ಹಗಲು ವೇಷ-ಅಷ್ಟು ಕಲೆ, ಒಂದಷ್ಟು ಪಾಡು
ಎಸ್. ರಂಗಧರ
೨೫ ನೇ ಜೂನ್ ೨೦೧೦ ರಂದು ಬಿಜೆಪಿಯ ಸಾಧನಾ ಸಮಾವೇಶ ಬೆಂಗಳೂರಿನಲ್ಲಿ ನಡೆಯಿತು. ವೇದಿಕೆಯ ಮೇಲೆ ಮಾತಾಡುತಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗಳಗಳನೆ ಅಳಲು ಶುರುಮಾಡಿದರು. ವೇದಿಕೆಯ ಮೇಲೆ ಇದ್ದವರಿಗೆ ಆತಂಕ. ಮುಖ್ಯಮಂತ್ರಿ ಅತ್ತ ಮೇಲೆ ನಾವೂ ಅಳಬೇಕಾಗುತ್ತದೇನೂ ಅಂತ ಅವರ ಇತರ ಮಂತ್ರಿಗಳು ಚಿಂತೆಗೀಡಾದರು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಕೂಡ ಹೀಗೇ ಅಳುತ್ತಿದ್ದರು. ಈ ದೇವೇಗೌಡರನ್ನು ತೆಗೆದು ಹಾಕಿ ತಾನೂ ಹೃದಯವಂತ ಎಂದು ಜನರ ಮುಂದೆ ಬಿಂಬಿಸಿಕೊಳ್ಳಲು ಇಂಥ ಅಳುವ ಸ್ಪರ್ಧೆಯಲ್ಲಿ ತೊಡಗಿರಬಹುದೇ ಎಂದು ಮುಖ್ಯಮಂತ್ರಿಗಾದಿಯ ಮುಂದಿನ ಆಕಾಂಕ್ಷಿಗಳು ಚಿಂತೆಗೀಡಾದರು.
ಮುಖ್ಯಮಂತ್ರಿಗಳು ತಮ್ಮ ಕನ್ನಡಕದ ಒಳ ಭಾಗಕ್ಕೆ ಗ್ಲಿಸರಿನ್ ಹಚ್ಚಿಕೊಂಡು ನಟರ ರೀತಿಯಲ್ಲಿ ಅಳುವ ವ್ಯವಸ್ತೆ ಮಾಡಿಕೊಂಡಿರಬಹುದೇ ಎಂದು ಅವರ ಕಡುವಿರೋಧಿ ಅನಂತಕುಮಾರ್ ಸಿಕ್ಕಾಪಟ್ಟೆ ಗುಮಾನಿಯಿಂದ ನೋಡತೊಡಗಿದರು. ವಿರೋಧ ಪಕ್ಷದವರಲ್ಲಿ ಒಂದು ಪಕ್ಷದವರು ಇದು ಮೊಸಳೆ ಕಣ್ಣೀರು, ಡ್ರಾಮ ಎಂದರು. ಮತ್ತೊದು ಪಕ್ಷದವರು ಇದು ಕರ್ನಾಟಕದಲ್ಲಿ ಕಂಡುಬರುವ 'ಹಗಲು ವೇಷ' ಕಲಾವಿದರ ರೀತಿಯ ವೇದಿಕೆ ವೇಷ ಎಂದರು. ಉತ್ತರ ಕರ್ನಾಟಕದ ನೆರೆ ಸಂತ್ರಸ್ತ ಮಹಿಳೆಯರು, ಇದು ಸಾಧನಾ ಸಮಾವೇಶದ ಸಂತೃಪ್ತ ಸಾಧನಾ ಅಳು ಅಂದರು. ರಾಜಕೀಯ ವಿಶ್ಲೇಶಕರು ಮಾತ್ರ ಮುಖ್ಯಮಂತ್ರಿ ಪಟ್ಟಕ್ಕೆ ತಕ್ಕ ಆಟ ಆಡುವಷ್ಟು ಈ ಯಡಿಯೂರಪ್ಪ ಪಳಗಿದರು, ಪರವಾಗಿಲ್ಲ! ಎಂಬ ಷಹಭಾಷ್ ಗಿರಿ ಕೊಟ್ಟರು.
