ಗಲ್ಫ್ ತೈಲ ಸೋರಿಕೆ : ಭೋಪಾಲ್ ವಿಷಾನಿಲ ಸೋರಿಕೆ

  
ಇಪ್ಪತೈದು ವರ್ಷಗಳ ಹಿಂದೆ ಒಮ್ಮೆ ಕ್ಷಣಗಳಲ್ಲಿ ಘಟಿಸಿ ಜನ, ಮನ, ಜಾನುವಾರು, ಜಲ, ಭೂಮಿ, ಜೀವನವನ್ನೆಲ್ಲಾ ಸುತ್ತಿ ಸುಳಿದು ನುಂಗಿ, ನುರಿದು, ಕೆಡಿಸಿ ಹೋಗಿದ್ದ...ಈಗಲೂ ಭೋಪಾಲಿನ ಕದಗಳ ಸಂದಿಯಿಂದಲೋ, ರಕ್ತನಾಳಗಳ ಮೂಲೆಗಳಿಂದಲೋ, ಪಕ್ಕದ ಕಾಂಪೌಂಡ್ ನ ಹಿಂದಿನಿಂದಲೋ, ಕಾಲ್ಬೆರಳಲ್ಲಿ ನೆಲ ಕೆರೆದಾಗಲೋ, ಗುಡಿಗೆ ಹೋಗಿ ದೀಪಹತ್ತಿಸಲು ಬೆಂಕಿಕಡ್ಡಿ ಗೀರಿದಾಗಲೋ ಧುತ್ತೆಂದು ಎದುರಿಗೆ ಬಂದುಬಿಡುವ, ಸಂತೃಪ್ತಿಯೇ ಆಗದ ಪ್ರೇತದಂತಿರುವ...

ಕೈಗಾರಿಕಾ ಇತಿಹಾಸದ ಅತ್ಯಂತ ದಾರುಣ ಮಾರಣ ಹೋಮ...ಭೋಪಾಲ್ ನಲ್ಲಿ ನಡೆದ ಮೀಥೈಲ್ ಐಸೋಸೈನೇಟ್ ಎಂಬ ವಿಷಾನಿಲ ಸೋರಿಕೆ ಪ್ರಕರಣವನ್ನು ನೆನಪಿಸಿಕೊಳ್ಳಲು ಈ ಪ್ರಯತ್ನ.
ಕಾಲು ಶತಮಾನದ ಹಿಂದೆ ಆಗಿದ್ದು ಈಗ ಯಾಕೆ ಅಂತ ಕೆಲವರಿಗೆ ಅನ್ನಿಸಬಹುದು. ಕಾಲು ಶತಮಾನಗಳ ಹಿಂದೆ ನಿಮಿಷಗಳಿಗಷ್ಟೇ ಹೊರ ಬಂದಿದ್ದ ಮೀಥೈಲ್ ಐಸೋಸೈನೇಟ್ ಎಂಬ ರಾಕ್ಷಸನಿಗಿನ್ನೂ ಹಸಿವು ತಣಿದಿಲ್ಲ. ೧೯೮೪ರ ಡಿಸೆಂಬರ್ ೨ರ ಮಧ್ಯರಾತ್ರಿ ಮಲಗಿ ಕನಸು ಕಾಣುತ್ತಿದ್ದಂತೇ ಉಸಿರು ಬಿಗಿದ ಸಾವಿರಾರು ಕಣ್ಣುಗಳ ಅರೆಕನಸಿನ ಕೋಪಕ್ಕಿನ್ನೂ ಉತ್ತರ ಸಿಕ್ಕಿಲ್ಲ. ಬದಲಿಗೆ ಅಂತಹ ಬ್ರಹ್ಮ ರಾಕ್ಷಸರು ಕೇಳದೆಯೇ ಪದೇ ಪದೇ ಬೇರೆ ಬೇರೆ ರೂಪದಲ್ಲಿ ನಮಗೆ ಭೇಟಿ ಕೊಡುತ್ತಿದ್ದಾರೆ. ಭಕ್ಷಿಸುತ್ತಿದ್ದಾರೆ. ಅವರ ಸಡನ್ ಭೇಟಿಗಳ ಅರಿವು ನಮಗಿರಲಿ. ಅವರನ್ನು ಆವಾಹನೆ ಮಾಡಿಕೊಳ್ಳುತ್ತಿರುವ, ಹುಚ್ಚು ಮಾಂತ್ರಿಕರ ಸುಳಿವು ನಮಗಿರಲಿ ಎಂಬುದು ನಮ್ಮ ಆಶಯ.
 
