ಅಂಗಳ      ಮುಗುಳು ಮುಕ್ಕಳಿಸಿ
Print this pageAdd to Favorite
 

  

ನೆನಪಿನಂಗಳದಿಂದ...

ಡಾ. ರಾಜೇಗೌಡ ಹೊಸಹಳ್ಳಿ
 
(ಅಲ್ಲಲ್ಲಿ ಅಷ್ಟಷ್ಟನ್ನು ಹೆಕ್ಕುತ್ತಾ ಪೋಣಿಸುತ್ತಿರುವ ಮಾಲೆ)
 
 
೧) ಉಟ್ಟ ಸೀರೆ ಬಿಚ್ಚಿ ಒಗೆದಳು
 
ಹೊರಗಡೆ ಗಲಾಟೆಯಾದಂತಾಗಿ ಬಾಗಿಲು ತೆಗೆದು ಬಗ್ಗಿ ನೋಡಿದರೆ ಬರೀ ಲಂಗ ರವಿಕೆಯಲ್ಲಿದ್ದ ಒಬ್ಬ ಮಹಿಳೆ ನಮ್ಮ ಪಕ್ಕದ ಮನೆವೊಳಗೆ ಓಡಿ ಸೇರಿಕೊಂಡಳು. ’ಅಯ್ಯೋ! ನೀರಿನ ಟ್ಯಾಂಕಿಗೆ ಬಿದ್ದವರಂತೆ! ಯಾರಂತೆ! ಏನಂತೆ!’ ಜನರ ಗಲಾಟೆ. ನೀರಲ್ಲಿ ತೊಯ್ದು ಹೋಗಿ ಉಸಿರು ಬಿಡುತ್ತಿದ್ದವ ನನ್ನ ಭಾವ ಮೈದುನನೇ ಆಗಿದ್ದ! ಕಾಲೆಳೆಯುತ್ತಾ ಅವನು ಬಂದಾಗ ಅವನಕ್ಕನ ದಿಗಿಲು ನೋಡಬೇಕಿತ್ತು. ನಾವು ಆ ಸಮಯದಲ್ಲಿ ಬೇಲೂರಿನ ಮುಸ್ಲಿಂ ಒಬ್ಬರ ಮನೆಯಲ್ಲಿ, ಅವರದೇ ಪಕ್ಕದ ಮನೆಯಲ್ಲಿ ಬಾಡಿಗೆಗಿದ್ದವು. ತುಸು ದೂರದಲ್ಲಿ ಟ್ಯಾಂಕು ಇತ್ತು.
 
