(ಪುಟ ೨೬) ಮತ್ತೆ ಕಾಣಿಸಿತದೋ ಆ ಪುಟ್ಟ ಉಲ್ಕೆ...
ಬೇಲಾ ಮರವ೦ತೆ
ಪ್ರಶಾಂತ ನೆಬ್ರಾಸ್ಕಾದ ಲಿಂಕನ್ ನಲ್ಲಿದ್ದ. ಮತ್ತೊಂದು ಹದಿನೈದು ದಿನಗಳ ಕ್ಲಯಂಟ್ ಸೈಟ್ ಕೆಲಸ. ಅವನು ವಾರಕ್ಕೊಮ್ಮೆ ಬರುವುದು ಉಂಡು ತಿಂದು, ಪ್ಯಾಂಪರ್ ಮಾಡಿಸಿಕೊಂಡು, ಸುಧಾರಿಸಿಕೊಂಡು ಬಟ್ಟೆ ಪ್ಯಾಕ್ ಮಾಡಿ ಹೊರಡುವುದು ನಡೆದೇ ಇತ್ತು. ತಿರುಗಾಟ ಅವನನ್ನು ವೀಕಾಗಿ ಮಾಡಿಬಿಟ್ಟಿತ್ತು. ಎಲ್ಲೆಂದರಲ್ಲಿ ಸಬ್ವೇ, ಚೈನೀಸ್ ರೆಸ್ಟೋರಾಂಟ್, ಆಲಿವ್ ಗಾರ್ಡನ್ ಹುಡುಕಿಕೊಂಡು ಅಲ್ಲಿ ಸಿಕ್ಕದ್ದನ್ನೇ ತಿಂದು ಹೈರಾಣಾದಂತಿದ್ದ. ಅವನು ಬರುವ ದಿನ ಒಳ್ಳೆ ಮಸಾಲೆ ಸಾರು, ಪಲ್ಯಗಳು, ಅವನಿಗಿಷ್ಟದ ಅಡುಗೆಗಳನ್ನು ಮಾಡಿಟ್ಟರೆ ಮುಗಿಯಿತು. ನನ್ನ ಪ್ರಯೋಗಾತ್ಮಕ ಕುಕ್ಕಿಂಗೂ ಜಯಭೇರಿ ಹೊಡೆಯುತ್ತಿತ್ತು. ಒಂದು ಹೊತ್ತಿಗೇ ಒಂದು ಪಾತ್ರೆ ಸಾರನ್ನು ಕುಡಿದು ಮುಗಿಸಿಬಿಡುತ್ತಿದ್ದ. ಒಂಟಿಯಾಗಿ ಬಿಟ್ಟು ಹೋಗುತ್ತಾನೆನ್ನುವ ಕೋಪ ತುಂಬಾ ಇದ್ದರೂ ಅವನು ಮನೆಯೂಟ ತಿನ್ನುವ ಪರಿ ನೋಡಿದಾಗ ಕಣ್ಣು ತುಂಬಿಕೊಂಡು ಬಿಡುತ್ತಿತ್ತು. ಛೆ! ಎಲ್ಲಿಂದಲೋ ಬಂದು ಮತ್ತೆಲ್ಲೋ ಚಿಗುರಲು ಏನೆಲ್ಲಾ ಸಾಹಸ ಮಾಡಬೇಕು! ಎಲ್ಲರಿಂದ ದೂರ, ಪರಕೀಯನಾಗಿ, ಇಡೀ ದಿನಹಗಲೂ ಕೆಲಸದಲ್ಲಿ ತೊಡಗಿಸಿಕೊಂಡಿರಲು ಅವನಿಗೇನು ಇಷ್ಟವೇ? ಹೋಗಲಿ ಬಿಡು...ಈ ಬಾಳ ಸಮುದ್ರದಲ್ಲಿ ಅವನ ಹುಡುಕಾಟ ಅವನದ್ದು ನಿನ್ನ ಹುಡುಕಾಟ ನಿನ್ನದ್ದು ಅಂತ ಸುಮ್ಮನಾಗುತ್ತಿದ್ದೆ. ’ಇನ್ನೊಂದೆರಡು ತಿಂಗಳು ಓಡಾಟ ಅಷ್ಟೇ...ಆಮೇಲೆ ಎಲ್ಲಾ ಬಂದ್’ ಅಂತ ಅವನೂ ಆಶ್ವಾಸನೆ ಕೊಟ್ಟಿದ್ದ.
