ಯುರೋಪಿನ ಕಪ್ಪು ಅಲೆಮಾರಿಗಳು - ೨

ಟೋನಿ

ಹಾಗೆ ನಾನು ಫೋಟೋ ತೆಗೆಸಿಕೊಂಡು ಆತನನ್ನು ಮಾತಾಡಿಸತೊಡಗಿದ್ದನ್ನು ಕಂಡ ಹಲವರು ಆತನಿಂದ ಅಪಾಯವಿಲ್ಲವೆಂಬುದನ್ನು ಅರಿತು ಹತ್ತಿರ ಬರತೊಡಗಿದ್ದರು. ಯೂರೋಪಿಯನ್ನರು ಮಾರುತ್ತಿದ್ದ ವಸ್ತುಗಳಿಗೂ ಕಪ್ಪು ಅಲೆಮಾರಿಗಳೆನಿಸಿಕೊಂಡವರು ಮಾರುತ್ತಿದ್ದ ವಸ್ತುಗಳಿಗೂ ಯಾವ ವ್ಯತ್ಯಾಸವೂ ಇರಲಿಲ್ಲ. ಆದರೆ ಬೆಲೆಯಲ್ಲಿ ಮಾತ್ರ ಬಹಳ ವ್ಯತ್ಯಾಸವಿತ್ತು. ಬಿಳಿಯ ವ್ಯಾಪಾರಿಗಳ ಬಳಿ ಚವ್ಕಾಸಿ ಮಾಡಲು ಹೊರಟರೆ ಅವರು ಮುಖ ಸಿಂಡರಿಸುತ್ತಿದ್ದರು. ಈ ಕಪ್ಪು ಅಲೆಮಾರಿಗಳೋ ಚೀಪ್ ರೇಟ್, ಚೀಪ್ ರೇಟ್ ಎಂದು ಕೂಗುತ್ತಾ ಕಂಡ ಕಂಡ ಪ್ರವಾಸಿಗರಿಗೆಲ್ಲಾ ದುಂಬಾಲು ಬೀಳ ತೊಡಗಿದ್ದರು. ಅವರು ಮಾರುತ್ತಿದ್ದ ವಸ್ತುಗಳನ್ನು ಎಷ್ಟೇ ಕಡಿಮೆ ಬೆಲೆಗೆ ಕೇಳಿದರೂ ಅವರು ನಮ್ಮ ಗೈಡ್ ಹೇಳಿದಂತೆ ಹೊಡೆಯಲೂ ಬರಲಿಲ್ಲ, ರೇಗಲೂ ಇಲ್ಲ, ಯೂರೋಪಿನ ವ್ಯಾಪಾರಿಗಳಂತೆ ಮುಖವನ್ನೂ ಸಿಂಡರಿಸಿಕೊಳ್ಳಲಿಲ್ಲ. ಅವರ ಬಳಿ ಧಾರಾಳವಾಗಿ ಚವ್ಕಾಸಿ ಮಾಡಬಹುದೆಂದೂ, ಕಡಿಮೆ ಬೆಲೆಗೆ ವಸ್ತುಗಳನ್ನು ಕೊಡುತ್ತಾರೆಂದು ತಿಳಿದದ್ದೇ ತಡ ಪ್ರವಾಸಿಗರು ಗೈಡ್ ನೀಡಿದ್ದ ಎಚ್ಚರಿಕೆಯನ್ನೂ ಕಡೆಗಣಿಸಿ ಅವರ ಬಳಿ ವ್ಯಾಪಾರ ಮಾಡತೊಡಗಿದ್ದರು. ಹಾಗೆ ಕಪ್ಪು ಜನರಿಗೆ ಮುತ್ತಿಗೆ ಹಾಕಿಕೊಂಡ ಪ್ರವಾಸಿಗರನ್ನು ಗೈಡ್ ಜ್ಯೂಜರ್ ಲುನ್ವಾಲ ತೆಪ್ಪಗೆ ನೋಡುತ್ತಾ ನಿಂತ. ಕಡಿಮೆ ಬೆಲೆಯ ಆಕರ್ಷಣೆಯ ಮುಂದೆ ಆತ ನೀಡಿದ್ದ ಎಚ್ಚರಿಕೆಯ ಮಾತುಗಳೆಲ್ಲಾ ಸಿಯಾನ್ ನದಿಯಲ್ಲಿ ಕೊಚ್ಚಿ ಹೋಗಿದ್ದವು.

ಹಾಗಂತ ಈ ಯುವಕರುಗಳಲ್ಲೂ ಕೆಲವರು ಕಿಲಾಡಿಗಳಿದ್ದರು. ನಾವು ಬಸ್ಸಿಳಿದು ಅವರ ಬಳಿ ಹೋದ ಕೂಡಲೇ ನಮ್ಮನ್ನು ಭಾರತೀಯರೆಂದು ಸುಲಭವಾಗಿ ಗುರುತಿಸಿದ್ದರು. ಬಹುಶಃ ನಮ್ಮವರು ಮಾಡುತ್ತಿದ್ದ ಅತಿಯಾದ ಚವ್ಕಾಸಿಯ ಬಗ್ಗೆ ಅವರಿಗೆ ತಿಳಿದಿದ್ದರಿಂದ ಕಿಲಾಡಿಗಳಾದ ಕೆಲವರು ಮೊದಲೇ ಹೆಚ್ಚಿನ ಬೆಲೆಯನ್ನು ಹೇಳಿಬಿಡುತ್ತಿದ್ದರು. ಆದರೆ ಅವರು ಹೇಳುತ್ತಿದ್ದ ಬೆಲೆಗೂ ನಾವು ಕೇಳುತ್ತಿದ್ದ ಬೆಲೆಗೂ ಅಜಗಜಾಂತರ ವ್ಯತ್ಯಾಸವಿರುತ್ತಿತ್ತು. ಚವ್ಕಾಸಿ ಮಾಡುವ ವಿಷಯದಲ್ಲೇನಾದರೂ ವಿಶ್ವ ಮಟ್ಟದಲ್ಲಿ ಸ್ಪರ್ಧೆಯಿಟ್ಟಲ್ಲಿ ಖಂಡಿತವಾಗಿಯೂ ನಮ್ಮ ಭಾರತೀಯರಿಗೇ ಚಾಂಪಿಯನ್ ಪಟ್ಟ ಕಟ್ಟಿಟ್ಟ ಬುತ್ತಿಯೇ. ಏಕೆಂದರೆ ಇಂತಹ ಸುಲಭ ಸ್ಪರ್ಧೆಗಳಲ್ಲೇ ನಾವು ನಿಸ್ಸೀಮರಲ್ಲವೇ? ಯಾವ ದೇಶದ ವ್ಯಾಪಾರಿಯಾದರೂ ಅವನ ಖೆಡ್ಡಾಕ್ಕೆ ಸುಲಭವಾಗಿ ಬೀಳುವ ಮಿಕಗಳಲ್ಲ ನಾವು. ನಮ್ಮವರ ಮನಸ್ಥಿತಿಯನ್ನು ಯೂರೋಪ್ ದೇಶಗಳ ವ್ಯಾಪಾರಿಗಳು ಕರಗತ ಮಾಡಿಕೊಂಡಿದ್ದರೇನೋ. ಅದಕ್ಕೇ ಈ ಕಪ್ಪು ವ್ಯಾಪಾರಿಗಳು ನಮ್ಮನ್ನು ಕಂಡಕೂಡಲೇ ತಮ್ಮ ವಸ್ತುಗಳನ್ನು ಚೀಪ್ ರೇಟ್, ಚೀಪ್ ರೇಟ್ ಎಂದು ಕೈಗಿಡಲು ಬರುತ್ತಿದ್ದರು. ಅವರು ನಮ್ಮನ್ನೇ ಚೀಪ್ ಎಂದು ತಿಳಿದಿದ್ದರೋ, ಅಥವಾ ನಾವು ಕೊಳ್ಳುವುದು ಬರೀ ಚೀಪ್ ರೇಟಿನ ವಸ್ತುಗಳೆಂದುಕೊಂಡಿದ್ದರೋ ನನಗರ್ಥವಾಗಲಿಲ್ಲ. ಆದರೆ ಅವರು ಹಾಗೆ ಕೂಗುವುದಕ್ಕೇ ನಾವುಗಳು ಅವರ ಬಳಿ ವ್ಯಾಪಾರಮಾಡುತ್ತಿದ್ದುದಂತೂ ನಿಜವಾಗಿತ್ತು. ಅದೇಕೋ ನಾನಂತೂ ಅವರನ್ನು ಕಂಡಾಗಿಂದ ಅವರಿಗೆ ಜಾಸ್ತಿ ಬೆಲೆ ಕೊಟ್ಟರೂ ಪರವಾಗಿಲ್ಲ ಅವರ ಬಳಿಯೇ ವ್ಯಾಪಾರ ಮಾಡುವ ನಿರ್ಧಾರ ಮಾಡಿದ್ದೆ. ನಾವೆಲ್ಲಾ ಸುತ್ತಾಡಿ ಬಸ್ಸಿಗೆ ಹಿಂದಿರುಗುವ ಹೊತ್ತಿಗೆ ಕಡಿಮೆ ಬೆಲೆಗೆ ಕೊಡಲು ಒಪ್ಪದವರೆಲ್ಲಾ ಇನ್ನು ಇವರನ್ನು ಬಿಟ್ಟರೆ ಸಿಕ್ಕರೆಂಬಂತೆ ನಾವು ಕೇಳಿದ ಬೆಲೆಗೇ ಕೊಟ್ಟುಬಿಡುತ್ತಿದ್ದರು. ಅವರುಗಳಿಗೆ ಅಂದಿನ ತುತ್ತಿನ ಚೀಲ ತುಂಬುವುದಕ್ಕೆ ಅವಶ್ಯಕತೆಯಿರುವಷ್ಟು ಸಂಪಾದನೆಯಾದರೆ ಸಾಕೆನಿಸಿದ್ದಿರಬಹುದು. ಇತರ ಯೂರೋಪಿನ ವ್ಯಾಪಾರಿಗಳಿಗಿಂತಲೂ ಕಡಿಮೆ ಬೆಲೆಗೆ ಕೊಟ್ಟುಬಿಡುತ್ತಿದ್ದರು.

