ಕರ್ನಾಟಕ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ದೊಂಬರಾಟಗಳಿಂದ ಕನ್ನಡದ ನ್ಯೂಸ್ ಚಾನಲ್ಲುಗಳಿಗೆ ಸುದ್ದಿಗಳ ಕೊರತೆಯಾಗಿಲ್ಲ. ಸದನದಲ್ಲಿ ಬ್ಲೂ ಚಿತ್ರ ನೋಡಿ ಭಾರತೀಯ ಜನತಾ ಪಕ್ಷದ ಸರ್ಕಾರದ ಸಚಿವ ಸಂಪುಟದಲ್ಲಿ ರಾರಾಜಿಸುತ್ತಿದ್ದ ಅಳಿದುಳಿದ ಮುತ್ತುರತ್ನಗಳಂತಿದ್ದ ಯಡಿಯೂರಪ್ಪನವರ ಶಿಷ್ಯರಾದಂತ ಮೂರು ರತ್ನಗಳು ರಾಜೀನಾಮೆ ನೀಡಿ ಹೊರಬಂದಿವೆ. ಈ ಮೂರೂ ಸಚಿವರ ರಾಜಿನಾಮೆ ಸಲ್ಲಿಕೆಯಾದ ನಂತರ ’ತಮ್ಮ’ ಜನರ ಸಚಿವರುಗಳ ಸಂಖ್ಯೆ ಕಡಿಮೆಯಾಗಿದ್ದರಿಂದ ಚಿಂತಾಕ್ರಾಂತರಾಗಿದ್ದ ಆ ಜನಾಂಗದ ಕೆಲವು ಸ್ವಾಮೀಜಿಗಳನ್ನೂ, ಅವರ ವಿರೋಧಿಗಳನ್ನೂ ’ಜಂಬೋ ಕುಸ್ತಿ’ ಕಾರ್ಯಕ್ರಮಕ್ಕೆ ಮಾತಿನ ಕುಸ್ತಿಗಾಗಿ ಆಹ್ವಾನಿಸಲಾಯಿತು.
ರಾಜಕಾರಣಿಗಳು ಟಿವಿ ಕಾರ್ಯಕ್ರಮಗಳಿಗೆ ಬರುವಾಗ ಗರಿಗರಿ ಇಸ್ತ್ರಿಯಾದ ಖಾದಿ ಬಟ್ಟೆ ತೊಟ್ಟು ಬರುವಂತೆ ಈ ಸ್ವಾಮಿಗಳೂ ಖಾವಿ ಬಣ್ಣದ ಮಿರಮಿರ ರೇಶ್ಮೆ ವಸ್ತ್ರ ತೊಟ್ಟು ಬಂದಿದ್ದರು. ಒಬ್ಬರ ತಲೆ ನುಣ್ಣಗೆ ಬೋಳಾಗಿದ್ದು ಸ್ಟುಡಿಯೋ ಲೈಟಿನ ಬೆಳಕು ಅವರ ತಲೆ ಮೇಲೆ ಬಿದ್ದು ಅದು ರಿಫ್ಲೆಕ್ಟರ್ ಥರ ಹೊಳೆಯತೊಡಗಿತ್ತು. ಮತ್ತೊಬ್ಬ ಸ್ವಾಮಿಗಳು ತಮ್ಮ ಕಮಂಡಲವನ್ನು ಬಿಡದೆ ಇರುತ್ತಿದ್ದು ತಮ್ಮ ಜತೆಗೆ ತಂದದ್ದರಿಂದ ಅದನ್ನು ತಮ್ಮ ಸೀಟಿನ ಮುಂದೆಯೇ ಇರಿಸಿಕೊಂಡು ಪ್ರತಿಷ್ಠಾಪಿತರಾದರು. ಮತ್ತೊಬ್ಬ ಸ್ವಾಮಿ ಕೈಲಿದ್ದ ರುದ್ರಾಕ್ಷಿ ಮಾಲೆಯ ಮಣಿಗಳನ್ನು ಬೆರಳುಗಳಲ್ಲಿ ಎಣಿಸುತ್ತಲೇ ತಮ್ಮ ಖುರ್ಚಿಯಲ್ಲಿ ವಿರಾಜಮಾನರಾಗಿದ್ದರು. ಇತ್ತೀಚಿನ ಸರ್ಕಾರದಿಂದ ಕಿಂಚಿತ್ತೂ ಹಣ ಸಹಾಯವಾಗದೇ ಅಸಮಾಧಾನಗೊಂಡಿದ್ದ ಒಂದು ಮಠದ ಗಡ್ಡಧಾರೀ ಕ್ರಾಂತಿಕಾರಿ ಸ್ವಾಮಿಗಳೂ ಈ ಕಾರ್ಯಕ್ರಮಕ್ಕೆ ಬಂದಿದ್ದರು. ಇವರ ಜೊತೆಯಲ್ಲಿ ಈ ಎಲ್ಲ ಸ್ವಾಮೀಜಿಗಳ ಬೆಂಬಲಿಗರೂ ಸಾಕಷ್ಟು ಸಂಖ್ಯೆಯಲ್ಲಿ ಸ್ಟುಡಿಯೋದಲ್ಲಿ ಸೇರಿದ್ದರು. ಕ್ರಾಂತಿಕಾರಿ ಸ್ವಾಮಿಗಳೂ ಬಂದು ಅವರನ್ನು ಬೆಂಬಲಿಸುವ ಸುಮಾರು ಕ್ರಾಂತಿಕಾರಿ ಯುವಕರೂ ಬರುವುದರಿಂದ ಅವರಲ್ಲಿ ನಮಗೆ ’ವಾಂಟೆಡ್’ ಆಗಿರುವ ಕೆಲ ಕ್ರಾಂತಿಕಾರಿಗಳಾದರೂ ಸಿಗಬಹುದೆಂಬ ಆಸೆಗಣ್ಣಿನಿಂದ ಸಾಕಷ್ಟು ಸಂಖ್ಯೆಯಲ್ಲಿ ಮಫ್ತಿಯಲ್ಲಿದ್ದ ಪೋಲೀಸರೂ ಈ ಕಾರ್ಯಕ್ರಮಕ್ಕೆ ಬಂದಿದ್ದರೆಂಬುದನ್ನೂ ತಿಳಿಸುತ್ತಾ ಕಾರ್ಯಕ್ರಮದ ವರದಿಯನ್ನು ನಿಮಗೆ ನೀಡುತ್ತಿದ್ದೇವೆ...ಭಕ್ತಿ ಪರವಶರರಾಗಿ ಓದುವವರಾಗಿ...
