ಅಂಗಳ      ಇನಿತೆನೆ
Print this pageAdd to Favorite
 
 
 

 ಮೀಡಿಯಾ ಮೇನಿಯಾ

ಇವತ್ತು ಗಾಂಜಾ ಗಿರಾಕಿ, ನಾಳೆ ವರ್ಲ್ಡ್ ಫೇಮಸ್ ಮಹಾತ್ಮ- ಇಲ್ಲಿ ಹೀಗೂ ಉಂಟು!

 
 
 
ಟೀವಿ ೬೯ ನಲ್ಲೊಂದು ಕಾರ್ಯಕ್ರಮ ಬರುತ್ತೆ. ಆ ಕಾರ್ಯಕ್ರಮ ನಡೆಸಿಕೊಡುವವ ಮಾತನಾಡುವುದನ್ನು ತೋರಿಸಿ ಹೆದರಿಸಿಯೇ ಕರ್ನಾಟಕದ ಎಷ್ಟೋ ತಾಯಂದಿರು ತಮ್ಮ ಮಕ್ಕಳಿಗೆ ಊಟ ಮಾಡಿಸುತ್ತಾರೆ. ಮಕ್ಕಳು ಮಲಗದೆ ಹಠ ಮಾಡಿದರೆ ಆ ಕಾರ್ಯಕ್ರಮವನ್ನು ತೋರಿಸುವುದಾಗಿ ಹೇಳಿದರೆ ಸಾಕು ಮಕ್ಕಳು ಕಮಕ್ ಗಿಮಕ್ ಅನ್ನದೇ ಪವಡಿಸಿಬಿಡುತ್ತವೆ. ಆ ಕಾರ್ಯಕ್ರಮದ ಹೆಸರೇ ’ಹೀಗೂ ಉಂಟು!".

ಹೀಗೂ ಉಂಟು! ಎಂಬ ಈ ಕಾರ್ಯಕ್ರಮದಿಂದಾಗಿ ಯಾವುದೋ ಕಾಡಿನ ಮೂಲೆಯಲ್ಲಿ ಗಾಂಜಾ ಸೇದುತ್ತಾ ತಮ್ಮ ಪಾಡಿಗೆ ತಾವು ಬಿದ್ದುಕೊಂಡಿರುತ್ತಿದ್ದ ಸಾಧು ಸಂತರೆಲ್ಲಾ ಇದ್ದಕ್ಕಿದ್ದಂತೆ ಮಹಾತ್ಮರಾಗಿ ಹೋಗಿದ್ದಾರೆ. ಅವರಿಗೇ ಅರಿವಿಲ್ಲದಂತೆ ಅವರು ಅರಿ ಭಯಂಕರರಾಗಿ, ಕ್ಷಣಕಾಲ ಜಗತ್ ಪ್ರಸಿದ್ಧಿಯಾಗಿ, ನಂತರ ಮತ್ತೆ ಅದೇ ಗಾಂಜಾ ಸೇವಿಸುತ್ತಾ ತಾವು ಜಗತ್ ಪ್ರಸಿದ್ಧಿಯಾದುದನ್ನು ನೆನೆಸಿಕೊಳ್ಳುತ್ತಾ ಆನಂದ ಅನುಭವಿಸಿಕೊಂಡು ತಮ್ಮ ಪಾಡಿಗೆ ತಾವಿರುತ್ತಾರೆ. ಅವರ ಹೆಸರಲ್ಲಿ ಮತ್ಯಾವನೋ ಒಂದಷ್ಟು ಕಾಸು ಗಳಿಸಿಕೊಳ್ಳುತ್ತಾನೆ. ನಮ್ಮ ಆಯಾಮದ ಓದುಗರಿಗಾಗಿ ಆ ಕಾರ್ಯಕ್ರಮವನ್ನು ನಡೆಸಿಕೊಡುವ ರೀತಿಯನ್ನು ವಿವರಿಸಲಿದ್ದೇವೆ. ಅದಕ್ಕೆ ನೀವೇನಾದರೂ ಹೆದರಿಕೊಂಡರೆ ನಾವು ಹೊಣೆಗಾರರಲ್ಲವೆಂದು ಈಗಲೇ ಹೇಳಿಬಿಡುತ್ತೇವೆ...

ಈ ಎಪಿಸೋಡಿನ ಮೊದಲ ಹಂತವಾಗಿ ಒಂದು ಮುಖ್ಯವಾದ ವಿಷಯವನ್ನು ನಾವು ನಿಮಗೆ ಸ್ಪಷ್ಟಪಡಿಸುತ್ತೇವೆ. ಈ ’ಹೀಗೂ ಉಂಟು’ ಕಾರ್ಯಕ್ರಮವನ್ನು ಮಾಡಲಿಕ್ಕೆ ಸಹಾಯವಾಗುವಂತೆ ಕರ್ನಾಟಕದಾದ್ಯಂತ ಹಲವಾರು ಏಜೆಂಟುಗಳಿದ್ದಾರೆ. ಆ ಏಜೆಂಟರು ತಲೆಮಾಸಿದ, ನಾಮ ಬಳಿದುಕೊಂಡ ಅಥವಾ ಗಂಟೆ ಹೊಡೆಯುವ ಯಾವನನ್ನಾದರೂ ಹಿಡಿದು ವ್ಯಾಪಾರ ಕುದುರಿಸುತ್ತಾರೆ. ಟಿವಿಯಲ್ಲಿ ನಿನಗೆ ಭರ್ಜರಿ ಪ್ರಚಾರ ಕೊಡಿಸುವುದಾಗಿಯೂ ಅದರಿಂದ ನಿನ್ನ ವ್ಯಾಪಾರ ಸಮೃದ್ದಿಯಾಗುವುದೆಂದೂ ಅವನಿಗೆ ನಂಬಿಸಿ ಅವನಿಂದ ಇಷ್ಟೆಂದು ಮೊತ್ತವನ್ನು ಪಡೆದುಕೊಂಡು, ಅದರಲ್ಲಿ ತಮ್ಮ ಕಮೀಷನ್ ಮುರಿದುಕೊಂಡು ಉಳಿದುದನ್ನು ಹೀಗೂ ಉಂಟು ಕಾರ್ಯಕ್ರಮದ ರೂವಾರಿಗೆ ತಲುಪಿಸುತ್ತಾರೆ. ಆತ ಮಧ್ಯರಾತ್ರಿಯಲ್ಲಿ ಕೂತು ಸ್ಕ್ರಿಪ್ಟ್ ಬರೆದು ಅದೆಲ್ಲೋ ನಿಂಬೆಹಣ್ಣು ಮಂತ್ರಿಸಿಕೊಟ್ಟು ಜನರಿಂದ ಪುಡಿಗಾಸು ಪಡೆದು ಜೀವನ ನಡೆಸುತ್ತಿರುವವನನ್ನು ತನ್ನ ಚಿತ್ರಕಥೆಯ ಮೂಲಕ ಮಹಾನ್ ಪವಾಡ ಪುರುಷನನ್ನಾಗಿ ಪರಿವರ್ತಿಸಿಬಿಡುತ್ತಾನೆ.

ಸ್ಥಳ: ಮಂಡ್ಯ ಜಿಲ್ಲೆಯ ಪಾಂಡವಪುರ

ಪಾಂಡವಪುರದಲ್ಲಿ ಒಬ್ಬ ಬಡ ಫಕೀರ ಇದ್ದ. ಆ ಫ಼ಕೀರನ ಬಳಿಗೆ ಸುತ್ತಮುತ್ತಲಿನ ಮುಗ್ಧ ಹಳ್ಳಿಗರು ಹೋಗಿ ತಮ್ಮ ತೊಂದರೆ ಪರಿಹರಿಸಿಕೊಳ್ಳಲು ಆತನಿಂದ ನಿಂಬೆಹಣ್ಣು ಮಂತ್ರಿಸಿಕೊಂಡು ಅವನಿಗೆ ಐದೋ ಹತ್ತೋ ರುಪಾಯಿ ಕೊಟ್ಟು ಬರುತ್ತಿದ್ದರು. ಈ ದಾಡಿಬಿಟ್ಟ ಸಾಬಣ್ಣ ಹಿಂದೂಗಳಿಗೆ ಹಿಂದೂ ದೇವರ ಹೆಸರಿನಲ್ಲಿಯೂ, ಮುಸ್ಲಿಮರಿಗೆ ಮುಸ್ಲಿಮ್ ದೇವರ ಹೆಸರಿನಲ್ಲಿಯೂ ನಿಂಬೆಹಣ್ಣು ಮಂತ್ರಿಸಿಕೊಟ್ಟು ಪುಡಿಗಾಸು ಪಡೆದು ಅದರಲ್ಲಿಯೇ ಗಾಂಜಾ ಸೇದಿಕೊಂಡು ತನ್ನ ಪಾಡಿಗೆ ತಾನಿದ್ದವ. ಅವನನ್ನು ಕಂಡ ಒಬ್ಬ ಏಜೆಂಟನಿಗೆ ಇವನನ್ನು ಹಿಡಿದು ತಾನ್ಯಾಕೆ ಒಂದಷ್ಟು ಹಣ ಸಂಪಾದನೆ ಮಾಡಬಾರದೆಂಬ ಯೋಚನೆ ಬಂದು ತಡಮಾಡದೇ ಆ ಗಡ್ಡಧಾರಿ ಸಾಬಣ್ಣ ವಾಸಿಸುತ್ತಿದ್ದ ಗುಡಿಸಿಲಿನತ್ತ ಹೋಗಿ ವ್ಯವಹಾರ ಕುದುರಿಸತೊಡಗಿದ.

