ಈ ಬಾಲಕಿಯರ ಮೌನ ರೋದನ ಕೇಳುವವರಾರು? |
|
ಶ್ರೀಮತಿ ರೂಪಾ ಹಾಸನ
ಈಗ್ಗೆ ಕೆಲ ವರ್ಷದ ಹಿಂದೆ ವಸತಿಯುತ ಅಂಧ ಮಕ್ಕಳ ಶಾಲೆಯಲ್ಲಿ ಏಳನೇ ತರಗತಿಯಲ್ಲಿ ಓದುತ್ತಿದ್ದ ಹೆಣ್ಣು ಮಗಳೊಬ್ಬಳು ಗರ್ಭಿಣಿಯಾಗಿದ್ದಳು. ಗಂಡು-ಹೆಣ್ಣು ಮಕ್ಕಳಿಬ್ಬರಿಗೂ ಸಹಶಿಕ್ಷಣ ನೀಡುವ ಆ ಶಾಲೆಯಲ್ಲಿ ಇಂತಹ ನೀಚ ಕೆಲಸ ಮಾಡಿದವರು ಯಾರು ಎಂಬುದನ್ನು ಕಂಡು ಹಿಡಿಯಲು ಗುಟ್ಟಾಗಿ ಪತ್ತೆ ಹಚ್ಚುವ ಪ್ರಯತ್ನ ನಡೆಯಿತಾದರೂ ಕಾಮುಕನ ಪತ್ತೆಯಾಗಿರಲಿಲ್ಲ. ಕೊನೆಗೆ ತನ್ನದಲ್ಲದ ತಪ್ಪಿಗೆ ಆ ಹುಡುಗಿ ಶಿಕ್ಷಣವನ್ನು ಅರ್ಧದಲ್ಲೇ ಮೊಟುಕುಗೊಳಿಸಿ ಬಡ ತಂದೆ-ತಾಯಿಯರ ಜೊತೆಗೆ ಮನೆಗೆ ತೆರಳಿದ್ದಳು. ತಾನು 'ಉಪಯೋಗಿಸಲ್ಪಟ್ಟದ್ದಕ್ಕೆ' ಆ ಹುಡುಗಿಯ ಬಳಿ ಯಾವ 'ಸಾಕ್ಷ್ಯ'ವೂ ಇರಲಿಲ್ಲ. ಈ ಅನ್ಯಾಯವನ್ನು ಕಾನೂನುರೀತ್ಯ ಎದುರಿಸುವ ಆರ್ಥಿಕ ಚೈತನ್ಯವಾಗಲೀ, ಸಮಾಜವನ್ನು ಎದುರಿಸುವ ನೈತಿಕ ಶಕ್ತಿಯಾಗಲೀ ಇಲ್ಲದ ಪೋಷಕರು ಆ ಹೆಣ್ಣುಮಗುವಿನ ಬಸಿರು ತೆಗೆಸಿ, ತಮ್ಮ ಹಣೆಬರಹವನ್ನು ಬೈಯ್ದುಕೊಳ್ಳುತ್ತಾ ಹುಡುಗಿಯನ್ನು ಸಾಕುತ್ತಿದ್ದಾರೆ. ಈ ವಿಷಯ ಸಂಸ್ಥೆಯಿಂದ ಹೊರಬರದೇ, ಎಲ್ಲಿಯೂ ಸುದ್ದಿಯೂ ಆಗದೇ ಅಲ್ಲೇ ಸತ್ತು ಹೋಯಿತು.
