ಅಂಗಳ      ಇನಿತೆನೆ
Print this pageAdd to Favorite

 

 

ಕರ್ನಾಟಕ ರಾಜಕೀಯ: ೨೦೧೧ ಪ್ರಮುಖ ಘಟನೆಗಳು

ಈಶ್ವರಚಂದ್ರ
 
ಧೀಮಂತ ನಾಯಕನ ಅಸ್ತಂಗತ
ಕರ್ನಾಟಕದ ಮಟ್ಟಿಗೆ ಕಲರ್ ಫ಼ುಲ್ ವ್ಯಕ್ತಿತ್ವದ ರಾಜಕಾರಣಿಯೆನಿಸಿದ್ದ ಸಾರೆಕೊಪ್ಪ ಬಂಗಾರಪ್ಪನವರು ೨೦೧೧ರ ಅಂತ್ಯದ ದಿನಗಳಲ್ಲಿ ತೀರಿಕೊಂಡಿದ್ದಾರೆ. ಸಮಾಜವಾದಿ ಸಿದ್ದಾಂತದ ಆಕರ್ಷಣೆಯಿಂದಾಗಿಯೇ ರಾಜಕೀಯ ಪ್ರವೇಶ ಮಾಡಿದ್ದ ಬಂಗಾರಪ್ಪನವರದು ವಿಶಿಷ್ಟ ವ್ಯಕ್ತಿತ್ವ. ಸಮಾಜವಾದಿ ಚಿಂತಕರಾಗಿದ್ದ ರಾಮಮನೋಹರ ಲೋಹಿಯಾರಿಂದ ಪ್ರಭಾವಿತರಾಗಿದ್ದ ಬಂಗಾರಪ್ಪ ಹುಟ್ಟಿದ್ದು ಗೇಣಿದಾರರ ಮಗನಾಗಿ. ರಾಜಕೀಯದಲ್ಲಿ ಪರಿಸ್ಥಿತಿ ಒತ್ತಡಕ್ಕೆ, ತಮ್ಮಲ್ಲಿದ್ದ ಸ್ವಾಭಿಮಾನಿ ಹಠಮಾರಿ ಧೋರಣೆಗೆ ಧಕ್ಕೆಯುಂಟಾದ ಪರಿಣಾಮವಾಗಿ ಅವರು ಹಲವಾರು ಪಕ್ಷಗಳನ್ನು ಬದಲಿಸಿದ್ದರಲ್ಲದೆ ತಾವೇ ಕರ್ನಾಟಕ ಕ್ರಾಂತಿರಂಗ, ಕರ್ನಾಟಕ ಕಾಂಗ್ರೆಸ್ ಪಾರ್ಟಿ, ಕರ್ನಾಟಕ ವಿಕಾಸ ವೇದಿಕೆ ಎಂಬ ರಾಜಕೀಯ ಪಕ್ಷಗಳ ಸಂಸ್ಥಾಪಕರಾಗಿದ್ದರು. ಬಂಗಾರಪ್ಪನವರು ಕರ್ನಾಟಕದ ಜನತೆಗೆ ಇಷ್ಟವಾಗಿದ್ದು ಅವರು ಬಡವರ ಪರ ತೋರುತ್ತಿದ್ದ ಅತೀವ ಕಾಳಜಿಯಿಂದ. ಅಲ್ಲದೆ ದೇವರಾಜು ಅರಸರ ನಂತರ ಹಿಂದುಳಿದ ವರ್ಗಗಳಿಗೆ ನಿಜವಾದ ನಾಯಕನೆನಿಸಿದ್ದರು ಬಂಗಾರಪ್ಪ. ಹಿಂದುಳಿದ ವರ್ಗದವರಿಗೆ ಬೈಬಲ್ ಎನಿಸಿದ್ದ ಹಾವನೂರು ವರದಿ ಜಾರಿಗೆ ಬರುವಂತೆ ಮಾಡುವಲ್ಲಿ ಬಂಗಾರಪ್ಪನವರ ಕಾಣಿಕೆ ಅಮೂಲ್ಯವಾದದ್ದು.
 
ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಒಬ್ಬ ಪ್ರಾದೇಶಿಕ ನಾಯಕನೊಬ್ಬನಲ್ಲಿರಬೇಕಾದ ಲಕ್ಷಣಗಳೆಲ್ಲವೂ ಬಂಗಾರಪ್ಪನರಲ್ಲಿತ್ತು. ಅವರು ಕಾಂಗ್ರೆಸ್ ವಿರುದ್ದ ಸಿಡಿದೆದ್ದು ಕರ್ನಾಟಕ ಕ್ರಾಂತಿರಂಗ ಸ್ಥಾಪಿಸಿದಾಗಲೇ ಸ್ವಾತಂತ್ರ್ಯ ಬಂದಾಗಿನಿಂದಲೂ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷ ಅಧಿಕಾರ ಕಳೆದುಕೊಳ್ಳುವುದಕ್ಕೆ ಪ್ರಮುಖ ಕಾರಣವಾಗಿತ್ತು. ಆಗ ಗುಂಡೂರಾಯರ ಸರ್ಕಾರದ ವಿರುದ್ದ ಸಿಡಿದೆದ್ದಿದ್ದ ರೈತ ಚಳುವಳಿ, ದಲಿತ ಚಳುವಳಿ, ಕನ್ನಡ ಚಳುವಳಿ ನಾಯಕರೊಂದಿಗೆ ಅತ್ಮೀಯ ಸಂಪರ್ಕವಿರಿಸಿಕೊಂಡಿದ್ದ ಬಂಗಾರಪ್ಪನವರ ಪ್ರಯತ್ನದಿಂದಾಗಿಯೇ ಅಂದು ಜನತಾರಂಗ ಸರ್ಕಾರ ಅಧಿಕಾರಕ್ಕೆ ಬರಲು ಸಾದ್ಯವಾಗಿತ್ತು. ದುರಂತವೆಂದರೆ ಮುಖ್ಯಮಂತ್ರಿಯಾಗುವ ಎಲ್ಲಾ ಅರ್ಹತೆಗಳನ್ನು ಹೊಂದಿದ್ದ ಬಂಗಾರಪ್ಪ ಮತ್ತು ದೇವೇಗೌಡರ ಜಗಳದಿಂದಾಗಿ ಅದೆಲ್ಲೋ ದೂರದ ದೆಹಲಿಯಲ್ಲಿ ಪ್ರತಿಷ್ಟಾಪಿತರಾಗಿದ್ದ ರಾಮಕೃಷ್ಣ ಹೆಗಡೆ ಅನಾಯಾಸವಾಗಿ ಹಿಂಭಾಗಲಿನ ಮೂಲಕ ನುಗ್ಗಿ ಮುಖ್ಯಮಂತ್ರಿಯಾಗಿಬಿಟ್ಟರು. ಮತ್ತೆ ಕಾಂಗ್ರೆಸ್ ಸೇರಿದ್ದ ಬಂಗಾರಪ್ಪನವರಿಗೆ ಮುಖ್ಯಮಂತ್ರಿಯಾಗಲು ಎಂಟು ವರ್ಷಗಳ ಕಾಲ ಕಾಯಬೇಕಾಯಿತು.
 
ಕನ್ನಡದ ಅಪ್ಪಟ ಅಭಿಮಾನಿಯಾಗಿದ್ದ ಬಂಗಾರಪ್ಪ ಸಾಕಷ್ಟು ಓದಿಕೊಂಡಿದ್ದರು. ರಾಷ್ಟ್ರಕವಿ ಕುವೆಂಪುರವರ ಕಟ್ಟಾ ಅಭಿಮಾನಿಯಾಗಿದ್ದ ಬಂಗಾರಪ್ಪ ತಮ್ಮ ಆಡಳಿತಾವದಿಯಲ್ಲಿಯೇ ’ಕರ್ನಾಟಕ ರತ್ನ’ ಪ್ರಶಸ್ತಿಯನ್ನು ಸ್ಥಾಪಿಸಿ ಅದನ್ನು ಕುವೆಂಪುರವರ ಮನೆಗೇ ಹೋಗಿ ಸಲ್ಲಿಸಿ ಬಂದಿದ್ದರು. ಬಂಗಾರಪ್ಪನವರು ಎಷ್ಟೇ ಪಕ್ಷಗಳನ್ನು ಬದಲಿಸಿದರೂ ಅವರಲ್ಲಿದ್ದ ಕರ್ನಾಟಕದ ಬಗೆಗಿನ ಕಾಳಜಿಯು ಪ್ರಶ್ನಾತೀತವಾದುದು. ಅವರು ಮುಖ್ಯಮಂತ್ರಿಯಾದಾಗಲೇ ಕಾವೇರಿ ನ್ಯಾಯಾಧಿಕರಣದ ಮಧ್ಯಂತರ ಅದೇಶ ಹೊರಬಿದ್ದಿತ್ತು. ತಮಿಳುನಾಡಿನ ಪರವಾಗಿದ್ದ ಕರ್ನಾಟಕದ ಮಟ್ಟಿಗೆ ಮಾರಕವಾಗಿದ್ದ ಆ ತೀರ್ಪನ್ನು ಒಪ್ಪಲು ಸಾಧ್ಯವೇ ಇಲ್ಲವೆಂದು ಬಂಗಾರಪ್ಪನವರು ಘಂಟಾಘೋಷವಾಗಿ ಹೇಳಿದ್ದರು.
 
