ಸಂಪಾದಕರಿಂದ,
 
 
ಜುಲೈ ೨೦೧೦
 
ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಲೋಕಾಯುಕ್ತಕ್ಕೆ ಪರಮಾಧಿಕಾರ ಕೊಡುವುದಾಗಿ ಹೇಳಿದ್ದ ಬಿಜೆಪಿ ನಿಜಕ್ಕೂ ಆಶಾವಾದ ಮೂಡಿಸಿತ್ತು. ಈಗ ಅದರ ಮುಖವಾಡ ಕಳಚಿದೆ. ಅಪರೂಪಕ್ಕೆ ಸಿಗುವ ಅತ್ಯಂತ ದಕ್ಷ, ಪ್ರಾಮಾಣಿಕ, ನಿಷ್ಟುರ ಮತ್ತು ಸಜ್ಜನ ನ್ಯಾಯಾಧಿಕಾರಿ ಸಂತೋಷ್ ಹೆಗಡೆಯವರು ಬಿಜೆಪಿಯ ಅನೈತಿಕ ಭಂಡಾಟಗಳಿಗೆ ಪ್ರತಿಭಟನೆಯಾಗಿ ತಮ್ಮ ಲೋಕಾಯುಕ್ತ ಸ್ಥಾನದಿಂದ ರಾಜೀನಾಮೆ ನೀಡಿದ್ದಾರೆ. ಅಂತಹ ಅಧಿಕಾರಿಯೊಬ್ಬರಿಗೆ ಸರಿಯಾಗಿ ಕೆಲಸ ಮಾಡಲು ಅನುವು ಮಾಡಿಕೊಡದೇ ಪೀಡಿಸಿದ ಸರ್ಕಾರಕ್ಕೆ ನಮ್ಮ ನಿಮ್ಮ ಛೀಮಾರಿ.
 
ಕಾವೇರಿಯ ಇತಿಹಾಸ ಮುಂದುವರೆಯುತ್ತದೆ. ಅದರ ಜೊತೆಗೇ ಮಕ್ಕಳಿಗೆ ಮಾತೃಭಾಷೆಯಲ್ಲಿ ಮೊದಲ ಶಿಕ್ಷಣದ ಅಗತ್ಯದ ಕುರಿತು ಚರ್ಚೆ ಆರಂಭಿಸುತ್ತಿದ್ದೇವೆ. ಸಂಪೂರ್ಣ ಇಂಗ್ಲಿಷ್ ಕಲಿಯದಿದ್ದರೆ ಮುಂದಿನ ವರ್ಷಗಳಲ್ಲಿ ಯಾರೂ ಉದ್ಧಾರವಾಗುವುದಿಲ್ಲ ಎನ್ನುವ ವಾದ ಕೇಳುತ್ತಿದ್ದೇವೆ. ನಮ್ಮ ಮಕ್ಕಳು ಬೇರೆ ದೇಶದಲ್ಲಿ ಹುಟ್ಟಿರುವುದರಿಂದ ಅವರಿಗೆ ಆ ದೇಶದ ಭಾಷೆಯನ್ನೇ ಕಲಿಸಬೇಕು ಎಂದು ವಿಧೇಯವಾಗಿ ಅನುಸರಿಸುವ ಅನಿವಾಸಿ ಭಾರತೀಯರನ್ನು ಗಮನಿಸಿ ಇವರ ಮಕ್ಕಳು ತಮಿಳ್ನಾಡಿನಲ್ಲಿ ಹುಟ್ಟಿದ್ದರೆ ಇವರು ಮಕ್ಕಳಿಗೆ ತಮಿಳು ಕಲಿಸುತ್ತಿದ್ದರೋ-ಹಿಂದಿ ಕಲಿಸುತ್ತಿದ್ದರೋ ಎಂದು ಯೋಚಿಸಿ ತಲೆಬಿಸಿ ಮಾಡಿಕೊಂಡಿದ್ದೇವೆ. ನಮ್ಮ ಮಕ್ಕಳು ಕನ್ನಡ ಕಲಿಯದಿದ್ದರೆ ನಮ್ಮ ಭಾಷೆ-ಸಂಸ್ಕೃತಿ-ನಂಟನ್ನು ಉಳಿಸಿಕೊಳ್ಳುವುದು ಹೇಗೆ ಎಂದು ಹಪಹಪಿಸುತ್ತಿರುವ ಅನಿವಾಸಿ ಕನ್ನಡದ ಅಪ್ಪ ಅಮ್ಮಂದಿರ ಕಳವಳ ಕಾಣುತ್ತಿದ್ದೇವೆ. ನಮಗೂ ಹಾಗೂ ಇವರೆಲ್ಲರಿಗೂ ಇರಲಿ ಎಂದು ಈ ಚರ್ಚೆ.
 
