ಮೀಡಿಯಾ ಮೇನಿಯಾ
ಅಯ್ಯೋ ಅವರೇಕಾಯಿ ಮರಗಳನ್ನೆಲ್ಲಾ ಅನ್ಯಾಯವಾಗಿ ಕಡಿದು ಹಾಕಿದರಾ???! ಕೇಳಿದಳಾ ಕಾನ್ವೆಂಟ್ ಬಾಲೆ..... |
ಚಂದ್ರ ಟಿವಿಯ ಸ್ಟುಡಿಯೋದಲ್ಲಿ ಅವತ್ತು ಭಾಳಾ ಗಲಿಬಿಲಿ. ಇಂದ್ರ ಟಿವಿಯವರು ಬೆಳಿಗ್ಗೆ ಬೆಳಿಗ್ಗೆ ಒಬ್ಬ ಕೈ ಕಳೆದುಕೊಂಡಿದ್ದ ದಿನಗೂಲಿಯವನನ್ನು ಹಿಡಿದುಕೊಂಡು ಬಂದು ಅವನು ಸಿಕ್ಕಾಪಟ್ಟೆ ಗೋಳಾಡುವ ಹಾಗೆ ಮಾತಾಡಿಸಿ ’ಕರ್ನಾಟಕದ ಬಡ ಕಾರ್ಮಿಕನ ದಾರುಣ ಬದುಕು’ ಅಂತ ಬ್ರೇಕಿಂಗ್ ನ್ಯೂಸ್ ಮಾಡಿಬಿಟ್ಟಿದ್ದರು. ಮಿನಿಸ್ಟರ್ ಕೂಡಾ ಬಂದು ಮಾತಾಡಿ, ಆ ಕೂಲಿಯವನಿಗೆ ಪರಿಹಾರ ಘೋಷಿಸಿದ್ದರು. ಚಂದ್ರ ಟಿವಿಯವರ ಹತ್ತಿರ ಅವತ್ತು ಆ ಥರ ಕಣ್ಣಿರು ಹಾಕಿಸುವ ಬ್ರೇಕಿಂಗ್ ನ್ಯೂಸ್ ಇರಲಿಲ್ಲ. ಸಬ್ ಎಡಿಟರ್ ರೂಮಲ್ಲಿ ಶತಪಥ ತಿರುಗುತ್ತಿದ್ದರು. ಎಲ್ಲಿಂದ ಹುಡುಕಬಹುದು? ಏನು ಮಾಡಬಹುದು? ಟೆನ್ಶನ್ ಟೆನ್ಶನ್ ಟೆನ್ಶನ್.
ಅಷ್ಟರಲ್ಲಿ ಚಂದ್ರ ನ್ಯೂಸ್ ಚಾನೆಲ್ ನ ಹೊಸ ಸೆನ್ಸೇಶನಲ್ ಪ್ರೆಸೆಂಟರ್ ರೇಖಾ ರೂಮಿನ ಬಾಗಿಲು ತಟ್ಟಿದರು. ಅವರ ಬಿಳೀ ಮುಖ ನೋಡಿ ’ಬನ್ನಿ ರೇಖಾ ಬನ್ನಿ’ ಎಂದ ಸಬ್ ಎಡಿಟರ್ ’ಏನ್ ಸಮಾಚಾರ ಎಂಟುವರೆಗೆ ನಿಮ್ಮ ಪೀಸ್ ನ ಶೂಟ್ ಮಾಡಿ ಬಿಡಣ ರೆಡಿ ತಾನೇ ಎಂದರು’. ಕುಮಾರಿ ರೇಖಾ, ಚಂದ್ರ ಟಿವಿಗೆ ಹೊಸದಾಗಿ ಸೇರಿದ್ದರು. ಬೊಂಬಾಟ್ ಸಿನೆಮಾ ಕಾರ್ಯಕ್ರಮದ ನಿರೂಪಕಿಯಾಗಿ ಸಾಕಷ್ಟು ಜನಪ್ರಿಯರಾಗುತ್ತಿದ್ದರು. ಹೊಸಾ ಫೇಸ್, ಹೊಸ ಜೆನೆರೇಶನ್ನಿನ ಹುಡುಗಿ. ’ಸಾರ್ ಸಾಯಂಕಾಲ ಬನ್ನೇರ್ಗಟ್ಟ ರೋಡ್ ಹತ್ರ ಒಂದು ವ್ಯಾಲೆಂಟೈನ್ ಪಾರ್ಟಿ ಇದೆ...ನಂಗೆ ತುಂಬಾ ಇಂಪಾರ್ಟೆಂಟು ಸರ್...ಪ್ಲೀಸ್ ಇವತ್ತಿನ ಶೂಟ್ ಬೇಗ ಮಾಡಕಾಗುತ್ತಾ....ಇಟ್ ವಿಲ್ ಬಿ ವೆರಿ ಹೆಲ್ಪ್ ಫುಲ್. ಲೇಟ್ ಆದ್ರೆ ಟ್ರಾಫಿಕ್ ಸಾರ್...ಟೂ ಮಚ್ ಟು ಟಾಲರೇಟ್ ಯು ನೋ...’ ಕುಮಾರಿ ರೇಖಾ ಓಲೈಸುವಂತೆ ರಿಕ್ವೆಸ್ಟ್ ಮಾಡಿಕೊಂಡಾಗ ಸಬ್ ಎಡಿಟರ್ ಅವರಿಗೆ ಇಲ್ಲ ಎನ್ನಲಾಗಲಿಲ್ಲ. ’ಓಕೆಮ್ಮಾ..ಮುಂಚೆನೇ ಏನಾದ್ರೂ ಮಾಡಣ’ ಅಂತ ಕುಮಾರಿ ರೇಖಾರನ್ನು ಖುಷಿಯಾಗಿಸಿ ಕಳಿಸಿಕೊಟ್ಟರು.
ಏನು ಮಾಡಬಹುದೆಂದು ಅವರು ಯೋಚನೆ ಮಾಡುತ್ತಿದ್ದಾಗಲೇ ಅವರ ಅಸಿಸ್ಟೆಂಟ್ ಧಡಾರ್ ಅಂತ ಒಳಗೆ ಬಂದು ’ಸರ್ ಚಾಮರಾಜನಗರದಲ್ಲಿ ಒಂದಷ್ಟು ಜನ ರೈತರು ಡಿಸಿ ಆಫೀಸ್ ಮುತ್ತಿಗೆ ಹಾಕಕೆ ರೆಡಿ ಆಗ್ತಾ ಇದಾರೆ ಅಂತ ಟಿಪ್ಸ್ ಬಂದಿದೆ ಸಾರ್...ಬ್ರೇಕಿಂಗ್ ನ್ಯೂಸ್ ಗೆ ಹಾಕಣ್ವಾ’ ಕೇಳಿದರು. "ಓ ಒಳ್ಲೆದಾಯ್ತ್ರಿ. ಗುಡ್. ಏನು ವಿಚಾರ? ನಾರ್ಮಲ್ ಮುತ್ತಿಗೇನಾ ಅಥವಾ ಕೋಪ ಇದೆಯಾ? ಯಾರಾದ್ರೂ ಆತ್ಮಹತ್ಯೆ ಮಾಡಿಕೊಳ್ಳೊ ಥರ ಇದಾರಂತಾ? ಖುಶಿಯಲ್ಲಿ ಕೇಳಿದರು. ’ಗೊತ್ತಿಲ್ಲ ಸರ್, ನಮ್ಮ ರಿಪೋರ್ಟರ್ ಚಿಕ್ಕಮಾದು ಕ್ಯಾಮರಾಮ್ಯಾನ್ ಜೊತೆ ಅಲ್ಲೇ ಸುತ್ತಾ ಇದ್ದಾರೆ ಅಂತ ಗೊತ್ತು. ಅವರನ್ನೇ ಕೇಳಿ ಸಾರ್’ ಎಂದರು ಅಸ್ಸಿಸ್ಟೆಂಟ್. ’ಅದೇನು ಬೇಡ. ತಕ್ಷಣ ಒಂದಷ್ಟು ಜನ ರೈತರನ್ನು ಸೇರಿಸಿಕೊಂಡು ಲೈವ್ ಗೆ ರೆಡಿಯಾಗಿರು ಅಂತ ಹೇಳಿ...ಯಾವಾಗ ಅವಕಾಶ ಸಿಗುತ್ತೋ ಹಾಕಿಬಿಡಣ’ ಎಂದರು.
ಸಬ್ ಎಡಿಟರ್ ರ ತಲೆ ಓಡತೊಡಗಿತು. ಈಗ ಮೂರು ಗಂಟೆ. ವಿಧಾನಸೌಧದಿಂದ ಇಡೀ ದಿನ ಒಳ್ಳೆ ನ್ಯೂಸಿಲ್ಲ. ಬೇರೇ ಏನೂ ಸಿಗದಿದ್ರೆ...ಸಂಜೆ ಟೈಮ್ ಗೆ ರೈತರ ಬಿಸಿಬಿಸಿ ನ್ಯೂಸ್ ಹಾಕಿಬಿಟ್ರೆ ಚನ್ನಾಗಿರುತ್ತೆ ಎಂದುಕೊಂಡರು. ರಾಜಕಾರಣಿಯೊಬ್ಬರ ಜೊತೆ ಇಂಪಾರ್ಟೆಂಟ್ ಕೆಲಸವಿದ್ದುದರಿಂದ ಹೊರಟರು.
ಸೀನಿಯರ್ ಒಪ್ಪಿದ್ದೇ ತಡ ಅಸಿಸ್ಟೆಂಟ್ ಚಾಮರಾಜನಗರದ ರಿಪೋರ್ಟರ್ ಚಿಕ್ಕಮಾದು ಅವರಿಗೆ ಇಮ್ಮೀಡಿಯಟ್ ಆಗಿ ಒಂದಷ್ಟು ಜನ ಕಂಗಾಲಾಗಿರುವ ’ಲುಕ್’ ಇರುವವರನ್ನು ಕೂರಿಸಿಕೊಂಡು ಅವರನ್ನು ತಯಾರು ಮಾಡಿಕೊಂಡು ಲೈವ್ ಹೋಗುವುದನ್ನು ಕಾಯಲು ಹೇಳಿದರು. ಚಿಕ್ಕಮಾದು ಹರಿಬಿರಿಯಲ್ಲಿ ಅಲ್ಲಿದ್ದ ನಾಲ್ಕೈದು ಆವೇಶದ ರೈತರನ್ನು ಕಂಡು ಕಲೆಹಾಕಲು ಹೋದರು.
