ಅಂಗಳ      ಪಂಚವಟಿ
Print this pageAdd to Favorite
 
 
 

 (ಪುಟ ೧೮)

(ಪುಟ )
(ಪುಟ ೧೦)
(ಪುಟ ೧೧)
 (ಪುಟ ೧)  
(ಪುಟ ೧೪)   
(ಪುಟ ೧೫) 
(ಪುಟ ೧೬) 
(ಪುಟ ೧) 
(ಪುಟ ೧)

ಲಾಂಗ್ ಡಿಸ್ಟೆನ್ಸ್ ರಿಲೇಷನ್ಶಿಪ್:ಕನ್ನಡದ ಮುಗ್ಧೆ ಹುಡುಗಿಯೊಬ್ಬಳ ಅಮೆರಿಕನ್ ದುರಂತ.

ಬೇಲಾ ಮರವ೦ತೆ
 
ಡೈರಿ ಅಂತ ಸುಮ್ಮನೆ ಏನೋ ಬರೆಯುತ್ತಿದ್ದೇನೆ ಎಂಬ ಭಯ ಇದೆ. ನನಗೆ ಮುಖ್ಯ ಎನಿಸುವ ವಿಷಯಗಳು, ನನ್ನ ಪುಟ್ಟ ಜೀವನದಲ್ಲಿ ದೊಡ್ಡದಾಗಿ ಕಾಣುವ ಕಾಡುವ ಸಂಗತಿಗಳು ಓದುಗರಿಗೆ ಸಿಲ್ಲಿ ಎನ್ನಿಸಬಹುದು ಎನ್ನುವ ಯೋಚನೆ ಬರುತ್ತದೆ. ಆದರೆ ಒಂದು ಸಮಾಧಾನ-ಇದು ನನ್ನ ಡೈರಿ. ನನ್ನ ದಡ್ಡ ಅಥವಾ ಅಷ್ಟೇನೂ ಬುದ್ದಿವಂತಳಲ್ಲದ ಮೆದುಳಿಗೆ, ಸೂಕ್ಷ್ಮತೆಗೆ ಇಷ್ಟೇ ನಿಲುಕಬಹುದು. ಆದರೂ ನಿಮ್ಮೊಂದಿಗೆ ಹಂಚಿಕೊಳ್ಳುವ ಖುಷಿ ನನ್ನದು. ಇರಲಿ...
 
ಲಲಿತಮ್ಮ ಆಂಟಿಯವರ ಥರದ್ದು ಒಂದು ಬಗೆಯಾದರೆ ಇವತ್ತಿನದು ಮತ್ತೊಂದು ಲಾಂಗ್ ಡಿಸ್ಟನ್ಸ್ ಸಂಬಂಧ. ಈ ’ಲಾಂಗ್ ಡಿಸ್ಟನ್ಸ್’ ನಲ್ಲಿ ವ್ಯಕ್ತಿಗಳ ನಡುವೆ ಇಲ್ಲಿರುವ ಅಂತರವನ್ನು ಅಳೆಯಲೂ ಆಗದು. ನನ್ನ ಪ್ರಕಾರ ಇಲ್ಲಿ ಅಂತರವೂ ಇಲ್ಲ ಸಂಬಂಧವೂ ಇಲ್ಲ. ಬರೀ ವ್ಯಾಪಾರ ಮತ್ತು ಅತ್ಯಾಚಾರ ಮಾತ್ರ. ನಾನು ಕೊಡುವ ಹೆಸರುಗಳನ್ನು ಮರೆತು ಬಿಡಿ, ಹೇಗೂ ಅವು ನಿಜವಲ್ಲ. ನಾ ಕಂಡ ಪರಿಸ್ಥಿತಿಯನ್ನು ನನ್ನಂತೆ ನೋಡಿ. ನೀಮಗೂ ನನ್ನಂತೆಯೇ ಎನಿಸಿದರೆ ನಾನು ನಾರ್ಮಲ್ ಎಂದುಕೊಳ್ಳುತ್ತೇನೆ. 
 
’ಉಷಾ’ ನನ್ನ ಪರಿಚಯದವರು. ಕರ್ನಾಟಕ ತಮಿಳುನಾಡಿನ ಗಡಿ ಪ್ರದೇಶದವರು. ಅವರ ತಂದೆ ಕರ್ನಾಟಕದ ಒಂದು ವಿಜ್ನಾನ ಸಂಶೋಧನಾ ಕೇಂದ್ರದಲ್ಲಿ ಹಿರಿಯ ವಿಜ್ನಾನಿಯಾಗಿ ನಿವೃತ್ತರಾಗಿದ್ದರು. ಹಲವಾರು ದೇಶಗಳಲ್ಲಿ ಸಂಶೋಧನಾ ಕೆಲಸ ಮಾಡಿದ್ದವರು. ಅವರು ೭೦ರ ದಶಕದಲ್ಲಿ ಅಮೆರಿಕಾಗೆ ಕುಟುಂಬ ಸಮೇತ ಬಂದಿದ್ದಾಗ ಉಷಾ ಅಮೆರಿಕಾದಲ್ಲಿ ಹುಟ್ಟಿದ್ದರು. ಆಕೆ ಅಮೆರಿಕನ್ ಪ್ರಜೆಯಾದರೂ ಓದಿದ್ದು, ಬೆಳೆದದ್ದು ಎಲ್ಲವೂ ಭಾರತದಲ್ಲಿಯೇ. ಅದೂ ಕಟ್ಟಾ ಸಂಪ್ರದಾಯಸ್ತರ ಮನೆ ಮಗಳಾಗಿ. ಭಯಂಕರ ಭಯ ಭಕ್ತಿಯ ಪಾಠ ಕಲಿತು.
 