ಹಾಗೇ ಇದೆಲ್ಲದರ ಮಧ್ಯೆ ಹೊಸದೊಂದು ಸತ್ಯ ಕಂಡುಕೊಂಡಿದ್ದೇವೆ. ಆಯಾಮಕ್ಕೆ ನಾವೂ ಬರೆಯುತ್ತೇವೆ ಎಂದು ಪ್ರೀತಿಯಿಂದ ಹಲವಾರು ಅನಿವಾಸಿ ಭಾರತೀಯ/ಕನ್ನಡದ ಮಿತ್ರರು ಮುಂದೆ ಬರುತ್ತಿದ್ದಾರೆ. ಕರ್ನಾಟಕದವರೇ ಆದರೂ ಹೆಚ್ಚಿನವರು ತಮ್ಮ ಲೇಖನಗಳನ್ನು ಇಂಗ್ಲಿಷ್ನಲ್ಲಿ ಬರೆಯುತ್ತೇವೆ ಅಥವಾ ಬಾಯಿಯಲ್ಲಿ ಹೇಳಿ ಧ್ವನಿ ಮುದ್ರಿಸಿ ಕೊಟ್ಟು ಬಿಡುತ್ತೇವೆ, ನೀವು ಬರೆದುಕೊಳ್ಳಿ ಎನ್ನುತ್ತಿದ್ದಾರೆ. ಕಾರಣ ಕೇಳಿದರೆ ಅವರ ಉತ್ತರ ಪ್ರಾಮಾಣಿಕವಾದದ್ದು. ಅವರಿಗೆ ಕನ್ನಡ ಬರೆಯಲು ಬರುವುದಿಲ್ಲ! ಕನ್ನಡ ಮಾಧ್ಯಮದಲ್ಲಿ ಏಳನೇ ಅಥವಾ ಹತ್ತನೆಯ ತರಗತಿವರೆಗೂ ಓದಿದ ಮಿತ್ರರಿಗೆ ಕನ್ನಡದಲ್ಲಿ ಅಭಿವ್ಯಕ್ತ ಮಾಡುವುದು ಸುಲಲಿತ. ಆದರೆ ಉಳಿದವರಿಗೆ ಕನ್ನಡ ಬರೆದದ್ದು ಮರೆತೇ ಹೋಗಿದೆಯಂತೆ! ಇದು ಒಬ್ಬರ ಇಬ್ಬರ ಕಥೆಯಲ್ಲ. ನಾವು ಗಾಬರಿಯಾಗಿದ್ದೇವೆ. ಹಾಗೇ ಹೆಮ್ಮೆಯಿಂದ, ಆಸೆಯಿಂದ ಕರ್ನಾಟಕದ ಹಳ್ಳಿ-ನಗರಗಳಲ್ಲಿ ಕನ್ನಡ ಮಾಧ್ಯಮದ ಶಾಲೆಗಳಲ್ಲಿ ಕಲಿಯುತ್ತಿರುವ ಪುಟಾಣಿಗಳತ್ತ ನೋಡುತ್ತಿದ್ದೇವೆ. ನಾಳೆ ಕನ್ನಡ ಲಿಪಿ, ಕನ್ನಡ ಸಾಹಿತ್ಯ, ಸೂಕ್ಷ್ಮತೆಯುಳ್ಳ ಸಂವಾದ ನಡೆಯುವುದಾದರೆ, ಉಳಿಯುವುದಾದರೆ, ಬೆಳೆಯುವುದಾದರೆ ಅದು ಈ ಪುಟಾಣಿಗಳ ಮೂಲಕ ಮಾತ್ರ. ಇದು ನಮ್ಮ ಸವಾಲು!! ನಿಮ್ಮದೇನಾದರೂ ಬೇರೆ ವಾದವಿದ್ದರೆ ಚರ್ಚೆಗೆ ಬನ್ನಿ.
 
