ಅಂಗಳ      ಇನಿತೆನೆ
Print this pageAdd to Favorite
 
 

 ಮೀಡಿಯಾ ಮೇನಿಯಾ


ನೀವೂ ಅಷ್ಟೇ ನಾವೂ ಅಷ್ಟೇ ಕಣ್ರೀ, ಮೊದಲು ನಮ್ಮ ಅಭಿವೃದ್ದಿ ಮುಖ್ಯ ಅಂದನಾ ಸೋಮರಸ!

 
 
ಅವರೊಬ್ಬ ಪರಮ ಭ್ರಷ್ಟ ಪಕ್ಷಾಂತರಿ ರಾಜಕಾರಣಿ. ಆತ ಬದಲಾಯಿಸದ ಪಕ್ಷವೇ ಕರ್ನಾಟಕದಲ್ಲಿರಲಿಲ್ಲ. ತಮಗೆ ಅನುಕೂಲವಾಗುವ ಸಂದರ್ಭ ಬಂದಾಗೆಲ್ಲಾ ಆತ ರಾಜಕೀಯ ಪಕ್ಷಗಳನ್ನು ಉಟ್ಟ ಬಟ್ಟೆಯಂತೆ ಬದಲಾಯಿಸುತ್ತಿದ್ದರು. ತಾನು ಹಾಗೆ ಪಕ್ಷಗಳನ್ನು ಬದಲಾಯಿಸುವಾಗಲೆಲ್ಲಾ ಆಯಕಟ್ಟಿನ ಜಾಗದಲ್ಲಿ ಕುಳಿತಿದ್ದ ಕೆಲವು ಪತ್ರಕರ್ತರನ್ನು ಚೆನ್ನಾಗಿ ’ನೋಡಿ’ಕೊಳ್ಳುತ್ತಿದ್ದರು. ಅವರುಗಳ ’ನಾಡಿ’ ಮಿಡಿತವನ್ನು ಚೆನ್ನಾಗಿ ಬಲ್ಲ ಚಾಣಾಕ್ಷ ಆತ. ಆ ರಾಜಕಾರಣಿಯ ’ದಕ್ಷಿಣೆ’ ಪ್ರಭಾವಕ್ಕೊಳಗಾದ ಟಿವಿ ನಿರೂಪಕರಿಬ್ಬರು ತಮ್ಮ ಟಿವಿಯ ನೇರಪ್ರಸಾರಕ್ಕೆ ಆತನನ್ನು ಕರೆಸಿಕೊಂಡರು. ಆತನಂತೆಯೇ ಇನ್ನಿಬ್ಬರು ಪಕ್ಷಾಂತರದಲ್ಲಿ ನಿಷ್ಣಾತರಾದ ರಾಜಕಾರಣಿಗಳೂ ’ದಕ್ಷಿಣೆ’ ಸಲ್ಲಿಸಿ ಅಲ್ಲಿ ಆಸೀನರಾಗಿದ್ದರು. ಅಂದಿನ ಚರ್ಚೆಯ ವಿಷಯ ಪಕ್ಷಾಂತರವೇ ಆಗಿದ್ದರಿಂದ ಅಲ್ಲಿದ್ದವರೆಲ್ಲರೂ ಪಕ್ಷಾಂತರಿಗಳೇ ಆಗಿದ್ದರು ಆ ಇಬ್ಬರು ಟಿವಿ ನಿರೂಪಕರೂ ಸೇರಿದಂತೆ.
ಆ ಪಕ್ಷಾಂತರ ಕುರಿತ ಕಾರ್ಯಕ್ರಮದಲ್ಲಿ ಏನೇನು ನಡೆಯಿತು, ಯಾವ ಯಾವ ರಾಜ-ಬೀಜ-ಭೋಜನ-ಭಕ್ಷ್ಯ ಕಾರಣಗಳನ್ನು ಕೊಟ್ಟು ಆ ರಾಜಕಾರಣಿಗಳು ತಮ್ಮ ಪಕ್ಷಾಂತರವನ್ನು ಸಮರ್ಥಿಸಿಕೊಂಡರು, ಅಲ್ಲದೆ ಟಿವಿ ನಿರೂಪಕರಿಬ್ಬರನ್ನೂ ಯಾವ ರೀತಿ ಬೇಸ್ತು ಬೀಳಿಸಿದರೆಂಬುದನ್ನು ನಾವು ನಿಜ ಸ್ವರೂಪದಲ್ಲಿ ನಮ್ಮ ಆಯಾಮದ ಓದುಗರ ಮುಂದಿಡುತ್ತಿದ್ದೇವೆ. ನಿಮ್ಮ ಮನರಂಜಿಸುವುದೇ ನಮ್ಮ ಉದ್ದೇಶ. ಅದು ಬಿಟ್ಟು ನೀವೂ ಅವರ ಪ್ರಭಾವಕ್ಕೊಳಗಾಗಿ ಪಕ್ಷಾಂತರಿಗಳಾದರೆ ಅದಕ್ಕೆ ನಾವು ಖಂಡಿತಾ ಹೊಣೆಯಲ್ಲವೆನ್ನುತ್ತಾ...
 
ಟಿವಿ ನಿರೂಪಕರಿಬ್ಬರೂ ಪಳ ಪಳ ಹೊಳೆಯುವ ಸೂಟುಗಳಲ್ಲಿ ಮಿಂಚತೊಡಗಿದ್ದರು. ಅವರು ಅದ್ಯಾವ ಕಾರಣಕ್ಕೆ ಪಕ್ಷಾಂತರದ ವಿಷಯವನ್ನು ತಮ್ಮ ಕಾರ್ಯಕ್ರಮಕ್ಕೆ ಆರಿಸಿಕೊಂಡಿದ್ದರೋ ಗೊತ್ತಿಲ್ಲ. ಏಕೆಂದರೆ ಅವರುಗಳೇ ಆರಾರು ತಿಂಗಳಿಗೆಲ್ಲಾ ಒಂದು ಟಿವಿಯಿಂದ ಮತ್ತೊಂದು ಟಿವಿಗೆ ನೆಗೆಯುತ್ತಿದ್ದರು. ನಿರೂಪಕರೊಬ್ಬ ತಾನು ಕಟ್ಟಿದ್ದ ಟೈ ಅನ್ನು ಕೊಂಚ ಟೈಟ್ ಮಾಡಿಕೊಂಡು ವೀಕ್ಷಕರತ್ತ ತಿರುಗಿ ’ಪ್ರಿಯ ವೀಕ್ಷಕರೆ, ನಮ್ಮ ಇಂದಿನ ಕಾರ್ಯಕ್ರಮ ಪಕ್ಷಾಂತರ ಕುರಿತದ್ದಾಗಿದೆ. ಯಾಕೆ ಈ ರಾಜಕಾರಣಿಗಳು ಕಪ್ಪೆಗಳಂತೆ ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ನೆಗೆಯುತ್ತಾರೋ ಜನರಿಗೆ ಗೊತ್ತಿಲ್ಲ. ಜನ ಇವರನ್ನು ಒಂದು ಪಕ್ಷದಿಂದ ಗೆಲ್ಲಿಸಿ ಕಳಿಸಿದರೂ ಗೆದ್ದಾದ ಮೇಲೆ ಆ ಪಕ್ಷ ಬಿಟ್ಟು ಮತ್ತೊಂದು ಪಕ್ಷಕ್ಕೆ ಹೋಗುತ್ತಿರುವುದು ನನಗಂತೂ ವಿಸ್ಮಯ ತರಿಸಿದೆ. ಬನ್ನಿ, ಈ ಕುರಿತು ನಮ್ಮೊಂದಿಗೆ ಇಂದು ವಿಜಯನಗರದ ಸೋಮರಸ ಸಾಗುಳುಂ, ಚನ್ನಪಟ್ಟಣದ ಚಂಪಾಕಲಿ ಚಿಲ್ಲರ್, ಹಾಗೂ ಕಿತ್ತೂರಿನ ಕತ್ತಿ ಕಿತ್ತಿನವರ್ ಇದ್ದಾರೆ. ಈ ಮೂವರು ಅತಿ ಮುಖ್ಯ ಗಣ್ಯರಿಗೂ ನಾನು ಶಿರಬಾಗಿ ವಂದಿಸಿ ಈ ಕಾರ್ಯಕ್ರಮವನ್ನು ಆರಂಭಿಸುತ್ತೀನಿ’ ಎಂದು ಆ ಮೂವರತ್ತ ನೋಡಿ ಕೈ ಮುಗಿದರು.
 
ಪ್ರಶ್ನೆ: ’ಮೊದಲು ವಿಜಯನಗರದ ಸೋಮರಸ ಸಾಗುಳುಂರಿಗೆ ನನ್ನ ಪ್ರಶ್ನೆ, ಸೋಮರಸರೇ, ನೀವು ನಿಮ್ಮ ರಾಜಕೀಯ ಜೀವನದಲ್ಲಿ ಕರ್ನಾಟಕದಲ್ಲಿರುವ ಎಲ್ಲಾ ಪಕ್ಷಗಳಲ್ಲೂ "ಕೈ" ಆಡಿಸಿದ್ದೀರಿ, ಯಾಕೆ ನೀವು ಒಂದು ಪಕ್ಷದಲ್ಲಿ ನೆಟ್ಟಗೆ ನಿಲ್ಲಲಿಲ್ಲ?’.
 
ಈ ವಿಜಯನಗರದ ಸೋಮರಸ ಸಾಗುಳುಂ ಸಾಮಾನ್ಯರೇನಲ್ಲ. ಎಲ್ಲದರಲ್ಲೂ ಪಳಗಿದ ಪಟು. ಯಾವ ಸಂದರ್ಭದಲ್ಲಿ ಹೇಗೆ ವರ್ತಿಸಬೇಕೆಂಬುದನ್ನು ಚೆನ್ನಾಗಿ ಅರಿತಿದ್ದವರು. ತಮ್ಮ ಕ್ಷೇತ್ರದಲ್ಲಿನ ಜನತೆಗೆ ಮಂಕು ಬೂದಿಯ ಸ್ನಾನ ಮಾಡಿಸಿ ಮರಳು ಮಾಡುವಲ್ಲಿ ನಿಷ್ಣಾತರಾಗಿದ್ದರು. ಪಕ್ಷಗಳನ್ನು ಬದಲಾಯಿಸಿದಾಗಲೆಲ್ಲಾ ಭಾರೀ ಲಾಭವನ್ನು ಮಾಡಿಕೊಂಡಾತ. ನಿರೂಪಕ ತನಗೇ ಮೊದಲು ಮಾತನಾಡಲು ಅವಕಾಶ ಕೊಟ್ಟಿದ್ದಕ್ಕೆ ತಾನು ನೀಡಿರುವ ಭಾರೀ ’ದಕ್ಷಿಣೆ’ ಯೇ ಕಾರಣವೆಂದುಕೊಳ್ಳುತ್ತಾ ’ನೋಡ್ರೀ ನನಗೆ ನನ್ನ ಕ್ಷೇತ್ರದ ಅಭಿವೃದ್ದಿ ಮುಖ್ಯ, ಅದನ್ನು ನಾನು ಸರಿಯಾಗಿ ಮಾದಬೇಕಮ್ದ್ರೆ ನಾನು ನನ್ನ ಅಭಿವೃದ್ದಿಯನ್ನೂ ನೋಡಿಕೊಳ್ಳಬೇಕಿದೆ. ನಾನು ಬೆಳೆದರೆ ನನ್ನ ಕ್ಷೇತ್ರ ಬೆಳೆಯುತ್ತೆ, ಈ ರಾಜ್ಯ ಬೆಳೆಯುತ್ತೆ. ಈ ರಾಜ್ಯ ಬೆಳೆದರೆ ದೇಶ ಬೆಳೆಯುತ್ತೆ. ಈ ದೇಶ ಬೆಳೆದರೆ ವಿಶ್ವವೇ ಬೆಳೆಯುತ್ತೆ. ಯಾವುದಕ್ಕೂ ಮೊದಲು ನಾನು ಅಭಿವೃದ್ದಿಯಾಗಬೇಕು ಕಣ್ರೀ, ಎಲ್ಲರೂ ಹಾಗಂತ ಅಂದುಕೊಂಡಾಗಲೇ ಮಾತ್ರ ದೇಶ ಅಭಿವೃದ್ಧಿಯಾಗದು. ನನಗೆ ನಾನು ಆಡಳಿತದಲ್ಲಿರುವುದು ಮುಖ್ಯ. ಅದಕ್ಕೇ ನಾನು ನನ್ನ ಜನರ ಒಳಿತಿಗಾಗಿ, ನನ್ನ ಒಳಿತಿಗಾಗಿ ಪ್ರತಿ ಬಾರಿ ಚುನಾವಣೆ ಬಂದಾಗಲೂ ಪಕ್ಷವನ್ನು ಬದಲಾಯಿಸುವುದು’. ಎಂದು ಭಯಂಕರ ಠೀವಿಯಿಂದ ತಾವು ಕಂಡುಕೊಂಡಿದ್ದ ಬ್ರಹ್ಮಾಂಡದ ಅಭಿವೃದ್ದಿಯ ಸತ್ಯವನ್ನು ಚೂರೂ ಮುಚ್ಚು ಮರೆ ಇಲ್ಲದೆ ಹೇಳಿಕೊಂಡರು.
 
