ಅಂಗಳ      ಗಾಳಿ ಅಂಗಿ ಚುಂಗು ಹಿಡಿದು
Print this pageAdd to Favorite
 

 ಗಾಳಿ ಅಂಗಿ ಚುಂಗು ಹಿಡಿದು
ಕಾಲಿಗಷ್ಟು ಚಕ್ರ ಕಟ್ಟಿ
ಮೆಲ್ಲ ಮೆಲ್ಲ ಸಿಲ್ಲಿ ಗಲ್ಲಿ
ಕೋಟೆ ಕೊತ್ತಲ ಊರು ಸುತ್ತಿ
ಕಣ್ಣು ಕಂಡ ಪಟಗಳನ್ನು
ಮನದ ಪದಕೆ ತಳಿಕೆ ಹಾಕಿ
ಹಿಗ್ಗು ಸುಗ್ಗಿ ಎಲ್ಲ ಸುರಿದು
ಪುಟದ ಮೇಲೆ ತಟಪಟಾ...

 
 

ಸ್ವಿಟ್ಜ಼ರ್ಲ್ಯಾಂಡ್: ರಿನ್ಹೇ ಫ಼ಾಲ್ಸ್ ನೋಡುತ್ತಾ ಕಳೆದ ಒಂದು ಸಂಜೆ


ಟೋನಿ
 ಸ್ವಿಟ್ಜ಼ರ್ ಲೆಂಡ್ ದೇಶದೊಳಕ್ಕೆ ನಾವು ಪ್ರವೇಶ ಮಾಡಿದ ನಂತರ ವಾತಾವರಣವೇ ಬದಲಾಗಿತ್ತು. ಬ್ಲಾಕ್ ಫ಼ಾರೆಸ್ಟ್ ನಿಂದ ಆಲ್ಪ್ಸ್ ಪರ್ವತದದಿಂದಾರ್ವತವಾದ ಸಣ್ಣ ಸಣ್ಣ ಗುಡ್ಡಗಳನ್ನು ಹತ್ತಿಳಿಯುತ್ತಾ ಬಸ್ಸು ಚಲಿಸುತ್ತಿದ್ದರೆ ಸುತ್ತಲ ದೃಶ್ಯಗಳನ್ನು ಆಹ್ಲಾದಿಸುತ್ತಿದ್ದ ನಮಗೆ ಇಷ್ಟು ಬೇಗ ಬಂದು ಬಿಟ್ಟೆವಲ್ಲಾ ಅನಿಸಿತ್ತು. ಕಡಿದಾದ ಇಳಿಜಾರಿನಲ್ಲಿ ಡ್ರೈವರ್ ಆರ್ ಅತ್ಯಂತ ಜಾಗರೂಕತೆಯಿಂದ ಡ್ರೈವಿಂಗ್ ಮಾಡುತ್ತಿದ್ದ. ಜ್ಯೂಜ಼ರ್ ರಿನ್ಹೇ ಫ಼ಾಲ್ಸ್ ಸುತ್ತಾಡಿ ಐದು ಗಂಟೆಗೆಲ್ಲಾ ಬಸ್ಸು ನಿಲ್ಲಿಸಿದ್ದ ಸ್ಥಳಕ್ಕೆ ಬಂದು ಬಿಡಬೇಕೆಂದು ಪ್ರತಿಯೊಬ್ಬರಿಗೂ ಹೇಳಿದ.
 
 
 
ಹತ್ತಿರದಲ್ಲೇ ಹಾಲಿನ ನೊರೆಯಂತೆ ಧುಮ್ಮಿಕ್ಕುತ್ತಿದ್ದ ರಿನೇ ಜಲಪಾತದ ದೃಶ್ಯ ಅಧ್ಬುತವಾಗಿತ್ತು. ಎಲ್ಲರೂ ಕ್ಯಾಮರಾಗಳನ್ನು ರೆಡಿ ಮಾಡಿಕೊಂಡು ಬಸ್ಸಿನಿಂದ ಕೆಳಗಿಳಿದೆವು. ಮದ್ಯಾಹ್ನದ ಹೊತ್ತಿನಲ್ಲೇ ವಿಪರೀತವಾದ ಚಳಿ. ಭಟ್ಟರು ಒಂದರ ಮೇಲೊಂದರಂತೆ ಎರಡೆರಡು ಸ್ವೆಟರ್ ಹಾಕಿಕೊಂಡು ಎರಡೂ ಕೈಗಳನ್ನು ಕಟ್ಟಿಕೊಂಡು ’ಎಂಥಾ ಚಳೀ ಮಾರಾಯ್ರಾ’ ಎನ್ನುತ್ತಾ ಕೆಳಗಿಳಿದರು. ನನ್ನ ಪುಟ್ಟ ಕ್ಯಾಮರಾ ಕೈಲಿ ಹಿಡಿದು ಜ್ಯೂಜ಼ರ್ ಕೊಟ್ಟಿದ್ದ ಎರಡು ಗಂಟೆಯ ಅವಧಿಯಲ್ಲಿ ಸಾದ್ಯವಾದಷ್ಟೂ ಜಲಪಾತದ ಕೆಳಗಿಳಿದು ಸುತ್ತಾಡಿ ಬರಬೇಕೆಂಬ ಆಸೆಯಿಂದ ಯಾರಿಗೂ ಕಾಯದೇ ಸರಸರನೇ ಜಲಪಾತದತ್ತ ಹೆಜ್ಜೆ ಹಾಕಿದೆ. ನಡೆಯುತ್ತಿದ್ದಾಗಲೇ ಜಲಪಾತದಿಂದ ಧುಮ್ಮಿಕ್ಕುತ್ತಿದ್ದ ನೀರಿನ ಸಿಂಚನವಾಗುತಿತ್ತು. ಅದೊಂದು ಅದ್ಭುತವಾದ ದೃಶ್ಯಾವಳಿ.
 
