ಅಂಗಳ      ಗಾಳಿ ಅಂಗಿ ಚುಂಗು ಹಿಡಿದು
Print this pageAdd to Favorite
 

 ಗಾಳಿ ಅಂಗಿ ಚುಂಗು ಹಿಡಿದು
ಕಾಲಿಗಷ್ಟು ಚಕ್ರ ಕಟ್ಟಿ
ಮೆಲ್ಲ ಮೆಲ್ಲ ಸಿಲ್ಲಿ ಗಲ್ಲಿ
ಕೋಟೆ ಕೊತ್ತಲ ಊರು ಸುತ್ತಿ
ಕಣ್ಣು ಕಂಡ ಪಟಗಳನ್ನು
ಮನದ ಪದಕೆ ತಳಿಕೆ ಹಾಕಿ
ಹಿಗ್ಗು ಸುಗ್ಗಿ ಎಲ್ಲ ಸುರಿದು
ಪುಟದ ಮೇಲೆ ತಟಪಟಾ...

 
 

ಜರ್ಮನಿಯ ಕ್ರೂಜ಼್ ನಲ್ಲಿ ನೆನಪಾದವರು ಪ್ರೊ: ಎಮ್.ಡಿ. ನಂಜುಂಡಸ್ವಾಮಿ.

 

ಟೋನಿ
 
 
 
ಜ್ಯೂಜ಼ರ್ ಹೇಳಿದ್ದ ಸಮಯಕ್ಕೆ ಇನ್ನೂ ಒಂದು ಗಂಟೆ ಇದ್ದುದರಿಂದ ಬಾರಿನಿಂದ ಹೊರಬಂದವರೆಲ್ಲಾ ಒಂದೊಂದು ದಿಕ್ಕಿಗೆ ಹೊರಟಿದ್ದೆವು. ಕಲೋನ್ ನಗರದಲ್ಲಿ ಪರ್ಫ಼ೂಮ್ ಬಹಳ ಪ್ರಸಿದ್ದಿಯೆಂದು ಜ್ಯೂಜ಼ರ್ ಹೇಳಿದ್ದು ನೆನಪಾಗಿ ಸಣ್ಣದೊಂದು ಅಂಗಡಿಯ ಒಳಹೊಕ್ಕೆ. ಅಲ್ಲಿ ನೋಡಿದರೆ ಚೈನಾದೇಶದ ವ್ಯಕ್ತಿಯೊಬ್ಬ ಕೂತಿದ್ದ. ಅಲ್ಲಿ ಹಲವಾರು ಅಂಗಡಿಗಳಲ್ಲಿ ಚೈನಾ ದೇಶದವರೇ ಕುಳಿತಿದ್ದುದನ್ನು ನಾನು ತಿರುಗಾಡುವಾಗ ಗಮನಿಸಿದ್ದೆ. ಇಲ್ಲಿ ಜರ್ಮನಿಯಲ್ಲಿ ಇಷ್ಟೊಂದು ಮಂದಿ ಬಂದು ಅಂಗಡಿಯನ್ನಿಟ್ಟಿದ್ದಾರಲ್ಲಾ ಎಂದು ನನಗೆ ಆಶ್ಚರ್ಯವಾಗಿತ್ತು.
 
ನಾನು ಒಳಗೆ ಹೋದ ಕೂಡಲೇ ಅಂಗಡಿಯವನು ಚೈನಾದವನೇ ಎಂಬುದನ್ನು ಖಾತರಿಪಡಿಸಿಕೊಳ್ಳಲು ’ನೀನು ಚೈನಾದವನಾ’? ಅಂದದ್ದಕ್ಕೆ ಆತ ’ಎಸ್ ಎಸ್’ ಅಂದ. ಆತನಿನ್ನೂ ಇಪ್ಪತ್ತರ ಹರಯದ ಯುವಕ. ನೀನಿಲ್ಲಿಗೆ ಬಂದು ಎಷ್ಟು ವರ್ಷವಾಯಿತೆಂದು ಕೇಳಿದ್ದಕ್ಕೆ ಮೂರು ವರ್ಷದಿಂದಲೂ ಇಲ್ಲಿಯೇ ನೆಲೆಸಿರುವುದಾಗಿ ಹೇಳಿದ. ’ನಿನಗೆ ಜರ್ಮನ್ ಭಾಷೆ ಮಾತಾಡಲು ಬರುತ್ತದೆಯಾ’ ಎಂದೆ. ಅಡ್ಡಡ್ಡ ಗೋಣು ಅಳ್ಳಾಡಿಸಿ ’ಇಂಗ್ಲಿಷ್ ಕಲಿತಿದ್ದೀನಿ, ಇನ್ನೂ ಚೆನ್ನಾಗಿ ಕಲಿಯಬೇಕಿದೆ, ಜರ್ಮನಿ ಮಾತಾಡಲೂ ಗೊತ್ತಿಲ್ಲ, ಅರ್ಥವೂ ಆಗುವುದಿಲ್ಲ, ಇಲ್ಲಿಗೆ ಬರುವ ಟೂರಿಸ್ಟ್ ಗಳೆಲ್ಲಾ ಇಂಗ್ಲಿಷ್ ನಲ್ಲಿಯೇ ಮಾತಾಡುತ್ತಾರೆಂದೂ, ಚೈನೀ ಭಾಷೆ ಬಿಟ್ಟರೆ ನನಗೆ ಬರುವುದು ಸ್ವಲ್ಪ ಸ್ವಲ್ಪ ಇಂಗ್ಲಿಷ್ ಮಾತ್ರ’ ಅಂದವ ’ನೀವು ಇಂಡಿಯನ್ಸ್ ಚೆನ್ನಾಗಿ ಇಂಗ್ಲಿಷ್ ಮಾತಾಡ್ತೀರಿ, ನಮ್ಮ ದೇಶದಲ್ಲಿ ಇಂಗ್ಲಿಷ್ ಮಾತಾಡುವುದಿಲ್ಲ’ ಅಂದು ನಕ್ಕ. ನನ್ನನ್ನು ಯಾವ ದೇಶದವನೆಂದು ಕೇಳದೇ ಆತ ನನ್ನನ್ನು ಇಂಡಿಯನ್ ಎಂದು ಕರೆದಿದ್ದ. ಅಲ್ಲದೆ ನಿಮ್ಮಂತೆ ನಾವು ಚೈನೀಯರು ಇಂಗ್ಲಿಷ್ ಭಾಷೆಗೆ ಜೋತುಬೀಳದೇ ನಮ್ಮ ಭಾಷೆಯಲ್ಲೇ ಮುಂದುವರೆದಿರುವುದಾಗಿ ಪರೋಕ್ಷವಾಗಿ ನನಗೆ ತಿಳಿಸುತ್ತಿರಬಹುದೆಂದೂ, ನನ್ನ ಮೂವತ್ತೈದು ಪರ್ಸೆಂಟ್ ಇಂಗ್ಲಿಷ್ ಅನ್ನೇ ಚೆನ್ನಾಗಿ ಮಾತಾಡುತ್ತೀರಿ ಅಂದದ್ದೂ ಕೇಳಿ ಅವನ ಮಾತುಗಳು ನನಗೆ ಕಿಚಾಯಿಸಲು ಹೇಳಿದ್ದೋ ಅಥವಾ ಕಾಂಪ್ಲಿಮೆಂಟೋ ನನಗರ್ಥವಾಗದೇ ಗೊಂದಲವಾಯಿತು.
 