ನೋಡಲು ಥಳುಕು ಬಳುಕಲ್ಲದ ಸರಳ ಸುಂದರಿ ಅಷ್ಟೋ ಇಷ್ಟೋ ಓದಿಕೊಂಡಿದ್ದ ಉಷಾಗೆ ಒಳ್ಳೆಯ ಸಂಪಾದನೆಯಿರುವ ’ಗಂಡು’ ಸಿಕ್ಕುವುದು ಕಷ್ಟವೇನೂ ಆಗಿರಲಿಲ್ಲ. ಏಕೆಂದರೆ ಆಕೆ ಚಿನ್ನದ ಗಣಿ, ಅಮೆರಿಕನ್ ಸಂಜಾತೆ. ತಾನಲ್ಲದೆ ತನ್ನ ಗಂಡನನ್ನೂ ಯಾವಾಗ ಬೇಕಾದರೂ ಅಮೆರಿಕಾಗೆ ಕರೆದುಕೊಂಡು ಹೋಗಬಲ್ಲವಳು. ಹಾಗೇ ಆಯಿತು. ಸ್ವಜಾತೀಯ ಸಾಫ್ಟ್ ವೇರ್ ಗಂಡಸೊಬ್ಬ ಉಷಾರನ್ನು ದಕ್ಷಿಣೆಯ ಸಮೇತ ಮದುವೆಯಾಗಿ ಅಮೆರಿಕಾದ ಹೊಸ್ತಿಲು ಹಾಯ್ದಿದ್ದ. ಈ ರೀತಿ ಆತನಿಗೆ ಅಮೆರಿಕಾಗೆ ಬರಲು ಅನುಕೂಲವೇನೋ ಆಯಿತು. ಆದರೆ ಇಲ್ಲಿನ ಪೌರತ್ವ ಸಿಗಲು ೪-೫ ವರ್ಷಗಳು ಬೇಕಾದವು. ಬಂದವರು ದೇಶ ಸುತ್ತಲಿಲ್ಲ, ಗಂಡನೆಂಬ ಗಂಡಸನ್ನು ಅರಿಯಲಿಲ್ಲ. ಆದರೆ ಅಪ್ಪಟ ಹೆಂಡತಿಯಾದರು. ಆ ನಾಲ್ಕೈದು ವರ್ಷಗಳೂ ಉಷಾ ಬಿಡುವಿಲ್ಲದೆ ಒಂದರ ಹಿಂದೊಂದರಂತೆ ಮೂರು ಮಕ್ಕಳನ್ನು ಸಂಭ್ರಮದಿಂದ ಹೆತ್ತರು. ಅವರ ಗಂಡನಿಗೆ ಮಕ್ಕಳೆಂದರೆ ತುಂಬಾ ಇಷ್ಟವಂತೆ! ಅಷ್ಟೇ ಅಲ್ಲದೆ ಅಮೆರಿಕನ್ ಸರ್ಕಾರ ಮೂರು ಮಕ್ಕಳಿರುವವರಿಗೆ ಟ್ಯಾಕ್ಸ್ ನಲ್ಲಿ ಕಡಿತ ಕೊಡುತ್ತದಂತೆ! ಮುಗ್ಧೆ ಉಷಾಗೆ ಈ ಕಾರಣಗಳೇ ಸಾಕಿದ್ದವು. 
 
ಮಕ್ಕಳನ್ನು ಹೆತ್ತು ಬಾಣಂತನ ಮಾಡಿಸಿಕೊಳ್ಳುವಷ್ಟರಲ್ಲಿ ಗಂಡನಿಗೆ ಪೌರತ್ವ ಸಿಕ್ಕಿತ್ತು. ಅಷ್ಟರಲ್ಲಿ ಆತ ಒಂದಷ್ಟು ಕೋರ್ಸು ಗೀರ್ಸು ಕಲಿತು ಒಳ್ಳೆ ಕೆಲಸ ಹಿಡಿದಿದ್ದ. ನಯ ನಾಜೂಕು ಸ್ಟೈಲ್ ಕಲಿತು ’ಅಮೆರಿಕನ್’ ಆಗಿದ್ದ. ಹೆಚ್ಚು ಜನ ಭಾರತೀಯರಿಲ್ಲದ ಜಾಗದಲ್ಲಿ ಮನೆಯೊಂದನ್ನು ಬಾಡಿಗೆ ಹಿಡಿದು ಹೆಂಡತಿ ಮಕ್ಕಳನ್ನು ತಂದಿಟ್ಟ. ಉಷಾರ ಪಾಸ್ಪೋರ್ಟ್, ಸೋಶಿಯಲ್ ಸೆಕ್ಯುರಿಟಿ ಕಾರ್ಡ್ ಎಲ್ಲವನ್ನೂ ತನ್ನ ಸುಪರ್ದಿಗೆ ತೆಗೆದುಕೊಂಡು ಆಕೆಯನ್ನು ಮನೆಯಲ್ಲೇ ಇದ್ದು ಮಕ್ಕಳನ್ನು ಸಂಭಾಳಿಸಬೇಕೆಂದು ತಾಕೀತು ಮಾಡಿದ. ಈ ವ್ಯಕ್ತಿ ಬೇರೆ ಊರಿನಲ್ಲಿ ಕೆಲಸ ಹಿಡಿದಿದ್ದ. ವಾರಕ್ಕೆರಡು ದಿನ ಬಟ್ಟೆ ಒಗೆಸಿಕೊಂಡು ಇಸ್ತ್ರಿ ಮಾಡಿಸಿಕೊಂಡು ಹೋಗಲು ಮನೆಗೆ ಬರುತ್ತಿದ್ದ. ಆತ ಮನೆಗೆ ಬಂದಾಗಲೇ ಮನೆಗೆ ಬೇಕಾದ ದಿನಸಿ ಹಾಲು ಹಣ್ಣು ತಂದಿಡುತ್ತಿದ್ದ. ಸಂಕೋಚ, ಭೀಡೆ, ಭೀತಿಯಲ್ಲೇ ಬೆಳೆದ ಉಷಾಗೆ ಕಾರ್ ಓಡಿಸಲೂ ಬರುತ್ತಿರಲಿಲ್ಲ. ಅವರ ಬಳಕೆಗಾಗಿ ಕಾರ್ ಕೂಡಾ ಇರಲಿಲ್ಲ! ಮಕ್ಕಳಿಗೆ ಆರೋಗ್ಯ ಕೆಟ್ಟು ಔಷಧ ಬೇಕಾದರೆ ಉಷಾ ಭಾರತದಿಂದ ಕೊಂಡೊಯ್ದಿದ್ದ ಕ್ರೋಸಿನ್ ಇತ್ಯಾದಿಗಳ ಮೊರೆ ಹೋಗುತ್ತಿದ್ದರು. ಗಂಡ ಬಂದ ಮೇಲೇ ಡಾಕ್ಟರರ ಮುಖ, ಅದೂ ತೀರ ಅಗತ್ಯ ಎನಿಸಿದರೆ! ಭಾರತಕ್ಕೆ ದೂರವಾಣಿ ಮಾಡುವ ಕಾಲಿಂಗ್ ಕಾರ್ಡ್ ಗಳ ಪಾಸ್ ವರ್ಡ್ ಗಳನ್ನೂ ಆತನೇ ಇಟ್ಟುಕೊಂಡಿದ್ದ. ಉಷಾಗೆ ಅವರದೇ ಆದ ಬ್ಯಾಂಕ್ ಅಕೌಂಟ್, ಕ್ರೆಡಿಟ್ ಕಾರ್ಡ್ ಕೂಡಾ ಇರಲಿಲ್ಲ! ಇದ್ಯಾವುದೂ ಉಷಾರಿಗೆ ಮುಖ್ಯವೆನಿಸಲಿಲ್ಲ. ಅವರ ಬಾಲ್ಯ ಅವರಲ್ಲಿ ಒಬ್ಬ ದಾಸಿಯನ್ನು, ತಾಯನ್ನು, ಆಜ್ನಾಧಾರಿ ಮಗಳನ್ನು ಮಾತ್ರ ಬೆಳೆಸಿತ್ತು. ಆಕೆಯಲ್ಲಿ ಶಕ್ತಿ ರೂಪಿಣಿಯ ಒಂದು ಕುರುಹೂ ಇರಲಿಲ್ಲ. 
 
