ವಿಮಾನದಿಂದ ಬಿದ್ದ ವಿಜಯ ಮಲ್ಯ
 

ಈಶ್ವರಚಂದ್ರ
 
ವಿಜಯ್ ಮಲ್ಯ ಎಂಬ ಮದ್ಯದ ದೊರೆಗೆ ಇದೀಗ ಸಂಕಷ್ಟ ಎದುರಾಗಿದೆ. ತನ್ನ ಅಪ್ಪ ವಿಠಲ್ ಮಲ್ಯ ಕಟ್ಟಿದ್ದ ಮದ್ಯದ ಸಾಮ್ರಾಜ್ಯವನ್ನು ಜಗತ್ತಿನೆಲ್ಲೆಡೆ ವಿಸ್ತರಿಸಿಕೊಂಡಿದ್ದ ಕರ್ನಾಟಕದ ಉದ್ಯಮಿ ಎಂಬ ಹೆಗ್ಗಳಿಕೆಗೆ ಗುರಿಯಾಗಿದ್ದ ಕನ್ನಡಿಗ ವಿಜಯ್ ಮಲ್ಯ ಮಹಾನ್ ಮಹತ್ವಾಕಾಂಕ್ಷಿ ಉದ್ಯಮಿಯೆನಿಸಿಕೊಂಡಾತ. ಆಡು ಮಟ್ಟದ ಸೊಪ್ಪಿಲ್ಲವೆಂಬಂತೆ ಮಲ್ಯ ಪ್ರವೇಶಿಸದ ಉದ್ದಿಮೆಗಳಿಲ್ಲವೆನ್ನಬಹುದು. ಆತ ತನಗೆ ಇಷ್ಟ ಬಂದ ಉದ್ದಿಮೆಗಳನ್ನು ಆರಂಬಿಸಿ ಅವುಗಳಲ್ಲಿ ಯಶಸ್ವಿಯಾದನಾದರೂ ತನಗೆ ಅದರಿಂದಾಗಿ ಸಿಕ್ಕ ಜನಪ್ರಿಯತೆಯಿಂದಾಗಿ ತಾನು ಏನು ಮಾಡಿದರೂ ದಕ್ಕಿಸಿಕೊಳ್ಳುವೆನೆಂಬ ಹುಂಬತನದಿಂದಲೇ ತನಗೆಟುಕದಿದ್ದ ಉದ್ದಿಮೆಗಳಿಗೂ ಲಗ್ಗೆಯಿಡಲಾರಂಬಿಸಿದರು. ಅಂತೆಯೇ ಈತ ತನ್ನ ಮಹತ್ವಾಕಾಂಕ್ಷೆಯಿಂದಲೇ ಆರಂಭಿಸಿದ ಕಿಂಗ್ ಫ಼ಿಶರ್ ಏರ್ ಲೈನ್ಸ್ ಸಂಸ್ಥೆಯಿಂದಲೇ ಇದೀಗ ಈತ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ತನ್ನ ವಿಮಾನಯಾನ ಸಂಸ್ಥೆಗಾಗಿ ಮಾಡಿಕೊಂಡ ಏಳು ಸಾವಿರ ಕೋಟಿಗೂ ಹೆಚ್ಚಿನ ಸಾಲದ ಹೊರೆಯನ್ನು ಇಳಿಸಿಕೊಳ್ಳಲಾಗದೇ ಒದ್ದಾಡುವ ಸ್ಥಿತಿ ಈತನದ್ದು.
 