ಆ ಸಾಬಣ್ಣ ಅದೇ ತಾನೇ ಗಾಂಜಾ ಏರಿಸಿಕೊಂಡು ಮತ್ತಿನಲ್ಲಿ ಇವತ್ಯಾರೂ ಗಿರಾಕಿಗಳು ಬರಲಿಲ್ಲವೆಂದು ಯೊಚಿಸುತ್ತಾ ಕೂತಿದ್ದಾಗಲೇ ಹೀಗೂ ಉಂಟು ಕಾರ್ಯಕ್ರಮದ ಏಜೆಂಟ್ ಅಲ್ಲಿ ಪ್ರತ್ಯಕ್ಷನಾದ. ಠಾಕು ಠೀಕಾದ ಅವರನ್ನು ಕಂಡ ಫ಼ಕೀರ ಯಾರೋ ಎಲ್ಲಿಯದೋ ಅಡ್ರಸ್ ಕೇಳಿಕೊಂಡು ಬಂದಿರಬಹುದೆಂದು ತಿಳಿದು ’ಕ್ಯಾ ಸಾಬ್ ಕ್ಯಾ ಹೋನಾ’, ಎಂದ. ಬಗ್ಗಿಕೊಂಡು ಗುಡಿಸಲೊಳಕ್ಕೆ ಬಂದ ಏಜೆಂಟ್ ’ನೋಡಿ ಸಾಬಣ್ಣ, ನಿಮಗೀಗ ಒಳ್ಳೆ ಅದೃಷ್ಟ ಬಂದಿದೆ, ನಾವು ಟೀವಿಯವರು. ನಿಮ್ಮ ಬಗ್ಗೆ ನಾವು ಟೀವಿಯಲ್ಲಿ ತೋರಿಸುತ್ತೇವೆ, ನಿಮ್ಮನ್ನು ಹುಡುಕಿಕೊಂಡು ಬಂದಿದ್ದೇವೆ’ ಅಂದ. ಕೂಡಲೇ ಛಂಗನೇ ಎದ್ದು ನಿಂತ ಸಾಬಣ್ಣ ತಾನು ದೇವರ ಏಜೆಂಟ್ ಎಂಬುದನ್ನೂ ಮರೆತು ಈ ಟೀವಿ ಏಜೆಂಟನಿಗೆ ತಲೆಬಾಗಿ ವಂದಿಸಿದವನೇ ’ಅಚ್ಚಾ ಸಾಮೀ, ಬಹುತ್ ಅಚ್ಚಾ, ನೀವು ದೇವರ ರೂಪದಲ್ಲಿಯೇ ಇಲ್ಲಿಗೆ ಬಂದಿದ್ದೀರಿ, ಎಲ್ಲಿ ನಿಮ್ಮ ಬಳಿ ಕ್ಯಾಮರಾನೇ ಇಲ್ಲವಲ್ಲಾ’ ಎಂದು ಅವನ ಸುತ್ತ ಮುತ್ತ ಹುಡುಕಾಡಿದ. ಮೊದಲು ಮಾತಾಡಿ ವ್ಯವಹಾರ ಕುದುರಿಸಿಕೊಳ್ಳಲು ಹೋಗಿದ್ದ ಏಜೆಂಟ್ ’ಹಂಗಲ್ಲಾ ಸಾಬಣ್ಣ, ಮೊದಲು ನಾನು ಹೇಳುವುದನ್ನು ಕೇಳು...ನಿನ್ನನ್ನು ಟೀವಿಯಲ್ಲಿ ತೋರಿಸುವ ಕಾರ್ಯಕ್ರಮ ಮಾಡುವುದಕ್ಕೆ ನಮಗೆ ಇಷ್ಟು ಖರ್ಚಾಗುತ್ತದೆ. ಅದಕ್ಕೆ ನೀನೂ ಹಣವನ್ನು ಕೊಡಬೇಕಾಗುತ್ತದೆ’ ಎಂದು ಕಾರ್ಯಕ್ರಮಕ್ಕಾಗುವ ಖರ್ಚಿನ ಮೊತ್ತವನ್ನು ತಿಳಿಸಿ ಆ ಸಾಬಣ್ಣ ಕೊಡಬೇಕಾಗಿರುವ ಮೊತ್ತವನ್ನೂ ಹೇಳಿದ.

ಆತ ಹೇಳಿದ ಮೊತ್ತವನ್ನು ಕೇಳಿದ ಕೂಡಲೇ ಹೌಹಾರಿದ ಫ಼ಕೀರ ಸಾಬಣ್ಣ ’ಅಲ್ಲಾ ಸಾಮಿ, ನಾನೇ ಫ಼ಕೀರ, ನನ್ನ ಜೀವನದಲ್ಲಿಯೇ ಅಷ್ಟೊಂದು ಹಣವನ್ನು ಕಂಡಿಲ್ಲ, ಏನೋ ಅದೂ ಇದೂ ಕಷ್ಟ ಅಂತ ಬಂದ ಜನರಿಗೆ ನಾನು ನಿಂಬೆ ಹಣ್ಣು ಮಂತ್ರಿಸಿಕೊಟ್ಟು ಅವರು ಕೊಡುವ ಪುಡಿಗಾಸಲ್ಲಿ ನನ್ನ ಜೀವನ ಚಲ್ತಾಹೆ, ನಾನೆಲ್ಲಿ ನಿಮಗೆ ಸಾವಿರಗಟ್ಟಲೇ ಹಣ ಕೊಡಲಿ, ನೀವಾಗೇ ಬಂದ್ಬುಟ್ಟೂ ಈಗ...ನಿಮ್ದು ಟೀವಿ ಸಾವಾಸನೇ ಬೇಡ ಹೋಗೀ,’ ಅಂದು ನಿರ್ದಾಕ್ಷಿಣ್ಯವಾಗಿ ಹೇಳಿದವನೇ ಭುಸು ಭುಸು ಎಂದು ಭಂಗಿ ಎಳೆಯತೊಡಗಿದ. ಈ ವಾರವೇ ಹೀಗೂ ಉಂಟು ಕಾರ್ಯಕ್ರಮಕ್ಕೆ ಹೊಸ ಗಿರಾಕಿಯನ್ನು ಹುಡುಕಲೇಬೇಕೆಂದು ಕಾರ್ಯಕ್ರಮದ ನಿರ್ವಾಹಕ ತಾಕೀತು ಮಾಡಿದ್ದರಿಂದ ಏಜೆಂಟನಿಗೆ ಈ ಸಾಬಿಯನ್ನು ಬಿಟ್ಟರೆ ತನಗೇ ನಷ್ಟವೆಂದು ಚಿಂತಿಸಿದವನೇ ಹೇಗಾದರೂ ತಾನೇ ಬಂಡವಾಳ ಹಾಕಿಯಾದರೂ ಈ ಸಾಬಣ್ಣನ ಬಗ್ಗೆ ಕಾರ್ಯಕ್ರಮ ಮಾಡಿ ನಂತರ ಅವನಲ್ಲಿಗೆ ಬರುವ ಜನಜಂಗುಳಿಯಿಂದ ತಾನೇ ಹಣ ವಸೂಲಿಗೆ ಇಳಿದರಾಯಿತೆಂದು ನಿರ್ಧರಿಸಿ,

ಆ ಫ಼ಕೀರನಿಗೆ ’ನೋಡು ಸಾಬಣ್ಣಾ...ನೀನು ಸುಮ್ಮನೆ ನಾವು ಹೇಳಿಕೊಟ್ಟ ಹಾಗೆ ಹೇಳಬೇಕಷ್ಟೇ, ನಮ್ಮ ಕಾರ್ಯಕ್ರಮಕ್ಕೆ ಖರ್ಚಾಗುವ ಹಣವನ್ನು ನಾನೇ ಹಾಕುತ್ತೇನೆ. ಅದರಿಂದ ನೀನು ಫೇಮಸ್ ಆಗುತ್ತೀಯ. ಆಗ ನಿನ್ನಲ್ಲಿಗೆ ಬರುವ ಜನರಿಂದ ಹೇಗೆ ಹಣ ವಸೂಲಿ ಮಾಡಬಹುದೆಂದು ನಾನು ಹೇಳಿಕೊಡುತ್ತೇನೆ. ಬರುವ ಹಣದಲ್ಲಿ ಮೊದಲು ನಾನು ನನ್ನ ಪಾಲಿನದ್ದನ್ನು ತೆಗೆದುಕೊಳ್ಳುತ್ತೇನೆ. ನಂತರ ಉಳಿದ ಹಣವೆಲ್ಲಾ ನಿನ್ನದೇ’, ಅಂದ. ಮೈಗಳ್ಳನಾಗಿ, ಸೋಮಾರಿಯಾಗಿ ಬದುಕುವುದನ್ನು ರೂಡಿಸಿಕೊಂಡಿದ್ದ ಸಾಬಣ್ಣನಿಗೆ ತನ್ನ ಮುಂದೆ ಹಣದ ರಾಶಿಯೇ ಬಂದು ಬಿದ್ದಂತಾಗಿ ತಾನೇ ತನ್ನಲ್ಲಿಗೆ ಬರುವವರಿಗೆ ದೇವರಿಂದ ಪರಿಹಾರ ಕೊಡಿಸುವುದನ್ನೂ ಮರೆತು ಕೂಡಲೇ ಏಜೆಂಟನ ಕಾಲಿಗೆ ಬಿದ್ದುಬಿಟ್ಟು...’ಸಾಮೀ ನೀವೇ ದೇವರ ರೂಪದಲ್ಲಿ ಬಂದಿದ್ದೀರಿ, ನನ್ನನ್ನು ನೀವೇ ಉದ್ದಾರ ಮಾಡಬೇಕು’ ಎಂದು ದೈನ್ಯನಾಗಿ ಬೇಡಿದ.  

