ಸಾಂಸ್ಕೃತಿಕ ಯಜಮಾನ್ಯ ಮತ್ತು ಪ್ರತಿ ಸಂಸ್ಕೃತಿ ನಿರ್ಮಾಣ ಪ್ರಯತ್ನಗಳ ಕುರಿತು...(ಭಾಗ-೩)

ಡಾ. ಬಂಜಗೆರೆ ಜಯಪ್ರಕಾಶ
 
(ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿ, ಬೆಂಗಳೂರು ಇವರು ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಮಾಡಿದ ಭಾಷಣದ ಬರಹ ರೂಪ)
 
 
 
ಖಾಸಗಿ ಕ್ಷೇತ್ರದ ಉದ್ದಿಮೆಗಳಲ್ಲಿ ಜಾತಿ ತಾರತಮ್ಯ ಆಧಾರಿತ ಶ್ರಮ ವಿಭಜನೆ ಎಷ್ಟು ಚೆನ್ನಾಗಿ ಎದ್ದು ಕಾಣುತ್ತೆ ಅಂದರೆ, ಯಾವುದೇ ಸಿ ಇ ಓ ಹುದ್ದೆಗಳು, ಯಾವುದೇ ಟೀಮ್ ಲೀಡರ್, ಪ್ರಾಜೆಕ್ಟ್ ಮ್ಯಾನೇಜರ್, ಇಂಜಿನಿಯರ್ ಹುದ್ದೆಗಳು ಎಲ್ಲವೂ ಕೂಡ ೧೦೦ಕ್ಕೆ ೯೦ರಷ್ಟು ಮೆಲ್ಜಾತಿಯವರ ಕೈಯ್ಯಲ್ಲಿವೆ. ೭೦-೮೦ರ ದಶಕದಲ್ಲಿ ಸಾರ್ವಜನಿಕ ಉದ್ದಿಮೆಗಳಲ್ಲೂ, ಸರ್ಕಾರಿ ಹುದ್ದೆಗಳ ನಿರ್ವಹಣೆಯಲ್ಲೂ ರಿಜರ್ವೇಶನ್ ಮುಖಾಂತರವಾಗಿ ಏನು ಸಾಮಾಜಿಕ ನ್ಯಾಯದ ಸಬಲೀಕರಣ ಉಂಟಾಗಿತ್ತು ಅದು ಕ್ರಮೇಣ ಕಣ್ಮರೆಯಾಗುತ್ತಿದೆ. ಅದೇ ಸಮಯದಲ್ಲಿ ವಿಸ್ತಾರಗೊಳ್ಳುತ್ತಿರುವ ಖಾಸಗಿ ಕ್ಷೇತ್ರದ ಉದ್ದಿಮೆ ಮತ್ತು ಕಚೇರಿಗಳಲ್ಲಿ ಜಾತಿ ಆಧಾರಿತ ಶ್ರಮ ವಿಭಜನೆಯು ನೆಲೆಗೊಂಡಿರುವುದನ್ನು ನಾವು ಕಾಣ್ತಾ ಇದ್ದೀವಿ. ಉನ್ನತ ವರ್ಗದ ೧ ಲಕ್ಷ ರೂ, ೮೦ ಸಾವಿರ ರೂ. ಸಂಬಳದ ಹುದ್ದೆಗಳೆಲ್ಲವೂ ಕೂಡ ಕೆಲವೇ ಜಾತಿಗಳ ಕೈಯ್ಯಲ್ಲಿವೆ. ಅದಕ್ಕಿಂತ ಕೆಳಗಡೆಯ ಎರಡನೇ ಸಾಲಿನ ನಿರ್ವಾಹಕ ಹುದ್ದೆಗಳು, ಟ್ಯಾಕ್ಸಿ ಟ್ರಾವೆಲ್ಸ್ ಮಾಲೀಕ, ರೆಸ್ಟೋರೆಂಟ್ ಮಾಲೀಕ, ಮುಂತಾದವುಗಳೆಲ್ಲಾ ಮಧ್ಯಮ ಬಲಿಷ್ಠ ಜಾತಿಗಳವರಾಗಿದ್ದಾರೆ. ಪರಿಚಾರಕರು, ಕಾರ್ ಚಾಲಕರು, ಸೆಕ್ಯೂರಿಟಿ ಮೆನ್ಗಳು, ಲಾನ್ ಮೈನ್ಟೆನೆನ್ಸ್, ಫ್ಲೋರ್ ಮತ್ತು ಟಾಯ್ಲೆಟ್ ಕ್ಲೀನಿಂಗ್ನಂತಹ ಕೆಲಸಗಳಲ್ಲಿ ಕೆಳ ಜಾತಿಗಳವರಿದ್ದಾರೆ.
 