ಸಬ್ ಎಡಿಟರ್ ಮೀಟಿಂಗ್ ಮುಗಿಸಿ ಬಂದರು. ಆರು ಗಂಟೆ. ಕುಮಾರಿ ರೇಖಾ ಮುಖ ಸಪ್ಪಗೆ ಮಾಡಿ ಕೂತಿದ್ದರು. ಟಿವಿಯಲ್ಲಿ ಏನೂ ಬ್ರೇಕಿಂಗ್ ನ್ಯೂಸ್ ಇರಲಿಲ್ಲ. ಸಬ್ ಎಡಿಟರ್, ಅಸಿಸ್ಟೆಂಟ್ರನ್ನು ಕರೆದು ಚಾಮರಾಜನಗರದ್ದನ್ನು ಲೈವ್ ಮಾಡಲು ರೆಡಿ ಮಾಡಿ ಎಂದವರೇ ಬೋಂಬಾಟ್ ರೇಖಾರನ್ನು ಕರೆದು ’ರೇಖಾ ಈಗೊಂದು ಲೈವ್ ಪ್ರೋಗ್ರಾಂ ಇದೆಮ್ಮಾ...ನೀನೇ ನಡೆಸಿಕೊಟ್ಟು ಬಿಡು. ಐ ಆಮ್ ಬಿಸಿ. ನೀನೇ ನೋಡಿಕೊಂಡು ನಡೆಸಿಕೊಟ್ಟು ಬಿಡು...ಯು ಕ್ಯಾನ್ ಡೂ ಇಟ್...’ ಎಂದರು. ರೇಖಾ ಖುಷಿಯಿಂದ ಅವರಿಗೆ ಶೇಕ್ ಹ್ಯಾಂಡ್ ಮಾಡಿ ಸಧ್ಯ ಸ್ವಲ್ಪನಾದ್ರೂ ಬೇಗ ಮುಗಿಸಿ ಹೊರಡಬಹುದಲ್ಲ...ಮೋರ್ ದ್ಯಾನ್ ದಟ್, ಲೈವ್ ಪ್ರೋಗ್ರಾಂ! ನಾನೇ ನನ್ನದೇ ಕ್ವಸ್ಚನ್ಸ್ ಕೇಳಬಹುದು’ ಎಂದು ಖುಷಿಯಾಗಿ ಮೇಕಪ್ ರೂಮಿಗೆ ಓಡಿ ಮೇಕಪ್ ಮಾಡುವವನ ಮುಂದೆ ಕೂತು ’ಚೆನ್ನಾಗಿ ಹಾಕು ಗುರೂ...ಇದು ನನ್ನ ಮೊದಲ ಲೈವ್ ಪ್ರೋಗ್ರಾಂ...ನಾನು ಫಸ್ಟ್ ಕ್ಲಾಸ್ ಕಾಣಬೇಕು...’ ಎಂದು ಮೇಕಪ್ ಬಳಿಸಿಕೊಂಡು ಮಿರಮಿರ ಮಿಂಚುತ್ತಾ ಓಡೋಡಿ ಬಂದು ಕ್ಯಾಮರಾ ಮುಂದೆ ನಿಂತುಕೊಂಡರು.
ಇತ್ತ, ರಿಪೋರ್ಟರ್ ಚಿಕ್ಕಮಾದು ಚಾಮರಾಜನಗರ ಜಿಲ್ಲೆಯಲ್ಲಿ ಬರದಿಂದ ಬಳಲಿದ್ದ ಒಂದಷ್ಟು ರೈತರನ್ನು ಗುಡ್ಡೆ ಹಾಕಿಕೊಂಡು ಅವರ ಕಷ್ಟ ಸುಖ ಕೇಳಿಕೊಂಡು, ಕೂತಿರಿ ಅಂತ ಕೂರಿಸಿಕೊಂಡು ತಾವೂ ಟೀ ಹೀರುತ್ತಾ ಕೂತಿದ್ದರು. ’ರೆಡಿನಾ ಚಿಕ್ಕಮಾದು’ ಅಂತ ಸ್ಟುಡಿಯೋಯಿಂದ ಫೋನ್ ಬಂತು.
ಬೊಂಬಾಟ್ ಸಿನೆಮಾ ಕಾರ್ಯಕ್ರಮದ ಬೊಂಬಾಟ್ ನಿರೂಪಕಿ ಕುಮಾರಿ ರೇಖಾ ಅವರು ಚನ್ನಾಗಿ ಮೇಕಪ್ ಮಾಡಿಕೊಂಡು ರೆಡಿ ಇರುವ ಸಿಗ್ನಲ್ ನೀಡಿದರು. ತಮ್ಮ ಕಾನ್ವೆಂಟ್ ಕನ್ನಡದಲ್ಲಿ ಶುರು ಮಾಡಿದರು...
’ಪ್ರಿಯ ವೀಕ್ಷಕರೆ, ಹಲೋ ನಮ್ಸ್ಕಾರ, ಗುಡ್ ಎವೆನಿಂಗ್! ಆಕ್ಚುಯಲಿ ಇವತ್ತು ನಾನು ’ಬೊಂಬಾಟ್ ಸಿನೆಮಾ’ ಕಾರ್ಯಕ್ರಮಾನ ನಿಮ್ಮ ಮುಂದೆ ಇಡಬೇಕೂಂತಾನೇ ಇದ್ದೆ...ಬಟ್ ನಮ್ಮ ಎಡಿಟರ್ ಅರ್ಜೆಂಟಾಗಿ ರೈತರ ಬಗ್ಗೆ ಕಾರ್ಯಕ್ರಮ ಮಾಡು ಅಂತ ಇನ್ಸಿಸ್ಟ್ ಮಾಡಿದ್ರು. ಸೋ...ಇವತ್ತು ನಿಮ್ಮ ಬೊಂಬಾಟ್ ರೇಖಾ ನಿಮಗೆ ಇವತ್ತು ನಮ್ಮ ಫ಼ಾರ್ಮರ್ಸ್ ಗಳ ಲೈಫ್ ನಲ್ಲಿ ಏನಾಗ್ತಿದೆ ಅಂತ ಮನರಂಜನೆ ಮಾಡ್ತಿದ್ದೀನಿ...’ ಎಂದಳು. ಬೊಂಬಾಟ್ ರೇಖಾ ಬರೀ ಮನರಂಜನೆ ಕಾರ್ಯಕ್ರಮಗಳನ್ನು ಮಾತ್ರ ನಡೆಸಿಕೊಡುತ್ತಿದ್ದ ವಯ್ಯಾರಿ ರಿಪೋರ್ಟರ್. ಆಕೆಯ ಸಣ್ಣ ಪರ್ಮನೆಂಟ್ ಕನ್ನಡ ಶಬ್ಧಕೋಶದಲ್ಲಿ ಮನರಂಜನೆ ಎನ್ನುವ ಪದ ಮೊದಲ ಜಾಗದಲ್ಲಿತ್ತು. ಕ್ಯಾಮರಾ ಮುಂದೆ ನಿಂತಾಕ್ಷಣ ಆಕೆ ಮನರಂಜನೆ ಅನ್ನಲೇಬೇಕು, ಮಾಡಲೇಬೇಕು! ಪಾಪ, ರೈತರ ಬವಣೆ ಅವತ್ತು ಆಕೆಯ ಬಾಯಲ್ಲಿ ಮನರಂಜನೆ ಆಗಿತ್ತು. ಅದು ಅವಳ ತಪ್ಪಲ್ಲ. ಯಾಕೆಂದರೆ ಆಕೆಗೆ ’ಬವಣೆ’ ’ಬರಸಿಡಿಲು’ ಪದಗಳ ಸರಿಯಾದ ಅರ್ಥ ಗೊತ್ತಿರಲಿಲ್ಲ. ಹೇಳೀ ಕೇಳೀ ಆಕೆ ಬೊಂಬಾಟ್ ಸಿನೆಮಾ ರಿಪೋರ್ಟರ್.
ಕುಮಾರಿ ರೇಖಾ ಮನರಂಜನೆಯೆಂಬ ಪದವನ್ನು ಬಳಸಿದ್ದೇ ತಡ, ದೂರದ ಚಾಮರಾಜನಗರದಲ್ಲಿ ಹರಕು ಬಟ್ಟೆಯ ರೈತರನ್ನು ಕ್ಯಾಮೆರಾ ಮುಂದೆ ಸೇರಿಸಿಕೊಂಡು ಕೂತಿದ್ದ ಲೋಕಲ್ ರಿಪೋರ್ಟರ್ ಹೌಹಾರಿ ಹೋದ. ’ಇದೊಳ್ಳೆ ಕೆಲಸವಾಯಿತಲ್ಲಾ! ಬರದ ಬವಣೆಯ ಬಗ್ಗೆ ರೈತರನ್ನು ಮಾತನಾಡಿಸು ಅಂತ ಅಸೈನ್ಮೆಂಟ್ ಕೊಟ್ಟು ಈಗ ರೈತರ ಮನರಂಜನೆಯೆಂದು ಹೇಳುತ್ತಿದ್ದಾರಲ್ಲಾ! ನಾನು ಬೇರೆ ಮೂಳೆ ಚಕ್ಕಳ ಬಿಟ್ಟುಕೊಂಡು, ಹರಕು ಬಟ್ಟೆ ಹಾಕ್ಕೊಂಡಿರೋರನ್ನೇ ಆರಿಸಿಕೊಂಡು ಬಂದು ಕೂರ್ಸಿದೀನಿ...ಇವರಿಂದ ನಾನ್ಯಾವ ಮನರಂಜನೆ ಮಾಡಿಸಲಿ?!... ಬನ್ನಿ ನಿಮ್ಮ ಎಲ್ಲಾ ಕಷ್ಟಗಳನ್ನು ಮುಚ್ಚಿಡದೆ ನಮ್ಮ ಟಿವಿಯಲ್ಲಿ ಹೇಳಿಕೊಳ್ಳಿ...ಸರ್ಕಾರದಿಂದ ನಿಮಗೆ ಸಹಾಯ ಕೊಡಿಸುತ್ತೇನೆ ಎಂದು ಕರೆದುಕೊಂಡು ಬಂದಿರುವ ಇವರನ್ನೇನಾದರೂ ಈಗ ಹಾಡಿರಿ, ಕುಣಿಯಿರಿ ಎಂದರೆ ಅವರು ಹಾಕಿಕೊಂಡಿರುವ ಟೈರು ಚಪ್ಪಲಿಗಳಿಂದ್ಲೇ ನನಗೆ ಸೇವೆ ಮಾಡದು ಗ್ಯಾರಂಟಿ...’ ಎಂದು ಈಗೇನು ಮಾಡುವುದೆಂದು ಚಿಂತಾಕ್ರಾಂತನಾದರು.
ದೂರದ ಚಾಮರಾಜನಗರದಲ್ಲಿ ಬರದಿಂದ ಬಳಲುತ್ತಿರುವ ರೈತರು ’ಲೈವ್’ ಬರಲು ಕಾಯುತ್ತಿದ್ದಾರೆಂಬುದನ್ನು ಅರಿಯದ ಕಾನ್ವೆಂಟ್ ಕುಮಾರಿ ಬೊಂಬಾಟ್ ರೇಖಾ, ಸ್ಟುಡಿಯೋದಲ್ಲಿ ತನ್ನ ಮಾತನ್ನು ಮುಂದುವರೆಸುತ್ತಾ ’ವೀಕ್ಷಕರೇ, ನಮ್ಮ ಚಾಮರಾಜನಗರದ ರಿಪೋರ್ಟರ್ ಚಿಕ್ಕಮಾದು ಈಗ ಅಲ್ಲಿನ ಫ಼ಾರ್ಮರ್ಸ್ ಜೊತೆಗೆ ಇದಾರೆ. ಅವರು ನಿಮಗೆಲ್ಲಾ ಯಾವ ರೀತಿಯ ಪ್ರೊಗ್ರಾಂ ಕೊಡುತ್ತಾರೆ ನೋಡೋಣ ಬನ್ನಿ,’ ಎಂದು ’...ಸೋ, ಚಿಕ್ಕಮಾದು ಅವರೇ...ಏನಂತಾರೆ ನಿಮ್ಮ ಫ಼ಾರ್ಮರ್ಸ್? ಅವರಿಂದ ಯಾವ ತರದ ಕಾರ್ಯಕ್ರಮವನ್ನು ಮಾಡಿಸುತ್ತೀರಿ, ಈಗ ನಮ್ಮ ವೀಕ್ಷಕರಲ್ಲಾ ಕಾಯ್ತಿದಾರೆ’ ಎಂದರು.
