ವೇರ್ ಈಸ್ ಮೈ ವೆಪೆನ್??

ನವಮಿ
 
'ಸರಿಯಾಗಿ ತಿಂಡಿ ತಿನ್ನು, ಶಕ್ತಿ ಬರಬೇಕಲ್ವಾ? ಸ್ಕೂಲ್ನಲ್ಲಿ ಯಾರಾದರೂ ಜಗಳ ಕಿತಾಪತಿ ಮಾಡಿದರೆ ಅವರನ್ನು ಎದುರಿಸೋಕಾದ್ರೂ ದೇಹ ಮನಸ್ಸು ಎರಡಕ್ಕೂ ಶಕ್ತಿ ಬೇಕು ತಾನೆ? ಗಟ್ಟಿಯಾಗಬೇಕಾದರೆ ಮೊದಲು ಬಿಗಿಯಾಗಿ ಊಟ ಮಾಡಬೇಕು...’ಊಟದ ತಟ್ಟೆ ಮುಂದೆ ಕನಸು ಕಾಣುತ್ತ, ಅನ್ನ ಪಲ್ಯವನ್ನು ಆಕಡೆ ಈಕಡೆ ಜರುಗಾಡಿಸುತ್ತಾ, ಅದು ಹಾಗೇ ಮಾಯವಾಗಿಬಿಡುವುದೇನೋ ಎಂದು ಆಸೆ ಪಡುತ್ತಾ ಕೂರುತ್ತಿದ್ದ ನಮ್ಮ ಅಸಾಮಾನ್ಯ ನಿರ್ಲಕ್ಷ್ಯದ ಎದುರು ಅಮ್ಮ ಅಪ್ಪ ಮೂರು ಹೊತ್ತೂ ಹೇಳಿ ಸೋತುಬಿಟ್ಟಿದ್ದರು. ’ನಿಮಗೆ ಮಾಡಿ ಬಡಿಸೋದಕ್ಕೆ ಬದಲು ಯಾರಾದ್ರೂ ಬೀದೀಲಿ ಬರೋ ಮಗೂಗೆ ಊಟ ಕೊಟ್ಟರೆ ಅವಾದ್ರೂ ಸಂತೋಷದಿಂದ ತಿನ್ನುತ್ವೆ. ಒಂದು ದಿನ ನಿಮಗೆ ನಿಮ್ಮ ಅಪ್ಪ ಅಮ್ಮ ಹೇಳಿದ್ದು ಗೊತ್ತಾಗುತ್ತೆ. ಯಾಕಾದ್ರೂ ಅವರ ಹೊಟ್ಟೆ ಉರಿಸಿದೆವೋ ಅಂತ ಕೊರಗ್ತೀರಿ ನೋಡಿ...' ಅಂತ ಅಮ್ಮ ಶಕುನ ನುಡಿದಿದ್ದರು. ಆಗ ಅದು ಎಲ್ಲಿಗೂ ತಾಕಿರಲಿಲ್ಲ. ಮನಸ್ಸಿನ ಬ್ರಹ್ಮಾಂಡ ಭಂಡಾರದೊಳಗೆ ಎಲ್ಲೋ ಕಳೇದೂ ಹೋಗಿತ್ತು.
 
