ಹೆಡ್ಡ ದಡ್ಡರು ಮೂವರು

 
 
(ಸಂಗ್ರಹ) (ಉತ್ತರ ಕನ್ನಡ ಜಿಲ್ಲೆ)
 
ಒಂದಾನೊಂದು ಊರಲ್ಲಿ ಗಂಡ ಹೆಂಡತಿ ಇದ್ದರು. ಗಂಡ ಬಹಳ ಶಿಸ್ತಿನವನು. ಮನೆಯ ಪ್ರತಿಯೊಂದನ್ನೂ ಖುದ್ದು ಹೇಳಿ ಮಾಡಿಸಿ ಎಲ್ಲವನ್ನೂ ತನ್ನ ಸುಪರ್ದಿನಲ್ಲಿ ಇಟ್ಟುಕೊಂಡಿದ್ದನು. ಇವರಿಗೆ ಮದುವೆ ವಯಸ್ಸಿನ ಒಬ್ಬ ಮಗ ಇದ್ದ. ಇವರು ಅವನಿಗೆ ಒಂದು ಮದುವೆ ಮಾಡಿಸಿದರು. ಸೊಸೆ ತಂದರು.
ಮತ್ತಿನ್ನೆಂತ. ಸೊಸೆ ಬಂದಾಯಿತಲ್ಲ. ಮಗ ಅವನ ಜೀವನ ಅವನು ನೋಡಿಕೊಳ್ಳುವ ಎಂದು ಮನೆಯ ಯಜಮಾನ ಕಾಶಿ ಯಾತ್ರೆಗೆ ಹೋಗಿಬರಬೇಕೆಂದು ಮನಸು ಮಾಡಿದನು. ಹೊರಡುವ ಮೊದಲು ಮನೆಯಲ್ಲಿ ಎಲ್ಲರಿಗೂ ಸರಿಯಾಗಿ ಕೆಲಸ ಹೇಳಿ ಜವಾಬ್ದಾರಿ ವಹಿಸಿ ಹೊರಡುವ ಎಂದೆಣಿಸಿ ಹೆಂಡತಿಯನ್ನು ಕರೆದ. ’ನೋಡು ಇವಳೇ. ನಾನು ಯಾತ್ರೆಗೆ ಹೋಗಿ ಬರುತ್ತೇನೆ. ಒಂದು ಬಿಲ್ಲೆ(ನಾಣ್ಯ) ಕೊಟ್ಟರೆ ಮೂರು ಜನರ ಕೂದಲನ್ನು ತೆಗೆದುಕೊಡುವ ಕೆಲಸ.. ನೀನು ಸರಿಯಾಗಿ ಮಗನ ಕೂದಲನ್ನು ತೆಗೆಸು’ ಎಂದ. ಅವಳು ಗಂಡ ಹೇಳಿದ ಮಾತನ್ನು ಮೀರಿದವಳಲ್ಲ. ’ಆದೀತು ಇವರೆ’ ಅಂದಳು.
 
ಹಾಗೇ ಮತ್ತೆ ಮಗನನ್ನು ಕರೆದ. ’ಮಗಾ ನಾನು ಕಾಶಿಗೆ ಹೋಗಿ ಬರುತ್ತೇನೆ. ಚೆನ್ನಾಗಿ ಬಂದ ಬೆಳೆಯನ್ನು ಕೊಯ್ದು ಸರಿಯಾಗಿ ಹುಲ್ಲು(ಕುತ್ರಿ) ಹಾಕು. ನಾನಿಲ್ಲದಾಗ ಮನೆಕಡೆ ನಿಗಾ ಇರಲಿ’ ಎಂದನು. ಮಗ ಅಪ್ಪ ಹೇಳಿದಂತೇ ಕೇಳುವವ. ’ಆಗಲಿ ಅಪ್ಪಾ’ ಅಂದ.
ಕಡೆಯದಾಗಿ ಮನೆಯ ಸೊಸೆಯನ್ನು ಕರೆದ. ’ನೋಡಮ್ಮಾ ನೀನೇ ಈಗ ಮನೆ ನೋಡಿಕೊಳ್ಳಬೇಕಾದವಳು. ನಿನ್ನ ಅತ್ತೆಗೆ ತ್ರಾಸ ಕಡಿಮೆ ಮಾಡು. ಏನೇ ಮಾಡಿದರೂ ಬಹಳ ಸ್ವಚ್ಚವಾಗಿ ಮಾಡು’ ಎಂದನು. ’ಆಗಲಿ ಮಾವಯ್ಯಾ ಹೋಗಿ ಬನ್ನಿ’ ಎಂದಳು ಸೊಸೆ.
ಆ ಮನುಷ್ಯ ಸಮಾಧಾನದಿಂದ ಕಾಶಿಗೆ ಹೊರಟನು.
 