ಮೊದಲೇ ಗಾಬರಿಯಾಗಿದ್ದ ರಿಪೋರ್ಟರ್ ಚಿಕ್ಕಮಾದುಗೆ ಈ ಕನ್ಫ್ಯೂಶನ್ ನಿಂದ ಸಿಟ್ಟು ಬಂದಿತ್ತು...’ಮೇಡಮ್ಮು, ನಾವು ಇಲ್ಲಿನ ಕೆಲವು ರೈತ್ರುನ್ನ ಇಲ್ಲಿ ಕೂರಿಸ್ಕಂಡಿದೀವಿ. ಅವ್ರು ತುಂಬಾ ಲಾಸಲ್ಲಿದಾರೆ. ಬರದಿಂದ ಬೆಂದು ಬಸವಳಿದಿರೂದ್ರಿಂದ ಅವರಿಗಾಗಿರೋ ನಷ್ಟನ ಮಾತ್ರ ನಮ್ಮ ಟಿವಿ ಜತೆ ಹೇಳ್ತರೆ,’ ಅಂದರು.
ಕುಮಾರಿ ರೇಖಾ...’ವೆರಿ ನೈಸ್, ವೆರಿ ನೈಸ್, ನೀವು ಗುಡ್ ವರ್ಕ್ ಮಾಡಿದ್ದೀರ. ಸೋ, ಈಗ ಯಾರು ಮೊದಲು ಏನು ಮಾಡ್ತರೆ...ಅವರನ್ನು ನಮ್ಮ ವೀಕ್ಷಕರಿಗೆ ಪರಿಚಯಿಸಿ ಪ್ಲೀಸ್’. ಎಂದಳು. ಇದು ನೇರ ಪ್ರಸಾರದ ಕಾರ್ಯಕ್ರಮವಾದ್ದರಿಂದ ಅವಳು ಮಾತು ನಿಲ್ಲಿಸಿದ ಕೂಡಲೇ ರೈತರತ್ತ ತಿರುಗಿದ ರಿಪೋರ್ಟರ್ ಚಿಕ್ಕಮಾದು ’ನಿಂಗ್ರಾಜು ಅವ್ರೇ, ನಿಮಗೆ ಬೆಳೆಯಿಂದ ಎಷ್ಟು ಲಾಸಾಯ್ತು? ಏನೇನು ಬೆಳೆ ಬೆಳೆದಿದ್ರಿ ಅದುನ್ನೆಲ್ಲಾ ಹೇಳೀ’ ಅಂದರು.
ಸುಮಾರು ಹೊತ್ತು ಕಾಯುತ್ತಾ ಕೂತಿದ್ದ ರೈತ ಟಿವಿ ಕ್ಯಾಮರಾ ಆನ್ ಆದ ಕೂಡಲೇ ಎದ್ದುನಿಂತು ತಲೆಗೆ ಸುತ್ತಿದ್ದ ಟವಲ್ ತೆಗೆದು ಜೋರಾಗಿ ವದರಿ ಮತ್ತೆ ರುಮಾಲಿನಂತೆ ತಲೆಗೆ ಸುತ್ತಿಕೊಂಡು ರಿಪೋರ್ಟರ್ ಚಿಕ್ಕಮಾದನ ಕೈಯಲ್ಲಿದ್ದ ಮೈಕನ್ನು ಕಿತ್ತುಕೊಂಡು ’ಅಲ್ಲಾ ಕಣಯ್ಯಾ, ಈಟೊತ್ತು ನಾವು ಮಾತಾಡುದ್ದ ಕೇಳಿ ಈಗ ಮತ್ತೆ ಕೇಳ್ತಿದ್ದಿಯಲ್ಲಾ ಇಷ್ಟೊತ್ತು ನಾವೇನ್ ಭಜನೆ ಮಾಡ್ತಿದ್ವಾ’ ಎಂದು ಕೋಪ ತೊರಿಸಿದ.
’ಕ್ಯೂ’ ಅನ್ನು ಕ್ವಿಕ್ ಆಗಿ ಪಿಕ್ ಮಾಡಿದ ನಿರೂಪಕಿ ರೇಖಾ ಕೂಡಲೇ ’ವೀಕ್ಷಕರೇ ಸೋ, ನಮ್ಮ ರೈತರು ಇದೀಗ ಭಜನೆ ಮಾಡಲಿದ್ದಾರೆ ನೀವೂ ಕೇಳಿ...ಎಂಜಾಯ್ ಮಾಡಿ...’ ಎಂದು ’ಚಿಕ್ಕಮಾದು ಅವರೇ ವೆರಿಗುಡ್. ನಿಮ್ಮ ಹಳ್ಳಿಯ ರೈತ್ರಿಂದ ನೀವು ಭಜನೆ ಮಾಡಿಸ್ತಾ ಇದ್ದೀರಾ. ರೈತರು ಟಿವಿಯಲ್ಲಿ ಲೈವ್ ಆಗಿ ಭಜನೆ ಮಾಡ್ತಿರೋದು ಇದೇ ಫಸ್ಟ್ ಟೈಮ್ ಅಂತ ನನ್ ಫೀಲಿಂಗ್...ವೆರಿಗುಡ್! ಯಾವ ಭಜನೆ ಮಾಡ್ತಾರಂತೆ ನಮ್ಮ ಫ಼ಾರ್ಮರ್ಸ್?’ ಎಂದರು.
ಈ ಕಡೆ ಕಷ್ಟ, ಕಾಯುವಿಕೆಯಿಂದ ಕೋಪ ಮಾಡಿಕೊಂಡಿರೋ ರೈತರು. ಆಕಡೆ ಕಾರ್ಯಕ್ರಮದ ಹಿನ್ನೆಲೆ ಗೊತ್ತಿಲ್ಲದೆ ಲೈವ್ ನಡೆಸಿಕೊಡಲು ಕೂತಿರುವ ಈಯಮ್ಮ. ಹಿಂಗೇ ಮುಂದುವರಿದ್ರೆ ತನಗೆ ಗೂಸಾ ಬೀಳುವುದು ಖಂಡಿತ ಎಂದುಕೊಂಡ ರಿಪೋರ್ಟರ್ ಚಿಕ್ಕಮಾದು ’ಮೇಡಮ್ಮು, ನಮ್ ರೈತ್ರು ಈ ಕಾರ್ಯಕ್ರಮ ಶುರುವಾಗಕೆ ಎರಡ್ ಗಂಟೆ ಮುಂಚೆನೇ ಬಂದು ಕೂತು ನನ್ಹತ್ರ ಅವರ ಕಷ್ಟ ಹೇಳ್ಕಂಡಿದಾರೆ. ಅವರು ತಾಳ್ಮೆ ಕಳೆದುಕೊಂಡು ಇಷ್ಟೊತ್ತು ನಾವೇನು ಭಜನೆ ಮಾಡುದ್ವಾ ಅಂತ ರೇಗಿದ್ದು... ಈಗ ಇಲ್ಲಿ ಭಜನೆ ಗಿಜನೆ ಏನೂ ಇಲ್ಲ. ನೀವು ಇಲ್ಲಿ ಅವರಿಗಾಗಿರುವ ನೋವು ಕೋಪಾನಾ ಗಮನಿಸಬೇಕು. ಅವರಿಗೆ ಎಲ್ಲರ ಮೇಲೆ ಎಷ್ಟು ಕೋಪ ಬಂದಿದೆ ಅಂದ್ರೆ ಅವರು ಈಗ್ಲೇ ಹೊಡೆದಾಟಕ್ಕಿಳಿಯಲೂ ಹಿಂದೆ ಬೀಳಲ್ಲ....ನೀವು ಅವರ ಮುಖ, ಆಕ್ಷನ್ ಅನ್ನು ಗಮನಿಸಬೇಕು....ಎಂದು ವಿವರಿಸಿದರು.
ಲೈವ್ ಪ್ರಸಾರದಲ್ಲಿ ಫುಲ್ ಸ್ಕ್ರೀನ್ ಅನ್ನು ಚಿಕ್ಕಮಾದುಗೆ ಕೊಟ್ಟಿದ್ದರಿಂದ ತನ್ನ ಟೈಮ್ ಬರುವವರೆಗೂ ಲಿಪ್ ಸ್ಟಿಕ್ ಸರಿ ಮಾಡಿಕೊಳ್ಳುತ್ತಿದ್ದ ನಿರೂಪಕಿ ಬೊಂಬಾಟ್ ರೇಖಾ ಅವರು ಆಕ್ಷನ್ ಪದ ಕೇಳಿದಾಗ ಮಾತ್ರ ಸ್ವಲ್ಪ ಅಲರ್ಟ್ ಆಗಿ, "ಒಕೆ ಚಿಕ್ಕಮಾದು ಅವರೇ ಆಕ್ಷನ್..’ ಎಂದರು.
ಅಯ್ಯೋ ನಿನ್ನಜ್ಜಿ---- ಎಂದು ಮನಸ್ಸಿನಲ್ಲೇ ಬೈದು ಹಲ್ಲುಕಚ್ಚಿಕೊಂಡ ಚಿಕ್ಕಮಾದು ’ಬನ್ನಿ ನಿಂಗ್ರಾಜು ಅವ್ರೇ...ನೀವು ಆಗ ಹೇಳಿಕೊಂಡಿದ್ದ ಕಷ್ಟವನ್ನ ಕ್ಯಾಮರಾ ಮುಂದೆ ಹೇಳಿ...ಅಲ್ಲಿ ಕೂತಿರೋ ಮಿನಿಷ್ಟ್ರೆಲ್ಲಾ ನೋಡ್ತಾರೆ’ ಅಂದ.
ಹಾಕಿದ್ದ ಬೆಳೆ ಕೈಗೆ ಹತ್ತಿರಲಿಲ್ಲ. ಸಾಲಗಾರರ ಕಾಟ, ಬ್ಯಾಂಕಿನವರ ಕಾಟ, ನಾಳೆ ಏನು ಮಾಡುವುದು ಎನ್ನುವುದೂ ಗೊತ್ತಾಗದೆ ’ಈ ಟಿವಿಯವ್ನು ಏನೋ ಸಹಾಯ ಮಾಡ್ತಿನಿ ಅಂದವ್ನಲ್ಲಾ ಅದೂ ನೋಡೇ ಬುಡಮ...’ ಅಂದುಕೊಂಡು ಅವನ ಮುಂದೆ ಗೋಳಾಡಿಕೊಂಡಿದ್ದ ರೈತ ನಿಂಗ್ರಾಜುಗೆ ಮಿನಿಷ್ಟ್ರು ಅಂದ ತಕ್ಷಣ ಎಲ್ಲಾ ಏರಿ ಬಿಟ್ಟಿತು. ನೆನ್ನೆಯಿಂದ ಖಾಲಿ ಹೊಟ್ಟೆ. ಬರೀ ಬೀಡಿ ಕುಡಿದು ಒಳಗೆಲ್ಲಾ ಉರೀತಿತ್ತು. ’ಮಿನಿಷ್ಟ್ರು ನೊಡ್ತಾರೆ’ ಅಂದ ಕೂಡಲೇ ನೆಗೆದುನಿಂತು ಸೆಟಗೊಂಡು ’ಯಾವ ಸೀಮೆ ಮಿನಿಶ್ಟ್ರು ಔನು? ಎಲ್ಲವ್ನೆ ತೋರ್ಸಿ...ಅವನ----, ನಾವಿಲ್ಲಿ ಇದ್ ಬದ್ನೆಲ್ಲಾ ಕಳ್ಕಂಡು ನೆಲ ಕೆರಿತಾ ಕೂತಿದಿವಿ. ಇಲ್ ಬಂದು ವಿಚಾರ್ಸಿ ನಮ್ಗೆ ಪರಿಹಾರ ಕೊಡದು ಬುಟ್ಟು ಅಲ್ಲಿ ನಿಮ್ ಟಿವಿ ರೂಮಲ್ಲಿ ಕೂತವ್ನಾ ಅವ್ನು...ಎಲ್ಲಿ ತೋರ್ಸಿ ಆ ಬೇ---ನಾ! ಕ್ಯಾಕರ್ಸಿ ಉಗಿತಿನಿ’ ಎಂದು ಕಿರುಚಾಡಿದ ಅವನ ಕೋಪಕ್ಕೆ ಮಿತಿಯಾಕಿರಬೇಕು?