ಒಂದು ಕೂಸು ಹುಟ್ಟಿ ಅದು ಹಾಲೆಂಬುದನ್ನಷ್ಟೇ ಅಲ್ಲದೆ ಘನವಾದ ಪದಾರ್ಥಗಳನ್ನು ತಿನ್ನುವುದಕ್ಕೆ ತಯಾರಾದಾಗ, ಅಮ್ಮನಾಗಿ ನನಗೂ ಊಟ ಮಾಡಿಸುವ ಕಡುಕಷ್ಟದ ಕಸರತ್ತೆಂಬುದು ಶುರುವಾದಾಗ ಅವತ್ತು ಅಮ್ಮ ನುಡಿದ ಶಕುನ ನೆನಪಾಗಿ ಬೇಜಾರಾಗಿತ್ತು. ನಾವು ಈಗಿನ ಕಾಲದವರು. ಶಕುನ ನುಡಿದು ಅಥವಾ ಬೇಜಾರು ಮಾಡಿಕೊಂಡು ಕೂತರಾದೀತೇ? ಊಟ ಮಾಡದ ತೊಂದರೆಯನ್ನು ಪ್ರೊಫೆಷನಲ್ ಆಗಿ ಹ್ಯಾಂಡಲ್ ಮಾಡಬೇಕು ಎಂದುಕೊಂಡು ನನ್ನದೇ ಸಮಸ್ಯೆ ಎದುರಿಸುತ್ತಿರುವ ಗೆಳತಿಯರ ಜೊತೆ ಕೂಡಿ ಚರ್ಚೆ ಮಾಡಿದ್ದೆ. ನಾವು ಹ್ಯಾಂಡ್ಸ್ ಆನ್ ಅಮ್ಮಂದಿರು. ಸಮಸ್ಯೆಗಳಿಗೆ ಅಳುವುದಿಲ್ಲ, ಬೇಸರಿಸಿಕೊಳ್ಳುವುದಿಲ್ಲ, ಸಮಸ್ಯೆಗೇ ಅತಿಯಾದ ಹಿಂಸೆ ಕೊಟ್ಟು ಅದೇ ನಮ್ಮನ್ನು ಬಿಟ್ಟು ಓಡುವಂತೆ ಮಾಡುತ್ತೇವೆ ಎಂದು ಬಹಳ ಹೆಮ್ಮೆಯಿಂದ ನಮ್ಮನ್ನು ನಾವೇ ಪ್ರೋತ್ಸಾಹಿಸಿಕೊಳ್ಳುವವರು. ಇಲ್ಲಿ ನಾವು ಏನು ಬೇಕಾದರೂ ಮಾಡಬಹುದು. ಹೀಗೇ ಮಾಡಿ ಎಂದು ಸಲಹೆ ಕೊಡಲು, ಕೆಲವೊಮ್ಮೆ ಜೀವ ತಿನ್ನಲು ನಮ್ಮ ಸಂಬಂಧಿಕರ್ಯಾರೂ ಇಲ್ಲ. ನಾವು ಇಲ್ಲಿ ಒಂಟಿ ಯೋಧರು. ನಮಗೆ ಮಾಡಲಿಕ್ಕೆ ಸಾಧ್ಯವಿಲ್ಲವೆಂದರೆ ನಮಗಾಗಿ ಬೇರೆ ಯಾರೂ ಏನನ್ನೂ ಮಾಡಲು ಇಲ್ಲ ಎಂಬ ಕಟು ಸತ್ಯವನ್ನು ಅನುಭವಿಸಿ ಕಲಿತವರು. ಹೀಗಾಗಿ ನಾವು ಗೆಳತಿಯರು, ತುರುಕಿಸಿಕೊಳ್ಳದೆ ತಾವಾಗೇ ಊಟ ಮಾಡಲೊಲ್ಲದ ನಮ್ಮ ಕೆಟ್ಟ ಪುಟಾಣಿಗಳಿಗೆ ಏನಾದರೂ ಬುಧ್ಧಿ ಕಲಿಸಲೇಬೇಕೆಂದು ಕಾಫಿ ಹೌಸ್ ಒಂದರಲ್ಲಿ ಕಾಫಿ ಹೀರುತ್ತಾ ಸಭೆ ಸೇರಿದೆವು. ನಮ್ಮ ಪಿಳ್ಳೆಗಳು ಬೆಳಗ್ಗಿನ ಸ್ಕೂಲ್ ಗೆ ಹೋಗಿದ್ದವು.
 
ನಾನು ಸಿಕ್ಕಾಪಟ್ಟೆ ಕನ್ಪ್ಯೂಸ್ ಆಗಿರುವ ಕನ್ನಡತಿ, ಒಬ್ಬಳು ಸಾಕ್ಷಾತ್ ಕನ್ನಗಿಯ ಕೋಪದ ಅವತಾರದ ತಮಿಳ್ ಪುತ್ರಿ, ಮತ್ತೊಬ್ಬಳು ಏ ಅಂದರೆ ಓ ಅನ್ನಲೂ ಯೋಚಿಸುವ ಮಹಾನ್ ಸಜ್ಜನೆ, ಮಹಾರಾಷ್ಟ್ರದ ಮಾತೆ. ನಮ್ಮ ಕಾಫಿ ಹೌಸ್ ಮಹಾಸಭೆಯಲ್ಲಿ ಒಬ್ಬೊಬ್ಬರೂ ಒಂದೊಂದು ಘನ ಉಪಾಯವನ್ನು ರೆಡಿ ಮಾಡಿಕೊಂಡು ಮಂಡನೆ ಮಾಡಿದೆವು. ಚಿತ್ರಾ ಉರುಫ್ ನಮ್ಮ ಕನ್ನಗಿ ತನ್ನ ಆರು ವರ್ಷದ ಸುಷ್ಮಾಗೆ ’ಇನ್ನು ಮುಂದೆ ಅವಳಾಗೇ ಹಸಿದು, ಅತ್ತು ಕರೆದು ಕಾಲಿಗೆ ಬಿದ್ದು ಊಟ ಕೇಳುವವರೆಗೂ ಅವಳಿಗೆ ತಟ್ಟೆ ಹಾಕುವುದಿಲ್ಲ ಎಂದು ಶಪಥ ಮಾಡಿಬಿಟ್ಟೀದ್ದೇನೆ’ ಎಂದಳು. ಸಾಧ್ವಿ ಉರುಫ್ ಮಾತೆ ಸುಕೋಮಲೆ ಅವಳ ಬಾಲಾನಿಗೆ ಊಟ ತಿನಿಸದೆ ಬದುಕಲಾರಳು. ಅವಳು ಕನ್ನಗಿಯ ಡಿಸಿಷನ್ ಕೇಳಿ ಗಾಬರಿಯಾದಳು. ಅವಳ ಸೂರಜ್ ಗಿನ್ನೂ ನಾಲ್ಕು ವರ್ಷ. ’ಇನ್ನೊಂದೆರಡು ವರ್ಷ ನಾನೇ ಊಟ ಮಾಡಿಸುತ್ತೇನೆ...ಈಗಲೇ ಅವನಿಂದ ಯಾಕೆ ಎಕ್ಸ್ಪೆಕ್ಟೇಷನ್ ಅಲ್ವಾ...ಆಮೇಲೆ ಅವನೇ ಕಲೀತಾನೆ...ಅವನಿಗೆ ಊಟ ಕೊಡದಿದ್ದರೆ ನಾನು ಹೇಗೆ ಊಟ ಮಾಡ್ಲಿ?!’ ಅಷ್ಟಕ್ಕೇ ಅವಳ ಕಣ್ಣು ಮಂಜಾಗಿಬಿಟ್ಟವು. ’ಇಟ್ಸ್ ಓಕೆ ಸುಮ್ಮನಿರೇ ಸಾಧ್ವಿ...ಏನಾದ್ರೂ ಒಳ್ಳೆ ಮಾರ್ಗ ಹುಡುಕೋಣ’ ಅಂತ ನಾನು ನನ್ನ ಸಲಹೆ ಮುಂದಿಟ್ಟೆ.
 