ಮೂರು ಸಣ್ಣ ಮಕ್ಕಳನ್ನು ನೋಡಿಕೊಳ್ಳುತ್ತಾ ಅವರ ಬೇಡಿಕೆಗಳನ್ನು ಹಗಲು ರಾತ್ರಿ ಪೂರೈಸುತ್ತಲೇ ಬಂದ ಉಷಾಗೆ ಗಂಡ ಎನ್ನುವ ಪಶುವಿನ ಮೇಲೆ ಕೋಪ, ಅಸಹನೆ ಬರಲಿಲ್ಲ. ದೂರೂ ಇರಲಿಲ್ಲ. ಎಲ್ಲವೂ ಇದೆಯಲ್ಲ. ಯಾಕೆ ಕೋಪ? ಏನು ದೂರು?ಹಾಗೇನಾದರೂ ಒಂದು ಪಕ್ಷ ತೋರಿಸಿದರೆ ತನ್ನ ಪುಟ್ಟ ಮಕ್ಕಳ ಗತಿ? ಮಕ್ಕಳು ಅಂದ್ರೆ ನನಗೆ ಪ್ರಾಣ ಎಂದು ಬೀಜ ಹಾಕಿದ್ದ ಗಂಡ ಒಂದು ದಿನವೂ ಮಕ್ಕಳ ಜೊತೆ ಪ್ರೀತಿಯಿಂದ ಕಾಲ ಕಳೆಯಲಿಲ್ಲ, ಆಟ ಆಡಲಿಲ್ಲ, ಮುದ್ದಂತೂ ಅವರ ಲೈಫಿನ ಯಾವ ಮೂಲೆಯಲ್ಲೂ ಇರಲಿಲ್ಲ. ಉಷಾ ಮೂರು ಪುಟ್ಟ ಜೀವಗಳನ್ನು ಬೆಳೆಸುವ ಮರದ ಕೊನೆಯಾದರು. ಅವರ ಪಾಲಿಗೆ ಗಂಡನೆಂಬುವನ ಜೊತೆ ಮುಗಿದೇ ಹೋಗಿತ್ತು. ಗಂಡನ ಜೊತೆ ಆಕೆ ತಲೆಯೆತ್ತಿ ಮಾತನಾಡುವಂತಿರಲಿಲ್ಲ. ಇದು ಆತನ ಆಜ್ನೆ. ಏನಾದರೂ ಬೇಕಾದರೆ ಅಡಿಗೆ ಮನೆಯ ಬಾಗಿಲಿನ ಹಿಂದೆ ನಿಂತು ಕೇಳಿಕೊಳ್ಳಬೇಕು!! ಆ ಹುಡುಗಿ ಅಮೆರಿಕಾದಲ್ಲಿ ಹುಟ್ಟಿದ ಕಾರಣಕ್ಕೆ, ಭಯ ಭಕ್ತಿಯಿಂದ ಬದುಕುವುದನ್ನು ಕಲಿತ ತಪ್ಪಿಗೆ ಒಬ್ಬ ಕಟುಕನಿಗೆ ದಾಸಿಯಾಗಿದ್ದರು. ಅವನು ಆಕೆಯನ್ನು ಹಿಂಡಿ ಬಿಸಾಡಿ ಕಾಲೊರೆಸಿಕೊಳ್ಳುವ ಕಾರ್ಪೆಟ್ ಮಾಡಿಕೊಂಡಿದ್ದ. 
 
ಇಷ್ಟರಲ್ಲೇ ಆ ಗಂಡಸು ತನ್ನ ನಾಜೂಕಿಗೆ ತಕ್ಕಳಾದ ಗೆಳತಿಯೊಬ್ಬಳನ್ನು ಹುಡುಕಿಕೊಂಡಿದ್ದ, ತಾನು ಕೆಲಸ ಮಾಡುತ್ತಿದ್ದ ಊರಿನಲ್ಲಿ. ಇದು ಉಷಾಗೂ ಗೊತ್ತಾಯಿತು. ನಮ್ಮಪ್ಪ ಅಮ್ಮನನ್ನು ಕರೆಸಿಕೊಳ್ಳಿ ಅಥವಾ ಭಾರತಕ್ಕೆ ಕಳಿಸಿಕೊಡಿ ಅಂತ ಉಷಾ ಪದೇ ಪದೇ ಗಂಡನನ್ನು ಕೇಳಿಕೊಂಡಿದ್ದರು. ಕೆಲಸದಲ್ಲಿ ಕಷ್ಟ ಇದೆ, ಹಣದ ತೊಂದರೆ ಇದೆ ಅಂತ ಗಂಡ ಬೈದಿದ್ದ. ತನ್ನ ಯಾವುದೇ ಸ್ವತ್ತು, ಬಿಲ್ಲು, ಪುಸ್ತಕ, ಲೆಕ್ಕ ಇತ್ಯಾದಿಗಳನ್ನು ಮುಟ್ಟಬಾರದೆಂದು ಉಷಾಗೆ ಕಟ್ಟಪ್ಪಣೆ ಮಾಡಿದ್ದ. ಆದರೂ ಅದ್ಯಾವ ದೈವ ಅವರ ತಲೆಯೊಳಕ್ಕೆ ನುಸುಳಿತ್ತೋ...ಒಂದು ದಿನ ಆತ ಊರಿನಲ್ಲಿಲ್ಲದಾಗ ಉಷಾ ಆತನ ಕ್ರೆಡಿಟ್ ಕಾರ್ಡ್ ಬಿಲ್ಲನ್ನು ತೆಗೆದು ಓದಿದ್ದಾರೆ. ಐದು ಸಾವಿರ ಡಾಲರ್ ನ ಬಿಲ್ಲಿನಲ್ಲಿ ಆಭರಣದ ಅಂಗಡಿಯ ಭಾರೀ ಮೊತ್ತವೊಂದನ್ನು ನೋಡಿದ್ದಾರೆ. ಬಿಲ್ಲನ್ನು ಗಂಡನಿಗೆ ಕೊಡದೆ ಹರಿದು ಬಿಸಾಡಿದ್ದಾರೆ. ಗಂಡ ಮನೆಗೆ ಬಂದಾಗ ಬಟ್ಟೆ ಒಗೆಯುವುದಲ್ಲದೆ ಆತನ ಇತರೆ ಸಾಮಾನುಗಳನ್ನೂ ಕ್ಲೀನ್ ಮಾಡಿದ್ದಾರೆ, ಆ ನೆಪದಲ್ಲಿ ಹೊಸ ಆಭರಣದ ಕುರುಹು ಹುಡುಕಿದ್ದಾರೆ. ಸೋತಿದ್ದಾರೆ. ಮುಂದಿನ ೨-೩ ಬಿಲ್ಲುಗಳನ್ನೂ ನೋಡಿದ್ದಾರೆ. ಯಥೇಚ್ಚವಾದ ಖರ್ಚುಗಳು, ಸುಗಂಧ ದ್ರವ್ಯಗಳು ಖರೀದಿಯಾಗಿರುವುದನ್ನು ಗಮನಿಸಿದ್ದಾರೆ. ಆನ್ ಲೈನಿನಲ್ಲಿ ಬಿಲ್ಲು ಕಟ್ಟುವ ಗಂಡ ತನ್ನ ದಡ್ಡ ಹೆಂಡತಿಯ ಬಗ್ಗೆ ಅನುಮಾನ ಪಟ್ಟಿಲ್ಲ. ಉಷಾ ಬಚಾವ್. ಸಧ್ಯ ಆ ಹುಡುಗಿದೆ ಆಗಲಾದರೂ ಬುಧ್ದಿ ಎನ್ನುವುದನ್ನು ಒಂದು ಚೂರು ಬಳಸಿಕೊಳ್ಳುವ ಜ್ನಾನೋದಯವಾಗಿದೆಯಲ್ಲಾ...
 