ನೀನಿಲ್ಲಿ ಯಾರ ಜತೇಲಿದ್ದೀಯಾ ಊಟ ತಿಂಡಿ ವ್ಯವಸ್ಥೆ ಹೇಗೆ’ ಎಂದು ಕುತೂಹಲದಿಂದ ಕೇಳಿದೆ. ನಾವಿಲ್ಲಿ ಎಂಟು ಮಂದಿ ಒಟ್ಟಿಗೇ ಮನೆ ಮಾಡಿಕೊಂಡಿರುವುದಾಗಿಯೂ ಊಟ, ತಿಂಡಿಯನ್ನೆಲ್ಲಾ ನಾವೇ ಮಾಡಿಕೊಳ್ಳುವುದಾಗಿಯೂ, ಇಲ್ಲಿ ಬೇಕಾದಷ್ಟು ಚೈನೀಸ್ ಹೋಟೆಲ್ ಗಳಿದ್ದರೂ ಅಲ್ಲಿ ದುಬಾರಿಯಾದ ಕಾರಣ ನಾವು ಅಲ್ಲಿಗೆ ಹೋಗುವುದಿಲ್ಲವೆಂದ. ಅವನ ಪೂರ್ವಾಪರ ವಿಚಾರಿಸುತ್ತಾ ಅವನಂಗಡಿಯಲ್ಲಿದ್ದ ವಸ್ತುಗಳನ್ನು ನೋಡತೊಡಗಿದ್ದೆ. ಅಲ್ಲಿದ್ದ ಬಹುತೇಕ ವಸ್ತುಗಳೆಲ್ಲಾ ಚೈನಾ ದೇಶದವೇ ಆಗಿದ್ದವು. ಕಲೋನ್ ಚರ್ಚಿನ ಮಾಗ್ನೆಟ್ ಗಳನ್ನು ಕೊಂಡುಕೊಂಡು ಹೊರಟೆ. ಆ ಚೈನೀ ಹುಡುಗ ’ಕೈ ಕುಲುಕಿ ಐ ಲೈಕ್ ಇಂಡಿಯಾ’ ಅಂದ.
ಕಲೋನ್ ವಾಟರ್ ಅನ್ನು ಕೊಂಡುಕೊಳ್ಳಲು ಚೈನಾದವನ ಅಂಗಡಿಗೆ ಹೋದವ ಆತನೊಡನೆ ಮಾತಾಡುತ್ತಾ ಅದನ್ನು ಮರೆತಿದ್ದೆ. ಮತ್ತೊಂದು ಅಂಗಡಿಗೆ ಹೋಗಿ ಅಲ್ಲಿ ಕೂತಿದ್ದ ಜರ್ಮನಿ ಸುಂದರಿಯ ಬಳಿ ಅದನ್ನು ಕೊಂಡುಕೊಂಡೆ. ಸುಮ್ಮನೇ ಅಂಗಡಿಯ ಸುತ್ತ ಕಣ್ಣು ಹಾಯಿಸಿ ಹೊರಗಡೆ ಬರುವಾಗ ದಂಪತಿಗಳಿಬ್ಬರು ಅದೇನೋ ಗೊಣಗಾಡುತ್ತಾ ಅಂಗಡಿ ಹೊಕ್ಕರು.
 
