ಅವತ್ತು ಶನಿವಾರದ ಮಾರ್ನಿಂಗ್ ಕ್ಲಾಸ್ ಮುಗಿಸಿಬಂದು ತನ್ನ ಮನೆ ಮುಂದೆಯೇ ಕುಳಿತು ತಮ್ಮನ ಜೊತೆ ಆಟ ಆಡುತ್ತಿದ್ದಳು. ಆಗ ಅಪ್ಪ-ಅಮ್ಮ ಅವಳನ್ನು ನೋಡಿದ್ದರು. ಅದಾದ ಸ್ವಲ್ಪ ಹೊತ್ತಿಗೆ ಮಗಳು ಕಾಣಲಿಲ್ಲ.ಎಲ್ಲೋ ಅಕ್ಕ ಪಕ್ಕದ ಮನೆಗೆ ಹೋಗಿರಬೇಕು ಎಂದುಕೊಂಡರು. ಮಕ್ಕಳು ಹಾಗೆ ಮಾಡುವುದು ಸಾಮನ್ಯವೇ. ಅದರಲ್ಲೂ ನಮ್ಮೂರಿನಲ್ಲಿ, ಮಿರ್ಲೆ-ಸಾಲಿಗ್ರಾಮದಂತಹ ಒಂದು ಪುಟ್ಟ ಟೌನ್ ನಲ್ಲಿ, ಮನೆಗಳು ಒಂದಕ್ಕೊಂದು ಅಂಟಿರುವಂತೆಯೇ ಅಕ್ಕ ಪಕ್ಕ ಇರುವಾಗ, ಬೀದಿ ತುಂಬಾ ಸ್ನೇಹಿತರಿರುವಾಗ ಮಕ್ಕಳು ಓಡಾಡುತ್ತಿರುತ್ತಾರೆ. ಅಪ್ಪ-ಅಮ್ಮ ಹಾಗೆಣಿಸಿಕೊಂಡರು. ಆದರೆ ಆಕೆ ಸಂಜೆ ಹಾಲು ಕುಡಿಯಲೂ ಬರಲಿಲ್ಲ, ಸೂರ್ಯ ಮುಳುಗಿದ ಮೇಲೆ ಮನೆಗೂ ಬರಲಿಲ್ಲ. ಯಾವತ್ತೂ ಹೀಗಾಗಿಲ್ಲವಲ್ಲಾ ಅಂತ ಗಾಬರಿಗೊಂಡ ಅಪ್ಪ ಅಮ್ಮ ಮನೆಯ ಸುತ್ತ ಮುತ್ತ, ಅವಳ ಸ್ನೇಹಿತರ ಮನೆ ಪರಿಚಯದವರ ಮನೆ, ಸ್ಕೂಲಿನ ಸುತ್ತಮುತ್ತ ಹುಡುಕಾಡಿದರು. ಫೋನಾಯಿಸಿದರು. ಜನರನ್ನು ಕಳಿಸಿದರು. ಅವಳ ಸುಳಿವಿಲ್ಲ. ಆತಂಕದಿಂದ ಪೊಲೀಸರಿಗೂ ತಿಳಿಸಿದರು. ಮಗಳಿಗಾಗಿ ಕಾದರು, ಫೋನ್ಗಾಗಿ ಕಾದರು. ಅಮ್ಮನ ಮುಡಿಯಿಂದ ಹೂ ಉದುರುವಷ್ಟು ನಿಶ್ಯಬ್ಧವಾಗಿ ಖುಷಿ ಅವರಿಂದ ದೂರಾಗಿದ್ದಳು. ಮಾಯವಾಗಿದ್ದಳು.
