ಮಾರ್ಚ್ ೨೦೧೨

ಕಾಫೀ ಕುಸುಮ ಬಲೆ!!!

ಮಲ್ಲಿಗೆಗಳ ಪರಿವಾರಕ್ಕೆ ಕಾಂಪ್ಲೆಕ್ಸು ಬರಿಸುವ ಕೊಡಗು ಸಕಲೇಶಪುರದ ಈ
ಶ್ವೇತಸುಂದರಿಯರನ್ನು ನೋಡಿ! ಇವರು ಕಾಫಿ ಕುಸುಮರು.
 
 
ಈ ಬಾರಿ ಆಯಾಮದಲ್ಲಿ ಚಿತ್ರ ನೋಡಿದ್ದು ಉಹೂಂ...ಖಂಡಿತಾ ಸಾಲದು. ಒಮ್ಮೆ ಹಾಸನ-ಸಕಲೇಶಪುರದ ರಸ್ತೆಗಳಲ್ಲಿ
ತಿರುಗಾಡಿ, ವರ್ಷದಲ್ಲಿ ಒಮ್ಮೆ ಮಾತ್ರ ಕಾಣಿಸಿಕೊಂಡು ಬೇಗನೇ ಮಾಯವಾಗಿಬಿಡುವ ಈ
ದೇವಕನ್ನಿಕೆಯರನ್ನು ವೀಕ್ಷಿಸಿ ಬನ್ನಿ.
 
 
 
ನಿಮ್ಮೆದುರು ಇಲ್ಲಿ ಎರಡು ಬಗೆಯ ಕಾಫೀ ಹೂಗಳಿವೆ. ಬಿಳಿಯ ಚೆಂಡು ಹೂವಿನಂತೆ ಪುಟ್ಟ
ಪುಟ್ಟ ದಂಡೆಯಾಗಿ ಗುಂಪಿನಲ್ಲಿ ಅರಳಿರುವ ರೋಬಸ್ಟಾ ಕಾಫಿಯ ಹೂಗಳು ಮತ್ತು ಜಾಜಿ ಹೂವಿನ
ಹಿರಿಯಕ್ಕಂದಿರಂತೆ ಹರಡಿ ಅರಳಿರುವ ಅರೇಬಿಕಾ ಕಾಫಿಯ ಹೂಗಳು. ಜಾಜಿ-ಮಲ್ಲಿಗೆಯಂತೆ
ಮನುಷ್ಯರ ಮೂಗನ್ನಾವರಿಸಿ ಮತ್ತು ಬರಿಸುವ ಪರಿಮಳ ಇಲ್ಲವೆನಿಸಿದರೂ ಸ್ನಿಗ್ಧ ಸೌಂದರ್ಯ,
ಇದ್ದೂ ಇಲ್ಲದಂತಹ ಮೋಡಿ ಮಾಡುವ ಇವರ ತೆಳುವಾದ ಗಮಲು ದುಂಬಿ-ಕೀಟಗಳನ್ನು ಬೇರೆತ್ತಲೂ
ನೋಡಲೂ ಬಿಡುವುದಿಲ್ಲ. ಇವರು ಅರಳಿದ್ದಷ್ಟೂ ದಿನ ಅವರೆಲ್ಲರೂ ಇವರ ದಿವಾನಾಗಳು.
ಅವರೇನು?! ನಮ್ಮ ಪಾಡೂ ಅದೇ!!
 
 
 
 
 
 
 
ಮೇ ಜೂನ್ ತಿಂಗಳುಗಳ ಮೊದಲ ಮಳೆಗೇ ಕಾಯುತ್ತಿದ್ದರೇನೋ ಎನ್ನುವಂತೆ ಮಳೆ ಬಿದ್ದ ತಕ್ಷಣ
ಎಲ್ಲಿಲ್ಲದ ಸಡಗರದಿಂದ ರೆಕ್ಕೆಪುಕ್ಕ ಸೆರಗು ಹಾರಿಸಿ ಅರಳಿ ನಿಂತುಬಿಡುವ ಈ
ಕಿನ್ನರಿಯರು ತಮ್ಮೆಲ್ಲ ಅಂದವನ್ನೂ ಸುರಿದು ಇದ್ದಬದ್ದ ಭೃಂಗ, ಭ್ರಮರ, ಕೀಟಗಳನ್ನು
ಅನಾಮತ್ ಆಕರ್ಷಿಸಿ ಪರಾಗಸ್ಪರ್ಷ ಮಾಡಿಕೊಂಡು ಬಿಡುತ್ತಾರೆ. ಹಾಗಾದರೆ ಅವರ ಚೆಲುವು
ಸಾರ್ಥಕ.
 
ಇವರ ಚೆಲುವು ಕಾಫೀ ಗಿಡಗಳ ಮೇಲೆ ನಿಲ್ಲುವುದು ಕೆಲವೇ ದಿನಗಳು ಮಾತ್ರ.
ಪರಾಗಸ್ಪರ್ಷವಾದ ನಂತರ ತಮ್ಮ ಮಾದಕ ಚೆಲುವನ್ನು ತಮ್ಮ ರಕ್ತಕೆಂಪು ಬೀಜಗಳಿಗೆ ಧಾರೆ
ಎರೆದು ಪ್ರಪಂಚವನ್ನೇ ಅವುಗಳ ಸವಿ, ಸೊಗಡಿಗೆ ದಾಸನನ್ನಾಗಿ ಮಾಡಿಕೊಂಡು
ಬಿಡಬೇಕಲ್ಲಾ...ಬಹಳ ಅರ್ಜೆಂಟಿನ ಸುಂದರಿಯರು ಇವರು!!
 
 

ಫ಼ೆಬ್ರವರಿ ೨೦೧೨

 
ಇವು ಗೊಂಡೋಲಾಗಳು; ಪ್ರತಿ ವರ್ಷವೂ ಇಂಚಿಂಚಾಗಿ ಸಮುದ್ರದಲ್ಲಿ ಮುಳುಗುತ್ತಾ ಬರುತ್ತಿರುವ ವೆನಿಸ್ ನಗರದ ಹಾವಿನ ಕಾಲುವೆಗಳ ಮೇಲೆ ಶತಮಾನಗಳಿಂದಲೂ ಸರಾಗವಾಗಿ ತೇಲುತ್ತಾ ಜನ-ಸಾಮಾನುಗಳ ಸಾಗಾಣಿಕೆ ಮಾಡುತ್ತಾ ಬಂದಿರುವ ಮರದ ದೋಣಿಗಳು.
 
ಪುರಾತನ ವೆನಿಸ್ ನ ಚತುರ ವರ್ತಕರು ಅಲ್ಲಿನ ಶಾಂತ ಸಮುದ್ರದ ಮೇಲೆ, ಅಕ್ಕ ಪಕ್ಕದ ನೆಲಗಳಿಗೆ, ತೇಲುತ್ತಾ ತಮ್ಮ ವ್ಯವಹಾರ ವೃದ್ಧಿಸಿಕೊಂಡಿದ್ದು ಇದೇ ಗೊಂಡೋಲಾಗಳೆಂಬ ತೆಳುವಾದ ಆಕೃತಿಯ ದೋಣಿಗಳ ಸಹಾಯದಿಂದ. ವೆನಿಸಿನ ಜನರು ವಿಶ್ವದ ಅತ್ಯುತ್ತಮ ನೌಕೆಗಳನ್ನು ಕಟ್ಟಿದವರೆಂದು ಇತಿಹಾಸ ಹೇಳುತ್ತದೆ. ಪ್ರಪಂಚದ ವಿವಿಧ ಭೂಭಾಗಗಳಿಗೆ ಮೊಟ್ಟಮೊದಲು ಯಾನ ಮಾಡಿ ತಮ್ಮ ವ್ಯಾಪ್ತಿಯನ್ನು ಹೆಚ್ಚಿಸಿಕೊಂಡವರು ಅವರಿಗೆ ಗೊಂಡೋಲಾಗಳಿಲ್ಲದೆ ಜೀವನ ಮಾರ್ಗವಿರಲಿಲ್ಲ, ಮನರಂಜನೆ, ಕ್ರೀಡೆಗಳಿರಲಿಲ್ಲ.