ಕೆಲವು ವೀಕೆಂಡುಗಳಲ್ಲಿ ಕೆಲಸವೂ ಹೆಚ್ಚಿಲ್ಲದಿದ್ದಾಗ ಮಾತಿಗೆ ಕೂರುತ್ತಿದ್ದೆವು. ಅವನಿಗೆ ಹೇಳಲು ಇರುತ್ತಿದ್ದುದೆಲ್ಲಾ ಅವನ ಸಹೋದ್ಯೋಗಿಗಳು, ಕ್ಲಯಂಟ್ಸ್, ಬಾಸ್, ಕೆಲಸದ ಬಗ್ಗೆಯೇ. ಮಾರುಕಟ್ಟೆ ಏಳುಬೀಳುವಾಟಕ್ಕೆ ತಕ್ಕಂತೆ ಆಫೀಸಿನಲ್ಲಿ ನಡೆಯುವ ಡೈನಾಮಿಕ್ ಗಳು, ಒಂದಷ್ಟು ಟಾರ್ಗೆಟ್ ಗಳನ್ನು ’ಅಚೀವ್’ ಮಾಡಬೇಕೆಂದು ನಿರಂತರ ಓಟ, ಸದಾ ಏನಾದರೂ ’ಸ್ಟ್ಯಾಟರ್ಜಿ’ ಮಾಡುವ ಅಥವಾ ಮಾರ್ಕೆಟಿಂಗ್ ಮಾಡುವ ಬಗ್ಗೆ ಮೀಟಿಂಗುಗಳು...ನನಗಂತೂ ಕೇಳಿ ಕೇಳಿ ಸಾಕಾಗಿಹೋಗಿತ್ತು. ಅವರ ಯಾವ ಸಹೋದ್ಯೋಗಿ, ಬಾಸ್ ಎಂಥವರು? ಏನೆಲ್ಲಾ ಮಾಡುತ್ತಾರೆ ಎನ್ನುವ ಬೇಡದ ಜ್ನಾನವೂ ಬಂದುಬಿಟ್ಟಿತ್ತು. ನಾನು ನನನ್ನು ಹುಡುಕಿಕೊಳ್ಳುವುದು, ನಾನ್ಯಾರು, ಕನಸುಗಳೇನು ಅಂತೆಲ್ಲಾ ಯೋಚನೆ ಮಾಡಿಕೊಂಡು ಅವನಲ್ಲಿಗೆ ಹೇಳಕೂತರೆ ಅವನ ಬಾಸುಗಳ, ಕೆಲಸದ, ಮಾರ್ಕೆಟ್ಟಿನ ಕಾರ್ಪೋರೇಟ್ ರಾಡಿಗೆ ನನ್ನ ತಲೆಯಲ್ಲಿ ಇರುತ್ತಿದ್ದ ಬಡಪಾಯಿ ಯೋಚನೆಗಳೆಲ್ಲಾ ಕೊಚ್ಚಿಹೋಗಿಬಿಡುತ್ತಿದ್ದವು. ಅವನ ಅನುಭವ ಕೇಳೇ ನಾನಂತೂ ಯಾವತ್ತೂ ಕಾರ್ಪೋರೇಟ್ ವಲಯದಲ್ಲಿ ಕೆಲಸಕ್ಕೆ ಇಳಿಯುವುದಿಲ್ಲ ಅಂತ ನಿರ್ಧರಿಸಿಕೊಂಡು ಬಿಟ್ಟಿದ್ದೆ.
ಸಾಫ್ಟ್ ವೇರಿನವರು ಮಾಡುವ ’ಸಾಫ್ಟ್ವೇರ್’ ಗಳನ್ನು ಕೈನಲ್ಲಿ ಸ್ಪರ್ಷಿಸಲೂ ಆಗದ್ದೆನುವುದೇ ನನಗೆ ಮೊದಲಿನಿಂದಲೂ ಅಚ್ಚರಿ. ’ಆರ್ಟಿಫಿಶಿಯಲ್ ಇಂಟೆಲಿಜೆನ್ಸ್’ ಎನ್ನುವ ಮಾತು ತಲೆಯಲ್ಲುಳಿದುಬಿಟ್ಟಿತ್ತು. ’ಅದು ಒಂಥರಾ ಹಾಡಿನಂತೆ...ನಿನಗೆ ಚನ್ನಾಗಿ ಕೇಳುತ್ತೆ ತಾನೇ’ ಪ್ರಶಾಂತ ವಿವರಿಸಿದ್ದ. ಹೌದಪ್ಪಾ ಕೇಳುತ್ತೆ, ಗಂಟಲಿನ ಒಳಗಿಂದಲೇ ಬರುವುದರಿಂದ ಬರುವ ಮಂದಿ ಬೇಕಾದಾಗ ಹಾಡುತ್ತಾರೆ. ಅವರ ಉಸಿರು ಇರುವವರೆಗೂ ಅವರ ದನಿ, ಸಂಗೀತ ಇರುತ್ತದೆ, ಕೇಳುಗರಿಗೆ ಕೇಳುತ್ತೆ...ಆದರೆ ಸಾಫ್ಟ್ವೇರ್?! ಒಂದೊಮ್ಮೆ ದೊಡ್ಡ ಭೂಕಂಪವೋ, ಮಹಾ ಚಂಡಮಾರುತವೋ ಆಗಿ ಒಂದು ಖಂಡದಲ್ಲಿ ವಿದ್ಯುತ್ ಇಲ್ಲದಂತಾದರೆ..ಅಥವಾ ಸೋಲಾರ್ ಫ್ಲೇರ್ ಗಳು ಹೆಚ್ಚು ಸ್ಯಾಟಿಲೈಟ್ ಗಳೇ ಕೆಟ್ಟು ಹೋದರೆ? ಇಂಟರ್ನೆಟ್ಟೇ ಕೆಟ್ಟು ಹೋದರೆ? ಆಗ? ಜನ ಅನ್ನ, ಬಟ್ಟೆ, ಔಷಧಿ, ಆಸರೆ, ಆರೈಕೆಗಾಗಿ ಹಪಹಪಿಸುವಾಗ ಏನನ್ನು ಒದಗಿಸುತ್ತೀರಿ? ಆಗ ಸಾಫ್ಟ್ವೇರ್ ಬೇಕಾಗತ್ತಾ? ನಾನು ತಲೆಕೆಡಿಸುವ ಪ್ರಶ್ನೆ ಕೇಳಿದ್ದಾಗ ’ಅಂಥದ್ದೇನೂ ಆಗೋದಿಲ್ಲ ಅನ್ನುವ ನಂಬಿಕೆಯಿಟ್ಟುಕೊಂಡು ಬದುಕಬೇಕು...ಆದರೂ ಆಗುವವರೆಗೂ ನಮ್ಮ ಟೆಕ್ನಾಲಜಿ ನಡೆಯುತ್ತದಲ್ಲಾ’ ಅಂತ ಶಾಂತನಾಗಿ ಹೇಳಿದ್ದ. ಅವನ ಕ್ಷೇತ್ರದ ಇತಿಮಿತಿಗಳು ಅವನಿಗೇ ಚನ್ನಾಗೇ ಗೊತ್ತಿತ್ತಾದರೂ...ಆರಿಸಿಕೊಂಡಾಗಿದೆ...ಈಗ ಬದುಕು ಕಟ್ಟಿಕೊಳ್ಳುವುದನ್ನು ನೋಡಬೇಕಷ್ಟೇ...ಇದು ಅವನ ಸಧ್ಯದ ಧೋರಣೆ.