ನನ್ನ ಕೂಸು ಇವರಿಬ್ಬರ ಮಧ್ಯದ ವಯಸ್ಸಿನದು. ಮಾತು ಜಾಸ್ತಿ, ಊಟ-ಎಗರಾಟ ಕಡಿಮೆ. ಊಟ ಮಾಡೋ ಅಂದರೆ ತಟ್ಟೆಯಲ್ಲಿರುವ ಅನ್ನಕ್ಕೆ ಸಾರಿನ ಜೊತೆ, ದೋಸೆಗೆ ಚಟ್ನಿಯ ಜೊತೆ ಫ್ರೆಂಡ್ ಶಿಪ್ ಮಾಡಿಸಿ ’ಇದನ್ನ ಹೆಂಗಮ್ಮಾ ತಿನ್ಲಿ? ದೋಸೆನ ತಿಂದ್ರೆ ಚಟ್ನಿಗೆ, ಚಟ್ನಿನ ತಿಂದ್ರೆ ದೋಸೆಗೆ ಬೇಜಾರಾಗಲ್ವಾ...ಇಬ್ಬರನ್ನೂ ತಿಂದ್ರೆ ನನಗೆ ಯಾರು ಫ್ರೆಂಡ್ ಇದ್ದಾರೆ ಇಲ್ಲಿ?’ ಅಂತ ನನ್ನನ್ನು ಕಕ್ಕಾಬಿಕ್ಕಿ ಮಾಡುತ್ತಿದ್ದ. ಊಟ ಮಾಡದಿದ್ದರೆ ಮನೆಯಿಂದ ಆಚೆ ಕಳಿಸುತ್ತೇನೆ ಎನ್ನುವಷ್ಟರ ಮಟ್ಟಿಗೆ ಧಮಕಿ ಹಾಕಿದ್ದರೂ ಇವಳೆಲ್ಲಾ ಬರೀ ಮಾತು ಅಂತ ಅವನೂ ಸುಮ್ಮನಾಗಿದ್ದ. ಇಂಟರ್ನೆಟ್ ಪುಟ ಪುಟ ಅಲೆದಿದ್ದೆ. ಕಡೆಗೆ ಮಗನ ಡಾಕ್ಟರ್ರನ್ನು ಕೇಳಿದ್ದೆ. ತಿನ್ನದಿದ್ದರೆ ಯೋಚನೆ ಮಾಡಬೇಡ. ಈ ವಯಸ್ಸಿನಲ್ಲಿ ಮಕ್ಕಳಿಗೆ ಊಟ ಅಂದರೆ ಏನು, ಅದು ಯಾಕೆ ಬೇಕು ಎನ್ನುವ ಬುಧ್ಧಿಯೂ ಇರುವುದಿಲ್ಲ. ಊಟ ಅವರಿಗೆ ಬೇಕೂ ಆಗಿಲ್ಲ. ಹಸಿವಾದಾಗ ಏನಾದರೂ ಸ್ವಲ್ಪ ಕೊಟ್ಟು ಬಿಟ್ಟುಬಿಡು. ಹಾಗೇ ಅವರು ಚನ್ನಾಗಿ ಸುಸ್ತಾಗುವಂತಹ ಏನಾದ್ರೂ ಚಟುವಟಿಕೆಗೆ ಸೇರಿಸು’ ಎಂದಿದ್ದರು. ಹೆಚ್ಚೂ ಕಡಿಮೆ ನಮ್ಮ ಕನ್ನಗಿಯ ತೀರ್ಮಾನಕ್ಕೇ ಒತ್ತು ಕೊಟ್ಟಿದ್ದರು. ಆದರೆ ಮತ್ತೊಂದು ಐಡಿಯಾವನ್ನೂ ಕೊಟ್ಟಿದ್ದರು. ನಾನು ಒಂದಷ್ಟು ಅಲ್ಲಿ ಇಲ್ಲಿ ವಿಷಯ ತಿಳಿದು ಮಕ್ಕಳನ್ನು ನಮ್ಮೂರಿನಲ್ಲಿದ್ದ ಟೇಕವಾಂಡೋ (ಟಾಯ್ಕವಾಂಡೋ) ಕ್ಲಾಸಿಗೆ ಸೇರಿಸಿದರೆ ಹೇಗೆ ಎಂದು ನನ್ನ ಗೆಳತಿಯರಿಗೆ ಸೂಚಿಸಿದೆ. ಇಬ್ಬರೂ ಸಂತೋಷದಿಂದ ಒಪ್ಪಿದರು. ಟೇಕವಾಂಡೋದಿಂದ ಒಂದು ಏಟಿಗೆ ಎರಡು ಹಕ್ಕಿಗಳನ್ನು ಹೊಡೆಯುವ ಪ್ಲಾನ್ ನಮ್ಮದು.
 