ಈ ಗೊಂಡೋಲಾಗಳನ್ನು ತಯಾರಿಸಲು ಎಂಟು ಬಗೆಯ ಮರಗಳನ್ನು ಬಳಸಲಾಗುತ್ತದೆ. ೧೧ ಮೀಟರ್ ಗಳಷ್ಟು ಉದ್ದವಿದ್ದು ನಾಲ್ಕು-ನಾಲ್ಕುವರೆ ಕ್ವಿಂಟಾಲು ಭಾರವಿರುವ ಇವು ಒಟ್ಟು ೨೮೦ ಭಾಗಗಳನ್ನು ತಯಾರು ಮಾಡಿ ಅದನ್ನು ನಂತರ ಜೋಡಿಸಲಾಗುತ್ತದೆ. ಒಂದು ಗೊಂಡೋಲಾ ತಯಾರಾಗಲು ಕನಿಷ್ಟ ಮೂರು ತಿಂಗಳಾದರೂ ಬೇಕು. ಇವತ್ತಿನ ಅತ್ಯಾಧುನಿಕ ನೌಕೆಗಳೂ ಸಹ ಗೊಂಡೋಲದ ಆಕಾರದಿಂದ ಆಧಾರದ ಮೇಲೇ ತಯಾರಾಗುತ್ತವೆ ಎನ್ನಲಾಗುತ್ತದೆ.
 
ತಮ್ಮ ತಮ್ಮ ಗೊಂಡೋಲಾಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಚಂದವಾಗಿ ಅಲಂಕರಿಸಿಕೊಂಡು, ಹುಟ್ಟು ಹಾಕುತ್ತಾ ಇಟಾಲಿಯನ್ ಭಾಷೆಯಲ್ಲಿ ಗಟ್ಟಿದನಿಯಲ್ಲಿ ಹಾಡುತ್ತಾ ’ಗ್ರಾಂಡ್ ಕನಾಲ್’ ನ ಸುತ್ತಾಟ ಮಾಡಿಸುವ ’ಗಾಂಡೊಲೀಯರ್’ಗಳು (ಚಾಲಕರು) ವೆನಿಸಿಗೆ ಬರುವ ಪ್ರವಾಸಿಗರಿಗೆ, ಹಬ್ಬ ಆಚರಿಸುವವರಿಗೆ ಮುಖ್ಯ ಆಕರ್ಷಣೆ. ಇವತ್ತಿಗೂ ವೆನಿಸ್ ಸಂಸ್ಕೃತಿಯ ತುಂಬು ಅನುಭವ ಗೊಂಡೋಲಾದ ಯಾನವಿಲ್ಲದಿದ್ದರೆ ಮಾಡಲಾಗುವುದಿಲ್ಲ.
 
 

 
ಜನವರಿ ೨೦೧೨

ರೋಮ್ ನಗರದ ಬೃಹತ್ ರಂಗ-ಕೊಲೋಸಿಯಂ


 
ಇಟಲಿ ದೇಶದ ರೋಮ್ ನಲ್ಲಿರುವ, ಹೆಸರಿಗೆ ತಕ್ಕಂತೆಯೇ ಬೃಹದಾಕಾರವಾಗಿರುವ ಕೊಲೋಸಿಯಂ ರೋಮನ್ ಸಾಮ್ರಾಜ್ಯದವರ ಅತ್ಯದ್ಭುತ ಭಾರೀ ವಾಸ್ತುಕಲೆಗೆ ಇವತ್ತಿಗೂ ಸಾಧಾರ. ಕ್ರಿಸ್ತ ಶಕ ೭೨ ರಲ್ಲಿ ರೋಮಿನ ಫ್ಲಾವಿಯನ್ ವಂಶದ ಚಕ್ರವರ್ತಿ ವೆಸ್ಪಾಸಿಯನ್ ಕಟ್ಟಿಸಲು ಶುರು ಮಾಡಿದ ಈ ಬೃಹದ್ ಹೊರಾಂಗಣ ರಂಗ (Amphitheater)ವನ್ನು ಮೊದಲು ಆತನ ವಂಶದ ಹೆಸರಿನಲ್ಲಿಯೇ ಫ್ಲಾವಿಯನ್ ಆಮ್ಫಿಥಿಯೇಟರ್ (Flavian Amphitheater) ಎಂದು ಕರೆಯಲಾಗುತ್ತಿತ್ತು. ರೋಮ್ ನಗರವನ್ನು ಸುತ್ತುವರಿದ ಸೆಲಿಯನ್, ಎಸ್ಕಲೈನ್ ಮತ್ತು ಪಲಟೈನ್ ಬೆಟ್ಟಗಳ ನಡುವಿನ ಸಮತಟ್ಟಾದ ಜಾಗವನ್ನು ಈ ಬೃಹತ್ ರಂಗ ಕಟ್ಟಲು ಆಯ್ಕೆ ಮಾಡಿಕೊಂಡು, ೮ ವರ್ಷಗಳಲ್ಲಿ ಇದನ್ನು ಕಟ್ಟಿಮುಗಿಸಲಾಗಿತ್ತು. 

 
ಐವತ್ತು ಸಾವಿರ ಜನಕ್ಕೂ ಹೆಚ್ಚಿನ ಜನರಿಗೆ ಆಸನ ವ್ಯವಸ್ಥೆ ಇರುವ ಕೊಲೋಸಿಯಂನಲ್ಲಿ ಗ್ರೀಕ್ ಪೌರಾಣಿಕ ನಾಟಕಗಳು, ಪ್ರಾಣಿಗಳ ಸಮರ, ರೋಮನ್ ರಾಜಾಧಿಪತ್ಯ ಸುತ್ತಮುತ್ತಲಿನ ಜಾಗಗಳಿಂದ ಹಿಡಿದು ತಂದು ತಯಾರು ಮಾಡುತ್ತಿದ್ದ ಗ್ಲ್ಯಾಡಿಯೇಟರ್ ವೀರ ಯೋಧರುಗಳು ಕಾದಾಟವನ್ನು ಚಕ್ರವರ್ತಿಗಳ ಸಮ್ಮುಖದಲ್ಲಿ ಆಯೋಜಿಸಲಾಗುತ್ತಿತ್ತು. ಫ್ಲಾವಿಯನ್ ವಂಶಸ್ಥರ ನಂತರ ಅಧಿಪತ್ಯಕ್ಕೆ ಬಂದ ನೀರೋ ದೊರೆ ತನ್ನ ಬೃಹತ್ ಮೂರ್ತಿಯೊಂದನ್ನು ಈ ಕ್ರೀಡಾರಂಗದ ಸಮೀಪದಲ್ಲಿ ಕಡೆಸಿ ನಿಲ್ಲಿಸಿದ್ದರಿಂದ ಇದಕ್ಕೆ ಕೊಲೋಸಿಯಂ ಅಥವಾ ಬೃಹತ್ ರಂಗ ಎಂಬ ಹೆಸರು ಬಂದಿತೆನ್ನಲಾಗಿದೆ. ಕೊಲೋಸಿಯಂನ ದಕ್ಷಿಣ ಭಾಗ ಕಿಸ್ತ ಶಕ ೮೪೭ರಲ್ಲಿ ಆದ ಭೂಕಂಪದಿಂದ ಕುಸಿದು ಬಿದ್ದಿತ್ತೆಂದು ದಾಖಲಾಗಿದೆ.