ಅವರು ತಮ್ಮ ರಾಜ್ಯದ ಬಗೆಗಿನ ಬದ್ದತೆಯನ್ನು ಕೇವಲ ಹೇಳಿಕೆಗಷ್ಟೇ ಮೀಸಲುಗೊಳಿಸದೆ ಪ್ರತಿಪಕ್ಷದ ಮುಖಂಡರ ಜತೆಗೆ ಸಮಾಲೋಚಿಸಿ ಆ ತೀರ್ಪನ್ನು ವಿರೋಧಿಸುವಂತಹ ಸುಗ್ರೀವಾಘ್ನೆ ಜಾರಿಗೊಳಿಸಿದಂತ ಅಪರೂಪದ ರಾಜಕಾರಣಿಯೆನಿಸಿಬಿಟ್ಟರು. ಕಾವೇರಿ ಜಲಾನಯನ ಪ್ರದೇಶಕ್ಕೆ ಸಂಬಂಧಿಸದ ಜಿಲ್ಲೆಯವರಾದರೂ ರಾಜ್ಯದ ಜನತೆಯ ಹಿತದ್ರಷ್ಟಿಯಿಂದ ಅಂದು ಬಂಗಾರಪ್ಪನವರು ತಮ್ಮದೇ ಪಕ್ಷದ ಕೇಂದ್ರ ಸರ್ಕಾರದ ವಿರೋಧವನ್ನೂ ಕಡೆಗಣಿಸಿ ತೆಗೆದುಕೊಂಡ ನಿರ್ಣಯ ರಾಜ್ಯದ ಮಟ್ಟಿಗೆ ಐತಿಹಾಸಿಕವಾದುದು. ಆದರೆ ಕಾವೇರೀ ಜಲಾನಯನ ಪ್ರದೇಶದವರಾಗಿದ್ದ ಹೆಚ್. ಡಿ. ದೇವೇಗೌಡರು ಮತ್ತು ಎಸ್.ಎಮ್. ಕೃಷ್ಣರವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ತಮಿಳುನಾಡಿಗೆ ನೀರುಬಿಟ್ಟು ತಮ್ಮ ಅಧಿಕಾರ ಉಳಿಸಿಕೊಳ್ಳುವತ್ತಲೇ ಗಮನ ಹರಿಸಿದ್ದರು. ಇಂಥವರ ನಡುವೆ ಬಂಗಾರಪ್ಪನವರು ಭಿನ್ನವಾಗಿ ಕಾಣುವುದು ಸಹಜವೇ. ಒಬ್ಬ ಪ್ರಾದೇಶಿಕ ನಾಯಕನಿಗಿರಬೇಕಾದ ಎಲ್ಲಾ ಧೀಮಂತ ಗುಣಗಳೂ ಬಂಗಾರಪ್ಪನವರಲ್ಲಿತ್ತು. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಆಶಿಸುವುದಷ್ಟೇ ನಮಗುಳಿದಿರುವುದು.
 
ಐತಿಹಾಸಿಕ ಘಟನೆ-ಜೈಲಿಗೆ ಹೋದ ಮುಖ್ಯಮಂತ್ರಿಗಳು
೨೦೧೧ ರಲ್ಲಿ ಕರ್ನಾಟಕದ ಮಟ್ಟಿಗಂತೂ ಹಲವು ಐತಿಹಾಸಿಕ ಘಟನೆಗಳು ನಡೆದುಹೋದವು. ರಾಜ್ಯದ ಮುಖ್ಯಮಂತ್ರಿಯೇ ತನ್ನ ಜತೆಗಾರ ಸಚಿವರೊಂದಿಗೆ ಭ್ರಷ್ಟಾಚಾರದ ಆಪಾದನೆಯ ಮೇಲೆ ಸೆರೆಮನೆಗೆ ಹೋಗಿದ್ದು ಕರ್ನಾಟಕ ರಾಜಕೀಯದ ಇಳಿಮುಖ ಹಾದಿಯನ್ನು ತೋರಿಸುತ್ತದೆ. ಅಧಿಕಾರಕ್ಕೆ ಬಂದಂದಿನಿಂದಲೂ ಸದಾ ಒಂದಿಲ್ಲೊಂದು ವಿವಾದವನ್ನೇ ಅಂಟಿಸಿಕೊಂಡಿರುವ ಬಿ ಜೆ ಪಿ ಸರ್ಕಾರದಲ್ಲಿ ಭಿನ್ನಮತ ಮೂರೂವರೆ ವರ್ಷಗಳಾದರೂ ಮುಂದುವರೆಯುತ್ತಲೇ ಬಂದಿವೆ. ಈ ಸರ್ಕಾರದ ಅರ್ಧ ಡಜನ್ ರಾಜಕಾರಣಿಗಳು ಸೆರೆಮನೆಯ ಊಟ ಸವಿದು ಬಂದವರಾಗಿದ್ದಾರೆ. ಭ್ರಷ್ಟಾಚಾರದ ಆಪಾದನೆಯ ಮೇಲೆ ಅಧಿಕಾರದಿಂದ ಕೆಳಗಿಳಿದ ಯಡ್ಯೂರಪ್ಪ ವರ್ಷದ ಕೊನೆಯ ಹೊತ್ತಿಗೆ ಮತ್ತೆ ಮುಖ್ಯಮಂತ್ರಿ ಪಟ್ಟಕ್ಕೇರಲು ತನ್ನ ಚೇಲಾಗಳ ಮೂಲಕ ಸತತ ಪ್ರಯತ್ನ ಪಡುತ್ತಿರುವುದು, ಅದಕ್ಕಾಗಿ ಬಿಜೆಪಿ ಹೈಕಮಾಂಡಿಗೆ ಜನವರಿ ೧೫ ರವರೆಗೆ ಗಡುವು ನೀಡಿರುವುದು ಈ ವರ್ಷಾಂತ್ಯದ ಹೈಲೈಟು.
 
ಪ್ರತಿಪಕ್ಷಗಳ ಮಟ್ಟಿಗೆ ೨೦೧೧ ನಿರಾಶದಾಯಕ ವರ್ಷ. ಅಧಿಕೃತ ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ಪಕ್ಷ ತನ್ನ ಕರ್ತವ್ಯ ನಿರ್ವಹಣೆಯಲ್ಲಿ ವಿಫಲವಾಯಿತು. ಸರ್ಕಾರದ ಭ್ರಷ್ಟಾಚಾರದ ಹಗರಣಗಳನ್ನು ಬಯಲಿಗೆಳೆಯಲು ಕಾಂಗ್ರೆಸ್ ನಲ್ಲೂ ತುಂಬಿರುವ ಭ್ರಷ್ಟ ನಾಯಕರುಗಳು ಗಂಭೀರ ಪ್ರಯತ್ನವನ್ನು ಮಾಡಲೇ ಇಲ್ಲ. ಬಿಜೆಪಿ ಸರ್ಕಾರ ಈಗ ಬೀಳಲಿದೆ, ಆಗ ಬೀಳಲಿದೆ ಎಂದು ಹೇಳಿಕೆ ನೀಡುತ್ತಾ ಬಂದುದೇ ಕಳೆದ ಮೂರು ವರ್ಷಗಳ ಅವರ ಸಾಧನೆ. ಆಡಳಿತ ಪಕ್ಷದ ರಾಜಕಾರಣಿಗಳಿಗಿಂತಲೂ ಹೆಚ್ಚಿನ ಭಿನ್ನಮತ ವಿರೋಧ ಪಕ್ಷವಾದ ಕಾಂಗ್ರೆಸ್ ಪಕ್ಷದ ರಾಜಕಾರಣಿಗಳಲ್ಲಿರುವುದೇ ಅದು ಪ್ರತಿಪಕ್ಷವಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸುವಲ್ಲಿ ವಿಪಲವಾಗಲು ಪ್ರಮುಖ ಕಾರಣ. ಜಾತ್ಯಾತೀತ ಜನತಾದಳ ಯಡ್ಯೂರಪ್ಪನವರ ಸರ್ಕಾರದಲ್ಲಿ ನಡೆಯಿತೆನ್ನಲಾದ ಭ್ರಷ್ಟಾಚಾರದ ಹಗರಣಗಳನ್ನು ಬಯಲಿಗೆಳೆಯುವಲ್ಲಿ ಯಶಸ್ವಿಯಾಯಿತು. ಇತರೆ ರಾಜಕಾರಣಿಗಳ ತಲೆಯಲ್ಲಿ ಹುಳ ಬಿಡುವುದರಲ್ಲಿ ನುರಿತಿರುವ ದೇವೇಗೌಡರು ಊಹಾಪೋಹದ ಸುದ್ದಿಯನ್ನು ಹಬ್ಬಿಸುವಲ್ಲಿ ನಿಷ್ಣಾತರು. ಬಿಜೆಪಿ ಸರ್ಕಾರವನ್ನುರುಳಿಸಿ ಕಾಂಗ್ರೆಸ್ ಜತೆ ಸೇರಿ ಮತ್ತೆ ಸರ್ಕಾರವನ್ನು ನಡೆಸುವ ನಿಟ್ಟಿನಲ್ಲಿ ಕುಮಾರಸ್ವಾಮಿ ಥರಥರದಲ್ಲಿ ಕಾರ್ಯೋನ್ಮುಖರಾದರೂ ಕಾಂಗ್ರೆಸ್ ಪಕ್ಷದಲ್ಲಿನ ಭಿನ್ನಾಭಿಪ್ರಾಯದ ಕಾರಣದಿಂದ ಅವರ ಆಸೆ ಕೈಗೂಡಲಿಲ್ಲ.
 