ಆಫೀಸ್ಗಳಿಗೆ ಹೋಗಿ ಸುಮ್ಮನೆ ಅವರ ಜಾತಿಗಳನ್ನ ಕೇಳಿದರೆ ಈ ಆಧುನಿಕ ಬಂಡವಾಳ ಅನ್ನುವಂಥಾದ್ದು ಇಲ್ಲಿ ಭಾರತದಲ್ಲಿ ಯಾವ ರೀತಿಯಾಗಿ ಮತ್ತೆ ಜಾತಿಯಾಧಾರಿತ ಶ್ರಮ ವಿಭಜನೆಯನ್ನು ಹೊಸದಾಗಿ ಜಾರಿಗೆ ತಂದಿದೆ? ಎಷ್ಟು ಬಹಿರಂಗವಾಗಿ ಸಾಮಾಜಿಕ ನ್ಯಾಯದ ಯಾವುದೇ ಹಂಗಿಲ್ಲದೆ ಕಾರ್ಯಾಚರಣೆ ನಡೆಸುತ್ತಿದೆ ಎಂಬುದು ಗೊತ್ತಾಗುತ್ತೆ. ಈ ಬಗೆಯ ತಾರತಮ್ಯ ಆಚರಣೆಗೆ ಜಾತಿ ತಾರತಮ್ಯಗಳನ್ನು ಗಟ್ಟಿಗೊಳಿಸುವ ಶಕ್ತಿ ಈ ಮೊದಲಿಗಿಂತ ಹೆಚ್ಚಿಗಿದೆ. ಏಕೆಂದರೆ ಸಂಪತ್ತಿನ ಹಂಚಿಕೆಯ ಅಂತರ ಬಹಳಷ್ಟು ಜಾಸ್ತಿ ಇದೆ. ಆಧುನಿಕ ತಂತ್ರಜ್ಞಾನದ ಒಡೆತನ, ಸಾಂಸ್ಕೃತಿಕ ಶಕ್ತಿ, ಹಣ ಮತ್ತೆ ಅದಕ್ಕೆ ಇರುವಂತಹ ಜಾಗತಿಕ ಯಜಮಾನನ ಅನುಮತಿ.
ಯಾವ ಐಟಿ ಕಂಪನಿಯೂ ಕೂಡ ನೀನು ಅಧಿಕೃತವಾಗಿ ಈ ರೀತಿಯಾಗಿರುವ ಜಾತಿ ಲಾಂಛನಗಳನ್ನ ಧರಿಸಿ ಆಫೀಸಿಗೆ ಬರಬಾರದು, ಇದು ಸೆಕ್ಯುಲರ್ ಸ್ಪೇಸ್ ಅಂತ ನಿಯಮ ಹೇಳಿಲ್ಲ. ಎಲ್ಲ ಕಂಪ್ಯೂಟರ್ ಇಂಜಿನಿಯರ್ಗಳೂ ಹಣೆ ಮೇಲೆ ಗಂಧಾಕ್ಷತೆ, ತಿಲಕ, ನಾಮಗಳೊಂದಿಗೇ ಕಚೇರಿಗೆ ಹೋಗ್ತಾರೆ. ಹೋಗೋಕೆ ಮೊದಲು ಒಂದೆರಡು ಸಲ ಆದರೂ ದೇವಸ್ಥಾನದ ಹತ್ತಿರ ಕಾರು ನಿಲ್ಲಿಸುತ್ತಾರೆ. ದಾರಿಯುಲ್ಲಿ ದೇವರಿಗೆ ಸಂಬಂಧಪಟ್ಟ ಏನು ಕಂಡರೂ ಒಂದು ಸಲ ಕೈ ಮುಗೀತಾರೆ. ಆಧುನಿಕ ತಂತ್ರಜ್ಞಾನದ ಶಿಕ್ಷಣ ಮತ್ತು ಈ ಬಗೆಯ ಭಕ್ತಿ ಪ್ರದರ್ಶನ ಬಹಳ ವಿಚಿತ್ರವಾಗಿದೆ.
 