ಭಾರತೀಯ ಕೈಗಾರಿಕಾರಂಗದಲ್ಲಿ ವಿಜಯ ಮಲ್ಯರಷ್ಟು ರಂಗುರಂಗಿನ ವ್ಯಕ್ತಿತ್ವದ ಉದ್ದಿಮೆದಾರ ಮತ್ತೊಬ್ಬನಿಲ್ಲ. ವೈಭವದ ವಿಲಾಸೀ ಜೀವನ ಶೈಲಿಯನ್ನು ಮೈಗೂಡಿಸಿಕೊಂಡಿರುವ ಮಲ್ಯ ತಮ್ಮ ರಸಿಕತೆಯಿಂದಲೇ ಹೆಸರುವಾಸಿಯಾದವರು. ತನ್ನ ಮೊದಲ ಹೆಂಡತಿಗೆ ಸೋಡಾ ಚೀಟಿ ಕೊಟ್ಟ ನಂತರ ಇವನನ್ನು ವರಿಸಲು ಬಾಲಿವುಡ್ ನ ಖ್ಯಾತ ತಾರೆಗಳೇ ತುದಿಗಾಲಲ್ಲಿ ನಿಂತಿದ್ದರೂ ಈತ ಮರುಮದುವೆಯಾಗಿದ್ದು ಎರಡು ಮಕ್ಕಳ ತಾಯಿಯಾಗಿದ್ದು ಈತನಂತೆಯೇ ತನ್ನ ಗಂಡನಿಂದ ವಿಚ್ಚೇದಿತರಾಗಿದ್ದ ಕನ್ನಡತಿಯೊಬ್ಬರನ್ನು. ಅದೇನೇ ಇರಲಿ, ಮಲ್ಯ ತನ್ನ ತಂದೆಯ ಮದ್ಯ ಸಾಮ್ರಾಜ್ಯವನ್ನು ವಹಿಸಿಕೊಂಡ ನಂತರ ಕೈಗಾರಿಕಾರಂಗದಲ್ಲಿ ಭಾರೀ ಮುನ್ನಡೆಯನ್ನೇ ಸಾಧಿಸಿದರು. ಎಂಭತ್ತರ ದಶಕದಿಂದಲೇ ರೋಗಪೀಡಿತ ಕೈಗಾರಿಕೆಗಳನ್ನು ಕೊಂಡುಕೊಂಡು ಅವುಗಳು ಲಾಭದಾಯಕವಾಗುವಂತೆ ಪರಿವರ್ತಿಸಿದ ವ್ಯವಹಾರಿಕ ನಿಷ್ಣಾತರಿವರು. ದೇಶ ವಿದೇಶಗಳಲ್ಲೂ ತಮ್ಮ ಮದ್ಯದ ಉದ್ದಿಮೆಗಳನ್ನು ಸ್ಥಾಪಿಸಿ ಯಶಸ್ವಿಯಾಗಿ ಮುನ್ನಡೆಸತೊಡಗಿದ್ದವರು. ವಿದೇಶಗಳಲ್ಲೂ ಜನಪ್ರಿಯ ಬ್ರಾಂಡಿನ ಮದ್ಯದ ಕಂಪನಿಗಳನ್ನು ಕೊಂಡು ಭಾರತದ ಮಾರುಕಟ್ಟೆಗೆ ಪರಿಚಯಿಸಿದ ಮಲ್ಯ ಅನಿವಾಸಿ ಭಾರತೀಯ ಉದ್ಯಮಿಯೆನಿಸಿಕೊಂಡವರು. 
 
