ಅಂಗಳ      ಖುರಪುಟ
Print this pageAdd to Favorite


 
ಸಂತ ವ್ಯಾಲೆಂಟೈನ್ ನ/ಗಳ ಬೆನ್ನು ಹತ್ತಿ...


 
ಭಾರತೀಯರಿಗೆ ಮತ್ತು ಏಶಿಯಾದ ಹಲವಾರು ’ಮೂಲ ಸಂಸ್ಕೃತಿ’ಗಳಿಗೆ ಸೂರ್ಯ, ಚಂದ್ರ, ಅಗ್ನಿ, ವಾಯು, ವರುಣ, ಜಲ, ಹಸು, ನಾಯಿ, ಇನ್ನೂ ಅಸಂಖ್ಯಾತ ಪ್ರಾಣಿ ಪಕ್ಷಿಗಳು ದೇವರ ಅಥವಾ ದೈವತ್ವದ ಅಂಶವಾಗಿವೆ. ನಿಸರ್ಗದ ಈ ಅಂಗಗಳಲ್ಲಿ ಶಕ್ತಿಯನ್ನೂ, ದೈವತ್ವನ್ನೂ ಕಂಡುಕೊಂಡು ಅದನ್ನು ಆರಾಧಿಸುತ್ತಾ, ಪ್ರೀತಿಸುತ್ತಾ, ಅದರ ಅಗಾಧ ಇರುವಿಕೆಯನ್ನು ಗೌರವಿಸುತ್ತಾ ನಮ್ಮ ಬದುಕುಗಳನ್ನು ಅವುಗಳ ಜೊತೆ ಹೆಣೆದುಕೊಂಡು ಬದುಕುವಂತೆ ಈ ’ಮೂಲ ಸಂಸ್ಕೃತಿಗಳು’ ಕಲಿಸುತ್ತವೆ. ಇವತ್ತಿಗೂ ಸೂರ್ಯ ನಮಗೆ ಪೂಜ್ಯ, ನಾಯಿ ನಾರಾಯಣ...ಬಹುಷಃ ನಿಸರ್ಗದ ಶಕ್ತಿಗಳಿಲ್ಲದಿದ್ದರೆ ಬದುಕಿಲ್ಲ ಎನ್ನುವ ಸರಳ ಸತ್ಯ ಮೂಲ ಸಂಸ್ಕೃತಿಗಳಿಗೆ ಯಾವತ್ತೋ ಮನದಟ್ಟಾಗಿತ್ತು.
 
ಮನುಷ್ಯನ ಇತಿಹಾಸದಲ್ಲಿ ಅಚ್ಚಳಿಯದ ಚಾಪು ಮೂಡಿಸಿಕೊಂಡು ಯೂರೋಪಿನಲ್ಲಿ ವಿಜೃಂಭಿಸಿದ ಗ್ರೀಕರು, ರೋಮನ್ನರ ಸಂಸ್ಕೃತಿ ಆಚರಣೆಗಳನ್ನು ಗಮನಿಸಿದಾಗ ಭಾರತೀಯ ಅಥವಾ ಯಾವುದೇ ’ಮೂಲ ಸಂಸ್ಕೃತಿ’ಗಳಲ್ಲಿರುವ ಆಚರಣೆ ನಂಬಿಕೆಗಳ ನೆರಳು ಮೇಲುನೋಟಕ್ಕೇ ಕಂಡುಬರುತ್ತದೆ. ನಮ್ಮಂತೆಯೇ ಗ್ರೀಕರು, ರೋಮನ್ನರಿಗೆ ಪ್ರಕೃತಿಯ ಶಕ್ತಿಗಳೆಲ್ಲವೂ ದೈವತ್ವವನ್ನು ದೇವರನ್ನು ಬಿಂಬಿಸಿದ್ದವು. ಮನುಷ್ಯರಿಗಿರುವ ಬುದ್ಧಿ ಬಲಕ್ಕಿಂತ ಈ ಶಕ್ತಿಗಳು ಸಹಸ್ರ ಪಟ್ಟು ಹೆಚ್ಚು ಬಲಶಾಲಿಗಳೂ ಬುಧ್ಧಿವಂತರೂ ಆಗಿದ್ದರು; ನಮಗಿರುವ ಮಿತಿ, ಮೋಹಗಳಿಗಿಂತ ಉತ್ಕಟವಾದ ಮಿತಿಗಳೂ ಮೋಹಗಳೂ ಅವರಿಗಿದ್ದವು. ಅವರೂ ಹಲವಾರು ಮೂಲ ಸಂಸ್ಕೃತಿಗಳು ಪಾಲಿಸಿಕೊಂಡು ಬಂದಂತೆ ಪ್ರಕೃತಿಯ ಆರಾಧಕರಾಗಿದ್ದರು.
 
