ಡಾ ಉಷಾ ಕಿರಣ
 

ಮುತ್ತು


ನಾನೊಂದು ಒಡೆದ ಮುತ್ತು
 
ಒಡೆದವರು ಯಾರಾದರೇನಂತೆ
 
ಒಂದೊಂದು ಚೂರಿನಲ್ಲೂ ಅಕ್ಕ, ಅವ್ವ
 
ಅಪ್ಪನಾಗಿ ತುಂಬಿಕೊಂಡಿದ್ದೇನೆ
 
ಒಡೆದ ಮುತ್ತು ಮಾಲೆಯಾಗದೆಂದು ನನಗೆ ಗೊತ್ತು
 
ಯಾರ ಕೊರಳಿನ ಮಾಲೆ ನಾನಾಗಲಿಲ್ಲವೆಂಬ
 
ಕೊರತೆ ನನಗಿಲ್ಲ
 
ಮುತ್ತು ಒಡೆದದ್ದು ನೀನಿರಬಹುದು
 
ಅಥವಾ ನಾನೇ ಇರಬಹುದು, ಇರಲಿ ಬಿಡು
 
ಚೂರು ಚೂರಿನಲ್ಲೂ ಮುತ್ತಿನ ಬೆಳಕೇ
 
ಚೆಲ್ಲುವರಿಯುತ್ತಿದೆ!
 
 
 
 
 
(ಕರ್ನಾಟಕದ ಮಹಿಳಾ ಪರ ಹೋರಾಟಗಾರರಿಗೆ ಅದರಲ್ಲೂ ಮೈಸೂರಿನವರಿಗೆ ಮೀರಕ್ಕ ಚಿರಪರಿಚಿತರು. ಈಕೆ ಸತತ ಸಂಘಟನಾಗಾರ್ತಿ. ಸಮಾನ ಮನಸ್ಕರ ಪುಟ್ಟದೊಂದು ಸಂಘ ಮಾಡಿಕೊಂಡು ಮಹಿಳೆಯರಿಗೆ ಅನ್ಯಾಯವಾದರೆ ಎಲ್ಲಿಗೂ ಹೋಗಿ ಹೋರಾಟ ಮಾಡಲೂ ಸೈ ಎಂದವರು. ತಾವು ಕಲಿಸುತ್ತಿದ್ದ ಪ್ರೌಢ ಶಾಲೆಯ ಮಕ್ಕಳಿಗೆ, ಅದರಲ್ಲೂ ಹೆಣ್ಣು ಮಕ್ಕಳಿಗೆ ವೈಟ್ ಟೈಗ್ರೆಸ್ ಆಗೇ ಸ್ಪೂರ್ತಿಯಾದವರು. ಕಲಿಸಿದ ಗುರು, ಪ್ರೀತಿಸಿ ಹರಸಿದ ಮನಸ್ಸು, ಸಹಾಯಕ್ಕೆ ನಿಂತ ಸೆಲೆ. ಮೀರಕ್ಕ ತಮ್ಮ ಉಪಾಧ್ಯಾಯಿನಿಯ, ಹೋರಾಟಗಾರ್ತಿಯ ಅತ್ಯಂತ ಚಟುವಟಿಕೆಯ ದಿನಗಳಲ್ಲಿ ದಾಖಲಿಸಿಟ್ಟ ಕೆಲವು ಅನಿಸಿಕೆಗಳನ್ನು, ಅನುಭವಗಳನ್ನು, ಅಂಕಿ ಅಂಶಗಳನ್ನು ಆಯಾಮದೊಟ್ಟಿಗೆ ನಿಯಮಿತವಾಗಿ ಹಂಚಿಕೊಳ್ಳುತ್ತಿದ್ದಾರೆ.)

ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಹಿಳೆ

ಶ್ರೀಮತಿ ಮೀರಾ ನಾಯಕ್ 
 
 
ಒಂದಷ್ಟು ಸಂವಾದ:
ಮಹಿಳಾ ಚಳುವಳಿ ಪರಿಣಾಮಕಾರಿಯಾಗಿದೆ ಹಾಗೂ ಮಹಿಳೆಯರು ಫಲಭಾಗಿಗಳಾಗಿದ್ದಾರೆಯೇ?
-ಪುರುಷ ಪ್ರಧಾನ ಸಮಾಜದಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದಲ್ಲಿ ೮೦% ಗಿಂತಲೂ ಹೆಚ್ಚು ಪ್ರಮಾಣ ಪುರುಷರ ಸ್ವಾಧೀನದಲ್ಲಿದೆ. ಶಾಸಕಾಂಗ, ಕಾರ್ಯಾಂಗದಲ್ಲಂತೂ ಇನ್ನೂ ಹೆಚ್ಚು. ಹಾಗಾಗಿ ಮಹಿಳಾ ಚಳುವಳಿಯಿಂದ ಅಲ್ಪಸ್ವಲ್ಪ ಬದಲಾವಣೆಯಾದಂತೆ ಕಂಡು ಬಂದರೂ, ಖಂಡಿತಾ ಮಹಿಳಾ ಚಳುವಳಿ ಆಗಬೇಕಾದಷ್ಟು ಪರಿಣಾಮಕಾರಿಯಾಗಿಲ್ಲ. ಸ್ವಾತಂತ್ರ ಬಂದು ಅರವತ್ತೆರಡು ವರ್ಷದಲ್ಲಿ ಈ ಭಾರತ ಒಬ್ಬ ಮಹಿಳಾ ಪ್ರಧಾನಿ, ಒಬ್ಬ ರಾಷ್ಟ್ರಾಧ್ಯಕ್ಷರನ್ನು ಕಂಡಿದೆ. ಶತಶತಮಾನಕ್ಕೆ ಒಬ್ಬ ಕಿತ್ತೂರ ಚೆನ್ನಮ್ಮ, ಮೀರಾ ಬಾಯಿ, ಅಕ್ಕಮಹಾದೇವಿಯವರನ್ನು ಉದಾಹರಿಸಿ ಮಹಿಳೆಯರು ಶೌರ್ಯ, ಭಕ್ತಿಯಲ್ಲಿ ಹಿಂದಿಲ್ಲ ಎಂದು ಹಾಡಿ ಹೊಗಳಿದರೆ ಅಲ್ಪ ತೃಪ್ತ ಜೀವಿ ಮಹಿಳೆ ಸಮಾಧಾನ, ತೃಪ್ತಿ, ಪಡಬಹುದೆಂದು ಗೊತ್ತಿದೆ. ಆದರೆ ದೀರ್ಘಕಾಲದಿಂದ ಹೋರಾಟ ನಡೆಯುತ್ತಿದ್ದರೂ ಎಲ್ಲ ಸ್ಥಾನಮಾನಗಳೂ ಪುರುಷ ವಾಚಕವೇ, ರಾಷ್ಟ್ರಪತಿ ಸ್ಥಾನಕ್ಕೆ ಮಹಿಳೆ ಬಂದ ಕಾರಣ ರಾಷ್ಟ್ರಾಧ್ಯಕ್ಷ ಆಗಿದೆ. ಒಬ್ಬ ಕಲ್ಪನಾ ಚಾವ್ಲಾ, ಸುನೀತಾ ವಿಲಿಯಮ್ಸ್, (ಇಬ್ಬರೂ ಭಾರತೀಯ ಸಂಜಾತ ಅಮೆರಿಕನ್ ಪ್ರಜೆಗಳು) ಕಿರಣ್ ಬೇಡಿಯವರ ಸಾಧನೆ ಉದಾಹರಿಸಿ ಮಹಿಳೆಯರೆಲ್ಲಾ ಮುಂದುವರಿದಿದ್ದಾರೆ ಎಂದರ್ಥವಲ್ಲ. ಶ್ರೀಮತಿ ಮೋಟಮ್ಮ ಸಮಾಜ ಕಲ್ಯಾಣ ಸಚಿವೆಯಾಗಿದ್ದಾಗ ಮಹಿಳಾ ಜಾಗೃತಿಗಾಗಿ ಮಹಿಳಾ ಸ್ವಸಹಾಯ ಸಂಘ ಸ್ತ್ರೀ ಶಕ್ತಿ ಸಂಘಟನೆಗಳು ಪ್ರಾಂಭವಾದವು. ಇಂದು ಅವು ಬಡ್ಡಿ ವ್ಯವಹಾರ ಮತ್ತು ಕೇವಲ ಹಣಕ್ಕೆ ದುಡಿಯುವ ಬಾಡಿಗೆ ವ್ಯಕ್ತಿಗಳಂತಾಗಿವೆ, ವಸ್ತುಗಳಾಗಿವೆ. ಪುರುಷ ಪ್ರಧಾನ ಸಂಸ್ಕೃತಿ ವಿಜೄಂಭಿಸುವವರೆಗೂ, ಕಾರ್ಯಾಂಗ ಶಾಸಕಾಂಗದ ಸಂಯೋಜಕ ಹೊಣೆ ಪುರುಷನದಾಗಿರುವವರೆಗೆ ಮಹಿಳೆಯರು ಫಲಭಾಗಿಗಳಾಗಲು ಸಾಧ್ಯವಿಲ್ಲ.
 
೭೦-೮೦ ರ ದಶಕಗಳಲ್ಲಿ ಮಹಿಳಾ ಚಳುವಳಿಗಾರರಲ್ಲಿ ಇದ್ದ ಉಮೇದು, ಹೋರಾಟದ ಉತ್ಸಾಹಗಳು ಇಂದು ಕಾಣದೆ ಇರುವುದಕ್ಕೆ ನಿಮ್ಮ ಕಾರಣಗಳೇನು?
-೭೦-೮೦ರ ದಶಕದಲ್ಲಿ ಮಹಿಳೆಯರು ಸ್ವಯಂ ಆಸಕ್ತಿಯಿಂದ ಯಾರ ಪ್ರೋತ್ಸಾಹವಿಲ್ಲದೆ ಅನೇಕ ಅಡೆತಡೆಗಳ ನಡುವೆಯೂ ಸ್ವಂತ ವ್ಯಕ್ತಿತ್ವವನ್ನು ಬೆಳೆಸಿಕೊಂಡು ಸ್ಥಾನಮಾನ ಕಂಡುಕೊಂಡವರು. ಅವರಿಗೆ ಆದರ್ಶದ ಕನಸುಗಳಿದ್ದವು. ಸಮಾಜದ ಆಗುಹೋಗುಗಳು ತಮ್ಮದೆಂಬ ಭಾವನೆಯುಳ್ಳವರಾಗಿದ್ದರು. ಈಗ ಪ್ರಜಾಪ್ರಭುತ್ವ ನಶಿಸುತ್ತಾ ಮಠಮಾನ್ಯಗಳ ಪ್ರಾಬಲ್ಯ ಹೆಚ್ಚಿ ಧರ್ಮ, ಜಾತಿ, ಮತಗಳ ಮೇಲಾಟದಲ್ಲಿ ಮಹಿಳೆಯರೂ ಆಟದ ಬೊಂಬೆಗಳಂತೆ ತಮ್ಮನ್ನು ತೊಡಗಿಸಿಕೊಂಡಿರುವರು. ಒಡೆದು ಆಳುವ ನೀತಿಗೆ ಸ್ತ್ರೀ ಸಮಾಜ ಬಲಿಯಾಗುತ್ತಿದೆ. ಈಗ ನಾನು ನನ್ನ ಎಂಬ ಭಾವ ಹೆಚ್ಚಿ ರಾಜಕೀಯದಲ್ಲೂ ಮಹಿಳಾ ಮೋರ್ಚಾಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಸ್ವಂತದ ಬಗ್ಗೆ ಕಾಳಜಿ ವಹಿಸುವುದು ಹೆಚ್ಚಾಗಿದೆ. ಒಟ್ಟಿನಲ್ಲಿ ಮಹಿಳಾಮಣಿಗಳ ಆದರ್ಶದ ಕನಸು ನುಚ್ಚು ನೂರಾಗಿ ಕೇವಲ ಧನದಾಹಿಗಳಾಗಿದ್ದಾರೆ. ರಾಜಕೀಯದಲ್ಲಿ ಇರುವವರು ಖುರ್ಚಿ ರೋಗಕ್ಕೆ ಬಲಿಯಾಗುತ್ತಿದ್ದಾರೆ. ವ್ಯಕ್ತಿತ್ವ ಸ್ವಂತಿಕೆಗಿಂತ ಸ್ಥಾನಮಾನದ ಬಗ್ಗೆ ಹೆಚ್ಚು ಆಕರ್ಷಿತರಾಗಿದ್ದಾರೆ. ಪುರುಷ ಪ್ರಧಾನ ಸಮಾಜದ ವಕ್ತಾರರಂತೆ ವರ್ತಿಸುವ ಇಂಥ ಮಹಿಳೆಯರಿಗೆ ಮಹಿಳಾ ಸಬಲೀಕರಣದ ಸರಿಯಾದ ಅರ್ಥವಾದಂತೆ ತೋರುತ್ತಿಲ್ಲ. ಅವರಿಗೆ ಅದು ಬೇಕೂ ಆಗಿಲ್ಲ...
 