 
ಈ ಅಕ್ಕನ ತಮ್ಮ ವೆಂಕಟೇಶ ಹೆಗ್ಗಡೆ, ಶಿವಮೊಗ್ಗದಲ್ಲಿ ಇಂಜಿನಿಯರಿಂಗ್ ಓದುತ್ತಾ ಇದ್ದವನು, ರಜೆಗೆ ಬಂದು, ಸಂಜೆ ಪ್ಯಾಂಟು ಷರಟು ಬೂಟು ಹಾಕಿ ವಾಕಿಂಗ್ ಹೋಗಿದ್ದವನು ಹೀಗೇಕೆ ಟ್ಯಾಂಕಿಗೆ ಬಿದ್ದ?! ಇವನೇ ಬಿದ್ದಿದ್ದಲ್ಲ. ನೆಲದ ಮೇಲೆ ಎರಡಾಳುದ್ದ ಮಾಡಿದ್ದ ಅಗಲ ಮುನಿಸಿಪಾಲಿಟಿ ನೀರಿನ ಸಿಮೆಂಟ್ ಟ್ಯಾಂಕು ಅದು. ಅದರ ಸುತ್ತಲೂ ಅಲ್ಲಲ್ಲಿ ಹರಿದ ತಂತಿಬೇಲಿ. ಶಾಲೆಯ ಇಬ್ಬರು ಮಕ್ಕಳು ನೀರು ಕುಡಿಯಲೋ, ತುಂಟಾಟಕ್ಕೋ ಅದರ ಹತ್ತಿರ ಹೋಗಿದ್ದಾಗ ಒಬ್ಬ ಅದರಲ್ಲಿ ಜಾರಿಬಿದ್ದಿದ್ದ. ಮತ್ತೊಬ್ಬ ಅಯ್ಯಯ್ಯೋ ಎಂದು ಕೂಗಿದ. ವಾಕಿಂಗ್ ಹೋಗುತ್ತಿದ್ದ ಹೆಗ್ಗಡೆ ಪಟಾರನೆ ನೀರಿಗೆ ಹಾರಿದ. ಹೀಗೆ ಹಾರಿದವನ ಕುತ್ತಿಗೆ ಮೇಲೆ ಮುಳುಗುತ್ತಿದ್ದ ಬಾಲಕ ಹತ್ತಿ ಕುಳಿತುಬಿಟ್ಟ. ತುಂಬಿದ ನೀರಿನ ಟ್ಯಾಂಕಿನ ಗೋಡೆ ಹತ್ತಲು ಸುಲಭವಾಗಿಲ್ಲ. ಇಬ್ಬರೂ ಮುಳುಗಿ ಹೋಗಲು ಕೆಲವು ಸೆಕೆಂಡುಗಳು ಬಾಕಿ. ಇದನ್ನು ನೋಡಿದ, ಅದೇ ದಾರೀಲಿ ನಡೆದು ನಮ್ಮ ಪಕ್ಕದ ಮನೆಗೆ ಬರುತ್ತಿದ್ದ ಅಲ್ಲಿನ ಒಬ್ಬ ಗ್ರಾಮೀಣ ಮುಸ್ಲಿಂ ಮಹಿಳೆಯ ಸಮಯಪ್ರಜ್ನೆ ಕೆಲಸ ಮಾಡಿತು. ಉಟ್ಟ ಸೀರೆ ಬಿಚ್ಚಿ ಕೂಗಿದಳು. ಸೀರೆಯನ್ನು ಟ್ಯಾಂಕಿಗೆ ಒಗೆದಳು. ಹೆಗಡೆ ಎಸೆದ ಸೀರೆಯ ತುದಿ ಹಿಡಿದ. ಅಷ್ಟರಲ್ಲಿ ಯಾರೋ ಓಡಿ ಬಂದರು. ಈಚೆ ಸೆರಗು ತುದಿ ಹಿಡಿದು ಎಳೆದರು. ಎರಡು ಜೀವ ಉಳಿದವು. ಹಾಗೆ ಎರಡು ಜೀವ ಉಳಿಸಿದ ಈ ಮುಸ್ಲಿಂ ಮಹಿಳೆ ಒಂದು ಪಕ್ಷ ಒಳಲಂಗ ಇಲ್ಲದಿದ್ದರೂ ಸೀರೆ ಬಿಚ್ಚಿ ಎಸೆದು ಬಿಡುತ್ತಿದ್ದಳೋ ಏನೋ! ಅನಂತರ ಮಾತ್ರ ನಾಚಿ ಓಡಿದ್ದಳು.
 
ಇಂಥಾ ಹೆಗಡೆಯನ್ನು ಅಭಿನಂದಿಸಲು, ಮಗನ ಬದುಕಿಸಿದ ಸಾಹಸಕ್ಕೆ ಋಣಿ ಹೇಳಲು, ಹುಡುಗನ ತಂದೆ ತಾಯಿ ಸಂಜೆ ಬಂದು ಕಣ್ಣೀರ ಹನಿಗಳಲ್ಲಿ ಅಭಿನಂದಿಸಿದರು. ಇಷ್ಟರಲ್ಲಾಗಲೇ ಸನ್ನಿವೇಶದ ದಿಗಿಲಿಗೆ ಗಾಬರಿಯಾಗಿ ಚೇತರಿಸಿಕೊಳ್ಳುತ್ತಿದ್ದ 'ಧೀಮಂತ ಹೆಗಡೆ' ಮನೆ ಮಹಡಿ ಮೇಲೆ ಅವರು ಹೋದ ಮೇಲೆ ಹೇಳಿದ ’ಅಯ್ಯೋ ಥ್ಯಾಂಕ್ಸ್ ಇರಲಿ..ಆ ಹುಡುಗ ಇನ್ನೇನು ನನ್ನೇ ತೆಗೆದಿದ್ದ’ ಅಂತ. ಆ ಮುಸ್ಲಿಂ ಮಹಿಳೆಯ ಸಮಯ ಪ್ರಜ್ಞೆಯನ್ನು ಈಗ ನೆನೆಸಿಕೊಂಡರೆ ಆಕೆ ರಾಷ್ಟ್ರಪತಿಯಿಂದ ಸನ್ಮಾನ ಪಡೆಯಲು ಯೋಗ್ಯವಾಗಿದ್ದಳಲ್ಲವೆ!
 
 
ಜೀವಪರ ಪ್ರಜ್ಞೆಗೆ ಹಿಂದೂವಾದರೇನು! ಮುಸ್ಲಿಂ ಆದರೇನು!
 