ಪೋಲಿಸರು ಬಂದರು. ಪುಟ್ಟ ಸುಂದರಿಯ ಫೋಟೋ ನೋಡಿದರು. ನೋಡಿಯೇ ಭಾವಿಸಿಬಿಟ್ಟರು! ’ಇದು ಕಿಡ್ನ್ಯಾಪ್ ಕೇಸ್ ಸಾರ್’ ಅಂತ. ಖುಷಿ ವಾಸಿಸುತ್ತಿದ್ದ ಮನೆ ಹತ್ತಿರವಿದ್ದ ಪಡ್ಡೆ ಹುಡುಗರು, ಹೈಸ್ಕೂಲು-ಕಾಲೇಜು ಹುಡುಗರನ್ನೆಲ್ಲಾ ಅವರದ್ದೇ ಶೈಲಿಯಲ್ಲಿ ವಿಚಾರಿಸಿದರು. ರೈಲ್ವೇ ಸ್ಟೇಷನ್, ಬಸ್ ಸ್ಟಾಂಡ್ ಹುಡುಕಿಸಿದರು. ಪತ್ರಿಕೆಯಲ್ಲಿ ಹಾಕಿಸಿದರು. ಅಷ್ಟರಲ್ಲಿ ಖುಷಿಯ ಅಮ್ಮ ಮನಸ್ಸಿನ ಸ್ತಿಮಿತ ಕಳೆದುಕೊಂಡಿದ್ದಳು. ಅಲ್ಲಿ ಆಟವಾಡುತ್ತಿದ್ದ ನನ್ನ ಮಗಳು ಎಲ್ಲಿ ಮಾಯವಾದಳು? ಅವಳನ್ನು ನನ್ನ ಸೆರಗಿಗೇ ಕಟ್ಟಿಹಾಕಿಕೊಳ್ಳ ಬಾರದಿತ್ತಾ? ನಾನೂ ಅವಳೊಡನೆ ಕೂತು ಆಡಬಾರದಿತ್ತಾ...ಇಲ್ಲೆಲ್ಲೋ ಕರೆಯುತ್ತಿದ್ದಾಳಲ್ಲಾ...ಅಮ್ಮ ಕಲೆಸಿಹೋದಳು.
ಎರಡು ದಿನವಾದ ಮೇಲೆ ಪೊಲೀಸರು ಊರಿನ ಕೆರೆ ಕಟ್ಟೆ ಭಾವಿಗಳನ್ನೆಲ್ಲಾ ಹುಡುಕಿಸಿದರು. ಅವಳು ನೃತ್ಯ ಮಾಡಿದ್ದಾಗ ನೋಡಿ ಸಂತೋಷಪಟ್ಟಿದ್ದವರನ್ನೂ ವಿಚಾರಿಸಿದರು. ಅವರಿಗೆ ಗೊತ್ತಿದ್ದ ಇನ್ಫಾರ್ಮೆಂಟ್ಸ್ ಗಳನ್ನೂ ಕೇಳಿದರು. ಮಿರ್ಲೆ-ಸಾಲಿಗ್ರಾಮ ಎರಡೇ ದಿನಕ್ಕೆ ತನ್ನ ಪಾಡಿಗೆ ತಾನು ಮಾಮೂಲಿಗೆ ಬಂತು...ಅವತ್ತು ಕಳೆದುಹೋದವಳನ್ನು ಹುಡುಕಲು ಸಹಾಯ ಮಾಡಿದ ಗ್ರಾಮಸ್ತರು ಸ್ನೇಹಿತರು, ಬಂಧು ಮಿತ್ರರು ’ಛೆ! ಪಾಪ! ಹಿಂಗಾಗಬಾರದಿತ್ತು’ ಅಂತ ಮರುಗಿ, ಸಮಾಧಾನ ಮಾಡಿ ಸುಮ್ಮನಾದರು. ಅಪ್ಪ-ಅಮ್ಮ ಕಳಕೊಂಡ ಖುಷಿಯೇ ಆದರು. ಖುಷಿ ಕಾಣೆಯಾಗಿ ಎರಡು ತಿಂಗಳುಗಳಾಗುತ್ತಿವೆ. ಫ಼ೈಲುಗಳ ಮೇಲೆ ಇನ್ನೂ ಹುಡುಕಾಟ ನಡೆದಿದೆ ಅಂತಲೇ ಇದೆ. ಅವಳೆಲ್ಲಿ? ಅವಳ ಜನಕ್ಕೆ ಗೊತ್ತಿಲ್ಲ.