೨೫ ವರ್ಷಗಳ ಹಿಂದಿನ ಮಹಿಳಾ ಸಮಸ್ಯೆಗಳೂ ಅವರು ನಡೆಸಿದ ಹೋರಾಟ ಯತ್ನಗಳೂ, ಈಗಿನ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಅವರು ನಡೆಸಬೇಕಾಗಿರುವ ಹೋರಾಟ ಯತ್ನಗಳೂ-ತಂತ್ರಗಳಿಗೂ ಎಷ್ಟು ಭಿನ್ನತೆ ಕಾಣುತ್ತೀರಿ?
-ಇಪ್ಪತ್ತೈದು ವರ್ಷದ ಹಿಂದೆ ಮಹಿಳೆ ಸರ್ವೇ ಸಾಮಾನ್ಯ ಪುರುಷನ ಬೋಗದ ವಸ್ತು, ಅಡಿಯಾಳು, ಮಕ್ಕಳನ್ನು ಹೆರುವ ಯಂತ್ರ, ಸಂಬಳವಿಲ್ಲದ ದಿನಗೂಲಿಯಾಗಿದ್ದಳು. ಮಹಿಲೆಗೆಂದೇ ಸೃಷ್ಟಿಸಿದ ಸ್ಥಾನಮಾನಗಳು ಎರಡೇ: ಒಂದು ಗೃಹಿಣಿ, ಎರಡನೆಯದೇ ವೇಶ್ಯೆ. ಎಲ್ಲ ರೀತಿಯ ದೌರ್ಜನ್ಯಗಳೂ ಸಹಜ ಎಂಬ ರೀತಿಯಲ್ಲಿ ತಾಳ್ಮೆ, ಕ್ಷಮಾ ಧರಿತ್ರಿ, ಕರುಣಾ ಮೂರ್ತಿಯಾಗಿದ್ದಳು. ಈ ಪ್ರಮಾಣಪತ್ರವೇ ಅವಳ ಜೀವನದುದ್ದಕ್ಕೂ ದುಡಿದು ಪಡೆದ ಆಸ್ತಿಯಾಗಿತ್ತು. ಸಾರ್ವಜನಿಕ ಕ್ಷೇತ್ರದಲ್ಲಿ ದುಡಿಮೆ ಮಾಡಿದರೆ ಸಂಬಳದಲ್ಲಿಯೂ ತಾರತಮ್ಯ ಅನುಭವಿಸಬೇಕಿತ್ತು. ಬ್ಯಾಂಕ್ ಗಳಲ್ಲೂ ಹಣದ ಉಳಿತಾಯಕ್ಕೆ "ಮಗನ್ ಓದಿಗೆ, ಮಗಳ ಮದುವೆಗೆ" ಎಂಬ ಫಲಕಗಳೇ ಇರುತ್ತಿದ್ದವು. ಸಮಾಜ ಮಹಿಳೆಯರನ್ನು ನಿವಾರಿಸಿಕೊಳ್ಳುವ ದಿಕ್ಕಿನಲ್ಲೇ ಯೋಚಿಸುತ್ತಿತ್ತು. ಸತಿಯಿಂದ ಪ್ರಾರಂಭವಾದ ಪೈಶಾಚಿಕ ಕೃತ್ಯ ವರದಕ್ಷಿಣೆ ಕೊಲೆ, ಅತ್ಯಾಚಾರದಂತ ವಿವಿಧ ದೌರ್ಜನ್ಯದ ಆಗರವಾಯಿತು. ಇನ್ನೂ ಹೆಣ್ಣು ಹುಟ್ಟುವುದನ್ನೇ ತಡೆಯುವ ಹೆಣ್ಣು ಭ್ರೂಣ ಹತ್ಯೆಯಂಥ ಮಹಾಪಾಪಗಳು ನಡೆಯುತ್ತಿವೆ. ಪ್ರಜ್ನಾವಂತ ಮಹಿಳೆಯರು ಒಂದುಗೂಡುವುದಕ್ಕೆ ಒಂದು ವೇದಿಕೆ ನಿರ್ಮಾಣವಾಯಿತು. ಮಹಿಳೆಯರ ಒತ್ತಡಕ್ಕೆ ಮಣಿದ ಸರ್ಕಾರ ಕೂಡ ಅನೇಕ ಕಾನೂನುಗಳನ್ನು ತಂದು ನೆರವಾಗಿದೆ ಎಂಬ ಭಾವನೆ ಬರುವಂತೆ ಮಾಡಿದೆ.
"ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ" ಎಂಬ ಘೋಷಣೆಯೊಂದಿಗೆ ಮಧ್ಯಾಹ್ನದ ಊಟದೊಂದಿಗೆ ಹೆಣ್ಣು ಮಕ್ಕಳಿಗೆ ಓದಿನ ಅನುಕೂಲವಾಗಿದೆ. ಸೈಕಲ್ ಗಳ ಯೋಜನೆ ಕೂಡಾ ಬಂದಿದೆ. ಅದರಿಂದ ಹಿತ ಯಾರಿಗೆಂಬುದು ಪ್ರಶ್ನಾರ್ಥಕ. ಹಿಂದೆ ಹೆಣ್ಣೂ ಅಡಿಗೆ ಮನೆಗೆ ಕುಟುಂಬಕ್ಕೆ ಸೀಮಿತ ಎಂದು ಇದ್ದುದು ಈಗ ಸಮಾಜದ ಸ್ವಾರ್ಥ ಹೆಚ್ಚಾಗಿ ಮಹಿಳೆಯರಿಗೆ ಡಬಲ್ ವರ್ಕ್ ಮೂಲಕ ಬಿಡುವಿಲ್ಲದ ದುಡಿತವಾಗಿದೆ. ಯು ಎನ್ ಒ ವರದಿ ಪ್ರಕಾರ ಜಗತ್ತಿನ ಒಟ್ಟು ಕೆಲಸದ ೨/೩ ಭಾಗ ಕೆಲಸವನ್ನು ಮಹಿಳೆಯರು ಮಾಡುವರು. ಅವರ ಉತ್ಪನ್ನ ೧/೧೦ ಭಾಗ. ಮಹಿಳೆಯರ ಆಸ್ತಿ ೧/೧೦೦ ಭಾಗ ಎಂದಿದೆ. ಬೇರೆ ಬೇರೆ ಯೋಜನೆಗೆ ಅನುಗುಣವಾಗಿ ಸಾಫ್ಟ್ವೇರ್ ಐಟಿ ಬಿಟಿ ಗಳಿಂದ ತಂತ್ರಜ್ನಾನ ವಿಜ್ನಾನದ ಮೂಲಕ ಮಹಿಳೆಯರು ಹೆಚ್ಚಾಗಿ ಎಲ್ಲಾ ಕ್ಷೆತ್ರಗಳಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಆರ್ಥಿಕವಾಗಿ ಸ್ವತಂತ್ರವಾದರೂ ಸಮಾಜದ ನಿರ್ಬಂಧನೆಯಿಂದ ಭಾಗಶಃ ಸ್ವತಂತ್ರಳಾಗುತ್ತಿದ್ದಾಳೆ. ಆದರೂ ಇಂದಿನ ದೌರ್ಜನ್ಯದಿಂದ ಅವಳು ಕುಟುಂಬದ ಒಳಗೆ ಹೊರಗೆ ಕೆಲಸ ಮಾಡುವ ಸ್ಥಳ ಮತ್ತು ಸಮಾಜದಿಂದ ಮುಕ್ತಳಾಗಿಲ್ಲ...
 