ಅವರ ಮನೆಯಲ್ಲಿ ಎಲ್ಲರೂ ಬೆಳಗ್ಗಿನ ಹೊತ್ತು ’ಹೊರಕ್ಕೆ’ ಹೋಗಲು ಒಂದೊಂದು ಚೊಂಬು ನೀರನ್ನು ತೆಗೆದುಕೊಂಡು ಪಕ್ಕದಲ್ಲಿದ್ದ ಕಾಡಿಗೆ ಹೋಗಿ ಬರುತ್ತಿದ್ದರು. ಸೊಸೆ ಪ್ರತಿ ಬಾರಿ ಕಾಡಿಗೆ ’ಹೊರಕ್ಕೆ’ ಬಂದಾಗಲೂ ಒಂದು ನರಿ ಬಂದು ಅವಳು ತರುವ ಚೊಂಬಿನಲ್ಲಿದ್ದ ನೀರನ್ನು ಬಗ್ಗಿಸಿ ಚೆಲ್ಲಿ ಬಿಡುತ್ತಿತ್ತು. ಸೊಸೆಗೆ ನರಿಯ ಮೇಲೆ ಕೋಪ. ಇದಕ್ಕೆ ಸರಿಯಾಗಿ ಬುದ್ಧಿ ಕಲಿಸಬೇಕೆಂದು ಆಲೋಚಿಸಿದಳು. ಒಂದು ದಿನ ನೀರನ್ನು ತೆಗೆದುಕೊಂಡು ಹೋಗಿ ಮೊದಲು ಚೊಕ್ಕವಾಗಿ ಕುಂಡೆ ತೊಳೆದುಕೊಂಡು ಆಮೇಲೆ ಎರಡಕ್ಕೆ ಹೋಗಿ ಬಂದಳು. ಮತ್ತೆ ಕುಂಡೆ ತೊಳೆದುಕೊಳ್ಳಲೇ ಇಲ್ಲ. ಎರಡಕ್ಕೆ ಮೊದಲೇ ತೊಳೆದಾಗಿತ್ತಲ್ಲ!
 
ಮಗ ಭೂಮಿ ಕೆಲಸ ಮಾಡುತ್ತಿದ್ದ. ಬೆಳೆಯನ್ನು ಕೊಯ್ದು ಕುತ್ರಿ ಹಾಕು ಅಂತ ಅಪ್ಪಯ್ಯ ಹೇಳಿದ್ದಾನೆ ಎಂದು ಆಗಷ್ಟೇ ಬಂದಿದ್ದ ಪೈರನ್ನು ಕೊಯ್ದುಕೊಂಡು ಬಂದನು. ಎಳೆಯದಾಗಿ ಬೆಳೆದಿದ್ದ ಧಾನ್ಯವನ್ನೆಲ್ಲಾ ಹೊರಕ್ಕೆ ಹಾಕಿ ಉಳಿದ ಹುಲ್ಲನ್ನು ಮಾತ್ರ ಕುತ್ರಿಹಾಕಿ ತುಂಬಿಸಿ ಇಟ್ಟನು.
ಮಗನಿಗೆ ಕೂದಲು ತೆಗೆಸಬೇಕೆಂದು ಯಜಮಾನರು ಹೇಳಿದ್ದಾರೆ ಅಂತ ಅವನ ಹೆಂಡತಿ ಮಗನನ್ನು ಕೂದಲು ತೆಗೆಸಲಿಕ್ಕೆ ಕ್ಷೌರದವನ ಬಳಿ ಕರೆತಂದಳು. ಒಂದು ಬಿಲ್ಲೆ ಕೊಟ್ಟು, ’ಒಂದು ಬಿಲ್ಲೆಗೆ ಮೂರು ಜನರ ತಲೆ ಕೂದಲು ತೆಗೆಸಬಹುದು. ನಿನಗ್ಯಾಕೆ ಹೆಚ್ಚು ದುಡ್ಡು ಉಳಿಸಲಿ, ನನ್ನ ಕೂದಲನ್ನೂ ತೆಗೆದುಬಿಡು, ಲೆಕ್ಕ ಸರಿಯಾಗುತ್ತೆ’ ಅಂತ ಕ್ಷೌರದವನ ಹತ್ತಿರ ತನ್ನ ತಲೆ ಕೂದಲನ್ನೂ ಬೋಳಿಸಿಕೊಂಡಳು.
 