ಕಾರ್ಯಕ್ರಮವನ್ನು ಆರಂಭಿಸಿದ ಫೇಮಸ್ ನಿರೂಪಕ ಪುಂಗಿರಂಗರು ’ಪ್ರಿಯ ವೀಕ್ಷಕರೇ ನಮ್ಮ ಇಂದಿನ ಕಾರ್ಯಕ್ರಮ ಬಹಳ ವಿಶಿಷ್ಟವಾದುದು. ಇಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಲು ನಾಡಿನ ಅನೇಕ ಮಠಗಳ ಸ್ವಾಮಿಗಳು ಇಂದು ನಮ್ಮೊಂದಿಗಿದ್ದಾರೆ. ಅಲ್ಲದೆ ಕೆಲವು ಹೊಸಯೋಚನೆಯ ವಿಚಾರವಾದಿಗಳೂ, ಕ್ರಾಂತಿಕಾರಿ ಸ್ವಾಮಿಗಳೆಂದು ಕರೆಸಿಕೊಂಡಿರುವವರೂ ಸಹ ಬಂದಿದ್ದಾರೆ. ನಮ್ಮ ಇಂದಿನ ಕಾರ್ಯಕ್ರಮದ ವಿಚಾರ ಅಶ್ಲೀಲ ಚಲನಚಿತ್ರಕ್ಕೆ ಸಂಬಂಧಿಸಿದ್ದು...ನಮ್ಮ ಮೂರು ಜನ ಸಚಿವರು ಅಶ್ಲೀಲ ಸಿನಿಮಾವನ್ನು ನೋಡಿ, ಪರಿಣಾಮವಾಗಿ ಈಗಾಗಲೇ ರಾಜಿನಾಮೆ ನೀಡಿದ್ದಾರೆ. ಈ ಸಂದರ್ಭದಲ್ಲಿ...ಇದರ ಬಗ್ಗೆ ಮೊಟ್ಟಮೊದಲು ನಮ್ಮ ಬೋಳುಮಠದ ಸ್ವಾಮಿಗಳು ಏನು ಹೇಳುತ್ತಾರೆಂಬುದನ್ನು ಕೇಳೋಣ ಬನ್ನಿ’ ಎಂದವರೇ ಮಿರಮಿರನೆ ಮಿಂಚುತ್ತಿದ್ದ ಬೋಳುತಲೆಯ ಬೋಳುವಾರ್ತ ಸ್ವಾಮಿಗಳತ್ತ ತಿರುಗಿದರು.
ಬೋಳುಮಠದ ಹೆಸರನ್ನು ಮೊದಲು ಹೇಳಿದ್ದರಿಂದ ಸಂಪ್ರೀತರಾದ ಬೋಳುವಾರ್ತ ಸ್ವಾಮಿಗಳು ತಮ್ಮ ಬೋಳುತಲೆಯನ್ನೊಮ್ಮೆ ಎಡಗೈನಿಂದ ಒಂದೆರಡು ಬಾರಿ ಆಪ್ತವಾಗಿ ಸವರಿಕೊಂಡವರೇ ’ಓಂ’ ಎಂದು ಇಷ್ಟದೇವರನ್ನು ಧ್ಯಾನಿಸಿ ನೆರೆದಿದ್ದ ಪ್ರೇಕ್ಷಕರತ್ತ ನೋಡಿ, ತಮ್ಮ ಭಕ್ತರು ಸಾಕಷ್ಟು ಸಂಖ್ಯೆಯಲ್ಲಿ ಬಂದಿರುವುದನ್ನು ಖಾತರಿಪಡಿಸಿಕೊಂಡು ಖುಶಿಯಾಗಿ ’ನೋಡಿ, ನಾವು ಸ್ವಾಮಿಗಳು. ನಾವು ಅಶ್ಲೀಲ ಚಿತ್ರಗಳ ಬಗ್ಗೆ ಬಹಿರಂಗವಾಗಿ ಮಾತನಾಡುವಂತಿಲ್ಲ. ಅದು ನಮಗೆ ನಿಶಿದ್ಧ. ಅದರೂ ನಾವು ಹೇಳುವುದೆಂದರೆ ಒಬ್ಬ ಸಾಮಾನ್ಯ ಮನುಷ್ಯನಿಗೆ ಎಲ್ಲವೂ ಬೇಕು. ಅಶ್ಲೀಲ ಸಿನಿಮಾ ನೋಡಿದ ಒಂದಿಬ್ಬರು ಸಚಿವರು ನಮ್ಮ ಮಠದ ಭಕ್ತರೇ. ಅವರನ್ನು ನಾವು ಹತ್ತಿರದಿಂದ ಕಂಡಿದ್ದೇವೆ. ಅವರು ಮಾಡಿರುವುದರಲ್ಲಿ ನಮಗೆ ಮಹಾಪರಾಧ ಕಾಣಿಸುತ್ತಿಲ್ಲ. ಈ ಕಾರಣವಾಗಿ ಅವರಿಂದ ರಾಜಿನಾಮೆ ಪಡೆದಿದ್ದು ತಪ್ಪು. ತಿದ್ದಿಕೊಳ್ಳಲು ಅವರಿಗೆ ಒಂದು ಅವಕಾಶ ಕೊಡಬೇಕಾಗಿತ್ತು. ಆದ್ದರಿಂದ ಮುಖ್ಯಮಂತ್ರಿಗಳು ಈ ಕೂಡಲೇ ಅವರ ರಾಜಿನಾಮೆಯನ್ನು ತಿರಸ್ಕರಿಸಿ ಅವರನ್ನು ಮತ್ತೆ ಮಂತ್ರಿಗಳನ್ನಾಗಿ ಮುಂದುವರೆಸಬೇಕೆಂದು ನಾವು ಆಗ್ರಹಿಸುತ್ತೇವೆ...ಅವರು ನಮ್ಮ ಜನಾಂಗದವರು, ನಮ್ಮ ಭಕ್ತರು. ಮಂತ್ರಿಮಂಡಲದಲ್ಲಿ ನಮ್ಮವರ ಸಂಖ್ಯೆ ಕಡಿಮೆಯಾಗಿರುವುದರಿಂದ ನಮ್ಮ ಮಠಗಳಿಗೆ ಹಣ ಕೊಡುವವರಾದರೂ ಯಾರು? ನಮ್ಮವರನ್ನು ಪೋಷಿಸುವವರು ಯಾರು? ಇಂಥವರಿಲ್ಲದಿದ್ದರೆ ನಮ್ಮ ಮಠಗಳು ಹೇಗೆ ಇರುತ್ತವೆ? ನಾವೂ ಪ್ರಜೆಗಳಲ್ಲವೇ? ಆ ಆತಂಕದಿಂದ ನಾವು ಈ ಮಾತುಗಳನ್ನು ಹೇಳುತ್ತಿದ್ದೇವೆ’ ಎಂದವರೇ ಮತ್ತೊಮ್ಮೆ ತಮ್ಮ ಬೋಳುತಲೆಯನ್ನೊಮ್ಮೆ ಸವರಿಕೊಂಡು ಹೇಗೆ ಮಾತನಾಡಿದೆನೆಂಬಂತೆ ತನ್ನ ಭಕ್ತರನ್ನು ನೋಡಿದರು. ’ಅವರ ಜನದವರೇ’ ಆದ ಮತ್ತಿಬ್ಬರು ಸ್ವಾಮಿಗಳು ಅವರ ಮಾತಿಗೆ ತಲೆದೂಗಿದರು.
’ಓಕೆ, ವೆರಿ ನೈಸ್, ವೆರಿ ನೈಸ್...ಸೋ...ನೀವು ಬಹಳ ಓಪನ್ ಆಗಿ ಅವರ ರಾಜಿನಾಮೆಯನ್ನು ವಿರೋಧಿಸುತ್ತೀರಾ’ ಎಂದ ನಿರೂಪಕ ಪುಂಗಿರಂಗರು, ಕ್ರಾಂತಿಕಾರಿ ಸ್ವಾಮಿಯತ್ತ ತಿರುಗಿದವರೇ ’ಏನು ಸ್ವಾಮಿಗಳೇ, ಬೋಳುಮಠದ ಸ್ವಾಮಿಗಳು ಬ್ಲೂ ಫಿಲ್ಮ್ ನೋಡಿದ ಸಚಿವರನ್ನು ಸಮರ್ಥಿಸಿಕೊಂಡರಲ್ಲಾ ನೀವೇನು ಹೇಳ್ತೀರಿ’ ಅಂದರು.
ಕ್ರಾಂತಿಕಾರಿ ಸ್ವಾಮಿಗಳು ತಮ್ಮ ಗಡ್ಡವನ್ನು ನೀಟಾಗಿ ಸವರಿದವರೇ ತಮ್ಮ ಬೆಂಕಿಯುಗುಳುವಂತಿದ್ದ ಕಣ್ಣುಗಳಿಂದ ಬೋಳುಮಠದ ಸ್ವಾಮಿಗಳನ್ನು ತೀಕ್ಷ್ಣವಾಗಿ ದಿಟ್ಟಿಸಿದರು. ಅವರ ದಿಟ್ಟಿಸುವಿಕೆ ಕಂಡು ಬೆವರಿದ ಬೋಳುಮಠದ ಸ್ವಾಮಿ ಈತನನ್ನು ಯಾಕಪ್ಪಾ ಇಲ್ಲಿ ಕರೆಸಿದ್ದು...ಈತ ನಮ್ಮನ್ನೆಲ್ಲಾ ಬಾಯಿಗೆ ಬಂದಂತೆ ಬೈಯ್ಯುವುದು ಗ್ಯಾರಂಟಿ ಎಂದುಕೊಂಡು ಕ್ರಾಂತಿಕಾರಿ ಸ್ವಾಮಿಯ ದೃಷ್ಟಿಯನ್ನೆದುರಿಸಲಾಗದೆ ಬೇರೆಲ್ಲೋ ನೋಡಿದರು.