’ಎಸ್ ಎಸ್ ಅಭಿವೃದ್ದಿ ತುಂಬಾನೇ ಮುಖ್ಯ’ ಎಂದ ಮತ್ತೊಬ್ಬ ನಿರೂಪಕರು ’ಇದಕ್ಕೆ ನೀವೇನಂತೀರಿ, ಚನ್ನಪಟ್ಟಣದ ಚಂಪಾಕಲೀ ಚಿಲ್ಲರ್ ಅವರೇ’ ಎಂದು ಮಿಸ್ಟರ್ ಚಿಲ್ಲರ್ ನತ್ತ ನೋಡಿದರು.
 
ಚಂಪಾಕಲಿ ಕೂಡ ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ನೆಗೆದಾಡಿದವರೇ. ಮಹಾನ್ ಮಾತಿನ ಮಲ್ಲನಾಗಿದ್ದ ಸೋಮರಸ ಸಾಗುಳುಂ ಪಕ್ಷಾಂತರವನ್ನು ತಮಗಿಂತ ಚನ್ನಾಗಿ ಸಮರ್ಥಿಸಿಕೊಳ್ಳಬಲ್ಲನೆಂಬುದು ಅವರಿಗೆ ಗೊತ್ತಿತ್ತು. ಅಲ್ಲದೇ ಆತ ಮಾಜೀ ಚಿತ್ರನಟನೂ ಆಗಿದ್ದರಿಂದ ನಿರ್ದೇಶಕ ಹೇಳಿಕೊಡುವ ಡೈಲಾಗನ್ನು ಕಂಠಪಾಟ ಮಾಡಿ ಹೇಳುವುದಷ್ಟೆ ಅವರಿಗೆ ಗೊತ್ತಿದ್ದುದು. ಈ ಕಾರ್ಯಕ್ರಮದಲ್ಲಿ ತನಗೆ ಡೈಲಾಗು ಹೇಳಿಕೊಡುವವರು ಯಾರೂ ಇರದಿದ್ದರಿಂದ ತಾನು ಏನೇನೋ ಹೇಳಿ ತನ್ನ ತಲೆಗೆ ತಗಲಾಕಿಸಿಕೊಳ್ಳುವುದಕ್ಕಿಂತ ಸೋಮರಸರನ್ನೇ ಫಾಲೋ ಮಾಡಿಬಿಡುವುದು ಸೇಫ್ ಎನಿಸಿತು. ಸೋಮರಸರೇ ಮಿಸ್ಟರ್ ಚಿಲ್ಲರ್ ಅವರಿಗೆ ಸಿನಿಮಾ ಡೈರಕ್ಟರ್ ನಂತೆ ಕಾಣಿಸತೊಡಗಿದ್ದರಿಂದ ತಾನೂ ಸಾಗುಳುಂ ಹೇಳಿದ್ದನ್ನೇ ಅನುಮೋದಿಸಿ ತೆಪ್ಪಗೆ ಕುಳಿತುಕೊಳ್ಳುವುದೇ ಸರಿಯೆಂದು ನಿರ್ಧರಿಸಿದವರು ’ನೋಡಿ ಸಾರ್, ಇನ್ನೇನೂ ಹೇಳದು ಬೇಡ. ಅಭಿವೃದ್ಧಿಯಿಂದಲೇ, ಅಭಿವೃದ್ದಿ, ಅಭಿವೃದ್ಧಿ, ಅಭಿವೃದ್ಧಿ. ಅದೇ ಮೇನ್’ ಎಂದು ಮೇಜು ಕುಟ್ಟಿ ತಮ್ಮ ಸಿನಿಮೀಯ ಸ್ಟೈಲಿನಲ್ಲಿ ಹೇಳಿ ಮುಂದೇನೂ ಡೈಲಾಗ್ ಹೊಳೆಯದ ಕಾರಣ ಸುಮ್ಮನೆ ಕೂತರು.
 
’ಓಕೆ, ಓಕೆ, ತುಂಬಾ ಚೆನ್ನಾಗಿ ಎಲ್ಲರಿಗೂ ನಾಟುವಂತೆ ಹೇಳಿದ್ರೀ ಚಂಪಾಕಲಿ ಚಿಲ್ಲರ್ ಅವರೇ, ಬನ್ನಿ ಈಗ ಕಿತ್ತೂರಿನ ಕತ್ತಿ ಕಿತ್ತಿನವರ್ ಅವರು ಈ ಬಗ್ಗೆ ಏನು ಹೇಳ್ತಾರೆ ಕೇಳೋಣಾ’ ಎಂದು ನಿರೂಪಕ ಕತ್ತಿಯತ್ತ ನೋಡಿದರು.
 
ಗೆಲ್ಲುವ ಪಕ್ಷಗಳನ್ನೇ ಆಯ್ಕೆ ಮಾಡಿಕೊಂಡು ಸಾಕಷ್ಟು ಪಾರ್ಟಿ ಫ಼ಂಡ್ ಸುರಿದು ಟಿಕೆಟ್ ಪಡೆದು ಗೆದ್ದು ಬರುತ್ತಿದ್ದ ಕಿತ್ತೂರಿನ ಕತ್ತಿ ಕಿತ್ತಿನವರ್ ಏನಿದ್ದರೂ ಆಕ್ಷನ್ ಮಾಡಿ, ಬಲ ಪ್ರಯೋಗ ಮಾಡಿ ಕೆಲಸ ಮಾಡಿಕೊಳ್ಳುತ್ತಿದ್ದ ಪಾರ್ಟಿ. ಅವರಿಗೆ ಬಾಯ್ಬಲ ಪಾಪ ಕಮ್ಮಿ. ಚನ್ನಪಟ್ಟಣದ ಚಂಪಾಕಲಿ ಚಿಲ್ಲರ್ ಅವರು ಗಿಣಿ ಪಾಠ ಒಪ್ಪಿಸಿದಂತೆ ತಾನೂ ಸೋಮರಸರನ್ನು ಬೆಂಬಲಿಸುವುದೇ ಬೆಸ್ಟ್ ಮಾರ್ಗವೆಂದುಕೊಂಡವರು ಚೇರಿನಲ್ಲಿ ಕೂತಿದ್ದವರು ಎದ್ದುನಿಂತು ’ ನನ್ನದೂ ಅಷ್ಟೇರೀ, ನಾನೂ ಅಭಿವೃದ್ಧಿ ಪಾರ್ಟಿನೇ. ನಮ್ಮ್ ಅಭಿವೃದ್ಧಿ ಆಗ್ದೆ ಮತ್ತ ನಾವ್ ಬೇರೆಯವ್ರ ಡೆವೆಲಪ್ಮೆಮ್ಟ್ ಹೆಂಗ್ ಮಾಡೂಕಾಗ್ತದೆ ಹೇಳಿ. ಇಟ್ಸ್ ಅ ವೆರಿ ಗುಡ್ ಪಾಯಿಂಟ. ನನ್ನ ಅಭಿವ್ರದ್ದಿಯಷ್ಟೇ ಮೊದಲು ಮುಖ್ಯ’ ಎಂದು ಕ್ಯಾಮೆರಾ ಕಡೆ ಕೈ ಮುಗಿದು ಕೂತರು.
 
’ಎಸ್ ಎಸ್ ಕೂತ್ಕೊಳಿ ಕೂತ್ಕೊಳಿ ಕಿತ್ತಿನವರ್ ಅವ್ರೇ. ನೀವು ನಿಮ್ಮ ಅಭಿವೃದ್ದಿ ಮುಖ್ಯ ಅಂತಾ ಪ್ರಾಮಾಣಿಕವಾಗಿ ಹೇಳ್ತಿದ್ದೀರಿ, ಹೀಗೆ ಪ್ರಾಮಾಣಿಕವಾಗಿ ಮಾತನಾಡುವವರು ತುಂಬಾ ಕಡಿಮೆ ಜನ. ಆದರೆ ನೀವಷ್ಟೇ ಅಭಿವೃದ್ದಿಯಾದರೆ ಹೇಗೆ? ರಾಜ್ಯದ ಅಭಿವೃದ್ದಿಯೂ ಆಗಬೇಕಲ್ವಾ? ಏನಂತೀರೀ? ಎಂದು ತನ್ನ ಟೈ ಸರಿಪಡಿಸಿಕೊಂಡರು ಮೊದಲ ನಿರೂಪಕ.
 
’ನಾನು ಅದ್ನೇ ಹೇಳಿದ್ದೂರೀ. ನಾನು ಅಭಿವೃದ್ದಿಯ ಪಾರ್ಟಿ. ಎಲ್ರ ಅಭಿವೃದ್ದಿಯೂ ನಮಗೆ ಮುಖ್ಯಾ ಅಂದೆ’ ಮತ್ತೆ ಎದ್ದು ನಿಂತು ಕೈ ಮುಗಿದ ಕತ್ತಿ ಕಿತ್ತಿನವರ್ ಅವರು ದೇಶಾವರಿ ನಗೆ ನಕ್ಕು ಸೀತಲ್ಲಿ ಆಸೀನರಾದರು. (ಇವರು ಪದೇ ಪದೇ ಎದ್ದು ಕೂತು ಮಾಡಿ ಪದೇ ಪದೇ ಕ್ಯಾಮೆರಾ ಆಂಗಲ್ ಬದಲಾಯಿಸಬೇಕಾಗಿದ್ದು ಕ್ಯಾಮೆರಾ ಮನ್ ಗೆ ಸ್ವಲ್ಪ ಕಿರಿ ಕಿರಿ ಆಗಿತ್ತು. ಕೂರ್ಸೇ ಮಾತಾಡ್ಸು ಗುರು ಅಂತ ಕೈಯ್ಯಲ್ಲಿ ನಿರೂಪಕರಿಗೆ ಸಂಜ್ನೆ ಮಾಡಿ ಆತ ಕೆಲಸ ಮುಂದುವರೆಸಿದರು.