ಟೇಕವಾಂಡೋ ಕೊರಿಯಾ ದೇಶದ ಒಂದು ಪುರಾತನ ಮಾರ್ಷಲ್ ಆರ್ಟ್ ಅಥವಾ ಯುಧ್ಧ ಕಲೆ. ನಮ್ಮ ಕುಸ್ತಿಯ ಥರ. ಈ ಕಲೆಯಲ್ಲಿ ಆಯುಧಗಳ ಬಳಕೆ ಇಲ್ಲ. ಎಲ್ಲವನ್ನೂ ತಮ್ಮ ಕೈ ಕಾಲುಗಳ ಸಹಾಯದಿಂದಲೇ ಮಾಡಬೇಕು. ಗಾಜು ಒಡೆಯುವುದು, ಮರ ಒದ್ದು ಬೀಳಿಸುವುದು ಎಲ್ಲವೂ ದೈಹಿಕ ಮತ್ತು ಮಾನಸಿಕ ಬಲದಿಂದ ಸಾಧ್ಯ ಎಂದು ಕಲಿಸುವ ಕಲೆ. ಅಮೆರಿಕಾದಲ್ಲಿ ಅದರ ಹುಚ್ಚು ಜಾಸ್ತಿ. ಮಕ್ಕಳಿಗೆ ತಮ್ಮನ್ನು ತಾವು ರಕ್ಷಿಸಿಕೊಳ್ಳಲು, ತಮ್ಮ ಬಗ್ಗೆ ಭರವಸೆ ಬೆಳೆಸಿಕೊಳ್ಳಲು, ಶಾಂತವಾಗಿರಲು, ಏಕಾಗ್ರತೆ ಬೆಳೆಸಿಕೊಳ್ಳಲು ಮತ್ತು ಗುರು ಶಿಷ್ಯರ ನಡುವಿನ ವಿಧೇಯತೆ ಕಲಿಸಲು ಆಸಕ್ತ ಜನ ಟೇಕವಾಂಡೋ ಕಲೆಯ ಮೊರೆ ಹೋಗುತ್ತಾರೆ.
 