 
ಜೂನ್ ೨೦೧೦ 
 
ಪುಟ್ಟ ಆಯಾಮದ ಆರನೇ ತಿಂಗಳ ಆಡಾಟವನ್ನು ನೋಡುತ್ತಿದ್ದೀರಿ. ನಮ್ಮ ನಿಮ್ಮ ಕೂಸು ನಿಮ್ಮೆದುರಿಗೇ ಇಷ್ಟಿಷ್ಟೇ ಮೈದುಂಬಿಕೊಳ್ಳುತ್ತಿದೆ. ನಾವು ಕಲಿಯುತ್ತಿದ್ದೇವೆ, ಕಲಿತದ್ದನ್ನು ಹಂಚಿಕೊಳ್ಳುತ್ತಿದ್ದೇವೆ. ಪ್ರತಿ ಹೆಜ್ಜೆಯೂ ಪ್ರೀತಿ-ಬಧ್ಧತೆಯದ್ದಾಗಿರಬೇಕೆಂದು ಕನವರಿಸುತ್ತಿದ್ದೇವೆ. ನಮ್ಮ ಕನಸುಗಳಲ್ಲಿ ನೀವಿದ್ದೀರಿ.

ಈ ಬಾರಿ, ಹಿಂದೆ ತಿಳಿಸಿದ್ದಂತೆ ಕಾವೇರಿಯ ಕಥಾನಕವನ್ನು ಸರಳವಾಗಿ ಶುರು ಹಚ್ಚಿಕೊಂಡಿದ್ದೇವೆ. ನಮ್ಮ ನಿಮ್ಮೆಲ್ಲರ ಭವಿಷ್ಯದಲ್ಲಿ, ಮುಂದೆ ನಾವೆಲ್ಲರೂ ಸಾಕ್ಷಿಗಳಾಗಲೇ ಬೇಕಾಗುವ ಗಲಾಟೆ ನದೀ ನೀರಿನದ್ದಾಗಿರುತ್ತದೆ. ಇದು ವಿಜ್ನಾನದ ವಾದ. ಅಮೆರಿಕದಲ್ಲಾಗಲೀ, ಆಫ್ರಿಕಾದಲ್ಲಾಗಲೀ, ಏಷಿಯಾದಲ್ಲಾಗಲೀ...ಬಿಂದಿಗೆ ಬಿಂದಿಗೆಯಷ್ಟೇ ಪ್ರತೀ ಕ್ಷಣವೂ ಬರಿದಾಗುತ್ತಿರುವ, ಈ ಜೀವ ಸಂಪನ್ಮೂಲದ ಸರಿಯಾದ ಉಳಿಸಿಕೊಳ್ಳುವಿಕೆ, ಬಳಸಿಕೊಳ್ಳುವಿಕೆ ಮತ್ತು ಹಂಚಿಕೊಳ್ಳುವಿಕೆಯ ಬಗ್ಗೆ ನಮ್ಮವರೊಡನೆ ಮಾತುಕತೆ ಇರಲಿ, ನಮ್ಮ ಜವಾಬ್ದಾರಿ ಬೆಳೆಯಲಿ ಎಂದು ನಮ್ಮ ಆಶಯ.
 