ಆಕ್ಷನ್ ಚನ್ನಾಗಿದೆ ಎಂದು ಚಿಕ್ಕಮಾದು, ಕ್ಯಾಮೆರಾ ಮ್ಯಾನ್ ಇಬ್ಬರೂ ರೈತ ನಿಂಗ್ರಾಜನ ಕೋಪವನ್ನು ಶೂಟ್ ಮಾಡಿಕೊಳ್ಳುತ್ತಿದ್ದರು. ಆದರೆ ನೇರ ಪ್ರಸಾರದ ಕಾರ್ಯಕ್ರಮದಲ್ಲಿ ಅನಾಮತ್ ಆಗಿ ಸಂಸ್ಕೃತ ಪದಗಳು ಶುರುವಾಗಿದ್ದರಿಂದ ಗಾಬರಿಯಾದ ರಿಪೋರ್ಟರ್ ಚಿಕ್ಕಮಾದು ಅದನ್ನೇನಾದರೂ ಮಂತ್ರಿ ನೋಡಿದಲ್ಲಿ ತನ್ನ ಕೆಲಸಕ್ಕೂ ಕುತ್ತು ಎಂದು ಹೆದರಿ ಕೂಡಲೇ ರೈತನಿಂದ ಮೈಕ್ ಕಿತ್ತುಕೊಂಡು ’ಮೇಡಮ್ಮು, ನೀವು ಈಗ ಒಂದು ಬ್ರೇಕ್ ತಗಳ್ಳಿ, ಬ್ರೇಕ್ ಆದ್ಮೇಲೆ ನಾನು ಮತ್ತೆ ರೈತ್ರುನ್ನ ಮಾತಾಡುಸ್ತೀನಿ’ ಅಂದ. ಬ್ರೇಕ್ ಹೇಳಬೇಕಾದವಳು ನಾನು. ಇವನೇ ಹೇಳ್ತಿದ್ದಾನಲ್ಲಾ ಎಂದು ಗೊಣಗಿಕೊಂಡ ನಿರೂಪಕಿ ’ಓಕೆ, ಓಕೆ, ಚಿಕ್ಕಮಾದು...ಸೋ, ವೀಕ್ಷಕರೇ ಇದೀಗ ಒಂದು ಸ್ಮಾಲ್ ಬ್ರೇಕ್’ ಎಂದವಳೇ ವಾಟ್ ಇಸ್ ದಿಸ್ ಮ್ಯಾನ್? ಈ ಥರ ಪ್ರೋಗ್ರಾಂ ಕೊಟ್ಟುಬಿಟ್ಟಿದೀರಲ್ಲ ಎಂದು ಅಪ್ಸೆಟ್ ಮಾಡಿಕೊಂಡು ಮೇಕಪ್ ಬೆಂಚಿನತ್ತ ಓಡಿದರು.
ಬ್ರೇಕ್ ಸಮಯದಲ್ಲಿ ರೈತರೆಲ್ಲಾ ಚಿಕ್ಕಮಾದುವನ್ನು ಅಮರಿಕೋಂಡು ’ಅಲ್ಲಯ್ಯಾ ನಮುಗೆ ಸರ್ಕಾರ್ದಿಂದ ಪರಿಹಾರ ಕೊಡುಸ್ತೀನಿ ಅಂತೇಳಿ ಗಂಟೆಗಟ್ಲೆ ಇಲ್ಲಿ ಕೂರಿಸ್ಕಂಡು ಭಜ್ನೆ ಮಾಡಿ ಅಂತಿದ್ದೀಯಾ...ಏನಂದ್ಕಂಡಿದಿಯಾ?! ನಮಗೇನೂ ಬೇರೆ ಕ್ಯಾಮೆ ಇಲ್ವಾ...ನೋಡೂ...ನೀನು ನಮ್ಗೆ ಪರಿಹಾರ ಕೊಡುಸ್ಲಿಲ್ಲ ಅಂದ್ರೆ ನಿನ್ಕತೆ ನೆಟ್ಗಿರಕಿಲ್ಲಾ...ನಮ್ ಜೊತೆ ಏನ್ ಎಲ್ಲರೂ ತಮಾಸೆ ಅಂತ ಮಾಡೀದಿರಾ...’ ಎಂದು ಗುಟುರು ಹಾಕಿದ್ದರು. ಪಾಪ ರಿಪೋರ್ಟರ್ ಚಿಕ್ಕಮಾದು ಅವರನ್ನೆಲ್ಲಾ ಸಮಾಧಾನ ಪಡಿಸಿ ಮತ್ತೆ ಅವರನ್ನು ಮಾತನಾಡಿಸಲಿಕ್ಕೆ ತಾನು ಕಲಿತಿದ್ದ ವಿದ್ಯೆಯನ್ನೆಲ್ಲಾ ಖರ್ಚು ಮಾಡಿದ್ದ.
ಮೇಕ್ ಅಪ್ ಟಚಪ್ ಮಾಡಿಸಿಕೊಂಡು ಒಲ್ಲದ ಮನಸ್ಸಿನಿಂದ ಹಾಜರಾದ ನಿರೂಪಕಿ ’ಸೋ, ವೀಕ್ಷಕರೇ, ವೆಲ್ ಕಂ ಬ್ಯಾಕ್, ನಮ್ಮ ಫ಼ಾರ್ಮರ್ಸುಗಳಿಂದ ಇನ್ನೂ ಏನೇನಿದೆ...? ಎಂದು ಕೇಳಿದರು. 'ಅವರ ಜೀವನದಲ್ಲಿ ಈಗ ಬರೀ ಕಷ್ಟದ ಕಾಲ ಮೇಡಂ...ಬೆಳೆ ಕಳೆದುಕೊಂಡು ಮುಂದೆ ಏನು ಮಾಡಬೇಕು ಅಂತ ಗೊತ್ತಿಲ್ಲದೆ ನಮ್ಮ ಹತ್ತಿರ ಬಂದಿದರೆ...ನಮ್ ಮೂಲಕ ಜನರಿಗೆ, ಮಿನಿಸ್ಟ್ರುಗಳಿಗೆ ಅವರ ಕಷ್ಟ ತಲುಪಬೇಕು ಅಂತ ಅಂಗಲಾಚಿದಾರೆ ಮೇಡಂ... ’ ಚಿಕ್ಕಮಾದು ನ್ಯೂಸಿಗೆ ಪಂಚ್ ಕೊಡಲು ಎಲ್ಲಾ ಪ್ರಯತ್ನ ಮಾಡುತ್ತಿದ್ದರು.
’ಒಕೆ, ಒಕೆ ಚಿಕ್ಕಮಾದು ಅವರೇ ಸೋ, ನೀವು ಹೇಳಿದ್ದು ಸರಿ, ನಮ್ಮ ಫ಼ಾರ್ಮರ್ಸ್ ಕಷ್ಟ ಕೇಳಣ ಮೊದ್ಲು...’ ಎಂದು ವೀಕ್ಷಕರತ್ತ ತಿರುಗಿ ’ಸೋ, ವೀಕ್ಷಕರೇ, ನಮ್ಮ ಫ಼ಾರ್ಮರ್ಸ್ ಏನ್ ಕಷ್ಟ ಹೇಳ್ತರೆ ನೀವೂ ಕೇಳಿ’ ಎಂದರು. ರಿಪೋರ್ಟರ್ ಚಿಕ್ಕಮಾದು ತನ್ನು ಮೈಕನ್ನು ಮತ್ತೊಬ್ಬ ರೈತನ ಮುಂದೆ ಹಿಡಿದು ’ನಿಮ್ಮ ಬೆಳೆ ನಾಶವಾದ್ದರಿಂದ ನಿಮಗೆಲ್ಲಾ ಎಷ್ಟು ಎಷ್ಟು ನಷ್ಟವಾಯ್ತು ಅಂತ ಹೇಳಿ’ ಅಂದರು.
ಕ್ಯಾಮೆರಾ ಮುಂದೆ ಕೂತು ’ಆಗ ಮಾತಾಡಿ, ಈಗ ಮಾತಾಡಿ, ಅದ್ನ ಮಾತಾಡಿ, ಹಿಂಗೆ ಮಾತಾಡಿ...’ ಅನ್ನಿಸಿಕೊಂಡು ಸಾಕಾಗಿದ್ದ ಮಾದೇವಪ್ಪನೆಂಬ ರೈತ ಮೈಕನ್ನು ಎಳೆದುಕೊಂಡು ’ನಾವು ಬೆಳ್ದಿದ್ದ ಅವರೇಕಾಯಿಗೆಲ್ಲ ರೋಗ ಒಡ್ದು ಕಾಯೂ ಸಿಕ್ನಿಲ್ಲ, ಸರೀಗ್ ಬೆಲೆನೂ ಬರ್ನಿಲ್ಲ... ರೋಗಕ್ ಔಸ್ದಿನೂ ಸಿಗ್ನಿಲ್ಲ...ಸಿಕ್ರೂ ಎಂಗ್ ತಗಳದು...ಆ ಪಾಟಿ ಬೆಲೆ...ರೋಗ ತಡ್ಯಕೆ ನಾವು ಒಲ್ಕೆಲ್ಲಾ ಬೆಂಕಿ ಆಕಿದಿವಿ. ಸಾವ್ರಾರ್ ರುಪಾಯ್ ಲುಕ್ಸಾನಾಗೈತೆ...ನಾವೇನ್ ತಿನ್ನದು...ನಮ್ಗಾಗಿರೋ ಲುಕ್ಸಾನು ಸರ್ಕಾರ ತುಂಬ್ಕೊಡ್ ಬೇಕು...ನಮ್ಗೆ ಇಲ್ಲಿ ಬಾರಿ ಕಷ್ಟ ಆಗೈತೆ...ಮಕ್ಳು ಮರಿ ಎಲ್ಲ ಬೀದಿಗ್ ಬರಂಗಾಗೈತೆ...’ ಮಾದೇವಪ್ಪಾ ಮಾತಾಡುತ್ತಾ ಕೋಪದ ಕಣ್ಣೀರು ಹಾಕಿದರು.
