ಡಾ. ಹಿ. ಶಿ. ರಾ.
ವಿಜಯನಗರದ ಕಾಲದ ರಾಜ ಮನೆತನದ ಮಹಿಳೆಯೊಬ್ಬಳು ಹಸುಳೆ ಕಂದನಿಗೆ ಹಾಲೂಡಿಸುತ್ತಾ ಆ ಮಗುವಿನ ಕಿವಿಯಲ್ಲಿ ಹೇಳಿದ ಮಾತು ಶಾಸನದಲ್ಲಿ ದಾಖಲೆಯಾಗಿದೆ.
’ಕೆರೆಯಂ ಕಟ್ಟಿಸು, ಬಾವಿಯಂ ತೋಡಿಸು,
ದೇವಾಗಾರಂ ಮಾಡಿಸು...’
ಅಂದರೆ ಅವರಿಗಾಗಿ (ಜನರಿಗಾಗಿ) ಮಾಡಿಸು ನಿನಗಾಗಿ ಅಲ್ಲ ಅಂತ. ಈಗಿನ ರಾಜಕಾರಣಿ ಕೂಸುಗಳಿಗೆ ಈ ಮಾತು ಹೇಳುವವರು ಯಾರು? ನಮ್ಮ ಈಗಿನ ತಾಯಂದಿರಿಗೆ ಇಂಥ ಹೃದಯ ಯಾಕೆ ಇಲ್ಲ? ನಮ್ಮ ಕಾಲದಲ್ಲಿ ತಾಯಿತನದ ಮಹತ್ವ ಇಂಗಿ ಹೋಯಿತೇ? ಹಾಗಿದ್ದಲ್ಲಿ ಭೂಮಿ ಬರಡಾಗುವುದು ಖಂಡಿತ. ತಾಯಿ ಬಂಜೆಯಾದ ಕಡೆ ಕಂದನಿಲ್ಲ. ನಾಡು ಬರಡಾದ ಕಡೆ ಜೀವನವಿಲ್ಲ. ರೈತ ಆತ್ಮಹತ್ಯೆಗೆ ಶರಣಾಗುತ್ತಿರುವುದು ಇದಕ್ಕೆ ದೊಡ್ಡ ನಿದರ್ಶನ. ಮುಂದೆ ಇದೇ ರೈತನನ್ನು ಅನುಸರಿಸುವವರು ಇದ್ದಾರೆಯೆ ಎಂಬ ಆತಂಕ ಮೂಡುತ್ತದೆ. ಭವಿಷ್ಯವಾದಿ ಚಿಂತಕರಿಗೆ ಇಂಥ ಭಯ ಸಹಜ.
ಸಾವು ದೇಹವನ್ನು ಮಾತ್ರ ನಿರಾಕರಿಸುವುದಿಲ್ಲ. ಸಂಸ್ಕೃತಿಯನ್ನು ನಿರಾಕರಿಸುತ್ತದೆ. ಒಬ್ಬ ವ್ಯಕ್ತಿ ಮಾತ್ರ ಸತ್ತರೆ ಅದು ಸಂಸ್ಕೃತಿಯ ಒಂದು ಘಟಕದ ನಷ್ಟ. ಒಂದು ಸಮುದಾಯದ ಅವನತಿಯ ಸೂಚಕವಾಗಿ ಒಬ್ಬ ಅಥವ ಹಲವು ವ್ಯಕ್ತಿಗಳು ಸ್ವಯಂ ಒತ್ತಾಯದಿಂದ ಸಾಯುವುದಾದಲ್ಲಿ ಅದು ಒಂದು ವರ್ಗದ ಸಂಸ್ಕೃತಿಯ ನಿರಾಕರಣೆಯಾಗುತ್ತದೆ. ರೈತನ ನಿರಂತರ ಸಾವು ರೈತ ಸಂಸ್ಕೃತಿಯ ನಿರಾಕರಣೆಯಾಗುತ್ತದೆ. ಭಾರತದ ಕಾರ್ಮಿಕ ವರ್ಗಕ್ಕೆ ಈ ದಾರಿ ದೂರವಿಲ್ಲ ಅನಿಸುತ್ತಿದೆ. ಈಗಾಗಲೇ ಕೈಗಾರಿಕಾ ಕಾರ್ಮಿಕರು ತಮ್ಮ ಅಸ್ತಿತ್ವವನ್ನೆ ಕಳೆದುಕೊಂಡಂತೆ ತಣ್ಣಗಾಗಿದ್ದಾರೆ. ಕೃಷಿ ಕಾರ್ಮಿಕರಲ್ಲಿ ಒಂದು ವರ್ಗ ಬೇರೆ ವೃತ್ತಿಗಳ ಕಡೆಗೆ ಹೋಗಿದೆ. ಉಳಿದವರು ಜೀವನಕ್ಕೆ ಅನ್ಯ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಈಗ ಕೃಷಿ ಮತ್ತು ಕೈಗಾರಿಕೆಗಳು ಮೊದಲಿನ ಸ್ವರೂಪದಲ್ಲಿ ಅಸ್ತಿತ್ವದಲ್ಲಿಲ್ಲ. ಕೃಷಿ ನಿಧಾನವಾಗಿ ಕಾರ್ಪೊರೇಷನ್ ಗಳ ವಶವಾಗುವ ಹಾದಿಯಲ್ಲಿದೆ. ಕೈಗಾರಿಕೆ ಎಂಬುದು ಆರ್ಥಿಕ ವಲಯವೆಂಬ ಉದ್ಯಮತಿಯ ಕೈ ಸೇರುತ್ತಿದೆ. ಇವರು ಉದ್ಯೋಗಗಳನ್ನೇನೋ ಉತ್ಪಾದಿಸುತ್ತಾರೆ. ಅವು ಜೀತದಾಳುಗಳಂಥ ಹೊಸ ಸೇವಕ ವೃತ್ತಿಗಳಾಗಿರುತ್ತವೆ. ಯಾರೊಬ್ಬರೂ ಸ್ವತಂತ್ರವಾಗಿ ಗೂಡು ಕಟ್ಟಿಕೊಂಡು ತತ್ತಿ ಇಟ್ಟು ಮರಿ ಮಾಡಿಕೊಂಡು ಬೆಚ್ಚಗೆ ಬದುಕುವ ಪರಿಸ್ಥಿತಿ ಇರಬಾರದು. ಉದರಕ್ಕೂ ಮನಸ್ಸಿಗೂ ಉದ್ಯಮಪತಿಯಲ್ಲಿ ವರದಿ ಮಾಡಿಕೊಳ್ಳುವ ಸ್ಥಿತಿ ಸಹಜವಾಗಬಹುದು.