ಇತ್ತೀಚಿನ ಪುಟಗಳಲ್ಲಿ ನಾನು, ಯಾರು, ಯಾಕೆ ಅಂತೆಲ್ಲಾ ಬರೆದಿಟ್ಟದ್ದು ನೋಡಿ ಯಾಕೋ ನನ್ನ ಹೆಂಡತಿ ಸ್ವಸ್ಥಳಾಗಿದ್ದಾಳಾ ಎನ್ನುವ ಅನುಮಾನ ಅವನಿಗೆ ಬಂದಂತಿತ್ತು. ’ಯಾಕೆ ಒಂಥರಾ ಡಿಫರೆಂಟಾಗಿ ಬರೀತಾ ಇದ್ದೀಯಲ್ಲಾ ಬಿಲ್ಲೀ...’ ಎಂದು ವಿಚಾರಿಸಿದ್ದ. ಒಬ್ಬಳೇ ಇರಲು ಬೇಜಾರಾದರೆ ೨ ತಿಂಗಳು ಇಂಡಿಯಾಗೆ ಹೋಗಿ ಬರ್ತೀಯಾ ಎಂತಲೂ ಕೇಳಿದ್ದ. ಮೊದಲ ಬಾರಿ ಊರಿಗೆ ಹೋಗಿಬರುವ ಆಪ್ಷನ್ ಬಹಳ ಖುಷಿಯಾಗಿದ್ದರೂ ಜಿ.ಆರ್.ಇ ತಯಾರಿಯನ್ನು ಅರ್ಧದಲ್ಲಿ ಬಿಟ್ಟು ಹೋಗುವುದು ಸರಿಯೆನಿಸಿರಲಿಲ್ಲ. ಹಾಗೇನಾದರೂ ತಯಾರಿಯನ್ನು ಅರ್ಧಕ್ಕೆ ನಿಲಿಸಿ ಊರಿಗೆ ಹೋಗಿಬಂದರೂ...ಮತ್ತೆ ಇದೇ ಒಂಟಿ ಕೂಪಕ್ಕೇ ಬಂದುಬೀಳುತ್ತಿದ್ದೆ. ಆಗ ಓದುವ ಆಸೆಯೇ ಬರದಿರಬಹುದೆನ್ನುವ ಅಥವಾ ಅಮೆರಿಕಾಗೆ ಹಿಂತಿರುಗಿ ಬರುವ ಮನಸ್ಸೇ ಆಗದಿರಬಹುದು ಎನ್ನುವ ಭಯವೂ ಇತ್ತು. ’ನೀನೂ ಓಡಾಟ ಮುಗಿಸಿಕೋ..ನಾನೂ ಪರೀಕ್ಷೆ ಮುಗಿಸಿಕೊಳ್ತೀನಿ...ಒಟ್ಟಿಗೇ ಹೋಗಿಬರೋಣ’ ಕಲ್ಲು ಮನಸ್ಸು ಮಾಡಿಕೊಂಡಿದ್ದೆ. ’ಹಾಗಾದ್ರೆ ಓದಿ ಸಾಕೆನಿಸಿದರೆ ಯೋಗ ಮೆಡಿಟೇಷನ್ನು ಗಿಡಿಟೇಷನ್ನು ಅಂತ ಕೂರಬೇಡ...ಕತೆಪುಸ್ತಕ ಓದು, ಫಿಲಂ ನೋಡು...ಶಾಪಿಂಗ್ ಹೋಗಿಬಾ...ರೆಸ್ಟೋರಾಂಟ್ ಹೋಗು, ಫ್ರೆಂಡ್ಸ್ ಜೊತೆ ಮಾತಾಡು...ಲಿವ್ ಯುಅರ್ ಏಜ್’ ಪ್ರಶಾಂತ ಸಲಹೆ ಕೊಟ್ಟಿದ್ದ. ’ನೀನೇನೂ ಟೆನ್ಷನ್ ಮಾಡಿಕೊಳ್ಳಬೇಡಪ್ಪಾ...ನಾನು ಒಬ್ಬಳೇ ಅಂತ ಬೇಜಾರೂ ಮಾಡಿಕೊಳ್ಳಲ್ಲ, ಸನ್ಯಾಸಾನೂ ತೆಗೆದುಕೊಳಲ್ಲ, ಹುಚ್ಚಿನ ಬಾರ್ಡರ್ ಕೇಸೂ ಆಗಲ್ಲ...ನಾನು ಸಿಕ್ಕಾಪಟ್ಟೆ ಖುಷಿಯಾಗಿ ಇದ್ದೀನಿ...ನೀನು ಸಮಾಧಾನವಾಗಿ ಹೋಗಿ ಬಾ’ ಅಂದಿದ್ದೆ. ಅರೆ! ಒಬ್ಬ ವ್ಯಕ್ತಿ ನಾನ್ಯಾರು, ನನ್ನ ಅಸ್ತಿತ್ವ ಏನು, ನನ್ನ ಬದುಕಿನ ಉದ್ದೇಶ ಏನು ಎನ್ನುವ ಗೊಂದಲಕ್ಕೆ ಬಿದ್ದು, ಅದಕ್ಕೆ ತಮ್ಮಲ್ಲಿನ ಸಮಯ, ಸಂಪನ್ಮೂಲ, ಚೂರುಪಾರು ಶಕ್ತಿಯನ್ನು ಬಳಸಿಕೊಂಡು ಸಮಾಧಾನಮಾಡಿಕೊಳ್ಳುವ ಕೆಲಸ ಮಾಡಿಕೊಂಡರೆ ಜನ ಇಷ್ಟೋಂದು ವಿಚಲಿತರಾಗಿಬಿಡುತ್ತಾರಾ?! ಆಶ್ಚರ್ಯವಾಗಿತ್ತು.
