ವಿಚಾರಣೆ
-ಶ್ರೀ ಲಕ್ಷ್ಮಣ ಕೊಡಸೆ
ಮುಸ್ಸಂಜೆಯ ಹೊತ್ತಿನಲ್ಲಿ ಮದುವೆಗೆ ಹೊಲಿಸಿದ್ದ ಬಟ್ಟೆಗಳನ್ನು ಹಾಕಿಕೊಂಡು ಕೈಯಲ್ಲಿ ಗ್ರಾಮಸೇವಕರಿಂದ ಇಸಿದುಕೊಂಡ ಹೊಸ ಕಬ್ಬಿಣದ ದಿಂಡಿನ ಕೊಡೆ ಹಿಡಿದು, ಕಸೂತಿ ಹಾಕಿದ ಎಲೆಯಡಿಕೆ ಚೀಲ ಜೋತಾಡಿಸುತ್ತ ಹೊರಟ ಹಾಲಪ್ಪನಿಗೆ ಎದುರಾದವರು,
ಏನು ಮದುಮಕ್ಕಳ ಸವಾರಿ, ಅತ್ತೆ ಮನೆ ಕಡೆಗೋ?' ಎಂದು ಕೇಳುತ್ತಿದ್ದರು. ಇವನು ನಾಚಿ ನಿಲ್ಲುವಾಗ `ಹೋಗಿ ಹೋಗಿ, ಆಗಲೇ ಬೈಗಾತ ಬಂತು' ಎನ್ನುತ್ತಿದ್ದರು.
ಮದುವೆ ಕಳೆದು ವಾರವಾದರೂ ಮದುಮಗನಾಗಿಯೇ ಇದ್ದ ಹಾಲಪ್ಪ. ಹೆಂಡತಿ ಊರಿಗೆ ಪೇಟೆ ಮೂಲಕ ಹಾದು ಹೋಗುವಾಗ ಸುಮ್ಮನೆ ಪೇಟೆ ದಾಟಬಹುದಿತ್ತು. ಹುಟ್ಟಿದಾರಭ್ಯ ಆರಂಭದ ಕೆಲಸದಲ್ಲೇ ಇದ್ದ ಅವನು ಪೇಟೆ ಸೆಗಣಿ ತುಳಿಯ ಹತ್ತಿದ್ದು ಇತ್ತೀಚೆಗೆ. ಅಕ್ಕಿ ಮಾಡಿಸಲು ಗಾಡಿ ಕಟ್ಟಿಸಿಕೊಂಡು ಪೇಟೆಗೆ ಬಂದನೆಂದರೆ ಲಕ್ಷ್ಮಣ ಭಟ್ಟನ ಹೋಟೆಲಿನಲ್ಲಿ ಕುಡಿಯುವ ಚಾ ಎಲ್ಲೋ ಅಪರೂಪದ್ದು. ಈ ಸಲ ಜೇಬಿನಲ್ಲಿದ್ದ ಚಿಲ್ಲರೆ ಸದ್ದಾಗುತ್ತಿದ್ದರಿಂದ ಕಾಲು ಭಟ್ಟನ ಹೋಟೆಲು ಕಡೆ ಎಳೆದವು.
