ಸಂಪಾದಕರಿಂದ, 
ಸೆಪ್ಟೆಂಬರ್ ೨೦೧೧
 
ಎಲ್ಲೋ ಹುಟ್ಟಿದ ಕ್ರಾಂತಿಕಿಡಿ ಇಷ್ಟು ಸಾಂಕ್ರಾಮಿಕ ಅಂತ ಗೊತ್ತಿರಲಿಲ್ಲ! ಅಣ್ಣ ಹಜಾರೆಯವರ ಸಂಗ್ರಾಮಕ್ಕೆ ಶೈನಿಂಗ್ ಇಂಡಿಯಾ ಪ್ರತಿಕ್ರಿಯಿಸಿದೆ. ಭ್ರಷ್ಟರು-ಭ್ರಷ್ಟಾಚಾರ ಬೇಡ ಅಂತ ಜನ ತೀರ್ಮಾನ ತಿಳಿಸಿದ್ದಾರೆ. ಸರ್ಕಾರವೂ ಮೊದಲ ಹೆಜ್ಜೆ ಇಟ್ಟಿದೆ. ಹಜಾರೆ ಕೊಟ್ಟಿರುವ ಕರಡನ್ನೇ ಮಕ್ಕಿಕಾಮಕ್ಕಿ ಒಪ್ಪಿಕೊಳ್ಳುವುದೋ ಅದಕ್ಕೆ ಪ್ರಜಾಪ್ರಭುತ್ವದ ಮೌಲ್ಯಗಳನ್ನಿಟ್ಟುಕೊಂಡು ತಿದ್ದುಪಡಿ ಮಾಡಬೇಕಾಗಬಹುದೋ ಮುಂದೆ ತೀರ್ಮಾನವಾಗಬೇಕು. ಹಜಾರೆಯವರದ್ದು ಅಥವಾ ಅವರನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತಿರುವ ಶಕ್ತಿಗಳದ್ದು ಇನ್ನೊಂದು ಬಗೆಯ ಡಿಕ್ಟೇಟರ್ಶಿಪ್ ಆಗಬಾರದು. ಒಟ್ಟಿನಲ್ಲಿ ಒಂದು ಒಳ್ಳೆಯ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಜಾರಿಗೆ ಬರಬೇಕು. ಇಂಡಿಯಾ ನಿಜವಾಗಲೂ ಶೈನ್ ಆಗಲು ಬೇಕಾಗುವ ಮೊದಲ ಪಾಲಿಶ್ ಇದು!
 
ಜೀವನದ ಪರ್ಪಸ್ ಏನು? ಹುಟ್ಟಿ ಓದಿ ಸೆಟಲ್ ಆದಮೇಲೆ ಮದುವೆಯಾಗಿ ಮಕ್ಕಳಾಗುತ್ತವೆ. ಕೆಲಸದ ಜೊತೆಯೇ ಮಕ್ಕಳಿಗೆ ಊಟ ಓದು, ಅಲ್ಪ ಸ್ವಲ್ಪ ಅವರಿವರಿಗೆ ಸಹಾಯ, ಕಾರು-ಸೈಟು-ಮನೆ-ದೇಶ ಸುತ್ತುವುದು, ಹಣ, ಗುರುತು ಪರಿಚಯದವರ-ಸಹೋದ್ಯೋಗಿಗಳ ನಡುವೆ ಒಂದು ಸಣ್ಣ ಹೆಸರು, ಅದೃಷ್ಟ ಇದ್ದರೆ ಸ್ವಲ್ಪ ಜನರಿಗೆ ಉದ್ಯೋಗ ಕೊಡುವುದು-ಇದು ಬಿಟ್ಟರೆ ಲೈಫ್ ನ ಉದ್ದೇಶ ಏನು? ಕೆಲವು ಸಹೃದಯಿ ಸಾಫ್ಟ್ ವೇರ್ ಮಿತ್ರರು ಸೇರಿ ಚರ್ಚೆ ನಡೆಸುತ್ತಿದ್ದಾರೆ. ಅವರಿಗೆ ಉತ್ತರ ಗೊತ್ತಾದಾಗ ನಿಮ್ಮಲ್ಲೂ ಹಂಚಿಕೊಳ್ಳುತ್ತೇವೆ.
ಸೋಮಾಲಿಯಾದ ಜನರು ಅಳಿಸಿ ಹೋಗುವ ಸ್ಥಿತಿಯಲ್ಲಿದ್ದಾರೆ. ಕೊಡುವ ಮನಸ್ಸಿರುವ ಇಲ್ಲಿಯವರು ಹಿಂದೆ ಮುಂದೆ ನೋಡುತ್ತಿದ್ದಾರೆ. ’ಕೊಟ್ಟು ಕೊಟ್ಟೂ ಸಾಕಾಗಿದೆ, ನಮಗೇ ಕಷ್ಟವಾಗುತ್ತಿದೆ. ಯಾಕೆ ಯಾವಾಗಲೂ ವೆಸ್ಟರ್ನ್ ಜನರೇ ಕೊಡಬೇಕು!? ಇಟ್ ಇಸ್ ಅನ್ ಫೇರ್...’ ಮಕ್ಕಳಿಲ್ಲದ ಹಿರಿಯ ಅಮೆರಿಕನ್ ಗೆಳತಿಯೊಬ್ಬರು ಕೋಪಿಸಿಕೊಂಡಂತೆ ಹೇಳುತ್ತಿದ್ದರು. ಇಂಡಿಯಾ ಆಫ್ರಿಕಾದ ಗಣಿ-ಕಾಡುಗಳಿಂದ ಜನರಿಂದ ಜೀವನವೂ ಸೇರಿದಂತೆ ಸರ್ವಸ್ವನ್ನೂ ಹೀರುವಾಗ, ಆ ಸ್ವತ್ತಿನಿಂದ ಸಾಮ್ರಾಜ್ಯ ಕಟ್ಟಿಕೊಳ್ಳುವಾಗ, ಹೀರಿ ಹೀರಿ ಸಾಕಾಗಿದೆ ಅಂತ ಯಾಕೆ ಯಾರಿಗೂ ಅನ್ನಿಸಲಿಲ್ಲ? ಎಂದಾಗ ’ಕರ್ಮ’ ವನ್ನು ’ಪ್ರಾಕ್ಟೀಸ್’ ಮಾಡುವ ಆಕೆ ವಿಚಲಿತರಾಗಿದ್ದರು. ಅವರನ್ನು ವ್ಯಸ್ತ ಮಾಡುವ ಉದ್ದೇಶ ಇರಲಿಲ್ಲ. ಸ್ವಲ್ಪ ಕೊಟ್ಟರೆ ಕಳೆದುಕೊಳ್ಳುವುದೇನು? ಪ್ಲೀಸ್ ನೀವೂ ಮನಸ್ಸು ಮಾಡಿ.
 
 
 
ಆಗಸ್ಟ್ ೨೦೧೧
ರಾಜನ ಪಾರ್ಟು ಹಾಕಿದ ಪಾತ್ರಧಾರಿಯೊಬ್ಬ ಕಂಠಮಟ್ಟ ಕುಡಿದು ಬಂದು, ಹೇಳಿಕೊಟ್ಟ ಡೈಲಾಗು-ಕುಣಿತ-ಹಾಕಿದ್ದ ಪಾರ್ಟನ್ನೂ ಮರೆತು, ಬೇಕಾಬಿಟ್ಟಿ ರಂಗದ ಮೇಲೆಲ್ಲಾ ಅಬ್ಬರವಾಡಿ, ಕಡೆಗೆ ಮುಖ-ಮುಸಡಿ ನೋಡದೆ ನಾಟಕದ ಭಾಗವತರಿಗೆ, ತಾಳ ಮದ್ದಳೆಯವರಿಗೆ, ಸಹ ಕಲಾವಿದರಿಗೆ ಸಿಕ್ಕಿದರಲ್ಲಿ ಚಚ್ಚಿ, ಅಟ್ಟಾಡಿಸಿ ಹೆದರಿಸುತ್ತಾ, ಆಟ ಮುಗಿಯುವ ಮೊದಲೇ ರಂಗದಿಂದ ಹೊರ ಬಿಸಾಕಿಕೊಂಡವನಂತೆ--ಕರ್ನಾಟಕದ ರಾಜಕೀಯ ನಾಟಕರಂಗದಿಂದ ಯಡ್ಯೂರಪ್ಪ ಒಂಚೂರೂ ಇಷ್ಟವಿಲ್ಲದೆಯೇ ನಿರ್ಗಮಿಸಿದ್ದಾರೆ. ಜನ ಸೀಟಿ-ಚಪ್ಪಾಳೆ ಹೊಡೆಯುವುದೋ, ಕಾಲಲ್ಲಿರುವುದನ್ನು ಅವರ ಹಿಂದೆ ಬಿಸಾಕುವುದೋ ಗೊತ್ತಾಗದೆ, ರಂಗದ ಮೇಲೆ ನೆಕ್ಸ್ಟ್ ಬರುವ ಪಾತ್ರಧಾರಿಯ ನಿರೀಕ್ಷೆ ಮಾಡುತ್ತಿದ್ದಾರೆ. ತೆರೆಯ ಹಿಂದೆ ಬಿಸಾಡಿಸಿಕೊಂಡಿರುವ ಮತ್ತ ಪಾರ್ಟಿಯ ಅಮಲಿನ ಕೂಗಾಟ ಇನ್ನೂ ಕೇಳಿಸುತ್ತಿದೆ; ಅನಾಮತ್ ಹಂಗೇ ತೆರೆಗೆ ನುಗ್ಗಿದರೂ ಅಚ್ಚರಿ ಪಡಬೇಕಿಲ್ಲ. ಇರಲಿ. ಅವರ ರಾಜಕಾರಣದಾತ್ಮಕ್ಕೆ ಶಾಂತಿ ಸಿಗಲಿ.
 
೫೦ ರುಪಾಯಿ ಸಂಪಾದನೆ, ೫೦೦ ರುಪಾಯಿ ಖರ್ಚು. ಮಕ್ಕಳ ಟ್ಯೂಷನ್, ಬೆಂಡು ಬತ್ತಾಸು ನಿಲ್ಲಿಸಬೇಕು, ಅಜ್ಜಿಯ ಗೋಟಡಿಕೆ-ವಿಳ್ಳೆದೆಲೆ ಇನ್ನುಸಾಕು. ಮನೆಮಂದಿಯ ಜಗಳ ತಡೆಯಬೇಕು. ಹಾಗೇ ಸಾಲ ಕೊಟ್ಟವರೆದುರು ಸಭ್ಯನಾಗಿ ಉಳಿಯಬೇಕು. ಅಮೆರಿಕಾದ ರಾಜ ಪಾಡು ಪಡುತ್ತಿದ್ದಾರೆ. ಜನ ಅಲ್ಲೂ, ಇಲ್ಲೂ, ಮತ್ತೆಲ್ಲೋ ನೋಡುತ್ತಲೇ ಇದ್ದಾರೆ. ಕೊಟ್ಟಿರುವ ಕಾಸು ವಸೂಲಿಯಾಗುವವರೆಗೂ, ಸಮಯ ಮುಗಿಯುವವರೆಗೂ ಜನರದ್ದು ಕೂತು-ಕಾದು ನೋಡುವುದೇ ಕೆಲಸವಾಗಿಬಿಟ್ಟಿದೆ.
 