ಬಿಜೆಪಿಯಲ್ಲಿ ಭುಗಿಲೆದ್ದಿರುವ ಭಿನ್ನಮತದಿಂದ ೨೦೧೨ರಲ್ಲಿ ರಾಜ್ಯ ರಾಜಕೀಯದಲ್ಲಿ ಮಹತ್ತರವಾದ ಬದಲಾವಣೆಯಾಗುವ ನಿರೀಕ್ಷೆಯಿದೆ. ೨೦೧೨ ಆರಂಭಲ್ಲಾದರೂ ಸದಾನಂದ ಗೌಡರ ಸರ್ಕಾರ ದಕ್ಷರಾಗಬಲ್ಲ ಲೋಕಾಯುಕ್ತರನ್ನು ನೇಮಿಸುವತ್ತ ಗಂಭೀರವಾಗಿ ಪ್ರಯತ್ನಿಸಲಿ ಎಂಬುದೇ ರಾಜ್ಯದ ಜನತೆಯ ಆಶಯವಾಗಿದೆ.
 

 

 

ಮೀಡಿಯಾ ಮೇನಿಯಾ
ಪವಾಡ ಪುರುಷನೆಂದು ಪಟ್ಟ ಕಟ್ಟಿಸಿಕೊಂಡ ಬಡಪಾಯಿ ಸಾಬಣ್ಣ ಸಮಾಧಿಯಾದ ದುರಂತ 
 


 
’ಹೀಗೂ ಉಂಟು’ ಕಾರ್ಯಕ್ರಮದಲ್ಲಿ ಮುಂದಿನವಾರ ಕಣ್ಣಿನಲ್ಲೇ ಕಲ್ಲನ್ನು ಕರಗಿಸಬಲ್ಲ ಫ಼ಕೀರನ ಬಗ್ಗೆ ಕಾರ್ಯಕ್ರಮವನ್ನು ತೋರಿಸುವುದಾಗಿ ಒಂದಷ್ಟು ಬಿಟ್ಸ್ ಗಳನ್ನು ಪ್ರಸಾರ ಮಾಡಿದಾಗಿನಿಂದಲೇ ಅದನ್ನು ನೋಡಿದ ನೂರಾರು ವೀಕ್ಷಕರು ಆ ಮಹಾತ್ಮನಾರೋ ಅತ್ಯಂತ ಪವಾಡಪುರುಷನೆಂದು ತೀರ್ಮಾನಿಸಿ ಆ ಕಾರ್ಯಕ್ರಮಕ್ಕಾಗಿ ಜಾತಕ ಪಕ್ಷಿಯಂತೆ ಕಾಯತೊಡಗಿದ್ದುದಂತೂ ದಿಟ. ಆಯಾಮದ ಓದುಗರಿಗೆ ನಾವು ಆ ಕಾರ್ಯಕ್ರಮ ಮೂಡಿ ಬಂದ ಬಗೆ, ಅದರಿಂದ ಆ ಹೋತನಗಡ್ಡದ ಸಾಬಣ್ಣನಿಗಾದ ಗತಿಯನ್ನು ತಿಳಿಸುತ್ತಿದ್ದೇವೆ.
 
ಏಜೆಂಟನಿಂದ ಹಣ ಪಡೆದು ಹಿಂದಿರುಗಿದ ’ಹೀಗೂ ಉಂಟು’ ಕಾರ್ಯಕ್ರಮದ ನಿರ್ಮಾಪಕ ಆ ಸಾಬಣ್ಣನನ್ನು ಯಾವ ರೀತಿ ಮಹಾನ್ ಪವಾಡ ಪುರುಷನೆಂದು ತೋರಿಸಬೇಕೆಂಬುದರ ಬಗ್ಗೆ ತಾನೇ ಚಿತ್ರಕಥೆಯನ್ನು ಹೆಣೆಯತೊಡಗಿದ. ಹಾಗೆ ಸಿದ್ದಪಡಿಸಿಕೊಂಡ ಚಿತ್ರಕಥೆಯೊಂದಿಗೆ ಮತ್ತೆ ತನ್ನ ಕ್ಯಾಮರಾ ದಂಡಿನೊಂದಿಗೆ ಪಾಂಡವಪುರಕ್ಕೆ ತೆರಳಿದ. ಅಲ್ಲಾಗಲೇ ಅವನ ಏಜೆಂಟ್ ಅವನಿಗಾಗಿ ಸಕಲ ಸಿದ್ದತೆಗಳನ್ನೂ ಮಾಡಿದ್ದ. ಗಾಂಜಾ ಹಾಗೂ ಹೆಂಡದ ಅಮಲಿನಲ್ಲಿ ತೂರಾಡುತ್ತಿದ್ದ ಫ಼ಕೀರ ನಡೆಯಲಾಗದ ಸ್ಥಿತಿಯಲ್ಲಿದ್ದರಿಂದ ಒಂದಿಬ್ಬರು ಅವನನ್ನು ಹೊತ್ತುಕೊಂಡು ಹತ್ತಿರದ ಗುಡ್ಡಕ್ಕೆ ಹೋದರು. ನಿರ್ಮಾಪಕ ಫ಼ಕೀರನನ್ನು ಮಾತನಾಡಿಸಲು ಎಷ್ಟು ಪ್ರಯತ್ನಪಟ್ಟರೂ ಸಾಧ್ಯವಾಗಲಿಲ್ಲ. ಆತ ಸಿಟ್ಟಾಗಿ ತನ್ನ ಏಜೆಂಟನನ್ನು ತರಾಟೆಗೆ ತೆಗೆದುಕೊಂಡು ’ಅಲ್ಲಯ್ಯಾ, ಹೋಗಿ ಹೋಗಿ ಈ ತರಕಲಾಂಡಿ ಫ಼ಕೀರನನ್ನು ಹಿಡಿದಿದ್ದೀಯಲ್ಲಾ, ಬೇರೆ ಯಾವನೂ ಸಿಗಲಿಲ್ವಾ ನಿಂಗೆ, ಇವನು ಮತ್ತಿನಲ್ಲಿ ಬಾಯೇ ಬಿಡುತ್ತಿಲ್ಲವಲ್ಲಾ, ಏನ್ಮಾಡೋದು ಈಗ’ ಅಂತ ಗದರಿದ.
 
 
ಅದಾಗಲೇ ಸಾಕಷ್ಟು ಹಣ ಖರ್ಚು ಮಾಡಿದ್ದ ಏಜೆಂಟ್ ಮತ್ತಿನಲ್ಲಿ ಮೈ ಮರೆತಿದ್ದ ಫ಼ಕೀರನನ್ನು ಭುಜ ಹಿಡಿದು ಅಲ್ಲಾಡಿಸಿ ಏಳಿಸಲು ಪ್ರಯತ್ನಿಸಿದನಾದರೂ ಆ ಫ಼ಕೀರ ಹಾಂ, ಹೂಂ ಅನ್ನುವುದನ್ನು ಬಿಟ್ಟರೆ ಜಪ್ಪಯ್ಯ ಅಂದರೂ ಬಾಯಿಬಿಡಲಿಲ್ಲ.
 
ಅವನಿಂದ ಮಾತನಾಡಿಸುವುದು ಸಾಧ್ಯವಿಲ್ಲವೆಂದು ನಿರ್ಮಾಪಕನಿಗೆ ಮನವರಿಕೆಯಾಯಿತು. ಫಕೀರನನ್ನು ಒಂದು ಬಂಡೆಗೆ ಒರಗಿಸಿ ಅವನು ’ಹಾಂ ಹೂಂ’ ಅನ್ನುವುದನ್ನೇ ಥರಾವರಿ ಆಂಗಲ್ ನಿಂದ ಚಿತ್ರಿಸಿಕೊಂಡು, ತಾನು ಸಿದ್ದಪಡಿಸಿಕೊಂಡು ಬಂದಿದ್ದ ಚಿತ್ರಕತೆಯನ್ನು ಅಲ್ಲೇ ಕ್ಯಾಮರಾ ಮುಂದೆ ನಿಂತು ಓದತೊಡಗಿದ...
 
... ’ಪ್ರಿಯ ವೀಕ್ಷಕರೇ, ನಾವು ಇಂದು ನಮ್ಮ ಕರ್ನಾಟಕದಲ್ಲಿ ಇರುವಂತಹ ಒಬ್ಬ ಮಹಾನ್ ಸಾಧುಗಳ ಬಗ್ಗೆ ನಿಮಗೆ ತಿಳಿಸಲಿದ್ದೇವೆ. ಅದ್ಭುತ ಶಕ್ತಿಗಳಿರುವ ಈ ಸಾಧುಗಳು ಮಹಾ ಮೌನಿಗಳು, ಪವಾಡ ಪುರುಷರು. ನಾವು ಅವರನ್ನು ಮಾತನಾಡಿಸಲು ಎಷ್ಟು ಪ್ರಯತ್ನ ಪಟ್ಟರೂ ಸಾಧ್ಯವಾಗಲಿಲ್ಲ. ಇವರು ಮಾತನಾಡುವುದೇ ಅಪರೂಪ. ಭಕ್ತರು ಕೇಳುವ ಪ್ರಶ್ನೆಗಳಿಗೆ ಇವರು ’ಹಾಂ ಹೂಂ’ ಅಂತಲೇ ಉತ್ತರಿಸುವುದು. ಅದರ ಅರ್ಥ ಹೀಗೆ. ಇವರು ’ಹಾಂ’ ಎಂದರೆ ನಿಮ್ಮ ಕೆಲಸ ಆಗುತ್ತೆ, ’ಹೂಂ’ ಎಂದರೆ ಆಗುವುದಿಲ್ಲ!’