 
 
ಮೇ ೨೦೧೦
೨೦೦೭ರ ಫೆಬ್ರವರಿ ೭ರಂದು ಕಾವೇರಿ ನ್ಯಾಯಾಧೀಕರಣ ನೀಡಿರುವ ’ಕಾವೇರಿ ಮಧ್ಯಂತರ ತೀರ್ಪಿ’ನ ಕುರಿತ ಆರೋಗ್ಯಕರ ಚರ್ಚೆಗೆ ವೇದಿಕೆಯಾಗಬೇಕೆಂಬ ಉದ್ದೇಶದಿಂದ ಮುಂದಿನ ಸಂಚಿಕೆಗಳಲ್ಲಿ ’ಕಾವೇರಿ ಕಥನ’ವನ್ನು ನಮ್ಮ-ನಿಮ್ಮ ಆಯಾಮದಲ್ಲಿ ಆರಂಭಿಸಲಿದ್ದೇವೆ.
 

ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಬ್ರಿಟಿಷ್ ಪ್ರಭುಗಳ ನೇರ ಅಧೀನಕ್ಕೊಳಪಟ್ಟಿದ್ದ ಅಂದಿನ ಮದರಾಸು ಪ್ರಾಂತ್ಯ, ತನ್ನ ಸಾಮಂತರಾಗಿದ್ದ ಮೈಸೂರು ಅರಸರ ಮೇಲೆ ತನ್ನ ಸಾಮ್ರಾಜ್ಯಶಾಹಿ ಪ್ರವೃತ್ತಿಯ ಸರ್ವಾಧಿಕಾರದಿಂದ ಎಸಗುತ್ತಿದ್ದ ಅನ್ಯಾಯವನ್ನು ಕಾವೇರಿ ನೀರಿನ ಹಂಚಿಕೆ ವಿಷಯದಲ್ಲಿ ಇನ್ನೂ ಮುಂದುವರಿಸುತ್ತಿದೆ. ತಮಿಳುನಾಡಿನ ರಾಜಕಾರಣಿಗಳು ಕೇಂದ್ರ ಸರ್ಕಾರವನ್ನು ತಮ್ಮ ಬ್ಲಾಕ್ ಮೇಲ್ ತಂತ್ರದಿಂದ ತಮಗನುಕೂಲವಾಗುವಂತೆ ಬಳಸಿಕೊಳ್ಳುತ್ತಲೇ ಬರುತ್ತಾ ಕಾವೇರಿ ನೀರು ಹಂಚಿಕೆಯಲ್ಲಿ ಕರ್ನಾಟಕಕ್ಕೆ ಚಳ್ಳೆ ಹಣ್ಣು ತಿನ್ನಿಸುತ್ತಿದ್ದಾರೆ. ರೈತರು ಕರ್ನಾಟಕದಲ್ಲೂ ರೈತರೇ, ತಮಿಳುನಾಡಿನಲ್ಲೂ ರೈತರೇ ನಿಜ. ಇಬ್ಬರಿಗೂ ನೀರು ಬೇಕು, ಇಬ್ಬರೂ ಬೆಳೆತೆಗೆಯಬೇಕು. ಆದರೆ, ಕಾವೇರಿಯ ನೀರು ಹಂಚಿಕೆ ಯಾವತ್ತೂ ಸಾಮರಸ್ಯದಿಂದ ಆಗಿಲ್ಲ ಮತ್ತು ಭೂಮಿಯ ಹೆಕ್ಟೇರ್ ಗಳ ಸರಿಯಾದ ಲೆಕ್ಕಾಚಾರದಿಂದ ಆಗಿಲ್ಲ. ಈ ತಾರತಮ್ಯವನ್ನು, ಅದರ ಅಂಕಿ ಅಂಶಗಳನ್ನು, ಅದರ ಹಿಂದಿರುವ ’ವಾಟರ್ ಪಾಲಿಟಿಕ್ಸ್’ ನ ಇತಿಹಾಸವನ್ನು ಆಯಾಮ ನಿಮ್ಮ ಮುಂದಿಡಲು ಪ್ರಯತ್ನಿಸಲಿದೆ.
 
