
ಅರೆಕತ್ತಲೆಯಲ್ಲಿ ಆ ಕಡೆ ಈ ಕಡೆ ನೋಡುತ್ತಾ ಕೈಲಿದ್ದ ಕ್ಯಾರಮೆಲ್ ಸಿರಪ್ ಹಚ್ಚಿದ್ದ ಸಿಹಿಸಿಹಿ ಪಾಪ್ ಕಾರ್ನ್ ಗಳನ್ನು ಗೊಣಗಿಕೊಂಡೇ ಖಾಲಿ ಮಾಡುತ್ತಾ ನಡೆಯುತ್ತಿದ್ದೆವು. ಜ್ಯಾಕೆಟ್ ಹಾಕಿದ್ದರೂ ಚಳಿ ತಾಕುತ್ತಿತ್ತು. ಸ್ವಲ್ಪ ಮಸಾಲೆ ಇರುವುದೇನಾದರೂ ಕುರುಕಿ ಬಿಸಿ ಮಾಡಿಕೊಳ್ಳೋಣವೆಂದರೆ ಮೆಣಸಿನಕಾಯಿ ಬಜ್ಜಿ, ಪಕೋಡ ಎಲ್ಲಿ ಸಿಗಬೇಕು? ನಾವು ಹತ್ತಬೇಕಿದ್ದ ಮಿಸ್ಸಿಸ್ಸಿಪ್ಪಿ ನದಿ ಜ್ಯಾಜ಼್ ಕ್ರೂಸ್ ಬೋಟ್ ಹೊರಡಲು ಇನ್ನೂ ಎರಡು ಗಂಟೆ ಟೈಮ್ ಇತ್ತು. ನದೀ ತಟಕ್ಕೆ ಅಂಟಿಕೊಂಡಂತೆ ಕಟ್ಟಿದ್ದ ಪಾರ್ಕ್ ನಲ್ಲೇ ಸ್ವಲ್ಪ ಹೊತ್ತು ಸುತ್ತಾಡೋಣ ಅಂತ ನಮ್ಮ ಪ್ಲಾನ್. ಪಾರ್ಕಿನಲ್ಲಿ ಲೋಹಗಳಿಂದ ಕಟ್ಟಿದ್ದ ಹಲವಾರು ಬಗೆಯ ಅಬ್ಸ್ಟ್ರ್ಯಾಕ್ಟ್ ಶಿಲ್ಪಗಳನ್ನು ನಿಲ್ಲಿಸಿದ್ದರು. ವಿಚಿತ್ರವಾದ ನೆರಳುಗಳಾಗಿ ಅಲ್ಲಲ್ಲೇ ಬೆಚ್ಚಿಸುತ್ತಿದ್ದವು. ಅಲ್ಲಿಂದ ಇಲ್ಲಿಗೆ ಅಂತ ಸುಮಾರು ಸುತ್ತಾಡಿದೆವು. ನಮ್ಮಂತೇ ಸುತ್ತಾಡುತ್ತಿದ್ದ ಸಾಕಷ್ಟು ಜನ ಪದೇ ಪದೇ ಎದುರು ಸಿಕ್ಕುತ್ತಿದ್ದರು. ಕಡೆಗೆ ಸಾಕಾಗಿ ಖಾಲಿಯಿದ್ದ ಕುರ್ಚಿಗಳನ್ನು ಕಂಡು ಅಲ್ಲೇ ಸೆಟಲ್ ಆದೆವು.