’ಅಲ್ಲಾ ಕಣ್ರೀ, ಅಭಿವೃದ್ದಿಯೇನೋ ಸರಿ, ಅದೇ ಮುಖ್ಯ ನಿಜ. ಆದರೆ ನೀವು ಪದೇ ಪದೇ ಹೀಗೆ ಪಕ್ಷಗಳನ್ನು ಬದಲಿಸುತ್ತಾ ಹೋದರೆ ಜನ ಏನಂತಾರೆ, ನಿಮಗೇನೂ ತತ್ವ, ಸಿದ್ದಾಂತ ಇಲ್ವಾ, ಹೀಗೆ ಮಾನವಿಲ್ಲದವರಂತೆ ನೀವು ಎಲ್ಲಾ ಪಕ್ಷದವರನ್ನೂ ಅಪ್ಪಾಜೀ, ಅಪ್ಪಾಜೀ ಅಂತಾ ಕರೀತೀರಲ್ಲಾ ಅದು ಸರೀನಾ ಸೋಮರಸ ಸಾಗುಳುಂ ಅವರೇ?’ ನಿರೂಪಕ ಪ್ರಶ್ನೆ ಎಸೆದರು.
 
ಬೆಳಿಗ್ಗೆ ತಾನೇ ನನ್ನ ಮನೆಗೆ ಬಂದು ದಕ್ಷಿಣೆ ಸ್ವೀಕರಿಸಿಹೋದವ ಈಗ ನನ್ನ ವಿರುದ್ದವೇ ಮಾತಾಡುತ್ತಿದ್ದಾನಲ್ಲಾ ಎಂದು ಕೆರಳಿದ ಸೋಮರಸ ’ಅಲ್ರೀ ನೀವು ನಮಗೆ ಪಕ್ಷಾಂತರ ಮಾಡ್ತೀರಿ ಅಂತಾ ಕೇಳ್ತೀರಲ್ಲಾ, ನೀವೇನು ಸಾಚಾಗಳೆನ್ರೀ, ಈ ಮೊದಲು ನೀವ್ಯಾವ ಟಿವಿಯಲ್ಲಿ ಕೆಲಸ ಮಾಡ್ತಿದ್ರಿ, ನಮ್ಮಂತೆ ನೀವೂ ಮೂರ್ನಾಲ್ಕು ಟಿವಿಯಲ್ಲಿ ಕೆಲಸ ಬಿಟ್ಟು ಈಗ ಇಲ್ಲಿ ಕೆಲಸಕ್ಕೆ ಸೇರಿದ್ದೀರಲ್ಲಾ, ಅದೂ ಪಕ್ಷಾಂತರವೇ ಅಲ್ಲವೇನ್ರೀ, ನಾವಾದರೂ ಕನಿಷ್ಟ ಐದು ವರ್ಷಗಳಿಗೊಮ್ಮೆ ಪಕ್ಷವನ್ನು ಬದಲಿಸುತ್ತೀವಿ, ನೀವು ಮೂರು ತಿಂಗಳಿಗೆ ಆರು ತಿಂಗಳಿಗೆಲ್ಲಾ ಒಂದು ಟೀವಿಯಿಂದ ಇನ್ನೊಂದು ಟಿವಿಗೆ ನೆಗೀತೀರಲ್ರೀ, ನಿಮಗ್ಯಾವ ತತ್ವ, ಸಿದ್ದಾಂತ ಇದೆ ಹೇಳಿ. ನಮಗೆ ಕೇಳೋದಕ್ಕಿಂತ ಮುಂಚೆ ನೀವು ಒಂದು ಕಡೆ ನೆಟ್ಟಗೆ ಇರ್ರೀ...ಆಗ ತತ್ವ ಸಿದ್ದಾಂತದ ಮಾತಾಡಣಾ’ ಸಾಗುಳುಂ ಅವರು ಆ ಇಬ್ಬರೂ ನಿರೂಪಕರಿಗೂ ಚಾರ್ಜ್ ಮಾಡಿಬಿಟ್ಟರು.
ಧಿಡೀರನೇ ಸೋಮರಸ ಹೀಗೆ ತಮ್ಮ ಮೈ ಮೇಲೆ ಬೀಳುತ್ತಾರೆಂದು ಕನಸು ಮನಸಿನಲ್ಲಿಯೂ ಊಹಿಸದ ಆ ಇಬ್ಬರೂ ನಿರೂಪಕರೂ ಒಂದು ಕ್ಷಣ ತಬ್ಬಿಬ್ಬಾಗಿ ಕೂಡಲೇ ಇಬ್ಬರೂ ಒಟ್ಟಿಗೇ ’ವೀಕ್ಷಕರೇ ಚರ್ಚೆ ಬಿಸಿ ಏನ್ರ್ತಾಇದೆ. ಇಲ್ಲೇ ಇರಿ..ಈಗ ಒಂದು ಸಣ್ಣ ಬ್ರೇಕ್’ ಎಂದು ನಿಟ್ಟುಸಿರು ಬಿಟ್ಟರು.
 
ಬ್ರೇಕ್ ನ ಸಮಯದಲ್ಲಿ ಸಾಗುಳುಂರನ್ನು ಸಮಾಧಾನ ಮಾಡಿ, ಪರಸ್ಪರ ಕಾಂಪ್ರಮೈಸ್ ಡೀಲಿಂಗುಗಳ ಮಾತುಕತೆಯಾದ ನಂತರ ಕಾರ್ಯಕ್ರಮ ಮುಂದುವರೆಸಿದ ನಿರೂಪಕರು ’ಪ್ರಿಯ ವೀಕ್ಷಕರೇ, ಪಾಪ ನಮ್ಮ ರಾಜಕಾರಣಿಗಳು ಹೇಳುವುದರಲ್ಲೂ ಸತ್ಯವಿದೆ. ಅವರಿಗೆ ಜನರನ್ನು ಅಭಿವೃದ್ದಿ ಮಾಡಲು ಪಕ್ಷಾಂತರ ಅನಿವಾರ್ಯವಾಗಿದೆ, ಅಭಿವೃದ್ದಿ ಮಾಡಲು ಅನುಕೂಲ ಆಗಲಿ ಅಂತ್ಲೇ ಅವರು ತಮಗೊಪ್ಪುವ ಪಕ್ಷಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇದರಿಂದಾಗಿ ಅವರು ಸದಾ ಅಧಿಕಾರದಲ್ಲಿಯೇ ಉಳಿಯುತ್ತಾರೆ. ಹಾಗಾಗಿ ರಾಜ್ಯದ ಅಭಿವೃದ್ದಿಯೂ ಆಗುವುದು ಸಹಜ ಅಲ್ವೇ. ಪಕ್ಷಾಂತರದಿಂದ ಅಭಿವೃಧ್ಧಿಯಾಗುವುದು, ಅನುಕೂಲವಾಗುವುದು ನಮಗೂ ಅರಿವಾಗಿದೆ’. ಎಂದು ಸೋಮರಸನತ್ತ ನೋಡಿದರು.
 
ಈ ನನ್ ಮಕ್ಕಳ ಆಟ ನನ್ನ ಬಳಿ ಹೇಗೆ ನಡೆಯದೆಂಬಂತೆ ಅಕ್ಕ ಪಕ್ಕದ ರಾಜಕಾರಣಿಗಳನ್ನು ಕಿರಿಕಣ್ಣಿನಲ್ಲಿ ನೋಡಿ ನಕ್ಕ ಕಿಲಾಡಿ ಸೋಮರಸರು ’ನೀವೀಗ ಸರಿಯಾಗಿ ಹೇಳಿದ್ರೀ ನೋಡಿ, ಎಲ್ಲರೂ ತಮ್ಮ ಅಭಿವೃದ್ದಿಯನ್ನು ನೋಡಿಕೊಳ್ಳುವುದು ಮುಖ್ಯ ಕಣ್ರೀ. ನಾನು ಐದಾರು ಪಕ್ಷಗಳಲ್ಲಿ ಕೆಲಸ ಮಾಡಿರುವಾತ. ಬಿಟ್ಟು ಹೋದ ಪಕ್ಷಕ್ಕೂ ಮರಳಿ ಮರಳಿ ಹೋಗುತ್ತೇನೆ, ನನಗೆ ಆ ಬಗ್ಗೆ ಬೇಜಾರಿಲ್ಲ. ಇದು ಮಾನ ಅವಮಾನದ ಪ್ರಶ್ನೆ ಅಲ್ಲ. ಇದು ಅಭಿವೃದ್ಧಿಯ ಪ್ರಶ್ನೆ. ಅಭಿವೃದ್ದಿ ಆಗಬೇಕಾದರೆ ಮಾನ-ಅವಮಾನಗಳನ್ನು ಇಟ್ಟುಕೊಂಡು ತಿರುಗಬಾರದು ಕಣ್ರೀ...ಮನ ಮರ್ಯಾದೆ ಇಟ್ಟುಕೊಂಡು ರಾಜಕೀಯದಲ್ಲಿದ್ದರೆ ನಮ್ಮ ಜನಗಳ ಗತಿ ಏನಾಗಬೇಡ?!’ ಎಂದು ಮತ್ತೊಮ್ಮೆ ತಮ್ಮ ಅಖಂಡ ಬುಧ್ಧಿಮತ್ತೆಯನ್ನು ಪ್ರಾಮಾಣಿಕವಾಗಿ ಹಂಚಿಕೊಂಡರು.
 