ರೋಮನ್ನರಲ್ಲಿ ಒಂದು ನಂಬಿಕೆ ಇತ್ತು. ಅವರ ಪ್ರಕಾರ ಪ್ರತೀ ತಿಂಗಳೂ ಒಂದೊಂದು ಬಗೆಯ ದೈವದ್ದಾಗಿತ್ತು. ಆಯಾ ತಿಂಗಳಿನ ಮಧ್ಯದ ದಿನ ಆ ಭಾವನೆ ಅತ್ಯಂತ ಶಕ್ತಿ ಪಡೆದುಕೊಳ್ಳುತ್ತಿತ್ತು, ಹಾಗೆಂದು ನಂಬಲಾಗುತ್ತಿತ್ತು. ಉದಾಹರಣೆಗೆ ಮಾರ್ಚ್ ತಿಂಗಳು ’ಸಂತೋಷ’ ದ ಅಧಿಪತಿಯ ತಿಂಗಳೆಂದಿಟ್ಟುಕೊಳ್ಳಿ...ಮಾರ್ಚ್ ತಿಂಗಳ ಮಧ್ಯದ ದಿನ ಅಂದರೆ ಮಾರ್ಚ್ ೧೫ ’ಸಂತೋಷ’ವನ್ನು ಉತ್ತುಂಗಕ್ಕೇರುವಂತೆ ಆಚರಿಸಲಾಗುತ್ತಿತ್ತು, ಅವರು ಯಾವುದನ್ನು ’ಸಂತೋಷ’ ವೆಂದು ನಂಬಿದ್ದರೋ ಅದನ್ನು ಹೆಚ್ಚಿಸಿಕೊಳ್ಳಲು, ಹಂಚಿಕೊಳ್ಳಲು ಅದು ಮುಖ್ಯವಾದ ದಿನವಾಗುತ್ತಿತ್ತು. ಅವತ್ತು ’ಸಂತೋಷ’ ದ ಅಧಿದೇವತೆಯನ್ನು ಪೂಜಿಸಲಾಗುತ್ತಿತ್ತು. ಆಚರಣೆ ೧೪ನೆಯ ದಿನದ ಸಂಜೆಯಿಂದಲೇ ಆರಂಭವಾಗುತ್ತಿತ್ತು. ಇದು ಉದಾಹರಣೆ ಮಾತ್ರ.
 
ನಾವಿವತ್ತು ಬಳಸುವ ಗ್ರೆಗೋರಿಯನ್ ಅಥವಾ ಇಂಗ್ಲಿಷ್ ಕ್ಯಾಲೆಂಡರಿನ ರಾಜಕೀಯ ನಿಮಗೆ ಗೊತ್ತಿರಬಹುದು. ರೋಮನ್ ಸಾಮ್ರಾಜ್ಯದ ಸಮಯದಲ್ಲಿ ಗ್ರೆಗೋರಿಯನ್ ಕ್ಯಾಲೆಂಡರಿನ ಫೆಬ್ರವರಿ ತಿಂಗಳು ವರ್ಷದ ಕೊನೆಯ ತಿಂಗಳಾಗಿತ್ತು; ಬೇರೆಲ್ಲಾ ತಿಂಗಳುಗಳಿಗಿಂತ ಚಿಕ್ಕದು ಕೂಡಾ. ಯಾಕೆಂದರೆ ದೊರೆ ಜೂಲಿಯಸ್ ಸೀಸರ್ ತಿಂಗಳೊಂದಕ್ಕೆ ತನ್ನ ಹೆಸರಿರಬೇಕೆಂದು ’ಜುಲೈ’ ಗೆ ತನ್ನ ಹೆಸರಿಟ್ಟಿದ್ದ. ತನ್ನ ಹೆಸರಿನ ತಿಂಗಳಲ್ಲಿ ಹೆಚ್ಚು ದಿನಗಳಿರಬೇಕೆಂದು ಫೆಬ್ರವರಿಯಿಂದ ದಿನವೊಂದನ್ನು ಕಿತ್ತು ಜುಲೈ ಗೆ ಸೇರಿಸಿಕೊಂಡಿದ್ದ. ಅವನಾದ ಮೇಲೆ ಅಧಿಕಾರಕ್ಕೆ ಬಂದಿದ್ದ ಆಕ್ಟೇವಿಯಸ್ ಸೀಸರ್ ಉರುಫ್ ಆಗಸ್ಟಸ್ ’ಮತ್ತೊಂದು ತಿಂಗಳಿಗೆ ಆಗಸ್ಟ್ ಎಂದು ತನ್ನ ಹೆಸರಿಟ್ಟುಕೊಂಡು ಅದಕ್ಕೂ ೩೧ ದಿನಗಳನ್ನು ಕೊಟ್ಟ. ಅದನ್ನೂ ಬಡಪಾಯಿ ಫೆಬ್ರವರಿ ತಿಂಗಳಿನಿಂದಲೇ ಕಿತ್ತಿದ್ದ! ಜೂಲಿಯಸ್ ಸೀಸರ್ ಮತ್ತು ಆಗಸ್ಟಸ್ ಸೀಸರ್ ಫೆಬ್ರವರಿಯಿಂದ ಎರಡು ದಿನಗಳನ್ನು ಕಿತ್ತುಕೊಂಡಿದ್ದರಿಂದ ಫೆಬ್ರವರಿಗೆ ೨೮ ದಿನಗಳು ಮಾತ್ರ ಉಳಿದಿದ್ದವು. ಹಾಗಾಗಿ ಫೆಬ್ರವರಿ ತಿಂಗಳಿನ ಮಧ್ಯಭಾಗ ಫೆಬ್ರವರಿ ಅ೩ ಸಂಜೆ ಮತ್ತು ೧೪ನೆಯ ದಿನವಾಯಿತು.
 