ನಮ್ಮ ಪುಟಾಣಿಗಳಿಗೆ ಇವಿಷ್ಟೂ ಸ್ವಭಾವದ ಅತ್ಯಗತ್ಯವಿತ್ತು. ನಮ್ಮ ಕೂಸುಗಳು ಇಂಡಿಯಾಗೆ ಹೋದಾಗಲೆಲ್ಲ ಅಜ್ಜಿ-ಅಜ್ಜ, ಅತ್ತೆ ಮಾವ, ಮಾಮಿ, ಪಕ್ಕದ ಮನೆಯಾಂಟಿ ಎಲ್ಲರ ಕಂಕುಳಲ್ಲಿ ಬೆಚ್ಚಗೆ ಕೂತು ಮುದ್ದು ಮಾಡಿಸಿಕೊಂಡವರು. ತಟ್ಟೆ ಹಿಡಿದುಕೊಂಡು ಹಿಂದೆ ಸುತ್ತುವ ಏಕ ಪುತ್ರಿ/ತ್ರ ಒಬ್ಸೆಸ್ಡ್ ತಾಯಂದಿರ ಸಂಪೂರ್ಣ ಅಕ್ಕರೆ ಅನುಭವಿಸಿದವರು. ಅದೆಲ್ಲದರ ಜೊತೆಗೇ, ಒಳ್ಳೆ ಹುಡುಗ ಆಗಬೇಕು, ಯಾರನ್ನೂ ಹೊಡೆಯಬಾರದು, ತೊಂದರೆ ಕೊಡಬಾರದು ಅಂತ ಹೇಳಿಸಿಕೊಂಡು, ಹೆದರಿಸಿಕೊಂಡು ಸ್ವಲ್ಪ ಜಾಸ್ತಿಯೇ ಮೆತ್ತಗಾಗಿದ್ದವರು. ಸ್ಕೂಲಿನಲ್ಲೂ ತಗ್ಗಿ ಬಗ್ಗಿ ನಡೆಯುತ್ತಾ ಆಗಾಗ ಅವರ ಬಜಾರ ಸಹಪಾಠಿಗಳ ಕೈಯ್ಯಲ್ಲಿ ಒದೆ ತಿಂದು ಬಂದವರು. ನಮ್ಮ ಮಕ್ಕಳಿಗೆ ಈ ಕಲೆ ಬೇಕೇ ಬೇಕಾಗಿದೆ ಅಂತ ಮಾತೆಯರು ಒಕ್ಕೊರಲಿನ ತೀರ್ಮಾನ ತೆಗೆದುಕೊಂಡೆವು. ಮೂವರನ್ನೂ ಒಂದೇ ದಿನ ಒಂದೇ ಜಾಗದಲ್ಲಿನ ಕ್ಲಾಸಿಗೆ ಹಾಕಬೇಕೆಂದುಕೊಂಡು ಆಗಲೇ ಯುಧ್ಧ ಜಯಿಸಿದ ಖುಷಿಯಲ್ಲಿ ನಮ್ಮ ಸಭೆ ದರಖಾಸ್ತು ಮಾಡಿದೆವು. ಕಾಫಿ ಖಾಲಿಯಾಗಿತ್ತು, ಸ್ಕೂಲ್ ಬಿಡುವ ಸಮಯ ಬೇರೆ.
 
ಅವತ್ತು ಮೂವರನ್ನೂ ಹಿಡಿದುಕೊಂಡು ಅಲ್ಲಿದ್ದ ಬ್ಲ್ಯಾಕ್ ಬೆಲ್ಟ್ ಗ್ರಾಂಡ್ ಮಾಸ್ಟರ್ ಕೈಗೆ ಒಪ್ಪಿಸಿದೆವು. ಈ ವಿದ್ಯೆಯಿಂದ ನಿಮ್ಮ ಮಕ್ಕಳಿಗೆ ಏನು ಸಿಗಬೇಕೆಂಬ ನಿರೀಕ್ಷೆ ನಿಮ್ಮದು ಎಂದು ಆತ ಪ್ರಶ್ನೆ ಕೇಳಿದಾಗ ಮೂವರೂ ಚಾಚೂ ಬಿಡದಂತೆ ನಮ್ಮ ಲಿಸ್ಟನ್ನು ಹೇಳಿದ್ದೆವು. ಆತ ನಸುನಕ್ಕು ನಮ್ಮ ಮಕ್ಕಳನ್ನು ಕರೆದುಕೊಂಡು ಮೊದಲ ಪಾಠ ಹೇಳಿಕೊಟ್ಟಿದ್ದರು. ಅವರಿಗೆ ಆ ದಿನ ಸರ್ವ ಸ್ಟೂಡೆಂಟ್ ಗಳ ಸಮ್ಮುಖದಲ್ಲಿ ವೈಟ್ ಬೆಲ್ಟ್ ಧಾರಣೆ ಮಾಡಿಸಿದ್ದರು. ಪ್ರತಿಜ್ನೆ ಮಾಡಿಸಿದ್ದರು. ಒಂದಷ್ಟು ನೆಗೆಸಿ, ಒದೆಸಿ ಹೈಯ್ಯಾ, ಐಯ್ಯಾ ಎಂದು ಕೂಗಿಸಿದ್ದರು. ಬಿಳಿ ಮಿಡತೆಗಳಂತೆ ಟೊಂಯ್ ಟೊಂಯ್ ಕುಪ್ಪಳಿಸುತ್ತಾ ಟೇಕವಾಂಡೋ ಎಂಬ ಹೊಸ ಆಟ ಆಡುತ್ತಿದ್ದ ನಮ್ಮ ವೀರರನ್ನು ಹೆಮ್ಮೆಯಿಂದ ನೋಡಿದ್ದೆವು. ನಮಗೆ ಆ ಕ್ಲಾಸ್ ಇಷ್ಟವಾಗಿತ್ತು. ನಮ್ಮ ಕೂಸುಗಳೂ ಖುಷಿಯಾಗಿದ್ದವು.
 