(ಮುಂದುವರೆಯುವುದು)
 
 
 
 
"ಛಲವಾದಿ" ಸಂಸ್ಕೃತಿ:  ಕಿರು ನೋಟ
ಚಿತ್ರ-ಲೇಖನ: ಡಾ.ಜಿ.ಶ್ರೀನಿವಾಸಯ್ಯ
ಮಾನವ ಸಂಸ್ಕೃತಿ ಅಧ್ಯಯನದಲ್ಲಿ ಜಾನಪದವು ಮಹತ್ವದ ಪಾತ್ರವನ್ನು ವಹಿಸುತ್ತದೆ. ಜಾನಪದೀಯ ಅಧ್ಯಯನದ ಹೊರೆತು ಸಾಂಸ್ಕೃತಿಕ ಅಧ್ಯಯನವು ಪರಿಪೂರ್ಣವಾಗಲಾರದು. ಸಾಂಸ್ಕೃತಿಕ ಅಧ್ಯಯನ ಎಂದರೆ ಒಂದು ಜನಾಂಗದ ಒಟ್ಟಾರೆ ಜೀವನದ ಅಧ್ಯಯನವಾಗಿದೆ. ಆ ಜನಾಂಗದ ರೂಢಿ ಸಂಪ್ರದಾಯಗಳು, ಆಚಾರ-ವಿಚಾರಗಳು, ನಂಬಿಕೆ-ಸಂಪ್ರದಾಯಗಳು, ವೇಷ-ಭಾಷೆ, ಉಡುಗೆ-ತೊಡುಗೆ, ಅಡುಗೆ, ಧರ್ಮ-ದೇವರುಗಳು ಹಾಗೂ ಅವರ ಕಲೆಗಳ ಅಧ್ಯಯನವಾಗಿದೆ. ಇವು ಅವರ ಸಂಸ್ಕೃತಿಗೆ ಒಂದು ಸ್ಪಷ್ಟ ರೂಪವನ್ನು ಕೊಡುವ ಬಹುಮುಖ್ಯ ಘಟಕಗಳಾಗಿರುತ್ತವೆ. ಇಂತಹ ಸಾಂಸ್ಕೃತಿಕ ವೈಶಿಷ್ಟ್ಯವನ್ನು ಪಡೆದಿರುವ "ಛಲವಾದಿ" ಜನಾಂಗದ ಕಿರು ಪರಿಚಯವೇ ಈ ಲೇಖನದ ಉದ್ದೇಶ.
 
ಮಾನವ ಶಾಸ್ತ್ರಜ್ಞರು ಮಾನವ ಸಂಸ್ಕೃತಿಯನ್ನು 'ಭೌತಸಂಸ್ಕೃತಿ' ಹಾಗೂ 'ಅಭೌತ ಸಂಸ್ಕೃತಿ' ಎಂದು ವಿಂಗಡಿಸುತ್ತಾರೆ. ಭೌತ ಸಂಸ್ಕೃತಿಯು ವ್ಯಕ್ತಿಯ ಭೌತಿಕ ಸಂಪತ್ತನ್ನು ಪ್ರತಿನಿಧಿಸುತ್ತದೆ. ಇದು ಕಣ್ಣಿಗೆ ಕಾಣುವಂತಹದು. ಮಾನವ ಬಳಸುವ ಅನೇಕ ವಸ್ತುಗಳು, ಸಾಧನಗಳು, ಪೀಠೋಪಕರಣಗಳು, ಯಂತ್ರಗಳು, ವೈಜ್ಞಾನಿಕ ಸಾಧನಗಳು, ಕಟ್ಟಡಗಳು ಹಾಗೂ ಅವನ ಬಳಕೆಯ ಎಲ್ಲಾ ವಸ್ತುಗಳನ್ನು ಅದು ಪ್ರತಿನಿಧಿಸುತ್ತದೆ. ಇದನ್ನು ನಾವು ನಾಗರಿಕತೆ ಎಂದರೂ ತಪ್ಪಾಗಲಾರದು. ಅಭೌತ ಸಂಸ್ಕೃತಿಯು ಮಾನವನ ಅಭೌತಿಕ ಸಂಪತ್ತಿನ ಪ್ರತಿನಿಧಿಯಾಗಿರುತ್ತದೆ. ಇದು ಅಗೋಚರವಾದುದು. ಕಣ್ಣಿಗೆ ಕಾಣದಿರುವ ಅವನ ನಂಬಿಕೆ-ಸಂಪ್ರದಾಯಗಳು, ಆಚರಣೆಗಳು ,ರೂಢಿ- ಸಂಪ್ರದಾಯಗಳು , ಆಚಾರ- ವಿಚಾರಗಳು, ನೀತಿ-ನಿಯಮಗಳು, ಮೌಲ್ಯ-ಸಿದ್ಧಾಂತಗಳು, ಜೀವನಾದರ್ಶಗಳು, ಅವನ ಕಲೆ-ಸಾಹಿತ್ಯ, ಕುಣಿತ, ಧಾರ್ಮಿಕ ಹಾಗೂ ಆರ್ಥಿಕ ವಿಚಾರಗಳನ್ನು ಅಭೌತಿಕ ಸಂಸ್ಕೃತಿಯೆಂದು ಕರೆಯಬಹುದು. ಇದು ಅವನ ಸೃಜನಶೀಲ ಮತ್ತು ಮನೋರಂಜನೆಗೆ ಸಂಬಂಧಿಸಿದ್ದೂ ಮತ್ತು ಅವನ ಆಂತರಿಕ ಅಭ್ಯುದಯದ ಸೂಚಕವಾಗಿದೆ. ಈ ಹಿನ್ನೆಲೆಯಲ್ಲಿ ಒಟ್ಟಾರೆ "ಛಲವಾದಿ" ಸಂಸ್ಕೃತಿ, ಅವರ ಸಾಂಸ್ಕೃತಿಕ ಬದುಕನ್ನು ಭೌತಿಕ ಮತ್ತು ಅಭೌತಿಕ ಸಂಸ್ಕೃತಿಯೆಂದು ವಿಭಾಗಿಸಿಕೊಂಡು ತಿಳಿಯಲು ಯತ್ನಿಸಲಾಗಿದೆ.