ಅಮೆರಿಕಾಗೆ ಬಂದ ಹೊಸತು. ಅಮೆರಿಕಾದ ದಕ್ಷಿಣದಲ್ಲಿರುವ ಲೂಯಿಸಿಯಾನ ರಾಜ್ಯದ ವಿಶಿಷ್ಟ ಸಂಸ್ಕೃತಿಯ ಊರು ನ್ಯೂಆರ್ಲೀನ್ಸ್ ಅನ್ನು ನೋಡಿ ಬರೋಣ ಅಂತ ನಾಲ್ಕು ದಿನ ರಜ ಹಾಕಿ ಬಂದಿದ್ದೆವು. ’ಅಯ್ಯೋ ಮಾರ್ಡಿಗ್ರಾ ಟೈಮ್ ನಲ್ಲಿ ಹೋಗೋದು ಬಿಟ್ಟು ಈಗ್ಯಾಕೆ ಹೋಗ್ತೀರಾ? ಈಗ ಅಷ್ಟು ಮಜ ಇರಲ್ಲ’ ಅಂತ ಇಡೀ ದೇಶವನ್ನು ಚನ್ನಾಗಿ ಸುತ್ತಿ ಅನುಭವವಿದ್ದ ಮಿತ್ರರೊಬ್ಬರು ನಮ್ಮ ತೀರ್ಮಾನವನ್ನು ಅಲ್ಲಾಡಿಸಿದ್ದರು. ಈಗ ಇಷ್ಟ ಆದ್ರೆ ಇನ್ನೊಮ್ಮೆ ಬಂದರಾಗುತ್ತೆ ಎಂದುಕೊಂಡು ಬಂದು ತಲುಪಿದ್ದೆವು.
ನ್ಯೂ ಆರ್ಲೀನ್ಸ್ ಬಗ್ಗೆ ಪುಂಖಾನುಪುಂಖವಾಗಿ ಬರೆಯೋಕೆ ಹೋಗಲ್ಲ. ಆದರೆ ಇಷ್ಟನ್ನು ಹೇಳಲೇ ಬೇಕು. ಒಮ್ಮೆ ಫ್ರೆಂಚರ ವಸಾಹತುವಾಗಿ, ನಂತರ ಸ್ಪಾನಿಶರ ತಾಣವಾಗಿ, ಮತ್ತೆ ಅವರಿಂದ ಇವರಿಗೆ ಬಂದು ಕಡೆಗೆ ಅಮೆರಿಕಾಗೆ ಮಾರಾಟವಾಗಿದ್ದ ಮಿಸಿಸಿಪ್ಪಿ ನದಿ ದಡದಲ್ಲಿರುವ ಸಣ್ಣ ಊರು ನ್ಯೂ ಆರ್ಲೀನ್ಸ್. ಈಗಲೂ ಫ್ರೆಂಚ್, ಸ್ಪಾನಿಶ್, ಅಮೆರಿಕನ್ ಮತ್ತು ಹಿಂದಿದ್ದ ಫ್ರೆಂಚರಿಗೆ ಸ್ಪಾನಿಶರಿಗೆ ಕೂಲಿಗಳಾಗಿ ಉಳಿದಿದ್ದ ಆಫ್ರೋ ಅಮೆರಿಕನ್ನರ ಮೂಲ ಸಂಸ್ಕೃತಿಗಳ ಮಿಶ್ರಣವಾದ ’ಕೇಜನ್’ ಎಂಬ ಕಲಸುಮೇಲೋಗರ ಸಂಸ್ಕೃತಿಯನ್ನು ಪಾಲಿಸುತ್ತಾ ಬಂದಿರುವ ಊರು. ಈ ಕೇಜನ್ ಸಂಸ್ಕೃತಿಯ ಆಚರಣೆಗಳನ್ನು ಇವತ್ತು ಇಲ್ಲಿನವರಿಗೂ ಸರಿಯಾಗಿ ವಿವರಿಸಲು ಆಗುವುದಿಲ್ಲ. ಆಡಿದ್ದೇ ಆಟ, ಮಾಡಿದ್ದೇ ಊಟ, ಆಚರಿಸಿದ್ದೇ ಬದುಕು ಎಂಬಂತೆ ನ್ಯೂ ಆರ್ಲೀನ್ಸ್ ಇವತ್ತೂ ಸಾಂಸ್ಕೃತಿಕವಾಗಿ ಪ್ರತಿ ದಿನವೂ ಬದಲಾಗುತ್ತಿದೆ ಎಂದರೆ ತಪ್ಪಾಗಲಾರದು.