ಹೋಟೆಲಿಗೆ ಹೋಗುವ ಮೊದಲು ಪಕ್ಕದಲ್ಲಿಯೇ ಇದ್ದ ರಾಮಭಟ್ಟನ ಅಂಗಡಿಗೆ ಹೋಗಿ ಬಂದು ಸಿಗರೇಟು ಪ್ಯಾಕು ಕೊಂಡ. ಒಂದು ಸಿಗರೇಟು ಹೊತ್ತಿಸಿ ಯಾರಾದರೂ ಹಿರಿಯರು ಗಮನಿಸಿಯಾರೆಂದು ಸುತ್ತಮುತ್ತ ನೋಡುತ್ತ ಅವಸರವಾಗಿ ಹೊಟೇಲಿಗೆ ನುಗ್ಗಿದ. ಗೋಲಿಬಜೆ ತಿಂದು ಚಾ ಕುಡಿದು ಏಳುವಾಗ ಕೈಯಲ್ಲಿ ಕೊಡೆ ಇಲ್ಲದ್ದು ಗಮನಕ್ಕೆ ಬಂತು. ಕೂಡಲೇ ಎದ್ದು ಬಿಲ್ಲು ಕೊಟ್ಟು ಹೊರಗೆಲ್ಲಾ ಕಣ್ಣಾಡಿಸಿದ. ಸಿಗರೇಟು ಕೊಳ್ಳುವಾಗ ರಾಮಭಟ್ಟನ ಅಂಗಡಿಯಲ್ಲಿ ಕೊಡೆಯನ್ನು ಒರಗಿಸಿಟ್ಟಿದ್ದು ನೆನಪಾಯಿತು. ಪಕ್ಕದಲ್ಲೇ ಅಂಗಡಿ. ತಕ್ಷಣ ಅಲ್ಲಿಗೆ ಕಂಗಾಲಾಗಿ ಓಡಿದ. ಇಟ್ಟ ಜಾಗದಲ್ಲಿ ಕೊಡೆ ಇರಲಿಲ್ಲ. ಹಾಲಪ್ಪನಿಗೆ ಸೂರು ಹರಿದು ಬಿದ್ದಂತಾಯಿತು. ಗ್ರಾಮಸೇವಕರು `ಮದುಮಗ, ತೆಗೆದುಕೊಂಡು ಹೋಗು' ಎಂದು ಮದುವೆಯ ದಿನವೇ ಕೊಟ್ಟಿದ್ದರು. ಅದನ್ನು ಬಿಚ್ಚಿ ಕೂಡ ಸರಿಯಾಗಿ ನೋಡಿರಲಿಲ್ಲ. `ಈಗ ಎಂಥಾ ಗತಿ ಬಂತಪ್ಪ' ಎಂದುಕೊಂಡು ಮಂಕಾಗಿ ನಿಂತಿದ್ದಾಗ ಆಜುಬಾಜಿನ ಹಳ್ಳಿಯ ಪರಿಚಿತರು ಅವನನ್ನು ಮಾತಾಡಿಸಿದ್ದರು. ಅವನಿಗೆ ಅದೊಂದೂ ಬೇಕಿರಲಿಲ್ಲ.
ಸಂಜೆಯ ಹೊತ್ತಾಗಿದ್ದುದರಿಂದ ಭಟ್ಟನ ಅಂಗಡಿಯಲ್ಲಿ ಸಾಕಷ್ಟು ಜನ ಸೇರಿದ್ದರು. ಜಾಸ್ತಿ ಜನ ಇದ್ದ ಕಾರಣ ಕೊಡೆಯ ಬಗ್ಗೆ ಕೇಳಲೂ ಭಯ. ಪೇಟೆ ದಾಟಿ ಅತ್ತೆ ಮನೆ ಸೇರಬೇಕಾದರೆ ಸಾಕಷ್ಟು ದೂರ ನಡೆಯಬೇಕಿತ್ತು. ಗೊಂದಲ, ಆತಂಕದಲ್ಲಿ ಚಡಪಡಿಸುತ್ತಿದ್ದ ಹಾಲಪ್ಪ ಜನ ಕರಗಿದ ಮೇಲೆ ಹೆದರುತ್ತಾ ಹೆದರುತ್ತಾ `ಭಟ್ರೇ, ಒಂದು ಕೊಡೆ ಇಲ್ಲಿಟ್ಟಿದ್ದೆ. ಎತ್ತಿಟ್ಟಿರಾ...' ಎಂದು ಕೇಳಿದ. ರಾಮಭಟ್ಟ ಏನೋ ಹೇಳಲು ಬಾಯಿ ತೆರೆಯುವಷ್ಟರಲ್ಲಿ ಅಂಗಡಿಯಲ್ಲಿ ಸಾಮಾನು ಕಟ್ಟುತ್ತಿದ್ದ ಹುಡುಗ `ಯಾವುದು? ಕೊಡೆಯಾ? ಇಲ್ಲಿದೆಯಲ್ಲ, ನಿಮ್ಮದಾ?' ಎಂದು