ಹಿಂದೂ ಸಮಾಜದಲ್ಲಿ ಕಾಣಬರುವಷ್ಟು ವಿವಿಧ ಮತ, ಜಾತಿ, ಕುಲಧರ್ಮಗಳು ಪ್ರಪಂಚದ ಮತ್ತಾವ ಜನಾಂಗದಲ್ಲಿಯೂ ಕಾಣುವುದಿಲ್ಲ. ಇಲ್ಲಿನ ಪ್ರತಿಯೊಂದು ಕುಲಧರ್ಮವೂ ತನ್ನದೇ ಆದ ಸಂಸ್ಕೃತಿ, ಆಚಾರ ವಿಚಾರಗಳನ್ನು ಅಳವಡಿಸಿಕೊಂಡು ಹಿಂದೂ ಸಮಾಜವೆಂಬ ಸಾಮೂಹಿಕ ಧರ್ಮದಡಿಯಲ್ಲಿ ಸ್ವತಂತ್ರ ಘಟಕಗಳಾಗಿ ನಿಲ್ಲಲು ಯತ್ನಿಸಿವೆ. ಆದರೆ "ಛಲವಾದಿ" ಸಂಸ್ಕೃತಿಗೆ ಐತಿಹಾಸಿಕ ಹಿನ್ನೆಲೆಯಿದ್ದರು ಅದನ್ನು ಮರೆಯಾಗಿಸಿ, ಅದರ ಮೇಲೆ ಇಚ್ಚಿತ ಮೌಲ್ಯಗಳನ್ನು ಹೇರುತ್ತಾ ಅನಾದಿ ಕಾಲದಿಂದಲೂ ತಮ್ಮ ಅಡಿಯಾಳಾಗಿಸಿಕೊಂಡು ಶೋಷಿಸುತ್ತಾ ಬಂದಿರುವ ಶಿಷ್ಟಸಂಸ್ಕೃತಿಯ ಕರಾಳ ಮುಖಗಳನ್ನು ಇಂದಿಗೂ ನಾವು ಕಾಣಬಹುದಾಗಿದೆ. "ಛಲವಾದಿ" ಸಂಸ್ಕೃತಿಯ ಪೌರಾಣಿಕ ಹಿನ್ನೆಲೆಗಳನ್ನು ತಡಕಿ ತೆಗೆಯುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೆ ಆದಲ್ಲಿ, ಅದು ಸಾಹಿತ್ಯ ಮತ್ತು ಸಾಂಸ್ಕೃತಿಕ ದೃಷ್ಟಿಯಿಂದ ಒಂದು ಮಹತ್ವದ ಕಾರ್ಯವಾಗಬಹುದು.
 