ಈಗ ೬-೭ ವರ್ಷಗಳ ಹಿಂದೆ ಅಟ್ಲಾಂಟಿಕ್ ಸಮುದ್ರ, ಗಲ್ಫ್ ಆಫ್ ಮೆಕ್ಸಿಕೋ ಸೇರುವಲ್ಲಿ ’ಕಟ್ರೀನಾ’ ಎಂಬ ಚಂಡಮಾರುತೆ ಹುಟ್ಟಿ, ಭಯಂಕರ ಶಕ್ತಿಯ ದೈತ್ಯ ಕಾಯೆಯಾಗಿ ಬೆಳೆದು, ತಾನು ಬಂದಿರೋದೇ ನ್ಯೂ ಆರ್ಲೀನ್ಸ್ ಭೇಟಿ ಕೊಡಲು ಎಂಬಂತ್ತೆ ಇಲ್ಲಿಗೆ ಅಪ್ಪಳಿಸಿ ಹೋಗಿದ್ದಳು. ಇಡೀ ನ್ಯೂ ಆರ್ಲೀನ್ಸ್ ನ ಒಡಲನ್ನು ಒಡೆದು ಕಲೆಸಿ ಸುಮಾರು ಪ್ರಾಣಹಾನಿ ಮಾಡಿ ಹೋಗಿದ್ದಳು. ಇಂಥದೊಂದು ಶಕ್ತಿಯ ಚಂಡಮಾರುತವನ್ನು ತನಗಿರುವ ಹೆಸರಿಗೆ, ಶಕ್ತಿಗೆ ತಕ್ಕಂತೆ ತಾನು ಎದುರಿಸಲು ಸಾಧ್ಯವಾಗಲಿಲ್ಲವೆಂದು ಇವತ್ತೂ ಅಮೆರಿಕಾ ಸರ್ಕಾರ ಅವಮಾನಿತನಾಗುವ ಹಾಗೇ ಏಟು ಕೊಟ್ಟಿದ್ದಳು. ನಾವು ಮೊದಲು ಇಲ್ಲಿಗೆ ಹೋದದ್ದು ’ಕಟ್ರೀನಾ’ ಬರುವ ಮುಂಚೆ. ಇಲ್ಲಿ ಆ ಭೇಟಿಯ ಒಂದು ಸಣ್ಣ ನೆನಪು.
ನ್ಯೂ ಆರ್ಲೀನ್ಸ್ ಎಲ್ಲ ಬಗೆಯ ಆಸಕ್ತಿಯವರಿಗೂ ಮನರಂಜನೆ ಕೊಡುವ ಆಸಕ್ತಿ ಹುಟ್ಟಿಸುವ ಜಾಗ. ಮಕ್ಕಳು, ವೃಧ್ಧರು, ವಿಜ್ನಾನಿಗಳು, ಸಂಸ್ಕೃತಿ ಅಧ್ಯಯನ ಮಾಡುವವರು, ಕಂಠಮಟ್ಟ ಕುಡಿದು ಚಲ್ಲಾಡಿ ಹೋಗಲು ಬರುವವರು-ಎಲ್ಲರಿಗೂ ಅವರಿಗಿಷ್ಟವಾದದ್ದನ್ನೇ ಯಥೇಚ್ಚವಾಗಿ ಕೊಡುವ ಊರು. ಇದೆಲ್ಲ ಸಂಗತಿಗಳನ್ನು ಅಲ್ಲಲ್ಲಿ ಅಷ್ಟಷ್ಟು ತಿಳಿದು ಒಂಚೂರು ಇಣುಕಿ ಹೋಗಬೇಕೆಂದು ಬಂದಿದ್ದವರು ನಾವು. ನ್ಯೂ ಆರ್ಲೀನ್ಸ್ ಜ಼್ಯಾಜ್ ಸಂಗೀತದ ನೆಲೆ. ಇಲ್ಲಿಗೆ ಬಂದು ಜ್ಯಾಜ಼್ ಕೇಳದಿದ್ರೆ ಆಗಬಹುದಾ? ಹಾಗೆಂದುಕೊಂಡು ರಾತ್ರಿಯಿಡೀ ಎಡೆಬಿಡದೆ ಜ್ಯಾಜ಼್ ಸಂಗೀತ ಉಣಿಸುವ ಕ್ರೂಸ್ ಒಂದಕ್ಕೆ ಟಿಕೇಟ್ ತೆಗೆದುಕೊಂಡಿದ್ದೆವು. ಸಂಗೀತ ಮೇಳ ದೊಡ್ಡ ಬೋಟ್ ಒಂದರಲ್ಲಿ ಮಿಸ್ಸಿಸ್ಸಿಪ್ಪಿ ನದಿ ಮೇಲೆ ತೇಲುತ್ತಾ ನಡೆಯಲಿತ್ತು. ಅಲ್ಲೇ ಉಣಿಸು ಗಿಣಿಸು ಎಲ್ಲಾ.