ಮಕ್ಕಳು ದೊಡ್ಡವರಾದ ಮೇಲೆ ಅಪ್ಪ-ಅಮ್ಮಂದಿರಿಗೆ ಅದೇನು ಖುಷಿ, ಸಮಾಧಾನ ಸುಖ ಕೊಡುತ್ತಾರೋ ಗೊತ್ತಿಲ್ಲ. ನಾವು ನಮ್ಮ ತಂದೆತಾಯಂದಿರಿಗೆ ಏನು ಕೊಟ್ಟಿದ್ದೇವೋ ಗೊತ್ತಿಲ್ಲ. ನಮಗೆ ನಮ್ಮ ಮಕ್ಕಳಿಂದ ಯಾವ ನಿರೀಕ್ಷೆಯೂ ಇಲ್ಲ. ಆದರೆ ಹುಚ್ಚಾಪಟ್ಟೆ ಜಿಗಿದಾಡುವ, ಬರುವ ತೊದಲು ಮಾತುಗಳಲ್ಲೇ ಇಲ್ಲದ ಸುಳ್ಳು ಕತೆ ಹೇಳುವ, ನಾವು ಹಾಕಿದ ಬಟ್ಟೆ ಹಾಕಿಸಿಕೊಂಡು ಮುದ್ದಾಗಿ ತಯಾರಾಗುವ, ಇವಳು ನಮ್ಮನ್ನು ಕಾಪಾಡುತ್ತಾಳೆ ಎಂದು ನಮ್ಮ ಮೇಲೇ ನಂಬಿಕೆಯಿಟ್ಟು ಜೀವ ತಳೆದಿರುವ ಹೂಮರಿಗಳನ್ನು ನೋಡಿದಾಗ ಪ್ರೀತಿ, ಅಕ್ಕರೆ, ಅವರ ಭವಿಷ್ಯದ ಭಯ, ಯಾವ ಪ್ರಪಂಚಕ್ಕೆ ತಂದಿಟ್ಟಿದ್ದೇವಪ್ಪಾ ಇವರನ್ನು ಎನ್ನುವ ಆತಂಕ, ಇದು ನನ್ನದೆನ್ನುವ ಪೊಸೆಸಿವ್ ಭಾವನೆ ಎಲ್ಲಾ ಬಂದು ಬಿಡುತ್ತದೆ. ನಾವು ಅಷ್ಟೆಲ್ಲಾ ಭಾವನೆಗಳನ್ನೂ ಸಂಪೂರ್ಣವಾಗಿ ಹಲವಾರು ವರ್ಷ ಮನ ತುಂಬಿ ಅನುಭವಿಸುವುದಕ್ಕೆ ಕಾರಣಕರ್ತರಾದ ನಮ್ಮ ಪಿಳ್ಳೆಗಳು ನಮಗಿನ್ನೇನು ಮಾಡಬೇಕು? ಅವರಿವರಿಂದ ತಳ್ಳಾಡಿಸಿಕೊಳ್ಳದೆ ಸಂಪನ್ನವಾಗಿ ಬದುಕಿದರೆ ಸಾಕಲ್ಲವೇ? ಟೇಕುವಾಂಡೋ ಮೇಲೆ ಆಗಲೇ ಸ್ವಲ್ಪ ಭರವಸೆ ಹಾಕಿಯಾಗಿತ್ತು.
 
ಒಂದೆರಡು ಕ್ಲಾಸುಗಳು ನಡೆದಿದ್ದವು. ಗ್ರಾಂಡ್ ಮಾಸ್ಟರ್ ಬಹಳ ತಾಳ್ಮೆಯಿಂದ ಕಲಿಸುತ್ತಿದ್ದರು. ಮಕ್ಕಳು ಕ್ಲಾಸಿನ ಒಳಕ್ಕೆ ಛಲ ದೃಢತೆಯನ್ನು ಧ್ಯಾನಿಸುತ್ತಾ ಕಾಲಿಡುತ್ತಾರೆ. ಗುರುಗಳಿಗೆ ಬಾಗುತ್ತಾರೆ. ಶಿಸ್ತಿನಿಂದ ಅವರ ಮಾತು ಕೇಳುತ್ತಾರೆ, ಅವರ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ. ನಮ್ಮ ಮಕ್ಕಳೂ ಎಲ್ಲರನ್ನೂ ಗಮನಿಸುತ್ತಾ ಕಲಿಯುತ್ತಿದ್ದರು. ನಮ್ಮ ಮೂರು ಕಂದು ಕೂಸುಗಳು ಅಲ್ಲಿದ್ದ ಬಿಳಿ, ಕಪ್ಪು ಮಕ್ಕಳಲ್ಲಿ ಎದ್ದು ಕಾಣುತ್ತಿದ್ದರು. ಅಮೆರಿಕಾಗೆ ಬಂದ ಮೇಲೆ ನಾವೂ ಕಲಿತಿದ್ದೆವು, ನಮ್ಮ ಬಣ್ಣ ನಮ್ಮ ಮೊದಲ ಗುರುತು ಎಂದು.
 