ಪರವಾಗಿಲ್ಲ! ಈತ ನಾನು ಹೇಳಿದಂಗೆ ಕೇಳುವಂತಿದ್ದಾನೆ, ಇವನನ್ನು ಹಿಡಿದುಕೊಂಡು ತಾನೂ ಒಂದಷ್ಟು ಕಾಸು ಮಾಡಬಹುದೆಂಬ ಭರವಸೆ ಮೂಡಿದ್ದೇ ತಡ ಏಜೆಂಟ್ ಅವನನ್ನು ಕರೆದುಕೊಂಡು ಗುಡಿಸಲಿನಿಂದ ಹೊರಗೆ ಬಂದವ ದೂರದಲ್ಲಿ ಕಾಣಿಸುತ್ತಿದ್ದ ಹೆಂಡದಂಗಡಿಯತ್ತ ಹೊರಟ. ಅಲ್ಲಾಗಲೇ ಜನಜಂಗುಳಿ ಸೇರಿತ್ತು. ಅಲ್ಲಿಯ ಜನಕ್ಕೆ ಸಾಬಣ್ಣ ದಿನನಿತ್ಯ ಬಂದು ಹೆಂಡ ಕುಡಿದುಹೋಗುವುದು ಮಾಮೂಲಿ ಎನಿಸಿತ್ತಾದರೂ ಇಂದು ಆ ಸಾಬಣ್ಣನ ಜತೆಗೆ ಠಾಕು ಠೀಕಾಗಿ ಡ್ರೆಸ್ ಮಾಡಿಕೊಂಡು ಬಂದಿದ್ದವನನ್ನು ಕಂಡು ಆಶ್ಚರ್ಯವಾಗಿತ್ತು. ಆ ಹೆಂಡದಂಗಡಿಯಲ್ಲಿ ಸಾಬಣ್ಣನಿಗೆ ಒಂದು ಬಾಟಲ್ ಲೋಕಲ್ ಹೆಂಡವನ್ನು ಕೊಡಿಸಿದ ಟಿವಿ ಏಜೆಂಟ್ ಜನರೆದುರಿಗೆ ವ್ಯವಹಾರ ಮಾತಾಡಿದರೆ ಕೆಲಸ ಕೆಡುವುದೆಂದು ಆತನನ್ನು ದೂರಕ್ಕೆ ಕರೆದುಕೊಂಡು ಹೋದ. ಈ ಹೋತನ ಗಡ್ಡದ ಸಾಬಿ ಫ಼ಕೀರನನ್ನು ಯಾವ ರೀತಿ ಬಿಂಬಿಸಿದರೆ ತನ್ನ ಪ್ರೋಗ್ರಾಂ ಸಫ಼ಲವಾಗಬಹುದೆಂದು ಅವನ ಮೆದುಳು ಪ್ಲಾನ್ ಹಾಕುತ್ತಿತ್ತು.

’ನೋಡು ಸಾಬಣ್ಣ, ಇದು ಸಾವಿರಾರು ರೂಪಾಯಿಗಳ ಖರ್ಚಿನ ಕಾರ್ಯಕ್ರಮ. ಅದಕ್ಕೆ ನಾನೂ ಬಂಡವಾಳ ಹಾಕಬೇಕಿದೆ. ಈ ಕಾರ್ಯಕ್ರಮದಿಂದ ಹೆಚ್ಚಿಗೆ ಅನುಕೂಲವಾಗುವುದು ನಿನಗೇ. ಆದರೆ ಅದಕ್ಕಾಗಿ ನಾನು ಹೇಳಿಕೊಟ್ಟಂತೆ ನೀನು ನಡೆದುಕೊಳ್ಳಬೇಕು. ನೀನು ಸಾಕಷ್ಟು ಹಣ ಸಂಪಾದನೆ ಮಾಡಿ ಕಾರಿನಲ್ಲೇ ಓಡಾಡಬಹುದು ಗೊತ್ತಾ! ನೀನು ಒಂದೆರಡು ದಿನ ನನ್ನ ಜತೆಯಲ್ಲೇ ಇರಬೇಕು. ನಮ್ಮ ಕಾರ್ಯಕ್ರಮ ನಿರ್ದೇಶಕರು ನಿನಗೆ ಟಿವಿಯಲ್ಲಿ ಏನೇನು ಆಕ್ಷನ್ ಮಾಡಬೇಕು, ಹೇಗೆ ಮಾತಾಡಬೇಕೆಂಬುದನ್ನು ಹೇಳಿಕೊಡುತ್ತಾರೆ. ಅವರ ದಯೆಯಿಂದಾಗಿ ಮೂಲೆಯಲ್ಲಿ ಬಿದ್ದಿದ್ದ ನಿನ್ನಂತ ಅದೆಷ್ಟೋ ಮಂದಿ ಇವತ್ತು ಲಕ್ಷ ಲಕ್ಷ ದುಡ್ಡಿಟ್ಟುಕೊಂಡಿದ್ದಾರೆ. ಕಾರ್ಯಕ್ರಮದ ಖರ್ಚನ್ನೆಲ್ಲಾ ನನಗೆ ಬಿಡು. ಈ ಕಾರ್ಯಕ್ರಮದಿಂದ ನೀನು ಸಿಕ್ಕಾಪಟ್ಟೆ ಪ್ರಸಿದ್ದಿಯಾಗುವುದರಿಂದ ಜನರು ಲಕ್ಷಾಂತರ ಸಂಖ್ಯೆಯಲ್ಲಿ ನಿನ್ನ ಬಳಿಗೆ ಬರುತ್ತಾರೆ. ಆಗ ಅವರಿಂದ ನೀನು ವಸೂಲಿ ಮಾಡುವ ಕಾಸಲ್ಲಿ ಅರ್ಧ ನನಗೆ ಸೇರಬೇಕು, ಕಂಡಿಷನ್ ಒಪ್ಪಿಗೇನಾ?’ ಎಂದ. ಆಗಲೇ ಗಾಂಜಾ ಸೇದಿ ಅದರೊಟ್ಟಿಗೆ ಹೆಂಡವನ್ನೂ ಏರಿಸಿದ್ದರಿಂದ ಅಮಲಿನಲ್ಲಿ ತೂರಾಡತೊಡಗಿದ ಸಾಬಣ್ಣ ’ಸಾಮಿ, ಅಂಗೆ ಮಾಡ್ಬುಡೀ...ನಿಮ್ದು ಮಾತು ನಾನು ಮೀರಲ್ಲ, ಅದೇನು ಮಾಡ್ತೀರೋ ಮಾಡಿ, ನೀವು ಏನು ಹೇಳಿಕೊಡ್ತೀರೋ ಹಂಗೇ ನಾ ಮಾಡ್ತೀನಿ...ನಿಮ್ಮ ಮಾತು ಮೀರಾಕಿಲ್ಲ’ ಅಂದ.