ಕೆಲವು ಹೆಂಗಸರಿಗೆ ತಮ್ಮ ನಿಷ್ಪ್ರಯೋಜಕ ಅಥವಾ ಪ್ರೀತಿಸಲಾರದ, ಗೌರವಿಸಲಾರದ ಗಂಡನೆಂಬ ಗಂಡಸು ಏನು ಮಾಡಿದರೂ ಸಹಿಸಿಕೊಳ್ಳುತ್ತಾರೆ. ಆದರೆ ಆತ ಬೇರೊಂದು ಹೆಂಗಸಿನ ಬಾಲ ಹಿಡಿದಿದ್ದಾನೆ ಎಂದರೆ ಹಿಂದೆಂದೂ ಇಲ್ಲದ ಕೋಪ, ಅಸ್ಥಿರತೆ ಬಂದುಬಿಡುತ್ತದೆ! ನಾನೇ ನಿನ್ನ ಎಕ್ಸ್ಕ್ಲೂಸಿವ್ ದಾಸಿಯಾಗಿರಬೇಕು ಅಂತಲೇನೋ?! ಉಷಾ ಚೂರು ಇದೇ ಪೈಕಿ. ಕಡೆಗೂ ಧೈರ್ಯ ಮಾಡಿ ಗಂಡನನ್ನು ಒಂದೆರಡು ಮಾತು ಕೇಳಿದ್ದಾರೆ. ಆತ ಬಲ ಪ್ರಯೋಗ ಮಾಡಿದ್ದಾನೆ, ತನ್ನ ಗೆಳತಿಯ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡಿದ್ದಾನೆ. ಉಷಾಗೆ ಶಾಕ್ ಟ್ರ‍ೀಟ್ಮೆಂಟ್ ಕೊಟ್ಟಂತಾಗಿದೆ... 
ಇವಳು ಸಿನಿಮಾ ಕಥೆ ಬಿಡುತ್ತಿದ್ದಾಳೆ ಎನ್ನಿಸುತ್ತಿರಬಹುದಲ್ವಾ? ಕಥೆ ಕೇಳಿದಾಗ ಮೊದಲು ನನಗೂ ಹಾಗೇ ಅನ್ನಿಸಿತ್ತು. ಆದರಿದು ೨೦೧೦ರ ನಿಜ ಕಥೆ. ಕನ್ನಡದ ಮುಗ್ಧೆ ಸಜ್ಜನ ಹುಡುಗಿಯೊಬ್ಬಳ ಅಮೆರಿಕನ್ ದುರಂತ. ನಾವು ಖುಷಿಯಾಗಿ ಓಡಾಡಿಕೊಂಡಿರುವ ಈ ಸಮಾಜದೊಳಗೇ ಮನುಷ್ಯ ರೂಪದಲ್ಲಿ ವಾಸಿಸುತ್ತಿರುವ ತೋಳಗಳ ಕಥೆ. ಈ ಕಥೆಯಲ್ಲಿ ಬರುವ ತೋಳ ಸಾಮಾನ್ಯ ತೋಳವೇನಲ್ಲ ಮಾರಾಯರೇ. ಕನ್ನಡದ ಹೆಸರಲ್ಲಿ ಇಲ್ಲಿ ನಡೆಯುವ ಸಂಘ ಸಂಸ್ಥೆ ಸಭೆ ಸಮಾರಂಭಗಳಲ್ಲಿ ಓಡಾಡಿಕೊಂಡು ಭೇಷ್ ಎನಿಸಿಕೊಂಡಿರುವ ತೋಳ!
ಅದು ಸರಿ. ಈ ಕಥೆ ಇವಳಿಗೆ ಹೇಗೆ ಗೊತ್ತಾಯಿತು ಅಂತ ಕುತೂಹಲ ಇರಬಹುದಲ್ವಾ? ಅದೂ ಒಂದು ಸಣ್ಣ ಕಥೆ. 
 