 
ಚಾತುರ್ವರ್ಣಾಶ್ರಮ ಧರ್ಮಗಳನ್ನು ಸೃಷ್ಟಿಸಿ, ಪೋಷಿಸಿ, ಬೋಧಿಸಿ ಬೆಳೆಸಿದ ಹಿಂದೂ ಸಮಾಜ, ಯಾವ ನಿಶ್ಚಿತ ಘಟ್ಟವನ್ನು ತಲುಪಿದೆ ಎಂದು ಊಹಿಸಲಾಗದು. ಭಾರತೀಯ ಸಮಾಜದಲ್ಲಿ, ಹಲವು ಕುಯುಕ್ತಿ ಬುದ್ಧಿಜೀವಿಗಳು ಧರ್ಮ ನೀತಿಗಳನ್ನು, ಮಾರ್ಮಿಕವಾಗಿ ತಮ್ಮ ಸ್ವಾರ್ಥಸಾಧನೆಗೆ ಆಳವಡಿಸಿಕೊಂಡಿರುವುದು ಕಾಣಬಹುದು. ಚಾತುವರ್ಣಾಶ್ರಮದ ಅಡಿಯಲ್ಲಿ ಔದ್ಯೋಗಿಕ ತಾರತಮ್ಯ, ಮೇಲು-ಕೀಳು, ಉತ್ತಮ-ಅಧಮ, ಪಂಚಮ-ಪರಿಚಾರಕರೆಂಬ ಅನುಚಿತ ಭಾವನೆಗಳ ವಿಷಬೀಜಗಳನ್ನು ಬಿತ್ತಿ, ದುರ್ಭಾವನೆಗಳ ಜನರ ಸಮೂಹವನ್ನು ರೂಪಿಸಿಲಾಗಿ ಮಾನವನ ಬಾಂಧವ್ಯಕ್ಕೆ ಅನ್ಯಾಯವೆಸಗುತ್ತಾ ಬರಲಾಗಿದೆ. ಇದರಿಂದ ಹಲವರು ಬುದ್ಧಿಜೀವಿಗಳಾಗಿ, ಕೆಲವರು ಇವರ ಸೇವೆಗಾಗಿ, ಹಲವರು ಶ್ರಮಜೀವಿಗಳಾಗಿ ಮತ್ತೆ ಕೆಲವರು ಉತ್ತಮ ಮತ್ತು ಅಧಮ ವೃತ್ತಿಗಳಲ್ಲಿ ವಿಂಗಡಣೆಗೊಂಡರು. ಫಲಾಪೇಕ್ಷೆ ಪಡೆದ ಒಬ್ಬನು ಮತ್ತೊಬ್ಬನ ಉದ್ಯೋಗವನ್ನು ಅವಲಂಬಿಸದೆ, ತನ್ನ ಕೆಲಸವನ್ನೆ ಮುಂದುವರಿಸಿದರೆ ಮೋಕ್ಷವನ್ನು ಪಡೆಯಬಹುದೆಂಬ ಸುಳ್ಳು ನಂಬಿಕೆಯನ್ನು ಜಾರಿಗೆ ತಂದರು. ತತ್ಪರಿಣಾಮವಾಗಿ ವೃತ್ತಿಗಳು ವಂಶಪಾರಂಪರಿಕತೆಯನ್ನು ಪಡೆದವು. ಶಿಷ್ಟವರ್ಗ ಇಂತಹ ಅನ್ಯಾಯಗಳನ್ನು ತಮ್ಮವರಲ್ಲಿಯೇ ಹಲವರಿಗೆ, ಬಹು ಯಶಸ್ವಿಯಾಗಿ ಪ್ರಯೋಗಿಸಿರುವುದನ್ನು ಕಾಣಬಹುದು. ವೇದಪುರಾಣಗಳಲ್ಲಿನ ಮೂಲತತ್ವಗಳಿಗೆ ಜಾಣ್ಮೆಯಿಂದ ಅಪಾರ್ಥಗಳನ್ನು ಕಲ್ಪಿಸಿದರು. ಚಾತುರ್ವರ್ಣಾಶ್ರಮಗಳ ಅಡಿಪಾಯದಲ್ಲಿ ಕ್ರಮೇಣ ಹುಟ್ಟು ಮತ್ತು ವಂಶಾವಳಿಗೆ ಪ್ರಾಧಾನ್ಯತೆಯನ್ನು ಕೊಡುತ್ತಾ ನೂರಾರು ಜಾತಿ, ಅವುಗಳ ಧರ್ಮನೀತಿಗಳನ್ನು ನಿರೂಪಿಸಿದರು. ಅಂತೆಯೇ ಹಲವು ಗುರುಪೀಠಾದಿಪತಿಗಳು ಉದ್ಭವಿಸಿದರು. ಹಲವು ಪೌರಾಣಿಕ ಗ್ರಂಥಗಳನ್ನು ಬರೆದು ಅವುಗಳನ್ನು ಭದ್ರವಾಗಿ ರಕ್ಷಿಸಿದರು. ಆದರೆ ಇಲ್ಲಿನ ಅಪೂರ್ವ ಪೌರಾಣಿಕ ಹಿನ್ನಲೆಯಿರುವ ಬಾಳಿ ಬದುಕುತ್ತಿರುವ ಅನೇಕ ಜನಾಂಗಗಳನ್ನು ನಿರ್ಲಕ್ಷಿಸಿದರು. ಅಂತಹ ನಿರ್ಲಕ್ಷಿತ ಜನಾಂಗದಲ್ಲಿ "ಛಲವಾದಿ" ಜನಾಂಗವೂ ಒಂದಾಗಿದೆ.
 
"ಛಲವಾದಿ"ಗಳು ಭಾರತದ ಮೂಲನಿವಾಸಿಗಳಾದ ದ್ರಾವಿಡ ಸಂಸ್ಕೃತಿಯವರು. ಶಿವನನ್ನು ತಮ್ಮ ಆರಾಧ್ಯ ದೈವವನ್ನಾಗಿ ಪಡೆದುಕೊಂಡು ಆದಿಶೈವಭಕ್ತರಾಗಿ ಬೆಳೆದು ಬಂದ ಪುರಾತನ ಜನಾಂಗವೆ 'ಛಲವಾದಿ' ಜನಾಂಗ. ಅನಾದಿ ಕಾಲದಿಂದಲೂ ಶಿವ ಸಂಪ್ರದಾಯವನ್ನು ಉಳಿಸಿಕೊಂಡು ಬರುವಲ್ಲಿ ಇವರ ಪಾತ್ರ ಹಿರಿದು. ಆದರೆ ಹಲವಾರು ಸಂಕ್ರಮಣಗಳಿಗೆ ಒಳಗಾಗಿ ಈಗ ಅವರ ಬದುಕು ಹೀನಾಯವಾಗಿ ಮಾರ್ಪಟ್ಟಿದೆ. ಇವರು ಇಂದಿಗೂ ಶಿವಭಕ್ತರಾಗಿ ಜೀವಿಸುತ್ತಿದ್ದು, ಆಚಾರ ನಡವಳಿಕೆಗಳಲ್ಲಿ ಶೈವ ಸಂಪ್ರದಾಯವನ್ನು ಬಿಡದೆ ಅನುಸರಿಸುತ್ತಲೇ ಬಂದಿದ್ದಾರೆ. ಅದರ ಕುರುಹುಗಳು ಇವರಲ್ಲಿ ಉಳಿದಿವೆ. ಅವರ ಸಾಂಸ್ಕೃತಿಕ ಬದುಕಿನಲ್ಲಿ ಇಂದಿಗೂ ಅವು ಬಹು ಮಹತ್ವದ ಅಂಶಗಳಾಗಿವೆ.
 