ಕಡೆಗೂ ವ್ಯವಹಾರ ಕುದುರಿಸಿಕೊಂಡ ಹೀಗೂ ಉಂಟು ಕಾರ್ಯಕ್ರಮದ ಏಜೆಂಟ್, ಕಾರ್ಯಕ್ರಮದ ನಿರೂಪಕ, ನಿರ್ಮಾಪಕನಾಗಿದ್ದವನಿಗೆ ಕೂಡಲೇ ಫೋನ್ ಮಾಡಿ ’ಗುರುಗಳೇ, ಒಬ್ಬ ಅಪರೂಪದ ಪವಾಡ ಪುರುಷರೊಬ್ಬರನ್ನು ಹುಡುಕಿದ್ದೀನಿ, ಅವರದು ಅತ್ಯಂತ ವಿಶಿಷ್ಟ ವ್ಯಕ್ತಿತ್ವ, ಅವರು ಹಿಂದೂಗಳಿಗೆ ಹಿಂದೂ ದೇವತೆಗಳ ಹೆಸರಲ್ಲಿಯೂ, ಮುಸ್ಲಿಮರಿಗೆ ಅವರ ದೇವರ ಹೆಸರಿನಲ್ಲಿಯೂ ಮಂತ್ರಿಸಿ ಕೊಡುತ್ತಾರೆ. ಸುತ್ತಮುತ್ತಲಿನ ನೂರಾರು ಹಳ್ಳಿಗಳಲ್ಲಿ ಅವರು ಪವಾಡ ಪುರುಷರೆನಿಸಿಕೊಂಡಿದ್ದಾರೆ. ಅವರ ಬಗ್ಗೆ ಕಾರ್ಯಕ್ರಮ ಮಾಡಿಬಿಡೋಣ’ ಅಂದ. ಸಖತ್ ಖುಶಿಯಾದ ಕಾರ್ಯಕ್ರಮ ನಿರ್ಮಾಪಕ ’ಗುಡ್, ವೆರಿಗುಡ್, ಯಾರಾತ? ನಮ್ಮ ಕಾರ್ಯಕ್ರಮದ ರೂಲ್ಸ್ ಅವನಿಗೆ ಹೇಳಿದ್ದೀಯಾ, ಎಷ್ಟಕ್ಕೆ ಡೀಲ್ ಕುದುರಿಸಿದ್ದೀಯಾ?’ ಎಂದ. ಡೀಲ್ ಕುದುರಿಲ್ಲವೆಂದು ಹೇಳಿದರೆ ಇನ್ನೆಲ್ಲಿ ಈ ಕಾರ್ಯಕ್ರಮ ಕ್ಯಾನ್ಸಲ್ ಆಗುತ್ತದೋ ಎಂದು ಆತಂಕಕ್ಕೊಳಗಾದ ಏಜೆಂಟ್ ’ಎಲ್ಲಾ ಆಗಿದೆ ಗುರುವೇ, ನೀವು ಇಲ್ಲಿಗೆ ಬಂದಾಗ ನಾನು ಕೂತು ವಿವರವಾಗಿ ಎಲ್ಲಾ ಹೇಳುತ್ತೇನೆ’ ಅಂದ. ಆ ನಿರ್ಮಾಪಕ ಕಮ್ ನಿರ್ದೇಶಕ ’ಅದಿರ್ಲೀ, ಮೊದಲು ಕ್ಯಾಮರಾದವನಿಗೆ, ಬಾಡಿಗೆ ಟಾಕ್ಸಿಗೆ ಎಲ್ಲಾ ಅಡ್ವಾನ್ಸ್ ಕೊಡಬೇಕಿದೆ. ನೀನು ಕೂಡಲೇ ಹಣ ತಗಂಡು ಬಂದು ಬಿಡು’ ಅಂದ. ’ಓಕೆ ಗುರುಗಳೇ ಓಕೆ’ ಎಂದ ಏಜೆಂಟ್ ಸಾಬಣ್ಣನತ್ತ ತಿರುಗಿ ’ಯೋ ಸಾಬಣ್ಣ ನಿನ್ನ ಭಾಗ್ಯದ ಬಾಗಿಲು ಇದೀಗ ತಾನೇ ತೆರೆಯಿತು. ನೀನು ಸ್ನಾನ ಮಾಡಿ ಒಳ್ಳೆ ಬಟ್ಟೆ ಹಾಕಿಕೊಂಡು ರೆಡಿಯಾಗಿರು’ ಅಂದ.

ಸ್ನಾನ ಮಾಡಿ, ಬಟ್ಟೆ ಬದಲಿಸಿ ಎಷ್ಟು ವಾರಗಳಾಗಿತ್ತೆಂಬುದನ್ನೇ ಮರೆತಿದ್ದ ಆ ಫ಼ಕೀರ ’ಸಾಮೀ, ನನ್ನತ್ರ ಇರುವುದು ಇದೊಂದೇ ಬಟ್ಟೆ ಇದನ್ನೇ ಒಗೆದು ಹಾಕಿಕೊಳ್ಳಬೇಕು’ ಅಂದ. ಆತನು ಹಾಕಿದ್ದ ಬಟ್ಟೆಯನ್ನೊಮ್ಮೆ ದೄಷ್ಟಿಸಿದ ಏಜೆಂಟ್ ಆ ಬಟ್ಟೆಯನ್ನು ಉಟ್ಟಾಗಿನಿಂದ ಒಗೆಯದೇ ಅದರ ಬಣ್ಣ ಮಾಸಿ ಅಲ್ಲಲ್ಲಿ ಹರಿದಿದ್ದುದನ್ನು ಗಮನಿಸಿ, ಅದನ್ನು ಈಗ ಒಗೆದಲ್ಲಿ ಅದು ಹತ್ತಾರು ತೂತಾಗುವ ಸಾಧ್ಯತೆಯಿದ್ದುದರಿಂದ ’ನೋಡಯ್ಯಾ, ನಾನು ದುಡ್ಡು ಕೊಡ್ತೀನಿ, ಹೋಗಿ ಹೊಸ ಪಂಚೆ, ಜುಬ್ಬಾ ತಗೋ’ ಎಂದು ಅವನಿಗೆ ಬಟ್ಟೆಗೆಂದು ಅಡ್ವಾನ್ಸ್ ಕೊಟ್ಟು ನಿರ್ಮಾಪಕನಿಗೆ ಅಡ್ವಾನ್ಸ್ ಕೊಡಲು ಹೊರಟ. ದುಡ್ಡು ಪಡೆದ ಹೋತನಗಡ್ಡದ ಸಾಬಣ್ಣ ಆ ಏಜೆಂಟ್ ಮರೆಯಾದ ಮೇಲೆ ಅದೇ ಖುಷಿಯಲ್ಲಿ ಮತ್ತೊಂದು ಬಾಟಲ್ ಹೆಂಡ ಏರಿಸಿ ಹೊಸ ಬಟ್ಟೆ ತರಲು ಹೊರಟ.

ಹೀಗೆ ವ್ಯವಹಾರ ಕುದುರಿಸಿಕೊಂಡ ಏಜೆಂಟ್, ನಿರ್ಮಾಪಕನಲ್ಲಿಗೆ ಹೋಗಿ ಮಾತನಾಡಿದ್ದನ್ನೂ, ಆ ಭಯೋತ್ಪಾದಕನಂತಿದ್ದ ನಿರೂಪಕ ಕಂ ನಿರ್ಮಾಪಕ ಆ ಕಾರ್ಯಕ್ರಮವನ್ನು ಯಾವ ರೀತಿ ನಡೆಸಿಕೊಟ್ಟನೆಂಬುದನ್ನೂ, ನಂತರ ಆ ಕಾರ್ಯಕ್ರಮದಿಂದ ಹೋತನಗಡ್ಡದ ಫಕೀರ ಅನುಭವಿಸಿದ ತಾಪತ್ರಯಗಳನ್ನೂ ಮುಂದಿನ ಸಂಚಿಕೆಯಲ್ಲಿ ನಿಮ್ಮ ಮುಂದಿಡುತ್ತೇವೆ. ಅಲ್ಲಿಯವರೆಗೆ ಹೆದರದೇ ನೆಮ್ಮದಿಯಾಗಿರಿ ಎಂದು ಹೇಳುತ್ತಾ...

 
(ಮುಂದುವರೆಯುವುದು) 
 
 

ಬರಲಿದೆ ಹೊಸ ಪುಸ್ತಕ-ಯಡಿಯೂರಪ್ಪ ಮತ್ತು ಒಂದಷ್ಟು ಜನ ಕಳ್ಳರು (ವಯಸ್ಕರಿಗೆ ಮಾತ್ರ)

ಈಶ್ವರಚಂದ್ರ

ಇಂಥದೊಂದು ಮುಜುಗರದ ಸನ್ನಿವೇಶವನ್ನು ಎದುರಿಸಬೇಕಾಗುತ್ತದೆಂದು ಬಿ ಜೆ ಪಿ ಯ ರಾಷ್ಟ್ರೀಯ ನಾಯಕರು ಕನಸು ಮನಸಿನಲ್ಲಿಯೂ ಊಹಿಸಿರಲಿಲ್ಲ. ’ಬದಲಾವಣೆಗೆ ಬಿಜೆಪಿ’ ಎಂಬ ಘೋಷವಾಕ್ಯದೊಂದಿಗೆ ರಾಜ್ಯದಲ್ಲಿ ಬಹುಮತವಿಲ್ಲದಿದ್ದರೂ ತಿಣುಕಾಡಿ ಅಧಿಕಾರ ಹಿಡಿದು, ಬೇಕಾಬಿಟ್ಟಿ ಹಣ ಸುರಿದು ಬಹುಮತ ಸೃಷ್ಟಿಸಿಕೊಂಡ ಯಡಿಯೂರಪ್ಪ ರಾಜ್ಯದಲ್ಲಿ ಇತಿಹಾಸವನ್ನೇ ನಿರ್ಮಿಸಿಬಿಟ್ಟರು. ಅವರು ಇತಿಹಾಸ ನಿರ್ಮಿಸಿದ್ದು ರಾಜ್ಯದ ಅಭಿವೃದ್ದಿಯಲ್ಲಾಗಲೀ, ಜನಸಾಮಾನ್ಯರ ಒಳಿತಿಗಾಗಲೀ ಆಗಿದ್ದಲ್ಲಿ ನಾವೆಲ್ಲಾ ಹೆಮ್ಮೆ ಪಡಬಹುದಿತ್ತು. ಆದರೆ ಯಡಿಯೂರಪ್ಪ ತೆರೆದಿಟ್ಟ ಭ್ರಷ್ಟಾಚಾರದಲ್ಲಿ ಹಿಂದಿನ ಎಲ್ಲಾ ದಾಖಲೆಗಳನ್ನೂಪಕ್ಕಕ್ಕೆ ಗುಡಿಸಿ ತಮ್ಮ ಸಚಿವ ಸಂಪುಟದಲ್ಲಿದ್ದ ಸಾಲು ಸಾಲು ಸಚಿವರೊಂದಿಗೆ ಜೈಲು ಸೇರಿ ಇತಿಹಾಸ ನಿರ್ಮಿಸಿ ರಾಷ್ಟ್ರಮಟ್ಟದಲ್ಲಿ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿಬಿಟ್ಟರು. ಕೇವಲ ಎರಡೂವರೆ ವರ್ಷಗಳ ತಮ್ಮ ಆಳ್ವಿಕೆಯಲ್ಲಿ ಯಡಿಯೂರಪ್ಪನವರು ಮತ್ತು ಅವರ ಮಂತ್ರಿಮಂಡಳದ ಸದಸ್ಯರು ನಡೆಸಿದ ಭ್ರಷ್ಟಾಚಾರದ ಹಗರಣಗಳು ಸಾವಿರಾರು ಕೋಟಿ ರೂಗಳದ್ದಾಗಿವೆ.