ನನಗನ್ನಿಸುವುದು ಸಾಂಸ್ಕೃತಿಕವಾಗಿ ಇದು ಜಾಗತಿಕ ಯಜಮಾನನಿಂದ ಅನುಮತಿಸಲ್ಪಟ್ಟಿದೆ. ಇಲ್ದಿದ್ರೆ ಒಂದು ಅಭ್ಯಾಸ ಇದೆ ನಮ್ಮ ನಿರ್ವಾಹಕ ಸಂಸ್ಕೃತಿಗೆ. ಅದು ಯಾವಾಗಲೂ ಧಣಿಯ ಆದೇಶಗಳನ್ನ ಚಾಚೂ ತಪ್ಪದೆ ಪಾಲಿಸುತ್ತದೆ. ನೀನು ಭಾರತೀಯ ಜುಟ್ಟು ಬಿಡಬಾರದು ಅಂತ ಅಂದೊಡನೆ ಕೂದಲು ಕ್ರಾಪ್ ಮಾಡಿಸಿದ್ದಾರೆ ಒಂದು ಕಾಲದಲ್ಲಿ. ನೀನು ಕೋಟ್ ಹಾಕ್ಕೋಬೇಕು ಅಂದರೆ ಸೆಖೆಯಾದರೂ ಕೂಡ ಕ್ಲೋಸ್ಡ್ ಕಾಲರ್ ಕೋಟ್ ಹಾಕಿದ್ದಾರೆ. ಬಹಳ ವಿಚಿತ್ರಕಾರಿಯಾಗಿರುವಂತಹ ದೈನೇಸೀ ನಿರ್ವಾಹಕ ವರ್ಗ ನಮ್ಮದು. ಇದು ಬಾಲಂಗೋಚಿ ವರ್ಗವಾದ್ದರಿಂದ, ನೀನು ಇಂಗ್ಲಿಷ್ ಕಲಿಬೇಕು ಅಂತ ಅಂದ್ರೆ ಕಷ್ಟ ಬಿದ್ದು ಅವರಿಗಿಂತಲೂ ಚೆನ್ನಾಗಿ ಉಚ್ಛರಿಸುವುದನ್ನ ಕಲಿತುಕೊಂಡಿದ್ದಾರೆ. ಅವರ ಜೀವನದ ಧ್ಯೇಯವೇ ಅದು. ಇಂಗ್ಲಿಷ್ ಕಲಿಯೋದು. ಈಗಲೂ ಕೂಡ. ಅತ್ಯಂತ ಸ್ಪಷ್ಟವಾಗಿ ಇಂಗ್ಲಿಷ್ನ ಮಾತಾಡೋದು ಹೇಗೆ ಅಂತ ಕಲಿಯೋದೇ ಅವರ ಜೀವನದ ಬಹಳ ದೊಡ್ಡ ಗುರಿ.
 