ಪ್ರಶಾಂತ ಇಲ್ಲದಿರುವಾಗ ಕೆಲವೊಂದು ದಿನ ನಾನು ನನಗೆ ಪರಿಚಿತರಿದ್ದ ಕಿಟ್ಟಿ ಪಾರ್ಟಿಯ ಸ್ನೇಹಿತೆಯರೊಂದಿಗೆ ಕಾಲ ಕಳೆಯಲು, ಮೂವಿ ನೋಡಲು ಮಾಲ್ ಗಳಿಗೆ ಹೋಗುತ್ತಿದ್ದೆ. ೪-೫ ಗಂಟೆ ಮನಸ್ಸಿಗೆ ಪ್ರಾಯಾಸವಿಲ್ಲದೆ ಕಳೆದುಬಿಡುತ್ತಿದ್ದವು. ಹಾಗೇ ಒಮ್ಮೆ ಪಾಶಾಗಿದ್ದ ಮಾಲ್ ಒಂದರಲ್ಲಿ ಸುತ್ತಾಡುತ್ತಿದ್ದಾಗ ಬಿಳಿ ಸುಂದರಿಯೊಬ್ಬಳು ಭಾರೀ ಕೋಲಾಹಲ ಎಬ್ಬಿಸುತ್ತಾ ಬರುತ್ತಿರುವುದನ್ನು ನೋಡಿದೆ. ತೆಳು ಲತೆಯಂತಿದ್ದ ಆಕೆ ಇನ್ನೇನು ಜಾರೇ ಹೋಗಲಿದೆಯೆಂಬಂತಿದ್ದ ಕೆಂಪಾತಿಕೆಂಪು ಬಣ್ಣದ ಒಂದು ಸಣ್ಣ ಚಡ್ಡಿ-ಬ್ರಾ ಅಷ್ಟನ್ನೇ ಹಾಕಿಕೊಂಡು ಧಾವಂತದಿಂದ ನಡೆದುಕೊಂಡು ಬರುತ್ತಿದ್ದಳು. ವಾರದ ದಿನವಾದರೂ ಮಾಲ್ ನಲ್ಲಿ ಸುಮಾರು ಜನ ಇದ್ದರು, ನಮ್ಮಂತವರು. ಹಾಗೇ ಗಂಡಸರೂ, ಮುದುಕರೂ. ಮಾಡುತ್ತಿದ್ದ ಕೆಲಸ, ಕೈಲಿದ್ದ ಕೂಸು, ಕಾಫಿ ಎಲ್ಲವನ್ನೂ ಬಿಟ್ಟು ಜನ ಆಕೆಯತ್ತ ನೋಡುತ್ತಿದ್ದರು. ಎಂಥ ಸುಂದರಿ ಎಂದೋ, ಅವಳ ದೇಹವನ್ನೂ, ಅಥವಾ ಜಾರಲಿದ್ದ ಅವಳ ಉಡುಪನ್ನೋ...ದೇವರಿಗೇ ಗೊತ್ತು. ನಾನು ಅಮೆರಿಕಾಗೆ ಬಂದ ಮೇಲೆ ತುಂಬಾ ಜನ ತುಂಡು ಚಡ್ಡಿ, ಬನಿಯನ್ನುಗಳಲ್ಲಿ ಸುತ್ತುವುದನ್ನು ನೋಡಿದ್ದೆ. ಮೊದಲು ಬಿಟ್ಟ ಕಣ್ಣು ಬಿಟ್ಟುಕೊಂಡೇ ನೋಡುತ್ತಿದ್ದೆ. ಆಮೇಲೆ ನೋಡಿ ಬೋರಾಗಿ ಅಭ್ಯಾಸವಾಗಿ ಬಿಟ್ಟಿತ್ತು. ಆದರೀಕೆ ಹಾಗಿರಲಿಲ್ಲ. ಆಕೆ ಯಾವುದೋ ಬಿಕಿನಿಯ ಮಾಡೆಲ್ ಅಂತೆಯೋ ಅಥವಾ ಮನೆಯಲ್ಲಿ ಸ್ನಾನಕ್ಕೆ ಕುಳಿತಾಗ ಸೋಪು ಖಾಲಿಯಾಗಿರುವುದು ನೆನಪಾಗಿ ನೀರಿನಿಂದ ಹಾಗೇ ಎದ್ದು ಮಾಲ್ ಗೆ ಶಾಪಿಂಗ್ ಬಂದವಳಂತಿದ್ದಳು. ಗಡಿಬಿಡಿಯಲ್ಲಿ ನಡೆಯುತ್ತಿದ್ದಳು. ’ಅಯ್ಯೋ ದೇವಾ...ಬಿದ್ದೀತು ಮಾರಾಯ್ತೀ!!’ ಅವಳ ಉಡುಪು ಜಾರುವುದನ್ನು ನೋಡಬೇಕಾಗಿ ಬರುವ ಸಂಕೋಚದಿಂದಲೋ, ಕಾಳಜಿಯಿಂದಲೋ ನನಗೇ ಗೊತ್ತಿಲ್ಲದೆ ಅಪ್ಪಟ ಕನ್ನಡದಲ್ಲಿ ಜೋರಾಗೇ ಉದ್ಗಾರ ಮಾಡಿದ್ದೆ. ಅಷ್ಟೇ. ಆ ಸುಂದರಿಯೇನೋ ಬಂದಷ್ಟೇ ಗಡಿಬಿಡಿಯಲ್ಲಿ ಮಾಲ್ ನ ಮತ್ತೊಂದು ಬದಿಯಲ್ಲಿ ಮಾಯವಾಗಿದ್ದಳು. ನನಗೆ ಹಿಂದಿನಿಂದ ಯಾರೋ ಕರೆದಂತಾಯಿತು. 
 
’ನೀವು ಕನ್ನಡದವರೇನ್ರೀ?’ ಕೇಳಲೋ ಬೇಡವೋ ಎಂಬ ಅನುಮಾನದ ಕರೆ. ಹಿಂತಿರುಗಿ ನೋಡಿದೆ. ಸಪೂರ ದೇಹದ ಕುಳ್ಳಾಕೃತಿ. ಎಣ್ಣೆ ಹಚ್ಚಿ ತಲೆ ಬಾಚಿ ಎರಡೆಳೆ ಕರಿಮಣಿ ಸರ ಹಾಕಿಕೊಂಡು ಒಂದಕ್ಕೊಂದು ಒಪ್ಪದ ಬಣ್ಣಗಳ ಜೀನ್ಸ್ ಮತ್ತು ಟಾಪ್ ಹಾಕಿಕೊಂಡಿದ್ದ ಆಕೆ ಕಂಡರು. ನಾನೇ ಇನ್ನೂ ಇಲ್ಲಿನ ಬಟ್ಟೆ-ಬರೆ ಸಂಸ್ಕೃತಿಗೆ ಹೊಸ ಗಿರಾಕಿ. ಈಕೆಯಂತೂ ತೀರ ನೆನ್ನೆಯೇ ವಿಮಾನ ಇಳಿದಷ್ಟು ಊರಕಡೆಯವರಂತೆ ಕಾಣುತ್ತಿದ್ದರು. ಆದರೆ ಪಕ್ಕದಲ್ಲಿ ಡಬಲ್ ಸೀಟರ್ ಇರುವ ಒಂದು ಮಕ್ಕಳ ತಳ್ಳು ಗಾಡಿ, ಒಳಗೆ ನಿದ್ದೆ ಹೋಗಿದ್ದ ಎರಡು ಪುಟಾಣಿಗಳು. ’ಯಾರಾದ್ರೂ ಇಂಡಿಯನ್ಸ್ ತುಂಬಾ ನೀಟ್ ಆಗಿ ಡ್ರೆಸ್ ಮಾಡಿಕೊಂಡು ಬಂದು ಮಾತಾಡಲಿಕ್ಕೆ, ಅಡ್ರೆಸ್ ಕೇಳಲಿಕ್ಕೆ ಬಂದ್ರೆ ಹುಶಾರಾಗಿರು...ಅವರು ಆಮ್ ವೇ ಅಥವಾ ಕ್ವಿಕ್ ಸ್ಟಾರ್ ಗೆ ಸಿಕ್ಕಿಹಾಕಿಸುವ ಸೇಲ್ಸ್ ಪಾರ್ಟಿಗಳಿರ್ತರೆ’ ಎಂದು ಪ್ರಶಾಂತ ಎಚ್ಚರಿಸಿದ್ದ. ಆಕೆಯನ್ನು ಮೇಲಿಂದ ಕೆಳಗಡೆ ನೋಡಿದೆ. ಸ್ನೇಹಪೂರ್ವಕ ಕಣ್ಣು, ಕಣ್ಣ ಕೆಳಗೆ ಸೋತ ಕಪ್ಪು ಕಲೆ...ಆಕೆ ಯಾವ ಕಾರಣಕ್ಕೂ ಮಾರಾಟ ಮಾಡುವವರು ಎನ್ನಿಸಲಿಲ್ಲ. ನನಗೂ ಖುಷಿಯಾಗಿ ’ಹೌದು ಕನ್ನಡದವಳು. ನೀವು?’ ಎಂದೆ. ಹೌದು ಎನ್ನುವಂತೆ ಜೋರಾಗಿ ಮೇಲೆ ಕೆಳಗೆ ತಲೆ ಆಡಿಸಿದರು. ಆಕೆ ಭಾರವಾದಂತಿದ್ದರು, ಇನ್ನೇನು ತುಳುಕಲು ರೆಡಿ ಇರುವ ಲೋಟದಂತೆ. ಪಕ್ಕದಲ್ಲಿದ್ದ ಮೀನಾ ದೀದಿಗೆ ’ಒಂದು ನಿಮಿಷ ಬರ್ತಿನಿ ನೀವು ಹೋಗಿರಿ’ ಅಂತ ಅಂಗಡಿಯೊಳಗೆ ಕಳಿಸಿ, ಅಲ್ಲೇ ಪಕ್ಕ ಬಂದು ಹೆಸರು ಪರಿಚಯ ಮಾಡಿಕೊಂಡೆ. ಅವರೂ ಪರಿಚಯಿಸಿಕೊಂಡರು. 
’ಎಲ್ಲಿ ಮನೆ? ನೀವೇ ಡ್ರೈವ್ ಮಾಡ್ತೀರಾ?’ ಎಂದೆಲ್ಲಾ ಕೇಳಿದರು. ನನ್ನ ಗಂಡ ಬೇರೆ ಊರಿಗೆ ಪ್ರಾಜೆಕ್ಟ್ ಗೆ ಹೋಗಿರುವುದು, ನನಗೆ ಇನ್ನೂ ಡ್ರೈವರ್ಸ್ ಲೈಸೆನ್ಸ್ ಸಿಕ್ಕದಿರುವುದು, ನನ್ನ ಸ್ನೇಹಿತೆಯರ ಜೊತೆ ಬಂದಿರುವುದನ್ನು ಹೇಳಿದೆ. ಬಹುಃಷ ಆವತ್ತು ಆಕೆಗೆ ನಾನೂ ಅವರಂತೆ ಎನ್ನಿಸಿರಬಹುದು...’ನಾನೂ ನನ್ನ ಪರಿಚಯದವರ ಜೊತೆ ಬಂದಿದ್ದೀನಿ...ಮಗಳನ್ನು ಅವರ ಮಗಳ ಜೊತೆ ಬಿಟ್ಟು ಬಂದಿದ್ದೀನಿ’ ಎನ್ನುತ್ತಾ ಜೊತೆಯಲ್ಲಿದ್ದ ಉತ್ತರ ಭಾರತದ ಹೆಂಗಸೊಬ್ಬರಿಗೆ ಹರಕು ಮುರುಕು ಹಿಂದಿಯಲ್ಲಿ ನನ್ನ ಪರಿಚಯ ಮಾಡಿಕೊಟ್ಟರು. ’ನಿಮಗೆ ಫೋನ್ ನಂಬರ್ ಇದೆಯಾ?’ ಎಂದು ಕೇಳಿ ಪಡೆದರು. ನನಗೊಂದು ನಂಬರ್ ಕೊಟ್ಟು ’ಇದು ನಮ್ಮನೆ ನಂಬರ್, ಇದು ಇವರ ನಂಬರ್. ನಾನು ನಿಮಗೆ ಮಾಡಿದರೆ ಇವರ ಫೋನ್ ನಂಬರ್ ನಿಂದ ಮಾಡ್ತೀನಿ...ನಿಮಗೆ ಫೋನ್ ಮಾಡಿದರೆ ಪರವಾಗಿಲ್ವಾ’ ಎಂದೆಲ್ಲಾ ವಿಚಾರಿಸಿದರು. ಅವರು ಕೇಳುತ್ತಿದ್ದುದು ಮಾತಾಡುತ್ತಿದುದು ಸ್ವಲ್ಪ ಬೇರೆ ಥರ ಎನ್ನಿಸಿದರೂ ಸುಮ್ಮನಾಗಿದ್ದೆ. ಬಾಯ್ ಹೇಳಿ ಹೊರಟಿದ್ದೆ. ಮನೆಗೆ ಹೋಗುವಷ್ಟರಲ್ಲಿ ಅವರು ಮರೆತೂ ಹೋಗಿದ್ದರು.
 
೨-೩ ದಿನಗಳಾದ ಮೇಲೆ ಫೋನ್ ಬಂದಿತ್ತು, ಆಕೆಯದ್ದು, ಸ್ನೇಹಿತೆಯ ನಂಬರ್ನಿಂದ. ಸುಮ್ಮನೆ ಮಾತಾಡಿದ್ದೆವು. ಫೋನ್ ಇಡುವ ಮುಂಚೆ ’ನೀವೇ ನಾಳೆ ನಮ್ಮನೆ ನಂಬರಿಗೆ ಫೋನ್ ಮಾಡ್ತೀರಾ’ ಎಂದಿದ್ದರು. ಅರೆ! ಮಾತಾಡಬೇಕೆನಿಸಿದರೆ ಇವರಿಗೇ ಮಾಡಲಿಕ್ಕೇನು? ಎಣಿಸಿದ್ದೆ. ಅಮೆರಿಕಾಗೆ ಬರುವ ಕೆಲವು ಇಂಡಿಯನ್ಸ್ ದುಡ್ಡು ಉಳಿಸೋದಿಕ್ಕೆ ಏನೆಲ್ಲಾ ಮಾಡ್ತಾರೆ ಗೊತ್ತಾ ಅಂತ ಪ್ರಶಾಂತ ಹಾರರ್ ಕಥೆಗಳನ್ನು ಹೇಳಿದ್ದು ನೆನಪಾಗಿ ’ಆಯ್ತು’ ಎಂದಿದ್ದೆ. ’ಪ್ಲೀಸ್ ಮರೀಬೇಡಿ" ಎಂದಿದ್ದರು ಆಕೆ. ಮಾರನೆ ದಿನ ನೆನಪಿನಲ್ಲಿ ಆಕೆಗೆ ಫೋನ್ ಮಾಡಿದ್ದೆ. ಮೂರು ಮಕ್ಕಳ ಆ ಪುಟ್ಟ ಪುಸ್ತಕ ಪರಿವಿಡಿ ತಿಳಿಸಿತ್ತು. ದಿಗ್ಭ್ರಾಂತಿಯಿಂದ ಕೇಳಿಸಿಕೊಂಡಿದ್ದೆ. ನನಗೆ ಮತನಾಡಲೂ ಅವಕಾಶವಿರಲಿಲ್ಲ. ಅಲ್ಲಿ ಕಟ್ಟೆ ಒಡೆದಿತ್ತು. ನಾನು ಪುಟ್ಟ ಬಕೆಟ್ ಆಗಿ ನಿಂತಿದ್ದೆ. 
 