ಇನ್ನೂ ಸಮಯವಿದ್ದುದರಿಂದ ಪಾರ್ಕಿನ ಸ್ವಲ್ಪ ಪಕ್ಕದಲ್ಲೇ ತುಂಬಿ ಹರಿಯುತ್ತಿದ್ದ ಮಿಸ್ಸಿಸ್ಸಿಪ್ಪಿ ಮಹಾನದಿಯನ್ನು ನೋಡುತ್ತಾ ಕುಳಿತಿದ್ದೆವಲ್ಲಾ...ಎಲ್ಲಿಂದಲೂ ಮಂದವಾಗಿ ಹಿಂದೂಸ್ಥಾನಿ ಸಿತಾರ್ ವಾದನ ಕೇಳಿಬರತೊಡಗಿತು. ತಣ್ಣನೆಯ ಚಳಿಗಾಳಿ, ಅಲ್ಲೊಂದು ಇಲ್ಲೊಂದು ಮಿನುಗುತ್ತಿದ್ದ ಮೂನ್ ಲ್ಯಾಂಪ್ ಗಳು, ತಮ್ಮ ತಮ್ಮ ಪ್ರಿಯಕರ/ರಿ ಸಂಗಾತಿಯೊಡನೆ ಸಲ್ಲಾಪದಲ್ಲಿ ತೊಡಗಿಕೊಂಡಿದ್ದ ಮಂದಿ, ತೆಳ್ಳಗೆ ಕೇಳುತ್ತಿದ್ದ ಎಲೆಗಳ ಅಪ್ಪಳಿಕೆ, ಈಗ ಮಿಡಿದಂತೆ ನುಡಿಯುತ್ತಿರುವ ಕೇದಾರ ರಾಗದ ಸಿತಾರ್! ಎಂಥ ಡೆಡ್ಲೀ ಕಾಂಬಿನೇಷನ್! ಮನಸ್ಸು ಎಲ್ಲಿಗಾದರೂ ಹಾರಿಹೋಗುವ ಮುಂಚೆ ಸಂಭಾಳಿಸಿಕೊಂಡು ಶಬ್ದದ ಮೂಲ ಹುಡುಕತೊಡಗಿದೆ.

ನಾವು ಕುಳಿತಿದ್ದ ಕುರ್ಚಿಗಳಿಂದ ಸ್ವಲ್ಪ ದೂರದಲ್ಲೇ ಹೆಂಗಸೊಬ್ಬಳು ನಮಗೆ ಬೆನ್ನು ಹಾಕಿಕೊಂಡು ಆಕಾಶ ನೋಡುತ್ತಾ ಕುಳಿತಿದ್ದಳು. ಅವಳು ಕೂತಿರುವ ಕುರ್ಚಿಯ ಮುಂದೆ ಒಂದು ಟೆಂಪರರಿ ಟೇಬಲ್ಲು. ಸುತ್ತ ಇನ್ನೊಂದೆರಡು ಕುರ್ಚಿಗಳು. ಅವಳ ಮುಂದಿದ್ದ ಟೇಬಲ್ ಮೇಲೆ ಗಾಜಿನ ಜಾರುಗಳು, ಅವುಗಳ ಒಳಗೆ ಸಣ್ಣದಾಗಿ ಉರಿಯುವ ಒಂದೆರಡು ಬಣ್ಣಬಣ್ಣದ ಕ್ಯಾಂಡಲ್ ಗಳು. ಅವಳ ಪಕ್ಕದಲ್ಲೇ ಬ್ಯಾಟರಿ ಹಾಕಿಕೊಂಡು ಸಿತಾರ್ ಕೇಳಿಸುತ್ತಿದ್ದ ಸಣ್ಣ ಟೇಪ್ ರೆಕಾರ್ಡರ್...ನನಗೆ ಕುತೂಹಲ ತಡೆಯಲಾಗಲಿಲ್ಲ. ಪಕ್ಕ ನೋಡಿದೆ. ಸರಿ ಬಾ ಎಂಬಂತೆ ಇಬ್ಬರೂ ಅಲ್ಲಿಗೆ ಹೋದೆವು.