ಇಂದಿನ ಬಿಜೆಪಿ ಸರ್ಕಾರದ ಸಚಿವರು ಬೇರಾವ ಕಾರಣಕ್ಕಲ್ಲದೆ ಭ್ರಷ್ಟಾಚಾರದ ಆಪಾದನೆಯಿಂದಲೇ ತಿಂಗಳುಗಟ್ಟಲೇ ಜಾಮೀನೂ ಸಹ ಸಿಗದೇ ಜೈಲಿನಲ್ಲಿ ಕಾಲಕಳೆಯುವಂತಾಗಿದೆ. ಇವು ಅವರ ಲೀಲೆಗಳು.

ಮೊದಲು ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದ ರಾಮಚಂದ್ರೇ ಗೌಡರು ತಮ್ಮ ಇಲಾಖೆಯಲ್ಲಿ ನಡೆದಿದ್ದ ನೇಮಖಾತಿಗೆ ಸಂಬಂದಿಸಿದ ಅವ್ಯವಹಾರದಿಂದಾಗಿ ರಾಜಿನಾಮೆ ಸಲ್ಲಿಸಬೇಕಾಗಿತ್ತು. ನಂತರ ಜೈಲುಪಾಲಾದ ಸರದಿ ಸಚಿವ ಹರತಾಳು ಹಾಲಪ್ಪರದ್ದು. ಈತನದ್ದು ಭ್ರಷ್ಟಾಚಾರಕ್ಕೆ ಬದಲಾಗಿ ಸ್ನೇಹಿತನ ಹೆಂಡತಿಯ ಬಲಾತ್ಕಾರಕ್ಕೆ ಸಂಬಂಧಿಸಿದ ಕೇಸಾಗಿತ್ತು. ಕೆಜಿಎಫ಼್ ನ ಬಿಜೆಪಿ ಶಾಸಕ ಸಂಪಂಗಿ ಎಂಬಾತ ಲಂಚ ಸ್ವೀಕರಿಸುವಾಗಲೇ ದಕ್ಷ ಲೋಕಾಯುಕ್ತ ಪೋಲೀಸರ ಬಲೆಗೆ ಬಿದ್ದು ಜೈಲು ಸೇರಿದ್ದರು. ಸಚಿವನೊಬ್ಬನನ್ನು ಮೊಟ್ಟಮೊದಲಬಾರಿಗೆ ರೆಡ್ ಹ್ಯಾಂಡ್ ಆಗಿ ಹಿಡಿದು ಲೋಕಾಯುಕ್ತದವರೂ ಇತಿಹಾಸ ನಿರ್ಮಿಸಿದ್ದರು. ಹಾಗೇ ಭೂ ಹಗರಣದಿಂದಾಗಿ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದ ಕೃಷ್ಣಯ್ಯ ಶೆಟ್ಟಿ ಇದೀಗ ಯಡಿಯೂರಪ್ಪನೊಂದಿಗಿನ ಹಗರಣಗಳಲ್ಲಿ ಸಿಲುಕಿ ಅವರೊಂದಿಗೇ ಜೈಲು ಪಾಲಾಗಿದ್ದಾರೆ.

ಇವರೆಲ್ಲರಿಗಿಂತ ಮುಖ್ಯವೆನಿಸುವುದು ಗಣಿಗಳ್ಳ ಜನಾರ್ದನ ರೆಡ್ಡಿ ಜೈಲು ಸೇರಿದ್ದು. ಕರ್ಣಾಟಕದ ನೆಲವನ್ನು ಬಗೆಬಗೆದು ಮಾರಿಕೊಂಡಿದ್ದ ಜನಾರ್ದನರೆಡ್ಡಿ ತನ್ನನ್ನು ತಾನು ಇಪ್ಪತ್ತು ನಾಲ್ಕು ಕ್ಯಾರೆಟ್ ಚಿನ್ನಕ್ಕಿಂತಲೂ ಮಿಗಿಲಾದ ಅಪರಂಜಿ ಚಿನ್ನದಷ್ಟು ಶುದ್ದನೆಂದು ಹೇಳಿಕೊಂಡಿದ್ದ. ಈಗ ಸಿಬಿಐ ಬಲೆಗೆ ಬಿದ್ದು ಆಂಧ್ರದ ಹೈದರಾಬಾದಿನ ಜೈಲಿನಲ್ಲಿ ತಿಂಗಳುಗಳಿಂದಲೂ ಕೊಳೆಯುತ್ತಿರುವ ಜನಾರ್ದನರೆಡ್ಡಿ ಸದ್ಯಕ್ಕೆ ಬಿಡುಗಡೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಆತನಲ್ಲಿದ್ದ ಹೆಲಿಕಾಪ್ಟರ್, ಮರ್ಸಿಡೀಸ್ ಬೆಂಜ್, ರೋಲ್ಸ್ ರಾಯ್ಸ್, ಬಿ ಎಮ್ ಡಬ್ಲು ಸೇರಿದಂತೆ ಹತ್ತಾರು ಕೋಟಿ ರೂ ಬೆಲೆ ಬಾಳುವ ಹಲವಾರು ದುಬಾರಿ ಐಷಾರಾಮಿ ಕಾರುಗಳು ಇದೀಗ ಸಿಬಿಐ ವಶದಲ್ಲಿವೆ. ಸಿಬಿಐ ಅಧಿಕಾರಿಗಳ ಹೇಳಿಕೆಯ ಪ್ರಕಾರ ಜನಾರ್ದನರಡ್ಡಿ ಆಕ್ರಮ ಗಣಿಗಾರಿಕೆಯಿಂದಾಗಿ ಗಳಿಸಿರುವ ಮೊತ್ತ ಹದಿನೈದು ಸಾವಿರ ಕೋಟಿ ರೂಗಳು. ಇದೇ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಸಚಿವರಾಗಿದ್ದ ಕರುಣಾಕರರಡ್ಡಿ, ಶ್ರೀರಾಮುಲು ಸಹ ರಾಜಿನಾಮೆ ನೀಡಿದ್ದು ಅವರಿಬ್ಬರೂ ಬಂದನಕ್ಕೊಳಗಾಗುವ ಸಾಧ್ಯತೆಗಳು ನಿಚ್ಚಳವಾಗಿದೆ.

ರಾಜ್ಯದಲ್ಲಿ ಮತ್ತೊಂದು ಇತಿಹಾಸ ನಿರ್ಮಿಸಿದ್ದೂ ಇದೇ ಯಡಿಯೂರಪ್ಪನವರ ಸರ್ಕಾರವೇ. ಅಪ್ಪ ಮಕ್ಕಳಿಬ್ಬರೂ ಭೂ ಅವ್ಯವಹಾರದಿಂದಾಗಿ ನೂರಾರುಕೋಟಿ ಸಂಪಾದಿಸಿ ಜೈಲು ಪಾಲಾಗಿದ್ದು ಈ ಬಿಜೆಪಿ ಸರ್ಕಾರದ ಮಹತ್ತರ ಸಾಧನೆಯೇ ಸರಿ. ಕರ್ನಾಟಕವನ್ನು ಈ ಬಾರಿ ಈ ಕಿರಾತಕರಿಂದ ರಕ್ಷಿಸಲು ದೇವರಂತೆ ಬಂದ ದಕ್ಷ ಲೋಕಾಯುಕ್ತರ ಶ್ರಮದಿಂದ ಕಟ್ಟಾ ಸುಬ್ರಮಣ್ಯ ನಾಯ್ಡು ಮತ್ತವರ ಮಗ ಕಟ್ಟಾ ಜಗದೀಶ ನಾಯ್ಡು ಇಬ್ಬರೂ ಒಟ್ಟೊಟ್ಟಿಗೇ ಜೈಲು ವಾಸಿಗಳಾಗಿದ್ದಾರೆ. ಇನ್ನಿಬ್ಬರು ಸಚಿವರಾದ ಅಶೋಕ್ ಮತ್ತು ಮುರುಗೇಶ್ ನಿರಾಣಿ ವಿರುದ್ದ ಸಹ ಲೋಕಾಯುಕ್ತ ಪೋಲೀಸರು ಕೇಸು ದಾಖಲಿಸಿರುವುದರಿಂದ ಇವರಿಬ್ಬರೂ ರಾಜಿನಾಮೆ ನೀಡಬೇಕೆಂಬ ಒತ್ತಡ ಕೇಳಿಬರುತ್ತಿದೆ. ಮೈಸೂರಿನ ಸಚಿವ ರಾಂದಾಸ್ ಸಹ ಅಕ್ರಮ ಭೂಪರಿವರ್ತನೆಯ ಸುಳಿಯಲ್ಲಿ ಸಿಲುಕಿದ್ದಾರೆ. ನಿವೇಶನದಾರರಿಗೆ ವಂಚಿಸಿರುವ ಬಗ್ಗೆ ಸಚಿವ ಯೋಗೇಶ್ವರ್ ವಿರುದ್ದವೂ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ.