ಲಾನ್ ಗೆ ನೀರು ಹಾಕಿ, ಕಳೆ ಕಿತ್ತು, ಮೋವ್-’ಮೇಂಟೇನ್’ ಮಾಡಿ ಬೇಜಾರಾದ ನಮ್ಮ ನೆರೆಯವರು ಇಡೀ ಲಾನನ್ನು ತರಿದು ಹಾಕಿ ಅಲ್ಲಿಗೆ ಪ್ಲಾಸ್ಟಿಕ್-ಸಿಲ್ಕ್ ನ ನಕಲಿ ಲಾನ್ ಅನ್ನು ಹಾಸಿ ಬಿಟ್ಟಿದ್ದಾರೆ! ಇದೂ ಇತ್ತಾ? ಗೊತ್ತಿರಲಿಲ್ಲ. ಈಗ ಕಳೆ ಇಲ್ಲ, ಕೆಲಸ ಇಲ್ಲ, ನೀರು ಖರ್ಚಿಲ್ಲ, ಹುಳ ಹುಪ್ಪಟೆಗಳಿಗೆ ಆಶ್ರಯ ಇಲ್ಲ, ನೈಜತೆಯಿಲ್ಲ. ಆದರೂ ವರ್ಷವಿಡೀ ನಳನಳಿಸುವ ಹಸಿರು. ಇದೆಂಥ ಸೌಂದರ್ಯ? ಧನ್ಯತೆ?! ಜೀವನ ಅಚ್ಚರಿ ಪಡಿಸುವುದನ್ನೇ ನಿಲ್ಲಿಸೋದಿಲ್ಲ!
 
 
 
 
 
 
 
ಜುಲೈ, ೨೦೧೧ 
ಆಯಾಮ ಮತ್ತೊಮ್ಮೆ ತೆರೆಮರೆಯಲ್ಲುಳಿದುಬಿಟ್ಟಿತ್ತು. ನಿರೀಕ್ಷಿಸಿದವರು ಕ್ಷಮಿಸಬೇಕು. ಊರಿಗೆ ಹೋದಾಗಲೆಲ್ಲ ನಾವು ಓಯಸಿಸ್ ಕಂಡ ಒಂಟೆಯಂತಾಗಿ ಬಿಡುತ್ತೇವೆ. ಸ್ಪಂಜಿನಂತೆ, ಪ್ರೀತಿಸುವವರಿಂದ ಸಿಗುವ ಪುಡಿ ಪುಡಿ ಕ್ಷಣಗಳ ಸಂತೋಷ, ದುಃಖ, ಕೋಪ, ತಾಪ, ಮುದ್ದು, ಮುನಿಸುಗಳನ್ನೆಲ್ಲಾ ಪೂರ್ತಿ ಹೀರಿಕೊಂಡು ಬರುವ ಹುಚ್ಚು; ಇನ್ನಷ್ಟು ತಿಂಗಳಿಗೆ ದಿನಸಿ ಬೇಕಲ್ಲಾ! ತಲೆ ಕೆಲಸ ಮಾಡುವುದೇ ಇಲ್ಲ; ಬರೀ ಗುಟುಕರಿಸುವುದೇ...ಸಮಯ ಹಾರುವುದೇ ಕಾಣುವುದಿಲ್ಲ. ಇಲ್ಲಿನ ರುಟೀನಿಗೆ ಅಲ್ಪವಿರಾಮ ಹಾಕಿ ಹಬ್ಬ-ಜಾತ್ರೆಗೆ ಬಂದ ಅನುಭವ.
 
ಯೂರೋಪ್ ನ ಹಲವಾರು ದೇಶಗಳು ಆರ್ಥಿಕ ಮುಗ್ಗಟ್ಟಿನಿಂದ ನಿಗರಾಡುತ್ತಿವೆ. ಇತ್ತ ಜರ್ಮನಿ ತನ್ನ ಹೆಸರಿನೊಟ್ಟಿಗೇ ನುಗ್ಗಿ ಬರುವ ಯುದ್ಧ-ಕ್ರೌರ್ಯದಿತಿಹಾಸದ ಕಪ್ಪು ನೆರಳನ್ನು ತಿಳಿ ಮಾಡಿಕೊಳ್ಳಹೊರಟಿದೆ. ಜರ್ಮನಿಯ ಜನ ಗೆದ್ದಿದ್ದಾರೆ. ನ್ಯೂಕ್ಲಿಯರ್ ಶಕ್ತಿಯನ್ನು ಇನ್ನು ಹತ್ತು ವರ್ಷದೊಳಗೆ ನಮ್ಮ ನೆಲದಿಂದ ಸ್ವಚ್ಚವಾಗಿ ಗುಡಿಸಿಹಾಕುತ್ತೇವೆ ಎಂದು ಪ್ರಮಾಣ ಮಾಡಿದ್ದಾರೆ. ೨೦೧೧ ರಿಂದ ೨೦೧೩ರ ಸಮಯದಲ್ಲಿ, ಈ ಬಾರಿ ಉಗ್ರವಾಗಿ ಆಗಲಿದೆಯೆಂದು ಹೇಳಲಾಗುತ್ತಿರುವ ಸೋಲಾರ್ ಫ್ಲೇರ್ಸ್ (ಉಗ್ಗಲಿರುವ ಸೂರ್ಯನ ತೀಕ್ಷ್ಣ ಜ್ವಾಲೆಗಳು) ಅನ್ನು ವೈಜಾನಿಕವಾಗಿ ಗಮನಿಸಿ, ಜ್ನಾನ ಹೆಚ್ಚಿಸಿಕೊಳ್ಳಿ, ಹಾಗೇ ಎಚ್ಚರದಿಂದಿರಿ ಅಂತ ಖಗೋಳ ಭೌತ ಶಾಸ್ತ್ರಜ್ನ, ವಿಜ್ನಾನಿ ಮಿಚಿಯೋ ಕಾಕು ಕಾಳಜಿಯಿಂದ ಎಚ್ಚರಿಸಿದ್ದಾರೆ.
 
ರಾಜಕೀಯ ಪ್ರಪಂಚ ದಿನನಿತ್ಯ ಸಾಂಗವಾಗಿ ನಡೆಯಲು ಹಣ, ಪೆಟ್ರೋಲ್, ಪವರ್, ಶೇರ್ ಮಾರ್ಕೆಟ್, ಯುದ್ಧ, ಬೇಲ್ ಔಟ್, ಯೂರೋ-ಡಾಲರ್ ಗಳ ತಿಕ್ಕಾಟಗಳು ಸಾಕು. ಅದು ಗಂಡು ಪ್ರಪಂಚ (ಗಂಡಸರದ್ದೇನಲ್ಲ!). ಜೀವ-ಜೀವಿಗಳ, ಮನ-ಮನೆಯ, ಭಾವ ಭಾವನೆಗಳ ಪ್ರಪಂಚ ಸಾಂಗವಾಗಿ ನಡೆಯಬೇಕಾದರೆ?? ಇಷ್ಟು ಸಾಕು. ಎಂದು ತಿಳಿಸಿಬಿಡುವ ಒಂದು ಪಟ್ಟಿಯ ಹುಡುಕಾಟದಲ್ಲಿದ್ದೇವೆ. ನಿಮ್ಮಲ್ಲಿದ್ದರೆ ಪ್ಲೀಸ್ ಕಳಿಸಿಕೊಡಿ...
ಪ್ರೀತಿಯಿರಲಿ.
 
 
 
 
 
 
 
ಮೇ, ೨೦೧೧
ಗಡ್ಡಾಫಿ ನ್ಯಾಟೋದ ಧಾಳಿಗೆ ಕೊಂಚ ತಗ್ಗಿ ಬಿಳಿ ಬಾವುಟ ಹಾರಿಸಿದರೆ ನ್ಯಾಟೋ ವಾಯು ಪ್ರಹಾರವೊಂದರಲ್ಲಿ ಗಡಾಫಿಯ ಕಿರಿಯ ಮಗ ಮತ್ತು ಮೂರು ಪುಟ್ಟ ಮೊಮ್ಮಕ್ಕಳನ್ನು ಕೊಂದು ಹಾಕಿದೆ. ನ್ಯಾಯಕ್ಕಾಗೇ ಎಲ್ಲ ಮಾಡುತ್ತೇನೆನ್ನುವ ಸೋಗಿನ ನ್ಯಾಟೋಗೆ ಶಿಕ್ಷೆ ವಿಧಿಸುವವರ್ಯಾರು?! ಅಮೆರಿಕಾಗೆ ಮತ್ತೆ ಗಡಾಫಿ ಲಿಬಿಯಾದಲ್ಲೇ ಇರುವುದು ಬೇಡ. ಈಗಾಗಲೇ ಪೆಟ್ರೋಲ್ ಬೆಲೆ ದಾಖಲೆ ಮಟ್ಟದಲ್ಲಿ ಏರುತ್ತಾ ಜನರಿಗೆ, ರಾಜಕಾರಣಿಗಳಿಗೆ ಸಿಕ್ಕಾಪಟ್ಟೆ ಬಿಸಿ ಮುಟ್ಟಿಸಿದೆ. ಡಾಲರ್ ಬೆಲೆಯೂ ಅಮೆರಿಕನ್ ಎಕಾನಮಿಯಂತೆಯೇ ಜಾರುಬಂಡಿ ಇಳಿಯುತ್ತಿದೆ, ಇನ್ನು ಡಾಲರ್ ನಂಬಿದರೆ ಪ್ರಯೋಜನವಿಲ್ಲ ಅಂತ ಹೂಡುವವರು ಚಿನ್ನ ಬೆಳ್ಳಿ ಪ್ಲಾಟಿನಂ ಬೆನ್ನು ಹತ್ತಿದ್ದಾರೆ. ಅವೂ ಜನಸಾಮಾನ್ಯರ ಕೈ ತಪ್ಪಿಸಿಕೊಂಡು ಏರುತ್ತಲೇ ಇವೆ. ಇನ್ನು ಸಧ್ಯದಲ್ಲೇ ಪೆಟ್ರೋಲ್ ನ ಸಮಸ್ಯೆ ಸ್ವಲ್ಪ ಇಳಿಯಬೇಕು...ಅದಕ್ಕೆ ಗಡಾಫಿ ಮಣಿಯಲೇ ಬೇಕು...ಇದು ಪ್ರಬಲರ ಪ್ಲಾನ್.

ಚೆರ್ನೊಬಿಲ್ ನ ಪರಮಾಣು ದುರಂತವಾಗಿ ೨೫ ವರ್ಷಗಳಾದರೂ, ಇನ್ನೂ ಆ ಜಾಗದಲ್ಲಿ ವಿಕಿರಣದ್ದೇ ಆಟಾಟೋಪ. ಅಂಥ ಸಾಮರ್ಥ್ಯದ ಶತ್ರುವನ್ನು ನಾವೇ ಸೃಷ್ಟಿಸಿಕೊಂಡು ಮಡಿಲಲ್ಲಿಟ್ಟುಕೊಂಡು ಸಾಕುತ್ತಿದ್ದೇವೆ! ನಾವು ನಿಜಕ್ಕೂ----!