 
೨) ಇಂಗ್ಲಿಷ್ ಮೀಡಿಯಂಗೆ ಸೇರಿದೆ
 
ನಾನು ಹಳ್ಳಿ ಹುಡುಗ. ನನ್ನೂರಿನ ಬೇಸಿಕ್ ಪ್ರೈಮರಿ ಶಾಲೆ ಪಾಸಾಗಿ ಆಲೂರು ಪೇಟೆ ಮಿಡಲ್ ಸ್ಕೂಲಿಗೆ ಸೇರಲು ಹೊರಟಾಗ ನನ್ನಜ್ಜನಿಗೆ ನಾನು ಲಂಡನ್ನಿಗೆ ಹೋದಷ್ಟು ಖುಷಿ ತಂದಿತು. ಆಗ ಎಂಟನೆ ಕ್ಲಾಸ್ವರೆಗೆ ಮಿಡಲ್ ಸ್ಕೂಲು. ನನಗೆ ೬೦ ಮಾರ್ಕು ಇಂಗ್ಲಿಷಿನಲ್ಲೇ ಬರಬೇಕೆ! ’ಏನ್ರಿ ರಂಗಪ್ಪನವರೆ, ನಿಮ್ಮ ಮಗ ಫಸ್ಟ್ ಕ್ಲಾಸ್ ತೆಗೆದವನೆ...ಹಾಸನಕ್ಕೆ ಇಂಗ್ಲಿಷ್ ಮೀಡಿಯಂಗೆ ಸೇರಿಸಿಬಿಡಿ, ಆಲೂರಿನಲ್ಲಿ ಇಂಗ್ಲಿಷ್ ಮೀಡಿಯಂ ಇಲ್ಲ’ ಎಂದು ಹೆಡ್ ಮಾಸ್ಟರೇ ಹೇಳಿದ ಮೇಲೆ ನನ್ನ ಮಕ್ಕಳು ಹೆಚ್ಚೆಚ್ಚು ಓದಬೇಕು ಎಂಬ ಕನಸಿನ ಅಪ್ಪನ ಮುಖ ಊರಗಲವಾಯಿತು. ಇನ್ನು ಹಾಗೆ ಮಾಡದಿರುವುದುಂಟೆ! ಇಂಗ್ಲಿಷ್ ಮೀಡಿಯಂಗೆ ಸೇರಿದೆ. ಹಾಸನ ನೋಡಿದ್ದು ಅದೇ ಮೊದಲು. ಆಗ ತಾನೇ ಹಾಸನ ಜಿಲ್ಲೆಗೆ ಬಂದಿದ್ದ ಸರ್ಕಾರಿ ಕೆಂಪು ಬಸ್ಸಿನಲ್ಲಿ ದಿನಾ ಪಯಣ. ಸರ್ಕಾರಿ ಹೈಸ್ಕೂಲಿನ ನೆಲದ ಮೇಲೆ ಕುಳಿತು ಕೇಳುವ ಮೇಷ್ಟರ ಇಂಗ್ಲಿಷ್ ಮೀಡಿಯಂನ ಸೈನ್ಸ್, ಮ್ಯಾಥ್ಸು, ಆಲ್ಜೀಬ್ರಗಳೆಲ್ಲಾ ಜೀಬ್ರಾ ಜೀಬ್ರಾ ಆಗಿ ಎಸ್ ಎಸ್ ಎಲ್ ಸಿ ಫೇಲು. ಸಪ್ಲಿಮೆಂಟರಿ ಫೇಲು. ಹಳ್ಳಿ ಸ್ಕೂಲಿನಲ್ಲಿ ಇಂಗ್ಲಿಷು ಉರುಹೊಡೆದ ತಪ್ಪಿಗೆ ಇಂಗ್ಲಿಷು ಮೀಡಿಯಂ ಸೇರಿ ಇಲ್ಲಿ ಇಂಗ್ಲಿಷೇ ಫೇಲು.
 
