆಯಿಂದಾಗಿ ಮುಜುಗರಕ್ಕೊಳಗಾದ ಎಸ್.ಎಂ. ಕೃಷ್ಣರ ಸರ್ಕಾರ, ಚಳವಳಿಯನ್ನು ಮಟ್ಟಹಾಕಲು ನಿರ್ಧರಿಸಿ ಜಿ. ಮಾದೇಗೌಡ, ಕೆ.ಎನ್. ನಾಗೇಗೌಡ, ಕೆ.ಎಸ್. ಪುಟ್ಟಣ್ಣಯ್ಯ, ಎಂ.ಎಸ್. ಅತ್ಮಾನಂದ ಮುಂತಾದವರನ್ನು ಬಂಧಿಸಿತು. ಕೆ.ಎನ್. ನಾಗೇಗೌಡರನ್ನು ರಾಜಕೀಯ ವೈಷಮ್ಯದಿಂದ ದೂರದ ಧಾರವಾಡ ಜೈಲಿಗಟ್ಟಿದರೆ, ಜಿ. ಮಾದೇಗೌಡ ಮತ್ತಿತರ ನಾಯಕರುಗಳನ್ನು ಬೆಂಗಳೂರು ಜೈಲಲ್ಲಿ ಕೂಡಿಹಾಕಲಾಯಿತು. ಅಲ್ಲದೆ ಜಿಲ್ಲೆಯಾದ್ಯಂತ ನಡೆಯುತ್ತಿದ್ದ ಚಳವಳಿ ಹಿಂಸಾಚಾರದ ಸ್ವರೂಪ ಪಡೆಯಲಿದ್ದುದರಿಂದ ಮಂಡ್ಯ ಜಿಲ್ಲೆಯಾದ್ಯಂತ ಕರ್ಫ಼್ಯೂ ವಿಧಿಸಲಾಯಿತು.
 
ಇದೇ ವೇಳೆ ಮೈಸೂರಿನಲ್ಲಿಯೂ ಸರ್ಕಾರದ ವಿರುದ್ದ ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆ ನಡೆಯಿತು. ಅದರ ನೇತ್ರತ್ವವನ್ನು ಕುರುಬೂರು ಶಾಂತಕುಮಾರ್ ವಹಿಸಿಕೊಂಡಿದ್ದರು. ಮೈಸೂರು ಜಿಲ್ಲೆಯ ಹೆಚ್.ಡಿ. ಕೋಟೆ ತಾಲೂಕಿನಲ್ಲಿದ್ದ ಕಬಿನಿ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸಲು ಬಿಡುವುದಿಲ್ಲವೆಂದು ಅವರು ಪಟ್ಟು ಹಿಡಿಡಿದ್ದರು. ಇದೇ ಸಂದರ್ಭದಲ್ಲಿ ದುರಂತವೊಂದು ನಡೆದು ಹೋಯಿತು. ಗುರುಸ್ವಾಮಿಯೆಂಬ ರೈತ ಮುಖಂಡರೊಬ್ಬರು ಭಾವೋದ್ವೇಗಕ್ಕೊಳಗಾಗಿ ತಾವು ಪ್ರತಿಭಟನೆ ನಡೆಸುತ್ತಿದ್ದ ಕಬಿನಿ ಜಲಾಶಯಕ್ಕೆ ಹಾರಿ ಪ್ರಾಣಾರ್ಪಣೆ ಮಾಡಿಕೊಂಡುಬಿಟ್ಟರು. ಅವರ ಜತೆಗೆ ಜಲಾಶಯಕ್ಕೆ ಜಿಗಿದಿದ್ದ ಇತರರನ್ನು ರಕ್ಷಿಸಲಾಯಿತಾದರೂ ಗುರುಸ್ವಾಮಿಯವರು ಬಲಿಯಾಗಿದ್ದರು.
 
ಇದುವರೆಗೂ ಪ್ರಾಣ ಬಿಡುತ್ತೇವೆ ಕಾವೇರಿ ನೀರು ಬಿಡುವುದಿಲ್ಲವೆಂದು ಡೈಲಾಗು ಹೊಡೆಯುತ್ತಾ, ಮಾಡಿದ್ದನ್ನೇ ಮಾಡಿ ರೈತರಿಗೆ ಆಟವಾಡಿಸುತ್ತಾ ಬಂದಿದ್ದ ರಾಜಕಾರಣಿಗಳೆಲ್ಲಾ ನಿಯತ್ತಾಗಿ ನೀರು ಬಿಟ್ಟಿದ್ದರಷ್ಟೆ. ಪ್ರಾಣ ಬಿಡುವ ರಿಸ್ಕ್ ತೆಗೆದುಕೊಂಡಿರಲಿಲ್ಲ!! ಈ ಬಾರಿ ರೈತನೊಬ್ಬ ನೀರು ಬಿಡುವುದನ್ನು ವಿರೋಧಿಸಿ ಪ್ರಾಣಾರ್ಪಣೆ ಮಾಡಿದ್ದು ಕಾವೇರಿ ಚಳವಳಿಯ ಇತಿಹಾಸದಲ್ಲಿ ದಾಖಲಾಯಿತು. ಕಾವೇರಿಗಾಗಿ ಮೊದಲ ಹುತಾತ್ಮರಾದ ಪ್ರಕರಣ ರಾಜ್ಯದಲ್ಲಿ ಹೊಸ ಸಂಚಲವನ್ನು ಸೃಷ್ಟಿಸಿತ್ತು.
ಅತ್ತ ಹಾಸನದಲ್ಲಿಯೂ ರಾಜ್ಯ ರೈತಸಂಘದ ಕೋಡಿಹಳ್ಳಿ ಚಂದ್ರಶೇಖರ್ ನೇತ್ರತ್ವದಲ್ಲಿ ಚಳವಳಿಯು ಕಾವು ಪಡೆಯತೊಡಗಿತ್ತು. ತುಮಕೂರಿನಲ್ಲಿಯೂ ಭಾರೀ ಪ್ರತಿಭಟನೆ ನಡೆಯಿತು. ಚಳುವಳಿ ನಿಲ್ಲದೆ ಮತ್ತಷ್ಟು ತೀರ್ವ ಸ್ವರೂಪ ಪಡೆಯತೊಡಗಿದ್ದರಿಂದ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಆತಂತಕ್ಕೀಡಾಗಿದ್ದರು. ರೈತರು ಕಾವೇರಿ ನದಿಯ ಜಲಾಶಯಗಳ ಬಳಿ ಸೇರಿ ತಮಿಳುನಾಡಿಗೆ ನೀರು ಬಿಟ್ಟಲ್ಲಿ ಆತ್ಮಾರ್ಪಣೆ ಮಾಡಿಕೊಳ್ಳುವುದಾಗಿ ಹೇಳತೊಡಗಿದ್ದರಿಂದ ಎಲ್ಲಾ ಜಲಾಶಯಗಳ ಬಳಿಯೂ ಭಾರೀ ಪೋಲೀಸ್ ಬಂದೋಬಸ್ತ್ ಹಾಕಲಾಗಿತ್ತು.
 