 
ಕೈಗಾರಿಕಗಳಷ್ಟೇ ಅಲ್ಲದೆ ಇತರ ರಂಗಗಳಲ್ಲಿಯೂ ಮಲ್ಯ ಮುನ್ನುಗ್ಗಿದ್ದರು. ರೇಸು ಕುದುರೆಗಳ ಸಾಕಾಣಿಕೆ, ತಮ್ಮದೇ ಮದ್ಯದ ಕಂಪನಿಗಳ ಹೆಸರಿನಲ್ಲಿ ದುಬಾರಿ ಮೊತ್ತದ ಡರ್ಬಿ ರೇಸುಗಳನ್ನಾಡಿಸುವುದು, ದುಬಾರೀ ಫ಼ಾರ್ಮುಲಾ ಎಫ಼್ ಒನ್ ಕಾರುಗಳನ್ನು ಕೊಂಡು ರೇಸ್ ಗಳಲ್ಲಿ ಭಾಗವಹಿಸುವುದು ಇವರ ದುಬಾರೀ ಹವ್ಯಾಸಗಳಿಗೆ ಒಂದೆರಡು ಉದಾಹರಣೆಗಳಷ್ಟೆ. ಇಂದು ಮಲ್ಯ ತನ್ನ ಕಿಂಗ್ ಫ಼ಿಶರ್ ಏರ್ ಲೈನ್ಸ್ ನಿಂದಾಗಿ ಇದೀಗ ಏಳು ಸಾವಿರ ಕೋಟಿ ರೂಗಳ ಸಾಲಗಾರನಾಗಿರಬಹುದು. ಆದರೆ ಈತ ಎಂಥಾ ವ್ಯಾವಹಾರಿಕ ನಿಪುಣರೆಂದರೆ ತಾನು ಬಂಡವಾಳ  ಹೂಡಿದಲ್ಲೆಲ್ಲಾ ಅಪಾರವಾದ ಲಾಭವನ್ನೇ ಮಾಡಿಕೊಂಡವರು. ೨೦೦೭ ರಲ್ಲಿ ಮೈಕೆಲ್ ವೋಲ್ ಎಂಬ ಪಾಲುದಾರರೊಂದಿಗೆ ಸೇರಿಕೊಂಡು ಮೂಲತಃ ರಷ್ಯಾ ದೇಶದ ಎಫ಼್ ೧ ಸ್ಪೋರ್ಟಿಂಗ್ ತಂಡವಾದ ’ಮಿಡ್ ಲಾಂಡ್ ಎಫ಼್ ೧ ರೇಸಿಂಗ್ ಟೀಮನ್ನು ಕೊಂಡುಕೊಂಡಿದ್ದು ಬರೋಬ್ಬರಿ ೯೦ ಮಿಲಿಯನ್ ಯೂರೋಗಳಿಗೆ. ಅದನ್ನು ’ಫ಼ೋರ್ಸ್ ಇಂಡಿಯಾ’ ಎಂದು ಹೆಸರು ಬದಲಿಸಿದ ಮಲ್ಯ ೨೦೧೧ ರಲ್ಲಿ ಇದೇ ತಂಡದ ಶೇ. ೪೨ ಶೇರುಗಳನ್ನು ಸಹರಾ ಪರಿವಾರ್ ಎಂಬ ಸಂಸ್ಥೆಗೆ ಮಾರಾಟ ಮಾಡಿಬಿಟ್ಟರು. ಆದರೆ ಅದಕ್ಕಾಗಿ ಮಲ್ಯ ಪಡೆದ ಮೊತ್ತ ಎಷ್ಟು ಎಂಬುದನ್ನು ಸ್ಪಷ್ಟವಾಗಿ ಬಹಿರಂಗಗೊಳಿಸಲಿಲ್ಲ. ಅದರಿಂದಾಗಿ ಮಲ್ಯ ಸಾಕಷ್ಟು ಸಂಪತ್ತು ಗಳಿಸಿದರಾದರೂ ಅದು ನಮ್ಮ ಭಾರತದ ಪ್ರಜೆಗಳಿಗೆ ತಿಳಿಯಲಾಗಿಲ್ಲ.    
 