ಪ್ರಶಾಂತ ಲಿಂಕನ್ ಗೆ ಹೊರಡುವ ಮುನ್ನ ಒಂದಷ್ಟು ಮೂವಿಗಳು, ಬೇಡವಾದಷ್ಟು ಕುರುಕಲು ತಿಂಡಿಗಳು, ಚಾಕೋಲೇಟುಗಳು ಎಲ್ಲವನ್ನೂ ತನಗೇ ಇಷ್ಟವೆಂದು ತಂದು ತುಂಬಿಸಿದ್ದ. ಅವತ್ತು ರಾತ್ರಿ ಅವನ ಫ್ಲೈಟ್. ಅವತ್ತು ಸಂಜೆ ಫೋನ್ ರಿಂಗಾಗಿತ್ತು. ಯಾವುದೋ ಗೊತ್ತಿಲ್ಲದ ನಂಬರ್. ಪ್ರಶಾಂತ ರಿಸೀವ್ ಮಾಡಿ ಯಾರೆಂದು ಕೇಳಿ, ಕನ್ನಡದಲ್ಲಿ ’ಹೌದು ಥ್ಯಾಂಕ್ಯೂ ಹೌದು’ ಗಳನ್ನು ಹೇಳಿ ’ಡೆನ್ವರ್ ನಿಂದ ನಿನ್ನ ಫ್ರೆಂಡ್ ಮಾಡಿದ್ದಾರೆ’ ಅಂತ ಫೋನ್ ಕೊಟ್ಟಿದ್ದ. ಅರೆ! ನನಗ್ಯಾರು ಫ್ರೆಂಡ್ಸ್ ಇದ್ದಾರೆ ಡೆನ್ವರ್ ನಲ್ಲಿ ಎಂದುಕೊಳ್ಳುತ್ತಲೇ ’ಚೈತ್ರಾ!!!! ಅದೇ ಚೈತ್ರಾನಾ? ನೀನು!!! ನಂಬಿಕೇನೇ ಆಗ್ತಾ ಇಲ್ಲ!! ಇಲ್ಲೇ ಇದ್ದೀಯಾ?! ಹೇಗಿದ್ದೀಯಾ? ನನ್ನ ನಂಬರ್ ಹೇಗೆ ಸಿಕ್ಕಿತು?’ ನನ್ನ ಬಾಲ್ಯದ ಗೆಳತಿ ಚೈತ್ರಾಳ ಅನಿರೀಕ್ಷಿತ ಕರೆಗೆ ನಾನು ಸಂತೋಷದ ಶಾಕು ಹೊಡೆಸಿಕೊಂಡವಳಾಗಿದ್ದೆ. ಪ್ರಶಾಂತ ಇನ್ನೇನು ಹೊರಡುವವನಿದ್ದುದರಿಂದ ಕಷ್ಟಪಟ್ಟು ಹದಿನೈದಿಪ್ಪತ್ತು ನಿಮಿಷಕ್ಕೇ ಮಾತು ನಿಲಿಸಿ, ಮತ್ತೆ ಬೇಗನೆ ಫೋನು ಮಾಡುವ ಪ್ರಾಮಿಸ್ ಬದಲಿಸಿಕೊಂಡು ಫೋನಿಟ್ಟಿದ್ದೆವು. ಹೊರಡುವ ಟೈಮ್ ಆಗಿದ್ದರೂ ಕುತೂಹಲ ತಡೆಯಲಾಗದೇ ಪ್ರಶಾಂತ ಯಾರು ಏನು ಎಂದು ವಿಚಾರಿಸಿಕೊಂಡು ’ತಲುಪಿದ ಮೇಲೆ ಕಾಲ್ ಮಾಡ್ತೀನಿ..ಆಗ ಮಾತಾಡಣಾ..ಎಲ್ಲಾ ಹೇಳು’ ಎಂದು ಹೊರಟಿದ್ದ.
ಚೈತ್ರಳ ಕರೆಯಿಂದ ಖುಷಿಯಾಗಿದ್ದ ಮನಸ್ಸು ಪ್ರಶಾಂತ ಹೊರಟಾಗ ಬೇಜಾರು ಮಾಡಿಕೊಂಡಿರಲಿಲ್ಲ. ಮನಸ್ಸಿನ ಯಾವುದೋ ಮೂಲೆಯಲ್ಲಿ ಕಳೆದುಹೋಗಿದ್ದ ಹಳೇ ಗೆಳೆತನದ ಮಧುರ ನೆನಪಿನ ಗಮಲು ಎಲ್ಲಾ ಕಡೆ. ನಿಜಕ್ಕೂ ಪ್ರಪಂಚ ಚಿಕ್ಕದು. ಹನ್ನೆರಡು ಹದಿಮೂರು ವರ್ಷಗಳ ಹಿಂದೆ ನನ್ನ ಪುಟ್ಟ ಬದುಕು, ಊರಿನಿಂದ ಎಲ್ಲೋ ದೂರ ಹೋಗಿದ್ದ ಪುಟ್ಟ ಗೆಳತಿಯೊಬ್ಬಳು ಅವಳಾಗೇ ಹುಡುಕಿಕೊಂಡು ಬಂದಿದ್ದಳು. ಅದೂ ಈ ಖಂಡದಲ್ಲಿ! ಮತ್ತೆ ಅವಳಿಗೆ ಫೋನ್ ಮಾಡುವ ಮನಸ್ಸಾಯಿತಾದರೂ, ಅವಳೇನೆಂದುಕೊಳ್ಳುತ್ತಾಳೋ ಎಂಬ ಅಳುಕು. ಅವಳೂ ಎಲ್ಲರ ಥರ ತುಂಬಾ ಫಾರ್ಮಲ್ ಆಗಿಬಿಟ್ಟಿದ್ದರೆ? ಹನ್ನೆರಡು ವರ್ಷಗಳ ಜೀವನ ಒಬ್ಬ ವ್ಯಕ್ತಿಯನ್ನು ಸಾಕಷ್ಟು ರೀತಿಯಲ್ಲಿ ಬದಲಿಸಿರುತ್ತದೆ...ನನಗೆ ಗೊತ್ತಿದ್ದ ೧೦-೧೧ ವರ್ಷದ ಹುಡುಗಿ ಈಗ ಯಾವಥರದವಳೋ ಏನೋ? ಅಮೆರಿಕಾಗೆ ಬಂದು ಕಲಿತಿದ್ದ, ಸಕಲವನ್ನೂ ಅನುಮಾನಪಡುವ ರೀತಿಗಳನ್ನು ಅವಳಿಗೂ ಅನ್ವಯಿಸಿ ಸುಮ್ಮನಾಗಿದ್ದೆ.