ರಾಜಧಾನಿಯಲ್ಲಿ ಕಾವೇರಿ ಚಳುವಳಿಯನ್ನು ನಿಜವಾಗಿ ಒಟ್ಟು ತಂದವರು ಅಂದಿನ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರಾಗಿದ್ದ ಜಾಣಗೆರೆ ವೆಂಕಟರಾಮಯ್ಯನವರು (ಈಗಿನ ಕರ್ನಾಟಕ ರಕ್ಷಣಾ ವೇದಿಕೆ ನಿಜವಾಗಿಯೂ ಕನ್ನಡಕ್ಕಾಗಿಯೇ, ಕನ್ನಡ ಜನರ ಹಿತಾಸಕ್ತಿಗಾಗಿಯೇ ಮೀಸಲಿದೆಯೇ ಎನ್ನುವ ಬಗ್ಗೆ ನಮಗೆ ನಮ್ಮದೇ ಆದ ಅನುಮಾನಗಳಿವೆ ಬಿಡಿ). ಕನ್ನಡ ಚಳವಳಿ ನಾಯಕರಾದ ವಾಟಾಳ್ ನಾಗರಾಜ್, ಜಿ. ನಾರಾಯಣ ಕುಮಾರ್, ಕೆ. ಪ್ರಭಾಕರ ರೆಡ್ಡಿ, ಸಾ.ರಾ. ಗೋವಿಂದು, ರಾಮಣ್ಣ ಕೋಡಿಹೊಸಳ್ಳಿ, ಮುಂತಾದವರನ್ನೆಲ್ಲಾ ಒಗ್ಗೂಡಿಸುವಲ್ಲಿ ಯಶಸ್ವಿಯಾದ ಜಾಣಗೆರೆ ಒಟ್ಟಾರೆ ಹೋರಾಟದ ರೂಪುರೇಷೆಗಳನ್ನು ರೂಪಿಸತೊಡಗಿದರು. ಅಷ್ಟೇ ಅಲ್ಲದೆ ರೈತ ನಾಯಕರಾದ ಪ್ರೊ.ಎಂ.ಡಿ. ನಂಜುಂಡಸ್ವಾಮಿ, ಕೆ.ಎಸ್. ಪುಟ್ಟಣ್ಣಯ್ಯ, ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷರಾದ ಜಿ. ಮಾದೇಗೌಡ, ರಾಜಕೀಯ ಮುಖಂಡರಾದ ಕೆ.ಎನ್. ನಾಗೇಗೌಡ ಮುಂತಾದವರನ್ನೆಲ್ಲಾ ಒಗ್ಗೂಡಿಸುವಲ್ಲಿ ಯಶಸ್ವಿಯಾಗಿದ್ದರು.
 
ಕರ್ನಾಟಕದಲ್ಲಿ ಕಾವೇರಿ ಚಳವಳಿಯು ತೀರ್ವ ಸ್ವರೂಪ ಪಡೆಯಿತ್ತಿದ್ದಂತೇ ಇನ್ನು ತಮಿಳುನಾಡಿನ ರಾಜಕಾರಣಿಗಳು ಸುಮ್ಮನಿರುತ್ತಾರೆಯೇ? ಅದೇ ಸಮಯಕ್ಕೆ ಸರಿಯಾಗಿ ಮತ್ತೆ ಒಂದಾದ ತಮಿಳುನಾಡಿನ ಚಿತ್ರರಂಗದ ಘಟಾನುಘಟಿಗಳೆಲ್ಲಾ ಚಿತ್ರ ನಿರ್ದೇಶಕ ಭಾರತಿರಾಜಾ ಮತ್ತು ನಟ ಪ್ರಭು ನೇತ್ರತ್ವದಲ್ಲಿ ಪ್ರತಿಭಟನೆಗಿಳಿದಿದ್ದರು. ತಮಿಳುನಾಡಿಗೆ ನೀರು ಹರಿಸಲು ನಿರಾಕರಿಸಿರುವ ಕರ್ನಾಟಕಕ್ಕೆ ತಮಿಳುನಾಡಿನಿಂದ ಪೂರೈಕೆಯಾಗುತ್ತಿದ್ದ ವಿದ್ಯುತ್ ವಿತರಣೆಯನ್ನು ನಿಲ್ಲಿಸುವ ಕಾರ್ಯಕ್ಕೆ ಅವರು ಮುಂದಾಗಿದ್ದರು. ಅದಕ್ಕಾಗಿ ಸಾವಿರಾರು ಚಿತ್ರಪ್ರೇಮಿಗಳ ದಂಡನ್ನು ಕಟ್ಟಿಕೊಂಡು ಕರ್ನಾಟಕಕ್ಕೆ ವಿದ್ಯುತ್ ಸರಬರಾಜಾಗುತ್ತಿದ್ದ ನೈವೇಲಿ ವಿದ್ಯುತ್ ಕೇಂದ್ರಕ್ಕೆ ಹೋಗಿ ಕರ್ನಾಟಕಕ್ಕೆ ಸರಬರಾಜಾಗುತ್ತಿದ್ದ ವಿದ್ಯುತ್ ಸಂಪರ್ಕವನ್ನು ಕಡಿದು ಹಾಕಿದರು. ದಶಕಗಳ ಹಿಂದೆ ಇದೇ ತಮಿಳುನಾಡಿಗೆ ಮೆಟ್ಟೂರಿನಲ್ಲಿ ಅಣೆಕಟ್ಟೆ ನಿರ್ಮಾಣಕ್ಕಾಗಿ ನಾವು ಕನ್ನಡಿಗರು ವಿದ್ಯುತ್ ನೀಡಿದ್ದೆವು!! ಅಂದು ನಾವು ವಿದ್ಯುತ್ ನೀಡದಿದ್ದಲ್ಲಿ ತಮಿಳುನಾಡು ಮೆಟ್ಟೂರು ಅಣೆಕಟ್ಟೆಯನ್ನು ನಿರ್ಮಿಸುವುದು ಸಾಧ್ಯವೇ ಇರಲಿಲ್ಲ. (ಇದರ ಬಗೆಗೆ ಕಾವೇರಿ ಚರಿತ್ರೆಯ ಮೊದಲ ಭಾಗದಲ್ಲಿ ವಿವರಿಸಲಾಗಿದೆ) ಆದರೆ ಎಂದಿಗೂ ಉಪಕಾರವನ್ನು ಸ್ಮರಿಸರ ತಮಿಳುನಾಡಿನ ರಾಜಕಾರಣಿಗಳು ವಿದ್ಯುತ್ ಕಡಿತ ಮಾಡುವ ಕಾರ್ಯವನ್ನು ತಡೆಹಿಡಿಯದೇ ಚಿತ್ರರಂಗದವರ ಕಾರ್ಯಕ್ಕೆ ಸಹಕರಿಸಿದ್ದರು.
 