ಇವರೆಲ್ಲರ ಮಹಾನಾಯಕ ಯಡಿಯೂರಪ್ಪನವರ ವಿರುದ್ದ ಅರ್ಧ ಡಜನ್ ಗಿಂತಲೂ ಹೆಚ್ಚು ಪ್ರಕರಣಗಳು ದಾಖಲಾಗಿರುವುದೂ ಒಂದು ದಾಖಲೆಯೇ. ಯಡಿಯೂರಪ್ಪನವರ ಮಕ್ಕಳು, ಅಳಿಯಂದಿರು, ಸಂಬಂಧಿಗಳ ವಿರುದ್ದವೂ ಮೊಕದ್ದಮೆಗಳು ದಾಖಲಾಗಿದ್ದು ಅವರು ಸಕುಟುಂಬ ಸಮೇತವಾಗಿ ಕೋರ್ಟುಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕಾಲ ಬದಲಾಗುವುದು ಅಂದರೆ ಇದೇ ಇರಬಹುದು. ಹಿಂದೆಲ್ಲಾ ಭ್ರಷ್ಟಾಚಾರಕ್ಕೆ ಉದಾಹರಣೆಯಾಗಿದ್ದುದು ಬಿಹಾರ ರಾಜ್ಯ. ಈಗ ಅಲ್ಲಿನ ಮುಖ್ಯಮಂತ್ರಿ ನಿತೀಶ್ ಕುಮಾರ್ ಭ್ರಷ್ಟಾಚಾರಿಗಳಲ್ಲಿ ನಡುಕ ಹುಟ್ಟಿಸಿದ್ದಾರೆ. ಯಾವುದೇ ಮುಲಾಜಿಲ್ಲದೆ ಭ್ರಷ್ಟಾಚಾರಿಗಳ ಆಸ್ತಿಯನ್ನು ವಶಪಡಿಸಿಕೊಂಡು ಆ ಕಟ್ಟಡಗಳನ್ನು ಸರ್ಕಾರಿ ಶಾಲೆಗಳನ್ನಾಗಿ ಪರಿವರ್ತಿಸುತ್ತಿದ್ದಾರೆ. ತಮ್ಮ ರಾಜ್ಯವನ್ನು ಅಭಿವೃದ್ದಿ ಪಥದಲ್ಲಿ ಮುಂದುವರೆಸುತ್ತಾ ಬಿಹಾರವನ್ನು ಮಾದರಿ ರಾಜ್ಯವನ್ನಾಗಿ ಮಾಡುವಲ್ಲಿ ನಿರತರಾಗಿದ್ದಾರೆ. ಆದರೆ ಹಿಂದೊಮ್ಮೆ ಮಾದರಿ ರಾಜ್ಯವೆನಿಸಿದ್ದ ಕರ್ನಾಟಕದಲ್ಲೀಗ ಭ್ರಷ್ಟಾಚಾರ ಎಲ್ಲೆ ಮೀರಿದೆ. ಬಿಜೆಪಿ ಸರ್ಕಾರದ ಆಡಳಿತದಲ್ಲಿಯೇ ಅದೇ ಸರ್ಕಾರದ ಮುಖ್ಯಮಂತ್ರಿ, ಸಚಿವರು, ಶಾಸಕರು, ಸಂಸದರು ಸಾಲುಸಾಲಾಗಿ ಜೈಲುಪಾಲಾಗುತ್ತಿರುವುದು ಅವರುಗಳು ನಡೆಸಿರುವ ಬ್ರಹ್ಮಾಂಡ ಭ್ರಷ್ಟಾಚಾರದ ಫಲವಾಗಿಯೇ. ವಿಪರ್ಯಾಸವೆಂದರೆ ಇದೇ ಸಂದರ್ಭದಲ್ಲಿ ಬಿಜೆಪಿಯ ರಾಷ್ಟ್ರೀಯ ನಾಯಕ ಎಲ್.ಕೆ. ಅದ್ವಾನಿಯವರು ಭ್ರಷ್ಟಾಚಾರದ ವಿರುದ್ದ ರಥಯಾತ್ರೆ ಮಾಡಿಕೊಂಡು ತಿರುಗುತ್ತಿದ್ದಾರೆ. ಅವರದೇ ಪಕ್ಷ ಆಡಳಿತದಲ್ಲಿರುವ ಕರ್ನಾಟಕದಲ್ಲಿ ನಡೆದಿರುವ ಭ್ರಷ್ಟಾಚಾರವನ್ನು ಯಾವ ನೈತಿಕತೆಯಿಂದ ಅವರು ಸಮರ್ಥಿಸಿಕೊಳ್ಳುತ್ತಾರೋ ಆ ಶ್ರೀರಾಮನೇ ಬಲ್ಲ. ಒಟ್ಟಾರೆ ಬದಲಾವಣೆಗಾಗಿ ಬಿಜೆಪಿ ಎಂಬ ಸ್ಲೋಗನ್ ಅನ್ನು ನಂಬಿ ಆ ಪಕ್ಷವನ್ನು ಆಡಳಿತಕ್ಕೆ ತಂದ ಮತದಾರು ಮುಗಿಲೆತ್ತರದ ಭ್ರಷ್ಟಾಚಾರ ಕಂಡು ದಂಗಾಗಿ ಹೋಗಿದ್ದಾರೆ. ಈ ರೀತಿಯ ಬದಲಾವಣೆ ನಮಗೆ ಖಂಡಿತಾ ಬೇಡಿತ್ತಪ್ಪಾ ರಾಮ ಎಂದು ಕೆನ್ನೆ ಕೆನ್ನೆ ಬಡಿದುಕೊಳ್ಳುತ್ತಿದ್ದಾರೆ.

ಆದರೂ ಇಂಥ ಮಂದಿಯಿಂದ ಕಡೆಗಾದರೂ ಕರ್ನಾಟಕವನ್ನು, ಕರ್ನಾಟಕದ ಜನರನ್ನು, ಅವರ ಜೀವನವನ್ನು ಬಿಡುಗಡೆಗೊಳಿಸಿದ ನಮ್ಮ ಲೋಕಾಯುಕ್ತರಿಗೆ ಅದರಲ್ಲೂ ಸಂತೋಷ್ ಹೆಗಡೇ ಮತ್ತವರ ದಕ್ಷ, ಪ್ರಾಮಾಣಿಕ ಕೆಚ್ಚೆದೆಯ ಅಧಿಕಾರಿಗಳ ತಂಡಕ್ಕೆ ನಾವೆಲ್ಲರೂ ಜೈ ಎನ್ನಬೇಕು. ಕರ್ನಾಟಕವನ್ನು ಇಂಥವರು ಕಾಯಬೇಕು.

 
  

ಸಹನಾ ಅಪ್ಡೇಟ್  

ವಿಧಾನ ಸೌಧದಿಂದ ಪರಪ್ಪನ ಅಗ್ರಹಾರದವರೆಗಿನ ವಿಜೃಂಭಣೆಯ ಯಾತ್ರೆ!

 
 
ವಿಧಾನ್ ಸೌಧ ಹಾಗೂ ಪರಪ್ಪನ ಅಗ್ರಹಾರದ ಜೈಲಿಗೂ ಕಟ್ಟಡ ಬಿಟ್ರೆ ಅಷ್ಟೇನೂ ವ್ಯತ್ಯಾಸ ಕಾಣಿಸುತ್ತಿಲ್ಲ. ಯಾಕೆಂದರೆ ಇಲ್ಲಿದ್ದವರೆಲ್ಲಾ ಈಗ ಅಲ್ಲಿಗೆ ಶಿಫ್ಟ್ ಆಗಿದ್ದಾರೆ. ಅಷ್ಟೇ ಸಾಲದು ಅಂತ ಇನ್ನೂ ಕೆಲವರು ಲೈನ್ ಅಪ್ ಆಗ್ತಿದ್ದಾರೆ!