ಪ್ರಶಾಂತನನ್ನು ಕಳಿಸಿಕೊಟ್ಟು ಖಾಲಿಯಾಗಿದ್ದ ಮನಸ್ಸನ್ನು ಚೈತ್ರ ತುಂಬಿದ್ದಳು. ಮನಸ್ಸನ್ನು ಕೆದಕಿ ಕೆದಕಿ, ಸುಪ್ತಭಾಗದಲ್ಲಿ ಎಲ್ಲೋ ಒಂದು ಕಡೆ ಸೇಫಾಗಿದ್ದ ಅವಳ ಬಗ್ಗೆ ಎಲ್ಲವನ್ನೂ ನೆನಪುಮಾಡಿಕೊಳ್ಳತೊಡಗಿದೆ. ಅವಳು ನಮ್ಮ ಜೊತೆ ಆಟವಾಡಿ ಬೆಳೆದ ನಮ್ಮ ಬೀದಿಯ ಹುಡುಗಿ. ನಾನು ಎರಡು ಮೂರು ವರ್ಷದವಳಿದ್ದಾಗ ಅವಳ ತಂದೆತಾಯಿ ನಮ್ಮ ಏರಿಯಾಗೆ ಬಂದಿದ್ದರಂತೆ, ಕುಶಾಲನಗರದ ಕಡೆಯವರು. ಅವರ ತಂದೆ ಬ್ಯಾಂಕೊಂದರಲ್ಲಿ ಕೆಲಸ ಮಾಡುತ್ತಿದ್ದರು ಎಂದು ನೆನಪು. ಅವರಮ್ಮ ನಮ್ಮಮ್ಮ ಸಂಡಿಗೆ ಹಾಕಿಕೊಳ್ಳುವ ನೆವದಲ್ಲಿ ಸ್ವಲ್ಪ ಸಮಯದಲ್ಲೇ ಭಾರೀ ಸ್ನೇಹಿತೆಯಾಗಿಬಿಟ್ಟಿದ್ದರು. ನನಗಿಂತ ಎರಡು ವರ್ಷ ದೊಡ್ಡವಳಿದ್ದ ಚೈತ್ರಳಿಗೆ ನನ್ನ ತಮ್ಮ ಹುಟ್ಟಿದ ಮೇಲೆ ಒಬ್ಬ ತಮ್ಮ ಹುಟ್ಟಿದ್ದ. ಚೈತ್ರಾ, ನಮ್ಮಕ್ಕ, ನಾನು, ಬೃಂದ, ಕುಸುಮ ಎಲ್ಲರೂ ನಮ್ಮನೆ ಕಾಂಪೌಂಡಿನಲ್ಲಿ ಗಂಟೆಗಟ್ಟಲೆ ಕುಂಟಾಬಿಲ್ಲೆ, ಎಲಾಸ್ಟಿಕ್, ಸ್ಕಿಪ್ಪಿಂಗ್, ಮನೆಆಟ, ಅಂಗಡಿಆಟ, ಮಿಸ್ಸಾಟ ಆಡಿಕೊಳ್ಳುತ್ತಿದ್ದ್ವಿ. ಅಕ್ಕ, ಕುಸುಮ, ಬೃಂದಕ್ಕ ಒಬ್ಬರ ಜೊತೆ ಒಬ್ಬರು ’ಬೆಸ್ಟ್ ಫ್ರೆಂಡ್’ ಗಳಾಗಿದ್ದರಿಂದ ನಾವಿಬ್ಬರೂ ನಮ್ಮಷ್ಟಕ್ಕೆ ’ಬೆಸ್ಟ್ ಫ್ರೆಂಡ್’ ಆಗಿಕೊಂಡಿದ್ವಿ.
ಚೈತ್ರಾ ನನಗೆ ಮರಹತ್ತಲು ಕಲಿಸಿದ್ದಳು. ಅವಳು ಮಾತಿನಮಲ್ಲಿ...ಬಂಡೆಯನ್ನೂ ಮಾತಾಡಿಸಿ ಫ್ರೆಂಡು ಮಾಡಿಕೊಂಡು ಬರುತ್ತಾಳೆ ಅಂತ ಅವರಮ್ಮ ಬೈಯ್ಯುತ್ತಿದ್ದರು. ಬಂಡೆಯನ್ನು ಫ್ರೆಂಡ್ ಮಾಡಿಕೊಳ್ಳುವುದು ಅಂದ್ರೆ ಸಾಮಾನ್ಯವೇ? ನನ್ನ ಬೆಸ್ಟ್ ಫ್ರೆಂಡ್ ಬಗ್ಗೆ ನನಗಂತೂ ತುಂಬಾ ಹೆಮ್ಮೆಯಿತ್ತು.