’ಆಮೇಲೆ...ಇದಷ್ಟೇ ಅಲ್ಲ..' ಸೋಮರಸರು ಮಾತನ್ನು ನಿಲ್ಲಿಸಲಿಲ್ಲ. ’ಇದೆಲ್ಲಾ ಕಡೆ ನಡೆಯುವಂತಾದ್ದೆ. ನಾವೇನೂ ಸುಮ್ಮ ಸುಮ್ಮನೇ ಪಕ್ಷಾಂತರ ಮಾಡಲ್ಲ. ನಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ಬಿಸಾಕಿ ಆಮೇಲೇ ಪಕ್ಷಾಂತರ ಮಾಡಿರೋರು. ಕೋಟ್ಯಾಂತರ ರೂಪಾಯಿಗಳನ್ನು ಖರ್ಚು ಮಾಡಿ ಶಾಸಕರಾಗಿ ಗೆದ್ದಿರುತ್ತೀವಿ ಗೊತ್ತಾ?. ಅಂತಾ ಶಾಸಕ ಸ್ಥಾನಕ್ಕೆ ಸುಮ್ಮ ಸುಮ್ಮನೇ ರಾಜಿನಾಮೆ ಕೊಡಲು ನಮಗೇನು ಹುಚ್ಚೇನ್ರೀ? ನಾವು ಹಾಕಿರುವ ಬಂಡವಾಳಕ್ಕೆ ನಾಲ್ಕಾರು ಪಟ್ಟು ಹೆಚ್ಚಿಗೆ ಲಾಭ ಸಿಗುವುದಾದಲ್ಲಿ ಮಾತ್ರ ನಾವು ಹೀಗೆ ಪಕ್ಷಗಳನ್ನು ಬದಲಾಯಿಸೋದು ಅರ್ಥವಾಯ್ತಾ. ಆಗಲೇ ನಮ್ಮ ಕ್ಷೇತ್ರದಲ್ಲಿ ಒಳ್ಳೆ ಕೆಲಸ ಮಾಡಕೆ ಆಗೋದು. ನಮ್ಮ ಬಂಡವಾಳಕ್ಕೆ ತಕ್ಕಂತೆ ಲಾಭ ಮಾಡಿಕೊಳ್ಳಲು ಒಂದೇ ಪಕ್ಷದಲ್ಲಿದ್ದರೆ ನಾವು ಐದು ವರ್ಷ ಕಷ್ಟ ಪಡಬೇಕಾಗುತ್ತೆ ಗೊತ್ತಾ, ಆದರೆ ಪಕ್ಷಾಂತರ ಮಾಡುವುದರಿಂದ ಕೇವಲ ಐದಾರು ತಿಂಗಳುಗಳಲ್ಲಿಯೇ ನಮ್ಮ ಬಂಡವಾಳಕ್ಕೆ ಅತಿಯಾದ ಲಾಭ ಸಿಗುತ್ತದೆ. ಈ ಕಾಲದಲ್ಲಿ ಬೇಗ ಬೇಗ ಸಂಪಾದನೆ ಮಾಡುವುದೇ ಮುಖ್ಯ ಅಲ್ಲವೇನ್ರೀ’ ಎಂದು ನಿರೂಪಕರಿಗೇ ಪ್ರಶ್ನೆ ಎಸೆದರು.
ಅವರು ಮಾತು ನಿಲ್ಲಿಸಿದ ಕೂಡಲೇ ಸಧ್ಯ ತಮ್ಮ ಬಗ್ಗೆ ಮತ್ತೆ ಮಾತಾಡಲಿಲ್ಲವಲ್ಲಾ ಎಂದು ಸಮಾಧಾನಗೊಂಡ ನಿರೂಪಕರಿಬ್ಬರೂ ’ವಾಹ್, ಎಷ್ಟು ಸೊಗಸಾಗಿ ಹೇಳಿದಿರೀ ಸಾರ್, ಏನಂತೀರಿ ಚಂಪಾಕಲೀ ಹಾಗೂ ಕತ್ತಿಯವರೇ’, ಎಂದು ಅವರಿಬ್ಬರತ್ತ ನೋಡಿದರು. ಕೂಡಲೇ ಮೇಲೆದ್ದ ಕತ್ತಿಯವರು ’ಸೋಮರಸರು ಸರಿಯಾಗಿ ಹೇಳಿದ್ರುರೀ. ನಾನ್ ಫಸ್ಟ್ ಟಾಯಿಮ್ ಎಲೆಕ್ಶನ್ ನಿಂತಾಗ ನನ್ನ ಮನಿ ಮಠಾನೆಲ್ಲ ಅಡ ಇಟ್ಟು ಸಾಲ ಮಾಡಿ ಬಂಡವಾಳ ಹೂಡಿದ್ದೆ. ಈಗ ನೋಡಿ ಪಕ್ಷಾಂತರದಿಂದಾಗಿ ನಾನು ಎಲ್ಲಿದ್ದೀನಿ ಅಂತ. ನನ್ನ ಕ್ಷೇತ್ರದಲ್ಲಿ ಈಗ ನಾನೇ ರಿಚೆಸ್ಟ್. ಜನ ಹೆಂಗ್ ಹೆಮ್ಮಿ ಪಡ್ತಾರ್ ಗೊತ್ತೇನ್ರೀ...ಇದು ಅಭಿವೃದ್ದಿಯಲ್ವಾ, ಇದನ್ನ್ ನೀವು ಸಪೋರ್ಟ್ ಮಾಡ್ಬೇಕ್ರೀ’ ಎಂದವರು ಯಾವ ಭಾಷಣ ಬರೆದುಕೊಡುವವನ ಸಹಾಯ ಇಲ್ಲದೇ ತಾವಾಗಿಯೇ ಇಷ್ಟೆಲ್ಲವನ್ನೂ ಮಾತಾಡಿದ್ದಕ್ಕೆ ತಮ್ಮ ಬಗ್ಗೆ ಹೆಮ್ಮೆ ಪಟ್ಟುಕೊಂಡು ಮತ್ತೆ ಕೈಮುಗಿದು ಕುಳಿತರು.
ಆತ ಕುಳಿತ ಕೂಡಲೇ ’ಥೂ, ಯಾವ ಡೈಲಾಗೂ ನೆನಪಿಗೆ ಬರ್ತಿಲ್ಲವಲ್ಲಾ’ ಎಂದು ಚಿಂತಾಕ್ರಾಂತನಾದ ಚಂಪಾಕಲಿ ಚಿಲ್ಲರ್ ಹೇರ್ ಸ್ಟೈಲ್ ಸರಿ ಮಾಡಿಕೊಳ್ಳುವವರಂತೆ ತಲೆ ಕೆರೆದುಕೊಳ್ಳುತ್ತಾ ’ಹೌದು, ಹೌದು. ಇಬ್ಬರೂ ಹೇಳಿದ್ದು ಸರಿ. ನಾನು ಒಂದು ಸಿನಿಮಾದಲ್ಲಿ ಲಕ್ಷ ರೂಪಾಯಿಗಳನ್ನು ಸಂಪಾದಿಸಲು ತಿಂಗಳುಗಟ್ಟಲೇ ಕುಣೀಬೇಕು, ಫ಼ೈಟ್ ಮಾಡಬೇಕು, ಇನ್ನೂ ಏನೇನೋ ಮಾಡಬೇಕು. ಆದರೆ ರಾಜಕೀಯಕ್ಕೆ ಬಂದೆ ನೋಡಿ, ಈಗ ನಂಗೆ ಎಲ್ಲ ಈಸಿ. ಅದರಲ್ಲೂ ಈ ಪಕ್ಷಾಂತರದಿಂದಾಗಿ ನನಗೆ ಎಂಥ ಅವಕಾಶ ಸಿಕ್ಕಿದೆ ಗೊತ್ತ...ಇಟ್ಸ್ ಡಿಫೆರೆಂಟ್. ಇದರ ಥೀಮೇ ಡಿಫರೆಂಟ್. ಜನ ನೋಡ್ಬೇಕು, ಅರ್ಥ ಮಾಡ್ಕೋಬೇಕು, ನಮ್ಮ ಹಾರ್ಡ್ ವರ್ಕ್ ನ ಸಪೋರ್ಟ್ ಮಾಡಬೇಕು’ ಯಾವಾಗಲೋ ತನ್ನ ಚಿತ್ರ ಬಿಡುಗಡೆಯ ಟೈಮ್ ನಲ್ಲಿ ಪತ್ರಕತರೆದುರಿಗೆ ಹೇಳಿದ ಡೈಲಾಗ್ ಸಡನ್ನಾಗಿ ಚಿಲ್ಲರ್ ಅವರ ನೆನಪಿಗೆ ಬಂದಿತ್ತು. ಅವರು ಅದೆಲ್ಲವನ್ನೂ ಸೇರಿಸಿ ತಮ್ಮ ಡೈಲಾಗ್ ಹೊಡೆದು ಒಳ್ಳೆ ಶಾಟ್ ಕೊಟ್ಟ ಖುಷಿಯಲ್ಲಿ ನಕ್ಕರು.
’ಓಕೆ, ಓಕೆ, ಈಗ ಕೊನೆಯದಾಗಿ ಏನು ಹೇಳ್ತೀರಿ, ಸೋಮರಸರೇ’ ಎಂದು ನಿರೂಪಕ ಸೋಮರಸನತ್ತ ನೋಡಿದ ಕೂಡಲೇ ಸೋಮರಸ ಸಾಗುಳುಂ ’ನೋಡೀ ಇವ್ರೇ, ನಾನು ಈಗಾಗ್ಲೇ ಹೇಳೊದನ್ನೆಲ್ಲಾ ಹೇಳಿದ್ದೀನಿ, ನೀವು ಟಿವಿಯವರು ಸುಮ್ಮ ಸುಮ್ಮನೇ ನಮ್ಮ ಮೇಲೆ ಗೂಬೆ ಕೂರಿಸುತ್ತೀರ, ನೀವೇ ಕೆಲಸಕ್ಕೆ ಸೇರಿದಾಗ ಎಲ್ಲಿದ್ರಿ ಹೇಳಿ, ನಾನೇ ನೀವು ಸಾವಿರ ರೂಪಾಯಿ ಬಾಡಿಗೆಯ ಪುಟ್ಟ ಮನೆಯಲ್ಲಿರುವುದನ್ನು ನೋಡಿದ್ದೆ. ಈಗ ನಿಮ್ಮನೇಲೇ ಸ್ವಿಮಿಂಗ್ ಪೂಲ್ ಇದೆ, ನಿಮಗೇ ಲಕ್ಷಾಂತರ ರೂಪಾಯಿ ಬಾಡಿಗೆ ಬರುತ್ತಿದೆ ಅಲ್ವಾ, ಇದೆಲ್ಲಾ ಹೇಗೆ ಸಾದ್ಯವಾಯಿತು ಹೇಳಿ, ನೀವು ಒಂದು ಟಿವಿಯಿಂದ ಕಿತ್ತೊಗೆದರೂ ಮತ್ತೊಂದು ಟಿವಿಗೆ ಹೋಗಿದ್ದರಿಂದಲ್ವಾ...ನಿಮ್ಮನ್ನು ಯಾರಾದರೂ ಯಾಕೆ ಒಂದು ಟಿವಿಯಿಂದ ಇನ್ನೊಂದು ಟಿವಿಗೆ ಹೋಗಿದ್ದೀರೆಂದು ಕೇಳಿದ್ದಾರ?? ಅಥವಾ ನೀವಾಗಿ ನೀವೇ ಅದಕ್ಕೆ ಕಾರಣಗಳನ್ನು ಜನರ ಮುಂದೆ ಕೂತು ಹೇಳಿದ್ದೀರಾ?? ಸುಮ್ಮಸುಮ್ಮನೇ ನಮ್ಮನ್ನು ಮಾತ್ರ ಎಳೆದು ತರುತ್ತಿದ್ದೀರಲ್ಲಾ, ಇದು ಸರೀನಾ??’ ಎಂದು ನಿರೂಪಕರ ಜಾತಕ ಶುರು ಮಾಡಿದರು.
ನಿರೂಪಕರಿಬ್ಬರೂ ಬೆವತಂತವರಾಗಿ ’ಪ್ರಿಯ ವೀಕ್ಷಕರೇ, ಇಲ್ಲಿಗೆ ನಮ್ಮ ಇಂದಿನ ಕಾರ್ಯಕ್ರಮವನ್ನು ನಿಲ್ಲಿಸುತ್ತಿದ್ದೇವೆ. ಇವತ್ತು ಇಲ್ಲಿಗೆ ಬಂದಿರುವ ಸಾಗುಳುಂ ಅವರಿಗೂ, ಚಿಲ್ಲರ್ ಅವರಿಗೂ ಮತ್ತು ಕಿತ್ತಿನವರ್ ಅವರಿಗೂ ನಮ್ಮ ನಮಸ್ಕಾರ’ ಎಂದು ಕೈ ಮುಗಿಯುವುದರೊಂದಿಗೆ ಆ ಕಾರ್ಯಕ್ರಮಕ್ಕೆ ಇತಿಶ್ರೀ ಹಾಕಿ ತಮ್ಮ ಮಾನವುಳಿಸಿಕೊಳ್ಳುವ ಪ್ರಯತ್ನ ಮಾಡಿದರು ಎಂಬಲ್ಲಿಗೆ ಈ ವೃತ್ತಾಂತವನ್ನು ನಾವೂ ನಿಲ್ಲಿಸುತ್ತಿದ್ದೇವೆ ಎಂದು ಹೇಳುತ್ತಾ ಜಾಣ ಓದುಗರಾದ ನೀವು ಮುಂದಿನ ಚುನಾವಣೆಯಲ್ಲಿ ಈ ಅಭಿವೃದ್ಧಿ ಪಾರ್ಟಿಯ ಪಕ್ಷಾಂತರಿಗಳಿಗೆ ಯಾವ ರೀತಿ ಪ್ರತಿಕ್ರಿಯಿಸಬಹುದೆಂಬ ಊಹೆಯೊಂದಿಗೆ...  
 
(ಮುಂದುವರೆಯುವುದು) 
  

ಸಹನಾ ಅಪ್ಡೇಟ್  

ಮಧ್ಯಂತರ ಚುನಾವಣೆಯ ಆಸೆಯಲ್ಲಿ ಬಿಜೆಪಿ
ಮೋದಿಗೆ ಮಣೆ, ಅದ್ವಾನಿಗೆ ಮತ್ತೊಮ್ಮೆ ನಾಮ, ಇತ್ತ ನಿತೀಶ್ ಕುಮಾರ್ ಗೆ ಹೊಸ ಅವಕಾಶ!