ಎಣ್ಣೆಡಬ್ಬಗಳ ಸಂದಿಯಲ್ಲಿ ಹುದುಗಿಸಿಟ್ಟ ಕೊಡೆಯೊಂದನ್ನು ತೋರಿಸಲು ಮುಂದಾದ. ರಾಮಭಟ್ಟ ಹುಡುಗನಿಗೊಂದು ತಪರಾಕಿ ಹಾಕಿ, `ಯಾರದ್ದೋ ಆ ಕೊಡೆ, ನಿಂದೇನೋ?' ಎಂದು ಹಾಲಪ್ಪನಿಗೆ ಜೋರು ಮಾಡಿದ. ಹಿಡಿಕೆಯಲ್ಲಿ ಬೆಳ್ಳಗೆ ಹೊಳೆಯುವ ಕಬ್ಬಿಣದ ದಿಂಡಿನ ಕೊಡೆ ಕಂಡ ಹಾಲಪ್ಪ `ಹೌದ್ರೀ ನಂದೇ, ಆವಾಗ ಸಿಕ್ಲೇಟು ಕೊಂಡಕಾ ಬೇಕಾರೆ ಇಲ್ಲಿ ಇಟ್ಟು ಹೋಗಿದ್ದೆ. ನಂದೇ ರೀ..' ಎಂದ. `ನಮ್ಮದೂ ಒಂದು ಕೊಡೆ ಇದೇ ಥರ ಇತ್ತು. ವಾರದ ಹಿಂದೆ ಕಳೆದುಹೋಯ್ತು. ಅದನ್ನೇ ಹುಡುಕ್ತಾ ಇದ್ದೆ. ಇವತ್ತು ಸಿಕ್ತು, ಪರವಾಯಿಲ್ಲ ನೀನು. ಹೋದ ವಾರದ ಸಂತೆಯ ದಿನ ಹೊಡೆದೆಯಾ...?' ರಾಮಭಟ್ಟನ ನೇರ ಆಪಾದನೆಯಿಂದ ಹಾಲಪ್ಪನ ತೊಳ್ಳೆ ನಡುಗಿ ಮೈಯೆಲ್ಲ ಬೆವತು ಹೋಯಿತು.
ಭಟ್ಟನ ಏರುದನಿಯ ಜೋರಿಗೆ ಆಗಲೇ ಕೊಡೆಯ ಪ್ರಕರಣ ಪಕ್ಕದಲ್ಲಿಯೇ ಇದ್ದ ಲಕ್ಷ್ಮಣ ಭಟ್ಟನ ಹೋಟೆಲಿಗೂ ಹರಡಿತ್ತು. ಅಲ್ಲಿನ ಗಿರಾಕಿಗಳು ಕೆಲವರು ಇಲ್ಲಿಗೆ ಬಂದರು. ರಸ್ತೆಯಲ್ಲಿ ಓಡಾಡುತ್ತಿದ್ದವರೂ ಈ ಕಡೆ ತಲೆಹಾಕಿದರು. ಎಲ್ಲರೂ ಏನು ಏನು ಎಂದು ವಿಚಾರಿಸತೊಡಗಿ ಸಾಕಷ್ಟು ಗೊಂದಲವಾಯಿತು. ಹಳ್ಳಿಯ ಒಂದಿಬ್ಬರು ಹಾಲಪ್ಪನ ಪರವಾಗಿ ಮಾತಾಡಿದಾಗ ಅವರನ್ನು ನೋಡಿ ಇನ್ನೂ ಹಾರಾಡಿದ ಭಟ್ಟ ಕೊಡೆಯನ್ನು ಹಾಲಪ್ಪನ ಕೈಯಿಂದ ಕಿತ್ತುಕೊಂಡು ಗಲ್ಲಾದ ಹಿಂದೆ ಇಟ್ಟ. ಹಾಲಪ್ಪ ಏನು ಮಾಡಲೂ ತೋಚದೆ ಮಿಕಿಮಿಕಿ ನೋಡುತ್ತಿದ್ದಾಗ ಯಾರೋ ಒಬ್ಬರು `ನಿನ್ನ ಕೊಡೆ ಗುರ್ತಾ ಐತಾ? ಸರಿಯಾಗಿ ಗುರ್ತು ಹೇಳಿದರೆ ಸಾವುಕಾರ್ರು ಕೊಡ್ತಾರೆ' ಎಂದು ಸಮಾಧಾನಪಡಿಸಲು ಯತ್ನಿಸಿದರು. `ಕೊಡೆ ನಾನೇ ತಂದಿದ್ದೆ. ಇಲ್ಲೇ ಇಟ್ಟಿದ್ದೆ' ಎಂದು ನಡುಗುವ ಧ್ವನಿಯಲ್ಲಿ ಹಾಲಪ್ಪ ಪದೇ ಪದೇ ಹೇಳತೊಡಗಿದ.
