|
|
|
|
|
|
|
|
|
|
ಅರ್ಜೆಂಟಿನಾದ ಬಿಪಿ ಹೆಚ್ಚಿಸಿರುವ ಮರಡೋನ
ನೀವು ಫುಟ್ ಬಾಲ್ ಇಷ್ಟಪಡುವವರಿರಲಿ, ಇಲ್ಲದಿರಲಿ ಈ ಬಾರಿಯ ಫಿಫಾ ವಿಶ್ವಕಪ್ ನಲ್ಲಿ ಅರ್ಜೆಂಟಿನಾ ತಂಡಕ್ಕೆ ಕೋಚ್ ಆಗಿ ಬಂದಿರುವ ಸ್ಟಾರ್ ಕೋಚ್ ಡಿಯೇಗೋ ಮರಡೋನಾರನ್ನು ನೋಡಲು ಒಮ್ಮೆಯಾದರೂ ಟಿ ವಿ ಮುಂದೆ ಕುಳಿತಿರುತ್ತೀರಿ (ಇಲ್ಲದಿದ್ದರೆ ಕುಳಿತು ಒಮ್ಮೆ ನೋಡಿ!). ತಮ್ಮ ಹುಡುಗರು ಮಾಡಿದ ಪ್ರಯತ್ನಕ್ಕೆಲ್ಲ ಉತ್ಸಾಹದಿಂದ ಕುಣಿದಾಡಿ, ಬಾಲ್ ಸಿಕ್ಕರೆ ತಾನೇ ಒದ್ದು ಗೋಲ್ ಮಾಡಿಬಿಡುತ್ತೇನೆನ್ನುವ ತವಕದಿಂದ ಕಷ್ಟಪಟ್ಟುಕೊಂಡು ಫೀಲ್ಡ್ ನ ಹೊರಗೆ ನಿಂತು, ಕುಣಿದಾಡುತ್ತಾ, ಜಿಗಿದಾಡುತ್ತಾ ಆಟ ನೋಡುವ ಈ ಮಹಾನ್ ಕ್ರೀಡಾಪಟು ಸಿಕ್ಕಾಪಟ್ಟೆ ಭಾವುಕ. ಫುಟ್ ಬಾಲ್ ಲೋಕದ ಮಾಂತ್ರಿಕ, ಮೋಡಿಗಾರ, ಕುಳ್ಳ ಜಾದುಗಾರ ಅಂತೆಲ್ಲಾ ಪ್ರೀತಿಯಿಂದ ಕರೆಸಿಕೊಳ್ಳುವ ಇವರಿಗೆ ಆಟದಲ್ಲಿ ತಂತ್ರಗಾರಿಕೆಗೆ (ಟ್ಯಾಕ್ಟಿಕ್ಸ್) ಮಹತ್ವ ಕೊಡುವುದಿಲ್ಲವಂತೆ. ಪ್ರತೀ ಪಂದ್ಯದ ಶುರುವಿಗೆ ಮುನ್ನ ತಮ್ಮ ಆಟಗಾರರನ್ನು ತಬ್ಬಿ, ಚುಂಬಿಸಿ ಫೀಲ್ಡಿಗೆ ಕಳಿಸುವ ಮರಡೊನಾ ಫ್ರೀ ಸ್ಪಿರಿಟ್ ಅನ್ನು, ಭಾವುಕತೆಯನ್ನು ಬಲವಾಗಿ ನಂಬುತ್ತಾರಂತೆ.
ಅದಕ್ಕೇ ಅವರು ತಮ್ಮ ತಂಡದ ಈಗಿನ ಸೂಪರ್ ಸ್ಟಾರ್ ಆಟಗಾರ ಲಿಯೊನೆಲ್ ಮೆಸ್ಸಿ ಗೆ ಎಲ್ಲಿ ನಿಲ್ಲಬೇಕು, ಏನು ಮಾಡಬೇಕು ಎಂದೆಲ್ಲಾ ಹೇಳಿಯೇ ಕೊಡುವುದಿಲ್ಲವಂತೆ. ’...ನಾನು ಮೆಸ್ಸಿಗೆ ಹೇಳಿದ್ದೇನೆ, ನನಗೆ ಇದುವರೆಗೂ ಯಾರೂ ಎಲ್ಲಿ ನಿಂತು ಆಡಬೇಕು ಎಂದು ಹೇಳಿಕೊಟ್ಟಿಲ್ಲ...ಅದಕ್ಕೇ ನಾನೂ ನಿನಗೆ ಹೇಗೆ ಆಡಬೇಕೆಂದು ಹೇಳಿಕೊಡುವುದಿಲ್ಲ’ ಎಂದು. ’ಮೆಸ್ಸಿ ಕೂಡಾ ನನ್ನಂತೆ ಫ್ರೀ ಸ್ಪಿರಿಟ್ ಇರುವ ಹುಡುಗ ಅವನಿಗೆ ಎಲ್ಲಿ, ಯಾವಾಗ, ಹೇಗೆ ಆಡಬೇಕು ಅಂತ ಗೊತ್ತಾಗುತ್ತೆ...’ ಎನ್ನುತ್ತಾರೆ ಮರಡೊನಾ.