ಇದರಿಂದ ಹುರಿಗೊಂಡ ಕ್ರಾಂತಿಕಾರಿ ಸ್ವಾಮಿ ’ನೋಡಿ ಪುಂಗಿರಂಗರೇ, ಇವತ್ತು ಈ ದೇಶ ಈ ಸ್ಥಿತಿಗೆ ಬರಲು ಇಂತಹ ಸ್ವಾಮೀಜಿಗಳೇ ಕಾರಣ’ ಎಂದು ನೇರವಾಗಿ ಬೋಳುವಾರ್ತ ಸ್ವಾಮಿಯನ್ನೇ ಟಾರ್ಗೆಟ್ ಮಾಡಿಕೊಂಡರು. ’ಇವರು ಅಶ್ಲೀಲ ಚಲನಚಿತ್ರಗಳ ಬಗ್ಗೆ ಬಹಿರಂಗವಾಗಿ ಮಾತನಾಡುವುದಿಲ್ಲವಂತೆ! ಅಂದರೆ ಇವರು ಆಂತರಿಕವಾಗಿ ಅದರ ಬಗ್ಗೆ ಚಿಂತಿಸುತ್ತಾರೆಂದ ಹಾಗಾಯ್ತು!! ಆ ಸಚಿವರು ಬ್ಲೂ ಫಿಲ್ಮ್ ನೋಡಿರುವುದು ಪ್ರಜಾಪ್ರಭುತ್ವದ ದೇಗುಲದಂತಿರುವ ವಿಧಾನಸೌದದಲ್ಲಿ. ಅವರನ್ನು ಮೊದಲು ಬಂಧಿಸಿ ಜೈಲಿಗಟ್ಟಬೇಕಿತ್ತು. ಯಾವುದೋ ಸಿನಿಮಾಹಾಲಿನಲ್ಲಿ ಬ್ಲೂ ಫಿಲಂ ನೋಡಿದರೆ ನೋಡಿದವರನ್ನೆಲ್ಲಾ ಜೈಲಿಗೆ ಹಾಕುತ್ತಾರಲ್ಲವೇ? ಹಾಗೇ...ಮೊದಲು ಈ ಮಂತ್ರಿಗಳನ್ನು ಜೈಲಿಗೆ ಕಳಿಸಬೇಕಿತ್ತು. ಅದುಬಿಟ್ಟು ಜನಾಂಗದವರು ಅಂತ ಅವರನ್ನು ಸಮರ್ಥಿಸಿಕೊಳ್ಳುತ್ತಾರಲ್ಲಾ ಇವರಿಗೆ ಮರ್ಯಾದೆ ಏನಾದ್ರೂ ಇದೆಯಾ’ ಎಂದು ಉಗ್ರರಾಗಿ ತಮ್ಮ ಮಾತನ್ನು ಮುಂದುವರೆಸುತ್ತಿರುವಂತೆಯೇ...
ಕಮಂಡಲವನ್ನು ಹಿಡಿದಿದ್ದ ಕಮಂಡಲೀಸ್ವಾಮಿ ತೀವ್ರ ಆಕ್ಷೇಪಣೆಯಿಂದ ’ಏನು ನೀವು ಹೇಳೋದು? ನಮ್ಮ ಜನಾಂಗದವರನ್ನೆಲ್ಲಾ ಒಂದಲ್ಲ ಒಂದು ಕಾರಣಕ್ಕೆ ಜೈಲಿಗೆ ಕಳಿಸಿಬಿಟ್ಟರೆ ನಮ್ಮ ಕಷ್ಟ ಸುಖ ಕೇಳುವವರ್ಯಾರು? ಈಗಾಗಲೇ ನಮ್ಮ ಮುಖ್ಯಮಂತ್ರಿಗಳೂ ಜೈಲಿಗೆ ಹೋಗಿ ಬಂದಿದ್ದಾರೆ. ನಾವು ಅವರನ್ನು ನೋಡಲು ಜೈಲಿಗೆ ಹೋಗಿದ್ದಾಗ ಗಳಗಳನೇ ಅತ್ತುಬಿಟ್ಟರು ಗೊತ್ತಾ! ಮುಖ್ಯಮಂತ್ರಿಗಳು ಅಳುವುದು ಅಂದ್ರೆ ಸಾಮಾನ್ಯವಾ? ನಮಗೆ ತುಂಬಾ ದುಖಃವಾಯಿತು...ಇದೆಲ್ಲಾ ನಮ್ಮನ್ನು ದುರ್ಬಲ ಮಾಡಿಬಿಡುವ ಪ್ರಯತ್ನ’ ಎಂದು ಕಣ್ಣೊರೆಸಿಕೊಂಡು ಕೂತರು.
ಕ್ರಾಂತಿಕಾರಿ ಸ್ವಾಮಿಗಳು ಮಾತಾಡುವಾಗ ಅದನ್ನು ಅರ್ಧಕ್ಕೇ ಕತ್ತರಿಸಿದ್ದರಿಂದ ಸಿಟ್ಟಾದ, ಕಾರ್ಯಕ್ರಮದ ಹಾಲಿನಲ್ಲಿದ್ದ ಕ್ರಾಂತಿಕಾರಿ ಸ್ವಾಮಿಯ ಬೆಂಬಲಿಗರು ಒಟ್ಟಿಗೇ ಎದ್ದು ನಿಂತವರೇ ’ಯೋ, ತರಕಲಾಂಡಿ ಸ್ವಾಮಿ, ಅ------ ಕುತ್ಕಳಯ್ಯಾ, ನಿಮ್ಮ ಸಿಎಮ್ಮು ತಿನ್ನಬಾರದ್ದನ್ನೆಲ್ಲಾ ತಿಂದ, ಮಾಡಬಾರದ್ದನ್ನೆಲ್ಲಾ ಮಾಡ್ದಾ, ಅದುಕ್ಕೇ ಜೈಲಿಗೋದ, ಇಡೀ ಇಂಡಿಯಾಲೇ ನಮ್ಮ ರಾಜ್ಯದ ಬಗ್ಗೆ ಕೆಟ್ಟ ಹೆಸರು ಬರುವಂತೆ ಮಾಡ್ಬುಟ್ಟ, ನಿಮ್ಗೂ ಅವನು ಏನೇನೋ ತಿನ್ಸೌನೆ ಅದಕ್ಕೇ ಅವ್ನ ಪರ್ವಾಗಿ ಮಾತಾಡ್ತಿದ್ದೀಯಾ...ಅವುನ್ನ ಬಿಟ್ರೆ ನಿಮ್ ಜನಾಂಗ್ದಲ್ಲಿ ಬೇರೆ ಗಂಡಸು ರಾಜಕಾರಣಿನೇ ಇಲ್ವೇನಯ್ಯಾ, ನಿಮ್ ಸಚಿವರು ಅಸೆಂಬ್ಲೀಲಿ ಬ್ಲೂ ಫಿಲಂ ನೋಡಿ ನಾವು ಕನ್ನಡಿಗರೆಲ್ಲಾ ತಲೆತಗ್ಗಿಸುವಂತೆ ಮಾಡುದ್ರಲ್ಲಯ್ಯಾ, ಬೇಕಿದ್ರೆ ನಿನ್ ಮಠಕ್ಕೆ ಕರ್ಕಂಡು ಹೋಗಿ ಅವ್ರಿಗೆ ಬ್ಲೂ ಫಿಲಂ ತೋರಿಸ್ಕಂಡ್ ಕೂತ್ಕೋ’ ಎಂದು ಕಮಂಡಲೀಸ್ವಾಮಿಯನ್ನು ಹೆದರಿಸುವಂತೆ ಅವರತ್ತ ಎದ್ದರು. ಕ್ಯಾಮೆರಾ ಮ್ಯಾನ್ ಸಿಕ್ಕ ಸ್ಕೂಪ್ ಅನ್ನು ಎಡೆಬಿದದೆ ಶೂಟ್ ಮಾಡತೊಡಗಿದ.