...’ಹೌದೇ ಎಂದು ನಾವೂ ಹಲವಾರು ರೀತಿಯಲ್ಲಿ ಪರೀಕ್ಷಿಸಿದಾಗಲೂ ಅವರು ಹೇಳಿದ್ದು ಅಪ್ಪಟ ಸತ್ಯವೆಂದು ನಮಗೆ ಮನವರಿಕೆಯಾಯಿತು. ಅಲ್ಲದೆ ಈ ಫ಼ಕೀರರ ಕಣ್ಣಿನಲ್ಲಿ ಮಹಾನ್ ದೈವಶಕ್ತಿಯಿದೆ ಎಂದು ಇಲ್ಲಿನ ಸುತ್ತಮುತ್ತಲಿನ ಹತ್ತೂರಿನ ಜನರೂ ಹೇಳುತ್ತಿರುವುದನ್ನೂ ನಾವು ಪರಿಶೀಲಿಸಿದಾಗ ನಿಜವಾಗಿತ್ತು. ನೋಡಿ...ಇಲ್ಲಿ ಕಾಣುತ್ತಿರುವ ಬಾವಿಯಲ್ಲಿ ಹಿಂದೆ ದೊಡ್ಡ ಬಂಡೆಯೊಂದು ಅಡ್ಡ ಬಂದಿತ್ತು. ಈ ಊರಿನ ಜನತೆ ಆ ಬಂಡೆಯನ್ನು ಒಡೆಯಲು ಎಷ್ಟು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಆಗ ಆ ಜನತೆ ಈ ಫ಼ಕೀರರಲ್ಲಿಗೆ ಬಂದು ತಮ್ಮ ಕಷ್ಟವನ್ನು ಹೇಳಿಕೊಂಡಾಗ ಇವರು ಜನರ ಕಷ್ಟವನ್ನು ಕಂಡು ಮರುಗಿ ಮುಚ್ಚಿದ್ದ ತಮ್ಮ ಕಣ್ಣನ್ನು ತೆರೆದು ಆ ಬಂಡೆಯನ್ನೇ ದಿಟ್ಟಿಸುತ್ತಾ ದಿನವಿಡೀ ಕೂತುಬಿಟ್ಟರು. ಜನ ಬೆಳಿಗ್ಗೆ ಬಂದು ನೋಡುತ್ತಾರೆ! ಪವಾಡವೆಂಬಂತೆ ಅಲ್ಲಿದ್ದ ಬಂಡೆ ತಾನೇ ತಾನಾಗಿ ಕರಗಿ ಬಾವಿಯಲ್ಲಿ ನೀರು ತುಂಬಿಕೊಂಡಿತ್ತು. ಅಂದಿನಿಂದ ಈ ಊರಿನ ಜನತೆ ತಮಗೆ ಏನೇ ಕಷ್ಟ ಬಂದರೂ ಈ ಫ಼ಕೀರರ ಮೊರೆಹೊಕ್ಕುತ್ತಾರೆ. ನಾವು ಈ ಫ಼ಕೀರರ ಕಣ್ಣನ್ನು ತೆರೆಸಬೇಕೆಂದು ಎಷ್ಟು ಪ್ರಯತ್ನ ಪಟ್ಟರೂ ಸಾಧ್ಯವಾಗಲಿಲ್ಲ ಅಲ್ಲದೆ ಅವರನ್ನು ಮಾತನಾಡಿಸಬೇಕೆಂದು ಎಷ್ಟು ಪ್ರಯತ್ನ ಪಟ್ಟರೂ ನಮ್ಮಿಂದ ಸಾಧ್ಯವಾಗಲಿಲ್ಲ...’
 
ನಿರ್ಮಾಪಕ ಹೀಗೆ ಹೇಳುತ್ತಾ ಕ್ಯಾಮರಾವನ್ನು ಮತ್ತೆ ಫ಼ಕೀರನ ಕಡೆಗೆ ತಿರುಗಿಸಿದಾಗ ಆತ ಅತಿಯಾದ ಗಾಂಜಾ ಸೇವನೆಯಿಂದಾಗಿ ಕಣ್ಣು ಬಿಡುವ ಸ್ಥಿತಿಯಲ್ಲಿರಲಿಲ್ಲ. ಕಾರ್ಯಕ್ರಮದ ನಿರ್ಮಾಪಕ ಹೇಳಿದ್ದಕ್ಕೆಲ್ಲಾ ಮತ್ತಿನಲ್ಲಿ ’ಹಾಂ ಹೂಂ’ ಎಂದಷ್ಟೆ ಹೇಳುತ್ತಿದ್ದ.
 
ಮತ್ತೆ ಮುಂದುವರಿಸಿದ ನಿರ್ಮಾಪಕ...’ಅಲ್ಲದೇ ಈ ಫ಼ಕೀರರು ಮಕ್ಕಳಿಲ್ಲದವರಿಗೆ ಮಕ್ಕಳನ್ನೂ, ಕೆಲಸವಿಲ್ಲದವರಿಗೆ ಕೆಲಸವನ್ನೂ, ಕಷ್ಟದಲ್ಲಿರುವವರಿಗೆ ಹಾಂ ಹೂಂ ಎನ್ನುವ ಮೂಲಕವೇ ಪರಿಹಾರ ನೀಡುವುದರಲ್ಲಿ ಹೆಸರುವಾಸಿಯಾಗಿದ್ದಾರೆ. ನಾವು ಜನತೆಯಲ್ಲಿ ಮನವಿ ಮಾಡಿಕೊಳ್ಳುವುದೇನೆಂದರೆ ನೀವುಗಳೂ ಒಮ್ಮೆ ಇಲ್ಲಿಗೆ ಭೇಟಿ ನೀಡಿ ಈ ಪವಾಡ ಪುರುಷರ ದರ್ಶನ ಪಡೆದು ತಮ್ಮೆಲ್ಲ ಕಷ್ಟಕ್ಕೆ ಪರಿಹಾರ ಪಡೆಯಿರಿ. ಇಂದಿನ ಕಲಿಯುಗದಲ್ಲೂ ನಮ್ಮನ್ನು ಕಾಡುತ್ತಿರುವ ಆಶ್ಚರ್ಯಗೊಳಿಸುತ್ತಿರುವ ಪ್ರಶ್ನೆಯೇನೆಂದರೆ ಇಲ್ಲಿ ಹೀಗೂ ಉಂಟಲ್ಲಾ ಎಂಬುದು...ಮತ್ತೊಮ್ಮೆ ಈ ಮಹಾನ್ ಸಾಧುಗಳಿಗೆ ವಂದಿಸಿ ಇಲ್ಲಿಗೆ ಈ ವಾರದ ನಮ್ಮ ಹೀಗೂ ಉಂಟು ಕಾರ್ಯಕ್ರಮವನ್ನು ಮುಕ್ತಾಯ ಮಾಡುತ್ತಿದ್ದೇವೆ...ಎಲ್ಲರಿಗೂ ನಮಸ್ಕಾರ’. ಸಿದ್ದಪಡಿಸಿಕೊಂಡು ಬಂದಿದ್ದ ಜಾಣ ಚಿತ್ರಕತೆಯ ವಾಚನ ಮಾಡಿ ನಿರ್ಮಾಪಕ ತನ್ನ ಕಾರ್ಯಕ್ರಮ ಮುಗಿಸಿದ.
 
ಟಿವಿಯಲ್ಲಿ ಕಾರ್ಯಕ್ರಮ ನೋಡಿ, ತಮ್ಮ ಬೇಡಿಕೆಗಳ ಲಿಸ್ಟ್ ಅನ್ನು ರೆಡಿ ಮಾಡಿಟ್ಟುಕೊಂಡು ಕರ್ನಾಟಕದ ಸಾವಿರಾರು ಮಹಾಮೂಢ ಪ್ರೇಕ್ಷಕರು ದಂಡುದಂಡಾಗಿ ಹೋತನ ಗಡ್ಡದ ಸಾಬಣ್ಣನನ್ನು ಕಾಣಲು ಪಾಂಡವಪುರಕ್ಕೆ ಬರತೊಡಗಿದರು. ಕಾರ್ಯಕ್ರಮಕ್ಕಾಗಿ ಹಣ ಹೂಡಿದ್ದ ಏಜೆಂಟ್ ಅಲ್ಲಿ ಒಂದು ಪೆಂಡಾಲ್ ಹಾಕಿ ಬರುವ ಜನರಿಂದ ದಕ್ಷಿಣೆ ವಸೂಲಿ ಮಾಡಲಾರಂಬಿಸಿದ. ಆ ಫ಼ಕೀರ ಮತ್ತಿನಿಂದ ಎಚ್ಚರಗೊಂಡು ಜನರೆದುರಿಗೆ ಮಾತನಾಡಿಬಿಟ್ಟರೆ ಎಲ್ಲಿ ಪವಾಡದ ಬಣ್ಣ ಬಯಲಾಗಿ ತನ್ನ ಸಂಪಾದನೆಗೆ ಕುತ್ತು ಬರುವುದೋ ಎಂಬ ಆತಂಕದಿಂದ ಏಜೆಂಟ್ ಎಡಬಿಡದೇ ಫ಼ಕೀರನಿಗೆ ಹೆಂಡ, ಗಾಂಜಾ ಸೇವನೆ ಮಾಡಿಸತೊಡಗಿದ್ದ. ಇದರಿಂದ ಸದಾ ಅಮಲಿನಲ್ಲಿ ಮುಳುಗಿಹೋದ ಫ಼ಕೀರ ಜನರು ಏನೇ ಕೇಳಿದರೂ ’ಹಾಂ ಹೂಂ’ ಎಂದಷ್ಟೇ ಹೇಳುವುದನ್ನು ರೂಢಿಸಿಕೊಂಡು ಬಿಟ್ಟ. ಏಜೆಂಟನ ಶಿಷ್ಯ ತನಗೂ ಕೆಲಸ ಸಿಕ್ಕಿತೆಂದುಕೊಂಡು ಸಾಬಣ್ಣನ ’ಹಾಂ ಹೂಂ’ ಗಳನ್ನು ತರ್ಜುಮೆ ಮಾಡಿ ಜನರಿಗೆ ಪರಿಹಾರ ಸೂಚಿಸತೊಡಗಿದ.
 