 
ಅವರು ಕನ್ನಡದಲ್ಲಿ ಮಾತನಾಡುತ್ತಿದ್ದುದರಿದ ಕುತೂಹಲದಿಂದ ಅವರನ್ನೇ ನೋಡಿದೆ. ಅವರಿಗೂ ನಾನು ಕನ್ನಡದವನೆಂದು ಗೊತ್ತಾಯಿತೇನೋ ನಗುತ್ತಾ ಕರ್ನಾಟಕದವರಾ ಎಂದು ಕೇಳಿದರು. ’ಹೌದೆಂದೆ’. ಅವರೂ ನಾನು ಬಂದಿದ್ದ ಟ್ರಾವಲ್ಸ್ ಕಂಪನಿಯಿಂದಲೇ ಬಂದವರಾಗಿದ್ದರು. ನಮ್ಮ ಪ್ರವಾಸ ಇಂಗ್ಲೆಂಡ್ ನಿಂದ ಶುರುವಾಗಿ ರೋಂ ನಲ್ಲಿ ಅಂತ್ಯಗೊಡರೆ ಅವರು ರೋಂ ನಿಂದ ಬಂದು ಇಂಗ್ಲೆಂಡ್ ಕಡೆಗೆ ಹೊರಟಿದ್ದರು. ನಾನು ನೋಡಿಕೊಂಡು ಬಂದ ದೇಶಗಳತ್ತ ಅವರು ಹೊರಟಿದ್ದರೆ ಅವರು ನೋಡಿ ಬಂದ ದೇಶಗಳತ್ತ ನಾನು ಹೊರಟಿದ್ದುದರಿಂದ ನಾವು ನೋಡಿದ್ದ ದೇಶಗಳ ಬಗೆಗಿನ ಮಾಹಿತಿಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡೆವು. ಅವರು ಪ್ಯಾರಿಸ್ಸಿನ ಬಗ್ಗೆ ಕುತೂಹಲದಿಂದ ಕೇಳಿದರೆ ನಾನು ಸ್ವಿಜ಼ರ್ಲೆಂಡಿನ ಬಗ್ಗೆ ಕೇಳಿದ್ದೆ. ಅವರು ಶಾಪಿಂಗ್ ವಸ್ತುಗಳ ಬಗ್ಗೆ ಕೇಳದೇ ತಾವು ನೋಡಿದ್ದ ಸ್ಥಳಗಳ ಬಗ್ಗೆ ವಿವರಿಸಿ ನನ್ನಿಂದಲೂ ಮಾಹಿತಿ ಪಡೆದಿದ್ದು ಖುಶಿಯೆನಿಸಿತು. ಅವರು ಮುಂದೆ ಬೆಲ್ಜಿಯಂ ದೇಶಕ್ಕೆ ಹೋಗಲಿದ್ದುದರಿಂದ ಅಲ್ಲಿ ಕಳ್ಳರಿಂದಾದ ಅನುಭವವನ್ನು ಅವರಿಗೆ ಹೇಳಿ ಎಚ್ಚರದಿಂದಿರಬೇಕೆಂದು ಹೇಳಿದ್ದಕ್ಕೆ ಅವರು ಇಲ್ಲೂ ಅಂತವರಿದ್ದಾರಾ ಎಂದು ಅತೀವ ಆಶ್ಚರ್ಯ ವ್ಯಕ್ತಪಡಿಸಿದರು. ಹೊರಗಡೆ ಬಂದವ ಸಮಯವಾಗಿದ್ದರಿಂದ ಜ್ಯೂಜ಼ರ್ ನಮಗೆ ಬರಲಿಕ್ಕೆ ಹೇಳಿದ್ದ ಜಾಗಕ್ಕೆ ಹೋದೆ. ಜ್ಯೂಜ಼ರ್ ಟ್ರಾವಲ್ಸ್ ಕಂಪನಿಯ ಬಾವುಟವನ್ನು ಎತ್ತಿ ಹಿಡಿದಿದ್ದರಿಂದ ಅವನು ನಿಂತಿದ್ದ ಜಾಗವನ್ನು ಸುಲಭವಾಗಿ ಗುರ್ತಿಸಬಹುದಿತ್ತು.
 