ಮ್ಯಾನೇಜ್ಮೆಂಟ್ ಹುದ್ದೆಗಳು ಸಿಗುತ್ತವೆ ಅಂತ ಗೊತ್ತಾದೊಡನೆ ಇವತ್ತು ಭಾರತದ ತುಂಬ ಅವೇ ಇದ್ದಾವೆ. ಎಂಬಿಎ ಮತ್ತು ಬಿಬಿಎಂ ಮತ್ತು ಎಂಬಿಎ ಕೋಸ್ಗಳು. ಇವನು ಓನರ್ ಅಲ್ಲವೇ ಅಲ್ಲ ಮ್ಯಾನೇಜರ್ ಮಾತ್ರ ತಾನೆ ಇವನು. ಆದ್ದರಿಂದ ಅದಕ್ಕೆ ಬೇಕಾಗಿರುವ ವಿದ್ಯಾರ್ಹತೆಯನ್ನು ಶ್ರದ್ಧೆಯಿಂದ ಕಲೀತಿದಾನೆ. ಜಾಗತಿಕ ಯಜಮಾನನ ಆರ್ಥಿಕತೆ ಮೇಲೆ ಇಷ್ಟು ಅವಲಂಬಿತವಾಗಿರುವ, ಈಪಾಟಿ ಆದೇಶ ಪಾಲಕನಾಗಿರುವ ಇದು ವ್ರತಗಳನ್ನು, ಈ ಯಜ್ಞಗಳನ್ನು ಜಾಸ್ತಿ ಜಾಸ್ತಿ ಮಾಡ್ತಿದೆ. ಅಂದರೆ, ಹೀಗಿರುವುದಕ್ಕೆ ಜಾಗತಿಕ ಯಜಮಾನ ಸಂಸ್ಕೃತಿ ಇಲ್ಲಿರುವಂತಹ ನಿರ್ವಾಹಕ ಯಜಮಾನನಿಗೆ ಅನುಮತಿಯನ್ನು ಕೊಟ್ಟಿದೆ. ನೀನು ದೇಶೀಯವಾಗಿ, ಸ್ಥಳೀಯವಾಗಿ ಈ ರೀತಿಯಾಗಿರುವ ಕಂದಾಚಾರ ಪುನರುತ್ಥಾನವನ್ನು ಮಾಡಬಹುದು. ನಿನ್ನ ಮಾದರಿ ಅನುಸರಿಸುವ ಸಾಮಾನ್ಯ ಜನ ವರ್ಗಗಳು ತಮ್ಮ ಬಡತನ ಮತ್ತು ಭವಿಷ್ಯಹೀನತೆ ನಿವಾರಣೆಗೆ ಈ ಬಗೆಯ ಆಚರಣೆಗಳನ್ನೇ ಮಾಡುತ್ತಾ ಮನಸ್ಸಿಗೆ ಸಮಾಧಾನ ಪಡೆಯುತ್ತಿರಲಿ.
 
ಜಾತಿ, ಧರ್ಮದ ಜಗಳ; ಹುಸಿ ಧಾರ್ಮಿಕ ಶ್ರದ್ಧೆ, ಅತಿರೇಕದ ದೈವಭಕ್ತಿ ಮತ್ತು ಮೌಢ್ಯದ ವ್ರತಾಚರಣೆಗಳನ್ನು ಆಳುವ ಸಂಸ್ಕೃತಿ ಉದ್ದೇಶಪೂರ್ವಕವಾಗಿ ಬೆಳೆಸುತ್ತಿದೆ. ಜಾಗತಿಕ ಯಜಮಾನ ಸಂಸ್ಕೃತಿಗೆ ಈ ಮಾನಸಿಕ ಅವಲಂಬನೆಗಳು ಒಂದು ರೀತಿಯಲ್ಲಿ ಹಾದಿ ಸುಗಮ ಮಾಡುತ್ತಿವೆ. ಭೌತಿಕವಾಗಿ ಜಾಗತಿಕ ಯಜಮಾನ ಸಂಸ್ಕೃತಿ ಒದಗಿಸುವ ಸರಕು ಸಾಧನಗಳನ್ನು ಬಳಸುವುದು, ಮಾನಸಿಕವಾಗಿ ನಿರ್ವಾಹಕ ಸಂಸ್ಕೃತಿ ಪ್ರತಿಪಾದಿಸುವ ಕಂದಾಚಾರಗಳಲ್ಲಿ ಸಮಾಧಾನ ಪಡೆಯುವುದು ಎನ್ನುವಂತಹ ಸನ್ನಿವೇಶ ಇಲ್ಲಿ ನೆಲೆಗೊಳ್ಳುತ್ತಿದೆ. ಹೀಗಿರುವಾಗ ನಾವು ಪರ್ಯಾಯ ಸಂಸ್ಕೃತಿ ನಿರ್ಮಾಣ ಮಾಡುವಂತಹ ಪ್ರಯತ್ನಗಳನ್ನು ಯಾವ ರೀತಿಯಲ್ಲಿ ಕೈಗೊಳ್ಳಬಹುದು? ಈವರೆಗೂ ಈ ದಿಸೆಯಲ್ಲಿ ನಮ್ಮ ವರ್ತಮಾನದಲ್ಲಿ ನಡೆದಿರುವ ಪ್ರಯತ್ನಗಳೇನು?
 