ಕಳೆದ ವರ್ಷದ ವಿಶ್ವ ಅಂಗವಿಕಲರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ರಾಜ್ಯಪಾಲರಾದ ಎಚ್.ಆರ್. ಭಾರದ್ವಾಜ್ ಅವರು 'ತಮಗಾಗಿ ರಚಿತವಾಗಿರುವ ಕಾನೂನುಗಳ ಪ್ರಯೋಜನವನ್ನು ಅಂಗವಿಕಲರು ಪಡೆದುಕೊಳ್ಳುವಂತಾಗಬೇಕು. ಇಂತಹ ಕಾನೂನುಗಳು ಇದುವರೆಗೂ ಸಮರ್ಪಕವಾಗಿ ಅನುಷ್ಠಾನವಾಗದ ಕಾರಣ ಅವರಿಗೆ ಮೀಸಲಾಗಿರುವ ಸೌಲಭ್ಯ ದಕ್ಕುತ್ತಿಲ್ಲ' ಎಂದು ವಿಷಾದಿಸಿದ್ದರು. ಆದರೆ ಅಂಗವಿಕಲ ಮಕ್ಕಳು, ಮುಖ್ಯವಾಗಿ ಬಡ ಹೆಣ್ಣುಮಕ್ಕಳು ಕಾನೂನಿನ ಸೌಲಭ್ಯ ಪಡೆಯುವುದಿರಲಿ ತಮ್ಮ ಮೂಲಭೂತ ಹಕ್ಕುಗಳನ್ನು ಪಡೆದುಕೊಳ್ಳಲೂ ಸಾಧ್ಯವಾಗದೇ ಲೈಂಗಿಕ ದೌರ್ಜನ್ಯಕ್ಕೆ, ಶೋಷಣೆಗೆ ಗುರಿಯಾಗುತ್ತಿರುವುದನ್ನು ಕಾಣುವಾಗ 'ಅಂಗವಿಕಲತೆ ಶಾಪವಲ್ಲ' ಎಂದು ನಾವು ಬಿಗಿಯುವ ಭಾಷಣ ಅವರನ್ನು ಅಪಹಾಸ್ಯ ಮಾಡಿದಂತೆನಿಸುತ್ತದೆ.
ಕರ್ನಾಟಕದ ಜನಸಂಖ್ಯೆಯ ಶೇಕಡಾ ೫ ರಿಂದ ೬ ರಷ್ಟಿರುವ ಅಂಗವಿಕಲರ ಅಭ್ಯುದಯಕ್ಕಾಗಿ ಅಂಗವಿಕಲರ ಕಲ್ಯಾಣ ಇಲಾಖೆ ೧೯೮೮ ರಿಂದಲೇ ಕೆಲಸ ಮಾಡುತ್ತಿದೆ. ಅಂಗವಿಕಲರ ಅಧಿನಿಯಮ ೧೯೯೫ ರ ಅನ್ವಯ ಅಂಗವಿಕಲ ವ್ಯಕ್ತಿಗಳಿಗೆ ವಿದ್ಯಾಭ್ಯಾಸ, ತರಬೇತಿಗಳೊಂದಿಗೆ ಉತ್ತಮ ಅವಕಾಶವನ್ನು ಕಲ್ಪಿಸಿ ಸೌಲಭ್ಯ ನೀಡಿದಲ್ಲಿ ಅವರು ಕೂಡ ದೇಶದ ಆರ್ಥಿಕ ಅಭಿವೃದ್ಧಿಗೆ ಸಮನಾದ ಪಾಲನ್ನು ನೀಡುತ್ತಾರೆ ಎಂದು ಹೇಳಿ ಅಂಗವಿಕಲ ಮಕ್ಕಳಿಗೆ ಶಿಕ್ಷಣದ ಅವಶ್ಯಕತೆಯನ್ನು ಎತ್ತಿಹಿಡಿಯಲಾಗಿದೆ. ಇದಕ್ಕಾಗಿ ಸರ್ಕಾರ ಹಲವು ಕೋಟಿಗಳನ್ನು ವಿನಿಯೋಗಿಸುತ್ತಿದೆ.
ದೃಷ್ಟಿದೋಷ, ಶ್ರವಣದೋಷ, ಮಾನಸಿಕ ಅಸ್ವಸ್ಥತೆ, ಬುದ್ಧಿಮಾಂದ್ಯತೆಗಳನ್ನು ವಿಶೇಷ ಅಂಗವೈಕಲ್ಯವೆಂದು ಗುರುತಿಸಲಾಗುತ್ತದೆ. ಇಂತಹ ಮಕ್ಕಳಿಗೆ ಪ್ರತ್ಯೇಕವಾಗಿಯೇ ಶಿಕ್ಷಣ ನೀಡಬೇಕಾದ ಅನಿವಾರ್ಯತೆಯೂ ಇದೆ. ಹೀಗೆಂದೇ ರಾಜ್ಯದಲ್ಲಿ, ದೃಷ್ಟಿದೋಷವಿರುವ ಮಕ್ಕಳಿಗಾಗಿ ಸರ್ಕಾರದವತಿಯಿಂದ ನಾಲ್ಕು ವಿಶೇಷ ವಸತಿಶಾಲೆಗಳನ್ನು, ಹಾಗೇ ಶ್ರವಣದೋಷವುಳ್ಳ ಮಕ್ಕಳಿಗಾಗಿ ನಾಲ್ಕು ವಿಶೇಷ ವಸತಿಶಾಲೆಗಳನ್ನು ನಡೆಸಲಾಗುತ್ತಿದೆ. ಇದರಲ್ಲಿ ಒಂದೊಂದು ಶಾಲೆ ಪ್ರತ್ಯೇಕವಾಗಿ ಹೆಣ್ಣುಮಕ್ಕಳಿಗಾಗಿಯೇ ಇರುವಂತದ್ದು.