 
ದಿನದ ಪ್ರತೀ ಹೊತ್ತಿನಲ್ಲೂ ಹೊಸದೊಂದೇ ರೂಪ ಪಡೆದು ಭವ್ಯತೆಯನ್ನು ಬೆರಗಾಗುವಂತೆ ಉಣಿಸುವ ಕೊಲೋಸಿಯಂನ ಪ್ರತೀ ಕಲ್ಲುಗಳೂ ಕಲೆ, ವೈಭವ, ರಕ್ತ, ಹಿಂಸೆ, ಯುದ್ಧ, ಅಧಿಕಾರದ ಕಮಟಿನಿಂದಲೇ ಇಷ್ಟು ಗಟ್ಟಿಯಾಗಿ ಘನೀಕೃತವಾದಂತೆ ಭಾಸವಾಗುತ್ತವೆ.
 
 
ಅಸಂಖ್ಯಾತ ಕಾರು ಬಸ್ಸು ಪ್ರವಾಸಿಗಳ ಕಿಕ್ಕಿರಿದ ಸಂದಣಿಯಲ್ಲಿ ರೋಮ್ ನಗರದ ಮಧ್ಯದಲ್ಲೇ ಇತಿಹಾಸದ ಸಾವಿರಾರು ಪುಟಗಳಿಗೆ ಸಾಕ್ಷಿಯಾಗಿ ಧೀಮಂತವಾಗಿ ನಿಂತಿರುವ ಈ ಕೊಲೋಸಿಯಂ ನಿಂದ ಮೊನ್ನೆ ಡಿಸೆಂಬರ್ ೨೭ರಂದು ಮತ್ತಷ್ಟು ಕಲ್ಲುಗಳು ಉದುರಿರುವುದನ್ನು ಪ್ರತ್ಯಕ್ಷದರ್ಶಿಗಳು ವರದಿ ಮಾಡಿದ್ದಾರೆ. ೨೦೧೨ ರ ಮಾರ್ಚಿನಲ್ಲಿ ಕೊಲೋಸಿಯಮ್ ಅನ್ನು ಪುನರುತ್ಥಾನ ಮಾಡುವ ೩೩ ಮಿಲಿಯನ್ ಡಾಲರುಗಳ ಯೋಜನೆ ಶುರುವಾಗಲಿದೆ.
 
 

ಡಿಸೆಂಬರ್ ೨೦೧೧

ಧ್ರುವ ಕರಡಿಗೂ ಮನೋವೇದನೆ...ಮನುಷ್ಯ ಕಾಲಿಟ್ಟ ಕಡೆ ಮತ್ತೇನು?


ಹಿಮ ಕರಡಿ, ಸಮುದ್ರ ಕರಡಿ, ಧ್ರುವ ಕರಡಿ (ಪೋಲಾರ್ ಬೇರ್) ಎಂದು ಕರೆಸಿಕೊಳ್ಳುವ ಈ ಭಾರೀ ಕಾಯದ ಕರಡಿಗಳು ಉತ್ತರ ಧ್ರುವವಾದ ಆರ್ಕ್ಟಿಕ್ ನಲ್ಲಿ ಮಾತ್ರ ವಾಸ ಮಾಡುತ್ತವೆ. ಉತ್ತರ ಅಮೆರಿಕಾ, ಕೆನಡಾ, ರಶಿಯಾ, ನಾರ್ವೇ, ಗ್ರೀನ್ ಲ್ಯಾಂಡ್ ಪ್ರದೇಶಗಳಲ್ಲಿ ಇವು ಮನುಷ್ಯರಿಗೆ ಕಾಣಸಿಗುತ್ತವೆ.
ಮಾಂಸಾಹಾರಿಗಳಾದ ಧ್ರುವ ಕರಡಿಗಳಿಗೆ ಸಮುದ್ರದ ಸೀಲ್, ಮೀನುಗಳು, ಗಟ್ಟಿಯಾದ ಹಿಮ ಇಷ್ಟದ ಆಹಾರ. ತಮ್ಮ ಮೈಯ್ಯ ಮೇಲೆ ದಟ್ಟವಾದ ಬೆಳ್ಳಿಕೂದಲನ್ನು ಹೊಂದಿರುವ ಜೊತೆಗೇ ನಾಲ್ಕು ಇಂಚುಗಳಷ್ಟು ದಪ್ಪದ ತುಪ್ಪಳವನ್ನು ಹೊದ್ದಿರುವ ಇವು ಆರ್ಕ್ಟಿಕ್ ನ ತೀಕ್ಷ್ಣ ಚಳಿಯಲ್ಲಿ ಸರಾಗವಾಗಿ ವಾಸಿಸಬಲ್ಲವಾಗಿವೆ. ಸಾಧಾರಣವಾಗಿ ಗಂಡು ಕರಡಿಯೊಂದು ೭೭೫ರಿಂದ ೧,೨೦೦ ಪೌಂಡ್ ಭಾರವಿರುತ್ತದೆ, ಹೆಣ್ಣು ಕರಡಿಗಳು ೩೩೦ ರಿಂದ ೬೫೦ ಪೌಂಡ್ ತೂಕವಿರುತ್ತವೆ.

ತನ್ನ ಪರಿವಾರದ ಜೊತೆ ಸದಾ ಚಿನ್ನಾಟವಾಡುತ್ತಾ ಕುಪ್ಪಳಿಸಿ ಖುಷಿಯಾಗಿ ಬದುಕುವ ಮರಿಗಳ ಪಾಲನೆಯಲ್ಲಿ ಅಮ್ಮ ಕರಡಿಯ ಪಾತ್ರ ತುಂಬಾ ಮಹತ್ತರ. ಹೆಣ್ಣು ಧ್ರುವ ಕರಡಿಯೊಂದು ಒಂದು ಬಾರಿಗೆ ಎರಡರಿಂದ ಮೂರು ಮರಿಗಳಿಗೆ ಜನ್ಮ ಕೊಟ್ಟು ಮರಿಗಳನ್ನು ೨ ರಿಂದ ೨೧/೨ ವರ್ಷ ತನ್ನೊಟ್ಟಿಗೇ ಸಲಹುತ್ತದೆ.
 