ಜನ ಬಂದರು. ಅವರಿಗೆ ಕಾಫಿ ಟೀ ವಡೆ ಬಜ್ಜಿ ಊಟ ತಿಂಡಿಯ ವ್ಯವಸ್ಥೆ ಮಾಡಲು ಗೂಡಂಗಡಿಗಳು ಹುಟ್ಟಿಕೊಂಡವು. ಧಡೂತಿ ಶರೀರದವರನ್ನು ಬೆಟ್ಟ ಹತ್ತಿಸಲು ಜನ ಕತ್ತೆ, ಚಟ್ಟಗಳ ಥರದ ಸಾಗಾಣಿಕೆ ವ್ಯವಸ್ಥೆ ಮಾಡಿಕೊಂಡರು. ದಿನಗಳಲ್ಲೇ ಸಾಬಣ್ಣನ ದೆಸೆಯಿಂದ ಅಲ್ಲೊಂದು ಉದ್ಯಮ ಹುಟ್ಟಿಬಿಟ್ಟಿತ್ತು.

ಈ ಮಧ್ಯೆ, ಬಡಕಲು ದೇಹ. ಸಿಕ್ಕರೆ ಊಟ. ಸಿಗದಿದ್ದರೆ ಉಪವಾಸವಿರುತ್ತಿದ್ದ ಆ ಬಡ ಸಾಬಣ್ಣ ಅತಿಯಾದ ಕುಡಿತ ಹಾಗೂ ಗಾಂಜಾ ಸೇವನೆಯಿಂದಾಗಿ ಕೆಲವೇ ದಿನಗಳಲ್ಲಿ ಇಹಲೋಕಕ್ಕೆ ಪಯಣ ಬೆಳೆಸಿಬಿಟ್ಟ. ಹಾಗೆ ಸತ್ತವನ ಸಾವನ್ನೇ ಮತ್ತೆ ಬಂಡವಾಳವಾಗಿಸಿಕೊಂಡ ಏಜೆಂಟ್ ಭಕ್ತರಿಂದ ಚಂದಾ ಎತ್ತಿ ಫ಼ಕೀರನ ಸಮಾಧಿ ಕಟ್ಟಿಸಿ ಅದರ ಉಸ್ತುವಾರಿಗೆ ತನ್ನ ಶಿಷ್ಯನನ್ನು ನೇಮಿಸಿಕೊಂಡ. ಏಜೆಂಟನ ಗಂಟು ಚನ್ನಾಗೇ ಬೆಳೆಯಿತು. ಬದುಕಿದ್ದಾಗ ಯಾವ ಪವಾಡವನ್ನು ಮಾಡದಿದ್ದರೂ ಆ ಫಕೀರನನ್ನು ಮಹಾನ್ ಪವಾಡ ಪುರುಷನೆಂಬಂತೆ ಬಿಂಬಿಸಿದ ಟಿವಿ ಕಾರ್ಯಕ್ರಮದಿಂದಾಗಿ ಸತ್ತ ನಂತರವೂ ಆ ಫ಼ಕೀರನ ಬಗ್ಗೆ ಇಲ್ಲಸಲ್ಲದ ದಂತಕತೆಗಳು ಹುಟ್ಟಿಕೊಂಡವು. ಜನರ ಕಷ್ಟಗಳನ್ನು ತನ್ನ ಮೈಮೇಲೆ ಎಳೆದುಕೊಂಡು ಜನರಿಗಾಗೇ ಆತ ಸತ್ತ ಎಂಬೆಲ್ಲಾ ವದಂತಿ ಹುಟ್ಟಿದವು. ಶುರುವಿನಲ್ಲಿ ಆ ಮಹಾನ್ ಫ಼ಕೀರನ ಸಮಾಧಿಯ ದರ್ಶನಕ್ಕಾಗಿ ಜನ ಮುಗಿಬೀಳತೊಡಗಿದ್ದರೂ ’ಹೀಗೂ ಉಂಟು’ ಕಾರ್ಯಕ್ರಮದಲ್ಲಿ ಹೊಸಹೊಸದಾಗಿ ತೋರಿಸುತ್ತಿದ್ದ ಇತರ ಸಾಧುಗಳು, ಪವಾಡ ಪುರುಷ/ಸ್ತ್ರೀಯರ ಬಗ್ಗೆ ಆಸಕ್ತಿ ಹೆಚ್ಚಾಗಿ ಒಂದೆರಡು ತಿಂಗಳ ನಂತರ ಜನ ಆ ಸಮಾಧಿಯನ್ನು ಮರೆತೇ ಬಿಟ್ಟರು.

 
ಇದರಿಂದ ಚಿಂತಿತನಾದ ಏಜೆಂಟ್ ’ಹೀಗೂ ಉಂಟು’ ಕಾರ್ಯಕ್ರಮದ ನಿರ್ಮಾಪಕನನ್ನು ಭೇಟಿ ಮಾಡಿ ಫ಼ಕೀರನ ಸಮಾಧಿಯ ಬಗ್ಗೆ ಮತ್ತೊಂದು ಕಾರ್ಯಕ್ರಮವನ್ನು ಮಾಡಬೇಕೆಂದು ವಿನಂತಿಸಿಕೊಂಡು ಈ ಬಾರಿ ಉದಾರವಾಗಿ ನಿರ್ಮಾಪಕನಿಗೆ ಹಣ ನೀಡಿದ್ದರಿಂದ ಖುಷಿಯಾದ ನಿರ್ಮಾಪಕ ಮತ್ತೊಂದು ಚಿತ್ರಕತೆಯನ್ನು ಸಿದ್ಧಪಡಿಸಿ, ಕಾರ್ಯಕ್ರಮ ಮಾಡಿಕೊಟ್ಟ. ಈ ಬಾರಿ ಏಜೆಂಟನ ಶಿಷ್ಯನನ್ನೇ ಸತ್ತ ಫ಼ಕೀರನ ಉತ್ತರಾಧಿಕಾರಿಯಂತೆ ಬಿಂಬಿಸಿದ್ದರಿಂದ ಆ ಶಿಷ್ಯನೇ ಪರ್ಮನೆಂಟ್ ಫ಼ಕೀರನಾಗಿ ಜನರಿಗೆ ಆಶೀರ್ವಾದ ಮಾಡತೊಡಗಿದ್ದ.
ಇದರಿಂದಾಗಿ ಆ ಏಜೆಂಟ್ ಇಂದಿಗೂ ವಸೂಲಿ ಕಾರ್ಯವನ್ನು ಮಾಡುತ್ತಾ ಮನೆ ಗಿನೆಗಳನ್ನು ಕಟ್ಟಿಸಿಕೊಂಡು ನೆಮ್ಮದಿಯಾಗಿದ್ದಾನೆಂದು ತಿಳಿಸುವುದರೊಂದಿಗೆ...ನೀವ್ಯಾರೂ ಪವಾಡ ಪುರುಷರ ಬಗ್ಗೆ ತಲೆಕೆಡಿಸಿಕೊಳ್ಳದೇ ನೆಮ್ಮದಿಯಾಗಿ ನಿಮ್ಮವರ ಜೊತೆ ಹೊಸವರ್ಷದಾಚರಣೆಯನ್ನು ಮಾಡಿರೆಂದು ಹೇಳುತ್ತಾ... ಆಯಾಮದ ಓದುಗರಿಗೆ ಹೊಸ ವರ್ಷದ ಶುಭಾಶಯಗಳನ್ನು ತಿಳಿಸುತ್ತಿದ್ದೇವೆ.
 