ಅರ್ಜೆಂಟಿನಾದ ಹಿಂದಿನ ಜಯಶಾಲಿ ಕೋಚ್ ಗಳಾದ ಕಾರ್ಲೋಸ್ ಬಿಲಾರ್ಡೊ ಸಿಕ್ಕಾಪಟ್ಟೆ ತಂತ್ರಗಾರಿಕೆಯುಳ್ಳ ಕೋಚ್ ಆಗಿದ್ದರು. ಹಾಗೇ ೧೯೮೬ರಲ್ಲಿ ಅರ್ಜೆಂಟಿನಾಗೆ ವಿಶ್ವಕಪ್ ಗೆಲ್ಲಿಸಿ ಕೊಟ್ಟಿದ್ದ ಸೀಸರ್ ಮೆನೋಟಿ ಕೂಡಾ ತಮ್ಮದೇ ವಿಶಿಷ್ಟ ಶೈಲಿಗೆ ಹೆಸರಾಗಿದ್ದರು. ಈ ಬಾರಿಯ ಕೋಚ್ ಆಗಿ ಮರಡೊನಾ ಆಯ್ಕೆ ಆದಾಗ ಅವರಿಗೆ ತಂತ್ರಗಾರಿಕೆಯಲ್ಲಿ ಸಹಾಯ ಮಾಡಲು ಬಿಲಾರ್ಡೊ ಅವರನ್ನು ಜೊತೆ ಹಾಕಲಾಯಿತು. ಆದರೆ ಇಬ್ಬರಿಗೂ ಸರಿ ಹೊಂದಲಿಲ್ಲ. ಈಗಲೂ ಬಿಲಾರ್ಡೊ ತಂಡದ ಜೊತೆ ಬಂದಿದ್ದಾರಾದರೂ ಮರಡೊನಾ ಬಿಲಾರ್ಡೊ ಅವರಿಗೆ ಸೊಪ್ಪು ಹಾಕುವುದಿಲ್ಲವಂತೆ.
ಮೊನ್ನೆ ಜೂನ್ ೨೭ರ ಪಂದ್ಯದಲ್ಲಿ ಅರ್ಜೆಂಟಿನಾ ಮೆಕ್ಸಿಕೋ ವಿರುದ್ಧ ೨ ಗೋಲುಗಳ ಜಯ ಸಾಧಿಸಿತು. ಅದೂ ಒಂದು ಗೊಂದಲದ ಆಫ್ ಸೈಡ್ ಗೋಲಿನ ಸಹಾಯದಿಂದ. ಇದನ್ನು ನೋಡಿ ಸ್ವಲ್ಪ ಹೆದರಿದ ಅರ್ಜೆಂಟಿನಾ ಪ್ರೇಮಿ ಪತ್ರಕರ್ತರು ಮರಡೊನಾ ರನ್ನು ಇಂತಹ ಗೆಲುವಿನ ಬಗ್ಗೆ ಏನು ಹೇಳ್ತೀರಿ?’ ಅಂತ ಕೇಳಿದ್ದಕ್ಕೆ ’ನೀವು ಸುಮ್ಮನೆ ಮ್ಯಾಚ್ ಎಂಜಾಯ್ ಮಾಡಿ ನನಗೂ ಮಾಡಲು ಬಿಡಿ...