ಅಂತೂ ಇಂತೂ ಪಾಸಾದ ಮೇಲೆ ನಮ್ಮಪ್ಪ ಬಿಡೋದುಂಟೆ! ಅದರಲ್ಲೂ ಹಾಸನದಲ್ಲೆ ಇಂಜಿನಿಯರಿಂಗ್ ಕಾಲೇಜು ಬೇರೆ ಪ್ರಾರಂಭವಾಗಿತ್ತು. ಘಸ್ನಿ ಮಹಮದನ ದಂಡೆಯಾತ್ರೆಯಂತೆ ಪುನಃ ಸೈನ್ಸ್, ಮ್ಯಾಥ್ಸು ಫೇಲು ಆಗಿ, ಲೆಕ್ಕ ಅರ್ಥವಾಗದೆ ಜಾಮಿಟ್ರಿಯನ್ನು ಉರು ಹೊಡೆದು ಪಾಸಾಗಿ ನನ್ನಪ್ಪನ ಕೈಗೆ ಸಿಕ್ಕದೆ ಓಡಿ ಹೋಗಿ ಕನ್ನಡ ಬಿ.ಎ. ಸೇರಿ, ವಿಶಾಲ ಕರ್ನಾಟಕದ ಕನ್ನಡಮ್ಮನ ಭಾಷೆಯನ್ನು ಶಿರಸಾವಹಿಸಿ ಅರಗಿಸಿಕೊಳ್ಳುತ್ತಾ ಪಂಪನಿಂದ ಕುವೆಂಪುವರೆಗೆ ಅರೆದು ಕುಡಿಯೋದು ಹೇಗೆ? ಎಂದು ಕಲಿತು ಬಿಟ್ಟೆ ಅನ್ನಿ.
 
 
 
೩) ನೀನು ಎಂಎ ಓದದೆ ಹೋದರೆ ನಾನೂ ಬಿಟ್ಟುಬಿಡ್ತೀನಪ್ಪ
 
ಮಡಿಮಡಿಯಾದ ಬಿಳಿ ಜುಬ್ಬ ಪೈಜಾಮ ಹಾಕುತ್ತ, ಹಣೆ ಮೇಲೆ ಗಂಧ ಇಡುತ್ತಾ, ನೀಟಾಗಿ 'ಇವನೂ ಹಾರುವನೋ' ಎಂಬಂತೆ ಅನುಮಾನ ಬರಿಸುವ, ಹಳಗನ್ನಡ ನಡುಗನ್ನಡ ಪಾಠಗಳನ್ನೆಲ್ಲಾ ತದೇಕಚಿತ್ತದಲ್ಲಿ ಆಲಿಸುವ ಈ ಗೌಡನ ಹೆಸರು ರಾಮನಾಥ. ಯಗಟಿ ಗ್ರಾಮದ ಹಾರುವಯ್ಯ-ಗೌಡ ರಾಮನಾಥನಿಗೆ ಬರಿಯ ಬಾಡು ಬಗ್ರಿ ತಿನ್ನುವ ಗೌಡನಾಗಿ ಮಾತ್ರ ಕಾಣದೆ ತುಸು ಮೇಲಾಗಿರುವ ಆಸೆ. ಅವರವರ ಪದ್ಧತಿ ಅವರವರ ಮನೆಯಲ್ಲಿ ಅಲ್ಲವೆ ಎಂಬಂತೆ ಕಂಡಿರಬೇಕು. ಎಷ್ಟಾದರೂ ಅರಕಲಗೂಡು ಕಡೆಯ ಸಂಕೇತಿ ಬ್ರಾಹ್ಮಣರ ಅಡಿಕೆ ತೋಟದ ಕೃಷಿಕರ ಮಕ್ಕಳಲ್ಲವೆ! ಅವನು ಇಡೀ ಶಬ್ದಮಣಿದರ್ಪಣವನ್ನೂ ಬಾಯಿಪಾಠದಂತೆ ಹೇಳುವ ವೇದಮೂಲದ ಶೂರನಾದರೆ, ನಾನು ವಿಚಾರ ವಿಮರ್ಶೆ, ಪಂಪ-ರನ್ನರನ್ನು ಹೊಗಳುವ ಧೀರನಾಗಿ ಬಿಟ್ಟೆ. ನಾವಿಬ್ಬರೂ ಇಡೀ ಬಿ.ಎ. ಕ್ಲಾಸಿನಲ್ಲಿ ಎಲ್ಲಾ ಸಬ್ಜೆಕ್ಟುಗಳನ್ನೂ ಒಂದೇ ಸಾರಿ ಪಾಸು ಮಾಡುತ್ತಿದ್ದ ಮಾದರಿಗಳಾಗಿ ಎಲ್ಲರ ಕಣ್ಣಿಗೆ ಬಿದ್ದೆವು.
 