ಒಂದು ದಿನ ಆಕೆ ನನಗೆ ಮಾಡಿದರೆ ಇನ್ನೊಂದು ದಿನ ನಾನು ಆಕೆಯ ಗೆಳತಿಗೋ ಅವರಿಗೋ ಮಾಡುತ್ತಿದ್ದೆ. ಅವರೇ ಯಾವ ನಂಬರಿಗೆ ಮಾಡಬೇಕೆಂದು ತಿಳಿಸುತ್ತಿದ್ದರು. ಅವರು ಕಥೆಯಲ್ಲಿ ಬರುವ ಎಲ್ಲ ಪಾತ್ರಧಾರಿಗಳನ್ನು, ಘಟನೆಗಳನ್ನೂ ಹೇಳುವಾಗ ನನಗ್ಯಾಕೆ ಈಕೆ ಇದನ್ನೆಲ್ಲಾ ಹೇಳುತ್ತಿದ್ದಾರೆ ಎಂದು ಆಶ್ಚರ್ಯವಾಗುತ್ತಿತ್ತು. ಅದಕ್ಕೂ ಅವರೇ ವಿವರಣೆ ಕೊಟ್ಟಿದ್ದರು. ’ನೋಡ್ರೀ ನಾನು ಯಾವತ್ತೂ ಎಲ್ಲಿಗೂ ಹೋಗದವರು ನಮ್ಮ ಪರಿಚಯದವರು ಕರೆದ್ರು ಅಂತ ಮಾಲ್ ಗೆ ಬಂದಿದ್ದೆ. ನಿಮ್ಮನ್ನು ನೋಡಿದೆ. ನಿಮ್ಮ ಜೊತೆ ಮಾತಾಡಿದಾಗಲೇ ನಂಗೆ ಗೊತ್ತಾಗಿ ಹೋಯ್ತು. ನಿಮ್ಮ ಜೊತೆ ನಾನು ಎಲ್ಲಾ ಹೇಳ್ಕೋಬೋದು ಅಂತ’ ಅತ್ತಿದ್ದರು. ಯಾಕೆ? ನನ್ನಿಂದ ಏನಾದ್ರೂ ಸಹಾಯ ಆಗಬಹುದು ಅಂತಲಾ? ಮನಸ್ಸು ಕೇಳಿತ್ತು. ಈ ಪರಿಯ ಕಥೆ ಕೇಳಿದ ಮೇಲೆ ಮನಸ್ಸಿರುವವರು ಸುಮ್ಮನಿರಲಾದ್ರೂ ಹೇಗೆ ಸಾಧ್ಯ? ಏನಾದ್ರೂ ಉದ್ದೇಶ ಇರಲಿ... ಆಕೆಗೆ ಈಗ ನಾನು ಕಿವಿಯಾಗಬೇಕು ಅಂತ ತಿರ್ಮಾನ ಮಾಡಿಕೊಂಡಿದ್ದೆ. ಅವರ ಜೀವನದಲ್ಲಿ ನಡೆದ ಘಟನೆಗಳನ್ನು ಕೇಳುವಾಗ ಕೆಲವೊಮ್ಮೆ ಅವರ ಕೆನ್ನೆಗೆ ನಾಕು ಬಾರಿಸಿ ಬುಧ್ಧಿ ಇರಲಿಲ್ಲವಾ ನಿನಗೆ ಅಂತ ಬೈಯ್ಯಬೇಕೆನಿಸುತ್ತಿತ್ತು. ಕೆಲವೊಮ್ಮೆ ಅವರ ಮುಖವನ್ನು ಕೈಯ್ಯಲ್ಲಿ ಹಿಡಿದು ಸಮಾಧಾನ ಮಾಡಬೇಕು ಎನ್ನಿಸುತ್ತಿತ್ತು. ನನ್ನ ಹೊಸಾ ’ಅಕ್ಕ’ ಳಾಗಿದ್ದ ಅವರ ಕಥೆಯ ಎಪಿಸೋಡುಗಳನ್ನೂ ಪ್ರಶಾಂತನಿಗೂ ಹೇಳಿದ್ದೆ. ’ಏನು ಮಾಡಬಹುದೋ’ ಕೇಳಿದ್ದೆ. ನನ್ನ ಹುಡುಗ ಒಳ್ಳೆಯವನು. ’ಬಿಲ್ಲೀ...ಒಂದು ದಿನ ಅವರು ಒಬ್ಬರೇ ಇರುವಾಗ ಅವರ ಮನೆಗೆ ಹೋಗಿ ಬರೋಣ. ಇದು ನಿಜಾನೇ ಆಗಿದ್ರೆ ಇದು ತುಂಬಾ ದೊಡ್ಡ ಕ್ರೈಮ್. ನಮ್ಮ ಕೈಲಿ ಏನು ಸಹಾಯ ಆಗುತ್ತೋ ಅದನ್ನು ಮಾಡೋಣ’ ಅಂತ ಭರವಸೆ ಕೊಟ್ಟಿದ್ದ. ಹೀಗೆ ಈ ಹುಡುಗಿಯ ಕಥೆ ನನ್ನನ್ನು ತುಂಬಿತ್ತು...
 