ರೋಮಿನ ಸಂಸ್ಥಾಪಕರ ಹಿಂದಿರುವ ಈ ಕಥೆ ನಿಮಗೆ ಗೊತ್ತಿರಬಹುದು. ಲುಪರ್ಕಸ್ ಮತ್ತು ಫಾನಸ್ ಹೆಸರಿನ ಇವರಿಬ್ಬರೂ ಅವಳಿಜವಳಿ ದೇವತೆಗಳು, ಇಬ್ಬರೂ ರೋಮನ್ನರ ದೇವರುಗಳು ಮತ್ತು ಬಲಿಷ್ಠ ರೋಮಿನ ಸಂಸ್ಥಾಪಕರು. ರೋಮ್ ನಲ್ಲಿರುವ ಪ್ಯಾಲಟೈನ್ ಬೆಟ್ಟಗಳ ಗುಹೆಯೊಂದರಲ್ಲಿ ಹೆಣ್ಣು ತೋಳವೊಂದು ಇವರಿಬ್ಬರನ್ನೂ ಸ್ತನ್ಯಪಾನ ಮಾಡಿಸಿ ಕಾಪಾಡಿ ಸಾಕಿತ್ತು ಎಂದು ದಂತಕತೆಗಳು ಹೇಳುತ್ತವೆ. ಇವತ್ತಿಗೂ ಹಾಲೂಡಿಸುತ್ತಿರುವ ಹೆಣ್ಣು ತೋಳ ರೋಮ್ ನಗರದ ಹೆಮ್ಮೆಯ ಚಿನ್ಹೆ. ಈ ಹೆಣ್ಣು ತೋಳದ ಮಾತೃತ್ವವನ್ನು ಆದರಿಸಲು ಫೆಬ್ರವರಿಯ ಹದಿನಾಲ್ಕನೆಯ ದಿನವನ್ನು ರೋಮನ್ನರು ಲುಪರ್ಕೇಲಿಯಾ ಅಥವಾ ’ತೋಳ ದೈವದ ದಿನ’ ಎಂದು ಆಚರಲು ಆರಂಭಿಸಿದರು ಎನ್ನಲಾಗಿದೆ. ಇದಕ್ಕೂ ಮೊದಲಿನಿಂದಲೂ ಇದೇ ದಿನವನ್ನು ಉನೋ ದೇವಿಯ ಹಬ್ಬವಾಗಿಯೂ ಆಚರಿಸಲಾಗುತ್ತಿತ್ತು. ಉನೋ ದೇವಿ ದೈಹಿಕ ಕಾಮನೆಗಳ ದೇವಿ. ದೈಹಿಕ ಕಾಮನೆಗಳ ಆರಾಧನೆ ಮತ್ತು ತೋಳ ದೈವಕ್ಕೆ ಇಷ್ಟವಾಗುವ ಆಡು-ಎರಡೂ ವಿಚಿತ್ರವಾಗಿ ಸಮ್ಮಿಳಿತಗೊಂಡು ಲುಪರ್ಕೇಲಿಯಾ ಹಬ್ಬದ ಆಚರನೆ ಶುರುವಾಯಿತೆನ್ನಲಾಗಿದೆ.
 