ಇದಿಷ್ಟೇ ಸಾಕಿತ್ತು ಕನ್ನಡಿಗರಿಗೆ ತಮಿಳರ ವಿರುದ್ದ ಸಿಡಿದೇಳಲು. ತಮಿಳು ಚಿತ್ರರಂಗದವರ ವರ್ತನೆ ಕನ್ನಡಪರ ಸಂಘಟನೆಯವರನ್ನು ತೀರ್ವ ಆಕ್ರೋಶಕ್ಕೀಡುಮಾಡಿತ್ತು. ಕರ್ನಾಟಕವು ತನ್ನ ಜಲಸಂಪನ್ಮೂಲಗಳಿಂದ ಸಂಗ್ರಹಿಸಿ ತಮಿಳುನಾಡಿಗೆ ಬಿಡುವ ನೂರಾರು ಟಿ.ಎಂ.ಸಿ ನೀರಿಗೆ ಒಂದು ಪೈಸೆಯನ್ನೂ ಪಡೆಯದಿರುವಾಗ, ಪ್ರತಿ ಯುನಿಟ್ಟಿಗೆ ಇಂತಿಷ್ಟು ದರವೆಂದು ಹಣವನ್ನು ಪಡೆದು ನೀಡುವ ವಿದ್ಯುತ್ ಸಂಪರ್ಕವನ್ನು ಕಡಿದುಹಾಕುವಲ್ಲಿ ರುವಾರಿಯಾಗಿದ ತಮಿಳು ಚಿತ್ರರಂಗಕ್ಕೆ ಕರ್ನಾಟಕದಲ್ಲಿ ಸಂಪೂರ್ಣ ಬಹಿಷ್ಕಾರ ಹಾಕಬೇಕೆಂದು ಕನ್ನಡಪರಸಂಘಟನೆಗಳು ಸೇರಿದಂತೆ ಎಲ್ಲಾ ಸಂಘಟನೆಗಳವರ ಸಭೆಯಲ್ಲಿ ಜಾಣಗೆರೆ ಒತ್ತಾಯಿಸಿದರು. ಅದು ಕನ್ನಡ ಸಂಘಟನೆಗಳ ನಾಯಕರುಗಳಿಗೆ ಅಪ್ಯಾಯಮಾನವಾಗಿತ್ತಾದರೂ ಸಭೆಯಲ್ಲಿ ಭಾಗವಹಿಸಿದ್ದ ಕೆಲವು ರಾಜಕಾರಣಿಗಳಿಗೆ ಸರಿಯೆಂದು ಕಂಡುಬರಲಿಲ್ಲ. ಆದರೆ ಅಂತಿಮವಾಗಿ ಸಭೆಯಲ್ಲಿ ತಮಿಳು ಚಿತ್ರಗಳ ಬಹಿಷ್ಕಾರಕ್ಕೆ ಎಲ್ಲಾ ನಾಯಕರುಗಳ ಸಂಪೂರ್ಣ ಒಪ್ಪಿಗೆ ಸಿಕ್ಕಿತ್ತು. ಅಲ್ಲದೆ, ತಮಿಳು ಚಿತ್ರರಂಗದವರು ತಮಿಳುನಾಡು ಸರ್ಕಾರವನ್ನು ಬೆಂಬಲಿಸಿ ನೈವೇಲಿಯಲ್ಲಿ ಪ್ರತಿಭಟನಾ ಧರಣಿ ನಡೆಸಿ, ಕರ್ನಾಟಕಕ್ಕೆ ಸರಬರಾಜಾಗುತ್ತಿದ್ದ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ ಮಾದರಿಯಲ್ಲಿ ಕರ್ನಾಟಕದ ಬೆಂಬಲಕ್ಕೆ ಕನ್ನಡ ಚಿತ್ರರಂಗವೂ ಮುಂದಾಗಬೇಕೆಂದು ಕನ್ನಡ ಸಂಘಟನೆಗಳ ಮುಖಂಡರು ಒತ್ತಾಯ ಮಾಡಿದ್ದರು. ದುರಂತವೆಂದರೆ ಕನ್ನಡದ ಬಗ್ಗೆ, ರೈತರ ಬವಣೆಯ ಬಗ್ಗೆ ಚಲನಚಿತ್ರಗಳಲ್ಲಿ ಕರುಳು ಕಿವಿಚುವಂತೆ ಕತೆ ಕಟ್ಟುತ್ತಿದ್ದ ಚಿತ್ರರಂಗದ ಮಂದಿ ಆ ಕರೆಗೆ ಸ್ಪಂದಿಸದೇ ಹೋದರು.
 
ಇತ್ತೀಚಿನ ದಶಕಗಳಲ್ಲಿ ಕಾವೇರಿ ಹೋರಾಟವೆಂದರೆ ಚಿತ್ರರಂಗದವರ ಪಾಲ್ಗೊಳ್ಳುವಿಕೆ ಹೆಚ್ಚೇ ಇರುತ್ತದೆ. ಕನ್ನಡ ಚಿತ್ರಗಳನ್ನು ಮಾಡುವ ನಟ, ನಿರ್ದೇಶಕ, ತಂಡಗಳಿಗೆ ತಮಿಳು ಚಿತ್ರಗಳಿಗೆ ಮೊದಲ ಆದ್ಯತೆ ಕೊಟ್ಟು ಅದನ್ನು ಕರ್ನಾಟಕದಾದ್ಯಂತ ಪ್ರದರ್ಶನ ಮಾಡುವ ವಿತರಕರ, ಥಿಯೇಟರ್ ಮಾಲೀಕರ ಬಗ್ಗೆ ಮನಸ್ಸಿನೊಳಗೇ ಅತೀವ ಅಸಮಾಧಾನವಿದೆ. ನಮಗೆ ನಾವು ಕೇಳಿದಷ್ಟು ಕಾವೇರಿ ನೀರೂ ಬೇಕು, ನಮ್ಮ ರಾಜ್ಯದಲ್ಲಿ ನಾವು ಚಿತ್ರಗಳಲ್ಲಾಗುವಂತೆ ನಿಜ ಜೀವನದಲ್ಲೂ ಹೀರೋಗಳಾಗಬೇಕು, ಪಕ್ಕದ ರಾಜ್ಯದ ವಿರುದ್ಧ ಹೋರಾಡಬೇಕು ಎನ್ನುವ ತೆವಲಿನ ಜೊತೆಗೇ ಅಲ್ಲಿಂದ ಬರುವ ಚಿತ್ರಗಳ ಕಲೆಕ್ಷನ್ ಗಂಟೂ ಕೈಸೇರಬೇಕೆಂಬ ದುರಾಸೆ ತಮಿಳು ನಟರಿಗಿದೆ ಅಲ್ಲವೇ.
 
ನೀವೇ ನೋಡಿ! ಭಾವನೆಗಳಿಂದ, ಕಷ್ಟ-ನೋವು-ಕೊರತೆಯಿಂದ ಶುರುವಾದ ಕಾವೇರಿ ನೀರಿಗಾಗಿನ ಹೋರಾಟ ಮೊದಲು ರಾಜಕೀಯದಿಂದ, ಅನಂತರ ಹಣದಿಂದ ನಿಯಂತ್ರಿತವಾಗುವ ಮಟ್ಟಕ್ಕೆ ಸಾಗುತ್ತಿತು...
೨೦೦೨ರ ಅಕ್ಟೋಬರ್ ೧೨ರಂದು ಕನ್ನಡಪರ ಸಂಘಟನೆಗಳು ಕರೆಕೊಟ್ಟಿದ್ದ ಬೆಂಗಳೂರು ಬಂದ್ ಯಶಸ್ವಿಯಾಗಿತ್ತು. ಅದಾದ ನಂತರ ತಮಿಳುಚಿತ್ರಗಳ, ಟಿವಿ ಚಾನಲ್ಲುಗಳ ಬಹಿಷ್ಕಾರ ಆರಂಭವಾಯಿತು. ರಾಜ್ಯದಲ್ಲಿ ಹಿಂದೆದ್ದೂ ನಡೆಯದಿದ್ದಂತಹ ಬಹಿಷ್ಕಾರ ಯಶಸ್ವಿಯಾಗಿ ನಡೆಯತೊಡಗಿತು. ಅದನ್ನು ಕಂಡು ತಮಿಳು ಚಿತ್ರರಂಗದವರು ಬೆಚ್ಚಿದ್ದರು. ಏಕೆಂದರೆ ಕರ್ನಾಟಕದಲ್ಲಿ ಸಿಗುತ್ತಿದ್ದ ಅವರ ಆದಾಯಕ್ಕೆ ಧಕ್ಕೆಯಾಗಿತ್ತು. ಕಳೆದಬಾರಿ ೧೯೯೩ರಲ್ಲಿ ಜಯಲಲಿತಾ ನಡೆಸುತ್ತಿದ್ದ ಉಪವಾಸಕ್ಕೆ ಬೆಂಬಲ ನೀಡಿದ್ದಕ್ಕಾಗಿ ರಜನೀಕಾಂತ್, ಕಮಲಾಹಾಸನ್, ಶ್ರೀದೇವಿಯರ ಚಿತ್ರಗಳಿಗೆ ಮಾತ್ರ ಬಹಿಷ್ಕಾರ ಹಾಕಲಾಗಿತ್ತು. ಈ ಬಾರಿ ರಜನೀಕಾಂತ್ ಆ ಬಗೆಯ ತಪ್ಪು ಮಾಡಲು ಮುಂದಾಗಿರಲಿಲ್ಲ. ಇಡೀ ತಮಿಳು ಚಿತ್ರರಂಗದವರು ಕನ್ನಡಿಗ ನಟರೆನಿಸಿದ್ದ ಕೆಲವರನ್ನು ಪ್ರತ್ಯೇಕವಾಗಿಟ್ಟು ತಾವು ಮಾತ್ರವೇ ಈ ಬಗೆಯ ಪ್ರತಿಭಟನೆ ನಡೆಸಿದ್ದರು. ಈ ಬಾರಿ ಜಾಣರಾಗಿದ್ದ ರಜನೀಕಾಂತ್ ’ನೀರಿಗಾಗಿ ರಕ್ತ ಹರಿಸುವುದು ಬೇಡ ಪ್ರೀತಿಯಿಂದ ನೀರನ್ನು ಪಡೆಯುವುದು ನಮ್ಮ ಹೋರಾಟವಾಗಬೇಕು’ ಎಂದಿದ್ದನ್ನು ತಮಿಳು ಚಿತ್ರಾಭಿಮಾನಿಗಳನ್ನು ತಿರಸ್ಕರಿಸಿದ್ದರು.
 