ಧ್ರುವ ಕರಡಿಗಳು ಮನುಷ್ಯನ ಕ್ರೂರತೆಯಿಂದ ತಪ್ಪಿಸಿಕೊಳ್ಳಲಾಗಿಲ್ಲ. ದಶಕಗಳ ಹಿಂದೆ ತುಪ್ಪಟಿ, ಮಾಂಸ, ಹಲ್ಲು, ಮತ್ತಿತರ ಮೂಳೆಗಳಿಗಾಗಿ ಇವುಗಳನ್ನು ಕೊಲ್ಲಲಾಗುತ್ತಿತ್ತಾದರೂ ಈಗ ಬೇಟೆಯ ನಿಷೇಧವಾಗಿರುವುದರಿಂದ ಇವುಗಳನ್ನು ಕೊಲ್ಲುವುದು ನಿಂತಿದೆ. ಆದರೆ ಕೈಗಾರೀಕರಣ, ನಗರೀಕರಣ ಮತ್ತು ಅತಿಯಾದ ರಾಸಾಯನಿಕಗಳ ಉಪಯೋಗದಿಂದ ಗ್ರೀನ್ ಹೌಸ್ ಗ್ಯಾಸ್ಗಳ ಹೆಚ್ಚಳದಿಂದ ಮತ್ತು ಸಮುದ್ರದ ನೀರಿನ ಉಷ್ಣತೆಯ ಏರಿಕೆಯಿಂದ ಆರ್ಕ್ಟಿಕ್ ನಲ್ಲಿನ ಹಿಮ, ದೈತ್ಯ ನೀರ್ಗಲ್ಲುಗಳ ಕರಗುವಿಕೆಯಿಂದ ಈ ಧ್ರುವ ಕರಡಿಗಳು ತಮ್ಮ ಆಹಾರ ಮೂಲ, ನೆಲೆಯನ್ನು ಕಳೆದುಕೊಂಡು ಅವಸಾನದ ಅಂಚಿಗೆ ತಲುಪುತ್ತಿವೆ. ಈಗ ಪ್ರಪಂಚದಲ್ಲಿ ೧೮ರಿಂದ ೨೦ ಸಾವಿರ ಧ್ರುವ ಕರಡಿಗಳಷ್ಟೇ ಉಳಿದಿವೆ ಎನ್ನಲಾಗಿದೆ.

ಇಲ್ಲಿರುವ ಚಿತ್ರ ಮನುಷ್ಯ ನಿರ್ಮಿತ ವಾತಾವರಣದಲ್ಲಿ ಬೆಳೆಯುತ್ತಿರುವ ಧ್ರುವ ಕರಡಿಯೊಂದರದ್ದು. ತನ್ನ ನೆಲೆ ಸ್ವಸ್ಥವಾಗಿದ್ದು ಈ ಕರಡಿ ಸ್ವತಂತ್ರವಾಗಿದ್ದಿದ್ದರೆ ಇದೂ ಆಟವಾಡಿಕೊಂಡು ನಿಸರ್ಗದೊಡನೆ ಸಂತೋಷವಾಗಿರುತಿತ್ತು. ಆದರೀಗ ಇದಕ್ಕೆ ಡಿಪ್ರೆಷನ್ ಅಂತೆ! ಪುಟ್ಟದೊಂದು ಜಾಗದಲ್ಲಿ ಒಂಟಿಯಾಗಿ ಕೂತು ತನ್ನನ್ನು ನೋಡಿಹೋಗುವ ಲಕ್ಷಾಂತರ ಕಣ್ಣುಗಳಲ್ಲಿ ತನ್ನ ಅಪ್ಪ ಅಮ್ಮನನ್ನು ಹುಡುಕುತ್ತಾ ಈ ಪುಟಾಣಿ ಅನುಭವಿಸುತ್ತಿರುವ ವೇದನೆಗೆ ನಾವೇ ಕಾರಣರು.
 
 
 
 
ನವೆಂಬರ್ ೨೦೧೧
 
ಗ್ರೀಕ್ ಸಮುದ್ರ ರಾಜ ಪೊಸೈಡಾನ್ ಮಂದಿರ
 
 
 
 
ಕ್ರಿಸ್ತ ಪೂರ್ವ ೪೫೦-೪೪೦ ರಲ್ಲಿ ಕಟ್ಟಲಾಗಿದೆ ಎನ್ನುವ ಈ ’ಮಂದಿರ’ ಗ್ರೀಕರ ಪೌರಾಣಿಕ ಸಮುದ್ರ ರಾಜ ಪೊಸೈಡಾನ್ ಗೆ ಸೇರಿದ್ದು! ಪ್ರಕೃತಿಯ ಶಕ್ತಿಗಳನ್ನು ದೇವ-ದೇವತೆಯರೆಂದು ಆರಾಧಿಸುತ್ತಿದ್ದ ಗ್ರೀಕರಿಗೆ ಪೊಸೈಡಾನ್ ಬಹಳ ಮುಖ್ಯ ದೇವರಾಗಿದ್ದ; ಅವರ ದೇವಾನುದೇವ ಜ್ಯುಪಿಟರ್ ನ ನಂತರದ ಸ್ಥಾನದಲ್ಲಿದ್ದ. ಯಾನಪ್ರಿಯ ಗ್ರೀಕರು ಪೊಸೈಡಾನ್ ನ ಒಪ್ಪಿಗೆ ಇಲ್ಲದೆ, ಅವನಿಗೆ ಹಣ್ಣು ಹಂಪಲು ಪ್ರಾಣಿಬಲಿಗಳನ್ನು ಒಪ್ಪಿಸದೆ, ಸಂಪ್ರೀತಿಗೊಳಿಸದೆ ಎಲ್ಲಿಗೂ ಸಮುದ್ರ ಯಾನ ಮಾಡುತ್ತಿರಲಿಲ್ಲವಂತೆ.
 
 
 
ಮೂರುಕಡೆಯಿಂದಲೂ ಸಮುದ್ರದಿಂದಾವೃತವಾಗಿರುವ ಪುಟ್ಟ ಬೆಟ್ಟವೊಂದರ ಮೇಲಿರುವ ಪೊಸೈಡಾನ್ ನ ಈ ಸುಂದರ ಅಮೃತ ಶಿಲೆಯ ’ಮಂದಿರ’ ಸಮುದ್ರ ಮಟ್ಟದಿಂದ ಅರವತ್ತು ಮೀಟರ್ ಎತ್ತರದಲ್ಲಿದೆ. ಅತ್ಯುಚ್ಛ ಐತಿಹಾಸಿಕ ಸ್ಥಳವೆಂದು ಗುರುತಿಸಲ್ಪಟ್ಟಿರುವ ಈ ಜಾಗ ಗ್ರೀಸ್ ನ ಅಥೆನ್ಸ್ ನಗರದಿಂದ ೭೦ ಮೈಲುಗಳ ದೂರದಲ್ಲಿದೆ. ಗ್ರೀಸಿನ ಜೈಲಿಗೆ ವಾರಗಳ ಭೇಟಿ ಕೊಡಬೇಕೆಂದರೆ ಇಲ್ಲಿನ ಒಂದು ಸಣ್ಣ ಕಲ್ಲನ್ನು ಜೇಬಿಗಿಳಿಸಿದರೆ ಸಾಕು! ಕಟ್ಟಿದವರ್ಯಾರೋ, ಕೊಡವಿದವರ್ಯಾರೋ, ಆಳಿದವರ್ಯಾರೋ, ನೋಡಿ ಹೋಗುವವರ್ಯಾರೋ ನನಗೇನಾಗಬೇಕು ಎಂಬಂತೆ ಪೊಸೈಡಾನ್ ಈಗಲೂ ಇಲ್ಲಿ ತಣ್ಣಗೆ ತಾಕಿ ಹೋಗುತ್ತನಂತೆ... 
 