 
 
 
 

ಎಲ್ಲೆಮೀರಿದ ಜನಪ್ರಿಯ ಜನಪದ ಹಾಡುಗಾರಿಕೆ

 

ಎಸ್. ರಂಗಧರ
 
ಬೇಡ ಬೇಡವೆಂದರೂ ಬಿಡಲೊಲ್ಲೆಯಾ ಶಂಭುಲಿಂಗೇಶ್ವರಾ ಮನಸ್ಸಿನೊಳಗೆ ಲಿಂಗೇಶ್ವರನನ್ನು ಬೈದುಕೊಂಡೆ. ಇಲ್ಲಾರೀ ಆಗಲ್ಲಾ ತುಂಬಾ ಬ್ಯುಸಿ ಎಂದವನನ್ನು ಬಲವಂತದಿಂದ ಜೂನಿಯರ್ ಕಾಲೇಜಿನ ಜನಪದ ಗೀತಗಾಯನ ಸ್ಪರ್ಧೆಗೆ ಜಡ್ಜ್ ಮಾಡಿಬಿಟ್ಟಿದ್ದರು. ಬೆಂಗಳೂರಿನ ಮಕ್ಕಳು ಜನಪದ ಗೀತೆ ಹಾಡುವುದನ್ನು ಕೇಳುವುದು ನನ್ನಂತ ಗ್ರಾಮ್ಯ ಹಿನ್ನೆಲೆಯವನಿಗೆ ಭಯಂಕರ ಕಷ್ಟ. ಇನ್ನೇನು ಮಾಡೋದು. ದಾಕ್ಷಿಣ್ಯಕ್ಕೆ ಬಸಿರಾದ್ರೆ ಹೆರಲು ಜಾಗವಿಲ್ಲ. ಗರಿಗರಿ ಷರ್ಟು ಹಾಕಿಕೊಂಡು ತೋರಿಸಿದ ಚೇರು ಟೇಬಲ್ ನಲ್ಲಿ ಕೂತೆ. ಕೇಳುವ ತೀರ್ಪುಗಾರನಿಗೆ ಬಾಯಾರಿಕೆ ಆಗದಿರಲಿ ಎಂದು ಕೋಕೋ ಕೋಲಾ ತಂದುಕೊಟ್ಟರು. ತೇಗು ಬಿಡುತ್ತಾ ಕೂತೆ.
 
ನಿಂಬೀಯಾ ಬನಾದ ಮ್ಯಾಗಳ ಚಂದ್ರಾಮಾ ಚಂಡಾಡಿದಾ..., ಗಲ್ಲುಗಲ್ಲೆನುತಾ ಗೆಜ್ಜೆ ಗಲ್ಲುತಾಗೆನುತಾ..., ಮುಂಜಾನೆದ್ದು ಕುಂಬಾರಣ್ಣ...ಕೋರಣ್ಯಾ ನೀಡಮ್ಮಾ ಕೋಡುಗಲ್ಲವನಿಗೇ..., ಬಿದಿರೂ ನಾನ್ಯಾರಿಗೆ..., ಚಲ್ಲಿದರೂ ಮಲ್ಲಿಗೇಯಾ...ಬಿಕೆ ಸುಮಿತ್ರಾರ ಕ್ಯಾಸೆಟ್ ಹಾಕಿಕೊಂಡು ಕೂತ ಹಾಗೆ ಹುಡುಗ ಹುಡುಗಿಯರು ಒಬ್ಬೊಬ್ಬರಾದಮೇಲೆ ಅದನ್ನೇ ಹಾಡಿಹೋದರು.
 
ಯಾರನ್ನಾದರೂ ನಿಲ್ಲಿಸಿ ಯಾರಪ್ಪಾ ಈ ಹಾಡನ್ನು ಬರೆದದ್ದು ಕೇಳಿದ್ದರೆ ಬಿಕೆ ಸುಮಿತ್ರ ಸಾರ್ ಎನ್ನುತ್ತಿದ್ದರೇನೋ! ಅವರ್ ಬಿಟ್ ಇವರ್ ಬಿಟ್ ಇವರ್ ಬಿಟ್ ಅವರ್ಯಾರ್? ಮೂವರಿಗೆ ಬಹುಮಾನ ಕೊಟ್ಟು ಬಂದೆ. ಜನಪದ ಗೀತೆ ಎಂದರೆ ಬಿಕೆ ಸುಮಿತ್ರಾ ಗೀತೆ ಎಂಬಂತೆ ಜನಪ್ರಿಯರಾಗಿದ್ದ ಬಿಕೆ ಸುಮಿತ್ರ ತಮಗೂ ಗೊತ್ತಿಲ್ಲದೇ ಒಂದು ಕಲ್ಟ್ ಸೃಷ್ಟಿಸಿ ಬಿಟ್ಟಿದ್ದರು. ಕ್ಯಾಸೆಟ್ ಗಳನ್ನು ಕೇಳಿ ಅದನ್ನೇ ವಾಂತಿಮಾಡಿಕೊಳ್ಳುವವರ ಕಲ್ಟ್.
 
ನಾನು ಚಿಕ್ಕವನಿದ್ದಾಗ ನಮ್ಮವ್ವ, ಅಜ್ಜಿ ದೊಡ್ಡಮ್ಮಂದಿರು ಹಾಡುತ್ತಿದ್ದ ಸುಶ್ರಾವ್ಯ ಜನಪದ ಗೀತೆಗಳನ್ನು ಕೇಳುತ್ತಿದ್ದೆ. ನನಗೆ ಸ್ನಾನ ಮಾಡಿಸುವಾಗ, ಕೆಂಪಿಯ ಮೈ ತೊಳೆಯುವಾಗ, ಹಿಟ್ಟು ತಿರುಗುವಾಗ, ರಂಗೋಲೆ ಹಾಕುವಾಗ, ದೀಪ ಹಚ್ಚುವಾಗ ಎಣೆಯಿರದ ಹಾಡುಗಳು. ನಮ್ಮವ್ವ ಅಜ್ಜಿ ನೆನ್ನೆ ಮೊನ್ನೆ ಹಾಡಿದ ಹಾಡನ್ನು ಮತ್ತೆ ಪುನರಾವರ್ತಿಸುತ್ತಲೇ ಇರಲಿಲ್ಲ. ಅಂತ ಕಣಜ ಅವರು. ಒಂದೊಂದು ಹಾಡಿನದ್ದೂ ಒಂದೊಂದು ಶೈಲಿ, ಒಬ್ಬೊಬ್ಬ ದೇವರಿಗೆ. ಸೂರ್ಯ, ಮಳೆ, ಶಿವ, ಪಾರ್ವತಿ...ಎಲ್ಲಿ ಹೋದವು ಆ ಹಾಡುಗಳೆಲ್ಲ?
 
ನಾನು ಕಾಲೇಜಿನಲ್ಲಿದ್ದಾಗ ಒಮ್ಮೆ ಮೈಸೂರಿನ ಪಿಕೆ ರಾಜಶೇಖರ್ ಮತ್ತವರ ಸಂಗಡಿಗರು ಹಾಡಿದ್ದ ಗಂಗೆ ಗೌರಿ ಜಗಳ ಕೇಳಿದ್ದೆ. ನಮ್ಮವ್ವ ಅಜ್ಜಿ ಅದನ್ನು ಹಾಡುತ್ತಿದ್ದರು. ಹೆಚ್ಚು ಕಮ್ಮಿ ಅದೇ ಧಾಟಿ.
’ಅಗಲುತ್ತಮನ ಬುದ್ದಿ
ಮಿಗಿಲು ಕೊಂಚಮ ಜಾತಿ
ಮೀನು ಬೇಟೆಯನಾಡಿದೆ
ಕೆಟ್ ನನ ಸವತಿ
ಬಾಳಾದು ಬಂಡಾಟವೇ..’
 
ಗಂಗೆಯ ಜಡೆಮುಡಿ ಹಿಡಿದು ಚಂಡಾಡಿದ್ದ ಗೌರಿ ನಮ್ಮವ್ವ ಅಜ್ಜಿಯಂತೆಯೇ ಆ ಪಾಟಿ ಸ್ಟ್ರಾಂಗ್ ಆಗಿ ಬೈಯ್ಯುತ್ತಿದ್ದುದರಿಂದ ನಮ್ಮನ್ನು ಅರ್ಥ ಮಾಡಿಕೊಂಡಿದ್ದ ನಮ್ಮ ದೇವಿಯಾಗಿದ್ದಳು. ನಮ್ಮನೆಯಲ್ಲಿ ಎಲ್ಲ ಭಾವನೆಗಳಿಗೂ ಒಂದು ಗೀತೆಯಿತ್ತು, ಬದುಕೇ ಗೀತೆಯಾಗಿತ್ತು. ಅದೇ ನಮ್ಮನ್ನು ಮೀಟುತ್ತಿತ್ತು.
 
ಈಗ ಜನಪದ ಗೀತೆಗಳ ಬ್ಯಾಂಕ್ರಪ್ಸಿ. ಅದೂ ರಾಜಧಾನಿ ಬೆಂಗಳೂರಲ್ಲಿ. ರಾಜ್ಯದ ಇತರೆ ಹಳ್ಳಿಗಳಿಂದ ಕರೆದುಕೊಂಡು ಬಂದು ಹಾಡಿಸುವ ’ಜನಪದ ಗಾಯಕರ ತಂಡ’ ಗಳನ್ನು ಬಿಟ್ಟರೆ ಬೇರೆ ಜನಪದ ಗೀತೆಗಳು ನಮ್ಮಲ್ಲಿಲ್ಲ. ನಮ್ಮ ಬದುಕಿನ ಜನಪದದಿಂದ ನಾವೇ ಮೂರು ಸಾಲು ಗೀತೆಯೊಂದನ್ನು ಕಟ್ಟಿಕೊಳ್ಳುವ ಮನಸ್ಸೂ ನಮಗುಳಿದಿಲ್ಲ. ಇರುವುದು ಬಿಕೆ ಸುಮಿತ್ರಾರ ಕ್ಯಾಸೆಟ್ಗಳು. ಅದಕ್ಕಿಂತಾ ದುರಂತವೆಂದರೆ ಜನಪದದ ಹೆಸರಲ್ಲಿ ಅಶ್ಲೀಲ ಸಾಹಿತ್ಯ ಬರೆದು ಬಾ ಮಾಮಾ...ನೀನೇ ಬಾರೇ ಹುಡುಗೀ ಥರದ ಗಬ್ಬುಗಳನ್ನು ಸೃಷ್ಟಿಸಿ ಮಾರುತ್ತಿರುವ ಹುಳಗಳು!
 