ಗುಡ್! ಟಿವಿ ಮುಂದೆ ಅಳುತ್ತಿರುವ ಬಡಕಲು ರೈತ! ನನಗೆ ಏರಿಯಾ ಚೀಫ್ ಆಗಿ ಪ್ರೊಮೋಷನ್ ಸಿಕ್ಕಿದರೂ ಸಿಗಬಹುದು ಅಂತ ಮನಸ್ಸಲ್ಲೇ ಮಂಡಿಗೆ ತಿನ್ನುತ್ತಾ ಆ ರೈತನ ಕೈಯಲ್ಲಿದ್ದ ಮೈಕನ್ನು ತೆಗೆದುಕೊಂಡ ರಿಪೋರ್ಟರ್ ಚಿಕ್ಕಮಾದು ’ಮೇಡಮ್ಮು, ಇಲ್ಲಿನ ರೈತರು ಹೊಲದಲ್ಲಿ ಅವರೇಕಾಯಿ ಬೆಳೆದಿದ್ರು...ಅವರೇಕಾಯಿಗೆಲ್ಲಾ ಹುಳ ಹಿಡ್ದು..ಹೊಲಕ್ಕೆ ಹೊಲಾನೇ ಹಾಳಾಗೋಗಿದೆ. ಇವ್ರಿಗೆಲ್ಲಾ ತುಂಬಾ ಲಾಸಾಗಿದೆ. ರೋಗ ಅಬ್ಬದು ನಿಲ್ಸಕೆ ಹಿವ್ರೆಲ್ಲಾ ಗಿಡಗಳನ್ನು ಕಿತ್ತಾಕಿ ಬೆಂಕಿ ಆಕಿದಾರೆ...ಸರ್ಕಾರ ಸೂಕ್ತ ಪರಿಹಾರ ಕೊಡ್ಬೇಕು ಅಂತ ಈ ರೈತ್ರೆಲ್ಲಾ ಡಿ ಸಿ ಆಫೀಸಿನ ಮುಂದೆ ಸ್ಟ್ರೈಕ್ ಮಾಡಲು ಹೊರಟಿದ್ದಾರೆ ಮೇಡಮ್ಮು’ ಅಂದ.
ಇದನ್ನು ಕೇಳಿ ಆಶ್ಚರ್ಯ ಚಕಿತರಾದ ಬೊಂಬಾಟ್ ರೇಖಾ ’ವಾಟ್!!! ಅವರೇಕಾಯಿ ಮರಗಳನ್ನೆಲ್ಲಾ ಕಡಿದು ಹಾಕಿದಾರ?! ಅದು ತಪ್ಪಲ್ವಾ ಚಿಕ್ಕಮಾದು! ರೋಗ ಬಂದಿದ್ರೆ ಅದನ್ನು ಬಿಟ್ಟುಬಿಡಬಹುದಿತ್ತಲ್ವಾ...ಈ ವರ್ಷ ಅವರೇಕಾಯಿ ಬಿಡದಿದ್ರೆ ಮುಂದಿನ ವರ್ಷನಾದ್ರೂ ಬಿಡುತ್ತಿದ್ದವಲ್ಲಾ! ಅವರೇಕಾಯಿ ಮರಗಳನ್ನೆಲ್ಲಾ ಕಡಿದು ಬೆಂಕಿ ಹಾಕಿರುವುದು ಅಪರಾಧ ಅಲ್ವಾ ಚಿಕ್ಕಮಾದು, ಇವರು ಆ ಅವರೇಕಾಯಿ ಮರಗಳನ್ನೆಲ್ಲಾ ಕಡಿದು ಹಾಕಿದ್ರೂ ನಮ್ಮ ಫ಼ಾರೆಸ್ಟ್ ಡಿಪಾರ್ಟ್ಮೆಂಟಿನೋರು ಸುಮ್ಮನಿದ್ದಾರಾ?! ನೆಗಡಿ ಬಂದ್ರೆ ಮೂಗನ್ನೇ ಕಟ್ ಮಾಡಕಾಗುತ್ತಾ? ಇವರು ಫಾರ್ಮರ್ಸ್ ಆಗಿ ಹೀಗೆ ಮಾದಬಹುದಾ?! ಇವರ ಎಗೈನ್ಸ್ಟ್ಕೂಡಾ ಆಕ್ಷನ್ ತೊಗೋಬೇಕು ತಾನೇ? ಎಲ್ಲಾ ಫಾರ್ಮರ್ಸೂ ಇವರ ತರಾನೇ ಮಾಡಿದರೆ ಸಿಟಿಯವರಿಗೆ ಮುಂದಿನ ವರ್ಷ ಅವರೇಕಾಯಿಯೇ ಸಿಗುವುದಿಲ್ಲವಲ್ಲಾ...ಆಗ ಅವರೆಕಾಯಿ ಪರಸೆ ಹೇಗೆ ಆಗುತ್ತೆ?! ಇವರ ಲಾಸಿನ ಜೊತೆಗೇ ನಾವು ಮೊದಲು ಆ ಅವರೇಕಾಯಿ ಮರಗಳನ್ನು ಸೇಫ಼್ ಮಾಡಬೇಕಾಗಿದೆ ಚಿಕ್ಕಮಾದು, ಮರಗಳನ್ನು ಕಡಿದು ಕ್ರೈಮ್ ಮಾಡಿರುವ ಆ ಫ಼ಾರ್ಮರ್ಸು ಅದಕ್ಕಾಗಿ ಪರಿಹಾರವನ್ನೂ ಕೇಳ್ತಿರೋದು ಶೇಮ್!!!...’ ತನಗೆ ಸಿಕ್ಕಿದ ಅಮೂಲ್ಯ ಏರ್ ಟೈಮ್ ನಲ್ಲಿ ಚೂರಾದರೂ ಮಿಂಚಬೇಕು ಅಂತ ಬೊಂಬಾಟ್ ರೇಖಾ ಅವರು ಅತ್ಯಂತ ಆವೇಶದಲ್ಲಿ ಮಾತಾಡಿಬಿಟ್ಟರು.
ನಡೆಸಿಕೊಡುತ್ತಿರುವ ಕಾರ್ಯಕ್ರಮಗಳೇನಾದ್ರೂ ಕ್ರಾಸ್ ಕನೆಕ್ಷನ್ ಆಗಿಬಿಟ್ಟಿದೆಯಾ ಎಂಬಂತೆ ಹೌಹಾರಿದ ರಿಪೋರ್ಟರ್ ...’ಮೇಡಮ್ಮು...ಅವರೆಕಾಯಿ ಮರದಲ್ಲಿ ಬಿಡುವುದಿಲ್ಲ, ಗಿಡದಲ್ಲಿ ಬಿಡುತ್ತೆ...’ ಅಂದು ’ದಯವಿಟ್ಟು ಅರ್ಜೆಂಟಾಗಿ ಒಂದು ಬ್ರೇಕ್’ ಎಂದು ಕೈಮುಗಿದುಕೊಂಡು ನಿರೂಪಕಿ ಬ್ರೇಕ್ ಕೊಡುವ ಮುನ್ನವೇ ಕ್ಯಾಮೆರಾಮ್ಯಾನ್ ಅನ್ನೂ ಕರೆದುಕೊಂಡು ಅಲ್ಲಿ ಸೇರಿದ್ದ ರೈತರಿಗೆಲ್ಲ ಕೈ ಮುಗಿದು ’ಈಗ ಬಂದೆ ಕಣ್ರಣ್ಣಾ ಒಂದಕ್ಕ್ ಹೋಗಿ ಬರ್ತೀವಿ’ ಅಂತ ಬೇಡಿಕೊಂಡು ಆ ಕಾನ್ವೆಂಟ್ ಕುಮಾರಿಗೆ ಉಪ್ಪಿನಕಾಯಿ ಹಾಕುತ್ತಾ ಅಲ್ಲಿದ್ದ ಜನರ ಗುಂಪಿಂದ ಜಾರಿಕೊಂಡು ಮಾಯವಾದ.
ಬ್ರೇಕ್ ಮುಗಿದಾದ ಮೇಲೆ ಆ ಕಡೆಯಿಂದ ಉತ್ತರವಿಲ್ಲದ್ದು ನೋಡಿ ಕುಮಾರಿ ಬೊಂಬಾಟ್ ರೇಖಾ ’ಸೋ ವೀಕ್ಷಕರೇ ಇದು ಇವತ್ತಿನ ನಮ್ಮ ಬ್ರೇಕಿಂಗ್ ನ್ಯೂಸ್. ನೆಗಡಿ ಬಂದ್ರೆ ಮೂಗ್ನೇ ಕಟ್ ಮಾಡಕಾಗುತ್ತಾ? ನೆಗಡಿ ಬರೋದು ತಪ್ಪೋ, ಮೂಗು ಕಟ್ ಮಾಡೋದು ತಪ್ಪೋ? ವಾಟ್ ಇಸ್ ರಾಂಗ್? ಹೂ ಶುಡ್ ಬೆ ಪನಿಶ್ಡ್? ನಮ್ಮ ಫರ್ಮರ್ಸ್ ಒಂದು ಇಂಟರೆಸ್ಟಿಂಗ್ ಸ್ಟೋರಿ ಕೊಟ್ಟಿದಾರೆ. ಒಂದು ಕಪ್ ಬಿಸಿ ಕಾಫಿ ಕುಡಿತಾ ನೀವೂ ಥಿಂಕ್ ಮಾಡಿ. ನೆಕ್ಸ್ಟ್ ಟೈಮ್ ಹೊಸಾ ಸ್ಟೋರಿ ಜೊತೆ...ನಿಮ್ಮನೆಗೆ ಬಂದೇ ಬರ್ತಿನಿ...ಬೊಂಬಾಟ್ ರೇಖಾ ಅಂತ ಪ್ರಾಮಿಸ್ ಮಾಡ್ತಾ..ನಮ್ಸ್ಕಾರ, ಗುಡ್ ಇವನಿಂಗ್, ಬಾಯ್ ಬಾಯ್!’ ಎಂದು ಕೈ ಮುಗಿದು ಮುಗಿಸಿಕೊಟ್ಟರು.
ಸೂಪರ್ ಆಗಿ ಕಾರ್ಯಕ್ರಮ ಮುಗಿಸಿದೆ ಎಂದು ಕುಮಾರಿ ಬೊಂಬಾಟ್ ರೇಖಾ ಡೆಸ್ಕಿನಿಂದೆದ್ದು ಎದುರಿಗಿದ್ದ ಸ್ಟುಡಿಯೋ ಕ್ಯಾಮೆರಾಮ್ಯಾನ್ ಅನ್ನು ’ಅವರೆಕಾಯಿ ಗಿಡದಲ್ಲಿ ಬಿಡುತ್ತೇನೋ?’ ಅಂತ ಕೇಳಿ ಕನ್ಫರ್ಮ್ ಮಾಡಿಕೊಳ್ಳುತ್ತಾ ವ್ಯಾಲೆಂಟೈನ್ ಪಾರ್ಟಿಗೆ ಲೇಟ್ ಆಗಿ ಬಿಡಬಾರದೆಂದು ಹಾಗೇ ನೇರವಾಗಿ ಪಾರ್ಟಿಗೆ ಹೊರಟರು...
ಟಿವಿ ನೋಡುತ್ತಾ ಅವರೆಕಾಳು ಚಿಲುಕಿಸುತ್ತಿದ್ದ ಕಾನ್ವೆಂಟ್ ಶಾಲೆಯ ಮಿಸ್ ಒಬ್ಬರು ಅವರೆಕಾಯಿ ಗಿಡದಲ್ಲಿ ಬಿಡುತ್ತೋ ಮರದಲ್ಲಿ ಬಿಡುತ್ತೋ ಅಂತ ನಾಳೆ ಮಕ್ಕಳಿಗೆ ಕ್ವಿಜ಼್ ಮಾಡಬೇಕು ಅಂತ ಪಾಯಿಂಟ್ಸ್ ಹಾಕಿಕೊಂಡರು. ನೀವೂ ಬೇಕಾದ್ರೆ ನಿಮ್ಮ ಮಕ್ಕಳಿಗೆ ಕ್ವಿಜ಼್ ಮಾಡಿಕೊಳ್ಳುತ್ತಾ ಬಿಸಿ ಬಿಸಿ ಅವರೆಕಾಳು ಉಸಲಿ ಮಾಡಿಕೊಂಡು ತಿನ್ನುತ್ತಾ ಮುಂದಿನ ಮೀಡಿಯಾ ಮೇನಿಯಾವರೆಗೂ ಕಾಯುತ್ತಿರಿ ಎನ್ನುತ್ತಾ...