ಈ ಬಗೆಯ ಸಾಂಸ್ಕೃತಿಕ ಯಜಮಾನಿಕೆಯನ್ನು ಪ್ರಶ್ನಿಸುವ ಒಂದು ವಿಧಾನವಾಗಿ ಕೆಲವರು ಅನುಭಾವಿ ಪಂಥಗಳಿಗೆ ಮೊರೆ ಹೋಗುವ ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದಾರೆ. ಅದನ್ನು ನಿರರ್ಥಕ ಅನ್ನಲು ಬರುವುದಿಲ್ಲ. ನಾವೀಗ ಭೌತಿಕವಾದಿಗಳಲ್ಲ. ಅನುಭೋಗವಾದಕ್ಕೆ ಭಿನ್ನವಾದ ಆಧ್ಯಾತ್ಮಿಕ ಚಿಂತನೆಗಳ ಮುಖಾಂತರ ಯಜಮಾನ ಸಂಸ್ಕೃತಿಯನ್ನು ಎದುರಿಸಬೇಕು ಎನ್ನುವವರ ಒಂದು ಪಂಗಡ ಇದೆ. ಇನ್ನೊಂದು ಸ್ಪಿರಿಚುಯಲ್ ಸೋಷಿಯಲಿಸಂ ಅನ್ನುವಂತಹ ತಾತ್ವಿಕತೆಯನ್ನು ಪ್ರತಿಪಾದಿಸುವ ಮುಖಾಂತರ ಈ ಸನ್ನಿವೇಶವನ್ನು ಎದುರಿಸಬೇಕು ಅನ್ನುವವರಿದ್ದಾರೆ.
 
ನಮ್ಮ ಸಮಾಜದಲ್ಲಿ ಅನುಭೋಗವಾದವನ್ನು ತಿರಸ್ಕರಿಸದ ಹೊರತು, ಈ ಅವಕಾಶವಾದವನ್ನಾಗಲೀ ಅಥವಾ ಸಾಮಾಜಿಕ ಮೌಲ್ಯಗಳ ಅಧಃಪತನವನ್ನಾಗಲೀ ನಿವಾರಿಸುವುದು ಬಹಳ ಕಷ್ಟದ ಕೆಲಸ. ಅದಕ್ಕೆ ಸೂಕ್ತ ಪರಿಹಾರವೆಂದರೆ ಗಾಂಧಿ ಮತ್ತು ಆ ಸ್ಕೂಲ್ ಆಫ್ ಥಾಟ್ ನಿಂದ ಬಂದಿರುವ ಚಿಂತನೆಗಳು ಅಂತ ಪ್ರತಿಪಾದಿಸುವವರಿದ್ದಾರೆ. ಇನ್ನು ಕೆಲವರು ಆದಿವಾಸಿ ಬುಡಕಟ್ಟು ಸಮುದಾಯಗಳಲ್ಲಿರುವ ಕೆಲವು ಮಾದರಿಗಳನ್ನು ಅದನ್ನ ನಮ್ಮ ಸಾಮಾಜಿಕ ಸಂಸ್ಥೆಗಳಾಗಿ ನಾವು ಅಳವಡಿಸಿಕೊಳ್ಳುವುದು ಸೂಕ್ತ ಎಂದು ಸೂಚಿಸುತ್ತಿದ್ದಾರೆ. ಏಕೆಂದರೆ ಅಲ್ಲಿರುವಂತಹ ಪ್ರಜಾತಂತ್ರವೂ, ಸಮಾನತಾಭಾವ ಮತ್ತು ಸೋದರ ಭಾವಗಳು ಈ ಯಜಮಾನ ಸಂಸ್ಕೃತಿಗೆ ಪರ್ಯಾಯವಾಗಬಲ್ಲವು ಎಂಬುದು ಅವರ ಗ್ರಹಿಕೆ.
 