ಅಂದಿನ ಯೂನಿಯನ್ ಕಾರ್ಬೈಡ್ ಕಾರ್ಪೋರೇಷನ್ ಎಂಬ ಕಂಪನಿಗೆ ಮೀಥೈಲ್ ಐಸೋಸೈನೇಟ್ ನ ನಿಜ ನಿರ್ನಾಮಕಾರೀ ಶಕ್ತಿಯ ಬಗ್ಗೆ ಚನ್ನಾಗಿ ತಿಳಿದಿತ್ತು. ಈ ಅಮೆರಿಕನ್ ಕಂಪನಿ ಭಾರತಕ್ಕೆ ಬಂದಿದ್ದು ನಮ್ಮಲ್ಲಿ ಆಗ ಆಗುತ್ತಿದ್ದ ಹಸಿರು ಕ್ರಾಂತಿಗೆ ಪೂರಕವಾಗುವಂತೆ ನಮ್ಮ ರೈತರಿಗೆ ರಸ ಗೊಬ್ಬರ-ಕೀಟ ನಾಶಕ ಒದಗಿಸಿಕೊಡಲು. ಈ ಕಂಪನಿಗೆ ಮೀಥೈಲ್ ಐಸೋಸೈನೇಟ್ ನಂತಹ ಮಾರಕ ರಸಾಯನಿಕವನ್ನು ಬಳಸಬೇಕಾದಾಗ ಒಂದು ಕಂಪನಿ ಅಥವಾ ಕಾರ್ಖಾನೆ ಎಷ್ಟೆಲ್ಲಾ ಜಾಗ್ರತೆ ವಹಿಸಬೇಕೋ ಅಷ್ಟು ಜವಾಬ್ದಾರಿಯನ್ನು ತೆಗೆದುಕೊಳ್ಳುವ ಮನಸ್ಸು-ವ್ಯವಧಾನ ಯಾವುದೂ ಇರಲಿಲ್ಲ. ಕಾರ್ಖಾನೆಯಿದ್ದುದು ಯಾವುದೋ ಒಂದು ’ಥರ್ಡ್ ವರ್ಲ್ಡ್ ಕಂಟ್ರಿ’ ಯಲ್ಲಿ ಆದ್ದರಿಂದ ಸುರಕ್ಷತೆ ಬಗ್ಗೆ ಹೆಚ್ಚು ಗಮನ, ಹಣ ಯಾವುದನ್ನೂ ಕೊಡುವ ಆಸಕ್ತಿಯೂ ಕಂಪನಿಗಿರಲಿಲ್ಲ.
 
ಯು ಸಿ ಸಿ ಯ ರಾಸಾಯನಿಕ ಶೇಖರಣೆ, ಸಂಸ್ಕರಣೆ, ಮೇಲ್ವಿಚಾರಿಕೆ ಎಲ್ಲದರಲ್ಲೂ ಅತ್ಯಂತ ಬೇಜವಾಬ್ದಾರಿತನವಿದ್ದುದರಿಂದ, ವಿಪರೀತ ಸ್ಥಿತಿಗಳಲ್ಲಿ ಆ ರಾಸಾಯನಿಕಗಳ ಅಂಕೆಯಿಲ್ಲದ ಬೆರಕೆಯಾದಾಗ ಏನಾಗುವುದೆಂಬ ಜ್ನಾನವಿಲ್ಲದ ಸ್ಥಳೀಯ ಕೆಲಸಗಾರರೇ ಹೆಚ್ಚು ಸಂಖ್ಯೆಯಲ್ಲಿದ್ದರಿಂದ, ಕಾರ್ಖಾನೆಯ ರಾಸಾಯನಿಕ ಶೇಖರಣಾ ಸಾಮಾನುಗಳೆಲ್ಲವೂ ಕಳಪೆ ಮಟ್ಟದ್ದಾದುದರಿಂದ ಮತ್ತು ಡಿಸೆಂಬರ್ ೧೯೮೪ ರ ಕೆಲವು ತಿಂಗಳುಗಳ ಹಿಂದೆಯಷ್ಟೇ ಕಾರ್ಖಾನೆಯ ಒಟ್ಟು ಖರ್ಚಿನಲ್ಲಿ ದಿನಕ್ಕೆ ೩೫ ಡಾಲರ್ ಖರ್ಚು ಉಳಿಸಬೇಕೆಂಬ ನೀಚ ಮಟ್ಟಕ್ಕೆ ಕಾರ್ಖಾನೆಯ ಅಂದಿನ ಅಂತರರಾಷ್ಟ್ರ‍ಿಯ ಮ್ಯಾನೇಜರ್ ವಾರನ್ ವೂಮರ್ ತೀರ್ಮಾನಿಸಿದ್ದರಿಂದ-ಇಲ್ಲ ಎಲ್ಲ ಬೇಜವಾಬ್ದಾರಿ ಕಾರಣಗಳಿಂದ ಭೋಪಾಲದಲ್ಲಿ ವಿಷಾನಿಲ ಸೋರಿತ್ತು. ಸೋರಿದ ಕೆಲಗಂಟೆ ಗಳಲ್ಲಿಯೇ ಲೆಕ್ಕಕ್ಕಿಡಲಾರದಷ್ಟು ಸಾವು ಸಂಭವಿಸಿದ್ದವು. ಅಲ್ಲಿಂದ ಶುರುವಾದ ಬಲಿ ಇನ್ನೂ ನಮ್ಮ ಮುಂದೆಯೂ ನಡೆಯುತ್ತಲೇ ಇದೆ. ಸೋರಿದ ವಿಷಾನಿಲ ಉಂಡವರು ಯಾರೂ ಉಳಿಯಲಿಲ್ಲ. ಅದರ ಅಕ್ಕಪಕ್ಕದಲ್ಲೇ ಇನ್ನೂ ಇರುವವರು ಯಾರೂ ಬೆಳೆಯುತ್ತಿಲ್ಲ, ಸ್ವಸ್ಥವಾಗಿ ಬದುಕುತ್ತಿಲ್ಲ. ಇದು ಯು ಸಿ ಸಿ ಭೋಪಾಲಕ್ಕೆ ಕೊಟ್ಟಿರುವ ಸ್ಲೋ ಪಾಯ್ಸನ್.
 