ಸಹನಾ ಅಪ್ಡೇಟ್: ಯಡಿಯೂರಪ್ಪ ’ದೇವ ಮಾತೆ’ಯರನ್ನು ಮೀಟ್ ಮಾಡ್ತಿದ್ದಾಗ...ಸವದಿ, ಪಾಟೀಲ್, ಪಾಲೆಮಾರ್ ಗಳು ಸದನಕ್ಕೇ ’ಬ್ಲೂ’ ಕನ್ಯೆಯರನ್ನು ಕರೆಸಿಕೊಂಡಿದ್ರಂತೆ! |
ಕರ್ನಾಟಕ ಇತ್ತೀಚೆಗೆ ದೇಶ-ವಿದೇಶದಾದ್ಯಂತ ಮಾಡ್ತಾ ಇರೋ ದಾಖಲೆಗಳನ್ನ ಬರೆದು ಸಾಕಾಗಿ ಹೋಗ್ತಿದೆ. ಯಾಕೋ ಕರ್ನಾಟಕದ ಟೈಮ್ ಸರಿಯಿಲ್ಲ, ’ಗರಿಮೆ’ ಗಳು ನಿಲ್ತಾನೇ ಇಲ್ಲ. ಮೊನ್ನೆ ಮೊನ್ನೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವ ಸಿ ಸಿ ಪಾಟೀಲ್, ಸಚಿವರಾದ ಲಕ್ಷ್ಮಣ ಸನದಿ ಮತ್ತೆ ಕೃಷ್ಣ ಪಾಲೇಮಾರ್ ಸದನ ನಡೆಯುವಾಗಲೇ ತಮ್ಮ ಸೆಲ್ ಫೋನ್ ನಲ್ಲಿ ಅಶ್ಲೀಲ ವಿಡಿಯೋಗಳನ್ನು ಪೋಕರಿಗಳಿಗಿಂತ ಹೆಚ್ಚಾಗಿ ಆಸಕ್ತಿಯಿಂದ ನೋಡೋದೂ ಅಲ್ದೇ ಮಾಧ್ಯಮದ ಕ್ಯಾಮೆರಾ ಕಣ್ಣಿಗೆ ಸಿಕ್ ಹಾಕಿಕೊಂಡು ತಮ್ಮ ಮಾನ ಮರ್ಯಾದೆಗಳನ್ನು ಹರಾಜು ಹಾಕಿಕೊಳ್ಳೋ ಜೊತೆಗೆ ಕರ್ನಾಟಕದ ಮಾನವನ್ನೂ ತೆಗೆದಿದ್ದಾರೆ. ಕರ್ನಾಟಕದ ಮಟ್ಟಿಗೆ ಈ ರೀತಿಯ ಅಸಹ್ಯ ಇದೇ ಮೊದಲಿನದ್ದು.
ಮಾಡಿದ ಕೆಲಸಾನ ಒಪ್ಪಿಕೊಂಡು ಸುಮ್ಮನೆ ಸಚಿವ ಸ್ಥಾನ ಶಾಸಕ ಸ್ಥಾನ ಬಿಟ್ಟುಕೊಟ್ಟು ಮರ್ಯಾದೆ ಹುಡುಕೋ ಬದಲು ’ನಾವು ರೇಪ್ ಕೇಸಿಗೆ ಸಂಬಂಧ ಪಟ್ಟ ವಿಡಿಯೋ ನೋಡ್ತಿದ್ವಿ’ ಅಂತ ಸಮಜಾಯಿಷಿ ಕೊಟ್ಟಿದಾರೆ! ಇವರಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ತಗೊಂಡಿದ್ದೇನೋ ಆಗಿದೆ, ಈಗ ಶಾಸಕರ ಸ್ಥಾನದಿಂದಲೂ ತೆಗೆಯಬೇಕು ಎನ್ನುವ ಚರ್ಚೆ. ತಮ್ಮ ಸಚಿವರನ್ನ ಸಚಿವ ಸ್ಥಾನದಿಂದ ಕೈ ಬಿಡಬಾರದು ಅಂತ ಯಡಿಯೂರಪ್ಪನವರು ತುಂಬಾನೇ ಟ್ರೈ ಮಾಡಿದರು ಬಿಡಿ. ಇವರು ಶಾಸಕರ ಸ್ಥಾನ ಕಳೆದುಕೊಂಡ್ರೆ ಯಡ್ಡಿ ಬಣದ ಸಂಖ್ಯೆ ಕಮ್ಮಿಯಾಗಿಬಿಡುತ್ತೆ ಅನ್ನೋ ಯೋಚನೆ ಅವರದ್ದು. ಯೋಚನೆ ಮಾಡಿ, ಸದನದಲ್ಲಿ ಕೂತು ನಾಚಿಕೆಗೇಡಿನ ಕೆಲಸ ಮಾಡುವ ಇಂಥವರು ಇನ್ನೂ ನಮಗೆ ಬೇಕಾ?
ರಾಜ್ಯ ರಾಜಕಾರಣದ ಕೇಂದ್ರ ಬಿಂದು ಯಡಿಯೂರಪ್ಪ ಹತಾಶರಾಗಿದ್ದಾರೆ. ಏಟಿನ ಮೇಲೆ ಏಟು ಅವರಿಗೆ. ಅವರಿಗೀಗ ದೇವರಾಜ್ ಅರಸು, ಬಂಗಾರಪ್ಪ ಅವರ ಸಾಹಸಗಳು ನೆನೆಪಿಗೆ ಬರುತ್ತಿವೆ, ಕಾಡುತ್ತಿವೆ. ಈಗವರಿಗೆ ಅಧಿಕಾರ ಬಿಟ್ಟು ಇರಲಾಗುತ್ತಿಲ್ಲ. ಮಾಜಿ ಮುಖ್ಯಮಂತ್ರಿ ಅನ್ನಿಸಿಕೊಳ್ಳಲು ಅವರ ಮನಸ್ಸು ಒಪ್ಪುತ್ತಿಲ್ಲ. ಶತಾಯ, ಗತಾಯ ಮತ್ತೆ ಅಧಿಕಾರ ಹಿಡಿಯಲೇ ಬೇಕು ಎಂಬ ಹಟಕ್ಕೆ ಬಿದ್ದಿದ್ದಾರೆ.
ಮುಖ್ಯಮಂತ್ರಿ ಸದಾನಂದಗೌಡರು ಈಗ ಸ್ವಲ್ಪ ಸ್ಟ್ರಾಂಗ್ ಆಗುತ್ತಿರುವುದರಿಂದ ತಮ್ಮ ಕೆಲಸಗಳನ್ನು ಮಾಡಿಸಲು ಸದಾನಂದಗೌಡರ ಮುಂದೆ ಅಂಗಲಾಚುವ ಮನಸ್ತಿತಿ ಅವರಿಗಿಲ್ಲ. ತಾವಂದುಕೊಂಡಂತೆ ಎಲ್ಲವೂ ನಡೆಯುತ್ತಿಲ್ಲ ಅನ್ನೋ ನಿರ್ಧಾರಕ್ಕೆ ಬಂದುಬಿಟ್ಟಿದ್ದಾರೆ. ಹಾಗಾಗಿ ಅವರಿಗೀಗ ಸದಾನಂದ ಗೌಡರ ಮೇಲೆ ಪ್ರೀತಿಯಾಗಲಿ, ನಂಬಿಕೆಯಾಗಲಿ, ನನ್ನ ಗುಂಪಿನವನು ಎಂಬ ವ್ಯಾಮೋಹವಾಗಲಿ ಖಂಡಿತ ಉಳಿದುಕೊಂಡಿಲ್ಲ. ಜೊತೆಯಲ್ಲಿರುವ ಬೆಂಬಲಿಗರು ಎಷ್ಟು ದಿನ ಹೀಗೇ ಇರುತ್ತಾರೆ ಅನ್ನೋದನ್ನ ಹೆಚ್ಚು ದಿನ ನಂಬಲಿಕ್ಕೆ ಸಾದ್ಯವಿಲ್ಲ.ಆದರೂ ರಾಜ್ಯ ಬಿಜೆಪಿಯಲ್ಲಿ ನನ್ನದು ನಡೆಯುತ್ತೆ ಅನ್ನೋದನ್ನು ತೊರಿಸಲಿಕ್ಕಾದರು ಅನಿವಾರ್ಯವಾಗಿ ಗುಟುರು ಹಾಕಲೇಬೇಕಾಗಿದೆ. ಅದಕ್ಕೆಂದೇ ತಮ್ಮ ಶಿಷ್ಯ ಪಡೆಯನ್ನು ಜೊತೆಗಿಟ್ಟುಕೊಳ್ಳಬೇಕಿದೆ. ಆಗಾಗ ರೇಣುಕಾಚಾರ್ಯ ಸಿಎಂ ವಿರುದ್ದ ಗುಟುರು ಹಾಕುವುದೇ ಆಕಾರಣಕ್ಕೆ.
ಮುಂದಿನ ಚುನಾವಣೆವರೆಗೂ ಯಡಿಯೂರಪ್ಪ ತಮ್ಮ ಐಡೆಂಟಿಟಿಯನ್ನ ಉಳಿಸಿಕೊಳ್ಳಬೇಕು. ಇಲ್ಲದ್ದಿದ್ದರೆ ಜನ ನನ್ನ ಮರೆತು ಬಿಡ್ತಾರೆ ಅನ್ನೋ ಭಯ ಯಡಿಯೂರಪ್ಪ ಅವರಿಗಿದೆ. ಆದ್ದರಿಂದಲೇ ಅವರು ಸುಮ್ಮನೆ ಕೂರ್ಲಿಕ್ಕೆ ಆಗ್ತಿಲ್ಲ! ಮಾರ್ಚ್ ತಿಂಗಳಲ್ಲಿ ನಾನೇ ಬಜೆಟ್ ಮಂಡಿಸುತ್ತೇನೆ ಎಂಬ ಕಳೆದ ಆರು ತಿಂಗಳ ಮಹತ್ವಾಕಾಂಕ್ಷೆಯ ಆಸೆ ಮಕಾಡೆ ಮಲಗಿದೆ. ಆದರೂ ಬಿಜೆಪಿಯನ್ನು ಬಿಡಲು ಸದ್ಯ ಯಡಿಯೂರಪ್ಪ ರೆಡಿ ಇಲ್ಲ ಅನ್ನೋದು ಕೆಲವರ ಉಹೆ. ನಂಬಿದ ಜಾತಿ ಜನ ನನ್ನ ಕೈ ಬಿಡಲ್ಲ ಅನ್ನೋ ಖಾತರಿ ಮೇಲೆ ಅವರು ಮುಗುಂ ಆಗಿ ತಮ್ಮ ಕಾರ್ಯಾಚರಣೆ ನಡೆಸತೊಡಗಿರುವುದನ್ನು ಅಲ್ಲಗಳೆಯಲು ಸಾಧ್ಯವೇ ಇಲ್ಲ. ಅವರಿಗೀಗ ನಾನಿಲ್ಲದಿದ್ದರೆ ಬಿಜೆಪಿ ಇಲ್ಲ ಎಂಬ ಭ್ರಮೆ ಆವರಿಸಿಕೊಂಡಿದೆ. ಹಾಗಾಗಿ ಅದನ್ನು ತೋರಿಸಲಿಕ್ಕೆ ಸರಿಯಾದ ಮುಹೂರ್ತ ಫಿಕ್ಸ್ ಮಾಡಲು ಕಾಯುತ್ತಿರುವುದಂತು ನಿಜ. ಮಾರ್ಚ್-ಏಪ್ರಿಲ್ ಮೊದಲ ವಾರದ ವೇಳೆಗೆ ಪಂಜಾಬ್, ಯುಪಿ, ಮಣಿಪುರ, ಉತ್ತರಖಂಡ್, ಗೋವಾ ರಾಜ್ಯಗಳ ಚುನಾವಣೆ ಮುಗಿಯಲಿದ್ದು ಆನಂತರವಷ್ಟೇ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪನವರ ಕಷ್ಟ ಕೇಳಬಹುದು. ಇಲ್ಲದ್ದಿದ್ದರೆ ಕೋರ್ಟು-ಕಚೇರಿ ವ್ಯವಹಾರ ಮುಗಿಸಿಕೊಳ್ಳುವವರೆಗೂ ತೆಪ್ಪಗಿರಿ ಎನ್ನಬಹುದು. ಈಗಿನ ಸ್ಥಿತಿಯಲ್ಲಿ ಯಡಿಯೂರಪ್ಪನವರಿಗೆ ಮಣೆ ಹಾಕುವ ಮನಸ್ತಿತಿ ಹೈಕಮಾಂಡ್ ನಲ್ಲೂ ಕಂಡು ಬರುತ್ತಿಲ್ಲ.