ಊರು ಬೇರುನಲ್ಲಿ ಕಾಣುತ್ತಿರುವ ಏನ್ಷಿಯಂಟ್ ಮುಖಗಳನ್ನು ನೀವು ಅದೆಲ್ಲಿಂದ ಹುಡುಕಿದಿರಿ?! ಅಂತ ಪರಿಚಿತರೊಬ್ಬರು ಅಚ್ಚರಿಯಿಂದ ಕೇಳಿದರು. ನಮಗೆ ಶಾಕ್ ಆಯಿತು. ಫಳಫಳ ’ಶೈನ್’ ಆಗುತ್ತಿರುವ ಇಂಡಿಯಾದ ಬಟ್ಟ ಬುಡದಲ್ಲಿ ಬೇರಿಗೆ ನೀರು-ಪೋಷಣೆ ಒದಗಿಸುತ್ತಾ, ಬಿಸಿಲಿನಲ್ಲಿ ಬೇಯುತ್ತಾ, ಹಾಡೋ ಪಾಡೋ ಹೇಳಿಕೊಳ್ಳುತ್ತಾ, ತಾವಿರುವ ಸ್ಥಿತಿಗೆ ಹಳಿದುಕೊಳ್ಳುತ್ತಾ, ಹುಚ್ಚು ಓಟದಲ್ಲಿ ಸೇರಲೊಪ್ಪದ ತಮ್ಮ ಬದುಕನ್ನು ಹಾಗೇ ಸೆರಗಿನಲ್ಲಿ ಕಟ್ಟಿಕೊಳ್ಳುತ್ತಾ ದಿನದ ದೀಪ ಹತ್ತಿಸುವ ಇವರು ಈಗ ನಮ್ಮ ಗೋಲಿ ಕಣ್ಣುಗಳಿಗೆ ಏನ್ಷಿಯಂಟ್ ಆಗಿ ಕಾಣುತ್ತಿದ್ದಾರೆಂದರೇ...!!! ಊಟ ಅಂಗಡಿಯ ಶೆಲ್ಫುಗಳಿಂದ ಬರುತ್ತದೆ, ದಿನಸಿ ತರಕಾರಿ ಹಣ್ಣುಗಳೂ ಹವಾನಿಯಂತ್ರಿತ ಅಂಗಡಿಗಳಿಂದ ಬರುತ್ತಿವೆ...ಜೀನಿಯೊಂದು ಕೂತು ನಮಗೆ ಊಟ ಕೊಡುತ್ತಿದೆ ಎಂಬ ಭ್ರಮೆಯಲ್ಲಿ ಇಂಡಿಯಾದ ಮಹಾನ್ ಶೈನ್ ನ ರಿಫ್ಲೆಕ್ಷನ್ ಬೆಳಕಿನಲ್ಲಿ ಮಿಂದು ಮದಮತ್ತರಾಗುತ್ತಿರುವವರನ್ನು ಕಂಡಾಗ ಭಯ ಪಡಬೇಕೋ, ದುಃಖ ಪಡಬೇಕೋ ಅಥವಾ ಎಲ್ಲಾ ಬಿಟ್ಟು ಅದೇ ಶೈನಿಂಗ್ ಬೆಳಕಿಗೆ ಬಿದ್ದುಬಿಡಬೇಕೋ ತಿಳಿಯುತ್ತಿಲ್ಲ.
 
ಏಪ್ರಿಲ್, ೨೦೧೧
 
ಅದೇ ಭೂಕಳ್ಳರು, ಅದೇ ಭ್ರಷ್ಟರು, ಅದೇ ಬಕಾಸುರರು! ಅದರ ಮಧ್ಯೆ ಹೀರೇ ತೀರುತ್ತೇನೆನ್ನುವ ಬಿರು ಬೇಸಿಗೆ. ಭೂಕಂಪ, ಬಾಯಿ ಬಡುಕರ ಕೇಬಲ್ ಟಿವಿ, ಬೋರಾತಿ ಬೋರು ಬ್ಯಾಂಕಿನ ಕೆಲಸ, ಬೀದಿ ಕೊನೆಯಲ್ಲಿ ಕೂರಿಸಿರುವ ಅದ್ಯಾವುದೋ ಅಮ್ಮನಿಗೆ ಕೇಳಿಸುತ್ತಿರುವ ಆಡಿಯೋ ಸೆಟ್ಟು...ಯಾರನ್ನಾದರೂ ಹಿಡಿದು ಚಚ್ಚಿ ಬಿಡೋಣ ಎನ್ನಿಸುತ್ತಿದೆ ಇನ್ನು ಯುಗಾದಿಗೆ ಏನು ವಿಶೇಷ ಇರುತ್ತೆ?! ಪಿ ಎಸ್ : ಒಬ್ಬಟ್ಟನ್ನೂ ಅಂಗಡಿಯಿಂದಲೇ ತರುತ್ತಿದ್ದೇವೆ. ನಮ್ಮ ಹೊಸ ವರ್ಷ ಹೇಗಿದೆ ಊಹೆ ಮಾಡಿಕೊಳ್ಳಿ ಅಂತ ’ಸೀ’ ಊರಿಂದ ಪತ್ರ ಬರೆದಿದ್ದಾರೆ. ನಿಜ. ಒಂದು ದಿನ ಹೊಸದು ಬರುತ್ತದೆ, ಹಳತಾಗುತ್ತದೆ. ದಿನಗಳು ಅದೇ ಏಕತಾನತೆಯಲ್ಲಿ ಕಳೆದುಹೊಗುತ್ತವೆ. 
 
ಆದರೆ ಆಗಾಗ ಸಂತೋಷ, ಸಡಗರ ಹೇರಿಕೊಳ್ಳಲು ಅಲ್ಲಿ ಹಬ್ಬವಾದರೂ ಬರುತ್ತವಲ್ಲಾ! ನಮಗಿಲ್ಲಿ ಇನ್ನೂ ಚುಳ್ ಎನ್ನುವ ಚಳಿ. ಇನ್ನೆಷ್ಟು ದಿನ ಹೀಗೇ ಇರ್ತ್ತದಪ್ಪಾ ಅಂತ ಗೋಳಾಡಿಕೊಳ್ಳುವ ಪರಿಸ್ಥಿತಿ. ಕಣ್ಣೆದುರಿಗೆ ಗೋಲಿಯಂತೆ ಚಲ್ಲಾಡುತ್ತಾ ಪುಂಡಾಟವಾಡುವ ಪುಟ್ಟ ಮರಿಯನ್ನು ನೋಡಿದಾಗ ಹೊಸ ವರ್ಷ, ಹೊಸ ಯುಗದ ಬಗ್ಗೆ ಎಲ್ಲಿಲ್ಲದ ಆಸೆ, ಕಳವಳ ನೆಂಚಿಕೊಂಡ ಆಶಾವಾದ.
 
ಜಪಾನಿನಲ್ಲಿ ವಿಕಿರಣ ಸೋರುತ್ತಿದೆ. ಇನ್ನೊಂದು ಚರ್ನೋಬಿಲ್ ನ ಛಾಯೆ ನಮ್ಮ ಮುಂದೆ. ಜಪಾನ್ ಮತ್ತೆ ನಡುವೆತ್ತಿ ನಿಲ್ಲಲು ವರ್ಷವಾದರೂ ಬೇಕು. ಪರಮಾಣು ಶಕ್ತಿಯೇ ಅಭಿವೃದ್ಧಿಯ ದ್ಯೋತಕವಾದರೆ ಅದೇ ಶಕ್ತಿ ನಮ್ಮ ದುರಂತ ಅಂತ್ಯದ ಭಾಷ್ಯವೂ ಆಗಿದೆ. ನಮ್ಮ ಕೂಸು, ಅವರ ಮಿತ್ರರು ೨೦೫೦ರ ಮುಖವನ್ನು ಆರೋಗ್ಯವಂತರಾಗೇ ಕಾಣುತ್ತಾರಾ? ಅನುಮಾನ. ಭಯ. ಅಳುಕು. ನಾವೇನು ಮಾಡಿದರೆ ಒಂದಷ್ಟು ಸರಿಹೋಗಬಹುದು ಎನ್ನುವ ಮೊರೆ. ಇದೇ ಮನಸ್ಥಿತಿಯಲ್ಲಿ, ನೀವೆಲ್ಲರೂ ಇನ್ನಷ್ಟು ಹಸಿರಾಗಿ ಎಂದು ಹಾರೈಸುತ್ತೇವೆ. ಹಬ್ಬ ಚನ್ನಾಗಿ ಆಗಲಿ. ಹೊಸ ವರ್ಷವಿಡೀ ಸಂತೋಷ, ನೆಮ್ಮದಿ, ಆರೋಗ್ಯ ಇರಲಿ. 
 
ಮಾರ್ಚ್ ೨೦೧೧

ಮಧ್ಯ ಪ್ರಾಚ್ಯ ರಾಷ್ಟ್ರಗಳಲ್ಲಿ ಆಗುತ್ತಿರುವ ಕ್ರಾಂತಿ ಪುಳಕದ ಜೊತೆಗೇ, ಭಯ, ಅಚ್ಚರಿ, ಅನುಮಾನಕ್ಕೂ ಮನೆ ಮಾಡಿಸಿದೆ. ಟ್ಯುನಿಶಿಯಾ, ಈಜಿಪ್ಟ್ ನ ಜನಾಂದೋಲನದ ನಂತರ ಈಗ ಮೊರಾಕ್ಕೋ, ಯೆಮೆನ್, ಜೋರ್ಡನ್, ಬಹರೇನ್, ಲಿಬಿಯಾ ಮತ್ತಿತರ ದೇಶಗಳಿಗೂ ಹರಡಿರುವ ಕಿಚ್ಚು ಇಡೀ ವಿಶ್ವದ ಗಮನ ಹಿಡಿದಿಟ್ಟುಕೊಂಡಿದೆ. ಇದು ಮುಂದೆತ್ತಲಿಗೆ ಅನ್ನುವ ಕುತೂಹಲ. ಹತ್ತು, ಇಪ್ಪತ್ತು, ಮೂವತ್ತು ವರ್ಷಗಳಿಂದ ಜನರನ್ನು ಕಟ್ಟಿಟ್ಟು ಆಡಳಿತ ನಡೆಸುತ್ತಿದ್ದ ಸಾಮ್ರಾಜ್ಯಶಾಹಿಗಳು, ಸರ್ವಾಧಿಕಾರಿಗಳು ನಮ್ಮ ಬುಡಕ್ಕೆ ಯಾವಾಗ ಪೆಟ್ಟು ಬರುತ್ತದೆ ಎಂದು ಗಾಬರಿಗೊಂಡು ಕುಳಿತಿದ್ದಾರೆ; ಕೋಟೆ-ಬಂಕರ್ ಗಳನ್ನು ಭದ್ರ ಮಾಡಿಕೊಳ್ಳುತ್ತಿದ್ದಾರೆ. ಗದ್ದಾಫಿ ಲಿಬಿಯಾದ ಜನರ ತೀರ್ಮಾನಕ್ಕೆ ಕೊನೆಗೂ ಮಣಿಯಲೇ ಬೇಕಾಗಿದೆ. ಸಾಂಕ್ರಾಮಿಕವಾಗುವಂತೆ ತೋರುತ್ತಿರುವ ಕಿಚ್ಚಿನಿಂದ ಹುರುಪು ಪಡೆದವರಂತೆ ಚೀನಾದ ನಿರುದ್ಯೋಗೀ ಯುವ ಪಡೆ ಅಲ್ಲಿನ ಭಾರೀ ಕಮ್ಯೂನಿಸ್ಟ್ ಸರ್ಕಾರದ ವಿರುದ್ಧವೂ ಪುಟ್ಟ ಹರತಾಳ ಮಾಡಿದೆ.

ಸರ್ವಾಧಿಕಾರ, ರಾಜಪ್ರಭುತ್ವ , ಭ್ರಷ್ಟ ಆಡಳಿತಗಳು ಈ ಕ್ರಾಂತಿಯಲ್ಲಿ ನಿರ್ನಾಮವಾಗಿ, ಕೊಚ್ಚಿ ಹೋದರೆ ಅದಕ್ಕಿಂತ ಸಂತೋಷದ ಸುದ್ದಿ ಏನೂ ಇರುವುದಿಲ್ಲ. ಆದರೆ ಅದರ ಬದಲಿಗೆ ಮತ್ತೆ ಧರ್ಮಾಂಧರು, ಹೊಸ ಸರ್ವಾಧಿಕಾರಿಗಳು, ಕಾರ್ಪೋರೇಟ್ ಪ್ರಪಂಚ ಸಾಕಿಕೊಳ್ಳುವ ನಾಯಿಮರಿಗಳು ಬಂದು ಗದ್ದುಗೆ ಮೇಲೆ ಕೂತರೆ ಮುಂದಿನ ವರ್ಷಗಳಲ್ಲಿ ಅಪಾರ ಕೋಲಾಹಲ-ಯುದ್ಧಗಳನ್ನು ಸಹಿಸಿಕೊಳ್ಳಬೇಕಾಗುತ್ತದೆ. ಈ ಮಹಾ ಸಂಚಲನ ವ್ಯರ್ಥವಾಗದಿರಲಿ...