ಇದೇ ರೀತಿ ಕೆಲದಿನಗಳ ಹಿಂದೆ ಅತಿಯಾದ ನಿರ್ಲಕ್ಷ್ಯ-ಬೇಜವಾಬ್ದಾರಿ ತನದಿಂದ, ದುಡ್ಡಿನ ಆಮಿಷಕ್ಕೆ ಬಿದ್ದ ಬ್ರಿಟಿಷ್ ಪೆಟ್ರೋಲಿಯಮ್, ಗಲ್ಫ್ ಆಫ್ ಮೆಕ್ಸಿಕೋನ ಒಡಲಲ್ಲಿ ತೈಲ ಹೀರಲು ತೂತು ಕೊರೆದು ಸೋರುತ್ತಿರುವ ತೈಲವನ್ನು ನಿಲ್ಲಿಸಲಾರದ ಸ್ಥಿತಿಗೆ ತಂದು, ಇರುವಷ್ಟು ಸೋರಿಕೊಳ್ಳಲಿ ಬಿಡು ಎಂದು ಅಲ್ಲಿ ಕೂತು ಬೀಡಿ ಎಳೆಯುತ್ತಿದೆ. ಅಪಾರ ಪ್ರಮಾಣದ ಕಚ್ಚಾ ತೈಲದ ಬೆರಕೆಯಿಂದ ಸಮುದ್ರದ ಒಡಲಲ್ಲಿ ಆಗಿರುವ ಸಾವು ಈಗ ಯಾರಿಗೂ ತುರ್ತಾಗಿ ತಿಳಿಯಬೇಕಾಗಿಲ್ಲ. ಹೊರಗೆ ಸಧ್ಯಕ್ಕೆ ಯಾವುದೂ ಗಣಿಸುವಷ್ಟಿಲ್ಲ! ಜನ ಸಮುದ್ರದ ನೀರನ್ನೇನೂ ಕುಡಿದು ಬದುಕುವುದಿಲ್ಲ, ಆದರೆ ಅಲ್ಲಿ ದುಡಿದು ಬದುಕುತ್ತಾರಲ್ಲ. ಅವರಿಗೆ ದುಡಿದು ಬದುಕಲಾಗದ ಪರಿಸ್ಥಿತಿ ಬಂದಿದೆ ಎಂದು ಇಷ್ಟು ಬೇಗ ಜ್ನಾನೋದಯವಾಗುವುದಿಲ್ಲ. ಆಗಿ, ಜನ ಗುಳೆ ಏಳಲು, ಕಾಯಕ ಬದಲಾಯಿಸಲು, ಸಮುದ್ರಕ್ಕಿಳಿದು ಅಲ್ಲಿನ ಜೀವಿಗಳು ಸತ್ತು ತೇಲುತ್ತಿವೆಯೋ ಅಥವಾ ತೈಲದೊಳಗೇ ಕರಗಿ ಹೋಗಿವೆಯೋ ಎಂದು ತಿಳಿಯಲು, ಇದೆಲ್ಲದರ ಪರಿಣಾಮ ಮುಂದೆ ಏನಾಗುತ್ತದೆ ಎಂದು ಅನುಭವಿಸಿಯೇ ಅರಿಯಲು ಇದು ಬ್ರಿಟಿಷ್ ಪೆಟ್ರ‍ೋಲಿಯಮ್ ಅಮೆರಿಕಾಗೆ ಕೊಟ್ಟಿರುವ ಒಂದು ಸ್ಲೋ ಪಾಯ್ಸನ್!
 