 
 
 
 
 
ಅಕ್ಟೋಬರ್ ೨೦೧೧

ಇವು ’ಪವಿತ್ರ’ ಬೆರ್ರಿಗಳು!

 
ಹಚ್ಚ ಹಸಿರ ಮುಳ್ಳ ಕಂಟಿಯೊಂದರಲ್ಲಿ ಮಣಿಯೇ ಮೈಯ್ಯಾಗಿ ತುಂಬಿ ಸಬ್-ಜ಼ೀರೋ ಚಳಿಗಾಲದಲ್ಲೂ ಕಣ್ಮನ ಸೆಳೆಯುವ ಈ ಕಾಡುಹಣ್ಣುಗಳು ಕ್ರೈಸ್ತರಿಗೆ ಪವಿತ್ರ ಹಣ್ಣುಗಳು. ಕ್ರಿಸ್ಮಸ್ ಹಬ್ಬದ ಸಂದರ್ಭದಲ್ಲಿ ಮನೆಮನೆಯ ತೋರಣವಾಗುವ ಆಕ್ವಿಫೋಲಿಯಾಸೀ ಸಸ್ಯ ಕುಟುಂಬಕ್ಕೆ ಸೇರಿದ ಈ ಬಳ್ಳಿಯನ್ನು ’ಹೋಲಿ’ ಎಂದು ಕರೆಯಲು ಪರಿಗಣಿಸಲು ಕಾರಣ ಇವು. 
ಬಡ ಕುರಿಕಾಯುವ ಹುಡುಗ ತನ್ನ ಪ್ರೀತಿಯನ್ನು ವ್ಯಕ್ತಪಡಿಸಲು ಪುಟ್ಟ ಜೀಸಸ್ ಗೆ ಈ ಬಳ್ಳಿಯಿಂದ ಒಂದು ಕಿರೀಟ ಮಾಡಿ ಉಡುಗೊರೆಯಾಗಿ ಕೊಟ್ಟನಂತೆ. ಇದಕ್ಕಿಂತ ಹೆಚ್ಚು ಕೊಡಲಾಗದ ತನ್ನ ಬಡತನಕ್ಕೆ ಮುಜುಗರ ಪಟ್ಟುಕೊಂಡನಂತೆ. ಆಗ ಪುಟಾಣಿ ಜೀಸಸ್ ಆ ಬಳ್ಳಿಯನ್ನು ಮುಟ್ಟಿದಾಗ ಅದು ಹೊಂಬಣ್ಣಕ್ಕೆ ತಿರುಗಿ ಮಿರುಗಲಾರಂಭಿಸಿತಂತೆ. ಇವತ್ತಿಗೂ ಪಾಶ್ಚಾತ್ಯ ದೇಶಗಳಲ್ಲಿ, ಕ್ರಿಸ್ಮಸ್ ಹಬ್ಬದಲ್ಲಿ ಈ ಬಳ್ಳಿಗಳು ಪ್ರತೀ ಮನೆಯಲ್ಲೂ ತೂಗುತ್ತವೆ.
ಕ್ರಿಸ್ತನನ್ನು ಶಿಲುಬೆಗೇರಿಸಲು ಇದೇ ಮುಳ್ಳ ಬಳ್ಳಿಯನ್ನು ಬಳಸಲಾಯಿತೆಂದೂ, ಆಗ ಈ ಬಳ್ಳಿಯ ಎಳೆಯ ಬಿಳಿ ಹಣ್ಣುಗಳು ಕ್ರಿಸ್ತನ ಮೈತಾಕಿ ಅವನು ಅನುಭವಿಸಿದ ಹಿಂಸೆಯನ್ನು ಸಂಕೇತಿಸಲು ಕೆಂಪುಬಣ್ಣ ತಿರುಗಿದವೆಂದೂ ಜರ್ಮನ್ನರ ನಂಬಿಕೆ.
ಈ ಬಳ್ಳಿ ರೋಮನ್ನರ ಪೌರಾಣಿಕ ದೇವತೆ ಸ್ಯಾಟರ್ನ್ ನಿಗೆ ಪ್ರಿಯವಂತೆ. ಅವನ ಹಬ್ಬ ಸ್ಯಾಟರ್ನೇಲಿಯಾ ದಿನ ಅವನಿಗೆ ಹಣ್ಣು ತುಂಬಿದ ಈ ಬಳ್ಳಿಯನ್ನು ಕೊಟ್ಟರೆ ಅವ ಪೂರಾ ಖುಷ್ ಅಂತೆ!
ಡ್ರುಇಡ್ ಜನರ ನಂಬಿಕೆ ಇನ್ನೂ ವಿಶೇಷವಾಗಿದೆ. ಅವರು ಈ ಬಳ್ಳಿ ಮತ್ತದರ ಹಣ್ಣುಗಳನ್ನು ಅವರ ದೇವಮಾತೆ ದನು ಳ ಋತುಚಕ್ರವೆಂದು ನಂಬುತ್ತಾರಂತೆ. ತೀವ್ರ ಚಳಿಗಾಲದಲ್ಲಿ ಎಲ್ಲ ಗಿಡ ಮರ ಬಳ್ಳಿಗಳು ಜೀವ ಕಳೆದುಕೊಂಡರೂ ಈ ಬಳ್ಳಿ ಹಸಿರು ಮತ್ತು ಹಣ್ಣಿನಿಂದ ನಳನಳಿಸುವುದು ಅವರಿಗೆ ಜೀವದ ಸಂಕೇತವಂತೆ! ಏನೂ ಸಿಗದ ಚಳಿಗಾಲದಲ್ಲಿ ಪಕ್ಷಿ, ಇಣಚಿಗಳಿಗೆ ಇಷ್ಟದ ಆಹಾರವಾಗುವ ಈ ’ಪವಿತ್ರ’ ಹಣ್ಣುಗಳು ಮನುಷ್ಯರ ಸೇವನೆಗೆ ಮಾತ್ರ ವಿಷ!
 
 
 
ಸೆಪ್ಟೆಂಬರ್ ೨೦೧೧

 

 
 
 
 