ಒಬಾಮಾ, ಅವರ ಸರ್ಕಾರ ಮತ್ತು ಕಾರ್ಪೋರೇಟ್ ಅಮೆರಿಕಾ ಬೇರೆ ಎಲ್ಲ ದೇಶಗಳಿಗಿಂತ ತೀವ್ರವಾಗಿ ಈ ಎಲ್ಲ ಬೆಳವಣಿಗೆಗಳ ಲೆಕ್ಕಾಚಾರ ಹಾಕುತ್ತಾ ಕೂತಿದೆ. ಮುಬಾರಕ್ ಇಳಿದಾಗ ಸರಿಯಾಗಿ ಹಸ್ತಕ್ಷೇಪ ಮಾಡದೇ ಈಜಿಪ್ಟ್ ಅನ್ನು ಅದರ ಪಾಡಿಗೆ ಬಿಟ್ಟು ಒಬಾಮ ಸರ್ಕಾರ ತಮಾಷೆ ನೋಡುತ್ತಿದೆ ಎಂದು ಅಮೆರಿಕಾದ ಮಾಧ್ಯಮ ಗಲಾಟೆ ಮಾಡುತ್ತಿದೆ, ಒಬಾಮಾರನ್ನು ದೂರುತ್ತಿದೆ. ಇದು ಅಮೆರಿಕಾದ ಜೂ ಗಳ ತೆಕ್ಕೆಯಲ್ಲಿರುವ ಮಾಧ್ಯಮದ ಗಲಾಟೆ. ಈಜಿಪ್ಟ್ ನ ಸಹಾಯವಿಲ್ಲದೇ ಈಗ ಇಸ್ರೇಲ್ ಆ ಭೂಭಾಗದಲ್ಲಿ ಒಂಟಿಯಾಗಿ ಹೋಗುತ್ತದೆ, ಒಬಾಮ ಅಮೆರಿಕಾದ ಸರ್ವಶ್ರೇಷ್ಠ ಮಿತ್ರನಿಗೆ ದ್ರೋಹ ಮಾಡಿದ್ದಾರೆ ಎಂದು ಒಬಾಮಾ ಮತ್ತೊಂದು ಗಡುವು ಅಧ್ಯಕ್ಷರಾಗದಂತೆ ತಡೆಯಲು ಈಗಲೇ ಭಾರೀ ಜೋರಿನಲ್ಲಿ ಪ್ರಚಾರ ಶುರುವಾಗಿದೆ.

ಮತ್ತೊಂದು ವಸಂತ ಬರುವ ಸೂಚನೆ ಇದೆ. ತಂಪಾಗಿ, ಮಧುರವಾಗಿ, ಸುಂದರವಾಗಿ, ಸಾಂಗವಾಗಿ ಬರುತ್ತಾನೋ...ರಕ್ತಾರುಣಿಯಾಗಿ ಜ್ವಲಿಸಲು ಬರುತ್ತಾನೋ...
  
 
 
ಫೆಬ್ರವರಿ ೨೦೧೧


ನಿಮ್ಮೆಲ್ಲರ ಹೊಸವರ್ಷ, ಸಂಕ್ರಾಂತಿ ಸಡಗರದಿಂದ ಶುರುವಾಯಿತು ಎಂದು ನಂಬಿದ್ದೇವೆ.

ಆಯಾಮ ಒಂದು ತಿಂಗಳು ತೆರೆಯ ಮೇಲಿರಲಿಲ್ಲ. ’ಇಂಡಿಯಾಗ್ ಹೋಗಿದ್ದೀರಿ ಅಂತ ಈ ಪಾಟಿ ಸೋಮಾರಿತನ ಸರಿಯಿಲ್ಲ ಕಣ್ರೀ’...ಅಂತ ಆಯಾಮವನ್ನು ಮೇಲಿಂದ ಕೆಳಗಡೆ ಓದಿ ಫೋನ್ ಹಚ್ಚುವ ಹಿರಿಯ ಮಿತ್ರ ಶ.ರಾ ಬೈದು ಬರೆದಿದ್ದರು. ನಾವು ಭಂಡರಾಗಿದ್ದೆವು. ಆಯಾಮಕ್ಕೆ ಹೊಸ ಬೊಟ್ಟಿಟ್ಟುಕೊಂಡು, ಹೊಸ ಅಂಗಿ ಹಾಕಿಕೊಂಡೇ ಬರುವ ಖುಷಿ ನಮ್ಮದು. ಇದೋ ಮತ್ತಷ್ಟು ಬೆಳೆದಿರುವ ಆಯಾಮವನ್ನು ನಿಮ್ಮ ಮುಂದಿಡುತ್ತಿದ್ದೇವೆ. ಮೈಸೂರಿನ ಕಲಾವಿದ ಮಿತ್ರ ಪ್ರಕಾಶ್ ಚಿಕ್ಕಪಾಳ್ಯ ನಮ್ಮ ಬೇಕುಗಳನ್ನು ಕೇಳಿಕೊಂಡು ನಮಗೊಂದು ಬೊಟ್ಟು ಹಚ್ಚಿಕೊಟ್ಟಿದ್ದಾರೆ. ಮತ್ತೆ ಭೇಟಿಯಾಗುವುದೇ ಇಲ್ಲವೇನೋ ಎಂದುಕೊಂಡಿದ್ದ ಹಳೆಯ ಸ್ನೇಹಿತರೆಲ್ಲಾ ಕಣ್ಮುಂದೆ ಬಂದು ಹಾರೈಸಿ, ಆಯಾಮ ಪರಿವಾರವನ್ನು ಇನ್ನಷ್ಟು ಹಿರಿದು ಮಾಡಿದ್ದಾರೆ. ’ಗಾಳಿ ಅಂಗಿ ಚುಂಗು ಹಿಡಿದು’, ’ಓಕುಳಿ’ ಎಂಬ ಎರಡು ಹೊಸ ಅಂಕಣಗಳನ್ನು ಶುರು ಮಾಡಿದ್ದೇವೆ. ’ಊರು-ಬೇರು’ ನಮ್ಮ ನಿಮ್ಮ ಊರ ಬೇರುಗಳನ್ನು ನೆನಪಿಸುವ-ಮುದ ಕೊಡುವ ಪ್ರಯತ್ನವಾಗಿ ಹೊರಬರಲಿದೆ. ಅಂತರ್ಜಾಲದಲ್ಲಿ ಇರುವ ಕನ್ನಡ ಬ್ಲಾಗ್, ವೆಬ್ ಸೈಟ್ಗಳಲ್ಲಿಯೇ ಇದು ಹೊಸ ಪ್ರಯತ್ನ. ನಮ್ಮ ಪ್ರಯತ್ನ, ಹುಡುಕಾಟ ನಾವು ಮಾಡುತ್ತಿದ್ದೇವೆ. ಈ ಹುಡುಕಾಟದಲ್ಲಿ ಸಿಗುವ ಅನುಭವಗಳನ್ನು ಬುತ್ತಿಗಿಟ್ಟುಕೊಂಡು ನಿಮ್ಮೊಂದಿಗೆ ಹಂಚಿಕೊಳ್ಳುವ ನಮ್ಮ ಆಸೆಗೆ ಮಿತಿಯಿಲ್ಲ.

ಗಿಜಿಗಿಜಿಗುಟ್ಟುವ ಜೇನುಗೂಡಿನಿಂದ ನಿಶ್ಚಲ-ನೀರವ-ಶೀತಲ ಇಗ್ಲು ಗೆ ಬಂದಂತಾಗಿದೆ ಈಗ ನಮ್ಮ ಪರಿಸ್ಥಿತಿ. ಮೈಸೂರು-ಮಂಗಳೂರು-ಬೆಂಗಳೂರಿನ ಸಂಕ್ರಾಂತಿ ಕಿರಣಗಳಲ್ಲಿ ಮಿಂದು, ಪುಟ್ಟದೊಂದು ಕಿಚ್ಚು ಹಾಯ್ದು, ನಮ್ಮ ಸಾಹಸಕ್ಕೆ ನಗಾಡಿಕೊಂಡು, ಅಕ್ಕ ತಂಗಿ ಅಣ್ಣ ತಮ್ಮಂದಿರು, ಕಸಿನ್ಸು, ಮನೆಯವರು, ನೆರೆಹೊರೆಯವರು, ತರಕಾರಿ-ಹಾಲು ಮಾರುವವರು ಎಲ್ಲರ ಜೊತೆಗೂ ಕಲರವ-ಗಲಾಟೆ ಮಾಡಿಕೊಂಡು ಗೊಣಗಾಡಿಕೊಳ್ಳುತ್ತಲೇ ರಿಟರ್ನ್ ಫ್ಲೈಟ್ ಹತ್ತಿ ಈ ಭೂಮಿಗೆ ಕಾಲು ಸೋಕಿಸಿದಾಗ ದೇಹ, ಮನಸ್ಸು ಎಲ್ಲವೂ ಹಾಗೇ ಫ್ರೀಜ಼್! ಭಣಗುಟ್ಟುತ್ತಿದ್ದ ಗೂಡೊಳಗೆ ಕಾಲಿಟ್ಟಾಗ ಹೀಟರ್ ನ ಮಹಿಮೆಯಿಂದ ದೇಹದ ಫ್ರೀಜ಼್ ಕಮ್ಮಿಯಾದರೂ ಉಹೂಂ...ಮನಸ್ಸು ಮಾತೇ ಕೇಳದು!
 
ನೀವು ಎಂದಿನಂತೆ ನಿಮ್ಮ ಅಭಿಪ್ರಾಯ ತಿಳಿಸಿ. ನಿಮ್ಮ ಬರಹಗಳನ್ನು, ಕಥೆ-ಕವನ-ಚುಟುಕ, ಪ್ರವಾಸದ ಅನುಭವ, ವಿಮರ್ಶೆ, ಚಿತ್ರ ಇತ್ಯಾದಿಗಳನ್ನು ಆಯಾಮಕ್ಕೆ(aayaama@gmail.com) ಕಳಿಸಿಕೊಡಿ. ನಿಮ್ಮ ಬಣ್ಣ ಕೊಡಿ; ಕಾಮನ ಬಿಲ್ಲನ್ನು ಕಟ್ಟುವ ಪ್ರಯತ್ನದಲ್ಲಿ ಜೊತೆಗಿರಿ. ಪ್ರೀತಿಯಿರಲಿ...
 
ಡಿಸೆಂಬರ್ ೨೦೧೦
 

ವರ್ಷ ಬೊಗಸೆಯಿಂದ ತೊಟಕಿದ್ದೇ ಗೊತ್ತಾಗಲಿಲ್ಲ. ಪೋಸ್ಟ್ ಪಾರ್ಟಮ್ ಸಿಂಡ್ರೋಮ್, ಇದು ಮಾಡಿದ್ದು ಸರೀನಾ? ಹೀಗೆ ಮಾಡಬೇಕಿತ್ತಾ? ಎಲ್ಲಾ ಪೇರೆಂಟಲ್ ಎರರ್ ಗಳ ಮಧ್ಯೆಯೇ...ಪುಟ್ಟ ಕೈ ಗಳಿಗೆ ಗಿಲಕಿ ಇಡುತ್ತಾ-ಕಾಲ್ಗಳಿಗೆ ಗೆಜ್ಜೆ ಹಚ್ಚುತ್ತಾ, ಜುಟ್ಟು ಹಾಕುತ್ತಾ, ಜೊಲ್ಲು ಒರೆಸುತ್ತಾ, ನಾವು ಮಾಡಿದ ಸಿಲ್ಲಿ ಅಲಂಕಾರಕ್ಕೆ ನಾವೇ ಬೆರಗುಗೊಳ್ಳುತ್ತಾ ಹನ್ನೆರಡನೇ ಮಾಸ ತಲುಪಿದ್ದೇವೆ. ನೀವೇನು ಹೆಗ್ಗಣ ಹೆತ್ತಿಲ್ಲ ಬಿಡ್ರೀ ಅಂತ ಪ್ರೀತಿಸುವ ಮಿತ್ರರು ಕನ್ಫರ್ಮ್ ಮಾಡಿ ಭರವಸೆ ಕೊಟ್ಟಿದ್ದಾರೆ. ಒಂಚೂರು ಪ್ರೀತಿ-ಒತ್ತಾಸೆ ಸಿಕ್ಕಿದರೂ ಬಾಚಿಕೊಂಡು ಬಿಡುವವರು ನಾವು. ಪ್ರತಿ ಹನಿಯ ಖರ್ಚಿಗೂ ನಾವೇ ಹೊಣೆಗಾರರು ಅಂತ ಬೋರ್ಡ್ ಬರೆದಿಟ್ಟುಕೊಂಡು ನಮಗೆ ಸಿಕ್ಕಿರುವುದನ್ನು ಜಾಗರೂಕತೆಯಿಂದ ಬಳಸಿಕೊಳ್ಳುತ್ತಿದ್ದೇವೆ...ನಮ್ಮಲ್ಲಿ ಅದರ ಅಂತರ್ಜಲವೂ ಇದೆ...