ಹೀಗೆ ಕೂಗಾಡುವಿಕೆಯಿಮ್ದ ಗಾಬರಿಯಾದ ನಿರೂಪಕ ಪುಂಗಿರಂಗರು ತಕ್ಷಣ ಮಧ್ಯ ಪ್ರವೇಶಿಸಿ ಜನರನ್ನು ಸಮಾಧಾನ ಪಡಿಸಿದರು. ಕ್ರಾಂತಿಕಾರಿ ಸ್ವಾಮಿಗಳ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿರುವುದನ್ನು ಕಂಡು ಗಾಬರಿಯಾದ ಬೋಳುಮಠದ ಬೋಳುವಾರ್ತ ಸ್ವಾಮಿ ಇನ್ನು ಮುಂದೆ ತಾವು ಹುಶಾರಾಗಿ ಮಾತನಾಡುವುದು ಒಳ್ಳೆಯದೆಂದುಕೊಂಡರು. ಈ ಸ್ವಾಮಿ ಬರುತ್ತಾನೆಂದು ಗೊತ್ತಿದ್ದರೆ ನಾನು ಈ ಕಾರ್ಯಕ್ರಮಕ್ಕೆ ಬರುತ್ತಲೇ ಇರಲಿಲ್ಲ...ಈಗ ಬಂದು ಹೇಳುವುದನ್ನೂ ಹೇಳಲಾಗದೆ ಒದ್ದಾಡುವಂತಾಯ್ತಲ್ಲಾ ಎಂದು ಪೇಚಾಡಿಕೊಂಡರು. ಅಷ್ಟರಲ್ಲಾಗಲೇ ಕ್ರಾಂತಿಕಾರಿ ಸ್ವಾಮಿಯ ಬೆಂಬಲಿಗರು ಇತರೆ ಸ್ವಾಮಿಗಳ ಬೆಂಬಲಿಗರನ್ನು ಗುರಾಯಿಸತೊಡಗಿದ್ದರಿಂದ ಬೆಂಬಲಿಗರಲ್ಲೂ ಕಾವೇರತೊಡಗಿತ್ತು. ಇದನ್ನು ಕಂಡ ಪುಂಗಿರಂಗರು ’ಪ್ರಿಯ ವೀಕ್ಷಕರೇ ನಮ್ಮ ಚರ್ಚೆ ಇದೀಗ ಸ್ವಾರಸ್ಯಕರ ಹಂತ ತಲುಪಿದೆ...ಒಂದು ಸಣ್ಣ ಬ್ರೇಕ್ ನಂತರ ಈ ಕಾರ್ಯಕ್ರಮ ಮುಂದುವರೆಯುವುದು’ ಎಂದು ಬ್ರೇಕ್ ನೀಡಿದರು.
ಬ್ರೇಕ್ ಕೊಟ್ಟ ಪುಂಗಿರಂಗರೆಂಬ ನಿರೂಪಕರು ತಲೆಕೆಡಿಸಿಕೊಳ್ಳತೊಡಗಿದರು. ಅವರಿಗೆ ಈ ಕಾರ್ಯಕ್ರಮದಲ್ಲಿ ಬೋಳುಮಠದ ಬೋಳುವಾರ್ತ ಸ್ವಾಮೀಜಿ ಹಾಗೂ ಅವರ ಶಿಷ್ಯರೆನಿಸಿಕೊಂಡಿದ್ದ ಇತರ ಕಿರಿ ಮಠದ ಸ್ವಾಮೀಜಿಗಳನ್ನ ಕೂರಿಸಿ, ಒಂದಷ್ಟು ಮಾತಾಡಿಸಿ, ತಾವೂ ಸಿಕ್ಕಷ್ಟು ಗುಂಜಿಕೊಳ್ಳಬೇಕೆಂಬುದು ಅವರ ಉದ್ದೇಶವಾಗಿತ್ತು. ಬೋಳುಮಠದ ಸ್ವಾಮಿಗಳು ನಡೆಸುತ್ತಿದ್ದ ಮೆಡಿಕಲ್ ಕಾಲೇಜಿಗೆ ಎಲ್ಲಿಲ್ಲದ ಡಿಮ್ಯಾಂಡ್. ಆ ಕಾಲೇಜಿನಲ್ಲಿ ತಾನೂ ಒಂದೆರಡು ಸೀಟುಗಳನ್ನು ಕಡಿಮೆ ಬೆಲೆಗೆ ಗಿಟ್ಟಿಸಿಕೊಂಡು, ಅದನ್ನು ಎನ್ ಆರ್ ಐ ಗಳಿಗೆ ಮಾರಿಕೊಂಡು ಒಂದಷ್ಟು ಲಾಭ ಕಮಾಯಿಸಿಕೊಳ್ಳಬೇಕೆಂದುಕೊಂಡಿದ್ದರು. ಆದರೆ ಈ ಕಾರ್ಯಕ್ರಮದ ಬಗ್ಗೆ ತನ್ನ ಚಾನೆಲಿನಲ್ಲಿ ಒಂದೆರಡು ದಿನಗಳ ಹಿಂದಿನಿಂದಲೆ ಜಾಹಿರಾತು ಬರುವುದನ್ನು ಗಮನಿಸಿದ್ದ ಕೆಲವು ಕ್ರಾಂತಿಕಾರಿಗಳು ತಮ್ಮ ಹೊಸಮಠದ ಕ್ರಾಂತಿಕಾರಿ ಸ್ವಾಮಿಗಳನ್ನು ಕರೆದುಕೊಂಡು ನೇರವಾಗಿ ಸ್ಟುಡಿಯೋಗೇ ಬಂದಿದ್ದರು. ಆ ಬೆಂಬಲಿಗರ ಅವತಾರಗಳನ್ನು ಹಾಗೂ ಆ ಕ್ರಾಂತಿಕಾರಿ ಸ್ವಾಮೀಜಿಯನ್ನು ನೋಡಿದ ಪುಂಗಿರಂಗರಿಗೆ ಇವರನ್ನು ಸೇರಿಸಿಕೊಳ್ಲದಿದ್ದರೆ ನಡೆಯುಬುದಿಲ್ಲ ಎಂದು ಗೊತ್ತಾಗಿತ್ತು. ಅವರೂ ಆಗಾಗ್ಗೆ ಸಮಯಕ್ಕನುಸಾರವಾಗಿ ಕ್ರಾಂತಿಕಾರಿಯಂತೆ ಮಾತಾಡುತ್ತಿದ್ದರಿಂದ ವೈಯುಕ್ತಿಕ ಇಕ್ಕಟ್ಟಿಗೆ ಸಿಲುಕಿ ಕ್ರಾಂತಿಕಾರಿ ಸ್ವಾಮಿ ಹಾಗೂ ಆತರ ಶಿಷ್ಯರನ್ನು ಕಾರ್ಯಕ್ರಮದಲ್ಲಿ ಭಾಗವಹಿಸಲಿಕ್ಕೆ ಅನುವು ಮಾಡಿಕೊಟ್ಟು ತನ್ನಲ್ಲೇ ಕೊರಗಿದ್ದರು.