ಇವುಗಳಲ್ಲದೇ ವಿಶೇಷ ಅಂಗವೈಕಲ್ಯತೆಯುಳ್ಳ ಮಕ್ಕಳಿಗಾಗಿಯೇ ಕರ್ನಾಟಕದಾದ್ಯಂತ ೧೫೦ಕ್ಕೂ ಹೆಚ್ಚು ಅನುದಾನಿತ-ಅನುದಾನರಹಿತ, ವಸತಿಯುತ-ವಸತಿರಹಿತ ಶಾಲೆಗಳು, ಸ್ವಯಂಸೇವಾ ಸಂಸ್ಥೆಗಳಿಂದ ನಡೆಸಲ್ಪಡುತ್ತಿವೆ. ಹಾಗೆ ಪ್ರತ್ಯೇಕ ಹೆಣ್ಣುಮಕ್ಕಳ ಶಾಲೆಗಳಲ್ಲಿ ಮಹಿಳಾ ಮೇಲ್ವಿಚಾರಕಿಯರನ್ನು ಕಡ್ಡಾಯವಾಗಿ ನೇಮಿಸಿಕೊಳ್ಳಲಾಗುತ್ತಿದೆ. ಆದರೆ ಗಂಡು-ಹೆಣ್ಣು ಮಕ್ಕಳಿಬ್ಬರಿಗೂ ಸಹಶಿಕ್ಷಣ ನೀಡುವ ಈ ವಿಶೇಷ ಶಾಲೆಗಳಲ್ಲಿ ಮಹಿಳಾ ಮೇಲ್ವಚಾರಕಿಯರ ಹುದ್ದೆಯನ್ನು ಕಡ್ಡಾಯಗೊಳಿಸಿಲ್ಲ. ಜೊತೆಗೆ ಇರುವೊಬ್ಬರು ರಜೆಯ ಮೇಲೆ ತೆರಳಿದರೆ, ಆ ಕೆಲಸವನ್ನು ನಿರ್ವಹಿಸಲು ಮತ್ತೊಬ್ಬ ಮಹಿಳಾ ಮೇಲ್ವಿಚಾರಕಿಯ ಹುದ್ದೆಯನ್ನೂ ನಿಗದಿಗೊಳಿಸಿಲ್ಲ. ಇಂತಹ ವಸತಿಶಾಲೆಗಳಲ್ಲಿ ಹೆಣ್ಣುಮಕ್ಕಳು ಸುಲಭವಾಗಿ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಈ ಅಸಹಾಯಕ ಮಕ್ಕಳಿಗೆ ಶಿಕ್ಷಣದೊಂದಿಗೆ, ವಿಶೇಷ ಕಾಳಜಿಯಿಂದ ನೋಡಿಕೊಳ್ಳುವ ಜವಾಬ್ಧಾರಿಯೂ ಇಂತಹ ಸಂಸ್ಥೆಗಳ ಮೇಲಿರುತ್ತದೆ. ಅದರಲ್ಲೂ ಹೆಣ್ಣು ಮಕ್ಕಳಿಗೆ ಅಂಗವೈಕಲ್ಯತೆ ಒಂದು ಶಾಪವಾದರೆ, ಅವರ ದೇಹವೇ ಅವರಿಗೆ ಇನ್ನೊಂದು ಶಾಪವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಸುಲಭವಾಗಿ ಸಿಕ್ಕಿಹಾಕಿಕೊಳ್ಳುವ, ಲೈಂಗಿಕ ದೌರ್ಜನ್ಯಕ್ಕೊಳಗಾಗುವ ಇಂಥಹ ಮಕ್ಕಳಿಗೆ ಬದುಕೇ ನರಕವೆನಿಸಿ, ಮನುಷ್ಯ ಪ್ರಪಂಚದ ಬಗೆಗೇ ನಂಬಿಕೆಯನ್ನು ಕಳೆದುಕೊಳ್ಳುತ್ತಾರೆ. ಅವರ ಮುಗ್ಧತೆ, ಅಸಹಾಯಕತೆ, ಅಂಗವೈಕಲ್ಯ ದುರುಪಯೋಗವಾಗದಂತೆ ನೋಡಿಕೊಳ್ಳುವುದು ಬಹು ದೊಡ್ಡ ಜವಾಬ್ದಾರಿಯಾಗಿರುತ್ತದೆ.