’ರೈತ’ ಮತ್ತು ’ಕಾರ್ಮಿಕ’ ಸ್ವತಂತ್ರ ಜೀವನ ವರ್ಗಗಳೆ ಎಂಬ ಅಂಶವನ್ನು ಮತ್ತೊಮ್ಮೆ ಸ್ಪಷ್ಟ ಪಡಿಸಿಕೊಳ್ಳಬೇಕಿದೆ. ಬೇಟೆ, ಪಶುಪಾಲನೆ ಮತ್ತು ಕೃಷಿ-ಇವು ಜೀವನ ವಿಕಾಸದ ಸ್ವತಂತ್ರ ವೃತ್ತಿಗಳು. ಮಾನವ ವಿಕಾಸದಂತೆ ಕ್ರಮವಾಗಿ ಒಂದನ್ನು ಇನ್ನೊಂದು ಹಿಂದೆ ಸರಿಸಿತು. ಆ ಕಾಲಕ್ಕೆ ಕೃಷಿ ಬಹುದೊಡ್ದ ಶೋಧ, ಬಹುಜನರ ಉದ್ಯೋಗ ವ್ಯವಸ್ಥೆ ಮತ್ತು ಅದು ಇಂಟಿಗ್ರೇಟೆಡ್ ಜೀವನ ಶೈಲಿಯಾಗಿತ್ತು. ಆದ್ದರಿಂದಲೆ ಕೃಷಿಯ ಉದ್ಭವ ಬೇಟೆ ಮತ್ತು ಪಶು ಪಾಲನೆಯನ್ನು ತನ್ನೊಳಗೆ ಸೇರಿಸಿಕೊಂಡಿತು. ಆನಂತರ ಬೇಟೆ ಒಂದು ವೃತ್ತಿಯಾಗಿ ಉಳಿಯಲಿಲ್ಲ. ಕೃಷಿ ಮಾತ್ರ ಭೂಮಿಯನ್ನು ಜನರನ್ನು ಅನ್ಯೋನ್ಯವಾಗಿ ಬಂಧಿಸಿತು. ಭೂಮಿಯ ಮೇಲಿನ ಯಾರನ್ನೂ ಏನನ್ನೂ ನಿರಾಕರಿಸದೆ ಬೆಳೆದು ನಿಂತ ಅಖಂಡ ಜೀವನ ವಿಧಾನವೆಂದರೆ ಅದು ಕೃಷಿ ಬದುಕು. ಕೃಷಿ ಕ್ಷೇತ್ರದ ವಿಭಜನೆಯೆ ಕೈಗಾರಿಕೆ.
ಕೈಗಾರಿಕೆ ಜೀವನದ ಸ್ಪೆಷಲೈಜ಼ೇಷನ್. ಸಹಜ ಜೀವನಕ್ಕಿಂತ ಸುಖಿ ಜೀವನ ಚಿಂತನೆಯ ಆಧಾರದ ಮೇಲೆ ಅದು ಹುಟ್ಟಿದೆ. ತಂತ್ರಜ್ನಾನವನ್ನು ಉದ್ಯಮಪತಿಗಳು ವಶಪಡಿಸಿಕೊಂಡುದರ ಪರಿಣಾಮವಾಗಿ ಮನುಷ್ಯನ ಸಹಜ ಪ್ರವೃತ್ತಿ ಮತ್ತು ವೃತ್ತಿಯನ್ನೂ ಮೀರಿದ ವೃತ್ತಿಯಾಗಿ ಅದು ಬೆಳೆದು ಬಂದಿದೆ. ಅಂದರೆ ಕೈಗಾರಿಕಾ ವೃತ್ತಿ ಮತ್ತು ಸಂಸ್ಕೃತಿ ಸಹಜ ಮಾನವ ನಿರ್ಮಿತಿಗಳಲ್ಲ, ಅವು ಅನುಭೋಗಿ ಜೀವನ ಸಿದ್ಧಾಂತದ ಉತ್ಪನ್ನಗಳು. ಆದ್ದರಿಂದಲೆ ಪ್ರಜ್ನಾ ಸಂಸ್ಕೃತಿ ಬಲಗೊಂಡಂತೆ ಕೈಗಾರಿಕೆಗಳು ಸರ್ಕಾರದ ವಶಕ್ಕೆ ಬಂದವು. ಸರ್ಕಾರ ದುರ್ಬಲಗೊಂಡು