ಉಳಿದದ್ದೆಲ್ಲ ಆಮೇಲೆ’ ಎಂದು ಬಿಟ್ಟರಂತೆ. ಮರಡೋನಾರ ಈ ಭಾವುಕತೆ, ಫ್ರೀ ಸ್ಪಿರಿಟ್ ನ ದೆಸೆಯಿಂದ ಮುಂದಿನ ಪಂದ್ಯಗಳಲ್ಲಿ ನಮ್ಮ ತಂಡ ಗೇಮ್ ಪ್ಲಾನ್ ಇಲ್ಲದೇ ಆಟ ಆಡಿ ಸೋತರೆ ಏನು ಮಾಡುವುದು ಅಂತ ಅರ್ಜೆಂಟಿನಾದ ಸಿನಿಕ ಫುಟ್ ಬಾಲ್ ಪ್ರೇಮಿಗಳು ಬಿಪಿ ಹೆಚ್ಚಿಸಿಕೊಂಡು ಕೂತಿದ್ದಾರಂತೆ. | |
|
|
|
| |
| |
|
|
|
|
|
|
ರೆಸ್ವೆರಾಟ್ರೋಲ್
ಕೆಂಪು ವೈನ್ ಕುಡಿದರೆ, ಡಾರ್ಕ್ ಚಾಕೋಲೇಟ್ ತಿಂದರೆ ಬೇಗ ವಯಸ್ಸಾಗುವುದಿಲ್ಲ, ಅದಕ್ಕೇ ಫ್ರೆಂಚರು ದಿನಾ ರೆಡ್ ವೈನ್ ಕುಡಿಯುತ್ತಾರೆ, ಚಾಕೋಲೇಟ್ ತಿನ್ನುತ್ತಾರೆ ಎಂದು ನೀವು ಅಲ್ಲಲ್ಲಿ ಕೇಳಿರಬಹುದು. ಇವುಗಳಲ್ಲಿ ಇರುವ ರೆಸ್ವೆರಾಟ್ರೋಲ್ (Resveratrol) ಎಂಬ ಔಷಧೀಯ ಅಂಶ ಮನುಷ್ಯ ದೇಹಕ್ಕೆ ಬರೀ ವಯಸ್ಸಾಗುವುದನ್ನು ನಿಧಾನಿಸುವುದಷ್ಟೇ ಅಲ್ಲದೆ ಸ್ಥೂಲ ಕಾಯತ್ವ ಅಥವಾ ಒಬೆಸಿಟಿ, ಕ್ಯಾನ್ಸರ್, ಹೃದಯಾಘಾತ, ಅಂಗಾಂಗಗಳಲ್ಲಿ ಊತ, ಡಯಾಬಿಟೀಸ್ ಅನ್ನು ತಡೆಗಟ್ಟುವಲ್ಲಿ ಸಹಾಯ ಮಾಡುತ್ತದೆ ಎಂದು ಸಂಶೋಧನೆಗಳಿಂದ ಧೃಡಪಟ್ಟಿರುವುದು ಗೊತ್ತಿರುವ ವಿಷಯ. ಹಾಗೇ, ವಯಸ್ಸಿನ ಕಾರಣದಿಂದ, ಡಯಾಬಿಟೀಸ್ ಕಾರಣದಿಂದ ಅಥವಾ ರೆಟಿನೋಪಥೀಸ್ ನಿಂದ ದೃಷ್ಟಿ ಬೇಗ ಮಬ್ಬಾಗುವುದನ್ನು ಈ ರೆಸ್ವೆರಾಟ್ರೋಲ್ ತಡೆಗಟ್ಟುತ್ತದೆ ಎಂದು ಹೊಸ ಸಂಶೋಧನೆಗಳಿಂದ ತಿಳಿದು ಬಂದಿದೆ.