ಬೇಸರವಾಗಿದ್ದು ಮಾತ್ರ ಕಲಾಚಿಂತಕರಿಗೆ. ನಮ್ಮ ನೈಜ ಹಗಲು ವೇಷದ ಕಲಾವಿದರ ಜೊತೆಗೆ ಯಡಿಯೂರಪ್ಪನವರ ವೇಷವನ್ನು ಹೋಲಿಸಿ ನಮ್ಮ ಕಲೆ, ಕಲಾವಿದರು, ಸಾಹಿತ್ಯ, ಸಂಸ್ಕ್ರತಿಗೆ ಅವಮಾನ ಮಾಡಿದರಲ್ಲ...ಅಂತ. ಯಾಕೆಂದರೆ ಈ ಹಗಲು ವೇಷಗಾರರೆಂಬ ಕಲಾವಿದರು ಬಡವರು. ಊರೂರು ಅಲೆದು, ಮನೆ ಮನೆ ಮುಂದೆ ನಿಂತು ಭಿಕ್ಷೆ ಬೇಡುವವರು. ಮನೆಯ ಯಜಮಾನತಿ ಮುನಿಸಿಕೊಂಡಂತೆ ಕಂಡರೆ ಹಲ್ಲುಕಿರಿದು, ಹನುಮನ ಚಟುವಟಿಕೆಗಳನ್ನು ತೋರಿಸಿ ಖುಷಿ ಮಾಡುವವರು.
ಕರ್ನಾಟಕದಲ್ಲಿ, ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಹಗಲು ವೇಷದವರು ಎಂಬ ಒಂದು ಕಲಾವಿದರ ಸಮುದಾಯ ಇದೆ. ಅವರು ಮೂಲತಃ ಅಲೆಮಾರಿಗಳು. ಮನೆ, ಮಠ ,ಆಸ್ತಿ ಏನೂ ಅವರಿಗೆ ಇಲ್ಲ. ಬಡತನವನ್ನೂ ಬೆನ್ನಿಗೆ ಅಂಟಿಸಿಕೊಂಡು, ಹಸಿದ ಹೊಟ್ಟೆಯನ್ನು ಮುಂದಿಟ್ಟುಕೊಂಡು ಉಳ್ಳವರ ಮನೆ ಬಾಗಿಲ ಮುಂದೆ ನಿಂತು ಏನೆಲ್ಲಾ ವರಸೆಗೆ, ಹಾಸ್ಯ, ಹಾಡು, ಕುಣಿತ ಮಾಡಿ ರಂಜಿಸುತ್ತಾರೆ. ರಾಮ, ಲಕ್ಷ್ಮಣ, ಸೀತೆ ವೇಷ ಹಾಕಿ, ಮನೆ ಮನೆ ಸುತ್ತಿ, ತಾವು ಹಾಕಿದ್ದ ಬಿಡಾರಕ್ಕೆ ಹೋಗುವ ಮೊದಲು ದಾರಿ ಮಧ್ಯೆ ಪುಳ್ಳೆ ಆಯುವ ಈ ಟೆಂಪೊರರಿ ಬಡ ರಾಮ ಸೀತೆಯರನ್ನು ನೋಡಿದಾಗ ನೀವು ಆಶ್ಚರ್ಯಕ್ಕೆ ಒಳಗಾಗಬಹುದು.
ಯಾವುದೇ ಸಂಸ್ಕೃತಿಯಂತೆ, ನಮ್ಮಲ್ಲಿ ಕೂಡಾ ಪುರಾಣ ಕಥೆ-ಪಾತ್ರಗಳಿಗೆ ವೇಷ ಹಾಕಿ ರಾತ್ರಿ ಹೊತ್ತು ನೃತ್ಯವನ್ನೋ ನಾಟಕವನ್ನೊ ಮಾಡುವುದುಂಟು. ಆದರೆ ಈ ವೇಷದವರು ಹಗಲು ಹೊತ್ತೇ ವೇಷ ಹಾಕುವುದರಿಂದ ಇವರನ್ನು ಹಗಲು ವೇಷದವರು ಎಂದು ಕರೆಯುತ್ತಾರೆ. ಇವರನ್ನು ಮನೆ ಮನೆಗೆ ರಾಮಾಯಣ, ಮಹಾಭಾರತವನ್ನು ಹೊತ್ತೊಯ್ಯುವ ಸಾಂಸ್ಕ್ರತಿಕ ರಾಯಭಾರಿಗಳೆಂದು ಕರೆಯಬಹುದು. ಆದರೆ ಈ ಬಡವರ ಸೇವೆಯನ್ನು ಧನಿಕರಾದ ಶ್ರೀಮಂತರು ಗೌರವಿಸುವುದಿಲ್ಲ. ಬಡವರ ಕೆಲಸವನ್ನು ಕೂಲಿ ಎಂದೂ್, ಶ್ರೀಮಂತರ ಕೂಲಿಯನ್ನು ಸೇವೆ್-ಸಾಧನೆ ಎಂದೂ ಕರೆಯುವುದು ದೊಡ್ಡವರ ವಾಡಿಕೆ!