ಎಲ್ಲೆಲ್ಲೂ ಕ್ಯಾಮರಾ ಕ್ಲಿಕ್ಕಿಸುತ್ತಾ ನಿಂತಿದ್ದ ಪ್ರವಾಸಿಗರು. ನಮ್ಮ ಬಸ್ಸಿನಿಂದಿಳಿದಿದ್ದ ಒಂದೆರಡು ಯುವ ಜೋಡಿಗಳು ನನ್ನನ್ನು ಕೂಗಿದವರೇ ಅವರ ಫೋಟೋ ತೆಗೆಸಿಕೊಂಡರು. ಅವರು ಇನ್ನು ಯಾವ್ಯಾವುದೋ ಆಂಗಲ್ಲಿನಿಂದ ನಿಂತುಕೊಳ್ಳುವುದಕ್ಕೆ ಸಿದ್ದತೆ ಮಾಡಿಕೊಳ್ಳುವುದನ್ನು ಕಂಡು ಗಾಬರಿಯಾದ ನಾನು ಇನ್ನು ನನಗಿದೇ ಕಸುಬಾದೀತೆಂಬ ಭಯದಿಂದ ಬ್ರ‍್ಗಬೇಗ ಒಂದಷ್ಟು ಫೋಟೋ ತೆಗೆದು ಅವರ ಕೈಗೆ ಕ್ಯಾಮರಾ ತುರುಕಿ ಓಡಿದ್ದೆ. ಅದಕ್ಕಿಂತ ಹೆಚ್ಚಾಗಿ ಗುರುಬಸವಯ್ಯನರೇನಾದರೂ ನಾನು ಇವರ ಫೋಟೊ ತೆಗೆಯುವುದನ್ನು ಕಂಡು ತಮ್ಮ ಕ್ಯಾಮರಾವನ್ನೂ ನನ್ನ ಕೈಗೆ ಕೊಡಬಹುದೆನ್ನುವ ಭಯವೂ ಇತ್ತು. ಅವರಿವರ ಫೋಟೋ ತೆಗೆದುಕೊಡುವುದು ಖುಷಿಯ ವಿಷಯವೇ ಆದರೂ ಈ ಪ್ಯಾಕೇಜ್ ಪ್ರವಾಸದಲ್ಲಿದ್ದ ಸಮಯದ ಅಭಾವದಿಂದ ಸಾದ್ಯವಾಗುತ್ತಿರಲಿಲ್ಲ. ಒಬ್ಬರಿಗೆ ಫೋಟೋ ತೆಗೆದುಕೊಡಲು ನಿಂತರೆ ಇತರೆ ಪ್ರವಾಸಿಗರು ಯಾವ್ಯಾವ ದೇಶದಿಂದ ಬಂದವರೋ ಇವನಿಗೆ ಇದೇ ಕೆಲಸವಿರಬಹೆಂದು ಭಾವಿಸಿ ತಮ್ಮ ಕ್ಯಾಮರಾಗಳನ್ನೂ ಕೈಗಿತ್ತು ಫೋಸು ಕೊಡುತ್ತಾ ನಿಂತುಕೊಳ್ಳುತ್ತಿದ್ದರು. ಆರಂಭದ ಒಂದೆರಡು ದಿನಗಳಲ್ಲೇ ನನಗೆ ಈ ರೀತಿ ಅನುಭವವಾಗಿದ್ದರಿಂದ ಸಾದ್ಯವಾದಷ್ಟೂ ಕ್ಯಾಮರಾ ಹಿಡಿದುಕೊಂಡು ಹತ್ತಿರ ಬರುವವರನ್ನು ಕಂಡು ತಪ್ಪಿಸಿಕೊಳ್ಳತೊಡಗಿದ್ದೆ. ಅವರ ನಾನಾ ಭಂಗಿಗಳ ಫೋಟೋ ತೆಗೆದು ಕೊಡುವಷ್ಟರಲ್ಲಿ ಸಾಕಷ್ಟು ಸಮಯ ವ್ಯರ್ಥವಾಗುತ್ತಿತ್ತು. ಇನ್ನು ಗುರುಬಸವಯ್ಯನವರ ಕ್ಯಾಮರಾ ಕಂಡರಂತೂ ನಾನು ಬೆಚ್ಚುವಂತಾಗಿತ್ತು. ಅವರ ಕ್ಯಾಮರಾದ ಮಹಿಮೆಯಿಂದಲೇನೋ ನಾನು ಅನೇಕರಲ್ಲಿ ಕಾಣುತ್ತಿದ್ದ ಕ್ಯಾಮರಾಗಳನ್ನೂ ತಪ್ಪಿಸಿಕೊಂಡು ಓಡಾಡತೊಡಗಿದ್ದೆ.     
 
 
ರಿನ್ಹೇ ಫ಼ಾಲ್ಸ್ ಸ್ವಿಟ್ಜ಼ರ್ ಲೆಂಡಿನ ಉತ್ತರ ಭಾಗದಲ್ಲಿತ್ತು. ಅದು ನಮ್ಮ ಜೋಗ ಜಲಪಾತದಂತೆ ಅತೀ ಎತ್ತರದಿಂದ ಧುಮುಕುತ್ತಿರಲಿಲ್ಲ. ಅದರ ಎತ್ತರವಿದುದು ೭೫ ಅಡಿಗಳಷ್ಟೇ. ಆದರೆ ಅದರ ಉದ್ದ ದೊಡ್ಡದಿತ್ತು. ಸುಮಾರು ೪೯೫ ಅಡಿಗಳ ಉದ್ದವಿದ್ದುದರಿಂದ ಉದ್ದಕ್ಕೂ ಸುತ್ತಾಡಲು ಖುಷಿಯಾಗುತ್ತಿತ್ತು. ಅದು ಯೂರೋಪಿನಲ್ಲಿಯೇ ಅಗಲದ ಜಲಪಾತವಾಗಿತ್ತು. ೪೯೫ ಅಡಿಯುದ್ದಕ್ಕೂ ಹಾಲಿನ ನೊರೆಯಂತೆ ಧುಮ್ಮಿಕ್ಕುತ್ತಿದ್ದ ದೃಶ್ಯವನ್ನು ಕಂಡು ರೋಮಾಂಚನಗೊಂಡ ನಾನು ಒಂದು ತುದಿಯಿಂದ ಮತ್ತೊಂದು ತುದಿಗೆ ಹೋಗಿ ಅಲ್ಲಿದ್ದ ಮೆಟ್ಟಲುಗಳಲ್ಲಿ ಕೆಳಗೆ ಇಳಿಯತೊಡಗಿದೆ. ರಭಸದಿಂದ ಧುಮ್ಮಿಕ್ಕುತ್ತಿದ್ದ ನೀರು ಗಾಳಿಯೂ ಹೆಚ್ಚಾಗಿದ್ದರಿಂದ ಮೈ ಮೇಲೆಲ್ಲಾ ಬೀಳತೊಡಗಿ ಬಟ್ಟೆಯೆಲ್ಲಾ ಒದ್ದೆಯಾಗತೊಡಗಿತ್ತು. ಸ್ವಿಟ್ಜ಼ರ್ ಲೆಂಡಿನಲ್ಲಿ ನಾವು ನೋಡಿದ ಮೊದಲ ಪ್ರವಾಸೀ ತಾಣವಿದು. ಅಚ್ಚ ಹಸಿರಿನ ವನಸಿರಿಯ ಈ ಪ್ರವಾಸಿ ತಾಣವನ್ನು ಅತ್ಯಂತ ಚೊಕ್ಕವಾಗಿ ಅಭಿವೃದ್ದಿ ಪಡಿಸಿದ್ದರು. ಸುತ್ತಮುತ್ತಲ ಪರಿಸರವನ್ನೆಲ್ಲಾ ನೋಡಿ ಜಲಪಾತದ ಬಳಿ ಎರಡೂ ಬದಿಯಲ್ಲಿ ರೈಲ್ವೇ ಹಳಿಗಳನ್ನು ನಿರ್ಮಿಸಿದ್ದರಿಂದ ಅಲ್ಲಿ ರೈಲುಗಳು ಓಡಾಡುತ್ತಿದ್ದವು. ಆಲ್ಪ್ಸ್ ಪರ್ವತಗಳನ್ನು ಸೀಳಿಕೊಂಡು ಓಡಾಡುತ್ತಿದ್ದ ಆ ರೈಲುಗಳಲ್ಲಿ ಪಯಣಿಸುವ ಅವಕಾಶ ಸಿಕ್ಕಿದ್ದರೆ ಇನ್ನಷ್ಟು ಖುಷಿಯಾಗುತ್ತಿತ್ತು. ಒಬ್ಬನೇ ಜಲಪಾತದ ಉದ್ದಗಲಕ್ಕೂ ಸುತ್ತಾಡಿ ಜ್ಯೂಜ಼ರ್ ನೀಡಿದ್ದ ಸಮಯದ ಗಡುವು ಮುಗಿಯುತ್ತಾ ಬಂದಿದ್ದರಿಂದ ಜಲಪಾತದ ಕೆಳಗಿಂದ ಮೇಲೆ ಬಂದಿದ್ದೆ. ಮೇಲೆ ಬಂದಾಗ ಅಲ್ಲಲ್ಲಿ ನಮ್ಮ ಸಹ ಪ್ರವಾಸಿಗರು ಕಣ್ಣಿಗೆ ಬೀಳತೊಡಗಿ ಹಲೋ ಎನ್ನುತ್ತಾ ಅತ್ತಿಂದಿತ್ತ ಓಡಾಡತೊಡಗಿದ್ದರು.
 