ಕೆಲವು ಸಾಮಾಜಿಕ ಹೋರಾಟದ ಗುಂಪುಗಳು ಆದಿವಾಸಿ ಬುಡಕಟ್ಟು ಜೀವನದ ಮೌಲ್ಯ ಪ್ರತಿಪಾದನೆಯನ್ನು ಬಹಳ ದೊಡ್ಡ ಅಸ್ತ್ರವಾಗಿ ಬಳಸುತ್ತಾ ಇವೆ. ಕೆನ್ಯಾದಲ್ಲಿ, ಹವಾಯಿನಲ್ಲಿ ಮುಂತಾದ ಕಡೆ ಈ ಪ್ರಯೋಗಗಳು ನಡೆಯುತ್ತಿವೆ. ತಮ್ಮ ಹಳೆಯ ಬುಡಕಟ್ಟು ಜೀವನದ ಅನುಭವಗಳನ್ನೇ ಹೊಸ ಕಾಲದ ಸಾಮಾಜಿಕ ಸಮಾನತೆ ಮತ್ತು ಸರಳ ಸಂತೃಪ್ತಿಯ ಬದುಕಿಗೆ ಮಾದರಿಯಾಗಿ ಭಾವಿಸುತ್ತಿದ್ದಾರೆ. ಇನ್ನೂ ಕೆಲವರು ತೀವ್ರಗಾಮಿ ಎಡಪಂಥೀಯ ಹೋರಾಟದ ರಾಜಕೀಯದ ಮುಖಾಂತರವಾಗಿ ಇದನ್ನ ಪ್ರತಿಭಟಿಸುತ್ತಿರುವುದನ್ನು ಕಾಣುತ್ತಾ ಇದ್ದೀವಿ. ಅಹಿಂದ ವರ್ಗಗಳ ಪ್ರಜಾಪ್ರಭುತ್ವ ಅನ್ನುವಂತಹ ಒಂದು ವಿಧಾನದ ಮೂಲಕ ಈ ಏಕಾಕಾರಿ ಸಂಸ್ಕೃತಿಯನ್ನ ಮತ್ತು ಕಂದಾಚಾರ ಆಧಾರಿತವಾಗಿರುವ ಮೇಲ್ಜಾತಿ ಆಳುವ ಸಂಸ್ಕೃತಿಯನ್ನ ವಿರೋಧಿಸುವುದಕ್ಕೆ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.
 
ಇವೆಲ್ಲ ಎಷ್ಟರಮಟ್ಟಿಗೆ ಯಶಸ್ವಿಯಾಗಿವೆ? ಎಷ್ಟರಮಟ್ಟಿಗೆ ಶಕ್ತಿಯುತವಾಗಿವೆ? ಅಥವಾ ಎಷ್ಟರಮಟ್ಟಿಗೆ ನಾವೂ ಕೂಡ ಕ್ರಮೇಣ ಕೈಸೋತು ಆಳುವ ಸಂಸ್ಕೃತಿಯ ಒಂದು ಭಾಗವಾಗುವುದಕ್ಕೆ ಅಪೇಕ್ಷೆಗಳನ್ನ ವ್ಯಕ್ತಪಡಿಸುತ್ತಾ ಇದ್ದೀವಿ ಅನ್ನುವುದನ್ನ ಮತ್ತಷ್ಟು ಸಾರಾಸಗಟಾಗಿ ಯೋಚನೆ ಮಾಡೋದು ಮತ್ತು ಅದಕ್ಕೋಸ್ಕರವಾಗಿ ನಮ್ಮ ಹತ್ತಿರ ಇರುವಂತಹ ಮಾದರಿಗಳೇನಿವೆ ಅನ್ನೋದನ್ನು ಪರಿಶೀಲಿಸೋದು ಬಹಳ ಅಗತ್ಯ. ಏಕೆಂದರೆ ಯಾವುದೇ ಏಕಾಕಾರಿ ಮಾದರಿಗಳನ್ನು ನಾವು ಇದಕ್ಕೆ ಪರ್ಯಾಯವಾಗಿ ಬಳಸುವುದು ಕಷ್ಟ. ಕನ್ನಡ ಸಾಹಿತ್ಯದಲ್ಲಿ ಮತ್ತು ಸಾಂಸ್ಕೃತಿಕ ರಂಗದಲ್ಲಿ ಸಬಾಲ್ಟ್ರನ್ ಅಧ್ಯಯನಗಳ ಒಂದು ಪ್ರವೃತ್ತಿ ಶುರುವಾಗಿದೆ. ನಿರ್ಲಕ್ಷಿತ ವಲಯದ ಶ್ರದ್ಧಾ ಕೇಂದ್ರಗಳು ಮತ್ತು ಸಾಂಸ್ಕೃತಿಕ, ಆಧ್ಯಾತ್ಮಿಕ ಬಂಡುಕೋರ ಸಂತರನ್ನು ಪ್ರೀತಿಸುವ, ಆರಾಧಿಸುವ, ಮೆಚ್ಚಿಕೊಳ್ಳುವ ಆ ಮುಖಾಂತರವಾಗಿ ಈ ಅತ್ಯಾಧುನಿಕತೆಯ ಸಾಂಸ್ಕೃತಿಕ ದಾಳಿಗೆ, ಏಕಾಕಾರಿತ್ವದ ಪ್ರವೃತ್ತಿಗಳಿಗೆ ವಿರೋಧವೊಡ್ಡುವುದು.
 