ಜನ ಸೇರುತ್ತಿದ್ದಂತೆ ರಾಮಭಟ್ಟನ ಜೋರು ಜಾಸ್ತಿಯಾಯಿತು. ಕೊಡೆಯನ್ನು ಬಿಚ್ಚಿ ಚಹರೆ ನೋಡಲು ಅವನಿಗೆ ಮನಸ್ಸಿರಲಿಲ್ಲ. ಬರೀ ಬಾಯಿ ಜೋರಿನಲ್ಲಿ ಅದು ತನ್ನದೇ ಎಂದು ಸಾಧಿಸತೊಡಗಿದ್ದ. ಹಾಲಪ್ಪನ ಕಡೆ ಮಾತಾಡಿದ ಕೆಲವರು ಕೊನೆಗೆ ಅವನಿಗೇ ಸಮಾಧಾನ ಹೇಳಲು ಬಂದರು. `ನೀನು ನಿಜವಾಗಲೂ ಕೊಡೆ ತಂದಿದ್ಯಾ' ಎಂದೊಬ್ಬ ಕೇಳಿದ. ಎಲ್ಲರ ಬಲವಂತ ಅತಿಯಾಗಿ ಹಾಲಪ್ಪ ಅವಮಾನ ತಡೆಯದೆ ಜೋರಾಗಿ ಅಳತೊಡಗಿದ.
ಸೇರಿದ ಬಹಳಷ್ಟು ಜನಕ್ಕೆ ಕೊಡೆ ಹಾಲಪ್ಪನದೇ ಇದ್ದರೂ ಇರಬಹುದೆನ್ನಿಸಿತ್ತು. ಪೇಟೆಯ ಕೆಲವರು ರಾಮಭಟ್ಟನ ಕಡೆ ಮಾತಾಡತೊಡಗಿದ್ದು ನೋಡಿದರೆ ಅದು ರಾಮಭಟ್ಟನದೇ ಇರಬಹುದೆನ್ನಿಸಿತ್ತು. ರಾಮಭಟ್ಟ ಕೊಡೆ ನೋಡಲು ಯಾರಿಗೂ ಅವಕಾಶ ಕೊಡದೇ ಇದ್ದುದರಿಂದ ಯಾವುದನ್ನೂ ಕೂಡಲೇ ಇತ್ಯರ್ಥಪಡಿಸುವಂತಿರಲಿಲ್ಲ.
ಅಷ್ಟು ಹೊತ್ತಿಗೆ ಆ ಕಡೆ ರಸ್ತೆಯಲ್ಲಿ ಬರುತ್ತಿದ್ದ ಪೊಲೀಸ್ ಪೇದೆಯೊಬ್ಬನಿಗೆ ಯಾರೋ ಗಲಾಟೆಯ ಸುದ್ದಿ ಮುಟ್ಟಿಸಿದರು. ಅವನು ಮೊದಲು ಹಿಂದೇಟು ಹಾಕಿದರೂ `ನೀವು ಸುಮ್ಮನೇ ಬನ್ನಿ, ಕೇಸು ತನ್ನಂತಾನೇ ಪೈಸಲ್ ಆಗ್ತದೆ' ಎಂದು ಹೇಳಿದ್ದರಿಂದ ಹ್ಯಾಟು ಸರಿಯಾಗಿ ಹಾಕಿಕೊಂಡು ಲಾಠಿ ತಿರುಗಿಸುತ್ತಾ ಅಂಗಡಿ ಕಡೆ ಬಂದ.