ಶೈವ ಸಂಪ್ರದಾಯದಲ್ಲಿ ಸರ್ವಸೃಷ್ಟಿಕರ್ತನಾದ ಶಿವನನ್ನು ಪಂಚಾನನ, ಪಂಚಮುಖ ಎಂಬ ಹೆಸರುಗಳಿಂದ ಆರಾಧಿಸವವರಲ್ಲಿ ಪಾಶುಪತ, ಕಾಳಾಮುಖ, ಪಂಚಮುಖ, ಲಕುಳ, ಮಾಹೇಶ್ವರ ಮತ್ತು ಕಾಪಾಲಿಕರೆಂಬ ಪಂಚಶೈವ ಸಂಪ್ರದಾಯಗಳಿದ್ದವು. ಇವುಗಳಲ್ಲಿ ಕಾಳಾಮುಖ ಮತ್ತು ಕಾಪಾಲಿಕ ಸಂಪ್ರದಾಯಗಳು ಪ್ರಮುಖವಾದವುಗಳು. ಕಾಳಾಮುಖಿಗಳು ಬ್ರಹ್ಮಚರ್ಯ ವ್ರತವನ್ನು ಆಚರಿಸಿ ಯೋಗಾಭ್ಯಾಸಗಳಿಂದ, ಸದಾಚಾರ ಸದ್ವರ್ತನೆಗಳಿಂದ ಲಿಂಗಪೂಜೆ ಮತ್ತು ಅದರ ಧಾರಣೆಗಳಿಂದ ಜೀವಿಸತೊಡಗಿದರು. ಆದರೆ ಕಾಪಾಲಿಕ ಸಂಪ್ರದಾಯದವರು ಕಾಳಭೈರವನ ಆರಾಧಕರಾಗಿ ದೇವತೆಯ ಹೆಸರಿನಲ್ಲಿ ಪ್ರಾಣಿ ಬಲಿಯನ್ನು ನೀಡಿ, ಕಾಳಿ, ಚಾಮುಂಡಿ, ಶಕ್ತಿ, ದುರ್ಗೆ ಮುಂತಾದ ಪಾರ್ವತಿಯ ಅವತಾರಗಳನ್ನು ಆರಾಧಿಸುತ್ತಿದ್ದರು. ’ಛಲವಾದಿ’ಗಳು ಮೊದಲಿಗೆ ಕಾಳಾಮುಖ ಸಂಪ್ರದಾಯವದರಾಗಿದ್ದು ಕ್ರಮೇಣ ಕಾಪಾಲಿಕ ಸಂಪ್ರದಾಯದವರಲ್ಲಿಯೂ ಬೆರೆಯತೊಡಗಿದರು. ವಿವಿಧ ವಾದ್ಯಕಾರರಾಗಿದ್ದ ಛಲವಾದಿಗಳು, ಕಾಪಾಲಿಕರ ಪೂಜಾ ಸಂಪ್ರದಾಯದಲ್ಲಿ ಅವುಗಳನ್ನು ನುಡಿಸುತ್ತಾ ಅವರ ಸಂಪ್ರದಾಯಗಳಲ್ಲೂ ಭಾಗಿಯಾದರು. ಅವರ ಆಚಾರ, ನಡವಳಿಕೆಗಳನ್ನು ತಮಗೆ ಅಳವಡಿಸಿಕೊಂಡರು. ಇಂದಿಗೂ ’ಛಲವಾದಿ’ಗಳು ಕಪಾಲಿಕರ ಸಂಪ್ರದಾಯಗಳನ್ನು ತಮ್ಮ ಸಂಸ್ಕೃತಿಯಲ್ಲಿ ಉಳಿಸಿಕೊಂಡಿದ್ದಾರೆ. ಇವರ ಮದುವೆ, ಮರಣ ಸಂಸ್ಕಾರಗಳು, ಜನಪದ ವೈದ್ಯ, ಆಚಾರ ವಿಚಾರಗಳಲ್ಲಿ ಅವುಗಳನ್ನು ಕಾಣಬಹುದು.
 
ಕಾಪಾಲಿಕರ ಸಂಸ್ಕೃತಿಯನ್ನು ರೂಢಿಸಿಕೊಂಡ ’ಛಲವಾದಿ’ಗಳು ಕಾಲಕ್ರಮೇಣ ಸುತ್ತಮುತ್ತಲ ಜನರಿಂದ, ಇತರೆ ಶೈವ ಸಂಪ್ರದಾಯಸ್ಥರಿಂದ ನಿರ್ಲಕ್ಷಕ್ಕೆ ಒಳಗಾದರು. ಸಮಾಜದ ಕೆಲವು ಶಿಷ್ಟವರ್ಗಗಳು, ಅಲ್ಪ ಸಂಖ್ಯಾತರಾಗಿದ್ದ, ಆರ್ಥಿಕವಾಗಿ ಹಿಂದುಳಿದಿದ್ದ ’ಛಲವಾದಿ’ ಜನರನ್ನು ತಮ್ಮ ಸೇವೆಗಾಗಿಯೇ ಎಂಬಂತೆ ದೌರ್ಜನ್ಯಕ್ಕೆ ಒಳಪಡಿಸತೊಡಗಿದರು. ಜೊತೆಗೇ ಇವರ ಕಾಪಾಲಿಕ ಆಚಾರ ವಿಚಾರಗಳನ್ನು, ಭಕ್ತಿಯನ್ನು ಅನುಸರಿಸಲು ಎಡೆಗೊಡದಾದರು. ಶಿಷ್ಟವರ್ಗ, ಕ್ರಮೇಣ ಈ ಜನರ ಪೌರಾಣಿಕ ಹಿನ್ನಲೆ, ಪೂರ್ವೇತಿಹಾಸ, ನಡವಳಿಕೆ, ಮೂಲ ಉದ್ಯೋಗ ಮುಂತಾದವುಗಳನ್ನು ನಗಣ್ಯ ಮಾಡಿತು. ’ಛಲವಾದಿ’ ಎಂಬ ಸಂಸ್ಕೃತಿಯ ಬೆಳವಣಿಗೆಗಾಗಲಿ, ವಿಷಯ ವಿನಿಮಯಕಾಗಲೀ ಮುಂದೆಲ್ಲೂ ಅನುವು ಸಿಗದಾಯಿತು. ಇದರಿಂದ ತಮ್ಮ ಪರಂಪರೆ, ಸಂಸ್ಕೃತಿಯ ಇತಿಹಾಸವನ್ನು ಮರೆತಂತಾದ ’ಛಲವಾದಿ’ಗಳು ಮೌಢ್ಯಕ್ಕೆ, ಬಲಿಯಾದರು.
ಕಾಲಾನಂತರ ದಕ್ಷಿಣ ಭಾರತದಲ್ಲಿ ಸಂಭವಿಸಿದ ಧರ್ಮ ಸಂಕ್ರಮಣದ ಕಾಲದಲ್ಲಿ ಶೈವಾಚಾರಿಗಳಾಗಿದ್ದ ಇವರ ಮೇಲೆ ಶಂಕರಾಚಾರ್ಯ ಹಾಗೂ ಶ್ರೀರಾಮಾನುಜಾಚಾರ್ಯರ ಪ್ರಭಾವವಾಯಿತು. ಅವರ ಅದ್ವೈತ ಮತ್ತು ವಿಶಿಷ್ಟಾಧ್ವೈತ ವಿಚಾರಗಳಿಗೂ ’ಛಲವಾದಿ’ಗಳು ಆಕರ್ಷಿತರಾದರು ಎನ್ನಲಾಗಿದೆ. ಈ ತತ್ವಗಳಿಂದ ಪ್ರಚೋಧಿತರಾಗಿ, ಶೈವಾಚರಣೆಯ ಜೊತೆಜೊತೆಯಲ್ಲಿಯೇ ನಾರಾಯಣನ ಪೂಜೆಯನ್ನು ಮಾಡಲು ತೊಡಗಿದರು. ಇದರಿಂದ ಈ ಜನರಲ್ಲಿ ಹರಿಹರರೆಂಬ ಭೇದವು ಹೋಗಿ ಏಕದೈವೋಪಾಸಕ ಸಂಪ್ರದಾಯ ಅಸ್ತಿತ್ವಕ್ಕೆ ಬಂದಿತು. ಅಂದರೆ ಇವರ ಮನೆದೇವರುಗಳು ಶಿವ ಸಾಂಕೇತಿಕವಾಗಿ ಮತ್ತು ನಾರಾಯಣ ಸಾಂಕೇತಿಕವಾಗಿರುವುದನ್ನು ಕಾಣಬಹುದು. ಅದರಿಂದ ಇವರಲ್ಲಿ ಮೂಲ ಶೈವಾರಾಧಕರನ್ನು 'ಪ್ರಕೃತರು' ಎಂದೂ ವೈಷ್ಣವ ಆರಾಧಕರನ್ನು 'ತಿರುನಾಮದಾರಿ’ ಗಳೆಂದು ಕರೆಯುತ್ತಾರೆ. ಈ ಎರಡೂ ಸಂಪ್ರದಾಯಗಳು ಭಿನ್ನ ಸಾಂಸ್ಕೃತಿಕ ಆಶಯಗಳನ್ನು ಪಡೆದಿವೆ.