 
ಮಳೆಗಾಲ ಪ್ರಾರಂಭವಾಗಿ ನಾಟಿ ಗದ್ದೆ ಉಳುತ್ತಾ ನನ್ನೂರ ಗದ್ದೆ ಹಳದಲ್ಲಿ ಉಳುವ ಎತ್ತುಗಳನ್ನು ಗದ್ದಲಿಸುತ್ತಿದ್ದಾಗ ಗದ್ದೆ ಬದುವಿನ ಮೇಲೆ ರಾಮನಾಥ ನಿಂತಿದ್ದಾನೆ! ’ಏನೋ ಗೌಡ, ಯಾಕೋ? ಎಂ.ಎ. ಸೇರಲ್ಲವೇನೋ’ ಎಂದು ನಾನುಳುತ್ತಿದ್ದ ಕೆಸರು ಗದ್ದೆ ಕುರಿತು, ತಾನು ಸಹಾ ಹೀಗೆ ಉತ್ತು ಬಂದಿದಿನಿ ಕಣೋ ಎಂದು ಹೇಳುತ್ತಲೇ, ನೋಡಪ್ಪ ನನಗೆ ಮೈಸೂರು ಮಾನಸ ಗಂಗೋತ್ರಿಲಿ ಸೀಟು ಸಿಕ್ಕಿದೆ. ನಿನಗೆ ಮಂಗಳೂರಿನಲ್ಲಂತೂ ಸಿಕ್ಕೇ ಸಿಗುತ್ತೆ ಕಣೋ, ಇನ್ನೊಂದು ಪರ್ಸೆಂಟ್ ನಿನಗೂ ಜಾಸ್ತಿ ಬಂದಿದ್ದರೆ ಮೈಸೂರಲ್ಲೆ ಸಿಕ್ತಾ ಇತ್ತಪ್ಪ...ಇರಲಿ. ನೀನು ಎಂ.ಎ. ಓದದೇ ಹೋದರೆ ನಾನೂ ಬಿಟ್ಟುಬಿಡ್ತೀನಪ್ಪ. ಅದೂ ಅಲ್ಲದೆ ನೀನು ಓದೋದಾದರೆ ನಾನು ಕೂಡಾ ಮಂಗಳೂರಿಗೇ ಬರ್ತೀನಪ್ಪ, ಅಂದವನು ಹಾಗೇ ಮಾಡಿಬಿಟ್ಟ! ಮುಂದೆ ಓದಲು ಇಲ್ಲದ ಹಣವನ್ನು ಅಪ್ಪ ಹೊಂದಿಸಿದ್ದು ಆಯ್ತು. ಎಷ್ಟಾದರೂ ಓದಿಸೋ ಚಟ ಅಲ್ಲವೆ!
 
 
ಗೌಡ-ಬ್ರಾಹ್ಮಣನು ಮಂಗಳೂರು ಪಟ್ಟಣದಲ್ಲಿ ಅಲೋಶಿಯಸ್ ಕಾಲೇಜಿನ ಸ್ನಾತಕೋತ್ತರ ಕೇಂದ್ರದಲ್ಲಿ ಪ್ರೊಫೆಸರುಗಳ (ಎಸ್.ವಿ. ಪರಮೇಶ್ವರಭಟ್ಟ, ವಿವೇಕ ರೈ, ಲಕ್ಕಪ್ಪಗೌಡರು) ಪಾಠ ಕೇಳುತ್ತ ಹತ್ತಿರದ ಕಂಬಳ ಗದ್ದೆ ಬಯಲಿನ ಬದಿಯ ಬಾಡಿಗೆ ರೂಮಿನಲ್ಲಿ ಅಡಿಗೆ ಮಾಡುಣ್ಣುತ್ತ, ಘಟ್ಟದ ಕೆಳಗಿನ ಬೆಡಗು ಬಿನ್ನಾಣಗಳನ್ನೆಲ್ಲಾ ಬದಿಗೆ ಸರಿಸಿಕೊಂಡು ಇರಬೇಕಾದರೆ ನಮ್ಮ ಕಾಲೇಜು ಕೊಣಾಜೆ ಎಂಬ ಬೋರೆ ಮೇಲಕ್ಕೆ ಸ್ಥಳಾಂತರವಾಗಬೇಕೆ!? ಆಯ್ತು.
 
