ಓ ಮಿನ್ನೆಸೋಟಾ!!
ಎಕಾನಮಿ ಕೈಯ್ಯಿಂದ ಜಾರದಿರಲು ಅಮೆರಿಕಾ ಥರಥರವಾಗಿ ಪ್ರಯತ್ನಿಸುತ್ತಿದೆ. ಅರಿಜ಼ೋನಾ, ಕ್ಯಾಲಿಫೋರ್ನಿಯಾ, ಮ್ಯಾಸಚೂಸೆಟ್ಸ್, ನೆವಾಡ, ನ್ಯೂಯಾರ್ಕ್, ಒಹಾಯೋ, ವಿಸ್ಕಾನ್ಸನ್ ಮತ್ತಿತರೆ ರಾಜ್ಯಗಳಂತೆ ತೀವ್ರ ಹಣಕಾಸಿನ ಮುಗ್ಗಟ್ಟಿಗೆ ಸಿಕ್ಕು ತತ್ತರಿಸುತ್ತಿರುವ ರಾಜ್ಯಗಳ ಪಾಲಿಗೆ ಈಗ ಮಿನ್ನಿಸೋಟಾವೂ ಸೇರುತ್ತಿದೆ. ಮಿನ್ನೆಸೋಟಾ ರಾಜ್ಯಕ್ಕಿರುವ ಐದು ಬಿಲಿಯನ್ ಬಜೆಟ್ ಅಂತರ, ಸಾಲ-ಹಣಕಾಸಿನ ತೊಂದರೆ, ಅವಶ್ಯಕತೆಗೆ ಸಂಬಧಿಸಿದಂತೆ ಡೆಮಾಕ್ರಟ್ಸ್ ಮತ್ತು ರಿಪಬ್ಲಿಕನ್ ಪಕ್ಷದವರು ಏನೇ ಮಾಡಿದರೂ ಒಮ್ಮತದ ನಿರ್ಧಾರಕ್ಕೆ ಬರಲು ಸಾಧ್ಯವಾಗದೇ, ಇಡೀ ಸರ್ಕಾರ, ಸರ್ಕಾರದಿಂದ ಪ್ರಾಯೋಜಿತವಾಗಲಿರುವ ಎಲ್ಲ ಕಚೇರಿ-ಕಾರ್ಯಕ್ರಮಗಳೂ ಜುಲೈ ೧ ರಿಂದ ಅನಿರ್ದಿಷ್ಟ ಕಾಲ ಬಂದ್ ಆಗಲಿವೆ. ಸರ್ಕಾರವೇ ’ಶಟ್ ಡೌನ್’ ಆಗುತ್ತಿದೆ! ಸರ್ಕಾರ ಶಟ್ ಡೌನ್ ಆಗಿರುವಷ್ಟು ಕಾಲ ಅಲ್ಲಿನ ೨೩,೦೦೦ ಸರ್ಕಾರಿ ನೌಕರರು ಮನೆಯಲ್ಲುಳಿಯುವ ಪರಿಸ್ಥಿತಿ, ಸಂಬಳ ಕಡಿತ.
ಜುಲೈ೪ ಅಮೆರಿಕಾದ ಸ್ವಾತಂತ್ರ ದಿನ. ಅವತ್ತು ಇಲ್ಲಿ ರಾಷ್ಟ್ರೀಯ ರಜೆ, ಹಬ್ಬ. ಅಂದರೆ ಮೂರು ದಿನಗಳ ವೀಕೆಂಡ್! ಅಮೆರಿಕನ್ನರಿಗೆ ವೀಕೆಂಡ್ ನಲ್ಲಿ ಅರ್ಧ ದಿನ ಹೆಚ್ಚಾದರೂ ಸ್ವರ್ಗ ಕ್ಕೆ ಜಂಪ್ ಹೊಡೆದಷ್ಟು ಖುಷಿ. ಇಡೀ ವಾರ ದುಡಿದು ಆಗ ಎಲ್ಲಾದರೂ ಮಕ್ಕಳು-ಮನೆಯವರೊಟ್ಟಿಗೆ ಸುತ್ತ ಹೊರಡಬಹುದಲ್ಲಾ. ಆದರೆ ಸರ್ಕಾರವೇ ಬಾಗಿಲು ಮುಚ್ಚಿರುವಾಗ ಇನ್ನು ಸರ್ಕಾರ ನಡೆಸುವ ಪಾರ್ಕ್, ಅಭಯಾರಣ್ಯ, ಮನೋರಂಜನೆಗಳು ನಡೆದಾವೇ? ಅವಕ್ಕೂ ಬಾಗಿಲು. ಜೈಲುಗಳಲ್ಲಿರುವ ಖೈದಿಗಳ ನೇರ ಉಸ್ತುವಾರಿಯಲ್ಲಿರುವ ನೌಕರವರ್ಗ ಮತ್ತು ದಿನನಿತ್ಯದ ಅಗತ್ಯಗಳಿಗೆ ಬೇಕಾದ ಪೊಲಿಸ್ ಸ್ಟಾಫ್, ಕೆಲವು ನ್ಯಾಯಾಧಿಕಾರಿಗಳು, ಡಾಕ್ಟರ್ ಗಳು, ಪ್ರಾಥಮಿಕ-ಪ್ರೌಢ ಶಾಲೆಯ ಟೀಚರ್ ಗಳನ್ನು ಬಿಟ್ಟರೆ ಇನ್ನೆಲ್ಲರೂ ಮನೆಗೆ. ರಸ್ತೆ ರಿಪೇರಿ, ಲೈಸನ್ಸ್ ಟೆಸ್ಟ್ ನಡೆಸುವುದು, ಸಾರ್ವಜನಿಕ ರೆಸ್ಟ್ ರೂಮ್ (ಶೌಚಾಲಯ)ಗಳು, ರಾಜ್ಯ ಸರ್ಕಾರದ ಲಾಟರಿಯೂ ಸೇರಿದಂತೆ ಎಲ್ಲಾ ಬಂದ್!
ಯೂರೋಪಿನಲ್ಲಿ ಗ್ರೀಸ್ ಗೆ ಸಿಕ್ಕ ಹುಲ್ಲುಕಡ್ಡಿಯ ಸಹಾಯದ ಅಗತ್ಯ ಈಗ ಮಿನ್ನೆಸೋಟಾ ಮತ್ತು ಅದರ ಜನರಿಗಿದೆ.
ಈರುಳ್ಳಿಯ ಮಹಿಮೆ!!!!
ಆಫ್ರೋ ಅಮೆರಿಕನ್ ಗೆಳೆಯರೊಬ್ಬರ ಅಜ್ಜಿ ಹೇಳಿದ ಆಸಕ್ತಿಕರ ಕಥೆ ಇದು.
೧೯೧೯ರಲ್ಲಿ ಐತಿಹಾಸಿಕ ಫ್ಲು (ಜ್ವರ) ಬಂದು ನಲವತ್ತು ಮಿಲಿಯನ್ ಗಿಂತಲೂ ಹೆಚ್ಚು ಜನ ಸತ್ತು ಹೋಗಿದ್ದರಂತೆ. ಜನರನ್ನು ಶುಶ್ರೂಷೆ ಮಾಡುತ್ತಿದ್ದ ಆಗಿನ ವೈದ್ಯರೊಬ್ಬರು ಸಾಯದೆ ಅಳಿದುಳಿದ ಜನರನ್ನೆಲ್ಲಾ ತಪಾಸಣೆ ಮಾಡಲು ಮನೆಮನೆಗೂ ಭೇಟಿ ಕೊಟ್ಟರಂತೆ. ಪ್ರತೀ ಮನೆಯಲ್ಲೂ ಸಾವುಗಳು ಅಥವಾ ರೋಗಿಗಳು! ಆದರೆ ಒಬ್ಬ ರೈತನ ಮನೆಯ ಎಲ್ಲಾ ಜನರೂ ಜ್ವರದ ನೆರಳೂ ತಾಕದೆ ಗಟ್ಟಿಮುಟ್ಟಾಗಿ ಆರೋಗ್ಯಕರವಾಗಿದ್ದರಂತೆ. ವೈದ್ಯರಿಗೆ ಆಶ್ಚರ್ಯ. ಆ ರೈತನನ್ನು "ನಿನ್ನ ಆರೋಗ್ಯವನ್ನು ಇಷ್ಟು ಚನ್ನಾಗಿಟ್ಟುಕೊಂಡಿದ್ದೀಯಲ್ಲಾ... ಏನಪ್ಪಾ ಉಪಾಯ ಮಾಡಿದೆ?" ಎಂದು ಪ್ರಶ್ನಿಸಿದರಂತೆ. ಅದಕ್ಕೆ ಆ ರೈತ "ನನ್ನ ಹೆಂಡತಿ ಮನೆಮದ್ದು ಮಾಡುತ್ತಾಳೆ. ಅವಳನ್ನೇ ಕೇಳಿ" ಎಂದನಂತೆ. ವೈದ್ಯರು