 
 
ಲೋಕಸಭಾ ಚುನಾವಣೆಗೆ ಇನ್ನೂ ಮೂರು ವರ್ಷ ಇದ್ದರೂ ಬಿಜೆಪಿ ರಾಷ್ಟ್ರೀಯ ಪಾಳೆಯದಲ್ಲಿ ನಡೆಯುತ್ತಿರುವ ಚಟುವಟಿಕೆ ನೋಡಿದರೆ ಬಿಜೆಪಿ ಮಧ್ಯಂತರ ಚುನಾವಣೆಯ ನಿರೀಕ್ಷೆ ಯಲ್ಲಿರುವಂತಿದೆ. ಒಂದು ಪ್ರಮುಖ ರಾಜಕೀಯ ಪಕ್ಷವಾಗಿ ಬಿಜೆಪಿ ಮುಂದಿನ ಪ್ರಧಾನಿ ಅಭ್ಯರ್ಥಿಯ ಮೇಲೆ ಎಲ್ಲ ಗಮನ ಫೋಕಸ್ ಮಾಡುವ ಮೂಲಕ ರಾಷ್ಟ್ರ ರಾಜಕಾರಣದಲ್ಲಿ ಒಂದು ಹೊಸ ತರಂಗ ಹುಟ್ಟಿಸಿದೆ. ೨ಜಿ ಹಗರಣದ ತನಿಖೆ ಸಾಗುತ್ತಿರುವ ಮಾರ್ಗವೇ ಬಿಜೆಪಿಯ ಈ ಲೆಕ್ಕಾಚಾರಕ್ಕೆ ಕಾರಣ. ಆದರೂ ಇನ್ನು ಮೂರು ವರ್ಷ ಅಧಿಕಾರ ನಡೆಸಬೇಕಿರುವ ಮನಮೋಹನಸಿಂಗ್ ಸರ್ಕಾರ ೨ಜಿ ಹಗರಣದಲ್ಲಿ ಸಿಲುಕಿ ಅಧಿಕಾರ ಕಳೆದುಕೊಳ್ಳುತ್ತದೆ ಎನ್ನುವುದು ಅಷ್ಟು ಸುಲಭವಲ್ಲ! ಅದೇನಿದ್ದರು ಬಿಜೆಪಿಯ ಆಸೆ ಎನ್ನಬಹುದು. 
 
ಈಗಲೇ ಪ್ರಧಾನಿ ಹುದ್ದೆಗೆ ಬಿಜೆಪಿ ಅಭ್ಯರ್ಥಿಯ ಹುಡುಕಾಟ ನಡೆಸಲು ಮುಖ್ಯ ಕಾರಣ, ಕಾಂಗ್ರೆಸ್ಸ್ ಮುಂದಿನ ಚುನಾವಣೆಯಲ್ಲಿ ರಾಹುಲ್ ಗಾಂಧಿಯನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಲಿದೆ ಎಂಬ ನಿರ್ಧಾರ. ಯುವಕನ ಮುಂದೆ ೮೪ ವರ್ಷ ವಯಸ್ಸಿನ ಅದ್ವಾನಿ ಅವರನ್ನು ಪ್ರೊಜೆಕ್ಟ್ ಮಾಡುವ ಧೈರ್ಯ ಆರೆಸೆಸ್ ನಾಯಕರಿಗಿಲ್ಲ. ಹಾಗಾಗಿ ನರೇಂದ್ರ ಮೋದಿ ಅವರ ಹೆಸರನ್ನು ಬಿಜೆಪಿ ತೇಲಿ ಬಿಡತೊಡಗಿದೆ. ನಾಯಕತ್ವದ ಕೊರತೆ ಎದುರಿಸುತ್ತಿರುವ ಬಿಜೆಪಿಗೆ ಸರಿಯಾದ ನಾಯಕನ ಅವಶ್ಯಕತೆ ಇಲ್ಲದಿರುವುದೇ ಯಡವಟ್ಟು ಆದರೂ ಅಚ್ಚರಿ ಪಡಬೇಕಿಲ್ಲ. ೬೧ ರ ಹರೆಯದ ಹಾರ್ಡ ಕೋರ್ ಮೋದಿ ಆರೆಸೆಸ್ ನಾಯಕರ ಲೆಕ್ಕಾಚಾರಕ್ಕೆ ನಿಲುಕುವರೇ ಎಂಬುದನ್ನ ಕಾಲವೇ ಹೇಳಬೇಕಿದೆ. ೨ ಜಿ ಹಗರಣದ ಆಳ ಎಲ್ಲಿಗೆ ಹೋಗಿ ತಲಪುತ್ತದೆ. ಯಾರು ಯಾರನ್ನ ಬಲಿ ತೆಗೆದುಕೊಳ್ಳುತ್ತದೆ, ಎಂಬುದರ ಮೇಲಷ್ಟೇ ಯು ಪಿ ಎ ಸರ್ಕಾರದ ಹಣೆ ಬರಹ ನಿರ್ಧಾರವಾಗಲಿದೆ. 
 
ಭಾರತಕ್ಕೆ ಬೇಕೇ ಮೋದಿ?
 
ನರೇಂದ್ರ ಮೋದಿ ಈಗ ದೇಶದೆಲ್ಲೆಡೆ ಚರ್ಚಿತ ಹೆಸರು. ಕಟ್ಟಾ ಅರೆಸೆಸ್ ಗರಡಿಯಲ್ಲಿ ಬೆಳೆದ ಮೋದಿ ಈಗ ಭಾರತದ ಪ್ರಧಾನಿ ಹುದ್ದೆಯ ಅಭ್ಯರ್ಥಿಯಾಗಿ ಬಿಜೆಪಿಯಿಂದ ಕೇಳಿ ಬರುತ್ತಿರುವ ಹೆಸರು. ಗುಜರಾತಿನಲ್ಲಿ ಮಾಡಿದ ಮೋಡಿಯನ್ನೇ ಮೋದಿ ದೇಶದೆಲ್ಲೆಡೆ ಮಾಡುತ್ತಾರೆ ಎನ್ನುವುದು ಬಿಜೆಪಿ ಲೆಕ್ಕಾಚಾರ. ಆರೆಸೆಸ್ ಪ್ರಕಾಂಡ ಪಂಡಿತರೆಲ್ಲ ಈಗಾಗಲೇ ಮೋದಿ ಜಪ ಶುರು ಮಾಡಿದ್ದಾರೆ. 
 
ಗುಜರಾತ್ ನ ಮದ್ಯಮವರ್ಗದ ಕುಟುಂಬದಿಂದ ಬಂದ ಮೋದಿ ಅಪ್ಪಟ ಆರೆಸೆಸ್ ಕುಡಿ. ಎಪ್ಪತ್ತರ ದಶಕದಲ್ಲಿ ಅತ್ಯಂತ ಕ್ರಿಯಾಶಾಲಿಯಾಗಿ ಸಂಘ ಪರಿವಾರಕ್ಕೆ ದುಡಿದ ವ್ಯಕ್ತಿ. ೬೧ ವರ್ಷದ ಮೋದಿ ರಾಜಕೀಯವಾಗಿ ಬೆಳೆದು ಬಂದ ರೀತಿಯೇ ಭಿನ್ನವಾದದ್ದು. ಆರೆಸೆಸ್ ಜೊತೆಗಿನ ಒಡನಾಟ, ಆಪ್ತತೆ, ಜೊತೆಗೆ ಓದುವಾಗಲೇ ಎಬಿವಿಪಿ ಸಂಘಟನೆಯಲ್ಲಿ ತೊಡಗಿಸಿಕೊಂಡು ಬೆಳೆದವರು. ಗುಜರಾತ್ ವಿ ವಿ ಯಲ್ಲಿ ರಾಜಕೀಯ ಶಾಸ್ತ್ರದ ಸ್ನಾತಕೋತ್ತರ ಪದವಿ ಪಡೆಯುವ ಮೂಲಕ ರಾಜಕೀಯ ವಾಗಿ ಪ್ರಬಲ ವ್ಯಕ್ತಿತ್ವ ರೂಡಿಸಿಕೊಂಡಾತ. ಅಣ್ಣನ ಜೊತೆ ರೈಲ್ವೆ ನಿಲ್ದಾಣದಲ್ಲಿ ಟೀ-ಕಾಫಿ ಸರಬರಾಜು ಮಾಡುತ್ತಾ ಬೆಳೆಯುವ ಮೂಲಕ ಮದ್ಯಮ ವರ್ಗದ ಕುಟುಂಬಗಳ ಕಷ್ಟಗಳನ್ನು ಹತ್ತಿರದಿಂದ ನೋಡಿದಾತ. ಹಾಗಾಗಿಯೇ ಗುಜರಾತ್ ರಾಜಕಾರಣದಲ್ಲಿ ಮೋದಿ ಈಗ ನಡೆದದ್ದೇ ದಾರಿ. ಬಿಜೆಪಿ ರಾಷ್ಟ್ರೀಯ ನಾಯಕರಿಗೆ ಮೋದಿ ಬಗ್ಗೆ ಒಮ್ಮತ ಇಲ್ಲದಿದ್ದರೂ, ಆರೆಸೆಸ್ ಗೆ ರಾಷ್ಟೀಯ ಮಟ್ಟದಲ್ಲಿ ಮತ್ತೆ ಬಿಜೆಪಿಯನ್ನು ಕೇಂದ್ರದಲ್ಲಿ ಅಧಿಕಾರಕ್ಕೆ ತರಲು ಬಿಜೆಪಿಯವರ ಕಣ್ಣಿಗೆ ಈಗ ಮೋದಿ ಹೇಳಿಮಾಡಿಸಿದಂತ ವ್ಯಕ್ತಿಯಾಗಿ ಕಾಣುತ್ತಿದ್ದಾರೆ. ಮಾಜಿ ಪ್ರಧಾನಿ ವಾಜಪೇಯಿಗಿಂತಲೂ ಅತಿ ಹೆಚ್ಚು ವಿಶ್ವಾಸಾರ್ಹವಾಗಿ ಕಾಣುತ್ತಿದ್ದಾರೆ! 
 