ಈ ವಲಸೆಗಾರರು ಅತೀ ಲಾಭ ಬಯಸದೇ ವ್ಯಾಪಾರ ಮಾಡುತ್ತಿದ್ದುದರಿಂದಲೇ ಯುರೋಪಿಯನ್ನರು ಇವರ ವಿರುದ್ದ ಇಲ್ಲ ಸಲ್ಲದ್ದನ್ನು ಹೇಳುತ್ತ ವ್ಯವಸ್ತಿತ ಪಿತೂರಿ ನಡೆಸಿದಂತೆ ಕಾಣುತ್ತಿತ್ತು. ನಾವು ಪ್ರವಾಸ ಮಾಡಿದ ಯೂರೋಪಿನ ದೇಶಗಳಲ್ಲೆಲ್ಲಾ ಈ ಕಪ್ಪು ವ್ಯಾಪಾರಿಗಳು ಕಾಣಿಸುತ್ತಿದ್ದರು. ನನಗೆ ಇಟಲಿಯಲ್ಲಿ ಸಿಕ್ಕ ಅರಪ್ ಮೊಯ್ ಮತ್ತು ಅಹಮದೋ ಸಿಸ್ಸೆ ಎಂಬಿಬ್ಬರು ಕಪ್ಪು ಅಲೆಮಾರಿ ಯುವಕರು ಯೂರೋಪಿನಲ್ಲಿಯ ಪೋಲೀಸರು ನೀಡುತ್ತಿದ್ದ ಕಿರುಕುಳದ ಬಗ್ಗೆ ಮಾತನಾಡಿದ್ದರು. ಕೀನ್ಯಾ ಹಾಗೂ ಅಕ್ಕ ಪಕ್ಕದ ದೇಶಗಳಿಂದ ಹೊಟ್ಟೆ ಪಾಡಿಗಾಗಿ ವಲಸೆ ಬಂದಿದ್ದ ಅವರು ಯುರೋಪಿನ ದೇಶಗಳಿಗೆ ತಮ್ಮ ವಾಸದ ವಾರ್ಷಿಕ ಶುಲ್ಕವನ್ನು ಪಾವತಿಸುತ್ತಿದ್ದರೂ ಅವರಿಗೆ ಅಲ್ಲಿನ ಸರ್ಕಾರಗಳಾಗಲೀ, ಜನತೆಯಾಗಲೀ ಸಹಕಾರ ನೀಡುವುದಿಲ್ಲವೆಂದೂ ನಮ್ಮನ್ನು ತೀರಾ ನಿಕೃಷ್ಟವಾಗಿ ಕಾಣುತ್ತಾರೆಂದೂ, ನಮ್ಮ ದೇಶಗಳಲ್ಲಿ ರಾಜಕೀಯ ಅರಾಜಕತೆ ಇದ್ದು ನಮ್ಮ ಜನಗಳಲ್ಲೇ ಹೊಡೆದಾಟ ಬಡಿದಾಟಗಳು ದಿನನಿತ್ಯವೂ ನಡೆಯುತ್ತಿರುವುದರಿಂದ ತುತ್ತು ಅನ್ನವನ್ನರಸಿ ಯುವಜನಾಂಗ ಈ ದೇಶಗಳಿಗೆ ವಲಸೆ ಬರುವುದು ಅನಿವಾರ್ಯವಾಗಿದೆಯೆಂದರು. ಯೂರೋಪಿನಲ್ಲಿ ಆಫ್ರಿಕಾದವರಲ್ಲದೆ ಏಷ್ಯಾದಿಂದ ವಲಸೆ ಹೋಗಿದ್ದ ವ್ಯಾಪಾರಿಗಳೂ ಬಹಳಷ್ಟು ಜನ ಕಂಡುಬಂದರಾದರೂ ಅವರು ವ್ಯವಸ್ತಿತವಾಗಿ ವ್ಯಾಪಾರ ನಡೆಸುತ್ತಿದ್ದರು. ಅಶ್ಚರ್ಯವೆಂದರೆ ನಮ್ಮ ಭಾರತದ ಪಕ್ಕದ ಬಾಂಗ್ಲಾದೇಶೀಯರು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದರು. ಈ ಬಾಂಗ್ಲೀಯರು ಮೊದಲೇ ಬುದ್ದಿವಂತರು. ಇವರೆಲ್ಲಾ ಅಂಗಡಿಗಳನ್ನಿಟ್ಟುಕೊಂಡು ಕೊಂಚ ಮಟ್ಟಿಗೆ ಆರ್ಥಿಕವಾಗಿ ಸುಧಾರಿಸಿದಂತಿದ್ದರು. ಆದರೆ ನಾವು ಸುತ್ತಾಡಿದೆಡೆಯೆಲ್ಲೂ ಸಹ ಅಂಗಡಿಯನ್ನಿಟ್ಟುಕೊಂಡು ಸೆಟ್ಲಾದ ಆಫ್ರಿಕನ್ನರು ಕಾಣಿಸಲಿಲ್ಲ. ಅವರದೇನಿದ್ದರೂ ನಮ್ಮ ಬೆಂಗಳೂರಿನ ಅವೆನ್ಯೂ ರಸ್ತೆ, ಮೆಜೆಸ್ಟಿಕ್ ನಲ್ಲಿನ ರಸ್ತೆ ಬದಿಯ ಫುಟ್ಪಾತಿನ ವ್ಯಾಪಾರಿಗಳಂತ ವ್ಯಾಪಾರವಾಗಿತ್ತು. ಆ ದುಬಾರಿ ದೇಶಗಳಲ್ಲಿ ಇವರು ಬದುಕು ನಡೆಸುತ್ತಾರಾದರೂ ಹೇಗೆಂಬ ಕುತೂಹಲ ನನ್ನದಾಗಿತ್ತು.