ತಮಿಳುನಾಡಿಗೆ ಮೊದಲು ಪಿಂಚ್ ಆಗುವುದು ತಮಿಳು ಚಿತ್ರಗಳ ಪ್ರದರ್ಶನ ನಿಂತಾಗ, ತಮಿಳು ಚಾನೆಲ್ ಗಳ ಪ್ರಸಾರ ನಿಂತಾಗ. ತಮಿಳುನಾಡಿನಲ್ಲಿ ಚಿತ್ರರಂಗಕ್ಕೂ ರಾಜಕೀಯಕ್ಕೂ ಅಂತರ ಕಡಿಮೆ ನೋಡಿ!ಅಹಿಂಸಾತ್ಮಕವಾಗಿ ತಮಿಳುನಾಡಿನ ಜೇಬಿಗೆ, ಇಗೋಗೆ ಹೊಡೆತ ಕೊಡಬೇಕೆಂದರೆ ಇದೇ ಶಾರ್ಟ್ ಕಟ್ ಎಂದು ಕನ್ನಡ ಚಳುವಳಿಗಾರರಿಗೂ ಗೊತ್ತಿತ್ತು. ಕನ್ನಡ ಚಿತ್ರರಂಗದ ಕೆಲವರಿಗೆ ತಮಿಳು ಚಿತ್ರರಂಗದವರ ಹಣಕಾಸಿನ ಕೃಪಾಕಟಾಕ್ಷ ಇದ್ದಿದ್ದರಿಂದ ಮತ್ತು ಕನ್ನಡದ ಚಿತ್ರಗಳಿಗಿಂತಲೂ ಕರ್ನಾಟಕದಲ್ಲಿ ತಮಿಳು ಚಿತ್ರಗಳಿಗೇ ಹೆಚ್ಚು ಬೇಡಿಕೆಯನ್ನು ಸೃಷ್ಟಿಸಿದ್ದರಿಂದ ತಮಿಳು ಚಿತ್ರಗಳ ಪ್ರದರ್ಶನ ನಿಲ್ಲುವುದರಿಂದ ಕೋಟಿಗಟ್ಟಲೆ ನಷ್ಟ ಆಗುತ್ತಿತ್ತು. ಹಾಗಾಗಿ ಚಾನಲ್ಲುಗಳ ಮಾಲೀಕರು, ತಮಿಳು ಚಿತ್ರವಿತರಕರು, ಪ್ರದರ್ಶಕರು ಬೆಂಗಳೂರು ನಗರದ ಪೋಲೀಸ್ ಕಮೀಷನರ್ ರನ್ನು ಕಂಡು ಮನವಿ ಸಲ್ಲಿಸಿದ್ದರು. ಪೋಲೀಸರು ಅವರ ಮನವಿಗೆ ಒಲಿದಿದ್ದರೂ ಇದರಿಂದ ಮತ್ತಷ್ಟು ಕುಪಿತರಾದ ಕನ್ನಡ ಚಳವಳಿಗಾರರು ಕಮೀಷನರ್ ಪ್ರಸಾರಕ್ಕೆ ನೀಡಿದ್ದ ಒಪ್ಪಿಗೆಯನ್ನು ಹಿಂದೆಗೆಸಿದರು. ಈ ಬಾರಿಯ ತಮಿಳು ಚಿತ್ರಗಳ ಬಹಿಷ್ಕಾರ ತಮಿಳುನಾಡಿಗೆ ಹೆಚ್ಚೇ ನಷ್ಟ ಮಾಡಿಸಿತ್ತು.
 
ತಮಿಳು ಚಿತ್ರಗಳು, ಚಾನಲ್ಲುಗಳು ಪುನರಾರಂಭವಾಗಬೇಕೆಂದು ಅಂದಿನ ವಾರ್ತಾ ಸಚಿವ ಕಾಗೋಡು ತಿಮ್ಮಪ್ಪ, ಗೃಹ ಮಂತ್ರಿ ಮಲ್ಲಿಕಾರ್ಜುನ ಖರ್ಗೆಯವರ ಮೇಲೂ ಒತ್ತಡ ಬರಲಾರಂಭಿಸಿತ್ತು. ಅವರೂ ಕೂಡಾ ಅದಕ್ಕೆ ಸ್ಪಂದಿಸುವುದಾಗಿಯೂ, ಯಾರೇ ತಮಿಳು ಚಿತ್ರಗಳನ್ನು ಪ್ರದರ್ಶಿಸಿದರೂ ಅವರಿಗೆ ಸೂಕ್ತ ರಕ್ಷಣೆ ನೀಡುವುದಾಗಿ ಬಹಿರಂಗ ಹೇಳಿಕೆ ನೀಡಿದ್ದರು. ಇದರಿಂದ ಮತ್ತೆ ಕೆರಳಿದ ಕನ್ನಡ ಕಾರ್ಯಕರ್ತರು ಖರ್ಗೆ ಯವರಿಗೆ ಪತ್ರವೊಂದನ್ನು ಸಲ್ಲಿಸಿ ಯಾವುದೇ ಕಾರಣಕ್ಕೂ ಪ್ರದರ್ಶನಕ್ಕೆ ಅನುವು ಮಾಡಿಕೊಡಬಾರದೆಂದೂ, ಒಂದು ವೇಳೆ ಅನುಮತಿ ನೀಡಿದಲ್ಲಿ ಮುಂದಾಗುವ ಅನಾಹುತಗಳಿಗೆ ಸರ್ಕಾರವೇ ಹೊಣೆಯಾಗುತ್ತದೆಂದು ಹೇಳಿದ್ದರ ಪರಿಣಾಮ ಎಲ್ಲರೂ ಸ್ವಲ್ಪವದರೂ ತೆಪ್ಪಗಾಗಿದ್ದರು.
 