ಯಜಮಾನ ಸಂಸ್ಕೃತಿಯ ಅಧ್ವಾನಗಳಿಗೆ ವಿರೋಧವಾಗಿ ಮಂಟೇಸ್ವಾಮಿ, ಮಲೆ ಮಹದೇಶ್ವರ ಮುಂತಾದ ಪಂಥಗಳ ಜನಪರ ಅಂಶಗಳು ದೇಸೀ ನೆಲೆಗಳ ಪರ್ಯಾಯಗಳಾಗಿ ಒದಗಬಹುದೇ ಅನ್ನುವಂತಹ ಅಧ್ಯಯನಶೀಲ ಹುಡುಕಾಟಗಳು ಆರಂಭವಾಗಿವೆ. ಪ್ರಪಂಚವ್ಯಾಪಿಯಾಗಿರುವ ಏಕಾಕಾರಿ ಸಂಸ್ಕೃತಿಯನ್ನು ಸೃಷ್ಟಿ ಮಾಡಬೇಕು ಅಂತ ಜಾಗತಿಕ ಯಜಮಾನ ಸಂಸ್ಕೃತಿ ಪ್ರಯತ್ನಪಟ್ಟಾಗ, ಇದ್ದಕ್ಕಿದ್ದಂತೆ ಮರೆತ, ನಿರ್ಲಕ್ಷಿತ ನೆಲೆಗಳ ಎಳೆಗಳಿಂದ ಸ್ಫೂರ್ತಿಯನ್ನು ಪಡೆಯುವ ಮೂಲಕ ಅನೇಕಾಂತಗಳನ್ನು ಸವಾಲಾಗಿ ಒಡ್ಡುವುದು ಕೂಡ ಪರಿಣಾಮಕಾರಿಯಾಗಬಲ್ಲದು. ಅಂತಹ ನಿರ್ಲಕ್ಷಿತ ನೆಲೆಗಳ ಸಂಸ್ಕೃತಿಗಳಿಗೆ ಕೆಲವು ಸಲ ಸೂಕ್ತ ಪರಿಷ್ಕರಣೆಯನ್ನು, ನಿರ್ವಚನವನ್ನು ಒದಗಿಸಬೇಕಾಗಬಹುದು.
 
ಬಹಳ ಸಲ ಅದು ಅದರಲ್ಲಿ ಈ ಮೊದಲೇ ಅಸ್ತಿತ್ವದಲ್ಲಿರುತ್ತದೋ ಇಲ್ಲವೋ ಗೊತ್ತಿಲ್ಲ. ನಮ್ಮ ಅಗತ್ಯಗಳು ಮತ್ತು ಅಭೀಪ್ಸೆಗಳು ಅಲ್ಲಿ ಹೊಸ ನಿರ್ವಚನಗಳಾಗಿ ವ್ಯಕ್ತಗೊಂಡರೆ ಆಶ್ಚರ್ಯವಿಲ್ಲ. ಆದರೆ ಆ ಬಗೆಯ ಹೊಸ ನಿರ್ವಚನಗಳನ್ನು ಧರಿಸುವ ಸತ್ವ ಅಂತಹ ನಿರ್ಲಕ್ಷಿತ ನೆಲೆಯ ಸಾಂಸ್ಕೃತಿಕ ಮಾದರಿಗಳಿಗೆ ಇರುತ್ತದೆ ಎನ್ನುವುದೇ ನಮ್ಮ ಆಶಾವಾದಕ್ಕೆ ಕಾರಣವಾಗಬಲ್ಲದು.
 