ವಿದಾನಸೌಧ ಡಲ್ ಆಗಿ ಹೋಗಿದೆ. ಇನ್ನೂ ಒಂದಷ್ಟು ಜನ ಸಚಿವರಲ್ಲಿ ಜೈಲಿನ ಭಯ ಕಾಡ್ತಿದೆ. ಆದರೆ ಅಧಿಕಾರಿ ವರ್ಗ ಮಾತ್ರ ಬಿಂದಾಸ್ ಆಗಿ ಸುಮಾರು ದಿನಗಳ ನಂತರ ಸಿಕ್ಕ ಸ್ವಾತಂತ್ರವನ್ನು ಎಂಜಾಯ್ ಮಾಡುತ್ತಾ ತಮ್ಮಿಷ್ಟಕ್ಕೆ ಬಂದಂತೆ ಅಧಿಕಾರವನ್ನು ಬಳಸತೊಡಗಿದ್ದಾರೆ. ನುಂಗಿ ಒಳಗೆ ಹೋಗಿರುವವರಲ್ಲದೆ ಹೊರಗೆ ಉಳಿದಿರುವ ನುಂಗಣ್ಣರಿಗೆ ಇದು ಈ ಪರಿಸ್ಥಿತಿ ವರದಾನವಾಗಿದೆ.

ಮುಖ್ಯಮಂತ್ರಿ ಸದಾನಂದಗೌಡರಿಗೆ ಆದಷ್ಟು ಉತ್ತಮ ಆಡಳಿತ ಕೊಡಬೇಕೆಂಬ ಉಮೇದೇನೋ ಇದೆ ಆದರೆ ಒಡೆದು ಹೋಳಾಗಿರುವ ಬಿಜೆಪಿ ಬಣಗಳನ್ನು ಎದುರು ಹಾಕಿಕೊಂಡು ತಮ್ಮ ಸ್ವಂತ ನಿರ್ಧಾರಗಳನ್ನು ಜಾರಿಗೆ ತಂದು ಅಧಿಕಾರ ನಡೆಸುವ ತಾಕತ್ತಿಲ್ಲ. ಅವರದೆನಿದ್ದರು ಚನ್ನಾಗಿ ತಿಪ್ಪೆ ಸಾರಿಸುವ ಕೆಲಸ. ಅವರಿಗೆ ಎಡ-ಬಲದಲ್ಲಿ ಯಡ್ಡಿ ಪರ ವಿರೋಧಿ ಸಚಿವರ ಕಾಟ ಇದ್ದದ್ದೆ. ಎರಡು ಗುಂಪನ್ನು ಮ್ಯಾನೆಜ್ ಮಾಡಿಕೊಂಡು ಹೋಗುವ ಅನಿವಾರ್ಯತೆ ಇರುವುದರಿಂದ ಅವರು ತಮ್ಮ ದಕ್ಷಿಣ ಕನ್ನಡ ಬುದ್ದಿವಂತಿಕೆಯನ್ನ ಬಳಸಿ ಹೆಜ್ಜೆ ಇಡತೊಡಗಿದ್ದಾರೆ. ಯಡಿಯೂರಪ್ಪ ಪರಪ್ಪನ ಅಗ್ರಹಾರದಿಂದಲೇ ತಮ್ಮ ಅಧಿಕಾರವನ್ನ ಚಲಾಯಿಸುವಲ್ಲಿ ಯಶಸ್ವಿ ಆಗ್ತಿದ್ದಾರೆ ಅನ್ನೋದನ್ನ ತಳ್ಳಿ ಹಾಕಲು ಸಾದ್ಯವಿಲ್ಲ. ಸಚಿವರಾದ ಶೋಭಾ ಕರಂದ್ಲಾಜೆ, ಬಸವರಾಜ್ ಬೊಮ್ಮಾಯಿ, ಸೋಮಣ್ಣ, ನಿರಾಣಿ, ರೇಣುಕಾಚಾರ್ಯ ಇವರುಗಳು ಸದಾನಂದಗೌಡರನ್ನ ಕಂಟ್ರೋಲ್ ಮಾಡಲು ಸದಾ ಸನ್ನದರಿದ್ದಾರೆ. ಸಮಸ್ತ ಯಡಿಯೂರಪ್ಪ ಬೆಂಬಲಿತ ಸಚಿವರು ಹಾಗೂ ಅಧಿಕಾರಿ ವರ್ಗ ಸದಾನಂದ ಗೌಡರ ಮೇಲೆ ಹದ್ದಿನ ಕಣ್ಣಿಟ್ಟಿದ್ದು, ಯಡಿಯೂರಪ್ಪರ ಒಪ್ಪಿಗೆ ಇಲ್ಲದೆ ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗದಂತೆ ಹಾಗೂ ವಿರೋಧಿ ಗುಂಪಿನ ಚಟುವಟಿಕೆಗಳನ್ನುನಿಯಂತ್ರಿಸಲು ಆಗುವಂತೆ ತಮ್ಮದೇ ಜಾಲವನ್ನು ಹೆಣೆದಿದ್ದಾರೆ. ಸದಾನಂದಗೌಡರು ಬರೀ ನೇಮ್ ಸೇಕ್.

ಒಂದು ಸರ್ಕಾರ ನಡೆಯುವಾಗ ಸ್ವಲ್ಪವಾದರೂ ಳ್ಳೆ ಕೆಲಸ ಮಾಡಿ ಘನತೆ, ಗೌರವಗಳನ್ನ ಕಾಯ್ದುಕೊಳ್ಳಬೇಕು ಅನ್ನೋದು ಗೌರವಸ್ಥರು ಆಡೋ ಮಾತು. ಆದರೆ ಕರ್ನಾಟಕದಲ್ಲಿ ಇಲ್ಲಿ ಅದ್ಯಾವುದನ್ನು ಕಾಣಲಾಗುತ್ತಿಲ್ಲ. ರಾಜ್ಯದ ೯೦ ತಾಲೂಕುಗಳಲ್ಲಿ ಬರ ಎಂದು ಅಧಿಕೃತವಾಗಿ ಘೋಷಿಸಲಾಗಿದ್ದರು ಪರಿಹಾರ ಕಾರ್ಯ ಮಾತ್ರ ಚುರುಕುಗೊಂಡಿಲ್ಲ. ಉತ್ತರಕರ್ನಾಟಕದ ಜನ ಊರು ಬಿಟ್ಟು ಗುಳೆ ಹೊರಟಿದ್ದಾರೆ. ವಿದ್ಯುತ್ ಸಮಸ್ಯೆ ಈಗಾಗಲೇ ರಾಜ್ಯದಲ್ಲಿ ತಾಂಡವವಾಡತೊಡಗಿದೆ. ಇನ್ನು ಮುಂದಿನ ಆರು ತಿಂಗಳ ಸ್ಥಿತಿಯನ್ನು ದೇವರೇ ನೋಡಿಕೊಳ್ಳಬೇಕು. ಇದಕ್ಕೆಲ್ಲಾ ಸ್ಪಂದಿಸಬೇಕಾದ ಸರ್ಕಾರ ಲೂಟಿ ವ್ಯವಹಾರ ಭ್ರಷ್ಟರ ಚರ್ಚೆಯಲ್ಲೇ ಮುಳುಗಿದೆ. ರಾಜ್ಯದ ಅಧಿಕಾರಿಗಳು ಬೇರೆ ರಾಜ್ಯಗಳಿಗೆ ಹೋದಾಗ ಅಲ್ಲಿನ ಅಧಿಕಾರಿಗಳು ನಮ್ಮ ಅಧಿಕಾರಿಗಳ ತಜ್ನ ಅಭಿಪ್ರಾಯವನ್ನು ಕೇಳುತ್ತಿದ್ದರಂತೆ. ಆದರೀಗ ಕರ್ನಾಟಕದ ಅಧಿಕಾರಿಗಳನ್ನು ಕಂಡರೆ ಬೇರೆ ರಾಜ್ಯಗಳ ಅಧಿಕಾರಿಗಳು ’ಇನ್ನು ಎಷ್ಟು ಜನ ಸಚಿವರು ಜೈಲು ಸೇರ್ತಾರೆ? ನಿಮ್ಮ ಇಲಾಖೆ ಸಚಿವರ ಹೆಸರು ಲಿಸ್ಟ್ ನಲ್ಲಿ ಇದೆಯ?’ ಎನ್ನುತ್ತಾರಂತೆ. ರಾಜ್ಯದ ಹಿರಿಯ ಐಎಎಸ್ ಅಧಿಕಾರಿಯೊಬ್ಬರು ಬೇಜಾರಿನಿಂದ ಹೇಳಿಕೊಂಡಿದ್ದು ಹೀಗೆ.

ಒಮ್ಮೆ ನಿಜಲಿಂಗಪ್ಪ, ಕೆಂಗಲ್, ದೇವರಾಜ ಅರಸು, ಪಟೇಲ್, ನಜೀರ್ ಸಾಬ್, ಎಂಪಿ ಪ್ರಕಾಶ್, ಬಸವಲಿಂಗಪ್ಪನವರಂಥ ಸತ್ವ ಇರೋ ರಾಜಕಾರಣಿಗಳನ್ನು ಕಂಡ ರಾಜ್ಯ ಈಗ ವ್ಯವಹಾರಸ್ಥ ರಾಜಕಾರಣಿಗಳಿಂದ ತುಂಬಿ ಹೋಗಿದೆ. ಸದಾ ಇತಿಹಾಸದ ಬಗ್ಗೆ ಮಾತನಾಡಿ ನಾನು ಹಂಗಿದ್ದೆ ಹಿಂಗಿದ್ದೆ ಎನ್ನುವ ಕಾಂಗ್ರೆಸ್ಸ್, ತತ್ವ-ಸಿದ್ದಾಂತ ಎಂದು ಕೊಚ್ಚಿಕೊಳ್ಳುವ ಬಿಜೆಪಿ, ಅತ್ತ ಪ್ರಾದೇಶಿಕ ಪಕ್ಷವೂ ಅಲ್ಲದ ಜೆಡಿಎಸ್ ಪಕ್ಷಗಳಿಂದಲೇ ಬಂದಿರುವ ರಾಜಕಾರಣಿಗಳಿಂದ ಈಗ ಈ ಅವ್ಯವಹಾರಗಳು ನಡೆದಿದೆಯಾದ್ದರಿಂದ ಜನ ಪಕ್ಷಗಳ ಮೇಲೆ ಅನುಮಾನ ಪಡಬೇಕಿದೆ. ತಮ್ಮ ಆಯ್ಕೆಯನ್ನೂ ಪ್ರಶ್ನಿಸಿಕೊಳ್ಳಬೇಕಿದೆ.