 
ಭಾರತೀಯ ಕ್ರಿಕೆಟ್ ರಂಗದಲ್ಲಿ ಬಿರುಗಾಳಿ ಎಬ್ಬಿಸಿರುವ ಐ ಪಿ ಎಲ್ ಪಂದ್ಯಾವಳಿಗಾಗಿ ಮಲ್ಯ ಬೆಂಗಳೂರು ತಂಡವನ್ನು ಖರೀದಿಸಿ ಕ್ರಿಕೆಟ್ ರಂಗದಲ್ಲೂ ವ್ಯಾಪಾರಕ್ಕಿಳಿದವರು. ಅಂದು ಆತ ಖರೀದಿಸಿದ ತಂಡದ ಮೊತ್ತ, ಇಂದು ಮೂಲ ಬೆಲೆಯ ನಾಲ್ಕರಷ್ಟಾಗಿದೆ. ಇದೂ ಮಲ್ಯರೇ ಅನುಭವಿಸುತ್ತಿರುವ ಲಾಭವೇ. ಒಂದು ಕಾಲದಲ್ಲಿ ಪ್ಲೇ ಬಾಯ್ ಇಮೇಜು ಬೆಳೆಸಿಕೊಂಡಿದ್ದ ಮಲ್ಯರ ಸುತ್ತ ಈಗಲೂ ಚೆಂದುಳ್ಳೀ ಚೆಲುವೆಯರ ಹಿಂಡುನೆರೆದಿರುತ್ತದೆ. ಅಷ್ಟರ ಮಟ್ಟಿಗೆ ಈತ ರಸಿಕ ಶಿಖಾಮಣಿ. ತನ್ನ ಮೋಜು ಮಸ್ತಿಗಾಗಿ ಕೋಟಿಗಟ್ಟಲೇ ಹಣಕೊಟ್ಟು ಕೆರೇಬಿಯನ್ ದ್ವೀಪ ಸಮೂಹದಲ್ಲಿ ದ್ವೀಪವೊಂದನ್ನೇ ಖರೀದಿಸಿ ಸುದ್ದಿ ಮಾಡಿರುವ ಮಲ್ಯ ತಮಗೆ ಅನುಕೂಲ ಮಾಡಿಕೊಡುವವರ ಮೋಜಿಗಾಗಿ ಅದನ್ನು ಬಳಸಿಕೊಳ್ಳತೊಡಗಿದರು. ತಾನು ಸ್ಥಾಪಿಸಿದ ಉದ್ದಿಮೆಗಳಲ್ಲೆಲ್ಲಾ ಯಶಸನ್ನೇ ಸಾಧಿಸಿದರೂ ಎರಡು ರಂಗಗಳಲ್ಲಿ ಆತ ವಿಫಲನಾಗಿದ್ದರು. ಒಂದು ರಾಜಕೀಯ ರಂಗ ಮತ್ತೊಂದು ವಿಮಾನಯಾನ ರಂಗ.
 