ಅವತ್ತಿನ ಕ್ಲಾಸಿಗೆ ಇನ್ನೊಂದು ಹೊಸ ಪುಟಾಣಿ ಸೇರಿಕೊಳ್ಳುವುದಕ್ಕೆ ತಯಾರಾಗಿ ಬಂದಿತ್ತು. ಒಂದು ಕಡೆ ನಿಲ್ಲದೆ ಇಡೀ ರೂಮೆಲ್ಲಾ ’ಪಿಶ್ಕುಂ ಪಿಶ್ಕುಂ’ ಅಂತ ಸಿನೆಮಾದಲ್ಲಿ ಫೈಟಿಂಗ್ ಮಾಡುವಂತೆ ಕೈಕಾಲು ಅಲ್ಲಾಡಿಸುತ್ತಾ ಸುತ್ತುತ್ತಿತ್ತು. ತುಂಬಾ ಹುರುಪಿನಲ್ಲಿತ್ತು. ಅದರ ಮೊದಲ ದಿನದ ಆಟ ನೋಡಲು ಅವರಪ್ಪ ಅಮ್ಮನೂ ಬಂದಿದ್ದರು. ಅವರ ಅಪ್ಪ ಮೈಮೇಲೆಲ್ಲಾ ಹಚ್ಚೆ ಹುಯ್ಯಿಸಿಕೊಂಡಿದ್ದರು. ಕತ್ತಿನ ಮೇಲೆ ಅಮೆರಿಕಾದ ಧ್ವಜ, ಕಟ್ಟು ಮಸ್ತಿನ ಆಳು. ಬಹುಷಃ ಮಾಜಿ ಯೋಧ ಇರಬಹುದು. ನಮ್ಮ ಮೂವರನ್ನು ನೋಡಿ ಇದೇನು ಇಡೀ ಕ್ಲಾಸೇ ಬ್ರೌನ್ ಆಗಿದೆಯಲ್ಲಾ ಎಂಬಂತೆ ಒಂದು ಕ್ಷಣ ವಿಚಲಿತರಾದರು. ಅವರ ಮಗನ ಫೋಟೋ ತೆಗೆಯುತ್ತಾ ನಿಂತರು. ಆ ಮಗುವೂ ನಮ್ಮ ಮಕ್ಕಳ ವಯಸ್ಸಿಗೇ ಸೇರಿದ್ದರಿಂದ ಎಲ್ಲರೂ ಒಂದೇ ಗುಂಪಿನಲ್ಲುಳಿದರು. ಮಗು ಒಳಗೆ ಬಂದು ಪ್ರತಿಜ್ನೆ ಮಾಡಿತು, ಗುರುಗಳೂ ಹೇಳಿಕೊಟ್ಟಂತೇ ಬಾಗಿ ವಂದಿಸಿತು. ಇನ್ನೇನು ಮೊದಲ ವರಸೆ ಕಲಿಸಬೇಕು...ಅಷ್ಟರಲ್ಲಿ ’ವೇರ್ ಇಸ್ ಮೈ ವೆಪೆನ್?’ ಅಂತ ಜೋರಾಗಿ ಗ್ರಾಂಡ್ ಮಾಸ್ಟರ್ ಅನ್ನು ಕೇಳಿತು. ಗ್ರಾಂಡ್ ಮಾಸ್ಟರ್ ಕಕ್ಕಾಬಿಕ್ಕಿ! ಸಾವರಿಸಿಕೊಂಡು ’ಸರ್ ನಿನ್ನ ಕೈ, ಕಾಲು ಮತ್ತು ದೇಹವೇ ನಿನ್ನ ವೆಪೆನ್’ ಎಂದರು. ಟೇಕವಾಂಡೋನಲ್ಲಿ ಎಲ್ಲರೂ ಎಲ್ಲರಿಗೂ ಗೌರವದಿಂದ ಮಾತಾಡಿಸಬೇಕಾಗಿದ್ದರಿಂದ ನನ್ನ ನಾಲ್ಕು ವರ್ಷದ ಪಿಳ್ಳೆಯೂ ಸರ್, ನಲವತ್ತೈದು ವರ್ಷದ ಬ್ಲ್ಯಾಕ್ ಬೆಲ್ಟ್ ಪಡೆದ ಗ್ರಾಂಡ್ ಮಾಸ್ಟರ್ ಕೂಡಾ ಸರ್! ಆ ಹುಡುಗನಿಗೆ ಅವರ ಉತ್ತರ ಅರ್ಥವಾಗಲಿಲ್ಲ. ’ಐ ವಾಂಟ್ ಮೈ ವೆಪೆನ್’ ಎಂದಿತು. ’ಯೂ ವಿಲ್ ಫೈಂಡ್ ಇಟ್’ ಎಂದರು ಮಾಸ್ಟರ್. ’ಡ್ಯಾಡೀ...ಐ ವಾಂಟ್ ಇಟ್ ನೌ! ಐ ವಾಂಟ್ ಮೈ ವೆಪೆನ್ ನೌ!’ ಅಂತ ಅಪ್ಪನ ಕಡೆ ತಿರುಗಿ ಕೂಗಿತು. ’ಈಗ ಮಾಸ್ಟರ್ ಮಾತು ಕೇಳು’ ಎಂದು ಅಪ್ಪ ಅಮ್ಮ ಸಮಾಧಾನಪಡಿಸಿದರೂ ಮಗು ಕೇಳಲಿಲ್ಲ. ಗ್ರಾಂಡ್ ಮಾಸ್ಟರ್ ತಲೆ ಉಪಯೋಗಿಸಿ ಆತನ ಪಟ್ಟು ಬಿಡಿಸಲು ಮಕ್ಕಳಿಗೆ ಸ್ವಯಂ ರಕ್ಷಣೆ ಕಲಿಸಲು ಇಟ್ಟಿದ್ದ ಸ್ಪಂಜಿನ ಕೋಲೊಂದನ್ನು ತಂದುಕೊಟ್ಟರು. ಮಗು ಅದನ್ನು ಅಲ್ಲಾಡಿಸಿ, ಹಾಗೇ ಸೂರಜ್ನ ಬೆನ್ನಿಗೊಂದು ತಾಕಿಸಿ ನೋಡಿತು. ಇದನ್ನು ಬೀಸಿದರೆ ಏನೂ ಸುಖವಿಲ್ಲ ಎನ್ನಿಸಿತೋ ಏನೋ...’ಐ ವಾಂಟ್ ಅ ರಿಯಲ್ ವೆಪೆನ್ ನೌ. ಐ ಡೋಂಟ್ ವಾಂಟ್ ದಿಸ್ ಥಿಂಗ್’ ಎಂದು ಬಿಸಾಡಿತು.
 