ನಮ್ಮೂರ ರಾಜಕೀಯ ನಾಯಕರ ಫ್ರೀ ಸರ್ಕಸ್ ನೋಡಿಕೊಂಡು ತಲೆ ಗುಂಯ್ ಎನ್ನುತ್ತಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಗದ್ದುಗೆಯ ಮೇಲೆ ಕುಳಿತು ಅಲ್ಲಿಂದ ಜಾರುವ ದಿನ ಎಣಿಸುತ್ತಿದ್ದಾರೆ. ತಾವು ಜಾರುವ ಜೊತೆಗೇ ಹಿಂದೆ ಆಗಿದ್ದ ರಾಜಕೀಯ ಭ್ರಷ್ಟಚಾರವನ್ನು ಬಯಲಿಗೆಳೆಯುತ್ತೇನೆಂದು ಪಣ ತೊಟ್ಟಿದ್ದಾರೆ; ಮೇಲಕ್ಕೆ ದೊಂಬರಾಟದ ಥರ ಕಂಡರೂ ಈ ಬೆಳವಣಿಗೆ ಇರಲಿ ಎನ್ನಿಸುತ್ತಿದೆ. ಇವರು ಅವರ ಭ್ರಷ್ಟಾಚಾರವನ್ನು, ಅವರು ಇವರದ್ದನ್ನು ಎಲ್ಲಾ ಕಾರಿಕೊಂಡು ಬಿಡಲಿ ಬಿಡಿ. ಯಾರು ಎಷ್ಟು ದೊಡ್ದ ಹೆಗ್ಗಣ ಎಂದು ಕನ್ನಡಿಗರು ನಿರ್ಧರಿಸಬಹುದು.
 
ಊರಕಡೆ ಸೂರ್ಯನೂ ಕಾಣದೆ ಸಿಕ್ಕಾಪಟ್ಟೆ ಸೋನೆಯಂತೆ. ಬೆಳಕು ಬೇಗ ಬರಲಿ, ಭೇಷಾಗಿ ಬರಲಿ, ಸಂಕ್ರಾಂತಿಯ ಸುಗ್ಗಿಗೆ ಈಗಲೇ ಅನುವು ಮಾಡಿಕೊಡಲಿ ಅಂತ ಹಾರೈಕೆ.
 
 
ನವೆಂಬರ್ ೨೦೧೦
 

ಹನ್ನೊಂದು ತಿಂಗಳು ಆಟ ಆಡಿಕೊಂಡು, ತೆವೆಯುತ್ತಾ, ಅಂಬೆಗಾಲಿಡುತ್ತಾ, ಮನೆಯ ಮೂಲೆಯಲ್ಲಿ-ಕದದ ಸಂದಿಯಲ್ಲಿ ಬಿದ್ದಿದ್ದ ಚಿಕ್ಕ ಪುಟ್ಟ ನಿಧಿಗಳನ್ನು ಹೆಕ್ಕುತ್ತಾ, ಅದರ ರುಚಿ ನೋಡುತ್ತಾ, ಅಲ್ಲಿಲ್ಲಿ ಇಣುಕುತ್ತಾ, ಮನೆಯವರ ಕೈಲಿ ಗದರಿಸಿಕೊಳ್ಳುತ್ತಾ ನಮ್ಮ ನಿಮ್ಮ ಆಯಾಮ ಈಗ ನಿಲ್ಲುವುದನ್ನು ಕಲಿತಿದೆ. ಅದರ ಕಾಲುಗಳ ಬಲ ಹೆಚ್ಚಲಿ. ಎಲ್ಲೆಂದರಲ್ಲಿ ಹೆಜ್ಜೆ ಇಟ್ಟುಕೊಂಡು, ಅಲ್ಲಿ ಇಲ್ಲಿ ಮೈಕೈ ಬಡಿಸಿಕೊಂಡು, ಕಲಿಯುತ್ತಾ ನಲಿಯುವ, ಕೆಣಕುವ, ಪ್ರೀತಿಯ ಪರಿ ಅದರದ್ದಾಗಲಿ...ಗದ್ದಲ ಈಗ ಬೇಡ. ಅದೆಲ್ಲಾ ಟೆರಿಬಲ್ ಟೂ, ಟ್ರಬಲ್ ಸಮ್ ತ್ರೀಗೇ ಇರಲಿ. ಈಗ ತೊದಲುವುದೇ ಸಾಕು...ನೀವು ಜೊತೆಗಿರಿ.

ನಿಮಗೆಲ್ಲರಿಗೂ ಕನ್ನಡಹಬ್ಬ, ದೀಪದ ಹಬ್ಬಗಳ ಹಾರ್ದಿಕ ಶುಭಾಶಯಗಳು.

ಮನೆಸುತ್ತ ದೀಪ ಹಚ್ಚಿ, ಪಟಾಕಿ ಹೊಡೆದು ಆಚರಿಸುವವರು ಶಬ್ದ-ವಿಷದ ಗಾಳಿಯನ್ನು ಆದಷ್ಟು ಕಡಿಮೆ ಮಾಡಿ. ನೆನ್ನೆ ನಿಮ್ಮ ಮನೆಯ ಮಾವಿನ ಮರದ ಮೇಲೆ ಹಾಡುತ್ತಿದ್ದ ಕೋಗಿಲೆ, ಆಡುತ್ತಿದ್ದ ಇಣಚಿ, ಗಲಾಟೆ-ವಿಷದ ಗಾಳಿಯಲ್ಲಿ ಬೆದರಿ-ಉಸಿರುಕಟ್ಟಿ ಸಾಯದಿರಲಿ. ಬೆಳಕು ಎಲ್ಲರನ್ನೂ ಬೆಳಗಲಿ. ಮಕ್ಕಳು ಕ್ಷೇಮವಾಗಿರಲಿ...
 

ಅಕ್ಟೋಬರ್ ೨೦೧೦

ನನ್ನ ತಾತ,
 
ಮೊನ್ನೆ ಅಯೋಧ್ಯೆಯೆಂಬ ಪಟ್ಟಣದ ಗಲಾಟೆಗೆ ಕೋರ್ಟು ಎಲ್ಲರಿಗೂ ಸಮಾಧಾನವಾಗುವ ತೀರ್ಪು ಕೊಟ್ಟಿದೆಯಂತೆ. ಸಧ್ಯಕ್ಕೆ ಸಮಾಧಾನವಾಗಬಹುದೇನೋ...ಮುಂದೆ ನಿನ್ನ ಪ್ರಾರ್ಥನೆ ಜೋರು, ನಿನ್ನ ಗಂಟೆ ಜೋರು ಅಂತ ಪರಸ್ಪರ ಪ್ರತಿನಿತ್ಯ ಕಾದಾಟ ಶುರು ಮಾಡಿದರೆ ಏನು ಮಾಡುವುದು ತಾತ? ಸೈನ್ಯದ ತುಕಡಿಯೊಂದನ್ನಲ್ಲಿಟ್ಟು ಅದರ ನಿಗರಾನಿಯಲ್ಲಿ ರಾಮನನ್ನೋ ಅಲ್ಲಾನನ್ನೋ ಕರೆದರೆ ಅವರಾದರೂ ಬರುತ್ತಾರಾ, ಪ್ರಾರ್ಥನೆ ಕೇಳುತ್ತಾರಾ? ಇಷ್ಟರಲ್ಲಿ ಇವರ ಸಾವಾಸವೇ ಬೇಡ ಎಂದು ಅವರು ದೇಶಾಂತರ ಹೋಗಿರಲಿಕ್ಕೂ ಸಾಕಲ್ಲವೇ ತಾತ?
ನೀನಿದ್ದಾಗ ದೇಶಗಳಿಗೊಂದು ಸಾಂಸ್ಕೃತಿಕ ಗಡಿಯಿತ್ತು. ಈಗ ಜಾಗತೀಕರಣವಂತೆ. ಜನ ಮನಗಳು ಇಲ್ಲಷ್ಟು ಅಲ್ಲಿಷ್ಟು ಎಲ್ಲೆಲ್ಲೋ ಹಂಚಿಹೋಗಿದ್ದಾರೆ, ದೂರ ಸಾಗಿ ನೆಲೆನಿಂತಿದ್ದಾರೆ. ಯಾವುದು ನೆಲೆಯೆಂಬ ತೊಳಲಾಟದಲ್ಲಿದ್ದಾರೆ. ಹಿಂದೆ ವಿವೇಕದ ಹೋರಾಟಕ್ಕೆ ಜನರನ್ನು ಕಲೆ ಹಾಕಿದಂತೆ ಈಗ ಆಗುವುದಿಲ್ಲ; ವಿದೇಶಿ ವಸ್ತುವನ್ನು ತ್ಯಜಿಸಿ ಎಂದು ಆವತ್ತು ನೀನು ಮಾಡಿದಂತೆ ಈಗ ಆಗುವುದಿಲ್ಲ ತಾತ...ತ್ಯಜಿಸಿದರೆ ದೇಶದೊಳಗಿರುವ ವಿದೇಶಿ ಮನುಷ್ಯರನ್ನು ತ್ಯಜಿಸಬೇಕು. ದೇಶದ ಹೊರಗಿರುವ ದೇಸೀ ಮನಸ್ಸುಗಳನ್ನು ಕಲೆಹಾಕಬೇಕು...
ಭೂಮಿ, ಜಲ, ಗಾಳಿ, ಕಾಡು, ಕಣಿವೆ ಯಾವುದನ್ನೂ ಬಿಡದೆ ಕೆರೆದು ತುರಿದು ಕಬಳಿಸುತ್ತಿರುವ ರಾಕ್ಷಸರನ್ನು ನೋಡಿದಾಗ ಕೋಪ, ದಿಗಿಲು, ಅಸಹ್ಯ ಎಲ್ಲ ಆಗುತ್ತದೆ ತಾತ. ಅವರ ಹೊಟ್ಟೆಯಲ್ಲಿರುವ, ಬರುವ ಗಲೀಜನ್ನು ಹೊರಹಾಕಲೂ ಮುಂದೆ ಜಾಗ ಇರುವುದಿಲ್ಲ! ಗಲೀಜೇ ನಮ್ಮ ಸುತ್ತಣ ಭೂಮಿಯಾಗಿ-ಬದುಕಾಗಿ ಅದರೊಳಗೇ ಎಗರಾಡಿಕೊಂಡು ಪರದಾಡಿಕೊಂಡು ಬದುಕಬೇಕಾದ ಪ್ರಸಂಗ ಬರುವ ಮುನ್ನ...ಮತ್ತೆ ಬರಲಾರೆಯಾ ತಾತ?
 
ನಿನ್ನ...
 