ನಾವು ಮೆಲ್ಲಗೆ ಅವಳ ಹತ್ತಿರ ಬಂದದ್ದು ಗೊತ್ತಾಯಿತು ಎಂಬಂತೆ ನಮ್ಮತ್ತ ತಲೆ ತಿರುಗಿಸಿದಳು. ೪೫-೪೫ ವರ್ಷವಿರಬಹುದು. ಅವಳ ಅರೆನೆರೆತ ಬ್ಲಾಂಡ್ ಕೂದಲು ಕ್ಯಾಂಡಲ್ ಬೆಳಕಿಗೆ ವಿಚಿತ್ರವಾಗಿ ಮಿಂಚುತ್ತಿತ್ತು. ತಣ್ಣನೆಯ ಮುಖ. ಚೂಪು ಕಣ್ಣುಗಳು. ಎಲ್ಲೋ ಬೇರೆ ಕಡೆ ಕಳೆದು ಹೋದಂತಿದ್ದಳು. ಮುಖ ನೋಡಿ ಆತ್ಮೀಯರೆಂಬಂತೆ ನಗುವೊಂದನ್ನು ಕೊಟ್ಟು...’ಹೆಲ್ಲೋ...ಹೌ ಆರ್ ಯೂ?!’ ಎಂದಳು. ಒಂದೆರಡು ಹೆಲೋ ಫ಼ೈನ್ ಥ್ಯಾಂಕ್ಯೂಗಳಾದ ಮೇಲೆ..’ಸಿತಾರ್ ಕೇಳಿಸುತ್ತಿತ್ತು...ಹಾಗೇ ಬಂದೆವು...’ ಕೇಳುತ್ತಿದ್ದವಳನ್ನು ಡಿಸ್ಟರ್ಬ್ ಮಾಡಿದೆವೆಂಬ ಮುಜುಗರದಲ್ಲಿ ನಿಂತಿದ್ದೆವು. ’ಯಾ! ಯೂ ಲೈಕ್ ಸಿತಾರ್? ಐ ಲವ್ ದ ಮ್ಯೂಸಿಕ್..’ ಎಂದು ಎದುರಿನ ಕುರ್ಚಿಗಳತ್ತ ಕೈ ತೋರಿಸಿ ’ಯೂ ಕ್ಯಾನ್ ಲಿಸನ್ ಇಫ಼್ ಯೂ ವಾಂಟ್’ ಎಂದಳು. ನ್ಯೂ ಆರ್ಲೀನ್ಸ್ ನಲ್ಲಿ ಕೇಳಿದ ಕೇದಾರದ ಸೆಳೆತಕ್ಕೆ ಅಲ್ಲಿಗೆ ಹೋಗಿದ್ದೆವೇ ಹೊರತು ಯಾರೋ ಅಪರಿಚಿತರ ಪಕ್ಕ ಕೂತು ಸಂಗೀತ ಕೇಳಲು ಖಂಡಿತಾ ಅಲ್ಲ! ನಾವು ಥ್ಯಾಂಕ್ಯೂ ಎಂದು ಮುಖಮುಖ ನೋಡಿಕೊಂಡು ಹೊರಡುವ ಸೂಚನೆ ತೋರಿಸುತ್ತಿದ್ದಂತೇ...’ಸಿಟ್ ಡೌನ್ ಡಿಯರ್! ಪ್ಲೀಸ್ ಲೆಟ್ ಮಿ ರೀಡ್ ಯುವರ್ ಪಾಮ್’ ಎಂದಳು. ಓಹ್! ಆಗ ಮನಸ್ಸಿಗೆ ಮಿಂಚಿತ್ತು. ಇವಳು ಹಸ್ತ ಸಾಮುದ್ರಿಕಾ ಲೇಡಿ!!