 
ಅತೀ ಜನದಟ್ಟಣೆಯ ಜಾಗದಲ್ಲಿ ನಮ್ಮನ್ನು ಕರೆದುಕೊಂಡು ಹೋಗುವಾಗಲೆಲ್ಲಾ ನಾವು ಎತ್ತರಕ್ಕೆ ಹಾರಾಡುತ್ತಿದ್ದ ಆ ಝಂಡಾವನ್ನು ನೋಡಿಕೊಂಡೇ ಮುಂದೆ ಸಾಗುತ್ತಿದ್ದೆವು. ಕೆಲವೊಮ್ಮೆ ನಾವೇ ಯಾರಾದರೂ ಆ ಝಂಡಾವನ್ನು ಹಿಡಿದು ನಡೆಯುತ್ತಿದ್ದೆವು. ನಾನೂ ಒಂದೆರಡು ಬಾರಿ ಅದನ್ನು ಹಿಡಿದಿದ್ದೆನದರೂ ಪ್ಯಾರಿಸ್ಸಿನಲ್ಲಿ ಯಡವಟ್ಟಾಗಿದ್ದರಿಂದ ಅದನ್ನು ಮತ್ತೆ ಮುಟ್ಟಲು ಹೋಗಲಿಲ್ಲ. ಪ್ಯಾರಿಸ್ಸಿನಲ್ಲಿ ಐಫ಼ಲ್ ಟವರ್ ನೋಡಲು ಹೋಗುವಾಗ ಕೆಲವರು ಶಾಪಿಂಗ್ ಮುಗಿಸಿ ಇನ್ನೂ ಬಾರದಿದ್ದುದರಿಂದ ಜ್ಯೂಜ಼ರ್ ಝಂಡಾವನ್ನು ನನಗೆ ಕೊಟ್ಟು ಹಿಡಿದುಕೊಂಡು ನಿಂತಿರಬೇಕೆಂದೂ ಇನ್ನೂ ಬಾರದಿರುವವರನ್ನು ನಾನು ಹುಡುಕಿ ಕರಕಂಡು ಬರುವುದಾಗಿಯೂ ಹೇಳಿ ಹೋಗಿದ್ದ. ನಾವು ಎಂಟು ಹತ್ತು ಮಂದಿ ಸುಮ್ಮನೇ ನಿಂತಿದ್ದೆವು. ಜ್ಯೂಜ಼ರ್ ಹತ್ತು ನಿಮಿಷವಾದರೂ ಬರಲಿಲ್ಲ. ಅಷ್ಟರಲ್ಲಿ ದೂರದಲ್ಲಿ ಯಾರೋ ಟೂರಿಸ್ಟ್ ಗಳಿಗೂ ಕಪ್ಪು ಅಲೆಮಾರಿಗಳಿಗೂ ಗಲಾಟೆ ನಡೆಯುತ್ತಿದ್ದಂತೆ ಕಂಡು ಬಂದದ್ದರಿಂದ ನನಗೆ ಕೆಟ್ಟ ಕುತೂಹಲವಾಗಿ ಅದನ್ನು ನೋಡಲು ಹೋದೆ. ನೋಡುತ್ತಾ ನೋಡುತ್ತಾ ಸಾಕಷ್ಟು ಮುಂದೆ ಹೋಗಿದ್ದೆ. ಅಷ್ಟರಲ್ಲಿ ಗಲಾಟೆ ತಣ್ಣಗಾಗಿದ್ದರಿಂದ ಹಿಂದಿರುಗಿ ನೋಡಿದರೆ ನನ್ನೊಟ್ಟಿಗೆ ಇದ್ದವರೆಲ್ಲಾ ನನ್ನನ್ನೇ ಫ಼ಾಲೋ ಮಾಡಿದ್ದರು!! ನಾನು ಝಂಡಾ ಹಿಡಿದುಕೊಂಡಿದ್ದರಿಂದ ಅವರೆಲ್ಲಾ ವಿಧೇಯತೆಯಿಂದ ನನ್ನನ್ನು ಹಿಂಬಾಲಿಸಿದ್ದರು. ಜ್ಯೂಜ಼ರ್ ನಿಲ್ಲಿಸಿದ್ದ ಜಾಗದಿಂದ ನಾನು ಸುಮಾರು ದೂರ ಬಂದಿದ್ದರಿಂದ ಅವನು ನಿಲ್ಲಿಸಿದ್ದ ಜಾಗವೇ ಗೊತ್ತಾಗಲಿಲ್ಲ. ನಾನು ಇತರರು ಅಲ್ಲಿಯೇ ನಿಂತಿರುತ್ತಾರೆಂದುಕೊಂಡೇ ಗಲಾಟೆಯನ್ನು ನೋಡಲು ಹೋಗಿದ್ದೆ. ನಾನು ಅಲ್ಲಿಗೆ ಹೋಗುವಾಗಲೂ ಅವರು ಯಾಕೆ ಎಂದು ಕೇಳಿರಲಿಲ್ಲ. ಈಗ ಹಿಂದಿರುಗುವಾಗಲೂ ಯಾಕೆ ಎಂದು ಕೇಳಲಿಲ್ಲ. ಜ್ಯೂಜ಼ರ್ ನ ಅಪ್ಪಣೆಯಂತೆ ಅವರೆಲ್ಲಾ ಸುಮ್ಮನೇ ಝಂಡಾವನ್ನು ನೋಡಿಕೊಂಡು ಅನುಸರಿಸಿ ಬರುತ್ತಿದ್ದರು. ಸ್ವಲ್ಪ ದೂರ ಹೋಗುವಷ್ಟರಲ್ಲಿ ಜ್ಯೂಜ಼ರ್ ನಮ್ಮತ್ತಲೇ ಓಡೋಡಿ ಬರುತ್ತಿದ್ದುದು ಕಾಣಿಸಿತು. ಹತ್ತಿರ ಬಂದವನೇ ನೀವ್ಯಾಕೆ ನಿಲ್ಲಿಸಿದ್ದ ಜಾಗದಿಂದ ಇಲ್ಲಿಗೆ ಬಂದಿದ್ದೆಂದು ಗೊಣಗಾಡಿದ. ಅಂದೇ ಕೊನೆ ಈ ಝಂಡಾ ಹಿಡಿಯುವ ಉಸಾಬರಿಯೇ ಬೇಡವೆಂದು ನಾನು ತೀರ್ಮಾನಿಸಿದ್ದೆ.
 