ಪುಟ್ಟ ಮಕ್ಕಳು ಅದರಲ್ಲೂ ಮುದ್ದಾದ ಹೆಣ್ಣು ಮಕ್ಕಳು ಕಳೆದುಹೋದಾಗ, ಕಳವೆಯಾದಾಗ, ಆಗುವುದು ಇಷ್ಟೇ. ಭಾರತಕ್ಕಿಂತ ಅಮೆರಿಕಾದಲ್ಲಿ ಹುಡುಕಾಟ ಸ್ವಲ್ಪ ’ಸೊಫಿಸ್ಟಿಕೇಟೆಡ್’ ಆಗಿರಬಹುದು ಅಷ್ಟೇ. ಅಮೆರಿಕಾದಲ್ಲಿ ಮಕ್ಕಳು ಕಾಣೆಯಾಗಿದ್ದು ಪೊಲೀಸರಿಗೆ ಗೊತ್ತಾದಾಗ ತಕ್ಷಣವೇ ’ಆಂಬರ್ ಅಲರ್ಟ್’ ಮಾಡುತ್ತಾರೆ. ತುರ್ತಾಗಿ ಮಗುವಿನ ಫೋಟೋವನ್ನು ಸ್ಕ್ಯಾನ್ ಮಾಡಿ ಆ ಪ್ರದೇಶದ, ರಾಜ್ಯದ ಪ್ರತಿಯೊಂದು ಪೊಲೀಸ್ ಠಾಣೆಗೂ, ಪ್ರತೀ ಪೊಲೀಸ್ ಆಫೀಸರ್ ನ ಕಾರ್ ನಲ್ಲಿರುವ ಕಂಪ್ಯೂಟರ್ ಗೂ ಕಳಿಸಲಾಗುತ್ತದೆ. ಪ್ರಾದೇಶಿಕ, ರಾಜ್ಯ ಟಿವಿ ಚಾನೆಲ್ ಗಳಲ್ಲಿ ಬಿತ್ತರವಾಗುತ್ತದೆ. ಆ ಮಗುವಿದ್ದ ಊರಿನಿಂದ ಸಾಗುವ ಎಲ್ಲಾ ಲೋಕಲ್, ರಾಜ್ಯ, ರಾಷ್ಟ್ರಿಯ ಹೆದ್ದಾರಿಗಳ ಫಲಕದಲ್ಲಿಯೂ ಸಂದೇಶ ಬಿತ್ತರವಾಗುತ್ತದೆ, ಫೋಟೋ ಬಿತ್ತರವಾಗುತ್ತದೆ. ಮಗುವನ್ನು ಕಂಡವರು ಅಥವಾ ಅದನ್ನು ಆ ದಿನ ನೋಡಿದ್ದವರು ತಕ್ಷಣ ಕರೆಮಾಡಲು ೯೧೧ ಅಥವಾ ಉಚಿತ ’ಹಾಟ್ ಲೈನ್’ ಇರುತ್ತದೆ. ’ಮಿಸ್ಸಿಂಗ್’ ಮಕ್ಕಳ ಬಗ್ಗೆ ಸ್ಥಳೀಯ ಅಂಗಡಿ, ಪೆಟ್ರೋಲ್ ಬಂಕ್, ಮಾಲ್ ಗಳಲ್ಲಿ ಮರ ಗಿಡಗಳ ಮೇಲೆ ಆ ಮಗುವಿನ ಚಿತ್ರದ ಸಮೇತ ಸಂದೇಶ ಅಂಟಿಸಲಾಗುತ್ತದೆ. ಮಕ್ಕಳ ಹುಡುಕಾಟಕ್ಕಾಗಿಯೇ ಕೆಲಸ ಮಾಡುವ ಸರ್ಕಾರೇತರ ಸಾಮಾಜಿಕ ಸಂಸ್ಥೆಗಳಿವೆ. ಆದರೂ...