ಉಷಾ ತಮ್ಮ ಜೀವನದ ಒಂದೆರಡು ರಹಸ್ಯಗಳನ್ನು ತಮ್ಮ ಹೊಸ ಪರಿಚಯದ ಆಕೆಯ ಉತ್ತರ ಭಾರತೀಯ ಗೆಳತಿಗೂ ಕೊಟ್ಟಿದ್ದರು. ನಾನು ಮತ್ತು ಉಷಾ ಒಂದೇ ರಾಜ್ಯದವರಾದ್ದರಿಂದ ಆ ಹೆಂಗಸು ನಮ್ಮ ಫೋನ್ ಸಂಭಾಷಣೆಗಳಿಗೆ ಪೂರ್ತಿ ಸಹಾಯ ಮಾಡುತ್ತಿದ್ದರು. ಉಷಾ ಗಂಡನಿಗೆ ಮನೆಗೆ ಬರುವ ಅಥವಾ ಉಷಾ ಮಾಡುವ ದೂರವಾಣಿಗಳ ನಂಬರ್ ಗೊತ್ತಾಗದಿರಲಿ ಎಂದು ಈ ಸರ್ಕಸ್. ನಮ್ಮ ಸಂಭಾಷಣೆ ಉಷಾ ಬದುಕಿಗೆ ಹೊಸ ಬದಲಾವಣೆ ತಂದಿತೆಂದು ನಾನು ಹೇಳಲಾರೆ. ಏಕೆಂದರೆ ಗಂಡನನ್ನು ಪೋಲೀಸರಿಗೆ ಹಿಡಿದುಕೊಟ್ಟು ತಮ್ಮಷ್ಟಕ್ಕೆ ಸ್ವತಂತ್ರವಾಗಿ ತಮ್ಮನ್ನು-ಮಕ್ಕಳನ್ನು ಸಲಹಿಕೊಳ್ಳುವ ಮನಸ್ಥೈರ್ಯ ಉಷಾರಿಗೆ ಆಗ ಇನ್ನೂ ಇರಲಿಲ್ಲ. ಅವರಿಗೆ ಒಬ್ಬ ಗೆಳತಿಯಷ್ಟೇ ಬೇಕಿತ್ತು, ತೋಡಿಕೊಳ್ಳಲು. ನಾನು ಬರೀ ಕೇಳಿಸಿಕೊಳ್ಳದೆ ಆಗಾಗ ಬೈದು ಯಾಕೆ ಬೇಕು ಈ ಥರದ ಬದುಕು ಬುಧ್ಧಿ ಕಲಿಸು ಆ ಗಂಡಸಿಗೆ ಎಂಬ ಕ್ರಾಂತಿಕಾರಕ ಸಲಹೆ ಕೊಡುತ್ತಿದ್ದೆ. ಕೆಲವೊಮ್ಮೆ ಸಹನೆ ಕೆಡುತ್ತಿದ್ದೆ. ಆಕೆ ಅನುಭವಿಸುವುದನ್ನು ಎಷ್ಟು ಅಂತ ಸುಮ್ಮನೆ ನೋಡುತ್ತಾ ಕೂರುವುದು? 
ಉಷಾ ತನ್ನ ವಯಸ್ಸಾದ ತಂದೆ-ತಾಯಂದಿರ ಮರ್ಯಾದೆಗಾಗಿ ಹೆದರುತ್ತಿದ್ದರು. ಮರ್ಯಾದೆ ಎನ್ನುವುದೇ ಇಷ್ಟೋಂದು ಹಿಂಸಾತ್ಮಕವೇ? ನನಗಿದು ಹೊಸ ಪಾಠ. ಮನಸ್ಸು, ಪ್ರೀತಿ ಅಥವಾ ದೇಹಗಳ ಸಂಬಂಧವೂ ಇಲ್ಲದ ದಾಸ್ಯವನ್ನು ಕಿತ್ತು ಬಿಸಾಡುವುದು ಅವರಿಗೆ ಸಾಧ್ಯವಾಗಲಿಲ್ಲ. ಈ ಬಗೆಯ ಹಿಂಸಾತ್ಮಕ ಸಂಬಂಧಗಳಲ್ಲಿ ಸಿಲುಕುವ ಹೆಚ್ಚಿನ ಹೆಂಗಸರಿಗೆ ಬಹುಃಷ ಕಡಿದುಕೊಳ್ಳುವುದು ಹೀಗೇ ಪ್ರಾಯಾಸಕರ ಆಗಬಹುದೇನೋ. ಅದರಲ್ಲೂ ಮಕ್ಕಳುಗಳೆಂಬ ಬಡಪಾಯಿಗಳು ಮಧ್ಯ ಇದ್ದರಂತೂ ಇನ್ನೂ ಸಂಕಟ. ನಾನು ಆಕೆಯ ಬಗ್ಗೆ ಹೀಗೆಲ್ಲಾ ಹೇಳುತ್ತಿದ್ದೇನೆ, ನನ್ನನ್ನೇ ಆ ಪರಿಸ್ಥಿತಿಯಲ್ಲಿಟ್ಟು ನೋಡಿದಾಗ ಅವರ ಭಯ ಅರ್ಥವಾಗುತ್ತದೆ. ಗಂಡನನ್ನು ಪೋಲೀಸರ ವಶ ಮಾಡಿದ್ದಾರೂ ಆಕೆಗೆ ಸ್ವಾವಲಂಬಿಯಾಗಲು ಬೇಕಾದ ಧೈರ್ಯ ಇರಲಿಲ್ಲ. ಅಪ್ಪ-ಅಮ್ಮ-ಸಂಪ್ರದಾಯ-ನೆಂಟರಿಷ್ಟರು-ಗಂಡ-ಅತ್ತೆಮಾವಂದಿರು-ಸಮಾಜ ಇವೆಲ್ಲವೂ ಆಕೆಯ ಆತ್ಮದ ಸೆಲೆಯನ್ನೇ ಕೊಂದು ಬಿಟ್ಟಿದ್ದರು. ಉಷಾರಂತಹ ಎಷ್ಟು ಹೆಣ್ಣು ಮಕ್ಕಳು ನಮ್ಮ ನಿಮ್ಮ ನಡುವೆ ಇಲ್ಲ ಹೇಳಿ?
 
ಉಷಾ ಬದುಕಿನಲ್ಲಿ ಮತ್ತೇನಾಯಿತು ಅಂತ ಮುಂದೊಮ್ಮೆ ಹೇಳುತ್ತೇನೆ (ದುಃಖದ ಎಂಡಿಂಗ್ ಮಾತ್ರ ಅಲ್ಲ). ಈಗಿನ ವಿಷಯ ಲಾಂಗ್ ಡಿಸ್ಟೆನ್ಸ್ ಸಂಬಂಧದ್ದು. ಈ ’ಲಾಂಗ್ ಡಿಸ್ಟನ್ಸ್’ ಸಂಬಂಧದಲ್ಲಿ ಸಂಬಂದ ಇದೆಯಾ, ಅಂತರ ಇದೆಯಾ ಅಥವಾ ಕೇವಲ ಅನುಕೂಲತೆಗಾಗಿ ಮಾಡಿಕೊಂಡ ಕ್ರೂರ ಒಪ್ಪಂದವಾ? ನನಗೆ ಅನುಮಾನವಿಲ್ಲ.  
 
 
(ಮುಂದುವರಿಯುವುದು)  
 
 
 
 
 
 
Copyright © 2011 Neemgrove Media
All Rights Reserved