ರಾಜ್ಯದ ಬಿಜೆಪಿಯದ್ದು ಈ ಕಥೆ ಆದರೆ ರಾಷ್ಟ್ರ‍ೀಯ ಮಟ್ಟದ ಬಿಜೆಪಿಯಲ್ಲೂ ಫಜೀತಿಯಾಗಿದೆ. ಬಿಜೆಪಿ ಧುರೀಣ ಅಡ್ವಾಣಿ ಅವರ ಭ್ರಷ್ಟಾಚಾರ ವಿರೋಧಿ ಜನಚೇತನ ಯಾತ್ರಾ ಯಾವ ಪುರುಷಾರ್ಥವನ್ನೂ ಸಿದ್ದಿಸಲಿಲ್ಲ. ಅವರಿಗೆ ಈಗ ಪಕ್ಷದಲ್ಲಿ ಕವಡೆಕಾಸಿನ ಕಿಮ್ಮತ್ತು ಸಿಗ್ತಿಲ್ಲ. ರಾಜ್ಯದಲ್ಲಿ ನಡೆದ ಅಡ್ವಾಣಿಯವರ ಯಾತ್ರೆಗೆ ಯಡಿಯೂರಪ್ಪ ಬಣದ ಯಾವೂಬ್ಬ ಶಾಸಕ, ಸಚಿವನೂ ಪಾಲ್ಗೊಳ್ಳದೆ ಸೆಡ್ಡು ಹೊಡೆದಿದ್ದಾರೆ. ಈಗ ಜೈಲು ವಾಸಿಯಾಗಿರುವ ಯಡಿಯೂರಪ್ಪ ತಮ್ಮ ಬೆಂಬಲಿಗರೊಂದಿಗೆ ಪರ್ಯಾಯ ಪಕ್ಷ ರಚಿಸುವ ಯೋಚನೆ ಮಾಡುತ್ತಿದ್ದಾರೆಂಬ ಸುದ್ದಿ ಹಾರಾಡತೊಡಗಿದೆ. ಪ್ರಬಲ ಲಿಂಗಾಯಿತರ ಬೆಂಬಲ ಯಡಿಯೂರಪ್ಪ ಅವರಿಗೆ ಇರುವುದರಿಂದ ಬಿಜೆಪಿ ಮುಖಂಡರು ತಮ್ಮ ಮಾತು ಕೇಳದಿದ್ದರೆ ತಮ್ಮ ಬೆಂಬಲಿಗರೊಂದಿಗೆ ಬೇರೆ ದಾರಿ ಹಿಡಿಯಲು ಯಡಿಯೂರಪ್ಪ ಆಳವಾಗಿ ಯೋಚಿಸತೊಡಗಿದ್ದಾರೆ. ಹಾಲಿ ಸದಾನಂದಗೌಡರ ಸರ್ಕಾರ ಇದ್ದಷ್ಟು ದಿನ ಕಾಲತಳ್ಳಿ ಆನಂತರ ತಮ್ಮ ದಾರಿ ತಾವು ನೋಡಿಕೊಳ್ಳುವುದು ಅವರ ಆಲೋಚನೆ. ದಕ್ಷಿಣ ಭಾರತದಲ್ಲಿ ಮೊದಲ ಬಾರಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರವನ್ನು ಅಬಾರ್ಷನ್ ಮಾಡಿಸುವುದು ಬೇಡ ಎಂದು ಆತನೂ ಸುಮ್ಮನಿದ್ದಾರೆ ಎನ್ನಲಾಗಿದೆ.

ಈ ನಡುವೆ ನಡೆದ ದೊಡ್ಡದೊಂದು ದುರಂತ: ಭಕ್ತರಿಂದ, ಅನುಯಾಯಿಗಳಿಂದ ನಡೆದಾಡುವ ದೇವರು ಎಂದೆಲ್ಲ ಕರೆಸಿಕೊಳ್ಳುವ ಶಿವಗಂಗೆಯ ಶಿವಕುಮಾರ ಸ್ವಾಮೀ ಅವರು ನ್ಯಾಯಾಂಗ ಬಂಧನದಲ್ಲಿರುವ ಯಡಿಯೂರಪ್ಪ ಅವರನ್ನ ನೋಡಲು ಬಂದು ಸಾಂತ್ವನ ಹೇಳಿದ್ದು! ಹಿನ್ನೆಲೆ ಏನೇ ಇರಲಿ, ಒಬ್ಬ ಮಠಾಧೀಶರಾಗಿ ಸಾಕಷ್ಟು ಹೆಸರು ಗಳಿಸಿ ತಮ್ಮದೇ ಗೌರವ-ಘನತೆಯನ್ನು ಕಾಪಾಡಿಕೊಂಡು, ಬೇರೆ ಮಠ-ಮಾನ್ಯರಿಗೆ ದಾರಿದೀಪ ಎಂದೇ ಅವರ ಹಿಂಬಾಲಕರಿಂದ ಬಣ್ಣಿಸಲ್ಪಡುವ ಶಿವಕುಮಾರ ಸ್ವಾಮಿಗಳು ಈ ಇಳಿ ವಯಸ್ಸಿನಲ್ಲಿ ಅದ್ಯಾವ ಕಾರಣಕ್ಕೆ ಜೈಲಿಗೆ ಬಂದರೋ...ಅವರ ಈ ನಡೆ ಅವರ ಬಗ್ಗೆ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿರುವುದೆ. ಇಡೀ ಲಿಂಗಾಯತ ಸಮುದಾಯವೇ ಯಡಿಯೂರಪ್ಪನವರ ಹಿಂದಿದೆ ಅನ್ನೋದನ್ನ ಬಿಜೆಪಿ ರಾಷ್ಟ್ರೀಯ ನಾಯಕರಿಗೆ ತೋರಿಸುವುದಕ್ಕೆ ಯಡ್ಡಿ ಬೆಂಬಲಿಗರು ಬೇಕೆಂದೇ ಈ ಪ್ರಹಸನವನ್ನು ಮಾಡಿಸಿ ಕೃತಾರ್ಥರಾಗಿದ್ದಾರೆ. ಶಿವಗಂಗೆ ಸ್ವಾಮಿಗಳೇ ಹೋದ ಮೇಲೆ ನಾನೇನು ಕಡಿಮೆ ಅಂತ ಸುತ್ತೂರು ಮಠದ ಶಿವರಾತ್ರೀಶ್ವರ ಸ್ವಾಮಿಯೂ ಯಡಿಯೂರಪ್ಪ ಅವರನ್ನ ಭೇಟಿಯಾಗಿ ಸಾಂತ್ವನ ಹೇಳಿ ಸಮಾಧಾನ ಮಾಡಿದ್ದಾರೆ. ಈ ಇಬ್ಬರೂ ಸ್ವಾಮಿಗಳೂ ಸಮಾಧಾನ ಮಾಡಿದ್ದಾರೆಯೇ ಹೊರತು ಯಡಿಯೂರಪ್ಪನವರ ಕಿವಿ ಹಿಂಡಿ ಬುಧ್ಧಿ ಹೇಳಿದ್ದರೆ ಅವರಿಗೂ ಒಂದು ಸಾರ್ಥಕತೆ ಇರುತ್ತಿತ್ತೇನೋ.

ಈ ಸ್ವಾಮಿಗಳು ಯಡಿಯೂರಪ್ಪ ಅವರ ಹತ್ತಿರ ಹೋಗಿ "ನೀವು ನಮ್ಮ ಹತ್ತಿರ ಇಡಲಿಕ್ಕೆ ಕೊಟ್ಟಿರುವ ಹಣವನ್ನು ನೀವು ಬರೋವರ್ಗೂ ಸೇಫ್ ಆಗಿ ಇಟ್ಟುಕೊಳ್ಳುತ್ತೀವಿ, ಮೋಸ ಮಾಡದೆ ಹಿಂತಿರುಗಿಸುತ್ತೀವಿ" ಎಂದು ಪ್ರಮಾಣ ಮಾಡಲಿಕ್ಕೆ ಹೋಗಿದ್ರು ಅಂತಲೂ ಜನ ಮಾತಾಡಿಕೊಳ್ತಿದ್ರು.

 
  
 
 
 
 
 
 
Copyright © 2011 Neemgrove Media
All Rights Reserved