ಇತ್ತ ಪುಂಗಿರಂಗರಿಗೆ ಕೊಡಬೇಕಾಗಿದ್ದ ಕಾಣಿಕೆಯನ್ನು ಮೊದಲೇ ಕೊಟ್ಟು ಬಂದಿದ್ದ ಬೋಳುಮಠದ ಸ್ವಾಮೀಜಿ ಹಾಗೂ ಅವರ ಸಹಚರರಾಗಿ ಬಂದಿದ್ದ ಇತರೆ ಸ್ವಾಮೀಜಿಗಳು ಬ್ರೇಕಿನಲ್ಲಿ ತಕರಾರು ತೆಗೆದು, ಅವರನ್ನು ತಮ್ಮ ಬಳೆ ಕರೆದು ’ಅಲ್ರೀ ನೀವು ನಮ್ಮನ್ನಷ್ಟೇ ಅಲ್ವಾ ಕರೆದಿದ್ದು ಇದೀಗ ನೋಡಿದ್ರೆ ಆ ದರಿದ್ರ ಕ್ರಾಂತಿಕಾರಿ ಎನಿಸಿಕೊಂಡವನನ್ನೂ ಕರೆದಿದ್ದೀರಲ್ರೀ ಇದೇನಾ ನೀವು ನಮಗೆ ಮರ್ಯಾದೆ ಕೊಟ್ಟಿದ್ದು’ ಎಂದವರೇ ತಾವು ಪುಂಗಿರಂಗರಿಗೆ ಕೊಟ್ಟಿದ್ದರ ಲೆಕ್ಕಾಚಾರವನ್ನು ಹಾಕತೊಡಗಿದರು.
ಸ್ವಾಮಿಗಳು ಹಾಗೆ ಲೆಕ್ಕಾಚಾರಕ್ಕೆ ತೊಡಗಿದ್ದನ್ನು ಕಂಡು ನಡುಗಿದ ಪುಂಗಿರಂಗರು ’ಅಡ್ಡಬಿದ್ದೆ ಸ್ವಾಮೀಜೀ, ಅಡ್ಡಬಿದ್ದೆ, ದಯವಿಟ್ಟು ತಪ್ಪು ತಿಳೀಬೇಡಿ. ಆ ಕ್ರಾಂತಿಕಾರಿ ಸ್ವಾಮಿಯನ್ನು ನನ್ನ ತಾಯಾಣೆಗೂ ನಾನು ಕರೆದಿಲ್ಲ. ವಿಷಯ ತಿಳಿದು ಆತನೇ ತನ್ನ ಕ್ರಾಂತಿಕಾರಿ ಶಿಷ್ಯರೊಂದಿಗೆ ಬಂದಿದ್ದಾನೆ. ಆತನನ್ನು ನಾನು ಮಾತಲ್ಲೇ ಸರಿಯಾಗಿ ಬೆಂಡೆತ್ತುತ್ತೀನಿ, ನೀವು ಹೆದರದೇ ಮಾತಾಡಿ’ ಎಂದು ಅವರಿಗೆ ಧೈರ್ಯ ತುಂಬಿದರು.