ಇದು ಭೂಮಿಯ ಅಂತರಾಳದಲ್ಲಿರುವ ಅಮೋಘ ಗುಹಾ ಪ್ರಪಂಚದ ಒಂದು ಪುಟ್ಟ ತುಣುಕು. ಆ ಸೌಂದರ್ಯವನ್ನು ಈ ಕೆಲವು ಚಿತ್ರಗಳು ಸಂಪೂರ್ಣವಾಗಿ ಬಣ್ಣಿಸಲಾರವು. ಆದರೂ...
ಅಮೆರಿಕಾ ದೇಶದ ಟೆನೆಸಿ, ಕೆಂಟಕಿ ಮತ್ತು ನ್ಯೂ ಮೆಕ್ಸಿಕೋ ರಾಜ್ಯಗಳ ಭೂಗರ್ಭದಲ್ಲಿ ಮೈಲುಗಟ್ಟಲೆ ವಿಸ್ತರಿಸಿರುವ ಈ ಗುಹೆಗಳು ಪ್ರಪಂಚದಲ್ಲೇ ಅತ್ಯಂತ ಆಳವಾದ ಮತ್ತು ಹರಡಿಕೊಂಡ ಗುಹಾ ವ್ಯೂಹಗಳು. ಸಹರ್ಸಾರು ವರ್ಷಗಳಿಂದಲೂ ಭೂಮಿಯ ಒಳಗೆ ಲೈಮ್ ಸ್ಟೋನ್ ನ ಕೂಡುವಿಕೆಯಿಂದ ಈ ಗುಹೆಗಳು ಉಂಟಾಗಿವೆ ಮತ್ತು ಬೆಳೆಯುತ್ತಲೇ ಇವೆ. ಚಿತ್ರದಲ್ಲಿ ಕಾಣುವ ಸುಂದರ ಪದರಗಳನ್ನು ವಿಜ್ನಾನ ಪ್ರಪಂಚ ಸ್ಟಾಲಕ್ಟೈಟ್ ಮತ್ತು ಸ್ಟಾಲಗ್ಮೈಟ್ ರಚನೆಗಳೆಂದು ಕರೆಯುತ್ತದೆ.
ಸ್ಟಾಲಕ್ಟೈಟ್ ಗಳು ಗುಹೆಗಳ ಮೇಲ್ಚಾವಣಿಯಿಂದ ಕೆಳಕ್ಕೆ ನೇತಾಡುವಂತೆ ಬೆಳೆಯುತ್ತವೆ. ಮಳೆಯ ನೀರು ಹೊತ್ತು ತರುವ ಕಾರ್ಬನ್ ಡೈಆಕ್ಸೈಡ್ ಮತ್ತಿತರ ಲವಣಗಳು ಕ್ಯಾಲ್ಶಿಯಂ ಕಾರ್ಬೊನೇಟ್, ಕ್ಯಾಲ್ಶಿಯಂ ಬೈ ಕಾರ್ಬೊನೇಟ್ ಆಗಿ ಪರಿವರ್ತಿತವಾಗಿ ಭೂಮಿಯ ಒಳಸೇರಿ, ಖಾಲಿಯಿರುವ ಈ ಜಾಗಗಳಲ್ಲಿ ಹನಿಹನಿಯಾಗಿ ಮೇಲಿನಿಂದ ಜಿನುಗತೊಡಗುತ್ತವೆ. ಹಾಗೆ ಜಿನುಗುವ ಲವಣ ಮಿಶ್ರಿತ ನೀರು, ಗುಹೆಯೊಳಗಿನ ಗಾಳಿಯ ಸಂಪರ್ಕದಿಂದ ಕ್ರಮೇಣ ಗಟ್ಟಿಯಾಗುತ್ತಾ ಹೋಗುತ್ತದೆ. ಜಿನುಗುವಂತೆಯೇ ಗಟ್ಟಿಯಾಗುತ್ತಾ ಈ ಆಕೃತಿಗಳ ನಿರ್ಮಾಣವಾಗುತ್ತದೆ. ಹೀಗೆ ಸ್ಟಾಲಕ್ಟೈಟ್ ಗಳು ಮೇಲಿನಿಂದ ಕೆಳಗೆ ಬೆಳೆದರೆ, ಸ್ಟಾಲಗ್ಮೈಟ್ ಗಳು ಗಿಡಗಳಂತೆ ನೆಲದಿಂದ ಮೇಲಕ್ಕೆ ಬೆಳೆತ್ತವೆ. ಈ ಎರಡೂ ರಚನೆಗಳು ಸೇರಿ ಗುಹೆಯ ಚಾವಣಿಯಿಂದ ಮತ್ತು ಅಡಿಯಿಂದ ರಚಿಸುವ ನಾಜೂಕಿನ ಆಕಾರ-ಆಕೃತಿಯ ’ಕಾಲಮ್’ ಗಳು ಅವರ್ಣನೀಯ. ಸಹಸ್ರಾರು ವರ್ಷಗಳಿಂದಲೂ ಗುಹೆಗಳೊಳಗೆ ದಿನನಿತ್ಯ ಬೆಳೆಯುತ್ತ ಬಂದಿರುವ ಈ ಸ್ಟಾಲಕ್ಟೈಟ್ ಮತ್ತು ಸ್ಟಾಲಗ್ಮೈಟ್ ರಚನೆಗಳ ಬೆಳವಣಿಗೆ ಮನುಷ್ಯರ/ಪ್ರಾಣಿಗಳ ಸ್ಪರ್ಶದಿಂದ ನಿಂತುಬಿಡುತ್ತದೆ!
 
 
 
 
 
 
 
 
 
 
 
 
 
 
 
 
 
 
 
 
ಆಗಸ್ಟ್ ೨೦೧೧
 
 
 

ಎಲೆಯಾಕೃತಿಯ ಸಮುದ್ರ ಡ್ರಾಗನ್ :
ಸಮುದ್ರ ಕುದುರೆಗಳಂತೆಯೇ ಸಿನದಿಡೀ/ಸಿನದಿಡೈ (Syngnathidae) ಕುಟುಂಬಕ್ಕೆ ಸೇರುವ ಸಮುದ್ರ ಡ್ರಾಗನ್ ಗಳು ಬಹಳ ಅಚ್ಚರಿಯ ಜೀವಿಗಳು. ಚೈನಾದ ಪುರಾಣಗಳಲ್ಲಿ ಕೇಳಿಬರುವ ಡ್ರಾಗನ್ ಗಳನ್ನು ಆಕೃತಿಯಲ್ಲಿ ಹೋಲುವುದರಿಂದ ಇವುಗಳನ್ನು ಡ್ರಾಗನ್ ಎಂದು ಕರೆಯಲಾಗಿದೆಯೇ ಹೊರತು ಇವು ಮಹಾನ್ ಸಾಧು ಜೀವಿಗಳು. ಶತ್ರುವಿನಿಂದ ರಕ್ಷಣೆಗೆ ಸಮುದ್ರದಾಳದ ಪಾಚಿ, ಗಿಡ, ಕಲ್ಲುಗಳ ಸಂದಿಯಲ್ಲಿ ಮೈಮರೆಸಿ ಅಡಗಿಕೊಳ್ಳಲು ಅನುಕೂಲವಾಗುವಂತೆ ಅವುಗಳನ್ನೇ ಹೋಲುವಂತೆ ನಿಸರ್ಗದಿಂದ ಅನೇಕ ಬಗೆಯ ಅಪೂರ್ವ ಆಕಾರ-ಬಣ್ಣಗಳನ್ನು ಪಡೆದಿರುವ ಈ ಸಮುದ್ರ ಡ್ರಾಗನ್ ಗಳಲ್ಲಿ, ಎಲೆಯನ್ನು-ಎಳೇ ಬಳ್ಳಿಯನ್ನು ಹೋಲುವ ಈ ಬಗೆ ಅತ್ಯಂತ ಸುಂದರ. ತನ್ನ ಕತ್ತಿನ ಪಕ್ಕವಿರುವ ಮತ್ತು ಬಾಲದ ತುಟ್ಟ ತುದಿಯಲ್ಲಿರುವ ಪಾರದರ್ಶಕ ಕಿವಿರುಗಳ ಸಹಾಯದಿಂದ ಹರಿದಾಡುವ/ಈಜಾಡುವ ಈ ಸಮುದ್ರ ಡ್ರಾಗನ್ ಗಳು ಆಸ್ಟ್ರೇಲಿಯಾ ಖಂಡದ ದಕ್ಷಿಣ ಮತ್ತು ಪಶ್ಚಿಮ ತೀರಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ.
ಸಣ್ಣ ಲಾರ್ವಾ ಮೀನು, ’ಸಮುದ್ರ ಹೇನು’, ಸಣ್ಣಾತಿಸಣ್ಣ ಸೀಗಡಿಗಳಂತಹ ಸಮುದ್ರ ಜೀವಿಗಳನ್ನು ತಿಂದು ಬದುಕುವ ಈ ಬಗೆಯ ಸಮುದ್ರ ಡ್ರಾಗನ್ಗಳಲ್ಲಿ, ಹೆಣ್ಣು ಡ್ರಾಗನ್ ಗಂಡು ಡ್ರಾಗನ್ ನ ಬಾಲದ ಒಳ ಪರದೆಯೊಳಗೆ ಸರಾಸರಿ ೨೫೦ ಮೊಟ್ಟೆಗಳನ್ನು ಇಡುತ್ತದೆ
 
 
 
 
 
 
 
 
ಜುಲೈ ೨೦೧೧

 
ಜೆನೆರಲ್ ಶೆರ್ಮನ್ ಹೆಸರಿನ ದೈತ್ಯ ಸಿಕೋಯಾ ಮರ ಇದು.
 