ಸ್ವಲ್ಪ ದೊಡ್ಡವಳೂ ಆಗಿದ್ದರಿಂದ ಅವಳು ಹೇಳಿದ್ದೆಲ್ಲಾ ಮಾಡುತ್ತಿದ್ದೆ. ನನ್ನಕ್ಕಳಿಗಿಂತ ಅವಳು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಳು. ನೀನು ಚಿಕ್ಕವಳು ಈಗ ಬೇಡ...ಅಂತ ಅಕ್ಕ ಆಟಕ್ಕೆ ಸೇರಿಸಿಕೊಳ್ಳದಿದ್ದರೆ ಚೈತ್ರ ಸೇರಿಸಿಕೊಳ್ಳುತ್ತಿದ್ದಳು. ’ಬಾ ನಾವಿಬ್ರೇ ಆಡಣ’ ಎನ್ನುತ್ತಿದ್ದಳು. ಊರಿಂದ ದೊಡ್ಡಮ್ಮ ಕೊಟ್ಟು ಕಳಿಸಿದ್ದ ಪುಟಾಣಿ ಮಣ್ಣಿನ ಮಡಕೆ ಸೆಟ್ಟಿನಲ್ಲಿ ’ನಿಜ್ ನಿಜಕ್ಕೂ’ ಅಡಿಗೆ ಮಾಡುವ ಆಟ ಆಡಿದ್ದಾಗ ಬೆಂಕಿಹಾಕಿ ಒಲೆ ಹತ್ತಿಸಲು ನನಗೂ ಬಿಟ್ಟಿದ್ದಳು. ನಮ್ಮಮ್ಮ ಅವರಮ್ಮ ತುಂಬಾ ಹೋಗಿಬರುವಷ್ಟು ಸ್ನೇಹಿತರಾದಾಗ ಅಪ್ಪಂದಿರೂ ಜೊತೆ ಕೂತು ಕೆಲಸ-ಊರಿನ ವಿಚಾರ ಎಲ್ಲ ಮಾತಾಡಿಕೊಳ್ಳುತ್ತಿದ್ದರು. ಎಷ್ಟೋ ದಿನ ಅವರ ಊಟ ನಮ್ಮ ಮನೆಯಲ್ಲೋ, ನಮ್ಮ ಊಟ ಅವರ ಮನೆಯಲ್ಲೋ ಆಗಿಬಿಡುತ್ತಿತ್ತು. ಓದಲು ಬಂದು, ಅವಳು ನಮ್ಮ ಮನೆಯಲ್ಲಿ ಮಲಗುವುದೂ ಸಾಮಾನ್ಯವಾಗಿತ್ತು. ’ಇವರಿಬ್ಬರೂ ಸರೀಗಿದ್ದಾರೆ...ನಮ್ಮ ಚೈತ್ರ ಬೇಲನ್ನೂ ಮಾತಿನಮಲ್ಲಿ ಮಾಡಿಟ್ಟಿದ್ದಾಳೆ...’, ’ಹಿಂಗೇ ಅಂಟಿಕೊಂಡಿದ್ರೇ ಒಂದೇ ಮನೆಗೆ, ಒಂದೇ ದಿನ ಇಬ್ಬರಿಗೂ ಮದುವೆ ಮಾಡಿ ಕಳಿಸಿಬಿಡ್ತೀವಿ...’ ಅಂತಲೂ ಚೈತ್ರನಮ್ಮ ನಮ್ಮನ್ನು ಅಣಕಿಸಿದ್ದು ಈಗ ನೆನಪಿಗೆ ಬರ್ತಿದೆ...
ಬೇರೆ ಊರಿಂದ ನಮ್ಮೂರಿಗೆ ಬಂದರು ಎನ್ನುವುದೂ ಅರಿವಿಗೆ ಬರದಂಥ ಸ್ನೇಹ ಹುಟ್ಟಿತ್ತು ನಮ್ಮ ಮನೆಗಳವರಲ್ಲಿ. ಚೈತ್ರಳ ತಮ್ಮ ಹುಟ್ಟಿದಾಗ ಅವಳಿಗೆ ಅಜ್ಜಿ ಇಲ್ಲದ್ದರಿಂದ ನನ್ನ ದೊಡ್ಡಮ್ಮ ಬಂದು ಅವರಮ್ಮನಿಗೆ ಸಣ್ಣ ಕೂಸಿಗೆ ಸ್ನಾನ, ಸಾಂಬ್ರಾಣಿ ಮಾಡಿ ಕೊಡುತ್ತಿದ್ದರು. ಅಕ್ಕ, ಚೈತ್ರ, ನಾನು ಹಬ್ಬಗಳು ಬಂದಾಗ ಒಂದೇ ಅಂಗಡಿಯಿಂದ ಒಂದೇ ಥರದ ಬಟ್ಟೆ ತೆಗೆಸಿಕೊಂಡು ಹಾಕಿಕೊಳ್ಳುವಂತಾಗಿದ್ವಿ! ಈಗ ನಮ್ಮ ಆ ತ್ರಿಮೂರ್ತಿ ಅವತಾರಗಳನ್ನು