ಕೆಂಪು/ಕಪ್ಪು ದ್ರಾಕ್ಷಿಗಳ ಸಿಪ್ಪೆಯಲ್ಲಿ, ಬ್ಲೂಬೆರ್ರಿ, ಕಡಲೆ ಕಾಯಿ ಬೀಜ, ಕೋಕೊ ಇತರ ಸಸ್ಯ ಜನ್ಯ ಆಹಾರ ಪದಾರ್ಥಗಳಲ್ಲಿ ಕಂಡುಬರುವ ರೆಸ್ವೆರಾಟ್ರೋಲ್ ಅಂಶ, ರಕ್ತವು ಇನ್ಸುಲಿನ್ ಗೆ ಪ್ರತಿಕ್ರಿಯಿಸುವ ರೀತಿಯನ್ನು ಚುರುಕುಗೊಳಿಸುತ್ತದೆ ಎಂದು ತಿಳಿಸಲಾಗಿದೆ. ಸ್ಥೂಲ ಕಾಯದ ವ್ಯಕ್ತಿಗಳಲ್ಲಿ, ಐವತ್ತು ವರ್ಷ ದಾಟಿದ ವ್ಯಕ್ತಿಗಳ ರಕ್ತಕ್ಕೆ ಇನ್ಸುಲಿನ್ ಗೆ ಪ್ರತಿಕ್ರಿಯಿಸುವ ಶಕ್ತಿ ಕ್ಷೀಣವಾಗಿರುತ್ತದೆ. ಹಾಗಾಗಿ ಅವರ ಸ್ನಾಯು ಮತ್ತು ದೇಹದ ಇತರ ಟಿಶ್ಯುಗಳು ಇನ್ಸುಲಿನ್ ಅನ್ನು ಸರಿಯಾಗಿ ತೆಗೆದುಕೊಳ್ಳದೆ ಮತ್ತು ಗ್ಲೂಕೋಸ್ ಅನ್ನು ಸರಿಯಾಗಿ ಕರಗಿಸದೆ ಇರುವುದರಿಂದ ಇಂತಹ ವ್ಯಕ್ತಿಗಳಿಗೆ ಡಯಾಬಿಟೀಸ್ ನ ಅಪಾಯವಿರುತ್ತದೆ. ಡಯಾಬಿಟೀಸ್ ಜೊತೆಯಲ್ಲೇ ದೄಷ್ಟಿ ಮಾಂದ್ಯವೂ (ಮಬ್ಬಾಗುವುದು) ಸೇರಿರುವುದರಿಂದ ಆಹಾರದಲ್ಲಿ ನಿಯಮಿತ ಪ್ರಮಾಣದಲ್ಲಿ ರೆಸ್ವೆರಾಟ್ರೋಲ್ ನ ಸೇವನೆ ಈ ಬಗೆಯ ಹಲವಾರು ಸಮಸ್ಯೆಗಳನ್ನು ತಡೆಗಟ್ಟುವಲ್ಲಿ ಸಹಾಯ ಮಾಡುತ್ತದೆ, ನಮ್ಮ ದೇಹದ ಮೆಟಾಬೊಲಿಸಮ್ ಅನ್ನು ಹೆಚ್ಚಿಸುತ್ತದೆ ಎಂದು ವಾಷಿಂಗ್ಟನ್ ಯೂನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್ ನಲ್ಲಿ ಈ ಕುರಿತು ಸಂಶೋಧನೆ ನಡೆಸಿರುವ ರೆಟಿನಲ್ ಸರ್ಜನ್ ಡಾಕ್ಟರ್ ರಾಜೇಂದ್ರ ಆಪ್ಟೆ ತಿಳಿಸುತ್ತಾರೆ.
ಹಾಗಂತ ದಿನಾ ರೆಡ್ ವೈನ್ ಕುಡಿದರೆ ಉಪಯೋಗವಿಲ್ಲ. ಆ ಪ್ರಮಾಣದ ರೆಸ್ವೆರಾಟ್ರೋಲ್ ಅನ್ನು ದೇಹಕ್ಕೆ ಪಡೆಯಲು ದಿನಕ್ಕೆ ೧ ಲೀಟರ್ ವೈನ್ ಕುಡಿಯಬೇಕಾದೀತು! ಆದರಿಂದ ಬರೀ ಕುಡಿಯಲು ಕೂತು ಬಿಡಬೇಡಿ ಎಂದೂ ಸಂಶೋಧನೆಗಳು ಎಚ್ಚರಿಸುತ್ತವೆ. ನಿಯಮಿತವಾಗಿ ಆಹಾರದಲ್ಲಿ ಕೆಂಪು/ಕಪ್ಪು ದ್ರಾಕ್ಷಿ, ಬೇಯಿಸಿದ ಕಡಲೆ ಕಾಯಿ ಬೀಜ, ಬ್ಲೂ ಬೆರ್ರಿಯಂತಹ ಕಪ್ಪು/ನೇರಳೆ ಸಿಪ್ಪೆಯಿರುವ ಹಣ್ಣುಗಳ ಸೇವನೆಯಿಂದ ರೆಸ್ವೆರಾಟ್ರೋಲ್ ಅನ್ನು ದೇಹಕ್ಕೆ ಒದಗಿಸಿಕೊಡಬಹುದು. | |
|
|
|
| |
| |
|
|
|
|
|
|
|