ಯುರೋಪಿನ ಬಗಲಲ್ಲೇ ಇರುವುದು ಆಫ್ರಿಕಾ. ಸ್ಪೇನ್ ದೇಶದಿಂದ ಜಿಬ್ರಾಲ್ಟೆರ್ ಜಲಸಂಧಿ ದಾಟಿದರೆ ಸಿಗುವ ಆಫ್ರಿಕಾದ ಬಹುತೇಕ ದೇಶಗಳಲ್ಲಿ ಇಂದಿಗೂ ಜನಾಂಗೀಯ ಕಲಹಗಳು ನಿರಂತರವಾಗಿವೆ. ಅಪಾರ ನೈಸರ್ಗಿಕ ಸಂಪತ್ತನ್ನು ಹೊಂದಿರುವ ದೇಶಗಳಿರುವುದೇ ಆಫ್ರಿಕಾ ಖಂಡದಲ್ಲಿ. ದುರಂತವೆಂದರೆ ಶತಮಾನಗಳಿಂದಲೂ ಅರಬ್ಬರಿಂದ-ಯೂರೋಪಿಯನ್ನರಿಂದ ಸತತವಾಗಿ ಶೋಷಣೆಗೊಳಗಾದ ದೇಶಗಳವು. ಅರಬ್ಬರು ಇಲ್ಲಿಯ ಜನರನ್ನೇ ಹಿಡಿದು ಗುಲಾಮರನ್ನಾಗಿ ಮಾರಾಟ ಮಾಡುವ ದಂಧೆಯನ್ನು ನಡೆಸಿದವರು. ಯೂರೋಪಿಯನ್ನರು ಈ ದೇಶಗಳಲ್ಲಿದ್ದ ಖನಿಜ ಸಂಪತ್ತನ್ನು ಲೂಟಿ ಮಾಡಿದ್ದರು. ಆ ಕಡೆ ಅರಬ್ಬರು ಇತ್ತ ಕಡೆ ಯೂರೋಪಿಯನ್ನರು, ಒಂದೆಡೆ ಆ ದೇಶಗಳಲ್ಲಿನ ಪ್ರಾಕೃತಿಕ ಸಂಪತ್ತನ್ನು ದೋಚುವುದರ ಜತೆಗೇ ಅಲ್ಲಿನ ಬುಡಕಟ್ಟು ಸಂಸ್ಕ್ರತಿಯನ್ನು ನಾಶಮಾಡುತ್ತಾ ಅಲ್ಲಿನ ಜನತೆಯನ್ನು ಹಿಂಡಿ ಹಿಪ್ಪೆ ಮಾಡಿದ್ದರು. ಯೂರೋಪಿಯನ್ನರು ಪರಮ ಪವಿತ್ರನಾದ ಯೇಸುವು ನಿಮ್ಮೆಲ್ಲಾ ಪಾಪಗಳನ್ನು ತೊಳೆದು ನಿಮ್ಮನ್ನು ಪವಿತ್ರರನ್ನಾಗಿ ಮಾಡುತ್ತಾನೆಂದು ನಂಬಿಸಿ ಆ ಬುಡಕಟ್ಟು ಜನಾಂಗದವರನ್ನು ಕ್ರಿಶ್ಚಿಯನ್ನರನ್ನಾಗಿ ಮತಾಂತರ ಮಾಡಿಸಿದರೆ, ಅರಬ್ಬರು ಅಲ್ಲಾಹುವು ನಿಮಗೆ ಸ್ವರ್ಗವನ್ನೇ ನೀಡುತ್ತಾನೆಂದು ಆ ಜನರನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿಸತೊಡಗಿದ್ದರು. ಈ ಎರಡು ಮತಾಂಧ ಧರ್ಮೀಯರ ಸಂಚಿಗೆ ಸಿಕ್ಕಿ ಸಾವಿರಾರು ಬುಡಕಟ್ಟು ಜನಾಂಗಗಳು ನಾಶವಾಗಿದ್ದವು.

ಬಹುತೇಕ ಆಫ್ರಿಕನ್ ದೇಶಗಳು ೬೦ರ ದಶಕದಿಂದೀಚೆಗೆ ಸ್ವಾತಂತ್ರ್ಯವನ್ನು ಪಡೆದುಕೊಂಡಿದ್ದವು. ಇಂದಿಗೂ ಕೀನ್ಯಾ, ಇಥಿಯೋಪಿಯಾ, ಸೊಮಾಲಿಯ, ಸುಡಾನ್ ಸೇರಿದಂತೆ ಅನೇಕ ಆಫ್ರಿಕನ್ ದೇಶಗಳಲ್ಲಿ ಜನಾಂಗೀಯ ಕಲಹಗಳು ನಿಂತಿಲ್ಲ. ಪೈಪೋಟಿಗಿಳಿದವರಂತೆ ಇಲ್ಲಿನ ಬುಡಕಟ್ಟು ಜನಾಂಗದವರನ್ನು ಬಲವಂತ ಮಾಡಿಯೋ, ಆಮಿಷ ಒಡ್ಡಿಯೋ ಪರಸ್ಪರರು ಬಡಿದಾಡುವಂತೆ ಮಾಡುವಲ್ಲಿ ಅರಬ್ಬರು ಹಾಗು ಯೂರೊಪಿಯನ್ನರ ಪಾತ್ರ ಮುಖ್ಯವಾಗಿದೆ. ಈ ದೇಶಗಳಲ್ಲಿನ ಅರಾಜಕತೆಯಿಂದ ರೋಸತ್ತಿದ್ದ ಯುವಜನಾಂಗ ತಮ್ಮನ್ನು ಮತಾಂತರಗೊಳಿಸಿದ ದೇಶಗಳಿಗೆ ವಲಸೆ ಹೋದಲ್ಲಿ ತಮ್ಮ ಬದುಕು ಹಸನಾಗುವುದೆಂಬ ಭ್ರಮೆಯಿಂದ ಬರಲಾರಂಭಿಸಿದ್ದರು. ಹಾಗೆ ಬಂದ ಕಪ್ಪು ವಲಸಿಗರನ್ನು ಅರಬ್ಬರಾಗಲೀ, ಯೂರೋಪಿಯನ್ನರಾಗಲೀ ತಮ್ಮವರೆಂದು ಸ್ವಾಗತಿಸಲಿಲ್ಲ. ಅವರುಗಳಿಗೆ ತಮ್ಮ ತಮ್ಮ ಧರ್ಮಗಳನ್ನು ಆ ಬುಡಕಟ್ಟು ಜನಾಂಗದವರ ಮೇಲೆ ಹೇರಿ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಬೇಕೆಂಬ ಹಕೀಕತ್ತು ಇತ್ತಷ್ಟೇ.

ಹಿಂದೆ ಬುಡಕಟ್ಟು ಜನಾಂಗದಲ್ಲಿ ಈ ಪ್ರಮಾಣದ ಘರ್ಷಣೆಗಳಿರಲಿಲ್ಲ. ಧರ್ಮಗಳ ಪ್ರವೇಶವಾದ ನಂತರವೇ ಅಲ್ಲಿ ಅರಾಜಕತೆಯುಂಟಾಗಿದೆ, ಪರಸ್ಪರ ಕಚ್ಚಾಟ ನಡೆಯುತ್ತಲೇ ಇದೆ. ಜೀವಂತವಾಗಿ ಬದುಕಿದರೇ ಸಾಕೆಂದು ಅರಪ್ ಮೋಯಿ, ಅಹಮದ್ ಸಿಸ್ಸೆ ಯಂತಹ ಸಾವಿರಾರು ಯುವಕರು ಪವಿತ್ರ ಅಲ್ಲಾಹು, ಯೇಸುಕ್ರಿಸ್ತನ ದೇಶಗಳಿಗ ಹೋದರೆ ಅಲ್ಲಿನ ಜನತೆ ತಮ್ಮನ್ನು ಅವರರಲ್ಲೊಬ್ಬರಂತೆ ಸ್ವೀಕರಿಸಿ ಬದುಕನ್ನು ಹಸನುಗೊಳಿಸುತ್ತಾರೆಂಬ ನಂಬಿಕಯಿಂದ ವಲಸೆ ಹೋಗುತ್ತಲೇ ಇದ್ದಾರೆ. ಅಲ್ಲಿನ ಜನತೆಯಿಂದ ಕ್ಷಣ ಕ್ಷಣಕ್ಕೂ ಅಪಮಾನಕ್ಕೀಡಾಗುತ್ತಿದ್ದಾರೆ. ಇಂದಲ್ಲ ನಾಳೆ ನಮ್ಮ ದೇಶಗಳಲ್ಲಿ ಶಾಂತಿ ನೆಲೆಸುತ್ತದೆ. ನಾವೂ ನೆಮ್ಮದಿಯಾಗಿ ನಮ್ಮ ದೇಶಕ್ಕೆ ಹಿಂದಿರುಗುತ್ತೇವೆಂಬ ಆಶಾವಾದದೊಂದಿಗೇ ತಮ್ಮ ಅಲೆಮಾರಿ ಜೀವನವನ್ನು ಸವೆಸುತ್ತಿದ್ದ ಯುವಕರ ಆಶಯವನ್ನು ಆ ಅಲ್ಲಾಹು, ಏಸುಕ್ರಿಸ್ತರು ಬೇಗನೇ ಈಡೇರಿಸಲೆಂದು ಕೇಳಿಕೊಳ್ಳುವುದಷ್ಟೇ ನನ್ನಿಂದಾದದ್ದು. ಅಲ್ಲದೆ ನಾನು ಏನಾದರೂ ಕೊಳ್ಳುವುದಾದಲ್ಲಿ ಅವರ ಬಳಿಯೇ ಎಂದು ನಿರ್ಧರಿಸಿದ್ದೆ. ಈ ನನ್ನ ನಿರ್ಧಾರದಿಂದ ಮುಂದೆ ವೆನಿಸ್ ನಗರದಲ್ಲಿ ನಾನು, ನನ್ನೊಟ್ಟಿಗಿದ್ದ ಸಹ ಪ್ರವಾಸಿಗ ರಾಜೇಗೌಡರು ನಮ್ಮ ತಂಡದಿಂದ ತಪ್ಪಿಸಿಕೊಂಡು ಪರದಾಡುವಂತಾಗಿತ್ತು.