ಶಾಪಿಂಗ್ ಪ್ರಿಯರು ಒಬ್ಬೊಬ್ಬರೇ ಹಿಂದಿರುಗತೊಡಗಿದ್ದರು. ತೀರಾ ಉತ್ಸಾಹದಿಂದ ಶಾಪಿಂಗ್ ಗಾಗಿ ಹೋಗಿದ್ದವರೆಲ್ಲಾ ಮುಖ ಬಾಡಿಸಿಕೊಂಡು ಹಿಂದಿರುಗಿದ್ದರು. ಮೂರು ಗಂಟೆ ಕಾಲ ಅವರು ಮಾರುಕಟ್ಟೆಯಲ್ಲೆಲ್ಲಾ ಸುತ್ತಾಡಿ ಸುಸ್ತಾದವರಂತೆ ಕಂಡುಬಂದರು. ಗುರುಬಸವಯ್ಯನವರು ಯಾರೋ ಹೊಸಬರನ್ನು ಫೋಟೋ ತೆಗೆಸಿಕೊಳ್ಳಲಿಕ್ಕಾಗಿ ಹಿಡಿದಿದ್ದರು. ಹತ್ತಿರ ಬಂದವರೇ ’ಎಲ್ಲಿ ಹೋಗಿಬಿಟ್ರೀ, ನಾನು ನಿಮ್ಮನ್ನು ಸುಮಾರು ಹುಡುಕಿದೆ, ಎಲ್ಲೂ ಕಾಣಲಿಲ್ಲವಲ್ಲಾ’ ಅಂದರು. ಅವರು ಕ್ಯಾಮರಾ ಹಿಡಿದುಕೊಂಡು ಬರುತ್ತಿದ್ದುದನ್ನು ನೋಡಿ ಅವರಿಂದ ತಪ್ಪಿಸಿಕೊಳ್ಳಲು ನಾನು ಗಲ್ಲಿಯೊಂದಕ್ಕೆ ನುಗ್ಗಿದುದನ್ನು ಅವರಿಗೆ ಹೇಳಲಿಲ್ಲ. ಅವರ ಕ್ಯಾಮರಾ ನನ್ನನ್ನು ಓಡಿಸುತ್ತಿತ್ತು. ಅದರ ಮಹಿಮೆಯೇ ಹಾಗಿತ್ತು!. ಎಲ್ಲರೂ ಬಂದ ನಂತರ ನಮ್ಮನ್ನು ಬಸ್ ಪಾರ್ಕ್ ಮಾಡಿದ್ದ ಸ್ಥಳಕ್ಕೆ ಜ್ಯೂಜ಼ರ್ ಕರೆದುಕೊಂಡು ಹೋದ. ಶಾಪಿಂಗ್ ಗಾಗಿ ಗಂಟೆಗಟ್ಟಲೇ ಸುತ್ತಾಡಿದ್ದವರೆಲ್ಲಾ ’ಉಸ್ಸಪ್ಪಾ’ ಎಂದು ಉಧ್ಗರಿಸುತ್ತಾ ಬಸ್ ಹತ್ತಿದ್ದರು. ಎಲ್ಲರೂ ತಾವು ಕೊಂಡುಕೊಂಡ ವಸ್ತುಗಳ ಬಗ್ಗೆ ಕಾಮೆಂಟ್ ಮಾಡುತ್ತಾ ಎಲ್ಲೆಲ್ಲೂ ಚೈನಾ ಮಾಲುಗಳೇ ಹೆಚ್ಚಾಗಿವೆಯೆಂದೂ ನಮ್ಮ ಊರುಗಳಲ್ಲೇ ಇಲ್ಲಿಗಿಂತ ಕಡಿಮೆ ಬೆಲೆಗೆ ಸಿಗುತ್ತದೆಂದೂ ಮಾತಾಡಿಕೊಂಡರು. ಬಸ್ ನಲ್ಲಿ ಕೂತು ಕಲೋನ್ ನಗರದ ಸೌಂದರ್ಯವನ್ನು ಮತ್ತೊಮ್ಮೆ ನೋಡಿದೆ. ಸಹ ಪ್ರಯಾಣಿಕರೆಲ್ಲರೂ ಆಯಾಸವಾಗಿ ಮಲಗಿದ್ದರು.

ನಾವೀಗ ಕ್ರೂಜ಼್ ನಲ್ಲಿ ಪಯಣಿಸಲಿದ್ದೇವೆ, ಎಲ್ಲರೂ ಇಳಿಯಿರಿ’ ಎಂದು ಜ್ಯೂಜ಼ರ್ ಮೈಕಿನಲ್ಲಿ ಹೇಳಿದಾಗಲೇ ಎಲ್ಲರಿಗೂ ಎಚ್ಚರವಾಗಿದ್ದು. ಎಲ್ಲರೂ ಬಸ್ಸಿನಿಂದಿಳಿದೆವು. ಕೆಲವರು ಲಗೇಜು ಬ್ಯಾಗುಗಳನ್ನು ತೆಗೆದುಕೊಳ್ಳಲು ನುಗ್ಗಾಡತೊಡಗಿದ್ದನ್ನು ಗಮನಿಸಿದ ಜ್ಯೂಜ಼ರ್ ಅವುಗಳನ್ನು ತೆಗೆದುಕೊಳ್ಳಬಾರದೆಂದೂ ಮುಂದೆ ಅದೇ ಬಸ್ ನಲ್ಲಿಯೇ ನಾವು ಪ್ರಯಾಣಿಸಬೇಕೆಂದೂ ಹೇಳಿ ಎಲ್ಲರನ್ನೂ ಕ್ರೂಜ಼್ ಬಳಿಗೆ ಕರೆದುಕೊಂಡು ಹೋದ. ವಿಶಾಲವಾದ ರಿನೆ ನದಿ ಶಾಂತವಾಗಿ ಹರಿಯುತ್ತಿತ್ತು. ನದಿಯಲ್ಲಿ ಹಲವಾರು ಸಣ್ಣ ಪುಟ್ಟ ಯಾಂತ್ರಿಕ ದೋಣಿಗಳನ್ನು ನಿಲ್ಲಿಸಿದ್ದರು. ನದಿಯಲ್ಲಿ ಹಲವಾರು ದೊಡ್ಡ ದೊಡ್ಡ ದೋಣಿಗಳು ಅತ್ತಿಂದಿತ್ತ ಹೋಗುತ್ತಿದ್ದವು. ನಾವು ಹತ್ತಿದ್ದೊಂದು ಪುಟ್ಟ ಕ್ರೂಜ಼್. ಜನರಾರೂ ಇರದಿದ್ದರಿಂದ ಇಡೀ ಕ್ರೂಜ಼್ ನಲ್ಲಿ ನಮ್ಮ ತಂಡದವರೇ ಇದ್ದದ್ದು. ಕ್ರೂಜ಼್ ನ ಮುಂಭಾಗದಲ್ಲಿ ಕುಳಿತುಕೊಳ್ಳಲು ವ್ಯವಸ್ಥೆಯಿತ್ತು. ಹಿಂಭಾಗದಲ್ಲಿ ಓಪನ್ ಆದ ಜಾಗದಲ್ಲಿ ಒಂದು ಪುಟ್ಟ ಬಾರ್, ಅಲ್ಲಿ ಕುಳಿತುಕೊಳ್ಳಲು ಕುರ್ಚಿ ಟೇಬಲ್ ಗಳನ್ನು ಹಾಕಲಾಗಿತ್ತು. ತೆರೆದ ಪ್ರದೇಶವಾಗಿದ್ದರಿಂದ ಸುತ್ತಮುತ್ತಲ ಪ್ರದೇಶವನ್ನೆಲ್ಲಾ ನೋಡಬಹುದಿತ್ತು. ಎಲ್ಲರೂ ಮುಂಭಾಗದಲ್ಲಿ ಕುಳಿತಿದ್ದರಿಂದ ನಾವೊಂದಿಬ್ಬರು ಹಿಂಭಾಗದಲ್ಲಿ ಕೂತೆವು. ಬಾರಿನಲ್ಲಿ ಒಬ್ಬಳು ಹುಡುಗಿ, ಮತ್ತಿಬ್ಬರು ಹುಡುಗರು ಕೆಲಸ ಮಾಡುತ್ತಿದ್ದರು. ರಿನೆ ನದಿಯಲ್ಲಿ ಕ್ರೂಜ಼್ ಅಪೂರ್ವವಾದ ಅನುಭವವೆನಿಸಿತು. ಅದ್ಭುತ ಪ್ರಕೃತಿ ಸೌಂದರ್ಯದಿಂದ ಕೂಡಿದ ಸುತ್ತಮುತ್ತಲ ಪ್ರದೇಶ ಅದನ್ನು ನೋಡುತ್ತಿದ್ದಂತೆಯೇ ಬಾರ್ ನ ಹುಡುಗಿ ಬಂದು ನಗುನಗುತ್ತಲೇ ವೆಲ್ ಕಂ ಎಂದಳು. ನಾನು ಬಿಯರ್ ಆರ್ಡರ್ ಮಾಡಿ ಫೋಟೋ ತೆಗೆಯುತ್ತಾ ಅಡ್ಡಾಡತೊಡಗಿದೆ. ಅಷ್ಟರಲ್ಲಿ ಬಿಯರ್ ಬಂದಿತ್ತು.
 