ಅಮೆರಿಕಾಗೆ ಬಂದಮೇಲಿಂದ ನಾನು ಎಲ್ಲಿಯೂ ಶಾಸ್ತ್ರ ಹೇಳುವವರನ್ನು ನೋಡಿರಲಿಲ್ಲ. ಇಲ್ಲಿನ ಜನ ಶಾಸ್ತ್ರ ಹೇಳುತ್ತಾರೆ, ಕೇಳಿಸಿಕೊಳ್ಳುತ್ತಾರೆ ಅಂತಲೂ ಗೊತ್ತಿರಲಿಲ್ಲ! ನಾನು ಬೆರಗಿನಿಂದ ಹೋಗಣ್ವಾ? ಎನ್ನುವಂತೆ ಪಕ್ಕ ತಿರುಗಿದೆ. ನಿಜಕ್ಕೂ? ಪ್ರಶ್ನಾರ್ಥಕವಾದ ಮರುನೋಟ. ನಾನಂತೂ ಹೋಗಿ ಅವಳ ಮುಂದೆ ಕೂತೇ ಬಿಟ್ಟೆ. ಕಣಿ ಗಿಣಿ ಶಾಸ್ತ್ರಗಳಲ್ಲಿ ನಂಬಿಕೆ ಇರದಿದ್ದರೂ ನನಗೆ ಚಿಕ್ಕಪುಟ್ಟ ಎಲ್ಲ ಅನುಭವಗಳೂ ಬೇಕು. ನ್ಯೂ ಆರ್ಲೀನ್ಸ್ ನಲ್ಲಿ ಇಂಥ ಮಾಹೋಲಿನಲ್ಲಿ ಈ ಹೆಂಗಸಿನ ಹತ್ತಿರ ಕೈ ಶಾಸ್ತ್ರ ಹೇಳಿಕೊಳ್ಳುವುದು...ಛೆ! ಖಂಡಿತಾ ಬೇಕು. ಅವಳೇನಾದರೂ ಹೇಳಿಕೊಳ್ಳಲಿ. ಆ ರಾತ್ರಿ, ಆ ಸಂಗೀತ, ಗಾಳಿ, ಅವಳ ಮೋಡಿಮಾಡುವ ನೋಟ ಎಲ್ಲಕ್ಕೂ ಸರೆಂಡರ್ ಆಗಲು ತಯಾರಾಗಿ ಎರಡೂ ಕೈ ಕೊಟ್ಟು ಕುಳಿತೆ. ನಾನು ನೇರವಾಗಿ ಅನುಭವಿಸಿದರೆ, ನಾನು ಹಾಗೆ ಕೂತು ಮರಿ ಮಂಗನ ಥರ ಕೇಳುವುದನ್ನು ನೋಡಿ, ಒಳಗೇ ನಗಾಡಿಕೊಂಡು ಆಮೇಲೆ ರೇಗಿಸಿ ಲೈಫ್ ಲಾಂಗ್ ಅದನ್ನೊಂದು ತಮಾಷೆಯ ಅನುಭವವನ್ನಾಗಿ ಮಾಡಿಕೊಳ್ಳುವ ನನ್ನ ಸಂಗಾತಿ ತಾನೂ ಪಕ್ಕದ ಕುರ್ಚಿಯಲ್ಲಿ ಆಸೀನರಾದರು.