ಪುರುಷ ಶಿಕ್ಷಕರು, ಮೇಲ್ವಿಚಾರಕರು, ಸಿಬ್ಬಂದಿಯಿಂದ ಲೈಂಗಿಕ ಕಿರುಕುಳಕ್ಕೆ ಇಂತಹ ಹಲವು ಹೆಣ್ಣುಮಕ್ಕಳು ಗುರಿಯಾಗುತ್ತಿದ್ದರೂ ಆಡಲಾಗದೇ ಅನುಭವಿಸಲಾಗದೇ ಅವರು ಪಡುತ್ತಿರುವ ಮಾನಸಿಕ ಯಾತನೆ ಕರುಳು ಹಿಂಡುವಂತದ್ದು. ಹೆಚ್ಚಿನ ಮಕ್ಕಳು ತಮ್ಮ ಪೋಷಕರೊಂದಿಗೂ ಇದನ್ನು ಹಂಚಿಕೊಳ್ಳದೇ ಹಿಂಸೆ ಅನುಭವಿಸುತ್ತಾರೆ. ಹಾಗೊಮ್ಮೆ ಹೇಳಿಕೊಂಡರೂ ಅವರೂ ಅಸಹಾಯಕರೇ. ಒಂದೋ ಶಾಲೆ ಬಿಡಿಸಿ ಮಕ್ಕಳನ್ನು ಮನೆಯಲ್ಲಿಟ್ಟುಕೊಳ್ಳಬೇಕು ಇಲ್ಲವೇ ಅಲ್ಲೇ ಹೇಗೋ ಹೊಂದಾಣಿಕೆ ಮಾಡಿಕೊಂಡು ಹೋಗುವಂತೆ ಮಕ್ಕಳಿಗೆ ಸೂಚಿಸಬೇಕು. ಇಂತಹ ಶಾಲೆಗಳು ಜಿಲ್ಲೆಗೊಂದರಂತೆ ಕೂಡ ಇಲ್ಲದಿರುವುದರಿಂದ, ಇರುವುದರಲ್ಲಿ ಹತ್ತಿರದ ಶಾಲೆ ಬಿಡಿಸಿ ದೂರದ ಶಾಲೆಗೆ ಮಗುವನ್ನು ಕಳಿಸುವ ಆರ್ಥಿಕ ಸಾಮರ್ಥ್ಯವೂ ಅವರಲ್ಲಿರುವುದಿಲ್ಲ. ಇಂತಹ ಹೆಚ್ಚಿನ ಮಕ್ಕಳು ಬಡತನ ರೇಖೆಗಿಂತ ಕೆಳಗಿರುವವರೇ ಆಗಿರುತ್ತಾರೆ. ಅಸಹಾಯಕ ಮಕ್ಕಳು ಲೈಂಗಿಕ ಕಿರುಕುಳವನ್ನು ಮೌನವಾಗಿ ಸಹಿಸಿ, ಗೌಪ್ಯವಾಗಿಯೇ ನೋವನುಭವಿಸುತ್ತಾರೆ.