ಬಾಡಿ-ಗಾಡಿಗೇ ಕುತ್ತಾದ ಸ್ಪೀಡ್ (ಲಿಮಿಟ್)

ಶಶಾಂಕ್ ಶೆಟ್ಟಿ
ಈ ಮಣ್ಣಿನ ಗುಂಡಿಯೊಳಗೆ ಏಕೆ ಬಂದು ಕೂತಿದ್ದೀವಿ ಎಂದು ಗಾಬರಿಗೆಟ್ಟ ತಲೆಯನ್ನು ಉಪಯೋಗಿಸಿ ಎರಡು ನಿಮಿಷ ಆಲೋಚನೆ ಮಾಡಿದಾಗ ಸಮಸ್ಯೆ ಸ್ಪೀಡ್ ಲಿಮಿಟ್ ಗೆ ಸಂಬಂಧಿಸಿದ್ದು ಎಂದು ಅರ್ಥವಾಗಿತ್ತು. ಹೆಚ್ಚು ಕಡಿಮೆ ಹನ್ನೆರಡು ವರ್ಷಗಳ ಅಪಘಾತ ರಹಿತ ಡ್ರೈವಿಂಗ್ ಅನುಭವವನ್ನು ರೆಸ್ಯೂಮೆಯಲ್ಲಿಟ್ಟುಕೊಂಡೂ ಅವತ್ತು ನನ್ನ ಬದುಕಿನ ಅಮೂಲ್ಯ ಆಸ್ತಿಯೊಡನೆ ಮಣ್ಣಿನ ಗುಂಡಿಗೆ ಬಂದು ಕೂತಿದ್ದೆ! ಕಡಿದಾದ ತಿರುವಿನಲ್ಲಿದ್ದ ನನ್ನ ಎಕ್ಸಿಟ್, ರೋಡ್ ನ ಮೇಲೆ ಬೀಳುತ್ತಿದ್ದ ಸೋನೆ ಮಳೆಯನ್ನು ವಿಶೇಷವಾಗಿ ಪರಿಗಣಿಸದೇ ಇದ್ದಿದ್ದೇ ಅವತ್ತಿನ ನನ್ನ ಆ ಪರಿಸ್ಥಿತಿಗೆ ಕಾರಣವಾಗಿತ್ತು.
ನಾನು ನನ್ನ ಫ್ಯಾಮಿಲಿ ಜೊತೆಗೆ ಫ್ಲೋರಿಡಾನಲ್ಲಿ ಸುತ್ತಾಡಲು ಹೋಗಿದ್ದೆ. ಅವತ್ತು ಡಾಲ್ಫಿನ್ ಗಳ ಆಟವನ್ನು ನೋಡಲು ಸೀ ವರ್ಲ್ಡ್ ಗೆ ಹೋಗುತ್ತಿದ್ದೆವು. ಟೋಲ್ ರೋಡ್ ದಾಟಿಕೊಂಡ ಸಂತೋಷದಲ್ಲಿ, ಸೀ ವರ್ಲ್ಡ್ ಅನ್ನು ಬೇಗ ತಲುಪುವ ಖುಶಿಯಲ್ಲಿ ಡ್ರೈವ್ ಮಾಡುತ್ತಿದ್ದವನಿಗೆ ವೇಗದ ಮೇಲೆ ಗಮನ ಕಮ್ಮಿಯಾಗಿತ್ತು. ಹುಷಾರು!! ಇಲ್ಲಿ ಕಡಿದಾದ ತಿರುವು ಇದೆ ಎಂದು ಯಾವುದೇ ಬೋರ್ಡ್ ಎಚ್ಚರಿಸುವ ಮೊದಲೇ, ಕ್ಷಣಗಳಲ್ಲಿ ನಾವು ರೋಡ್ ನಿಂದ ನೂರು ಯಾರ್ಡ್ ಗಳಷ್ಟು ದೂರ ಇದ್ದ ಮಣ್ಣಿನ ಗುಂಡಿಯೊಂದರಲ್ಲಿ ರೊಯ್ಯ್ ಎಂದು ಕಾರ್ ನಲ್ಲಿ ಎರಡು ಸುತ್ತು ಹಾಕಿಕೊಂಡು ಬಂದು ಕುಳಿತಿದ್ದೆವು. ಕಾರಿನಲ್ಲಿ ಸೀಟ್ ಬೆಲ್ಟ್ ಹಾಕಿಕೊಂಡು ಕುಳಿತಿದ್ದ ನಾವೆಲ್ಲರೂ ಸುರಕ್ಷಿತವಾಗಿದ್ದೆವು. ಆ ಮಣ್ಣಿನ ಗುಂಡಿ ಆಳವಾಗೇನೂ ಇರಲಿಲ್ಲ, ಒಳ್ಲೆ ಹುಲ್ಲು ಬೆಳೆದುಕೊಂಡು ಸ್ಪೀಡ್ ಬ್ರೇಕರ್ ಥರವೇ ಇತ್ತು. ಎರಡು ರೌಂಡ್ ಹುಚ್ಚಾಪಟ್ಟೆ ತಿರುಗಿದ ಶಾಕ್, ನಡುಕ, ಗಾಬರಿ ಬಿಟ್ಟರೆ ಬೇರೆ ಮೈ-ಕೈಗೆ ಏನೂ ಆಗಿರಲಿಲ್ಲ. ಕೆಳಗಿಳಿದು ನೋಡಿದಾಗ ನಮ್ಮ ಕಾರ್ ನ ಟೈರ್ ಪಂಕ್ಚರ್ ಆಗಿ, ಗುಂಡಿಯೊಳಗೆ ತಿರುಗಿದ ರಭಸಕ್ಕೆ ವೀಲ್ ನ ರಿಮ್ ಬಾಗಿರುವುದು ಕಂಡಿತು. ನಮ್ಮ ಸಹಾಯಕ್ಕೆ ಕೆಲ ನಿಮಿಷಗಳಲ್ಲಿಯೇ ಸ್ಟೇಟ್ ಟ್ರೂಪರ್ (ಫ್ರೀವೇ ಗಳಲ್ಲಿ ನಿಯಮಿತವಾಗಿ ಸಂಚರಿಸುವ ಪೊಲೀಸ್ ನವರು) ಬಂದು ಕಾರ್ ಅನ್ನು ಗುಂಡಿಯಿಂದ ಮೇಲೆತ್ತಲು ಸಹಾಯ ಮಾಡಿದರು. ಕಾರನ್ನು ಹೊರಕ್ಕೆಳೆದು ಅಬ್ಬಾ ನಮ್ಮ ಅದೃಷ್ಟ ಚನ್ನಾಗಿತ್ತು, ಎಲ್ಲರೂ ಪಲ್ಟಿ ಹೊಡೆದು ಚಟ್ನಿ ಆಗುವುದನ್ನು ತಪ್ಪಿಸಿಕೊಂಡೆವು ಅಂತ ಒಬ್ಬರನ್ನೊಬ್ಬರು ಹಗ್ ಮಾಡಿಕೊಂಡು ಉಳಿದ ರಜೆಯನ್ನು ಹೆಚ್ಚು ಗಡಿಬಿಡಿ-ಗಲಾಟೆಯಿಲ್ಲದಂತೆ ಲೋ ಪ್ರೊಫೈಲ್ ಆಗಿ, ಸಮಾಧಾನ ಮಾಡಿಕೊಳ್ಳುವುದರಲ್ಲಿ ಕಳೆದು ಮತ್ತೆ ನಮ್ಮ ಊರಿನ ಕಡೆ ಹೊರಟು ಬಂದೆವು.