 
ಏಪ್ರಿಲ್ ೨೦೧೦
 
ವಸಂತ ನಾವಿರುವ ಭೂಭಾಗದ ಹೊಸಲು ಮೆಟ್ಟಿದ್ದಾನೆ. ನೆನ್ನೆ ಮೊನ್ನೆ ಕಿಟಕಿಯಿಂದಾಚೆ ನೋಡಿದರೆ ಇರಬರುವ ಕೊಂಬೆ ಕಡ್ಡಿಗಳನ್ನೆಲ್ಲ ಬತ್ತಲು ಬಿಟ್ಟುಕೊಂಡು ನಿಂತಿದ್ದ ಡಾಗ್ ವುಡ್ ಮರ ಇವತ್ತು ಎಲ್ಲಿಲ್ಲದ ಸಡಗರದಿಂದ ಹೂ ಹೊದ್ದು ಕುಳಿತಿದೆ. 
 
 
 
ಅದನ್ನು ನೋಡಿದಾಗ ಮುಖ-ಮನದ ತುಂಬಾ ನಗು ತುಂಬಿದರು ಐದು ಸೆಕೆಂಡ್ ನಂತರ ಮನಸ್ಸಿಗೆ ನಮ್ಮೂರ 'ರಕ್ತಾರುಣ' ಸುಂದರಿ ಗುಲ್ಮೊಹರ್ ನೆನಪಾಗುತ್ತಾಳೆ. ನಾವೇ ಇಲ್ಲಿಯ ಜನವಾಗಿ, ಇಲ್ಲಿನ ಜೀವನ-ಗಿಡ-ಮರ-ಕಾರು-ರೋಡು ಎಲ್ಲವು ನಮ್ಮೊಳಗೆ ಹಾಸು ಹೊಕ್ಕಾಗಿರುವಾಗಲು ನಮ್ಮ ಪ್ರತಿ ಕ್ಷಣದ ವರ್ತಮಾನದ ಬದುಕಿನಲ್ಲಿ ಕಾಣುವ ಎಲ್ಲ ವ್ಯಕ್ತಿ-ವಸ್ತು ಅನುಭವಗಳ ಜೊತೆ ಮನಸ್ಸು ನಮ್ಮೂರ ಏನೋ ಒಂದನ್ನು ನಂಟು  ಹಾಕಿಬಿಡುತ್ತದೆ. ನೆಲದ ಸೆಳೆತ ಅಂದರೆ ಅದೇ ಏನೋ...

ಅಲ್ಲಿ-ಅಷ್ಟು ಜನ ಗಲಭೆ ಮಾಡಿಕೊಂಡು ಸತ್ತರು, ಇಷ್ಟು ಜನ ಹಸಿದು ಆತ್ಮಹತ್ಯೆ ಮಾಡಿಕೊಂಡರು, ಇವರು ಇದ್ದಬದ್ದದ್ದನ್ನೆಲ್ಲಾ ಗೋರಿಕೊಂಡರು ಅಂತ ಕೇಳುವಾಗ ಓದುವಾಗ ನಮ್ಮ ಮನಸ್ಸಿನಲ್ಲಿ-ಕಲ್ಪನೆಯಲ್ಲಿ ಹಸಿರಾಗಿ ಕಾಡುವ ನಮ್ಮೂರು...ನಾವು ಓದಿ ಕೇಳುತ್ತಿರುವ ನಮ್ಮೂರು ಎರಡರ ನಿಜಗಳ ತಾಕಲಾಟ ನಡೆಯುತ್ತದೆ. ದೂರದಲ್ಲಿದ್ದೇವೆಯಾದ್ದರಿಂದ ಭಾವುಕತೆ-ಬೇಜಾರು ಜಾಸ್ತಿ.
 