ಮನೆಗೆ ಬಂದವನೇ ಅವ್ವ ಹಾಡುವುದನ್ನು ಕದ್ದು ರೆಕಾರ್ಡ್ ಮಾಡಿದ್ದ ಕ್ಯಾಸೆಟ್ ಹುಡುಕಿ ಹಾಕಿದೆ. ಅವಳ ಸೋಬಾನೆ ಮನಸ್ಸನ್ನು ಸ್ವಲ್ಪ ಸಮಾಧಾನ ಮಾಡಿತು. ನಮ್ಮ ಸಂಪತ್ತುಗಳನ್ನು ಹಾಡುಹಗಲೇ ಕಳೆದುಕೊಳ್ಳುತ್ತಿದ್ದರೂ ತಿಳಿಯದ ಮೈಮರೆವಿಕೆ ಜಿಗುಪ್ಸೆ ಬರಿಸಿತು. ಜಾನಪದದ ಉಳಿವಿಗೆ ಬೆಳವಣಿಗೆಗೆ ಮೀಸಲಾಗಿರುವ ಸಂಘ ಸಂಸ್ಥೆಗಳು, ಪರಿಷತ್ತುಗಳು ರಾಜಕಾರಣಿಗಲನ್ನು ಸನ್ಮಾನ ಮಾಡುವುದನ್ನು ನಿಲ್ಲಿಸಿ, ಜಿಲ್ಲೆಗಳ ಶಾಲಾ ಕಾಲೇಜುಗಳ ಒಳ ನುಗ್ಗಿ ಮೂಲ ಧಾಟಿಯ ಕಲಾವಿದರಿಂದ ಮಕ್ಕಳಿಗೆ ಮೂಲ ಜನಪದ ಹಾಡುಗಳನ್ನು ಕಲಿಸುವಂತಾಗುವವರೆಗೂ ನಾವು ನಿಂಬೀಯಾ ಬನಾಕ್ಕೆ ನೇತುಹಾಕಿಕೊಳ್ಳುವುದು ತಪ್ಪುವುದಿಲ್ಲ ಎನ್ನುವುದು ನಿಜ. 
 
 
 
  

ಕರ್ನಾಟಕ ರಾಜಕೀಯ: ಸಂಕ್ರಾಂತಿ ನಂತರ ಬರಲಿರುವ ಮಹಾ ಎಪಿಸೋಡಿನ ಹಿನ್ನೆಲೆ


ಮಿ|| ಗುಂಡಾಂಗುಡಿಗುಡಿ

ಕರ್ನಾಟಕದ ಮತ್ತೊಂದು ರಾಜಕೀಯ ಘಟ ಉರುಳಿ ಹೋಗಿದೆ. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ೭೮ ವರ್ಷದ ತುಂಬಿದ ಬದುಕು ನಡೆಸಿ ಪ್ರಯಾಣ ಮುಗಿಸಿದ್ದಾರೆ. ಆಡು ಮುಟ್ಟದ ಸೊಪ್ಪಿಲ್ಲ,
ಬಂಗಾರಪ್ಪನವರು ಮುಟ್ಟದ ಪಕ್ಷವಿಲ್ಲ ಎನ್ನುವುದು ಬಂಗಾರಪ್ಪನವರ ರಾಜಕೀಯ ಬದುಕಿನ ಸತ್ಯಗಳಲ್ಲೊಂದು. ಎಷ್ಟೇ ಪಕ್ಷ ಕಟ್ಟಿದರೂ, ಬದಲಿಸಿದರೂ ತನ್ನ ಕ್ಷೇತ್ರದ ಜನರನ್ನು ಯಾವತ್ತೂ ಕೈಬಿಡದ ಕಟ್ಟಾಳು ಇವರು. ಷಟಲ್ ಆಡಿಕೊಂಡು ಡಾ. ರಾಜಕುಮಾರರ ಬೀಗರಾಗಿಕೊಂಡು ತಮ್ಮದೇ ಚಾರ್ಮ್ನಲ್ಲಿ ರಾಜಕೀಯ ಮಾಡಿದ ಬಂಗಾರಪ್ಪ ಇವತ್ತು ನಮ್ಮ ಮುಂದಿರುವ ಮಹಾನ್ ಭ್ರಷ್ಟರ ಪಾಲಿಗೆ ಸೇರಲಿಲ್ಲ. ನಿಷ್ಟುರವಾಗೇ ಒಂಟಿಯಾದರು. ರಾಜಕೀಯವೇ ಉಸಿರಾಗಿತ್ತಾದ್ದರಿಂದ ಎಲ್ಲಿ ತನ್ನ ಅಭಿವ್ಯಕ್ತಿಗೆ ಜಾಗ ಸಿಗಬಹುದೆನಿಸುತ್ತದೋ ಅಲ್ಲೆಲ್ಲಾ ಒಂದು ಪ್ರಯತ್ನ ಮಾಡಿದ್ದರು.

 
ಬಂಗಾರಪ್ಪನವರು ತಮ್ಮೆಲ್ಲಾ ಒಳ್ಳೆಯ ರಾಜಕೀಯವನ್ನೂ ತಮ್ಮೆಂದಿಗೇ ತೆಗೆದುಕೊಂಡು ವಿಧಿವಶರಾಗಿ, ತಮ್ಮ ಕೆಟ್ಟ ರಾಜಕೀಯದ ಪಾಠವನ್ನೆಲ್ಲಾ ಇಬ್ಬರು ಮಕ್ಕಳಿಗೆ ಬಿಟ್ಟು ಹೋಗಿದ್ದಾರೆ. ಜನ ಈ ಕಡೆ ಬಂಗಾರಪ್ಪನವರ ರಾಜಕೀಯ ಬದುಕಿಗೆ ಶ್ರದ್ಧಾಂಜಲಿ ಅರ್ಪಿಸುತ್ತಾ ಅವರ ಗಂಡುಮಕ್ಕಳು ಅಪ್ಪನ ಚಿತೆ ಮುಂದೆಯೇ ಕಚ್ಚಾಡುವುದನ್ನು ನೋಡಿ ಅಸಹ್ಯ ಪಟ್ಟುಕೊಳ್ಳುತ್ತಿದ್ದಾರೆ.
 
ರೆಡ್ಡಿ ಬ್ರದರ್ಸ್ ಮರಳಿ ಯತ್ನವ ಮಾಡು, ಮತ್ತೆ ಮರಳಿ ಯತ್ನವ ಮಾಡು, ಇನ್ನೂ ಒಂದ್ಸಲ ಮಾಡು ಅಂತ ಜೈಲಿಂದ ಹೊರಬರಲು ಟ್ರೈ ಮಾಡ್ತಾನೇ ಇದ್ದಾಗ ಈಕಡೆ ಶ್ರೀರಾಮುಲು ಬಳ್ಳಾರಿಯ ಉಪಚುನಾವಣೆಯಲ್ಲಿ ಜಯಭೇರಿ ಹೊಡೆದು ನಾನೇ ಇನ್ನೊಂದು ಪಕ್ಷ ಕಟ್ತೀನೆ ಅಂತ ಡಿಸೈಡ್ ಮಾಡಿಬಿಟ್ಟಿದ್ದಾರೆ. ಜೆಡಿಎಸ್ ಗುಮ್ಮಣ್ಣ ಮಿಸ್ಟರ್ ಕುಮಾರಣ್ಣ ಸೈಲೆಂಟಾಗೇ ಸದಾನಂದ ಗೌಡರಿಗೆ ...ಈಗ ನೀವೇ ಸರಿ...ಹಿಂಗೇ ಇರಿ ಅಂದು ಬಿಟ್ಟಿದ್ದಾರೆ.
 
ಬಿಜೆಪಿ ಒಳಗಿದ್ದುಕೊಂಡೇ ಯಡ್ಯೂರಪ್ಪನವರು ನಡೆಸುತ್ತಿದ್ದ ಅಷ್ಟೇನೂ ರಹಸ್ಯವಲ್ಲದ ರಹಸ್ಯ ಚಳುವಳಿ, ಮೊನ್ನೆ ಸದಾನಂದ ಗೌಡರನ್ನು ವಿಧಾನ ಪರಿಷತ್ತಿಗೆ ಆಯ್ಕೆ ಮಾಡುವ ಸಂದರ್ಭದಲ್ಲಿ ಹೊರಗೆ ಬಿದ್ದಿದೆ. ’ಈ ಮನುಷ್ಯ ಸದಾ ನಗಾಡಿಕೊಂಡೇ ಮೀಡಿಯಾ, ವಿರೋಧ ಪಕ್ಷದವರನ್ನೆಲ್ಲಾ ಜೇಬಿಗಿಳಿಸಿಕೊಳ್ತಿದಾನೆ... ಇವನು ಎಮ್.ಎಲ್.ಸಿ ಆದ್ರೆ ಇಲ್ಲೇ ತಳ ಹೂಡಿಬಿಡುವ ಪಾರ್ಟಿ...ಇದು ಯಾಕೋ ಡೇಂಜರಸ್’ ಅಂತ ತೀರ್ಮಾನ ಮಾಡಿಕೊಂಡು ಸದಾನಂದ ಗೌಡರನ್ನು ವಿಧಾನ ಪರಿಷತ್ತಿಗೆ ಎಂಟರ್ ಆಗದಂತೆ ತಡೆಯಲು ಯಡ್ಯೂರಪ್ಪನವರು ಸುಮಾರು ಸರ್ಕಸ್ ಮಾಡಿಯೂ ಫೇಲ್ ಆಗಿದ್ದಾರೆ.
 