ನೆನೆಸಿಕೊಂಡರೆ ನಗು ಬರುತ್ತಿದೆ...ಅಂಥಾದ್ದರಲ್ಲಿ ಒಂದು ದಿನ ನಾನು ಸ್ಕೂಲಿಂದ ಮನೆಗೆ ಬಂದಾಗ ಆಂಟಿ ಮತ್ತು ಅಮ್ಮ ಅಡಿಗೆಮನೆಯಲ್ಲಿ ಅಳುತ್ತಾ ಕೂತಿದ್ದರು. ಆಗ ನನಗೆ ೯-೧೦ ವರ್ಷ ಇರಬಹುದು. ಓ ಯಾರೋ ಹೋಗಿರಬೇಕು ಎಂದುಕೊಂಡು ಸೈಲೆಂಟಾಗಿ ಅಡಿಗೆಮನೆ ಹತ್ತಿರ ಬಂದಿದ್ದೆ. ಆಂಟಿ "ಯಾವುದೋ ಜನ್ಮದ ನಂಟಿತ್ತು ಅನ್ನಿಸುತ್ತೆ...ಸಿಕ್ವಿ...ಈಗ ವಿಧಿ ಕರೆದುಕೊಂಡ್ ಹೋದ ಕಡೆ ಹೋಗಬೇಕು..." ಅಂತ ಅಳುತ್ತಾ ಅಮ್ಮನನ್ನು ಸಮಾಧಾನ ಮಾಡಿಸುತ್ತಿದ್ದರು. ಅವತ್ತು ಊಟಕ್ಕೆ ಕೂತಾಗ ಅಮ್ಮ ಕಣ್ಣುಜ್ಜಿಕೊಂಡು ಅಪ್ಪನಿಗೆ ವಿವರಿಸಿದ್ದರು. ಚೈತ್ರಳ ಅಪ್ಪನಿಗೆ ಟ್ರಾಸ್ಫರ್ ಆಗಿತ್ತು! ಇನ್ನೂ ಮೂರು ನಾಲ್ಕು ವರ್ಷ ವರ್ಗಾವಣೆ ಮಾಡಲ್ಲವೆಂದೂ ಹೇಳಿಯೂ ಅವರ ಬ್ಯಾಂಕ್ ಅವರನ್ನು ಉತ್ತರ ಕರ್ನಾಟಕಕ್ಕೆ ಕಳಿಸಿತ್ತು. ಅವರಪ್ಪ ಅದನ್ನು ಒಪ್ಪಿಕೊಂಡಿದ್ದರಂತೆ. ಒಪ್ಪಿಕೊಂಡಿದರೆ ಚೈತ್ರಳ ಅಪ್ಪನೇ ಹೋಗಲಿ ಅವರೆಲ್ಲ ಯಾಕೆ ಹೋಗಬೇಕು ಅಂತ ನಾನು ಅಕ್ಕ ಅಮ್ಮನ ಹತ್ತಿರ ಅದು ನಮ್ಮ ಆಯ್ಕೆಯ ವಿಷಯವೆಂಬಂತೆ ಗಲಾಟೆ ಮಾಡಿದ್ದೆವು. ಅಮ್ಮ ಆಂಟಿಗೆ ಅಲ್ಲೇ ಉಳಿದುಬಿಡುವಂತೆಯೂ ಕೇಳಿದ್ದರು. ನಾನು ಮತ್ತು ಚೈತ್ರ ಅರ್ಥವಾಗದ ಹಿರಿಯರ ರೀತಿಗೆ ತುಂಬಾ ಅತ್ತುಕೊಂಡಿದ್ದೆವು. ’ನಾನು ನಿನ್ನ ಮರೆಯುವುದಿಲ್ಲ’ ಅಂತ ದಿನಕ್ಕೊಂದು ಲೆಟರ್ ಬರೆದುಕೊಂಡಿದ್ದೆವು. ಇಬ್ಬರೂ ನಮ್ಮ ಬಳೆಗಳನ್ನು, ಹಬ್ಬಕ್ಕೆ ತಂದುಕೊಟ್ಟಿದ್ದ ಕುಚ್ಚುಗಳನ್ನು ಎಕ್ಸ್ಚೇಂಜ್ ಮಾಡಿಕೊಂಡಿದ್ದೆವು. ಪ್ರತೀ ವಾರ ಲೆಟರ್ ಬರೆಯುತ್ತೇವೆಂದು ’ಮದರ್ ಪ್ರಾಮಿಸ್’ ಹಾಕಿಕೊಂಡಿದ್ದೆವು. ವಿಷಯ ತಿಳಿದ ಒಂದು ತಿಂಗಳಲ್ಲೇ ಅವರ ಕುಟುಂಬ ಹೊರಟಿದ್ದರು. ಅವರು ಹೊರಡುವ ಎರಡು ದಿನ ಮುನ್ನವೇ ಲಾರಿಗೆ ಸಾಮಾನು ಹಾಕಿ ಸಾಗಿಸಿದ್ದರಿಂದ ಆ ಎರಡು ದಿನ ಅವರು ನಮ್ಮ ಮನೆಯಲ್ಲೇ ಇದ್ದರು. ನಾನು ಚೈತ್ರ ಇನ್ನೇನು ಲೈಫೇ ಮುಗಿದುಹೋಯಿತೇನೋ ಎಂಬಂತೆ ಗೋಳಾಡಿಕೊಂಡಿದ್ದೆವು.