(ಮುಂದುವರಿಯುವುದು)
 
 
   
 

 ಮೀಡಿಯಾ ಮೇನಿಯಾ-೪
ಟಿವಿಯಿಂದ ಕಾಣೆಯಾದ ಭಂಗಿರಂಗ-ಪುಂಗಿರಂಗರು!!!


 
ಪ್ರಿಯ ಓದುಗರೇ, ನೀವು ರಾಜಕಾರಣಿಗಳು ಅಧಿಕಾರಕ್ಕೇರಿದ ದಿನವೊಪ್ಪತ್ತಿನಲ್ಲೇ ಕುಬೇರರಾಗಿ ಮೆರೆಯುವುದನ್ನು ಕಂಡಿರುತ್ತೀರಿ. ಅದಕ್ಕೆ ಅವರೂ ಒಂದಷ್ಟು ಬಂಡವಾಳವನ್ನು ಹೂಡಿರುತ್ತಾರೆ. ಇಂದು ರಾಜಕೀಯವೆನ್ನುವುದು ಹಣ ಮಾಡುವ ಪ್ರಮುಖ ದಂಧೆಯಾಗಿಬಿಟ್ಟಿದೆ. ಆದರೆ ಸಮಾಜದ ಅಂಕುಡೊಂಕುಗಳನ್ನು ಸರಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕಾದ ಪತ್ರಿಕಾ ರಂಗವೂ ಎಕ್ಕುಟ್ಟಿ ಹೋಗುವ ಸ್ಥಿತಿಯಲ್ಲಿದೆ. ಜನ ಯಾವ ಸುದ್ದಿಯನ್ನು ನಂಬಬೇಕು, ಯಾವುದನ್ನು ನಂಬಬಾರದು ಎಂದು ತಿಳಿಯಲಾಗದ ತೊಳಲಾಟದಲ್ಲಿದ್ದಾರೆ. ಒಂದು ಪತ್ರಿಕೆಯಲ್ಲಿ, ಟಿವಿ ಮಾದ್ಯಮದಲ್ಲಿ ಒಬ್ಬ ರಾಜಕಾರಣಿಯ ವಿರುದ್ದವಾದ ವರದಿಗಳು ಬಂದರೆ ಮತ್ತೊಂದು ಪತ್ರಿಕೆಯಲ್ಲಿ, ಟಿವಿ ಮಾದ್ಯಮದಲ್ಲಿ ಅದೇ ರಾಜಕಾರಣಿಯ ಪರವಾದ ವರದಿ ಇರುತ್ತದೆ. ಇತ್ತೀಚೆಗೆ ಹುಟ್ಟಿಕೊಂಡಿರುವ ಟಿವಿ ಚಾನಲ್ಲುಗಳಲ್ಲಿ ನಾವಿದನ್ನೇ ಕಾಣಬಹುದಾಗಿದೆ. ರಾಜಕಾರಣಿಗಳ ದೌರ್ಬಲ್ಯಗಳನ್ನೇ ದುರುಪಯೋಗಪಡಿಸಿಕೊಳ್ಳುವಲ್ಲಿ ನಿಷ್ಣಾತರಾದ ಕೆಲವು ಪತ್ರಕರ್ತರುಗಳಂತೂ ಭ್ರಷ್ಟಾಚಾರದಲ್ಲಿ ರಾಜಕಾರಣಿಗಳನ್ನು ಮೀರಿಸಿದ್ದಾರೆ. ಹಾಗೆ ತಮ್ಮ ಮಿತಿಮೀರಿದ ಭ್ರಷ್ಟಾಚಾರದಿಂದಾಗಿ ಕರ್ಣಕಠೋರ ಟಿವಿಯಿಂದ ಕಿಕ್ ಮಾಡಿಸಿಕೊಂಡ ಭಂಗಿರಂಗ ಪುಂಗಿರಂಗ ಎಂಬಿಬ್ಬರು ಪುಣ್ಯಾತ್ಮರ ಕಥೆಗಳನ್ನು ನಿಮ್ಮ ಮುಂದಿಡಲಿದ್ದೇವೆ. ಓದಿ ನೀವು ಒಂದಷ್ಟು ಪುಣ್ಯ ಕಟ್ಟಿಕೊಳ್ಳಿರೆಂದು ಹಾರೈಸುತ್ತೇವೆ.
 

ಈ ಪುಂಗಿರಂಗನೆಂಬ ಮಹಾಶಯ ಮೊದಮೊದಲು ವಾರ್ತಾವಾಚಕನಾಗಿ ಕೆಲಸಕ್ಕೆ ಸೇರಿದಾತ. ಏಟಿವಿ, ಟಿವಿ೬೯ ಗಳಲ್ಲಿದ್ದು ಅಲ್ಲಿಂದ ಒದೆಸಿಕೊಂಡು ಕರ್ಣಕಠೋರದ ಮಡಿಲಿಗೆ ಬಂದು ಬಿದ್ದಾತ. ಹಾಗೆ ಈತನನ್ನು ತನ್ನ ಮಡಿಲಿಗೆ ಸೇರಿಸಿಕೊಂಡದ್ದು ಕರ್ಣ ಕಠೋರದ ಸುದ್ದಿ ವಿಭಾಗಕ್ಕೆ ಪತ್ರಿಕೆಯೊಂದರಿಂದ ಜಿಗಿದು ಬಂದು ಮುಖ್ಯಸ್ಥನಾಗಿದ್ದ ಭಂಗಿರಂಗನೆಂಬ ಮಹಾನ್ ಚಾಣಾಕ್ಷ ಪತ್ರಕರ್ತ. ಕರಟಕ-ದಮನಕರಂತಾ ಈ ಜೋಡಿ ಕೆಲವು ಕಾಲ ಕರ್ನಾಟಕದ ಜನತೆಯನ್ನು ಯಾವಪರಿ ಕಾಡಿತ್ತೆಂದರೆ ಇನ್ನು ಕರ್ಣಾಟಕದಲ್ಲಿ ಭ್ರಷ್ಟಾಚಾರ ನಿರ್ನಾಮವಾಯಿತೆಂದೇ ಬಡಜನತೆ ಭ್ರಮಿಸಿದ್ದರು. ಅದಕ್ಕೆ ಕಾರಣ ಪರದೆಯ ಮೇಲೆ ಇವರು ವರ್ತಿಸುತ್ತಿದ್ದ ರೀತಿ! ಆದರೆ ತೆರೆಯ ಹಿಂದೆ ಇವರ ವರೆಸೆ ತದ್ವಿರುದ್ದವಾಗಿತ್ತು. ಆ ವರಸೆಗಳು ಹೇಗಿರುತ್ತಿತ್ತೆಂಬುದರ ಬಗ್ಗೆ ಒಂದೆರಡು ಸ್ಯಾಂಪಲ್ಲುಗಳನ್ನು ನಿಮ್ಮ ಮುಂದಿಡುತ್ತಿದ್ದೇವೆ. ಓದಿ ಪಾವನರಾಗಿ!