 
ನೀರಿನಲ್ಲಿ ಕೊಂಚ ನೆನೆದಿದ್ದರಿಂದ ಚಳಿ ವಿಪರೀತ ನಡುಗಿಸತೊಡಗಿತ್ತು. ಬೆಂಚೊಂದರ ಮೇಲೆ ಕೂತವ ಬಾಟಲಿಯಲ್ಲಿದ್ದ ರೆಡಿಮಿಕ್ಸ್ ಒಂದು ಸಿಪ್ ಕುಡಿದು ಮದ್ಯಾಹ್ನ ತಿನ್ನಲು ಕೊಟ್ಟಿದ್ದ ಹುರಿಗಾಳನ್ನು ತೆಗೆದು ತಿನ್ನುತ್ತಾ ಜಲಪಾತದ ದೃಶ್ಯ ಸವಿಯತೊಡಗಿದೆ. ವಿದೇಶಿ ಮಹಿಳೆಯರಿಬ್ಬರು ಬಂದು ಪಕ್ಕದಲ್ಲಿ ಕೂತು ಹಲೋ ಅಂದರು. ರಷ್ಯಾದಿಂದ ಬಂದವರೆಂದು ಹೇಳಿ ಪರಿಚಯಿಸಿಕೊಂಡರು. ಅವರೊಡನೆ ಮಾತಾಡುತ್ತಾ ಕೂತಿದ್ದಾಗ ಭಟ್ಟರು ನನ್ನನ್ನು ಕಂಡವರೇ ಹತ್ತಿರ ಬಂದು ’ಎಲ್ಲಿ ಹೋದ್ರೀ ಮಾರಾಯ್ರಾ, ಕಪ್ಪದ್ ಅವರು ನಿಮ್ಮನ್ನು ಕೇಳುತ್ತಿದ್ರು, ರಾಯ್ ಅವರೂ ನಿಮ್ಮನ್ನು ಕೇಳಿದ್ರು, ನೀವು ಬಸ್ಸಿಳಿದು ಎಲ್ಲಿ ಹೋಗಿಬಿಟ್ರಿ ಇಲ್ಲಿ ನೋಡಿದ್ರೆ ಈ ಫ಼ಾರಿನ್ ಹೆಂಗ್ಸರೊಟ್ಟಿಗೆ ಕೂತಿದ್ದೀರಲ್ಲಾ’ ಎಂದು ಗಡಗಡ ಮಾತಾಡಿದರು. ಒಂದೇ ಸಮನೆ ಮಾತಾಡುತ್ತಿದ್ದ ಭಟ್ಟರ ಭಾಷೆ ಅರ್ಥವಾಗದ ಆ ರಷ್ಯಾದ ಮಹಿಳೆಯರು ಕಣ್ಣು ಪಿಳ ಪಿಳನೆ ಬಿಡುತ್ತಾ ಭಟ್ಟರನ್ನೇ ನೋಡತೊಡಗಿದ್ದರು. ’ರೀ ಭಟ್ರೇ ಜಲಪಾತದ ಉದ್ದಗಲಕ್ಕೂ ಓಡಾಡಿ ಕೆಳಗೂ ಇಳಿದು ಬಂದದ್ದರಿಂದ ಕೊಂಚ ಸುಸ್ತಾಗಿತ್ತು ಕಣ್ರೀ, ಇಲ್ಲಿ ಬಂದು ಕೂತೆ. ಇವರು ರಷ್ಯಾದವರಂತೆ ಅವರೂ ಇಲ್ಲಿ ಬಂದು ಕೂತರಷ್ಟೇ, ಎಂದು ಆ ಹೆಂಗಸರ ಪರಿಚಯ ಮಾಡಿಕೊಟ್ಟೆ. ಭಟ್ಟರಿಗೆ ಹೆಲೋ ಎಂದ ಅವರಿಬ್ಬರೂ ಬೈ ಎಂದು ಎದ್ದು ಹೋದರು.
 
 
ಅವರು ಹೋದದ್ದೇ ತಡ ಭಟ್ಟರು ’ಇಲ್ಲಿ ಎನೂ ಸಿಗಲ್ವಾ, ಎಲ್ಲದ್ರೂ ಹುಡುಕಿದ್ರೇನು?’ ಎಂದು ಚಳಿಯಿಂದಾಗಿ ಎರಡೂ ಕೈಗಳನ್ನೂ ಕಟ್ಟಿಕೊಂಡು ’ನಡೀರಿ ಎಲ್ಲಾದ್ರೂ ಹುಡುಕೋಣ’ ಅಂದವರಿಗೆ ’ಭಟ್ರೇ ಈಗಲೇ ಜ್ಯೂಜ಼ರ್ ಹೇಳಿದ್ದ ಸಮಯ ಮುಗಿದು ಹೋಗಿದೆ ಈಗ ಎಲ್ಲಿ ಹುಡುಕಿಕೊಂಡು ಹೋಗ್ತೀರಿ, ತಗಳಿ ಇಲ್ಲೇ ಸ್ವಲ್ಪ ರೆಡಿಮಿಕ್ಸ್ ಇದೆ’ ಎಂದು ನೀರಿನೊಂದಿಗೆ ಬೆರೆಸಿದ್ದ ಜರ್ಮನ್ ರಂ ಕೊಟ್ಟೆ. ಬಾಟಲಿಯನ್ನು ತೆಗೆದುಕೊಂಡವರೇ ಗಟಗಟನೆ ಎತ್ತಿದ ಭಟ್ಟರು ಮುಕ್ಕಾಲು ಬಾಟಲ್ ಖಾಲಿ ಮಾಡಿದ್ದರು. ’ರೀ ಭಟ್ರೇ ಅದು ರಂ ಕಣ್ರೀ ತುಂಬಾ ಸ್ಟ್ರಾಂಗ್ ಅನ್ಸುತ್ತೆ, ನೀವೇನು ಒಂದೇಸಮ ಎತ್ತಿಬಿಟ್ರಲ್ಲಾ ನಿಮ್ಮ ಹೆಂಗಸರಿಗೆ ಗೊತ್ತಾಗಲ್ವೇನ್ರೀ’ ಎಂದು ಕಿಚಾಯಿಸಿದೆ. ’ಅಯ್ಯೋ ಬಿಡಿ ಈ ಚಳಿಗೆ ಏನೂ ಆಗಲ್ಲ ನಾನು ಬೇರೆ ಸೀಟಿನಲ್ಲಿ ಕೂತ್ಕತೀನಿ’ ಅಂದವರೇ ಹುರಿಗಾಳನ್ನು ತಿನ್ನತೊಡಗಿದರು.
 