ಮಕ್ಕಳಿಗೆ ಆಗುತ್ತಿರುವ ಲೈಂಗಿಕ ಹಿಂಸೆ ತಿಳಿದಿರುವ ಸಾಮಾಜಿಕ ಕಾರ್ಯಕರ್ತರೂ ಇಂತಹ ಸೂಕ್ಷ್ಮ ವಿಷಯವನ್ನು ಹೇಗೆ ನಿರ್ವಹಿಸುವುದೆಂದು ತಿಳಿಯದೇ ಅಸಹಾಯಕರಾಗುವ ಪರಿಸ್ಥಿತಿ ಇದೆ. ಆಪ್ತರಾಗಿರುವವರಲ್ಲಿ ಮಕ್ಕಳು ಮನ ಬಿಚ್ಚಿ ತಮ್ಮ ಸಂಕಟ ಹೇಳಿಕೊಂಡರೂ ಯಾವುದೇ ಕಾರಣಕ್ಕೂ ಶಾಲೆಯವರಿಗೆ, ಪೋಷಕರಿಗೆ ತಿಳಿಸಬಾರದೆಂದು ಬೇಡಿಕೊಳ್ಳುತ್ತಾರೆ. ಕಾನೂನಿನ ನೆರವು ಪಡೆಯಲು ವಿಷಯವನ್ನು ಬಹಿರಂಗ ಪಡಿಸುವುದು, ಮಗುವಿನೊಂದಿಗೆ ನಡೆಯುತ್ತಿರುವ ದೌರ್ಜನ್ಯವನ್ನು ಪ್ರತ್ಯೇಕವಾಗಿ ದಾಖಲಿಸುವುದು ಅನಿವಾರ್ಯವಾಗಿರುತ್ತದೆ. ಇಂತಹ ವಿಷಯಗಳನ್ನು ಬಹಳಷ್ಟು ಬಾರಿ ಅಸೂಕ್ಷ್ಮವಾಗಿ ನಿರ್ವಹಿಸುವ ಸಂಬಂಧಪಟ್ಟ ಅಧಿಕಾರಿಗಳು ಮಗುವಿನ ಭವಿಷ್ಯಕ್ಕೆ ಅನುಕೂಲಕ್ಕಿಂಥಾ ತೊಂದರೆ ಮಾಡುವುದೇ ಹೆಚ್ಚು. ನಿದರ್ಿಷ್ಟ ವ್ಯಕ್ತಿಯನ್ನು ಗುರಿ ಮಾಡಿ ದೂರು ದಾಖಲಿಸಲೂ ಯಾವುದೇ ಸಾಕ್ಷ್ಯಾಧಾರಗಳೂ ಇರುವುದಿಲ್ಲ. ಹಾಗೆ ಅವರ ವಿರುದ್ಧ ಪ್ರತಿಭಟನೆ ಮಾಡಲೂ, ಮಕ್ಕಳಪರ ಹೋರಾಟದ ಗಟ್ಟಿ ದನಿ ಇನ್ನೂ ರೂಪುಗೊಂಡಿಲ್ಲ. ಹಲವು ಸಂದರ್ಭದಲ್ಲಿ ಏಕಾಂಗಿಯಾಗಿ ಇಂತಹ ಅನಿಷ್ಟದ ವಿರುದ್ಧ, ಮಕ್ಕಳ ಪರವಾಗಿ ಹೋರಾಡುವಾಗ ಸಾಮಾಜಿಕ ಕಾರ್ಯಕರ್ತರೇ ತೊಂದರೆಗೆ ಸಿಲುಕುವ ಪ್ರಸಂಗಗಳು ಹೆಚ್ಚುತ್ತಿವೆ. ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ಮಕ್ಕಳ ಹಕ್ಕುಗಳ ಬಗ್ಗೆಯೂ ಗಮನ ಹರಿಸಬೇಕೆಂಬ ಜಾಗೃತಿ ನಮ್ಮ ಸಾಮಾಜಿಕ ಹೋರಾಟಗಾರರಿಗೂ ಇನ್ನೂ ಬಂದಿಲ್ಲ!
ಇಂತಹ ಸಂದರ್ಭದಲ್ಲಿ ಈ ವಿಶೇಷ ಅಂಗವೈಕಲ್ಯ ಹೊಂದಿರುವ ಹೆಣ್ಣುಮಕ್ಕಳು ಸುರಕ್ಷಿತವಾಗಿರಲು, ನೆಮ್ಮದಿಯಿಂದ ಶಿಕ್ಷಣವನ್ನು ಪಡೆಯಲು ಬೇಕಾದಂತಾ ಅನುಕೂಲಗಳನ್ನು ಅಂಗವಿಕಲ ಕಲ್ಯಾಣ ಇಲಾಖೆಯೇ ಸೂಕ್ಷ್ಮವಾಗಿ ವಿವೇಚಿಸಿ ಕೈಗೊಳ್ಳಬೇಕಿದೆ. ಮುಖ್ಯವಾಗಿ ಸಹ ಶಿಕ್ಷಣ ನೀಡುತ್ತಿರುವ ಖಾಸಗಿ ಸಂಸ್ಥೆಗಳಲ್ಲಿ ಕನಿಷ್ಟ ಇಬ್ಬರಾದರು ಮಹಿಳಾ ಮೇಲ್ವಿಚಾರಕಿಯರನ್ನು ಕಡ್ಡಾಯವಾಗಿ ನೇಮಿಸಿಕೊಳ್ಳಬೇಕಿದೆ. ಜೊತೆಗೆ ವಸತಿಶಾಲೆಗಳಿಗೆ ಅನಿರೀಕ್ಷಿತ ಭೇಟಿ ನೀಡಿ, ಮಕ್ಕಳೊಂದಿಗೆ ಆತ್ಮೀಯವಾಗಿ ಸಂವಾದಿಸುವ ಮೂಲಕ ಅರಣ್ಯರೋದನವಾಗಿರುವ ಇಂತಹ ಹೆಣ್ಣುಮಕ್ಕಳ ಗಂಭೀರ ಸಮಸ್ಯೆಯೆಡೆಗೆ ತುರ್ತಾಗಿ ಗಮನಹರಿಸಬೇಕಿದೆ.