ಸೆಪ್ಟೆಂಬರ್ ೨೦೧೦
 

ಆಯಾಮಕ್ಕೆ ಈಗ ಒಂಭತ್ತು ತಿಂಗಳು! ಒಂದೋ ಎರಡೋ ಹಲ್ಲು ಮೂಡಿಸಿಕೊಂಡು ಜಗತ್ತನ್ನೇ ಕಚ್ಚಿ ತಿಂದು ನೋಡಿ ಬಿಡುತ್ತೇನೆಂಬ ಹುಮ್ಮಸ್ಸಿಂದ ಸಿಕ್ಕಿದ್ದಕ್ಕೆಲ್ಲಾ ಕೈ ಹಾಕುವ ಕೂಸನ್ನು ಅಮ್ಮ ವಾತ್ಸಲ್ಯ-ಕಕ್ಕುಲತೆಯಿಂದ ನೋಡುವಂತೆ ನಮ್ಮ ನಿಮ್ಮೆಲ್ಲರ ಆಯಾಮವನ್ನು ನೋಡುತ್ತಿದ್ದೇವೆ. ನಾವು ಎಲ್ಲಿದ್ದೇವೆ, ಎಲ್ಲಿ ನಿಲ್ಲುತ್ತೇವೆಂದು ಸ್ಪಷ್ಟ ಪಡಿಸಿಕೊಳ್ಳಬೇಕೆಂಬ ಕಾತುರವಿದೆ. ಯಾರ ನಿಲುವನ್ನೂ ಕಡ ಪಡೆಯುತ್ತಿಲ್ಲ. ಎಲ್ಲರನ್ನೂ ಕೇಳುತ್ತಿದ್ದೇವೆ. ಕೇಳಿ, ತಿಳಿದು ನಮಗನ್ನಿಸಿದ್ದನ್ನು ನಮ್ಮದನ್ನಾಗಿಸಿಕೊಳ್ಳುತ್ತೇವೆ. ನಮ್ಮ ತಪ್ಪುಗಳು ನಮ್ಮದಾಗಬೇಕು, ಆಮೇಲೆ ಒಪ್ಪ ಆಗುವುದಿದ್ದೇ ಇದೆ.
 
’ಯಾಕ್ರೀ ಇಡೀ ಪೇಪರ್ ನಲ್ಲಿ ಇಷ್ಟು ಎಮೋಷನಲ್ ವಿಷಯ ಬರಿತೀರಿ?’ ಅಂತ ಸಹೃದಯರೊಬ್ಬರು ಕೇಳಿದ್ದಾರೆ. ನಾವೂ ಕೇಳಿಕೊಂಡಿದ್ದೀವಿ. ಕಾರಣ ಇವಿರಬಹುದು. ಒಂದು, ನಮ್ಮ ತಟಸ್ತತೆ-ಇನ್ಸೆನ್ಸಿಟಿವಿಟಿಯನ್ನು ಸ್ವಲ್ಪ ಹರಿತ ಮಾಡಿಕೊಳ್ಳಬಹುದೇನೋ ಎಂಬ ಆಶಾವಾದದಿಂದ. ಎರಡು, ನಾವು ಅದನ್ನು ಹಂಚಿಕೊಳ್ಳುವುದಕ್ಕೆ ಛಾರ್ಜು ಮಾಡುವುದಿಲ್ಲ. ಮೂರು, ಈಗ ಬಹುಸಂಖ್ಯಾತರ ಮನದಲ್ಲಿ ಭಾವನೆಗಳ ಬರ ಆಗಿರುವುದರಿಂದ. 
 
 
 
 
 
 
 
ಆಗಸ್ಟ್ ೨೦೧೦
 
 
 
ಸವಣೂರಿನಲ್ಲಿ ನಡೆದಿರುವ ಮಲಾಭಿಷೇಕದ ಘಟನೆ ನಮ್ಮನ್ನು ನಾಚಿಕೆಯಿಂದ ತಲೆತಗ್ಗಿಸುವಂತೆ ಮಾಡಿದೆ. ಭಂಗಿಗಳಂತ ಜನ ಈಗಲೂ ಕರ್ನಾಟಕದ ಹಲವೆಡೆ ಮಲ ಹೊರುವ ಕೆಲಸ ಮಾಡುತ್ತಿರುವುದು ಈ ಘಟನೆಯಿಂದ ಬೆಳಕಿಗೆ ಬಂದಿದೆ. ಇಂಥ ಸಾಮಾಜಿಕ ಕ್ರೌರ್ಯಕ್ಕೆ ನಮ್ಮ ಮಕ್ಕಳ ತಲೆಮಾರಿನವರೂ ಸಾಕ್ಷಿಯಾಗಬೇಕಾಗ ಬಂದಿದ್ದು ದುರಂತ. ಅತ್ತ ನಮ್ಮ ರಾಜಕೀಯ ಪ್ರತಿನಿಧಿಗಳು ಭಂಗಿಗಳ ಇರುವನ್ನು-ಪ್ರತಿಭಟನೆಯನ್ನು ಅಲ್ಲೇ ಮರೆತು ನಾಡರಕ್ಷಣೆ-ಸ್ವಾಭಿಮಾನ ಉಳಿಸಿಕೊಳ್ಳುವ ಸಲುವಾಗ ಜಾಥಾ ಮಾಡಿಕೊಳ್ಳುತ್ತಿದ್ದಾರೆ. ಇಂಡಿಯಾ ಇದೆಲ್ಲದರ ನಡುವೆಯೂ ಶೈನ್ ಆಗುತ್ತಿದೆ. ಬರೀ ಹೊಸದಾಗಿ ಹರಿಯುತ್ತಿರುವ ಹಣದ ಹೊಳಪಿನಲ್ಲೋ? ಬದಲಾವಣಿಗೆ ಆಸ್ಪದವೇ ಇಲ್ಲದಂತೆ ಭಾರೀ ಸಂದೂಕವೊಂದರಲ್ಲಿ ಕೂಡಿಟ್ಟು ಬೀಗ ಹಾಕಿರುವ "ಅದ್ಭುತ ಪುರಾತನ ಪರಂಪರೆ"ಯ ಘನ ಸಂಪತ್ತಿನಿಂದಲೋ? ಪ್ರತಿಭಾವಂತ ಯುವ ಜನರ ಬೆವರ ಹನಿಯಿಂದಲೋ? ಅಲ್ಲಲ್ಲಿ ಅಷ್ಟಿಷ್ಟು ಬಾಂಬು ಸ್ಫೋಟವಾಗಿ, ಇನ್ನೆಲ್ಲೋ ಕೋಮು ಗಲಭೆಯಾಗಿ, ಹೊಟ್ಟೆಗೆ ಉಣಲು ಸಿಗದೆ, ಬ್ಯಾಂಕ್ ಸಾಲಗಳನ್ನು ತೀರಿಸಲಾಗದೆ, ಹಾಗೆ ಹೀಗೆ ಜನ ಜೀವ ತೆರುತ್ತಿದ್ದರೂ ಬವಣೆ ನಿಲ್ಲದು...ಬದುಕು ದೊಡ್ಡದು...ಎಂದು ಹುರಿಕಟ್ಟಿ ಕಣ್ತುಂಬಾ ಬದುಕುವಾಸೆ ಕಟ್ಟಿಕೊಂಡು ಪ್ರತಿ ದಿನಾ ಹುರುಪುನಿಂದ ಬದುಕಿಗೆ ಒಡ್ಡಿಕೊಳ್ಳುವ ಕೋಟ್ಯಾಂತರ ಜನಗಳ ಅದಮ್ಯ ಜೀವನ ಪ್ರೀತಿಯಿಂದಲೋ...ಇಂಡಿಯಾ ಅಲ್ಲಲ್ಲಿ ಹೊಳೆಯುವುದು ನಮಗೂ ಕಾಣುತ್ತಿದೆ. ಆದರೆ ಇನ್ನೂ ಕಲಿಯಬೇಕಾದ್ದು, ಹಂಚಬೇಕಾದ್ದು, ಕೊಡವಿಕೊಳ್ಳಬೇಕಾದ್ದು, ಬದಲಾಯಿಸಬೇಕಾದು ಬೇಕಾದಷ್ಟಿದೆ. ಹರಿವು ಅದೇ ಅಲ್ಲವೇ. ಸ್ವಾತಂತ್ರ್ಯ ಹಬ್ಬದ ಹಾರೈಕೆಗಳು.
 
 
 
ಜುಲೈ ೨೦೧೦
 
ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಲೋಕಾಯುಕ್ತಕ್ಕೆ ಪರಮಾಧಿಕಾರ ಕೊಡುವುದಾಗಿ ಹೇಳಿದ್ದ ಬಿಜೆಪಿ ನಿಜಕ್ಕೂ ಆಶಾವಾದ ಮೂಡಿಸಿತ್ತು. ಈಗ ಅದರ ಮುಖವಾಡ ಕಳಚಿದೆ. ಅಪರೂಪಕ್ಕೆ ಸಿಗುವ ಅತ್ಯಂತ ದಕ್ಷ, ಪ್ರಾಮಾಣಿಕ, ನಿಷ್ಟುರ ಮತ್ತು ಸಜ್ಜನ ನ್ಯಾಯಾಧಿಕಾರಿ ಸಂತೋಷ್ ಹೆಗಡೆಯವರು ಬಿಜೆಪಿಯ ಅನೈತಿಕ ಭಂಡಾಟಗಳಿಗೆ ಪ್ರತಿಭಟನೆಯಾಗಿ ತಮ್ಮ ಲೋಕಾಯುಕ್ತ ಸ್ಥಾನದಿಂದ ರಾಜೀನಾಮೆ ನೀಡಿದ್ದಾರೆ. ಅಂತಹ ಅಧಿಕಾರಿಯೊಬ್ಬರಿಗೆ ಸರಿಯಾಗಿ ಕೆಲಸ ಮಾಡಲು ಅನುವು ಮಾಡಿಕೊಡದೇ ಪೀಡಿಸಿದ ಸರ್ಕಾರಕ್ಕೆ ನಮ್ಮ ನಿಮ್ಮ ಛೀಮಾರಿ.
 
ಕಾವೇರಿಯ ಇತಿಹಾಸ ಮುಂದುವರೆಯುತ್ತದೆ. ಅದರ ಜೊತೆಗೇ ಮಕ್ಕಳಿಗೆ ಮಾತೃಭಾಷೆಯಲ್ಲಿ ಮೊದಲ ಶಿಕ್ಷಣದ ಅಗತ್ಯದ ಕುರಿತು ಚರ್ಚೆ ಆರಂಭಿಸುತ್ತಿದ್ದೇವೆ. ಸಂಪೂರ್ಣ ಇಂಗ್ಲಿಷ್ ಕಲಿಯದಿದ್ದರೆ ಮುಂದಿನ ವರ್ಷಗಳಲ್ಲಿ ಯಾರೂ ಉದ್ಧಾರವಾಗುವುದಿಲ್ಲ ಎನ್ನುವ ವಾದ ಕೇಳುತ್ತಿದ್ದೇವೆ. ನಮ್ಮ ಮಕ್ಕಳು ಬೇರೆ ದೇಶದಲ್ಲಿ ಹುಟ್ಟಿರುವುದರಿಂದ ಅವರಿಗೆ ಆ ದೇಶದ ಭಾಷೆಯನ್ನೇ ಕಲಿಸಬೇಕು ಎಂದು ವಿಧೇಯವಾಗಿ ಅನುಸರಿಸುವ ಅನಿವಾಸಿ ಭಾರತೀಯರನ್ನು ಗಮನಿಸಿ ಇವರ ಮಕ್ಕಳು ತಮಿಳ್ನಾಡಿನಲ್ಲಿ ಹುಟ್ಟಿದ್ದರೆ ಇವರು ಮಕ್ಕಳಿಗೆ ತಮಿಳು ಕಲಿಸುತ್ತಿದ್ದರೋ-ಹಿಂದಿ ಕಲಿಸುತ್ತಿದ್ದರೋ ಎಂದು ಯೋಚಿಸಿ ತಲೆಬಿಸಿ ಮಾಡಿಕೊಂಡಿದ್ದೇವೆ. ನಮ್ಮ ಮಕ್ಕಳು ಕನ್ನಡ ಕಲಿಯದಿದ್ದರೆ ನಮ್ಮ ಭಾಷೆ-ಸಂಸ್ಕೃತಿ-ನಂಟನ್ನು ಉಳಿಸಿಕೊಳ್ಳುವುದು ಹೇಗೆ ಎಂದು ಹಪಹಪಿಸುತ್ತಿರುವ ಅನಿವಾಸಿ ಕನ್ನಡದ ಅಪ್ಪ ಅಮ್ಮಂದಿರ ಕಳವಳ ಕಾಣುತ್ತಿದ್ದೇವೆ. ನಮಗೂ ಹಾಗೂ ಇವರೆಲ್ಲರಿಗೂ ಇರಲಿ ಎಂದು ಈ ಚರ್ಚೆ.
 