ಮತ್ತೆ ಉದ್ಯಮಪತಿಗಳು ಅವತರಿಸಿದ್ದರಿಂದ ಅವು ಹೊಸ ವೇಷದಲ್ಲಿ ಉದ್ಯಮಪತಿಯ ಕೈಗೇ ಹೋಗುತ್ತಿವೆ. ಹಿಂದೆ ಕೈಗಾರಿಕೆಗಳು ಕೊಟ್ಟ ಉದ್ಯೋಗಗಳನ್ನು ಈಗ ಹೊಸ ಉದ್ಯಮಗಳು ಕೊಡಲಾರವು. ಅವು ’ಕೈಗಾರಿಕೆ’ಗಳು. ಇವು ’ಉದ್ಯಮ’ಗಳು. ಕೈಗಾರಿಕೆಗೆ ದುಡಿಯಲು ಜನ ಬೇಕು. ಉದ್ಯಮದಲ್ಲಿ ಅದನ್ನು ಆಪರೇಟ್ ಮಾಡಲು ತಂತ್ರಜ್ನರು ಮತ್ತು ಎಕ್ಸಿಕ್ಯೂಟಿವ್ಸ್ ಸಾಕು. ಜನಗಳು (ನಮ್ಮಂತ ಸಾಮಾನ್ಯರು) ಎಲ್ಲಿಗೆ ಹೋಗಬೇಕು? ಜನಗಳನ್ನು ಸಾಕುವುದು ಉದ್ಯಮಪತಿಯ ಕೆಲಸ ಅಲ್ಲ. ಅದು ಸರ್ಕಾರದ ಕೆಲಸ. ಸರ್ಕಾರ ಎಲ್ಲಿದೆ? ಅದು ಉದ್ಯಮಪತಿಯ ಜೇಬಿನಲ್ಲಿ.
ಹಾಗೆಂದರೆ, ಈಗ ಅಖಂಡ ಜೀವನ ವಿಧಾನದ ಅನ್ವೇಷಣೆಯ ಅಗತ್ಯತೆ ಇದೆಯೆ? ಜೀವನವನ್ನೂ ಅಭಿವೃಧ್ಧಿಯನ್ನೂ ಉದ್ಯಮಪತಿಗಳು ಸ್ಪಾನ್ಸರ್ ಮಾಡಿದರೆ ಸಾಕೆ? ಯಾವುದಾದರೂ ಯೋಜನೆ, ಕೊನೆಗೆ ಒಂದು ಕಾರ್ಯಕ್ರಮ ನಡೆಸಬೇಕಾದಲ್ಲಿ ತಕ್ಷಣ ಯಾರು ಸ್ಪಾನ್ಸರ್ ಮಾಡುತ್ತಾರೆ ಎಂದು ಕೇಳುವವರೆ ಹೆಚ್ಚು. ಹಾಗಿದ್ದಲ್ಲಿ ಬಹುಜನರ ಬದುಕನ್ನು ಸ್ಪಾನ್ಸರ್ ಮಾಡುವವರು ಯಾರು? ಅವರು ಸಿಗದಿದ್ದರೆ, ಇಲ್ಲದಿದ್ದರೆ (ಇಲ್ಲದಿದ್ದರೆ ಎಂದು ಹೇಳಲಾಗುವುದಿಲ್ಲ. ಅವರು ಇದೇ ಇರುತ್ತಾರೆ), ಅವರನ್ನು ಹಿಡಿಯಬೇಕು, ಓಲೈಸಬೇಕು, ಒಪ್ಪಿಸಬೇಕು. ಇಲ್ಲದಿದ್ದಲ್ಲಿ ನಮ್ಮ ಕಾರ್ಯಕ್ರಮ ನಡೆಯದು. ಅಂದರೆ ನಮ್ಮ ಬದುಕು ನಡೆಯದು. ಹಿಂದೆ ಒಡೆಯ ಸೇವಕನಿಗೆ ಸ್ಪಾನ್ಸರ್, ಹೆಂಡತಿಗೆ ಗಂಡ ಸ್ಪಾನ್ಸರ್. ನಿಮಗೆ ಯಾರು? ನಿಮ್ಮ ನಿಮ್ಮ ಸ್ಪಾನ್ಸರ್ ರನ್ನು ಹುಡುಕಿಕೊಳ್ಳಿ! |