ದಾರಿಯಲ್ಲಿ ನಮ್ಮ ಮನೆಯ ಕಟ್ಟುನಿಟ್ಟಿನ ಸಂಪ್ರದಾಯದಂತೆ ಯಾಕೆ ಹಾಗಾಯಿತು, ಏನೆಲ್ಲಾ ಕೆಟ್ಟದಾಯಿತು, ಏನು ಒಳ್ಳೆಯದಾಯಿತು, ಏನು ಮಾಡಬಹುದಿತ್ತು, ಏನು ಮಾಡಬಾರದಿತ್ತು, ಮುಂದೆ ಏನು ಮಾಡಬಾರದು ಎಂದೆಲ್ಲಾ ಗಂಟೆಗಟ್ಟಲೆ ಚರ್ಚೆ ಮಾಡಿಕೊಂಡು ಬಂದೆವು. ಚರ್ಚೆಯ ಕೊನೆಯಲ್ಲಿ ಭಯಂಕರ ಫಿಲ್ಮೀ ಸ್ಟೈಲ್ ನಲ್ಲಿ ನಾನು ’ಸ್ಪೀಡ್ ಲಿಮಿಟ್ ಅನ್ನು ಕಡೆಗಣಿಸಿದ್ದರಿಂದ ಈ ಅನಾಹುತ ಆಗಿ ಇಷ್ಟಕ್ಕೆ ನಿಂತಿತು’ ಎಂದು ಬಿಟ್ಟೆ. ಅದರ ಜೊತೆಯಲ್ಲೇ ’ಮಳೆ ರೋಡ್ ಅನ್ನು ತುಂಬಾ ಸ್ಲಿಪ್ಪರಿ ಮಾಡಿತ್ತು, ಅದೂ ಕೂಡಾ ನಮ್ಮ ಅಪಘಾತಕ್ಕೆ ಕಾರಣ’ ಎಂದು ಹೇಳಲು ಪ್ರಯತ್ನ ಪಡುತ್ತಿದ್ದರೂ ಆಗಿರಲಿಲ್ಲ. ’ಫಾಟ್ ಆಗಿ ಹೋದ್ರೆ ಕಾರ್ ಕಿಡ್ ಆಗುತ್ತೆ ಅಪ್ಪಾ...ನೀನು ಫಾಟ್ ಆಗಿ ಹೋದೆ, ನಾವು ಕಿಡ್ ಆದ್ವಿ’ ಎಂದು ಅಷ್ಟು ಹೊತ್ತಿನಿಂದಲೂ ನಮ್ಮ ಚರ್ಚೆಯನ್ನು ಸುಮ್ಮನೇ, ಹಿಂದಿನ ಸೀಟ್ ನಲ್ಲಿ ಕುಳಿತು ಕೇಳುತ್ತಿದ್ದ ಮಗ ಘೋಷಿಸಿಬಿಟ್ಟ. ನನ್ನ ಇಷ್ಟು ವರ್ಷಗಳ ಡ್ರೈವಿಂಗ್ ರೆಸ್ಯೂಮೆಯನ್ನು ಹಾಳು ಮಾಡಿಕೊಂಡ ಬೇಜಾರಿನಲ್ಲೂ, ಮಗನ ತೀರ್ಪು ಕೇಳಿದ ನಿರಾಸೆಯಲ್ಲೂ ಇದ್ದ ನಾನು ತುಂಬಾ ಎಮೋಷನಲ್ ಆಗಿ ’ನಾನು ಇನ್ನು ಯಾವತ್ತು ಪೋಸ್ಟೆಡ್ ಸ್ಪೀಡ್ ಲಿಮಿಟ್ ಅನ್ನು ಮೀರುವುದಿಲ್ಲ, ಇದು ನಿಮಗೆ ನನ್ನ ಪ್ರಾಮಿಸ್’ ಎಂದು ಪ್ರತಿಜ್ನೆ ಮಾಡಿಬಿಟ್ಟೆ. ಇದನ್ನು ನಿರೀಕ್ಷಿಸಿರದ ನನ್ನ ಹೆಂಡತಿ ಖುಷಿಯಿಂದ ಅರಳಿಬಿಟ್ಟಳು. ಅವಳಿಗೆ ನನ್ನ ಸ್ಪೀಡ್ ಮೇಲೆ ಯಾವಾಗಲೂ ಕೋಪ ಬರುತ್ತಿತ್ತು. ನಾನು ಮುಂಚಿನಿಂದಲೂ ವೇಗವಾಗೇನೂ ಡ್ರೈವ್ ಮಾಡುತ್ತಿರಲಿಲ್ಲ. ನ್ಯಾಸ್ ಕಾರ್ ರೇಸಿಂಗ್ ನ ಹೃದಯ ಸ್ಥಾನವಾದ ಜಾರ್ಜಿಯಾಗೆ ವಲಸೆ ಬಂದಾಗಿನಿಂದಲೂ ರೋಡ್ ಸೈಡ್ ಗಳಲ್ಲಿ ಬೋರ್ಡ್ ಗಳ ಮೇಲೆ ನಮೂದಿಸಿರುತ್ತಿದ್ದ ಸ್ಪೀಡ್ ಲಿಮಿಟ್ ನ ಕಡೆಗೆ ಹೆಚ್ಚು ಗಮನ ಕೊಡುವುದನ್ನು ನಿಲ್ಲಿಸಿಬಿಟ್ಟಿದ್ದೆ. ಎರ್ರಾ ಬಿರ್ರಿ ಗಾಡಿ ಹೊಡೆಯುವ ಅಟ್ಲಾಂಟಾದ ಜಾಲಿ ಬಂಚ್ ನ ಸಂಗದಲ್ಲಿ ನನ್ನ ಸಭ್ಯ ಡ್ರೈವಿಂಗ್ ಸುಸ್ತಾಗಿತ್ತು.