ಸಾಕಷ್ಟು ಜನ ಸೇರಿದ್ದನ್ನು ನೋಡಿದ ಮೇಲೆ ಸಂಬಂಧಪಟ್ಟವರನ್ನು ಮೊದಲು ಸ್ಟೇಷನ್ನಿಗೆ ಕರೆದೊಯ್ಯುವುದು ಮೇಲು ಎನ್ನಿಸಿತು. ಆದರೆ ಇಲ್ಲೇ ಇತ್ಯರ್ಥವಾದರೆ... ಎಂದು ಪೊಲೀಸ್ ಬುದ್ಧಿಯೂ ಓಡಿತು. ಇಷ್ಟಕ್ಕೂ ಮೊದಲು ಜನ ಸೇರಿದ್ದರ ಕಾರಣ ವಿಚಾರಿಸಬೇಕಿತ್ತು. ಸೇರಿದವರಿಗೆಲ್ಲ ತನಗೆ ಹೆದರುವಂತೆ ಕಂಡುಬಂದುದರಿಂದ ಗುಂಪು ಸೇರಬಾರದೆಂದು ಎಚ್ಚರಿಕೆ ಕೊಟ್ಟ. ಪೇದೆಯ ಮಾತಿಗೆ ಕೆಲವರು ಬೆಲೆ ಕೊಟ್ಟರು. ಕೆಲವರು ಆ ಆಜ್ಞೆ ತಮಗಲ್ಲವೆಂದು ಸುಮ್ಮನೆ ಕತ್ತು ನಿಮಿರಿಸಿದರು.
ರಾಮಭಟ್ಟನನ್ನೂ, ಹಾಲಪ್ಪನನ್ನೂ ಅವರಿಬ್ಬರ ನಡುವೆ ಸಮಸ್ಯೆಯಾಗಿ ಬಂದ ಕೊಡೆಯನ್ನು ಕಣ್ಣಿಂದಲೇ ಅಳತೆ ಮಾಡಿದ ಪೇದೆ ವಿಚಾರಣೆ ಆರಂಭಿಸಿದ. ರಾಮಭಟ್ಟನ ಜತೆ ಮಾತಾಡುವಾಗ ಬಹುವಚನದಲ್ಲೂ, ಹಾಲಪ್ಪನನ್ನು ವಿಚಾರಿಸುವಾಗ ಏಕವಚನದಲ್ಲೂ ಪೊಲೀಸ್ ನಾಲಿಗೆ ಹೊರಳುತ್ತಿತ್ತು.`
ಈ ಕೊಡೆ ನಿಮ್ಮದೇನ್ರಿ?' ಕೊಡೆ ಇಸಿದುಕೊಂಡು ಪರಿಶೀಲಿಸುತ್ತಾ ಕೇಳಿದ.
ಹೌದು ಸಾರ್. ಹೋದವಾರ ಕಳೆದುಹೋಗಿತ್ತು' ಭಟ್ಟನ ವಿನಮ್ರ ಉತ್ತರ.
ಅಲ್ಲಿಗೆ ಭಟ್ಟನ ವಿಚಾರಣೆ ಮುಗಿದು ಲಾಠಿಯ ತುದಿ ಹಾಲಪ್ಪನತ್ತ ತಿರುಗಿತು.
ನಿಂದೇನಯ್ಯ ಕೊಡೆ?'
ಹ...ಹ... ಹೌದು... ಸ್ವಾಮಿ..'
ನಿಜವಾಗ್ಲೂ ನಿಂದೇನಯ್ಯ... ಸುಳ್ಳು ಹೇಳಿದ್ರೆ ಚಮಡ ಸುಲಿದುಬಿಡ್ತೀನಿ. ಸೂ...' ಪೊಲೀಸ್ ಬೆದರಿಕೆಗೆ ತಕ್ಕಂತೆ ಲಾಠಿಯೂ ಒಂದು ಸಲ ನೆಲವನ್ನು ಕುಟ್ಟಿತು. ಮೊದಲೇ ಕಂಗಾಲಾಗಿದ್ದ ಹಾಲಪ್ಪ ಸುಳ್ಳು ಹೇಳಲಾರದೆ `ನಂದಲ್ಲ ಸ್ವಾಮಿ, ನಮ್ಮೂರು ಗ್ರಾಮ ಸೇವಕರದ್ದು' ಎಂದು ಧೈರ್ಯವಹಿಸಿ ಹೇಳಿದ.
ಇಷ್ಟು ಹೊತ್ತು ನಡೆದಿದ್ದ ಹಗರಣವೆಲ್ಲ ತಿಳಿಯಾಗುವಂತೆ, ಅಲ್ಲಿ ಸೇರಿದ್ದವರೆಲ್ಲ ಜೋರಾಗಿ ನಗತೊಡಗಿದರು. ಒಂದು ಕ್ಷಣ ಪೇದೆಗೂ ಕಾರಣ ತಿಳಿಯಲಿಲ್ಲ. `ಈ ಮಾತು ಮೊದಲೇ ಹೇಳಿದ್ದರೆ ಇಷ್ಟೆಲ್ಲ ಆಗ್ತಾನೇ ಇರ್ತಿರಲಿಲ್ಲ. ಇಷ್ಟು ಹೊತ್ತು ತಂದೇ ಅಂತಿದ್ದ. ಪೊಲೀಸರನ್ನ ನೋಡಿದ ಕೂಡ್ಲೇ ಗ್ರಾಮಸೇವಕರದ್ದು ಅಂತಾನೆ. ಇನ್ಸ್ಪೆಕ್ಟರನ್ನು ನೋಡಿದರೆ ಇನ್ಯಾರದ್ದು ಅಂತಾನೋ... ಗಮಾರ' ಎಂದು ರಾಮಭಟ್ಟ ವಿಜಯದ ನಗೆ ನಕ್ಕು ಪೇದೆಯ ಕಡೆ ನೋಡುತ್ತ, `ಕೇಳಿದ್ರಲ್ಲ, ಸುಮ್ಮನೆ ಇಷ್ಟು ಹೊತ್ತೂ ಉಪದ್ರ ಕೊಟ್ಟ' ಎಂದ. ಪೇದೆಯಿಂದ ಕೊಡೆ ಇಸಿದುಕೊಂಡು ಕೆಲಸದ ಹುಡುಗನನ್ನು ಪಕ್ಕದ ಹೊಟೆಲಿಗೆ ಕಳಿಸಿ ಪೇದೆಗೆ ಸ್ಟೂಲು ನೀಡಿ ಕೂರಲು ವಿನಂತಿಸಿಕೊಂಡ.
ಅವನು ಪೇದೆಗೆ ಆತಿಥ್ಯ ಆರಂಭಿಸುತ್ತಿರುವುದನ್ನೂ ಕೇಸನ್ನು ಮುಗಿಸಿಯೇ ಬಿಟ್ಟಿರುವುದನ್ನೂ ನೋಡಿದ ಹಾಲಪ್ಪನ ಪರಿಚಯಸ್ಥರೂ ಬೆರಗಾದರು. ಅವರಿಗೂ ಮುಂದೇನು ಮಾಡಬೇಕೆಂದು ತೋಚಲಿಲ್ಲ. ಅಷ್ಟರಲ್ಲಿ ರಸ್ತೆಯಲ್ಲಿ ಇಬ್ಬರು ಪೊಲೀಸ್ ಪೇದೆಗಳ ಜತೆ ನಿಧಾನವಾಗಿ ಹೆಜ್ಜೆ ಹಾಕುತ್ತ ದೀರ್ಘ ಚರ್ಚೆಯಲ್ಲಿ ಮುಳುಗಿದ್ದ ಟೋಪಿಯ ವ್ಯಕ್ತಿಯೊಬ್ಬರು ಈ ಕಡೆ ನೋಡುತ್ತ ಹೋಗುತ್ತಿರುವುದು ಕಂಡು ಬಂತು. ಹಾಲಪ್ಪನ ಗುರ್ತಿನವನೊಬ್ಬ ಗುರ್ತು ಹಿಡಿದು `ಹೋ, ನಾರ್ಣಪ್ಪನವರು ಇದಾರೆ, ಅವರನ್ನೇ ಕರಿಯಾಣ' ಎಂದು ರಸ್ತೆಗೆ ಓಡಿದ.
ತನ್ನ ಜಮೀನು ವಿವಾದದ ಬಗ್ಗೆ ಕಂಗಾಲಾಗಿದ್ದ ರೈತನೊಬ್ಬನ ಕೇಸು ಹಿಡಿದು ಬಂದಿದ್ದ ನಾರಣಪ್ಪ, ಗುರ್ತಿನ ಇಬ್ಬರು ಪೇದೆಗಳನ್ನು ಕರೆದುಕೊಂಡು ಭಟ್ಟನ ಹೋಟೆಲಿಗೆ ಎದುರು ಸ್ವಲ್ಪ ಕೆಳಭಾಗದಲ್ಲಿರುವ ಮಿಲಿಟರಿ ಹೋಟೆಲಿಗೆ ಹೋಗಿದ್ದ. ಹೋಟೆಲಿನಲ್ಲಿ ಊಟ ಮಾಡುತ್ತಾ ತನ್ನ ಕಡೆಯ ರೈತನ ಜಮೀನು ವಿವಾದದ ಬಗ್ಗೆ ವಿವರಿಸಿದ್ದ. ಸಾಕಷ್ಟು ತಿಂದಾದ ಮೇಲೆ ಹಲ್ಲಿಗೆ ಕಡ್ಡಿಹಾಕುತ್ತ ನಿಧಾನವಾಗಿ ನಡೆದು ಬರುತ್ತಿದ್ದಾಗ ಹಿಂದಿನಿಂದ ಯಾರೋ ಕೂಗಿದಂತಾಯಿತು. ನೋಡಿದರೆ ಪರಿಚಯಸ್ಥ. ಅವನಿಂದ ಎಲ್ಲ ಸಮಾಚಾರ ಚುಟುಕಾಗಿ ಕೇಳಿದ ಮೇಲೆ ಜತೆಗಿದ್ದ ಪೊಲೀಸರನ್ನೂ, ಹೋಟೆಲಿನ ಬಿಲ್ಲು ತೆತ್ತು ಹಿಂದೆ ಹಿಂದೆ ಬರುತ್ತಿದ್ದ ರೈತನನ್ನೂ ಒಟ್ಟಿಗೆ ಸೇರಿಸಿ `ನೋಡಿ, ಅವನು ಬೆಳೆ ಕೊಯಿಸ್ತೀನಿ ಅಂತಾನಂತೆ. ಅವನು ಗದ್ದೆಗೆ ಕಾಲು ಹಾಕಿದರೆ ಇವನು ಬಂದು ಕಂಪ್ಲೇಂಟು ಕೊಡ್ತಾನೆ. ನೀವು ಹೋಗಿ ಅವನಿಗೆ ಚೆನ್ನಾಗಿ...' ಎಂದು ಕೈಯಲ್ಲಿ ಸೂಚಿಸಿ ಪೊಲೀಸರನ್ನು ಬೀಳ್ಕೊಟ್ಟ. ರೈತನ ಹತ್ತಿರ ಹಿಡಿದುಕೊಳ್ಳಲು ಕೊಟ್ಟಿದ್ದ ತನ್ನ ಹಳೆಯದೊಂದು ಕೊಡೆ ಹಾಗೂ ಚರ್ಮದ ಚೀಲ ಹಿಡಿದು ಠೀವಿಯಿಂದ ರಾಮಭಟ್ಟನ ಅಂಗಡಿ ಕಡೆ ಕಾಲು ಹಾಕಿದ.
ನಾರಣಪ್ಪನನ್ನು ನೋಡುತ್ತಲೇ ಸ್ಟೂಲಿನ ಮೇಲೆ ಕುಳಿತು ರವೆ ಉಂಡೆ ತಿನ್ನುತ್ತಿದ್ದ ಪೊಲೀಸ್ ಪೇದೆ ದಡಕ್ಕನೆ ಎದ್ದು ನಮಸ್ಕಾರ ಹಾಕಿದ. `ಏನಯ್ಯ, ಜೋರು ಪಂಚಾತಿಗೆ ನಡೆಸಿದ್ದಿ, ಸಾಹೇಬರು ಊರಾಗ ಇಲ್ಲೇನು' ಎಂದು ಒಮ್ಮೆ ಗುಟುರು ಹಾಕಿ `ಏನು ಸಮಾಚಾರ' ಎಂದು ರಾಮಭಟ್ಟನನ್ನು ವಿಚಾರಿಸಿದ.
ಯಥಾಪ್ರಕಾರ ಇಬ್ಬರ ವಿಚಾರಣೆಯೂ ನಡೆಯಿತು. ರಾಮಭಟ್ಟನ ಮಾತನ್ನು ಸಂಪೂರ್ಣ ಕೇಳಿದ ನಾರಣಪ್ಪ `ಕೊಡೆ ಕಳೆದುಹೋಗಿದ್ದು ಯಾವಾಗ? ಸಿಕ್ಕಿದ್ದೆಲ್ಲ ನಿಂದೇನಯ್ಯ ಕೊಡೆ. ಹಳ್ಳೀಜನ ಅಂದ್ರೆ ಸಸಾರ ಅಲ್ಲ, ತಾ ಇಲ್ಲಿ ಕೊಡೇನ' ಎಂದು ಆಜ್ಞಾಪಿಸಿದ. ರಾಮಭಟ್ಟ ಗೊಣಗುತ್ತ ಕೊಡೆಯನ್ನು ಎತ್ತಿ ಕೊಟ್ಟ. ಅದನ್ನು ಬಿಡಿಸಿ ಪರೀಕ್ಷಿಸಿದ ಮೇಲೆ ಹಾಲಪ್ಪನ ವಿಚಾರಣೆ ಆರಂಭಿಸಿದ `ಯಾವ ಮಾರ್ಕಿಂದು ನಿನ್ನ ಕೊಡೆ?'