ಈ ಲುಪರ್ಕೇಲಿಯಾ ಹಬ್ಬದ ಆಚರಣೆಗೆಂದೇ ವಿಶಿಷ್ಟವಾಗಿ ಕೆಲವು ಪೂಜಾರಿಗಳು ನೇಮಕವಾಗುತ್ತಿದ್ದರು. ಹಬ್ಬದ ದಿನ ಇವರು ತೋಳದೈವವನ್ನು ಆರಾಧಿಸಲು ತಾವು ಆಡಿನ ಚರ್ಮವನ್ನು ಧರಿಸಿ, ತೋಳ ದೈವಕ್ಕೆ ಆಡಿನ ಬಲಿಕೊಟ್ಟು ಸಂತೃಪ್ತಿಗೊಳಿಸುತ್ತಿದ್ದರು. ಆಡುಗಳನ್ನು ರೋಮನ್ನರು ಫಲವತ್ತತೆಯ ಸಂಕೇತವೆಂದು ನಂಬುತ್ತಿದ್ದರು. ಹೀಗೆ ತೋಳ ದೈವಕ್ಕೆ ಬಲಿಕೊಟ್ಟ ಆಡಿನ ಚರ್ಮದಿಂದ ಸೊಂಟಕ್ಕೆ ಕಟ್ಟುವ ಉಡುಗೆಯೊಂದನ್ನು ಮಾಡಲಾಗುತ್ತಿತ್ತು. ಈ ಉಡುಗೆಯನ್ನು ಆಡಿನ ರಕ್ತದಲ್ಲಿ ಅದ್ದಿ ಆಚರಣೆಯಲ್ಲಿ ಪಾಲ್ಗೊಳ್ಳುವ ಹೆಂಗಸರಿಗೆ ತಾಕಿಸಲಾಗುತ್ತಿತ್ತು. ರಕ್ತಸಿಕ್ತ ಚರ್ಮದುಡುಗೆಯಿಂದ ತಾಕಲ್ಪಟ್ಟ ಹೆಂಗಸರು ಫಲವತ್ತರಾಗಿ ಲುಪರ್ಕಸ್, ಫಾನಸ್ ರಂತೆಯೇ ಧೀರರಾದ, ಆರೋಗ್ಯಕರ ಸಂತಾನ ಪಡೆಯುತ್ತಾರೆಂಬ ನಂಬಿಕೆ ಇತ್ತು. ಆಡಿನ ರಕ್ತದುಡುಗೆಯನ್ನು ತಾಕಿಸಿಕೊಂಡ ಹೆಂಗಸರು ಆ ಆಚರಣೆಯದ್ದೇ ಭಾಗವೆಂಬಂತೆ ಅಂದು ಸಂಜೆ ಒಟ್ಟಾಗಿ ಸೇರಿ ತಮ್ಮ ಹೆಸರುಗಳನ್ನು ಪ್ರತ್ಯೇಕ ಚಿಕ್ಕ ಚಿಕ್ಕ ಚೀಟಿಗಳಲ್ಲಿ ಬರೆದು ಪಾತ್ರೆಯೊಂದಕ್ಕೆ ಹಾಕಿಡುತ್ತಿದ್ದರು. ವಯಸ್ಸಿಗೆ ಬಂದ ರೋಮ್ ಪುರುಷರು ಆ ಪಾತ್ರೆಯಿಂದ ಒಂದೊಂದು ಚೀಟಿಗಳನ್ನು ಆಯ್ದುಕೊಂಡು ತಮಗೆ ಸಿಕ್ಕ ಚೀಟಿಯಲ್ಲಿದ್ದ ಹುಡುಗಿಯ ಜೊತೆ ದೈಹಿಕ ಸಂಬಂಧ ಮಾಡಿಕೊಳ್ಳುತ್ತಿದ್ದರು. ಈ ಹಬ್ಬ ರೋಮನ್ನರಲ್ಲಿ ಅತ್ಯಂತ ಜನಪ್ರಿಯ ಹಬ್ಬವಾಗಿತ್ತು.
 
ರೋಮನ್ನರಿಗೆ, ಅವರು ನಂಬಿ ಪಾಲಿಸುತ್ತಿದ್ದ ಜೀವನ ಶೈಲಿಗೆ ಇದು ತಕ್ಕುದಾದ ಆಚರಣೆಯಾಗಿದ್ದರೂ ರೋಮನ್ ಆಳ್ವಿಕೆಯ ಪತನದ ನಂತರ ಕ್ರಿಸ್ತ ಶಕ ೩ ರಷ್ಟರಲ್ಲಿ ರೋಮಿನಲ್ಲಿ ಅಲ್ಲಿ ಬಲಶಾಲಿಯಾಗತೊಡಗಿದ ಕ್ರೈಸ್ತರಿಗೆ ಈ ಹಬ್ಬದ ಪರಿಕಲ್ಪನೆ ಇಷ್ಟವಾಗಲಿಲ್ಲ. ಪ್ರಕೃತಿಯ ಶಕ್ತಿಗಳನ್ನು ಆಚರಿಸುವುದನ್ನು ಅವರಿಗೆ ಪೇಗನ್ ಎನ್ನುತ್ತಿದ್ದರು. ಸಾಂಪ್ರದಾಯಿಕ ಕಟ್ಟಾ ಕ್ಯಾಥೊಲಿಕ್ ಕ್ರೈಸ್ತರಿಗೆ ಸ್ತ್ರೀ ಪುರುಷರ ವಿವಾಹ ರಹಿತ, ಯಾವುದೇ ಕಟ್ಟಳೆ ರಹಿತ ದೈಹಿಕ ಸಂಬಂಧ ಸ್ವೇಚ್ಛಾಚಾರ, ಅಧಾರ್ಮಿಕವೆನಿಸಿತ್ತು. ಆದರೆ ರೋಮಿನ ಜನತೆಯ ಬದುಕಿನಲ್ಲಿ ಹಾಸುಹೊಕ್ಕಾಗಿದ್ದ ಲುಪರ್ಕೇಲಿಯಾ ಹಬ್ಬದ ಆಚರಣೆಯನ್ನು ಹೋಗಲಾಡಿಸುವುದು ಅವರಿಗೆ ಸಾಧ್ಯವಿರಲಿಲ್ಲ. ಹಾಗಾಗಿ ರೋಮಿನಲ್ಲಿ ಕ್ಯಾಥಲಿಕ್ ಕ್ರೈಸ್ತರ ಏಳಿಗೆಯಾದಂತೆ ಲುಪರ್ಕೇಲಿಯಾ ಹಬ್ಬ ನಿಧಾನಕ್ಕೆ ಸ್ವಲ್ಪ ಸ್ವಲ್ಪವೇ ಪರಿವರ್ತಿತವಾಗತೊಡಗಿತು. ಕೊನೆಗೊಮ್ಮೆ ಸಂತ ವ್ಯಾಲೆಂಟೈನ್ ರ ದಿನವೆಂದು ಬದಲಾಗಿಹೋಯಿತು.
 