ಸುಮಾರು ಒಂದು ತಿಂಗಳಲ್ಲಿ ಗಂಡ ಕಾಶಿ ಯಾತ್ರೆಯಿಂದ ಸಂತೋಷದಲ್ಲಿ ಹಿಂದಿರುಗಿ ಬಂದನು. ಬಳಲಿದ್ದ ಅವನು ’ಇವಳೇ ನನಗೆ ಬಹಳ ದಣಿವಾಗಿದೆ, ಬೇಗ ಆಸ್ರಿ ತೆಗೆದುಕೊಂಡು ಬಾ’ ಎಂದು ಮನೆ ಹೊರಗಿನಿಂದ ಹೆಂಡತಿಗೆ ಕೂಗಿ ಹೇಳಿ ಅಲ್ಲೇ ಕೂತನು. ತನ್ನ ಯಜಮಾನರು ಬಂದರು ಅಂತ ಹೆಂಡತಿ ಸಂತೋಷದಿಂದ ಕುಡಿಯಲು ತಣ್ಣಗಿನ ಆಸ್ರಿ ತೆಗೆದುಕೊಂಡು ಮನೆ ಹೊರಗೆ ಬಂದಳು. ತನ್ನ ಹೆಂಡತಿ ತಲೆ ಬೋಳಿಸಿಕೊಂಡಿರುವುದನ್ನು ನೋಡಿ ಏಕೆಂದು ತಿಳಿಯದ ಗಂಡ ’ಇದ್ಯಾಕೆ ಹೀಗೆ ಮಾಡಿದೆ? ಇದು ಯಾವ ನಮೂನೆ?’ ಎಂದನು. ’ನೀವು ಒಂದು ಬಿಲ್ಲೆ ಕೊಟ್ಟು ನಿಮ್ಮದು, ಮಗನದ್ದು, ಮತ್ತೆ ನಿಮ್ಮ ಸ್ನೇಹಿತರದ್ದು ತಲೆ ಕ್ಷೌರ ಮಾಡಿಸಿಕೊಂಡು ಬರುತ್ತಿದ್ದಿರಿ. ನಾನು ಮಗನದಷ್ಟೇ ಮಾಡಿಸಿದರೆ ಕ್ಷೌರದವನಿಗೆ ಕೊಡುವ ಒಂದು ಬಿಲ್ಲೆ ಹೆಚ್ಚಾಗುತ್ತದೆ ಅಂತ ನನ್ನ ತಲೆಯನ್ನೂ ಬೋಳಿಸಿಕೊಂಡು ಬಂದೆ ಇವರೇ’ ಅಂದಳು.
 