ಆಗಾಗ ಈ ವೇಷಗಾರರ ಸಮಾವೇಷ ಇರುತ್ತದೆ. ಊರ ಕಡೆಯ ಜಾತ್ರೆಗಳಲ್ಲಿ ಎಲ್ಲಕಡೆಯಿಂದಲೂ ವೇಷಗಾರರು ಬಂದು ಸೇರುತ್ತಾರೆ. ಜಾತ್ರೆ ಪ್ರದೇಶದ ಬೇರೆ ಬೇರೆ ಮೂಲೆಗಳಲ್ಲಿ ತಮ್ಮ ಸ್ಥಳ ಕಾದಿರಿಸಿಕೊಳ್ಳುತ್ತಾರೆ. ತಮ್ಮ ನೈಪುಣ್ಯತೆಯನ್ನು ಎತ್ತಿ ತೋರಿಸುವ ಪಾತ್ರೆಗಳನ್ನು ಧರಿಸುತ್ತಾರೆ. ಈ ಸಂದಭದಲ್ಲಿ ನೆರೆದ ಮಂದಿಯ ಮುಂದೆ ಸೂಪರ್ ಸ್ಟಾರ್ ನಟರಾಗಲು ಏನೆಲ್ಲಾ ಶ್ರಮ ವಹಿಸುತ್ತಾರೆ. ಇಲ್ಲಿ ಹೀಗೆ ಹೆಸರು ಮಾಡಿಕೊಂಡರೆ ಮುಂದಿನ ವರ್ಷದವರೆಗೆ ಮಾರುಕಟ್ಟೆ ಮಾಡಿಕೊಂಡಂತೆ. ಅದರಲ್ಲೂ ಊರ ಗೃಹಿಣಿಯರು ಜಾತ್ರೆಗೆ ಬಂದು ಹಗಲು ವೇಷ ನೋಡಿ ಖುಷಿಯಾಗಿ ಹೋಗಿದ್ದರಂತೂ ವೇಷದವನಿಗೆ ಭಯಂಕರ ಲಾಭ. ಚೂರು-ಪಾರು ಉಳಿಕೆ ಕೊಡುವುದರ ಜೊತೆಗೆ ಗೃಹಿಣಿ ತನ್ನ ಮನೆಯ ಹಳೆ ಸೀರೆ, ಬಟ್ಟೆ ಕೊಡಬಹುದು. ಅಥವಾ ಯಜಮಾನನ ಹಳೆ ವೈನಾದ ಅಂಗಿ ಸಿಕ್ಕರೂ ಸಿಗಬಹುದು. ಆಗ ನಮ್ಮ ಹಗಲು ವೇಷದ ಸ್ಟಾರ್ ಹಿಗ್ಗಿ ಹೋಗುತ್ತಾನೆ.