 
ನಾನೊಮ್ಮೆ ಊರಿಗೆ ಬಂದಿದ್ದ ಸಮಯ. ಕ್ಲಾಸಿನಲ್ಲಿ ರಾಮನಾಥನು ಪ್ರಶ್ನೆಯೊಂದಕ್ಕೆ ಹೇಳಿದ ಉತ್ತರಕ್ಕೆ ಸರಿಯಾದ ಮರ್ಯಾದೆ ಸಿಗದೆ ಸಮವಯಸ್ಸಿನ ಹುಡುಗೀರ ಎದುರು ಅವಮಾನವಾದಂತಾಗಿ ಈ ನನ್ನ ಸ್ನೇಹಿತನಿಗೆ ತಲೆ ಲೂಜಾದಂತಾಗಿ ನಿದ್ದೆ ಬಿಟ್ಟೇ ಬಿಟ್ಟು, ನಾನು ಊರಿಂದ ಬಂದು ನೋಡಿದಾಗಲೂ ’ಲೇ ಗೌಡ ನೀನ್ಯಾಕೋ ಊರಿಗೆ ಹೋದೆ? ನಾನೇನಪ್ಪಾ ತಪ್ಪು ಹೇಳಿದೆ?! ಆ ಮಾಸ್ತರು ಯಾಕಪ್ಪಾ ಹೀಗೆ ಅವಮಾನ ಮಾಡಿದ್ರು!’ ಎರಡು ದಿನ ಕಳೆದರೂ ಬಡಬಡಿಸುತ್ತಲೇ ಇದ್ದ. ’ಆಯ್ತು ಸುಮ್ಮನಿರೋ’ ಅಂದು ಸಮಾಧಾನ ಮಾಡಿದೆ. ಆಗ ಸುಮ್ಮನೇನೋ ಆದ. ಅವನಪ್ಪನೊಡನೆ ಒಂದು ತಿಂಗಳು ಊರಿಗೂ ಹೋಗಿ ವಿಶ್ರಾಂತಿ ತೆಗೆದುಕೊಂಡು ಬಂದ. ಎಂ ಎ ಪಾಸಾದ. ಕೆಲಸಕ್ಕೆ ಕೊಣನೂರಿನಲ್ಲಿ ಕಾಲೇಜು ಅಧ್ಯಾಪಕನಾಗಿ ಸೇರಿಯೂ ಬಿಟ್ಟ. ಬದುಕಿನ ದಾರಿಯಲ್ಲಿ ನಾನೆತ್ತಲೋ ಅವನೆತ್ತಲೋ ಹಂಚಿ ಹೋದಾಗ ಸುದ್ದಿ ತಿಳಿದೆ! ಅವನು ಮತ್ತೆ ಏನೋ ಮನಸ್ವಾಸ್ಥ ಕೆಡಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಅಂತ. ನಾವಿಬ್ಬರೂ ಕಂಬೈಂಡ್ ಸ್ಟಡಿ ಮಾಡುವಾಗಿನ ಸಮಯದ ನೆನಪಿನ ಫೋಟೋದಲ್ಲಿ ಈ ಗೌಡನ ಪಕ್ಕ ಹಾರುವಯ್ಯ ನಗುತ್ತಲೇ ಇದಾನೆ. ಈ ದೇಶದಲ್ಲಿ ಆಗಿದ್ದು ಆಗಿಹೋಯ್ತು. ಶೂದ್ರ ಬ್ರಾಹ್ಮಣರೆಂಬ ಮತ್ಸರ ಬೇಕೆ ಎಂಬುದಕ್ಕೆ ಇದಕ್ಕಿಂತ ಉದಾಹರಣೆ ಬೇಕೆ?!
 
 
 
೪) ಊರು ಅದೆಂತಾ ಕ್ರೂರಿ
 
ಕಲ್ಲು ನೀರು ಕರಗೋ ಹೊತ್ತಿನ ನಡುರಾತ್ರಿಯಲ್ಲಿ ದೊಡ್ಡಯ್ಯನಿಗೆ ಮಲಗಿದಾಗ ನರಿ ಬೊಳ್ಳಿಕ್ಕುವುದು, ಗೂಬೆ ಕೂಗುವುದು, ಮೊದಲ ಕೋಳಿ ಕೂಗುವುದು ಎಲ್ಲವೂ ಕೇಳುತ್ತಿದೆ. ತನ್ನ ಏನೂ ಅರಿಯದ ಮಗು ಮಾತ್ರ ನಿದ್ದೆ ಮಾಡುತ್ತಲೇ ಇದೆ. ಕತ್ತಲೆಯಲ್ಲೆ ದೊಡ್ಡಯ್ಯನ ಕಣ್ಣಲ್ಲಿ ನೀರು ಇಳಿಯುತ್ತಲೇ ಇದೆ. ತನ್ನೋಳು ಸಣ್ಣಿ, ಮಗ್ಗುಲ ಮಗುಬಿಟ್ಟು ಪೇಟೆಯ ಸಾಬರ ಕೇರಿ ಸೇರಿ ಮೂರು ದಿನವಾಗಿದೆ.
 