ಅದಕ್ಕೆ ಸಂತ ವ್ಯಾಲೆಂಟಿನೋರ ದಿನವೆಂದು ನಾಮಕರಣ ಮಾಡಲಾಯಿತಾದರೂ ಯಾರು ಈ ಸಂತ? ಎಂಬ ಬಗ್ಗೆ ಹಲವಾರು ವಾದ ವಿವಾದಗಳಿವೆ. ಕೆಲವು ದಾಖಲೆಗಳು ಸಂತ ವ್ಯಾಲೆಂಟೈನ್ ಒಬ್ಬನಲ್ಲ ಅದು ಹಲವರ ಗುಂಪು ಎಂದು ವಾದಿಸುತ್ತದೆ. ಮತ್ತೆ ಕೆಲವು ಮೂಲಗಳು ವ್ಯಾಲೆಂಟೈನ್ ಅಥವಾ ವ್ಯಾಲೆಂಟೀನೋ ಎಂಬಾತ ಒಬ್ಬ ಪಾದ್ರಿಯೆಂದೂ, ಒಬ್ಬ ಯೋಧನೆಂದೂ ಅಭಿಪ್ರಾಯಪಡುತ್ತದೆ.
ಯಾರೀ ವ್ಯಾಲೆಂಟೀನೋ/ಗಳು?
ಮೊದಲ ವಾದ: ರೋಮನ್ನರ ಆಳ್ವಿಕೆ ಇನ್ನೂ ಅಲ್ಪಸ್ವಲ್ಪ ಬಲ ಉಳಿಸಿಕೊಂಡಿರುವಾಗ ಧರ್ಮ ಪ್ರಚಾರಕ್ಕೆ ತೊಡಗಿದ್ದ ಕ್ರೈಸ್ತರನ್ನು ಹುಡುಕಿ ಹಿಡಿದು ಅವರನ್ನೆಲ್ಲಾ ಸೆರೆಗೆ ಹಾಕಿ ಭಯಂಕರ ಶಿಕ್ಷೆ ವಿಧಿಸಲಾಗುತ್ತಿತ್ತು. ಆಗ ಈ ವ್ಯಾಲೆಂಟೈನ್ ಎಂಬ ವ್ಯಕ್ತಿ ಸೆರೆಗೆ ಹಾಕಲ್ಪಟ್ಟ ಕ್ರೈಸ್ತರನ್ನು ಜೈಲಿನಿಂದ ಬಿಡಿಸಿ ಅವರು ತಪ್ಪಿಸಿಕೊಳ್ಳುವುದಕ್ಕೆ ಸಹಾಯ ಮಾಡುತ್ತಿದ್ದ ಎನ್ನಲಾಗಿದೆ. ಇದು ರೋಮನ್ನರಿಗೆ ತಿಳಿದು ಆತನನ್ನೂ ಸೆರೆಗೆ ಹಾಕಿ ಕಡೆಗೆ ಆತನನ್ನು ಕೊಲ್ಲಲಾಯಿತೆನ್ನೆಲಾಗಿದೆ. ಈ ವ್ಯಾಲೆಂಟೈನ್ ಸೆರೆಯಲ್ಲಿ ಇದ್ದಾಗ ಅವನಿಗೆ ಜೈಲರನ ಮಗಳ ಮೇಲೆ ಪ್ರೇಮ ಹುಟ್ಟಿ ಆಕೆಗೆ ಮೊದಲ ಪ್ರೇಮಪತ್ರ ಬರೆದನೆನ್ನಲಾಗಿದೆ. ಈ ವ್ಯಾಲೆಂಟೈನ್ ನ ತ್ಯಾಗ, ಪ್ರೇಮದ ಕುರುಹಾಗಿ ಫೆಬ್ರವರಿಯ ೧೪ನೆಯ ದಿನಕ್ಕೆ ಆತನ ಹೆಸರನ್ನು ಮರುನಾಮಕರಣ ಮಾದಲಾಯಿತು ಎನ್ನಲಾಗಿದೆ.
 