ವೇಷ ಹಾಕುವವರಲ್ಲಿ ವಯಸ್ಸಾದವ-ಕಿರಿಯ ಎಂದೇನೂ ಬೇಧವಿಲ್ಲ. ಗಂಡಸರಂತೆ ಹೆಂಗಸರೂ ಭಾಗವಹಿಸಬಹುದು. ಗಂಡ ರಾಮನ ಪಾತ್ರ, ಹೆಂಡತಿ ಸೀತೆ ಪಾತ್ರ ಹಾಕಿದರೆ, ಮಗನೋ/ಮಗಳಿಗೋ ಹನುಮಂತನ ಪಾತ್ರ ಹಾಕಬಹುದು. ಕೆಲವು ಪುಟ್ಟ ವೇಷಧಾರಿಗಳಂತೂ ಹನುಮನ ಪಾತ್ರದಲ್ಲಿ ತುಂಬಾ ಮಿಂಚುತ್ತಾರೆ. ಮನೆಯ ಮಕ್ಕಳನ್ನು ನಗಿಸಿ-ಆಡಿಸಿ ಮೋಡಿ ಮಾಡಿ ಬಿಡುತ್ತಾರೆ. ಹಾಗಾದರೆ ಇವರ ಕಲೆಕ್ಷನ್ ಸ್ವಲ್ಪ ಹೆಚ್ಚುತ್ತದೆ. ಇತ್ತೀಚಿನ ದಿನಗಳಲ್ಲಿ ಈ ರೀತಿ ಕುಟುಂಬದವರು ಹಾಕುವ ವೇಷಗಳಿಗೆ ಬೇಡಿಕೆ ಇದೆ. ನಗರಗಳಲ್ಲಿ ನಡೆಯುವ ಮೆರವಣಿಗೆ, ಹಬ್ಬ, ಉತ್ಸವ ಅಥವಾ ರಾಜಕಾರಣಿಗಳ ಸಾಧನಾ ಸಮಾವೇಶಗಳಿಗೆ ಇಂಥ ತಂಡಗಳಿಗೆ ಆಹ್ವಾನ ಬರುತ್ತದೆ. ಸಮಾವೇಶ-ಉತ್ಸವಗಳಿಗೆ ಸೇರಿದ ಎಲ್ಲಾ ವಯಸ್ಸಿನ, ಎರಡೂ ಲಿಂಗದ ಜನರು ಮಸ್ತಿ ಮಾಡಲಿ ಎಂಬುದೇ ಆಹ್ವಾನ ಮಾಡುವವರ ಉದ್ದೇಶ. ತಮ್ಮ ಚಿಕ್ಕ ಮಕ್ಕಳಿಗೆ ತಮಾಷಿಯ ವೇಷಹಾಕಿ, ರಂಜಿಸಿ ಮುಂದಿನ ಸಮಾರಂಭಗಳಿಗೆ ಆಹ್ವಾನಕ್ಕೆ ಅವಕಾಶ ಮಾಡಿಕೊಳ್ಳಲು ಇವರು ಬಹಳ ಶ್ರಮ ಪಡುತ್ತಾರೆ. ಹೀಗೆ ಮಕ್ಕಳು ವೇಷ ಹಾಕಿರುವುದನ್ನು ಕಂಡರೆ ನಮ್ಮ ಕಲಾತಜ್ಞರು ತುಂಬ ಸಂತೋಷ ಪಡುತ್ತಾರೆ. ಸದರಿ ಕಲೆಯು ಯುವ ಪೀಳಿಗೆಯನ್ನು ಸೆಳೆದುಕೊಂಡು ಬೆಳೆಯುತ್ತಿದೆ, ಈ ಕಲೆ ನಾಶವಾಗುವುದಿಲ್ಲ, ಕಲಾವಿದರು ಕಡಿಮೆಯಾಗುವುದಿಲ್ಲ, ಎಲ್ಲಕ್ಕಿಂತ ಹೆಚ್ಚಾಗಿ ತಮ್ಮ ತಜ್ಞ ಪೀಳಿಗೆಗೂ ಮಾರುಕಟ್ಟೆ ಹೋಗುವುದಿಲ್ಲ ಎಂಬ ಭವಿಷ್ಯವಾದಿ ಚಿಂತನೆ ಇವರದು! ವೀರ ವಿದ್ವಾಂಸರೆಂಬ ಇನ್ನೊಂದು ವರ್ಗ ಇದೆ. ಕಲಾವಿದರು ತಮ್ಮ ಮಕ್ಕಳಿಗೆ ತಮ್ಮ ಕಲೆಯನ್ನು ಕಲಿಸುತ್ತಿಲ್ಲ...ತಮ್ಮ ಹೊಟ್ಟೆಯನ್ನು ತುಂಬಿಸಿಕೊಂಡರೆ ಸಾಕು ಎಂಬ ದರಿದ್ರ ಅವಸ್ಥೆಗೆ ಬಂದಿದ್ದಾರೆ...