ಅಂದು ತನ್ನೋಳು ಅಂಥಾದೇನು ಮಾಡಿದ್ದಳು! ಅವಳು ಹಾದರ ಮಾಡಿದ್ದನ್ನು ನಾನೇ ಕೇಳದೆ ಇರುವಾಗ ಊರಿಗೇಕೆ ಉಸಾಬರಿ. ಬೇರೆ ಕೇರಿಲಿ ಇಂಥಾದ್ದೇನು ನಾನು ಕಾಣೆನೆ! ಊರ ಮುಂದಿನ ಕೋಡುಗಲ್ಲಿಗೆ ಅವಳನ್ನು ಕಟ್ಟಿ, ಸೀರೆ ಬಿಚ್ಚಿ ಹೋಗುವರೆಗೂ ಹೋದ ಬಂದವರೆಲ್ಲಾ ಏಟು ಹಾಕುವಾಗ ನಾನು ಹೊಲೆಗೇರಿ ಒಳಗಿಂದ ಹೊರಡದಂತಾ ಸ್ಥಿತಿ. ಊರು ಅದೆಂತಾ ಕ್ರೂರಿ. ಹೊಲೆಗೇರಿ ಅಂದರೆ ಅದೆಷ್ಟು ಸಸಾರ.
 
 
ಹೀಗೆಲ್ಲಾ ನೊಂದು ಬೆಂದಿರುವ ಈ ದೊಡ್ಡಯ್ಯನಂತವರೊಡನೆ ಓದೋ ಹುಡುಗರಾದ ನನ್ನಂತೋರು ದಸರಾ-ಬೇಸಿಗೆ ರಜೆಯಲ್ಲಿ ಹಂಗಾಮಿ ಬೇಸಾಯ ಮಾಡಲು ಹೋಗುತ್ತಿದ್ದದಕ್ಕೆ ಬಲವಾದ ಕಾರಣ-ದೊಡ್ಡಯ್ಯನಂತ ಜೀತದವರ ಹಸಿಹಸಿ ಅನುಭವಗಳನ್ನು ಸವಿದುಣ್ಣುವುದಕ್ಕೆ! ಇಂಥಾ ದೊಡ್ಡಯ್ಯ ಒಮ್ಮೊಮ್ಮೆ ಏನೆಲ್ಲಾ ನೆನಪುಗಳನ್ನು ಬಿಚ್ಚುತ್ತಿದ್ದ! ಅವನದು ಹರೆಯ. ಕಲ್ಲು ಗುದ್ದಿ ನೀರು ತೆಗೆಯೋ ವಯಸ್ಸು. ಜವರಿ ಎಂಬೋಳು ಗಂಡುಳ್ಳೋ ಗರತಿ. ಇವನ ಹರೆಯದ ಹಳೇ ಗೆಳೆತನ ಮರೆತಿರಲಿಲ್ಲವಂತೆ. ಏನಲೋ ದೊಡ್ಡ ಈಗಲೂ ಏನಾರ ವ್ಯವಹಾರ ಇಟ್ಟುಕೊಂಡಿಯೋಗಲಾ? ಎಂದು ಇವನ ಜೊತೆಗಾರರು ಕೆಣಕಿದ್ದುಂಟಂತೆ. ಸುಮ್ಮನೆ ನಡಿರಲೋ ಹಳತೆಲ್ಲಾ ಮರೆಯಲಾದೀತೇನೋ ಅಂದ ದೊಡ್ಡಯ್ಯನಿಗೆ; ಅದು ಹೆಂಗಲಾ ನಂಬೋದು; ನೋಡಪ್ಪಾ ಅವಳ ತುರುಬ ಕತ್ತರಿಸಿಕೊಂಡು ತಂದು ತೋರಿಸಿದರೆ ನಂಬಬಹುದಪ್ಪಾ ಎಂದು ಸವಾಲು ಹಾಕಿದರಂತೆ. ಅವಳ ಗಂಡ ಇಲ್ಲದ ದಿನ ನೋಡಿ, ಅವಳ ಜೊತೆಗಿದ್ದ ದೊಡ್ಡಯ್ಯ, ಹಾಗೇ ಮಾಡೋದೆ! ಬೆಳಗಾದರೆ ಜವರಿ ಏನು ಹೇಳಿಯಾಳು! ಅಯ್ಯಯ್ಯೋ ಇಲಿ ತಲೆ ಕುರುಕಿ ಬಿಟ್ಟಿದೆಯಲ್ಲಪ್ಪೊ ಅಂತ ಸುದ್ದಿ ಹಬ್ಬಿಸಿದಳಂತೆ! ಇಂಥಾ ದೊಡ್ಡಯ್ಯ ತಾಯಿ ಇದ್ದೂ ತಬ್ಬಲಿಯಾಗಿದ್ದ ಮಗುವನ್ನು ದೇಹವೆರಡು ಜೀವವೊಂದು ಎಂಬಂತೆ ಜೋಪಾನ ಮಾಡುತ್ತಿದ್ದುದೇ ಈಗಲೂ ನೆನಪು. ಅವನಾಕೆ ಆಲೂರು ಸಂತೇಲಿ ಸಾಬುವಿನ ಪಕ್ಕದಲ್ಲಿ ಕುಳಿತು ಬಳೆ ಯಾಪಾರವನ್ನು ಮಾಡುತ್ತಾ, ಅವಳ ಮಗ ಮಾಜಿ ಗಂಡನೊಡನಿರುವಾಗ ಗಮನಿಸಿ ಅದೆಷ್ಟು ಕೊರಗಿರಬೇಕು! ಅದೂ ಒಂದು ನೆನಪು. 
 