ಎರಡನೆಯ ವಾದ: ವ್ಯಾಲೆಂಟೈನ್ ಎಂಬಾತ ಮೂರನೇ ಶತಮಾನದಲ್ಲಿ ರೋಮಿನಲ್ಲಿದ್ದ ಪಾದ್ರಿ ಎನ್ನುತ್ತದೆ ಮತ್ತೊಂದು ಮೂಲ. ಚಕ್ರವರ್ತಿ ಕ್ಲಾಡಿಯಸ್ ಸೈನ್ಯ ಕಟ್ಟುವಾಗ ಮದುವೆಯಾಗದ, ಮಕ್ಕಳು ಮರಿಗಳಿಲ್ಲದ ಗಂಡಸರನ್ನು ಸೈನ್ಯಕ್ಕೆ ತೆಗೆದುಕೊಂಡರೆ ಬಲಶಾಲಿ ಸೈನ್ಯ ಕಟ್ಟಬಹುದೆಂಬ ನಂಬಿಕೆ ಇಟ್ಟುಕೊಂಡಿದ್ದ. ಶಕ್ತಿಶಾಲಿ ಯುವಕರು ಮದುವೆ ಮಾಡಿಕೊಳ್ಳಬಾರದೆಂಬ ಕಾನೂನನ್ನೂ ಮಾಡಿಬಿಟ್ಟಿದ್ದ. ಆದರೆ ಪ್ರೀತಿ ಕೇಳುತ್ತದಾ? ಸೈನ್ಯಕ್ಕೆ ಸೇರಿದ್ದ ಸೇರಲಿದ್ದ ಯುವಕರು ತಾವು ಪ್ರೀತಿಸಿದವರೊಡನೆ ಮದುವೆಯಾಗಲು ಈ ವ್ಯಾಲೆಂಟೈನ್ ಹೆಸರಿನ ಪಾದ್ರಿಯಲ್ಲಿಗೆ ಬರುತ್ತಿದ್ದರು. ಆತ ರಹಸ್ಯವಾಗಿ ಪೌರೋಹಿತ್ಯವಹಿಸಿ ಅವರ ಮದುವೆಗಳನ್ನು ನಡೆಸಿಕೊಡುತ್ತಿದ್ದ. ಇದು ಕಾಲಕ್ರಮೇಣ ಕ್ಲಾಡಿಯಸ್ ಗೆ ಗೊತ್ತಾಗಿ ಆತ ವ್ಯಾಲೆಂಟೈನ್ ಗೆ ಮರಣೆದಂಡನೆ ವಿಧಿಸಿದ. ಪ್ರೇಮಿಗಳಿಗೆ ಬೆಲೆಕೊಟ್ಟ ಈ ಪಾದ್ರಿಯ ನೆನಪಿಗೆ ವ್ಯಾಲೆಂಟೈನ್ ದಿನ ಜಾರಿಗೆ ಬಂತು ಎನ್ನಲಾಗುತ್ತದೆ.
 
ಮತ್ತೂ ಒಂದು ವಾದ: ರೋಮಿನಲ್ಲಿ ಕ್ರೈಸ್ತ ಪಾದ್ರಿಗಳಾಗಿದ್ದ ವ್ಯಾಲೆಂಟೈನ್ ಎಂಬ ಒಂದೇ ಹೆಸರಿನ ಇಬ್ಬರು ಪಾದ್ರಿಗಳು ಹುತಾತ್ಮರಾದದ್ದನ್ನು (ಬೇರೆ ಬೇರೆ ಕಾಲದಲ್ಲಿ) ಸ್ಮರಿಸಿಕೊಳ್ಳಲು ಫೆಬ್ರವರಿಯ ೧೪ ನೆ ದಿನವನ್ನು ಅವರ ಹೆಸರಿನಲ್ಲಿ ಕರೆಯಲಾಯಿತೆನ್ನಲಾಗಿದೆ.
ಈ ವಾದ ವಿವಾದಗಳನ್ನು ನೋಡಿದಾಗ ಒಂದಂತೂ ಸ್ಪಷ್ಟ. ಪುರಾತನ ರೋಮನ್ನರ ’ಪೇಗನ್’ ನಂಬಿಕೆಗಳನ್ನು ಉಳಿಸಿಕೊಳ್ಳುವುದು ಕ್ರೈಸ್ತ ಮತಕ್ಕೆ ಬೇಡವಾಗಿತ್ತು. ಆದರೆ ಆಚರಣೆಗಳನ್ನು ಕೈ ಬಿಡುವುದು ಅಷ್ಟು ಸುಲಭದ ಮಾತಲ್ಲವಲ್ಲಾ...ಹಾಗಾಗಿ ಪ್ರೀತಿ ಅಥವಾ ದೈಹಿಕ ಕಾಮನೆಗಳನ್ನು ವಿಜೃಂಭಿಸಿಕೊಳ್ಳುವ ಆಚರಣೆಯನ್ನು ಹಾಗೇ ಬಿಟ್ಟು ಲುಪರ್ಕೇಲಿಯಾ ಹಬ್ಬಕ್ಕೆ ಕ್ರೈಸ್ತಸಂತನೊಬ್ಬನ ಹೆಸರನ್ನು ಕೊಟ್ಟು ಪ್ರಚಾರ ಮಾಡಲಾಯಿತು. ವ್ಯಾಲೆಂಟೈನ್ ಡೇ ಕೇವಲ ಗಂಡು ಹೆಣ್ಣುಗಳ ನಡುವಣ ಪ್ರೀತಿ ಪ್ರೇಮದ್ದಲ್ಲವೆಂದೂ ತಾಯಿ ಮಗು, ಅಕ್ಕ ತಮ್ಮ, ಅತ್ತೆ ಸೊಸೆಯರ ನಡುವಿನ ಪ್ರೀತಿಯ ಆಚರಣೆಯೆಂದೂ ಸೂಚಿಸಲಾಯಿತು.
 