ಸ್ಪೀಡ್ ಲಿಮಿಟ್ ಒಳಗೇ ಡ್ರೈವ್ ಮಾಡುತ್ತೇನೆ ಎಂದು ಹೇಳಿಯೇನೋ ಆಗಿತ್ತು. ಆದರೆ ಮಾಡಿ ತೋರಿಸಲು ಅದು ಅಷ್ಟು ಸುಲಭವಾಗಿರಲಿಲ್ಲ. ಪ್ರತಿಜ್ನೆ ಮಾಡಿದ ನಂತರದ ದಿನ ನಾನು ಏರ್ ಪೊರ್ಟ್ ಗೆ ಡ್ರೈವ್ ಮಾಡುತ್ತಿದ್ದೆ. ನಾನು ಹೋಗುತ್ತಿದ್ದ ರೋಡ್ ನಲ್ಲಿ ಗಂಟೆಗೆ ೩೫ ಮೈಲಿಗಳ ಸ್ಪೀಡ್ ಲಿಮಿಟ್ ಇತ್ತು. ಆಫೀಸ್ ಗೆ ಹೋಗುವ ಸಮಯವಾದ್ದರಿಂದ ರೋಡ್ ಮೇಲೆ ಸುಮಾರು ವೆಹಿಕಲ್ಸ್ ಇದ್ದವು. ನನ್ನ ಹಿಂದೆಯೇ ೩-೪ ಕಾರುಗಳಿದ್ದವು. ಅದು ಒನ್ ಲೇನ್ ರೋಡ್ ಬೇರೆ! ನಾನು ನನ್ನ ಕಮಿಟ್ಮೆಂಟ್ ಅನ್ನು ಮುರಿಯಬಾರದು ಎಂದು ತಾಳ್ಮೆಯಿಂದ ಸ್ಪೀಡ್ ಲಿಮಿಟ್ ನಲ್ಲೇ ಹೋಗುತ್ತಿದ್ದೆ. ಇನ್ನೇನು ಫ್ರೀ ವೇ ಸೇರುವ ರೋಡ್ ಬಂದಿತು. ಅಲ್ಲಿ ೪೫ ರಿಂರ ೫೦ ಸ್ಪೀಡ್ ಲಿಮಿಟ್ ಇತ್ತು ಹಾಗೂ ಮತ್ತೊಂದು ಲೇನ್ ಸೇರಿಕೊಂಡಿತ್ತು. ಎರಡನೇ ಲೇನ್ ಸೇರಿಕೊಳ್ಳುವ ಸೂಚನೆ ಸಿಕ್ಕ ಕೂಡಲೇ ನನ್ನ ಹಿಂದೆ ಬರುತ್ತಿದ್ದ ಕಾರ್ ಗಳೆಲ್ಲಾ ರೊಯ್ ರೊಯ್ ಎಂದು ನನ್ನನ್ನು ಓವರ್ ಟೇಕ್ ಮಾಡಿದವು. ಅಷ್ಟು ಹೊತ್ತಿನಿಂದ ನನ್ನ ಸ್ಪೀಡ್ ಅನ್ನು ಸಹಿಸಿಕೊಂಡಿದ್ದ ಯುವತಿಯೊಬ್ಬಳು ಕಾರಿನಲ್ಲಿ ನನ್ನ ಪಕ್ಕಕ್ಕೇ ನುಗ್ಗಿ ’ಇನ್ನೊಂದು ಸಲ ಈ ಥರ ಡ್ರೈವಿಂಗ್ ಮಾಡಿಕೊಂಡು ರೋಡಿಗಿಳಿದರೆ ಗುದ್ದಿಯೇ ಬಿಡುತ್ತೇನೆ’ ಎಂಬಂತೆ ಕೆಕ್ಕರಿಸಿದಳು. ನಾನು ಕಿಂಚಿತ್ತೂ ಬೇಜಾರು ಮಾಡಿಕೊಳ್ಳಲಿಲ್ಲ. ಫ್ರೀ ವೇ ಗೆ ಬಂದು, ಅಲ್ಲಿದ್ದಂತೆ ಗಂಟೆಗೆ ೫೫ ಮೈಲಿ ಸ್ಪೀಡಿನಲ್ಲಿ ಹೋಗುವಂತೆ ಕ್ರೂಸ್ ಕಂಟ್ರೋಲ್ ಮಾಡಿಕೊಂಡು ಅತ್ಯಂತ ಸ್ಲೋ ವಾಹನಗಳು ಸಾಗುವ ಲೇನಿನಲ್ಲಿ ಹೊರಟೆ. ಅವತ್ತಿಂದ ನನ್ನ ಹೊಸ ಸ್ಲೋ ಲೇನ್ ಲೈಫ್ ಶುರು ಆಯಿತು.
ನನ್ನ ಸ್ಲೋ ಲೇನ್ ಲೈಫ್ ನಾನಂದುಕೊಂಡಿದ್ದಕ್ಕಿಂತ ಮಜವಾಗಿತ್ತು. ಹಿಂದೆ ರೋಡ್ ನ ಮೇಲೆ, ಅಲ್ಲಿ ಓಡಾಡುವ ವೆಹಿಕಲ್ಸ್ ಒಳಗೆ ಗಮನಿಸಲು ಆಗದಿದ್ದಂತಹ ಚಟುವಟಿಕೆಗಳನ್ನು ಗಮನಿಸಲು ಈಗ ಸಾಧ್ಯವಾಗಿತ್ತು. ಬಂಪರಿಂದ ಬಂಪರ್ ತಾಕುವಂತಹ ಟ್ರಾಫಿಕ್ ನಲ್ಲಿ ಚಲಿಸುತ್ತಿದ್ದರೂ ಎಲ್ಲರೂ ಸ್ಪೀಡ್ ಲಿಮಿಟ್ಟಿಗಿಂತ ಹೆಚ್ಚೇ ಹೋಗುತ್ತಿದ್ದರು. ವೇಗವಾಗಿ ಚಲಿಸುವ ವೆಹಿಕಲ್ಸ್ ಎಲ್ಲದಕ್ಕಿಂತ ಎಡ ಭಾಗದಲ್ಲಿರುವ ಲೇನ್ ನಲ್ಲಿ ಹೋಗುವುದು, ಭಾರೀ ಗಾತ್ರದ ಟ್ರಕ್ ಗಳು ನಿಧಾನವಾಗಿ ಬಲ ಭಾಗದ ಲೇನ್ ನಲ್ಲಿ ಹೋಗಬೇಕಿರುವುದು ಇಲ್ಲಿನ ನಿಯಮ. ಹಾಗೇ ನಾನು ಯಾವಾಗಲೂ ವೇಗದ ಲೇನ್ ನಲ್ಲಿ ಹೋಗುತ್ತಿದ್ದವನು ಈಗ ನನ್ನ ಸ್ಪೀಡ್ ಲಿಮಿಟ್ ನ ದೆಸೆಯಿಂದ ಭಾರೀ ಗಾತ್ರದ ಟ್ರಕ್ ಗಳ ಬಂಪರ್ ನೋಡಿಕೊಂಡು ಡ್ರೈವ್ ಮಾಡುವ ಪರಿಸ್ಥಿತಿಗೆ ಬಂದಿದ್ದೆ. ಟ್ರಕ್ ಡ್ರೈವರ್ ಗಳಿಗೂ ನನ್ನ ಸ್ಪೀಡ್ ಇರುಸು ಮುರುಸಾಗಿತ್ತು. ರೇರ್ ವ್ಯೂ ಮಿರರ್ ನಲ್ಲಿ ನೋಡಿದೆ. ಇನ್ನೇನು ಬಂದು ನನ್ನನ್ನು ಅಪ್ಪಚ್ಚಿ ಮಾಡಿಕೊಂಡು ಹೋಗುವಷ್ಟು ಹತ್ತಿರದಲ್ಲಿ ಡ್ರೈವ್ ಮಾಡುತ್ತಾ ಒತ್ತಡ ಹೇರುತ್ತಿದ್ದರು. ಅಕ್ಕ ಪಕ್ಕದ ಕಾರಿನವರೂ ಇವನ್ಯಾರು ಈ ವೀರ! ಟ್ರಕ್ ಗಳ ಮಧ್ಯೆ ಹೀಗೆ ಸೇರಿಕೊಂಡು ಇಷ್ಟು ಕಡಿಮೆ ಸ್ಪೀಡ್ನಲ್ಲಿ ಹೋಗುತ್ತಿದ್ದಾನೆ ಎಂದು ದೃಷ್ಟಿ ಹರಿಸುತ್ತಿದ್ದರು. ಕೆಲವರು ಕಾರ್ ಗೆ ಏನಾದ್ರೂ ಆಗಿದೆಯಾ ಎಂಬಂತೆ ನೋಡಿಕೊಂಡು ಹೊಗುತ್ತಿದ್ದರು. ಮುಂಚೆ ಕಾರ್ ಗಳ ಬಣ್ಣ, ಮಾಡೆಲ್ ಬಿಟ್ಟರೆ ಬೇರೆ ಯಾವುದರ ಕಡೆ ಗಮನ ಇರುತ್ತಿರಲಿಲ್ಲ. ಸಮಯವೂ ಇರುತ್ತಿರಲಿಲ್ಲ. ಈಗ ವೆಹಿಕಲ್ ಗಳ ಚಾಲಕರು ನನ್ನನ್ನು ನೋಡಿ ಇರಿಟೇಟ್ ಆಗುತ್ತಿದ್ದುದನ್ನು, ಬುಸುಗುಡುವುದನ್ನೂ ಚನ್ನಾಗಿ ನೋಡಿ ಮಜ ತೆಗೆದುಕೊಳ್ಳತೊಡಗಿದೆ. ಅಪರೂಪಕ್ಕೆ ನನಗೆ ಕಂಪನಿ ಕೊಡಲು ನನ್ನಂತೆಯೇ ಸ್ಪೀಡ್ ಲಿಮಿಟ್ ಒಳಗೆ ಓಡಿಸುವವರೂ ಸಿಗುತ್ತಿದ್ದರು. ಒಬ್ಬರನ್ನೊಬ್ಬರು ನೋಡಿಕೊಂಡು ಒಂದು ಅರ್ಥಪೂರ್ಣ, ಬ್ರದರ್ಲೀ ನಗು ಎಕ್ಸ್ ಚೇಂಜ್ ಮಾಡಿಕೊಳ್ಳುತ್ತಿದ್ದೆವು. ಈಗ ಇಡೀ ಫ್ರೀ ವೇಗೆ ಹೊಸ ಜೀವ ಬಂದಂತಿತ್ತು.