 
ಒಂದಾದ ಮೇಲೊಂದರಂತೆ ತನ್ನ ಉದ್ದಿಮೆಗಳನ್ನು ವಿಸ್ತರಿಸುವಲ್ಲಿ ಸಪಲನಾಗಿದ್ದ ಮಲ್ಯರಿಗೆ ವಿಮಾನ ಸಂಸ್ಥೆ ಮಾಡುವಂತೆ ಅದ್ಯಾರು ಹುಳ ಬಿಟ್ಟರೋ ಗೊತ್ತಿಲ್ಲ. ಅದನ್ನು ಆರಂಭಿಸಿದ್ದರು. ಅಂತೆಯೇ ರಾಜಕೀಯದ ಹುಚ್ಚು ಹಿಡಿದಿತ್ತು. ತಾನೂ ರಾಜ್ಯಸಭೆಗೆ ಪ್ರವೇಶಿಸಬೇಕೆಂಬ ಹಂಬಲವಿತ್ತು. ಅದಕ್ಕಾಗಿ ಆತ ಕೋಟ್ಯಾಂತರ ಹಣ ಖರ್ಚು ಮಾಡಿ ಕರ್ನಾಟಕದ ’ಘನತೆವೆತ್ತ’ ಶಾಸಕರುಗಳ ಸಹಕಾರದಿಂದ ದೇಶದ ’ಘನತೆವೆತ್ತ’ ರಾಜ್ಯಸಭೆಗೂ ಪ್ರವೇಶ ಮಾಡಿಬಿಟ್ಟರು. ಅದೇಕೋ ತಾನು ರಾಜ್ಯಸಭೆಗೆ ಪ್ರವೇಶಿಸಿದ ನಂತರ ಮಲ್ಯನಿಗೆ ಇದೂ ಒಳ್ಳೆಯ ವ್ಯಾಪಾರವೆಂದೆನಿಸಿರಬಹುದು. ಕಡಿಮೆ ಬಂಡವಾಳದ ಅಪಾರ ಲಾಭದ ಉದ್ಯಮವೆಂದುಕೊಂಡವರು ಒಂದು ರಾಜಕೀಯ ಪಕ್ಷವನ್ನೇ ಖರೀದಿಸಿಬಿಟ್ಟರು. ಆತ ಖರೀದಿಸಿದ್ದು ಅಂತಿಂಥ ಪಕ್ಷವನ್ನಲ್ಲ. ಜಯಪ್ರಕಾಶ ನಾರಾಯಣರಂತ ನಾಯಕರು ಸೇರಿದಂತೆ ಅಂದು ಇಂದಿರಾಗಾಂಧಿಯ ಸರ್ವಾಧಿಕಾರೀ ಧೋರಣೆಯ ವಿರುದ್ದವಾಗಿದ್ದ, ಆಕೆ ಘೋಷಿಸಿದ್ದ ತುರ್ತು ಪರಿಸ್ಥಿತಿಯ ವಿರುದ್ದ ಹೋರಾಡಿ ವರ್ಷಗಳ ಕಾಲ ಜೈಲುಪಾಲಾಗಿದ್ದ ಭಾರತದ ಅನೇಕಾನೇಕ ಮುತ್ಸದ್ದಿ ನಾಯಕರುಗಳು ಸ್ಥಾಪಿಸಿದ್ದ ಜನತಾಪಕ್ಷವನ್ನು.
 
ಭಾರತದಲ್ಲಿ ಮದ್ಯಪಾನವನ್ನು ನಿಷೇಧಿಸಬೇಕೆಂದು ಹೋರಾಟ ಮಾಡಿದಂತಹ ನಾಯಕರುಗಳು ಕಟ್ಟಿದ ಜನತಾಪಕ್ಷ ಕೊನೆಗೆ ಮದ್ಯದ ದೊರೆಯ ತೆಕ್ಕೆಗೇ ಬಂದು ಬಿದ್ದದ್ದು ವಿಪರ್ಯಾಸವಾದರೂ ಜನತಾಪಕ್ಷವನ್ನು ಕೊಂಡುಕೊಂಡಿದ್ದರಿಂದ ಮಲ್ಯ ಗಳಿಸಿದ್ದಕಿಂತ ಕಳೆದುಕೊಂಡಿದ್ದೇ ಹೆಚ್ಚು. ರಾಜಕಾರಣಿಗಳಿಗೆ ಲಂಚ ಕೊಟ್ಟು ಕೆಲಸ ಮಾಡಿಸಿಕೊಳ್ಳುವುದಕ್ಕಿಂತ ತಾನೇ ರಾಜಕೀಯ ಪಕ್ಷದ ನಾಯಕನಾಗಿಬಿಟ್ಟರೆ ರಾಜಕೀಯ ನಾಯಕರನ್ನು ಓಲೈಸುವ ಉಸಾಬರಿಯೇ ಇರುವುದಿಲ್ಲವೆಂಬ ಉದ್ದೇಶದಿಂದ ಅವರು ಕರ್ನಾಟಕದ ವಿಧಾನಸಭೆಗೆ ಅಭ್ಯರ್ಥಿಗಳನ್ನು ಹಾಕಿ ತನ್ನಲ್ಲಿದ್ದ ಮದ್ಯದ ಹೊಳೆಯನ್ನೇ ಹರಿಸಿದರೂ, ಅವರ ಪಕ್ಷದ ಅಭ್ಯರ್ಥಿಗಳು ಕನಿಷ್ಟ ಠೇವಣಿಯನ್ನೂ ಉಳಿಸಿಕೊಳ್ಳಲಾಗದೇ ನಾಮಾವಶೇಷವಾಗಿಬಿಟ್ಟರು. ಆತ ರಾಜಕೀಯವನ್ನಾದರೂ ಸಕಾರಾತ್ಮಕ ದೃಷ್ಟಿಯಿಂದ ಮಾಡಿದ್ದರೆ ಕೊಂಚ ಯಶಸ್ಸನ್ನಾದರೂ ಗಳಿಸಬಹುದಿತ್ತು. ಸದ್ಯ ಇತರೆ ಪಕ್ಷಗಳ ಶಾಸಕರನ್ನು ಖರೀದಿಸಿ ತಾನು ರಾಜ್ಯಸಭೆಗೆ ಆಯ್ಕೆಯಾಗಿದ್ದೊಂದೇ ಮಲ್ಯರ ರಾಜಕೀಯ ಸಾಧನೆ.
 