ಆಡಳಿತ ಪಕ್ಷದ ನಾಯಕನೊಬ್ಬನನ್ನು ಈ ಕರಟಕ-ದಮನಕ ಜೋಡಿ ತಮ್ಮ ಜುಗಲ್ ಬಂದಿ ಕಾರ್ಯಕ್ರಮಕ್ಕೆ ಕರೆಸಿಕೊಂಡು ಕೂರಿಸಿಕೊಳ್ಳುತ್ತದೆ. ಕಾರ್ಯಕ್ರಮ ಆರಂಭವಾಗುವ ಮುನ್ನ ಪುಂಗಿರಂಗ "ನೋಡೀ ಸಾರ್, ಆ ವಿರೋಧ ಪಕ್ಷದವರು ನಿಮ್ಮ ಜನ್ಮ ಜಾಲಾಡ್ತಾವ್ರೆ, ಇದಕ್ಕೆ ನೀವು ಸರಿಯಾಗಿ ಉತ್ತರಿಸಬೇಕು, ಅವರು ಮಾಡಿದ್ದ ಕರ್ಮಕಾಂಡಗಳೂ ಬೇಕಾದಷ್ಟಿವೆ, ಅದನ್ನೂ ನೀವು ಹೇಳಬೇಕು, ಅಂದ ಹಾಗೆ ನಮ್ಮದೊಂದು ಚಿಕ್ಕ ಕೆಲಸವಿತ್ತು ಸಾರ್, ನಮ್ಮ ಬಾಂಬೆ ಪಾರ್ಟಿಯೊಬ್ಬರು ಜಮೀನು ಖರೀದಿಸಿದ್ದಾರೆ..ಅದರ ಡಿ ನೋಟಿಫ಼ಿಕೇಷನ್ ಮಾಡಿಕೊಡಬೇಕಿದೆ. ನಮಗೆ ತುಂಬಾ ಬೇಕಾದವ್ರು, ನಿಮಗೂ ಸಹಾಯಕ್ಕೆ ಬರ್ತಾರೆ..."
ಖುಶಿಯಾದ ಆಡಳಿತ ಪಕ್ಷದ ನಾಯಕರು "ಏನ್ ಗುರುಗಳೇ, ನೀವು ನನ್ನನ್ನ ಕೇಳ್ಬೇಕಾ, ನೀವು ಕೆಲಸ ಹೇಳಿ, ಚಿಟಿಕೆ ಹೊಡೆಯುವಷ್ಟರಲ್ಲಿ ಮಾಡಿಕೊಡ್ತೀನಿ, ನನಗೇನೂ ದುಡ್ಡು ಬೇಡ, ಅದೇನೋ ವ್ಯವಹಾರ ನೀವು ಮಾಡ್ಕಳಿ, ನನ್ನನ್ನು ಇಕ್ಕಟ್ಟಿಗೆ ಮಾತ್ರ ಸಿಲುಕಿಸಬೇಡಿ ಅಷ್ಟೇ" ಎಂದು ಕೈ ಮುಗಿದರು. ಆ ರಾಜಕಾರಣಿ ತಮ್ಮ ಕೆಲಸ ಮಾಡಿಕೊಡುವುದಾಗಿ ಹೇಳಿದ ಕೂಡಲೇ ಸಖತ್ ಖುಶಿಯಾದ ಪುಂಗಿರಂಗ ಭಂಗಿರಂಗರಿಬ್ಬರೂ ಒಟ್ಟಾಗಿ "ನಾವು-ನಮ್ಮ ಚಾನಲ್ ಯಾವತ್ತೂ ನಿಮ್ಮ ಬೆಂಬಲಕ್ಕಿರುತ್ತೇವೆ, ಹೆದರಬೇಡಿ ಸಾರ್" ಎಂದು ರಾಜಕಾರಣಿಗೆ ಅಭಯಹಸ್ತವನ್ನು ನೀಡಿದವರೇ "ಈಗ ಕಾರ್ಯಕ್ರಮ ಶುರುಮಾಡೋಣ, ನೀವು ಧೈರ್ಯವಾಗಿ ಮಾತಾಡಿ ಸಾರ್" ಎಂದು ಅತ್ಯಂತ ವಿನಯಪೂರ್ವಕವಾಗಿ ಹೇಳಿದವರೇ ಪ್ರೇಕ್ಷಕರತ್ತ ತಿರುಗಿ...
"ಪ್ರಿಯ ವೀಕ್ಷಕರೇ, ಇಂದು ನಮ್ಮ ಜುಗಲ್ ಬಂದಿಗೆ ಬಂದಿರುವ ಶ್ರ‍ಿ----ಇವರಿಗೆ ಸ್ವಾಗತ" ಅಂದವರೇ "ಅಲ್ರೀ, ನಿಮ್ಮ ಸರ್ಕಾರದಲ್ಲಿ ದಿನನಿತ್ಯ ಹಗರಣಗಳು ಬರ್ತಾ ಇವೆ ಇದರ ಬಗ್ಗೆ ನೀವು ಏನ್ ಹೇಳ್ತೀರಿ?" ಎಂದರು. ರಾಜಕಾರಣಿ ಕೊಂಚ ಗಲಿಬಿಲಿಯಾಗಿ "ಬಡ್ಡಿ ಮಕ್ಳಾ! ಈಗ ನನ್ ಮುಂದೆ ಸಾರ್ ಸಾರ್ ಅಂತ ಕೈಕಟ್ಟಿ ಕುಳಿತಿದ್ದೋರು ಈಗ ಕ್ಯಾಮರಾ ಮುಂದೆ ಮಾತಿನ ವರಸೆಯನ್ನೇ ಬದಲಿಸಿಬಿಟ್ರಲ್ಲಾ!" ಎಂದುಕೊಂಡವರೇ "ನೋಡಿ ಇದು ಎಲ್ಲಾ ಕಾಲದಲ್ಲೂ ನಡೆದು ಬಂದಿರೋದು, ಅವರ ಕಾಲದಲ್ಲೂ ಆಗಿತ್ತು, ನಮ್ಮ ಕಾಲದಲ್ಲೂ ಆಗಿದೆ ಅಷ್ಟೇ" ಅಂದರು.
 
ಭಂಗಿರಂಗ "ಓಕೆ ಫೇರ್, ಫೇರ್! ನಾನು ಒಬ್ಬ ಸಾಮಾನ್ಯ ಮನುಷ್ಯನಾಗಿ ಕೇಳೋದ್ ಏನಂದ್ರೆ, ಈ ರಾಜ್ಯದಲ್ಲಿ ಏನೇನೂ ಕೆಲಸ ನಡೀತಿಲ್ಲ...ಸೀರೆ ಹಂಚೋದ್ರಲ್ಲೂ ಕಮೀಷನ್ ತಿಂತ ಇದಾರೆ ಅಂತಾ ಆಡಳಿತ ಪಕ್ಷದ ಮೇಲೆ ಆರೋಪವಿದೆಯಲ್ಲಾ?" ಆಡಳಿತ ಪಕ್ಷದ ನಾಯಕ "ಅಯ್ಯೋ ಬಿಡೀ, ಆ ನೂರ್ರುಪಾಯಿ ಸೀರೇಲಿ ಇನ್ಯಾವ ಕಮೀಷನ್ ಸಿಗ್ತದೆ?" ಕೂಡಲೇ ಪುಂಗಿರಂಗ ಪೋಲೀಸರು ಅಪರಾಧಿಗಳಿಗೆ ತಮ್ಮ ಠಾಣೆಗಳಲ್ಲಿ ಸೊಂಟದ ಮೇಲೆ ಕೈಯಿಟ್ಟುಕೊಂಡು ಅವಾಜ್ ಹಾಕುವ ರೀತಿಯಲ್ಲಿ ತಾನೂ ಸೊಂಟದ ಮೇಲೆ ಕೈಯಿಟ್ಟು ಇವನನ್ನು ಇಕ್ಕಟ್ಟಿಗೆ ಸಿಲುಕಿಸಿದರೆ ತಮ್ಮ ಕೆಲಸವಾಗುವುದಿಲ್ಲ ಎಂದುಕೊಂಡವನೇ "ಸರೀ, ಸರೀ, ನಿಮ್ಮ ಮುಂದಿನ ಯೋಜನೆಗಳೇನು?" ಅನ್ನುವಷ್ಟರಲ್ಲಿ...
 