ಗೊತ್ತಿಲ್ಲ'
ಹಾಗಾದ್ರೆ ಕೊಡೆ ಯಾರದು?'
ನಮ್ಮ ಗ್ರಾಮಸೇವಕರದ್ದು ನಾರಣಣ್ಣ'
ಓಹ್! ನಿಮ್ಮೂರು ಗ್ರಾಮಸೇವಕರದ್ದೋ, ಯಾವಾಗ ಬರ್ತಾರೆ ಊರಿಗೆ.'
ರಜಾ ಹೋಗ್ತೀನಿ ಅಂದಿದ್ರು ನಾರಣಣ್ಣ, ಯಾವಾಗ ಬರ್ತಾರೋ ಗೊತ್ತಿಲ್ಲ'
ಅಂತೂ ಈ ಕೊಡೆ ನಿಂದಲ್ಲ'
ಅಲ್ಲ, ನಾರಣಣ್ಣ'
-ಇಲ್ಲಿಗೆ ವಿಚಾರಣೆ ಮುಗಿಸಿದ ನಾರಣಪ್ಪ ಸುತ್ತಲೂ ನೋಡಿ ತೀರ್ಮಾನ ಹೇಳುವವನಂತೆ ಒಂದು ಸಲ ಕೆಮ್ಮಿದ.`
ಈಗ ಕೊಡೆ ಯಾರದ್ದೂ ಅನ್ನೊ ಬಗ್ಗೆ ಎಲ್ಲರಿಗೂ ಸಂಶಯ ಇದೆ. ಗ್ರಾಮಸೇವಕರದ್ದು ಅಂತ ಇವನು ಹೇಳ್ತಾನೆ. ನಂದೇ ಕಳೆದುಹೋದ ಕೊಡೆ ಇದು ಅಂತ ರಾಮಭಟ್ಟ ಹೇಳ್ತಾನೆ. ಆದ್ರೆ, ಸರಿಯಾಗಿ ಹೇಳ್ತಾ ಇಲ್ಲ. ಆದ್ದರಿಂದ ಇದರ ನಿಜವಾದ ಒಡೆಯ ಯಾರು ಅನ್ನೋದು ಪತ್ತೆಯಾಗೋವರೆಗೂ ಇದು ನನ್ನ ಹತ್ರ ಇರ್ಲಿ. ಈ ಹಾಲಪ್ಪ ಅಲ್ಲೀವರೆಗೆ ನನ್ನದೇ ಕೊಡೆ ಇಟ್ಟುಕೊಂಡಿರಲಿ... ಏನು...?'
ನಾರಣಪ್ಪನ ಮಾತಿಗೆ ತಕ್ಷಣ ಯಾರಿಗೂ ಏನೂ ಹೇಳಲು ತೋಚದ ಕಾರಣ ತನ್ನ ಹಳೆಯ ಲಟೂರಿ ಕೊಡೆಯನ್ನು ಹಾಲಪ್ಪನ ಮುಂದೆ ಎಸೆದು ಹೊಸ ಕೊಡೆಯನ್ನು ಠೀವಿಯಿಂದ ಹಿಡಿದು ರಾಜಗಾಂಭೀರ್ಯದಿಂದ ರಸ್ತೆಗಿಳಿದ.
ಸೇರಿದ್ದ ಜನರೆಲ್ಲ, ರಸ್ತೆಯುದ್ದಕ್ಕೂ ವಂದನೆ ಸ್ವೀಕರಿಸುತ್ತ ಮುಂದುವರಿದ ನಾರಣಪ್ಪನನ್ನೇ ನೋಡುತ್ತಿದ್ದರು.
*****
|