ಆ ರೈತನ ಹೆಂಡತಿಯನ್ನು ವಿಚಾರಿಸಿದಾಗ ಆಕೆ ತನ್ನ ಅಜ್ಜಿ ಹೇಳಿಕೊಟ್ಟಂತೆ ಮನೆಯ ಪ್ರತಿ ಕೋಣೆಯಲ್ಲೂ ಈರುಳ್ಳಿಗಳನ್ನು ಇಡುತ್ತೇನೆ ಎಂದಳಂತೆ. ಅಚ್ಚರಿಯಿಂದ ಮನೆಯ ಕೋಣೆಗಳಲ್ಲಿಟ್ಟ ಈರುಳ್ಳಿಗಳನ್ನು ತೆಗೆದು ನೋಡಿದ ವೈದ್ಯ ಇವನ್ನು ನಾನು ಪರೀಕ್ಷೆ ಮಾಡಬಹುದಾ ಎಂದು ಆ ಈರುಳ್ಳಿಗಳನ್ನು ತೆಗೆದುಕೊಂಡು ಹೋದರಂತೆ. ಅವನ್ನು ಮೈಕ್ರೋಸ್ಕೋಪ್ ನ ಅಡಿ ಇಟ್ಟು ಪರೀಕ್ಷೆ ಮಾಡಿದಾಗ ಆ ಈರುಳ್ಳಿಗಳ ತುಂಬಾ ಫ್ಲೂ ವೈರಸ್ ಶೇಖರಿತವಾಗಿದ್ದು ಕಂಡು ಬಂತಂತೆ!! ಹೆಚ್ಚಿಟ್ಟ ಈರುಳ್ಳಿ ಕೆಟ್ಟ ಸ್ಪಿರಿಟ್ ಗಳನ್ನು ಕೆಟ್ಟ ಜಂತುಗಳನ್ನು (ವೈರಸ್ ಮತ್ತು ಬ್ಯಾಕ್ಟೀರಿಯಾಗಳೇ ಇರಬೇಕು!!) ಆಕರ್ಷಿಸುತ್ತದೆ, ಬಂಧಿಸಿಡುತ್ತದೆ ಎಂಬುದು ಆಗಿನಿಂದಲೂ ಚಾಲ್ತಿಯಲ್ಲಿದ್ದ ಮನೆಮದ್ದು!
ಫ್ಲೂ ಅಥವಾ ಕಾಯಿಲೆಗಳ ಸಮಯದಲ್ಲಿ ರೋಗಿಯ ಪಕ್ಕ ತಲೆ ಮತ್ತು ಬಾಲವನ್ನು ಸ್ವಲ್ಪವೇ ಕತ್ತರಿಸಿದ ಈರುಳ್ಳಿಗಳನ್ನು ಇಡುವುದರಿಂದ ರೋಗಿ ಬಹು ಬೇಗನೆ ಗುಣವಾಗುತ್ತಾರಂತೆ. ರೋಗಿಯ ಪಕ್ಕ ಇಡುವ ಈರುಳ್ಳಿ ಒಂದೇ ದಿನದಲ್ಲಿ ಕಂದು ಬಣ್ಣಕ್ಕೆ ತಿರುಗುತ್ತದಂತೆ. ರೋಗವಿರಲೇಬೇಕೆಂದಿಲ್ಲ. ಮನೆಗಳ ಕೋಣೆಗಳಲ್ಲಿ, ಮಂಚದ ಕೆಳಗೆ ಒಂದೊಂದು ಸಣ್ಣ ಈರುಳ್ಳಿಗಳನ್ನು ಅಡಗಿಸಿಟ್ಟರೆ ಅದು ಒಳ್ಳೆಯ ಆಂಟಿಬ್ಯಾಕ್ಟೀರಿಯಲ್ ಔಷಧದಂತೆ ಕೆಲಸ ಮಾಡುತ್ತದಂತೆ. ಮನೆಗಳಲ್ಲಿ ಈರುಳ್ಳಿ-ಬೆಳ್ಳುಳ್ಳಿಗಳ ಜಡೆ ಮಾಡಿ ತೂಗು ಹಾಕುವುದರಿಂದ ಅಥವಾ ಹೂದಾನಿಗಳಲ್ಲಿ ತುಂಬಿಸಿಡುವುದರಿಂದ ಮನೆಯ ಗಾಳಿ ಸ್ವಚ್ಚ ಹಾಗೂ ವಿಷರಹಿತವಾಗಿರುತ್ತದಂತೆ.