ಹಾಗಾದರೆ ಈಗ ವ್ಯಾಲೆಂಟೈನ್ ಎಲ್ಲಿ?
೪೦-೫೦ ವರ್ಷ ಜೀವನದ ಸಕಲ ಸುಖ ದುಃಖಗಳನ್ನೂ ಗೊಣಗಾಡಿಕೊಂಡೋ ಹಾಡಿಕೊಂಡೋ ನಿಭಾಯಿಸಿದ ವೃದ್ಧ ಜೋಡಿಯ ಗಾಢ ಪ್ರೀತಿಯಲ್ಲಿ ವ್ಯಾಲೆಂಟೈನ್ ನ ಪಾತ್ರ ಇರಬೇಕಿಲ್ಲ. ಪುಟ್ಟ ಕಂದಮ್ಮ ಅಮ್ಮನೊಡಲಿನಲ್ಲಿ ಕಾಲೊದ್ದು ಆಡುವಾಗ, ಅಳುವ ತಂಗಿಯನ್ನು ಅಣ್ಣ ಕಣ್ಣೊರೆಸಿ ಸಮಾಧಾನ ಮಾಡಲು ವ್ಯಾಲೆಂಟೈನ್ ಏನೂ ಬೇಕಿಲ್ಲ. ಈಗ ಎಲ್ಲರಿಗಿಂತ ವ್ಯಾಲೆಂಟೈನ್ ಹೆಚ್ಚಾಗಿ ಬೇಕಿರುವುದು ಮಾರುಕಟ್ಟೆಗೆ. ವಜ್ರದಂಗಡಿ, ವಿಕ್ಟೋರಿಯಾ ಸೀಕ್ರೆಟ್, ಹಾಲ್ ಮಾರ್ಕ್, ಹರ್ಶೀಸ್ ಅಥವಾ ಸರಕುಗಳನ್ನು ತಯಾರಿಸಿ ಉಡುಗೊರೆಗಳನ್ನಾಗಿ ಮಾರುವ ಅಸಂಖ್ಯಾತ ಕಂಪನಿಗಳಿಗೆ. ವಿಕ್ಟೋರಿಯಾಸ್ ಸೀಕ್ರೆಟ್ ಎಂಬ ಫ್ಯಾನ್ಸೀ ಹೆಂಗಸರ ಒಳ ಉಡುಪುಗಳನ್ನು ತಯಾರಿಸಿ ಮಾರುವ ಕಂಪನಿ ಇದೊಂದೇ ಆಚರಣೆಯ ಸಮಯದಲ್ಲಿ ಇಡೀ ವರ್ಷದ ಲಾಭದಲ್ಲಿ ಅರ್ಧಕ್ಕಿಂತಲೂ ಹೆಚ್ಚನ್ನು ಸಂಪಾದಿಸಿಬಿಡುತ್ತದೆ.
 
ಅಮೆರಿಕಾದ ಸ್ಕೂಲುಗಳ ಮಿಸ್ಸುಗಳು ’ನಿಮ್ಮ ಮಗುವಿನ ಕೈಲಿ ಇಷ್ಟು ಜನ ಕ್ಲಾಸ್ ಮೇಟುಗಳಿಗೆ ’ವ್ಯಾಲೆಂಟೈನ್’ ಗಳನ್ನು ಮಾಡಿ ಕಳಿಸಿ ಎಂದು ಮನೆಯವರಿಗೆ ನೋಟೀಸು ಕಳಿಸುತ್ತಾರೆ. ೪-೫ ವರ್ಷದ ಮಕ್ಕಳು ’ತಮಾಷೆಗಾಗಿ’ ತಮ್ಮ ಕ್ಲಾಸಿನಲ್ಲಿ ತಮಗೋಸ್ಕರ ಗರ್ಲ್ ಫ್ರೆಂಡ್, ಬಾಯ್ ಫ್ರೆಂಡ್ ಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಷಾಂಪೇನು, ವಜ್ರ ಹಾಳಾಗಲಿ...ಗಂಡ ಆ ದಿನ ಕೆಂಪು ಗುಲಾಬಿಗಳನ್ನೋ, ಕನಿಷ್ಟ ಚಾಕೋಲೇಟನ್ನೋ ತಂದುಕೊಡದಿದ್ದರೆ ಹೆಂಡತಿ ಮುನಿಸಿಕೊಳ್ಳುವುದು ಸಮ್ಮತ ಆಗುತ್ತದೆ. ಗೆಳೆಯ ಗೆಳತಿಯರು ಉಡುಗೊರೆಯನ್ನಾಗಲೀ, ಕನಿಷ್ಟ ಒಂದು ಕಾರ್ಡನ್ನಾಗಲೀ ಹಂಚಿಕೊಳ್ಳದಿದ್ದರೆ ಮನಸ್ತಾಪಗಳಾಗುತ್ತವೆ, ಸ್ನೇಹವೇ ಕಳಚಿಹೋಗುತ್ತದೆ...ಹಾಗಾಗಿ ಸೂಪರ್ ಮಾರ್ಕೆಟ್ ಗಳ ’ಐಲು’ಗಳು ಭರ್ತಿಯಾದಷ್ಟೇ ಬೇಗ ಖರ್ಚಾಗುತ್ತವೆ. ಇದೊಂದು ದಿನ ಮಾತ್ರ ಜನ ಗೊಣಗಿಕೊಂಡೇ, ಮನಸ್ಸಿನಲ್ಲೇ ಬೈದಾಡಿಕೊಂಡೇ ಪ್ರೀತಿಯನ್ನು ’ಆಚರಿಸುತ್ತಾರೆ’.  
  