ಆಮೇಲವಳು ಹೇಳಿದ ಎಲ್ಲಾ ಕಥೆ ನನಗೂ ನೆನಪಿಲ್ಲ. ಎಲ್ಲರಿಗೂ ಹೇಳುವುದನ್ನೇ ಹೇಳುತ್ತಿದ್ದಳು ಅಂತಿಟ್ಟುಕೊಳ್ಳಿ. ಆದರೆ ಹೇಳುವ ಅಷ್ಟು ಹೊತ್ತು ನಾನು ಅವಳ ಮುಖದಿಂದ ಕಣ್ಣು ತೆಗೆಯಲಾಗದಂತೆ ಆಕೆ ಮಾಡುತ್ತಿದ್ದ ಹಾವ ಭಾವ ಭಂಗಿಗಳನ್ನು ಮರೆಯಲಿಕ್ಕೇ ಆಗಿಲ್ಲ. ಅವಳು ಮಾತಾಡುತ್ತಿದ್ದಾಗ ಅವಳ ಹುಬ್ಬು, ತುಟಿ, ಕಣ್ ಗುಡ್ಡೆಗಳು, ಅವಳ ದನಿ ಎಲ್ಲವೂ ಸುಂದರ ಸಿಂಫನಿಯಲ್ಲಿ ಡ್ಯಾನ್ಸ್ ಮಾಡುತ್ತಿರುವಂತಿದ್ದವು. ಬಾಯಿ ಹೆಚ್ಚು ಅಲ್ಲಾಡುವಾಗ ಕಣ್ಣು ಸುಮ್ಮನಿರುತ್ತಿತ್ತು. ಕಣ್ಣು ಸಿಕ್ಕಾಪಟ್ಟೆ ಎಮೋಷನ್ ಚೆಲ್ಲುವಾಗ ಮುಖದ ಇತರೆ ಪಾರ್ಟುಗಳು ಆರಾಮಾಗಿರುತ್ತಿದ್ದವು...ದನಿಯಂತೂ ಉಯಲೆ ಥರ ಮೇಲೆ ಕೆಳಗೆ ಇಳಿದೇಳುತ್ತಿತ್ತು! ಆಕೆ ಎಲ್ಲವನ್ನೂ ಕನ್ನಡಿ ಮುಂದೆ ಒಂದಿಪ್ಪತ್ತು ಸಲ ರಿಹರ್ಸ್ ಮಾಡಿದಂತಿದ್ದಳು.
’...ನೀನು ತುಂಬಾ ಸೋಮಾರಿ...ವಯಸ್ಸಾದ ಮೇಲೆ ಆಕ್ಟಿವ್ ಆಗ್ತೀಯಾ...ನಿನ್ನ ಇಡೀ ಜೀವನ ಪರ್ಫೆಕ್ಟ್ ಸ್ನೇಹಿತರಿಗೆ ಹುಡುಕಾಡ್ತೀ...ನಿನಗೆ ಸಿಕ್ಕೇ ಸಿಗ್ತಾರೆ...ಅವರು ನಿನ್ನ ಲೈಫ್ ನಲ್ಲೇ ಇರ್ತಾರೆ...ಅವರು ನಿನ್ನನ್ನು ಹುಡುಕಿಕೊಳ್ತಾರೆ...’ ಅವಳು ಹತ್ತು ಹದಿನೈದು ನಿಮಿಷ ಹೇಳಿದ್ದಕ್ಕೆಲ್ಲಾ ಹೌದಾ ತಾಯಿ, ಹೌದು ತಾಯಿ ಅಂತ ಗೋಣಾಡಿಸಿಕೊಳ್ಳುತ್ತಲೇ ಇದ್ದೆ. ಅವಳು ನನ್ನ ಅಂಗೈ ಹಿಡಿದುಕೊಂಡು ಯಾವುದೇ ಆಟಿಕೆ ಡಬ್ಬವೊಂದರಲ್ಲಿ ಸೂಜಿ ಇಟ್ಟು ಅದೆಲ್ಲಿ ಹೋಯಿತು ಎಂದು ಹುಡುಕುವಂತೆ ಬಗೆಬಗೆಯಾಗಿ ಕೈಯ್ಯನ್ನೇ ಹುಡುಕುತ್ತಿದ್ದಳು. ರುವ ನಾಕೈದು ಗೆರೆಗಳನ್ನು ಅದೆಷ್ಟು ಹುಡುಕುತ್ತಾಳಪ್ಪಾ ಅಂತ ಬೋರಾಗತೊಡಗಿತು. ಕ್ರೂಸ್ ಗೆ ಲೇಟಾಗುತ್ತೆ ಅಂತ ಪಕ್ಕದಿಂದಲೂ ಸನ್ನೆ ಬಂತು. ’ನಮಗೆ ಲೇಟ್ ಆಗ್ತಿದೆ..