 
ಬಸ್ಸಿನ ಬಳಿ ಬಂದಾಗ ಇನ್ನೂ ಅರ್ಧದಷ್ಟು ಜನ ಬಂದಿರಲಿಲ್ಲ. ದೂರದಲ್ಲಿ ರಾಜೇಗೌಡ್ರು ಬರುತ್ತಿದ್ದರಿಂದ ಅವರ ಬಳಿಹೋದೆ. ’ಭಟ್ರು ನಿಮ್ಮನ್ನು ಕೇಳ್ತಿದ್ರಲ್ಲಾ ಸಿಕ್ಕಿದ್ರೇನು, ಎರಡು ಮೂರು ಸರಿ ಕೇಳಿದ್ರಪ್ಪ ಏನ್ ಸಮಾಚಾರ’ ಅಂದವರಿಗೆ ಭಟ್ಟರು ರೆಡಿಮಿಕ್ಸ್ ಅನ್ನು ಒಂದೇ ಬಾರಿ ಎತ್ತಿದ್ದನ್ನು ಹೇಳಿದೆ. ’ಬಿಡಿ ಬಸ್ಸಿನಲ್ಲಿ ಒಳ್ಳೇ ಮಜ ಸಿಗುತ್ತೆ’ ಅಂದರು. ಇಬ್ಬರೂ ಫ಼ಾಲ್ಸ್ ರಮ್ಯತೆಯ ಬಗ್ಗೆ ಮಾತಾಡುತ್ತಾ ಕೂತೆವು. ದೂರದಲ್ಲಿ ಗುರುಬಸವಯ್ಯನವರು ಕ್ಯಾಮರಾ ಕೈಯಲ್ಲಿ ಹಿಡಿದು ಬಗ್ಗಿಕೊಂಡು ಅತ್ತಿಂದಿತ್ತ ಇತ್ತಿಂದತ್ತ ಓಡಾಡುತ್ತಿದ್ದುದು ಏನೋ ಸಾಹಸ ಮಾಡುತ್ತಿದ್ದಾರೆಂಬ ಕುತೂಹಲದಿಂದ ನೋಡಲು ಹೋದೆ.
 
ಅವರು ಯಾವುದೋ ಪುಟ್ಟ ಹಕ್ಕಿಯೊಂದರ ಫ಼ೋಟೋ ತೆಗೆಯಲು ಹರ ಸಾಹಸ ಪಡುತ್ತಿದ್ದರು. ’ಏನ್ ಸಾರ್ ಬಹಳ ಸಾಹಸ ಪಡುತ್ತಿದ್ದೀರಲ್ಲಾ’ ಅಂದೆ. ’ಈ ನನ್ ಮಗಂದು ಹಕ್ಕಿ ಫ಼ೋಟೋಗೇ ಸಿಗ್ತಾಯಿಲ್ಲಾ, ಇನ್ನೇನು ಕ್ಲಿಕ್ ಮಾಡ್ಬೇಕು ಅಷ್ಟರಲ್ಲಿ ನೆಗೆದು ಬಿಡುತ್ತೆ, ನಾನು ಬಸ್ಸಿಳಿದಿಗಾಗಿನಿಂದಲೂ ಪ್ರಯತ್ನ ಪಡ್ತಿದ್ದೀನಿ ಸಿಗ್ತಾಯಿಲ್ಲ’ ಅಂದುದನ್ನು ಕೇಳಿ ನಾನು ಗಾಬರಿಯಾದೆ.  ಅದರ ಫ಼ೋಟೋ ತೆಗೆಯಲು ಇವರು ನಾವು ಬಸ್ಸಿಳಿದ ಎರಡು ಗಂಟೆಯಿಂದಲೂ ಪ್ರಯತ್ನಿಸುತ್ತಿದ್ದಾರೆಂದು ಹೇಳುತ್ತಿದ್ದಾರಲ್ಲಾ ಈ ಜಲಪಾತಕ್ಕಿಂತಲೂ ಆ ಪಕ್ಷಿಯಲ್ಲಿ ಏನು ವಿಶೇಷವಿರಬಹುದೆಂಬ ಕುತೂಹಲದಿಂದ ನಾನು ಆ ಪಕ್ಷಿಯನ್ನೇ ನೋಡತೊಡಗಿದೆ. ಪಾರಿವಾಳಕ್ಕಿಂದ ಸ್ವಲ್ಪ ದೊಡ್ಡದಾಗಿದ್ದ, ಕಂದು ಬಣ್ಣದ, ಉದ್ದನೆಯ ಕೊಕ್ಕಿದ್ದ ಹಕ್ಕಿಯಲ್ಲಿ ನನಗೇನೂ ಅಂಥಾ ವಿಶೇಷ ಕಾಣಿಸಲಿಲ್ಲ. ಇವರು ಕ್ಲಿಕ್ ಮಾಡುವ ಹೊತ್ತಿಗೆ ಸರಿಯಾಗಿ ಅದು ಒಂದೆರಡು ಅಡಿ ದೂರಕ್ಕೆ ಹಾರಿ ಕೂರುತ್ತಿತ್ತು. ಇವರೂ ಛಲ ಬಿಡದ ತ್ರಿವಿಕ್ರಮನಂತೆ ಅದರ ಫ಼ೋಟೋ ತೆಗೆಯಲು ಅದು ಹಾರಿದೆಡೆಗೆಲ್ಲಾ ಕುಕ್ಕರುಗಾಲಲ್ಲಿ ಕೂತು ಕ್ಲಿಕ್ಕಿಸಲು ಪ್ರಯತ್ನಿಸುತ್ತಿದ್ದರು. ಅವರಿಂದ ಆ ಹಕ್ಕಿ ಹಾಗೆ ತಪ್ಪಿಸಿಕೊಳ್ಳಲಿಕ್ಕೆ ಕಾರಣ ಅವರ ಕ್ಯಾಮರಾ ಅಂಥ ನನಗರ್ಥವಾಯಿತು.
 
 
ಗುರುಬಸವಯ್ಯನವರ ಕ್ಯಾಮರಾ ಬಗ್ಗೆ ಹೇಳಲೇ ಬೇಕು. ಮೊದಲು ಅವರು ನನಗೆ ಫ಼ೋಟೋ ತೆಗೆಯಲು ಕ್ಯಾಮರಾ ಕೊಟ್ಟಿದ್ದು ದುಬಾಯ್ ನಲ್ಲಿ. ಫ಼ೋಕಸ್ ಮಾಡಿ ಕ್ಲಿಕ್ ಮಾಡಿದರೆ ಅದರಲ್ಲಿ ಚಿತ್ರ ಕಾಣಿಸುತ್ತಿರಲಿಲ್ಲ. ನಂತರ ಅವರು ಅವರ ಕ್ಯಾಮರಾದಲ್ಲಿ ಕ್ಲಿಕ್ ಮಾಡುವ ಬಗ್ಗೆ ಹೇಳಿಕೊಟ್ಟಿದ್ದರು. ಮೊದಲು ಫ಼ೋಕಸ್ ಮಾಡಿಕೊಂಡು ನಂತರ ಕ್ಯಾಮರಾದ ಮೇಲಿದ್ದ ಬಟನ್ ಒಂದನ್ನು ಮೇಲಕ್ಕೆ ತಳ್ಳಬೇಕಿತ್ತು. ಆಗ ನಮಗೆ ಸ್ಕ್ರೀನ್ ನಲ್ಲಿ ಏನೂ ಕಾಣಿಸುತ್ತಿರಲಿಲ್ಲ, ಆದರೆ ಕ್ಲಿಕ್ ಮಾಡಿದಾಗ ಚಿತ್ರ ಬರುತ್ತಿತ್ತು. ಅದು ಕೆಟ್ಟು ಹೋಗಿದ್ದರಿಂದ ಹಾಗಾಗಿದೆಯೆಂದೂ ಅದನ್ನು ಸರಿಮಾಡಲು ಬಂದರೆ ಮಾಡಿರೆಂದು ನನ್ನನ್ನೇ ಕೇಳಿದ್ದರು. ಅವರ ಕ್ಯಾಮರಾದ ತಲೆ ಬುಡ ಗೊತ್ತಿರದಿದ್ದರಿಂದ ಅದನ್ನು ಸರಿಮಾಡಲು ಹೋಗಿ ಅದರಲ್ಲಿದ್ದ ಚಿತ್ರಗಳೆಲ್ಲಾ ಡಿಲೀಟ್ ಆಗಿಬಿಟ್ಟರೆ ಕಷ್ಟವೆಂದು ಹೇಳಿ ಅವರ ಕ್ಯಾಮರಾ ರಿಪೇರಿ ಮಾಡುವ ಕೆಲಸದಿಂದ ಬಚಾವಾಗಿದ್ದೆ. ಮೈಸೂರಿಗೆ ಹೋದ ನಂತರ ಅದನ್ನು ಸರಿಪಡಿಸುವುದಾಗಿ ಹೇಳಿದ್ದರು.
 