ಅವರು ಮನೆ ಕಾಲಿ ಮಾಡಿ ಹೊರಟ ನಂತರದ ದಿನಗಳು ಬಿಕೋ ಎನಿಸುವಂತಾಗಿದ್ದವು. ಅಮ್ಮ ಸಪ್ಪಗಿದ್ದರು. ಅವರು ಯಾರನ್ನಾದರೂ ಹಚ್ಚಿಕೊಂಡರೇ ಮನೆಯವರಿಗಿಂತ ಹೆಚ್ಚು ಆಪ್ತರನ್ನಾಗಿ ಮಾಡಿಕೊಂಡು ಬಿಡುತ್ತಿದ್ದರು. ಅಕ್ಕ ದೊಡ್ಡವಳಾಗುತ್ತಿರುವ ಕಾರಣಕ್ಕೆ ಇನ್ನು ಬೀದಿಯಲ್ಲಿ, ಹೊತ್ತಾದ ಮೇಲೆ ಕಾಪೌಂಡಿನಲ್ಲಿ ಆಟ ಆಡುವುದು ಬೇಡ ಎಂದು ಫರ್ಮಾನು ಹೊರಟಿತ್ತು. ಅಕ್ಕಳಿಲ್ಲದೆ ನಾನು ಏನು ಆಟವಾಡುವುದು? ತಮ್ಮನ ಜೊತೆ ಆಡಿಕೊಳ್ಳುತ್ತೇನೆಂದರೂ ಅಕ್ಕಂಗೆ ಬೇಜಾರಾಗುತ್ತೆಂದು ನನ್ನ ಚಟುವಟಿಕೆಗಳೂ ಮನೆಗೇ ಸೀಮಿತವಾಗಿತ್ತು. ಆಗಲೇ ಏನೋ ನಾನು ನಮ್ಮಕ್ಕ ಸ್ನೇಹಿತರಂತೆ ಒಬ್ಬರನ್ನೊಬ್ಬರು ಹಚ್ಚಿಕೊಂಡಿದ್ದು...
ಒಂದು ತಿಂಗಳಾದಂತೆ ಚೈತ್ರಳ ನೀಲಿ ’ಇನ್ಲ್ಯಾಂಡ್ ಲೆಟರ್’ ಬಂದಿತ್ತು. ಅದೂ ನನ್ನ ಹೆಸರಿಗೇ! ’ಮಿಸ್. ಬೇಲಾ, ಡಾಟರ್ ಆಫ್ ___’ ಅವಳದೇ ಮುದ್ದಾದ ಅಕ್ಷರದಲ್ಲಿ. ಪತ್ರ ಅವಳು ಕಿತ್ತೂರಿನಲ್ಲಿದ್ದ ’ಝಾನ್ಸಿ ಲಕ್ಷ್ಮಿಬಾಯಿ’ ಶಾಲೆಗೆ ಸೇರಿದ್ದಳೆಂದಿತ್ತು. ಮತ್ತೆ ಮತ್ತೆ ವರ್ಗಾವಣೆಯಾಗಿ ಊರು ಬದಲಾಗುತ್ತಿದ್ದರೆ ಚೈತ್ರಳ ಮುಂದಿನ ಓದಿಗೆ ತೊಂದರೆಯಾಗುತ್ತದೆಂದು ಅವರಪ್ಪ ಅಮ್ಮ ಅವಳನ್ನು ಅದೇ ಶಾಲೆಯ ಹಾಸ್ಟೆಲ್ಲಿಗೆ ಸೇರಿಸಿಬಿಟ್ಟಿದ್ದರೆಂದು ತುಂಬಾ ದುಃಖದಲ್ಲಿ ಬರೆದಿದ್ದಳು. ಹೊಸ ಶಾಲೆಯಲ್ಲಿರುವ ಹುಡುಗಿಯರು ತುಂಬಾ ಬಜಾರಿಯರೆಂದೂ, ಸ್ನಾನ ಮಾಡಲು ನೀರಿಗೆ ಬೆಳಿಗ್ಗೆ ಬೇಗ ಏಳಬೇಕಾಗುತ್ತದೆಂದೂ, ಊಟವೂ ರುಚಿಯಿಲ್ಲವೆಂದೂ...ಅವಳಿಗೇ ದಿನಾ ನಮ್ಮದೇ ನೆನಪೆಂದೂ...ಪತ್ರ ಅಂಟಿಸುವ ಜಾಗದಲ್ಲಿ ’ನಿನ್ನನ್ನು ನಾನು ಎಂದಿಗೂ ಮರೆಯುವುದಿಲ್ಲ’ ಎಂದೂ ಬರೆದಿದ್ದಳು. ಅವಳ ಪತ್ರ ಮತ್ತೆ ಅಳು ತರಿಸಿತ್ತು. ಅವರಪ್ಪ ಅಮ್ಮನಂತ ಕೇಡಿಗರು ಯಾರೂ ಇಲ್ಲವೆಂದು ನಾನು ಅಕ್ಕ ಬೈದುಕೊಂಡಿದ್ದೆವು.
ಆ ವರ್ಷ ಅವರಮ್ಮನಿಂದ ಒಂದೋ ಎರಡೋ ಟ್ರಂಕ್ ಕಾಲ್ ಬಂದಿದ್ದ ನೆನಪು. ಅದಾದ ಮೇಲೆ ಬದುಕು ಬೇಗಬೇಗನೆ ಹರಿದುಬಿಟ್ಟಿತ್ತು. ಅಕ್ಕ ದೊಡ್ಡವಳಾಗಿದ್ದಳು, ನನಗೆ ಬರೀ ಹೋಂವರ್ಕು! ನನ್ನ ಆಟದ ಸಮಯವೆಲ್ಲಾ ಪುಟ್ಟ ತಮ್ಮನ ಪಾಲು...ಸುಂದರ ಉಲ್ಕೆಯಂತೆ ಬಂದು ಆರೇಳು ವರ್ಷ ಸ್ನೇಹ-ಪ್ರೀತಿಯ ಒಡನಾಟ ಹಂಚಿಕೊಂಡಿದ್ದ ಚೈತ್ರ ಬದುಕಿನ ಬ್ರಹ್ಮಾಂಡದಲ್ಲಿ ಹಾಗೇ ಮರೆಯಾಗಿಹೋಗಿದ್ದಳು. ಈ ಸಂಜೆಯ ತನಕ!!
(ಮುಂದುವರಿಯುವುದು)