 
ಮಲ್ಯ ಕಿಂಗ್ ಫ಼ಿಶರ್ ವಿಮಾನಯಾನ ಸಂಸ್ಥೆ ಆರಂಭಿಸಿದ ಹೊಸತರಲ್ಲಿ ಉತ್ತಮ ಸೇವೆ ನೀಡುವಲ್ಲಿ ಗಮನ ಹರಿಸಿದ್ದರಿಂದ ಅದು ಜನಪ್ರಿಯವೂ ಆಗಿತ್ತು. ಯಾವಾಗ ಮಲ್ಯ ಭಾರತದಲ್ಲಿಯೇ ಅತಿ ಕಡಿಮೆ ದರದಲ್ಲಿ ವಿಮಾನ ಪ್ರಯಾಣದ ಸೇವೆಯನ್ನು ಒದಗಿಸುತ್ತಿದ್ದ ಮತ್ತೊಬ್ಬ ಕನ್ನಡಿಗರೇ ಆದ ಕ್ಯಾ. ಗೋಪಿನಾಥ್ ರವರ ಡೆಕ್ಕನ್ ಏವಿಯೇಶನ್ ವಿಮಾನ ಸಂಸ್ಥೆಯನ್ನು ಖರೀದಿಸಿದನೋ ಅಲ್ಲಿಂದಲೇ ಮಲ್ಯರ ಕಿಂಗ್ ಫ಼ಿಶರ್ ಸಂಸ್ಥೆಯ ಅವಸಾನ ಆರಂಭವಾಗಿತ್ತು. ವಿಮಾನದಲ್ಲಿ ಪ್ರಯಾಣ ಮಾಡಬೇಕೆಂಬ ಕೆಳಮಧ್ಯಮವರ್ಗದ ಜನರ ಕನಸನ್ನು ನನಸಾಗಿಸುವುದಕ್ಕೆಂದೇ ಸಿದ್ದವಾಗಿದ್ದ ಡೆಕ್ಕನ್ ವಿಮಾನಯಾನ ಸಂಸ್ಥೆಯನ್ನು ಖರೀದಿಸಿ, ಅದರ ಬೆಲೆ ಹೆಚ್ಚಿಸಿ, ವಿಮಾನ ಪ್ರಯಾಣವನ್ನು ದುಬಾರಿಯಾಗಿಸಿದ್ದರಿಂದ ಜನರ ಶಾಪವೇ ಆತನಿಗೆ ಮುಳುವಾಯಿತೆಂದು ಕೆಲವರು ವಿಶ್ಲೇಷಿಸಿದರು.
 