ಕ್ಯಾಲಿಫೋರ್ನಿಯಾದ ಸಿಯೆರಾ ನೆವಾಡಾ ಪರ್ವತ ಶ್ರೇಣಿಯ ಸೆರಗಲ್ಲೇ ಇರುವ ಸೆಕೋಯಾ ನ್ಯಾಷನಲ್ ಪಾರ್ಕ್ ನಲ್ಲಿ ಸುಮಾರು ಎರಡು-ಎರಡುವರೆ ಸಾವಿರ ವರ್ಷದಿಂದಲೂ ಧೀಮಂತನಂತೆ ತಲೆ ಎತ್ತಿ ನಿಂತಿರುವ ವಿಶ್ವದ ಅತ್ಯಂತ ಹಿರಿಯ ಮರ ಈತ!!!
ದೈತ್ಯ ಸೆಕೋಯಾ ಮರಗಳು ಡೈನೋಸಾರ್ ಗಳ ಕಾಲದಿಂದಲೂ ಅಸ್ತಿತ್ವದಲ್ಲಿವೆ ಎನ್ನಲಾಗಿದೆ. ಸುಮಾರು ಒಂದು ಮಿಲಿಯನ್ ವರ್ಷಗಳ ಹಿಂದೆ ಐಸ್ ಏಜ್
 
ಆರಂಭವಾದಾಗ ಅತಿಯಾದ ಶೀತ ತಾಳಲಾರದೆ ಈ ದೈತ್ಯಗಳು ಭೂಗೋಳದ ಉತ್ತರ ಭಾಗದಿಂದ ಮಾಯವಾಗಿಬಿಟ್ಟವು. ಇಡೀ ಭೂಮಿಯ ಮೇಲೆ ಇವು ಈಗ ಉಳಿದಿರುವುದು ಕ್ಯಾಲಿಫೋರ್ನಿಯಾದ ಸಿಯೆರಾ ನೆವಾಡಾ ಶ್ರೇಣಿಯಲ್ಲಿ ಮಾತ್ರ. ಈ ನಿಮಿಷಕ್ಕೂ ಉಸಿರಾಡುತ್ತಾ ಅಸಂಖ್ಯಾತ ಬೀಜಗಳನ್ನು ಹಾರಿಸಿ ತಮ್ಮ ಸಂತತಿ ಬೆಳೆಸುತ್ತಿರುವ ಈ ಮರಗಳು ಹಿಂದಿನ ದೈತ್ಯ ಸೆಕೋಯಾಗಳ ಪುಟಾಣಿ ಪಳೆಯುಳಿಕೆಗಳಷ್ಟೇ!! ಈಗಿರುವ ಮರಗಳ ಸರಾಸರಿ ಎತ್ತರ ೪೦೦-೪೫೦ ಅಡಿಗಳು ಮಾತ್ರ!!
ಈ ಭೂಭಾಗದಲ್ಲಿ ಪ್ರತೀ ಬಾರಿ ಪ್ರಚಂಡ ಸಿಡಿಲುಗಳು ಬಂದಾಗಲೂ ಅವು ಮೊದಲು ಧಾಳಿ ಮಾಡುವುದು ಈ ದೈತ್ಯ ಸೆಕೋಯಾಗಳನ್ನೇ. ಸಿಡಿಲಿನ ಧಾಳಿಗಳಿಗೆ ಸಿಕ್ಕಿ ಅಷ್ಟಿಷ್ಟು ತುಂಡಾದರೂ, ಹತ್ತಿ ಉರಿದರೂ, ಬದುಕು ನಿಲ್ಲಿಸದ ಬೃಹತ್ ಮರ ಜೆನೆರಲ್ ಶೆರ್ಮನ್ ಮತ್ತು ಅವನ ಹಲವಾರು ಮಿತ್ರ ಸೆಕೊಯಾಗಳ ಬುಡದಲ್ಲಿ ನಿಂತಾಗ ಬಳಿ ನಿಂತಾಗ ’ಕಾಲ’ನನ್ನೆ ತಾಕಿದ ಅನನ್ಯ ಅನುಭವ.
 
 
 
 
 
ಮೇ ೨೦೧೧
 
 
 
ಸಮುದ್ರ ಲೋಕದ ಅಚ್ಚರಿಯ ಆದಿವಾಸಿ ಜೆಲ್ಲಿ ಫಿಶ್!
ಸಮುದ್ರಗಳ ತುಂಬೆಲ್ಲಾ ಬಣ್ಣ ಬಣ್ಣದ ಹೂ ಹಿಂಡುಗಳಂತೆ ತುಂಬಿಕೊಂಡಿರುವ ಎರಡು ಸಾವಿರಕ್ಕೂ ಹೆಚ್ಚು ಬಗೆಯ ಜೆಲ್ಲಿ ಫಿಶ್ ಗಳು ಪ್ರಪಂಚದಲ್ಲಿ ಅಸ್ತಿತ್ವದಲ್ಲಿರುವ ಅತ್ಯಂತ ಪುರಾತನ ಜೀವಿಗಳಲ್ಲಿ ಒಂದು. ಡೈನೋಸಾರ್ಗಳಿಗಿಂತಲೂ ಮೊದಲೇ ಭೂಮಿಯನ್ನು ವಾಸಸ್ಥಾನ ಮಾಡಿಕೊಂಡ ಜೆಲ್ಲಿ ಫಿಶ್ ಗಳು ಭೂಮಿಯ ಮೇಲೆ ೬೫೦ ಮಿಲಿಯನ್ ವರ್ಷಗಳಿಂದಲೂ ಇವೆ! ನಿರ್ಜೀವವಾದಾಗ ಇವು ಆಕಾರವೇ ಇಲ್ಲದ ಜೆಲ್ಲಿ ಮುದ್ದೆಗಳಂತೆ ಕಾಣುತ್ತವಾದರೂ ನೀರಿನಲ್ಲಿ ಇವುಗಳ ಓಲಾಟ-ತೇಲಾಟ ಅತ್ಯಂತ ಲಾಲಿತ್ಯದಿಂದ ಕೂಡಿರುತ್ತದೆ. ಜೆಲ್ಲಿ ಫಿಶ್ ನ ದೇಹದ ಭಾಗ ಎಲ್ಲಕಡೆಯಿಂದಲೂ ಸಿಮೆಟ್ರಿಕಲ್ ಆಗಿದೆ. ಹೀಗಾಗಿಯೇ ಅದು ಯಾವ ದಿಕ್ಕಿಗೂ ಸರಾಗವಾಗಿ ತಿರುಗಬಲ್ಲದು. ಶತ್ರುಗಳಿಂದ ತನ್ನನ್ನು ರಕ್ಷಿಸಿಕೊಳ್ಳಬಲ್ಲದು. ಜೆಲ್ಲಿ ಫಿಶ್ ಗಳ ದೇಹದಲ್ಲಿ ನರವ್ಯೂಹವೊಂದು ಮಾತ್ರ ಇರುತ್ತದೆ, ಈ ಅಚ್ಚರಿಯ ಜೀವಿಗೆ ಹೃದಯ, ಮೆದುಳು ಅಥವಾ ಎಲುಬುಗಳಿರುವುದಿಲ್ಲ!
 