 
 
(ಮುಂದುವರಿಯುವುದು)
 
 
 
 

ಬೀಜವಿಲ್ಲದ ನಕ್ಷತ್ರ

 
ಶ್ರೀಮತಿ ರೂಪಾ ಹಾಸನ 
 
 
 
ಅದರ ತಲೆಗೆ ಅದೇ ಕೊನೆ
ವಂಶೋದ್ಧಾರದ ತೆವಲುಗಳಿಲ್ಲ
ಪೀಳಿಗೆ ಪೀಠದ ಅಮಲುಗಳಿಲ್ಲ
ಕಿರೀಟ ಶಿರೋಭಾರಗಳ ಉರುಲುಗಳೂ ಇಲ್ಲ
ಇಲ್ಲಿಗೇ ಅಂತ್ಯ ಎಲ್ಲ.
 
 
ಇತಿಹಾಸದ ಕೊಂಡಿ ಕಳಚುತ್ತದೆ
ಇಲ್ಲಿಯೇ ಹೀಗೆ
ಉಳಿದ ಪಳೆಯುಳಿಕೆಗಳೂ
ಭೂಮಿಗೆ ಬೂದಿಯಾಗುರುಳಿ
ಅವಶೇಷ ನಿಶ್ಯೇಷ
ಶತಶತಮಾನದ ಚಕ್ರಾಧಿಪತ್ಯ
ದಾಖಲಾಗದೇ ನೆನಪಿಗಿಲ್ಲದೇ
ಹೇಳ ಹೆಸರಿಲ್ಲದೇ ನಿರ್ನಾಮ.
 
 
ಇಲ್ಲಿ ಈ ಮರ್ತ್ಯಲೋಕದಲ್ಲಿ
ಇರುವೆಯಾಕಳಿಕೆ
ಮಿಡತೆ ನರಳಿಕೆ
ಎರೆ ಹುಳುವಿನ ತೆವಳಿಕೆ
ಕ್ಷಣವೂ ಎವೆ ಇಕ್ಕದೇ
ದಾಖಲಾಗುವ ಈ ಅನಾದಿಯಲ್ಲಿ
ಇರುವೆ ಹೆಜ್ಜೆ ಮೇಲೊಂದು ಹೆಜ್ಜೆ
ಮಿಡತೆ ಮೇಲಿನ್ನೊಂದು ಮಿಡತೆ
ಸತ್ತ ಎರೆಹುಳುವಿನ ದಾಖಲೆ
ಮುರಿಯಲಿನ್ನೊಂದರ ಸಿದ್ಧತೆ.
ಉದ್ದಾನು ಉದ್ದ
ಸರತಿ ಸಾಲಿನ ವಿಜಯೋನ್ಮಾದದಲ್ಲಿ
ಉರುಳುತ್ತದೆ ಚಕ್ರ
ತಲೆ ಬದಲಾದರೂ ಬದಲಾಗದ ಹಾರ!
 
 
ಬೀಜವಿಲ್ಲದ ನಕ್ಷತ್ರಕ್ಕೆ
ನಪುಂಸಕತೆಯ ಶಾಪ
ಪುಷ್ಪವೂ ಇಲ್ಲ ಫಲವೂ ಇಲ್ಲ
ಅದೇ ಮೊದಲು ಅದೇ ಕೊನೆ
ಇರುವು ಇಲ್ಲದಿರುವುದು ನಿರಾಳ.
 
 
  

 
 
 

 
 
 
 
 
Copyright © 2011 Neemgrove Media
All Rights Reserved