ಇವೆಲ್ಲವೂ ಕೂಡ ಈಗ ಇರುವಂತಹ ದಿಕ್ಕೆಡಿಸುವಂತ ಆಳುವ ಸಂಸ್ಕೃತಿಗೆ ವಿರೋಧವಾಗಿ ನಡೆಯುತ್ತಿರುವ ವರ್ತಮಾನದ ಪ್ರಯತ್ನಗಳು. ಆದರೆ ಆ ಪ್ರಯತ್ನಗಳಲ್ಲಿ ಎಷ್ಟರಮಟ್ಟಿಗೆ ಯಶಸ್ಸಿದೆ ಮತ್ತು ಎಷ್ಟರಮಟ್ಟಿಗೆ ನಮಗೆ ಫಲ ಕಾಣಿಸುತ್ತಾ ಇದೆ? ನಿಜವಾಗಿಯೂ ಎಷ್ಟರಮಟ್ಟಿಗೆ ಉಳಿವಿನ ಸಾಧ್ಯತೆ ಕಾಣಿಸುತ್ತಾ ಇದೆ? ಅಥವಾ ಏನೂ ಮಾಡೋದಕ್ಕೆ ಸಾಧ್ಯ ಇಲ್ಲ ಅನ್ನುವಂತ ಹತಾಶ ಪರಿಸ್ಥಿತಿಗೆ ನಾವು ಈಗಾಗಲೇ ತಲುಪಿಬಿಟ್ಟಿದ್ದೀವಾ? ಎಂಬುದೆಲ್ಲವನ್ನೂ ಕೂಡ ಯೋಚನೆ ಮಾಡಬೇಕಾದ ಸಂದರ್ಭ ಇದು.
ಮೌಲ್ಯಗಳಲ್ಲಿ ಎಷ್ಟು ಅವಕಾಶವಾದ, ಮತ್ತು ಅಧಃಪತನ ಬಂದಿದೆಯೆಂದರೆ ಇವತ್ತು ಅಕ್ರಮ ಹಣಗಳಿಕೆ ಅನ್ನುವಂತಾದ್ದು ಮತ್ತು ಆ ಮೂಲಕವಾಗಿ ಹಣ ಬಂದಿದ್ದು ತಪ್ಪು ಅನ್ನುವಂತಹ ಅಭಿಪ್ರಾಯವೇ ಕಣ್ಮರೆಯಾಗಿರುವಂತಿದೆ. ಶ್ರೀಮಂತರಾಗುವುದು ಮುಖ್ಯ. ಸಿಕ್ಕಾಪಟ್ಟೆ ಹಣವಿರುವವರನ್ನು ಪ್ರಶ್ನಿಸುವವರು, ವಿಮರ್ಶಿಸುವವರು ಅಥವಾ ದೂರ ಇಡುವವರು ಯಾರೂ ಇಲ್ಲ ಅನ್ನುವ ಹಾಗೆ ಆಗುತ್ತಿರುವಂತಿದೆ. ಬೇಕಾದಷ್ಟು ಹಣ ಇದೆ ಅನ್ನೋದೊಂದೇ ಮೌಲ್ಯ ಆಗಿರುವುದರಿಂದ ಹಿಂದುಳಿದ ವರ್ಗಗಳು, ದಲಿತ ವರ್ಗಗಳು ಕೂಡ ಅದೇ ಹಾದಿ ಹಿಡಿಯುತ್ತಿವೆಯೇನೋ ಅನ್ನುವ ಆತಂಕ ಕಾಡುತ್ತಿರುವುದರಿಂದ, ಅದು ಆಳುವ ಸಂಸ್ಕೃತಿಗೆ ಪರೋಕ್ಷವಾಗಿರುವ ಸಹಮತವನ್ನು ತೋರಿಸಿದಂತಾಗಿಬಿಡುತ್ತಿದೆಯೆ ಎಂಬ ಭಯವೂ ಹುಟ್ಟುತ್ತಿದೆ ಅಂತ ನಾನು ಹೇಳಿದರೆ ಉತ್ಪ್ರೇಕ್ಷೆಯ ಮಾತಾಡುತ್ತಿದ್ದೇನೆ ಎಂದು ನೀವು ನನ್ನನ್ನು ಆಕ್ಷೇಪಿಸಲಾರಿರಿ ಅಂದುಕೊಳ್ಳುತ್ತೇನೆ.
 
(ಮುಗಿಯಿತು)

 

 

 
 
 
 
 
 
 
 
     
 
 
 
 
 
Copyright © 2011 Neemgrove Media
All Rights Reserved