ದುರಾಸೆಗೆ ಬಿದ್ದು ಅಜಾಗರೂಕತೆ, ಬೇಜವಾಬ್ದಾರಿಯಿಂದ ಮಾಡಬಾರದ್ದನ್ನೆಲ್ಲಾ ಮಾಡಿ ಹೀಗೆ ಎಲ್ಲೆಂದರಲ್ಲಿ, ಹೇಗೆಂದರೆ ಹಾಗೆ ಸ್ಲೋ ಪಾಯ್ಸನ್ ಕೊಟ್ಟು ಕೈ ಎತ್ತಿ ಬಿಡುವ ಈ ಕಾರ್ಪೋರೇಷನ್ ಗಳನ್ನು ಅಥವಾ ಕಾಳಜಿ, ಸೂಕ್ಷ್ಮತೆಗಳಿಲ್ಲದ ಧನದಾಹೀ ಶಕ್ತಿಗಳನ್ನು ನಾವು ಹುಚ್ಚು ಮಾಂತ್ರಿಕರೆನ್ನುತ್ತಿದ್ದೇವೆ. ಅವರಿಗೆ ಶಕ್ತಿ ಇದೆ. ಕುಯುಕ್ತಿ ಇದೆ. ತೆವಲಿದೆ. ಇವರ ಕತ್ತಿಗೆ ಸರಪಳಿ ಹಾಕುವ ಜನರಿಲ್ಲ, ಜನಶಕ್ತಿ ಇಲ್ಲ.
 
ಒಬಾಮ, ಪರಿಹಾರಕ್ಕೆ ಬಿಪಿ ದೊಡ್ಡ ಮೊತ್ತ ಕೊಡಬೇಕೆಂದು ಪಟ್ಟು ಹಿಡಿದಿದ್ದಾರೆ. ಕೊಟ್ಟದ್ದನ್ನು ಸರಿಯಾದ ಕೆಲಸಕ್ಕೇ ಬಳಸಿಕೊಳ್ಳುವ ಸದ್ಗುಣ ಅವರಿಗಿದೆ. ಆದರೆ ನಮ್ಮ ರಾಜಕಾರಣಿಗಳಿಗೇನಾಗಿದೆ? ಸ್ಮಶಾನಗಳ ಮೇಲೆ ಅರಮನೆಗಳನ್ನೋ, ಬೃಂದಾವನವನ್ನೋ ಕಟ್ಟಿಕೊಳ್ಳುವ ಅವರ ಪರಿಯನ್ನು ನೋಡಿ ಸುಮ್ಮನಿರುವ ನಮ್ಮ ಮತಿಗಳಿಗೇನಾಗಿದೆ??!
 
ಈ ಬಾರಿ ಭಯಂಕರ ಗೊಂದಲದಲ್ಲಿದ್ದೇವೆ. ಕರುಣೆಯಿಂದ ಈ ಕೆಲಸ ಆಗದು. ಮನದ ಮೂಲೆಯಲ್ಲಡಗಿ ಕೂತಿರುವ ಶಕ್ತಿ ರೂಪಿಣಿಯರೇ ಆಗಬೇಕು. ಕುಂಭಕರ್ಣನನ್ನು ಏಳಿಸಲು ಅದೆಷ್ಟೋ ದಿನಗಳು ಬೇಕಾದವಂತೆ. ನಮ್ಮೊಳಗಿನ ತಟಸ್ಥತೆಯನ್ನು ಒದ್ದುಕೊಂಡು ಕೆಚ್ಚನ್ನು ಏಳಿಸಿಕೊಳ್ಳಲು ಪ್ರಯತ್ನದ ಅಗತ್ಯ ಇದೆ ಎನಿಸುವುದಿಲ್ಲವೇ?