ಹಾಗೇ ಇದೆಲ್ಲದರ ಮಧ್ಯೆ ಹೊಸದೊಂದು ಸತ್ಯ ಕಂಡುಕೊಂಡಿದ್ದೇವೆ. ಆಯಾಮಕ್ಕೆ ನಾವೂ ಬರೆಯುತ್ತೇವೆ ಎಂದು ಪ್ರೀತಿಯಿಂದ ಹಲವಾರು ಅನಿವಾಸಿ ಭಾರತೀಯ/ಕನ್ನಡದ ಮಿತ್ರರು ಮುಂದೆ ಬರುತ್ತಿದ್ದಾರೆ. ಕರ್ನಾಟಕದವರೇ ಆದರೂ ಹೆಚ್ಚಿನವರು ತಮ್ಮ ಲೇಖನಗಳನ್ನು ಇಂಗ್ಲಿಷ್ನಲ್ಲಿ ಬರೆಯುತ್ತೇವೆ ಅಥವಾ ಬಾಯಿಯಲ್ಲಿ ಹೇಳಿ ಧ್ವನಿ ಮುದ್ರಿಸಿ ಕೊಟ್ಟು ಬಿಡುತ್ತೇವೆ, ನೀವು ಬರೆದುಕೊಳ್ಳಿ ಎನ್ನುತ್ತಿದ್ದಾರೆ. ಕಾರಣ ಕೇಳಿದರೆ ಅವರ ಉತ್ತರ ಪ್ರಾಮಾಣಿಕವಾದದ್ದು. ಅವರಿಗೆ ಕನ್ನಡ ಬರೆಯಲು ಬರುವುದಿಲ್ಲ! ಕನ್ನಡ ಮಾಧ್ಯಮದಲ್ಲಿ ಏಳನೇ ಅಥವಾ ಹತ್ತನೆಯ ತರಗತಿವರೆಗೂ ಓದಿದ ಮಿತ್ರರಿಗೆ ಕನ್ನಡದಲ್ಲಿ ಅಭಿವ್ಯಕ್ತ ಮಾಡುವುದು ಸುಲಲಿತ. ಆದರೆ ಉಳಿದವರಿಗೆ ಕನ್ನಡ ಬರೆದದ್ದು ಮರೆತೇ ಹೋಗಿದೆಯಂತೆ! ಇದು ಒಬ್ಬರ ಇಬ್ಬರ ಕಥೆಯಲ್ಲ. ನಾವು ಗಾಬರಿಯಾಗಿದ್ದೇವೆ. ಹಾಗೇ ಹೆಮ್ಮೆಯಿಂದ, ಆಸೆಯಿಂದ ಕರ್ನಾಟಕದ ಹಳ್ಳಿ-ನಗರಗಳಲ್ಲಿ ಕನ್ನಡ ಮಾಧ್ಯಮದ ಶಾಲೆಗಳಲ್ಲಿ ಕಲಿಯುತ್ತಿರುವ ಪುಟಾಣಿಗಳತ್ತ ನೋಡುತ್ತಿದ್ದೇವೆ. ನಾಳೆ ಕನ್ನಡ ಲಿಪಿ, ಕನ್ನಡ ಸಾಹಿತ್ಯ, ಸೂಕ್ಷ್ಮತೆಯುಳ್ಳ ಸಂವಾದ ನಡೆಯುವುದಾದರೆ, ಉಳಿಯುವುದಾದರೆ, ಬೆಳೆಯುವುದಾದರೆ ಅದು ಈ ಪುಟಾಣಿಗಳ ಮೂಲಕ ಮಾತ್ರ. ಇದು ನಮ್ಮ ಸವಾಲು!! ನಿಮ್ಮದೇನಾದರೂ ಬೇರೆ ವಾದವಿದ್ದರೆ ಚರ್ಚೆಗೆ ಬನ್ನಿ.
 
 
 
 
 
ಜೂನ್ ೨೦೧೦ 
 
ಪುಟ್ಟ ಆಯಾಮದ ಆರನೇ ತಿಂಗಳ ಆಡಾಟವನ್ನು ನೋಡುತ್ತಿದ್ದೀರಿ. ನಮ್ಮ ನಿಮ್ಮ ಕೂಸು ನಿಮ್ಮೆದುರಿಗೇ ಇಷ್ಟಿಷ್ಟೇ ಮೈದುಂಬಿಕೊಳ್ಳುತ್ತಿದೆ. ನಾವು ಕಲಿಯುತ್ತಿದ್ದೇವೆ, ಕಲಿತದ್ದನ್ನು ಹಂಚಿಕೊಳ್ಳುತ್ತಿದ್ದೇವೆ. ಪ್ರತಿ ಹೆಜ್ಜೆಯೂ ಪ್ರೀತಿ-ಬಧ್ಧತೆಯದ್ದಾಗಿರಬೇಕೆಂದು ಕನವರಿಸುತ್ತಿದ್ದೇವೆ. ನಮ್ಮ ಕನಸುಗಳಲ್ಲಿ ನೀವಿದ್ದೀರಿ.

ಈ ಬಾರಿ, ಹಿಂದೆ ತಿಳಿಸಿದ್ದಂತೆ ಕಾವೇರಿಯ ಕಥಾನಕವನ್ನು ಸರಳವಾಗಿ ಶುರು ಹಚ್ಚಿಕೊಂಡಿದ್ದೇವೆ. ನಮ್ಮ ನಿಮ್ಮೆಲ್ಲರ ಭವಿಷ್ಯದಲ್ಲಿ, ಮುಂದೆ ನಾವೆಲ್ಲರೂ ಸಾಕ್ಷಿಗಳಾಗಲೇ ಬೇಕಾಗುವ ಗಲಾಟೆ ನದೀ ನೀರಿನದ್ದಾಗಿರುತ್ತದೆ. ಇದು ವಿಜ್ನಾನದ ವಾದ. ಅಮೆರಿಕದಲ್ಲಾಗಲೀ, ಆಫ್ರಿಕಾದಲ್ಲಾಗಲೀ, ಏಷಿಯಾದಲ್ಲಾಗಲೀ...ಬಿಂದಿಗೆ ಬಿಂದಿಗೆಯಷ್ಟೇ ಪ್ರತೀ ಕ್ಷಣವೂ ಬರಿದಾಗುತ್ತಿರುವ, ಈ ಜೀವ ಸಂಪನ್ಮೂಲದ ಸರಿಯಾದ ಉಳಿಸಿಕೊಳ್ಳುವಿಕೆ, ಬಳಸಿಕೊಳ್ಳುವಿಕೆ ಮತ್ತು ಹಂಚಿಕೊಳ್ಳುವಿಕೆಯ ಬಗ್ಗೆ ನಮ್ಮವರೊಡನೆ ಮಾತುಕತೆ ಇರಲಿ, ನಮ್ಮ ಜವಾಬ್ದಾರಿ ಬೆಳೆಯಲಿ ಎಂದು ನಮ್ಮ ಆಶಯ.
 
 
 
ಮೇ ೨೦೧೦
೨೦೦೭ರ ಫೆಬ್ರವರಿ ೭ರಂದು ಕಾವೇರಿ ನ್ಯಾಯಾಧೀಕರಣ ನೀಡಿರುವ ’ಕಾವೇರಿ ಮಧ್ಯಂತರ ತೀರ್ಪಿ’ನ ಕುರಿತ ಆರೋಗ್ಯಕರ ಚರ್ಚೆಗೆ ವೇದಿಕೆಯಾಗಬೇಕೆಂಬ ಉದ್ದೇಶದಿಂದ ಮುಂದಿನ ಸಂಚಿಕೆಗಳಲ್ಲಿ ’ಕಾವೇರಿ ಕಥನ’ವನ್ನು ನಮ್ಮ-ನಿಮ್ಮ ಆಯಾಮದಲ್ಲಿ ಆರಂಭಿಸಲಿದ್ದೇವೆ.
 

ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಬ್ರಿಟಿಷ್ ಪ್ರಭುಗಳ ನೇರ ಅಧೀನಕ್ಕೊಳಪಟ್ಟಿದ್ದ ಅಂದಿನ ಮದರಾಸು ಪ್ರಾಂತ್ಯ, ತನ್ನ ಸಾಮಂತರಾಗಿದ್ದ ಮೈಸೂರು ಅರಸರ ಮೇಲೆ ತನ್ನ ಸಾಮ್ರಾಜ್ಯಶಾಹಿ ಪ್ರವೃತ್ತಿಯ ಸರ್ವಾಧಿಕಾರದಿಂದ ಎಸಗುತ್ತಿದ್ದ ಅನ್ಯಾಯವನ್ನು ಕಾವೇರಿ ನೀರಿನ ಹಂಚಿಕೆ ವಿಷಯದಲ್ಲಿ ಇನ್ನೂ ಮುಂದುವರಿಸುತ್ತಿದೆ. ತಮಿಳುನಾಡಿನ ರಾಜಕಾರಣಿಗಳು ಕೇಂದ್ರ ಸರ್ಕಾರವನ್ನು ತಮ್ಮ ಬ್ಲಾಕ್ ಮೇಲ್ ತಂತ್ರದಿಂದ ತಮಗನುಕೂಲವಾಗುವಂತೆ ಬಳಸಿಕೊಳ್ಳುತ್ತಲೇ ಬರುತ್ತಾ ಕಾವೇರಿ ನೀರು ಹಂಚಿಕೆಯಲ್ಲಿ ಕರ್ನಾಟಕಕ್ಕೆ ಚಳ್ಳೆ ಹಣ್ಣು ತಿನ್ನಿಸುತ್ತಿದ್ದಾರೆ. ರೈತರು ಕರ್ನಾಟಕದಲ್ಲೂ ರೈತರೇ, ತಮಿಳುನಾಡಿನಲ್ಲೂ ರೈತರೇ ನಿಜ. ಇಬ್ಬರಿಗೂ ನೀರು ಬೇಕು, ಇಬ್ಬರೂ ಬೆಳೆತೆಗೆಯಬೇಕು. ಆದರೆ, ಕಾವೇರಿಯ ನೀರು ಹಂಚಿಕೆ ಯಾವತ್ತೂ ಸಾಮರಸ್ಯದಿಂದ ಆಗಿಲ್ಲ ಮತ್ತು ಭೂಮಿಯ ಹೆಕ್ಟೇರ್ ಗಳ ಸರಿಯಾದ ಲೆಕ್ಕಾಚಾರದಿಂದ ಆಗಿಲ್ಲ. ಈ ತಾರತಮ್ಯವನ್ನು, ಅದರ ಅಂಕಿ ಅಂಶಗಳನ್ನು, ಅದರ ಹಿಂದಿರುವ ’ವಾಟರ್ ಪಾಲಿಟಿಕ್ಸ್’ ನ ಇತಿಹಾಸವನ್ನು ಆಯಾಮ ನಿಮ್ಮ ಮುಂದಿಡಲು ಪ್ರಯತ್ನಿಸಲಿದೆ.
 