ಮಾಸ್ಟರ್ ಹತಾಶರಾಗಿ ಆತನ ಪೋಷಕರ ಕಡೆ ನೋಡಿದರು. ಅವರು ತಲೆ ಕೆಡಿಸಿಕೊಂಡಿರಲಿಲ್ಲ. ವೆಪೆನ್ ಕೊಡದೆ ಏನು ಸ್ವಯಂ ರಕ್ಷಣೆ ಹೇಳಿಕೊಡುತ್ತಾರೆ ಎನಿಸಿತೋ ಏನೋ...’ಓಕೆ ಜ್ಯಾಕ್ ಈಗ ಅವರು ಹೇಳುವುದನ್ನು ಕಲಿ, ಮನೆಗೆ ಹೋಗುತ್ತಾ ಕೊಡಿಸುತ್ತೇನೆ’ ಎಂದರು. ’ಅ ರಿಯಲ್ ವನ್ ಫಾರ್ ರಿಯಲ್?’ ಮಗು ಕೇಳಿ ಕನ್ಫರ್ಮ್ ಮಾಡಿಕೊಂಡಿತು. ಕ್ಲಾಸ್ ಮುಂದುವರಿಯಿತು.
 
ನಾವು ಮನೆಗೆ ಹೋಗುವ ಮುನ್ನ ಪಾರ್ಕಿಂಗ್ ಲಾಟ್ ನಲ್ಲಿ ನಿಂತು ಆ ಕೂಸು ಕ್ಲಾಸಿನಲ್ಲಿ ಇರುವವರೆಗೆ ಎಲ್ಲರೂ ಕೇರ್ ಫುಲ್ ಆಗಿರಬೇಕು, ನಮ್ಮ ಮಕ್ಕಳು ಆದಷ್ಟು ಬೇಗ ಬೇಸಿಕ್ ಸೆಲ್ಫ್ ಡಿಫೆನ್ಸ್ ಮಾಡಿಕೊಳ್ಳುವಂತೆ ಮನೆಯಲ್ಲಿ ಪ್ರಾಕ್ಟೀಸ್ ಮಾಡಿಸಬೇಕೆಂದು ಶಪಥ ಮಾಡಿಕೊಂಡೆವು!
 


 
 
 
 
 
Copyright © 2011 Neemgrove Media
All Rights Reserved