 
 
ಮಾರ್ಚ್ ೨೦೧೦
 
ಮೇಲೆ ಕಾಣುವ ರಕ್ತ ಮಾಂಸದ ’ಇವಳು’
ಸುಸಂಸ್ಕೃತೆ, ಜಾಣೆ, ಮನುಷ್ಯೆ.
ಇವಳೊಳಗಡಗಿರುವ’ ’ಅವಳು’ ಪಕಳೆ-ಮಿಂಚು ಹುಳ ಮಳೆಹನಿ,ಮುಳ್ಳ ಬೇಲಿ, ಜಲಪಾತ.
ಅವಳ ನುಂಗಿ ಇವಳಾದ ಹೆಣ್ಣೆಂಬ ಶಕ್ತಿಗೆ, ಪ್ರೀತಿಗೆ, ಮಾಯೆಗೆ, ಮಾತೆಗೆ-
ಈ ಬಾರಿಯ ಚಂದಮಾಮ.
 
 
 
ಮಹಿಳೆಯರಿಗೆ ಲೋಕ/ರಾಜ್ಯ/ವಿಧಾನಸಭೆಗಳಲ್ಲಿ ಶೇಕಡ ೩೩ ರಷ್ಟು ಮೀಸಲಾತಿ ಕೊಡಬೇಕೆಂದು ಭಾರತದ ಲೋಕಸಭೆಯಲ್ಲಿ ಅಂತರ್ರಾಷ್ಟ್ರೀಯ ಮಹಿಳಾ ದಿನದಂದು ಮಸೂದೆ ಮಂಡನೆಯಾಗಲಿದೆ. ದಶವಾರ್ಷಿಕ ಯೋಜನೆಯಂತೆ ವರ್ಷಾನುವರ್ಷಗಳಿಂದ ಕೇವಲ ಚರ್ಚೆಯಲ್ಲೇ ಉಳಿದಿದ್ದ ವಿಷಯ ಕಡೆಗೂ ಮಂಡನೆಯಾಗಿ, ಅಷ್ಟೇ ಭರದಲ್ಲಿ ಅನುಮೋದನೆಯಾದರೆ ಅದು ಸಾಧನೆಯ ಸುದ್ದಿ. ಅದು ಹಾಗಾಗಲಿ. ಭಾರತದ ಸಾಮಾಜಿಕ ವ್ಯವಸ್ಥೆಯನ್ನು ಮನಸ್ಸಿನಲ್ಲಿಟ್ಟುಕೊಂಡು, ಮಹಿಳೆಯರಲ್ಲೂ ಎಲ್ಲ ವರ್ಗದವರಿಗೆ ಪ್ರಾತಿನಿಧ್ಯ ಇರಬೇಕೆಂದು ಎಸ್ ಪಿ, ಬಿ ಎಸ್ ಪಿ ಇತರೆ ರಾಜಕೀಯ ಪಕ್ಷಗಳು ಶೇಕಡ ೩೩ ರಷ್ಟು ಮೀಸಲಾತಿಯಲ್ಲಿ ಒಳ ಮೀಸಲಾತಿಯನ್ನು ಪ್ರಸ್ತಾಪಿಸಿರುವುದು ಸಮಂಜಸವೇ. ಆದರೆ ಈ ಪ್ರಸ್ತಾಪದಿಂದ ಇಡೀ ಮಸೂದೆಯ ಅಂಗೀಕಾರಕ್ಕೆ ಮತ್ತೆ ತಡೆಯಾಗಬಾರದು. ಮೊದಲ ಹೆಜ್ಜೆಯಾಗಿ ಮೀಸಲಾತಿ ಅನುಮೋದನೆಯಾಗಲಿ.    
 