ಸಡನ್ನಾಗಿ ಕೇಳಿದ ದೊಡ್ದ ಹಾರ್ನ್ ದನಿಗೆ ಗಾಬರಿಯಿಂದ ಎಚ್ಚರಗೊಂಡೆ. ಯಾರದರೂ ಟ್ರಕ್ಕರ್ ನನ್ನ ಹಿಂದೆ ಬಿದ್ದಿದ್ದಾನೋ ಎಂಬಂತೆ ತಿರುಗಿ ನೋಡಿದೆ. ಆಗ ನೆನಪಾಯಿತು. ನಾನು ಅಲ್ಲಿ ಕಾರ್ ಡ್ರೈವ್ ಮಾಡುತ್ತಿರಲಿಲ್ಲ! ಬೆಂಗಳೂರು ಏರ್ ಪೋರ್ಟ್ ನಿಂದ ನಾನು ಉಳಿದುಕೊಳ್ಳಲಿದ್ದ ಹೋಟೆಲ್ ಕಡೆಗೆ ಹೋಗುತ್ತಿದ್ದ ಟ್ಯಾಕ್ಸಿಯ ಹಿಂದಿನ ಸೀಟಿನಲ್ಲಿ ಕುಳಿತಿದ್ದೆ. ಅಟ್ಲಾಂಟಾದಿಂದಲೂ ನನ್ನ ತಲೆಯಲ್ಲಿ ಇದೇ ಓಡುತ್ತಿದ್ದುದರಿಂದ ಅದೇ ಜೊಂಪಿನಲ್ಲಿ ಬೆಚ್ಚಿದ್ದೆ.
ನನ್ನ ಮುಖವನ್ನು ಮಿರರ್ ನಲ್ಲಿ ನೋಡಿದ ಟ್ಯಾಕ್ಸಿ ಡೈವರ್ ಎಷ್ಟು ದಿನ ಆಗಿತ್ತು ಸಾರ್ ಬೆಂಗ್ಳೂರ್ಗೆ ಬಂದು ? ಅಂದ.
’ಒಂದ್ ವರ್ಷ ಅಷ್ಟೆ ಗುರೂ..’
’ಯಾಕ್ ಸಾರ್ ಫಾರಿನ್ ನಲ್ಲಿ ಹಾರ್ನ್ ವಡಿಯಲ್ವಾ? ನಾನು ಎಷ್ಟೋಂದ್ ಸರಿ ಫಾರಿನರ್ಸ್ ನ ಕೂರ್ಸಿಕೊಂಡ್ ಬಂದಿದ್ದೀನಿ. ಹಾರ್ನ್ ವಡ್ದಾಗ್ಲೆಲ್ಲಾ ಟೆನ್ಶನ್ನು ಸಾರ್ ಅವ್ರ್ಗೇ...’
’ಹೂಂ ಗುರೂ..ಅಲ್ಲೆಲ್ಲಾ ಸಿಕ್ಕಾಪಟ್ಟೆ ಸ್ಲೋ ಆಗಿ ಡ್ರೈವ್ ಮಾಡಿದರೆ ಅಥವಾ ಕೆಟ್ಟದಾಗಿ ಡ್ರೈವ್ ಮಾಡಿದರೆ ಮಾತ್ರ ಬೈಗುಳದ ಥರ ಹಾರ್ನ್ ಮಾಡುತ್ತಾರೆ. ಹಾರ್ನ್ ಮಾಡಿದರೆ ಬೈದರು ಅಂತಲೇ ಅರ್ಥ..’ ಅಂದೆ.
’ಸಾರ್ ಇಲ್ಲಿ ನೀವ್ ಗಾಡಿ ಓಡಿಸ್ಬೇಕು ಅಂದ್ರೆ ಒಂದ್ ಕೈ ಹಾರ್ನ್ ಮೇಲೇ ಇರ್ಬೇಕು ಗೊತ್ತಾ...ಇಲ್ದಿದ್ರೆ ನನ್ಮಕ್ಳು ಕ್ಯಾರೇ ಅನ್ನಲ್ಲ. ನಮ್ಗೆ ದಾರಿ ಬೇಕು ಅಂದ್ರೆ ಹಾರ್ನ್ ವಡಿತಾ ಇರದು...ನುಗ್ತಾ ಇರದು...’

ನನಗದೇನೂ ಹೊಸ ಜ್ನಾನವಲ್ಲದಿದ್ದರೂ ಆಗಷ್ಟೇ ನೆಲಕ್ಕಿಳಿದಿದ್ದರಿಂದ ಹೊಂದಿಕೊಳ್ಳಲು ಎರಡು ನಿಮಿಷ ಬೇಕಿತ್ತು ಅಷ್ಟೇ. ಅಕ್ಕ ಪಕ್ಕ ನೋಡಿದೆ. ಗಾಡಿಗಳು ನೀರಿನ ಥರ ಜಾಗ ಇದ್ದ ಕಡೆ ಮುಖ ತೂರಿಸಿ ಓಡುತ್ತಿದ್ದವು. ಲೇನ್ ಗಳೂ ಇದ್ದರೂ ಯಾರೂ ಕಂಡಂತೆಯೂ ಇರಲಿಲ್ಲ.
ಮರು ದಿನ ಬೆಳಿಗ್ಗೆ ಹೋಟೆಲ್ ನ ಸೌಂಡ್ ಪ್ರೂಫ್ ಬ್ರೇಕ್ ಫಾಸ್ಟ್ ಹಾಲ್ ನಲ್ಲಿ ಕುಳಿತು ಕೆಳಗಡೆ ರೋಡ್ ಅನ್ನು ನೋಡುತ್ತಾ ತಿಂಡಿ ತಿನ್ನುತ್ತಿದ್ದೆ. ಸೌಂಡ್ ಪ್ರೂಫ್ ರೂಮ್ ಗೂ ನುಗ್ಗಿದಂತೆ ಒಂದು ಆಂಬುಲೆನ್ಸ್ ನ ಸೈರನ್ ಕೂಗಿಕೊಂಡು ಟ್ರಾಫಿಕ್ ಅನ್ನು ದಾಟಲು ಪ್ರಯತ್ನಿಸುತ್ತಿತ್ತು. ಮುಂದೆ ಸಿಗ್ನಲ್ ರೆಡ್ ಇದ್ದುದರಿಂದ ರೋಡ್ ನಲ್ಲಿದ್ದ ಗಾಡಿಗಳು ಆ ಕಡೆ ಈ ಕಡೆ ಅಲುಗಾಡಲಿಲ್ಲ. ಆಂಬುಲೆನ್ಸ್ ಅಂತೂ ಕಿವುಡನ ಕಿವಿಯನ್ನೂ ಕುಯ್ಯುವಷ್ಟು ಜೋರಾಗಿ ಕೂಗಿಕೊಳ್ಳುತ್ತಿತ್ತು. ಆಶ್ಚರ್ಯ ಅಂದರೆ ಟ್ರಾಫಿಕ್ ಲೈಟ್ ಗ್ರೀನ್ ಆದರು ಗಾಡಿಗಳು ಆಂಬುಲೆನ್ಸ್ ಗೆ, ಅದರಲ್ಲಿದ್ದ ಬಡ ಆತ್ಮಕ್ಕೆ ಜಾಗ ಮಾಡಿಕೊಡಲಿಲ್ಲ. ಆಂಬುಲೆನ್ಸ್ ಗೆ ಜಾಗ ಮಾಡಿಕೊಡದೇ ಇರುವುದು ಅಮೆರಿಕಾದಲ್ಲಿ ನಡೆಯದಿದ್ದರೂ ಜಾಗ ಕಂಡಲ್ಲಿ ನುಗ್ಗಬೇಕು ಎಂಬ ಹುಂಬತನ ಪ್ರಪಂಚದ ಎಲ್ಲಾ ಕಡೆಯೂ ಒಂದೇ ಥರ ಎನ್ನಿಸಿತು.