ಸರಿಸುಮಾರು ಒಂದು ಸಾವಿರಕ್ಕೂ ಹೆಚ್ಚು ಮಂದಿ ನಿರುಪದ್ರವಿಗಳು ಪ್ರಾಣ ತೆರಬೇಕಾಗಿ ಬಂದ ಗೋದ್ರಾ ಹತ್ಯಾಕಾಂಡ ನಡೆದು ಹತ್ತು ವರ್ಷ ಕಳೆದಿದೆ. ಈ ಅಮಾನವೀಯ ಗೋದ್ರಾ ಹತ್ಯಾಕಾಂಡದ ನೆತ್ತರಿನ ಕಮಟು ಇನ್ನೂ ಮೋದಿ ಮೈಗೆ ಅಂಟಿಕೊಂಡಿದೆ. ಮೋದಿ ಈಗಲೂ ಆರೋಪದಿಂದ ಸಂಪೂರ್ಣವಾಗಿ ಮುಕ್ತವಾಗಿಲ್ಲ. ಆದರೆ ಅವರ ಇತ್ತೀಚಿನ ಸದ್ಭಾವನಾ ಉಪವಾಸವನ್ನು ಆತ ಅದ್ಯಾವ ಕಾರಣಕ್ಕೆ ಮಾಡಿದರೆಂಬುದು ಈಗ ಗುಟ್ಟಾಗಿ ಉಳಿದಿಲ್ಲ! ಲೋಕಸಭಾ ಅಧಿವೇಶನದಲ್ಲಿ ಬಿಜೆಪಿ ನಾಯಕ ಅದ್ವಾನಿ ಭ್ರಷ್ಟಾಚಾರದ ವಿರುದ್ದ ದೇಶದಾದ್ಯಂತ ರಥಯಾತ್ರೆ ಕೈಗೊಳ್ಳುವ ಉದ್ದೇಶ ಹೇಳುತ್ತಿದಂತೆಯೇ ಆರೆಸೆಸ್ ವಲಯದಲ್ಲಿ ಅಸಹನೆ ಶುರುವಾಯಿತು. ಅದ್ವಾನಿ ತಮ್ಮ ಅನುಕೂಲಕ್ಕಾಗಿ ರಾಷ್ಟ್ರ ಮಟ್ಟದಲ್ಲಿ ಸುದ್ದಿ ಮಾಡಿಕೊಳ್ಳುವುದು ಆರೆಸ್ಸೆಸ್ ಗೆ ಹಿಡಿಸಲಿಲ್ಲ. ಅದ್ವಾನಿಯವರ ಈ ಹೊಸ ಸ್ಟಂಟ್ ಬಿಜೆಪಿ ಆಂತರಿಕವಲಯದಲ್ಲಿ ಈ ಬೆಳವಣಿಗೆಗಳು ಸಾಕಷ್ಟು ಅತೃಪಿ, ಅಸಹನೆ ಗೆ ಕಾರಣವಾಯಿತು. ಆಗ ನಿರ್ಧಾರವಾದದ್ದೇ ಮೋದಿಯ ಸಧ್ಭಾವನಾ ಉಪವಾಸ! ಈ ಉಪವಾಸ ಮೋದಿಯವರ ಅವಿಭಾಜ್ಯ ಅಂಗವಾಗಿರುವ ಕೋಮುವಾದವನ್ನು ಎಷ್ಟರ ಮಟ್ಟಿಗೆ ಮುಚ್ಚಿಡಲಿದೆಯೋ ನೋಡಬೇಕು. ಇತ್ತೀಚೆಗೆ ಜಾಕಿಯ ಜಾಫ್ರಿ ಅವರ ದೂರಿಗೆ ಸಂಬಂಧಪಟ್ಟಂತೆ ಮೋದಿ ಬಗ್ಗೆ ಸುಪ್ರಿಂಕೋರ್ಟ್ ಯಾವುದೇ ಪ್ರಸ್ತಾಪ ಮಾಡದೆ ಇದ್ದದ್ದು ಆರೆಸೆಸ್ ಪಾಳೆಯದಲ್ಲಿ ಮೋದಿ ಅವರಿಗೆ ಕ್ಲೀನ್ ಚಿಟ್ ಕೊಟ್ಟಂತಾಗಿದೆ. ಆದರೆ ಹತ್ತು ವರ್ಷಗಳ ಹಿಂದೆ ಗೋದ್ರಾದಲ್ಲಿ ನಡೆದ ಪೈಶಾಚಿಕ ಕೋಮು ಗಲಭೆಯ ಸಂದರ್ಭದಲ್ಲಿ ಮುಖ್ಯಮಂತ್ರಿ ಆಗಿದ್ದ ಮೋದಿ ನಡೆದುಕೊಂಡಿದ್ದ ಬರ್ಬರ ಕೋಮುವಾದಿ ರೀತಿಯನ್ನು ಯಾರು ತಾನೇ ಮರೆಯಲು ಸಾಧ್ಯ? ಎಲ್ಲ ಮರೆತಂತೆ, ಹೊಸದಾಗಿ ತಮ್ಮನ್ನು ತಾವು ಪರಿಚಯಿಸಿಕೊಳ್ಳುತ್ತಿರುವವರಂತೆ ಮೋದಿ ಈಗ ಸದ್ಬಾವನ ಉಪವಾಸ ಮಾಡುವ ಮೂಲಕ ಕೋಮು ಸೌಹಾರ್ದ ಮನೋಭಾವನೆ ಮೂಡಿಸಲು ಹೊರಟಿದ್ದು ವಿಪರ್ಯಾಸ. 
 
೨೦೦೧ ಅಕ್ಟೋಬರ್ ನಲ್ಲಿ ಕೇಶುಬಾಯಿ ಪಟೇಲ್ ಅವರ ನಂತರ ಗುಜರಾತಿನ ಮುಖ್ಯಮಂತ್ರಿಯ ಗದ್ದುಗೆ ಹಿಡಿದ ಮೋದಿ ಈವರೆಗೂ ಹಿಂತಿರುಗಿ ನೋಡಿಲ್ಲ. ಬಿಜೆಪಿ ರಾಷ್ಟೀಯ ಕಾರ್ಯದರ್ಶಿ ಆಗಿದ್ದ ಮೋದಿಯವರನ್ನು ಆಗ ಅದ್ವಾನಿ ಬೆಂಬಲಿಸಿದ್ದರು. ಗುಜರಾತ್ ರಾಜಕಾರಣದಲ್ಲಿ ಬಿಜೆಪಿ ನಾಯಕ ವಘೇಲಾ ಜನನಾಯಕನ ಖ್ಯಾತಿ ಪಡೆದಿದ್ದರೆ, ಮೋದಿ ರಾಜಕೀಯ ತಂತ್ರಗಾರಿಕೆಯಲ್ಲಿ ನಿಪುಣ ರಾಜಕಾರಣಿ ಅಂತ ಹೆಸರು ಮಾಡಿ ಪಟ್ಟ ಉಳಿಸಿಕೊಂಡವರು. ಈಗಲೂ ಆಡಳಿತದ ಜೊತೆಗೆ ಚಾಣಾಕ್ಷ್ಯ ತಂತ್ರಗಾರಿಕೆಯೇ ಮೋದಿ ಅವರ ಯಶಸ್ಸಿನ ಗುಟ್ಟು! ಕಟ್ಟಾ ಅರೆಸೆಸ್ ಆಗಿದ್ದ ಮೋದಿ, ಕಾನೂನಿನ ವ್ಯಾಪ್ತಿಯಲ್ಲಿ ಬರದ ಹಿಂದೂ ದೇವಸ್ತಾನಗಳನ್ನು ಎತ್ತಂಗಡಿ ಮಾಡಿಸುವ, ಒಡೆಸುವ ಮೂಲಕ ತಮ್ಮ ಇಮೇಜ್ ಅನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡಿದವರು. ಈ ವಿಚಾರದಲ್ಲಿ ಆರೆಸೆಸ್ ಜೊತೆ ಮನಸ್ತಾಪದ ವಾತಾವರಣ ಸೃಷ್ಟಿಸಿ ಕೊಂಡು ಅಲ್ಪಸಂಖ್ಯಾತರ ಮನವೊಲಿಸುವ ಗಿಮಿಕ್ ಮಾಡಿ ಸೈ ಎನಿಸಿಕೊಂಡದ್ದು ಅವರ ತಂತ್ರಗಾರಿಕೆಯ ಕೈಗನ್ನಡಿ. ಈಗಲೂ ಗುಜರಾತಿನಲ್ಲಿ ಅಭಿವೃದ್ದಿ ಹೆಸರಲ್ಲಿ ಅಲ್ಪಸಂಖ್ಯಾತರನ್ನ ತಮ್ಮ ಹಿಡಿತದಲ್ಲಿ ಹಿಡಿದಿಟ್ಟುಕೊಳ್ಳುವ ನಿರಂತರ ಪ್ರಯತ್ನವನ್ನು ಈತ ಮಾಡುತ್ತಲೇ ಇದ್ದಾರೆ. ಆ ಹಿನ್ನೆಲೆಯಲ್ಲೇ ಮೂರು ದಿನ ಸದ್ಭಾವನಾ ಉಪವಾಸ ಮಾಡಿ ಬಿಜೆಪಿ ರಾಷ್ಟ್ರೀಯ ನಾಯಕರನ್ನೆಲ್ಲ ತಮ್ಮ ಬಳಿಗೆ ಬರುವಂತೆ ಮಾಡಿಕೊಂಡು ದೇಶವ್ಯಾಪ್ತಿ ಪ್ರಚಾರ ಪಡೆದಿದ್ದಾರೆ. 
 
ಅವರ ಈ ಉಪವಾಸದ ಆಟದಲ್ಲಿ ಮುಸ್ಲಿಮರು ಭಾಗವಹಿಸುವಂತೆ ವ್ಯವಸ್ಥಿತವಾಗಿ ನೋಡಿಕೊಳ್ಳುವಲ್ಲಿ ಮೋದಿ ಯಶಸ್ವಿಯಾಗಿರುವುದು ಅವರ ತಂತ್ರಗಾರಿಕೆಗೆ ಇನ್ನೊಂದು ಉದಾಹರಣೆ. ಅಷ್ಟೇ ಏನು, ಉಪವಾಸ ನಡೆದ ಗುಜರಾತ್ ವಿ ವಿ ಆವರಣದಲ್ಲಿ ಮೊಳಗಿದ "ಅಲ್ಲಾ ಹೋ ಅಕ್ಬರ್ " ಕೂಗಿಗೆ ಆರೆಸೆಸ್ ತೀವ್ರ ವಿರೋಧ ವ್ಯಕ್ತಪಡಿಸಿದಾಗ ಆ ಕೂಗನ್ನು ಹತ್ತಿಕ್ಕುವಲ್ಲೂ ಈತ ಯಶಸ್ವಿ ಆದರು. ಮುಸ್ಲಿಂ ಸಮುದಾಯದ ಮುಖಂಡ ಸಯೀದ್ "ಸ್ಕಲ್ ಕ್ಯಾಪ್" ಹಾಕಲು ಹೋದಾಗ ನಿರಾಕರಿಸಿ ಶಾಲು ಹೊದಿಸುವಂತೆ ಸೂಚಿಸಿ ಅಲ್ಲಿ ಕೂರಿಸಿಕೊಂಡು ಬೆಂಬಲ ಪಡೆದುಕೊಂಡಿದ್ದ ಅದೇ ಮುಸ್ಲಿಂ ಸಮುದಾಯಕ್ಕೆ ಅಪಮಾನ ಮಾಡಿ ನಗೆ ಬೀರಿದರು. ಅಲ್ಲಿ ಮೋದಿ ಅವರ ಕೋಮುಸಹಿಷ್ಣುತೆಯ ಮನಸ್ಸು ಆರೆಸೆಸ್ ದೊಣ್ಣೆ ಏಟಿಗೆ ಮುದುರಿಕೊಂಡಿತ್ತು. ಒಟ್ಟಿನಲ್ಲಿ ರಾಷ್ಟ್ರವ್ಯಾಪ್ತಿ ಭಾರೀ ಸುದ್ದಿ ಮಾಡಲು ಹೊರಟ್ಟಿದ್ದ ಮೋದಿ ಅವರ ಇಮೇಜನ್ನು ಅವರ ಸದ್ಭಾವನಾ ಉಪವಾಸ ಡ್ಯಾಮೇಜ್ ಮಾಡಿದ್ದೆ ಜಾಸ್ತಿ ಆಯಿತು. ಅವರ ಈ ಉಪವಾಸ ಅದ್ವಾನಿ ಅವರನ್ನು ಪ್ರಧಾನಿ ಹುದ್ದೆಯಿಂದ ದೂರವಿಡುವ ಆರೆಸೆಸ್ ನ ನಿರ್ಧಾರ ಎನ್ನುವುದು ಬಹಿರಂಗವಾಗಿದೆ. 
 