 
ಫೆಬ್ರವರಿ ೨೦೧೦
 
 
ಜಾಗತೀಕರಣ ನಮ್ಮ ಅತ್ಯಂತ ಕುತೂಹಲದ ವಿಷಯಗಳಲ್ಲೊಂದು. ಅದು ಕೂಡಿಡಲು ಬಾಟಲ್ಲೂ ಇಲ್ಲದ ಜೀನಿ. ನಮ್ಮ ಈ ವಿದೇಶ ವಾಸ, ಜೀವನಾನುಭವ ಕೂಡ ಅದರದ್ದೇ ಪರಿಣಾಮ. ಜಾಗತೀಕರಣದ ವಿವಿಧ ಮುಖಗಳನ್ನು ನೋಡಬೇಕು, ಅದರ ಕುರಿತು ಎಲ್ಲರ ಅನುಭವದ ವಿವೇಕದ ಮಾತುಗಳನ್ನು ಆಲಿಸಬೇಕು, ಜಾಗತೀಕರಣದಿಂದ ಜನಿಸಿರುವ ಒಳಿತು-ಪೀಡೆ-ಪರಾಕಾಷ್ಟೆ ಗಳೇನು ಎನ್ನುವುದನ್ನು ತಿಳಿಯಬೇಕು, ಈ ಅರಿವು ನಮ್ಮೆಲ್ಲರನ್ನೂ ಬೆಳಗಬೇಕು-ಇದು ನಮ್ಮ ಹಂಬಲ.
 
ಜನವರಿ ೨೦೧೦
 
 
ಕಟ್ಟಬೇಕು, ಕಲಿಯಬೇಕು, ಬೆಳೆಯಬೇಕು, ಬಣ್ಣವಾಗಬೇಕು, ಮನ ಮನಗಳ, ಭಾವ ಭಾವಗಳ ಸೇತುವೆಯಾಗಬೇಕು ಅನ್ನೋ ಉದ್ದೇಶದಿಂದ 'ಆಯಾಮ' ಹುಟ್ಟಿದೆ. 'ಆಯಾಮ' ಒಂದು ಕನ್ನಡ ಪತ್ರಿಕೆ, ಅಂತರ್ಜಾಲದ ಬ್ಲಾಗಂಗಣ ಅಷ್ಟೇ ಅಲ್ಲ...ಇದು ನಮ್ಮ-ನಿಮ್ಮ ಮನಸ್ಸಿನ ಮೂಲೆ ಮೂಲೆಯ ಭಾವನೆಗಳನ್ನು ಅಭಿವ್ಯಕ್ತಿಸುವ ಒಂದು ಸುಂದರ ವೇದಿಕೆಯಾಗಬೇಕು, ನಮ್ಮ ದಿನ ನಿತ್ಯದ ಹಾಡು-ಪಾಡು-ಹಿಗ್ಗು-ಹಂಬಲ-ಪರಿಪಾಟಲು-ಪ್ರಕರಣಗಳು ಅಕ್ಷರದ ನದಿಯೊಂದಿಗೆ ಬೆರೆತು, ಹರಿದು ತಂಪು ಕಾವೇರಿಯಾಗಬೇಕು. ನಾವದರಲ್ಲಿ ತೇಲುವ ಪುಟ್ಟ ಪುಟ್ಟ ತೆಪ್ಪಗಳಾಗಿ ಹರಿವಿನ ಪ್ರತೀ ಕ್ಷಣವನ್ನೂ, ತಿರುವನ್ನೂ, ಲಾಲಿಯನ್ನೂ ಆಸ್ವಾದಿಸಬೇಕು, ಅನುಭವಿಸಬೇಕು ಅಂತ ನಮ್ಮ ಬಯಕೆ.

ಸಧ್ಯಕ್ಕೆ, ತಿಂಗಳಿಗೊಮ್ಮೆ ಹೊಸ ಬಟ್ಟೆ ಹಾಕಿಕೊಂಡು ಹಬ್ಬ ಮಾಡುವ ಸಂತಸ ನಮ್ಮದು. ನಿಮಗೂ ಎಲೆ ಹಾಕಿಯಾಗಿದೆ.

ಈ ಬೆಳವೆಯನ್ನು, ಈ ಹರಿವನ್ನು, ಈ ಪಯಣವನ್ನು ಮಧುರವನ್ನಾಗಿ ಮಾಡಿಕೊಳ್ಳೋಣ ಬನ್ನಿ.