ದುಡ್ಡು ಕೊಟ್ಟು ಕಾಫಿ ಕುಡಿದರೆ ಎಫ್ ಬಿ ಐ ನವರು ಬರುತ್ತಾರೆ!!

 
ನೀವೇನಾದರೂ ನಿಮ್ಮ ಬೆಳಗಿನ ಕಾಫಿಯನ್ನು ಯಾವುದಾದರೂ ಕಾಫಿ ಶಾಪಿನಲ್ಲಿ (ಡೆಬಿಟ್ ಅಥವಾ ಕ್ರೆಡಿಟ್) ಕಾರ್ಡು ಕೊಡದೆ ದುಡ್ಡು ಕೊಟ್ಟು ಖರೀದಿಸುತ್ತೀರಾ? ದೊಡ್ಡ ದೊಡ್ಡ ಅಮೆರಿಕಾದ ಸಿಟಿಗಳನ್ನು ಅಲ್ಲಿ ಕ್ರೀಡೆಗಳು ನಡೆಯುವ ಸ್ಟೇಡಿಯಂ ಗಳನ್ನು ’ಗೂಗಲ್ ಮ್ಯಾಪ್ಸ್’ ಬಳಸಿ ನಿಮ್ಮನೆಯ ಕಂಪ್ಯೂಟರ್ ಅಥವಾ ಲ್ಯಾಪ್ ಟಾಪಿನಲ್ಲಿ ನೋಡುತ್ತಿದ್ದೀರಾ? ನಿಮ್ಮ ಸೆಲ್ ಫೋನ್ ಗಳಲ್ಲಿ ನಡೆಯುವ ಅಂತರ್ಜಾಲದ ಚಟುವಟಿಕೆಗಳನ್ನು ಯಾರಿಗೂ ತಿಳಿಯದಂತೆ ಬಚ್ಚಿಟ್ಟುಕೊಳ್ಳಲು ಸಾಫ್ಟ್ ವೇರ್ ಗಳನ್ನು ಬಳಸುತ್ತಿದ್ದೀರಾ??
ಹಾಗಿದ್ದರೆ ತಯಾರಾಗಿರಿ. ಎಫ್ ಬಿ ಐ (ಫೆಡೆರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್) ನಿಮ್ಮ ಮನೆಯ ಬಾಗಿಲು ತಟ್ಟಬಹುದು!
ಎಫ್ ಬಿ ಐ ನ ಹೊಸ ಕಮ್ಯುನಿಟೀಸ್ ಎಗೇನ್ಸ್ಟ್ ಟೆರರಿಸಂ ಎನ್ನುವ ಕಾಯಿದೆಗೆ ಅನುಗುಣವಾಗಿ ಎಫ್ ಬಿ ಐ ಈಗ ಈ ಚಟುವಟಿಕೆಗಳನ್ನು ನಡೆಸುತ್ತಿರುವವರ ಮೇಲೆ ನಿಗಾ ಇಡಬೇಕೆಂದು ನಿರ್ಧರಿಸಿದೆ. ಅಂಥವರನ್ನು ಗುರುತಿಸುವುದಕ್ಕಾಗಿಯೇ ಸ್ಮಾರ್ಟ್ ಪ್ರೋಗ್ರಾಮ್ ಒಂದನ್ನು ತಯಾರಿಸಿ ಅಂಗಡಿಗಳಿಗೆ, ಅಂತರ್ಜಾಲವನ್ನು ಮನೆಮನೆಗಳಿಗೂ ತಲುಪಿಸುವ ಕಂಪನಿಗಳಿಗೆ ಒದಗಿಸಲಾಗಿದೆ.
ಹಾಗೇಯೇ ಮುಂದೆ ತರಬೇತಿದಾರರಾಗಬೇಕೆಂದು ಸ್ಕೂಬಾ ಡೈವಿಂಗ್ (ಸಮುದ್ರದಾಳಕ್ಕೆ ಡೈವ್ ಮಾಡಿ ಅಲ್ಲಿನ ಜೀವ-ಸಸ್ಯ ರಾಶಿಗಳನ್ನು ಪರಿವೀಕ್ಷಿಸುವ ಚಟುವಟಿಕೆ) ತರಗತಿಗಳಿಗೆ ಸೇರುವವರ ಪಟ್ಟಿಯನ್ನೂ ತನಗೆ ನೀಡಬೇಕೆಂದು ಸ್ಕೂಬಾ ಡೈವಿಂಗ್ ಶಾಲೆಗಳ ಸಹಾಯ ಕೇಳಿದೆ. ಭಯೋತ್ಪಾದನೆ ಮಾಡುವ ಉದ್ದೇಶವಿಟ್ಟುಕೊಂಡವರು ಈ ಚಟುವಟಿಕೆಗಳಲ್ಲಿ ಆಸಕ್ತಿ ತೋರುವ ಸಾಧ್ಯತೆ ಹೆಚ್ಚೆಂದು ಎಫ್ ಬಿ ಐ ಗುರುತಿಸಿದೆ.  
  
 
 
 
 
Copyright © 2011 Neemgrove Media
All Rights Reserved