ಹೊಸ ಅಧ್ಯಯನಗಳೂ ಈರುಳ್ಳಿಯ ಈ ಸಾಮರ್ಥ್ಯಕ್ಕೆ ಪುಷ್ಟಿ ಕೊಡುತ್ತವೆ. ಹಸಿ ಈರುಳ್ಳಿ ಬ್ಯಾಕ್ಟೀರಿಯಾವನ್ನು ಅಯಸ್ಕಾಂತದಂತೆ ಆಕರ್ಷಿಸುತ್ತದೆ ಎನ್ನಲಾಗಿದೆ. ಈರುಳ್ಳಿಯನ್ನು ಆಗ ಹೆಚ್ಚಿ ಆಗಲೇ ತಿನ್ನುವುದು ಮಾತ್ರ ಆರೋಗ್ಯಕ್ಕೆ ಒಳ್ಳೆಯದು. ಅದನ್ನು ಹೆಚ್ಚಿಟ್ಟು ಗಂಟೆಗಳ ನಂತರ ಅದನ್ನು ತಿಂದರೆ ಫುಡ್ ಪಾಯ್ಸನ್ ಆಗುವ, ಜೀರ್ಣಾಂಗ ವ್ಯವಸ್ತೆ ಅಸ್ತವ್ಯಸ್ತವಾಗುತ್ತದೆ ಎನ್ನಲಾಗಿದೆ. ಈರುಳ್ಳಿಗಳನ್ನು ಹೆಚ್ಚಿ ಅರ್ಧ ಬಳಸಿ ಮತ್ತರ್ಧ ಭಾಗವನ್ನು ಜ಼ಿಪ್ ಲಾಕ್ ಕವರ್ಗಳಲ್ಲಿರಿಸಿ ಫ್ರಿಜ್ನಲ್ಲಿಡುವುದು ಕೂಡಾ ಈರುಳ್ಳಿಯನ್ನು ಬ್ಯಾಕ್ಟೀರಿಯಾಗಳಿಂದ ರಕ್ಷಿಸಲಾರದು.
ಈರುಳ್ಳಿಗಳಲ್ಲಿ ಸಲ್ಫೈಡ್ ಗಳು, ಸಲ್ಫಾಕ್ಸೈಡ್ ಗಳು ಹೆಚ್ಚಾಗಿರುತ್ತವಾದ್ದರಿಂದ ಈರುಳ್ಳಿಗಳು ಸಾಲ್ಮನೆಲ್ಲಾ, ಇ ಕೊಲೈ ಇತರೆ ಬ್ಯಾಕ್ಟೀರಿಯಾಗಳನ್ನು ನಿಯಂತ್ರಣದಲ್ಲಿಡುತ್ತವೆ.
ಈರುಳ್ಳಿಗಳನ್ನು ಉಸಿರಾಟದ ತೊಂದರೆ, ಅಸ್ತಮಾ, ಕೆಮ್ಮು, ನೆಗಡಿ, ನಾಯಿಕೆಮ್ಮುಗಳಿಗೆ ಔಷಧವಾಗಿ ಬಳಸುತ್ತಾರೆ.
ಬ್ಯಾಕ್ಟೀರಿಯಾದ ಸೋಂಕುಗಳಿಗೂ ಈರುಳ್ಳಿ ಸಿದ್ಧೌಷಧ.
ಹಸಿ ಈರುಳ್ಳಿಯ ನಿಯಮಿತ ಸೇವನೆಯಿಂದ ಜೀರ್ಣನಾಳದಲ್ಲಿ ಕಂಡುಬರುವ ಹಾನಿಕಾರಕ ಬ್ಯಾಕ್ಟೀರಿಯಾಗಳು ನಿಯಂತ್ರಣಕ್ಕೆ ಬರುತ್ತವೆ.
ಹಸಿ ಈರುಳ್ಳಿಯ ಸೇವನೆಯಿಂದ ಹಸಿವೆ ಹೆಚ್ಚುತ್ತದೆ.
ಈರುಳ್ಳಿ ರಕ್ತ ಶುದ್ಧಿಗೆ ಸಹಾಯಕಾರಿ.
ಈರುಳ್ಳಿಯಲ್ಲಿ ಕಂಡುಬರುವ ಸಲ್ಫೈಡ್ ಗಳು ದೇಹದ ರಕ್ತದೊತ್ತಡವನ್ನು ಕಡಿಮೆಮಾಡುತ್ತದೆ, ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿಡುತ್ತದೆ.
ಈರುಳ್ಳಿಯ ನಿತ್ಯದ ಸೇವನೆಯಿಂದ ಹೊಟ್ಟೆಯ ಕ್ಯಾನ್ಸರ್ ಅನ್ನು ತಡೆಯಬಹುದು.