ಬಿಜೆಪಿಯಲ್ಲಿ ಬಿರುಕು
ಬಿಜೆಪಿಯಲ್ಲೀಗ ಅದ್ವಾನಿ ಹಾಗೂ ಮೋದಿ ನಡುವೆ ಈಗ ದೊಡ್ಡ ಬಿರುಕಿದೆ. ಇದು ಕೇವಲ ಅವರಿಬ್ಬರ ನಡುವಿನ ಬಿರುಕಲ್ಲ. ಇಡೀ ಪಕ್ಷದಲ್ಲಿ ಕಾಣುತ್ತಿರುವ ಒಡಕು, ಆಂತರಿಕ ಕಿರಿಕಿರಿ. ಪ್ರತಿ ವರ್ಷ ಸೆಪ್ಟೆಂಬರ್ ೨೫ ರಂದು ಅಹಮದಾಬಾದ್ ನಲ್ಲಿನ ಸೋಮನಾಥ್ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದ ಅದ್ವಾನಿ ಈ ಬಾರಿ ಬೇಕೆಂದೇ ಅತ್ತ ಸುಳಿದಿಲ್ಲ. ಮೋದಿ ಕೂಡ ಈ ಬಗ್ಗೆ ತಲೆಕೆಡಿಸಿ ಕೊಂಡಿಲ್ಲ. ಭ್ರಷ್ಟಾಚಾರ ವಿರೋಧಿ ರಥಯಾತ್ರೆಯನ್ನು ಅದ್ವಾನಿ ಘೋಷಿಸಿದಾಗಿನಿಂದ ಈ ಆಂತರಿಕ ಕಲಹ ಹೊರಗೆ ಬರುತ್ತಿದೆ. ಅದ್ವಾನಿಯವರ ರಥಯಾತ್ರೆ ಆರೆಸೆಸ್ ನಾಯಕರಿಗೆ ಸುತರಾಂ ಒಪ್ಪಿಗೆಯಾಗಿಲ್ಲ. ’ಪ್ರಧಾನಿ ಹುದ್ದೆಯಿಂದ ನಾನು ದೂರ’ ಎಂದು ಅದ್ವಾನಿಯವರಿಂದ ಹೇಳಿಕೆ ಪಡೆದ ನಂತರವೇ ಅವರ ಭ್ರಷ್ಟಾಚಾರ ವಿರೋಧಿ ರಥಯಾತ್ರೆಗೆ ನಾಗಪುರದ ಅರೆಸೆಸ್ ಹೈಕಮಾಂಡ್ ಮೋಹನ್ ಭಗವತ್ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಇದು ಅದ್ವಾನಿ ಬೆಂಬಲಿಗರನ್ನು ಕೆರಳಿಸಿದೆ. ಆದರೆ ಯಾರಿಗೂ ಬಾಯಿ ಬಿಡಲು ಆಗುತ್ತಿಲ್ಲ. 
 
ಮೋದಿ ಪ್ರಧಾನಿ ಆಗುವುದು ಬಿಜೆಪಿ ಪಾಳೆಯದ ಜೇಟ್ಲಿ, ಸುಷ್ಮಾ ಸ್ವರಾಜ್, ರಾಜನಾಥ್ ಸಿಂಗ್, ಅದ್ವಾನಿ ಸೇರಿದಂತೆ ಸುಮಾರು ಹಿರಿತಲೆಗಳಿಗೆ ಒಮ್ಮತವಿಲ್ಲ. ಜೇಟ್ಲಿಯಾದರೂ ಸುಮ್ಮನಾಗಬಹುದು. ಸುಷ್ಮ ಸ್ವರಾಜ್ ರಿಗಂತೂ ಮೋದಿ ಬಗ್ಗೆ ಅಷ್ಟಕಷ್ಟೇ. ಸುಷ್ಮಾ ವಿರುದ್ದ ’ಸಾಸ್ ಭಿ ಕಭೀ ಬಹೂ ಥೀ’ ವಿಖ್ಯಾತಿಯ ಇರಾನಿ ಅವರನ್ನ ರಾಜ್ಯಸಭೆ ಗೆ ತರಲು ಮೋದಿ ಯತ್ನ ಮಾಡಿದ್ದು ಸುಷ್ಮಾಗೆ ಸಿಕ್ಕಾಪಟ್ಟೆ ಕಿರಿಕ್ ಮಾಡಿದೆ. ಆದರೆ ಆರೆಸೆಸ್ ಅನ್ನು ಎದುರು ಹಾಕಿಕೊಳ್ಳುವ ಶಕ್ತಿ ಈಗ ಯಾರಲ್ಲೂ ಇಲ್ಲ. ಹಾಗಾಗಿಯೇ ಗಡ್ಕರಿ ಥರದ ವ್ಯಕ್ತಿಗಳು ರಾಷ್ಟ್ರೀಯ ಅಧ್ಯಕ್ಷರಾಗಿ ಕರ್ನಾಟಕದ ಗಣಿಕಳ್ಳ ರೆಡ್ಡಿಗಳಿಂದ ಚಿನ್ನದ ಖಡ್ಗ , ಐಶಾರಾಮಿ ಕಾರು ಪಡೆದು ಧನ್ಯರಾಗುವಂತ ಸ್ಥಿತಿಯಲ್ಲಿದ್ದಾರೆ. 
 
ಅದ್ವಾನಿಯವರ ಲೆಕ್ಕಾಚಾರ
ಬಿಜೆಪಿ ಮೋದಿಯವರನ್ನು ಮುಂದಿಟ್ಟುಕೊಂಡು ಪ್ರಧಾನಿ ಹುದ್ದೆಯ ಲೆಕ್ಕಾಚಾರದಲ್ಲಿರುವಾಗಲೇ ಕೆರಳಿರುವ ಅದ್ವಾನಿ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರರಿಗೆ ಹಸ್ತ ಲಾಘವ ನೀಡುವ ಮೂಲಕ ತಮ್ಮ ರಥಯಾತ್ರೆ ಆರಂಭಿಸಲು ಹೊರಟಿದ್ದಾರೆ. 
 
ಬಿಜೆಪಿ ಮೈತ್ರಿಕೊಟವಾದ ಎನ್ ಡಿ ಎ ಯಲ್ಲಿ ಇರುವ ನಾಯಕರಲ್ಲಿ ನಿತೀಶ್ ಕುಮಾರ್, ನವೀನ ಪಟ್ನಾಯಕ್, ಅಜಿತ್ ಸಿಂಗ್, ಮಾಯಾವತಿ, ಪ್ರಪುಲ್ಲ ಕುಮಾರ್ ಮಹಂತ್ ಸೇರಿದಂತೆ ಹಲವಾರು ಜಾತ್ಯಾತೀತ ನಾಯಕರಿದ್ದಾರೆ. ಅದರಲ್ಲೂ ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಈಗಾಗಲೇ ಬಿಹಾರದಲ್ಲಿ ತಮ್ಮ ಆಡಳಿತದಲ್ಲಿ ಸೈ ಎನಿಸಿಕೊಂಡು ಪ್ರಬಲರಾಗಿದ್ದಾರೆ. ಈಗ ಪ್ರಧಾನಿ ಹುದ್ದೆಗೆ ಕೇಳಿ ಬರುತ್ತಿರುವ ಹೆಸರುಗಳಲ್ಲಿ ನಿತೀಶ್ ಕೂಡ ಒಬ್ಬರು. ಲೋಹಿಯಾ, ಜಯಪ್ರಕಾಶ್ ಚಳವಳಿ ಮೂಲಕ ರಾಜಕೀಯ ಪ್ರವೇಶಿಸಿದ ನಿತೀಶ್ ಎಲೆಕ್ಟಿಕಲ್ ಎಂಜಿನಿಯರ್. ಹದಿನೈದು ವರ್ಷಗಳ ಲಲ್ಲೂ ಪ್ರಸಾದ್ ಆಡಳಿತಕ್ಕೆ ಪರ್ಯಾಯ ರಾಜಕೀಯವನ್ನು ಬಿಹಾರ ಜನತೆಗೆ ನೀಡಿ ಯಶಸ್ವಿ ಆಗಿರುವ ೬೦ ವರ್ಷದ ನಿತೀಶ್ ಬಿಹಾರದಲ್ಲೀಗ ಬದಲಾವಣೆಯ ಹರಿಕಾರ. ಎರಡನೆ ಬಾರಿ ಮುಖ್ಯಮಂತ್ರಿ ಗಾದಿ ಏರಿರುವ ನಿತೀಶ್ ಭ್ರಷ್ಟಾಚಾರ ಮುಕ್ತ ಸಮಾಜ ಸೃಷ್ಟಿಗೆ ಪಣತೊಟ್ಟು ನಿಂತಿದ್ದಾರೆ. ಈಗ ಎನ್ ಡಿ ಎ ಕೂಟದಲ್ಲಿ ನಿತೀಶ್ ಹೆಸರು ಕೂಡ ಮುಂಚೂಣಿಯಲ್ಲಿದೆ. ಹಾಗಾಗಿ ನಿತೀಶ್ ಮೋದಿ ಗೆ ಪ್ರಮುಖ ಪ್ರತಿಸ್ಪರ್ಧಿ ಆಗಲಿದ್ದಾರೆ .
 
ಸೌಮ್ಯ ಸ್ವಬಾವದ ನಿತೀಶ್, ಮೋದಿ ಅವರಂತೆ ಫೈರ್ ಬ್ರಾಂಡ್ ಅಲ್ಲ. ಅತ್ಯಂತ ತಾಳ್ಮೆ ವಿವೇಚನೆಯಿಂದ ಅಧಿಕಾರ ನಡೆಸುವ ರಾಜಕ್ಕೀಯ ನಾಯಕ. ಜಾತ್ಯಾತೀತ, ಕೋಮು ಸೌಹಾರ್ದ ಪರಿವಾರಕ್ಕೆ ಹತ್ತಿರ ಆಗುವಂತಹ ನಾಯಕ. ನಿತೀಶರ ಜನಪ್ರಿಯತೆ, ಸಾಧ್ಯತೆ, ಇವುಗಳನ್ನು ಗಮನದಲ್ಲಿಟ್ಟುಕೊಂಡೇ ಅದ್ವಾನಿ ಈಗ ನಿತೀಶ್ ಕಡೆ ವಾಲಿದ್ದಾರೆ. ಜಯಪ್ರಕಾಶ್ ನಾರಾಯಣರ ಜನ್ಮ ದಿನವಾದ ಅಕ್ಟೋಬರ್ ೧೧ ರಂದು ಬಿಹಾರದ ಜೆ ಪಿ ಹುಟ್ಟೂರಿನಲ್ಲಿ ಅದ್ವಾನಿ ರಥಯಾತ್ರೆಗೆ ಆರಂಭಿಸಲಿದ್ದು ಅದಕ್ಕೆ ನಿತೀಶ್ ಚಾಲನೆ ನೀಡಲು ಮುಂದಾಗಿದ್ದಾರೆ. ಇದು ಈಗ ಮೋದಿ ಮತ್ತವರ ಬೆಂಬಲಿಗರಲ್ಲಿ ಆತಂಕ ಮೂಡಿಸಿದ್ದರು ಅಚ್ಚರಿ ಪಡಬೇಕಿಲ್ಲ.
 
ಇತ್ತ ಕರ್ನಾಟಕ...