ಅದು ತಲೆನೋವಿನ ಕ್ಯಾಮೆರಾ. ಮೊದಲು ಫ಼ೋಕಸ್ ಮಾಡಿದ ನಂತರ ಕ್ಯಾಮರವನ್ನು ಅತ್ತಿತ್ತ ಒಂದಿಂಚೂ ಅಲುಗಾಡಿಸದೇ ಕ್ಯಾಮರಾ ಮೇಲಿನ ಬಟನ್ ಅನ್ನು ಮೇಲಕ್ಕೆ ಒತ್ತಿದ ನಂತರ (ಸ್ಕ್ರೀನ್ ನಲ್ಲಿದ್ದ ಏನೂ ಕಾಣಿಸದಾದಾಗ) ಚಿತ್ರವನ್ನು ಫ಼ೋಕಸ್ ಮಾಡಿದಾಗಿನ ಪೊಸಿಶನ್ನಿನಲ್ಲಿಯೇ ಕ್ಯಾಮರಾವನ್ನು ಒಂದಿಷ್ಟೂ ಅಲುಗಾಡಿಸದೇ ಕ್ಲಿಕ್ ಮಾಡಬೇಕಿತ್ತು. ಬ್ಲಾಂಕ್ ಆದ ಸ್ಕ್ರೀನ್ ನಲ್ಲಿದಾಗ ಕೊಂಚ ಅಲುಗಾಡಿದರೂ ಅವ್ಟ್ ಆಫ಼್ ಫ಼ೋಕಸ್ ಆಗುತ್ತಿತ್ತು. ಬಟನ್ ಅನ್ನು ಮೇಲೆತ್ತುವಾಗ ಕ್ಯಾಮರಾ ಕೊಂಚ ಅತ್ತಿತ್ತ ಅಲುಗಾಡುತ್ತಲೇ ಇತ್ತು. ಕ್ಲಿಕ್ ಮಾಡಿ ಸರಿಯಾಗಿ ಚಿತ್ರ ಬರದಿದ್ದಾಗ ಮತ್ತೆ ಫೋಕಸ್ ಮಾಡಿ ಮತ್ತೊಮ್ಮೆ ಬಟನ್ ಮೇಲಕ್ಕೆ ತಳ್ಳಿ ಕ್ಲಿಕ್ ಮಾಡಬೇಕಿತ್ತು. ಒಂದು ತರದಲ್ಲಿ ಅಡ್ಡೇಟಿನ ಮೇಲೆ ಗುಡ್ಡೇಟು ಅಂದುಕೊಂಡು ಅದರಲ್ಲಿ ಚಿತ್ರ ತೆಗೆಯಬೇಕಿತ್ತು. ಭಾಳಾ ರೇಜಿಗೆ ಕೆಲಸ. ಎರಡು ಸಾರಿ ಪ್ರಯತ್ನ ಮಾಡಿದ ಮೇಲೆ ಚಿತ್ರ ತೆಗೆಯುವ ಹುಮ್ಮಸ್ಸೇ ಹೋಗಿಬಿಡುತ್ತಿತ್ತು. ಆ ಕ್ಯಾಮರಾದಲ್ಲಿ ಫ಼ೋಟೋ ತೆಗೆಯೆಲು ಅಸಾಧಾರಣ ತಾಳ್ಮೆಯಂತೂ ಅವಶ್ಯವಾಗಿ ಬೇಕಿತ್ತು. ಒಂದು ಫ಼ೊಟೋ ಕ್ಲಿಕ್ ಮಾಡಿ ತೆಗೆದು ಕೊಡಲು ಐದಾರು ನಿಮಿಷವಾದರೂ ಬೇಕಾಗುತ್ತಿತ್ತು. ಆರಂಭದಲ್ಲಿ ನಾನೂ ತಾಳ್ಮೆಯಿಂದಲೇ ಒಂದಷ್ಟು ಫ಼ೋಟೋ ತೆಗೆದುಕೊಟ್ಟಿದ್ದೆನಾದರೂ ಕೆಲವೊಂದು ಅವ್ಟ್ ಆಫ಼್ ಫ಼ೋಕಸ್ ಆಗಿಬಿಡುತ್ತಿದ್ದವು. ಹಾಗೆ ಅದಾಗಲೆಲ್ಲಾ ಅವರು ನನ್ನ ಮೇಲೇ ಗೊಣಗಾಡುತ್ತಿದ್ದರು. ಅದಕ್ಕೇ ಆ ಕ್ಯಾಮರಾದ ಗೊಡವೆಯೇ ಬೇಡವೆಂದು ನಾನು ನಿರ್ಧರಿಸಿದ್ದೆ.
 