ದಲಿತ ಜನಾಂಗದ ಮೂಲದವರಾದ ’ಛಲವಾದಿ’ಗಳು ಲಿಂಗಧಾರಣೆ ಹಾಗೂ ಅದರ ಪೂರ್ವಾಚನೆಗಳಿಂದ ಪರಶಿವನನ್ನು ಆರಾಧಿಸುವಲ್ಲಿಯೂ, ಬಸವ, ಲಿಂಗಮುದ್ರೆಯಿರುವ ಗಂಟೆಬಟ್ಟಲನ್ನು, ಕಹಳೆ, ಸೂರ್ಯವಾದನ ಮತ್ತು ಚಂದ್ರವಾದನಗಳನ್ನು ನುಡಿಸಲು ಹಕ್ಕುದಾರರು. ಹೆಚ್ಚಾಗಿ ಬಿಳಿಯ ಉಡುಪನ್ನು ಧರಿಸುವವರಾಗಿದ್ದರಿಂದ ಇವರು ಏಕವರ್ಣರು. ಇವರಿಗೆ ಬ್ರಾಹ್ಮಣರಿಗೆ ಇರುವಂತೆ, ಷಟ್ ಕರ್ಮಾಚರಣೆಗಳು ಇಲ್ಲದಿರುವುದರಿಂದ ಇವರನ್ನು ಏಕದೇವೋಪಾಸಕರೆಂದು ಕರೆಯಬಹುದು. ಇವರ ಪೌರಾಣಿಕ ಹಿನ್ನೆಲೆ ಮತ್ತು ಸಂಸ್ಕೃತಿಯಿಂದ ’ಛಲವಾದಿ’ಗಳನ್ನು ಚಾತುರ್ವಣಾತ್ಮಕ ವೈದಿಕ ಧರ್ಮದಡಿಯಲ್ಲಿ ಬರುವ ವರ್ಗವಲ್ಲವೆಂಬುದನ್ನು ತಿಳಿಯಬಹುದು. ಆದರೂ ಅರ್ಥಹೀನ ಸಂಪ್ರದಾಯಗಳನ್ನನುಸರಿಸುವ, ಆರ್ಥಿಕವಾಗಿ ಸುಧಾರಿತವಾಗಿರುವ ನಮ್ಮ ಶಿಷ್ಟ ಸಮಾಜ ಈ ದಲಿತರ ನಿಸ್ಸಹಾಯಕತೆ ಮತ್ತು ಮುಗ್ಧತೆಗಳನ್ನು ಗಮನಿಸಿ ಇವರನ್ನು ಸೇವಾವೃತ್ತಿಗೆ ಒಳಪಡಿಸಿ ಶೋಷಣೆ ಮಾಡುತ್ತಿರುವುದು ನಿಜವಾಗಿಯೂ ಅನ್ಯಾಯವೆಂದು ಹೇಳಬೇಕಾಗುತ್ತದೆ. ಈ ದಿಸೆಯಲ್ಲಿ "ಛಲವಾದಿ’ಗಳ ಸಂಸ್ಕೃತಿಯನ್ನು ಅಧ್ಯಯನ ಮಾಡುವ ಅನಿವಾರ್ಯತೆಯನ್ನು ಮನಗಾಣಬಹುದು.
 
ಒಂದು ಜನಾಂಗದ ಸಂಸ್ಕೃತಿ ಅಧ್ಯಯನ-ಎಂದರೆ ಆಯಾ ಜನಾಂಗಗಳ ಆದಿಮ ರೂಪಗಳ ಪುನರ್ಮನನ ಮಾಡುವುದು ಎಂದು ಹೇಳಬೇಕಾಗುತ್ತದೆ. ಒಂದು ಕಡೆ ನಾಗಾಲೋಟದಲ್ಲಿ ಸಾಗುತ್ತಿರುವ ನವ ನಾಗರಿಕತೆ ಹಾಗೂ ಜಾಗತೀಕರಣದ ತುಳಿತಕ್ಕೆ ಸಿಕ್ಕ ಆದಿಮ ಸಾಂಸ್ಕೃತಿಕ ನೆಲೆಯ ಉತ್ಖನನದ ಅನಿವಾರ್ಯತೆ ಇಂದಿನ ಅಗತ್ಯವೆಂದು ಹೇಳಬಹುದು. ಇಂತಹ ಅಧ್ಯಯನವು ಕನ್ನಡ ಸಂಸ್ಕೃತಿಯ ಚಿಂತನೆಯಲ್ಲಿ ಹೊಸ ಆಲೋಚನಾ ಕ್ರಮವನ್ನು ಹುಟ್ಟುಹಾಕಬಲ್ಲದು. 
 
     
 
 
 
 
 
Copyright © 2011 Neemgrove Media
All Rights Reserved