 
ಅದೇನೇ ಇರಲಿ, ಅಂತೂ ಮಲ್ಯರ ವಿಮಾನಗಳು ಸದ್ಯಕ್ಕೆ ನೆಲ ಬಿಟ್ಟು ಮೇಲಕ್ಕೆ ಹಾರಲಾರದ ಸ್ಥಿತಿ ತಲುಪಿವೆ. ತಮ್ಮ ವಿಮಾನಗಳಿಂದಲೇ ಕೆಳಗೆ ಬಿದ್ದಿರುವ ಮಲ್ಯ ಮುಖ ಉಳಿಸಿಕೊಳ್ಳಲು ಹೆಣಗಾಡತೊಡಗಿದ್ದಾರೆ. ಮಲ್ಯ ಸರ್ಕಾರಕ್ಕೆ ಸಾಲಗಾರರಾಗಿದ್ದಾರೆ. ವಿದೇಶಗಳಲ್ಲಿರುವ ಆಸ್ಥಿಗಳನ್ನು ಮಾರಾಟ ಮಾಡಿ ಆತ ತನ್ನ ಸಾಲವನ್ನು ತೀರಿಸಿಕೊಳ್ಳಬಹುದು. ಆದರೆ ಭಾರತದ ರಾಜಕಾರಣಿಗಳ, ಅಧಿಕಾರಿಗಳ ಲಂಚ ಬುರುಕತನವನ್ನು ಚೆನ್ನಾಗಿ ಬಲ್ಲವರಾದ್ದರಿಂದ ಇಲ್ಲಿಯೇ ಆಟವಾಡಿ ಸಾಲದಿಂದ ಮುಕ್ತಿ ಹೊಂದಲು ಹವಣಿಸತೊಡಗಿದ್ದಾರೆ.
 
 
ಮಲ್ಯರ ವಿಮಾನಗಳಿಗೆ ಸಾಲ ನೀಡಿದ್ದ ಭಾರತದ ರಾಷ್ಟ್ರೀಕೃತ ಬ್ಯಾಂಕುಗಳು ಚಿಂತಾಕ್ರಾಂತವಾಗಿವೆ. ಮಲ್ಯ ತನ್ನೆಲ್ಲಾ ಪ್ರಭಾವವನ್ನು ಉಪಯೋಗಿಸಿ ಬ್ಯಾಂಕುಗಳಿಗೆ ಕಟ್ಟ ಬೇಕಾಗಿರುವ ಬಡ್ಡಿಯನ್ನು ತಪ್ಪಿಸಿಕೊಳ್ಳುವುದಕ್ಕೆ ಹಾಗೂ ಮತ್ತಷ್ಟು ಸಾಲ ಪಡೆಯುವುದಕ್ಕೆ ಶತ ಪ್ರಯತ್ನ ಪಡುತ್ತಿದ್ದಾರೆ. ಅವರ ಅಮಿಷಗಳಿಗೆ ಒಳಗಾಗುವ  ಪೊಳ್ಳು ರಾಜಕಾರಣಿಗಳು, ಅಧಿಕಾರಿಗಳಿಗೆ ನಮ್ಮಲ್ಲೇನೂ ಬರವಿಲ್ಲ.
 
 
ಕೇವಲ ಹತ್ತು ಸಾವಿರ ರೂಗಳನ್ನು ಸಾಲ ಪಡೆವ ಬಡ ರೈತನ ಜಮೀನನ್ನು ಹರಾಜು ಹಾಕಿ ರೈತನ ಮಾನ ಕಳೆಯುವ ಬ್ಯಾಂಕುಗಳು ಏಳು ಸಾವಿರ ಕೋಟಿ ರೂಗಳಿಗೂ ಅಧಿಕ ಸಾಲವನ್ನು ಉಳಿಸಿಕೊಂಡಿರುವ ಮಲ್ಯನ ವಿಮಾನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿಲ್ಲ. ಅದಕ್ಕೆ ಬದಲಾಗಿ ಅವನ ಸಾಲದ ಬಡ್ಡಿ ಮನ್ನಾ ಮಾಡುವ, ಇನ್ನೂ ನೂರಾರು ಕೋಟಿ ರೂಗಳ ಸಾಲವನ್ನು ನೀಡುವ ನಿಟ್ಟಿನಲ್ಲಿಯೇ ಸಾಗುತ್ತಿವೆ.
 