ಬಿಜೆಪಿ ಹೈಕಮಾಂಡ್ ಅನ್ನು ಭೇಟಿ ಮಾಡಿ ’ನಾನೇ ಕರ್ನಾಟಕ ಬಿಜೆಪಿಯ ನಿಜವಾದ ನಾಯಕ, ನಾನೇ ಮತ್ತೆ ಮುಖ್ಯಮಂತ್ರಿಯಾಗ್ತೀನಿ’ ಅಂತ ಎಷ್ಟೇ ಕನ್ವಿನ್ಸ್ ಮಾಡಿದ್ರೂ ಹೈಕಮಾಂಡ್ ಸೊಪ್ಪು ಹಾಕಿಲ್ಲ. ಅದರಲ್ಲೂ ಲಾಲ ಕೃಷ್ಣ ಅದ್ವಾನಿಯವರು ’ನೋಡಪ್ಪಾ ಯಡ್ಯೂರಪ್ಪಾ...ನೀನು ಹಿಂಗೆಲ್ಲಾ ಆರೋಪಗಳ ಪಟ್ಟಿ ಇಟ್ಟುಕೊಂಡು ಅದು ಕ್ಲಿಯರ್ ಆಗುವ ಮೊದಲೇ ನಾನು ಮುಖ್ಯಮಂತ್ರಿ ಆಗ್ಬೇಕು...ಬಿಜೆಪಿ ರಾಜ್ಯಾಧ್ಯಕ್ಷ ಆಗಬೇಕು...ಅಂತೆಲ್ಲಾ ಪಟ್ಟು ಹಿಡಿಬೇಡ. ಆರೋಪ ಮುಕ್ತನಾಗುವವರೆಗೂ ನಿನಗೆ ಯಾವ ಚಾನ್ಸೂ ಕೊಡಲ್ಲ’ ಅಂತ ಖಡಾಖಂಡಿತವಾಗಿ ಹೇಳಿಬಿಟ್ಟಿದ್ದಾರೆ. ಆಕಡೆ ಯಡ್ಯೂರಪ್ಪನವರು ನಿರ್ಗಮಿಸಿದ ತಕ್ಷಣ ಈಕಡೆ ಸದಾನಂದ ಗೌಡರನ್ನೂ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಈಶ್ವರಪ್ಪನವರನ್ನೂ ಕರೆಸಿ ಆಶೀರ್ವಾದ ಮಾಡಿ ಸ್ಪೆಷಲ್ ಹೂಕೊಟ್ಟು ಕಳಿಸಿದ್ದಾರೆ.
 
ಪಳಗಿದ ಪಟು, ಅದೂ ಮಹಾನ್ ಆರ್.ಎಸ್.ಎಸ್ ತಲೆ...ಅದ್ವಾನಿಯವರು ಯಾರಿಗಾದ್ರೂ ಸುಮ್ಮನೆ ಆಶೀರ್ವಾದ ಮಾಡಿದ್ದಿದೆಯಾ ಮಾರಾಯ್ರೇ! ಯಡ್ಯೂರಪ್ಪ ಮತ್ತೆ ಅಧಿಕಾರಕ್ಕೆ ಬರದಂತೆ ಅವರು ಯಾವ ದಾಳವನ್ನಾದ್ರೂ ಬಿಸಾಕಲು ರೆಡಿ. ಅವರ ಜೇಬಲ್ಲಿ ಸಂತೋಷ್ ಹೆಗಡೆ ಸೇರಿಕೊಂಡಂತೆ ಎಂತೆಂತಾ ಪವರ್ ಫುಲ್ ವೆಪೆನ್ ಗಳು! ಸೋ...ವಿರೋಧಪಕ್ಷಗಳ ಪರೋಕ್ಷ ಸಹಾಯದಿಂದ, ಅದ್ವಾನಿಯವರ ಭಾರವಾದ ಕೃಪಾಕಟಾಕ್ಷದಿಂದ ಸದಾನಂದ ಗೌಡರು ವಿಧಾನ ಪರಿಷತ್ತಿಗೆ ಆಯ್ಕೆಯಾಗಿ ತಮ್ಮ ಅಮುಖ್ಯಮಂತ್ರಿಯ ಪಟ್ಟವನ್ನು ಉಳಿಸಿಕೊಂಡಿದ್ದಾರೆ.
 
ಸ್ಟೈಲೂ ಸರಿಯಿಲ್ಲ, ಟೈಮೂ ಸರಿಯಿಲ್ಲ! ಯಡ್ಯೂರಪ್ಪನವರಿಗೆ ಸ್ವಲ್ಪ ರಾಜಕೀಯ ನಯ ನಾಜೂಕು ಇದ್ದಿದ್ದರೆ ಅವರಿಗೆ ಈ ಪರಿಸ್ಥಿತಿ ಬರ್ತಾ ಇರಲಿಲ್ಲ ಬಿಡಿ. ಆನೆ ನಡೆದಿದ್ದೇ ದಾರಿ ಅಂತ ಅಡ್ಡಾದಿಡ್ಡಿ ವಾಲಾಡಿ ಊರು-ಸಂತೆನೆಲ್ಲಾ ಕೆಡಿಸಿದ ಪಾರ್ಟಿ ಅವರು. ಹೈಕಮಾಂಡ್ ಮೇಲಿನ ಕೋಪವನ್ನು ಈಗ ಈಶ್ವರಪ್ಪನ ಮೇಲೆ ಕಾರಿಕೊಂಡಿದ್ದಾರೆ. ’ಈ ಈಶ್ವರಪ್ಪ ಸದಾನಂದ ಗೌಡ ಒಟ್ಟಿಗೆಯಾಗಿ ನನ್ನ ವಿರುದ್ಧ ಪಿತೂರಿ ಮಾಡ್ತಿದ್ದಾರೆ’ ಅಂತ ಗುಡುಗಿದ್ದಾರೆ. ಅವರಿಗೀಗ (ಸ್ವಲ್ಪ ಜನ ಇನ್ನೂ ’ಲಾಯಲ್’ ಆಗಿ ಉಳಿದಿರೋ ಆಪ್ತರನ್ನು ಬಿಟ್ರೆ) ಇಡೀ ಕರ್ನಾಟಕದ ವರ್ಲ್ಡೇ ತಮ್ಮ ವಿರುದ್ಧ ತಿರುಗಿಬಿದ್ದಂತೆ ಕಾಣಿಸತೊಡಗಿದೆ! ’ಛೆ ಛೆ ಯಡ್ಯೂರಪ್ಪನವರು ಪಾರ್ಟಿ, ನಾಯಕತ್ವದ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಬಾರದು...ಅರ್ಜೆಂಟ್ ಮಾಡಬಾರದು...ಆರೋಪ ಮುಕ್ತರಾಗೋವರೆಗೂ ಕಾಯಬೇಕು...’ ಅಂತ ಈಶ್ವರಪ್ಪನವರು ಮೇಧಾವಿ ಥರ ಪೋಸುಕೊಟ್ಟು ಸುಮ್ಮನಾಗಿದ್ದಾರೆ.
ಸರಿ ಕೊನೇ ಚಾನ್ಸ್ ಕೊಟ್ ನೋಡಣ...ಅಂತ ’ಸದಾನಂದ ಗೌಡರನ್ನು ಮುಖ್ಯಮಂತ್ರಿ ಮಾಡಿದ್ದು ಯಾರು ಅಂತ ಆತ ಕೃತಜ್ನತೆಯಿಂದ ನೆನಪಿಸಿಕೊಳ್ಳಬೇಕು. ನಾನು ಜನವರಿ ೧೫ರ ವರೆಗೂ ಅವರು ನನಗೆ ಅಧಿಕಾರ ಬಿಟ್ಟುಕೊಡುವುದನ್ನ ಕಾಯ್ತಿನಿ..ಆಮೇಲೆ ಮುಂದಿನ ಕ್ರಮ ಕೈಗೊಳ್ತೀನಿ...’ ಸಂಕ್ರಾಂತಿ ಹಬ್ಬದ ನಂತರ ಕರ್ನಾಟಕದ ಜನರ ಪಾಲಿಗೆ ಮತ್ತೊಂದು ಬೊಂಬಾಟ್ ಎಪಿಸೋಡ್ ಇದೆ ಅಂತ ಯಡ್ಯೂರಪ್ಪ ಸೂಚನೆ ಕೊಟ್ಟಿದ್ದಾರೆ. ಹಳ್ಳಿಹಳ್ಳಿಗಳಲ್ಲಿ ಹಾಯಿಸುವ ಸಂಕ್ರಾಂತಿ ಕಿಚ್ಚನ್ನು ಕಲೆಕ್ಟ್ ಮಾಡಿಕೊಂಡು ಬೆಂಗಳೂರಿಗೆ ರಿಲೇ ಬಂದು ವಿಧಾನಸೌಧದ ಎದುರು ಪೂಜಾರಿಗಳನ್ನು ಕೂರಿಸಿಕೊಂಡು ಯಾವುದಾದರೂ ಮಹಾಯಜ್ನ ಮಾಡದಿದ್ದರೆ ಸಾಕು!
  
 
 
 
 
 
 
Copyright © 2011 Neemgrove Media
All Rights Reserved