 
ಗುರುಬಸವಯ್ಯನವರು ಆರಂಭದಲ್ಲಿ ಅದೇ ಕ್ಯಾಮರಾದಲ್ಲಿ ಬಸ್ಸು ೧೨೦ ಕಿಲೋ ಮೀಟರ್ ವೇಗದಲ್ಲಿ ಹೋಗುತ್ತಿದ್ದಾಗಲೂ ಫ಼ೋಕಸ್ ಮಾಡಿ ಫ಼ೋಟೋಗಳನ್ನು ತೆಗೆಯುತ್ತಿದ್ದರು. ಅದರಲ್ಲಿ ಎಷ್ಟು ಫ಼ೋಟೋಗಳು ಸರಿಯಾಗಿ ಬಂದವೋ ಅವರೊಬ್ಬರಿಗೇ ಗೊತ್ತು. ನಂತರದ ದಿನಗಳಲ್ಲಿ ಅವರ ಕ್ಯಾಮರಾದ ಮಹಿಮೆ ನಮ್ಮೊಟ್ಟಿಗಿದ್ದವರಿಗೆಲ್ಲಾ ಗೊತ್ತಾಗಿದ್ದರಿಂದ ಅವರ ಕೈಯಲ್ಲಿ ಕ್ಯಾಮರಾ ಕಂಡರೆ ಸಾಕು ಎಸ್ಕೇಪ್ ಆಗತೊಡಗಿದ್ದವು. ಈ ಸ್ವಿಟ್ಜ಼ರ್ ಲೆಂಡಿನಲ್ಲಿ ಇವರು ಸೊಗಸಾದ ಜಲಪಾತವನ್ನು ನೋಡುವುದು ಬಿಟ್ಟು ಅಂಥಾ ಕ್ಯಾಮರಾ ಹಿಡಿದುಕೊಂಡು ಈ ಹಕ್ಕಿ ಹಿಂದೆ ಬಿದ್ದಿದ್ದಾರಲ್ಲಾ ಎಂದು ಆಶ್ಚರ್ಯವಾಯಿತು. ಇವರು ಫ಼ೋಕಸ್ ಮಾಡಿಕೊಂಡು ನಂತರ ಬಟನ್ ಮೇಲಕ್ಕೆ ತಳ್ಳಿ ಕ್ಲಿಕ್ ಮಾಡುವುದನ್ನು ಕಂಡ ಆ ಪಕ್ಷಿ ಈತ ತನ್ನನ್ನು ಕೊಲ್ಲಲು ಹವಣಿಸುತ್ತಿರುವ ಭೇಟೆಗಾರನಿರಬಹುದೆಂದು ಭಾವಿಸಿ ಕ್ಲಿಕ್ ಮಾಡುವ ಸಮಯಕ್ಕೆ ಸರಿಯಾಗಿ ಹಾರುವುದನ್ನು ಅಭ್ಯಾಸ ಮಾಡಿಕೊಂಡಿದೆಯೆನಿಸಿತು. ’ಸಾರ್, ಬಿಡಿ ಅದರ ಬಗ್ಗೆ ಯಾಕೆ ತಲೆ ಕೆಡಿಸಿಕೊಳ್ತೀರ, ಹೆಂಗಿದ್ರೂ ಇಲ್ಲಿ ಚಳಿ ಜಾಸ್ತಿಯಾದಾಗ ನಮ್ಮ ರಂಗನತಿಟ್ಟಿಗೆ ಬರ್ತದೆ, ಆಗ ಅದನ್ನು ವಿಚಾರಿಸಿಕೊಂಡರಾಯ್ತು’ ಎಂದು ಕುಕ್ಕರುಗಾಲಲ್ಲಿ ಕೂತ ಅವರನ್ನು ಮೇಲಕ್ಕೆಬ್ಬಿಸಿದ್ದೆ.
 
 
ಬಸ್ಸಿನಲ್ಲಿ ಕೂತು ಒಂದು ಗಂಟೆಯಾದರೂ ಒಂದೆರಡು ಯುವ ಜೋಡಿಗಳು ಇನ್ನೂ ಬಂದಿರಲಿಲ್ಲ. ಅವರನ್ನು ಹುಡುಕಿಕೊಂಡು ಹೋಗಿದ್ದ ಜ್ಯೂಜರ್ ಎಲ್ಲೋ ಹುಡುಕಿ ಕರೆದುಕೊಂಡು ಬಂದಿದ್ದ. ಎಲ್ಲರೂ ಆ ಯುವ ಜೋಡಿಗಳ ಮೇಲೆ ರೇಗಾಡಿದ್ದಾಯಿತು. ಭಟ್ಟರಂತೂ ಎಂದೂ ಬಸ್ಸಿನಲ್ಲಿ ಜೋರಾಗಿ ಮಾತಾಡದಿದ್ದರೂ ಇಂದು ಜೋರಾಗಿ ಮಾತಾಡಿದ್ದರು. ಅವರು ಹಿಂದಿನ ಸೀಟಿನಲ್ಲಿ ಕೂತಿದ್ದರು. ’ನೀವು ಕೊಟ್ಟ ಜರ್ಮನಿ ರಂ ಚೆನ್ನಾಗಿ ಕೆಲಸ ಮಾಡಿದಂಗಿದೆ’ ಎಂದ ರಾಜೇಗೌಡರು ’ಏನ್ ಭಟ್ರೇ, ಇವತ್ತು ಸಪರೇಟಾಗಿ ಕೂತಿದ್ದೀರಿ, ಏನ್ ಸಮಾಚಾರ’ ಎಂದು ಕಿಚಾಯಿಸಿದರು. ರಾಜೇಗೌಡರತ್ತ ನೋಡಿ ಕಣ್ಣು ಮಿಟುಕಿಸಿದರು ಭಟ್ಟರು.
ಡ್ರೈವರ್ ’ಆರ್’ ಎಲ್ಲರೂ ಸೀಟ್ ಬೆಲ್ಟ್ ಹಾಕಿಕೊಳ್ಳಿರೆಂದು ಮೈಕಿನಲ್ಲಿ ಹೇಳಿದ. ಜಲಪಾತ ನೊಡಿ ಸುಸ್ತಾಗಿ ಬಂದವರು ಮಲಗಿಕೊಳ್ಳುವುದರಿಂದ ಕಡಿದಾದ ತಿರುವು ಮುರುವುಗಳಲ್ಲಿ ಬಸ್ಸು ತಿರುಗುವಾಗ ಬೀಳದಿರಲೆಂದು ಆತ ಸೀಟ್ ಬೆಲ್ಟ್ ಹಾಕಿಕೊಳ್ಳಲು ಹೇಳಿದನಾದರೂ ಯಾರೂ ಅದನ್ನು ಸೀರಿಯಸ್ಸಾಗಿ ಪರಿಗಣಿಸಲಿಲ್ಲ.
 
 
ನಾವು ಅಲ್ಲಿಂದ  ಎಂಜಿಲ್ಬರ್ಗ್ ತಲುಪಿದಾಗ ಸಂಜೆಯಾಗಿತ್ತು. ನಮ್ಮ ಮಲೆನಾಡಿನಂತಾ ಸ್ಥಳದಲ್ಲಿದ್ದ ಬೆಲ್ಲೆವ್ಯೂ ಎಂಬ ಹೋಟೆಲಿಗೋದೆವು. ಅಲ್ಲಿ ನಮಗೆ ನೀಡಿದ್ದು ಸಿಂಗಲ್ ರೂಂ ಅಗಿದ್ದರಿಂದ ಒಂದೇ ಮಂಚವಿತ್ತು. ಇಬ್ಬರು ಅದರಲ್ಲಿ ಮಲಗಲಿಕ್ಕೆ ಆಗುವುದಿಲ್ಲವೆಂದು ಜ್ಯೂಜ಼ರನಿಗೆ ಹೇಳಿದೆವು. ಊಟ ಮಾಡಿ ಬಂದ ನಂತರ ಬದಲಿಸಿಕೊಡುವುದಾಗಿ ಆತ ಭರವಸೆ ನೀಡಿದ್ದರಿಂದ ಊಟಕ್ಕೆ ಹೋದೆವು. ಊಟ ಮುಗಿಸಿ ಬಂದ ನಂತರ ಜ್ಯೂಜ಼ರ್ ರೂಮನ್ನು ಬದಲಿಸಿಕೊಳ್ಳಲು ಎಲ್ಲರನ್ನೂ ಕೇಳಿದನಾದರೂ ಆ ರೂಮನ್ನು ನೋಡಿದ ನಂತರ ಯಾರೂ ಒಪ್ಪಲಿಲ್ಲ. ನಾನಂತೂ ಆ ರೂಮಿನಲ್ಲಿರುವ ಪುಟ್ಟ ಮಂಚದಲ್ಲಿ ಇಬ್ಬರು ಮಲಗಲು ಸಾದ್ಯವಾಗುವುದಿಲ್ಲವೆಂದು ಖಡಾಖಂಡಿತವಾಗಿ ಹೇಳಿದೆ. ಆರಡಿ ಉದ್ದದ ನಾನು ಐದಡಿಯಿದ್ದ ಸಣ್ಣ ಮಂಚದಲ್ಲಿ ಮಲಗಲಾಗುವುದಿಲ್ಲವೆಂದೆ. ನೀವು ಬೇರೆಕಡೆ ಅಡ್ಜಸ್ಟ್ ಮಾಡಿಕೊಳ್ಳಿರೆಂದು ತನ್ನ ರೂಮಿನಲ್ಲಿ ಜಾಗವಿರುವುದಾಗಿ ಆತ ನನ್ನ ರೂಮ್ ಮೇಟ್ ಗೆ ಹೇಳಿದ. ಅದಕ್ಕವರು ಆತನ ಮೇಲೆ ರೇಗಾಡಿದ್ದರು.
 