ಬ್ರೇಕ್ ಮುಗಿದ ನಂತರ ತನ್ನ ಸೂಟನ್ನು ಸರಿಪಡಿಸಿಕೊಂಡು ಕೂತ ನಿರೂಪಕ ಪುಂಗಿರಂಗರು ’ಪ್ರಿಯ ವೀಕ್ಷಕರೇ, ಮತ್ತೊಮ್ಮೆ ನಿಮಗೆ ಸ್ವಾಗತ’ ಎಂದು ಮತ್ತೆ ಬೋಳುಮಠದ ಬೋಳುವಾರ್ತ ಸ್ವಾಮಿಯತ್ತ ತಿರುಗಿ ’ಸ್ವಾಮೀಜಿ, ಈಗ ನೀವು ನಮ್ಮ ರಾಜ್ಯದಲ್ಲಿ ನಮ್ಮ ಸಚಿವರುಗಳು ಈ ರೀತಿ ಬ್ಲೂ ಫಿಲಂ ನೋಡುವುದರ ಬಗ್ಗೆ ಹೇಗೆ ನಿಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತೀರಿ’ ಎಂದರು. ಪರವಾಗಿಲ್ಲ ಕಾಣಿಕೆ ಕೆಲಸ ಮಾಡುತ್ತಿದೆ. ಈತ ನನಗೇ ಹೆಚ್ಚು ಮಾತನಾಡಲು ಅವಕಾಶ ನೀಡುತ್ತಿದ್ದಾನೆಂದುಕೊಂಡು ’ನೋಡಿ, ನಾವು ಸ್ವಾಮೀಜಿಗಳು. ಅಂದರೆ ಸರ್ವಸಂಗ ಪರಿತ್ಯಾಗಿಗಳು. ನಾವು ಎಲ್ಲವನ್ನೂ ಬಿಟ್ಟವರು. ನಾವೇನನ್ನೂ ಬಹಿರಂಗವಾಗಿ ಮಾಡುವುದಿಲ್ಲ. ಬಾಹ್ಯ ನಮಗೆ ಬೇಡ. ನಮ್ಮದೇನಿದ್ದರೂ ಅಂತರಂಗಕ್ಕೆ ಸಂಬಂಧಿಸಿದ್ದು. ಆದರೆ ನಮ್ಮ ಶಿಷ್ಯರೂ ಹಾಗೇ ಇರಬೇಕೆಂಬ ನಿಯಮವೇನೂ ಇಲ್ಲ...ಎಲ್ಲರೂ ಹಾಗಿದ್ದಿದ್ದರೆ ಎಲ್ಲರೂ ಸ್ವಾಮಿಗಳಾಗುತ್ತಿದ್ದರಲ್ಲವೇ? ಅದಕ್ಕೆ ನಾವು ಅಂಥವರಿಗೆ ಗುರುಗಳಾಗಿ ಮಾರ್ಗದರ್ಶನ ಮಾಡುವುದು...ನಾವು ಹೇಳುವುದೇನೆಂದರೆ ನೀವು ಏನೇ ಕೆಲಸ ಮಾಡಿದರೂ ನಿಮ್ಮ ಅಂತರಂಗದಲ್ಲಿ ಮಾಡಿ ಎಂದು. ಏನೋ...ದುರಾದೃಷ್ಟ. ನಮ್ಮ ಶಿಷ್ಯರು ಯಾವುದೋ ಮಾಯೆಗೆ ಸಿಲುಕಿ ಸ್ವಲ್ಪ ಬಹಿರಂಗವಾಗಿ ಅದೇನೋ ಅಶ್ಲೀಲ ಚಿತ್ರ ನೋಡಿದ್ದಾರೆ...ಆದರೆ ನಿಮ್ಮ ಟಿವಿಗಳವರು ಅದನ್ನೇ ದೊಡ್ಡದು ಮಾಡಿದ್ದೀರಿ. ಅದಕ್ಕೆ ನಮ್ಮ ತೀವ್ರ ಆಕ್ಷೇಪಣೆಯಿದೆ...’
ಬೋಳುಮಠದ ಸ್ವಾಮಿಗಳು ಮಾತು ಮುಂದುವರಿಸಿದರು...’ ನಾವು ಎಲ್ಲವನ್ನೂ ಬಹಿರಂಗವಾಗಿ ಮಾತಾಡಲಾಗುವುದಿಲ್ಲ. ಆದರೆ ಒಂದು ನಿಜ. ಇಂದು ನಮ್ಮ ಜನರ ಸಚಿವರುಗಳನ್ನು ಇಕ್ಕಟಿಗೆ ಸಿಲುಕಿಸಬೇಕೆಂದು ವಿರೋಧ ಪಕ್ಷದ ನಾಯಕರುಗಳು ಸಂಚು ಮಾಡಿದ್ದಾರೆ...ಏನೂ ಆಸಕ್ತಿಕರ ವಿಷಯವೇ ಇರದಿರುವ ಸದನದಲ್ಲಿ ಬೇಸರವಾಗಿ ನಿದ್ದೆ ಬರುವಂತಾಗಿದ್ದರಿಂದ ಏನೋ ಕೆಲವು ನೃತ್ಯಗಳನ್ನು ನೋಡಿದ್ದೇ ಮಹಾಪರಾಧವೆಂಬಂತೆ ಟಿವಿಯವರು ಮಾತಾಡುತ್ತಿದ್ದಾರೆ, ಇದು ಖಂಡನೀಯ. ಹಿಂದಿನ ಕಾಲದಿಂದಲೂ ರಾಜರು-ಆಸ್ಥಾನದವರೂ ನೃತ್ಯನೋಡುತ್ತಿದ್ದರಲ್ಲವೇ?!’ ಎಂದು ಸಮರ್ಥನೆ ಕೊಡುವಾಗ ಅಲ್ಲಿ ನೆರೆದಿದ್ದ ಕ್ರಾಂತಿಕಾರಿ ಸ್ವಾಮಿಯ ಕ್ರಾಂತಿಕಾರಿ ಯುವಶಿಷ್ಯಂದಿರು ಮತ್ತೆ ತಮ್ಮ ತಮ್ಮ ಖುರ್ಚಿಯಿಂದ ಮೇಲೆದ್ದು ರೋಷಾವೇಷವನ್ನು ತೋರಿಸಲು ಶುರು ಮಾಡಿ ಸ್ವಾಮಿಗಳು ಕೂತಿದ್ದ ಜಾಗಕ್ಕೇ ಹೆಜ್ಜೆ ಹಾಕಿದರು. ಅವರ ಆವೇಶವನ್ನು ಕಂಡು ಕಂಗಾಲಾದ ಬೋಳು ಸ್ವಾಮಿ ನಾವು ತಕ್ಷಣ ಪೇಶಾಬಿಗೆ ಹೋಗಬೇಕೆಂದು ಪುಂಗಿರಂಗರಿಗೆ ಟೇಬಲ್ ಪಕ್ಕದಿಂದ ತಮ್ಮ ಕಿರುಬೆರಳನ್ನು ಎತ್ತಿ ತೋರಿಸಿ ಸ್ಟುಡಿಯೋ ಸೆಟ್ಟಿಂಗ್ ನಿಂದ ನಿರ್ಗಮಿಸಿದರು.