ಭಂಗಿರಂಗ "ನಾನು ಒಬ್ಬ ಸಾಮಾನ್ಯ ಪ್ರಜೆಯಾಗಿ ಕೇಳದ್ ಏನಂದ್ರೇ, ಇಂದು ನನಗೊಂದು ಸೂರಿಗೆ ಗತಿಯಿಲ್ಲಾ, ಆ ಬಗ್ಗೆ ನಿಮ್ಮ ಸರ್ಕಾರ ಏನ್ ಮಾಡುತ್ತೇ..."
ಆಡಳಿತ ಪಕ್ಷದ ನಾಯಕ ಅವನ ಮಾತು ಕೇಳಿ ಕೊಂಚ ದಂಗಾದರು. "ಈ ನನ್ಮಗ ಕಾಲೆಕೆರೆ ಜಾಗದಲ್ಲಿ ಬೃಹತ್ತಾದ ಮನೆ ಕಟ್ಟಿಸಿದ್ದಾನೆ, ಮನೆ ಮೇಲೆಯೇ ಸ್ವಿಮ್ಮಿಂಗ್ ಪೂಲ್ ಮಾಡಿದ್ದಾನೆ, ಇಲ್ಲಿ ಜನ ಸಾಮಾನ್ಯ, ಸೂರಿಲ್ಲ ಅಂತಾ ಹೇಳ್ತಾವ್ನಲ್ಲಾ" ಅಂದುಕೊಂಡವನೇ "ನೊಡೀ ಸಾರ್... ನಾವು ಇನ್ನು ಮೂರು ತಿಂಗಳಲ್ಲಿ ಕರ್ನಾಟಕದಲ್ಲಿ ಎಲ್ಲಾ ಕಡೆ ಮನೆಯಿಲ್ಲದವರಿಗೆ ಮನೆಕಟ್ಟಿಸಿಕೊಡುತ್ತೀವಿ" ಅಂದರು. ಭಂಗಿರಂಗ "ಓಕೆ, ಫೇರ್..ಫೇರ್! ಈ ಮಾತನ್ನು ಕಳೆದ ಆರು ತಿಂಗಳ ಹಿಂದೆಯೇ ಹೇಳಿದ್ರೀ" ಅಂದವನೇ ಪುಂಗಿರಂಗನ ಕಡೆ ನೋಡಿದ. ಕೂಡಲೇ ಪುಂಗಿರಂಗ ಈಗ ಹೆಚ್ಚಿಗೆ ಕೆಣಕಿದರೆ ನಮ್ಮ ಡಿ-ನೋಟಿಫ಼ಿಕೇಷನ್ ಕೆಲಸಕ್ಕೆ ಧಕ್ಕೆಯಾಗುತ್ತದೆಂದುಕೊಂಡವನೇ ಈಗ ಚಿಕ್ಕದೊಂದು ಬ್ರೇಕ್ ಅಂದ.
ಬ್ರೇಕ್ ಸಮಯದಲ್ಲಿ ನಡೆದ ಆಫ಼್ ದಿ ರೆಕಾರ್ಡ್ ಮಾತುಕತೆಗಳ ವಿವರ ನಮ್ಮ ಆಯಾಮದ ಓದುಗರಿಗೆ ಮಾತ್ರ ಹೇಳ್ತಿದ್ದೀವಿ, ನೀವು ಯಾರಿಗೂ ಹೇಳ್ಬೇಡಿ. ಒಮ್ಮೆ ಉಸಿರನ್ನು ಎಳೆದುಕೊಂಡ ರಾಜಕಾರಣಿ "ಅದೇನ್ ಡೀಟೈಲ್ ಕೊಡೀ ಗುರುಗಳೇ ನಿಮ್ಮ ಕೆಲಸ ನಾಳೆನೇ ಆಯ್ತು ಅಂದ್ಕಳಿ" ಅಂದ. ಕೂಡಲೇ ಭಂಗಿರಂಗ ಪುಂಗಿರಂಗರಿಬ್ಬರೂ ಕೃತಾರ್ಥರಾದವರಂತೆ ಎದ್ದು ನಿಂತು ಥ್ಯಾಂಕ್ಯೂ ಸಾರ್, ಥ್ಯಾಂಕ್ಯೂ ಸಾರ್ ಅಂದರು. ಮುಂದುವರೆದ ಕಾರ್ಯಕ್ರಮದಲ್ಲಿ ಆ ಆಡಳಿತ ಪಕ್ಷದ ನಾಯಕನ ಬಾಯಿಂದ ವಿರೋಧಪಕ್ಷದವರನ್ನು ಹಿಗ್ಗಾಮುಗ್ಗಾ ಜಾಡಿಸುವಂತೆ ಮಾತನಾಡಿಸಿ ಕಳಿಸಿದ ಮಾರನೆಯ ದಿನವೇ ಅವರು ಕೇಳಿಕೊಂಡಿದ್ದ ಡಿ-ನೋಟಿಫಿಕೇಷನ್ ಕೆಲಸ ಸಾಂಗವಾಗಿ ಆಗಿತ್ತು.
ಒಂದು ವಾರ ಕಳೆಯುವಷ್ಟರಲ್ಲಿ ವಿರೋಧ ಪಕ್ಷದ ನಾಯಕನೊಬ್ಬ ಸರ್ಕಾರದ ಡಿ-ನೋಟಿಫಿಕೇಶನ್ ಅವ್ಯವಹಾರಗಳನ್ನು ಬಯಲಿಗೆಳೆದಿದ್ದ. ಕೂಡಲೇ ಜಾಗೃತರಾದ ಭಂಗಿರಂಗ ಪುಂಗಿರಂಗರು ತಾವು ಮಾಡಿಸಿಕೊಂಡಿದ್ದ ಡಿ-ನೋಟಿಫಿಕೇಷನ್ ರದ್ದಾಗಿ ತಾವೆಲ್ಲಿ ಬಾಂಬೆ ಪಾರ್ಟಿಯಿಂದ ತಿಂದಿದ್ದ ಹಣವನ್ನು ಕಕ್ಕಬೇಕಾಗುತ್ತೋ ಎಂಬ ಭೀತಿಯಿಂದ ಅಕ್ರಮಗಳನ್ನು ಬಯಲಿಗೆಳೆದಿದ್ದ ವಿರೋಧಪಕ್ಷದ ನಾಯಕನನ್ನು ಪುಸಲಾಯಿಸಿ ಜುಗಲ್ ಬಂದಿಗೆ ಆಮಂತ್ರಿಸಿಕೊಂಡರು. ಆ ನಾಯಕನೇನೂ ಕಡಿಮೆ ಆಸಾಮಿಯಲ್ಲ, ಈ ಕರಟಕ-ದಮನಕ ಜೋಡಿಯ ಇತಿಹಾಸವನ್ನು ಚೆನ್ನಾಗಿ ತಿಳಿದವನೇ ಆಗಿದ್ದ. ಅವನು ಇತರೆ ಪ್ರಕರಣಗಳನ್ನು ಬಹಿರಂಗ ಪಡಿಸಿದ್ದರೂ ಈ ಭಂಗಿರಂಗ ಪುಂಗಿರಂಗರು ಬಾಂಬೆ ಪಾರ್ಟಿಗಾಗಿ ಮಾಡಿಸಿಕೊಂಡಿದ್ದ ಡೀ ನೋಟಿಫಿಕೇಶನ್ ಪ್ರಕರಣವನ್ನು ಬೇಕಂತಲೇ ಸುಮ್ಮನಿಟ್ಟಿದ್ದ. ಅದರ ಮೂಲಕ ಇವರಿಬ್ಬರನ್ನೂ ಬಳಸಿಕೊಂಡು ತಾನು ಸಾಕಷ್ಟು ಪ್ರಚಾರ ಗಿಟ್ಟಿಸಿಕೊಳ್ಳಬಹುದೆಂಬ ಲೆಕ್ಕಾಚಾರ ಆತನದ್ದು.
ಕಾರ್ಯಕ್ರಮ ಆರಂಭವಾಗುವ ಮುಂಚೆಯೇ ಆ ರಾಜಕಾರಣಿಯ ಸ್ತುತಿ ಮಾಡಿದ ಭಂಗಿರಂಗ ಪುಂಗಿರಂಗರು "ಸಾರ್, ನಮ್ಮದೊಂದು ಡಿ-ನೋಟಿಫಿಕೇಷನ್ ಕೆಲಸವಾಗಿದೆ, ನಮಗೆ ತುಂಬಾ ಬೇಕಾದವರದ್ದು. ದಯವಿಟ್ಟು ಅದರ ಬಗ್ಗೆ ತಾವು ಪ್ರಸ್ತಾಪ ಮಾಡಬೇಡಿ, ಇನ್ನುಳಿದ ಪ್ರಕರಣಗಳ ಬಗ್ಗೆ ನೀವು ಮಾಡುತ್ತಿರುವ ಭ್ರಷ್ಟಾಚಾರದ ವಿರುದ್ದದ ಹೋರಾಟಕ್ಕೆ ನಾವು ನಮ್ಮ ಚಾನೆಲ್ ಸದಾ ನಿಮ್ಮ ಬೆಂಬಲಕ್ಕಿರುತ್ತೇವೆ. ಮೊದಲು ಈ ಸರ್ಕಾರವನ್ನು ಕಿತ್ತೆಸೆಯುವ ಕೆಲಸ ಮಾಡಿ, ಅದಕ್ಕೆ ನೀವೇ ಸರಿಯಾದ ವ್ಯಕ್ತಿ" ಎಂದು ಇಬ್ಬರೂ ಒಟ್ಟೊಟ್ಟಿಗೇ ಹೇಳಿದರು.