ಈಗಾಗಲೇ ಯುಪಿ ಯಲ್ಲಿ ಕಲ್ಯಾಣ್ ಸಿಂಗ್, ಮಧ್ಯಪ್ರದೇಶ್ ನಲ್ಲಿ ಉಮಾ ಭಾರತಿ, ದೆಹಲಿಯ ಮದನ್ ಲಾಲ್ ಖುರಾನ ಹಾಗೂ ರಾಜಸ್ತಾನದ ವಸುಂದರ ರಾಜೆ ಸಿಂಧ್ಯ ಸೇರಿದಂತೆ ಉತ್ತರ ಭಾರತದ ಘಟಾನುಘಟಿ ನಾಯಕರಿಗೆ ಪಾಠ ಕಲಿಸಿದ, ಅವರ ಆಟಕ್ಕೆ ಕೇರ್ ಮಾಡದ ಬಿಜೆಪಿ ಹೈಕಮಾಂಡ್ ದಕ್ಷಿಣದಲ್ಲಿ ಯಡಿಯೂರಪ್ಪನವರ ಆಟಕ್ಕೆ ಕೇರ್ ಮಾಡುತ್ತೆ ಅನ್ನೋದು ಸಧ್ಯದ ಪರಿಸ್ಥಿತಿಯಲ್ಲಿ ಕನಸಿನ ಮಾತು. ಇದೆಲ್ಲ ಯಡಿಯೂರಪ್ಪ ಅವರಿಗೆ ಗೊತ್ತಿಲ್ಲದ ವಿಚಾರ ಏನಲ್ಲ. ಉತ್ತರ ಭಾರತದ ಕತೆ ಕಟ್ಟಿಕೊಂಡು ನನಗೇನು ಅನ್ನೋದು ಅವರ ಲೆಕ್ಕಾಚಾರ. ಕರ್ನಾಟಕದ ಲಿಂಗಾಯಿತ ವರ್ಗ ಸಂಪೂರ್ಣವಾಗಿ ನನಗೆ ಬೆಂಬಲಿಸುತ್ತದೆ ಅನ್ನೋದು ಯಡಿಯೂರಪ್ಪನವರ ವಾದ. ಆದ್ದರಿಂದಲೇ ಬಿಜೆಪಿ ನಾಯಕರು ನನ್ನ ಮಾತು ಕೇಳದಿದ್ದರೆ ಸರ್ಕಾರ ಉಳಿಯುವುದಿಲ್ಲ ಎಂದು ಅವರು ಗುಟುರು ಹಾಕುತ್ತಿರುವುದು.
ಮನುಷ್ಯನ ಬಗ್ಗೆ ನಂಬಿಕೆ ಕಳೆದುಕೊಂಡಾಗ ದೇವರೇ ಗತಿ. ಅದರಲ್ಲಿ ಎರಡು ಮಾತಿಲ್ಲ. ಆದ್ದರಿಂದಲೇ ಯಡ್ಡಿ ರಾಜ್ಯದ ಮೂಲೆ ಮೂಲೆ ಸುತ್ತಿ ಯಾಗ ಯಜ್ಞ ಗಳನ್ನೆಲ್ಲ ಪೂರೈಸಿ ಬಿಟ್ಟಿದ್ದಾರೆ! ಅದೇನಿದ್ದರು ಮುಂದೆ ವರ್ಕೌಟ್ ಆಗಬೇಕು. ಅದ್ಯಾವ ಕಾಲಕ್ಕೆ ಆಗುತ್ತೆ ಅಂತ ಬಹುಶ ಜ್ಯೋತಿಷಿಗಳು ಈಗಾಗಲೇ ಪಿಸುಮಾತು ನುಡಿದಿದ್ದಾರೆ. ಈಗ ಜ್ಯೋತಿಷಿಗಳೇ ಅತ್ಯಂತ ಆಪ್ತರು, ನಂಬಿಕಸ್ತರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ! ಸಧ್ಯಕ್ಕೆ ಯಡಿಯೂರಪ್ಪ ಇನ್ನೇನಿದ್ದರೂ ಮೌನವಾಗಿದ್ದರೆ ಮಾತ್ರ ಬಿಜೆಪಿಯಲ್ಲಿ ಅವರಿಗೆ ಭವಿಷ್ಯ ಅನ್ನೋದು ಅವರ ವಿರೋಧಿ ಪಾಳೆಯದ ಮಾತು. ಇದನ್ನೆಲ್ಲಾ ಕೇಳಿಕೊಂಡು ಸುಮ್ಮನಿರಲು ಯಡಿಯೂರಪ್ಪ ಅವರೇನು ಮಗುವಲ್ಲ. ಅವರಿಗ ಬಿಜೆಪಿ ರಾಷ್ಟ್ರೀಯ ನಾಯಕರ ವಿರುದ್ದ ತಿರುಗಿಬಿಳುವ ನಿರ್ಧಾರದಲ್ಲಂತೂ ಇದ್ದಾರೆ. ಮಾಜಿ ಮುಖ್ಯಮಂತ್ರಿಗಳಾದ ದೇವರಾಜ್ ಅರಸು, ಬಂಗಾರಪ್ಪ ಅವರಂತೆ ಸ್ವತಂತ್ರ ಪಕ್ಷ ಕಟ್ಟುವ ಮನಸ್ಥಿತಿಯಲ್ಲಿ ಚಿಂತನೆ ಆರಂಭ ಗೊಂಡಿದೆ. ಮೈನಾರಿಟಿಯವರಾದ ಅರಸು, ಬಂಗಾರಪ್ಪ ಹೊಸ ಪಕ್ಷ ಮಾಡುವುದಾದರೆ ನಾನ್ಯಾಕೆ ಮಾಡಬಾರದು? ರಾಜ್ಯದ ಬಹುಸಂಖ್ಯಾತ ಲಿಂಗಾಯಿತ ಸಮುದಾಯ ನನ್ನ ಜೊತೆ ಇರುವಾಗ ಹಾಗೂ ಹಿಂದುಳಿದವರಿಗೆ ನನ್ನ ಸರ್ಕಾರ ಸಾಕಷ್ಟು ಸ್ಪಂದಿಸಿರುವುದರಿಂದ ಕನಿಷ್ಟ ನನ್ನ ನಾಯಕತ್ವದಲ್ಲಿ ೨೨೪ ವಿಧಾನ ಸಭಾ ಕ್ಷೇತ್ರ ಗಳ ಪೈಕಿ ಕನಿಷ್ಠ ೫೦ ಗೆದ್ದು ಬಂದರೂ ನಾನೇ ಮುಂದಿನ ಮುಖ್ಯಮಂತ್ರಿ ಆಗಬಹುದು ಅನ್ನೋ ಸರಳ ಲೆಕ್ಕಾಚಾರದಲ್ಲಿ ಯಡಿಯೂರಪ್ಪ ಮಗ್ನರಾಗಿ ಬಿಟ್ಟಿದ್ದಾರೆ!
ಹಾಗಾಗಿ ಇಷ್ಟು ವರ್ಷಗಳ ಬಿಜೆಪಿ ಒಡನಾಟಕ್ಕೆ ತಿಲಾಂಜಲಿ ಇಟ್ಟು, ಗಣವೇಷದಾರಿ ಸಂಸ್ಕೃತಿಯಿಂದ ಹೊರಬರುವ ಉತ್ಕಟ ಭಾವನೆಗಳಿಗೆ ಅವರ ಸುತ್ತಲಿನ ಕೆಲವು ಆಪ್ತರು ನೀರೆರೆಯುತ್ತಿದ್ದಾರೆ. ಹಾಗಾಗಿ ಯಡಿಯೂರಪ್ಪ ಮಾರ್ಚ್ ನಂತರ ಬಿಜೆಪಿ ಸಖ್ಯ ತೊರೆದು ಚುನಾವಣ ಸಿದ್ದತೆಗಳನ್ನು ಕೈಗೊಳ್ಳಲು ಮುಂದಾದರು ಅಚ್ಚರಿ ಪಡಬೇಕಿಲ್ಲ. ಅದರಲ್ಲೂ ಉತ್ತರ ಕರ್ನಾಟಕವನ್ನು ತಮ್ಮ ಕಾರ್ಯಕ್ಷೇತ್ರ ಮಾಡಿಕೊಳ್ಳುವ ಉದ್ದೇಶ ಕೊಡ ಅವರಿಗಿದ್ದಂತಿದೆ. ವಿಶೇಷವೆಂದರೆ, ಪ್ರತಿ ವಿಧಾನ ಸಭಾ ಕ್ಷೇತ್ರಗಳಲ್ಲೂ ಕನಿಷ್ಠ ಅಂದಾಜಿನ ಪ್ರಕಾರ ಶೇ ೧೮ ರಷ್ಟು ಲಿಂಗಾಯಿತ ಮತದಾರರು ಇರುವುದು ಯಡಿಯೂರಪ್ಪ ಅವರ ಆಸೆಗೆ ಮತ್ತಷ್ಟು ನೀರೆರೆದಿದೆ.