 
ಬಡರೈತರನ್ನು ನೇಟಿಗೆ ದೂಡಿ, ಮಲ್ಯರಂತವರಿಗೆ ತೂಗು ಮಂಚ ಹಾಕುವ ಹಮಾರಾ ಭಾರತ್ ಮಹಾನ್ ಅಲ್ಲವೇ?  
 






ಜೀವತಳೆದ ಪುರಾತನ ಸಸ್ಯ!


ರಷ್ಯಾದ ವಿಜ್ನಾನಿಗಳು, ಮೂವತ್ತು ಸಾವಿರ ವರ್ಷಗಳ ಹಿಂದೆ ಸೈಬೀರಿಯಾದ ಕೊಲ್ಯಾಮ ನದಿಯ ತಟದಲ್ಲಿ ಫ್ರೀಜ಼್ ಆಗಿದ್ದ ಹಣ್ಣೊಂದರ ಬೀಜವನ್ನು ನೆಟ್ಟು ಅದರ ಸಸಿ ಬೆಳೆಸಲು ಯಶಸ್ವಿಯಾಗಿದ್ದಾರೆ. ಅಳಿಲುಗಳ ೨೦ ರಿಂದ ೪೦ ಮಿಟರ್ ಆಳದ ಬಿಲದ ಅತ್ಯಂತ ಶೀತಲ ಭಾಗದಲ್ಲಿ ಸಿಕ್ಕ ಸೈಲೆನ್ ಸ್ಟೆನೋಫಿಲ ಎಂಬ ಪ್ರಬೇಧದ ಈ ಹಣ್ಣನ್ನು ಅಳಿಲುಗಳೇ ಚಳಿಗಾಲದ ಆಹಾರಕ್ಕಾಗಿ ಬಚ್ಚಿಟ್ಟಿದ್ದು ಅದು ಅತಿಯಾಗಿ ಘನೀಕೃತವಾದಾಗ ತಿನ್ನದೆ ಹಾಗೇ ಬಿಟ್ಟಿವೆ ಎಂದು ರಷಿಯನ್ ವಿಜ್ನಾನಿಗಳು ಅಭಿಪ್ರಾಯ ಪಡುತ್ತಾರೆ. ಇಷ್ಟು ಪುರಾತನ ಗಿಡವೊಂದನ್ನು ಜೀವಕ್ಕೆ ಮರಳಿಸಲಾಗಿರುವುದು ವಿಜ್ನಾದ ಇತಿಹಾಸದಲ್ಲೇ ಇದೇ ಮೊದಲು ಎನ್ನಲಾಗಿದೆ.
 
ಆರ್ಕ್ಟಿಕ್ ಅಂಟಾರ್ಟಿಕ್ ಶೀತಲ ಪ್ರದೇಶಗಳಲ್ಲಿ ಇನ್ನೂ ಹಲವಾರು ಬಗೆಯ ಬೀಜಗಳು ಹುದುಗಿರಲು ಸಾಧ್ಯವಿದ್ದು ಈ ಪ್ರಯೋಗದಿಂದ ಪುರಾತನ ಸಸ್ಯಗಳಿಗೆ ಮರುಹುಟ್ಟು ಕೊಡಬಹುದು ಎಂಬ ಆಶಾವಾದ ಸಸ್ಯ ವಿಜ್ನಾನಿಗಳದ್ದು.


 

 
 
 
 
 
Copyright © 2011 Neemgrove Media
All Rights Reserved