ತನ್ನ ರೊಟ್ಟಿ ಜಾರಿ ತುಪ್ಪಕ್ಕೆ ಬಿತ್ತೆಂದುಕೊಂಡ ವಿರೋಧಪಕ್ಷದ ನಾಯಕ ಇವರು ಮಾಡಿಸಿಕೊಂಡಿದ್ದ ಡಿ-ನೋಟಿಫಿಕೇಷನ್ ಪ್ರಕರಣದಲ್ಲಿ ಇವರಿಗೆಷ್ಟು ಕೋಟಿ ಹಣ ಸಂದಾಯವಾಗಿರಬಹುದೆಂದು ಮನದಲ್ಲೇ ಲೆಕ್ಕ ಹಾಕಿಕೊಂಡವನೇ "ಏನ್ರಣ್ಣಾ, ನಿಮ್ಮ ಕೆಲಸಕ್ಕೇನದ್ರೂ ನಾನು ಅಡ್ಡಿಪಡಿಸ್ತಿನಾ, ನನ್ನ ಸರ್ಕಾರವಿದ್ದಾಗಲೇ ನಿಮಗೆಷ್ಟೊಂದು ಕೆಲಸ ಮಾಡಿಕೊಟ್ಟಿಲ್ಲ ಹೇಳಿ" ಅಂದ. ಸಖತ್ ಸಂತೋಷಗೊಂಡ ಭಂಗಿರಂಗ ಪುಂಗಿರಂಗರು ತಾವು ತಿಂದದ್ದನ್ನು ಕಕ್ಕಬೇಕಾಗಿಲ್ಲವೆಂದು ಸಮಾಧಾನ ಪಟ್ಟುಕೊಂಡು ಮುಂದೆ ನಡೆದ ಜುಗಲ್ ಬಂದಿ ಕಾರ್ಯಕ್ರಮದುದ್ದಕ್ಕೂ ವಿರೋಧ ಪಕ್ಷದ ನಾಯಕನಿಂದ ಆಳುವ ಸರ್ಕಾರವನ್ನು ಬೇಕಾದಷ್ಟು ಜಾಡಿಸುವುದಕ್ಕೆ ಅವಕಾಶ ಮಾಡಿಕೊಟ್ಟು ಋಣ ಸಂದಾಯ ಮಾಡಿದ್ದರು.
ಹೀಗೆ ತಮಗನುಕೂಲಕ್ಕಾಗಿ ಮಾಧ್ಯಮವನ್ನು ದುರುಪಯೋಗಪಡಿಸಿಕೊಂಡ ಈ ಕರಟಕ-ದಮನಕ ಜೋಡಿಯನ್ನು ಕರ್ಣಕಠೋರ ಟೀವಿಯಿಂದ ಒದ್ದೋಡಿಸಲಾಗಿದೆ. ಆದರೆ ನಾಲ್ಕಾರು ಜನ್ಮಕ್ಕಾಗುವಷ್ಟು ಸಂಪಾದಿಸಿಕೊಂಡಿರುವ ಇವರು ತಾವೇ ಒಂದು ನ್ಯೂಸ್ ಚಾನಲ್ಲನ್ನು ಆರಂಭಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆಂಬ ಸುದ್ದಿಯಿದೆ. ಅದಕ್ಕಾಗಿ ಹಣವಂತ ಉದ್ಯಮಿಗಳು, ರಾಜಕಾರಣಿಗಳನ್ನು ಸಂಪರ್ಕಿಸತೊಡಗಿದ್ದಾರೆ. ಪಾಪ ಇದ್ಯಾವುದನ್ನೂ ಅರಿಯದ ರಾಜ್ಯದ ಮುಗ್ದ ಜನ ಈ ಟೀವಿ ಚಾನಲ್ಲುಗಳಲ್ಲಿ ಬಿತ್ತರವಾಗುವ ಪ್ರಾಯೋಜಕ ಕಾರ್ಯಕ್ರಮಗಳನ್ನು ನಿಜವೆಂದೇ ನಂಬಿಕೊಳ್ಳುತ್ತಾರೆ. ಇದು ಈ ಸಂಚಿಕೆಗಾಗಿ ಆಯಾಮದ ಓದುಗರಿಗಾಗಿ ನೀಡಿರುವ ಮಾಧ್ಯಮದ ಮಂದಿ ನಡೆಸುವಂತಾ ಲೆಕ್ಕವಿಡಲಾಗಷ್ಟು ಡೀಲಿಂಗಿನ ಒಂದು ಸಣ್ಣ ಉದಾಹರಣೆಯಷ್ಟೇ. ಮುಂದಿನ ಸಂಚಿಕೆಯಲ್ಲಿ ಮತ್ತೆ ಮೀಟ್ ಆಗುವವರೆಗೂ ಇದೊಂದು ಸಣ್ಣ ಹಾಡು ಕೇಳುತ್ತಿರಿ....
...ಕುರಿಗಳು ಸಾರ್ ನಾವು ಕುರಿಗಳು...ಕುರಿಗಳು...ನಾವು ಕುರಿಗಳು...
(ಮುಂದುವರೆಯುವುದು) 
  
  
 
 
 
 
 
Copyright © 2011 Neemgrove Media
All Rights Reserved