 
 
 
 
ಏಪ್ರಿಲ್, ೨೦೧೧
 
 
 
 
ಗಂಡು ಕಾರ್ಡಿನಲ್: ಕಾರ್ಡಿನಲ್ ಗಳು ಉತ್ತರ ಮತ್ತು ದಕ್ಷಿಣ ಅಮೆರಿಕಾದಲ್ಲಿ ಸಾಧಾರಣವಾಗಿ ಕಂಡುಬರುವ ಹಾಡುಹಕ್ಕಿಗಳು; ಜೀನಸ್ ಕಾರ್ಡಿನಾಲಿಸ್ ವರ್ಗಕ್ಕೆ ಸೇರಿದವು. ಇವುಗಳ ದೇಹ ೨೦ ರಿಂದ ೨೧ ಸೆಂಟಿಮೀಟರ್ಗಳಷ್ಟು ಬೆಳೆಯಬಲ್ಲದು. ಗಂಡುಹಕ್ಕಿಗಳು ರಕ್ತ-ಕೆಂಪು ಮೈ ಬಣ್ಣ ಹೊಂದಿದ್ದರೆ ಹೆಣ್ಣುಹಕ್ಕಿಗಳು ಗಾತ್ರದಲ್ಲಿ ಸ್ವಲ್ಪ ಸಣ್ಣವಿದ್ದು ಕೆಂಪು ಮಿಶ್ರಿತ ಕಂದು ಬಣ್ಣಕ್ಕಿರುತ್ತವೆ. ಈ ಹಕ್ಕಿಗಳ ಕೊಕ್ಕು ಕೆಂಪಗಿರುತ್ತದೆ. ಸೂರ್ಯ ಕಾಂತಿ ಬೀಜ ಮತ್ತಿತರ ಬೀಜಗಳನ್ನು, ಒಮ್ಮೊಮ್ಮೆ ಸಣ್ಣ ಹುಳ ಹುಪ್ಪಟೆಗಳನ್ನು ತಿನ್ನುವ ಈ ’ಕಾಮನ್ ಕಾರ್ಡಿನಲ್’ ಗಳು ಕೈ ತೋಟಗಳಲ್ಲಿ, ಜೌಗುಪ್ರದೇಶಗಳಲ್ಲಿ, ದಟ್ಟವಾದ ಕಾಡುಗಳಲ್ಲಿ ಕಂಡುಬರುತ್ತವೆ. ಗಂಡು ಕಾರ್ಡಿನಲ್ ಗಳು ಹಾಡು ಹೇಳಿಕೊಂಡು ತಮ್ಮ ಟೆರಿಟರಿ ಅಥವಾ ಒಡೆತನದ ಪ್ರವೇಶವನ್ನು ಗುರುತುಮಾಡಿಕೊಳ್ಳುತ್ತವೆ!
 
 
ಮಾರ್ಚ್ , ೨೦೧೧

ನೀಲಿ ಮೋರ್ಫೋ ಚಿಟ್ಟೆ (Blue Morpho Butterfly-Morpho peleides)

ಛಾಯಾಚಿತ್ರ: ನವಮಿ


ಕಡುನೀಲಿ ಬಣ್ಣದ ರೆಕ್ಕೆ, ಅದಕ್ಕೆ ಕಪ್ಪು ಬಣ್ಣದ ಅಂಚು, ಅಂಚಿನ ಮೇಲೆ ಪುಟಾಣಿ ಬಿಳಿ ಬಿಳಿ ಚುಕ್ಕೆಗಳು...ನೀಲಿ ಮೋರ್ಫೋ ಚಿಟ್ಟೆಗಳು ಪ್ರಪಂಚದ ದೊಡ್ಡ ಚಿಟ್ಟೆಗಳ ಪೈಕಿಗೆ ಸೇರುತ್ತವೆ. ರೆಕ್ಕೆಗಳು ಐದರಿಂದ ಎಂಟು ಇಂಚುಗಳಷ್ಟು ಅಗಲಕ್ಕಿರುತ್ತವೆ. ಇವು ಲ್ಯಾಟಿನ್ ಅಮೆರಿಕಾ, ಮೆಕ್ಸಿಕೋ, ಕೊಲಂಬಿಯಾದ ಟ್ರಾಪಿಕಲ್ ಅರಣ್ಯಗಳಲ್ಲಿ ಕಾಣಸಿಗುತ್ತವೆ. ರೆಕ್ಕೆ ಹರಡಿಕೊಂಡ ನೀಲಿ ಚಿಟ್ಟೆಗಳನ್ನು ನೋಡುವುದು ಅದೃಷ್ಟವೆಂದೂ, ನೀಲಿ ಚಿಟ್ಟೆಗಳು ಸಂತೋಷ ಮತ್ತು ಬದಲಾವಣೆಯನ್ನು ತರುತ್ತವೆಂದು ಪಾಶ್ಚಾತ್ಯರು ನಂಬುತ್ತಾರೆ. 

ಫೆಬ್ರವರಿ, ೨೦೧೧

ಅಮೆರಿಕನ್ ರಾಬಿನ್ - ಅಮ್ಮ ಮತ್ತು ಅವಳ ಮರಿಗಳು
ಛಾಯಾಚಿತ್ರ ಗ್ರಾಹಕರು: ಶ್ರೀಮತಿ ಜಾಯ್ ಬೆಲ್ಲೆ (Ms. Joy Belle) ಇಲ್ಲಿನಾಯ್, ಯು ಎಸ್ ಎ

ಉತ್ತರ ಅಮೆರಿಕಾದಲ್ಲಿ ಸಾಮಾನ್ಯವಾಗಿ ಕಂಡು ಬರುವ ಅಮೆರಿಕನ್ ರಾಬಿನ್ ಗಳು ಭಾರತದ ಗುಬ್ಬಿಗಳಿದ್ದಂತೆ. ಎಲ್ಲೆಂದರಲ್ಲಿ ನೆಲ-ಹುಲ್ಲು ಕೆದಕುತ್ತಾ ಎರೆಹುಳು ಇತ್ಯಾದಿಗಳನ್ನು ತಿಂದು ಬದುಕುವ ಈ ಹಕ್ಕಿಗಳು ನಗರ ಪಟ್ಟಣಗಳಲ್ಲದೆ ಅತ್ಯಂತ ಶೀತಪ್ರದೇಶಗಳಲ್ಲೂ, ದಟ್ಟವಾದ ಕಾಡುಗಳಲ್ಲೂ ಕಂಡು ಬರುತ್ತವೆ.
 
 
 
 
 
 
 
 
data-show-faces="true" data-width="450" data-send="true"
 
 
 
 
 
Copyright © 2011 Neemgrove Media
All Rights Reserved