ಯಡಿಯೂರಪ್ಪ ಅವರ ನಡೆಯನ್ನ ಸೂಕ್ಷ್ಮವಾಗಿ ಗಮನಿಸಿದಾಗ ಒಂದು ಸ್ಪಷ್ಟವಾಗುತ್ತದೆ. ಮಾಜಿ ಪ್ರಧಾನಿ ದೇವೇಗೌಡರ ರಾಜಕೀಯ ದಾಳಗಳನ್ನೇ ಯಡಿಯೂರಪ್ಪ ಆಡ ತೊಡಗಿದ್ದಾರೆ! ರಾಜ್ಯದಲ್ಲಿ ದೇವೇಗೌಡರಿಗೆ ಹೊರತಾಗಿ ಫುಲ್ ಟೈಮ್ ರಾಜಕಾರಣ ಮಾಡುವ ವ್ಯಕ್ತಿ ಎಂದರೆ ಯಡಿಯೂರಪ್ಪ! ಇವ್ರಿಬ್ಬರಷ್ಟು ರಾಜ್ಯವನ್ನ ಸುತ್ತಿರುವ ಮತ್ತೊಬ್ಬ ರಾಜಕಾರಣಿ ಇಲ್ಲ. ಅದರಲ್ಲೂ ಹಳೇ ಮೈಸೂರು ಭಾಗದಲ್ಲಿ ದೇವೇಗೌಡರ ಹಿಡಿತ ಹಾಗೂ ಜಾತಿ ಬೆಂಬಲ ಜೋರಾಗಿರುವಾಗ ನಾನು ಯಾಕೆ ನನ್ನ ಸಮುದಾಯವನ್ನೇ ಬಂಡವಾಳ ಮಾಡಿಕೊಳ್ಳಬಾರದು ಎಂಬ ಯೋಚನೆ ಯಡಿಯೂರಪ್ಪನವರನ್ನು ಹೆಚ್ಚುಹೆಚ್ಚು ಕಾಡಲು ದೇವೇಗೌಡರ ರಾಜಕೀಯ ಲೆಕ್ಕಾಚಾರಗಳೇ ಕಾರಣ ಎನ್ನಲಾಗುತ್ತಿದೆ. ಆದ್ದರಿಂದಲೇ ಉತ್ತರ ಕರ್ನಾಟಕದಲ್ಲಿ ತಮ್ಮ ಸಾಮ್ರಾಜ್ಯವನ್ನು ಗಟ್ಟಿ ಮಾಡಿಕೊಳ್ಳುವ ಲೆಕ್ಕಾಚಾರ ಯಡಿಯೂರಪ್ಪ ಅವರಲ್ಲಿ ಸುಳಿದಾಡ ತೊಡಗಿದೆ.
ಹಿಂದೆ ಜನತಾ ಪಕ್ಷ ಕೈಕೊಟ್ಟಾಗ, ದೇವೇಗೌಡರು ಸಮಾಜವಾದಿ ಜನತಾ ಪಾರ್ಟಿ ಮಾಡಿ ತಮ್ಮ ವರ್ಚಸ್ಸು ಉಳಿಸಿಕೊಂಡಂತೆ ಹಾಗೂ ಆನಂತರ ಅವರ ರಾಜಕೀಯ ಬದಲಾವಣೆಯಿಂದ ಸಿಎಂ ಆದದ್ದು , ಪ್ರಧಾನಿ ಆದದ್ದು ಯಡಿಯೂರಪ್ಪ ಅವರ ತಲೆ ಹೊಕ್ಕಿದೆ. ಅರಸು, ಬಂಗಾರಪ್ಪ ಹಿಂದುಳಿದ ವರ್ಗಕ್ಕೆ ಸೇರಿದ್ದರಿಂದ ಅವರು ಪ್ರಬಲವಾಗಲಿಲ್ಲ, ಇದ್ದುದ್ದರಲ್ಲಿ ಬಂಗಾರಪ್ಪ ಕಾಂಗ್ರೆಸ್ ಗೆ ಸಾಕಷ್ಟು ಡ್ಯಾಮೇಜ್ ಮಾಡಿದ್ದು ಈಗ ಇತಿಹಾಸ. ಅದೇ ರೀತಿ ಕೆಲೆವೆಡೆ ಯಡಿಯೂರಪ್ಪ ಅವರಿಂದ ಬಿಜೆಪಿಗೆ ತೊಂದರೆ ಆದರೂ ನಾವು ಕನಿಷ್ಠ ೪೦ ರಿಂದ ೫೦ ಸ್ಥಾನ ಗೆದ್ದು ಬಂದರೆ ಯಾವುದೇ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಂಡು ಅಧಿಕಾರ ಹಿಡಿಯಬಹುದು ಎಂಬ ದೂರಾಲೋಚನೆ ಯಡಿಯೂರಪ್ಪ ಅವರನ್ನು ಈಗ ಆವರಿಸಿಕೊಂಡು ಬಿಟ್ಟಿದೆ. ಈಗ ಅವರ ಬಳಿ ಹಣಕ್ಕೇನೂ ಕೊರತೆ ಇಲ್ಲ. ಹಾಗೆ ಲಿಂಗಾಯಿತ ಸಮುದಾಯ ಅವರ ಜೊತೆಗಿರುವಂತೆ ನೋಡಿಕೊಳ್ಳುವುದೊಂದೆ ಅವರಿಗಿರುವ ಮುಖ್ಯ ಅಜೆಂಡಾ. ಅದಕ್ಕಾಗಿ ಯಡಿಯೂರಪ್ಪನವರು ಏನೆಲ್ಲಾ ಮಾಡಬಹುದು ಎಂಬ ಹಗ್ಗ ಹೊಸೆಯುವ ಕೆಲಸ ಇನ್ನು ಕೆಲವು ತಿಂಗಳಲ್ಲಿ ಒಂದು ರೂಪ ಪಡೆದರೆ ಅಚ್ಚರಿ ಪಡಬೇಕಿಲ್ಲ. ಕಾಂಗ್ರೆಸ್ ಕೂಡ ಯಡಿಯೂರಪ್ಪ ಅವರ ಸ್ವತಂತ್ರ ನಡೆಯನ್ನೇ ಹೆಚ್ಚು ಬೆಂಬಲಿಸತೊಡಗಿದೆ. ಇದರಿಂದ ಪಕ್ಷಕ್ಕೆ ಲಾಭ ಅನ್ನುವ ಲೆಕ್ಕಾಚಾರ ಕಾಂಗ್ರೆಸ್ ಪಾಳೆಯದಲ್ಲಿ ಕೇಳಿ ಬರ್ತಿದೆ.
ರಾಜ್ಯದಲ್ಲಿ ಚುನಾವಣೆಗೆ ಇನ್ನೂ ಹದಿನಾಲ್ಕು ತಿಂಗಳಿದೆ. ಈಗ ಸದಾನಂದಗೌಡರು ಆರು ತಿಂಗಳು ಪೂರೈಸಿದ್ದಾರೆ. ಅವರ ಸರ್ಕಾರ ಎಷ್ಟು ದಿನ ಉಳಿಯಬಹುದು ಎನ್ನುವುದು ಒಂದು ರೀತಿಯಲ್ಲಿ ಯಡಿಯೂರಪ್ಪನವರನ್ನೇ ಅವಲಂಬಿಸಿದೆ ಎನ್ನಬಹುದು. ಇನ್ನು ಉಳಿದ ದಿನಗಳ ಬಗ್ಗೆ ಯಡಿಯೂರಪ್ಪ ಅವರ ತಿರ್ಮಾನದ ಮೇಲೆ ಅವರ ಸರ್ಕಾರ ಅವಲಂಬಿಸಿರುತ್ತದೆ ಅಂತಾನೆ ಹೇಳ್ಬೇಕು. ಯಡಿಯೂರಪ್ಪ ಬಿಜೆಪಿಯಿಮ್ದ ಹೊರ ಬಂದರೆ ಕನಿಷ್ಟ ೧೦ ರಿಂದ ೧೫ ಮಂದಿಯಾದರು ಯಡಿಯೂರಪ್ಪನವರ ಜೊತೆ ನಿಲ್ಲಬಹುದು ಅನ್ನೋದು ಒಂದು ಲೆಕ್ಕಾಚಾರ. ಹಾಗಾದಾಗ ಸರ್ಕಾರ ಉಳಿಯುತ್ತಾ? ಇಲ್ವಾ? ಕಾಲಾನೇ ಹೇಳ್ಬೇಕು.
ಪಾಪ ಮತ್ತೊಬ್ಬ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಂತೂ ಬಿಜೆಪಿ ಸರ್ಕಾರ ಕೆಡುವುವ ಎಲ್ಲಾ ಪ್ರಯತ್ನ ಮಾಡಿ ಸೋತು ಸುಣ್ಣಾಗಿ ಸ್ವಲ್ಪ ವಿಶ್ರಾಂತಿ ಪಡೆದು ಈಗ ಮೈ ಕೊಡವಿಕೊಂಡು ಎದ್ದಿದ್ದಾರೆ. ಅಲ್ಲದೆ ಮುಂದಿನ ಚುನಾವಣೆಯಲ್ಲಿ ವಿಧಾನಸಭೆಗೆ ಸ್ಪರ್ದಿಸುವುದಾಗಿ ಈಗಾಗಲೇ ಸ್ಪಷ್ಟಪಡಿಸಿ ಮುಂದಿನ ಚುನಾವಣೆಯಲ್ಲಿ ಮುಖ್ಯಮಂತ್ರಿಯಾಗುವ ಕನಸು ಕಾಣುವವರ ಸಾಲಿನಲ್ಲಿದ್ದಾರೆ. ಯಡಿಯೂರಪ್ಪ ಅವರ ಆಟಗಳು ಜೆಡಿಎಸ್ ನಲ್ಲಿ ಒಂಚೂರು ಗಲಿಬಿಲಿಗೂ ಕಾರಣವಾಗಿದೆ. ಏನೇ ಆಗ್ಲಿ ಕುಮಾರಸ್ವಾಮಿ ಕೊನೆಗಳಿಗೆಯಲ್ಲಿ ಯಾರೊಂದಿಗೆ ಕೈ ಜೋಡಿಸುತ್ತಾರೆ ಅನ್ನೋದು ನಿಗೂಢ. ಇದೆಲ್ಲದರ ನಡುವೆ ಮಾಜಿಪ್ರಧಾನಿ ದೇವೇಗೌಡರು ಮಾತ್ರ ತಮ್ಮ ಮತ್ತೊಬ್ಬ ಪುತ್ರ ರೇವಣ್ಣನನ್ನು ಮುಖ್ಯಮಂತ್ರಿಯಾಗಿ ನೋಡಬೇಕು ಅನ್ನೋ ಆಸೆಯನ್ನ ಇಟ್ಟುಕೊಂಡಿದ್ದಾರೆ. ಇನ್ನು ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ, ಪರಮೇಶ್, ಖರ್ಗೆ ಮುಖ್ಯಮಂತ್ರಿಗಾದಿಗೆ ಮೊದಲ ಸಾಲಿನಲ್ಲಿದ್ದಾರೆ.
ಇಷ್ಟೆಲ್ಲಾ ಪ್ರಸ್ತಾಪಕ್ಕೆ ಮುಖ್ಯ ಕಾರಣ ಯಡಿಯೂರಪ್ಪ ಅವರ ನಿರ್ಧಾರ...ರಾಜಕೀಯ ಚದುರಂಗದಲ್ಲಿ ಏನೆಲ್ಲಾ ಅನಿರೀಕ್ಷಿತ ನಡೆಗಳು ಆಗಬಹುದು ಎಂಬುದನ್ನ ಕಳೆದ ಎರಡು ಚುನಾವಣೆಗಳಿಂದ ನೋಡಿರುವ ರಾಜ್ಯದ ಜನತೆಗೆ ಮುಂದಿನ ಚುನಾವಣೆ ಮತ್ತಷ್ಟು ಗೊಂದಲ ಮೂಡಿಸಿದರೂ ಅಚ್ಚರಿ ಪಡಬೇಕಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಬಿಜೆಪಿಗೆ ಇದು ಮರ್ಯಾದೆಯ ಸವಾಲಿನ ಪ್ರಶ್ನೆ ಆಗೋದಂತೂ ಸ್ಪಷ್ಟ!
|
|