ಯಜಮಾನನಿಗೆ ನಾನಿಲ್ಲದಾಗ ಇವರು ಇನ್ನೇನೆಲ್ಲಾ ಆಟ ಮಾಡಿದ್ದಾರೆ ಅಂತ ಯೋಚನೆ ಬಂದಿತು. ಮಗನನ್ನು ಕರೆಸಿದನು. ನಾನು ಹೇಳಿದಹಾಗೆ ಗದ್ದೆ ಕೊಯ್ದು ಕುತ್ರಿ ಹಾಕಿದೆಯಾ ಎಂದು ಕೇಳಿದನು. ಹೌದಪ್ಪಯ್ಯಾ ಎಂದು ಮಗ ತಾನು ಮಾಡಿದ್ದ ಕೆಲಸವನ್ನು ತೋರಿಸಿದನು. ’ಅಯ್ಯೋ ಮಗಾ..ಇದೆಂತ ಅನಾಹುತ ಮಾಡಿದೆ! ನಾನು ಬೆಳೆ ಕೊಯ್ದು ಕುತ್ರಿ ಹಾಕು ಅಂತ ಹೇಳಿದಿದ್ದೆ. ನೀನು ಇನ್ನೂ ಬೆಳೆಯದ ಪೈರನ್ನೇ ಕೊಯ್ದು ಬರೀ ಹುಲ್ಲನ್ನು ರಾಶಿ ಮಾಡಿದ್ದೀಯಲ್ಲಾ...ನನ್ನ ಮನೆ ಹಾಳಾಯಿತಲ್ಲಾ’ ಎಂದು ಸಂಕಟಪಟ್ಟು ಗಲಾಟೆ ಮಾಡಿದನು. ನನ್ನ ಮನೆಯವರಂತೂ ಮನೆಹಾಳು ಮಾಡಿದರು. ಈವಳು ಹೊರಗಿನಿಂದ ತಂದವಳು ಏನು ಮಾಡಿದ್ದಾಳೆಂದು ಸೊಸೆಯನ್ನು ಕರೆಸಿದನು. ಅವಳು ಬರುತ್ತಿದ್ದಂತೇ ಅಲ್ಲೆಲ್ಲ ದುರ್ನಾತ ತುಂಬಿಕೊಂಡಿತು. ’ಏನು ಮಾಡಿದರೂ ಸ್ವಚ್ಚವಾಗಿ ಮಾಡು ಎಂದು ಹೇಳಿದ್ದೆನಲ್ಲಾ ಇದೇನಮ್ಮಾ ಸೊಸೆ...ನೀನು ಬರುವಾಗ ಇಷ್ಟು ಕೆಟ್ಟ ವಾಸನೆ?’ ಎಂದು ಕೇಳಿದನು. ’ಮಾವಾ ನಾನು ಏನು ಮಾಡಿದರೂ ಸ್ವಚ್ಚವಾಗೇ ಮಾಡುತ್ತಿದ್ದೆ. ಪ್ರತಿ ದಿನ ಕಾಡಿಗೆ ಹೊರಕ್ಕೆ ಹೋಗುವಾಗ ಒಂದು ಚೊಂಬು ನೀರು ತೆಗೆದುಕೊಂಡು ಹೋಗುತ್ತಿದ್ದೆ. ಅದನ್ನು ಒಂದು ನರಿ ಒದ್ದು ಬೀಳಿಸುತ್ತಿತ್ತು. ಅದಕ್ಕೆ ನಾನು ಎರಡಕ್ಕೆ ಹೋಗುವ ಮುಂಚೆಯೇ ಕುಂಡೆ ತೊಳೆದುಕೊಂಡು ಖಾಲಿ ಚೊಂಬು ಇಟ್ಟು ಬಿಡುತ್ತಿದ್ದೆ.’ ಎಂದು ಪೂರಾ ಕಥೆ ಹೇಳಿದಳು.
 
ಆ ಮನೆ ಯಜಮಾನನಿಗೆ ಭ್ರಾಂತಿ ಬರುವುದೊಂದು ಬಾಕಿ ಮಾರಾಯರೇ! ನನ್ನ ಮನೆಯವರು ಇಷ್ಟು ಮೂರ್ಖರು ಅಂತ ನನಗೆ ಏಕೆ ಮುಂಚೆಯೇ ಗೊತ್ತಾಗಲಿಲ್ಲ...ಇವರಿಂದ ನನ್ನ ಮನೆ ಹಾಳಾಯಿತಲ್ಲಾ ಎಂದು ಅವರನ್ನು ಬಯ್ದುಕೊಂಡು ತನ್ನನ್ನು ಹಳಿದುಕೊಂಡನು.
 
  
 
 
 
 
 
 
Copyright © 2011 Neemgrove Media
All Rights Reserved