ಹೀಗಾದರೆ ನಮ್ಮ ಕಲೆಗಳು ಬೆಳೆಯುವುದು ಹೇಗೆ? ನಮ್ಮ ಸಂಸ್ಕ್ರತಿ ಭದ್ರವಾಗಿ ಬೇರೂರಿ ಬೆಳೆಯುವುದು ಹೇಗೆ?? ಎಂದು ಬೊಬ್ಬೆ ಹೊಡೆಯುತ್ತಾರೆ. ಬದುಕೇ ಭದ್ರ ಇಲ್ಲದಿರುವಾಗ ಬೇರು ಬೆಳೆಯುವುದು ಹೇಗೆ? ಹಸಿದ ಹೊಟ್ಟೆಯನ್ನು ಪೂರಾ ತುಂಬಿಸಿಕೊಳ್ಳಲು ಆಗದಿರುವಾಗ ಕಲೆಯನ್ನು ತುಂಬಿ ಬೆಳೆಸುವುದು ಹೇಗೆ?! ಅದರಲ್ಲೂ ಅನೇಕ ಜನಪದ ಕಲಾವಿದ ತಂಡಗಳಿಗೆ ಉಣ್ಣಲು ಊಟ, ಉಡಲು ಬಟ್ಟೆ ,ತಂಗಲು ಮನೆ ಕೂಡ ಇಲ್ಲ. ಊರಿನ ಜೋಪಡಿಗಳಲ್ಲೋ, ದೇವಸ್ತಾದ ಪಾಳಿಯಲ್ಲೋ, ಯಾವುದಾದರೂ ಯಜಮಾನನ ಹಳೆಯ ಮುರುಕ ಮನೆಯಲ್ಲೋ ಮೂರು ದಿವಸ ಇದ್ದು ಮುಂದಿನ ಊರಿಗೆ ಹೋಗುವ ಕಲಾವಿದರಿದ್ದಾರೆ. ಹೊರ ದೇಶಗಳಿಗೆ ಹೋಗಿ ಮನ್ನಣೆ ಪಡೆದುಕೊಂಡು ಬಂದ ಕಲಾವಿದ ತಂಡಗಳೂ ಈಗ ಇವೆ.
ಆದರೆ ಇತ್ತಿಚೆಗೆ ಹಗಲು ವೇಷದ ಬಡ ಕಲಾವಿದರಿಗೆ ಅಂಥ ಮನ್ನಣೆ ಇಲ್ಲ. ಒಳಗಿಗೂ ಹೊರಗಿಗೂ ವ್ಯತ್ಯಾಸವೇ ಕಾಣದ ಒರಿಜಿನಲ್ ವೇಷಗಾರರೇ ಈಗ ಬಹಳ ಜನ ಇರುವಾಗ ಇವರನ್ನು ನಕಲಿ ವೇಷಗಾರರೆಂದು ಕರೆದು ಜನ ಜರಿದು ಕಳಿಸುತ್ತಾರೆ. ಇತ್ತೀಚೆಗೆ ರಾಮಾಯಣ, ಮಹಾಭಾರತದ ಪಾತ್ರಗಳ ವೇಷವನ್ನು ವಿದ್ಯಾವಂತರೇ ಹಾಕುತ್ತಿದ್ದಾರೆ! ಶಿಕ್ಷಣ ಪಡೆದ ವಿದ್ಯಾವಂತ ವರ್ಗದ ಜನರೇ ಇಂಥ ಪಾತ್ರಗಳಿಗೆ ವಿಶೇಷ ವೇಷ ಪದ್ದತಿಯನ್ನೂ ಅಳವಡಿಸಿಕೊಂಡು ತಯಾರಾಗಿ ಬಿಟ್ಟಿದ್ದಾರೆ. ಹಾಗಾಗಿ ಆದಾಯದ ಪ್ರದರ್ಶನಗಳಲ್ಲಿ ಇವರೇ ಹಾಜರಿರುತ್ತಾರೆ. ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯ ಇಲ್ಲ ಎಂಬ ಮಾತಿನಂತೆ, ಈ ನಾಡಿನ ಪ್ರಜೆಗಳಿಗೆ ರಾಜ್ಯ ಇಲ್ಲ ಎಂಬ ಮಾತಿನಂತೆ, ಈ ನಾಡಿನ ಪ್ರಜೆಗಳಾಗಿದ್ದರೂ ಬೇರೆ ಪ್ರಜೆಗಳಿಗೆ ಸಿಗುವ ಸೌಲಭ್ಯಗಳು ಹಗಲು ವೇಷಗಾರರೆಂಬ ಬಡ ಕಲಾವಿದರಿಗೆ ಸಿಗುತ್ತಿಲ್ಲ. ಬಡವರಿಗೆ ಭೂಮಿಯೇ ತಾಯಿ, ಆಕಾಶವೇ ಅಪ್ಪ ಎನ್ನುವ ಪರಿಸ್ಥಿತಿ ಈ ಕಲಾವಿದರದ್ದಾಗಿದೆ. |
|