ಒಂದು ದಿನವಾಗಿದ್ದಲ್ಲಿ ಕೆಳಗೆ ಮತ್ತೊಂದು ಹಾಸಿಗೆ ಹಾಕಿಸಿಕೊಂಡು ಇರಬಹುದಿತ್ತು ಆದರೆ ಆ ಚಿಕ್ಕ ರೂಮಿನಲ್ಲಿ ಮತ್ತೊಂದು ಹಾಸಿಗೆ ಹಾಸಲೂ ಜಾಗವಿರಲಿಲ್ಲ. ಅಲ್ಲಿ ನಾವು ಮೂರುದಿನ ಉಳಿಯಲಿದ್ದೆವು. ಒಂದು ವೇಳೆ ಒಂದೇ ತಲೆಕೆಟ್ಟಿ ಮಂಚದಲ್ಲಿ ಮಲಗಿದಲ್ಲಿ ಮೂರುದಿನ ಸತತವಾಗಿ ನನ್ನ ರೂಂ ಮೇಟ್ ಗೊರಕೆಯ ಸದ್ದಿಗೆ ನನ್ನ ಕಿವಿಯ ತಮಟೆಗಳು, ಬ್ರೇನು ಯಥಾಸ್ಥಿತಿಯಲ್ಲುಳಿದಾವೆಂಬ ನಂಬಿಕೆಯಂತೂ ನನಗಿರಲಿಲ್ಲ. ಆ ಬಗ್ಗೆ ಜ್ಯೂಜ಼ರನಿಗೆ ಹೇಳಿದೆ. ಆತ ನನ್ನತ್ತ ಕನಿಕರದಿಂದ ನೋಡಿ ಹೇಗಾದರೂ ಇನ್ನೊಂದು ರೂಮನ್ನು ವ್ಯವಸ್ಥೆ ಮಾಡಿಕೊಡುವುದಾಗಿ ಹೇಳಿ ಹೋದ. ನಾನು ನನ್ನ ರೂಂ ಮೇಟ್ ಇಬ್ಬರೂ ನಮಗೆ ನೀಡಿದ್ದ ರೂಮಿಗೆ ಹೋಗದೇ ರೆಸಪ್ಷನಿಸ್ಟ್ ನಲ್ಲಿದ್ದ ಸೊಫ಼ಾದ ಮೇಲೆ ಕೂತು ಹರತಾಳ ಆಚರಿಸಿದೆವು.  
    
(ಮುಂದುವರಿಯುವುದು)
 
 

ವಿಸ್ಕಾನ್ಸನ್: ಡೆಲ್ ಗ್ಲೇಶಿಯರ್ ಪಾರ್ಕಿನ ತುಣುಕು

 
ಅಮೆರಿಕಾ ದೇಶದ ಉತ್ತರ ಭಾಗದಲ್ಲಿ ಕೆನಡಾಗೆ ಹತ್ತಿರವಾಗುವಂತಿರುವ ವಿಸ್ಕಾನ್ಸನ್ ಎಂಬ ರಾಜ್ಯ ವರ್ಷಕ್ಕೆ ಆರು ತಿಂಗಳು ಮಾತ್ರ ಸೂರ್ಯನನ್ನು ಕಾಣುತ್ತದೆ. ಮತ್ತಾರು ತಿಂಗಳು ಕೊರೆವ ಚಳಿ, ಹಿಮ. ಅಪರೂಪಕ್ಕೆ ತೆಳುಬಿಸಿಲು. ಅದಕ್ಕಾಗೇ ಇಲ್ಲಿನ ಜನ ಬಿಸಿಲು ಬಂದದ್ದೇ ತಡ ನೀರು ನದಿ ಕೊಳ್ಳ ಹಾರಿಕೊಂಡು ಸಂತೋಷ ಪಟ್ಟುಬಿಡುತ್ತಾರೆ. ಬಿಸಿಲಿರುವ ಆರೂ ತಿಂಗಳೂ ಹೊರಗೇ ಹೆಚ್ಚಾಗಿ ಕಾಲಕಳೆಯುತ್ತಾರೆ. ಚಳಿಗಾಲದ ಆರುತಿಂಗಳು ಅದೇ ನದಿ ಹೊಳೆಗಳ ಮೇಲೆ ವಾಹನವನ್ನು ಚಲಾಯಿಸುತ್ತಾ, ಐಸ್ ಸ್ಕೇಟಿಂಗ್ ಮಾಡುತ್ತಾರೆ. ಇಲ್ಲಿನ ಕೊಳ, ಸರೋವರಗಳು ಆ ಪಾಟಿ ಗಟ್ಟಿಯಾಗಿ ಹೆಪ್ಪುಗಟ್ಟಿರುತ್ತದೆ. ಚಳಿಗಾಲಗಳಲ್ಲಿ, ಹೆಪ್ಪುಗಟ್ಟಿರುವ ನದಿ, ಸರೋವರಗಳಲ್ಲಿ ಆಳವಾದ ತೂತುಗಳನ್ನು ಡ್ರಿಲ್ ಮಾಡಿ, ಆ ತೂತುಗಳಿಗೆ ದಾರ ಹಾಕಿ ಮೀನು ಹಿಡಿಯುವುದು ಇವರ ಕ್ರೀಡೆಗಳಲ್ಲೊಂದು. 
 