ಬಿಯರ್ ಗ್ಲಾಸಿಗೆ ಸುರುವಿಕೊಂಡು ಹೀರುತ್ತಾ ಕೂತು ಸುತ್ತಮುತ್ತಲ ಬೆಟ್ಟಗುಡ್ಡಗಳನ್ನು ನೋಡತೊಡಗಿದೆ. ಜರ್ಮನಿಯ ಬಗ್ಗೆ ಪ್ರೊ: ನಂಜುಂಡಸ್ವಾಮಿಯವರು ನಮಗೆಲ್ಲಾ ಹೇಳುತ್ತಿದ್ದುದು ನೆನಪಾಯಿತು. ನಾವು ರೈತ ವಿದ್ಯಾರ್ಥಿ ಒಕ್ಕೂಟದಲ್ಲಿ ಕೆಲಸ ಮಾಡುತಿದ್ದ ಕಾಲವದು. ಪ್ರೊ: ನಂಜುಂಡಸ್ವಾಮಿಯವರೊಟ್ಟಿಗೆ ಎಂಬತ್ತರ ದಶಕದಲ್ಲಿ ಕಳೆದಂತಾ ದಿನಗಳು ಅಪೂರ್ವವಾದಂತವು.
 
ಬೆಂಗಳೂರಿನ ಮಿಷನ್ ರಸ್ತೆಯಲ್ಲಿ ಪ್ರೊಫ಼ೆಸರರ ಕಾನೂನು ಕಾಲೇಜಿನ ಹಿಂಬಾಗದಲ್ಲಿ ’ಮೋಬೋಸ್’ ಎಂಬ ಸುಸಜ್ಜಿತವಾದ ಬಾರ್ ಇತ್ತು. ಕಾಲೆಜು ಮುಗಿದ ನಂತರ ಅಲ್ಲಿಗೆ ನಮ್ಮನ್ನು ಅಗಾಗ್ಗೆ ಕರೆದುಕೊಂಡುಹೋಗುತ್ತಿದ್ದ ಪ್ರೊಫ಼ೆಸರರು ನಮಗೆಲ್ಲಾ ಬಿಯರ್ ಕೊಡಿಸುತ್ತಿದ್ದರು. ನಾವು ಒಂದು ಬಾಟಲ್ ಬಿಯರ್ ಕುಡಿಯುವಷ್ಟರಲ್ಲಿ ಸುಸ್ತಾದರೆ ಪ್ರೊಫ಼ೆಸರರು ನಿರಾಯಾಸವಾಗಿ ಎರಡು ಮೂರು ಬಾಟಲ್ ಬಿಯರ್ ಕುಡಿಯುತ್ತಿದ್ದುದು ನಮ್ಮಲ್ಲಿ ಅಚ್ಚರಿ ಮೂಡಿಸಿತ್ತು. ನಮಗೆ ಒಂದು ಬಾಟಲ್ ಬಿಯರ್ ಕುಡಿಯುಯಷ್ಟರಲ್ಲಿ ಹೊಟ್ಟೆ ಉಬ್ಬರಿಸಿದಂತಾಗುತ್ತಿತ್ತು. ನಮಗಿಂತಲೂ ಸಿಕ್ಕಾಪಟ್ಟೆ ತೆಳ್ಳಗಿದ್ದ ಪ್ರೊಫ಼ೆಸರರು ಅಷ್ಟು ಬಿಯರ್ ಕುಡಿದರೂ ಅವರ ಹೊಟ್ಟೆಯಲ್ಲಿ ಅಷ್ಟೊಂದು ಜಾಗವಾದರೂ ಎಲ್ಲಿತ್ತು ಎಂಬುದೇ ನಮ್ಮ ಅಚ್ಚರಿಗೆ ಕಾರಣವಾಗಿತ್ತು. ಅಲ್ಲದೆ ಅಷ್ಟು ಬಿಯರ್ ಕುಡಿಯುವಷ್ಟರಲ್ಲಿ ಅವರು ಕನಿಷ್ಟ ಎರಡು ಪ್ಯಾಕ್ ಚಾರ್ ಮಿನಾರ್ ಸಿಗರೇಟುಗಳನ್ನು ಸೇದುತ್ತಿದ್ದರು.
 