ನೀವೇ ಆ ಹೀರೋ ಆಗಿ!
ನೀವು ಬೀಚಿನಲ್ಲೋ, ರೆಸಾರ್ಟುಗಳಲ್ಲೋ, ಪಾರ್ಟಿಗಳಲ್ಲೋ, ಬೆಚ್ಚಗೆ ನಿಮ್ಮ ಮನೆಗಳಲ್ಲೋ ಅಥವಾ ಇನ್ನೆಲ್ಲೋ ಜಾಲಿಯಾಗಿ ಹೊಸವರ್ಷವನ್ನು ಬರಮಾಡಿಕೊಳ್ಳುತ್ತಿದ್ದಾಗ ಚಂಡಮಾರುತ ಥೇನ್ ತಮಿಳುನಾಡಿನ ತುದಿಯನ್ನು ಅಪ್ಪಳಿಸಿ ಹೋಗಿದೆ. ಕಡಲ ತೀರದ ಜನ ಜೀವ-ಸೂರು ಕಳೆದುಕೊಂಡಿದ್ದಾರೆ. ಮೀನುಗಾರರು ದೋಣಿ ಕಳೆದುಕೊಂಡಿದ್ದಾರೆ. ಬಡವರೆನಿಸಿಕೊಳ್ಳುವವರಿಗೆ ಕಳೆದುಕೊಳ್ಳುವುದೇ ಬದುಕಾಗಿಬಿಡುತ್ತಿದೆ.
ಸರ್ಕಾರ ಯೋಜನೆ ಮಾಡಬಹುದು. ಫೈಲು ತಯಾರು ಮಾಡಬಹುದು. ತಕ್ಷಣ ಮನಸ್ಸು ಮಾಡಲಾರದು. ಇದ್ದರೆ ತಾನೇ ಮಾಡುವುದು! ಆದರೆ ಮನಸು ನಿಮಗಿದೆ. ನಿಮ್ಮನೆಗಳಲ್ಲಿ ಹೆಚ್ಚಾಗಿರುವ ಹೊದಿಕೆ, ಬಟ್ಟೆ, ಪಾತ್ರೆ ಪಗಡಿಗಳನ್ನು, ನಿಮಗೆ ಸಾಧ್ಯವಾದರೆ ದವಸ-ಧನ ಸಹಾಯವನ್ನು ಪ್ಲೀಸ್ ನೆರವು ಬೇಕಾದಲ್ಲಿಗೆ ಕಳಿಸಿಕೊಡಿ. ಸುರಕ್ಷಿತವಾಗಿ ಅಲ್ಲಿಗೇ ತಲುಪಿಸುವವರು ನಿಮ್ಮ ಸುತ್ತಲೇ ಸಿಗುತ್ತಾರೆ. ಕರ್ನಾಟಕದಲ್ಲಿರುವ ಹೃದಯವಂತರು ನೀವೇ ಒಂದು ಸಣ್ಣ ಟ್ರಿಪ್ ಮಾಡಬಹುದು. ಹೊಸ ವರ್ಷದ ದಿನ ಪುಟ್ಟದೊಂದು ರಾಂಡೆಮ್ ಆಕ್ಟ್ ಆಫ್ ಕೈಂಡ್ನೆಸ್...ಮುಂದೊಂದು ದಿನ ಅದೂ ನಿಮ್ಮನ್ನು ಕಾಯಲಿ...
|