ಕರ್ನಾಟಕದ ಈಗಿನ ರಾಜಕೀಯ ಒಂಥರಾ ಭಿನ್ನವಾಗಿದೆ. ಮುಖ್ಯಮಂತ್ರಿ ಸದಾನಂದಗೌಡ ಹಸನ್ಮುಖಿಯಾಗಿ ಅಧಿಕಾರ ನಡೆಸಿದ್ದರೂ ಸ್ವಂತ ಉಮೇದಿನಿಂದ ಯಾವುದೇ ನಿರ್ಧಾರ ಕೈಗೊಳ್ಳುವ ಸ್ಥಿತಿಯಲ್ಲಿ ಇಲ್ಲ. ತಮ್ಮ ಬಳಿ ಬರುವ ಪ್ರತಿ ಫೈಲನ್ನು ಅಳೆದು-ತೂಗಿ ನಂತರವಷ್ಟೇ ಸಹಿ ಹಾಕುವಷ್ಟು ಹುಷಾರಾಗಿದ್ದಾರೆ. ಪ್ರತಿಯೊಂದಕ್ಕೂ ಯಡ್ಡಿ ಸಾಹೇಬರನ್ನು ಅವಲಂಬಿಸುವ ಸ್ಥಿತಿಯಿಂದ ಹೊರಬರಲಾಗದೆ ಸಿಕ್ಕ ಅಧಿಕಾರವನ್ನ ಚಲಾಯಿಸಲಾಗದ ಅತಂತ್ರ ಅವರದ್ದು. ಹಾಗೆ ನೋಡಿದರೆ ಉತ್ತಮ ಆಡಳಿತ ನೀಡಿ ತಮ್ಮ ರಾಜಕೀಯ ಛಾಪು ಹೆಚ್ಚಿಸಿಕೊಳ್ಳಲು ಸದಾನಂದಗೌಡರಿಗೆ ಇದು ಸಕಾಲ. ಯಡಿಯೂರಪ್ಪ ಕಾಲದಲ್ಲಿ ಭ್ರಷ್ಟಾಚಾರವನ್ನೇ ಹಾಸಿ ಹೊದ್ದುಕೊಂಡಿದ್ದ ಬಿಜೆಪಿ ಸರ್ಕಾರ ತನ್ನ ಮೈಲೇಲಿರುವ ಕಸ ತೊಳೆದುಕೊಳ್ಳಬೇಕಾದರೆ ಒಂದು ಒಳ್ಳೆಯ ಆಡಳಿತದ ಮ್ಯಾಜಿಕ್ ನಡೆಯಬೇಕಿದೆ. ಸದಾನಂದ ಗೌಡರಿಗೆ ಅವಕಾಶವೇನೋ ಚನ್ನಾಗಿದೆ; ಈಗ ರೆಡ್ಡಿ ಬ್ರದರ್ಸ್ ಅಬ್ಬರ ಇಲ್ಲ, ಈಶ್ವರಪ್ಪ ಬಣದ ಕಿರಿಕಿರಿ ಇಲ್ಲ. ಏನಿದ್ದರೂ ಯಡ್ಡಿ ಸಾಹೇಬರ ಪಾಶ ಮತ್ತು ಯಡ್ಡಿ ಬಣದ ಒತ್ತಡ ತಂತ್ರ ಮಾತ್ರ ಅವರನ್ನ ಕಾಡಬಹುದು. ಈಗಾಗಲೇ ಕೋರ್ಟು-ಕಚೇರಿ ಅಂತ ಅಲೆದು ಯಡ್ಯೂರಪ್ಪ ಕೂಡ ಸುಸ್ತಾಗಿದ್ದಾರೆ. ಹಾಗಾಗಿ ಅವರ ಅಥವಾ ಅವರ ಬೆಂಬಲಿಗರ ಹೆದರಿಕೆಗೆ ಸದಾನಂದ ಗೌಡ ಹೆದರಬೇಕಾಗಿಲ್ಲ. ಆದರೂ ಆಡಳಿತದ ಚುಕ್ಕಾಣಿಯನ್ನು ಹತೋಟಿಗೆ ತೆಗೆದುಕೊಳ್ಳಲು ಅವರಿಗೆ ಸಾಧ್ಯವಾಗುತ್ತಿಲ್ಲ. ಬರೀ ಕಾರ್ಯಕ್ರಮಗಳಲ್ಲಿ ನಗಾಡಿಕೊಂಡು ಕಾಣಿಸಿಕೊಂಡು ಆರಕ್ಕೇರದೆ ಮೂರಕ್ಕಿಳಿಯದೆ ದಾಖಲೆಯಲ್ಲಿ ಹೆಸರು ನೊಂದಾಯಿಸಿಕೊಳ್ಳುವ ಜಾಯಮಾನಕ್ಕೆ ಸೇರಿದವರಂತೆ ಈತ ಸಾಗುತ್ತಿದ್ದಾರೆ. ಸಧ್ಯ ಸರ್ಕಾರದ ಆಡಳಿತಕಿಂತ ಜೈಲು-ಬೇಲುಗಳ ಸುದ್ದಿಯೇ ಹೆಚ್ಚು ಚರ್ಚೆಗೆ ಕಾರಣವಾಗಿದೆ.
 
ಇದಲ್ಲದೆ ಲೋಕಾಯುಕ್ತರ ಸ್ಥಾನಕ್ಕೆ ಹುಡುಕಾಟ ಸಾಗಿದೆ. ಆದರೆ ಯಾರನ್ನು ನೇಮಿಸುವುದು ಎನ್ನುವುದು ಸರ್ಕಾರಕ್ಕೆ ತಲೆನೋವು ತಂದಿರುವಂತಿದೆ. ಯಡಿಯೂರಪ್ಪ ಅದೆಷ್ಟರ ಮಟ್ಟಿಗೆ ಲೋಕಾಯುಕ್ತ ಬಗ್ಗೆ ಹೆದರಿದ್ದಾರೆಂದರೆ ಇತ್ತೀಚಿಗೆ ಬೆಂಗಳೂರು ನಗರ ಲೋಕಾಯುಕ್ತ ಎಸ್ಪಿ ನೇಮಕಕ್ಕೆ ಅವರು ಪಟ್ಟ ಪಾಡು ಅಷ್ಟಿಷ್ಟಲ್ಲ. ಮೊದಲಿಗೆ ಅಂತರೀಕ ಭದ್ರತಾ ಪಡೆಯಲ್ಲಿದ್ದ ನಾಗರಾಜ್ ಅವರನ್ನ ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಲಾಗಿತ್ತು. ವಿಷಯ ಗೊತ್ತಾಗಿದ್ದೆ ತಡ ಯಡಿಯೂರಪ್ಪ ಸದಾನಂದಗೌಡರ ಮೇಲೆ ಸಿಕ್ಕಾಪಟ್ಟೆ ಹರಿಹಾಯ್ದು ಬಿಟ್ಟರಂತೆ. ಅಷ್ಟೇ ಅಲ್ಲ, ಇದನ್ನು ಹೈಕಮಾಂಡ್ ಗಮನಕ್ಕೂ ತಂದು ’ನನ್ನ ಮರ್ಯಾದೆ ಹಾರಾಜು ಹಾಕಲು ಗೃಹ ಸಚಿವ ಅಶೋಕ ನನ್ನ ವಿರುದ್ದ ಪಿತೂರಿ ನಡೆಸುತ್ತಿದ್ದಾರೆ’ ಎಂದು ಗೋಳಾಡಿ ರಂಪ ಮಾಡಿಬಿಟ್ಟರಂತೆ. ನಾಗರಾಜ್ ಲೋಕಾಯುಕ್ತದ ಎಸ್ಪಿ ಆಗಿ ಬಂದರೆ ಯಡ್ಯೂರಪ್ಪನವರ ಮಾತು ನಡೆಯದು ಎನ್ನುವುದು ಇದಕ್ಕೆ ಕಾರಣ. ನಾಗರಾಜ್ ಈಗಿರುವ ಅಧಿಕಾರಿಗಳ ಪೈಕಿ ಒಂಚೂರು ಖಡಕ್ ಅಧಿಕಾರಿ. ವೀರಪ್ಪನ್ ಕಾರ್ಯಾಚರಣೆಯಲ್ಲಿ ಅತಿ ಹೆಚ್ಚು ಕಾಲ ಕಾರ್ಯ ನಿರ್ವಹಿಸಿದ ಅಧಿಕಾರಿ. ಯಾವ ಮುಲಾಜು ನೋಡದ ನಾಗರಾಜ್ ಇನ್ನೇನು ಲೋಕಾಯುಕ್ತ ಎಸ್ಪಿ ಆಗಿ ಅಧಿಕಾರ ವಹಿಸಿಕೊಳ್ಳಬೇಕು ಎನ್ನುವಷ್ಟರಲ್ಲಿ ಸರ್ಕಾರ ಮತ್ತೊಂದು ಆದೇಶ ಹೊರಡಿಸಿ ತುಮಕೂರಿನಲ್ಲಿ ಹೆಚ್ಚುವರಿ ಎಸ್ಪಿ ಆಗಿದ್ದ ಶಿವಶಂಕರ್ ಅವರನ್ನು ಲೋಕಾಯುಕ್ತಕ್ಕೆ ತಂದುಕೂರಿಸಿತು. ಲಿಂಗಾಯಿತ ಸಮುದಾಯಕ್ಕೆ ಸೇರಿದ ಶಿವಶಂಕರ್ ದಿನ ಬೆಳಗಾಗುವಷ್ಟರಲ್ಲಿ ಲೋಕಾಯುಕ್ತ ಎಸ್ಪಿ ಆಗಿ ಅಧಿಕಾರ ವಹಿಸಿಕೊಂಡಿದ್ದರು. ಆಗಲೇ ಯಡ್ಯೂರಪ್ಪ ಸಮಾಧಾನದ ಉಸಿರು ಬಿಟ್ಟದ್ದು. ಇದು ಈಗ ಕರ್ನಾಟಕದಲ್ಲಿ ನಡೆಯುತ್ತಿರುವ ಅಂಡಾಗುಂಡಿಯ ಒಂದು ಉದಾಹರಣೆ ಅಷ್ಟೇ.
 
ಇದಷ್ಟೇ ಅಲ್ಲದೆ ಯಡಿಯೂರಪ್ಪ ತಮ್ಮ ಬೆಂಬಲಿಗ ಸಚಿವರ ಮೂಲಕ ಸದಾನಂದಗೌಡರ ಮೇಲೆ ಸದಾ ಹದ್ದಿನ ಕಣ್ಣಿಟ್ಟಿರುವಂತೆ ಸೂಚಿಸಿದ್ದಾರೆ. ಹಾಗಾಗಿ ಗೌಡರು ಸುಲಭವಾಗಿ ಯಾವುದೇ ಆಡಳಿತಾತ್ಮಕ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಯಾವ ಇಲಾಖೆಯ ಆಯಕಟ್ಟಿನ ಜಾಗದಲ್ಲಿರುವ ಅಧಿಕಾರಿಯನ್ನೂ ತನ್ನ ಅನುಮತಿಯಿಲ್ಲದೆ ಮುಟ್ಟಲು ಯಡ್ಡಿ ಸಾಹೇಬರು ಒಪ್ಪುತ್ತಿಲ್ಲ. ಸದಾನಂದ ಗೌಡ ಯಡ್ಯೂರಪ್ಪನವರ ಹುಚ್ಚು ತಾಳಕ್ಕೆ ತಾಳಕ್ಕೆ ಅನಿವಾರ್ಯವಾಗಿ ಕುಣಿಯುತ್ತಿದ್ದಾರೆ. ಪಕ್ಷದ ಹೈಕಮಾಂಡೇ ಯಡ್ಡೀ ಸಾಹೇಬರಿಗೆ ಹೆದರಿರುವಾಗ ಈ ಗೌಡ ಕೂಡ ಏನು ಮಾಡಿಯಾರು ಹೇಳಿ?
 
ಬಿಜೆಪಿಯ ಹೈಕಮಾಂಡ್ ರಾಜ್ಯದಲ್ಲೂ ರಾಷ್ಟ ಮಟ್ಟದಲ್ಲೂ ಪ್ರಭಾವ, ಶಕ್ತಿ ಕಳೆದುಕೊಂಡು ಹಣ, ಧರ್ಮಕ್ಕೆ ತನ್ನನ್ನು ಮಾರಿಕೊಂಡು ಬಾಯಿ ಕಳೆದುಕೊಂಡಿರುವಂತಿದೆ.  
 
  
 
 
 
 
 
 
Copyright © 2011 Neemgrove Media
All Rights Reserved