’ಹೌ ವಾಸ್ ಯುವರ್ ಇಂಡಿಯಾ ಟ್ರಿಪ್? ನನಗಿಂತ ಒಂದು ವಾರ ಹಿಂದೆ ಬೆಂಗಳೂರಿನ ಮೊದಲ ಟ್ರಿಪ್ ಮುಗಿಸಿ ವಾಪಸ್ ಬಂದಿದ ನನ್ನ ಸಹೋದ್ಯೋಗಿ ಆರ್ಥರ್ ಆಫೀಸ್ ನಲ್ಲಿ ಸಿಕ್ಕಿ ಕೇಳಿದ. ’ಕ್ರೇಜಿ ವೆದರ್ ಇತ್ತಲ್ಲವಾ’ ಎಂದ. ’ಇಲ್ಲಪ್ಪಾ..ನಾನು ಬರುವ ಮುಂಚೆ ಮಳೆ ಬಿದ್ದು ಸುಮಾರು ತಂಪಾಗಿತ್ತು..ಈಗ ಇಲ್ಲೇ ನಿಜವಾಗಲೂ ಕ್ರೇಜಿ’ ಎಂದೆ. ’ಹೌ ಡಿಡ್ ಯು ಮ್ಯಾನೇಜ್ ದ ಟ್ರಾಫಿಕ್? ಹಾರಿಬಲ್! ಸ್ಕೇರಿ ಅಲ್ಲವಾ? ಯಾವಾಗಲೂ ಹಾಗೆ ಇರುತ್ತದಾ ಅಲ್ಲಿಯ ಟ್ರಾಫಿಕ್ ?’ ಎಂದ. ’ಈಗ ಟ್ರಾಫಿಕ್, ಹೈ ರೈಸ್ ಕಟ್ಟಡಗಳು, ಬಿಲ್ ಬೋರ್ಡ್ ಗಳು, ಧೂಳು, ಶಬ್ದ ಎಲ್ಲವೂ ಸ್ವಲ್ಪ ಜಾಸ್ತೀನೇ ಆಗಿದೆ. ಥ್ಯಾಂಕ್ಸ್ ಟು ಐಟಿ ಅಂಡ್ ಫ್ರೀ ಮಾರ್ಕೆಟ್ ಎಕಾನಮಿ’ ಎಂದೆ. ಮುಂದೆ ಅದರ ಬಗ್ಗೆ ಮಾತಾಡುವ ಮನಸ್ಸು ಬರಲಿಲ್ಲ. ಐಟಿ ಉದ್ಯೋಗಿಯಾಗಿ, ಇಲ್ಲಿ ಫ್ರೀ ಮಾರ್ಕೆಟ್ ಎಕಾನಮಿಯ ಅನುಕೂಲ ಪಡೆದುಕೊಂಡು ಅಲ್ಲಿ, ನನ್ನ ಊರಿನಲ್ಲಿ, ಡೆವಲಪ್ಮೆಂಟ್ ಎಂಬ ಬ್ಯಾನರ್ ಅಡಿಯಲ್ಲಿ ಆಗುತ್ತಿರುವ ಅಡ್ಡಾದಿಡ್ಡಿ ಅವಾಂತರಗಳನ್ನು ಟೀಕಿಸುವುದು ಸರಿ ಎನ್ನಿಸಲಿಲ್ಲ. ವಿಷಯವನ್ನು ನನ್ನ ಸ್ಪೀಡ್ ಲಿಮಿಟ್ ಕಮಿಟ್ ಮೆಂಟ್ ಕಡೆಗೆ ಬದಲಿಸಿದೆ. ಆರ್ಥರ್, ’ಜಾರ್ಜಿಯಾ ಡ್ರೈವರ್ ಗಳ ಬಗ್ಗೆ ಹುಷಾರಾಗಿರು, ತಲೆ ಕೆಟ್ಟರೆ ಗನ್ ತೆಗೆದು ಶೂಟ್ ಮಾಡಿ ಬಿಟ್ಟಾರು’ ಅಂತ ಎಚ್ಚರಿಸಿದ.
ಹತ್ತು-ಹನ್ನೆರಡು ವರ್ಷಗಳ ಅಮೆರಿಕಾ ವಾಸದಲ್ಲಿ ನನ್ನ ಸ್ನೇಹಿತರಿಂದ, ಸಹೋದ್ಯೋಗಿಗಳಿಂದ ಈ ಥರ ಫ್ರೀ ವೇಗಳಲ್ಲಿ ಸ್ಲೋ ಆಗಿ ಗಾಡಿ ಓಡಿಸುವವರನ್ನು ಶೂಟ್ ಮಾಡಿಬಿಡುವ ಹುಚ್ಚರ ಹಲವಾರು ಕಥೆ ಕೇಳಿದ್ದೆ. ಅವುಗಳಲ್ಲಿ ಹೆಚ್ಚಿನವು ಮಿತ್ ಗಳೆಂದು ಗೊತ್ತಿತ್ತು. ಅವನ ಎಚ್ಚರಿಕೆಗೆ ನಕ್ಕೆ. 'ಹೇ ನಿನಗೆ ಒಂದು ಇಂಟೆರೆಸ್ಟಿಂಗ್ ಟಿಟ್ ಬಿಟ್. ಕೆಲವು ಕಾಲೇಜ್ ಸ್ಟೂಡೆಂಟ್ಸ್ ಗಳು ಒಟ್ಟಿಗೆ ಸೇರಿ ಸ್ಪೀಡ್ ಲಿಮಿಟ್ ಒಳಗೇ ಎಲ್ಲಾರೂ ಡ್ರೈವ್ ಮಾಡಬೇಕು ಎಂದು ಕ್ಯಾಂಪೇನ್ ಶುರು ಮಾಡಿದ್ದಾರೆ..ಅವರ ವೆಬ್ ಸೈಟ್ ಇದು. ನೋಡು' ಎಂದ. ಕುತೂಹಲದಿಂದ ನೋಡಿದೆ. ನಿಜಕ್ಕೂ ಒಂದಷ್ಟು ಜನ ಕಾಲೇಜು ಹುಡುಗರು ಅಟ್ಲಾಂಟಾದ ಫ್ರೀ ವೇಗಳ ಬೆಲ್ಟ್ ವೇ ಗಳಲ್ಲಿ ನಿಂತು ಸ್ಪೀಡ್ ಲಿಮಿಟ್ ಅನ್ನು ಅನುಸರಿಸುವ ಬಗ್ಗೆ ಪ್ರಚಾರ ಮಾಡುತ್ತಿದ್ದರು. ಅವರ ಶ್ರಮ ಮೆಚ್ಚುಗೆಯಾದರೂ ಆ ವೆಬ್ ಸೈಟ್ ನಲ್ಲಿದ್ದ ಕಾಮೆಂಟುಗಳನ್ನು ನೋಡಿ ಆಶ್ಚರ್ಯವಾಗಿತ್ತು. ಕಾಮೆಂಟು ಮಾಡಿದ್ದವರಲ್ಲಿ ಮುಕ್ಕಾಲು ಜನ ಸ್ಪೀಡ್ ಲಿಮಿಟ್ ಅನ್ನು ಅನುಸರಿಸುವುದನ್ನು ಮುಠ್ಠಾಳತನ ಎಂಬಂತೆ ಬೈದಿದ್ದರು. ಒಬ್ಬನಂತೂ ’ನನ್ನ ಕಾರಿನ ಮುಂದೆ ಯಾವನಾದ್ರು ಆ ಥರದ ಸ್ನೇಲ್ (ಬಸವನ ಹುಳ) ಹೋಗುವುದು ಕಂಡರೆ ನನ್ನ ಗ್ಲವ್ ಬಾಕ್ಸಿನಿಂದ ಗನ್ ತೆಗೆದು ಶೂಟ್ ಮಾಡಿಬಿಡುತ್ತೇನೆ’ ಎಂದು ಬರೆದುಬಿಟ್ಟಿದ್ದ. ಅವತ್ತಿನಿಂದ ಸ್ಪೀಡ್ ಲಿಮಿಟ್ಟಿನ ಒಳಗೇ ಡ್ರೈವ್ ಮಾಡುವುದರ ಜೊತೆಗೇ ಅಕ್ಕ ಪಕ್ಕದ ಕಾರ್ ಡ್ರೈವರ್ ಗಳೇನಾದ್ರೂ ಅವರ ಗ್ಲವ್ ಬಾಕ್ಸ್ ಗಳಲ್ಲಿ, ಬ್ಯಾಗ್ ಗಳಲ್ಲಿ ಗನ್ ಗಿನ್ ಹುಡುಕುವ ಪ್ರಯತ್ನ ಮಾಡುತ್ತಿದ್ದಾರಾ ಎಂದು ನೋಡುವ ಹವ್ಯಾಸವನ್ನೂ ಶುರು ಮಾಡಿಕೊಂಡೆ.