 
ಅವರೊಟ್ಟಿಗೆ ಕೂತಾಗಲೆಲ್ಲಾ ನಮಗೆ ಹೊಸ ಹೊಸ ವಿಚಾರಗಳನ್ನು ತಿಳಿದುಕೊಳ್ಳುವ ಹಂಬಲ. ಅವರ ಮಾತಾಡುತ್ತಿದ್ದರೆ ನಮಗೆ ಸುತ್ತಮುತ್ತಲ ಅರಿವಿರುತ್ತಿರಲಿಲ್ಲ. ಪ್ರೊಫ಼ೆಸರರು ಜರ್ಮನಿಯಲ್ಲಿದ್ದಾಗಿನ ಅನುಭವವನ್ನು ಕೇಳುವುದಕ್ಕೇ ಖುಶಿಯಾಗುತ್ತಿತ್ತು. ಜರ್ಮನಿಯಲ್ಲಿ ಒಬ್ಬ ರೈತ ಯಾವುದೇ ಕೆಲಸಕ್ಕಾಗಿ ಪೋಲೀಸ್ ಠಾಣೆಗೆ ಹೋದರೆ ಅಲ್ಲಿಯ ಅಧಿಕಾರಿ ಮೊದಲು ಎದ್ದುನಿಂತು ರೈತನನ್ನು ಸ್ವಾಗತಿಸಿ ಆತನನ್ನು ಕುಳ್ಳಿರಿಸಿ ನಂತರ ತಾನು ಕುಳಿತುಕೊಳ್ಳುತ್ತಿದ್ದುದನ್ನು ಅವರು ಹೇಳುತ್ತಿದ್ದರೆ ನಮಗೆ ಸೋಜಿಗವೆನಿಸುತ್ತಿತ್ತು. ನಾವು ಸಮಾಜವಾದಿ ಅಧ್ಯಯನ ಶಿಬಿರಗಳಲ್ಲಿ ಭಾಗವಹಿಸಿದಾಗಲೆಲ್ಲಾ ಪ್ರೊ: ನಂಜುಂಡಸ್ವಾಮಿ, ಪೂರ್ಣಚಂದ್ರ ತೇಜಸ್ವಿ ಭಾಗವಹಿಸುತ್ತಿದ್ದರಿಂದ ಅವರೊಟ್ಟಿಗೆ ನಾವು ಕೊಂಚ ಸಲುಗೆಯಿಂದಲೇ ಇದ್ದೆವು. 
ಇದೇನು ಒಬ್ಬರೇ ಬಿಯರ್ ಕುಡಿಯುತ್ತಾ ಕುಂತ್ರಲ್ಲಾ, ನೀವು ಮುಂಭಾಗದಲ್ಲಿ ಇರದಿರುವುದನ್ನು ನೋಡಿ ಇಲ್ಲೆ ಇರಬಹುದೆಂದು ಊಹಿಸಿದ್ದು ನಿಜವಾಯ್ತಲ್ರೀ’ ಎನ್ನುತ್ತಾ ಬಂದ ಕಪ್ಪದ್ ಪಕ್ಕದಲ್ಲಿ ಕೂತರು. ನಾನು ಏನೋ ಯೋಚಿಸುತ್ತಿರುವಂತೆ ಅವರಿಗೆ ಕಂಡಂತಾಗಿ ’ಇದೇನು ಸದಾ ಲವಲವಿಕೆಯಿಂದಿರೋರು, ಮೌನವಾಗಿದ್ದೀರಲ್ಲಾ?’ ಅಂದು ಮಾತಿಗೆಳೆದರು. ನಾನು ಪ್ರೊಫ಼ೆಸರ್ ನಂಜುಂಡಸ್ವಾಮಿಯವರ ಬಗ್ಗೆ ನೆನೆದುಕೊಂಡು ಅವರು ಜರ್ಮನಿಯಲ್ಲಿದ್ದಾಗಿನ ಅನುಭವವನ್ನು ನಮಗೆ ಹೇಳುತ್ತಿದ್ದುದು ನೆನಪಾಯಿತೆಂದು ಹೇಳಿದೆ. ’ನೋಡೀ ಕಪ್ಪದ್, ಈ ಯೂರೋಪಿಯನ್ನರು ಎಷ್ಟು ಅದ್ಭುತವಾಗಿ ತಮ್ಮ ನದಿಗಳನ್ನು ಬಳಸಿಕೊಂಡಿದ್ದಾರೆ, ನಾನು ಇಲ್ಲಿ ನೋಡಿದ ಲಂಡನ್ನಿನ ಥೇಮ್ಸ್ ನದಿಯಾಗಲೀ, ಪ್ಯಾರಿಸ್ಸಿನ ಸಿಯಾನ್ ನದಿಯಾಗಲೀ, ಈ ಜರ್ಮನಿಯ ರಿನೆ ನದಿಯಾಗಲೀ ಎಷ್ಟು ಅಚ್ಚುಕಟ್ಟಾಗಿವೆ. ಅಲ್ಲದೆ ಈ ನದಿಗಳನ್ನೇ ಪ್ರಮುಖ ಸಾರಿಗೆ ವ್ಯವಸ್ಥೆಯನ್ನಾಗಿ ಮಾಡಿಕೊಂಡಿರುವುದಂತೂ ಅವರ ಜಾನತನ, ಜನರ ಪರಿಸರ ಕಾಳಜಿಯನ್ನು ತೋರುತ್ತದಲ್ಲವೇ...ಇಲ್ಲಿಯ ವ್ಯವಸ್ಥೆಯ ಬಗ್ಗೆ ನಮಗೆ ಎಂಬತ್ತರ ದಶಕದಲ್ಲಿಯೇ ಪ್ರೊಫ಼ೆಸರರು ವಿವರವಾಗಿ ಹೇಳುತ್ತಿದ್ದುದು ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ’. ಎಂದು ಹೇಳಿ ನಾನು ರೈತಸಂಘಟನೆಯಲ್ಲಿದ್ದಾಗ ನಡೆದಂತಹ ಹಲವಾರು ಘಟನೆಗಳನ್ನು ಕಪ್ಪದ್ ರಿಗೆ ಹೇಳುತ್ತಿದ್ದರೆ ಅವರು ಅತ್ಯಾಸಕ್ತಿಯಿಂದ ಕೇಳತೊಡಗಿದ್ದರು.
 