ಎಷ್ಟಾಯಿತು ಹೇಳಿ?’ ಎಂದೆ. ನಿನಗಿಷ್ಟ ಬಂದಷ್ಟು ಕೊಡು ಎಂದಳು. ಇದೇನಪ್ಪಾ ಹೀಗನ್ನುತ್ತಿದ್ದಾಳೆ ಅಂತ ’ಎಷ್ಟು ನಿರೀಕ್ಷೆ ಮಾಡುತ್ತೀರಿ ಹೇಳಿ’ ಎಂದೆ. ’ನಿನಗಿಷ್ಟ ಆಗಿದ್ರೆ ಐವತ್ತು ಕೊಡು...ಪರವಾಗಿಲ್ಲ ಅನ್ನಿಸಿದರೆ ಇಪ್ಪತ್ತು ಕೊಡು ಎಷ್ಟು ಕೊಟ್ಟರೂ ನನಗೆ ಬೇಜಾರಿಲ್ಲ’ ಎಂದಳು. ನನ್ನ ಕನ್ಫ್ಯೂಷನ್ ನೋಡಿದ ನನ್ನ ಸೇವಿಯರ್ ’ನಾನು ಕೊಡ್ತೀನಿ ನೀನೀಚೆ ಬಾ’ ಅಂದು ಅವಳ ಕೈಗೆ ದುಡ್ಡುಕೊಟ್ಟು ಬಂದರು. ಗುಡ್ ಲಕ್ ಹೇಳಿ ಕಳಿಸಿಕೊಟ್ಟಳು.

ಅವಳಿಂದ ಸ್ವಲ್ಪ ದೂರ ಬರುತ್ತಿದ್ದಂತೇ ’ನೋಡಿದ್ಯಾ ನಾನು ನಿನ್ನ ಬೆಸ್ಟ್ ಫ್ರೆಂಡ್ ಪಕ್ಕದಲ್ಲೇ ಇದ್ರೂ ನನಗೆ ಫ್ರೆಂಡ್ಸೇ ಇಲ್ಲ ಅಂತೀಯಾ!? ಕೊನೆಗೊಂದು ದಿನ ಗೊತ್ತಾಗುತ್ತೆ ನೋಡು..’. ಅವಳು ಹೇಳಿದ್ದೆಲ್ಲಾ ನನಗೆ ಬಾಣವಾಗಿ ಬರುವಂತಿತ್ತು! ’ಮತ್ತೆ ನೀನು ನನ್ನನ್ನು ಸೋಮಾರಿ ಅಂತೀಯಾ...ನೋಡಿದ್ಯಾ...ನಾನೇನು ಮಾಡ್ಲಿ?! ನನ್ನ ಕೈಯ್ಯಲ್ಲೇ ಅದು ಬರೆದುಬಿಟ್ಟಿದೆ. ವಿಧಿ ಬರಹ ತಾನೇ...ಸ್ವಲ್ಪ ತಾಳ್ಮೆಯಿಂದಿರು... ವಯಸ್ಸಾದ ಮೇಲೆ ಆಕ್ಟಿವ್ ಆಗ್ತಿನಿ...’ ನಾನೂ ಸುಮ್ಮನಿರಲು ಕೇಳಲಿಲ್ಲ. ಹೋಗ್ಲಿ ಬಿಡು ವಿ ಹ್ಯಾಡ್ ಫನ್ ಅಂತ ಸಮಾಧಾನ ಮಾಡಿಕೊಂಡು ಬೋಟಿನ ಹತ್ರ ಹೊರಟೆವು. ಆಮೇಲೆ ಶುರುವಾದ ಜ್ಯಾಜ಼್ ಸುರಿಮಳೆಯಲ್ಲಿ ಈ ಕೈ ನೋಡುವಾಕೆ ಮರೆತು ಹೋಗಿದ್ದಳು.