...ಆದರೂ ಪ್ರಪಂಚದ ಎಲ್ಲ ಕಡೆಯಿಂದಲೂ ದಿನನಿತ್ಯ ಜಾನ್ ಬೊನೇ ರಾಮ್ಸೆ, ಮ್ಯಾಡಲೀನ್ ಮಕ್ಯಾನ್, ಜ಼ಾರಾ ಬೇಕರ್, ಖುಷಿಯಂತಹ ಹೆಣ್ಣು ಮಕ್ಕಳು ಕಳವೆಯಾಗುತ್ತಲೇ ಇದ್ದಾರೆ...ದುಷ್ಟ ಸಂಬಂಧಿಕರ ಕೈಗೆ ಸಿಕ್ಕೋ, ಮಾರಾಟಗಾರರ ಕೈಗೆ ಸಿಕ್ಕೋ, ಮನುಷ್ಯರ ದೇಹದ ಮಾರುವೇಷ ಹಾಕುವ ಕಾಮಪಿಶಾಚಿಗಳಿಗೆ ಆಹಾರವಾಗಿಯೋ, ಆಟದ ಸಾಮಾನಾಗಿಯೋ, ಜೀತದಾಳುಗಳಾಗಿಯೋ, ಪ್ರತೀ ದಿನ ಪ್ರತೀ ಹಂತದಲ್ಲೂ ಎಲ್ಲ ಬಗೆಯ ಕ್ರೌರ್ಯಗಳಿಗೂ ಅಮಾಯಕವಾಗಿ ಬಲಿಯಾಗುತ್ತಿದ್ದಾರೆ...ಬಾಂಬೆ, ಕಲ್ಕತ್ತಾಗಳಲ್ಲಿರುವ ಮಹಾ ಘೋರ ಓಣಿಗಳಲ್ಲಿ ಪ್ರತಿನಿತ್ಯ ಸಮಾಧಿಯಾಗುತ್ತಿದ್ದಾರೆ...
ಇದಕ್ಕೆ ಕಾರಣ ನಮ್ಮ ನಿರ್ಲಕ್ಷ, ಮೈ ಮರೆಯುವಿಕೆ ಅಥವಾ ಸಮಾಜದಲ್ಲಿ ಎಲ್ಲರೂ ಸಂಭಾವಿತರೇ ಎಂಬ ಹುಂಬ ನಂಬಿಕೆಯೂ ಇರಬಹುದು. ನಿಮಗೆ ಸದಾ ಗೊತ್ತಿರಲಿ. ಮಕ್ಕಳು-ಮರಿಗಳೆಂಬುದನ್ನೂ ನೋಡದ ರಾಕ್ಷಸರು ನಮ್ಮ ನಡುವೆಯೇ ಗುಮ್ಮಂದಿರಂತೆ ಕುಳಿತು ಕಾಯುತ್ತಾರೆ. ಒಂದು ಕ್ಷಣದ ನಿರ್ಲಕ್ಷ ಅವರಿಗೆ ಸಾಕು, ನಮ್ಮ ನಿಮ್ಮ ಜೀವನದ ಖುಷಿಗಳನ್ನು ಹಿಂಡಿ ಹಿಪ್ಪೆ ಮಾಡಲು.
ಅಮ್ಮಂದಿರು ಅಪ್ಪಂದಿರು ಒಟ್ಟಾಗಿ ಮಕ್ಕಳು ಮನೆಯ ಹತ್ತಿರ ಆಟವಾಡುವಾಗ, ಸ್ಕೂಲ್ ಬಸ್ ಗಳಲ್ಲಿ ಪ್ರಯಾಣಿಸುವಾಗ, ಪಾರ್ಕು-ಪಿಕ್ನಿಕ್ ಗಳಲ್ಲಿ ಸುತ್ತಾಡುವಾಗ ಪರಿಚಿತರ ಮನೆ-ಮದುವೆ-ಸಮಾರಂಭಗಳಿಗೆ ಹೋದಾಗ ನಿಮ್ಮ ಪುಟಾಣಿಗಳ ಮೇಲೆ ದಯವಿಟ್ಟು ಹೆಚ್ಚು ಗಮನವಿಡಿ. ಅದರಲ್ಲೂ ವಿಶೇಷವಾಗಿ ಹೆಣ್ಣುಮಕ್ಕಳ ಮೇಲೆ. ಈಗಿನ ನಮ್ಮ ಸಮಾಜದಲ್ಲಿ ಒಮ್ಮೆ ಮಾಯವಾದ ಖುಷಿಗಳು ಮತ್ತೆ ಸುಲಭವಾಗಿ ಮನೆಗೆ ಬರುವುದಿಲ್ಲ ಎಂದು ನೆನಪಿರಲಿ...