ರಿನೇ ನದಿಯ ಇಕ್ಕೆಲಗಳಲ್ಲೂ ರೈಲು ಟ್ರಾಕ್ ಗಳಿತ್ತು. ಎರಡೂ ಕಡೆಯೂ ಐದು ನಿಮಿಷಕ್ಕೊಂದರಂತೆ ಗೂಡ್ಸ್ ರೈಲುಗಳು ಓಡಾಡುತ್ತಿದ್ದವು. ನದಿಯಲ್ಲಿ ಪ್ರವಾಸಿಗರ ಕ್ರೂಜ಼್ ಗಳಲ್ಲದೇ ಸಾರಿಗೆ ದೋಣಿಗಳ ಸಂಚಾರವೂ ಇತ್ತು. ಬಿಯರ್ ಬಾಟಲ್ ಮುಗಿದದ್ದೇ ಗೊತ್ತಾಗಲಿಲ್ಲ. ’ಮುಗೀತಲ್ಲಾ ಇನ್ನೊಂದು ತಗೋರಿ’ ಅಂದರು ಕಪ್ಪದ್. ಪ್ರೊಫ಼ೆಸರರ ನೆನಪಲ್ಲಿ ಇನ್ನೊಂದು ಬಿಯರ್ ಹೇಳಿ ಕಪ್ಪದ್ ರಿಗೆ ವಿಸ್ಕಿ ತರಿಸಿದೆ. ರಿನೆ ನದಿಯಲ್ಲಿ ಕ್ರೂಜ಼್ ನಲ್ಲಿ ಪಯಣಿಸಿದ್ದೊಂದು ಮರೆಯಲಾಗದ ಅನುಭವ. ಸ್ವಚ್ಚವಾದ ನದಿಯ ತಟದುದ್ದಕ್ಕೂ ಕಲ್ಲಿನ ತಡೆ ನಿರ್ಮಿಸಿದ್ದರು. ನದಿ ತಿರುವುಗಳಲ್ಲಿ ಸುಂದರವಾದ ಬೆಟ್ಟ ಗುಡ್ಡಗಳು ದಟ್ಟವಾದ ಮರಗಿಡಗಳಿಂದ ಕೂಡಿತ್ತು. ಸುಮಾರು ಎರಡು ಗಂಟೆಗಳ ಪಯಣದಲ್ಲಿ ನಾವು ಯಾವುದೋ ಪ್ರತ್ಯೇಕವಾದ ಲೋಕದಲ್ಲಿ ವಿಹರಿಸಿದಂತಿತ್ತು. ಕ್ರೂಜ಼್ ಪಯಣ ಮುಗಿಯುತ್ತಿದ್ದಂತೆ ಇಷ್ಟು ಬೇಗ ಮುಗಿದುಹೋಯಿತಲ್ಲಾ ಎಂದು ಬೇಸರವಾಯಿತು. ಕೆಳಗಿಳಿಯುವಾಗ ಬಾರ್ ನಲ್ಲಿದ್ದ ಸಿಬ್ಬಂದಿ ವಿಶ್ ಮಾಡಿದರು. ’ಆರ್’ ಬಸ್ಸನ್ನು ತಂದು ನಿಲ್ಲಿಸಿದ್ದ. ಎಲ್ಲರೂ ಮತ್ತೆ ಬಸ್ ಹತ್ತಿದೆವು. ಭಟ್ಟರು ಹತ್ತಿರ ಬಂದವರೇ ’ಎಲ್ಲಿ ಮಾರಾಯ್ರಾ, ನೀವು ಎಲ್ಲಿ ಕೂತಿದ್ರಿ, ಕಾಣಲಿಲ್ಲವಲ್ಲ’ ಅಂದರು. ನಾನು, ಕಪ್ಪದ್ ಬಾರಿನಲ್ಲಿ ಕುಳಿತು ಬಿಯರ್ ಕುಡಿಯುತ್ತಾ ನೈಸರ್ಗಿಕ ಸೌಂದರ್ಯವನ್ನು ಸವಿದದ್ದನ್ನು ಅವರಿಗೆ ಹೇಳಿದಾಗ, ’ಛೇ, ’ಎಂಥಾ ಕೆಲಸ್ವಾಗಿ ಹೋಯ್ತಲ್ರೀ, ನಾನು ಮಿಸ್ ಮಾಡಿಕಂಡೇ’, ಎಂದು ಗೊಣಗಿಕೊಂಡರು. ಹೀಡಲ್ ಬರ್ಗ್ ನತ್ತ ನಮ್ಮ ಪಯಣ ಸಾಗಿತ್ತು. ಅಲ್ಲಿ ತಲುಪಿದಾಗ ಸಂಜೆಯಾಗಿದ್ದರಿಂದ ಭಾರತೀಯ ಹೋಟೆಲೊಂದರಲ್ಲಿ ಊಟ ಮುಗಿಸಿ ಎನ್ ಹೆಚ್ ಎಂಬ ಸ್ಟಾರ್ ಹೋಟಲ್ ಒಳಹೊಕ್ಕೆವು.

(ಮುಂದುವರೆಯುವುದು)

 
 

 
 
 
 
 
Copyright © 2011 Neemgrove Media
All Rights Reserved