 
ವಿಸ್ಕಾನ್ಸನ್ ರಾಜ್ಯದಲ್ಲಿ ವಿಸ್ಕಾನ್ಸನ್ ಡೆಲ್ ಎಂಬ ನಗರವೊಂದಿದೆ. ಇದು ತನ್ನನ್ನು ತಾನು ವಿಶ್ವದ ವಾಟರ್ ಪಾರ್ಕ್ ಗಳ ನಗರ ಎಂದು ಕರೆದುಕೊಳ್ಳುತ್ತದೆ. ಎಲ್ಲಿ ನೋಡಿದರಲ್ಲಿ ಒಂದಿಲ್ಲೊಂದು ಬಗೆಯ ಜಲಕ್ರೀಡೆಗಳಾಡುವ ಪಾರ್ಕುಗಳು. ಬೇಸಿಗೆಗೆ ಮೈ ತುಂಬಿ ಹರಿಯುವ ವಿಸ್ಕಾನ್ಸನ್ ನದಿ ಈ ಊರಿನ ಸುತ್ತ ಬಳ್ಳಿಯಂತೆ ಸುತ್ತುತ್ತಾಳೆ. ಸಾವಿರಾರು ಮೈಲಿಗಳುದ್ದ ಹರಡಿರುವ
ಕೆನಡಾದ ಚೆಕಾಮೆಗಾನ್ ನ್ಯಾಷನಲ್ ಫಾರೆಸ್ಟ್, ಒಟ್ಟಾವಾ ನ್ಯಾಷನಲ್ ಫಾರೆಸ್ಟ್ ಹಾಗೇ ದಕ್ಷಿಣಕ್ಕೆ ಮುಂದುವರಿದು ಈ ಊರಿನ ತಟಕ್ಕೆ ತಾಕುವುದರಿಂದ ಇಲ್ಲಿನ ಡೆಲ್ ಗ್ಲೇಶಿಯರ್ ಪಾರ್ಕ್ನಲ್ಲಿ ಉತ್ತರ ಅಮೆರಿಕಾದ ದಟ್ಟ ಕಾಡಿನ ಚಿತ್ರವೂ ನೋಡಲು ಸಿಗುತ್ತದೆ.
ಇಲ್ಲಿ ಕಾಣುವ ಪೈನ್ ಕಾಡುಗಳಲ್ಲಿ ಪುರಾತನ ಗುಹೆಗಳು, ಬೃಹತ್ ಬಂಡೆಗಳು, ಸ್ಯಾಂಡ್ ಸ್ಟೋನ್ ನಿಂದಾಗಿರುವ ಬೃಹತ್ ಪದರು ಶಿಲೆಗಳು, ಪ್ರಾಣಿಪಕ್ಷಿಗಳ ಸಮೂಹ ಕಂಡುಬರುತ್ತದೆ. ಉತ್ತರ ಅಮೆರಿಕಾ ಖಂಡದ ಮಧ್ಯದಲ್ಲಿ ಹಾದುಬರುವ ಈ ಕಾಡುಗಳು ಅಮೆರಿಕಾದ ಪಶ್ಚಿಮದಲ್ಲಿ ಮೋಟಾನಾ ರಾಜ್ಯದ ಗ್ಲೇಶಿಯರ್ ನ್ಯಾಷನಲ್ ಪಾರ್ಕಿನಿಂದ ಆರಂಭವಾಗಿ ವಿಸ್ಕಾನ್ಸನ್ ವರೆಗೂ ಹರಡಿಕೊಂಡಿವೆ. ಈ ಕಾಡುಗಳು ಸಾವಿರಾರು ವರ್ಷಗಳ ಹಿಂದಿನಿಂದ ಕೆಂಪು (ನೇಟಿವ್) ಇಂಡಿಯನ್ನರ ವಸತಿಯಾಗಿದ್ದ ತಾಣ.     
 
 
ಡೆಲ್ ಗ್ಲೇಷಿಯರ್ ಪಾರ್ಕಿನಲ್ಲಿ ವಿಸ್ಕಾನ್ಸನ್ ನದಿಯ ಅಬ್ಬರದ ಹರಿವಿನ ಇತಿಹಾಸೋಡಬೇಕು! ಅವಳ ಆಟ ಕಣ್ಣೆದುರಿಗೆ ಬೃಹತ್ತಾಗಿ ಕಾಣುತ್ತದೆ. ಭಾರೀ ಗಾತ್ರದ ಬೆಟ್ಟಗಳನ್ನು ತನ್ನ ಸಾವಿರಾರು ವರ್ಷಗಳ (೧೪,೦೦೦ ವರ್ಷಗಳಿಂದ ಎನ್ನಲಾಗಿದೆ) ಹರಿವಿನಿಂದಲೇ ಕೊರೆದು ಕಂದಕ, ಗುಹೆ, ಕಾನ್ಯನ್ ಗಳನ್ನು ಮಾಡಿರುವ ಈ ನದಿ ನೋಡಲು ಸೌಮ್ಯಳಂತೆ ಕಂಡರೂ ಅವಳ ಶಕ್ತಿಗೆ ಸಾಟಿಯಿಲ್ಲ.
 
ವಿಸ್ಕಾನ್ಸನ್ ನದಿಯ ಮೇಲೆ ಎರಡನೇ ವಿಶ್ವಯುದ್ಧದ ಸಮಯದಲ್ಲಿ ಅಮೆರಿಕನ್ ಸೈನ್ಯಕ್ಕೆಂದು ತಯಾರಿಸಲಾದ ’ಡಕ್’ ಅಥವಾ ಬಾತುಕೋಳಿಗಳೆಂಬ ವಾಹನಗಳಲ್ಲಿ ಹೋಗುವುದು ಒಂದು ಚಂದದ ಅನುಭವ. ’ಡಕ್’ ಗಳು ನೆಲ ಮತ್ತು ನೀರುಗಳೆರಡರ ಮೇಲೂ ಸರಾಗವಾಗಿ ಚಲಿಸುವಂತಹ amphibious ವಾಹನಗಳು. ನೋಡಲು ಮಿಲಿಟರಿ ಕ್ಯಾನನ್ ಗಳಂತಿರುತ್ತವೆ. ಗಡಗಡ ಸದ್ದು ಮಾಡಿಕೊಂಡು ಕಾಡಿನ ಸುತ್ತಲೆಲ್ಲಾ ಒಂದು ರೌಂಡು ಹೊಡೆಸಿ ಅನಾಮತ್ತಾಗಿ ನೀರಿಗಿಳಿದು ನದಿಯಲ್ಲಿ ಸರಾಗವಾಗಿ ತೇಲುವ ’ಡಕ್’ ಗಳು ಸಹಸ್ರಾರು ವರ್ಷಗಳ ಇತಿಹಾಸವಿರುವ ಇಲ್ಲಿನ ಕಂದರ, ಕ್ಯಾನ್ಯನ್ ಗಳನ್ನು ಹತ್ತಿರದಿಂದ ವೀಕ್ಷಿಸಲು ಸಹಾಯ ಮಾಡುತ್ತವೆ.  

 

 

 

ಚಿತ್ರಗಳಲ್ಲಿ...

ಚಿತ್ರಗಳು: ಶ್ರೀ ಸುರಹಿತ್ ಭಟ್ಟಾಚಾರ್ಯ, ಕಲ್ಕತ್ತಾ (Surhit Bhattachaya, Culcutta)

ಮುರುಡೇಶ್ವರ ಸಮುದ್ರತೀರದ  ದೃಶ್ಯಗಳು... ಸಮುದ್ರ ಒಂದೇ ಆದರೇನು? ಅದರ ಪ್ರತೀ ತೀರದ
ನೋಟವೂ, ಪ್ರತಿ ನಿಮಿಷವೂ ಭಿನ್ನ ವಿಭಿನ್ನ. ಸೂರ್ಯನ ಬೆಳಕಿನೊಂದಿಗೆ ಯಾರ
ಪರಿವೆಯಿಲ್ಲದೆ ಆಡಿಕೊಳ್ಳುವ ಕಡಲಿನ ಕರುಣೆಯಲ್ಲೇ ಜೀವನ ಕಟ್ಟಿಕೊಳ್ಳುವ ಜನ, ಅವರ
ಯಾನ, ಧ್ಯಾನ...

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
Copyright © 2011 Neemgrove Media
All Rights Reserved