 
ಏಪ್ರಿಲ್ ೨೦೧೦
 
ವಸಂತ ನಾವಿರುವ ಭೂಭಾಗದ ಹೊಸಲು ಮೆಟ್ಟಿದ್ದಾನೆ. ನೆನ್ನೆ ಮೊನ್ನೆ ಕಿಟಕಿಯಿಂದಾಚೆ ನೋಡಿದರೆ ಇರಬರುವ ಕೊಂಬೆ ಕಡ್ಡಿಗಳನ್ನೆಲ್ಲ ಬತ್ತಲು ಬಿಟ್ಟುಕೊಂಡು ನಿಂತಿದ್ದ ಡಾಗ್ ವುಡ್ ಮರ ಇವತ್ತು ಎಲ್ಲಿಲ್ಲದ ಸಡಗರದಿಂದ ಹೂ ಹೊದ್ದು ಕುಳಿತಿದೆ. 
 
 
 
ಅದನ್ನು ನೋಡಿದಾಗ ಮುಖ-ಮನದ ತುಂಬಾ ನಗು ತುಂಬಿದರು ಐದು ಸೆಕೆಂಡ್ ನಂತರ ಮನಸ್ಸಿಗೆ ನಮ್ಮೂರ 'ರಕ್ತಾರುಣ' ಸುಂದರಿ ಗುಲ್ಮೊಹರ್ ನೆನಪಾಗುತ್ತಾಳೆ. ನಾವೇ ಇಲ್ಲಿಯ ಜನವಾಗಿ, ಇಲ್ಲಿನ ಜೀವನ-ಗಿಡ-ಮರ-ಕಾರು-ರೋಡು ಎಲ್ಲವು ನಮ್ಮೊಳಗೆ ಹಾಸು ಹೊಕ್ಕಾಗಿರುವಾಗಲು ನಮ್ಮ ಪ್ರತಿ ಕ್ಷಣದ ವರ್ತಮಾನದ ಬದುಕಿನಲ್ಲಿ ಕಾಣುವ ಎಲ್ಲ ವ್ಯಕ್ತಿ-ವಸ್ತು ಅನುಭವಗಳ ಜೊತೆ ಮನಸ್ಸು ನಮ್ಮೂರ ಏನೋ ಒಂದನ್ನು ನಂಟು  ಹಾಕಿಬಿಡುತ್ತದೆ. ನೆಲದ ಸೆಳೆತ ಅಂದರೆ ಅದೇ ಏನೋ...

ಅಲ್ಲಿ-ಅಷ್ಟು ಜನ ಗಲಭೆ ಮಾಡಿಕೊಂಡು ಸತ್ತರು, ಇಷ್ಟು ಜನ ಹಸಿದು ಆತ್ಮಹತ್ಯೆ ಮಾಡಿಕೊಂಡರು, ಇವರು ಇದ್ದಬದ್ದದ್ದನ್ನೆಲ್ಲಾ ಗೋರಿಕೊಂಡರು ಅಂತ ಕೇಳುವಾಗ ಓದುವಾಗ ನಮ್ಮ ಮನಸ್ಸಿನಲ್ಲಿ-ಕಲ್ಪನೆಯಲ್ಲಿ ಹಸಿರಾಗಿ ಕಾಡುವ ನಮ್ಮೂರು...ನಾವು ಓದಿ ಕೇಳುತ್ತಿರುವ ನಮ್ಮೂರು ಎರಡರ ನಿಜಗಳ ತಾಕಲಾಟ ನಡೆಯುತ್ತದೆ. ದೂರದಲ್ಲಿದ್ದೇವೆಯಾದ್ದರಿಂದ ಭಾವುಕತೆ-ಬೇಜಾರು ಜಾಸ್ತಿ.
 
 
 
ಮಾರ್ಚ್ ೨೦೧೦
 
ಮೇಲೆ ಕಾಣುವ ರಕ್ತ ಮಾಂಸದ ’ಇವಳು’
ಸುಸಂಸ್ಕೃತೆ, ಜಾಣೆ, ಮನುಷ್ಯೆ.
ಇವಳೊಳಗಡಗಿರುವ’ ’ಅವಳು’ ಪಕಳೆ-ಮಿಂಚು ಹುಳ ಮಳೆಹನಿ,ಮುಳ್ಳ ಬೇಲಿ, ಜಲಪಾತ.
ಅವಳ ನುಂಗಿ ಇವಳಾದ ಹೆಣ್ಣೆಂಬ ಶಕ್ತಿಗೆ, ಪ್ರೀತಿಗೆ, ಮಾಯೆಗೆ, ಮಾತೆಗೆ-
ಈ ಬಾರಿಯ ಚಂದಮಾಮ.
 
 
 
ಮಹಿಳೆಯರಿಗೆ ಲೋಕ/ರಾಜ್ಯ/ವಿಧಾನಸಭೆಗಳಲ್ಲಿ ಶೇಕಡ ೩೩ ರಷ್ಟು ಮೀಸಲಾತಿ ಕೊಡಬೇಕೆಂದು ಭಾರತದ ಲೋಕಸಭೆಯಲ್ಲಿ ಅಂತರ್ರಾಷ್ಟ್ರೀಯ ಮಹಿಳಾ ದಿನದಂದು ಮಸೂದೆ ಮಂಡನೆಯಾಗಲಿದೆ. ದಶವಾರ್ಷಿಕ ಯೋಜನೆಯಂತೆ ವರ್ಷಾನುವರ್ಷಗಳಿಂದ ಕೇವಲ ಚರ್ಚೆಯಲ್ಲೇ ಉಳಿದಿದ್ದ ವಿಷಯ ಕಡೆಗೂ ಮಂಡನೆಯಾಗಿ, ಅಷ್ಟೇ ಭರದಲ್ಲಿ ಅನುಮೋದನೆಯಾದರೆ ಅದು ಸಾಧನೆಯ ಸುದ್ದಿ. ಅದು ಹಾಗಾಗಲಿ. ಭಾರತದ ಸಾಮಾಜಿಕ ವ್ಯವಸ್ಥೆಯನ್ನು ಮನಸ್ಸಿನಲ್ಲಿಟ್ಟುಕೊಂಡು, ಮಹಿಳೆಯರಲ್ಲೂ ಎಲ್ಲ ವರ್ಗದವರಿಗೆ ಪ್ರಾತಿನಿಧ್ಯ ಇರಬೇಕೆಂದು ಎಸ್ ಪಿ, ಬಿ ಎಸ್ ಪಿ ಇತರೆ ರಾಜಕೀಯ ಪಕ್ಷಗಳು ಶೇಕಡ ೩೩ ರಷ್ಟು ಮೀಸಲಾತಿಯಲ್ಲಿ ಒಳ ಮೀಸಲಾತಿಯನ್ನು ಪ್ರಸ್ತಾಪಿಸಿರುವುದು ಸಮಂಜಸವೇ. ಆದರೆ ಈ ಪ್ರಸ್ತಾಪದಿಂದ ಇಡೀ ಮಸೂದೆಯ ಅಂಗೀಕಾರಕ್ಕೆ ಮತ್ತೆ ತಡೆಯಾಗಬಾರದು. ಮೊದಲ ಹೆಜ್ಜೆಯಾಗಿ ಮೀಸಲಾತಿ ಅನುಮೋದನೆಯಾಗಲಿ.    
 
 
ಫೆಬ್ರವರಿ ೨೦೧೦
 
 
ಜಾಗತೀಕರಣ ನಮ್ಮ ಅತ್ಯಂತ ಕುತೂಹಲದ ವಿಷಯಗಳಲ್ಲೊಂದು. ಅದು ಕೂಡಿಡಲು ಬಾಟಲ್ಲೂ ಇಲ್ಲದ ಜೀನಿ. ನಮ್ಮ ಈ ವಿದೇಶ ವಾಸ, ಜೀವನಾನುಭವ ಕೂಡ ಅದರದ್ದೇ ಪರಿಣಾಮ. ಜಾಗತೀಕರಣದ ವಿವಿಧ ಮುಖಗಳನ್ನು ನೋಡಬೇಕು, ಅದರ ಕುರಿತು ಎಲ್ಲರ ಅನುಭವದ ವಿವೇಕದ ಮಾತುಗಳನ್ನು ಆಲಿಸಬೇಕು, ಜಾಗತೀಕರಣದಿಂದ ಜನಿಸಿರುವ ಒಳಿತು-ಪೀಡೆ-ಪರಾಕಾಷ್ಟೆ ಗಳೇನು ಎನ್ನುವುದನ್ನು ತಿಳಿಯಬೇಕು, ಈ ಅರಿವು ನಮ್ಮೆಲ್ಲರನ್ನೂ ಬೆಳಗಬೇಕು-ಇದು ನಮ್ಮ ಹಂಬಲ.
 
ಜನವರಿ ೨೦೧೦
 
 
ಕಟ್ಟಬೇಕು, ಕಲಿಯಬೇಕು, ಬೆಳೆಯಬೇಕು, ಬಣ್ಣವಾಗಬೇಕು, ಮನ ಮನಗಳ, ಭಾವ ಭಾವಗಳ ಸೇತುವೆಯಾಗಬೇಕು ಅನ್ನೋ ಉದ್ದೇಶದಿಂದ 'ಆಯಾಮ' ಹುಟ್ಟಿದೆ. 'ಆಯಾಮ' ಒಂದು ಕನ್ನಡ ಪತ್ರಿಕೆ, ಅಂತರ್ಜಾಲದ ಬ್ಲಾಗಂಗಣ ಅಷ್ಟೇ ಅಲ್ಲ...ಇದು ನಮ್ಮ-ನಿಮ್ಮ ಮನಸ್ಸಿನ ಮೂಲೆ ಮೂಲೆಯ ಭಾವನೆಗಳನ್ನು ಅಭಿವ್ಯಕ್ತಿಸುವ ಒಂದು ಸುಂದರ ವೇದಿಕೆಯಾಗಬೇಕು, ನಮ್ಮ ದಿನ ನಿತ್ಯದ ಹಾಡು-ಪಾಡು-ಹಿಗ್ಗು-ಹಂಬಲ-ಪರಿಪಾಟಲು-ಪ್ರಕರಣಗಳು ಅಕ್ಷರದ ನದಿಯೊಂದಿಗೆ ಬೆರೆತು, ಹರಿದು ತಂಪು ಕಾವೇರಿಯಾಗಬೇಕು. ನಾವದರಲ್ಲಿ ತೇಲುವ ಪುಟ್ಟ ಪುಟ್ಟ ತೆಪ್ಪಗಳಾಗಿ ಹರಿವಿನ ಪ್ರತೀ ಕ್ಷಣವನ್ನೂ, ತಿರುವನ್ನೂ, ಲಾಲಿಯನ್ನೂ ಆಸ್ವಾದಿಸಬೇಕು, ಅನುಭವಿಸಬೇಕು ಅಂತ ನಮ್ಮ ಬಯಕೆ.

ಸಧ್ಯಕ್ಕೆ, ತಿಂಗಳಿಗೊಮ್ಮೆ ಹೊಸ ಬಟ್ಟೆ ಹಾಕಿಕೊಂಡು ಹಬ್ಬ ಮಾಡುವ ಸಂತಸ ನಮ್ಮದು. ನಿಮಗೂ ಎಲೆ ಹಾಕಿಯಾಗಿದೆ.

ಈ ಬೆಳವೆಯನ್ನು, ಈ ಹರಿವನ್ನು, ಈ ಪಯಣವನ್ನು ಮಧುರವನ್ನಾಗಿ ಮಾಡಿಕೊಳ್ಳೋಣ ಬನ್ನಿ.

 
 
 
 
 
 
Copyright © 2011 Neemgrove Media
All Rights Reserved