ಪುಂಗಿರಂಗರು ಮತ್ತೆ ಪೀಕಲಾಟಕ್ಕೆ ಸಿಲುಕಿದವರಂತೆ ಒದ್ದಾಡಿ ’ ಓಕೆ, ಓಕೆ, ಪ್ರಿಯ ವೀಕ್ಷಕರೇ, ನಮ್ಮ ಬೋಳುಮಠದ ಸ್ವಾಮಿಗಳ ಅಮೃತ ವಾಕ್ಯ ಕೇಳಲು ನೀವು ಸ್ವಲ್ಪ ಹೊತ್ತು ಕಾಯಬೇಕಾಗುತ್ತದೆ. ಅಲ್ಲಿವರೆಗೆ ನಮ್ಮ ಕಮಂಡಲೀಸ್ವಾಮಿಗಳು ಸ್ವಲ್ಪ ಮಾತನಾಡುತ್ತಾರೆ’ ಅಂದರು. ಕಮಂಡಲವನ್ನು ಮುಟ್ಟಿ ಗಂಟಲು ಸರಿಮಾಡಿಕೊಂಡ ಕಮಂಡಲೀಸ್ವಾಮಿಯವರು ಸುತ್ತಮುತ್ತ ನೋಡಿ ಕ್ರಾಂತಿಕಾರಿ ಸ್ವಾಮಿಯ ಶಿಷ್ಯರೇ ಅಧಿಕ ಸಂಖ್ಯೆಯಲ್ಲಿ ನೆರೆದಿರುವುದನ್ನು ಮತ್ತೆ ಖಚಿತಪಡಿಸಿಕೊಂಡು ಬೋಳುಮಠದ ಸ್ವಾಮಿ ಇವರ ಕಾಟಕ್ಕೆ ಹೆದರಿಯೇ ಹೊರ ಹೋಗಿರುವುದು ಎಂದು ಮನವರಿಕೆ ಮಾಡಿಕೊಂಡವರು, ನಾನ್ಯಾಕೆ ಸುಮ್ಮಸುಮ್ಮನೆ ಮಾತಾಡಿ ಈ ಗಲಾಟೆ ಶಿಷ್ಯರ ಕೋಪಕ್ಕೆ ಸಿಕ್ಕಲಿ ಎಂದುಕೊಳ್ಳುತ್ತಾ...
ತಮ್ಮ ಶಲ್ಯವನ್ನು ನೀವಿಕೊಳ್ಳುತ್ತಾ ಬೋಳುಮಠದ ಸ್ವಾಮಿ ಬರುವಷ್ಟರಲ್ಲಿ ಈ ಕ್ರಾಂತಿಕಾರಿಗಳನ್ನು ಸಮಾಧಾನಪಡಿಸಿ ಅವರ ಸಿಟ್ಟಿನಿಂದ ನಾನಾದರೂ ತಪ್ಪಿಸಿಕೊಳ್ಳಬೇಕೆಂದು ಯೋಚಿಸಿ ’ನಮಗೆ ಮಾನ ಮರ್ಯಾದೆ ಎಂಬುದು ಬಹಳ ಮುಖ್ಯ ಸಂಗತಿ. ಆದರೆ...’ ಎಂದು ತಮ್ಮ ಮಾತನ್ನು ಮುಂದುವರೆಸುವಷ್ಟರಲ್ಲೇ ಅವರ ಮಾತನ್ನು ತುಂಡರಿಸಿದ ಕ್ರಾಂಕಿಕಾರಿ ಸ್ವಾಮಿಯ ಶಿಷ್ಯರು ’ರೀ ನೀವೆಲ್ಲಾ ಒಂದೇ ಕಣ್ರೀ, ನಿಮ್ಮ ಜನಾಂಗದ ಮುಖ್ಯಮಂತ್ರಿ ಪಟ್ಟದಿಂದ ಕೆಳಗಿಳಿದಿದ್ದಕ್ಕೆ ಅವರ ಪರವಾಗಿ ಕೂಗಾಡಿದ್ರಿ. ಈಗ ನಿಮ್ಮ ಜನಾಂಗದವರೇ ಆದ ಬ್ಲೂ ಫಿಲಂ ನೋಡಿದ ಸಚಿವರನ್ನೂ ಸಮರ್ಥಿಸಿಕೊಳ್ಳುತ್ತೀರೆಂಬುದೂ ನಮಗೆ ಗೊತ್ತು. ನೀವು ಒಂದೈದು ನಿಮಿಷ ಸುಮ್ನೆ ಕೂತ್ಕಳಿ, ನಮ್ಮ ಸ್ವಾಮಿಗಳು ಮಾತಾಡ್ಲಿ’ ಎಂದು ಅಬ್ಬರಿಸತೊಡಗಿದರು. ಅವರ ಅಬ್ಬರಕ್ಕೆ ಕಂಗಾಲಾದ ಕಮಂಡಲೀಸ್ವಾಮಿ ’ನಾವು ಏನು ಹೇಳ್ತಾ ಇದ್ದೀವಿ ಅಂದ್ರೆ...,’ ಎಂದು ಮಾತನ್ನು ಮುಂದುವರೆಸುವಾಗಲೇ ಮಧ್ಯೆ ಪ್ರವೇಶಿಸಿದ ಪುಂಗಿರಂಗರು ಮತ್ತೆ ಯಡವಟ್ಟಾದರೆ ಕಷ್ಟವೆಂದುಕೊಂಡು ’ಪ್ರಿಯ ವೀಕ್ಷಕರೇ ಈಗೊಂದು ಸಣ್ಣ ಬ್ರೇಕ್’ ಅಂದರು.
(ಮುಂದಿನ ಸಂಚಿಕೆಯಲ್ಲಿ ’ಸ್ವಾಮೀಜಿಗಳಿಗೆಲ್ಲಾ ನರ ಕಟ್ಟುಮಾಡಬೇಕು’ ಎಂದರಾ ಕ್ರಾಂತಿಕಾರಿ ಸ್ವಾಮಿ!)